ಭಾನುವಾರ, ಡಿಸೆಂಬರ್ 23, 2018

ಕಥೆಯುಳ್ಳ ಹಾಡಿನ ಕಥೆ


ತಂಬೂರಿ ಮೀಟಿಕೊಂಡು ಹಾಡುವವರನ್ನು ಕಂಡು, ಆ ಹಾಡುಗಳನ್ನು ಕೇಳಿ ಎಷ್ಟೋ ವರ್ಷಗಳೇ ಕಳೆದು ಹೋಗಿದ್ದವು. ನಾನು ಚಿಕ್ಕಂದಿನಲ್ಲಿದ್ದಾಗ ಹಳ್ಳಿಹಳ್ಳಿಗಳ ಮೇಲೆ ಹೋಗುತ್ತಿದ್ದವರು ಹೇಳುತ್ತಿದ್ದ ಹಾಡುಗಳನ್ನು ಕೇಳುತ್ತಿದ್ದದ್ದು ರೂಡಿ, ಹೆಚ್ಚಿನಂಶ ಅವರುಗಳು ಬರುತ್ತಿದ್ದದ್ದು ಬೆಳಗಿನ ವೇಳೆ ತಂಬೂರಿ ಮೀಟುತ್ತಾ ಹಾಡು ಹಾಡಿ ತಿಂಡಿ ತಿಂದು ಅಕ್ಕಿಯನ್ನೋ ಕಾಯನ್ನೋ ಪಡೆದುಕೊಂಡು ಹೊರಡುತ್ತಿದ್ದರು, ಅವರ ಪ್ರತಿಭೆಗೆ ಗೌರವಾರ್ಥವಾಗಿ ಹಳ್ಳಿಗಳಲ್ಲಿ ಅಕ್ಕಿ ಅಥವಾ ತೆಂಗಿನಕಾಯಿಯನ್ನೋ ಕೊಟ್ಟು ಸ್ವಲ್ಪ ಸಮಯ ಆ ಹಾಡಿನ ಕುರಿತೋ ಅಥವಾ ಹಳ್ಳಿಗಳ ಕುರಿತೋ ಮಾತನಾಡಿ ಕಳುಹಿಸಿ ಕೊಡುತ್ತಿದ್ದರು ನಂತರದ ದಿನಗಳಲ್ಲಿ ಬದಲಾದ ತಂತ್ರಜ್ಞಾನ ಯುಗದಲ್ಲಿ ಮರೆಯಾಗಿಯೇ ಬಿಟ್ಟಿದ್ದರು. ತೀರಾ ಚಿಕ್ಕ ವಯಸ್ಸಿನಲ್ಲಿ ಆ ಹಾಡುಗಳು ಅರ್ಥವಾಗುತ್ತಿರಲಿಲ್ಲ ನಂತರದ ದಿನಗಳಲ್ಲಿ ಕಥೆಗಳನ್ನು ಹೇಳುತ್ತಿದ್ದ ಆ ಹಾಡುಗಳು ಸ್ವಲ್ಪ ಸ್ವಲ್ಪ ಅರ್ಥವಾಗುತ್ತಿತ್ತು, ಆನಂತರ ಕೇಳಬೇಕೆಂದರೂ ಆ ಅವಕಾಶ ದೊರೆತಿರಲಿಲ್ಲ. ಅಚಾನಕ್ಕಾಗಿ ಈ ಅವಕಾಶ ದೊರೆತದ್ದು ಅದೃಷ್ಟ ಅಂದರೂ ತಪ್ಪಾಗಲಾರದು.

ಅಂದ ಹಾಗೆ ಇದು ಕೇಳಿದ್ದು ಹಳ್ಳಿಯಲ್ಲಲ್ಲ. ನಾನವರನ್ನು ನೋಡಲೂ ಇಲ್ಲ. ಬೆಳಿಗ್ಗೆ ನಾನು ನನ್ನ ಚಿಕ್ಕಿ(ಚಿಕ್ಕಮ್ಮ) ಜೊತೆಗೆ ಫೋನ್ ನಲ್ಲಿ ಮಾತನಾಡುತ್ತಾ ಇರುವಾಗ ಯಾರೋ ಹಾಡು ಹೇಳುತ್ತಿದ್ದದ್ದು ಕೇಳಿಸ್ತು. ಆಗ ಕೇಳಿದ್ದಕ್ಕೆ ಒಬ್ಬರು ಅಜ್ಜಿ ಇಲ್ಲೇ  ಹಾಡ್ತಾ ಇದ್ದಾರೆ ಅಂದ್ರು. ಜೊತೆಗೆ ನನ್ನ ಹುಚ್ಚು ಗೊತ್ತಿದ್ದ ಅವರೂ ತಾಳು ಇಲ್ಲೇ ಕರೀತೀನಿ ಅಂದ್ರು, ನಂಗಂತೂ ತುಂಬಾ ಖುಷಿ ಆಯ್ತು. ಸರಿ, ಲೌಡ್ ಸ್ಪೀಕರ್ ಆನ್ ಮಾಡಿ ಹಾಗೇ ರೆಕಾರ್ಡ್ ಮಾಡಿಕೊಳ್ತೀನಿ ಅಂದೆ, ಸರಿ ಅಜ್ಜಿನೂ ಬಂದ್ರು ವಾಡಿಕೆಯಂತೆ ಉಭಯ ಕುಶಲೋಪರಿ ಕೂಡಾ ಆಯ್ತು, ನಂತರ ಒಂದು ಜಾನಪದ ಹಾಡನ್ನು ಶುರು ಮಾಡಿದರು.

ಶಿವ ಮತ್ತು ಗೌರಿ(ಪಾರ್ವತಿ)ಯರ ಕಲ್ಯಾಣದ ಕಥೆಯನ್ನು ಕಥಾವಸ್ತುವನ್ನಾಗಿ ಉಳ್ಳಂತಹಾ ಹಾಡು. ದೇವರು ಶಾಪಗ್ರಸ್ಥವಾಗೇ ಭೂಮಿಯಲ್ಲಿ ಹುಟ್ಟಬೇಕಾಗಿಲ್ಲ ಎಂಬುದು ಯಾಕೋ ಅಪ್ರಯತ್ನವಾಗೇ ಮನಸ್ಸಿಗೆ ಹೊಳೆಯಿತು. ನಾವು ಗೌರಿ ಹಬ್ಬವನ್ನು ಆಚರಿಸುವ ಹಿಂದಿನ ಪರಿಕಲ್ಪನೆಯೂ ಬಹುಶಃ ಈ ಪರಿಕಲ್ಪನೆಯಿಂದಲೇ ಹುಟ್ಟಿರಬಹುದೇನೋ.. ಭೂಲೋಕದ ತನ್ನ ತಾಯಿ(ತವರು) ಮನೆಗೆ ಬರುವಂತಹಾ ಸಂಧರ್ಭ..

ಶಿವ ಮತ್ತು ಪಾರ್ವತಿ ಇಬ್ಬರೂ ಸಹಾ ಭೂಲೋಕದಲ್ಲಿ ಹುಟ್ಟಿದ್ದಾರೆ ಆದರೆ ಪರಸ್ಪರರ ಪರಿಚಯವಿಲ್ಲ. ಇತ್ತ ಗೌರಿ ಹನ್ನೆರಡು ವರ್ಷಕ್ಕೆ ಮೈನೆರೆಯುತ್ತಾಳೆ, ಆಗಿನ ಸಂಪ್ರದಾಯದಂತೆ ಆಕೆಗೆ ವಿವಾಹಯೋಗ್ಯ ವಯಸ್ಸು.. ಹಾಗಾಗಿ ಮನೆಯಲ್ಲಿ ವರನನ್ನು ಹುಡುಕಲು ಶುರು ಮಾಡುತ್ತಾರೆ, ಆದರೆ ಗೌರಿಗೆ ಕೇಳುತ್ತಾರೆ ಈ ವರ ಆಗಬಹುದೇ ಎಂಬ ಪ್ರಶ್ನೆಯನ್ನು ಅವಳ ಒಪ್ಪಿಗೆಗಾಗಿ ಕೇಳುತ್ತಾರೆ, ಇದು ಆಗಿನ ಕಾಲದಲ್ಲಿದ್ದ ಸ್ವಯಂವರ ಪದ್ದತಿಯನ್ನು ನೆನಪಿಸುತ್ತದೆ, ಜೊತೆಗೆ ಸ್ತ್ರೀಯರಿಗೆ ಕೊಡುತ್ತಿದ್ದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನೂ ನೆನಪು ಮಾಡಿಕೊಡುತ್ತದೆ. ಜೊತೆಗೆ ಯಾರನ್ನೂ ಜರಿಯಬೇಡವೆಂಬ ಕಿವಿಮಾತು ಕೂಡಾ ಕೇಳಿಬರುತ್ತದೆ, ಅವರವರಿಗೆ ಅವರದ್ದೇ ಆದಂತಹಾ ವ್ಯಕ್ತಿತ್ವಗಳಿರುತ್ತವೆ, ಅವರದ್ದೇ ಆದ ಗೌರವವಿರುತ್ತದೆ ಅದು ನಮಗೆ ಸರಿ ಬರದಿದ್ದರೆ ಅದು ನಮ್ಮ ಆಲೋಚನೆಗೆ ಸಂಬಂಧಪಟ್ಟಿರುವುದಷ್ಟೇ.. ಇದು ಇಂದಿನ ದಿನಗಳಲ್ಲೂ ಎಲ್ಲರಿಗೂ ಅನ್ವಯಿಸುವಂತಹಾ ಮಾತು ಎಂದರೂ ತಪ್ಪಾಗಲಾರದು. ಈ ಎಲ್ಲಾ ಮಾತುಗಳೂ ನಡೆದು ಗೌರಿ ತಿಳಿಸಿದಂತಹಾ ವರ ಶಿವನೇ ಆಗಿ ಅವರಿಬ್ಬರ ಕಲ್ಯಾಣವಾಗುತ್ತದೆ. ರಸವತ್ತಾದ ಸಂಭಾಷಣೆಗಳಿರುವ ಈ ಹಾಡು ನಿಜಕ್ಕೂ ಆ ಪಾತ್ರಗಳನ್ನು ನಮ್ಮ ಕಣ್ಮುಂದೆ ತಂದು ನಿಲ್ಲಿಸುತ್ತದೆ.

ನಾನು ಈ ಹಾಡಿನಲ್ಲಿ ರೆಕಾರ್ಡ್ ಮಾಡಿ ಹಾಕಿರುವುದು ಕೆಲವೇ ನಿಮಿಷಗಳು. ಬಹುಷಃ ನಮ್ಮ ಮುಂದಿನ ಜನರೇಷನ್ಗಳಿಗೆ ಹೋಲಿಸಿಕೊಂಡರೆ ನಾವೇ ಲಕ್ಕಿ ಎನ್ನಿಸುತ್ತದೆ, ನಮ್ಮ ಮುಂದಿನ ಜನರೇಷನ್ಗಳು ಇದರ ಕುರಿತು ತಿಳಿದುಕೊಂಡರೂ ನೋಡುವುದು ಅಪರೂಪವೇ ಆಗಬಹುದು. ಅಷ್ಟಕ್ಕೂ ಆ ಅಜ್ಜಿಗೆ ಓದು ಬರಹ ತಿಳಿದಿಲ್ಲ, ನೆನಪಿನಶಕ್ತಿಯಿಂದಲೇ ಇಷ್ಟು ಚೆಂದವಾಗಿ ಹಾಡಬಹುದಾದರೆ ಓದು ಬರಹ ತಿಳಿದಿದ್ದರೆ..? ಅವರ ಮುಗ್ದತೆ ಕೂಡಾ ಚೆಂದವೇ.. ಅವರು ಹಾಡಿದ ನಂತರ ಕಾಣದ ಕೇಳುಗಳಾದ ನನ್ನ ಹತ್ತಿರ ಹಾಡು ಹೇಗಿತ್ತು? ಇಷ್ಟವಾಯಿತಾ? ಎಂದು ಕೇಳಿದರು. ರೆಕಾರ್ಡ್ ಮಾಡಿದ ಧ್ವನಿಯನ್ನು ಅವರಿಗೆ ಕೇಳುವ ಆಸೆ ಕೂಡಾ ಇತ್ತು. ಕೇಳಿದರು ಕೂಡಾ.. ಟೆಕ್ನಾಲಜಿ ಕೆಲವೊಮ್ಮೆ ವರ ಕೂಡಾ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳುವೆ.

ಅವರು ಹಾಡಿದ ಆ ಹಾಡು, ನಾನು ರೆಕಾರ್ಡ್ ಮಾಡಿದಷ್ಟು ನಿಮ್ಮ ಮುಂದಿದೆ, ಕೇಳಿ.. ಇದೆಲ್ಲಾ ಹುಚ್ಚಾಟ ಅನ್ನಿಸಿದರೆ ಒಮ್ಮೆ ನಕ್ಕು ಸುಮ್ಮನಾಗಿ ಅಷ್ಟೇ..

~ವಿಭಾ ವಿಶ್ವನಾಥ್

ಗುರುವಾರ, ಡಿಸೆಂಬರ್ 20, 2018

ಆ ಪಾದಗಳು

ನಸುಗೆಂಪಿನ ಗುಲಾಬಿ ಪಕಳೆಗಳಂತಹಾ
ಪುಟ್ಟ ಪುಟ್ಟ ಪಾದಗಳನ್ನು ಕಂಡಾಗ
ನನ್ನ ದೃಷ್ಟಿಯೇ ತಗುಲಬಹುದೆಂಬ ಭಯದಿ
ನನ್ನ ಏಳುಸುತ್ತಿನ ಮಲ್ಲಿಗೆ ತೂಕದ
ರಾಜಕುಮಾರಿಯ ಅಂಗಾಲಿಗೆ ದೃಷ್ಟಿಬೊಟ್ಟಿಡುತ್ತೇನೆ
ಗರ್ಭದಲ್ಲಿದ್ದಾಗ ಒದ್ದ ಪಾದಗಳ
ಹಣೆಗೊತ್ತಿಕೊಂಡು ಮುದ್ದಾಡುತ್ತೇನೆ ಈಗ
ಫಕ್ಕನೆ, ಅಮ್ಮ ನೆನಪಾಗುತ್ತಾಳೆ..
ಅವಳೂ ಹೀಗೇ ಪುಳಕಿತಳಾಗಿದ್ದಳೇ..?
ಯೋಚಿಸಿದರೇ ಮೈ ನವಿರೇಳುತ್ತದೆ
ಅಮ್ಮ ಬಂದಾಕ್ಷಣ ಕೇಳಬೇಕು..!
ಎಂದುಕೊಂಡೇ ರಾಜಕುಮಾರಿಯ ಅಂಗಾಲಿನ
ಮೃದುವಿಗೆ ಮೈ ಮರೆತು ಬಿಡುತ್ತೇನೆ..
ರಾತ್ರಿ ಊಟವೆಲ್ಲಾ ಮುಗಿದು
ಅರೆಕ್ಷಣ ಕುಳಿತ ಅಮ್ಮನ ದಿಟ್ಟಿಸುತ್ತೇನೆ..
ಚಳಿಗೆ ಬಿರುಕು ಬಿಟ್ಟ ಪಾದಗಳಿಗೆ
ವ್ಯಾಸಲೀನ್ ಹಚ್ಚುವವಳ ಕಂಡು
ನಿಟ್ಟುಸಿರು ಬಿಟ್ಟು ಸುಮ್ಮನಾಗುತ್ತೇನೆ..
ನನ್ನ ಪುಟ್ಟ ರಾಜಕುಮಾರಿಯೂ ಸಹಾ
ಮುಂದೊಮ್ಮೆ ಹೀಗೇ ದಿಟ್ಟಿಸಬಹುದೇ..?
ಎಂದು ಯೋಚಿಸುತ್ತಾ ಯೋಚಿಸುತ್ತಾ
ಪುಟಾಣಿಯ ಪಾದಗಳಿಗೆ ಹೊದಿಕೆ ಹೊದಿಸುತ್ತಾ
ಅಮ್ಮನಾದ ಸಾರ್ಥಕತೆಯಲ್ಲೇ ಮಿಂದೇಳುತ್ತಾ
ಅಮ್ಮನನ್ನೇ ಮರೆತ ನಾನೂ ಸಹಾ
ಅಮ್ಮನಂತಾ ಅಮ್ಮನೇ ಆಗಿ ಬಿಡುತ್ತೇನೆ..

~ವಿಭಾ ವಿಶ್ವನಾಥ್ 

ಶುಕ್ರವಾರ, ಡಿಸೆಂಬರ್ 14, 2018

ಹಸನು

ಯಶಸ್ ತನಗೆ ಬೆಂಗಳೂರಲ್ಲಿ ಸಿಕ್ಕಿದ್ದ ಉತ್ತಮ ಸಂಬಳದ ಕೆಲಸವನ್ನು ಬಿಟ್ಟು ಮತ್ತೆ ತನ್ನ ಹಳ್ಳಿಗೆ ಬಂದಾಗ ಸುತ್ತಮುತ್ತಲಿನವರಿಂದ ಸಿಕ್ಕಿದ್ದು ಚುಚ್ಚು ಮಾತು, ವ್ಯಂಗ್ಯದ ನೋಟಗಳೇ. ಆದರೆ ಅಂದಿನ ಪರಿಸ್ಥಿತಿಗೆ ಹೆದೆಗುಂದದೆ ತನ್ನ ನಿಲುವಿಗೇ ಅಂಟಿಕೊಂಡು ಇಂದು ಯಶಸ್ಸು ಸಾಧಿಸಿದ್ದ ಯಶಸ್.

ಅದೇಕೋ ಯಶಸ್ ಗೆ ಹುಟ್ಟಿ ಬೆಳೆದ ಪರಿಸರದ ಮೇಲೆ ಅಪಾರ ವ್ಯಾಮೋಹ. "ಎಷ್ಟೇ ಓದಿದ್ದರೂ, ಹಳ್ಳಿಯಲ್ಲಿದ್ದರೆ ಹೆಣ್ಣು ಕೊಡುವುದಿಲ್ಲ ಆದರೆ ಪಟ್ಟಣದಲ್ಲಿ ಸಣ್ಣ ಕೆಲಸದಲ್ಲಿದ್ದರೂ ಹೆಣ್ಣು ಕೊಡಲು ನಾ ಮುಂದು, ತಾ ಮುಂದು" ಎಂದು ಬರುವ ಕನ್ಯಾಪಿತೃಗಳ ಮನಸ್ಥಿತಿಯನ್ನು ಮನಸ್ಸಿನಲ್ಲಿಟ್ಟುಕೊಂಡ ಯಶಸ್ ನ ತಂದೆ-ತಾಯಿ ಅವನನ್ನು ಇಂಜಿನಿಯರಿಂಗ್ ಗೆ ಸೇರಿಸಿದರು. ಯಶಸ್ ಮನೆಯಿಂದಲೇ ಕಾಲೇಜಿಗೆ ಹೋಗಿ ಬಂದು ಮಾಡುತ್ತಿದ್ದುದರಿಂದ ಅವನಿಗೆ ಆಗ ಸಮಸ್ಯೆ ಎನ್ನಿಸಿರಲಿಲ್ಲ. ಅದೂ ಅಲ್ಲದೆ ಅವನಿಗೆ ಇಂಜಿನಿಯರಿಂಗ್ ಗಿಂತಲೂ ಹೊಲ-ಗದ್ದೆ, ತೋಟ, ತೊರೆಗಳ ಮೇಲೆಯೇ ಅವನಿಗೆ ಹೆಚ್ಚು ಪ್ರೀತಿ. ಹಾಗೆಂದು ಓದಿನಲ್ಲೇನೂ ಹಿಂದುಳಿಯಲಿಲ್ಲ ಅವನು.

ನಾಲ್ಕು ವರ್ಷದ ಇಂಜಿನಿಯರಿಂಗ್ ನ ನಂತರ ಕೆಲಸ ಸಿಕ್ಕಿದ್ದು ದೂರದ ಬೆಂಗಳೂರಿನಲ್ಲಿ. ಅದೂ ಅಲ್ಲದೆ ಅಲ್ಲಿನ ಯಾಂತ್ರಿಕ ಜೀವನ ಮೂರೇ ದಿನದಲ್ಲಿ ಬೇಸರ ತರಿಸಿತ್ತು. ಅಷ್ಟೇ ಅಲ್ಲದೆ ಅವನಿಗೆ ಆಶ್ಚರ್ಯ ತರಿಸಿದ್ದು ಅಲ್ಲಿನ ವಿರೋಧಾಭಾಸಗಳ ಸಂಗತಿ. ಹಳ್ಳಿಯಲ್ಲಿರುವವರು ಕೆಲಸಕ್ಕೆಂದು ದೂರದ ಪಟ್ಟಣಗಳತ್ತ ಮುಖ ಮಾಡಿದ್ದರೆ, ಅಲ್ಲಿರುವವರು ಕಲುಷಿತ ವಾತಾವರಣಕ್ಕೆ ಬೇಸತ್ತು ಹಳ್ಳಿಯ ಸ್ವಚ್ಚಂದವಾದ ಹಳ್ಳಿಯ ಪರಿಸರಕ್ಕೆ ಮುಖ ಮಾಡಿದ್ದರು. ಇದೆಲ್ಲವನ್ನು ಕಂಡು ತಾನೂ ಧೃಡ ನಿರ್ಧಾರ ಮಾಡಿ ಭೂ ತಾಯಿಯ ಸೇವೆ ಮಾಡಲು ಹಳ್ಳಿಗೆ ಮರಳಿದ್ದ.

ಇಷ್ಟಲ್ಲದೆ ಕೃಷಿ ಅಲ್ಲಿ ವ್ಯಾಪಾರೀಕರಣದ ಭಾಗವೇ ಆದಂತೆ ಭಾಸವಾಗುತ್ತಿತ್ತು. ಆರ್ಗಾನಿಕ್ ಫಾರ್ಮಿಂಗ್ ಇದಕ್ಕೊಂದು ಉದಾಹರಣೆ. ಆರ್ಗಾನಿಕ್ ಫಾರ್ಮಿಂಗ್ ನಲ್ಲಿ ಒಂದಿಷ್ಟು ಜಾಗವನ್ನು ಇಂತಿಷ್ಟು ಹಣ ಎಂದು ನೀಡಿ ಇಂತಿಷ್ಟು ದಿನಕ್ಕೆ ಎಂದು ಕೊಂಡುಕೊಂಡು ಅದರಲ್ಲಿ ನಮ್ಮಿಷ್ಟದ ತರಕಾರಿ, ಸೊಪ್ಪುಗಳನ್ನು ರಾಸಾಯನಿಕಗಳನ್ನು ಬಳಸದೆ ಬೆಳೆಯಬೇಕಿತ್ತು. ಈ ಪದ್ದತಿಯಿಂದ ಹೆಚ್ಚು ಖುಷಿ ಪಟ್ಟವರು ಮಕ್ಕಳು. ಮಕ್ಕಳು ಇದರಿಂದ ಪುಳಕಿತರಾಗಿ ಕೃಷಿಯತ್ತ ಒಲವು ತೋರುತ್ತಿದ್ದರು. ಕೃಷಿ ಹೊಸ ರೀತಿಯ ಪ್ರಯೋಗದಿಂದ ಮತ್ತೆ ಬೆಳಕಿಗೆ ಬರುತ್ತಿದ್ದುದು ಖುಷಿಯ ವಿಚಾರವಾದರೆ, ವ್ಯಾಪಾರೀಕರಣವಾಗುತ್ತಿರುವುದು ವಿಪರ್ಯಾಸ.

ಇಂತಹ ಸಂದರ್ಭದಲ್ಲಿ ಕವಿತಾ ಮಿಶ್ರ ಎಂಬ ಮಹಿಳೆಯ ಸಾಧನೆ ಯಶಸ್ ಅನ್ನು ಅಚ್ಚರಿಗೊಳಿಸಿತ್ತು. ಸೈಕಾಲಜಿ, ಕಂಪ್ಯೂಟರ್ ಸೈನ್ಸ್ ಓದಿದ್ದರೂ ಕೃಷಿಯ ಕಡೆ ಮುಖ ಮಾಡಿದ್ದ ಮಹಿಳೆ ಕವಿತಾ. ರಾಯಚೂರಿನಂತಹಾ ಬರಡು ಭೂಮಿಯಲ್ಲಿ ಬಂಗಾರದಂತಹಾ ಬೆಳೆ ತೆಗೆದವರು ಆಕೆ. ಆಕೆ ಬಳಸಿದ್ದ ಹನಿ ನೀರಾವರಿ ಮತ್ತು ಸಾವಯವ ಕೃಷಿ ಪದ್ದತಿ ಯಶಸ್ ನ ಮನಸೆಳೆಯಿತು. ಇದಿಷ್ಟೇ ಅಲ್ಲದೆ ಕಡಿಮೆ ಜಾಗದಲ್ಲಿ ಹೆಚ್ಚಿನ ಬೆಳೆ ಬೆಳೆಯಬಹುದಾದ ವರ್ಟಿಕಲ್ ಗಾರ್ಡನಿಂಗ್, ಅತಿ ಕಡಿಮೆ ನೀರು ಬಳಸಿ ಬೆಳೆಯುವ ಹೈಡ್ರೋಫೋನಿಕ್ ಕೃಷಿ ವಿಧಾನ ಇವುಗಳನ್ನು ಅರಿತು ಅಳವಡಿಸಿಕೊಂಡ ಯಶಸ್.

ಕಷ್ಟ ಪಟ್ಟವರಿಗೆ ಫಲ ಸಿಕ್ಕೇ ಸಿಗುತ್ತದೆ, ಆದರೆ ತುಸು ಕಾಯಬೇಕಾಗುತ್ತದೆ. ಯಶಸ್ ನ ವಿಷಯದಲ್ಲೂ ಹೀಗೇ ಆಯಿತು. ಮೊದಲೆರಡು ವರ್ಷ ಮಳೆಯ ಅಭಾವ, ಅತಿ ಮಳೆ ಬಂದು ಹಾಳು ಮಾಡಿದರೆ ನಂತರದಲ್ಲಿ ಕಾಡು ಪ್ರಾಣಿಗಳ ಕಾಟ, ಕಲಬೆರಕೆ ಗೊಬ್ಬರ, ಮಧ್ಯವರ್ತಿಗಳಿಂದ ಬೆಳೆಗೆ ಸರಿಯಾದ ಬೆಲೆ ಸಿಗದೆ ನಷ್ಟ ಅನುಭವಿಸಬೇಕಾಯಿತು.

ನಂತರ ತಾನು ಕಲಿತ ಇಂಜಿನಿಯರಿಂಗ್ ಅನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡು ಕೃಷಿ ಇಳುವರಿಯನ್ನು ಅತ್ಯುತ್ತಮಗೊಳಿಸಿದ, ಕಾಡು ಪ್ರಾಣಿಗಳ ಕಾಟದಿಂದ ಮುಕ್ತನಾದ. ಕಲಬೆರಕೆ ಗೊಬ್ಬರದ ಬದಲಿಗೆ ಸಗಣಿಯನ್ನು ಉಪಯೋಗಿಸಿ ತಯಾರಿಸಿದ ಸಾವಯವ ಗೊಬ್ಬರವನ್ನು ಬಳಸಿದ. ಮಳೆನೀರಿಗಾಗಿ ಇಂಗು ಗುಂಡಿಗಳನ್ನು ತೆಗೆಸಿದ. ಹೈನುಗಾರಿಕೆಯ ಜೊತೆ ಮೀನು ಸಾಕಾಣಿಕೆಯನ್ನೂ ಶುರು ಮಾಡಿದ. ಇದರ ಜೊತೆಗೆ ವಿವಿಧ ಹಣ್ಣಿನ ಮರಗಳು, ತೇಗ, ಗಂಧ, ಹೊನ್ನೆಯಂತಹ ಮರಗಳನ್ನು ನೆಟ್ಟ. ಇವುಗಳ ಜೊತೆಗೆ ತನ್ನೂರಿನಲ್ಲಿ ಸಿಗುವ ವಿಶಿಷ್ಟ ಹೂ ಮತ್ತು ಹಣ್ಣಿನ ಗಿಡಗಳನ್ನು ಬೋನ್ಸಾಯ್ ಪದ್ದತಿಗೆ ಅಳವಡಿಸಿದ.

ಈಗ ಯಶಸ್ ಜಿಲ್ಲೆಯ ಮಾದರಿ ರೈತ ಎನ್ನಿಸಿಕೊಂಡಿದ್ದಾನೆ. ಈ ಕುರಿತಂತೆ ತನ್ನ ಅಭಿಪ್ರಾಯ ಕೇಳಿದ ವರದಿಗಾರನಿಗೆ ಯಶಸ್ ಹೇಳಿದ್ದಿಷ್ಟು, "ಭೂಮಿಯಲ್ಲಿ ಉತ್ತಮವಾಗಿ ಬಿತ್ತನೆ ಮಾಡಿದ್ದರೂ, ಕಲುಷಿತ ವಾತಾವರಣವಿದ್ದರೆ ಬೆಳೆ ಸರಿಯಾಗಿ ಬಾರದು., ಹಾಗೆಯೇ ಭೂಮಿಯೇ ಕಲುಷಿತವಾದರೆ ಅಥವಾ ಬಿತ್ತನೆಯ ಬೀಜದ ಗುಣಮಟ್ಟ ಸರಿಯಾಗಿರದಿದ್ದರೆ, ವಾತಾವರಣ ಚೆನ್ನಾಗಿದ್ದರೂ ಫಲ ಸರಿಯಾಗಿ ಬಾರದು. ಜೀವನವೂ ಹಾಗೆಯೇ.. ನಾವು ಹದಗೊಳಿಸಿಕೊಂಡಂತೆ ಜೀವನ, ಹಸನುಗೊಳಿಸಿಕೊಂಡಂತೆ ಬದುಕು. ರೈತನ ಜಾಣ್ಮೆ,ಶ್ರಮ, ಭೂಮಿಯ ಫಲವತ್ತತೆ, ಉತ್ತಮ ವಾತಾವರಣ ಇಳುವರಿಯ ಮೇಲೆ ಪ್ರಭಾವ ಬೀರಿದಂತೆ.. ಒಂದು ಸರಿಯಾದ ನಿರ್ಧಾರ, ಸಹಕಾರ ತುಂಬಿದ ವಾತಾವರಣ, ಅಚಲ ನಂಬಿಕೆ, ಪರಿಶ್ರಮಗಳು ಬದುಕನ್ನು ಹಸನು ಮಾಡುತ್ತವೆ."

~ವಿಭಾ ವಿಶ್ವನಾಥ್

ಬುಧವಾರ, ಡಿಸೆಂಬರ್ 5, 2018

'ನಾನು' ಸತ್ತರೆ..

ಸುನಿಧಿಯ ಆಲೋಚನೆ ಹಿಂದಕ್ಕೋಡಿತ್ತು. ಅದರ ಹಿಂದಿನ ಪ್ರಶ್ನೆ ಇದ್ದದ್ದು.. "'ನಾನು' ಸತ್ತರೆ..?

ತಾನು ಬಂದದ್ದು ತುಂಬಿದ ಸಂಸಾರದ ಸೊಸೆಯಾಗಿಯೇ.. ಹಿಂದೆಂದೂ ಇಲ್ಲದ ಹೊಸ ರೀತಿಯ ಭಾವನೆಗಳು, ಈ ಕುಟುಂಬವನ್ನು ನೋಡಿದೊಡನೆ ಉಂಟಾಯಿತು. ಬಹುಶಃ ನನ್ನಮ್ಮ ನೋಡಿ ಮಾಡಿದ ಮದುವೆಯೇ ಆಗಿದ್ದಿದ್ದರೆ ಅಮ್ಮ ಹೇಳುವ ಹಾಗೆಯೇ  ಹೈ ಸೊಸೈಟಿ ಫ್ಯಾಮಿಲಿಯ, ಯಾವುದೋ ಸಾಫ್ಟ್ವೇರ್ ಗಂಡ ಸಿಕ್ಕಿರುತ್ತಿದ್ದ. ಆದರೆ ಇದು ನಾನೇ ಬೇಕೆಂದು ಆರಿಸಿಕೊಂಡ ಸಂಬಂಧವಲ್ಲವೇ..?

ಬೇಕೆಂದಾಗ ಹೊಕ್ಕು, ಬೇಡವೆನ್ನಲು ಇದು ಬಿಟ್ಟು ಹೊರಡುವ ಸಂಬಂಧವಲ್ಲವಲ್ಲಾ..!? ಸಾತ್ವಿಕ್ ನನ್ನು ಮದುವೆಯಾಗುವಾಗ ಅವನು ತಿಳಿಸಿದ್ದ "ನೀನು ಮದುವೆಯಾಗುವುದು ನನ್ನನ್ನು ಮಾತ್ರವಲ್ಲ.. ನನ್ನ ಕುಟುಂಬವನ್ನು" ಎಂದು. ಹದಿಹರೆಯದ ಪ್ರೀತಿ, ಬಿಸಿ ರಕ್ತ ಎಲ್ಲವನ್ನೂ ಎಲ್ಲರನ್ನೂ ಒಪ್ಪಿಕೊಳ್ಳುವಂತೆ ಮಾಡಿತ್ತು. ನಾನು ನೋಡಿದ ದಾಂಪತ್ಯಗೀತೆಗಳೂ ಹಾಗೆಯೇ ಇದ್ದವಲ್ಲಾ.. ಮೊದಮೊದಲಿಗೆ ಮನೆಯವರೆಲ್ಲಾ ಸರ್ವಸ್ವ, ಮನೆಯವರು ಹೇಳಿದಂತೆಯೇ.., ಆದರೆ ನಂತರ ನನ್ನ ಮನೆದೇವರು ಹೇಳಿದಂತೆಯೇ.. ನನ್ನ ಮನೆಯಾಕೆಯೇ ನನ್ನ ಸರ್ವಸ್ವ.

ಆದರೆ ನಾನು ನೋಡಿದ ಹೆಚ್ಚಿನ ದಾಂಪತ್ಯಗಳೆಲ್ಲಾ ವಿಷಮಗೀತೆಗಳೇ.. ದಾಂಪತ್ಯ ಇನ್ನೂ ಚೆನ್ನಾಗಿ ಹೊಂದಿಕೊಂಡಿದೆಯೆಂದರೆ ಅದಕ್ಕೆ ಕಾರಣ ಒಡೆದ ಮನೆಗಳು ಅರ್ಥಾತ್ ಅವಿಭಕ್ತ ಕುಟುಂಬಗಳು. ಅತ್ತೆ-ಸೊಸೆ ಬೇರೆ ಬೇರೆ ಇರುವುದು ಆಷಾಡದಲ್ಲಿ ಮಾತ್ರವಲ್ಲ.. ಯಾವಾಗಲೂ..!

ಅಜ್ಜಿ ಅತ್ತೆಯರ ಸಂಬಂಧವೂ ಹಾಗೇ ಇದ್ದಿತ್ತು. ಒಂದೇ ನಾಣ್ಯದ ಎರಡು ಮುಖಗಳಂತೆಯೇ..? ಅಜ್ಜಿಯದ್ದು ಮಾತು ಜಾಸ್ತಿ ಆದರೂ ಮಾತುಗಳಲ್ಲಿ ಕೊಂಕು ಇರುತ್ತಿರಲಿಲ್ಲ.ಅತ್ತೆಯೂ ಅನುಸರಿಸಿಕೊಂಡು ಹೋಗದವರೇನೂ ಅಲ್ಲ. ಆದರೆ ಅವರ ಹೊಂದಾಣಿಕೆ ಮನೆಯವರೊಂದಿಗೆ ಮಾತ್ರ ಅಲ್ಲ ಎಂಬುದು ವಿಪರ್ಯಾಸ. ಅಮ್ಮ ಕೂಡಾ ಬಾಳಿದ್ದು ಕೂಡು ಕುಟುಂಬದಲ್ಲೇನೂ ಅಲ್ಲ. ಅಲ್ಲದೆ ಅತ್ತೆ ಮನೆಯಲ್ಲಿ ಹೀಗೇ ಇರಬೇಕೆಂದೂ ಅಮ್ಮ ಹೇಳಿಕೊಡಲಿಲ್ಲ. ಹೀಗೇ ಇರಬೇಕೆಂಬುದನ್ನು ಹೇಳಿಕೊಡಲು ಅಮ್ಮನಿಗೆ ಸಮಯವಾದರೂ ಎಲ್ಲಿತ್ತು..?  ಲೇಟ್ ನೈಟ್ ಪಾರ್ಟಿಗಳು, ಸೊಸೈಟಿ, ಕ್ಲಬ್ ಗಳ ಮೀಟಿಂಗ್ ಗಳು ಇದೆಲ್ಲದರ ನಡುವೆಯೇ ಅಮ್ಮ ಅಲ್ಲಲ್ಲ ಮಮ್ಮಿ ಕಳೆದುಹೋಗಿದ್ದಳು.

ಆದರೆ ನಾನು ಹೀಗಿರಲು ಕೊಂಚ ಮಟ್ಟಿಗೆ ಕಾರಣ ಅಪ್ಪನೇ.. ಸಾತ್ವಿಕ್ ನ ಸಂಬಂಧವನ್ನೂ ಯಾವ ತಕರಾರೂ ಇಲ್ಲದೆ ಒಪ್ಪಿಕೊಂಡಿದ್ದರು. ಅಲ್ಲದೆ ನನ್ನನ್ನು ಬೆಂಬಲಿಸಿದ್ದರು. ಅಲ್ಲದೆ ಹೊರಡುವ ಮುನ್ನ ಕೂಡ ಒಂದು ಕಿವಿಮಾತನ್ನೂ ಹೇಳಿದ್ದರು. "ಮನಸ್ಸೆಂಬುದು ನೀನು ಹರಿಯಬಿಟ್ಟಂತೆ, ಲಂಗು ಲಗಾಮು ನಿನ್ನೆಡೆಯೇ ಇರಲಿ".

ಆದರೆ ಈ ಮಾತನ್ನು ಮೀರುವ ಅಥವಾ ಮತ್ತೆ ನೆನಪಿಸಿಕೊಳ್ಳುವ ಸಂದರ್ಭ ಇದುವರೆಗೂ ಬಂದಿರಲಿಲ್ಲ. ಆದರೆ ಅಮ್ಮ ಇತ್ತೀಚೆಗೆ ಹೇಳಿದ ಮಾತು ತುಲನೆ ಮಾಡುವಂತೆ ಮಾಡಿತು ಅಷ್ಟೇ.  ಅಮ್ಮ ಅಲ್ಲಲ್ಲಾ ಮಮ್ಮಿ ಹೇಳಿದ್ದು, "ಆದಷ್ಟು ಬೇಗ ಆ ಜಾತ್ರೆಯಿಂದ ಹೊರಗಡೆ ಬಾ."

ಆದರೆ ನನಗೆಂದೂ ಇಲ್ಲಿ ಜಾತ್ರೆ ಅಥವಾ ಇಕ್ಕಟ್ಟಿನ ಅಥವಾ ಮತ್ತಾವುದೇ ಇರುಸುಮುರುಸಿನ ಅನುಭವವಾಗಿರಲಿಲ್ಲ. ಯಾವ ಕೆಲಸವೂ ಬರದ ನನಗೆ ಅತ್ತೆ ಅಮ್ಮನಾಗಿ.. ಓರಗಿತ್ತಿಯರು ಗೆಳತಿಯರಾಗಿ ಸಹಕರಿಸಿದರು. ಮೈದುನ, ಭಾವ, ಮಾವ ಎಲ್ಲರೂ ಒಳ್ಳೆಯವರೇ..

ಎಲ್ಲವನ್ನೂ ತಿದ್ದುತ್ತಿದ್ದ ಎಲ್ಲರೂ ಇಂದು ಅಷ್ಟು ಕಠೋರವಾಗಿ ನಡೆದುಕೊಂಡದ್ದಾದರೂ ಏಕೆ..?

ಕೆಲಸದವರನ್ನು ನಮ್ಮ ಮನೆಯಲ್ಲಿ ನಡೆಸಿಕೊಳ್ಳುತ್ತಿದ್ದದ್ದೇ ಹಾಗೆ..!

ಕೆಲಸದವನಾಗಿ ನನಗೇ ಏಕವಚನದಿಂದ ಮಾತನಾಡಿಸಿದ್ದೇ ಅಲ್ಲದೆ ನನ್ನ ಚಪ್ಪಲಿ ಹೊಲಿಸಿಕೊಂಡು ಬಾ ಎಂದದ್ದಕ್ಕೆ "ಆಗುವುದಿಲ್ಲ, ನಮಗೂ ಆತ್ಮಗೌರವವಿದೆ, ಹಿರಿಯರಿಗೆ ಗೌರವ ಕೊಡುವುದನ್ನು ಕಲಿ, ಅವರು ಕೆಲಸದವರಾದರೂ ಸರಿಯೇ" ಎಂದರು. ಕೋಪ ಬಂದು ಹೊಡೆದದ್ದೇ ತಪ್ಪಾ?

ಮನೆಯಲ್ಲಿ ಎಲ್ಲರೂ ಅಂದು ಕೋಪ ಮಾಡಿಕೊಂಡು ನನ್ನನ್ನೇ ದೂಷಿಸಿದರು. ನನ್ನ ಕೋಪವೂ ಮೇರೆ ಮೀರಿ ಮಾತಿಗೆ ಮಾತು ಬೆಳೆಯಿತು. ಒಳ್ಳೆಯತನದ ಮತ್ತೊಂದು ಮುಖದ ಪರಿಚಯವಾಗಿತ್ತು.

ಸೋಲಲು ನನಗಿಷ್ಟವಿಲ್ಲ ಆದರೆ ಸೋಲದೆ ವಿಧಿಯಿಲ್ಲ. ಸೋಲದೆ ಸಂಬಂಧದಲ್ಲಿ ಗೆಲ್ಲಲ್ಲೂ ಸಾಧ್ಯವಿಲ್ಲ. ಹಾಗೆಂದು ಮನೆಯವರೆಲ್ಲರನ್ನೂ ಎದುರುಹಾಕಿಕೊಂಡು ಬದುಕಲು ಸಾಧ್ಯವೇ..?

ಇದಕ್ಕೆಲ್ಲಾ ಒಂದೇ ಪರಿಹಾರ 'ನಾನು' ಸಾಯಬೇಕು. ಹೌದು ಇದಕ್ಕೆ ಇದನ್ನು ಬಿಟ್ಟು ಬೇರೆ ಪರಿಹಾರವಿಲ್ಲ.

ಇದೆಲ್ಲದಕ್ಕೂ ಪರಿಹಾರ ಸಿಕ್ಕಿತ್ತು. ಅಪ್ಪನನ್ನು ಸಲಹೆ ಕೇಳಿದಾಗ 'ವಸುದೈವ ಕುಟುಂಬಕಂ' ಎಂದರಷ್ಟೇ.

'ನಾನು' ಸತ್ತಾಗಿತ್ತು. ಸುನಿಧಿ ಸಾಯಲಿಲ್ಲ, ಸುನಿಧಿಯೊಳಗಿನ 'ನಾನು' ಎಂಬ ಅಹಂಕಾರ ಸತ್ತಿತ್ತು. ಮನೆಯೊಳಗೆ ಪಂಕ್ತಿ ಭೋಜನ ಸುನಿಧಿಯ ಮುಂದಾಳತ್ವದಲ್ಲಿ ನಡೆದಿತ್ತು.

~ವಿಭಾ ವಿಶ್ವನಾಥ್