ಭಾನುವಾರ, ಫೆಬ್ರವರಿ 3, 2019

ನಾಜೂಕಿನ ಹಸಿರು ಬಳೆಗಳು

ಗಾಜಿನ ಬಳೆಗಳು ಚೆಂದವೇ
ಆದರೆ ಈಗೀಗ ಪಟ್ಟಣದ
ಮಾಲ್ ಗಳಲ್ಲಿ ಇವು ದೊರಕುವುದಿಲ್ಲ

ಬಣ್ಣ ಬಣ್ಣದ ಪ್ಲಾಸ್ಟಿಕ್ ಬಳೆಗಳು
ಡಬ್ಬಿಯಲ್ಲಿ ರಾಶಿ ಬಿದ್ದಿವೆ ಜೀವವಿಲ್ಲದಂತೆ
ಆದರೆ ನನಗವು ಇಷ್ಟವೇ ಆಗುವುದಿಲ್ಲ

ಕಿಣಿ ಕಿಣಿ ಎಂದು ಸದ್ದು ಮಾಡುವ
ನನ್ನ ಓಡಾಟಕೆ ಜೀವ ತುಂಬುವ
ಗಾಜಿನ ಬಳೆಗಳು ಬಹಳವೇ ಇಷ್ಟ

ಆಡುವಾಗ ಒಡೆಯಬಹುದೆಂದು
ಗೆಳತಿಯರಂತೂ ಇದರಿಂದ ಬಹು ದೂರ
ಗಾಜು ಒಡೆಯದಿರಲು ಸಾಧ್ಯವೇ..?

ಇದು ಹಳೆಯ ಪ್ಯಾಷನ್ ಎನ್ನುತ್ತಾ
ಅಕ್ಕ ಗಾಜಿನ ಬಳೆಗಳಿಂದ ದೂರ..
ಹಿಂದಿನ ತಲೆಮಾರುಗಳಿಂದಲೂ ಸಹಾ..!

ಕೆಲಸಕ್ಕೆಂದು ಬಸ್ ನಲ್ಲಿ ಹೋಗುವಾಗ
ನೂಕುನುಗ್ಗಲಲ್ಲಿ ನುಜ್ಜುಗ್ಗುಜ್ಜಾಗುವುದೆಂದು
ಅಮ್ಮನೂ ಗಾಜಿನ ಬಳೆ ತೊಡುವುದಿಲ್ಲ..

ಆದರೆ ಅಜ್ಜಿಯ ಕೈ ತುಂಬೆಲ್ಲಾ
ಗಲಗಲಿಸುವ ಹಚ್ಚ ಹಸಿರು ಬಳೆಗಳು
ಹೆಣ್ತನಕೆ ಶೋಭಿಸುವ ಶುಭ ಕಳೆಗಳು

ಪಟ್ಟಣದಿಂದ ಬಂದಿಯೆ ಹಳ್ಳಿಗೆ
ಸಂಪ್ರದಾಯದ ಸೌಧದ ಮಡಿಲಿಗೆ
ಅಪರೂಪದ ಬಳೆಗಾರನೂ ಬಂದಿಹನು

ತರಹೇವಾರಿ ಬಳೆಗಳೆಲ್ಲವ ತಂದಿಹನು
ನನಗಂತೂ ಚುಕ್ಕಿಯ ಹಸಿರು ಬಳೆಗಳು
ಪುಟ್ಟಗೌರಿಗೆ ಪುಟ್ಟ ಬಳೆಯ ಅಲಂಕಾರ

ಒಡೆಯದ,ಸವೆಯದ ಬಳೆ ಏನು ಚೆಂದ?
ಒಡೆದರೆ ಸುಂದರ ಕಲಾಕೃತಿ ಮಾಡುವೆ
ಗಾಜಿನ ಬಳೆಗಳ ತೊಡದೆ ಬಿಡೆನು

ಅಜ್ಜಿಯಂದಳು ನಾಜೂಕಿನ ಬದುಕಿನಂತೆಯೇ
ಈ ಗಾಜಿನ ನಾಜೂಕಿನ ಬಳೆಗಳೂ..
ಸಂಭಾಳಿಸುವುದರ ಮೇಲೆ ನಿಂತಿದೆ ಬದುಕು

ಇಂದು ನಾನೂ ಬಳೆ ತೊಟ್ಟಿರುವೆ
ಅಜ್ಜಿಗೆ ಭಾಷೆಯನ್ನೂ ಕೊಟ್ಟಿರುವೆ
ಸಂಪ್ರದಾಯವ ಬಲಿ ನೀಡೆನೆಂದು

~ವಿಭಾ ವಿಶ್ವನಾಥ್
(ಚಿತ್ರ ಕೃಪೆ: ಶ್ರೀಮತಿ ಲತಾ ಜೋಷಿ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ