ಬುಧವಾರ, ಆಗಸ್ಟ್ 30, 2017

ಹೆಜ್ಜೆ ಗುರುತುಗಳು














ನಿನ್ನ ಹೆಜ್ಜೆ ಗುರುತುಗಳ ಅರಸಿ ಹೊರಟಿರುವೆ ನಾನು,
ನನ್ನ ಕಣ್ಣೀರಿನಲಿ ಕಲಸಿಹೋಗಿವೆ ಅವು...
ಕಾಲಾಂತರಾಳದಲಿ ಹುದುಗಿ ಹೋಗಿವೆ ಹೆಜ್ಜೆಗಳು...
ನೀ ತೊರೆದ ನಂತರ ಭಾವಭೃಂಗವ ತಲುಪಿ,
ನಿಶ್ಶಬ್ಧದ ರೂಪು-ರೇಷೆಗಳಾಗಿ ಬದಲಾಗಿವೆ ಅವು.
ಅಂದು ನೀ ತುಳಿದ ಸಪ್ತಪದಿಯ ಹೆಜ್ಜೆಗಳು,
ಮರಳ ಮೇಲೆ ನೀ ಮೂಡಿಸಿದ ಹೆಜ್ಜೆಗಳು,
ಗೆಜ್ಜೆ ಕಟ್ಟಿಕೊಂಡು ನಾಟ್ಯ ಮಾಡಿದ ಹೆಜ್ಜೆಗಳು,
ಸಪ್ಪಳವಿಲ್ಲದಂತೆ ನನ್ನಂತರಂಗವ ತುಂಬಿರುವ ಹೆಜ್ಜೆಗಳು,
ಹೇಗೆಂದು ಬಣ್ಣಿಸಲಿಎಷ್ಟೆಂದು ವರ್ಣಿಸಲಿ?!
ನೀ ನನ್ನೆದೆಯಾಳದಲಿ ಮೂಡಿಸಿದ ಹೆಜ್ಜೆ ಗುರುತುಗಳ,
ಸಪ್ತಪದಿಯಲಿ ಜೊತೆಯಲಿ ತುಳಿದ ಹೆಜ್ಜೆಗಳು ಮಾಯವಾಗಿವೆ,
ಮರಳ ಮೇಲೆ ಮೂಡಿದ ಹೆಜ್ಜೆಯ ಅಲೆಯಳಿಸಿದೆ,
ಗೆಜ್ಜೆಗಳು ನರ್ತಿಸುವ ಹೆಜ್ಜೆಗಳಿರದೆ ನಲುಗಿ ಹೋಗಿವೆ.
ನನ್ನಂತರಂಗ ಮಾತ್ರ ನಿನ್ನನ್ನು ಎಲ್ಲೆಲ್ಲೂ ಅರಸಿದೆ.
ನಾನು ಬರುತ್ತಿರುವೆ ನಿನ್ನ ಹೆಜ್ಜೆ ಗುರುತುಗಳನ್ನನುಸರಿಸಿ,
ಮೂಡಿಸುವ ನಮ್ಮೆಜ್ಜೆಗುರುತುಗಳ ಎಂದೆಂದು ಜೊತೆಯಾಗಿ...
                                                       -vಭಾ

ಕನಸುಗಳಿಗೆ ಸಾವಿಲ್ಲ...

ಮನದ ಬಾಂದಳದಲಿ ನಿಂತು,
ಸುತ್ತ-ಮುತ್ತಲ್ಲೆಲ್ಲಾ ಅವಲೋಕಿಸಿದಾಗ
ಅರೆರೆ! ಕನಸಿನ ಕಲ್ಪವೃಕ್ಷಗಳು
ಯಾವುದೋ ಅರೆಗಳಿಗೆಯಲಿ ಕಂಡ ಕನಸುಗಳು,
ನಿದ್ದೆಯಲಿ ಕಂಡ ಕನಸುಗಳಲ್ಲ ಅವು,
ಎಚ್ಚರವಿದ್ದಾಗ ಪಡಿಮೂಡಿದ ಕೂಸುಗಳು
ನಂತರ ಯಾರದೋ ದರ್ಪಕೆ, ಹೀಯಾಳಿಕೆಗೆ
ಅವಮಾನಕೆ ಸಿಕ್ಕು ನಲುಗಿದ್ದ ಕನಸುಗಳು.
ನಂಬಿಕೆಯೆಂಬ ಹನಿ ಅಮೃತದೊಂದಿಗೆ ಬದುಕಿದವು.
ಕಂಡ ಕನಸುಗಳಾವು ಕಳೆದು ಹೋಗಿಲ್ಲ,
ಸತ್ತಂತಿರುವ ಕನಸುಗಳಿಗೂ ನನಸೆಂಬ ಮರುಹುಟ್ಟು
ಹಾಲಾಹಲವ ನುಂಗಿ ಬದುಕುವ ಅಮೃತಫಲಗಳಿವು
ಯಾರ, ಯಾವ ಕನಸಿಗೂ ಸಾವಿಲ್ಲ.
ಯಾರದೋ ಕನಸುಗಳು, ಯಾವುದೋ ಕಂಗಳಲಿ...
ಬದುಕಿ ಬಾಳುವ ಕನಸುಗಳಿಗೆಂದಿಗೂ ಸಾವಿಲ್ಲ...
                                                    -vಭಾ

ಬುಧವಾರ, ಆಗಸ್ಟ್ 23, 2017

ವೇಣುಗಾನದ ಮೋಡಿ...

ನಿನ್ನ ವೇಣುಗಾನದಿ ಎಂಥ ಮೋಡಿಯೋ?
ಮರುಳಾಗಿದೆ ಮನ ಆ ನಿನ್ನ ಗಾನಕೆ
ಎಲ್ಲಾ ಚಿಂತೆಗಳ ಮರೆತು ಕುಳಿತು,
ಎಲ್ಲಾ ಬಿಗುಮಾನಗಳ ಬಿಟ್ಟು ಆಲಿಸೆ...
ಮನದ ನೋವೆಲ್ಲವೂ ಮರೆವುದು.
ಹಿರಿಯ-ಕಿರಿಯರೆಲ್ಲರಿಗೂ ಚೈತನ್ಯದ ಚಿಲುಮೆಯು,
ನಿನ್ನ ಕೊಳಲ ಗಾನದುಲಿಗೆ ಸರಿಸಾಟಿ ಯಾರಿಹರು?
ಬಾಳಿನಲಿ ಹೊಸ ಹರ್ಷ ನೀಡುವ ಗಾನಕೆ,
ಮನಸೋತಿಹೆವು ನಿನ್ನ ಮಾಂತ್ರಿಕ ಸ್ಪರ್ಷಕೆ
ಇಂಪಾದ ದನಿಯಲಿ ಎಲ್ಲರಿಗೂ ಮಾಡಿರುವೆ ಮೋಡಿ
ಹಾತೊರೆಯುತಿದೆ ಮನ ಮತ್ತದೇ ಗಾನಕೆ... 
ಮುಗಿದ ನಿನ್ನ ಮುರಳಿಗಾನ ಕೂಡ ಧ್ವನಿಸುತಿಹುದು ಇಲ್ಲಿಯೇ,
ಮತ್ತೆ,ಮತ್ತೆ  ಭ್ರಮಿಸುತಿರುವೆವು ನೀ ಇಲ್ಲೇ ಇರುವೆಯೆಂದು
ನೀಲ ವರ್ಣ, ನವಿಲುಗರಿ, ಕೈಯ್ಯಲ್ಲೊಂದು ಕೊಳಲು
ನೀಲ ಶ್ಯಾಮನ ಗಾನಕೆ ಸ್ವರ್ಗವೇ ಇಳೆಗಿಳಿದಿದೆ.
ಸುಪ್ತ ಭಾವಗಳೂ ಗರಿಗೆದರಿ ನರ್ತಿಸುತ್ತಲಿವೆ...
ಮನದೆಲ್ಲಾ ಕಾರ್ಮೋಡಗಳು ಕರಗಿ ಕಂಬನಿಯಾಗಿವೆ
ನಿನ್ನ ಗಾನದ ಮೋಡಿಗೆ, ಸಕಲ ಸೃಷ್ಟಿಯೂ ಸಿಲುಕಿದೆ 
                                                        -vಭಾ

ನೆರಳು-ಬೆಳಕು

ನೆರಳು ಬೆಳಕಿನ ಕಣ್ಣುಮುಚ್ಚಾಲೆಯಲಿ,
ಕಂಡದೆಷ್ಟೋಅರ್ಥವಾದುದು ಎಷ್ಟೋ?
ಬೆಳಕಿನ ಪತ್ತಲಕೆ ಕತ್ತಲ ಕಸೂತಿ,
ಕಪ್ಪು-ಬಿಳುಪಿನ ಹಿಂದೆ ಮನಸಿನ ಭ್ರಾಂತಿ.
ಹೋದ ಹೊತ್ತು ಮರಳಿಯಂತೂ ಬಾರದು
ಬಣ್ಣದ ಪ್ರಪಂಚದಲಿ ತಮ್ಮ ನೆರಳನೇ ಮರೆತವರೆಷ್ಟೋ?
ಅಗಣಿತ ತಾರೆಗಳ ಸ್ವಚ್ಚಂದ ಬೆಳಕಿನಲಿ,
ಆಗಸದಿ ಚಂದಿರನ ಕಣ್ಣುಮುಚ್ಚಾಲೆ...
ಹಗಲಲ್ಲಿ ನೇಸರನ ನೆರಳ ಹುಡುಕುವವರಿವರು,
ಮರೆತ ಗತ ವೈಭವಗಳ ಬೆಳಕ ತೋರುತ,
ಇರುಳಲ್ಲಿ ಬೆಳಕಿನ ಸ್ಪರ್ಧಾಳುಗಳಾಗುವರು.
ಬೆಳಕಿಲ್ಲದೆ ನೆರಳಿಗೆ ಅಸ್ತಿತ್ವವಿಲ್ಲ
ಮಿಂದ ಮೈ ಮನಕೆ ನೆರಳಿನಾ ಚಿತ್ರ
ನೆರಳಿಲ್ಲದ ಬೆಳಕಿಗೆ ಬೆಲೆಯೆಂದಿಗೂ ಇಲ್ಲ,
ಇದುವೆ ನೆರಳು-ಬೆಳಕಿನ ಮಿಳಿತ ಸೆಳೆತ
                                       -vಭಾ

ಬುಧವಾರ, ಆಗಸ್ಟ್ 9, 2017

ಹೆಣ್ಣೆಂಬ ಕಾರಣಕೆ....

ಹೆಣ್ಣೆಂಬ ಕಾರಣಕೆ ಕಣ್ಬಿಡುವ ಮುನ್ನವೇ,
ಹೊಸಕದಿರಿ ಈ ಜೀವವನು.
ಚಿಗುರಲ್ಲೆ ಚಿವುಟದಿರಿ ನನ್ನನು,
ಅವಕಾಶ ನೀಡಿ ನೋಡಿ ಎನಗೊಂದು.
ನನ್ನದಲ್ಲದ ತಪ್ಪಿಗೆ ನನಗೇಕೆ ಶಿಕ್ಷೆ?
ತಲೆತಗ್ಗಿಸುವ ತಪ್ಪು ನಾನೆಂದು ಮಾಡೆನು
ಜೀವನದಲ್ಲಿ ಯಾರಿಗೂ ಹೊರೆಯಾಗೆನು
ನಾನು ಸಮಾಜಕ್ಕಂಟಿರುವ ಶಾಪವಲ್ಲ,
ಬಾಳುವೆನು ಹಠದಲಿ, ಸಾಧನೆಯ ಹಾದಿಯಲಿ.
ರೂಪುಗೊಳ್ಳುವೆ ನೀವೆ ಹೆಮ್ಮೆಪಡುವಂತೆ.
ದೌರ್ಜನ್ಯವೆಸಗದಿರಿ ಹೆಣ್ಣೆಂಬ ಕಾರಣಕೆ,
ಕತ್ತರಿಸದಿರಿ ನಿಮ್ಮ ಕರುಳ ಕುಡಿಯನು,
ನಿಮ್ಮನ್ನು ಹಡೆದ ತಾಯಿ ಹೆಣ್ಣಲ್ಲವೇ?
ಮಗು ಹೆಣ್ಣೆಂಬ ಕಾರಣಕೆ ಏಕೆ ಈ ಕಲ್ಲುಮನಸು?
                                         -vಭಾ

ಬುಧವಾರ, ಆಗಸ್ಟ್ 2, 2017

ಪುಟ್ಟ ಮನಸಿನ ದೊಡ್ಡ ಆಸೆಗಳು

ಪುಟ್ಟ-ಪುಟ್ಟ ಕೈಗಳಿಂದ,
ಆಕಾಶವನ್ನು ಮುಟ್ಟುವ ಬಯಕೆ.
ಪುಟ್ಟ-ಪುಟ್ಟ ಕಂಗಳು ಕಾಣುತಿವೆ,
ಅದಮ್ಯ ಅವಕಾಶಗಳ ಕನಸುಗಳನ್ನು.
ಪುಟ್ಟ ಮನಸಿನಲ್ಲಿ, ಎಷ್ಟೋ ದೊಡ್ಡ ಆಸೆಗಳು
ತೀರದಾ ಆಸೆಯೊಂದಿಗೆ, ಮುಗಿಯದ ಕನಸುಗಳು
ಮುಗಿಯದ ಕನಸುಗಳೊಂದಿಗೆ, ತೀರದಾ ಬಯಕೆಗಳು
ಕಂಡ ಕನಸುಗಳಲ್ಲಿ ನನಸಾಗುವವೆಷ್ಟೋ?
ಮುಗಿಯದಾ ಬಯಕೆಗಳು ತುಂಬಿರುವುದೆಷ್ಟೋ?
ಗುರಿ ಮುಟ್ಟಲು ಬೇಕಾಗಿದೆ ಸಲಹೆ,
ಕನಸ ನನಸು ಮಾಡಲು ಬೇಕಿದೆ ಸಹಕಾರ
ಸಿಗುವುದೆಷ್ಟೋ? ಬಿಡುವುಷ್ಟೋ?
ಪುಟ್ಟ ಕಂಗಳು ದೊಡ್ಡವಾಗುವಷ್ಟರಲ್ಲಿ,
ವಿಶ್ವಮಾನವನಿಂದ ಅಲ್ಪಮಾನವನಾಗಿಯಾಗಿದೆ.
ದೊಡ್ಡ ಕಣ್ಣುಗಳಲ್ಲಿ ಈಗ ಅಧಿಕಾರದ ದಾಹ,
ದೊಡ್ಡ ಮನಸುಗಳಲ್ಲಿ ಮೂಡಿದೆ ಹಣದ ವ್ಯಾಮೋಹ.
ಬೇಕಿಲ್ಲ ಜಗದಲಿ ಈ ಬದಲಾವಣೆಯು
ನಿತ್ಯವೂ ಶ್ರಮಿಸುವ ಈ ಪುಟ್ಟ,ಮುಗ್ಧ ಮನಸುಗಳಿಗಾಗಿ
ಆಗ ಉದಯಿಸಿದ ಆಸೆ, ಕನಸುಗಳ ನನಸಾಗಿಸಲು.
                                               -vಭಾ