ಭಾನುವಾರ, ಸೆಪ್ಟೆಂಬರ್ 13, 2020
ನೋಡಿ ಸ್ವಾಮಿ ನಮ್ ಇಂಜಿನಿಯರ್ಸ್ ಕತೆ
ಇಂಜಿನಿಯರಿಂಗ್ ಅನ್ನೋ ಕೋರ್ಸ್ ಗೆ ಮೊದಲಿದ್ದ ಬೆಲೆ ಈಗಿಲ್ಲ. ಪಿ.ಯು.ಸಿ ಸೈನ್ಸ್ ತೆಗೆದುಕೊಂಡ ನಂತರ ಅವರ ಮುಂದೆ ಇರುವುದು ಎರಡೇ ಚಾಯ್ಸ್ ಅನ್ನೋ ತರಹಾ ಬಿಂಬಿಸಿ ಬಿಟ್ಟಿರುತ್ತಾರೆ. ಒಂದೋ ಮೆಡಿಕಲ್, ಇಲ್ಲವೇ ಇಂಜಿನಿಯರಿಂಗ್. ಒಂದು ಕಾಲದಲ್ಲಿ ಇಂಜಿನಿಯರಿಂಗ್ ಓದುತ್ತಿದ್ದಾರೆ ಅಂದರೆ ಬೆಲೆ ಇತ್ತು ಆದರೆ ಈಗ ಮನೆಯಲ್ಲಿ ಇಬ್ಬರು-ಮೂವರು ಇಂಜಿನಿಯರ್ ಗಳು. ಯಾಕೆ ಗೊತ್ತಾ ?
"ಹುಡುಗಿ ಕುಳ್ಳಿ, ನೋಡೋಕೂ ಸುಮಾರು. ಇಂಜಿನಿಯರಿಂಗ್ ಮಾಡಿದ್ದಾಳೆ ಅಂದ್ರೆ ಮದುವೆ ಮಾಡೋಕು ಸುಲಭ ಆಗುತ್ತೆ" ಇದು ಹೆಚ್ಚಿನ ಹೆಣ್ಣು ಮಕ್ಕಳ ಮನೆಯಲ್ಲಿ ನಡೆಯುವ ಮಾತುಕತೆ. "ಕೆಲಸಕ್ಕೇನೂ ಕಳಿಸುವುದಿಲ್ಲ, ಆದ್ರೂ ಬಿ.ಇ ಮಾಡಲಿ" ಅನ್ನೋ ವಿಚಿತ್ರ ಮನೋಭಾವದವರು. "ಮೆಡಿಕಲ್ ಸೀಟ್ ಅಂತೂ ಸಿಗಲಿಲ್ಲ, ಕೊನೆಪಕ್ಷ ಇಂಜಿನಿಯರಿಂಗ್ ಗೆ ಆದ್ರೂ ಸೇರಿಕೊಂಡು ಮರ್ಯಾದೆ ಉಳಿಸು ಮಾರಾಯ" ಹೀಗೇ ಹೇಳುತ್ತಾ ಹೋದ್ರೆ ಪಟ್ಟಿ ಮುಗಿಯುವುದೇ ಇಲ್ಲ.
ಬೇಕಾದ್ರೆ ಯಾವುದೇ ಇಂಜಿನಿಯರಿಂಗ್ ಕಾಲೇಜಿನ ಯಾವುದೇ ಬ್ರಾಂಚ್ ಗೆ ಹೋಗಿ ಕೇಳಿದರೆ ಅಲ್ಲಿ 75% ಜನ ಮತ್ತೊಬ್ಬರ ಒತ್ತಾಯಕ್ಕೋ, ಮತ್ತಾರ ಮಾತು ಕೇಳಿಯೋ ಅಥವಾ ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿಯೋ ಬಂದಿರುವುದು. ಮನೆಯಲ್ಲಿ ಮೊದಲನೇ ಮಗು ಇಂಜಿನಿಯರಿಂಗ್ ಮಾಡಿದ್ದರೆ ಎರಡನೇ ಮಗುವಿಗೂ ಇಂಜಿನಿಯರಿಂಗ್ ಫಿಕ್ಸ್. ಇವತ್ತು ಇಂಜಿನಿಯರಿಂಗ್ ಬರೀ ಡಿಗ್ರಿಯ ಹೆಸರಾಗಿ ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ಹಾಕಿಸಿಕೊಳ್ಳಲು ಮಾತ್ರ ಮೀಸಲಾದಂತಿದೆ. ಇಲ್ಲವೇ, ಗ್ರಾಜುಯೇಷನ್ ಡೇ ಅಲ್ಲಿಯ ಒಂದು ಫೋಟೋಗೆ ಮೀಸಲು.
ಇಂಜಿನಿಯರಿಂಗ್ ಓದಿದರೂ ಕೆಲಸ ಇಲ್ಲ, ಹತ್ತು ಸಾವಿರ ಸಂಬಳಕ್ಕೆ ಯಾವುದೋ Call Center ಗಳಲ್ಲಿ ಕೆಲಸ. ಮೇಲಿಂದ ಮೇಲೆ ಒತ್ತಡಕ್ಕೆ ಸಿಕ್ಕ ಸಿಕ್ಕ ಯಾವುದೋ ಕೆಲಸಕ್ಕೆ ಸೇರಿ ಅದನ್ನು ಬಿಡಲೂ ಆಗದೆ, ಉತ್ತಮ ಕೆಲಸಕ್ಕೆ ಸ್ಕಿಲ್ ಇಲ್ಲದೆ ಒದ್ದಾಡುವ ಪರಿ ನೋಡಿದರೆ ಅರ್ಥವಾಗುತ್ತದೆ. ಅಷ್ಟಕ್ಕೂ, ಈ ಕೆಲಸದ ಹಿಂದೆ ಇಂಜಿನಿಯರಿಂಗ್ ಕಾಲೇಜುಗಳ placement ವಿಭಾಗದವರ ಕೈವಾಡವಿದೆ. ಸತ್ಯ ಕತೆ ಏನು ಗೊತ್ತಾ.. ?
Placement ಆಗಿದೆ ಎಂದು ತೋರಿಸುವ ಬ್ಯಾನರ್ ನಲ್ಲಿ 200 ರಿಂದ 300 ಜನರ ಫೋಟೋ ಇರುತ್ತದೆ.100% placement ಎಂಬ ಒಕ್ಕಣೆ ಬೇರೆ.. ಆದರೆ, ಅಸಲಿಯತ್ತು ಏನೆಂದರೆ ಹೀಗೆ ಆ ಕಂಪನಿ 10 ರಿಂದ 15 ಕಾಲೇಜುಗಳಲ್ಲಿ ಆಷ್ಟಷ್ಟು ಜನರನ್ನು ಆಯ್ಕೆ ಮಾಡಿರುತ್ತದೆ. ಕಾಲೇಜು ಮುಗಿದು, ರಿಸಲ್ಟ್ ಪಡೆದ ನಂತರ ಅಲ್ಲಿಗೆ ಹೋದರೆ ಮತ್ತಷ್ಟು ರೌಂಡ್ ಗಳ ಇಂಟರ್ ವ್ಯೂ ಅವರಿಗಾಗಿ ಕಾದು ಕೂತಿರುತ್ತದೆ. ಇಂಟರ್ ವ್ಯೂ ಅಲ್ಲಿ ಪಾಸಾದರೂ ಯಾರದ್ದಾದರೂ ರೆಫರೆನ್ಸ್ ಅತೀ ಅಗತ್ಯ. ಈ ಕುರಿತು ಕಾಲೇಜಿನಲ್ಲಿ ವಿಚಾರಿಸಿದರೆ, ನಮ್ಮ ಕಾಲೇಜ್ ಕಡೆಯಿಂದ placement ಆಗಿದೆ. ಉಳಿದದ್ದು ನಿಮಗೆ ಬಿಟ್ಟದ್ದು, ಇದಕ್ಕೆ ನಾವು ಜವಾಬ್ದಾರಿಯಲ್ಲ ಎಂಬ ನಿರ್ಲಕ್ಷ್ಯದ ಉತ್ತರ. ಅಷ್ಟಕ್ಕೂ ಈ ಎಲ್ಲಾ ಘಟನೆಗಳು ನಡೆದಿರುವುದು ಸಾಫ್ಟ್ವೇರ್ ಅಥವಾ ಅವರ ಬ್ರಾಂಚ್ ಗೆ ಸಂಬಂಧಪಟ್ಟ ಕೆಲಸಕ್ಕಲ್ಲ, call center ನ, ಇಂಜಿನಿಯರಿಂಗ್ ಸಬ್ಜೆಕ್ಟ್ ಅವಶ್ಯಕತೆಯೇ ಇಲ್ಲದ ಕೆಲಸಕ್ಕೆ.
ಅಷ್ಟಕ್ಕೂ ಈ ಕೆಲಸಕ್ಕೆ ಇಷ್ಟು ಪೈಪೋಟಿ ಯಾಕೆ ಅಂತಾ ಕೇಳ್ತೀರಾ ?
ಯಾಕೆಂದರೆ, ಇಂದಿನ ಇಂಜಿನಿಯರಿಂಗ್ ಶಿಕ್ಷಣದಲ್ಲಿ ಸ್ಕಿಲ್ ಗಳು ಇರುವ ಸಿಲೆಬಸ್ ಅನ್ನು ಕಲಿಸಲಾಗುತ್ತಿಲ್ಲ. Cloud computing, Artificial intelligence, machine learning ಎಲ್ಲವೂ ಮುಂಚೂಣಿಯಲ್ಲಿದ್ದರೂ ಭೋಧಿಸಲಾಗುತ್ತಿರುವುದು ಹಳೆ ಕಾಲದ ಔಟ್ ಡೇಟೆಡ್ ಸಿಲೆಬಸ್. ಹೋಗಲಿ, ಅದನ್ನಾದರೂ ಹೇಗೆ ಕಲಿಸುತ್ತಾರೆ ಗೊತ್ತಾ..? "ನಮಗೂ ಇದರ ಬಗ್ಗೆ ಗೊತ್ತಿಲ್ಲ, ನಿಮಗೂ ಗೊತ್ತಿಲ್ಲ, ನೋಟ್ಸ್ ಕೊಡ್ತೀವಿ ಓದಿಕೊಳ್ಳಿ ಎನ್ನುತ್ತಾ ಇಂಟರ್ನಲ್ಸ್ ಪ್ರಶ್ನೆಗಳನ್ನು ಕೊಟ್ಟು ಬಿಡುತ್ತಾರೆ." ಅರ್ಧ ಕ್ಲಾಸ್ ಆಗಲೇ ಬಂಕ್ ಮಾಡಿ ಸುತ್ತುತ್ತಿರುತ್ತಾರೆ. ಇನ್ನರ್ಧ ಕ್ಲಾಸ್ ಹೀಗೆ ಹಾಳಾಗುತ್ತಿರುತ್ತದೆ. ಇಂತಹವರ ಮಧ್ಯೆ ಅಪರೂಪಕ್ಕೆ ಕೆಲವು ಲೆಕ್ಚರರ್ ಗಳು ನಿಷ್ಠೆಯಿಂದ ಕಾನ್ಸೆಪ್ಟ್ ಅರ್ಥ ಮಾಡಿಸುತ್ತಾ ಇರುತ್ತಾರೆ. ವಿಪರ್ಯಾಸ ಏನು ಅಂದರೆ ಇಂತಹಾ ಲೆಕ್ಚರರ್ ಗಳ ಸಬ್ಜೆಕ್ಟ್ ಗಳಲ್ಲಿ ರಿಸಲ್ಟ್ ಕಡಿಮೆ, ಆದರೆ ಓತ್ಲಾ ಹೊಡೆಯುತ್ತಾ ಇಂಟರ್ನಲ್ಸ್ ಮಾರ್ಕ್ಸ್ ಕೊಟ್ಟ, ಪಾಠವೇ ಮಾಡದೆ ಪ್ರಶ್ನೆ ಕೊಟ್ಟು ಬರೆಯುವಂತೆ ಮಾಡುವ ಲೆಕ್ಚರರ್ ಸಬ್ಜೆಕ್ಟ್ ಅಲ್ಲಿ 100 % ರಿಸಲ್ಟ್.
Skillful Engineer ಗಳ ಕೊಲೆಯಾಗುವುದು ಎಲ್ಲಿ ಗೊತ್ತಾ ? ಭಾಗಶಃ ಅವರ ಲೆಕ್ಚರರ್ ಗಳಿಂದಲೇ.. ಕಂಪ್ಯೂಟರ್ ಪ್ರೋಗ್ರಾಮ್ ಗಳನ್ನು ಬರೆಯಬೇಕಾದಲ್ಲಿ ಅವರು ಕೊಟ್ಟ Xerox ನ Xerox ಕಾಪಿಯಂತೆಯೇ ಅಚ್ಚಾಗಿರಬೇಕು. ಯಾಕೆಂದರೆ, ತಪ್ಪಾದರೆ ಅದನ್ನು ಸರಿ ಮಾಡುವ ವಿಧಾನ ಇಬ್ಬರಿಗೂ ಗೊತ್ತಿರುವುದಿಲ್ಲ
ಯಾವುದಾದರೂ ಇಂಜಿನಿಯರಿಂಗ್ ಮಾಡಿರುವವರನ್ನು ಕೇಳಿ ನೋಡಿ.
C program ಅಲ್ಲಿ
#include<stdio.h>
#include<conio.h>
ಈ ಎರಡು ಸಾಲುಗಳನ್ನು ಬಿಟ್ಟು ಮತ್ತೇನೂ ಗೊತ್ತಿರುವುದಿಲ್ಲ. ಕೇಳಿದರೆ ಲೆಕ್ಚರರ್ ಹೇಳಿ ಕೊಡಲಿಲ್ಲ. ಇಂಜಿನಿಯರಿಂಗ್ ಗೆ ಬಂದ ನಂತರವೂ ಲೆಕ್ಚರರ್ ಅನ್ನು ನೆಚ್ಚಿಕೊಂಡು, ಅವರ ಜೆರಾಕ್ಸ್ ನೋಟ್ಸ್ ಅನ್ನೇ ನೆಚ್ಚಿಕೊಂಡು ಇರುವುದು ಎಷ್ಟು ಸರಿ? ನಮ್ಮಷ್ಟಕ್ಕೆ ನಾವು ಗೂಗಲ್ ಮಾಡದೇ, ಟೆಕ್ಟ್ ಬುಕ್ ಓದದೇ ಇನ್ನೂ ಅವರ ಪಾಠವನ್ನೇ ನೆಚ್ಚಿಕೊಂಡು ಕೂರುವುದು ಎಷ್ಟು ಸರಿ ?
ಇನ್ನು ಇಂಜಿನಿಯರಿಂಗ್ ಪ್ರಾಜೆಕ್ಟ್ ವಿಚಾರಕ್ಕೆ ಬಂದರೆ, ಅಲ್ಲಿ ಪ್ರಾಜೆಕ್ಟ್ ಗಿಂತ, ಅಲ್ಲಿ ರಿಪೋರ್ಟ್ ಗೆ ಹೆಚ್ಚು ಬೆಲೆ. ಪ್ರಾಜೆಕ್ಟ್ ನಲ್ಲಿ ಏನು ಕಲಿತೆ ಎಂಬುದು ಅಲ್ಲಿ ಮುಖ್ಯವೇ ಆಗಿರುವುದಿಲ್ಲ. ರಿಪೋರ್ಟ್ ನ format ಸರಿ ಇದ್ದರೆ ಆಯಿತು. ಪೇಜ್ ತುಂಬಿಸು, ಆ ಇಮೇಜ್ ಹಾಕು, ಈ ಟೆಸ್ಟ್ ಇರಲಿ. ಪ್ರಾಕ್ಟಿಕಲ್ ಅಲ್ಲಿ ಏನೂ ಇರದಿದ್ದರೂ ರಿಪೋರ್ಟ್ ನಲ್ಲಿ ಥಿಯರಿ ತುಂಬಿಸಿಟ್ಟಿರಬೇಕು. ಇನ್ನು ಆ ಪ್ರಾಜೆಕ್ಟ್ ಅವರು ಮಾಡಿದ್ದಾ, ಯಾವುದೋ consultancy ಇಂದ ತಂದಿದ್ದಾ..? ಯಾವುದೂ ಮುಖ್ಯವಾಗುವುದಿಲ್ಲ. ಎಷ್ಟೋ ಲೆಕ್ಚರರ್ ಗಳೇ ಹೇಳುವುದೂ ಉಂಟು.. xxxx Consultancy ಗೆ ಹೋಗಿ ಎಂಬುದಾಗಿ. ಸ್ವಂತ ಕೌಶಲ್ಯದಿಂದ ಮಾಡಿದ ಪ್ರಾಜೆಕ್ಟ್ ಎಂದು ಹೇಳಿದರೆ ಅವರುಗಳು ನಂಬಲು ಸಿದ್ದವೇ ಆಗಿರುವುದಿಲ್ಲ. ಯಾಕೆಂದರೆ, ಅವರಿಗಿಲ್ಲದ ಜ್ಞಾನ ಅವರ ವಿದ್ಯಾರ್ಥಿಗಳಿಗಿದೆ ಎಂಬುದನ್ನು ಅವರು ಒಪ್ಪಲು ಸಿದ್ದವೇ ಇರುವುದಿಲ್ಲ.
ಕೆಲಸಕ್ಕೆ ಬೇಕಾದ ಪ್ರೋಗ್ರಾಮಿಂಗ್ ಕಲಿಯಲು ಯಾವುದಾದರೂ ಕೋರ್ಸ್ ಇಂದು ಅತ್ಯಗತ್ಯ. ಅದಕ್ಕೆ ಇಂಜಿನಿಯರಿಂಗ್ ಅನ್ನೇ ಮುಗಿಸಿರಬೇಕು ಎಂಬ ಅಗತ್ಯವಾದರೂ ಏನು ? ಆ ಕೋರ್ಸ್ ಮುಗಿಸಿ ಕೆಲಸಕ್ಕೆ ಬೇಕಾದ ಸ್ಕಿಲ್ ಪಡೆದುಕೊಂಡರೆ ಸಾಕಲ್ಲವಾ ??
ಎಂಜಿನಿಯರಿಂಗ್ ನ ಪಾಸಿಂಗ್ ಮಾರ್ಕ್ಸ್ 35. ಮೆಡಿಕಲ್ ನಲ್ಲಿ ಕೂಡಾ ಹೀಗೆಯಾ.. ? ಪಾಸಿಂಗ್ ಮಾರ್ಕ್ಸ್ ಮಾತ್ರ ಪಡೆದರೆ ಅಲ್ಲಿ ರೋಗಿಗಳು ಫೇಲ್ ಆಗಬೇಕಾಗುತ್ತದೆ.ಆದರೆ, ಇಂಜಿನಿಯರಿಂಗ್ ನ ವಿಶೇಷ ಅಂದರೆ 8 ವರ್ಷ ಸಮಯ ಇರುತ್ತದೆ, ಅಷ್ಟರೊಳಗೆ ಇಂಜಿನಿಯರಿಂಗ್ ಮುಗಿಸಿದಲ್ಲಿ ಆಯಿತು. ಅದೂ ಪಾಸಿಂಗ್ ಮಾರ್ಕ್ಸ್ ತೆಗೆದರೆ ಸಾಕು, ಬ್ಯಾಕ್ ಆಗಿರುವುದನ್ನು 2 ವರ್ಷದೊಳಗೆ ಪಾಸ್ ಮಾಡಿಕೊಳ್ಳುತ್ತಾ ಪಾಸ್ ಆದರೂ ಸಾಕು. ಯಾರೂ ಇಂಜಿನಿಯರಿಂಗ್ ಅನ್ನು ಎಷ್ಟು ವರ್ಷದೊಳಗೆ ಮುಗಿಸಿದೆ ಎಂದು ಕೇಳುವುದಿಲ್ಲ, ಎಷ್ಟು ಬಾರಿ ಒಂದು ಸಬ್ಜೆಕ್ಟ್ ಅನ್ನು ಬರೆದು ಪಾಸ್ ಮಾಡಿದೆ ಎಂದು ಕೇಳಲಾರರು, ಇಂಜಿನಿಯರಿಂಗ್ ಮುಗಿಸಿದರೆ ಆಯಿತು.
ಇಂಜಿನಿಯರಿಂಗ್ ಗೆ ಮೊದಲಿದ್ದ ಬೆಲೆ ಇಲ್ಲ, ಬೆಲೆ ಕಡಿಮೆ ಮಾಡಿರುವವರು ನಾವುಗಳೇ ಎಂಬುದೂ ಸುಳ್ಳಲ್ಲ. ಈಗ ಅದು ಕೂಡಾ ಹತ್ತರಲ್ಲೊಂದು ಡಿಗ್ರಿ ಎಂಬಂತಾಗಿದೆ. ವಿಶ್ವೇಶ್ವರಯ್ಯನವರಂತಹಾ ಇಂಜಿನಿಯರ್ ಗಳು ಈಗಿಲ್ಲ, ಅವರಿಗಿದ್ದಂತಹಾ ಗುರುಗಳು ಈಗ ಹುಡುಕಿದರೂ ಸಿಗಲಾರರು. ಎಲ್ಲೋ 5% ಅಂತಹವರು ಸಿಗಬಹುದಷ್ಟೇ.
ಇಂಜಿನಿಯರಿಂಗ್ ಹಿಂದಿರುವ ಕತೆಗಳನ್ನು ಯಾರೂ ಬಿಚ್ಚಿಡಲಾರರು. ಎಷ್ಟೋ ಡ್ಯಾನ್ಸರ್ಗಳನ್ನು, ಹಾಡುಗಾರರನ್ನು, ಚಿತ್ರಕಾರರನ್ನು, ಕತೆಗಾರರನ್ನು ಇಂಜಿನಿಯರಿಂಗ್ ತನ್ನೊಳಗೆ ಹುದುಗಿಸಿಕೊಂಡು ಕಾಲಚಕ್ರದೊಡನೆ ಸಾಗುತ್ತಿದೆ. ಹಣ ಇರಬಹುದು ಸಂತಸ..?
ಇದಕ್ಕೆ ಅವರವರೇ ಉತ್ತರಿಸಬೇಕು. ಇಂದು ನಾನು ಒಬ್ಬ ಇಂಜಿನಿಯರ್ ಎಂದು ಹೆಮ್ಮೆಯಿಂದ ಹೇಳುವವರು ಬಹಳ ಕಡಿಮೆ.
Happy Engineers ಗಿಂತಲೂ Frustrated Engineers ಹೆಚ್ಚಾಗುತ್ತಿದ್ದಾರೆ.
"ನಾನು ಇಂಜಿನಿಯರ್" ಎಂದು ಹೆಮ್ಮೆಯಿಂದ ಹೇಳುವವರು ಹೆಚ್ಚಾಗಲಿ. ಇಂಜಿನಿಯರಿಂಗ್ ನಲ್ಲಿ ಕಲಿತಷ್ಟೂ ಕಲಿಯುವುದು ಇದ್ದೇ ಇದೆ. ಕಲಿಯುವ ಮನಸ್ಸು, ಉತ್ಸಾಹ ಬೇಕಷ್ಟೇ.. ಹೇಗೋ ಇಂಜಿನಿಯರಿಂಗ್ ಅನ್ನು ಸೇರಿ ಆಗಿದೆ, ಹೇಗೋ ಮುಗಿಸುವೆ ಎಂಬ ಇರಾದೆ ಬೇಡ. ಕಲಿತದ್ದನ್ನು ಬಳಸಿಕೊಂಡು ಒಳ್ಳೆಯ ಇಂಜಿನಿಯರ್ ಗಳಾಗಿ.
ಕೃಷಿ ಕ್ಷೇತ್ರಕ್ಕೆ ಅತ್ಯುತ್ತಮ ಆಟೊಮ್ಯಾಟಿಕ್ ಯಂತ್ರ ಅಳವಡಿಸಿರುವ ಇಂಜಿನಿಯರ್ ತಂದೆ ಇಂದು ಇನ್ನು ಎತ್ತನ್ನು ಉಪಯೋಗಿಸಿಕೊಂಡೇ ಉಳುಮೆ ಮಾಡುತ್ತಿರುವುದು ವಿಪರ್ಯಾಸ.
ಯಾರು ಸಮಾಜದ ಸಮಸ್ಯೆಗಳಿಗೆ ಪರಿಹಾರ ನೀಡುವರೋ ಅವರೇ ನಿಜವಾದ ಇಂಜಿನಿಯರ್ ಗಳು. ಇಂಜಿನಿಯರಿಂಗ್ ಮುಗಿಸಿದರಷ್ಟೇ ಸಾಲದು, ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು.
Anyway, ಹ್ಯಾಪಿ ಇಂಜಿನಿಯರ್ ಗಳಿಗೂ, Frustrated ಇಂಜಿನಿಯರ್ ಗಳಿಗೂ Happy Engineers Day
~ವಿಭಾ ವಿಶ್ವನಾಥ್
ಭಾನುವಾರ, ಆಗಸ್ಟ್ 2, 2020
ಸಖಿ- ಪರಿಚಯ
ಎಷ್ಟೇ ಆಪ್ತರಿದ್ದರೂ ಹೇಳಿಕೊಳ್ಳದ್ದು ಏನೋ ಒಂದು ಉಳಿದೇ ಇರುತ್ತದೆ. ನಮ್ಮ ಅಭಿಪ್ರಾಯಗಳನ್ನು ಮತ್ತೊಬ್ಬರೊಡನೆ ಹಂಚಿಕೊಳ್ಳಲು ಅಥವಾ ಅವರಿಂದ ಸಲಹೆ ಪಡೆದುಕೊಳ್ಳಲು ಕಾತುರದಿಂದ ಕಾಯುತ್ತೇವೆ. ಪರಿಚಿತರೊಡನೆ ಹಂಚಿಕೊಂಡಷ್ಟೂ ಅದು ಮತ್ತೆಲ್ಲೋ, ಮತ್ತಾರಿಗೋ, ಮತ್ತೆ ಎಂದಾದರೂ ಯಾವುದೋ ರೂಪದಲ್ಲಿ ತೊಡಕಾದರೆ ಎಂಬ ಅಳುಕು ಮನಸ್ಸಲ್ಲಿ ಇದ್ದೇ ಇರುತ್ತದೆ. ಹಲವು ವಿಚಾರಗಳನ್ನು ಹೇಳಿಕೊಳ್ಳದಿದ್ದಾಗಲೂ ಮತ್ತೆ ಯಾರದ್ದೋ ಸಮಸ್ಯೆಯೋ, ಮತ್ತೆ ಯಾರಿಗೋ ನೀಡಿದ ಸಲಹೆಯೋ ನಮ್ಮಲ್ಲಿ ಭರವಸೆ ಹೊತ್ತಿಸುತ್ತದೆ.
ಬರಹದ ಗೆಳತಿ 'ಸಖಿ' ನಿಮ್ಮೆಲ್ಲಾ ಸಂಧರ್ಭದಲ್ಲಿ ಆಸರೆಯಾಗುತ್ತಾಳೆ. ಹೇಳಿಕೊಳ್ಳದ ನಿಮ್ಮ ಎಷ್ಟೋ ಭಾವನೆಗಳಿಗೆ ಕಿವಿಯಾಗುತ್ತಾಳೆ. ನಿಮ್ಮ ಅಮ್ಮನ, ಮಗಳ, ಗೆಳತಿಯ, ಸೋದರಿಯ, ಪ್ರೇಯಸಿಯ, ಹೆಂಡತಿಯ ಹೀಗೆ ಹಲವಾರು ಮನಸ್ಸಿನ ಮಾತನ್ನು ತೆರೆದಿಡುತ್ತಾಳೆ. ಭರವಸೆ ತುಂಬುತ್ತಾಳೆ. ಮನಸ್ಸಿನ ಭಾರವನ್ನು ಕಡಿಮೆ ಮಾಡುತ್ತಾಳೆ. ಸಲಹೆ ನೀಡುತ್ತಾಳೆ. ಇದು ಯಾರೋ ಒಬ್ಬರ ಮನದ ಭಾವವಲ್ಲ, ಇದೇ ಭಾವಗಳು ರಂಗನ್ನು ಹೊತ್ತು ಹಲವಾರು ವಿಧದಲ್ಲಿ ಸುಳಿದಾಡುತ್ತಿರುತ್ತವೆ. ಆದರೆ, ನಾವು ಅದಕ್ಕೆ ಹೆಚ್ಚಿನ ಗಮನ ನೀಡಿರುವುದಿಲ್ಲ. ಆದರೆ, ಸಮಸ್ಯೆ ನಮಗೆ ಬಂದಾಗ .. ?
ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಕಾಣುತ್ತದೆ. ಮತ್ತೊಬ್ಬರ ಸಮಸ್ಯೆಯೂ ಚಿಕ್ಕದಾಗಿಯೇ ಕಾಣುವುದಲ್ಲವೇ.. ? ಮತ್ತೊಬ್ಬರಿಗೆ ಪ್ರೇರಣೆ ನೀಡುವುದು ಬಹು ಸುಲಭ. ಆದರೆ, ನಮಗೆ ನಾವೇ ಪ್ರೇರಣೆಯಾಗಬೇಕು. ಆ ನಿಟ್ಟಿನಲ್ಲಿ ಸಖಿ ನಿಮ್ಮ ಜೊತೆ ನಿಲ್ಲುತ್ತಾಳೆ. ನಗುವಾಗ ಊರೆಲ್ಲಾ ನೆಂಟರು, ಸಮಸ್ಯೆ ಬಂದಾಗಲೇ ಅಲ್ಲವೇ ನಮ್ಮವರು ಯಾರು ಎಂಬ ಅರಿವಾಗುವುದು.
ಸಖಿಯ ಮಾತುಗಳು ಎಲ್ಲರಿಗೂ ಉಪಯೋಗಕ್ಕೆ ಬರುತ್ತದೆ ಎಂದೆ. ಅದನ್ನು ಅರ್ಥೈಸಿಕೊಂಡು ಅಳವಡಿಸಿಕೊಂಡು ಹೋಗುವುದು ನಿಮಗೆ ಬಿಟ್ಟದ್ದು.
ನಿಮಗೊಂದು ಪುಟ್ಟ ಕಥೆ ಹೇಳುವೆ. ಕೇಳಿ..
ಪುಟ್ಟದೊಂದು ತೋಟದ ಮನೆಯಲ್ಲಿ ನೆಮ್ಮದಿಯಿಂದ ರೈತಪ್ಪ, ರೈತಮ್ಮ ವಾಸವಾಗಿರುತ್ತಾರೆ. ನೆಮ್ಮದಿಯಾಗಿರುವಾಗ ನೆಮ್ಮದಿ ಕೆಡಿಸಲು ಯಾರೋ ಒಬ್ಬರು ಇದ್ದೇ ಇರುತ್ತಾರೆ. ಅಲ್ಲವೇ..? ಎಲ್ಲವೂ ಸರಿಯಿದ್ದರೆ ಕಥೆಗೆ ಬೆಲೆಯೆಲ್ಲಿ ? ಇಲ್ಲಿ ಇವರ ನೆಮ್ಮದಿ ಕೆಡಿಸಿದ್ದು ಒಂದು ಸುಂಡಿಲಿ. ಈ ಇಲಿ ಕಾಟ ತಡೆಯುವುದಕ್ಕಾಗದೆ ರೈತಪ್ಪ, ರೈತಮ್ಮ ಎಷ್ಟೋ ಉಪಾಯ ಮಾಡಿದರೂ ಇಲಿ ಸಿಗದೆ ನುಣಿಚಿಕೊಂಡು ಹೋಗುತ್ತಲೇ ಇತ್ತು.. ಕಡೆಗೆ ರೈತಮ್ಮನ ತಲೆಗೊಂದು ಉಪಾಯ ಹೊಳೆದೇ ಬಿಟ್ಟಿತು. ಅದನ್ನು ರೈತಪ್ಪನಿಗೆ ಹೇಳುವಾಗ ಈ ಇಲಿ ಕೂಡಾ ಅದನ್ನು ಕೇಳಿಸಿಕೊಂಡಿತು. ಈ ಇಲಿಗೆ ಆಹಾರದಲ್ಲಿ ವಿಷ ಬೆರೆಸಿ ಇಟ್ಟು ಅದನ್ನು ಸಾಯಿಸಿ ಬಿಡೋಣ ಎಂದು.
ಈ ಉಪಾಯ ಕೇಳಿಸಿಕೊಂಡ ಇಲಿಗೆ ರಾತ್ರಿ ಇಡೀ ನಿದ್ದೆ ಬರಲಿಲ್ಲ, ಪ್ರಾಣಭಯ ಎಲ್ಲರಿಗೂ ಇರುವುದೇ ಅಲ್ಲವಾ? ಅದು ಇಲಿಯಾದರೂ ಅಷ್ಟೇ, ಹುಲಿಯಾದರೂ ಅಷ್ಟೇ.. ಬೆಳಿಗ್ಗೆಯಾಗುತ್ತಿದ್ದಂತೆ ಕೋಳಿ ಕೂಗುವ ಧ್ವನಿ ಕೇಳಿಸಿತು. ಕೋಳಿ ಹತ್ತಿರ ಕೇಳಿದರೆ ಇದಕ್ಕೇನಾದರೂ ಸಲಹೆ ದೊರೆಯಬಹುದು ಎಂದು ಕೋಳಿಯ ಬಳಿ ಕೇಳಿದರೆ "ನಿನಗೆ ತೊಂದರೆ ಬಂದರೆ ನಾನ್ಯಾಕೆ ಉಪಾಯ ಯೋಚಿಸಬೇಕು? ನನಗಂತೂ ಏನೂ ತೊಂದರೆ ಇಲ್ಲಪ್ಪಾ" ಎನ್ನುತ್ತಾ ಇಲಿಯನ್ನು ನಿರ್ಲಕ್ಷಿಸಿ ಆಹಾರ ಹುಡುಕುತ್ತಾ ಹೊರಟಿತು.
ಇಲಿಗೆ ಬೇಜಾರಾಗಿ ಅದು ಹಾಗೇ ಮುಂದುವರಿಯುತ್ತಿರುವಾಗ ಕುರಿ ಕಾಣಿಸಿತು. "ಕುರಿಯಣ್ಣಾ, ನನ್ನನ್ನು ಕಾಪಾಡು. ನನ್ನ ತೊಂದರೆಗೆ ಸಲಹೆ ನೀಡು" ಎನ್ನುತ್ತಾ ತನ್ನ ತೊಂದರೆಯನ್ನು ವಿವರವಾಗಿ ಹೇಳಿದರೆ, ದಿವ್ಯ ನಿರ್ಲಕ್ಷ್ಯದಿಂದ ಕುರಿ "ನಿನ್ನ ತೊಂದರೆ ನಿನ್ನದು, ನಾನಂತೂ ಆರಾಮವಾಗಿ ಇದ್ದೇನೆ. ರೈತಪ್ಪ ನನ್ನನ್ನಂತೂ ಏನೂ ಮಾಡಲ್ಲ, ನನಗಷ್ಟು ಸಾಕು" ಎನ್ನುತ್ತಾ ಮೇವು ಮೆಲುಕು ಹಾಕುವ ಕಾರ್ಯವನ್ನು ಮುಂದುವರಿಸಿತು.
ಇಲಿಗೆ ಆ ತೋಟದ ಮನೆಯಲ್ಲಿ ಇದ್ದದ್ದು ಮೂರೇ ಗೆಳೆಯರು. ಇಬ್ಬರಂತೂ ಆಗಲೇ ಕೈ ಕೊಟ್ಟು ಆಗಿತ್ತು. ಉಳಿದದ್ದು ಹಂದಿರಾಯ ಮಾತ್ರ. ಕೊನೆಯ ಭರವಸೆಯ ಆಶಾ ಕಿರಣದೊಂದಿಗೆ ಅಲ್ಲಿಗೆ ಹೋದರೆ ಹಂದಿರಾಯ ಕೂಡಾ ಏನೂ ಸಹಾಯ ಮಾಡದೆ. ತೊಂದರೆ ನನಗಲ್ಲ ಎಂದು ಕಳುಹಿಸಿ ಬಿಟ್ಟ.
ಎಲ್ಲರೂ ಕೈ ಚೆಲ್ಲಿ ಕುಳಿತಾಗ ಇಲಿ ತನ್ನ ಹುಷಾರಲ್ಲಿ ತಾನಿರಬೇಕು ಎಂದು ತೀರ್ಮಾನ ಮಾಡಿಕೊಂಡು ರೈತಮ್ಮ ಇಟ್ಟ ಊಟವನ್ನು ಮಾಡದೆ ಸುಮ್ಮನಿರಬೇಕೆಂದು ತೀರ್ಮಾನಿಸಿತು. ಇತ್ತ ರೈತಮ್ಮ ಇಲಿಗೆ ವಿಷ ಹಾಕಿ ಕೈಯನ್ನು ಸರಿಯಾಗಿ ತೊಳೆದುಕೊಳ್ಳದೆ ಊಟ ಮಾಡಿದ್ದರಿಂದ ವಿಷ ಅವಳ ಹೊಟ್ಟೆ ಸೇರಿತು. ರೈತಪ್ಪ ವೈದ್ಯರ ಹತ್ತಿರ ಕರೆದುಕೊಂಡು ಹೋಗಿ ಅವಳಿಗೆ ಚಿಕಿತ್ಸೆ ನೀಡಿಸಿ ಮನೆಗೆ ಕರೆದುಕೊಂಡು ಬಂದ.
ಅವಳು ಮನೆಗೆ ಬಂದ ಮೇಲೆ ಅವಳನ್ನು ನೋಡಲು ಅವಳ ತಂದೆ-ತಾಯಿ ಬರದಿದ್ದರೆ ಹೇಗೆ? ಅವರು ಬಂದ ಮೇಲೆ ಕೋಳಿ ಕೊಯ್ದು ಔತಣ ನೀಡದಿದ್ದರೆ ಹೇಗೆ ? ಹಾಗಾಗಿ ಮನೆಯಲ್ಲಿದ್ದ ಕೋಳಿ ಬಲಿಯಾಯ್ತು.
ಆನಂತರ ಬಹಳ ಹತ್ತಿರದ ಸಂಬಂಧಿಕರು ಬಂದರು ಅವರ ಊಟಕ್ಕೆ ಕುರಿ ಬಲಿಯಾಯ್ತು. ಬಾಯಿಂದ ಬಾಯಿಗೆ ರೈತಮ್ಮನ ಕತೆ ಹಬ್ಬಿ ಉರವರೆಲ್ಲಾ ನೋಡಲು ಬಂದರು. ಅವರ ಊಟಕ್ಕೆ ಹಂದಿಯೂ ಬಲಿಯಾಯ್ತು.
ಇಷ್ಟೆಲ್ಲಕ್ಕೂ ಕಾರಣವಾದ ಇಲಿ ಇದನ್ನೆಲ್ಲಾ ನೋಡುತ್ತಾ ನಿಟ್ಟುಸಿರು ಬಿಟ್ಟು ಸುಮ್ಮನಾಯಿತು.
ಸಮಸ್ಯೆ ನಮ್ಮದಲ್ಲಾ ಎಂದುಕೊಂಡವರೆಲ್ಲಾ ಸಮಸ್ಯೆಗೆ ಬಲಿಯಾದರು. ಸಮಸ್ಯೆ ಬಂದಾಗ ಕೊಂಚ ಜಾಗರೂಕತೆಯಿಂದ ನಡೆದುಕೊಂಡವರು ಬಚಾವಾದರು.
ಎಲ್ಲವೂ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ರೀತಿಯ ಮೇಲೆ ಅವಲಂಬಿತವಾಗಿರುತ್ತದೆ.
ಸಖಿಯ ಮೂಲಕ ಇನ್ನು ಮುಂದೆ ಈ ರೀತಿಯ ಬರಹಗಳನ್ನು ನಿರೀಕ್ಷಿಸಬಹುದು.
(ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಳ್ಳಿ.)
~ವಿಭಾ ವಿಶ್ವನಾಥ್
ಭಾನುವಾರ, ಜೂನ್ 21, 2020
ಭಾವಯಾನ
ಭಾವನೆಗಳಿದ್ದರೂ ತೋರ್ಪಡಿಸಿಕೊಳ್ಳದ ಹಲವು ಜನರಿದ್ದಾರೆ, ಆದರೆ ಭಾವನೆಗಳೇ ಇಲ್ಲದೆ ಇರುವ ಜೀವಂತ ವ್ಯಕ್ತಿ ಹುಡುಕಿದರೂ ಸಿಗಲಾರ. ನಾವು ಬೆಳೆದ ಪರಿಸರ, ನಮ್ಮ ದೇಹದಲ್ಲಿನ ಹಾರ್ಮೋನ್ ಗಳ ಪ್ರಭಾವ ಭಾವಾಭಿವ್ಯಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಸೆರಟೋನಿನ್, ಎಂಡೋರ್ಪಿನ್, ಆಕ್ಸಿಟೋಸಿನ್, ಡೋಪಮೈನ್ ಮುಂತಾದ ಹಾರ್ಮೋನ್ ಗಳ ಪ್ರಭಾವ ಭಾವನೆಗಳ ಮೇಲೆ ಪರಿಣಾಮ ಬೀರಿ ಮನುಷ್ಯನ ಬದುಕಿನಲ್ಲಿ ಆಶಾಕಿರಣವಾಗಿವೆ.
ಅಕಸ್ಮಾತ್ ದುಃಖ ಎಂಬುದೇ ಇಲ್ಲವೆಂದಿದ್ದರೆ... ಯಾವುದೇ ಭಾವನೆಗಳು ಇರದಾದರೆ ಅದು ಒಂದು ಲೋಪವೇ ಅಲ್ಲವೇ..?
ಚಿರಂಜೀವಿತ್ವ ಕೂಡಾ ಶಾಪವಾಗಬಲ್ಲದು. ಮರಣ ಕೂಡಾ ವರವಾಗಬಲ್ಲದು. ಆಲೋಚನೆಯ ಮೇಲೆ ಬದುಕಿನ ಬಂಡಿ ನಿಂತಿದೆ. ಸಿಹಿಯನ್ನು ಮಾತ್ರ ತಿನ್ನುವ ಮನುಷ್ಯ ಯಾರೂ ಇರಲಾರ. ಅತಿಯಾದ ಸಿಹಿ ವಾಕರಿಕೆ ತರಿಸುತ್ತದೆ. ಅಂತೆಯೇ ಅತಿಯಾದ ಅಮೃತ ಕೂಡಾ ವಿಷವಾಗಿ ಪರಿಣಮಿಸಬಲ್ಲದು. ಭಾವಗಳ ಲೋಪ ಕೂಡಾ ಬದುಕಿನ ಒಂದು ಕಪ್ಪು ಚುಕ್ಕಿಯೇ.
ವಿಜ್ಞಾನ ಮತ್ತು ಸಾಹಿತ್ಯದ ಮೂಲ ಎರಡರ ಕೇಂದ್ರಬಿಂದುವಾಗಬಲ್ಲವು ಈ ಭಾವನೆಗಳು. ಸಾಹಿತ್ಯ ಸೃಷ್ಟಿಗೆ ಸೃಜನಶೀಲತೆ ಮುಖ್ಯವಾದರೂ ಭಾವಗಳಿಲ್ಲದೆ ಬರಹ ಹುಟ್ಟಲಾರದು. ಭಾವನೆಗಳು ನಮ್ಮವೇ ಆಗಬೇಕೆಂದಿಲ್ಲ. ಯಾವುದಾದರೂ ಕತೆ, ಕಾದಂಬರಿ ಓದಿದಾಗ ಮೂಡುವ ಭಾವಗಳು, ಸಿನಿಮಾ ನೋಡಿದಾಗ ಹುಟ್ಟುವ ಭಾವನೆಗಳು, ಯಾರದ್ದೋ ಜೀವನದ ಘಟನೆಗಳನ್ನು ಕೇಳಿದಾಗ ಹುಟ್ಟುವ ಭಾವಗಳು ಹೀಗೆ ಭಾವಗಳ ಮೂಲ ಅನೇಕ. ಈ ಭಾವನೆಗಳನ್ನು ಭಾವಜೀವಿ ಬಂಧಿಸಿ ಅಕ್ಷರ ರೂಪ ನೀಡುತ್ತಾನೆ ಕೆಲವರು ಅನುಭವಿಸಿ ಸುಮ್ಮನಾಗುತ್ತಾರೆ, ಇನ್ನು ಕೆಲವರು ಅಲ್ಲಿಯೇ ಮರೆಯುತ್ತಾರೆ.
ಲೇಖಕರ ಭಾವನೆಗಳ ಲೇಖನ ಅಥವಾ ಕತೆಗಳನ್ನು ಓದಿದ ಕೆಲವರು ಅವು ಅವರ ಭಾವನೆಗಳೇ ಏನೋ ಎಂದು ಭಾವಿಸಿಬಿಡುತ್ತಾರೆ. ಪತ್ತೇದಾರಿ ಕತೆ ಬರೆಯಲು ಅವನು ಪತ್ತೆದಾರಿಯೇ ಆಗಿರಬೇಕಿಲ್ಲ, ಪ್ರೀತಿ ಅಥವಾ ಬ್ರೇಕಪ್ ವಿಚಾರಗಳನ್ನು ಬರೆಯಲು ಅವರ ಬದುಕಿನಲ್ಲಿ ಅವು ಸಂಭವಿಸಿರಸಬೇಕೆಂಬ ನಿಯಮವೇನೂ ಇಲ್ಲ. ಹಾಗಾದರೆ, ದೆವ್ವ-ಭೂತಗಳ ಕತೆ ಬರೆಯುವ ಲೇಖಕರಿಗೆ ಅದೆಷ್ಟು ದೆವ್ವ-ಭೂತಗಳ ಅನುಭವವಾಗಿರುತ್ತದೆ? ಅನುಭವ ಮಾತ್ರವಲ್ಲ ಕಲ್ಪನೆ ಕೂಡಾ ಭಾವಗಳ ಹರಿಕಾರ.
ಭಾವಗಳು ಕೂಡಾ ಬದುಕಿನ ಎಷ್ಟೋ ಬಂಧಗಳನ್ನು ಬೆಸೆಯುತ್ತವೆ. ರಕ್ತ ಸಂಬಂಧಗಳು ಮಾತ್ರ ಬದುಕಿನ ಬಂಧಗಳನ್ನು ಬೆಸೆಯುವುದಿಲ್ಲ ಭಾವಗಳು ಸಹಾ ಬದುಕಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತವೆ. ಸ್ನೇಹಿತರು ಕೆಲವೊಮ್ಮೆ ಒಡ ಹುಟ್ಟಿದವರಿಗಿಂತ ಹೆಚ್ಚಾಗಬಲ್ಲರು. ಅದೇ ಬಂಧಗಳು ಬೇರಾದರೆ ಅವು ಕೊಡುವ ಯಾತನೆ ದೈಹಿಕ ನೋವಿಗಿಂತಲೂ ಹೆಚ್ಚು.
ನೋವು, ನಲಿವು, ಸುಖ, ದುಃಖ, ನಗು, ಅಳು ಹೀಗೇ ಪ್ರತಿಯೊಂದು ಭಾವಗಳೂ ವಿಭಿನ್ನ. ಎಲ್ಲವನ್ನೂ ಅನುಭವಿಸುದಾಗಲಷ್ಟೇ ಬದುಕಿನ ಭಾವಯಾನದ ಅನುಭವವಾಗಲು ಸಾಧ್ಯ. ಎಲ್ಲವೂ ಸುಗಮವಾಗಿ ಸಾಗಲು ಪ್ರಮುಖವಾದ ಭಾವಗಳ ಹತೋಟಿ ನಮ್ಮ ಬಳಿ ಇದ್ದರಷ್ಟೇ ಭಾವಯಾನ ಸುಸೂತ್ರವಾಗಿ ಸಾಗಲು ಸಾಧ್ಯ.
~ವಿಭಾ ವಿಶ್ವನಾಥ್
ಭಾನುವಾರ, ಏಪ್ರಿಲ್ 5, 2020
ಒಲವ ಹೊರೆ ಹೊರಿಸಿದವಳೇ..
ನೀನ್ಯಾಕಿಷ್ಟು ಒಳ್ಳೆಯವಳು ಹೇಳು..? ಒಳ್ಳೆಯತನ ಬೂಟಾಟಿಕೆ ಎಂದುಕೊಂಡಿದ್ದವನ ಮನವನ್ನು ಬದಲಿಸುವಷ್ಟು ಒಳ್ಳೆತನ ನಿನ್ನಲ್ಲಿಲ್ಲದೇ ಹೋಗಿದ್ದರೆ ಅದೆಷ್ಟು ಕೆಟ್ಟವನಾಗಿರುತ್ತಿದ್ದೆ ನಾನು.. ಆದರೂ ಸುಂದರವಾದದ್ದು, ಒಳ್ಳೆಯದ್ದು ದೂರದಲ್ಲೇ ಇರಬೇಕು ಅಲ್ಲವೇ..? ಅದಕ್ಕೆ ಇರಬೇಕು ನಿನ್ನಂತಹವರು ಗಗನ ಕುಸುಮಗಳಂತೆ ಭಾಸವಾಗುವುದು.
ಪಾರಿಜಾತದಂತಹವಳು ನೀನು.. ಅದರ ಬಿಳುಪು, ಬಣ್ಣದ ಬಗ್ಗೆ ಹೇಳುತ್ತಿಲ್ಲ ನಾನು. ಅದು ಪಸರಿಸುವ ಸುಗಂಧದಂತೆ ನಿನ್ನ ಗುಣ. ನೀನು ನನ್ನ ಸುತ್ತ ಇರುವಾಗಲೆಲ್ಲಾ ನಿನ್ನದೇ ಗುಂಗು ಹಿಡಿಸಿಬಿಡುತ್ತೀಯ.. ಆದರೂ, ನಿನ್ನ ಒಳ್ಳೆಯತನದ ಆಜ್ಞೆಗೆ ಗುಲಾಮನಾಗಬೇಕಾದಾಗ ಅದೇಕೋ ಅಸಹಾಯಕನಾಗಿ ಬಿಟ್ಟೆನೇನೋ ಎನ್ನಿಸಿಬಿಡುವುದು ಸುಳ್ಳಲ್ಲ. ನನ್ನಂತ ಬಲಿಷ್ಠನನ್ನು ಸಹಾ ಮೃದುವಾಗಿಸುವುದು ನೀನೋ, ನಿನ್ನ ಗುಣವೋ, ನಿನ್ನ ಒಲವೋ ಅರಿವಿಗೆ ನಿಲುಕದ್ದು..
ಸ್ಪರ್ಶ ಮಣಿ ಎಂಬ ಮಣಿಯೊಂದಿದೆ ಎಂದು ಕೇಳಿದ್ದೆ. ಅದು ಕಬ್ಬಿಣವನ್ನು ತಾಕಿದ ತಕ್ಷಣ ಕಬ್ಬಿಣ ಚಿನ್ನವಾಗಿ ಬದಲಾಗುವುದಂತೆ.. ನೀನೂ ಅಂತಹಾ ಸ್ಪರ್ಶಮಣಿಯೇ.. ಇಲ್ಲದಿದ್ದರೆ ನಿನ್ನಿಂದ ನನ್ನಂತಹಾ ನಿರ್ಭಾವುಕ ಕೂಡಾ ಭಾವನೆಗಳೊಂದಿಗೆ ಬೆರೆಯುವುದ ಕಲಿತ ಎಂದರೆ.. ಅದರ, ಅಂದರೆ ನಿನ್ನ ಮಹತ್ವ ಎಷ್ಟಿರಬೇಕೆಂದು ನೀನೇ ಯೋಚಿಸು..
ಆದರೂ, ನೀನು ಬಂದ ಮೇಲೆ ಬದುಕು ಬದಲಾಯಿತು ಎಂಬುವುದನ್ನು ಒಪ್ಪಲು ಕೊಂಚ ಕಷ್ಟವೇ. ಮನಸ್ಸಿಗಲ್ಲ, ಎಲ್ಲರೆದುರು. ಏಕೋ ಈ ಬದಲಾವಣೆ ನಿನ್ನೊಡನೆ ಮಾತ್ರವೇ.. ಅಷ್ಟು ಬೇಗ ನಾನು ಬದಲಾದರೆ ಅದು ಎಲ್ಲರಿಗೂ ನಾಟಕೀಯ ಎನ್ನಿಸಬಹುದು. ಏಕೆಂದರೆ, ಎಲ್ಲರೂ ಕೆಟ್ಟತನದ ಬದಲಾವಣೆಯನ್ನು ಕ್ಷಣಮಾತ್ರದಲ್ಲಿ ಒಪ್ಪುತ್ತಾರೆ ಆದರೆ ಒಳ್ಳೆಯತನದ ಬದಲಾವಣೆಯನ್ನು ಅಷ್ಟು ಸುಲಭದಲ್ಲಿ ಒಪ್ಪುವುದಿಲ್ಲ. ನೀನು ನನ್ನ ಎಲ್ಲಾ ಬದಲಾವಣೆಯ ಕಾರಣ ಎಂಬುದನ್ನು ಮನಸ್ಸಿನಲ್ಲೇ ಕೂಗಿ ಕೂಗಿ ಹೇಳುತ್ತೇನೆ. ಆದರೆ, ಅದು ಹೊರ ಜಗತ್ತಿಗೆ ಕೇಳುವುದಿಲ್ಲ. ಕೇಳಲೂಬಾರದು. ಅವರಿಗೆ ಇದರ ಗಂಧ ಪಸರಿಸಿದರೆ ಸಂಬಂಧಕ್ಕೆ ಒಂದು ಬಣ್ಣ ಬಳಿದು ಬೇರೆಯ ರೀತಿಯೇ ಪ್ರದರ್ಶನಕ್ಕೆ ಇಟ್ಟುಬಿಡುತ್ತಾರೆ.
ಬದುಕಿನಲ್ಲಿ ನಾನು ದೇವರನ್ನು ಪ್ರಾರ್ಥಿಸಿದವನೇ ಅಲ್ಲ ಆದರೆ ಇತ್ತೀಚೆಗೆ ದೇವರನ್ನು ವಂದಿಸುವುದನ್ನು ಮರೆಯುವುದಿಲ್ಲ. ಪ್ರಾರ್ಥನೆ ನಿಸ್ವಾರ್ಥವಾಗಿದ್ದರೆ ಫಲಿಸುವುದೆಂದು ನೀನೇ ಹೇಳಿದ್ದೆಯಲ್ಲಾ.. ಹಾಲ್ಮನಸ್ಸಿನಂತಹಾ ಗೆಳತಿಯ ಒಲವು ಹೀಗೇ ಉಳಿದುಬಿಡಲಿ ಎಂದು ಕೇಳಿಕೊಳ್ಳುತ್ತೇನೆ. ನಿನ್ನಂತಹಾ ಗೆಳತಿಯನ್ನು ನನಗೆ ನೀಡಿದ್ದಕ್ಕೆ ವಂದಿಸುತ್ತೇನೆ.
ನಿನ್ನ ಒಲವಿನ ಹೊರೆಯ ಭಾರವನ್ನು ಇಳಿಸಿಕೊಳ್ಳುವುದು ಸುಲಭವಲ್ಲ ಎಂಬುದರ ಅರಿವು ನನಗಿದೆ. ಒಲವು ಹಾಗೇ ಅಲ್ಲವೇ..?? ಕೊಟ್ಟಷ್ಟೂ ಮುಗಿಯದು, ತುಂಬಿದಷ್ಟೂ ಪೂರ್ತಿಯಾಗದು. ಆದರೆ ಆ ಒಲವಿಗೆ ಹೆಸರಿಡಲಾರೆ, ಕಾಮದ ಯೋಚನೆಯನ್ನು ಸಹಾ ಸೋಕಿಸಲಾರೆ. ಜೀವನವಿಡೀ ನಿನ್ನ ಒಲವ ಹೊರೆ ಹೊತ್ತುಕೊಂಡೇ ನಿನ್ನ ಆತ್ಮೀಯನಾಗಿ ಬದುಕಿ ಬಿಡುವಾಸೆ.
ಗಗನ ಕುಸುಮವನ್ನು ಮುಟ್ಟಲು ಯೋಗ್ಯತೆ ಬೇಕು. ಆ ಯೋಗ್ಯತೆಯ ಮಾಪನ ಹಣ, ಅಂತಸ್ತಲ್ಲ. ಇಷ್ಟು ದಿನ ನಿನ್ನೊಡನಿದ್ದು ಅದನ್ನು ಅರಿತಿಲ್ಲ ಎಂದರೆ ನನ್ನಂತಹ ಮೂಢ ಬೇರೆ ಯಾರೂ ಇರಲಾರನೇನೋ..
ಒಲವನ್ನು ಬಂಧಿಸಲಾರೆ ಹಾಗೆಯೇ ಭಾವನೆಗಳನ್ನು ಅಧಿಕವಾಗಿಯೂ ಹರಿಬಿಡಲಾರೆ. ಎಲ್ಲದಕ್ಕೂ ಕಾರಣ ನಿನ್ನಂತಹಾ ಉತ್ತಮ ಗೆಳತಿಯನ್ನು ಕಳೆದುಕೊಳ್ಳುವ ಭಯ. ಬದುಕಿನಲ್ಲಿ ಇಂತಹಾ ಒಲವನ್ನು ಹೊರಿಸಿಕೊಳ್ಳುವ ಕೆಲವೇ ಅದೃಷ್ಟವಂತರಲ್ಲಿ ನಾನೂ ಒಬ್ಬ.
ನಿನ್ನಿಂದ ಕಲಿತದ್ದನ್ನು ಮರೆಯಲಾರೆ, ಒಳ್ಳೆಯದನ್ನು ಮತ್ತೊಬ್ಬರಿಗೆ ಹಂಚುವೆ.
ಆದರೆ ಈ ಬರಹವನ್ನು ನಿನಗೆ ತೋರಿಸಲಾರೆ. ನೀನು ಹೊಗಳಿಕೆಗೆ ಉಬ್ಬಲಾರೆ, ತೆಗಳಿಕೆಗೆ ಕುಗ್ಗಲಾರೆ ಎಂದು ಅರಿವಿದ್ದರೂ ಸಹಾ...
ಆದರೂ ಈ ಬರಹ ಒಲವ ಹೊರೆ ಹೊರಿಸಿದವಳಿಗೆ ಅರ್ಪಣೆ
~ಇಂತಿ
ಒಲವ ಸಾಲಗಾರನಾಗಿರುವ ಆತ್ಮೀಯ
------------------------------------------
(~ವಿಭಾ ವಿಶ್ವನಾಥ್)
ಭಾನುವಾರ, ಮಾರ್ಚ್ 15, 2020
ಆಷಾಡದ ಅನುಭೂತಿ
ಆಷಾಡ ಮಾಸವೇ ಮುಗಿವ ಹೊತ್ತಲ್ಲಿ ಹೀಗೊಂದು ಅನುಭೂತಿ..
ಆಷಾಡದಲ್ಲಿ ನವವಿವಾಹಿತರ ಚಿರವಿರಹ ಒಂದು ಅನುಭೂತಿಯಾದರೆ, ಸುತ್ತಲೂ ಸುಳಿದಾಡುವ ಸುಳಿಗಾಳಿಯದ್ದೇ ಮತ್ತೊಂದು ವಿಚಿತ್ರ ಅನುಭವ.
ಮಂದಗಾಮಿನಿಯಂತೆ ಸುಳಿಗಾಳಿಯಂತೆ ಬೀಸುತ್ತಿದ್ದ ಗಾಳಿಗೆ ಭೋರೆಂದು ಬೀಸುವ ತವಕ. ಕಿವಿಗಂತೂ ಯಾವುದೋ ರೌದ್ರನರ್ತನದ ಆಲಾಪದಂತೆ ಕೇಳಿಸುತ್ತಾ, ತನ್ನ ವಿರಹವನ್ನು ಅರುಹುತ್ತಿರುವ ಪ್ರೇಮಿಯಂತೆ ಭಾಸವಾಗುತ್ತದೆ. ಎಲ್ಲಿಂದಲೋ ಎಲ್ಲಿಗೋ ಪಯಣಿಸುತ್ತಿರುವ, ಯಾರ ಅಂಕೆಗೂ ನಿಲುಕದ, ಯಾರನ್ನೋ ಹುಡುಕಿ ಸಿಗದಾದಾಗ ಪ್ರಲಾಪಿಸುವ ಆರ್ತನಾದದಂತೆ ಅನ್ನಿಸುತ್ತದೆ.
ಆಷಾಡ ಮಾಸಕ್ಕೆ ಕರೆಯಲು ಬರುವ ಅಣ್ಣನ ನಿರೀಕ್ಷೆಯೂ ಈ ಸುಳಿಗಾಳಿಯ ಜೊತೆಜೊತೆಗೇ ಸುಳಿಯುತ್ತಾ, ಅಣ್ಣ ಇಂದೂ ಬರಲಿಲ್ಲವೆಂಬುದನ್ನು ಮತ್ತೆ-ಮತ್ತೆ ನೆನಪಿಸುತ್ತದೆ.ಅಣ್ಣನಿಗಾದರೂ ಈಗ ತಂಗಿಯ ನೆನಪೆಲ್ಲಿದೆ? ಅತ್ತಿಗೆಯ ವಿರಹ ಕಾಡುತ್ತಿರುವ ಹೊತ್ತಲ್ಲಿ ತಂಗಿ ನೆನಪಾಗುವುದಾದರೂ ಹೇಗೆ ಅಲ್ಲವೇ..?ಜೊತೆಗೆ ಈ ತಣ್ಣನೆ ಗಾಳಿಯ ಸ್ಪರ್ಶ, ಅದರೊಟ್ಟಿಗೆ ಬರುವ ಬರುವ ತುಂತುರು ಹನಿಗಳೂ ಅವನನ್ನು ಮನೆಯಲ್ಲೇ ನಿಲ್ಲುವಂತೆ ಮಾಡಿಬಿಡುತ್ತವೆ. ಅಮ್ಮನ ಕೈರುಚಿಯ ಚಹಾ ಕೂಡಾ ಸಪ್ಪೆಯೆನಿಸುತ್ತಿರುತ್ತದೆ.ನೆನಪುಗಳಿಗೇನು ಬರ ಎಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ ತೋರಿಕೆಯ ಪ್ರೀತಿ ತೋರುವ ಅಣ್ಣನ ಮನಸ್ಸು ಕೂಡಾ ಶೀತಲ ಗಾಳಿಗೆ ಮಂಜಿನಂತಾಗಿರುತ್ತದೆ. ಅತ್ತಿಗೆಯ ಬರುವಿಕೆ ಮಾತ್ರ ಬೇಸರದ ಮಂಜನ್ನು ಕರಗಿಸಲು ಸಾಧ್ಯ.ಇತ್ತ ಅಣ್ಣನ ಬರುವಿಕೆಗೆ ಕಾದ ತಂಗಿ ಸುಸ್ತಾಗಿ, ಮಹಾಲಕ್ಷ್ಮಿಯಂತೆ ಇಲ್ಲಿಯೇ ಇರುವೆನೋ ಹೊರತು ಮಾರಿಯಾಗಿ ಆ ಮನೆಗೆ ಕಾಡಲಾರೆ ಎಂಬ ಯೋಚನೆ ಮಾಡುತ್ತಾ ಅನ್ಯಮನಸ್ಕಳಾಗುತ್ತಿರುತ್ತಾಳೆ.
ಶುಭಕಾರ್ಯಗಳು ಜರುಗದ ಆಷಾಡ ಮಾಸ ಸದಾ ಗಜಿಬಿಜಿಯಂತಿರುವ ಕಾರ್ಯಕ್ರಮಗಳಿಗೆಲ್ಲಾ ಒಂದು ಸಣ್ಣ ವಿರಾಮ ನೀಡುತ್ತದೆ. ಶುಭ-ಅಶುಭಗಳೆಲ್ಲಾ ಮನಸ್ಸಿನಲ್ಲಿರುತ್ತದೆ, ಮಾಸದಲ್ಲಲ್ಲ ಎಂಬುದಕ್ಕೆ ವೈಜ್ಙಾನಿಕ ಉದಾಹರಣೆ ನೀಡಿ ಗಂಟೆಗಟ್ಟಲೆ ಭಾಷಣ ಮಾಡಿದವರೂ ಸಹಾ ಆಷಾಡ ಮಾಸದಲ್ಲಿ ಮದುವೆ ಕಾರ್ಯಕ್ರಮವನ್ನು ನೆರವೇರಿಸುವುದಿಲ್ಲ.
ಅದೇಕೋ ಮೋಡಗಳೂ ಸಹಾ ಮುಖ ಊದಿಸಿಕೊಂಡು ನೆಲಕ್ಕಿಳಿಯದೇ ಅಲ್ಲೇ ಕುಳಿತುಬಿಡುತ್ತವೆ. ಮುಖ ಗಂಟು ಹಾಕಿಕೊಂಡು ಕೂತ ಅಣ್ಣನನ್ನು ಪದೇ ಪದೇ ನೆನಪಾಗಿಸಿಬಿಡುತ್ತದೆ.
ಆಷಾಡದ ಅನುಭೂತಿ ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕಾಡಿಬಿಡುತ್ತದೆ. ಕಾಡದೇ ಬಿಡುವ ಮಾಸವಂತೂ ಇದಲ್ಲ. ಮುಖ ಧುಮ್ಮಿಸಿ ಕೂತ ಮೋಡ, ಮರೆಯಾದ ಬಿಸಿಲು, ನೆನಪಲ್ಲಷ್ಟೇ ಉಳಿದುಬಿಡುವ ತಂಗಿ, ವಿರಹವನ್ನು ಅನುಭವಿಸುವ ನವಜೋಡಿ, ಎಷ್ಟೇ ಬಿಸಿಯಿದ್ದರೂ ತಣ್ಣಗೆನಿಸುವ ಚಹಾ, ರಾತ್ರಿಯಲ್ಲಿ ಕಾಣದ ಚುಕ್ಕಿಗಳು, ಬೀರುವಿನಿಂದಲೇ ನನ್ನನ್ನು ಎತ್ತಿಕೋ ಎಂದು ಕರೆಯುವ ಸ್ವೆಟರ್ ಹೀಗೆ.. ಹುಡುಕಿದಷ್ಟೂ ಅನುಭೂತಿಗಳು ಆಷಾಡಕ್ಕೆಂದೇ ಕಾಪಿಟ್ಟಂತೆ ಕಾಣಸಿಗುತ್ತದೆ.
~ವಿಭಾ ವಿಶ್ವನಾಥ್
ಗುರುವಾರ, ಜನವರಿ 9, 2020
ಅಮ್ಮನ ಒಡನಾಟ
ಮನೆಗೆ ಎಷ್ಟೇ ಜನ ಬಂದ್ರೂ, ಅವರ ಸ್ಟೇಟಸ್ ನ ನೀನು ಗಮನಿಸುವುದೇ ಇಲ್ಲ. ಅದೇ ಪರಿಚಯದ ಮುಗುಳ್ನಗು ಜೊತೆಗೆ ಕಾಫಿ,ಟೀ,ಊಟ,ತಿಂಡಿ ಎಲ್ಲವನ್ನೂ ವಿಚಾರಿಸಿಕೊಂಡು ಉಪಚಾರ ಮಾಡ್ತೀಯ. ಆ ವಿಷಯದಲ್ಲಿ ನೀನು ಸ್ವಲ್ಪ ಕೂಡಾ ಗೊನಗುವುದಿಲ್ಲ. ಅದನ್ನು ನಾನು ಕೂಡಾ ಕಲೀತಾ ಇದ್ದೀನಿ, ಇನ್ನೂ ಪೂರ್ತಿ ಕಲಿತಿಲ್ಲ. ಯಾಕಂದ್ರೆ, ನಿನ್ನಿಂದ ಕಲಿಯುವುದಕ್ಕೆ ತುಂಬಾ ಇದೆ.
ಅವತ್ತು ನೀನು ಆ ಹುಡುಗೀನಾ ನೋಡಿ ಹೇಳ್ತಾ ಇದ್ಯಲ್ಲಾ, "ಆ ಹುಡುಗಿ ಬಾಬ್ ಕಟ್ ಮಾಡಿಸಿಕೊಂಡು ಎಷ್ಟು ಚೆನ್ನಾಗಿ ಕಾಣಿಸ್ತಾ ಇದ್ದಾಳೆ" ಅಂತಾ, ಅದರ ಜೊತೆಗೆ ಮಾಡ್ರನ್ ಆಗಿ ಟ್ರೆಂಡಿ ಆಗಿರೋದೂ ನಿನಗೆ ಇಷ್ಟ ಅಲ್ವಾ?
ಅವತ್ತು ನೀನು ಮನೆಯಲ್ಲಿ ಇರಲಿಲ್ಲ. ನನ್ನಕೂದಲು ಉದುರಿ ಸಣ್ಣ ಆಗ್ತಾ ಇತ್ತು, ಸ್ವಲ್ಪ ಕಟ್ ಮಾಡಿಸಿಕೊಳ್ಳೋಣ ಅಂದುಕೊಂಡವಳು, ಹೇಗೂ ನಿನಗೆ ಗಿಡ್ಡ ಕೂದಲು ಇಷ್ಟ ಆಗುತ್ತೆ ಅಲ್ವಾ ಅಂದುಕೊಂಡು ನಿನಗೆ ಸರ್ಪ್ರೈಜ್ ಕೊಡಬೇಕು ಅಂದುಕೊಂಡು ಸ್ವಲ್ಪ ಜಾಸ್ತಿನೇ ಕಟ್ ಮಾಡಿಸಿಕೊಂಡು ಬಂದಿದ್ದೆ. ಆದ್ರೆ ಅವತ್ತು ನೀನು ಬಂದು ನೋಡಿ ಬೇಜಾರು ಮಾಡಿಕೊಂಡು, ಅಷ್ಟು ಉದ್ದ ಇದ್ದಿದ್ದ ಕೂದಲನ್ನು ಇಷ್ಟು ಕಟ್ ಮಾಡಿಸಿಕೊಂಡು ಬಂದಿದ್ದೀಯಲ್ಲ ಅಂದೆ. ನಿಜ ಹೇಳ್ಲಾ, ನನಗೂ ಅಷ್ಟು ಉದ್ದದ ಕೂದಲು ಕಟ್ ಮಾಡಿಸಿಕೊಂಡದ್ದಕ್ಕೆ ಬೇಜಾರಿತ್ತು,ಆದ್ರೆ ಅವತ್ತು ಬೇಜಾರಾಗಿದ್ದು, ನೀನು ಬೇಜಾರಾಗಿದ್ದನ್ನು ನೋಡಿ.
ಎಲ್ಲಾದ್ರೂ ಹೊರಟರೆ,ಅಥವಾ ಯಾವುದಾದರೂ ಹೊಸಾ ಬಟ್ಟೆ ಹಾಕಿಕೊಂಡ್ರೆ ಮೊದಲ ಕಾಂಪ್ಲಿಮೆಂಟ್ ಅಂತೂ ನಿನ್ನದೇ, ಚೆನ್ನಾಗಿ ಕಾಣಿಸ್ತಾ ಇದ್ದೀಯಾ ಅಂತಾ(ಚೆನ್ನಾಗಿ ಕಾಣಿಸದೇ ಇದ್ದರೂ ಕೂಡಾ), ಎಷ್ಟಾದರೂ ಹೆತ್ತವರಿಗೆ ಹೆಗ್ಗಣ ಮುದ್ದು ಅಲ್ವಾ? ಆದರೆ ನಿನಗೆ ನಾನು ಬೇರೆ ಹೇರ್ ಸ್ಟೈಲ್ ಮಾಡಿಕೊಂಡರೆ ಇಷ್ಟಾನೇ ಆಗಲ್ಲ. ಅಲ್ವಾ? ನೀನು ಮಾಮೂಲಾಗೇ ಇರು,ಆ ತರ ಜಡೆ ಹಾಕ್ಕೊಂಡಿದ್ರೇನೇ ನೀನು ಚೆನ್ನಾಗಿ ಕಾಣ್ತೀಯಾ ಅಂತಾ ಹೇಳ್ತೀಯಾ. ಅದಕ್ಕೇ ಯಾರು ಎಷ್ಟೇ ಒತ್ತಾಯ ಮಾಡಿದರೂ, ಎಷ್ಟೇ ದೊಡ್ಡ ಫಂಕ್ಷನ್ ಆದ್ರೂ, ಆ ಹೇರ್ ಸ್ಟೈಲ್ ನನಗೆ ಇಷ್ಟ ಇಲ್ಲ. ಸಾಕು ಅಂತಾ ಹೇಳ್ಬಿಡ್ತೀನಿ.
ಆದ್ರೆ,ನೀನು ಹೇಗೇ ಇದ್ರೂ ಎಷ್ಟು ಚೆಂದ. ಆ ಮುಗುಳ್ನಗುವೇ ನಿನ್ನ ಮುಖಕ್ಕೆ ಹೆಚ್ಚು ಮೆರುಗು. ನೀನು ನಿನ್ನ ಬಾಬ್ ಕಟ್ ಹೇರ್ ಸ್ಟೈಲ್ ಜೊತೆಗೆ ಯಾವ ಸೀರೆ ಹಾಕಿಕೊಂಡರೂನೂ ನನ್ನ ಕಣ್ಣಿಗಂತೂ ಸಂದರೀನೇ.ಅದಕ್ಕೆ ನಾನೂ ಅವಾಗವಾಗ "ಮಾಡರ್ನ್ ಅಮ್ಮ, ಟ್ರೆಡಿಷನಲ್ ಮಗಳು" ಅಂತಾ ರೇಗಿಸೋದು. ನೆನಪಿಡೆ ಅಲ್ವಾ? ನಿನ್ನ ಯೊಚನೆಗಳು ಯಾವಾಗ್ಲೂ ಮಾಡರ್ನ್.
ಅಡುಗೆ ಅಂದ್ರೆ ಹೀಗೇ ಇರಬೇಕು ಅನ್ನೋ ಹಳೇ ಮಾರ್ಗಗಳನ್ನು ಬಿಟ್ಟು, ಅದರಲ್ಲೇ ಹೊಸರುಚಿ ಟ್ರೈ ಮಾಡೋದಕ್ಕೆ ಹೇಳಿ ಕೊಟ್ಟದ್ದು ನೀನೇ,ಆದರೆ ಅದ್ಯಾಕೋ ನಿನ್ನಷ್ಟು ರುಚಿಯಾಗಿ ಅಡುಗೆ ಮಾಡೋದಕ್ಕೆ ಬರುವುದೇ ಇಲ್ಲ. ಬಹುಶಃ ಅದಕ್ಕೆ ಅನ್ಸುತ್ತೆ ಹೇಳೋದು "ಕೈ ರುಚಿ ಅಂದ್ರೆ, ಅಮ್ಮನ ಕೈ ರುಚಿನೇ" ಅಂತಾ.
ನನಗೆ ನೀನು ತಲೆಗೆ ಎಣ್ಣೆ ಹಚ್ಚುವ ಕ್ಷಣಗಳಿಗಿಂತಾ, ನಾನು ನಿನಗೆ ಮೆಹಂದಿ ಹಚ್ಚಿಕೊಡೋ ಕ್ಷಣಗಳೇ ಅಚ್ಚುಮೆಚ್ಚು. ಅಮ್ಮ, ಆ ಸೀರೆ ಉಟ್ಕೋ, ಈ ತರಾ ಡ್ರೆಸ್ ಮಾಡ್ಕೋ ಅಂತಾ ಹೇಳೋಕೇ ಹೆಚ್ಚು ಖುಷಿ. ಎಲ್ಲರೂ ಅಮ್ಮನ ಮಡಿಲಲ್ಲಿ ಅಕ್ಕರೆಯ ಸವಿಯನ್ನು ಸವಿಯಬೇಕು ಅಂತಾ ಅಂದ್ರೆ, ನಾನು ಅಮ್ಮನಿಗೇ ನನ್ನ ಪ್ರೀತಿಯನ್ನೆಲ್ಲಾ ಕೊಡಬೇಕು ಅಂತಾ ಅಂದುಕೊಳ್ಳುತ್ತೇನೆ.
ಆದ್ರೆ ಕೆಲವೊಮ್ಮೆ ನೀನು ಹೆಚ್ಚು ಪೊಸೆಸ್ಸೀವ್ ಆಗಿಬಿಡ್ತೀಯಾ ಅನ್ಸುತ್ತೆ. ಯಾರಾದ್ರೂ ನನ್ನನ್ನು ಮಗಳು ಅಂತಾ ಕರೆದಾಗ, ಅಥವಾ ನಿನ್ನ ಮುಂದೆ ನಾನು ಯಾರ ಬಗ್ಗೆ ಆದ್ರೂ ಹೆಚ್ಚು ಮಾತಾಡುವಾಗ, ಮೆಚ್ಚುಗೆ ಇದ್ದರೂ, ಅದರ ಜೊತೆಗೆ ಸ್ವಲ್ಪ ಅಸಮಾಧಾನ ಕೂಡಾ ಇರುತ್ತೆ. ಆದರೆ, ಎಲ್ಲರಿಗಿಂತ ನೀನೇ ನನಗೆ ಮುಖ್ಯ. ಆದ್ರೆ, ನಿನಗೆ ಕಾಡಿಸಬೇಕು ಅಂತಾನೇ, ನಾನು ಅದರ ಬಗ್ಗೆ ಹೆಚ್ಚು ಮಾತಾಡ್ತೀನಿ. ಬೇಜಾರಿಲ್ಲ. ಅಲ್ವಾ?
ಬರೀ ಪ್ರೀತಿ ಅಷ್ಟೇ ಅಲ್ಲ,ನಮ್ಮ ಮಧ್ಯೆ ನಡೆಯೋ ಜಗಳಗಳಿಗೂ ಲೆಕ್ಕ ಇಲ್ಲ ಅಲ್ವಾ? ಆದರೆ, ಅದೆಲ್ಲಾ ಎಷ್ಟು ಹೊತ್ತು? ಒಂದೋ ನಾನು ಅಮ್ಮಾ ಅಂದ್ರೆ ಕರಗೊಗ್ತೀಯಾ, ಇಲ್ಲಾ ನೀನೇ 'ಪಾಪು' ಅಂತಾ ಮಾತಾಡಿಸ್ತೀಯಾ.. ಆದರೆ ಅವಾಗೆಲ್ಲಾ ನಿನ್ನ ಬಾಯಿಮಾತುಗಳೇ ಜೋರು. ಅದಕ್ಕೆ ನಾನು ಹೇಳ್ತಾ ಇರೋದು "ಪುಣ್ಯ, ನಿನಗೆ ಮಗ ಇಲ್ಲ. ಅಕಸ್ಮಾತ್ ಏನಾದ್ರೂ ಇದ್ದು ಸೊಸೆ ಬಂದಿದ್ರೆ, ಅವಳು ನಿನ್ನ ಈ ಅವತಾರ ನೋಡಿದ್ರೆ, ಒಂದೋ ಅವಳು ಮನೆ ಬಿಟ್ಟು ಹೋಗ್ತಾ ಇದ್ಲು, ಇಲ್ಲಾ ನಿನ್ನ ಓಡಿಸ್ತಾ ಇದ್ಲು" ಅಂತಾ. ಅವಾಗೆಲ್ಲಾ ನಿನ್ನ ನಗುವೇ ಉತ್ತರ.
ಆದ್ರೆ,ನಿನಗೆ ಅಡುಗೆ ಮಾಡಿ ಒಪ್ಪಿಸುವುದೋ, ಅಥವಾ ಬೇರೆ ಯಾವುದನ್ನಾದ್ರೂ ಒಪ್ಪಿಸುವುದೇ ಬಹಳ ಕಷ್ಟ. ಯಾಕಂದ್ರೆ ಎಲ್ಲದರಲ್ಲೂ ಪರ್ಫೆಕ್ಷ್ನ್ ಬಯಸ್ತೀಯಲ್ಲಾ ನೀನು.. ನಾನು ಬರೆಯೋ ಬರಹಗಳ ಮೊದಲ ವಿಮರ್ಷಕಿ ನೀನೇ. ನೀನು ಮೆಚ್ಚಿಕೊಂಡರೆ ಅದು ಚೆನ್ನಾಗಿದೆ ಅನ್ನೋ ಭಾವನೆ ನನಗೆ. ಆದ್ರೆ ನಿನಗೆ ಇಷ್ಟ ಆಗ್ಲಿಲ್ಲಾ ಅಂದ್ರೂ ಅದನ್ನು ಮುಚ್ಚುಮರೆ ಮಾಡಲ್ಲ. ನಿನ್ನ ನೇರನುಡಿ ನನಗೆ ಬಹಳ ಇಷ್ಟ.
"ನಂಗೆ ವಾಟ್ಸಾಪ್ ಎಲ್ಲಾ ಯಾಕೆ? ,ಬೇಡ ಅದೆಲ್ಲ" ಅಂತಾ ಅಂದರೂ ವಾಟ್ಸಾಪ್ ಬಂದ ಮೇಲೆ ಫೋಟೋ ಕಳಿಸುವುದು ಹೇಗೆ? ನೋಡುವುದು ಹೇಗೆ ಅಂತೆಲ್ಲಾ ಕೇಳಿಕೊಂಡು, ಒಳ್ಳೆಯ ಕುತೂಹಲ ತುಂಬಿದ ವಿದ್ಯಾರ್ಥಿನಿ ತರಹ ಕಲಿಯೋದು ಚೆಂದ. ಆ ಕ್ಷಣ ನಾನು ನಿನಗೆ ಮಿಸ್ ಆಗಿ, ನೀನು ಸ್ಟೂಡೆಂಟ್ ಆಗಿಬಿಡ್ತೀಯಾ.. ಎಷ್ಟು ಚೆಂದ ಅಲ್ವಾ ಆ ಘಳಿಗೆ.
ಬರೆಯುತ್ತಾ ಹೋದ್ರೆ ಬಹಳಷ್ಟಿದೆ. ಇನ್ನೊಮ್ಮೆ, ಅಲ್ಲಲ್ಲಾ ಇನ್ನೊಂದಿಷ್ಟು ಸಲ ಬರೀತೀನಿ. ಆಯ್ತಾ?ಅಮ್ಮ, ನಾನು ನಿನ್ನ ಒಡನಾಟದಲ್ಲಿ ಎಲ್ಲವನ್ನೂ ಮರೆಯುತ್ತೇನೆ. ನೀನು ಒಬ್ಬಳು ಬೆಸ್ಟ್ ಫ್ರೆಂಡ್, ನನ್ನ ಗೈಡ್, ನನ್ನ ಬರಹಗಳ ವಿಮರ್ಶಕಿ, ಸ್ವಲ್ಪ ಪೊಸೆಸ್ಸೀವ್ ಆಗೋ ಭಾವುಕ ಅಮ್ಮ, ಕೋಳಿಜಗಳಗಳ ಜೊತೆಗಾತಿ,ಒಳ್ಳೆ ಶಿಕ್ಷಕಿ ಹಾಗೇ ವಿದ್ಯಾರ್ಥಿನಿ ಕೂಡಾ, ಎಲ್ಲದಕ್ಕೂ ಒಳ್ಲೆ ಕಾಂಪ್ಲಿಮೆಂಟ್ ಕೊಡೋ ಅಮ್ಮ, ಮುಗುಳ್ನಗು ತುಂಬಿರೋ ಸ್ಪೂರ್ತಿದಾತೆ. ನಿನ್ನ ಒಡನಾಟ ಎಂದೆಂದೂ ಹೀಗೇ ಇರಲಿ ಅಮ್ಮ.
~ವಿಭಾ ವಿಶ್ವನಾಥ್
ಗುರುವಾರ, ಅಕ್ಟೋಬರ್ 31, 2019
ಜೊತೆಗೂಡದ ಹೆಜ್ಜೆಗಳು
ಸಾವಿತ್ರಿ ಯಮನೊಡನೆ ಪತಿಯ ಪ್ರಾಣ ಭಿಕ್ಷೆಗಾಗಿ ಹೆಜ್ಜೆ ಹಾಕಿದಳು. ಇನ್ನು ಸಪ್ತಪದಿಯಲ್ಲಿ ಸಹಚರರಿಗಾಗಿ ಪ್ರಮಾಣ ಮಾಡಲು ಹೆಜ್ಜೆ ಹಾಕುತ್ತಾರೆ. ನಾನೇಕೆ ನಿನ್ನೊಡನೆ ಹೆಜ್ಜೆ ಹಾಕಲಿ..?
ಬೇಡಿ ಸಣ್ಣವಳಾಗಲಾರೆ, ಕೊಟ್ಟು ದೊಡ್ಡವಳಾಗಲಾರೆ. ಸಹಮತಕ್ಕೆ ನಮ್ಮಲ್ಲಿ ಸಮಾನಾಭಿರುಚಿಯೂ ಇಲ್ಲ. ಬಹುಶಃ ಹೆಜ್ಜೆ ಹಾದಿ ತಪ್ಪಬಹುದು, ಹೃದಯದ ಬಡಿತ ತಪ್ಪಬಹುದು. ಆದರೂ, ಹೆಜ್ಜೆಗಳು ಜೊತೆಗೂಡಲಾರವು.ಅಲ್ಲವೇ..?
ನಿನ್ನ ಹಿಂದೆ ನಾ ಹೆಜ್ಜೆ ಹಾಕಲು ನೀನು ಮುಖಂಡನಲ್ಲ, ನಾನು ಹಿಂಬಾಲಕಿಯಲ್ಲ. ಇಲ್ಲವೆಂದರೆ, ನಾ ಮುಂದೆ ಹೆಜ್ಜೆ ಹಾಕಲು ನಾನು ಮುಂದಾಳುವಲ್ಲ, ನೀನು ನನ್ನ ಹಿಂಬಾಲಕನಲ್ಲ. ಜೊತೆ-ಜೊತೆಗೆ ಹೆಜ್ಜೆ ಹಾಕಲು ನಾವು ಸ್ನೇಹಿತರೂ ಅಲ್ಲ. ಬಹುಶಃ ಕಾಲದೊಡನೆ ಕೆಲಕಾಲ ಸಮಾನಾಂತರದಲ್ಲಿ ಹೆಜ್ಜೆ ಹಾಕುತ್ತಿರುವೆವೋ, ಏನೋ..? ಎಲ್ಲರ ಕಾಲೆಳೆದು ಮೋಜು ನೋಡುವ ಕಾಲ ಕೆಲಕಾಲದ ನಂತರ ನಮ್ಮ ಹೆಜ್ಜೆ ಗುರುತುಗಳನ್ನೆಲ್ಲಾ ಅಳಿಸಲೂಬಹುದು ಅಥವಾ ಅದರ ಮೇಲೆ ಮತ್ತೊಬ್ಬರ ಹೆಜ್ಜೆ ಗುರುತನ್ನು ಮೂಡಿಸಬಹುದು. ಕಾಲಾಂತರದ ಹಾದಿಯಲ್ಲಿ ನಾ ಯಾರೋ..? ನೀ ಯಾರೋ..? ಅವರ್ಯಾರೋ..?
ಸಮುದ್ರವೇ ನಮ್ಮ ಹೆಜ್ಜೆಗಳನ್ನು ಒಟ್ಟಿಗಿರಲು ಬಿಡುವುದಿಲ್ಲವೆಂದರೆ, ಕಾಲ ಸುಮ್ಮನಿರುವುದೇ..? ಎಂದೋ, ಯಾವುದೋ ಕಾರಣಕ್ಕೆ ಆಸರೆಯಾದ ಹೆಜ್ಜೆಗಳು ಸದಾ ಹಾಗೆಯೇ ಆಸರೆಯಾಗಿರಲು ಸಾಧ್ಯವೇ..? ಅಚಾನಕ್ಕಾಗಿ ಕಾಲು ಮುರಿದಾಗ ತಾನಿಲ್ಲದೆ ಆಸರೆಯೇ ಇಲ್ಲ, ಜೀವನವೇ ಇಲ್ಲ ಎಂಬಂತಿದ್ದ ಊರುಗೋಲು ತಾನು ಎದ್ದು ನಡೆದಾಡುವಂತಾದ ಮೇಲೆ ಮೂಲೆಪಾಲು.ಅಕಸ್ಮಾತ್, ಆ ಊರುಗೋಲನ್ನು ನಾವು ಬಿಡುವುದಿಲ್ಲವೆಂದು ಸುತ್ತಲಿನವರು ಸುಮ್ಮನಿರುವರೇ..? ಊರುಗೋಲಿಗೆ ಮಾತ್ರವಲ್ಲ, ಮನುಷ್ಯರಿಗೂ ಅದೇ ಪಾಡೇ. ಎಂದೋ ಮಾಡಿದ ಸಹಕಾರ ಆ ಕಾಲಕ್ಕೆ ದೊಡ್ಡದಾದರೂ, ಮುಂದಿನ ದಿನಗಳಲ್ಲಿ ಕಡಿಮೆಯೇ.. ಆದರೂ ಯಾರಿಗಾದರೂ ಸಹಕಾರ ನೀಡಿದರೆ ಪ್ರತಿಫಲದ ಅಪೇಕ್ಷೆ ಇರಬಾರದು. ಪ್ರತಿಫಲದ ನಿರೀಕ್ಷೆಯಿಂದ ನೀಡುವ ಸಹಕಾರ, ಮಾಡುವ ಸಹಾಯ ವ್ಯಾಪಾರವಲ್ಲದೇ ಮತ್ತೇನು..? "ನೀ ನನಗಾದರೆ, ನಾ ನಿನಗೆ.." ಎಂಬುದೇ ಸಾರ್ವತ್ರಿಕವಾಗಿದ್ದರೂ ನನ್ನ ದೃಷ್ಠಿಯಲ್ಲಿ "ನೀ ನನಗಾಗದಿದ್ದರೂ, ನಾ ನಿನಗೆ" ಎಂದು ಬದಲಾಗಿದೆ.
ಹೆಜ್ಜೆಯಿಂದ ಪ್ರತಿಫಲದ ಕಡೆಗೆ ಯೋಚನೆಯ ಹೆಜ್ಜೆ ಸಾಗಿತು. ಎಷ್ಟಾದರೂ ಮನಸ್ಸು ಮರ್ಕಟವಲ್ಲವೇ..? ಏನನ್ನೋ ಹೇಳ ಹೊರಟು ಮತ್ತೇನನ್ನೋ ಹೇಳಿದ ಹಾಗೆ, ಹೆಜ್ಜೆಗಳೂ ಸಹಾ ಏನನ್ನೋ ಹಿಂಬಾಲಿಸ ಹೊರಟು ಮತ್ತೇನನ್ನೋ ಹಿಂಬಾಲಿಸುತ್ತವೆ, ಮತ್ತೆಲ್ಲಿಗೋ ಹೊರಟು ಬಿಡುತ್ತವೆ. ಕೆಲವೊಮ್ಮೆ ತಮಗೆ ಜೊತೆಯಾಗಬಯಸುವವರನ್ನು ತೊರೆದು, ತಾವು ಬೇರಾರಿಗೋ ಜೊತೆಗಾರರಾಗಲು ಹೊರಡುತ್ತವೆ. ಅದು ತಮ್ಮಭಿಪ್ರಾಯದ ಮೇರೆಗೋ ಅಥವಾ ಪ್ರತಿಷ್ಠೆಗೋ ಅಥವಾ ಬೇರೆಯವರ ಮೇಲಿನ ಗೌರವಕ್ಕೋ ಅಥವಾ ತಮ್ಮ ಕನಸಿನಂತೆ ಬದುಕುವುದಕ್ಕಾಗಿಯೋ ಎಂಬುದು ಮತ್ತೊಂದು ಹೆಜ್ಜೆಗೆ ಮುಖ್ಯವಾಗುವುದಿಲ್ಲ, ಬಹುಶಃ ಆ ಸಮಯಕ್ಕೆ ಸಹ ಹೆಜ್ಜೆಗೆ ಅದು ಅಪ್ರಸ್ತುತ ಕೂಡಾ.
ಉಸುಕಿನ ಮೇಲೆ ಮೂಡಿಸಿದ ಹೆಜ್ಜೆ ಗಾಳಿಗೆ ಮುಚ್ಚಿ ಹೋಗಲೇ ಬೇಕಲ್ಲವೇ? ನೀರಿನ ಮೇಲೆ ಎಂದಾದರೂ ಹೆಜ್ಜೆ ಮೂಡಿಸಲು ಸಾಧ್ಯವೇ? ಬದುಕಿನ ಹಾದಿಯೂ ಹಾಗೆಯೇ..ಹೆಜ್ಜೆಗಳನ್ನು ಒಡಮೂಡಿಸುತ್ತದೆ, ಕ್ರಮೇಣ ಅದರ ಮೇಲೆ ಪ್ರಭಾವ ಬೀರುತ್ತಾ ಆ ಜೊತೆಗೂಡಿದ ಹೆಜ್ಜೆಗಳನ್ನು ಜೊತೆಗೂಡದಂತಾಗಿಸುತ್ತದೆ. ಆದರೆ, ನಂಬಿಕೆ ಜೊತೆಗಿದ್ದರೆ, ಜೊತೆಗಿರುವ ಹೆಜ್ಜೆಗಳು ಎಂದಿಗೂ ಬೇರಾಗವು. ಆದರೂ, ಹೆಜ್ಜೆಗಳು ಜೊತೆಗಿರದಿದ್ದರೂ ಮನಸ್ಸು ಜೊತೆಗಿರಬೇಕಲ್ಲವೇ..? ರಾಧೆಯ ಹೆಜ್ಜೆಗೆ ಕೃಷ್ಣ ಕೊಳಲಾದಂತೆ. ಕೃಷ್ಣನ ರಾಗಕ್ಕೆ ರಾಧೆಯ ಹೆಜ್ಜೆ-ಗೆಜ್ಜೆ-ಲಜ್ಜೆಗಳು ಒಂದಾದಂತೆ.. ನಮ್ಮ ಪಯಣದ ಹೆಜ್ಜೆಗಳು ಜೊತೆಯಾಗಿಯೇ ಸಾಗಲು ಸಾಧ್ಯವೇ..? ಕಡೇ ಪಕ್ಷ ಕನಸಿನಲ್ಲಾದರೂ..
ಬಹುಶಃ ಇಂದು ಜೊತೆಗೂಡದ ಹೆಜ್ಜೆಗಳು, ಬಾಳಯಾನದಲ್ಲಿ ನಾಳೆ ಒಂದಾಗಿ ಜೊತೆಗೂಡಿ ಪಯಣಿಸಬಹುದೇ..? ಬಹುಶಃ ಅದು ಸಾಧ್ಯವಾಗದಿದ್ದರೇ ಒಳಿತು. ಏಕೆಂದರೆ, ಕೈಗೆ ಸಿಕ್ಕ ಚಂದಿರನನ್ನು ನಿರ್ಲಕ್ಷಿಸಿ, ನಿಲುಕದ ನಕ್ಷತ್ರಕ್ಕೇ ಅಲ್ಲವೇ ಮನ ಹಾತೊರೆಯುವುದು..ಅಷ್ಟೇ ಅಲ್ಲದೆ, ಜೊತೆಗೂಡಿ ದೂರವಾಗುವುದಕ್ಕಿಂತ ದೂರವಿದ್ದರೇ ಒಳಿತಲ್ಲವೇ..?
-ವಿಭಾ ವಿಶ್ವನಾಥ್
ಭಾನುವಾರ, ಅಕ್ಟೋಬರ್ 6, 2019
ಯಾರು.. ಯಾರು ನೀ ನನಗೆ..?
ನನ್ನ ನಿನ್ನ ಪರಿಚಯಕ್ಕೆ ಇನ್ನೂ ಕೆಲವು ವರ್ಷಗಳೂ ತುಂಬಿಲ್ಲ, ಆದರೆ ನೀ ನನ್ನ ಬಾಳಿನಲ್ಲಿ ಹಾಸು-ಹೊಕ್ಕಾಗಿದ್ದು ಹೇಗೆ? ಫೋನಿನ ಕಾಲ್ ಲಿಸ್ಟ್ನಲ್ಲಿ ಹೆಚ್ಚು ಹೊತ್ತು ಮಾತನಾಡಿದ ನಂಬರ್ ಗಳಲ್ಲಿ ನಿನ್ನದೇ ಮುಂಚೂಣಿಯಲ್ಲಿದೆ. ದಿನಕ್ಕೊಂದು ಬಾರಿಯಾದರೂ ನಿನ್ನ ಹೆಸರು ನನ್ನ ಬಾಯಲ್ಲಿ ಬಾರದ ದಿನವೇ ಇಲ್ಲವೇನೋ? ಅಪ್ಪ-ಅಮ್ಮನಷ್ಟೇ ನಿನಗೂ ಪ್ರಾಶಸ್ತ್ಯ ಕೊಡುತ್ತಿದ್ದೇನೆಯೇ..? ಗೊತ್ತಿಲ್ಲ..! ನನಗೆ ಅರಿವಿಲ್ಲದೆಯೇ ನಿನ್ನ ಹೆಸರು ನನ್ನ ಬಾಯಲ್ಲಿ ಬಂದುಬಿಡುತ್ತದೆ. ಅಂದು ಅಮ್ಮ "ಅಷ್ಟೊಂದು ಮಾತನಾಡ್ತೀಯಲ್ಲ ಅವನ ಬಗ್ಗೆ ಅದು ಅಷ್ಟೊಂದು ಚೆನ್ನಾಗಿ ಕಾಣಿಸುವುದಿಲ್ಲ" ಎಂದಾಗಲೇ ನನಗೆ ಅರಿವಾಗಿದ್ದು ನೀನು ನನ್ನ ದಿನಚರಿಯ ಅಂಗವೇ ಆಗಿಹೋಗಿದ್ದೀಯಾ ಎಂದು.. ಯಾಕೆ ಹೀಗ್..? ಅಷ್ಟಕ್ಕೂ ಯಾರು.. ಯಾರು ನೀ ನನಗೆ..?
ಯಾರಾದರೂ ನಮ್ಮ ಜೀವನದಲ್ಲಿ ಬಂದರೆ ಅದಕ್ಕೊಂದು ಕಾರಣವಿರುತ್ತದಂತೆ, ಅವರು ಒಂದಲ್ಲಾ ಒಂದು ರೀತಿಯ ಖುಷಿಗೋ, ದುಃಖಕ್ಕೋ ಅಥವಾ ಜೀವನದ ಪಾಠಕ್ಕೋ ಕಾರಣವಾಗುತ್ತಾರಂತೆ..ಹೌದಾ..? ನೀ ನನ್ನ ಜೀವನದಲ್ಲಿ ಬಂದೆಯೋ..? ಅಥವಾ ನಾನೇ ನಿನ್ನ ಜೀವನದಲ್ಲಿ ಬಂದೆನೋ..? ತಿಳಿಯುತ್ತಿಲ್ಲ..! ಕಷ್ಟವೆಂದಾಗ ಅಮ್ಮನಂತೆ ಮಮತೆಯ ಮಾತನಾಡಿದವ, ಅಪ್ಪನಂತೆ ಹಿತ ನುಡಿಯನ್ನಾಡಿದವ,ಅಣ್ಣನ ತಾಳ್ಮೆಯನ್ನು ನೆನಪಿಸಿದವ ಹಾಗೆಯೇ ಎಲ್ಲಾ ಸಂದೇಹಗಳಿಗೆ ಉತ್ತರ ನೀಡಿದವ, ಶಿಕ್ಷಣದಲ್ಲಿ ಮುಂದೇನು ಎಂಬುದರಿಂದ ಹಿಡಿದು ನನ್ನೆಲ್ಲಾ ಹುಚ್ಚು ಪ್ರಶ್ನೆಗಳಿಗೆ ಬೇಸರಿಸಿಕೊಳ್ಳದೆ ಉತ್ತರಿಸಿ ನನ್ನಲ್ಲಿ ಸ್ಥೈರ್ಯ ತುಂಬಿದವ, ಕೆಲಸದಲ್ಲಿನ ನನ್ನೆಲ್ಲಾ ತಪ್ಪುಗಳನ್ನು ತಾಳೆಯಿಂದ ಸಹಿಸಿಕೊಂಡು ತಿದ್ದಿದವ, ಇಷ್ಟೆಲ್ಲಾ ಮಾಡಿದರೂ ಅದರ ಅರಿವಿರದಂತೆಯೇ ಇರುವವ.. ಆದರೆ ಏನೆಂದು ಕರೆಯಲಿ ನಿನ್ನನು ನಾ? ಅಷ್ಟಕ್ಕೂ ಯಾರು.. ಯಾರು ನೀ ನನಗೆ..?
ನೀನು ನನ್ನ ಜೀವನದಲ್ಲಿ ಬರದೇ ಇದ್ದಿದ್ದರೆ ಚೆನ್ನಾಗಿತ್ತೇನೋ..? ಕೆಲವು ಬಂಧಗಳೇ ಹಾಗೇ, ತಿಳಿಯುವ ಮುನ್ನವೇ ಹತ್ತಿರವಾಗಿ ದೂರಾಗುವ ಹೊತ್ತಿಗೆ ಅದರ ನೋವಿನ ಅರಿವು ಮೂಡಿಸುತ್ತವೆ. ಹೆಣ್ಣುಮಕ್ಕಳಿಗೇ ಆ ನೋವಿನ ಬಿಸಿ ಹೆಚ್ಚು ಅನ್ನಿಸುತ್ತದೆ..! ಹೆಣ್ಣಿಗೇ ಅಲ್ಲವೇ ಭಾವದ ನಂಟು ಹೆಚ್ಚು. ಮೀರಾ ಕೃಷ್ಣನನ್ನು ಹಚ್ಚಿಕೊಂಡಳು ಆದರೆ ಕೃಷ್ಣ..? ಮೀರಾ-ಗಿರಿಧರರ ಸಂಬಂಧದಂತೆಯೇ ಇದು..? ಮೀರಾಳಿಗೆ ಕೃಷ್ಣ ಗೆಳೆಯನೇ..? ಪ್ರೇಮಿಯೇ..? ಬಳಗವೇ..? ನಂಟನೇ..? ಅರಿವಿಲ್ಲ.. ಆದರೆ ಆತ್ಮಸಖನಂತೂ ಹೌದು.. ಆತ್ಮಸಖನೆಂಬುವವನು ಪ್ರೇಮಿ,ಗೆಳೆಯ,ಇನಿಯ ಎಲ್ಲಾ ಸಂಬಂಧಗಳನ್ನೂ ಮೀರಿದವನು. ನೀ ನನ್ನಾಅತ್ಮಸಖನೇ..? ಗೊತ್ತಿಲ್ಲ..! ಅರಿವಾಗಲು ಇದು ಮೀರಾ-ಮಾಧವರ ಕಾಲವಲ್ಲವಲ್ಲಾ.. ಹಾಗಾದರೆ ಯಾರು.. ಯಾರು ನೀ ನನಗೆ..?
ನೀನು ಮನೆಯಲ್ಲಿರುವಾಗ ನಿನ್ನ ಕುಟುಂಬದವರ ಜೊತೆ ಹೆಚ್ಚು ಕಾಲ ಕಳೆಯಬೇಕೆಂದುಕೊಳ್ಳುತ್ತೀಯ, ಆದರೆ ಸಮಯ ಕೊಡಲು ಸಾಧ್ಯವಾಗುತ್ತಿಲ್ಲ ಎಂಬ ಬೇಸರವನ್ನೂ ವ್ಯಕ್ತಪಡಿಸುತ್ತೀಯ. ದಿನಾ ನಾವು ಮಾತನಾಡುವ ಆ ಕ್ಷಣಗಳನ್ನೂ ಅವರಿಗೇ ನೀಡಿಬಿಡು. 5 ರಿಂದ 50 ನಿಮಿಷಗಳವರೆಗೂ ನನ್ನ-ನಿನ್ನ ಮಾತು-ಕಥೆ ಸಾಗಿದ್ದಿದೆ. ಅವೆಲ್ಲವೂ ತಳ್ಳಿಹಾಕುವಾ ಅಥವಾ ಪ್ರಯೋಜನಕ್ಕೆ ಬಾರದ ಮಾತುಗಳೇನೂ ಅಲ್ಲ. ಆದರೆ ಮಾತನಾಡದಿದ್ದರೆ ಆಗುವ ನಷ್ಟವೂ ಏನೂ ಇಲ್ಲ. ಅಷ್ಟಕ್ಕೂ ನನ್ನೆಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡಬೇಕೆಂಬ ನಿಯಮವೇನೂ ಇಲ್ಲವಲ್ಲಾ. ತನಗೆ ತೊಂದರೆಯಾದರೂ ಹೇಳಿಕೊಳ್ಳಲಾಗದ ಮಗುವಿನಂತಾ ಮನಸ್ಸಿನವನು ನೀನು. ಅಷ್ಟಕ್ಕೂ ನಾನು ನಿನ್ನಲ್ಲಿ ಹೆಚ್ಚು ಮಾತನಾಡುವುದು ಫೋನಿನಲ್ಲಿಯೇ. ಯಾಕೆ ಗೊತ್ತಾ? ನಿನ್ನ ಭಾವನೆಗಳನ್ನು ನೇರವಾಗಿ ಕಾಣುವ ಧೈರ್ಯ ನನಗಿಲ್ಲ. ಏಕೆಂದರೆ, ನಿನ್ನ ಕಣ್ಣಿನಲ್ಲಿ ಕಾಣುವ ಒಂದು ಸಣ್ಣ ಅಸಹನೆಗೆ ನನ್ನ ಕುತೂಹಲವೇ ಇಂಗಿಹೋಗಬಹುದೇನೋ..!ಪುಣ್ಯಕ್ಕೆ, ಇದುವರೆಗೂ ಅಂತಹದ್ದೇನೂ ಘಟಿಸಿಲ್ಲ, ಮುಂದೆಂದೂ ಹಾಗಾಗಬಾರದಲ್ಲ.. ಅದೇಕೋ ನೀ ಹೇಳುವ ಪ್ರತಿಯೊಂದು ಮಾತುಗಳೂ, ಚಿಂತನೆಗಳು ಮನದಾಳಕ್ಕೆ ಇಳಿದುಬಿಡುತ್ತವೆ. ಕೆಲವೊಮ್ಮೆ ಒಪ್ಪಿಕೊಳ್ಳಲು ಕಷ್ಟ ಎನಿಸಿದರೂ ಸತ್ಯವೇ ಅಲ್ಲವೇ? ಆದರೂ ನಿನ್ನ ಮಾತುಗಳಿಗೆ ನಾನು ಅಷ್ಟು ಬೆಲೆಕೊಡುವುದಾದರೂ ಏಕೆ..? ನೀ ಯಾರೋ ಆದರೆ ನಾನಂತೂ ನಿನ್ನ ಹಿತೈಷಿ ಅಷ್ಟೇ. ಅಷ್ಟಕ್ಕೂ ನಾನು ಹಿತ ಬಯಸಲು ಯಾರು.. ಯಾರು ನೀ ನನಗೆ..?
ದೇವರನ್ನು ಯಾರು ಕಂಡಿದ್ದಾರೋ, ಬಿಟ್ಟಿದ್ದಾರೋ ಗೊತ್ತಿಲ್ಲ. ಆದರೆ ನಾನಂತೂ ಕಂಡಿಲ್ಲ. ಬಹುಷಃ ಅವನೂ ನಿನ್ನಂತೆಯೇ ಇರಬಹುದೋ ಏನೋ ಗೊತ್ತಿಲ್ಲ. ಯಾಕೆ ಹೀಗನ್ನುತ್ತಿದ್ದೇನೆ ಗೊತ್ತಾ? ನಾ ನಿನ್ನಿಂದ ದೂರ ಹೋಗುವ ಪ್ರಯತ್ನದಲ್ಲಿ ನಾನು ಬದಲಾಗುತ್ತಿದ್ದೇನೆ. ಆದರೂ ನೀನು ಅದನ್ನು ಮನಸ್ಸಿನಲ್ಲಿಟ್ಟುಕೊಳ್ಳದೆ ಮೊದಲಿನ ರೀತಿಯೇ ನಡೆದುಕೊಳ್ಳುತ್ತಿದ್ದೀಯ. ಬೈದು ಹೊರಹೋಗು ಎಂದು ಹೇಳುವ ಸಂಧರ್ಭ ಸೃಷ್ಟಿಸಿ ಹೊರಹೋಗೋಣ ಎಂದುಕೊಂಡರೂ ನಿನ್ನ ಕ್ಷಮಾಗುಣ ಎಲ್ಲದಕ್ಕೂ ಅಡ್ಡಿಪಡಿಸುತ್ತಿದೆ. ಕ್ಷಮಿಸಿ ದೇವರಾಗಿ ಬಿಡುತ್ತೀಯ ಅಲ್ಲವೇ..? ದೇವರನ್ನೇ ನಂಬದ ನಾನು ದೇವರನ್ನು ನಂಬುವ ನಿನ್ನನ್ನು ನಂಬಬಹುದು ಎಂದುಕೊಳ್ಳುತ್ತೇನೆ. ಯಾಕೆ ಗೊತ್ತಾ?ಕಾಣದ ದೇವರಿಗಿಂತ ಕಾಣುವ ದೇವರಂಥಹವರೇ ಮಿಗಿಲಲ್ಲವೇ..? ಆದರೂ ಆ ನಂಬಿಕೆ ಹುಟ್ಟುವಂತೆ ಮಾಡಿದ ನೀನು, ಯಾರು.. ಯಾರು ನೀ ನನಗೆ..?
ಈ ಪ್ರಶ್ನೆಗೆ ಉತ್ತರ ಹುಡುಕುವ ಹೊತ್ತಿನಲ್ಲೇ ಮತ್ತೊಂದು ಸಂದೇಹ ಕಾಡುತಿದೆ.
ತನ್ಮಯಳಾದೆನು ತಿಳಿಯುವ ಮುನ್ನವೇ...
ಕಣ್ಮರೆಯಾಗಲೇ ಹೇಳು ಮರೆಯುವ ಮುನ್ನವೇ..?
ಇದಲ್ಲದಕೂ ಉತ್ತರ ಸಿಗುವುದೇ..? ಆದಷ್ಟು ಬೇಗ ಉತ್ತರ ಹೇಳುವೆಯಾ..?
ಆದರೆ ಉತ್ತರ ಹೇಳುವ ಮುನ್ನ ನನ್ನದೊಂದು ಪ್ರಶ್ನೆ. ನಾ ನಿನಗೆ ಪ್ರಶ್ನೆ ಕೇಳಲು, ನೀ ನನಗೆ ಉತ್ತರಿಸಲು, ಯಾರು.. ಯಾರು ನೀ ನನಗೆ..?
-ವಿಭಾ ವಿಶ್ವನಾಥ್
ಗುರುವಾರ, ಅಕ್ಟೋಬರ್ 3, 2019
ಭಾವಶರಧಿಯಲ್ಲೊಂದು ಸುತ್ತು
ಇಂತಹಾ ಎಷ್ಟೋ ಬಂಧಗಳಿಗೆ ಹೆಸರಿಡುವುದು ಅಸಾಧ್ಯವೇ ಸರಿ. ಎಲ್ಲದಕ್ಕೂ ಹೆಸರಿಡುವೆನೆಂದು ಹೊರಡುವುದಾದರೆ ಮೀರಾ-ಮಾಧವರ ಬಂಧಕ್ಕಿರುವ ಹೆಸರೇನು..? ಬಂಧಗಳು ಧೀರ್ಘಕಾಲ ಉಳಿಯುವುದೋ ಇಲ್ಲವೋ ಎಂಬುದು ಆಯಾ ವ್ಯಕ್ತಿಗಳಿಗೆ ಸಂಬಂಧಿಸಿದ ವಿಚಾರ. ಬದುಕಲ್ಲಿ ಮುಂದೆ ಈಗ ಸಿಕ್ಕಿರುವವರಿಗಿಂತ ಮೌಲ್ಯವುಳ್ಳ ವ್ಯಕ್ತಿಗಳು ಸಿಗಬಹುದು.. ಅಪರಿಚಿತತೆಯಿಂದ ಪರಿಚಿತತೆಯೆಡೆಗೆ ಹೋಗುವ ಚಲನೆ ಸಂತಸ ನೀಡುವುದು ಹೌದಾದರೂ, ಪರಿಚಿತತೆಯಿಂದ ಅಪರಿಚಿತತೆಗೆ ಚಲಿಸುವ ಹಿಮ್ಮುಖ ಕಾಲಚಕ್ರ ನಿಜಕ್ಕೂ ಯಾತನಾದಾಯಕ.
ಬದುಕಿನ ದೋಣಿಯಲ್ಲಿ ಕೆಲವೊಮ್ಮೆ ಸಹಪ್ರಯಾಣಿಕರಾಗುತ್ತೇವೆ. ಆದರೆ, ಅವರೊಂದಿಗೇ ಜೀವನಪೂರ್ತಿ ಇರುತ್ತೇವೆ ಎಂದು ಭಾವಿಸುವುದು ತಪ್ಪಾಗುತ್ತದೆ. ಅವರಿಲ್ಲದೇ ಬದುಕು ಸಾಗುವುದಿಲ್ಲವೇ..? ಕಂಡಿತಾ, ಯಾರಿಲ್ಲದೆಯೂ ಬದುಕು ಸಾಗುತ್ತದೆ. ಇಷ್ಟು ದಿನ ನಮ್ಮ ಬದುಕಲ್ಲಿ ಅವರೇ ಇದ್ದರೇ..? ಜೊತೆಯಲ್ಲಿ ಪ್ರಯಾಣಿಸಿದ ನಂತರ ಮತ್ತೆ ಒಬ್ಬರೇ ಪ್ರಯಾಣಿಸುವುದು ಕೊಂಚ ಕಷ್ಟವಾಗಬಹುದು ಆದರೆ ಅಸಾಧ್ಯವಂತೂ ಅಲ್ಲ. ಅಲ್ಲವೇ..? ಆದರೆ ಹಾಗೆ ಬಂದು ಹೋದ ಕೆಲವರಿಂದ ನಮ್ಮ ಬದುಕಿನಲ್ಲಿ ಮಹತ್ತರ ಬದಲಾವಣೆಗಳಂತೂ ಆಗುತ್ತವೆ. ಆ ಬದಲಾವಣೆ ತಂದವರ ಬದುಕಲ್ಲಿ ಮತ್ತಾವುದೋ ಕಹಿಸತ್ಯ ಅಡಗಿರಬಹುದು, ಅವರು ಕಲಿತ ಮಹತ್ತರ ಅನುಭವದ ಪಾಠ ಅದಾಗಿರಬಹುದು. ಆ ಕಾಳಜಿಯ ಹಿಂದೆ ನನಸಾಗದ ಅವರ ಕನಸನ್ನು ನಿಮ್ಮ ಮೂಲಕ ನನಸು ಮಾಡಿಕೊಳ್ಳುವ ಆಸೆ ಇರಬಹುದು. ಪ್ರತಿ ಮಮತೆ, ಕಾಳಜಿಗೂ ಪ್ರತಿಫಲ ಬಯಸದ ನಿಸ್ವಾರ್ಥತೆಯ ಹಿಂದೆ ನಿರ್ಮಲ ಅಂತಃಕರಣ ಅಡಗಿರುತ್ತದೆ, ಮೃದು ಮನಸ್ಸಿರುತ್ತದೆ. ಅದು ಮತ್ತೊಂದು ಭಾವವನ್ನು ಸೃಷ್ಟಿಸ ಹೊರಟಲ್ಲಿ ಕೀಳಾಗಬಹುದು. ಪ್ರತಿ ಕಾಳಜಿ, ಮಮಕಾರಕ್ಕೂ ಪ್ರತಿಫಲ ಬಯಸಿದರೆ ಅದು ವ್ಯವಹಾರ ಎಂದೆನಿಸಿಕೊಳ್ಳುವುದಿಲ್ಲವೇ..? ವ್ಯಾವಹಾರಿಕ ಸಂಬಂಧಗಳ ಆಯಸ್ಸು ಕೆಲಕಾಲ ಮಾತ್ರವೇ.. ಆದರೆ, ನಿಸ್ವಾರ್ಥತೆಯಿಂದ ಮಾಡುವ ಸಹಕಾರ ನೀಡುವ ತೃಪ್ತಿ ಸಾಕು ನೆಮ್ಮದಿಯಿಂದ ಜೀವಿಸಲು.
ಸಹಾಯ ಮಾಡಲು, ಸಹಕಾರ ನೀಡಲು ಇಲ್ಲಿ ನಿರ್ದಿಷ್ಟ ಕಾರಣಗಳೇ ಬೇಕಿಲ್ಲ. ಅಂತಸ್ತು, ಅಂದ-ಚೆಂದ ಎಲ್ಲವೂ ನಗಣ್ಯ. ಮನಸ್ಸಿನ ಸೌಂದರ್ಯ, ಒಳ್ಳೆಯತನ, ಆದರ್ಶ, ಒರಟುತನದ ಹಿಂದೆ ಅಡಗಿರುವ ಕಾಳಜಿ ಇವಿಷ್ಟೇ ಸಾಕಲ್ಲವೇ ಅವರಿಗೆ ಸಹಕಾರ ನೀಡಲು..
ಅವರ ಕಣ್ಣಲ್ಲಿ ಕಾಣುವ ನಂಬಿಕೆ, ಭರವಸೆ ಮತ್ತೊಬ್ಬರ ಬದುಕಿನಲ್ಲಿ ನೀಡುವ ಉತ್ತೇಜನದ ಅರಿವು ಅವರಿಗಿದೆಯೋ ಇಲ್ಲವೋ ಗೊತ್ತಿಲ್ಲ.. ಆದರೆ ಆ ಕ್ಷಣದಲ್ಲಿ ಅದು ನೀಡುವ ಆತ್ಮವಿಶ್ವಾಸ ಪದಗಳಲ್ಲಿ ಹಿಡಿದಿಡಲು ಅಸಾಧ್ಯ. ಎಲ್ಲರೂ ಕೈಬಿಟ್ಟು, ಎಲ್ಲವೂ ಮುಗಿಯಿತು ಎನ್ನುವಾಗ ಸಿಗುವ ಆ ಸಾಂತ್ವಾನದ ಮಾತು ಬದುಕನ್ನೇ ಬದಲಿಸಬಲ್ಲದು. ಜೊತೆ ನಿಲ್ಲದಿದ್ದರೂ ಪರವಾಗಿಲ್ಲ ಆ ಒಂದು ಮಾತು ಸಾಕು ಬದುಕಿನ ದಿಕ್ಕನ್ನೇ ಬದಲಾಯಿಸಲು.
"ಕರ್ಮಣ್ಯೇ ವಾಧಿಕಾರಸ್ತೇ ಮಾ ಫಲೇಶು ಕದಾಚನಾ" ಎಂದಿದ್ದಾನೆ ಕೃಷ್ಣ ಭಗವದ್ಗೀತೆಯಲ್ಲಿ. ನಿನ್ನ ಕೆಲಸವನ್ನು ನೀನು ಮಾಡು ಅದರ ಫಲಾಫಲವನ್ನು ನಿರೀಕ್ಷಿಸಬೇಡ ಎಂಬುದು ಅದರ ಅರ್ಥ. ಬದುಕಿನ ಕರ್ಮಫಲವೂ ಹೀಗೇ ಅಲ್ಲವೇ..? ಒಬ್ಬರಿಗೆ ಒಳಿತು ಮಾಡಿದರೆ ಅದು ನಮಗೆ ಮತ್ತಾವುದೋ ರೀತಿಯಲ್ಲಿ ತಿರುಗಿ ಬರುತ್ತದೆ.
ಫಲಾಫಲಗಳನ್ನು ನಿರೀಕ್ಷಿಸುತ್ತಾ ಕುಳಿತಾಗ ಮತ್ತೊಬ್ಬರು ನಮ್ಮ ನಿರೀಕ್ಷೆಗೆ ತಕ್ಕಂತೆ ಪ್ರತಿಕ್ರಿಯಿಸದಿದ್ದಾಗ ಅಘಾತವಾಗುವುದು ಸಹಜವೇ.. ಅದಕ್ಕಿಂತ ನಿರೀಕ್ಷೆಯೇ ಇಲ್ಲದಿದ್ದರೆ ಒಳಿತಲ್ಲವೇ..? ನಿರೀಕ್ಷೆ ಇಲ್ಲದೆ, ಪ್ರೀತಿ, ಕಾಳಜಿ ತೋರದೆ ಸುಮ್ಮನಿರಲು ನಾವೆಲ್ಲಾ ಬುದ್ದರಲ್ಲ ಎಂಬುವುದನ್ನು ನಾನು ಒಪ್ಪಿಕೊಳ್ಳುವೆ. ಆದರೆ, ಕೆಲವೊಮ್ಮೆ ಅಂಕೆಯಲ್ಲಿರದ ಭಾವನೆಗಳಿಂದ ನೋವು ಅನುಭವಿಸುವುದೇ ಹೆಚ್ಚು. ಎರಡು ದಡಗಳು ಸಮಾನಾಂತರವಾಗಿ ಬಾಳಬಹುದು ಅಷ್ಟೇ.. ಒಂದಾಗಲು ಸಾಧ್ಯವಿಲ್ಲ.
ಭಾವ ಶರಧಿಯಲ್ಲಿ ಹಾಗೆ ಸುಮ್ಮನೆ ಒಂದು ಸುತ್ತು ಅಷ್ಟೇ.. ನಿಮ್ಮ ಅಭಿಪ್ರಾಯಗಳು ನಿಮ್ಮ ನಿಮ್ಮ ಸ್ವಂತ. ಇದು ನನ್ನ ಅಭಿಪ್ರಾಯವಷ್ಟೇ.. ಒಬ್ಬರ ಆಲೋಚನೆ ಮತ್ತೊಬ್ಬರದಕ್ಕಿಂತ ಭಿನ್ನ. ಅಲ್ಲವೇ..? ನನ್ನ ಹುಚ್ಚು ಆಲೋಚನೆಯಲ್ಲಿ ಇದೂ ಒಂದು ಅಷ್ಟೇ..
~ವಿಭಾ ವಿಶ್ವನಾಥ್
ಸೋಮವಾರ, ಸೆಪ್ಟೆಂಬರ್ 2, 2019
ಮೊಬೈಲೇ ಮಕ್ಕಳ ಲೋಕವಮ್ಮಾ..
ಇವತ್ತು ಬಸ್ಸಿನಲ್ಲಿ ಪ್ರಯಾಣಿಸುತ್ತಿರುವಾಗ ಬಸ್ ರಶ್ ಇದ್ದುದರಿಂದ ಸಹಪ್ರಯಾಣಿಕರೊಬ್ಬರ ಮಗುವನ್ನು ನನ್ನ ಪಕ್ಕದಲ್ಲಿದ್ದವರು ಕರೆದು ಕೂರಿಸಿಕೊಂಡರು. ಮಗು ತನ್ನ ಅಪ್ಪನನ್ನು, ಅಮ್ಮನನ್ನು ಗಣನೆಗೇ ತೆಗೆದುಕೊಳ್ಳದೆ ಅವರ ಮೊಬೈಲ್ ಕೇಳಿ ಪಡೆದುಕೊಂಡಿತು. ವಯಸ್ಸು 3 ರಿಂದ 4 ವರ್ಷ ಇರಬಹುದೇನೋ ಅಷ್ಟೇ.. ಮೊಬೈಲ್ ಪಡೆದುಕೊಂಡು ಅದರಲ್ಲಿ ಯೂಟ್ಯೂಬ್ ವೀಡಿಯೋ ನೋಡುವುದರಲ್ಲೇ ಅದು ಮಗ್ನವಾಗಿ ಹೋಯಿತು. ಸುತ್ತಲಿನ ಜನರ, ಜಗತ್ತಿನ, ತನ್ನವರ ಯಾರ ಪರಿವೆಯೂ ಅದಕ್ಕಿಲ್ಲ. ಮೊಬೈಲ್ ಮಾತ್ರ ನನ್ನ ಲೋಕವಯ್ಯಾ ಎಂಬಂತಿತ್ತು ಅದರ ನಡವಳಿಕೆ. ಮೊಬೈಲ್ ಇರುವವರೆಗೂ ಯಾರ ಹತ್ತಿರವೂ ಮಾತಿಲ್ಲ ಕತೆಯಿಲ್ಲ. ಪೂರ್ತಿ ಗಮನ ಮೊಬೈಲ್ ಮೇಲೆಯೇ.. "ಸ್ಕೂಲ್ ಗೆ ಹೋಗ್ತಾ ಇದ್ದೀಯಾ ಪುಟ್ಟಾ?" ಅಂದರೂ ಮಾತಲ್ಲ. "ನಿನ್ನ ಹೆಸರೇನು?" ಅಂದ್ರೂ ಮಾತೇ ಬರದೇ ಇರೋ ಮಗುವಿನ ತರಹ ಕೂತಿತ್ತು. ಕಾಲ್ ಬಂತೂ ಅಂತಾ ಅವರಪ್ಪನಿಗೆ ಮೊಬೈಲ್ ಕೊಟ್ಟು ಮತ್ತೆ ಮೊಬೈಲ್ ಕೊಡು ಅಂತಾ ಪೀಡಿಸುತ್ತಾ ಇತ್ತು. "ಮೊಬೈಲ್ ನ ಮತ್ತೆ ಇಸ್ಕೊಂಡ್ರೆ ನಾನು ಕಿತ್ತ್ಕೊಂಡು ಹೋಗ್ತೀನಿ" ಅಂದೆ ಅಷ್ಟೇ.. "ನಮ್ಮಪ್ಪನ ಮೊಬೈಲ್ ಅದು, ನೀನ್ಯಾಕೆ ಕಿತ್ತುಕೊತೀಯಾ? ನಾನು ಕೊಡಲ್ಲ" ಅಂತಾ ಒಂದರ ಹಿಂದೆ ಒಂದು ಪಟಾಕಿ ಸಿಡಿದಂತೆ ಮಾತು ಹೊರಬರತೊಡಗಿದವು. ಮೊಬೈಲ್ ಅಂತಾ ಬಂದ ತಕ್ಷಣ ಮಕ್ಕಳೇ ಅಷ್ಟು ಹುಷಾರಾಗಿಬಿಡುತ್ತವೇ ಅಂದರೆ ಅವರೆಷ್ಟು ಜಾಗೃತರಾಗಿಬಿಡುತ್ತಾರೆ. ಬಹುಶಃ ಈ ಜಾಗೃತ ಸ್ಥಿತಿಯನ್ನು ಮನೆಯವರ ಅಥವಾ ಅಸುರಕ್ಷತೆಯ ಭಾವದಲ್ಲೂ ಅನುಭವಿಸುವುದು ಅಸಾಧ್ಯವೇನೋ ಅನ್ನಿಸಿತು. ಇದು ಕೇವಲ ಒಂದು ದೃಷ್ಟಾಂತ ಅಷ್ಟೇ..
ಕೆಲ ದಿನಗಳ ಹಿಂದೆ ಸಂಬಂಧಿಕರ ಮಗುವಿನ ನಾಮಕರಣಕ್ಕೆ ಹೋಗಿದ್ದೆವು. ತಂದೆ-ತಾಯಿ ಇಬ್ಬರೂ ಉದ್ಯೋಗಿಗಳೇ. ಇನ್ನೂ ಒಂದು ವರ್ಷದ ಮಗು ಅಳದಂತೆ ಸುಮ್ಮನಿರಲು ಅನುಸರಿಸುತ್ತಿದ್ದ ತಂತ್ರ ಇಷ್ಟೇ. ಮಗುವಿನ ಮುಂದೆ ವಿಡಿಯೋ ಪ್ಲೇ ಆಗುತ್ತಿದ್ದ ಮೊಬೈಲ್. ಆ ಮೊಬೈಲ್ ವೀಡಿಯೋ ಕೊಂಚ ಏರುಪೇರಾದರೂ ಅಳು ತಾರಕಕ್ಕೇರುತ್ತಿತ್ತು. ಮೊಬೈಲ್ ಪ್ರಪಂಚಕ್ಕೆ ಹೀಗೇ ಒಬ್ಬೊಬ್ಬರೇ ಸದಸ್ಯರು ಸೇರ್ಪಡೆಯಾಗುತ್ತಲೇ ಇದೆ.
ಇದೆಲ್ಲದರ ಪರಿಣಾಮ ಹೇಗಿರುತ್ತದೆ ಎಂದರೆ, ವಾಸ್ತವದ ಅರಿವೇ ಅವರುಗಳಿಗೆ ಇರುವುದಿಲ್ಲ. ಎಲ್ಲರೂ ಅನಿಮೇಟೆಡ್ ಲೋಕದ ಸಂಚಾರಿಗಳಾಗಿಬಿಟ್ಟಿರುತ್ತಾರೆ.
ಅತ್ಯಂತ ಟ್ರಾಫಿಕ್ ಇರುವ ರೋಡ್ ನಲ್ಲಿ ಕಾಯುವ ತಾಳ್ಮೆ ಇಲ್ಲದ ಮಗು ಹೇಳುತ್ತದೆ. "ಆ ವೆಹಿಕಲ್ ಮೇಲಿಂದ ಫ್ಲೈ ಮಾಡಿಕೊಂಡು ಹೋಗೋಣ. ಸುಮ್ನೆ ಯಾಕೆ ಕಾಯಬೇಕು..? ಆ ವೀಡಿಯೋ ಗೇಮ್ ಅಲ್ಲಿ ಹಾಗೇ ತಾನೆ ಮಾಡೋದು? ನೆಕ್ಸ್ಟ್ ವೆಹಿಕಲ್ ಗೆ ಗುದ್ದಿದ್ರೆ ಆಗ ಅದು ಅಲ್ಲಿಂದ ಮಾಯ ಆಗುತ್ತೆ. ಆಗ ನಾವು ಬೇಗ ಹೋಗಬಹುದು." ಮಗನ ಆಲೋಚನಾ ರೀತಿಗೆ ಅಪ್ಪ ಸುಸ್ತೋ ಸುಸ್ತು.
ಕೆಲ ದಿನಗಳ ಹಿಂದೆ ಗನ್ನಿಕಡದ ಹೊಳೆಯ ಹತ್ತಿರ ಹೋಗಿದ್ದಾಗ ಮತ್ತೊಂದು ಮಾತುಕತೆ ಕಿವಿಯ ಮೇಲೆ ಬಿತ್ತು. ಹೊಳೆಯ ರಭಸದ ಆ ನೀರನ್ನು ನೋಡಿ ಮಗುವೊಂದು ಅಮ್ಮನನ್ನು ಕೇಳುತ್ತಿತ್ತು.. "ಮಮ್ಮಾ, ಈಸ್ ದಿಸ್ ರಿಯಲ್ ವಾಟರ್..?" ನಿಸರ್ಗದ ಕೌತುಕಗಳೂ ಕೂಡಾ ಅವರಿಗೆ ವಿಸ್ಮಯ. ಹೊಳೆಯಲ್ಲಿ ತೇಲಿ ಹೋಗುತ್ತಿದ್ದ ಕಟ್ಟಿಗೆ ತುಂಡು ಕೂಡಾ ಅಲಿಗೇಟರ್ ಅಂತೆ ಕಂಡಿತ್ತು. ಮೊಬೈಲ್ ಲೋಕದವರ ವಸ್ತುಸ್ಥಿತಿ ಹೀಗೆಯೇ ಅನ್ನಿಸಿಬಿಟ್ಟಿತ್ತು.
ಮುಂದೆ ಮುಂದೆ ಮೊಬೈಲ್ ಗಳಲ್ಲೇ ಸಂಪೂರ್ಣ ಮುಳುಗಿ ಹೋಗಿ ಮೊಬೈಲ್ ನನ್ನ ಪ್ರಪಂಚ ಎಂದರೂ ಆಶ್ಚರ್ಯಪಡಬೇಕಾದುದೇನಿಲ್ಲ.
~ವಿಭಾ ವಿಶ್ವನಾಥ್
(ಫೋಟೋ: ಇಂದು ಬಸ್ ನಲ್ಲಿ ಮೊಬೈಲ್ ನಲ್ಲಿ ವೀಡಿಯೋ ನೋಡುತ್ತಲೇ ಮುಳುಗಿ ಹೋಗಿದ್ದ ಪೋರನದ್ದು)
ಶುಕ್ರವಾರ, ಮೇ 17, 2019
ದೇವರಿಗಿಂತ ದೊಡ್ಡವರು
ದೈವತ್ವಕ್ಕೇರಿದ ದೇವರು ಕೂಡಾ ಬೆಳೆದಿರುವುದು ಬಾಲ್ಯದಿಂದಲೇ, ಅಲ್ಲವೇ? ಬಾಲ್ಯದ ಮುಗ್ದತನ, ಬೆಳೆದು ನಿಂತ ದೇವರಿಗಿಲ್ಲ. ದೇವಾನುದೇವತೆಗಳಲ್ಲಿ ಬರುವ ಅಸೂಯೆ ಮುದ್ದು ಮಕ್ಕಳಲ್ಲಿ ಇರುವುದೇ ಇಲ್ಲ. ಅಲ್ಲದೇ ಪುರಾಣದ ಪ್ರಕಾರ 14 ವರ್ಷದವರೆಗೂ ಮಕ್ಕಳು ಮಾಡುವ ತಪ್ಪಿಗೆ ಲೆಕ್ಕ ಇಡುವುದಿಲ್ಲವಂತೆ, ಪಾಪ-ಪುಣ್ಯದ ಲೆಕ್ಕಗಳೇನಿದ್ದರೂ ಮಕ್ಕಳು ಪ್ರಬುದ್ದರೆನಿಸಿಕೊಂಡ ಮೇಲೆಯೇ. ಆದರೆ ದೇವರ ವಿಚಾರಗಳು ಹಾಗಲ್ಲ, ಪ್ರತಿಯೊಂದು ನಡೆಗೂ,ಪ್ರತಿಯೊಂದು ಕ್ರಿಯೆಗೂ ಪಾಪ-ಪುಣ್ಯದ ಲೆಕ್ಕದ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
ಇದೆಲ್ಲವನ್ನೂ ಬಿಟ್ಟು ಇಷ್ಟದ ವಿಚಾರಕ್ಕೆ ಬಂದರೆ ನಮ್ಮ ಪ್ರೀತಿಯಲ್ಲಿ, ಇಷ್ಟದಲ್ಲಿ ಮಕ್ಕಳದ್ದೇ ಮೊದಲ ಪಾಲು. ದೇವರುಗಳು ಕೋಟ್ಯಾನುಕೋಟಿ ಇರಬಹುದು ಆದರೆ ಮಕ್ಕಳು ಒಬ್ಬರು ಅಥವಾ ಇಬ್ಬರೇ ಅಲ್ಲವೇ? ಅಷ್ಟಕ್ಕೂ, ದೇವರ ಮೊರೆ ಹೋಗುವುದು ಸಂಕಟ ಬಂದಾಗಲೇ ಇಲ್ಲವೇ ಏನಾದರೂ ಆಗಬಹುದು ಎಂಬ ಭಯಕ್ಕೇ ಅಲ್ಲವೇ? ಪ್ರೀತಿಯಿಂದ ದೇವರ ಮೊರೆ ಹೋಗುವವರು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಪ್ರೀತಿಯಿಂದ ದೇವರನ್ನು ಆರಾಧಿಸಿದರೆ ಸರಿ, ಆದರೆ ಭಯದಿಂದ ಎಂದಾದರೆ ಅಲ್ಲಿ ಪ್ರೀತಿ ಹುಟ್ಟುವುದು ಅಸಾಧ್ಯ. ಭಯದಿಂದ ದೊರೆತ ಗೌರವ ಎಷ್ಟು ಕಾಲ ಉಳಿಯಲು ಸಾಧ್ಯ? ಪ್ರೀತಿ, ಭಯ ಎಂಬ ಎರಡು ಆಯ್ಕೆ ಬಂದರೆ ಮೊದಲನೆಯದು ಪ್ರೀತಿಯೇ ಅಲ್ಲವೇ? ಪ್ರೀತಿಯೆಲ್ಲವೂ ಎರಕ ಹೊಯ್ದಂತಿರುವುದು ಮಕ್ಕಳಲ್ಲಿಯೇ, ಅಲ್ಲವೇ?
ಇದಲ್ಲದೇ ಇನ್ನೊಂದು ಪ್ರಸಂಗ ಇಲ್ಲಿ ನೆನಪಿಗೆ ಬರುತ್ತದೆ. ಸರ್ವೇಸಾಮಾನ್ಯವಾಗಿ ಈ ಘಟನೆ ಎಲ್ಲರ ಮನೆಯಲ್ಲೂ ನಡೆಯುವಂತಹದ್ದೇ ದೇವರ ಪೂಜೆಗೆ, ನೈವೇದ್ಯಕ್ಕೆ ಎಂದೂ ಎಂಜಲು ಮಾಡದಂತೆ ಎತ್ತಿಟ್ಟದ್ದನ್ನು ಮಕ್ಕಳು ತಿಂದರೆ ಯಾರೂ ಏನೂ ಅನ್ನುವುದಿಲ್ಲ. "ಮಕ್ಕಳಿಗಿಲ್ಲದ್ದು ದೇವರಿಗ್ಯಾಕೆ?"ಎಂಬ ಪ್ರಶ್ನೆಯಂತೂ ಮೂಡಿಯೇ ಮೂಡುತ್ತದೆ. "ಮಕ್ಕಳು ದೇವರ ರೂಪವೇ ಅಲ್ಲವಾ?" ಎನ್ನುವುದನ್ನು ಕೇಳಿರುತ್ತೇವೆ ಇಲ್ಲಾ ಹೇಳಿರುತ್ತೇವೆ. ಮಕ್ಕಳು ದೇವರಿಗಿಂತಾ ಹೆಚ್ಚೇ ಅಲ್ಲವಾ?
ಆಸ್ತಿಕತೆ-ನಾಸ್ತಿಕತೆಯ ನಡುವೆ ಬಹುದೊಡ್ಡ ವಿರೋಧಾಭಾಸಗಳಿವೆ.ಆದರೆ, ಮಕ್ಕಳು ದೇವರು ಎಂದರೆ ಯಾರೂ ವಿರೋಧಿಸಲಾರರು. ದೇವರ ಹೆಸರು ಮೊದಲು ಹಾಕಿಸಿದ ಮಾತ್ರಕ್ಕೆ ಆ ಶುಭ ಕಾರ್ಯ ಸುಗಮವಾಗಿ ನಡೆಯುತ್ತದೆಯಾ? ಎಲ್ಲವೂ ನಂಬಿಕೆ ಮತ್ತು ಕಾಲದ ಮೇಲೆ ನಿರ್ಣಯವಾಗಬೇಕಷ್ಟೇ..
ದೇವರಿಗಿಂತಾ ದೊಡ್ಡವರು ಯಾರು? ಎಂಬ ಪ್ರಶ್ನೆಗೆ ಉತ್ತರ ನೀಡುವಂತೆ ಇಲ್ಲೊಂದು ದೃಷ್ಟಾಂತದ ಕಥೆ ಇದೆ. ಅದೂ ಅಕ್ಬರ್-ಬೀರಬಲ್ ಕಥೆ.
ಅಕ್ವರ್ ಒಮ್ಮೆ ಬೀರಬಲ್ ನನ್ನು ಕೇಳುತ್ತಾನೆ. "ರಾಜ ದೊಡ್ಡವನೋ? ಅಥವಾ ದೇವರು ದೊಡ್ಡವನೋ?" ಎಂದು. ಬೀರಬಲ್ ಗೆ ಸಂದಿಗ್ಧ ಕಾಡುತ್ತದೆ. "ರಾಜ ದೊಡ್ಡವನು ಎನ್ನದಿದ್ದರೆ ರಾಜನಿಗೆ ಕೋಪ ಬರುತ್ತದೆ. ದೇವರು ದೊಡ್ಡವನು ಎನ್ನದಿದ್ದರೆ ಇಲ್ಲಿರುವವರೆಲ್ಲಾ ವಿರೋಧಿಸುತ್ತಾರೆ." ಎಂದು ಯೋಚಿಸುತ್ತಿರುತ್ತಾನೆ.
ಬೀರಬಲ್ ನ ವಿರೋದಿಗಳಿಗೆಲ್ಲಾ ಖುಷಿಯೋ ಖುಷಿ, ಇವತ್ತು ಬೀರಬಲ್ ಕಥೆ ಮುಗಿಯಿತು ಅಂತಾ. ಆದರೆ ಅವರೆಲ್ಲಾ ಮನಸ್ಸಿನಲ್ಲೇ ಮಂಡಿಗೆ ಮೆಲ್ಲುತ್ತಾ ಇರುವಾಗ ಬೀರಬಲ್ ಹೇಳಿಯೇ ಬಿಟ್ಟ "ರಾಜನೇ ದೊಡ್ಡವನು" ಅಂತಾ. ಆಗ ಅಕ್ಬರ್ ಕೇಳ್ತಾನೆ "ಅದು ಹೇಗೆ? ಎಲ್ಲರಿಗಿಂತಾ ದೇವರು ದೊಡ್ಡವನಲ್ಲವೇ?" ಎಂದು.
ಅಷ್ಟೊತ್ತಿಗೆ ಬೀರಬಲ್ ನ ಜಾಣತನದ ಉತ್ತರ ಸಿದ್ದವಾಗಿರುತ್ತದೆ." ದೇವರು ಮಾಡಲಾಗದ್ದನ್ನು ರಾಜ ಮಾಡಿದರೆ ರಾಜನೇ ದೊಡ್ಡವನಲ್ಲವಾ? ಎಂದು ಮರುಪ್ರಶ್ನೆ ಹಾಕುತ್ತಾನೆ. ಎಲ್ಲರೂ ಒಕ್ಕೊರಲಿನಿಂದ "ಹೌದು" ಎನ್ನುತ್ತಾರೆ. ಆಗ ಬೀರಬಲ್ ಹೇಳುತ್ತಾನೆ "ಯಾರಾದರೂ ತಪ್ಪು ಮಾಡಿದರೆ ಗಡಿಪಾರು ಮಾಡುವ ಅಧಿಕಾರ ದೇವರಿಗಿಲ್ಲ ಆದರೆ ರಾಜನಿಗೆ ಆ ಅಧಿಕಾರ ಇದೆ. ಆದ್ದರಿಂದ "ರಾಜನೇ ದೊಡ್ಡವನು" ಎಂದು ಹೇಳುತ್ತಾನೆ. ಬೀರಬಲ್ ನ ಜಾಣತನ ಮತ್ತೊಮ್ಮೆ ಸಾಬೀತಾಗುತ್ತದೆ. ಸಭೆಯ ತುಂಬೆಲ್ಲಾ ಗಡಚಿಕ್ಕುವ ಚಪ್ಪಾಳೆಗಳು ಪ್ರತಿಧ್ವನಿಸುತ್ತವೆ.
ಆದರೆ, ಅಕ್ಬರ್ ಗೆ ಆವತ್ತಿನಿಂದ ಸ್ವಲ್ಪ ಜಂಭ ಬಂದುಬಿಡುತ್ತದೆ. ನಾನು ದೇವರಿಗಿಂತಾ ದೊಡ್ಡವನಲ್ಲವೇ? ಎಂದು. ಜಾಣ ಬೀರಬಲ್ ಗೆ ಇದರ ಸುಳಿವು ಗೊತ್ತಾಗುತ್ತದೆ. ಹೀಗೇ ಮಾತಾಡ್ತಾ ಮಾತಾಡ್ತಾ ಇರುವಾಗ ಅಕ್ಬರ್ ಮಾತಲ್ಲಿ ಅಹಂಕಾರ ಇಣುಕುವುದು ಗೊತ್ತಾಗುತ್ತದೆ. ಉಪಾಯವಾಗಿ ಇದನ್ನು ಇಳಿಸುವ ಯೋಚನೆ ಮಾಡುತ್ತಿರುವಾಗಲೇ ಅಕ್ಬರ್ ಕೇಳುತ್ತಾನೆ "ದೇವರಿಗಿಂತ ನಾನೇ ಶ್ರೇಷ್ಟ ಎಂದು ನೀನು ಒಪ್ಪುತ್ತೀಯಲ್ಲ, ನನ್ನನ್ನು ಮೀರಿಸುವವರು ಯಾರಾದಾರೂ ಇದ್ದಾರಾ?" ಎಂದು. ಆಗ ಬೀರಬಲ್ ಹೇಳುತ್ತಾನೆ "ಮಕ್ಕಳು ಜಗತ್ತಿನಲ್ಲಿ ಎಲ್ಲರಿಗಿಂತಾ ಸರ್ವಶ್ರೇಷ್ಟ, ಅವರನ್ನು ಮೀರಿಸುವವರು ಯಾರೂ ಇಲ್ಲ" ಎಂಬುದಾಗಿ. ಅಕ್ಬರ್ ಗೆ ಸಿಟ್ಟು ಬರುತ್ತದೆ. ಸರಿ, ಹಾಗಾದರೆ ಅದನ್ನು ನಿರೂಪಿಸಿ ತೋರಿಸು ಎಂದು ಹೇಳುತ್ತಾನೆ. ಸರಿ ಎಂದ ಬೀರಬಲ್ ಆಗ ಅಲ್ಲಿಂದ ಹೊರಡುತ್ತಾನೆ.
ಮಾರನೇ ದಿನ ಸಭೆಗೆ ಎಷ್ಟೊತ್ತಾದರೂ ಬೀರಬಲ್ ಬರುವುದೇ ಇಲ್ಲ. ದೂತ ಒಬ್ಬನನ್ನು ಅವನ ಮನೆಗೆ ಕಳುಹಿಸುತ್ತಾನೆ ಅಕ್ಬರ್. ಆಗ ಬೀರಬಲ್ ಹೇಳ್ತಾನೆ "ನನ್ನ ಮಗು ಒಂದೇ ಸಮ ಹಠ ಮಾಡ್ತಾ ಇದೆ. ಅದನ್ನು ಸಮಾಧಾನ ಮಾಡಿ ಬರುತ್ತೇನೆ" ಎಂದು. ದೂತ ರಾಜಸಭೆಗೆ ಬಂದು ಹಾಗೇ ಹೇಳ್ತಾನೆ. ಮಧ್ಯಾಹ್ನವಾದರೂ ಬೀರಬಲ್ ಬರದಿದ್ದಾಗ ಅಕ್ಬರ್ ತಾನೇ ಅವನ ಮನೆಗೆ ಹೊರಡುತ್ತಾನೆ. "ಒಂದು ಮಗುವನ್ನು ಸಮಾಧಾನ ಮಾಡಲಾಗಲಿಲ್ಲವೇ ನಿನಗೆ..? ಆ ಮಗುವನ್ನು ನಾನು ಸಮಾಧಾನ ಮಾಡುತ್ತೇನೆ." ಅಂತಂದು ಮಗುವನ್ನು ಕೇಳುತ್ತಾನೆ "ಕಂದಾ, ಏನು ಬೇಕಪ್ಪಾ ನಿನಗೆ?". ಆಗ ಮಗು "ಈ ಕಬ್ಬನ್ನು ನಾಲ್ಕು ತುಂಡು ಮಾಡಿಕೊಡು " ಎನ್ನುತ್ತೆ. ಅಷ್ಟೇನಾ ಎನ್ನುತ್ತಾ ಮೀಸೆಯಂಚಿನಲ್ಲೇ ನಗುತ್ತಾ ಅಕ್ಬರ್ ಆ ಕಬ್ಬನ್ನು ತುಂಡು ಮಾಡಿಕೊಡುತ್ತಾನೆ.
ಒಂದೆರಡು ನಿಮಿಷ ಸುಮ್ಮನಾದ ಮಗು ಮತ್ತೆ ಅದನ್ನೆಲ್ಲಾ ತೆಗೆದು ಎಸೆದು ಜೋರಾಗಿ ರಂಪಾಟ ಮಾಡಲು ಶುರು ಮಾಡುತ್ತೆ. ನೆಲದಲ್ಲಿ ಬಿದ್ದು ಒದ್ದಾಡುತ್ತಾ, ಅಕ್ಬರ್ ನನ್ನು ಹೊಡೆಯುತ್ತಾ "ನಂಗಿದು ಬೇಡ, ಇದು ಚಿಕ್ಕದಾಯ್ತು, ಮತ್ತೆ ಇದನ್ನು ಮೊದಲಿನ ಹಾಗೇ ಮಾಡು. ನನಗೆ ದೊಡ್ಡ ಕಬ್ಬೇ ಬೇಕು" ಎನ್ನುತ್ತದೆ.
ಅಕ್ಬರ್ ನಿಗೆ ಈಗ ಪೀಕಲಾಟಕ್ಕಿಟ್ಟುಕೊಂಡರೆ ಬೀರಬಲ್ ಗೆ ಮೀಸೆಯ ಮರೆಯಲ್ಲೇ ನಗು. ನಂತರ, ಅಕ್ಬರ್ ನ ಈ ಒದ್ದಾಟವನ್ನು ನೋಡಲಾಗದೆ ಬೀರಬಲ್ ಮಗುವನ್ನು ಒಳಗೆ ಕಳುಹಿಸುತ್ತಾನೆ.
ಆನಂತರ ಅಕ್ಬರ್ ಗೆ ಹೇಳುತ್ತಾನೆ. "ರಾಜನನ್ನೇ ತನ್ನ ಬಳಿಗೆ ಕರೆಸಿಕೊಂಡ, ರಾಜನ ಅಸಹಾಯಕತೆಯನ್ನೇ ಎತ್ತಿ ತೋರಿಸಿದ ಮತ್ತು ರಾಜನನ್ನು ಹೊಡೆದರೂ ರಾಜ ಶಿಕ್ಷೆ ನೀಡದ ಮಗು ರಾಜನಿಗಿಂತಲೂ ಮಿಗಿಲಲ್ಲವೇ?". ಆಗ ಅಕ್ಬರ್ ಗೆ ಜ್ಙಾನೋದಯವಾಗುತ್ತದೆ. ಅಕ್ಬರ್ ಹೇಳುತ್ತಾನೆ "ಮಕ್ಕಳೇ ಎಲ್ಲರಿಗಿಂತಲೂ ದೊಡ್ಡವರು ಎಂದು".
ಅಕ್ಬರ್ ಅಂತಹಾ ರಾಜನೇ ಒಪ್ಪಿಕೊಂಡ ಮೇಲೆ ಮತ್ತೆ ನಮ್ಮದು, ನಿಮ್ಮದು ಕೊಸರಾಟ ಏನ್ರೀ? ಒಪ್ಪಿಕೊಂಡು ಬಿಡಿ "ಮಕ್ಕಳು ದೇವರಿಗಿಂತಲೂ ದೊಡ್ಡವರು" ಎಂದು.
~ವಿಭಾ ವಿಶ್ವನಾಥ್
ಭಾನುವಾರ, ಡಿಸೆಂಬರ್ 23, 2018
ಕಥೆಯುಳ್ಳ ಹಾಡಿನ ಕಥೆ
ತಂಬೂರಿ ಮೀಟಿಕೊಂಡು ಹಾಡುವವರನ್ನು ಕಂಡು, ಆ ಹಾಡುಗಳನ್ನು ಕೇಳಿ ಎಷ್ಟೋ ವರ್ಷಗಳೇ ಕಳೆದು ಹೋಗಿದ್ದವು. ನಾನು ಚಿಕ್ಕಂದಿನಲ್ಲಿದ್ದಾಗ ಹಳ್ಳಿಹಳ್ಳಿಗಳ ಮೇಲೆ ಹೋಗುತ್ತಿದ್ದವರು ಹೇಳುತ್ತಿದ್ದ ಹಾಡುಗಳನ್ನು ಕೇಳುತ್ತಿದ್ದದ್ದು ರೂಡಿ, ಹೆಚ್ಚಿನಂಶ ಅವರುಗಳು ಬರುತ್ತಿದ್ದದ್ದು ಬೆಳಗಿನ ವೇಳೆ ತಂಬೂರಿ ಮೀಟುತ್ತಾ ಹಾಡು ಹಾಡಿ ತಿಂಡಿ ತಿಂದು ಅಕ್ಕಿಯನ್ನೋ ಕಾಯನ್ನೋ ಪಡೆದುಕೊಂಡು ಹೊರಡುತ್ತಿದ್ದರು, ಅವರ ಪ್ರತಿಭೆಗೆ ಗೌರವಾರ್ಥವಾಗಿ ಹಳ್ಳಿಗಳಲ್ಲಿ ಅಕ್ಕಿ ಅಥವಾ ತೆಂಗಿನಕಾಯಿಯನ್ನೋ ಕೊಟ್ಟು ಸ್ವಲ್ಪ ಸಮಯ ಆ ಹಾಡಿನ ಕುರಿತೋ ಅಥವಾ ಹಳ್ಳಿಗಳ ಕುರಿತೋ ಮಾತನಾಡಿ ಕಳುಹಿಸಿ ಕೊಡುತ್ತಿದ್ದರು ನಂತರದ ದಿನಗಳಲ್ಲಿ ಬದಲಾದ ತಂತ್ರಜ್ಞಾನ ಯುಗದಲ್ಲಿ ಮರೆಯಾಗಿಯೇ ಬಿಟ್ಟಿದ್ದರು. ತೀರಾ ಚಿಕ್ಕ ವಯಸ್ಸಿನಲ್ಲಿ ಆ ಹಾಡುಗಳು ಅರ್ಥವಾಗುತ್ತಿರಲಿಲ್ಲ ನಂತರದ ದಿನಗಳಲ್ಲಿ ಕಥೆಗಳನ್ನು ಹೇಳುತ್ತಿದ್ದ ಆ ಹಾಡುಗಳು ಸ್ವಲ್ಪ ಸ್ವಲ್ಪ ಅರ್ಥವಾಗುತ್ತಿತ್ತು, ಆನಂತರ ಕೇಳಬೇಕೆಂದರೂ ಆ ಅವಕಾಶ ದೊರೆತಿರಲಿಲ್ಲ. ಅಚಾನಕ್ಕಾಗಿ ಈ ಅವಕಾಶ ದೊರೆತದ್ದು ಅದೃಷ್ಟ ಅಂದರೂ ತಪ್ಪಾಗಲಾರದು.
ಅಂದ ಹಾಗೆ ಇದು ಕೇಳಿದ್ದು ಹಳ್ಳಿಯಲ್ಲಲ್ಲ. ನಾನವರನ್ನು ನೋಡಲೂ ಇಲ್ಲ. ಬೆಳಿಗ್ಗೆ ನಾನು ನನ್ನ ಚಿಕ್ಕಿ(ಚಿಕ್ಕಮ್ಮ) ಜೊತೆಗೆ ಫೋನ್ ನಲ್ಲಿ ಮಾತನಾಡುತ್ತಾ ಇರುವಾಗ ಯಾರೋ ಹಾಡು ಹೇಳುತ್ತಿದ್ದದ್ದು ಕೇಳಿಸ್ತು. ಆಗ ಕೇಳಿದ್ದಕ್ಕೆ ಒಬ್ಬರು ಅಜ್ಜಿ ಇಲ್ಲೇ ಹಾಡ್ತಾ ಇದ್ದಾರೆ ಅಂದ್ರು. ಜೊತೆಗೆ ನನ್ನ ಹುಚ್ಚು ಗೊತ್ತಿದ್ದ ಅವರೂ ತಾಳು ಇಲ್ಲೇ ಕರೀತೀನಿ ಅಂದ್ರು, ನಂಗಂತೂ ತುಂಬಾ ಖುಷಿ ಆಯ್ತು. ಸರಿ, ಲೌಡ್ ಸ್ಪೀಕರ್ ಆನ್ ಮಾಡಿ ಹಾಗೇ ರೆಕಾರ್ಡ್ ಮಾಡಿಕೊಳ್ತೀನಿ ಅಂದೆ, ಸರಿ ಅಜ್ಜಿನೂ ಬಂದ್ರು ವಾಡಿಕೆಯಂತೆ ಉಭಯ ಕುಶಲೋಪರಿ ಕೂಡಾ ಆಯ್ತು, ನಂತರ ಒಂದು ಜಾನಪದ ಹಾಡನ್ನು ಶುರು ಮಾಡಿದರು.
ಶಿವ ಮತ್ತು ಗೌರಿ(ಪಾರ್ವತಿ)ಯರ ಕಲ್ಯಾಣದ ಕಥೆಯನ್ನು ಕಥಾವಸ್ತುವನ್ನಾಗಿ ಉಳ್ಳಂತಹಾ ಹಾಡು. ದೇವರು ಶಾಪಗ್ರಸ್ಥವಾಗೇ ಭೂಮಿಯಲ್ಲಿ ಹುಟ್ಟಬೇಕಾಗಿಲ್ಲ ಎಂಬುದು ಯಾಕೋ ಅಪ್ರಯತ್ನವಾಗೇ ಮನಸ್ಸಿಗೆ ಹೊಳೆಯಿತು. ನಾವು ಗೌರಿ ಹಬ್ಬವನ್ನು ಆಚರಿಸುವ ಹಿಂದಿನ ಪರಿಕಲ್ಪನೆಯೂ ಬಹುಶಃ ಈ ಪರಿಕಲ್ಪನೆಯಿಂದಲೇ ಹುಟ್ಟಿರಬಹುದೇನೋ.. ಭೂಲೋಕದ ತನ್ನ ತಾಯಿ(ತವರು) ಮನೆಗೆ ಬರುವಂತಹಾ ಸಂಧರ್ಭ..
ಶಿವ ಮತ್ತು ಪಾರ್ವತಿ ಇಬ್ಬರೂ ಸಹಾ ಭೂಲೋಕದಲ್ಲಿ ಹುಟ್ಟಿದ್ದಾರೆ ಆದರೆ ಪರಸ್ಪರರ ಪರಿಚಯವಿಲ್ಲ. ಇತ್ತ ಗೌರಿ ಹನ್ನೆರಡು ವರ್ಷಕ್ಕೆ ಮೈನೆರೆಯುತ್ತಾಳೆ, ಆಗಿನ ಸಂಪ್ರದಾಯದಂತೆ ಆಕೆಗೆ ವಿವಾಹಯೋಗ್ಯ ವಯಸ್ಸು.. ಹಾಗಾಗಿ ಮನೆಯಲ್ಲಿ ವರನನ್ನು ಹುಡುಕಲು ಶುರು ಮಾಡುತ್ತಾರೆ, ಆದರೆ ಗೌರಿಗೆ ಕೇಳುತ್ತಾರೆ ಈ ವರ ಆಗಬಹುದೇ ಎಂಬ ಪ್ರಶ್ನೆಯನ್ನು ಅವಳ ಒಪ್ಪಿಗೆಗಾಗಿ ಕೇಳುತ್ತಾರೆ, ಇದು ಆಗಿನ ಕಾಲದಲ್ಲಿದ್ದ ಸ್ವಯಂವರ ಪದ್ದತಿಯನ್ನು ನೆನಪಿಸುತ್ತದೆ, ಜೊತೆಗೆ ಸ್ತ್ರೀಯರಿಗೆ ಕೊಡುತ್ತಿದ್ದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನೂ ನೆನಪು ಮಾಡಿಕೊಡುತ್ತದೆ. ಜೊತೆಗೆ ಯಾರನ್ನೂ ಜರಿಯಬೇಡವೆಂಬ ಕಿವಿಮಾತು ಕೂಡಾ ಕೇಳಿಬರುತ್ತದೆ, ಅವರವರಿಗೆ ಅವರದ್ದೇ ಆದಂತಹಾ ವ್ಯಕ್ತಿತ್ವಗಳಿರುತ್ತವೆ, ಅವರದ್ದೇ ಆದ ಗೌರವವಿರುತ್ತದೆ ಅದು ನಮಗೆ ಸರಿ ಬರದಿದ್ದರೆ ಅದು ನಮ್ಮ ಆಲೋಚನೆಗೆ ಸಂಬಂಧಪಟ್ಟಿರುವುದಷ್ಟೇ.. ಇದು ಇಂದಿನ ದಿನಗಳಲ್ಲೂ ಎಲ್ಲರಿಗೂ ಅನ್ವಯಿಸುವಂತಹಾ ಮಾತು ಎಂದರೂ ತಪ್ಪಾಗಲಾರದು. ಈ ಎಲ್ಲಾ ಮಾತುಗಳೂ ನಡೆದು ಗೌರಿ ತಿಳಿಸಿದಂತಹಾ ವರ ಶಿವನೇ ಆಗಿ ಅವರಿಬ್ಬರ ಕಲ್ಯಾಣವಾಗುತ್ತದೆ. ರಸವತ್ತಾದ ಸಂಭಾಷಣೆಗಳಿರುವ ಈ ಹಾಡು ನಿಜಕ್ಕೂ ಆ ಪಾತ್ರಗಳನ್ನು ನಮ್ಮ ಕಣ್ಮುಂದೆ ತಂದು ನಿಲ್ಲಿಸುತ್ತದೆ.
ನಾನು ಈ ಹಾಡಿನಲ್ಲಿ ರೆಕಾರ್ಡ್ ಮಾಡಿ ಹಾಕಿರುವುದು ಕೆಲವೇ ನಿಮಿಷಗಳು. ಬಹುಷಃ ನಮ್ಮ ಮುಂದಿನ ಜನರೇಷನ್ಗಳಿಗೆ ಹೋಲಿಸಿಕೊಂಡರೆ ನಾವೇ ಲಕ್ಕಿ ಎನ್ನಿಸುತ್ತದೆ, ನಮ್ಮ ಮುಂದಿನ ಜನರೇಷನ್ಗಳು ಇದರ ಕುರಿತು ತಿಳಿದುಕೊಂಡರೂ ನೋಡುವುದು ಅಪರೂಪವೇ ಆಗಬಹುದು. ಅಷ್ಟಕ್ಕೂ ಆ ಅಜ್ಜಿಗೆ ಓದು ಬರಹ ತಿಳಿದಿಲ್ಲ, ನೆನಪಿನಶಕ್ತಿಯಿಂದಲೇ ಇಷ್ಟು ಚೆಂದವಾಗಿ ಹಾಡಬಹುದಾದರೆ ಓದು ಬರಹ ತಿಳಿದಿದ್ದರೆ..? ಅವರ ಮುಗ್ದತೆ ಕೂಡಾ ಚೆಂದವೇ.. ಅವರು ಹಾಡಿದ ನಂತರ ಕಾಣದ ಕೇಳುಗಳಾದ ನನ್ನ ಹತ್ತಿರ ಹಾಡು ಹೇಗಿತ್ತು? ಇಷ್ಟವಾಯಿತಾ? ಎಂದು ಕೇಳಿದರು. ರೆಕಾರ್ಡ್ ಮಾಡಿದ ಧ್ವನಿಯನ್ನು ಅವರಿಗೆ ಕೇಳುವ ಆಸೆ ಕೂಡಾ ಇತ್ತು. ಕೇಳಿದರು ಕೂಡಾ.. ಟೆಕ್ನಾಲಜಿ ಕೆಲವೊಮ್ಮೆ ವರ ಕೂಡಾ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳುವೆ.
ಅವರು ಹಾಡಿದ ಆ ಹಾಡು, ನಾನು ರೆಕಾರ್ಡ್ ಮಾಡಿದಷ್ಟು ನಿಮ್ಮ ಮುಂದಿದೆ, ಕೇಳಿ.. ಇದೆಲ್ಲಾ ಹುಚ್ಚಾಟ ಅನ್ನಿಸಿದರೆ ಒಮ್ಮೆ ನಕ್ಕು ಸುಮ್ಮನಾಗಿ ಅಷ್ಟೇ..
~ವಿಭಾ ವಿಶ್ವನಾಥ್
ಮಂಗಳವಾರ, ಸೆಪ್ಟೆಂಬರ್ 18, 2018
ಕನಸಿನ ಬಿಡುಗಡೆ
ಕನಸುಗಳ ನೆನಪು ಮಾಡಿಕೊಳ್ಳುತ್ತಾ ಅವುಗಳನ್ನು ಬಿಚ್ಚಿಟ್ಟು ಇರುವ ಜೀವನವನ್ನು ಕಳೆದುಕೊಳ್ಳುವ ಕಾರ್ಯವನ್ನು ನಾನು ಮಾಡುವುದಿಲ್ಲ. ಆದರೆ, ನನ್ನ ಕನಸೆಲ್ಲವೂ ನಿನಗೆ ಅರ್ಥವಾಗಿ ಅದು ಮತ್ತೊಂದು ಅನರ್ಥಕ್ಕೆ ಕಾರಣವಾಗಬಾರದಲ್ಲ, ಕನಸು ಕನಸಾಗಿಯೇ ಉಳಿದು ಬಿಡಲಿ. ಆ ಕನಸು ನನ್ನ ಕಣ್ಣಿಂದ ಕನಲಿ ಹೋಗಲಿ.ಕನಸಿನ ಬದುಕು ಕನಸಾಗಿಯೇ ಉಳಿದು ಬಿಡಲಿ. ಕಾಲದ ಕಣ್ಣಿನಲ್ಲಿ ಕನಸಾಗಿಯೇ ಕಾಣುವ ಆ ಬದುಕು ಕನಸಾಗಿಯೇ ಉಳಿದು ಬಿಡಲಿ. ಇರಲಿ, ಮತ್ತೊಂದು ವಿಷಯ, ಬಚ್ಚಿಟ್ಟ ಕನಸು ತಪ್ಪಿಸಿಕೊಂಡು ಎಲ್ಲಿಗೋ ಹೋಗಲಿಲ್ಲ. ಬದಲಿಗೆ ನಾನೇ ಆ ಕನಸನ್ನು ಬಿಡುಗಡೆ ಮಾಡಿಬಿಟ್ಟೆ.
ಆ ಕನಸು ಸಹಾ ನನ್ನೊಳಗೆ ಬಹುದಿನಗಳಿಂದ ಬಂಧಿಯಾಗಿಬಿಟ್ಟಿತ್ತು. ಅಜೀವ ಕಾರಾಗೃಹ ಶಿಕ್ಷೆ ಹೊಂದಿದ ಖೈದಿಗಳೇ ಬಿಡುಗಡೆಯಾಗುತ್ತಾರೆ. ಅದೂ ಸನ್ನಡತೆ ಎಂಬ ಕಾರಣದಿಂದ ಮುಂಚಿತವಾಗಿಯೇ ಬಿಡುಗಡೆಯಾಗುತ್ತಾರೆ. ಆದರೆ, ನನ್ನ ಒಳ್ಳೆಯ ಕನಸೇಕೆ ಬಂದಿಯಾಗಿರಬೇಕು? ಕನಸಿನ ಅಳಿದುಳಿದ ಆಯುಷ್ಯವಾದರೂ ಮತ್ತೊಬ್ಬರ ಕಂಗಳಲಿ ಜೀವಿಸಲಿ.
"ಯಾರದೋ ಕನಸು, ಮತ್ತಾರದೋ ಕಂಗಳಲಿ
ಬದುಕಿ ಬಾಳುವ ಕನಸುಗಳಿಗೆಂದಿಗೂ ಸಾವಿಲ್ಲ"
ಭವಿಷ್ಯದ ಅಮೂರ್ತ ರೂಪವೇ ನನ್ನೊಳಗೆ ಜೀವಿಸಿತ್ತು, ನನ್ನೊಳಗೊಂದಾಗಿ ಜೀವಿಸಿತ್ತು. ಬದುಕಿನ ಅವಿನಾಭಾವ ಬಂಧ ಎಂಬಂತೆ ಬದುಕಿದ್ದ ಕನಸು ಇರದೇ ಕೂಡಾ ಬದುಕಬಹುದೆಂಬುದು ಈ ಹೊತ್ತಿನಲ್ಲಿ ಅರಿವಾಗುತ್ತಲಿದೆ. ಕನಸಿನೊಡನೆಯ ನನ್ನ ಬಂಧ ಸಧ್ಯಕ್ಕೆ ನನ್ನೊಡನೆಯೇ ಮುಗಿಯಿತು. ರಕ್ತಸಂಬಂಧವೇ ಕಡಿದು ಹೋಗುವ ಈ ಹೊತ್ತಿನಲ್ಲಿ, ಎಂದೋ, ಯಾವುದೋ ಸಂಧರ್ಭದಲ್ಲಿ ನನ್ನೊಡನೆಯೇ ಜೀವಿಸಿದ್ದ ಕನಸೊಂದು ಲೆಕ್ಕವೇ..?
ನನ್ನ ಕನಸಿನ ಬದುಕಿನಂತೆಯೇ ಎಲ್ಲವೂ ನಡೆದಿದ್ದರೆ, ಎಂಬ ಪ್ರಶ್ನೆಉದ್ಭವಿಸದೇ ಇರುವುದಿಲ್ಲ. ಅಷ್ಟಕ್ಕೂ, ಆ ಕನಸು ನಿನಗೆ ತಿಳಿಯದಿದ್ದರೇನೇ ಒಳಿತು. ಕೆಲವೊಮ್ಮೆ ಬಾನಿನ ಚಂದ್ರ, ನಕ್ಷತ್ರಗಳು ಕೈಗೆ ಸಿಕ್ಕರೆಷ್ಟು ಚೆಂದ ಎನ್ನಿಸುತ್ತದೆ. ಆದರೆ ಅವುಗಳು ಕೈಗೆ ಸಿಗುವುದುಂಟೇ..? ಸಿಕ್ಕರೂ ಆ ಕ್ಷಣಕ್ಕೆ ಮಾತ್ರ ಸಂತೋಷ.. ನಂತರ ಅವುಗಳ ರಕ್ಷಣೆಯ ಕುರಿತು ಆತಂಕ ಹೆಚ್ಚಾಗುತ್ತಲೇ ಇರುತ್ತದೆ. ಚಂದ್ರ,ತಾರೆಗಳು ಬಾನಿನಲ್ಲಿ ಹೊಳೆಯುತ್ತಿದ್ದರೇನೇ ಚೆಂದ. ಕೈಗೆ ಸಿಕ್ಕರೂ ಸಿಗದಂತಹ ಚಂದ್ರನನ್ನು ಬಯಸುತ್ತಾ ಅದೇ ಬಯಕೆಯ ಬದುಕಿಗೆ ಒಗ್ಗಿಬಿಡುತ್ತೇವೆ ಮತ್ತು ಅದರಲ್ಲೇ ಸಂತೋಷವನ್ನು ಕಾಣುತ್ತೇವೆ.
ಮುಳ್ಳು ಚುಚ್ಚಿಸಿಕೊಂಡ ಕಾಲಿನ ಹಾಗೆ, ಕಳೆದು ಹೋದ ಕನಸು ಕೂಡಾ ಕಾಡುತ್ತಲೇ ಇರುತ್ತದೆ. ಮರೆಯಲು ಸಾಧ್ಯವೇ ಇಲ್ಲದ ನನ್ನ ಜೀವಿತದ ಕನಸು ಅದು. ಕನಸನ್ನು ಕಾಣಲಾಗದೆಂಬ ಕಾರಣಕ್ಕೆ ಮನಸ್ಸು ಚಡಪಡಿಸುತ್ತಲೇ ಇರುತ್ತದೆ. ಇದ್ದಾಗ ಕನಸಿನ ಬೆಲೆ ತಿಳಿಯಲಿಲ್ಲ, ಹೊರಟ ನಂತರ ಚಡಪಡಿಸುವಿಕೆ. ಮತ್ತೊಬ್ಬರ ಕಂಗಳಲ್ಲಿ ಆ ಕನಸು ಹೊಳೆದರೆ ಖುಷಿ, ಮಸುಕಾದರೆ ಮತ್ತದೇ ಕಾಡುವಿಕೆ. ಆದರೆ ಆಗ ಅದನ್ನು ಸರಿಪಡಿಸುವ ಸ್ಥಿತಿಯಲ್ಲಿ ನಾನಿರುವುದಿಲ್ಲ ಎಂಬುದೇ ಬೇಸರ.
ಕನಸು ಕೂಡಾ ಒಂದು ರೀತಿ ಹೆಣ್ಣುಮಕ್ಕಳಂತೆಯೇ.. ಮದುವೆ ಮಾಡಿಕೊಡುವವರೆಗೆ ಒಂದು ರೀತಿ ಚಿಂತೆ. ಮದುವೆ ಮಾಡಿಕೊಂಡು ಹೊರಟಾಗ ದುಃಖ. ಮದುವೆಯ ನಂತರದ ಅವಳ ಜೀವನ ಅವಳ ಹಣೆಬರಹಕ್ಕೇ ಬಿಟ್ಟಿದ್ದಲ್ಲವೇ..? ಹಾಗೇ ನನ್ನ ಕನಸಿನ ಹಣೆಪಾಡು ಹೇಗಿದೆಯೋ ಹಾಗೇ ಆಗಲಿ. ಬಯಸುವುದಷ್ಟೇ ಉಳಿದಿದೆ ನನ್ನ ಪಾಲಿಗೆ. ಒಳಿತೇ ಆಗಲಿ ಎಂದೇ ಬಯಸುವೆ. ಮತ್ತೊಬ್ಬರ ಕಣ್ಣಲ್ಲಿ ಆ ಕನಸು ಮಿನುಗಲಿ ಎಂದಷ್ಟೇ ನಾನು ಬಯಸುವೆ.
ಎಲ್ಲರೂ ಪುಸ್ತಕ ಬಿಡುಗಡೆ ಮಾಡಿ ಸಂತೋಷ ಪಡುತ್ತಾರೆ. ಖೈದಿಗಳು ಜೈಲಿನಿಂದ ಹೊರಬಂದರೆ ಬಿಡುಗಡೆಯ ಸಂತಸವನ್ನು ಅನುಭವಿಸುತ್ತಾರೆ. ಆದರೆ ನಾನು ನನ್ನ ಕನಸನ್ನು ಬಿಡುಗಡೆಗೊಳಿಸಿರುವೆ. ಸಂತೋಷವಿದೆಯೋ, ದುಃಖವಿದೆಯೋ, ಖೇದವಿದೆಯೋ ಎಂದು ಅರಿವಾಗದ ಹೊತ್ತಲ್ಲೇ ಕನಸು ಬಿಡುಗಡೆಗೊಂಡಿದೆ. ಬಿಡುಗಡೆಗೊಂಡ ಕನಸಿಗೆ ತಾನು ನನ್ನಿಂದ ಮುಕ್ತಿ ಹೊಂದಿದ ಸುಖ. ಆದರೆ, ನನಗೆ ಏನೊಂದೂ ಹೇಳಲಾಗದ ಅಯೋಮಯ ಸ್ಥಿತಿ. ಆದರೂ.., ನನ್ನ ಕನಸಿನ ಬಿಡುಗಡೆ ಮತ್ತೊಬ್ಬರ ಕಣ್ಣಿನ, ಮತ್ತೊಂದು ಕನಸಿನ ಉದಯಕ್ಕೆ ಕಾರಣವಾಗುತ್ತದೆ ಎಂಬುದೇ ಸದ್ಯಕ್ಕೆ ಸಮಾಧಾನಕರ. ಅಂತೂ ಇಂತೂ , ಇವೆಲ್ಲದರ ನಡುವೆಯೇ ನನ್ನ ಕನಸು ಬಿಡುಗಡೆಗೊಂಡಿದೆ.
~ವಿಭಾ ವಿಶ್ವನಾಥ್
ಬುಧವಾರ, ಸೆಪ್ಟೆಂಬರ್ 5, 2018
ಗುರು ತೋರುವ ಮಾರ್ಗ
ಸರಿ ಮಾರ್ಗ ತೋರುವವನು ಗುರು. ಕೆಲವರು ಹೆಸರಿಗಷ್ಟೇ ಸೀಮಿತವಾಗಿರುತ್ತಾರೆ. ಗುರುಗಳೂ ನಮ್ಮಂತೆಯೇ ಮನುಷ್ಯರೇ.. ಅವರು ಎಲ್ಲವೂ ಆಗುವುದಕ್ಕೆ ಸಾಧ್ಯವಿಲ್ಲ ನಿಜ ಆದರೆ ಆ ರೀತಿಯ ಸಂಕೋಲೆಗಳನ್ನು ಮೀರಿ ಸರಿ ದಾರಿ ತೋರಿ ತಿದ್ದಿ ನಡೆಸಿ ತಮ್ಮ ಮಕ್ಕಳಂತೆಯೇ ಭಾವಿಸುತ್ತಾ ಶಿಕ್ಷಿಸಿ,ಕ್ಷಮಿಸಿ ಮುನ್ನಡೆಸುವ ಶಿಕ್ಷಕರೂ ಇದ್ಡಾರೆ. ಒಂದಕ್ಷರ ಕಲಿಸಿದವರೂ ಗುರುಗಳೇ.. ಕೆಲವರು ವಿದ್ಯೆಯೇ ಕಲಿಯದೆ ಜೀವನದ ಪಾಠ ಕಲಿಸುತ್ತಾರೆ. ಅಂತಹವರೂ ಗುರುಗಳೇ. ಪರೋಕ್ಷವಾಗಿ, ಅಪರೋಕ್ಷವಾಗಿ ಪಾಠ ಕಲಿಸುವ ಎಲ್ಲರೂ ಗುರುಗಳೇ.
ಅಪ್ಪ-ಅಮ್ಮ ಮೊದಲ ಗುರುಗಳಾದರೆ, ಉಳಿದವರು ಹಂತ-ಹಂತವಾಗಿ ಜೀವನದ ಪಾಠ ಕಲಿಸುವವರು.ಒಂದರ್ಥದಲ್ಲಿ ಜೀವನವೂ ಗುರುವೇ. ಪಾಠದ ಜೊತೆಗೆ ಪೂರಕ ವಿಷಯ, ನೀತಿ ಕಥೆಗಳನ್ನು ಹೇಳುವ ಗುರುಗಳು ಇದ್ದ ಹಾಗೆಯೇ ಪಾಠಕ್ಕಷ್ಟೇ ಸೀಮಿತಗೊಳಿಸುವ ಗುರುಗಳೂ ಇದ್ದಾರೆ. ಮನೆಮಕ್ಕಳಂತೆ ಭಾವಿಸುವ ಗುರುಗಳಿದ್ದಂತೆಯೇ, ದರ್ಪ ತೋರಿ ದೂರ ಇಡುವ ಗುರುಗಳೂ ಇದ್ದಾರೆ. ಯಾವ ದುರುದ್ದೇಶ, ದುರಾಲೋಚನೆಯೇ ಇಲ್ಲದೆ ವರ್ತಿಸುವ ಗುರುಗಳಿದ್ದಂತೆಯೇ, ಪೂರ್ವಾಗ್ರಹ ಪೀಡಿತರಂತೆ ವರ್ತಿಸುವ ಗುರುಗಳೂ ಇದ್ದಾರೆ. ಪ್ರಾಜೆಕ್ಟ್ ಸಮಯದಲ್ಲಿ ತಾವೇ ಎಲ್ಲಾ ಸಹಾಯ ಮಾಡಿದರೂ ಹೆಸರೇಳಲು ಇಚ್ಚಿಸದ ಗುರುಗಳಿದ್ದಂತೆ ನಮ್ಮ ಪ್ರಾಜೆಕ್ಟ್ ಅನ್ನು ನಮಗೇ ಗೊತ್ತಿಲ್ಲದಂತೆ ಅವರ ಹೆಸರಿನಲ್ಲಿ ಪ್ರಕಟಿಸಿಕೊಂಡಿರುವ ಗುರುಗಳೂ ಇದ್ದಾರೆ. ವಿದ್ಯಾರ್ಥಿಗಳ ಜೊತೆ ಭೇದ-ಭಾವವಿಲ್ಲದೆ ಬೆರೆಯುವ ಗುರುಗಳಿದ್ದಂತೆ, ಹಣಕ್ಕೆ ಬೆಲೆ ಕೊಟ್ಟು ವಿದ್ಯಾರ್ಥಿಗಳನ್ನು ನಿರ್ಲಕ್ಷಿಸುವ ಗುರುಗಳೂ ಇದ್ದಾರೆ. ತಾನು ಪ್ರಿನ್ಸಿಪಾಲ್ ಎಂಬ ದರ್ಪವನ್ನು ತೋರಿಸದೇ ನಮ್ಮೊಡನೆ ನೆಲದಲ್ಲಿ ಕುಳಿತು ಹರಟುವ, ನಮ್ಮೊಡನೆಯೇ ಊಟ ಮಾಡುವ, ಶ್ರಮದಾನದಲ್ಲಿ ಭಾಗಿಯಾಗುವ ಗುರುಗಳಿದ್ದಂತೆ ತಾನು ಪ್ರಿನ್ಸಿಪಾಲ್ ತಾನು ಬರುತ್ತಿದ್ದರೆ ದೂರ ನಿಲ್ಲಬೇಕು, ತನಗಾಗಿ ಘಂಟೆಗಟ್ಟಲೆ ಕಾಯಬೇಕು ಎಂಬಂತೆ ವರ್ತಿಸುವ ಶಿಕ್ಷಕರೂ ಇದ್ದಾರೆ.ತನ್ನ ಹೆಸರು ಸ್ಪೂರ್ತಿ ನೀಡಿದ ಪಟ್ಟಿಯಲ್ಲಿರಬೇಕು ಎಂದು ಬಯಸುವ ಗುರುಗಳಿದ್ದಂತೆಯೇ ಪ್ರತಿಫಲ ಬಯಸದ ಗುರುಗಳೂ ಇದ್ದಾರೆ.
ಇವರೆಲ್ಲ ನಾನು ನೋಡಿದ, ನಾನು ಪಾಠ ಹೇಳಿಸಿಕೊಂಡ ಗುರುಗಳೇ. ಇಬ್ಬರೂ ಗುರುಗಳೇ ಒಬ್ಬರಿಂದ ನಾವು ಹೇಗೆ ಬದುಕಬೇಕು ಎಂಬ ಪಾಠ ಕಲಿತರೆ, ಮತ್ತೊಬ್ಬರಿಂದ ನಾವು ಹೇಗೆ ಬದುಕಬಾರದು ಎಂಬ ಪಾಠ ಕಲಿಯುತ್ತೇವೆ. ವಿದ್ಯಾರ್ಥಿಗಳು ಹೇಳಿದ್ದನ್ನು ಕೇಳಿ ಕಲಿಯುವುದಕ್ಕಿಂತ, ನೋಡಿ ಕಲಿಯುವುದೇ ಹೆಚ್ಚು.ಬದಲಾದರೂ, ಬದಲಾಗದಿದ್ದರೂ ಅವರೆಲ್ಲಾ ನನ್ನ ಗುರುಗಳೇ. ಅವರಿಗೆ ಮರು ನುಡಿಯುವುದಿಲ್ಲ. ಏಕೆಂದರೆ, ವಿದ್ಯೆಯಿಂದ ವಿನಯ ಎಂಬ ಸಂಸ್ಕಾರವನ್ನು ನನ್ನ ಹಲವು ಗುರುಗಳು ಕಲಿಸಿದ್ದಾರೆ.
ಇಂದು ಶಿಕ್ಷಕರ ದಿನ. ಈ ಪಟ್ಟಿಯಲ್ಲಿದ್ದ ಹಲವು ಗುರುಗಳಿಗೆ ಇಂದು "ಶಿಕ್ಷಕರ ದಿನಾಚರಣೆ"ಯ ಶುಭಾಶಯ ಕೋರಿದಾಗ ನೀಡಿದ ಪ್ರತಿಕ್ರಿಯೆ ನಿಜಕ್ಕೂ ಖುಷಿ ತಂದಿತು. ಎಲ್ಲರೂ ಖುಷಿಯಿಂದ ಥ್ಯಾಂಕ್ಸ್ ಎಂದರು. ಕೆಲವರು ಅದರ ಜೊತೆಗೆ "ಆಲ್ ದಿ ಬೆಸ್ಟ್","ಹೋಪ್ ಯು ಆರ್ ಡೂಯಿಂಗ್ ವೆಲ್" ಎಂದರು. ಎಲ್ಲದಕ್ಕಿಂತ ವಿಶೇಷ "ಗಾಡ್ ಬ್ಲೆಸ್ ಯು" ಎಂದರು. ದೇವರು ಆಶೀರ್ವಾದ ಮಾಡಿ ಹರಸುತ್ತಾನೆಯೋ ಇಲ್ಲವೋ ಗೊತ್ತಿಲ್ಲ. ಗುರುಗಳಂತೂ ಹರಸಿದರು. ಅಷ್ಟಲ್ಲದೇ ಹೇಳಿದ್ದಾರೆಯೇ "ಹರ ಮುನಿದರೂ ಗುರು ಕಾಯುವನು" ಎಂದು. ಸರಿ ದಾರಿ ತೋರಿದ, ತೋರುತ್ತಿರುವ,ತೋರುವ ಗುರುಗಳ ಕೃಪೆ ಹೀಗೇ ಇರಲಿ.
~ವಿಭಾ ವಿಶ್ವನಾಥ್
ಸೋಮವಾರ, ಆಗಸ್ಟ್ 27, 2018
ರಕ್ಷೆಯ ಸುರಕ್ಷಾ ಬಂಧನ
ಅನಿವಾರ್ಯದ ಪರಿಸ್ಥಿತಿಯಲ್ಲಿ ಅಣ್ಣ ಆಸರೆಯಾಗುತ್ತಾನೆ, ಕಷ್ಟದಲ್ಲಿ ಜೊತೆ ನಿಲ್ಲುತ್ತಾನೆ. ಜೊತೆಯಲ್ಲಿ ಅಣ್ಣನಿದ್ದಾನೆ ಎಂಬ ಭಾವವೇ ಸಾಕು ಧೈರ್ಯ ತುಂಬುವುದಕ್ಕೆ. ಅಷ್ಟಲ್ಲದೆ ಜನಪದರು ಹೇಳಿದ್ದಾರೆಯೇ "ಹೆಣ್ಣಿನ ಜನುಮಕ್ಕೆ ಅಣ್ಣ-ತಮ್ಮರು ಬೇಕು, ಬೆನ್ನು ಕಟ್ಟುವರು ಸಭೆಯೊಳಗೆ". ಇಷ್ಟೇ ಅಲ್ಲದೆ ಇನ್ನೂ ಮುಂದುವರಿದು ಹಾಡುತ್ತಾರೆ "ಹೊನ್ನು ಕಟ್ಟುವರು ಉಡಿಯೊಳಗೆ". ಖಂಡಿತಾ ಆ ನಿರೀಕ್ಷೆ ಇರುವುದಿಲ್ಲ. ಉಡುಗೊರೆ ಕೊಟ್ಟರೆ, ಆಸ್ತಿಯಲ್ಲಿ ನೀಡಿದರೆ ಮಾತ್ರ ಅಣ್ಣನ ಪ್ರೀತಿ ಎಂದು ಎಂದಿಗೂ ಅಲ್ಲ. ಕೇವಲ ಅಣ್ಣನ "ನಾನು ನಿನ್ನೊಡನೆ ಇದ್ದೇನೆ" ಎಂಬ ವಚನ ಸಾಕು ಪ್ರೀತಿ ಮತ್ತು ಆಪ್ತತೆಯ ಭಾವ ಮೂಡಿಸಲು.
ಅಣ್ಣನ ಕೈಯೊಳಗೆ ಕೈ ಇಟ್ಟು ಒಂದರೆಕ್ಷಣ ಕೂತರೆ ಸಾಕು ಅದೇನೋ ಸುರಕ್ಷತೆಯ ಭಾವ. ಈ ಘಳಿಗೆ ಹೀಗೇ ಇದ್ದು ಬಿಡಬಾರದೇ ಎಂದೆನಿಸಿಬಿಡುತ್ತದೆ. ಇಷ್ಟೆಲ್ಲದರ ನಡುವೆ ಗೋಳು ಹುಯ್ದುಕೊಳ್ಳುವುದು, ಕೋಳಿ ಜಗಳ ಮಾಡುವುದು ಇದೆಲ್ಲಾ ಇದ್ದೇ ಇದೆ. ಆದರೆ ಅಷ್ಟೆಲ್ಲಾ ಮೂಡಿಸುವ ಅಣ್ಣನೂ ಒಂದೊಮ್ಮೆ ಬದಲಾದರೆ..?
ಬದಲಾದರೂ ಚಿಂತೆಯಿಲ್ಲ.ಏಕೆಂದರೆ ನಾನಂತೂ ಬದಲಾಗುವುದಿಲ್ಲ. ಪ್ರೀತಿ, ಆಪ್ತತೆ ಎಂದಿಗೂ ಕೊಟ್ಟು ತೆಗೆದುಕೊಳ್ಳುವಂತದಲ್ಲವಲ್ಲ. ಹಾಗೊಂದು ವೇಳೆ ಹಾಗೇನಾದರೂ ಕೊಟ್ಟು ಪಡೆದರೆ ಅದು ವ್ಯಾಪಾರ ಎನ್ನಿಸುತ್ತದೆ.
ನೀ ಬದಲಾದರೂ, ಬದಲಾಗದಿದ್ದರೂ ಅದೇ ಭಾವ, ಅದೇ ಆಪ್ತತೆ, ಅದೇ ಪ್ರೀತಿಯಿಂದ ನೀನು ಎಲ್ಲಿದರೂ, ಹೇಗಿದ್ದರೂ ನೀನು ಚೆನ್ನಾಗಿರಲೆಂದು ಸದಾ ಬೇಡುತ್ತಾ ರಕ್ಷೆಯ ಅಗೋಚರ ಸುರಕ್ಷಾ ಬಂಧನದಿಂದ ನಿನ್ನನ್ನು ಬಂಧಿಸುವೆ. ಕಾಲವೂ ಈ ಬಂಧನದ ಬೇಡಿಯನ್ನು ಗಟ್ಟಿಗೊಳಿಸಲಿ.
(ವಿಶೇಷ ಸೂಚನೆ: ಅಣ್ಣ ಎಂಬಲ್ಲಿ ತಮ್ಮ ಎಂದೂ ಸಹಾ ಓದಿಕೊಳ್ಳಬಹುದು)
~ವಿಭಾ ವಿಶ್ವನಾಥ್
ಸೋಮವಾರ, ಜೂನ್ 11, 2018
ಮಳೆರಾಯನ ಜೊತೆ...
ಈಗ ಎಲ್ಲಾ ಕಡೆ ಕಾಂಕ್ರೀಟ್, ಟಾರು ರೋಡುಗಳ ಭರಾಟೆ. ಆದರೆ ಆಗ ಸುತ್ತಮುತ್ತಲೂ ಮಣ್ಣಿನದ್ದೇ ಪಾರುಪತ್ಯ. ಅಂತಹಾ ಸಮಯದಲ್ಲಿ ಮಣ್ಣಿಗೆ ಮೊದಲು ಬಿದ್ದ ಹನಿ ತನ್ನ ಸುಮಧುರ ಸುವಾಸನೆಯನ್ನು ಎಲ್ಲಾ ಕಡೆ ಪಸರಿಸುತ್ತಾ , ಈಗಿನ ಪರ್ಫೂಮ್ ಗಳಿಗಿಂತಾ ಚೆಂದದ ಸುಗಂಧ ಬೀರುತ್ತಾ ಮನಸನ್ನೆಲ್ಲಾ ಆವರಿಸುತ್ತಾ ಇತ್ತು. ಅದರ ಜೊತೆಗೆ ಮೆಲ್ಲಗೆ ಬರೋ ತಂಗಾಳಿಯಲ್ಲಿ ಬಡಿದ "ಇರುಚಲು" ಮನೆಯನ್ನಷ್ಟೇ ಅಲ್ಲ, ಮನೆ ಮುಂದೆ ಮಳೆ ನೋಡ್ತಾ ಸುಮ್ಮನೆ ನಿಂತಿರುತ್ತಾ ಇದ್ದ ನಮ್ಮನ್ನೂ ನೆನೆಸಿಬಿಟ್ಟಿರುತ್ತಿತ್ತು. ಜೋರು ಮಳೆ ಬಂದು ಆಲಿಕಲ್ಲು ಬೀಳ್ತಾ ಇದ್ರೆ, ದೊಡ್ಡ ಛತ್ರಿಯನ್ನು ಉಲ್ಟಾ ಮಾಡಿ ಅದರಲ್ಲಿ ಆಲಿಕಲ್ಲನ್ನು ಹಿಡಿದು ತಿಂತಾ ಇದ್ದ ಮಜವೇ ಬೇರೆ.
ತುಂತುರು ಮಳೆ, ಸೋನೆ ಮಳೆ, ಜೋರು ಮಳೆ ಹೀಗೆ ಮಕ್ಕಳು ಮಳೆಯನ್ನು ಅಳತೆ ಮಾಡುತ್ತಾ ಇದ್ದರೆ, ದೊಡ್ಡವರದ್ದು ಮಳೆನಕ್ಷತ್ರಗಳ ಲೆಕ್ಕ, ಸ್ವಾತಿ ಮಳೆ, ಭರಣಿ ಮಳೆ ಅಂತೆಲ್ಲಾ.. ಈಗ ಇದೆಲ್ಲಾ ಇದೆಲ್ಲಾ ಮಾಯವಾಗಿ ಗೂಗಲ್ ಮುಖೇನ ಎಲ್ಲಿ, ಎಷ್ಟು ಸೆಂಟಿಮೀಟರ್ ಮಳೆಯಾಗಿದೆ ಅಂತಾ ತಿಳಿದುಕೊಳ್ಳುವ ಹಾಗಾಗಿದೆ.
ಮಳೆಯಲ್ಲಿ ನೆನೆದು ಅಮ್ಮನಿಂದ ಬೈಸಿಕೊಂಡು ಬಿಸಿನೀರಲ್ಲಿ ಸ್ನಾನ ಮಾಡಿ ಒಲೆ ಮುಂದೆ ಕೂತು ಕಾಲ ಕಳೆಯುತ್ತಾ ಇದ್ದದ್ದೆಲ್ಲಾ ಹೋಗಿ , "ಅಯ್ಯೋ, ಈ ಹಾಳಾದ ಮಳೆ ಈಗಲೇ ಬರಬೇಕಿತ್ತಾ?" ಅಂತಾ ಯಾವುದಾದರೂ ಅಂಗಡಿ ಮುಂಭಾಗದಲ್ಲೋ, ಬಸ್ ಸ್ಟ್ಯಾಂಡ್ ಅಲ್ಲೋ ನಿಂತು ಈ ಮಳೆ ಯಾವಾಗ ಬಿಡುತ್ತೆ ಅಂತಾ ಕಾಯೋ ಕಾಲ.
ಆದರೆ ಮಳೆಗಾಲದ ಬಗ್ಗೆ ಪುಳಕ ಮೂಡಿಸೋ ಸಿನೆಮಾಗಳು ಬಂದ ಮೇಲೆ ಯುವಜನತೆ ಮಳೆಯಲ್ಲಿ ನೆನೆಯೋ ಟ್ರೆಂಡ್ ಶುರು ಮಾಡಿದ್ರು. ಆದರೆ ಅದು ಮಳೆಯ ಪುಳಕವನ್ನು ಅನುಭವಿಸುವುದಕ್ಕಿಂತ ವಾಟ್ಸಾಪ್ ಸ್ಟೇಟಸ್, ಫೇಸ್ ಬುಕ್, ಇನ್ಸ್ಟಾಗ್ರಾಂಗೆ ಅಪ್ ಲೋಡ್ ಮಾಡುವುದಕ್ಕೇ ಅನ್ನೋದು ಸುಳ್ಳಲ್ಲ.
ಆವಾಗೆಲ್ಲಾ ಶಾಲೆ ಬಿಡೋ ಟೈಮ್ ಗೆ ಬರುತ್ತಾ ಇದ್ದ ಮಳೆ, ಈಗ ಆಫೀಸ್ ಬಿಡೋ ಟೈಮ್ ಗೆ ಬರುತ್ತಾ ಇದೆ. ಆಗೆಲ್ಲಾ ಅಮ್ಮ ಮಾಡಿಕೊಡುತ್ತಾ ಇದ್ದ ಬಿಸಿ ಬಿಸಿ ಕಾಫಿ ಜೊತೆ ಬಿಸಿ ಬಿಸಿ ತಿಂಡಿ ಸವಿಯುತ್ತಾ ಇದ್ದ ನಾವು ಇವತ್ತು ಬೇರೆಯವರಿಗಾಗಿ ಕಾಫಿ, ತಿಂಡಿ ಮಾಡ್ತಾ ಇದ್ದೀವಿ ಅಷ್ಟೇ. ಮಳೆರಾಯ ಆವತ್ತೂ ಬದಲಾಗಿಲ್ಲ, ಇವತ್ತೂ ಬದಲಾಗಿಲ್ಲ.... ಆದರೆ ನಾವು ಯಾಕೆ ಬದಲಾಗ್ತಾ ಇದ್ದೀವಿ...?
ಇನ್ನಾದರೂ ತೆಗೆದು ಒಮ್ಮೆ ಆ ತಂಗಾಳಿಯ ಜೊತೆ ಮಳೆಯ ಹನಿಯನ್ನೂ ಆಸ್ವಾದಿಸೋಣ. ಮಳೆ ನಿಂತ ಮೇಲೆ ಬೀಳೋ ಆ ಹನಿಯ ಪ್ರತಿ ಶಬ್ಧವನ್ನೂ ಕೇಳೋಣ... ಬಹುಷಃ ಮಾತುಗಳೆಲ್ಲಾ ಮುಗಿದರೂ ಕಾಡುವ ಧ್ವನಿಯ ಹಾಗೆ, ಮಳೆನಿಂತ ಮೇಲೂ ಆ ಹನಿ ಕಾಡಬಹುದು... ತೆರೆದ ಕಿಟಕಿಯಿಂದ ಬೀಸುವ ತಂಗಾಳಿಗೆ ಮುಂಗುರುಳು ಹಾರಿ ಮುತ್ತಿಕ್ಕುವುದನ್ನು ಅನುಭವಿಸೋಣ... ಸಾಧ್ಯವಾದರೆ ಬಿಸಿ ಕಾಫಿಯೊಂದಿಗೆ ಮಳೆರಾಯನೊಡನೆ ಕಾಲ ಕಳೆಯೋಣ..
ಇಷ್ಟೇನಾ ಅನ್ನೋವ್ರು, ಮಳೆಯಲ್ಲಿ ಹೋಗಿ ಒಂದು ಸಾರಿ ನೆನೆದು ಬನ್ನಿ. ಅದರ ಮಜಾ ಇನ್ನೂ ಹೆಚ್ಚು.
ಆಂ! ಶೀತ ಆಗಿ ಜ್ವರ ಬಂದರೆ ಮತ್ತೆ ನನ್ನನ್ನ ಹೊಣೆ ಮಾಡ್ಬೇಡಿ. ಆಯ್ತಾ..?
ಮತ್ತೆ ಸಿಗೋಣ...ಮಳೆರಾಯನ ಜೊತೆ ನನಗೂ ತುಂಬಾ ಮಾತಾಡೋದಕ್ಕಿದೆ. ಮುಗಿಯದ ಮಾತುಗಳ ಮೂಟೆಯಿಂದ ಒಂದಿಷ್ಟನ್ನು ಮೊಗೆದು ಅವನಿಗೂ ಕೊಡಬೇಕಾಗಿದೆ.ಅದೆಲ್ಲಾ ಮುಗಿಸಿ ಬರ್ತೀನಿ.. ಅವನ ಜೊತೆಗೆ ಕಳೆಯೋ ಕ್ಷಣಗಳನ್ನು ಮಿಸ್ ಮಾಡ್ಕೊಳ್ಳೋಕೆ ನನಗೂ ಇಷ್ಟ ಇಲ್ಲ. ನಿಮಗೆ ಮತ್ತೊಮ್ಮೆ ಸಿಕ್ತೀನಿ. ಅಲ್ಲೀವರೆಗೂ ಬಾಯ್..!
-ವಿಭಾ ವಿಶ್ವನಾಥ್
ಭಾನುವಾರ, ಮೇ 27, 2018
ಮಾರಿಯೇ..? ಮಹಾಲಕ್ಷ್ಮಿಯೇ..?
ಅದಕ್ಕೆ ಹುಸಿಕೋಪವನ್ನು ನಟಿಸುತ್ತಾ ಪರಿಮಳ "ಹಾಗಾದರೆ, ನಾವುಗಳು ಅಂದರೆ ಹೆಣ್ಣುಮಕ್ಕಳು ಅಂದರೆ ನಾವುಗಳು ಮಾರಿ ಎಂದು ತಾನೇ ನೀವು ಹೇಳುತ್ತಿರುವುದು" ಎಂದಾಗ ಅದು "ಆ ಅರ್ಥದಲ್ಲಲ್ಲಾ ನಾನು ಹೇಳಿದ್ದು." ಎಂದರು.
"ಈ ಮನೆಗೆ ನಾವು ಮಾರಿಯರಾದರೂ, ಇನ್ನೊಂದು ಮನೆಗೆ ನಾವು ಮಹಾಲಕ್ಷ್ಮಿಯರೇ ತಾನೇ?" ಎಂದು ಹೇಳಿ ಆ ಸಂಧರ್ಭವನ್ನು ತಿಳಿಗೊಳಿಸಿದಳು ಪರಿಮಳ.
"ಮಾರಿ ಎಂದರೆ ಮಾರಾಟ ಎಂದೂ ಅರ್ಥ ಬರುತ್ತದೆ, ಅಂದರೆ ಬರಿಗೈಯಲ್ಲಿ ಕಳುಹಿಸದೇ ನಿಮ್ಮನ್ನು ಕೈತುಂಬಾ ಜೀವನಕ್ಕಾಗುವಂತೆ ವರದಕ್ಷಿಣೆಯನ್ನೂ ಕೊಟ್ಟು ಕಳುಹಿಸುತ್ತೇವಲ್ಲಾ" ಎಂದರು ದೊಡ್ಡಮ್ಮ.
"ಅದನ್ನೆಲ್ಲಾ ನಮಗೆ ಕೊಡಿ ಎಂದವರು ಯಾರು?" ಎಂದದ್ದಕ್ಕೆ ಪ್ರತ್ಯುತ್ತರವಾಗಿ ದೊಡ್ಡಮ್ಮ "ಕೊಡದಿದ್ದರೆ ಸುಮ್ಮನೆ ಬಿಡುತ್ತೀರಾ ನೀವು? ನೀವು ಬಿಟ್ಟರೂ ಉಳಿದವರು ಸುಮ್ಮನಿರುತ್ತಾರಾ?" ಎಂದರು.
"ನೀವು ಕೇಳಿದಂತೆಯೇ ಅಲ್ಲವೇ? ಅವರೂ ಕೇಳುವುದು..
ನೀವು ಅಪೇಕ್ಷಿಸಿದಂತೆಯೇ ಅಲ್ಲವೇ? ಅವರೂ ಅಪೇಕ್ಷಿಸುವುದು..
ನೀವು ಯೋಚಿಸಿದಂತೆಯೇ ಅಲ್ಲವೇ? ಅವರೂ ಯೋಚಿಸುವುದು..
ಮನೆಗೆ ಬರುವ ಸೊಸೆಯಿಂದ ಏನನ್ನೂ ಅಪೇಕ್ಷಿಸಬೇಡಿ, ಮಗಳಿಗೂ ಏನನ್ನೂ ಕೊಟ್ಟು ಕಳುಹಿಸಬೇಡಿ" ಎಂದಳು ಪರಿಮಳ.
"ಸರಿ ಆಯ್ತಮ್ಮಾ, ಹಾಗೇ ಮಾಡುತ್ತೇವೆ." ಎಂದು ಆ ಸಂಧರ್ಭಕ್ಕೆ ತೆರೆ ಎಳೆದರು ದೊಡ್ಡಮ್ಮ.
ಇದು ಬರೀ ಪರಿಮಳ ಮತ್ತು ದೊಡ್ಡಮ್ಮನ ನಡುವೆ ನಡೆಯುವ ಮಾತು-ಕಥೆಯಲ್ಲ. ಪ್ರತಿ ಮನೆಯಲ್ಲೂ ಇಂತಹದ್ದೊಂದು ಸಂಭಾಷಣೆ ಯಾರ ನಡುವೆಯಾದರೂ ನಡೆದೇ ಇರುತ್ತದೆ.
ವೇದ ಸುಳ್ಳಾದರೂ, ಗಾದೆ ಸುಳ್ಳಾಗದು ಎಂಬ ಒಂದು ಮಾತಿದೆ. ಆದರೆ ಈ ಸಂಧರ್ಭಕ್ಕೆ ಅದನ್ನು ಹೇಗೆ ಬಳಸಿಕೊಳ್ಳಬೇಕೋ ಗೊತ್ತಿಲ್ಲ. ಬಹುಶಃ ಮನೆಯಲ್ಲಿದ್ದ ಹಠಮಾರಿ ಮಗಳು , ಇನ್ನೊಂದು ಮನೆಯಲ್ಲಿ ಸೌಮ್ಯರೂಪಿಯಾದ ದೇವತೆ ಮಹಾಲಕ್ಷ್ಮಿಯಂತೆ ಬಾಳಬಹುದು ಎಂಬ ಅರ್ಥ ಬರಬಹುದೇನೋ?
ಹೆಣ್ಣುಮಕ್ಕಳು ಅಣ್ಣ-ತಮ್ಮಂದಿರ ಕಾಟ ಕೊಟ್ಟಿರಬಹುದೇನೋ, ಆದರೆ ಮಾರಿಯಷ್ಟು ಹಟಮಾರಿ, ಉಗ್ರರೂಪಿ ಖಂಡಿತಾ ಆಗಿರುವುದಿಲ್ಲ. ಮಾರಿಯೇ ಆದರೆ, ಹಾಗೇ ಅನ್ನಿಸಿದರೂ ಅವಳೂ ದೇವತೆಯೇ ಅಲ್ಲವೇ? ಅಕಸ್ಮಾತ್ ಮನೆಮಗಳು ಅಷ್ಟು ಕಾಟ ಕೊಟ್ಟರೂ ಅವಳನ್ನು ಕಳುಹಿಸುವಾಗ ಎಲ್ಲರ ಕಣ್ಣಲ್ಲೂ ನೀರು ತುಂಬಿ ಬೇಸರವಾಗುವುದೇಕೆ?
ಇನ್ನು ಕೊಡು-ಕೊಳ್ಳುವಿಕೆಯ ವಿಷಯದಲ್ಲಿ ವರದಕ್ಷಿಣೆ ಎಂಬ ಪದ ನೇಪಥ್ಯಕ್ಕೆ ಸರಿಯುತ್ತಿದ್ದರೂ ಮಗಳು ಸುಖವಾಗಿರಲೆಂಬ ಕಾರಣಕ್ಕೆ ಹೆತ್ತವರು ಉಡುಗೊರೆ ನೀಡಿ ಕಳುಹಿಸುತ್ತಾರೆ. ಅದನ್ನುತಮ್ಮ ಮಗನ ಜೀವನದಲ್ಲಿಯೂ ಅಪೇಕ್ಷಿಸುತ್ತಾರೆ ಸಹಾ... ಇದು ಬದಲಾಗದೇ?
ಹೆಣ್ಣು ಮಕ್ಕಳಿಗೆ ಇಂದು ವಿದ್ಯೆ ನೀಡಿ ತಮ್ಮ ಕಾಲ ಮೇಲೆ ತಾವು ನಿಲ್ಲುವಂತೆ ಮಾಡಿ ಸ್ವಾತಂತ್ರ್ಯ, ಸ್ವಾಭಿಮಾನದ ಉಡುಗೊರೆಯನ್ನು ಉಡಿ ತುಂಬಿಸಿದ ಮೇಲೆ ಅವರು ಖಂಡಿತಾ ಮತ್ತೇನನ್ನೂ ಅಪೇಕ್ಷಿಸುವುದಿಲ್ಲ, ಹೆತ್ತವರ ಮತ್ತು ಒಡಹುಟ್ಟಿದವರ ಪ್ರೀತಿಯ ಹೊರತು.
ಮಾರಿಯನ್ನು ಕಳುಹಿಸಿ,ಮಹಾಲಕ್ಷ್ಮಿಯನ್ನು ಮನೆತುಂಬಿಸಿಕೊಳ್ಳುತ್ತಿದ್ದೇವೆ ಎನ್ನುವುದಕ್ಕಿಂತ ಮಹಾಲಕ್ಷ್ಮಿಯನ್ನು ಕಳುಹಿಸಿ,ಮಹಾಲಕ್ಷ್ಮಿಯನ್ನೇ ಮನೆತುಂಬಿಸಿಕೊಳ್ಳುತ್ತಿದ್ದೇವೆ ಎನ್ನಬಾರದೇಕೆ?
-ವಿಭಾ ವಿಶ್ವನಾಥ್
ಭಾನುವಾರ, ಮೇ 13, 2018
ಅಮ್ಮ ಎಂಬ ಮಾಯಾವಿ
ಆ ಕಡೆ ಅಡುಗೆ ಮಾಡ್ತಾ, ಈ ಕಡೆ ಮಕ್ಕಳನ್ನೂ ಸಂಭಾಳಿಸುತ್ತಾ, ವಾಶಿಂಗ್ ಮಷೀನ್ ಗೆ ಬಟ್ಟೆ ಹಾಕ್ತಾ, ಒಂದು ಕಿವಿಯನ್ನು ಮೊಬೈಲ್ ಗೆ ಕೊಟ್ಟು, ಮತ್ತೊಂದರಲ್ಲಿ ಮನೆಯ ಎಲ್ಲರ ಬೇಕು-ಬೇಡಗಳಿಗೆ ಓಗೊಡುತ್ತಾ ನಾಳೆಗೂ ಸಿದ್ದತೆ ಮಾಡಿಕೊಳ್ಳುವ ಸರ್ವಾಂತರ್ಯಾಮಿ ಅಮ್ಮ.
ತಲೆನೋವು ಅಂದಾಗ ಒಂದು ಲೋಟ ಸ್ಟ್ರಾಂಗ್ ಕಾಫಿ ಮಾಡಿಕೊಟ್ಟು ತಲೆನೋವು ಮಾಯಮಾಡೋ ಯಕ್ಷಿಣಿ, ಮಕ್ಕಳಿಗೆ ಸ್ವಲ್ಪ ಹುಷಾರಿಲ್ಲದೇ ಇದ್ದರೂ, ಎಷ್ಟೇ ದೂರದಲ್ಲಿದ್ದರೂ ಧ್ವನಿ ಕೇಳಿಯೇ ಗುರುತಿಸಿ ಕಾಳಜಿ ಮಾಡುವ ಮಮತಾಮಯಿ. ಮನಸ್ಸಿನ ಎಲ್ಲಾ ಬೇಜಾರುಗಳನ್ನೂ ತನ್ನ ನಿಷ್ಕಲ್ಮಶ ನಗು ಎನ್ನುವ ಮಾಯಾದಂಡದಿಂದ ಮಾಯ ಮಾಡಿಬಿಡುವ ಕಿನ್ನರಿ.ಯಾವುದಾದರೂ ಕಾರ್ಯಕ್ರಮಗಳಿಗೋ, ಸಮಾರಂಭಗಳಿಗೋ ಹೊರಟಾಗ ಹೇಗೆ ಕಾಣಿಸ್ತಾ ಇದ್ದೀವಿ ಅಂತಾ ಮೊದಲು ಕಾಂಪ್ಲಿಮೆಂಟ್ ಕೊಡೋ ಗೆಳತಿ. ಮಕ್ಕಳನ್ನು ದೂರಕ್ಕೆ ಕಳುಹಿಸುವ ಸಂದರ್ಭದಲ್ಲಿ ಮುಖದ ಮೇಲೆ ಬಲವಂತದ ನಗು ಇಟ್ಟುಕೊಂಡು,ಮನದ ತುಂಬಾ ನೋವು, ಕಣ್ಣ ತುಂಬಾ ನೀರು ತುಂಬಿಕೊಳ್ಳೋ ಅಳುಬುರುಕಿ.
ಅಮ್ಮನ ರೂಪಗಳೂ ಹಲವು. ಅದಕ್ಕೇ ಹೇಳಿದ್ದು ನಾನು ಅಮ್ಮ ಮಾಯಾವಿ ಅಂತಾ.ಸ್ಕೂಲಿಗೆ ಮೊದಲ ದಿನ ಅಳ್ತಾ,ಅಳ್ತಾ ಹೋಗಿ ಹಠ ಮಾಡಿಕೊಂಡು ನಿಂತಾಗ ಕೈ ಹಿಡಿದುಕೊಂಡು ಕರೆದುಕೊಂಡು ಹೋಗುವ ಕೈಯ್ಯ ಹಿಡಿತದಲ್ಲಿ ಅಮ್ಮನ ಧೈರ್ಯ ಇರುತ್ತದೆ. ಅಳು ನಿಲ್ಲಿಸದೇ ಇದ್ದಾಗ ಗದರದೇ ರಮಿಸಿ, ಚಾಕೋಲೇಟ್ ಕೊಟ್ಟು ಶಾಲೆ ಬಗ್ಗೆ ಆಸಕ್ತಿ ಮೂಡಿಸೋ ಶಿಕ್ಷಕಿಯಲ್ಲಿಅಮ್ಮ ಕಾಣ್ತಾಳೆ. ಕ್ಲಾಸ್ ಅಲ್ಲಿ ಪಕ್ಕ ಕುಳಿತುಕೊಂಡು ಧೈರ್ಯ ತುಂಬೋ, ಊಟ ಮಾಡುವಾಗ ಜೊತೆಯಲ್ಲಿ ಹಂಚಿ ತಿನ್ನೋ ಗೆಳತಿಯಲ್ಲಿ ಅಮ್ಮ ಇರ್ತಾಳೆ.
ಎಷ್ಟೇ ಕೀಟಲೆ ಮಾಡಿದರೂ ದೂರದೇ, ಅವಳಿಗೆ ಕೊಟ್ಟಿದ್ದರಲ್ಲೇ ಒಂದು ಪಾಲನ್ನು ಮುಚ್ಚಿಟ್ಟು ಕೊಡುವ ಅಕ್ಕನಲ್ಲಿ ಅಮ್ಮನ ಪ್ರೀತಿ ಇರುತ್ತೆ.ಎಷ್ಟೇ ಜಗಳ ಮಾಡಿದರೂ,ಬೈದು-ಹೊಡೆದಾಡಿದರೂ ಮತ್ತೆ-ಮತ್ತೆ ಹಿಂದೆ-ಹಿಂದೆ ಬಂದು ಮಾತಾಡಿಸೋ ಮುಗ್ಧತೆಯಲ್ಲಿ ಅಮ್ಮ ಇರುತ್ತಾಳೆ.
ಆಟ ಆಡುವಾಗ ಬಿದ್ದು ಅಳ್ತಾ ಇರುವಾಗ,ಓಡಿಬಂದು ಎತ್ತಿ "ಏಟಾಯ್ತಾ" ಅಂತಾ ಕಕ್ಕುಲಾತಿಯಿಂದ ವಿಚಾರಿಸಿ, "ನೋಡಿಕೊಂಡು ಆಟ ಆಡಬಾರದಾ?" ಎಂದು ಅಕ್ಕರೆಯಿಂದ ಬಯ್ಯುವ ಹಿತೈಷಿಯ ಬೈಗುಳದಲ್ಲಿ ಅಮ್ಮ ಧ್ವನಿಸುತ್ತಾಳೆ.
"ಹುಷಾರು","ಮನೆ ತಲುಪಿದ್ಯಾ?","ಮೊದಲು ಊಟ ಮಾಡು, ಆಮೇಲೆ ಕೆಲಸ", "ನೀನು ಮೊದಲು ತಿನ್ನು", "ಖುಷಿ ಆಯ್ತಾ?", "ಜಾಸ್ತಿ ನಿದ್ದೆಗೆಡಬೇಡ", "ಚೆನ್ನಾಗಿ ಓದ್ಕೋ", "ನಿಂಗಿಷ್ಟ ಅಂತಾ ತಂದೆ", "ನಿನಗೆ ಇಷ್ಟ ಆಗುತ್ತೆ ಅಂತಾ ಗೊತ್ತಿತ್ತು, ಅದಕ್ಕೇ ಆರಿಸಿದೆ" ಇನ್ನೂ ಹೀಗೇ ಹಲವಾರು ಇಷ್ಟ-ಕಷ್ಟಗಳನ್ನು ಅರಿತು ಕಾಳಜಿ ಮಾಡೋ ಪ್ರತಿಯೊಬ್ಬರಲ್ಲೂ ಅಮ್ಮನ ಛಾಯೆ ಇರುತ್ತೆ.
ಪ್ರೀತಿಯಲ್ಲಿ ಸೋತು ತಲೆ ಮೇಲೆ ಕೈಯಿಟ್ಟುಕೊಂಡು ಕೂತಿದ್ದಾಗ "ಪ್ರೀತಿ ಅಂದ್ರೆ ಅದಲ್ಲ, ನಿಜವಾದ ಪ್ರೀತಿ ಅಂದ್ರೆ ಅಮ್ಮನ ಪ್ರೀತಿ" ಅಂತಾ ತಿಳಿ ಹೇಳಿ ತಿದ್ದುವ ಗೆಳತಿ ಥೇಟ್ ಅಮ್ಮನಂತೇ ಕಾಣಿಸ್ತಾಳೆ. "ನೀನು ಹೀಗೇ ಇದ್ರೆ ಮುಗೀತು ಕಥೆ, ನಿನಗೆ ಹಠ-ಛಲ ಇದ್ದರೆ ಆಡಿಕೊಳ್ಳೂವವರ ಮುಂದೆ ಗೆದ್ದು ತೋರಿಸು" ಅಂತಾ ಛಾಲೆಂಜ್ ಮಾಡಿ, ಬೈಯ್ಯುತ್ತಾ ಬೈಯ್ಯುತ್ತಲೇ ಆತ್ಮಸ್ಥೈರ್ಯ ತುಂಬುವ ಜೊತೆಗಾತಿಯಲ್ಲಿ ಅಮ್ಮ ಕಾಣಸಿಕ್ತಾಳೆ. ಬೈದು ಬುದ್ದಿ ಹೇಳಿ ಸರಿದಾರಿಯಲ್ಲಿ ನಡೆಸುವ ಗೆಳತಿಯ ನಿಸ್ವಾರ್ಥತೆಯಲ್ಲಿ ಅಮ್ಮನ ಕಾಳಜಿ ತುಂಬಿರುತ್ತೆ.
ಸ್ನೇಹಿತರ ಅಮ್ಮಂದಿರ ಕೈರುಚಿಯಲ್ಲಿ ಅಮ್ಮ ನೆನಪಾಗ್ತಾಳೆ. ಭೇಧ-ಭಾವ ತೋರಿಸದೆ ತನ್ನ ಮಕ್ಕಳಂತೆಯೇ ನೋಡಿಕೊಳ್ಳುವ ಚಿಕ್ಕಮ್ಮ-ದೊಡ್ಡಮ್ಮಂದಿರು ಅಮ್ಮನ ಪ್ರತಿರೂಪವೇ ಸರಿ. ಅಷ್ಟೇ ಯಾಕೆ, ಮುದ್ದು-ಮುದ್ದು ಮಾತಾಡುವ ಪುಟಾಣಿಯ ಪ್ರಶ್ನೆಗಳ ಕೌತುಕದಲ್ಲಿ ಅಮ್ಮ ಕಾಣ್ತಾಳೆ.
ಇಷ್ಟೆಲ್ಲಾ ಕಡೆ ಕಾಣಿಸಿ, ಪ್ರೀತಿ ಹಂಚಿ, ಧೈರ್ಯ ನೀಡಿ, ಸ್ಥೈರ್ಯ ತುಂಬಿ ಬಾಳಿಗೇ ದಾರಿದೀಪ ಆಗುವ ಅಮ್ಮ ಮಾಯಾವಿ ಅಲ್ಲದೇ ಮತ್ತೇನು?
-ವಿಭಾ ವಿಶ್ವನಾಥ್
ಗುರುವಾರ, ಅಕ್ಟೋಬರ್ 19, 2017
ಅವರವರು ಕಂಡಂತೆ…!!
ನನಗೆ ಅದಕ್ಕಿಂತ ಹೆಚ್ಚಿನ ಆಶ್ಚರ್ಯ ತಂದದ್ದು ಅವನ ಸಾವಿನ ಕಾರಣ. ಅಂದು ಬೆಳಿಗ್ಗೆಯೇ ಮನೆಗೆ ಹಬ್ಬದ ಸಾಮಾನು ತರಲು ಹೊರಟ ರಂಗನಾಥ ಅವತ್ತು ತನ್ನ ಮೊಬೈಲನ್ನು ಮನೆಯಲ್ಲಿಯೇ ಬಿಟ್ಟಿದ್ದ. ಆಗಲೇ ಅವನ ಮೊಬೈಲ್ ಗೆ ಒಂದು ಕರೆ ಬಂದಿತ್ತು. ಆ ಕರೆಯನ್ನು ಅವನ ಅಣ್ಣ ಸ್ವೀಕರಿಸಿದ.ಆ ಕರೆಯ ಸಾರಾಂಶ ಇಷ್ಟು: “ನಿಮ್ಮ ಮಗ ನಮ್ಮ ಮೊಬೈಲ್ ಅಂಗಡಿಯಿಂದ ಮೊಬೈಲ್ ಕದ್ದಿದ್ದಾನೆ. ಆದ್ದರಿಂದ ನಾವು ಪೊಲೀಸರಿಗೆ ದೂರು ನೀಡಿದ್ದೇವೆ, ಇನ್ನಾದರೂ ನಿಮ್ಮ ಮಗನಿಗೆ ಒಳ್ಳೆಯ ಬುದ್ದಿ ಕಲಿಸಿ”. ಇದಾದ ನಂತರ ಅವನ ಅಣ್ಣ ಮೊಬೈಲ್ ಸ್ವಿಚ್ ಆಫ್ ಮಾಡಿಬಿಟ್ಟ. ಅಪ್ಪ-ಅಮ್ಮನಿಗೂ ವಿಷಯ ತಿಳಿಸಿದಾಗ, ಅವನ ತಾಯಿ “ನಮ್ಮ ಮನೆಯ ಮರ್ಯಾದೆ ತೆಗೆದ,ಇಷ್ಟು ದಿನದಿಂದ ಕಾಪಾಡಿಕೊಂಡು ಬಂದಿದ್ದ ಮರ್ಯಾದೆಯನ್ನೆಲ್ಲ ಬೀದಿ ಪಾಲು ಮಾಡಿದೆ.”ಎಂದು ರಂಗನಾಥನನ್ನು ಹೊಡೆದರು. ಅವನು ಎಷ್ಟು ಹೇಳಿದರೂ ಕೇಳದೆ ಅವನನ್ನು ನಿಂದಿಸಿದರು.
ಇಷ್ಟೆಲ್ಲಾ ನಡೆದ ನಂತರ, ರಾತ್ರಿ ರಂಗನಾಥ ತನ್ನ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ. ಹಬ್ಬದ ಮನೆ ಅಂದು ಮಸಣವಾಯಿತು.
ಯುವ ಜನತೆ ದುರ್ಬಲ ಮನಸ್ಸಿನವರಗದೆ, ತಾಯ್ತಂದೆ ತಮ್ಮ ಮಕ್ಕಳನ್ನು ನಂಬಿದರೆ, ಫ್ರಾಂಕ್ ಕಾಲ್ ಮಾಡದೆ, ಬೇರೆಯವರನ್ನು ಸಾವಿನ ದವಡೆಗೆ ತರುವಷ್ಟು ತಮಾಷೆ ಮಾಡದೆ, ಕ್ಷಣಕಾಲ ತಾಳ್ಮೆಯಿಂದ ಯೋಚಿಸಿದರೆ ಇನ್ನಾದರೂ ಎಷ್ಟೋ ರಂಗನಾಥನ ಸಾವು ತಪ್ಪುತ್ತದೆ
-vಭಾ