ಭಾನುವಾರ, ಮೇ 12, 2019

ಅಮ್ಮ 'ಅಮ್ಮ'ನಾಗಿಯೇ ಉಳಿಯಬೇಕೇ?

ಹೌದು, ಕಡೆಯ ಕ್ಷಣದವರೆಗೂ ಅಮ್ಮ ಅಮ್ಮನಾಗಿಯೇ ಉಳಿಯಬೇಕೇ? ನಾವು ಬದಲಾಗ್ತೀವಿ. ಖಂಡಿತಾ, ನಾವೆಲ್ಲರೂ ಕೊನೆಯ ಕ್ಷಣದವರೆಗೂ ಬದಲಾಗ್ತಾನೇ ಹೋಗ್ತೀವಿ. ಆದರೆ 'ಅಮ್ಮ' ಮಾತ್ರ ಬದಲಾಗಬಾರದು. ಯಾಕೆ?

ಹೆಣ್ಣಿಗೆ ತಾಯ್ತನ ಅನ್ನುವುದು ಒಂದು ವರ. ಹೀಗಂದುಕೊಂಡೇ ಎಲ್ಲಾ ಅಮ್ಮಂದಿರು ತಮ್ಮ ತಾಯ್ತನದೊಳಗೆ ಬಂಧಿಯಾಗಿ ಬಿಡುತ್ತಾರಾ? ಹೆಣ್ಣು ಮಗಳು, ಸೊಸೆ, ಹೆಂಡತಿ, ಸ್ನೇಹಿತೆ, ಸಹೋದರಿ ಎಲ್ಲವೂ ಆಗ್ತಾಳೆ. ಆದರೆ ಅವಳು ಹೆಚ್ಚು ಜವಾಬ್ದಾರಿ ಹೊಂದಿರುವ, ಹೆಚ್ಚು ಕಾಲ ನಿರ್ವಹಿಸುವ ಪಾತ್ರ ಅಮ್ಮನಾಗಿ ಮಾತ್ರ.. ಮದುವೆಯಾಗಿ ಬಂದ ಮೇಲೆ ಎಲ್ಲರ ಮನ ಮತ್ತು ಮನೆ ತುಂಬಿರುವ ಅವಳಿಗೆ ತನ್ನ ಮಡಿಲು ತುಂಬುವ ಸೂಚನೆ ಸಿಕ್ತಾ ಇದ್ದಂತೆ ಅವಳಲ್ಲೊಂದು ಜಾಗೃತ ಪ್ರಜ್ಞೆ ಮೂಡಿಬಿಡುತ್ತೆ. ಇಷ್ಟು ದಿನ ತನಗಾಗಿ, ತನ್ನ ಗಂಡ ಮತ್ತು ತನ್ನ ಮನೆಯವರಿಗಾಗಿ ಎನ್ನುವಂತೆ ಇದ್ದವಳು, ಮಗುವಿಗಾಗಿ ಎಂಬಂತೆ ಬದುಕುವುದಕ್ಕೆ ಶುರು ಮಾಡುತ್ತಾಳೆ. ಬಹುಶಃ ಕಾಣದಿದ್ದರೂ ಕಾಡುವ ಪ್ರೀತಿ ಅಂದರೆ ಇದೇ ಇರಬೇಕು. 

ಕೂಸು ಹುಟ್ಟುವ ಮುಂಚೆಯೇ ತನ್ನ ಎಲ್ಲಾ ಜವಾಬ್ದಾರಿ ನಿರ್ವಹಿಸುವುದಕ್ಕೆ ಸಿದ್ದವಾಗಿ ಬಿಟ್ಟಿರುತ್ತಾಳೆ. ಮಗು ಹುಟ್ಟಿದ ಕ್ಷಣದಿಂದ ಪೊಸೆಸ್ಸಿವ್ ಆಗುವುದಕ್ಕೆ ಶುರು ಮಾಡ್ತಾಳೆ. ಮಗುವಿಗೆ ಶೀತ ಆದರೆ ಅಮ್ಮನಿಗೆ ಚಡಪಡಿಕೆ, ಮಗು ಅತ್ತರೆ ಅವಳ ಕಣ್ಣಲ್ಲಿ ನೀರು ಹೀಗೇ ಪಟ್ಟಿ ಮಾಡುತ್ತಾ ಹೋದರೆ ನಿಲ್ಲುವುದೇ ಇಲ್ಲ ಅನ್ನಿಸುತ್ತೆ. ಅಮ್ಮನ ಪ್ರಪಂಚದಲ್ಲಿ ಮಕ್ಕಳು ಎಷ್ಟೇ ದೊಡ್ಡವರಾದರೂ ಇನ್ನೂ ಚಿಕ್ಕವರೇ. ಆದರೆ ಮಕ್ಕಳ ಪ್ರಪಂಚದಲ್ಲಿ..??

ಮಕ್ಕಳ ಪ್ರಪಂಚದಲ್ಲಿ ಅಮ್ಮ ಅನ್ನುವವಳ ಪಾತ್ರ ತಾವು ಸ್ವಾವಲಂಭಿಗಳಾಗುವವರೆಗೆ ಮಾತ್ರ. ಆಮೇಲೆ ಅವಳೆಡೆಗೆ ದಿವ್ಯ ನಿರ್ಲಕ್ಷ್ಯ, ಆದರೂ ಅಮ್ಮನ ಕಾಳಜಿ ತಮ್ಮ ಮೇಲೆ ಹಾಗೇ ಇರಬೇಕು ಅನ್ನುವ ಧಿಮಾಕು ಬೇರೆ.

ಗಂಡು ಮಕ್ಕಳಿಗೆ ಹೆಂಡತಿ ಬಂದ ನಂತರ ಅಮ್ಮನ ಮೇಲಿನ ಲಕ್ಷ್ಯ ಸ್ವಲ್ಪ ಕಡಿಮೆಯಾಗುತ್ತದೆ. ಮುಂದಿನ ದಿನಗಳಲ್ಲಿ ಇಬ್ಬರಿಗೂ ಮನಸ್ತಾಪ ಬಂದರೆ "ಅಮ್ಮಾ, ಸ್ವಲ್ಪ ಅನುಸರಿಸಿಕೊಂಡು ಹೋಗೋಕಾಗಲ್ವಾ..?" ಅನ್ನೋ ದರ್ಪದ ಮಾತು. ಇಷ್ಟು ವರ್ಷವೂ ಸಹಿಸಿಕೊಂಡು ಬಂದ ಅಮ್ಮ ಹಾಗೇ ಮಾತನಾಡಿರಬಹುದಾ? ಎಂಬ ಸಣ್ಣ ಯೋಚನೆಯೂ ಬರುವುದಿಲ್ಲ. ಅಕಸ್ಮಾತ್ ಮಾತನಾಡಿದರೂ ಅವತ್ತೆಲ್ಲೋ ಕೊಂಚ ಸಹನೆ ಮೀರಿ ಮಾತನಾಡಿರಬಹುದು ಅನ್ನೋ ಕನಿಷ್ಠ ಯೋಚನೆ ಕೂಡಾ ಬರಲ್ಲ. ಆದರೂ, ಅಮ್ಮ ಅನುಸರಿಸಿಕೊಂಡು, ಸಹಿಸಿಕೊಂಡು ಹೋಗುವ ಅಮ್ಮನಾಗಿಯೇ ಉಳಿದುಬಿಡಬೇಕೇ?

ಗಂಡು ಮಕ್ಕಳದ್ದು ಹೀಗಾದರೆ ಹೆಣ್ಣು ಮಕ್ಕಳದ್ದು ಬೇರೆಯದ್ದೇ ಕಥೆ. ಮದುವೆಗೆ ಮುಂಚೆ ಅಮ್ಮ-ಅಮ್ಮ ಅಂತಾ ಅವಳ ಹಿಂದೆಯೇ ಸುತ್ತುತ್ತಾ ಇದ್ದವಳು, ಗಂಡ ಬಂದ ನಂತರ ಅಮ್ಮನನ್ನು ನಿರ್ಲಕ್ಷ್ಯ ಮಾಡುವುದೇನೂ ಸುಳ್ಳಲ್ಲ. ಆದರೆ ತಾನು ತವರು ಮನೆಗೆ ಬಂದಾಗ ಅಮ್ಮ ತನ್ನಿಷ್ಟದ ಅಡುಗೆ ಮಾಡಬೇಕು, ಚಟ್ನಿಪುಡಿ, ಸಾಂಬಾರು ಪುಡಿ, ತುಪ್ಪ, ಹಾಲು ಹೀಗೇ ಮುಂತಾದವುಗಳನ್ನೆಲ್ಲಾ ಕಟ್ಟಿಕೊಡಬೇಕು ಅನ್ನೋ ಒಂದು ಸಣ್ಣ ನಿರೀಕ್ಷೆಯನ್ನಾದರೂ ಇಟ್ಟುಕೊಂಡಿರುತ್ತಾಳೆ. ಆದರೆ, ಈ ನಿರೀಕ್ಷೆ ಹುಸಿಯಾದರೆ ಸಿಡಿಮಿಡಿ. ತನ್ನ ಮನೆಗೆ ಅಮ್ಮ ಬಂದು ಹೋಗುವಾಗ ತಾನು ಆಕೆಗೆ ಕೊಟ್ಟು ಕಳಿಸುವುದೆಷ್ಟು?(ಕೆಲವರು ಇದಕ್ಕೆ ಹೊರತು). ಯಾವಾಗಲೂ ತನಗೆ ಏನನ್ನೂ ಮಾಡಿಕೊಳ್ಳದೆ, ಮಕ್ಕಳಿಗಾಗಿಯೇ ಮಾಡುವ ಅಮ್ಮ ಆ ರೀತಿಯ ಅಮ್ಮ ಆ ರೀತಿಯ ಅಮ್ಮನಾಗಿಯೇ ಉಳಿಯಬೇಕೇ ?

ತಾನು ಹೊರಗೆ ಹೋದರೆ ಮನೆಯವರಿಗೆ, ಮಕ್ಕಳಿಗೆ ತೊಂದರೆಯಾಗುತ್ತೆ ಎನ್ನುವ ಕಾರಣಕ್ಕೆ ತನ್ನ ತಿರುಗಾಟವನ್ನೆಲ್ಲಾ ತ್ಯಜಿಸುವ ಅಮ್ಮ, ಇತರರ ಖುಷಿಗಾಗಿಯೇ ಬದುಕುವ ಅಮ್ಮನಾಗಿಯೇ ಉಳಿಯಬೇಕೇ?

ದೀಪಾವಳಿ, ಯುಗಾದಿ ಬಂದರೆ ಮಕ್ಕಳಿಗೆ ಎಣ್ಣೆ ಸ್ನಾನ ಮಾಡಿಸಿ ತಾನು ಖುಷಿ ಪಡುವ ಅಮ್ಮ ದೀಪಾವಳಿ, ಯುಗಾದಿಗೆ ತನಗೆ ಎಣ್ಣೆ ಸ್ನಾನ ಮಾಡು ಎಂದು ಹೇಳುವವರೂ ಇಲ್ಲದಂತೆ ಬದುಕುವ ಅಮ್ಮನಾಗಿಯೇ ಉಳಿಯಬೇಕಾ?

ಮಕ್ಕಳಿಗೆ ತೊಂದರೆಯಾಗಬಾರದು ಅಂತಾ ಬೆಳ್ಳಂಬೆಳಗ್ಗೆಯಿಂದಲೇ ಪುರುಸೊತ್ತಿಲ್ಲದೆ ಕೆಲಸ ಮಾಡಿ, ರುಚಿ-ರುಚಿಯಾಗಿ ಅಡುಗೆ ಮಾಡುವ ಅಮ್ಮ ದುಡಿಯುವ ಯಂತ್ರದಂತೆಯೇ ಬದುಕುವ ಅಮ್ಮನಾಗಿಯೇ ಉಳಿಯಬೇಕಾ?

ತನ್ನ ಜ್ವರವನ್ನೂ ಲೆಕ್ಕಿಸದೆ, ಮಗುವಿನ ಶೀತಕ್ಕೆ ಔಷಧಿ ಮಾಡಿ ಹುಷಾರು ಮಾಡುವ ಅಮ್ಮ, ತನ್ನ ಅನಾರೋಗ್ಯವನ್ನೂ ಹಳಿಯದ ಅಮ್ಮನಾಗಿಯೇ ಉಳಿಯಬೇಕೇ?

ಮಕ್ಕಳ ವಿದ್ಯಾಭ್ಯಾಸದ ಭರಾಟೆಯಲ್ಲಿ ತನ್ನ ಹವ್ಯಾಸಗಳಾದ ಹಾಡು, ನೃತ್ಯ, ಕ್ರಾಫ್ಟ್, ಕಸೂತಿ, ರಂಗೋಲಿ ಎಲ್ಲವನ್ನೂ ಬಿಟ್ಟು ಬದುಕುವ ಅಮ್ಮನಾಗಿಯೇ ಉಳಿಯಬೇಕೇ?

ಅಮ್ಮ ಮತ್ತೊಂದು ಮಗುವನ್ನು ಪ್ರೀತಿಯಿಂದ ಮಾತನಾಡಿಸಿದರೇ ವಿನಾಕಾರಣ ಪೊಸೆಸ್ಸೀವ್ ಆಗುವ ನಾವು ಅಮ್ಮನ ಬಗ್ಗೆ ಗಮನ ಕೊಟ್ರೆ, ನಾವು ಬಟ್ಟೆ ತೆಗೆದುಕೊಂಡಾಗ ಅವಳಿಗೂ ಒಂದು ಜೊತೆ ಕೊಡಿಸಿದ್ರೆ, ಅಮ್ಮನ ಆರೋಗ್ಯಕ್ಕೆ ಕಾಳಜಿ ತೋರಿಸಿದ್ರೆ, ಅಮ್ಮನ ಹವ್ಯಾಸಗಳಿಗೆ ಪ್ರೋತ್ಸಾಹಿಸುತ್ತಾ, ಅವಳ ಕೆಲಸಗಳಲ್ಲೊಂದಿಷ್ಟು ಭಾಗಿಯಾಗಿ ಅವಳ ಸುತ್ತಾಟಗಳಿಗೂ ಅನುವು ಮಾಡಿಕೊಟ್ಟು ಪ್ರೀತಿಯಿಂದ ಕಾಲ ಕಳೆದರೆ ಅಮ್ಮನಂತಾ ಅಮ್ಮನೂ ಒಂದರೆಕ್ಷಣ ಮಗುವಾಗ್ತಾಳೆ. ಅಮ್ಮ ಅಮ್ಮನಾಗಿಯೇ ಉಳಿಯಬೇಕು ಆದರೆ ಅವಳ ಸ್ವಂತ ಮತ್ತು ಸ್ವತಂತ್ರ್ಯ ವ್ಯಕ್ತಿತ್ವದ ಜೊತೆಗೆ.. ಇನ್ನಾದರೂ ಅಮ್ಮ ಕೊಂಚ ರಿಲೀಫ್ ಆಗಿ ಅವಳ ಬದುಕನ್ನು ಎಂಜಾಯ್ ಮಾಡುವ ಅಮ್ಮನಾಗಲಿ..

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ