ಭಾನುವಾರ, ಜೂನ್ 28, 2020

ಗಜಲ್-೦3

ಕತ್ತಲೆಯ ಕೂಪದಲ್ಲಿದ್ದವಳಿಗೆ ಬೆಳಕು ತೋರಿದ್ದು ನೀ
ಭರವಸೆಯ ನಂದಾದೀಪವನು ಹಚ್ಚಿಟ್ಟದ್ದು ನೀ

ನಾಳೆಯ ಕುರಿತು ಆಸ್ಥೆಯೇ ಇರದವಳಿಗೆ
ಪ್ರಪಂಚದ ವಾಸ್ತವತೆಯ ಅರಿವು ಮೂಡಿಸಿದ್ದು ನೀ

ಅಜ್ಞಾನದ ಅಂಧಕಾರದಲಿ ಮುಳುಗಿ ಹೋಗಿದ್ದವಳಿಗೆ
ಜ್ಞಾನ ಜ್ಯೋತಿಯ ಹೊತ್ತಿಸಿ ಬದುಕ ಬೆಳಗಿಸಿದ್ದು ನೀ

ಜ್ಞಾನಕ್ಕಾಗಿ ಪರಿತಪಿಸುತ್ತಾ ಎಲ್ಲೆಲ್ಲೋ ಹುಡುಕುವಾಗ
ಅಕ್ಷರ ಭಿಕ್ಷೆಯ ಹಾಕಿ ಭರವಸೆ ಬೆಳಗಿಸಿ ಚೈತನ್ಯ ನೀಡಿದ್ದು ನೀ

ಹಣದ ಮೋಹಕೆ, ನಿನ್ನನ್ನೂ ಜ್ಞಾನವನ್ನು ಮಾರಿಕೊಳ್ಳದೆ
ದಿಟ್ಟತನದಿ ನಮ್ಮ ಪೀಳಿಗೆ ಮಾರಾಟಕ್ಕಿಲ್ಲ ಎಂದದ್ದು ನೀ

ಸುಳ್ಳು-ವಂಚನೆ ಅಪ್ರಾಮಾಣಿಕತೆಗೆ ತಲೆಬಾಗದೆ
ಪ್ರಾಮಾಣಿಕತೆಯಿಂದಿರು ಎಂದು ಸ್ಥೈರ್ಯ ತುಂಬಿದ್ದು ನೀ

ವಿಭಾಳ ಪ್ರತಿ ಹೆಜ್ಜೆಗೂ ಸಾಕ್ಷಿಯಾಗಿ ನಿಂತು
ಇಂದಿಗೂ ಪ್ರತಿಯೊಂದನೂ ಪ್ರೋತ್ಸಾಹಿಸುತ್ತಿರುವುದು ನೀ

~ವಿಭಾ ವಿಶ್ವನಾಥ್

ಭಾನುವಾರ, ಜೂನ್ 21, 2020

ಭಾವಯಾನ

ಭಾವಜೀವಿಯಾದ ಮನುಷ್ಯ ಇತ್ತೀಚೆಗೆ ಭಾವನೆಗಳನ್ನು ಮರೆತಂತೆ ಬದುಕುತ್ತಿದ್ದಾನೆ. ಭಾವನೆಗಳು, ಬಂಧಗಳು ಬೆಳೆಸಿಕೊಂಡಂತೆಲ್ಲಾ ಬೆಳೆಯುತ್ತಾ ಹೋಗುತ್ತವೆ. ಆದರೆ, ಭಾವನಾತ್ಮಕ ಸೆಳೆತಗಳು ಹೆಚ್ಚಿದಂತೆಲ್ಲಾ ಮತ್ತೆ ಮತ್ತೆ ದುಃಖವೂ ಹೆಚ್ಚುತ್ತಾ ಹೋಗುತ್ತದೆ. ಭಾವಗಳೇ ಇಲ್ಲದ ಮನುಷ್ಯ ಇದ್ದಾನೆಯೇ..? ಯಾರಾದರೂ ಭಾವನೆಯೇ ಇಲ್ಲದೆ ಬದುಕಬಲ್ಲರೇ..? 


ಭಾವನೆಗಳಿದ್ದರೂ ತೋರ್ಪಡಿಸಿಕೊಳ್ಳದ ಹಲವು ಜನರಿದ್ದಾರೆ, ಆದರೆ ಭಾವನೆಗಳೇ ಇಲ್ಲದೆ ಇರುವ ಜೀವಂತ ವ್ಯಕ್ತಿ ಹುಡುಕಿದರೂ ಸಿಗಲಾರ. ನಾವು ಬೆಳೆದ ಪರಿಸರ, ನಮ್ಮ ದೇಹದಲ್ಲಿನ ಹಾರ್ಮೋನ್ ಗಳ ಪ್ರಭಾವ ಭಾವಾಭಿವ್ಯಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಸೆರಟೋನಿನ್, ಎಂಡೋರ್ಪಿನ್, ಆಕ್ಸಿಟೋಸಿನ್, ಡೋಪಮೈನ್ ಮುಂತಾದ ಹಾರ್ಮೋನ್ ಗಳ ಪ್ರಭಾವ ಭಾವನೆಗಳ ಮೇಲೆ ಪರಿಣಾಮ ಬೀರಿ ಮನುಷ್ಯನ ಬದುಕಿನಲ್ಲಿ ಆಶಾಕಿರಣವಾಗಿವೆ.

ಅಕಸ್ಮಾತ್ ದುಃಖ ಎಂಬುದೇ ಇಲ್ಲವೆಂದಿದ್ದರೆ... ಯಾವುದೇ ಭಾವನೆಗಳು ಇರದಾದರೆ ಅದು ಒಂದು ಲೋಪವೇ ಅಲ್ಲವೇ..?

ಚಿರಂಜೀವಿತ್ವ ಕೂಡಾ ಶಾಪವಾಗಬಲ್ಲದು. ಮರಣ ಕೂಡಾ ವರವಾಗಬಲ್ಲದು. ಆಲೋಚನೆಯ ಮೇಲೆ ಬದುಕಿನ ಬಂಡಿ ನಿಂತಿದೆ. ಸಿಹಿಯನ್ನು ಮಾತ್ರ ತಿನ್ನುವ ಮನುಷ್ಯ ಯಾರೂ ಇರಲಾರ. ಅತಿಯಾದ ಸಿಹಿ ವಾಕರಿಕೆ ತರಿಸುತ್ತದೆ. ಅಂತೆಯೇ ಅತಿಯಾದ ಅಮೃತ ಕೂಡಾ ವಿಷವಾಗಿ ಪರಿಣಮಿಸಬಲ್ಲದು. ಭಾವಗಳ ಲೋಪ ಕೂಡಾ ಬದುಕಿನ ಒಂದು ಕಪ್ಪು ಚುಕ್ಕಿಯೇ.

ವಿಜ್ಞಾನ ಮತ್ತು ಸಾಹಿತ್ಯದ ಮೂಲ ಎರಡರ ಕೇಂದ್ರಬಿಂದುವಾಗಬಲ್ಲವು ಈ ಭಾವನೆಗಳು. ಸಾಹಿತ್ಯ ಸೃಷ್ಟಿಗೆ ಸೃಜನಶೀಲತೆ ಮುಖ್ಯವಾದರೂ ಭಾವಗಳಿಲ್ಲದೆ ಬರಹ ಹುಟ್ಟಲಾರದು. ಭಾವನೆಗಳು ನಮ್ಮವೇ ಆಗಬೇಕೆಂದಿಲ್ಲ. ಯಾವುದಾದರೂ ಕತೆ, ಕಾದಂಬರಿ ಓದಿದಾಗ ಮೂಡುವ ಭಾವಗಳು, ಸಿನಿಮಾ ನೋಡಿದಾಗ ಹುಟ್ಟುವ ಭಾವನೆಗಳು, ಯಾರದ್ದೋ ಜೀವನದ ಘಟನೆಗಳನ್ನು ಕೇಳಿದಾಗ ಹುಟ್ಟುವ ಭಾವಗಳು ಹೀಗೆ ಭಾವಗಳ ಮೂಲ ಅನೇಕ. ಈ ಭಾವನೆಗಳನ್ನು ಭಾವಜೀವಿ ಬಂಧಿಸಿ ಅಕ್ಷರ ರೂಪ ನೀಡುತ್ತಾನೆ ಕೆಲವರು ಅನುಭವಿಸಿ ಸುಮ್ಮನಾಗುತ್ತಾರೆ, ಇನ್ನು ಕೆಲವರು ಅಲ್ಲಿಯೇ ಮರೆಯುತ್ತಾರೆ. 

ಲೇಖಕರ ಭಾವನೆಗಳ ಲೇಖನ ಅಥವಾ ಕತೆಗಳನ್ನು ಓದಿದ ಕೆಲವರು ಅವು ಅವರ ಭಾವನೆಗಳೇ ಏನೋ ಎಂದು ಭಾವಿಸಿಬಿಡುತ್ತಾರೆ. ಪತ್ತೇದಾರಿ ಕತೆ ಬರೆಯಲು ಅವನು ಪತ್ತೆದಾರಿಯೇ ಆಗಿರಬೇಕಿಲ್ಲ, ಪ್ರೀತಿ ಅಥವಾ ಬ್ರೇಕಪ್ ವಿಚಾರಗಳನ್ನು ಬರೆಯಲು ಅವರ ಬದುಕಿನಲ್ಲಿ ಅವು ಸಂಭವಿಸಿರಸಬೇಕೆಂಬ ನಿಯಮವೇನೂ ಇಲ್ಲ. ಹಾಗಾದರೆ, ದೆವ್ವ-ಭೂತಗಳ ಕತೆ ಬರೆಯುವ ಲೇಖಕರಿಗೆ ಅದೆಷ್ಟು ದೆವ್ವ-ಭೂತಗಳ ಅನುಭವವಾಗಿರುತ್ತದೆ? ಅನುಭವ ಮಾತ್ರವಲ್ಲ ಕಲ್ಪನೆ ಕೂಡಾ ಭಾವಗಳ ಹರಿಕಾರ. 

ಭಾವಗಳು ಕೂಡಾ ಬದುಕಿನ ಎಷ್ಟೋ ಬಂಧಗಳನ್ನು ಬೆಸೆಯುತ್ತವೆ. ರಕ್ತ ಸಂಬಂಧಗಳು ಮಾತ್ರ ಬದುಕಿನ ಬಂಧಗಳನ್ನು ಬೆಸೆಯುವುದಿಲ್ಲ ಭಾವಗಳು ಸಹಾ ಬದುಕಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತವೆ. ಸ್ನೇಹಿತರು ಕೆಲವೊಮ್ಮೆ ಒಡ ಹುಟ್ಟಿದವರಿಗಿಂತ ಹೆಚ್ಚಾಗಬಲ್ಲರು. ಅದೇ ಬಂಧಗಳು ಬೇರಾದರೆ ಅವು ಕೊಡುವ ಯಾತನೆ ದೈಹಿಕ ನೋವಿಗಿಂತಲೂ ಹೆಚ್ಚು.

ನೋವು, ನಲಿವು, ಸುಖ, ದುಃಖ, ನಗು, ಅಳು ಹೀಗೇ ಪ್ರತಿಯೊಂದು ಭಾವಗಳೂ ವಿಭಿನ್ನ. ಎಲ್ಲವನ್ನೂ ಅನುಭವಿಸುದಾಗಲಷ್ಟೇ ಬದುಕಿನ ಭಾವಯಾನದ ಅನುಭವವಾಗಲು ಸಾಧ್ಯ. ಎಲ್ಲವೂ ಸುಗಮವಾಗಿ ಸಾಗಲು ಪ್ರಮುಖವಾದ ಭಾವಗಳ ಹತೋಟಿ ನಮ್ಮ ಬಳಿ ಇದ್ದರಷ್ಟೇ ಭಾವಯಾನ ಸುಸೂತ್ರವಾಗಿ ಸಾಗಲು ಸಾಧ್ಯ.

~ವಿಭಾ ವಿಶ್ವನಾಥ್

ಭಾನುವಾರ, ಜೂನ್ 14, 2020

ತಿರುತಿರುಗಿ....

ಬದುಕು ತಿರುತಿರುಗಿ ಮತ್ತೆ ಅದೇ ಪರಿಸ್ಥಿತಿಗೆ ನಮ್ಮನ್ನು ತಂದು ನಿಲ್ಲಿಸುತ್ತದೆ ಅಲ್ಲವೇ. ಮಾಡಿದ ಪಾಪ ಮತ್ತಾವುದೋ ಜನ್ಮದಲ್ಲಿ ಕಾಡದು. ಈ ಜನ್ಮದ ಋಣ ಈ ಜನ್ಮದಲ್ಲಿಯೇ ತೀರಬೇಕು. ಇಲ್ಲೇ ಡ್ರಾ ಇಲ್ಲೇ ಬಹುಮಾನ ಎನ್ನುವುದು ಈ ಕಲಿಗಾಲದ ತೀರ್ಪು. ಪಾಪ-ಪುಣ್ಯಗಳು ನರಕ, ಸ್ವರ್ಗದಲ್ಲಿಲ್ಲ. ಬದುಕಿನ ಎಲ್ಲಾ ಪಾಪಗಳಿಗೂ ಇಲ್ಲೇ ಬೆಲೆ ತೆರಬೇಕು. ಪುಣ್ಯ ಎಂಬುದಿದ್ದರೆ ಕೆಲಕಾಲ ನಿಮ್ಮದಿ ಇಂದ ಇರಬಹುದು ಅಥವಾ ಆ ಭ್ರಮೆಯಲ್ಲಿ ಬದುಕಬಹುದು. ತೀರದ ದಾಹಗಳಿಗೆ ಒಳಗಾಗಿ ಭ್ರಮೆಯಲ್ಲಿ ಏನನ್ನೋ ಮಾಡುತ್ತಿದ್ದೇವೆನ್ನುತ್ತಾ ಬದುಕುವ ಎಲ್ಲರಿಗೂ ನನ್ನ ಬದುಕು ಒಂದು ಪಾಠವಾಗಬಹುದು. ಅಥವಾ ಇದೂ ನನ್ನ ಭ್ರಮೆಯೇ..? ಅರಿವಿಲ್ಲ. ಹಾಗೆ ಪಾಠ ಕಲಿಯುವುದಿದ್ದರೆ ಎಷ್ಟು ಜನರ ಬದುಕಿನಿಂದ ನಾನು ಪಾಠ ಕಲಿಯಬಹುದಿತ್ತು.. ಬಹುಶಃ ಜೀವನದ ಪಾಠಕ್ಕೆ ಅನುಭವವೇ ಗುರು ಇರಬಹುದೇನೋ..


ಪ್ರಾಯಶ್ಚಿತ್ತವೇ ಮಾಡಿದ ಪಾಪಗಳಿಗೆ ತಕ್ಕ ಶಾಸ್ತಿ ಎನ್ನುತ್ತಾರೆ. ಹಾಗಿದ್ದಲ್ಲಿ ನನ್ನ ಪ್ರಾಯಶ್ಚಿತ್ತ ನನ್ನ ಮಗಳ ಬದುಕನ್ನು ಸರಿ ಮಾಡಬಲ್ಲದೇ..? ಅವಳ ಬದುಕು ಸರಿಯಾಗುತ್ತದೆ ಎಂದರೆ ನನ್ನ ಪ್ರಾಣ ಕೊಡಲು ಸಹಾ ನಾನು ಸಿದ್ಧನಿದ್ದೇನೆ. ಆದರೆ, ಅವಳ ಬದುಕು ಮತ್ತಾವುದಾದರೂ ಬಗೆಯಿಂದ ಸರಿಯಾಗಲಿ ಎಂಬ ಆಸೆಯಿಂದ ಇನ್ನೂ ಜೀವ ಬಿಗಿ ಹಿಡಿದು ಕಾದಿದ್ದೇನೆ. ಆದರೆ, ಅವಳು ಮತ್ತೆ ನನ್ನನ್ನು "ಅಪ್ಪಾ" ಎಂದು ಕರೆಯಬಲ್ಲಳೆ? ಈ ಪಾಪಿಯ ಬದುಕಿನಲ್ಲಿ ಅಷ್ಟಾದರೂ ಆಶಾಭಾವನೆ ಉಳಿಯಬಹುದೇ..? ಕಾಲವೇ ಇದಕ್ಕೆಲ್ಲಾ ಉತ್ತರ ನೀಡಬೇಕಷ್ಟೇ..

ನಾನು ಗೋಪಾಲ. ಬಡತನದ ಕುಟುಂಬದಿಂದ ಸಿರಿವಂತಿಕೆಯ ಒಂದೊಂದೇ ಮೆಟ್ಟಿಲೇರಿದೆ. ಬಡತನದ ಹೀನಾಯ ಸ್ಥಿತಿಯಲ್ಲಿ ನಮ್ಮನ್ನು ಭಿಕಾರಿಗಳಂತೆ ಕಾಣುತ್ತಿದ್ದವರೆಲ್ಲಾ ಸಿರಿವಂತಿಕೆ ಬರುತ್ತಿದ್ದ ಹಾಗೆ ನಮ್ಮ ಸುತ್ತ ನೆರೆಯಲು ಶುರು ಮಾಡಿದರು. ಹಣವಿದ್ದರೆ ಬಳಗ ಎಂದು ತಿಳಿದು ಸರ್ಕಾರಿ ಕೆಲಸದ ಜೊತೆ ಹೊಸ ಸಂಪಾದನೆಯ ಮಾರ್ಗವನ್ನು ಹಿಡಿದೆ. ಅದು ಯಾರೂ ಮಾಡಬಾರದ ಕೆಲಸವೇನಲ್ಲ. ಇಂದಿಗೂ ಅದು ಪುಣ್ಯ ಕಾರ್ಯ ಎಂದೇ ಭಾವಿಸಲಾಗುವ ಮದುವೆಯ ದಲ್ಲಾಳಿಯ ಕೆಲಸ. ಮನೆಯಲ್ಲಿ ಇದಕ್ಕೆ ಯಾರ ವಿರೋಧವೂ ನೇರವಾಗಿ ವ್ಯಕ್ತವಾಗಲಿಲ್ಲ. ವ್ಯಕ್ತವಾಗಿದ್ದರೂ ಅದನ್ನು ಗಮನಿಸುವ ಸ್ಥಿತಿಯಲ್ಲಿಯೂ ನಾನಿರಲಿಲ್ಲ. ಕಾಲಕ್ರಮೇಣ ಈ ಕೆಲಸದಿಂದ ಸಿಗುವ ಸಂಪಾದನೆ ಹೆಚ್ಚಾಗಿ ಸರ್ಕಾರಿ ಕೆಲಸವನ್ನು ಕಡೆಗಣಿಸಿ ಕೆಲಸ ಬಿಟ್ಟೆ. 


ಕನ್ಯಾದಾನದ ಪುಣ್ಯದ ಕುರಿತು ಮಾತನಾಡುತ್ತಿದ್ದ ನನಗೆ ಅದರ ಹಿಂದಿನ ಕಾರ್ಯಗಳ ಕುರಿತು ಸಹಾ ಆರಿವಿದ್ದಿತು. ಎಲ್ಲಾ ಪುಣ್ಯ ಕಾರ್ಯಗಳ ಹಿಂದೆಯೂ ಪಾಪ-ಕಾರ್ಯಗಳ ಲವಲೇಶ ಇಲ್ಲದ್ದಿಲ್ಲ. ಅರಿತೋ ಅರಿಯದೆಯೋ ಪಾಪಕಾರ್ಯ ನಡೆದೇ ಇರುತ್ತದೆ. ಬರುಬರುತ್ತಾ ಈ ಕೆಲಸದಲ್ಲಿ ಎಷ್ಟು ತೊಡಗಿಸಿಕೊಂಡೆನೆಂದರೆ ವಧು-ವರರನ್ನು ಹೊಂದಿಸುವುದು ನೀರು ಕುಡಿದಷ್ಟೇ ಸುಲಭವಾಗಿದ್ದಿತು ನನಗೆ. ಆನ್ಲೈನ್ ವಧು-ವರರ ಸೈಟ್ ಗಳು ತೀರಾ ಇತ್ತೀಚೆಗೆ ಬಂದರೂ ಈ ಗೋಪಾಲಯ್ಯನ ಕೆಲಸಕ್ಕೆ ಕಿಂಚಿತ್ತೂ ಸಹಾ ತೊಂದರೆಯಾಗಿರಲಿಲ್ಲ ಅದರಿಂದ. 

ಸಾವಿರ ಸುಳ್ಳು ಹೇಳಿಯಾದರೂ ಒಂದು ಮದುವೆ ಮಾಡು ಎಂಬ ಮಾತು ನನ್ನ ಪಾಲಿನ ರಹಸ್ಯ ಮಂತ್ರವಾಗಿತ್ತು. ಬಡವರ, ಸಿರಿವಂತರ ಇಬ್ಬರ ಮನಸ್ಥಿತಿಯ ಅರಿವಿತ್ತು. ಕೆಲವರ ಹಣದ ಆಸೆಗೆ, ವರದಕ್ಷಿಣೆಯ ಆಸೆಗೆ ಎಷ್ಟೋ ಹೆಣ್ಣುಗಳ ಬಲಿಯಾಗಿದ್ದಿದೆ. ಕೆಲವು ಹೆಣ್ಣುಗಳ ಮತ್ತೊಂದು ಸಂಬಂಧಕ್ಕೆ ಗಂಡಿನ ಜೀವನ, ಜೀವ ಬಲಿಯಾಗಿದ್ದಿದೆ. ಈ ಎಷ್ಟೋ ಸಂಬಂಧಗಳ ಸೂತ್ರಧಾರಿಯಾಗಿ, ಅದರ ಹಿಂದಿನ ಸಂಬಂಧಗಳ ಮುಚ್ಚಿಟ್ಟ ಸುಳ್ಳಿನ ಹಿಂದೆ ನನ್ನ ಪಾಲು ಅತಿ ಹೆಚ್ಚಿತ್ತು.

ಸುಚಿತ್ರಾ ಮದುವೆಯಾಗುವ ಗಂಡಿಗೆ ಯಾವುದೇ ಕೆಟ್ಟ ಚಟ ಇಲ್ಲ ಎಂದು ನಂಬಿಸಿದ್ದೆ. ಅವನ ಅತಿಯಾದ ಕುಡಿತದಿಂದ ಮದುವೆಯಾದ ಮೂರು ತಿಂಗಳೊಳಗೆ ಅವನು ಸತ್ತ. ಅದರ ಫಲ ಸುಚಿತ್ರಾ ವಿಧವೆಯಾದಳು. ಹೆಚ್ಚಿನ ಓದಿಲ್ಲ, ಮಾಡಲು ಕೆಲಸವಿಲ್ಲ. ಗಂಡನ ಮನೆಯಲ್ಲಿ ಅನಿಷ್ಟ ಎಂಬ ಹಣೆಪಟ್ಟಿ, ಬಡತನದ ಹೆಣ್ಣು ಮಕ್ಕಳೇ ತುಂಬಿದ ಅವಳ ತವರುಮನೆ ಅವಳ ಪಾಲಿಗೆ ಮರೀಚಿಕೆ.

ಭಾಗ್ಯಳ ಹಿಂದಿನ ಬದುಕಿನಲ್ಲಿ ಯಾವುದೇ ಪ್ರೇಮ ಪ್ರಕರಣ ಇಲ್ಲವೆಂದು ಹೇಳಿ ಅವಳನ್ನು ಮದುವೆ ಮಾಡಿಸಿದೆ. ಆಸ್ತಿಯ ಆಸೆಗೋ ಏನೋ ಅವಳೂ ಸಹಾ ಒಪ್ಪಿದ್ದಳು. ಮದುವೆಯಾದ ಆರು ತಿಂಗಳಲ್ಲೇ ಗಂಡನಿಗೆ ಮೋಸ ಮಾಡಿ ಪ್ರಿಯಕರನೊಟ್ಟಿಗೆ ಪರಾರಿಯಾದಳು. ಅವಳನ್ನೇ ನಂಬಿಕೊಂಡಿದ್ದ ಅವಳ ಗಂಡ ಅವಳ ನಂಬಿಕೆ ದ್ರೋಹದಿಂದ ಇಂದು ಜನರ ಮೇಲಿನ ನಂಬಿಕೆಯನ್ನೇ ಕಳೆದುಕೊಂಡಿದ್ದಾನೆ. 

ಆಗಲೋ, ಈಗಲೋ ಸಾಯುವ ಮುದುಕನಿಗೆ ಹದಿಹರೆಯದ ಹೆಣ್ಣಿನೊಟ್ಟಿಗೆ ಮದುವೆ.. ಈಗೇ.. ನಾನು ಮಾಡಿದ ಕೆಲಸದಲ್ಲಿ ಪಾಪ-ಪುಣ್ಯದ ಲೆಕ್ಕ ನಾನಿಡಲಿಲ್ಲ. ನಾನಿಟ್ಟದ್ದು ಹಣದ ಲೆಕ್ಕ ಮಾತ್ರ. ಕನ್ಯಾದಾನದಿಂದ ಪುಣ್ಯ ಬರುವುದೇ ಸತ್ಯವಾದರೆ ಅವರ ಮುಂದಿನ ಬಾಳು ಹಸನಾಗದಿದ್ದಲ್ಲಿ ಪಾಪ ಬರುವುದು ಸಹಾ ಸತ್ಯವಾಗಬೇಕಲ್ಲವೇ..?  ಮದುವೆಯವರೆಗೆ ಮಾತ್ರ ಎಲ್ಲರೂ ವಿವಾಹದ ಕುರಿತು ಗಮನ ಹರಿಸುತ್ತಾರೆ. ಅದರ ಮುಂದಿನ ಬದುಕು ಯಾರಿಗೂ ಬೇಡದ ವಿಷಯ. ಸಂಬಂಧಗಳಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದರೂ ಸಹಾ ಕಾಲ್ಗುಣ, ನಕ್ಷತ್ರ, ಕುಟುಂಬಗಳ ಪ್ರವರಗಳತ್ತ ಮಾತು ಹೊರಳುತ್ತದೆ. ನನ್ನ ಹೆಸರು ಮತ್ತು ಹಾಜರಿ ಅಲ್ಲಿ ಅಪ್ರಸ್ತುತ. 

ಅವರ ಕಣ್ಣೀರಿನ, ಶಾಪಗಳ ಪ್ರತಿಫಲ ಇಂದು ನನ್ನ ಬಾಳಲ್ಲಿ ನನ್ನ ಮಗಳ ಬದುಕಿಗೆ ತಟ್ಟಿದೆ ಎನ್ನಿಸುತ್ತದೆ. ಬದುಕು ಬಹಳ ಚಿಕ್ಕದು ತಿರುತಿರುಗಿ ಮತ್ತದೇ ಬಿಂದುವಿಗೆ ಬಂದು ನಿಲ್ಲುತ್ತದೆ. ಕಾಲಚಕ್ರ ಉರುಳುತಲಿತ್ತು. ನನಗೂ ಒಂದು ಕುಟುಂಬವಿದೆ ಎಂಬುದು ಹಣ ಸಂಪಾದನೆಯ ಹಾದಿಯಲ್ಲಿ ಮರೆತೇ ಹೋಗಿತ್ತು. ಇದ್ದ ಒಬ್ಬಳೇ ಮಗಳು ವಿವಾಹದ ವಯಸ್ಸಿನಲ್ಲಿದ್ದಳು. ಅವಳಿಗೆ ನನ್ನ ಈ ಕೆಲಸ ಇಷ್ಟವಿರಲಿಲ್ಲ, ಹಾಗೆಂದೂ ಯಾವತ್ತೂ ಬಾಯಿಬಿಟ್ಟು ಹೇಳಿರಲೂ ಇಲ್ಲ. ಮೊದಲಿಂದಲೂ ಅವಳಿಗೆ ನಾನು ಆಯ್ಕೆಯ ಸ್ವಾತಂತ್ರ್ಯ ನೀಡಿದವನೇ ಅಲ್ಲ. ಅದು ಅವಳ ಮೇಲಿನ ಅಪನಂಬಿಕೆಯಿಂದ ಅಲ್ಲ. 

ಪೋಷಕರು ಮಕ್ಕಳಿಗೆ ಆಯ್ಕೆಯ ಸ್ವಾತಂತ್ರ್ಯ ನೀಡದಿರುವುದು ಅವರ ಮೇಲಿನ ಅಪನಂಬಿಕೆಯಿಂದ ಅಥವಾ ದ್ವೇಷದಿಂದಲೋ ಅಲ್ಲ.. ಅತಿಯಾದ ಮಮತೆಯಿಂದ, ಅವರ ಮೇಲಿನ ಅತಿಯಾದ ಕಾಳಜಿಯಿಂದ. ಮಕ್ಕಳ ಆಯ್ಕೆ ತಪ್ಪಾದಲ್ಲಿ ಎಂಬ ಭಯದಿಂದ ಅಷ್ಟೇ.. ಕೆಲವೊಮ್ಮೆ ಮಕ್ಕಳು ಇದನ್ನು ಧಿಕ್ಕರಿಸಿ ನಿಲ್ಲುತ್ತಾರೆ. ಆದರೆ, ನನ್ನ ಮಗಳ ವಿಷಯದಲ್ಲಿ ನಾನು ಅದೃಷ್ಟ ಮಾಡಿದ್ದೆ. ನನ್ನ ಆಯ್ಕೆಯನ್ನು ಅವಳು ಎಂದಿಗೂ ಧಿಕ್ಕರಿಸಿರಲಿಲ್ಲ. ಅವಳು ನನ್ನ ಆಯ್ಕೆಯನ್ನು ಧಿಕ್ಕರಿಸಿದ್ದಾರೆ ಇಂದು ಅವಳ ಬಾಳು ಹಸನಾಗುತ್ತಿತ್ತೋ ಏನೋ.. ವಿಧಿಯ ಆಯ್ಕೆ ಬೇರೆಯೇ ಇದ್ದರೆ ಅದನ್ನು ಬದಲಾಯಿಸಲು ಹುಲುಮಾನವರಾದ ನಮಗೆ ತಾನೇ ಹೇಗೆ ಸಾಧ್ಯ..?

ಅವಳ ಬದುಕಿನ ಆಯ್ಕೆಯನ್ನು ನಾನೇ ಮಾಡಿದ್ದೆ, ಆತ ಪ್ರತಿಷ್ಠಿತ ಮನೆತನದ ವರ. ದೊಡ್ಡ ಕಾಲೇಜಿನಲ್ಲಿ ಲೆಕ್ಚರರ್. ನಾನು ಲೆಕ್ಕ ತಪ್ಪಿದ್ದೆಲ್ಲಿ ನನಗೇ ತಿಳಿಯಲಿಲ್ಲ. ಅವರ ಐಶ್ವರ್ಯ ನನ್ನ ಕಣ್ಣನ್ನು ಕುರುಡಾಯಿಸಿತೇ? ಮಗಳ ಬಾಳನ್ನು ಹಸನುಗೊಳಿಸುವ ಆತುರ ನನ್ನನ್ನು ದಾರಿ ತಪ್ಪಿಸಿತೇ..? ನನಗೆ ತಿಳಿದವರು, ಹತ್ತಿರದವವರೆಲ್ಲರಿಗೂ ಐಶ್ವರ್ಯದ ಹಿಂದಿನ ಅಸಲಿಯತ್ತು ತಿಳಿದಿತ್ತು . ಆದರೆ, ಯಾರೂ ತಡೆಯಲಿಲ್ಲ. ಮುಖವಾಡವನ್ನು ಯಾರೂ ಕಳಚಲಿಲ್ಲ. ಸಾವಿರ ಸುಳ್ಳನಾದರೂ ಹೇಳಿ ಮದುವೆ ಮಾಡು ಎಂಬ ಮಂತ್ರವನ್ನು ಅವರೂ ನಂಬಿಕೊಂಡಿದ್ದರೋ ಏನೋ.. ಅಥವಾ ಅವರ ಮಕ್ಕಳ ಬಾಳಿನ ದುಸ್ಥಿತಿಗೆ ಕಾರಣನಾದ ನನ್ನ ಮೇಲಿನ ಕೋಪವೋ.. ಯಾರನ್ನು ದೂಷಿಸಿ ಏನು ಫಲ..?

ಮದುವೆಯಾದ ನಂತರ ಅಲ್ಲಿಂದ ಯಾವ ಸುದ್ದಿಯೂ ಬರುತ್ತಿರಲಿಲ್ಲ. ಅವರ ಬದುಕು ಅವರವರಿಗೆ ಬಿಟ್ಟದ್ದು ಎನ್ನುತ್ತಾ ನವದಂಪತಿಗಳು ಅವರ ಲೋಕದಲ್ಲಿ ಮುಲುಗಿದ್ದಾರೆ ಎಂದೇ ಸುಮ್ಮನಾಗಿದ್ದೆ. 20 ದಿನಗಳ ನಂತರ ಬಂದದ್ದು ಕರಾಳ ಸುದ್ದಿ. ನನ್ನ ಮಗಳು ಅವಳ ಗಂಡನನ್ನು ಸಾಯಿಸಿದ್ದಳು ಎಂಬ ಆಘಾತಕಾರಿ ಸುದ್ದಿ. ತಕ್ಷಣವೇ ಅಲ್ಲಿ ಹೋಗಿ ನೋಡಿದರೆ ನನ್ನ ಮಗಳೆಂಬಂತೆಯೇ ಅವಳಿರಲಿಲ್ಲ. ಸೊರಗಿದ ದೇಹ, ಗುಳಿಬಿದ್ದ ಕಣ್ಣು, ಅತ್ತು ಅತ್ತು ಅಳಲು ಸಾಧ್ಯವೇ ಇಲ್ಲವೇನೋ ಎಂಬಂತಾಗಿದ್ದ ಅವಳ ಕಂಗಳನ್ನು ದಿಟ್ಟಿಸಿದರೆ ರೋಷವನ್ನು ತಣಿಸಿಕೊಂಡ ತೃಪ್ತಿ ಇತ್ತು.

ಅವನಿಗೆ ಅದಾಗಲೇ ಎಷ್ಟೋ ಹೆಣ್ಣುಗಳ ಹುಚ್ಚಿತ್ತಂತೆ, ಇವಳು ಬರೀ ಹೆಸರಿಗೆ, ಅಂತಸ್ತಿನ ತೋರಿಕೆಗೆ ಲೋಕದ ಕಣ್ಣಿಗಷ್ಟೇ ಹೆಂಡತಿ. ದಿನಾ ರಾತ್ರಿ ರೌರವ ನರಕ ದರ್ಶನ ಮಾಡಿಸುತ್ತಿದ್ದ ಅವಳಿಗೆ. ಮೈಯಲ್ಲೆಲ್ಲಾ ಸುಟ್ಟ ಗಾಯಗಳ ಗುರುತು, ಸುಖಾಸುಮ್ಮನೆ ಅನುಮಾನ. ಅವಳು ಸಹಿಸಿ ದೇವಿಯಾದಷ್ಟೂ ಇವನು ರಕ್ಕಸನಾಗುತ್ತಿದ್ದ, ಕೊನೆಗೆ ಅವಳೇ ದುರ್ಗೆಯಾಗಿ ಇವನ ಅಂತ್ಯ ಮಾಡಿದಳು. ಅವಳ ಕೋಪದ ತಾಪ ಎಷ್ಟಿತ್ತೆಂದರೆ ಅವನ ಮೈಯಲ್ಲಿ ಬಿದ್ದಿದ್ದ ಚಾಕುವಿನ ಏಟುಗಳು ಎಣಿಸಲಾರದಷ್ಟು.. ಸತ್ತ ನಂತರವೂ ಅದೆಷ್ಟೋ ಹೊತ್ತು ಚುಚ್ಚುತ್ತಲೇ ಇದ್ದಳಂತೆ. ಕುಡಿದು ತುರಾಡುತ್ತಾ ಬಂದವನಿಗೆ ನಿಲ್ಲಲೂ ತ್ರಾಣವಿರಲಿಲ್ಲ, ಇನ್ನು ಇವಳನ್ನು ಹೇಗೆ ತಡೆದಾನು? ಗೋಮುಖ ವ್ಯಾಘ್ರನ ಹತ್ಯೆಯಾಗಿತ್ತು.

ನನ್ನ ಮಗಳ ಕುರಿತು ನನಗೆ ಕೋಪವಿರಲಿಲ್ಲ. ವಿಚಾರಿಸದೆ ವಿವಾಹ ಮಾಡಿಕೊಟ್ಟದಕ್ಕೆ ನನ್ನ ಬಗ್ಗೆಯೇ ನನಗೆ ಅಸಹ್ಯವಿತ್ತು. ಅವಳನ್ನು ಬಿಡಿಸಲು ಮಾಡುತ್ತಿದ್ದ ಎಲ್ಲಾ ಪ್ರಯತ್ನಗಳನ್ನೂ ಅವಳು ತಿರಸ್ಕರಿಸುತ್ತಲೇ ಇದ್ದಾಳೆ. ನನ್ನನ್ನು ಅಪರಿಚಿತನಂತೆ ದೂರವಿರಿಸಿದ್ದಾಳೆ. ನನ್ನನ್ನು "ಅಪ್ಪಾ" ಎಂದು ಕರೆಯಲು ಸಹಾ ಅವಳಿಗೆ ಅಸಹ್ಯವಂತೆ. ನನ್ನ ಪಾಪ-ಕರ್ಮಗಳನ್ನು ತಡೆಯದೆ ಸುಮ್ಮನಿದ್ದುದಕ್ಕೆ ಅವಳಿಗೆ ದೇವರು ಕೊಟ್ಟ ಶಿಕ್ಷೆಯಂತೆ ಇದು. ಮಗಳನ್ನು ಆ ಸ್ಥಿತಿಯಲ್ಲಿ ನೋಡಿದ ಅವಳ ತಾಯಿ ಮಾನಸಿಕ ಅಸ್ವಸ್ಥೆಯಾಗಿ ಇಂದು ಆಸ್ಪತ್ರೆಯಲ್ಲಿದ್ದಾಳೆ. ಇದೆಲ್ಲವನ್ನು ನೋಡಲು ನಾನು ಮಾತ್ರ ಇನ್ನೂ ಜೀವಂತವಾಗಿದ್ದೇನೆ.

ಮಕ್ಕಳ ಬಾಳು ಹಾಳಾದಾಗ ತಂದೆ-ತಾಯಿ ಅನುಭವಿಸುವ ಶಿಕ್ಷೆ ನನಗಾಗಿದೆ. ನನ್ನ ಈ ಪರಿಸ್ಥಿಗೆ ಮುಕ್ತಿ ಇಲ್ಲವೇ..? ಪ್ರತಿ ದಿನ ಜೈಲಿನ ಬಳಿ ಹೋದಾಗಲೂ ನನ್ನ ಮುಖ ನೋಡದೆಯೇ ನನ್ನ ಮಗಳು ನನ್ನನ್ನು ನಿರಾಕರಿಸುತ್ತಾಳೆ. ಅವಳ ಮುಂದಿನ ಭವಿಷ್ಯದ ಗತಿ..? ನಾನಿಲ್ಲದೆಯೇ ಎಲ್ಲರೂ, ಎಲ್ಲವೂ ಸಾಂಗವಾಗಿ ಸಾಗುತ್ತದೆ. 

ಭಗವಂತ ಗಂಡಿಗೊಂದು ಹೆಣ್ಣು, ಹೆಣ್ಣಿಗೊಂದು ಗಂಡು ಸೃಷ್ಟಿ ಮಾಡಿರುತ್ತಾನೆ. ಅದನ್ನು ಗಂಟು ಹಾಕುತ್ತಿದ್ದೇವೆ ಎಂಬ ಭ್ರಮೆಯಲ್ಲಿ ನಾವು ಎಲ್ಲರ ಭವಿಷ್ಯವನ್ನೂ ಗೋಜಲಾಗಿಸಿ ಬಿಡುತ್ತೇವೆ. ಇಷ್ಟೆಲ್ಲಾ ಪತ್ರದಲ್ಲಿ ಬರೆದ ನಾನು ನನ್ನ ಬದುಕನ್ನು ಕೊನೆಗಾಣಿಸಿಕೊಳ್ಳುತ್ತಿದ್ದೇನೆ. ಬದುಕಿನ ಗೋಜಲಾದ ಗಂಟುಗಳನ್ನು ಬಿಡಿಸಿಕೊಳ್ಳಲು ನನಗೆ ಸಾಧ್ಯವಾಗುತ್ತಿಲ್ಲ, ಯಾವುದೋ ಗಂಟನ್ನು ಕಡಿದು ಹೊರಡುತ್ತಿದ್ದೇನೆ.
------------------------------------
(ತಿರುತಿರುಗಿ ತಿರುಗುತ್ತೆ ಬುಗುರಿ
ತಾನೇ ಸೋತು|
ತಿರೇಗುರುಳುವುದು ತನ್ನ ಬಲವ
ತಾಂ ಕಳೆದು||
ನರನುಮಂತೆಯೇ ಸುತ್ತಿ ಕಡೆಗೊಂದು ದಿನ
ತೆರುವನಸ್ಥಿಯ ಧರೆಗೆ-ಮಂಕುತಿಮ್ಮ

ಡಿ.ವಿ.ಜಿ ಯವರ ಈ ಮಂಕುತಿಮ್ಮನ ಕಗ್ಗದ ಸಾಲುಗಲನ್ನು ಓದಿದ ನಂತರ ಆಲೋಚನೆಗೆ ಬಂದ ಕತೆ)

ನಿಮ್ಮ ಅಮೂಲ್ಯವಾದ ಅಭಿಪ್ರಾಯಗಳನ್ನು ತಿಳಿಸುವಿರಿ ಎಂಬ ನಂಬಿಕೆಯೊಂದಿಗೆ

~ವಿಭಾ ವಿಶ್ವನಾಥ್

ಭಾನುವಾರ, ಜೂನ್ 7, 2020

ಪ್ರತಿಯೊಂದೂ ಬದಲಾಗುತ್ತದೆ

ಪ್ರತಿಯೊಂದೂ ಬದಲಾಗುವುದಿಲ್ಲಿ

ಕೊನೆಯುಸಿರಿನಿಂದಲೂ ಹೊಚ್ಚ ಹೊಸದಾಗಿ
ಪುನರಾರಂಭಿಸಬಹುದು
ಆದರೆ, ಆದದ್ದು ಆಗಿಹೋಗಿದೆ.. ಬದಲಾಗದಲ್ಲ
ಸುರೆಗೆ ಬೆರೆಸಿದ ನೀರು, ಒಮ್ಮೆ ಬೆರೆಸಿದ ನಂತರ..
ಹಿಂಗಿಸಿ ಹಿಂಪಡೆಯಲಾಗುವುದಿಲ್ಲ..

ಆದದ್ದೆಲ್ಲಾ ಆಗಿ ಹೋಗಿದೆ, ಬದಲಾಯಿಸಲಾಗದು
ಸುರೆಗೆ ಬೆರೆಸಿದ ನೀರು, ಒಮ್ಮೆ ಬೆರೆಸಿದ ನಂತರ..
ಹಿಂಗಿಸಿ ಹಿಂಪಡೆಯಲಾಗುವುದಿಲ್ಲ..
ಆದರೆ,
ಭವಿಷ್ಯದ ಪ್ರತಿಯೊಂದನ್ನೂ ಬದಲಾಯಿಸಬಹುದು
ಪ್ರತಿಯೊಂದೂ ಬದಲಾಗುತ್ತದೆ..
ನೀನು ಮತ್ತೊಮ್ಮೆ ಹೊಸದಾಗಿ ಪುನರಾರಂಭಿಸಬಹುದು
ನಿನ್ನ ಕೊನೆಯುಸಿರಿನಿಂದ..

-ಬ್ರೆಕ್ಟ್
(ಭಾವಾನುವಾದ : ವಿಭಾ ವಿಶ್ವನಾಥ್)

ಮೂಲ ಕವಿತೆ:
Everything Changes

Everything Changes, You can make
A fresh start with your final breath
But what has happened has happened, And the water
You once poured into the wine cannot be
Drained off again

What has happened has happened, The water
You once poured into the wine cannot be
Drained off again, but
Everything changes, You can make
A fresh start with your final breath

-Bertolt Brect