ಗುರುವಾರ, ಸೆಪ್ಟೆಂಬರ್ 5, 2019

ಗುರುವಿನಿಂದ ಅರಿವಿನತ್ತ..

"ಅರಿವೇ ಗುರು" ಎನ್ನುತ್ತಾರೆ. ಅರಿವು ಮೂಡಿಸುವ ಹಾದಿಯಲ್ಲಿ ದಾರಿದೀಪವಾಗುವವರೆಲ್ಲರೂ ಗುರುಗಳೇ.. "ವರ್ಣಮಾತ್ರಂ ಕಲಿಸಿದಾತಂ ಗುರು" ಎಂಬ ಸೂಕ್ತಿ ಇದೆ. ಒಂದಕ್ಷರ ಕಲಿಸಿದವನು ಕೂಡಾ ಗುರುವೇ ಎಂಬುದು ಇದರರ್ಥ. ಆದರೆ, ಏಕಲವ್ಯ ಮತ್ತು ದ್ರೋಣರ ಸಂಬಂಧ ಇದಕ್ಕೆ ಅಪವಾದ ಎನ್ನಿಸಿದಂತೆ ಭಾಸವಾದರೂ.. ಸ್ಪೂರ್ತಿ ನೀಡಿ ದಾರಿದೀಪವಾದವರೂ ಗುರುಗಳೇ ಅಲ್ಲವೇ..?

ಮೊದಲಿಗೆ ಹಿಂದಿನ ಗುರು-ಶಿಷ್ಯರ ಕುರಿತು ಹೇಳುವೆ. ಹಿಂದಿನ ಗುರು-ಶಿಷ್ಯ ಜೋಡಿಗಳು ವಿಶಿಷ್ಟವಾಗಿವೆ. ಸಾಂದೀಪನಿ-ಕೃಷ್ಣ, ಶುಕ್ರಾಚಾರ್ಯ-ದಾನವರು, ಬೃಹಸ್ಪತಿ-ದೇವಗಣ, ಬಲರಾಮ-ದುರ್ಯೋಧನ ಹೀಗೇ ಬರೆಯುತ್ತಾ ಹೋದಷ್ಟೂ ಪಟ್ಟಿ ದೊಡ್ಡದಾಗುತ್ತಲೇ ಹೋಗುತ್ತವೆ. ಆದರೆ, ದ್ರೋಣ-ಏಕಲವ್ಯ ಮತ್ತು ಅರ್ಜುನರ ಗುರು-ಶಿಷ್ಯ ಸಂಬಂಧಗಳು ವಿರೋಧಾಭಾಸದ ನೆಲೆಗಟ್ಟಿನಲ್ಲಿ ನಿಂತುಬಿಡುತ್ತವೆ. ದ್ರೋಣರು ಏಕಲವ್ಯನಿಗೆ ಮುಖತಃ ವಿದ್ಯೆ ಭೋಧಿಸಲಿಲ್ಲ ಆದರೆ ಏಕಲವ್ಯನ ಶ್ರದ್ಧೆ, ಗುರು ಭಕ್ತಿ ಅವನ ಅಭ್ಯಾಸವನ್ನು ತಪ್ಪಿಸದಂತೆ ಮುಂದುವರಿಸಲು ಪ್ರೇರೇಪಿಸಿತು. ಅರ್ಜುನನಿಗೆ ಕೊಟ್ಟ ಮಾತಿನಿಂದಾಗಿ, ಅರ್ಜುನನ ಮೇಲಿನ ವ್ಯಾಮೋಹದಿಂದಾಗಿ ಏಕಲವ್ಯ ಎಂಬ ಅಪ್ರತಿಭ ಪ್ರತಿಭಾವಂತನ ಪ್ರತಿಭೆ ನಾಮಾವಶೇಷವಾಯಿತು. ಅಷ್ಟಕ್ಕೂ ದ್ರೋಣರಿಗೆ ಅರ್ಜುನನ ಮೇಲೆ ಕೊಂಚ ಪ್ರೀತಿ ಹೆಚ್ಚು ಎಂದರೆ ಅತಿಶಯೋಕ್ತಿಯಾಗಲಾರದು. ಯಾಕೆ ಹೀಗೆ?
ದ್ರೋಣಾಚಾರ್ಯರು ಜಾತಿಯ ಕಾರಣಕ್ಕಾಗಿ ಏಕಲವ್ಯ ಮತ್ತು ಕರ್ಣರಿಗೆ ವಿದ್ಯೆ ಕಲಿಸಲಿಲ್ಲ. ಆದರೆ, ತಮ್ಮ ಮಗ ಅಶ್ವತ್ಥಾಮನಿದ್ದ. ಬಲಶಾಲಿಯಾದ ಭೀಮನಿದ್ದ, ಮಹತ್ವಾಕಾಂಕ್ಷೆಯ ರಾಜಕುಮಾರ ದುರ್ಯೋಧನನಿದ್ದ, ಸತ್ಯವಂತ ಧರ್ಮರಾಯನಿದ್ದ. ಇವರೆಲ್ಲರನ್ನೂ ಬಿಟ್ಟು ಅರ್ಜುನನ್ನೇ ಮಹಾಬಿಲ್ವಿದ್ಯೆಗಾರನನ್ನಾಗಿ ರೂಪಿಸಿದ್ದೇತಕೆ? ಇಂದಿನ ದಿನಗಳಲ್ಲೂ ನೂರಾರು ವಿದ್ಯಾರ್ಥಿಗಳಿದ್ದರೂ ಶಿಕ್ಷಕರ ಕೃಪಾಕಟಾಕ್ಷಕ್ಕೆ ಕೆಲವೇ ವಿದ್ಯಾರ್ಥಿಗಳು ಪಾತ್ರವಾಗುವುದ್ದೇತಕೆ..?

ಇದೆಲ್ಲದಕ್ಕೂ ದಂತಕತೆಗಳು ನೂರಾರಿದ್ದರೂ, ಕಾರಣ ಮಾತ್ರ ಒಂದೇ. ಅದು 'ಏಕಾಗ್ರತೆ'.
ಒಮ್ಮೆ ಗುರು ದ್ರೋಣರು ಮರದ ಮೇಲೆ ಒಂದು ಹಕ್ಕಿಯನ್ನಿಟ್ಟು ಎಲ್ಲಾ ಶಿಷ್ಯರನ್ನೂ ಕರೆದು ಒಬ್ಬೊಬ್ಬರಾಗಿ ಬಂದು ಹಕ್ಕಿಯ ಕಣ್ಣಿಗೆ ಬಾಣ ಹೊಡೆಯುವಂತೆ ಸೂಚಿಸುತ್ತಾರೆ. ಒಬ್ಬೊಬ್ಬರೇ ಬಂದು ಹಕ್ಕಿಯ ಕಡೆ ಬಾಣವನ್ನು ಗುರಿ ಮಾಡಿದಾಗ ದ್ರೋಣರು ಕೇಳುವುದು ಒಂದೇ ಪ್ರಶ್ನೆ. "ನಿನಗೆ ಈಗ ಕಾಣುತ್ತಿರುವುದೇನು..?" ಅರ್ಜುನನೊಬ್ಬನ ಹೊರತು ಎಲ್ಲರೂ "ನನಗೆ ಆಕಾಶ, ಮರ, ಹಕ್ಕಿ, ರೆಂಬೆ ಎಲ್ಲವೂ ಕಾಣುತ್ತಿದೆ. ಪಕ್ಕದಲ್ಲಿ ನಿಂತಿರುವ ನೀವು, ಮುಂದೆ ನಿಂತಿರುವ ಉಳಿದವರೆಲ್ಲರೂ ಕಾಣುತ್ತಿದ್ದಾರೆ" ಎನ್ನುವ ಅಥವಾ ಇದೇ ರೀತಿ ಅರ್ಥ ಬರುವಂತೆ ಇರುವ ಉತ್ತರಗಳನ್ನು ನೀಡಿದರು. ಅರ್ಜುನ ಮಾತ್ರ "ಆ ಹಕ್ಕಿಯ ಕಣ್ಣು ಬಿಟ್ಟು ನನಗೆ ಬೇರೇನೂ ಕಾಣುತ್ತಿಲ್ಲ" ಎಂದನು. ಆಗ ದ್ರೋಣರು ಅವನನ್ನು ಮೆಚ್ಚಿ ಅಭಿನಂದಿಸಿ ಬಾಣ ಹೂಡಲು ಹೇಳುತ್ತಾರೆ. ಶಿಷ್ಯನ ಏಕಾಗ್ರತೆ ಮಾತ್ರ ಅವನನ್ನು ಕಲಿಕೆಯ ಹಾದಿಯಲ್ಲಿ ಉತ್ತುಂಗಕ್ಕೇರುವಂತೆ ಮಾಡುತ್ತದೆ. ಸತ್ಯ, ಬಲ, ಸ್ವಜಾತಿಯ ಮೋಹ, ಕರುಳಬಳ್ಳಿ, ಹಣ, ಮನ್ನಣೆ ಇವ್ಯಾವ ಅಂಶಗಳೂ ದ್ರೋಣರನ್ನು ಕಾಡಲಿಲ್ಲ. ಅವರು ಪರಿಗಣಿಸಿದ್ದು ಏಕಾಗ್ರತೆಯನ್ನು ಮಾತ್ರ. ಒಬ್ಬ ಶಿಷ್ಯನ ಮೇಲಿನ ವ್ಯಾಮೋಹ ಮತ್ತೊಬ್ಬ ಶಿಷ್ಯನ ಬದುಕನ್ನು ಬಲಿತೆಗೆದುಕೊಂಡದ್ದು ಮಾತ್ರ ವಿಪರ್ಯಾಸ.

ಹಿಂದಿನ ವಿಚಾರ ಬಿಟ್ಟು ಇಂದಿನ ವಿಚಾರವನ್ನು ನೋಡೋಣ. ಶಿಕ್ಷಕರು ಎಲ್ಲಾ ಶಿಷ್ಯರನ್ನೂ ಸಮಾನವಾಗಿ ಭಾವಿಸುತ್ತೇವೆ ಎಂದುಕೊಂಡರೂ ಸಹಾ ಕೆಲವರ ವಿಷಯದಲ್ಲಿ ಪಕ್ಷಪಾತ ಮಾಡುತ್ತಾರೆ ಎಂಬ ಆಪಾದನೆಯಂತೂ ಇದ್ದೇ ಇದೆ. ಆ ಆಪಾದನೆ ಮಾಡುವವರಲ್ಲಿ ನನ್ನದೊಂದು ಪ್ರಶ್ನೆ. "ನೀವು ನಿಮ್ಮ ಎಲ್ಲಾ ಶಿಕ್ಷಕರನ್ನೂ ಸಮಾನವಾಗಿಯೇ ಭಾವಿಸುತ್ತೀರಾ..?" ಖಂಡಿತವಾಗಿಯೂ ಇಲ್ಲ. ಅಲ್ಲವೇ..? ನಿಮ್ಮ "ಫೇವರೇಟ್ ಟೀಚರ್" ಎನ್ನುವ ಪಟ್ಟ ಯಾರೋ ಒಬ್ಬರಿಗೆ ಮೀಸಲಾಗಿದೆ ಅಲ್ಲವೇ? ಶಿಷ್ಯರಿಗೆ ಒಂದು ನ್ಯಾಯ, ಗುರುಗಳಿಗೆ ಮತ್ತೊಂದು ನ್ಯಾಯ ಎಂದರೆ ಎಷ್ಟು ಸರಿ?

ಚಿಕ್ಕಂದಿನಿಂದ ಇಲ್ಲಿಯವರೆಗೂ ಕಲಿಸಿದ ಎಲ್ಲಾ ಶಿಕ್ಷಕರೂ ನೆನಪಿರುವುದು ಅಶಕ್ಯ. ಆದರೆ, ಕೆಲವರು ತಮ್ಮ ವಿಶಿಷ್ಟವಾದ ಗುಣದಿಂದ ಮನದಲ್ಲಿ ಅಚ್ಚಳಿಯದೇ ಉಳಿದುಕೊಂಡುಬಿಟ್ಟಿರುತ್ತಾರೆ. ಗೋವಿನ ಹಾಡನ್ನು ರಾಗವಾಗಿ ಹಾಡ್ತಾ ಇದ್ದ ಕನ್ನಡ ಟೀಚರ್, ಇಂಗ್ಲೀಷ್ ರೈಮ್ಸ್ ಅನ್ನು ಅಭಿನಯದ ಸಮೇತ ಹೇಳಿಕೊಡ್ತಾ ಇದ್ದ ಇಂಗ್ಲೀಷ್ ಟೀಚರ್, ಬೆತ್ತದ ಪ್ರಯೋಗವಿಲ್ಲದೆಯೇ ಆಟದ ಮೂಲಕ ಗಣಿತವನ್ನು ಕಲಿಸುತ್ತಿದ್ದ ಗಣಿತದ ಟೀಚರ್, ಪೀರಿಯಾಡಿಕ್ ಟೇಬಲ್ ಅನ್ನು ನೆನಪಿಟ್ಟುಕೊಳ್ಳಲು ಸುಲಭ ಸೂತ್ರ ಹೇಳಿಕೊಟ್ಟ ವಿಜ್ಞಾನದ ಟೀಚರ್, ಗ್ಲೋಬ್ ನ ಕತೆಯೊಂದಿಗೆ ಭೂಗೋಳ ಪರಿಚಯಿಸಿದ ಸಮಾಜದ ಟೀಚರ್ ಹೀಗೇ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಬೇಕಾದರೆ ಒಮ್ಮೆ ಕಣ್ಮುಚ್ಚಿಕೊಂಡು ನೆನಪು ಮಾಡಿಕೊಳ್ಳಿ. ಬರೀ ಪಾಠವೇ ಅಲ್ಲದೇ, ನೀತಿಕತೆಯನ್ನೂ ಹೇಳಿ ನೈತಿಕತೆಯ ಪಾಠವನ್ನೂ ಕಲಿಸಿದ ಟೀಚರ್ ನೆನಪಾಗಲ್ವಾ.. ನಿಮಗೆ?

ಇವರೆಲ್ಲರೂ ಪುಸ್ತಕದಲ್ಲಿ ಇದ್ದದ್ದನ್ನು, ಇದ್ದಂತೆಯೇ ಓದಿ, ಸಂಬಳಕ್ಕಷ್ಟೇ ನನ್ನ ಕೆಲಸ ಅಂತಾ ಹೋಗಿಬಿಟ್ಟಿರುತ್ತಾ ಇದ್ದಿದ್ದರೆ ಖಂಡಿತಾ ಇವರುಗಳು ನೆನಪಿನಿಂದ ಯಾವತ್ತೋ ಅಳಿಸಿಹೋಗಿಬಿಟ್ಟಿರುತ್ತಾ ಇದ್ದರು. ನಿಮ್ಮ ನೆನಪಲಿಲ್ಲದ ಶಿಕ್ಷಕರು ಬಹುಶಃ ಮಾಡಿರುವುದೇ ಹೀಗೆ. ಅಲ್ವಾ? ಆ ಸಂಧರ್ಭದಲ್ಲಿ ನಮಗೆ ಒಂದು ಸಬ್ಜೆಕ್ಟ್ ಇಷ್ಟ ಆಗಬೇಕು ಎಂದರೆ ಆ ಶಿಕ್ಷಕರಿಂದ ಮಾತ್ರವೇ ಆಗಿತ್ತು. ಅವರ ಭೋಧನೆಯ ಪರಿಣಾಮದಿಂದಾಗಿ ಆ ವಿಷಯದತ್ತಲೂ ಒಲವು ಹೆಚ್ಚಾಗುತ್ತಾ ಇತ್ತು.

ಡಾ|| ಗುರುರಾಜ ಕರ್ಜಗಿ ಅವರು ಸಂದರ್ಶನದಲ್ಲಿ ಒಮ್ಮೆ ಹೇಳುತ್ತಾರೆ. "ಗುರು-ಶಿಷ್ಯರ ಸಂಬಂಧ ಹೇಗಿರಬೇಕು ಎಂದರೆ ಗುರು ತನ್ನ ಶಿಷ್ಯರನ್ನು ತನ್ನ ಮಕ್ಕಳಿಗಿಂತಲೂ ಹೆಚ್ಚು ಪ್ರೀತಿಸಬೇಕು." ಎಂದು. ಇವತ್ತು ಗುರುಕುಲ ಶಿಕ್ಷಣ ಪದ್ಧತಿ ಇಲ್ಲ ನಿಜ. ಆದರೆ, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಭಾಂಧವ್ಯ ಕೂಡಾ ಗುರುಕುಲ ಪದ್ದತಿಯಂತೆಯೇ ಮಾಯವಾಗುತ್ತಿದೆ. ಹೆಚ್ಚಿನವರು ಸಂಬಳಕ್ಕಾಗಿ ಶಿಕ್ಷಕರು ಕೆಲಸ ಮಾಡುತ್ತಿದ್ದಾರೆಯೇ ಹೊರತು ವೃತ್ತಿಪ್ರೀತಿಯಿಂದಲ್ಲ. ಅಲ್ಲದೇ, ಇಂದಿನ ಶಿಕ್ಷಣದ ನಿಯಮಗಳು ಹೇಗಿವೆಯೆಂದರೆ ಶಿಕ್ಷಕರು ವಿದ್ಯಾರ್ಥಿಗಳನ್ನು ಶಿಕ್ಷಿಸಿದರೆ ಅದು ಅಪರಾಧವಾಗುತ್ತದೆ. ಶಿಕ್ಷೆಯೇ ಇಲ್ಲದೇ ಜೀವನದಲ್ಲಿ ಶಿಸ್ತು ಮೂಡಿಸಲು ಸಾಧ್ಯವೇ..?

ಅಲ್ಲದೇ, ಶಿಕ್ಷಕರ ಪಾಠ ಕೇಳಿ ಪ್ರಭಾವಿತರಾಗುವುದಕ್ಕಿಂತಲೂ ಅವರ ನಡವಳಿಕೆ ನೋಡಿ ಮಕ್ಕಳು ಅವರಂತಾಗಲು ಬಯಸಿ ಶಿಕ್ಷಕರನ್ನು ಅನುಕರಿಸುತ್ತಾರೆ. ಉದಾಹರಣೆಗೆ, ಶಾಲೆಯ ಹೊರಾಂಗಣದಲ್ಲಿ ಧೂಮಪಾನ ಮಾಡಿ ಬಂದು ಶಾಲೆಯಲ್ಲಿ "ಧೂಮಪಾನ ಆರೋಗ್ಯಕ್ಕೆ ಹಾನಿಕರ" ಎಂದು ಭೋಧಿಸುತ್ತಾನೆ. ವಿದ್ಯಾರ್ಥಿಗಳಿಗೆ ಇದು ಗಿಣಿಪಾಠದಂತಾಗುತ್ತದೆ ಅಷ್ಟೇ. ನೋಟ್ ಬುಕ್ ನಲ್ಲಿ ಆ ವಾಕ್ಯವನ್ನು ಗೀಚಿಕೊಂಡು ನಂತರ ಅವರೂ ಸಹಾ ಧೂಮಪಾನದ ಚಟಕ್ಕೆ ಒಳಗಾಗುತ್ತಾರೆ. ಧೂಮಪಾನ ಬಹಳ ಹಿಂದಿನ ಉದಾಹರಣೆಯಾಯಿತು ಎನ್ನಿಸಿದರೆ ಪ್ರಸ್ತುತ ಭ್ರಷ್ಟಾಚಾರ, ಲಂಚದ ವಿಚಾರವನ್ನು ಪರಿಗಣಿಸಿಕೊಳ್ಳಿ ಅಷ್ಟೇ.

ಹೀಗಾಗಲೇ ಟೆಕ್ನಾಲಜಿ ಮನುಷ್ಯನ ಬದುಕನ್ನು ಆವರಿಸಿಕೊಳ್ಳುತ್ತಿದೆ. ಮುಂದೆ ಶಿಕ್ಷಕರ ಬದಲಿಗೆ ಟ್ಯಾಬ್, ರೋಬೋಟ್ ಗಳು ಬಂದರೂ ಅಚ್ಚರಿಪಡಬೇಕಾದುದೇನಿಲ್ಲ. ಯಾಕೆಂದರೆ, ಮನುಷ್ಯನ ಕುತೂಹಲವನ್ನೆಲ್ಲಾ ನುಂಗಿ ಹಾಕಿ ಗೂಗಲ್ ಅದರ ಸ್ಥಾನಕ್ಕೆ ಬರುತ್ತಿದೆ. ಏನೇ ಆದರೂ ವಿದ್ಯಾರ್ಥಿಗಳ ಮನೋಭಾವವನ್ನು, ಮನಸ್ಥಿತಿಯನ್ನೂ ಅರ್ಥೈಸಿಕೊಂಡು ಬದುಕಿನ ಗಮ್ಯಕ್ಕೆ ತಲುಪಿಸುವ ದಾರಿದೀಪಗಳಾಗಲು ಶಿಕ್ಷಕರೇ ಸರಿ.

ಅರಿವು ಮೂಡಿಸಿಕೊಂಡು, ಅರಿವಿನತ್ತ ಕರೆದುಕೊಂಡು ಹೋಗುವವನು ಮಾತ್ರವೇ ಗುರು ಎನ್ನಿಸಿಕೊಳ್ಳಬಲ್ಲ. ನನ್ನ ಈ ಲೇಖನಕ್ಕೆ ಮೂಲ ಪ್ರೇರಣೆ ಕೂಡಾ ನನ್ನ ಗುರುಗಳೇ. ಈ ಲೇಖನವನ್ನು ಬರೆಯುವ ಇರಾದೆಯೇ ನನಗಿರಲಿಲ್ಲ. ಕಳೆದ ವಾರ ಅವರು ಹೇಳಿದ ಕೆಲವು ಸಂಗತಿಗಳನ್ನು ಕೇಳಿದ ನಂತರ ಅದನ್ನು ಒರೆ ಹಚ್ಚದೆ, ವಿಶ್ಲೇಷಿಸದೆ, ಬರೆಯದೇ ಸುಮ್ಮನಿರಲಾಗಲಿಲ್ಲ. ಅವರಿಗೆ ನನ್ನ ವಿಶೇಷ ಧನ್ಯವಾದಗಳು. ನಿಮಿತ್ತ ಅವರಾಗಿರಬಹುದು.. ಆದರೆ, ನನಗೆ ಅಕ್ಷರ ಕಲಿಸಿದ, ಬುದ್ಧಿ ಹೇಳಿದ, ವಿದ್ಯೆ ಕಲಿಸಿದ, ತಿದ್ದಿ ನಡೆಸಿದ, ಓದಿನ ಹವ್ಯಾಸ ಬೆಳೆಸಿದ, ಜೀವನದ ಪಾಠ ಕಲಿಸಿದ, ಮಾರ್ಗದರ್ಶನ ಮಾಡಿದ, ಪ್ರೋತ್ಸಾಹಿಸುತ್ತಿರುವ, ಆಲೋಚನಾ ಶಕ್ತಿ ವೃದ್ಧಿಸುವಂತೆ ಮಗದೊಂದು ನಿಟ್ಟಿನಲ್ಲಿ ಯೋಚಿಸುವಂತೆ ಚರ್ಚೆ ಮಾಡುವ ಭೂತ-ವರ್ತಮಾನದ ಎಲ್ಲಾ ಶಿಕ್ಷಕರಿಗೂ ತುಂಬು ಹೃದಯದ ಧನ್ಯವಾದಗಳು. ಎಲ್ಲರಿಗೂ ಶಿಕ್ಷಕರ ದಿನದ ಹಾರ್ದಿಕ ಶುಭಾಶಯಗಳು.

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ