ಭಾನುವಾರ, ಅಕ್ಟೋಬರ್ 18, 2026

ಮುಟ್ಟು ಗುಟ್ಟೇ ?

 


ಮಗಳು ಧಾತ್ರಿ ಮೊದಲ ಬಾರಿಗೆ ಮುಟ್ಟಾದಾಗ ಗೌರಿ "ಶ್! ಇದನ್ನು ಯಾರಿಗೂ ಹೇಳಬೇಡವೇ.. ನಾಳೆ ಸುಮ್ಮನೆ ಹೋಗಿ ಪರೀಕ್ಷೆ ಬರೆದು ಬಾ. ಎಸ್.ಎಸ್.ಎಲ್.ಸಿ ಪರೀಕ್ಷೆ ಒಂದು ಹಂತದಲ್ಲಿ ನಿನ್ನ ಬದುಕಿನ ನಿರ್ಧರಿತ ಘಟ್ಟ. ನಾಳೆ ಪರೀಕ್ಷೆ ಮುಗಿದ ಮೇಲೆ ಎಲ್ಲರಿಗೂ ಹೇಳಿದರಾಯಿತು. " ಎಂದಾಗ "ಅಯ್ಯೋ ನೀನೊಬ್ಬಳು.. ಇನ್ನೂ ಹಳೇ ಕಾಲದಲ್ಲೇ ಇದ್ದೀಯ. ಪಿರಿಯೆಡ್ಸ್ ಆದ್ರೆ ಏನಾಯ್ತು ? ಎಕ್ಸಾಂಗೆ ಕಳುಹಿಸುದಿಲ್ಲವಾ..?? ನನ್ನ ಫ್ರೆಂಡ್ಸ್ ಎಲ್ಲಾ ಆಗಲೇ ಪಿರಿಯೆಡ್ಸ್ ಆಗಿದ್ದಾರೆ. ಅವರೆಲ್ಲಾ ಸ್ಕೂಲಿಗೆ ಬರುತ್ತಾ ಇದ್ದಾರೆ. ಅದೂ ಅಲ್ಲದೇ ನಮ್ಮ ಮಿಸ್ ಹೇಳಿದ್ದಾರೆ.. ಇದೇನೂ ಮುಚ್ಚು ಮರೆ ಮಾಡುವ ವಿಷಯ ಅಲ್ಲ. ಎಲ್ಲಾ ಹೆಣ್ಣು ಮಕ್ಕಳ ಬದುಕಿನಲ್ಲಿಯೂ ಬರುವಂತಹದ್ದೇ.. ಇಟ್ಸ್ ಅ ನ್ಯಾಚುರಲ್ ಪ್ರೊಸೆಸ್. ಅದಕ್ಕೆ ಹೆದರುವುದು ಬೇಡ ಅಂತಾ. ನಮಗೆ ಸೈನ್ಸ್ ಅಲ್ಲಿಯೂ ಈ ಕುರಿತು ಲೆಸೆನ್ ಇದೆ. ಸ್ವಲ್ಪ ಅಪ್ಡೇಟ್ ಆಗು ಅಮ್ಮ" ಎಂದ ಧಾತ್ರಿಯ ಮಾತು ಕೇಳಿ..


"ನಾನು ಅಪ್ಡೇಟ್ ಆಗಿದ್ದೇನೆ ಕಣೇ.. ಅದಕ್ಕೇ ಹೇಳಿದ್ದು ರೆಸ್ಟ್ ಮಾಡು ಅಂತಾ.. ಎಕ್ಸಾಂಗೂ ಹೋಗಿ ಬಾ ಅಂತಾ ಹೇಳಿದೆ ಅಲ್ವಾ.. ನಿಮ್ಮಜ್ಜಿಗೇನಾದರೂ ಗೊತ್ತಾದರೆ ಅವರು ನಿನ್ನನ್ನು ಎಕ್ಸಾಂಗೆ ಹೋಗಬೇಡ ಅಂತಾ ಹೇಳಿದ್ರೂ ಹೇಳಿದರೇ.. ಯಾವುದನ್ನೂ ಹೇಳೋಕಾಗಲ್ಲ ಕಣೇ. ನನಗಂತೂ ಅವರಿಗೆ ಎದುರು ವಾದಿಸುವ ಶಕ್ತಿ ಇಲ್ಲ. ಆಮೇಲೆ ಏನಾದರೂ ಮಾಡಿಕೋ.." ಎನ್ನುತ್ತಾ ಇದ್ದ ಗೌರಿ ಹಾಗೂ ಧಾತ್ರಿಯ ಮಾತನ್ನು ಅರ್ಧಂಬರ್ಧ ಕೇಳಿಸಿಕೊಂಡ ಹರ್ಷ "ಏನದು ಅಮ್ಮ ಮಗಳದ್ದು.. ನಮ್ಮಮ್ಮ ಏನು ಮಾಡ್ತಾರೆ. " ಎಂದಾಗ


"ನೋಡಿಪಾ.. ನಾನು ಪಿರಿಯೆಡ್ಸ್ ಆದೆ. ಅದಕ್ಕೆ ಅಮ್ಮ ಅದೇನೋ ಗುಟ್ಟು ಮಾಡುವವರ ಹಾಗೆ ಹೇಳುತ್ತಾ ಇದ್ದಾರೆ." ಎಂದು ಜೋರು ಧ್ವನಿಯಲ್ಲಿಯೇ ದೂರುತ್ತಿದ್ದಾಗ "ಶ್! ಮೆಲ್ಲ ಕಣೇ. ರೀ ನೀವು ಇದನ್ನು ಯಾರಿಗೂ ಹೇಳ್ಬೇಡಿ ಆಯ್ತಾ.." ಎನ್ನುತ್ತಿದ್ದ ಹಾಗೆ ಹರ್ಷ "ಅಲ್ವೇ.. ಸೂತಕ ಬರುತ್ತಲ್ವಾ.. ಯಾರಿಗೂ ಹೇಳ್ಬೇಡಿ ಅಂತಾ ಇದ್ದೀಯ. ಅಮ್ಮನಿಗೆ ಗೊತ್ತಾದ್ರೆ.." ಎನ್ನುತ್ತಿದ್ದಂತೆಯೇ ಆತನ ಅಮ್ಮ ಬಾಗಿಲಲ್ಲೇ ನಿಂತಿದ್ದರು.


"ಅಲ್ಲಾ ಗೌರಿ.. ನೀನು ನನ್ನಿಂದ ವಿಷಯ ಮುಚ್ಚಿಡುತ್ತಾ ಇದ್ದೀಯಾ..?? ಅಲ್ಲಾ.. ನಾನೇನು ಅಂತಹಾ ಮಾಡಬಾರದ್ದನ್ನು ಮಾಡುತ್ತೇನೆ ಹೇಳು. ನನ್ನ ಮೇಲೆ ಅಷ್ಟೂ ನಂಬಿಕೆ ಇಲ್ಲವಾ.. ಇನ್ನೂ ನೀನು ನನ್ನನ್ನು ಅರ್ಥ ಮಾಡಿಕೊಂಡಿಲ್ಲವಾ..


ಮೂರು ದಿನ ನಿನ್ನನ್ನು ಅಡುಗೆ ಮನೆಯಿಂದ ದೂರ ಇಡುವುದು ನಿನಗೆ ಸಂಪೂರ್ಣ ವಿಶ್ರಾಂತಿ ಸಿಗಲಿ ಅಂತಾ.. ಮೈಲಿಗೆ ಅಂತಾ ನಾನು ಯಾವತ್ತಾದರೂ ಭಾವಿಸಿದ್ದೀನಾ ಹೇಳು. ಅದು ಮುಟ್ಟಬೇಡ, ಇದು ಮುಟ್ಟಬೇಡ ಅಂತಾ ಏನಾದರೂ ಹೇಳುತ್ತಾ ಕಟ್ಟು ಹಾಕುತ್ತೇನಾ.." ಎಂದು ಬೇಸರ ವ್ಯಕ್ತ ಪಡಿಸಿದಾಗ "ಅದು ಹಾಗಲ್ಲ ಅತ್ತೆ. ಯಾಕೋ ನನ್ನ ಹಿಂದಿನ ದಿನಗಳು ನೆನಪಾದವು. ಅದೊಂದು ಕಹಿ ಘಟನೆಯಂತೆ ಮನಸ್ಸಿನಲ್ಲಿಯೇ ಉಳಿದು ಬಿಟ್ಟಿದೆ. ಅದಕ್ಕಾಗಿಯೇ ನಾನು ಇವರಿಬ್ಬರಿಗೂ ಹೇಳಬೇಡಿ ಎಂದದ್ದು.


ನಾನೂ ಮೊದಲ ಬಾರಿ ಮುಟ್ಟಾಗಿದ್ದು ಹೀಗೇ ಹತ್ತನೇ ತರಗತಿ ಓದುತ್ತಿರುವಾಗ.. ಅಮ್ಮ ಪರೀಕ್ಷೆ ಬರೆಯಬೇಡ ಎನ್ನಲಿಲ್ಲ. ಆದರೆ, ಅಜ್ಜಿ ಹಾಗೂ ಸೋದರತ್ತೆಯಂದಿರು ಸೇರಿ ನನ್ನನ್ನು ಮನೆಯಿಂದ ಹೊರಗೆ ಕಳುಹಿಸಲೇ ಇಲ್ಲ. ಆನಂತರ ನಾನು ಮುಂದಿನ ವರ್ಷ ಪರೀಕ್ಷೆ ಬರೆಯಬೇಕಾಗಿ ಬಂದಿತು. ಅಮ್ಮನಿಗೆ ಅವರ ಅತ್ತೆಯ ವಿರುದ್ಧ ಮಾತನಾಡುವ ಶಕ್ತಿ ಇರಲಿಲ್ಲ. ನನಗೋ ಅಪ್ಪ ಇರಲಿಲ್ಲ. ಈ ಘಟನೆಯ ನೆನಪಾಗಿಯೇ ನಾನು ಧಾತ್ರಿಗೆ ಏನು ಹೇಳಬೇಡ ಎಂದದ್ದು " ಎನ್ನುತ್ತಲೇ ಬಿಕ್ಕಿದಾಗ ಗೌರಿಯ ಅತ್ತೆ ಬಂದು ಅವಳನ್ನು ಅಪ್ಪಿದರು.


"ನೀನೇ ಬೇಡ ಎಂದರೂ ನಾನು ಅವಳನ್ನು ನಾಳೆ ಪರೀಕ್ಷೆಗೆ ಕಳುಹಿಸಿಯೇ ಕಳುಹಿಸುತ್ತೇನೆ.


ಇನ್ನು ಸೂತಕ ಅಂತಹಾ ಕಟ್ಟು ಮಾಡುವ ಅವಶ್ಯಕತೆ ಇಲ್ಲ. ಸತ್ತವರ ಮನೆಯ ಹೂ ತಂದು ದೇವರಿಗೇ ಏರಿಸಿದರೆ ನಮಗದ್ದು ತಿಳಿದಿರುತ್ತದೆಯೇ..??


ಇದೇನೂ ಅಮಂಗಳಕರವಾದ ಕಾರ್ಯವಲ್ಲ. ಹರ್ಷ ಬೇಕಿದ್ದರೆ ಧಾತ್ರಿಯ ಪರೀಕ್ಷೆ ಮುಗಿದ ನಂತರ ಅವಳ ಆರತಿ ಶಾಸ್ತ್ರ ಅಂದರೆ ಹಾಫ್ ಸ್ಯಾರಿ ಫಂಕ್ಷನ್ ಮಾಡೋಣ" ಎಂದರು.


"ಥ್ಯಾಂಕ್ಯೂ ಅಜ್ಜಿ.

ನಾನೂ ನನ್ನ ಫ್ರೆಂಡ್ಸ್ ಹಾಗೇ ಫೋಟೋ ಶೂಟ್ ಮಾಡಿಸಿಕೊಳ್ಳಬಹುದು. " ಎಂದ ಧಾತ್ರಿಯ ಮಾತಿಗೆ ಎಲ್ಲರೂ ನಕ್ಕರು.


"ಈಗ ಫೋನ್ ಇಡಕೊಂಡು ನಿನ್ನ ಫ್ರೆಂಡ್ಸ್ ಎಲ್ಲರ ಜೊತೆಗೂ ಹರಟೆ ಹೊಡೆಯುತ್ತಾ ಕೂರಬೇಡ ಮತ್ತೆ.. ಹೋಗಿ ಓದಿಕೋ. ನಾಳೆ ಎಕ್ಸಾಂ ಅಲ್ಲಿ ಕಮ್ಮಿ ಮಾರ್ಕ್ಸ್ ಬರುವ ಹಾಗಿಲ್ಲ ನೋಡು" ಎಂದ ಗೌರಿಯ ಮಾತನ್ನು ಕೇಳಿ ಓದಲು ನಡೆದಳು ಧಾತ್ರಿ.


~ವಿಭಾ ವಿಶ್ವನಾಥ್

ಸಹಾಯಹಸ್ತ (ಬೆಳಕಿಂಡಿಯ ಕತೆಗಳು - 93)


 "ನಾನು ಮದುವೆಯಾದ ಮೇಲೂ ಕೆಲಸಕ್ಕೆ ಹೋಗಬೇಕು ಅಂದುಕೊಂಡಿದ್ದೇನೆ." ಎಂದು ಅಳುಕಿನಿಂದಲೇ ಹೇಳಿದವಳ ಮಾತಿಗೆ "ಆಯ್ತು. ತೊಂದರೆ ಏನಿಲ್ಲ.. ನಾನೂ ಮನೆಯ ಕೆಲಸ ಹಾಗೂ ಅಡುಗೆ ಕೆಲಸದಲ್ಲಿ ಸಹಾಯ ಮಾಡುತ್ತೇನೆ." ಎಂದು ಸಹಾಯಹಸ್ತ ಚಾಚಿದ್ದ ಅವನು. ಕೆಲಸಲ್ಲಿಯ ಭೇಧಭಾವ..?? ಕಾಯಕವೇ ಕೈಲಾಸ.


~ವಿಭಾ ವಿಶ್ವನಾಥ್

ಮರೆವು (ಬೆಳಕಿಂಡಿಯ ಕತೆಗಳು - 92)


"ಎಲ್ಲವನ್ನೂ ಮರೆತು ಮುಂದಕ್ಕೆ ಸಾಗಬೇಕು" ಎಂದವರ ಉಪದೇಶ ಕೇಳಿ ಮುಗುಳ್ನಕ್ಕಳಷ್ಟೇ.. ಆ ನಗುವಿನಲ್ಲಿಯೇ ಅವಳ ಮನಸ್ಸನ್ನು ತಿಳಿಯಬಹುದಿತ್ತು.

ನೋಯಿಸಿದವರು ಮರೆತು ಮುಂದೆ  ಸಾಗುತ್ತಾರೆ. ಆಗ ಮೌನವಾಗಿದ್ದವರಿಗೆ ಯಾವುದೂ ಲೆಕ್ಕಲಿಲ್ಲ. ನೊಂದವರು ಮರೆಯುವುದೇ ಅಸಾಧ್ಯ.


~ವಿಭಾ ವಿಶ್ವನಾಥ್

ಸಮ್ಮಿಶ್ರ


 ಇರುಳಲ್ಲಿ ನೇಸರನ ನೆರಳನ್ನೂ

ಹಗಲಲ್ಲಿ ಚಂದ್ರಮನ ಬೆಳಕನ್ನೂ

ಬಯಸುತ್ತಾ ಅರ್ಥವಿಲ್ಲದೆ ವರ್ತಿಸದಿರಿ

ಅರ್ಥವಾಗಲಿಲ್ಲವೇ..??

ಈಜುವ ಮೀನನ್ನು ಮರ ಹತ್ತಿ ಸಾಧಿಸು ಎನ್ನದೇ

ಹಾರುವ ಹಕ್ಕಿಯನ್ನು ಈಜಿ ಸಾಧಿಸು ಎನ್ನದಿರಿ

ಇನ್ನೂ ಅರ್ಥವಾಗಲಿಲ್ಲವೇ..??

ಆಟೋಟದಿ ಸಾಧಿಸುವ ಮಗುವಿಗೆ ಓದು ಎನ್ನುತ

ಓದಿನಲ್ಲಿ ಮುಂದಿರುವ ಮಗುವಿಗೆ ಹಾಡು ಎನ್ನುತ

ಒತ್ತಾಯಿಸಿ ಒತ್ತಡ ಹೇರದಿರಿ

ನೆರಳು- ಬೆಳಕು ಎರಡರ ಸಮ್ಮಿಶ್ರವೇ ಬದುಕು


~ವಿಭಾ ವಿಶ್ವನಾಥ್

ಅರ್ಧ ನಾರೀಶ್ವರ

 


ಅವನು ಅವಳಿಗೆ

ಪಟ್ಟೆ ಪೀತಾಂಬರ ಕೊಡಿಸಲಿಲ್ಲ

ಬಂಗಾರವನ್ನು ತೊಡಿಸಲಿಲ್ಲ

ಅರಮನೆಯಲ್ಲಿರಿಸಿ ಸಾಕಲಿಲ್ಲ

ಕಡೆಪಕ್ಷ..

ಮಲ್ಲಿಗೆ ಮಾಲೆಯನ್ನೂ ತಂದೀಯಲಿಲ್ಲ

ಅವಳಿಗೆ ಅದರ ಅವಶ್ಯಕತೆಯೂ ಬೀಳಲಿಲ್ಲ

ಅದರರ್ಥ,ಪ್ರೀತಿ ಇರಲಿಲ್ಲವೆಂದಲ್ಲ


ಅವನೋ... ಹೃದಯದಲ್ಲಿ ಮಾತ್ರವಲ್ಲ

ತನ್ನ ದೇಹದ ಅರ್ಧದಲ್ಲಿ ಭಾಗ ಕೊಟ್ಟ

ಅರ್ಧ ನಾರೀಶ್ವರನಾದ..


~ವಿಭಾ ವಿಶ್ವನಾಥ್

ಪ್ರಾಪ್ತಿ (ಪುಸ್ತಕ ಯಾನ - 492)


ಪುಸ್ತಕದ ಶೀರ್ಷಿಕೆ : ಪ್ರಾಪ್ತಿ

ಲೇಖಕರು : ವಸುಮತಿ ಉಡುಪ 

ಪ್ರಕಾಶಕರು : ಅಂಕಿತ ಪುಸ್ತಕ

ಪ್ರಥಮ ಮುದ್ರಣ : 2025

ಪುಟಗಳು : 144

ಬೆಲೆ : 150 ರೂ. 


ಕೆಲವರ ಪಾಲಿಗೆ ಬದುಕು ಸುಖದ ಸುಪ್ಪತ್ತಿಗೆಯಾದರೆ ಮತ್ತೆ ಕೆಲವರ ಪಾಲಿಗೆ ಕಹಿ ಅನುಭವಗಳ ಬುತ್ತಿ. ಬದುಕು ಹೀಗೇಕೆ ಎನ್ನುವ ನಿಗೂಢ ಪ್ರಶ್ನೆಯ ಕುರಿತು ಉಲ್ಲೇಖಿಸುತ್ತಲೇ ಚೆಂದದ ಕಾದಂಬರಿಯನ್ನು ಕಟ್ಟಿಕೊಡುತ್ತಾರೆ. ರಾಷ್ಟ್ರೀಕೃತ ಬ್ಯಾಂಕಿನ ಮ್ಯಾನೇಜರ್ ಹುದ್ದೆಯಲ್ಲಿದ್ದ ಚಿದಾನಂದ. ಗಂಡನ ಹುದ್ದೆಯನ್ನು ಆತನಿಗಿಂತ ಹೆಚ್ಚು ಸಂಭ್ರಮಿಸುತ್ತಿದ್ದ ಪತ್ನಿ ಸುನಂದಾ.  ಆರತಿಗೊಬ್ಬಳು ಮಗಳು ಕೀರುತಿಗೊಬ್ಬ ಮಗ ಎನ್ನುವಂತೆ ಮಗಳು ಸತ್ಯಭಾಮ, ಮಗ ಭಾರ್ಗವ. ಚೆಂದದ ಸಂಸಾರಕ್ಕೆ ಯಾರ ಕಣ್ಣು ಬಿತ್ತೋ ಏನೋ ಎಂಬಂತೆ ಸುನಂದಾಳ ಆಗಲಿಕೆ ಕುಟುಂಬವನ್ನು ತಟ್ಟುತ್ತದೆ. ಸತ್ಯಭಾಮ ಅಮ್ಮನಂತೆ ತಮ್ಮನನ್ನು ಮಗನಾಗಿ ಪೋಷಿಸುತ್ತಾ.. ತಂದೆಗೆ ನೆರವಾಗಿ ಮುಂದಿನ ಬದುಕು ಇನ್ನೇನು ಸರಾಗವಾಯಿತು ಎನ್ನುವಾಗ ಸುನಂದಾಳ ಕಡೆಯ ನಂಟು ತಪ್ಪಿ ಹೋಗುತ್ತದೆ.


ಎಲ್ಲವನ್ನು ಪ್ರೌಢವಾಗಿ ನಿಭಾಯಿಸುತ್ತಿದ್ದ ಮಗಳ ಮೇಲೆ ಹೆಚ್ಚು ನಂಬಿಕೆ ಇಟ್ಟಿದ್ದ ಚಿದಾನಂದನ ಭರವಸೆ ಕುಸಿದಿತ್ತು. ಅಪ್ಪನ ಕುರಿತು ಹುಟ್ಟಿದ ಸಣ್ಣ ಅನುಮಾನವೊಂದು ಅದು ಹೌದೋ ಅಲ್ಲವೋ ಎಂದು ಸಾಕ್ಷ್ಯಸಮೇತ ಹೇಳಲಾಗದಿದ್ದರೂ.. ಮನಕ್ಕೆ ನಿಜದ ಅರಿವಾಗಿತ್ತು. ವೆಂಕಟೇಶನೆಡೆಗೆ ಸೆಳೆಯುವಂತೆ ಮಾಡಿದ್ದೂ ಹೌದು. ಸತ್ಯಭಾಮ ಕುಟುಂಬದಿಂದ ದೂರವಾದ ದಿನಗಳಲ್ಲಿ ಚಿದಾನಂದ ಹಾಗೂ ಭಾರ್ಗವರ ಬದುಕು ಕಾಣಸಿಗುತ್ತದೆ.  


ಭಾರ್ಗವನಿಗೆ ಜಾಣೆ, ವಾಸ್ತವವಾದಿಯಾದ ಶೀಲಾ ಸಂಗಾತಿಯಾಗಿ ಮಾವನನ್ನು ಮಗಳಿಗಿಂತಲೂ ಚೆನ್ನಾಗಿಯೇ ನೋಡಿ ಕಂಡ ಸೊಸೆಯಾಗಿ ಇಷ್ಟವಾದರೂ.. ಅವಳ ಜಾಣತನದ ನಡೆ ನಿಜಕ್ಕೂ ಅಚ್ಚರಿ ಹುಟ್ಟಿಸುತ್ತದೆ.


ಬದಲಾದ ಚಿದಾನಂದನ ವಯಸ್ಸು, ಆರೋಗ್ಯ, ಪರಿಸ್ಥಿತಿ, ಮನಸ್ಥಿತಿಗಳಲ್ಲಿ ಮತ್ತೆ ಬಂದ ಭಾಮಾಳನ್ನು ಹಾಗೂ ಅವಳು ಬದುಕು ಕಟ್ಟಿಕೊಂಡ ಬಗೆಯನ್ನು ನಾವಿಲ್ಲಿ ಕಾಣಬಹುದು.


ಒಂದು ಕೌಟುಂಬಿಕ ಕಥೆಯಾಗಿ ಈ ಕಾದಂಬರಿ ಕಾಡುತ್ತದಾದರೂ.. ಇದು ಮೇಲ್ನೋಟಕ್ಕೆ ಕಂಡಂತೆ ಸರಳವಾದ ಕುಟುಂಬದ ಚಿತ್ರಣವೇನಲ್ಲ. ಎಲ್ಲರ ಆಲೋಚನೆಗಳಿಗೂ ಲೇಖಕಿ ಕನ್ನಡಿ ಹಿಡಿದಿದ್ದಾರೆ. 


ಈ ಕಾದಂಬರಿಯಲ್ಲಿ ಭಾವುಕತೆಗೆ ಸಾಕಷ್ಟು ಆದ್ಯತೆಯನ್ನು ನೀಡಲಾಗಿದೆ. ಇದು ಕಾದಂಬರಿಯುವುದಕ್ಕೂ ಕಥೆಯ ಪೋಷಣೆಗೆ ಹಾಗೂ ಆಶಯಕ್ಕೆ ಬಹಳಷ್ಟು ಪೂರಕವಾಗಿದೆ. ಕಾದಂಬರಿಯಲ್ಲಿ ಭಾವನೆಗಳು ಹಾಗೂ ವಾಸ್ತವ ಎರಡನ್ನೂ ನೋಡುತ್ತೇವೆ. ಇಲ್ಲಿನ ಭಾವುಕತೆ ಓದುಗರನ್ನು ಸಹಜವಾಗಿಯೇ ಸೆಳೆಯುತ್ತದೆ ಹಾಗೂ ಕಾಡುತ್ತದೆ. 


ಇಲ್ಲಿ ನಾಟಕೀಯವೆಂಬ ಭಾವನೆಗಳು ಕಾಣಸಿಗುವುದಿಲ್ಲ. ಇಲ್ಲಿನ ಭಾವುಕತೆಯ ಅಂಶಗಳು ಸಹಜವಾಗಿಯೇ ಚಿತ್ರಿತವಾಗಿವೆ. ಇವು ವಿವೇಚನೆಯುಳ್ಳ ಭಾವನೆಗಳೂ ಹೌದು. ಇಲ್ಲಿ ಭಾವುಕತೆ ಪೂರಕವಾಗಿವೆ. ಅವುಗಳಲ್ಲಿ ಕೆಲವನ್ನು ನೋಡೋಣ. 


#ಕುಟುಂಬದಲ್ಲಿನ_ಭಾವುಕತೆ: ತಂದೆ-ಮಕ್ಕಳ ಬಾಂಧವ್ಯ, ತಂದೆಯ ತ್ಯಾಗ, ಅಕ್ಕ-ತಮ್ಮನ ಪ್ರೀತಿ


ಚಿದಾನಂದ ತನ್ನ ಪತ್ನಿ ಸುನಂದಾಳನ್ನು ಕಳೆದುಕೊಂಡ ನಂತರ ಆಕೆಯ ತಮ್ಮ ಅವರಿಗೆ ಮತ್ತೊಂದು ವಿವಾಹದ ಪ್ರಸ್ತಾಪ ತರುವ ಸಂದರ್ಭವಿದೆ. "ತಾಯಿ ಸತ್ತರೂ ಸೋದರ ಮಾವ ಇರಬೇಕು" ಎಂಬ ಗಾದೆ ಮಾತನ್ನು ಉಲ್ಲೇಖಿಸುತ್ತಲೇ ಆತನ ಸ್ವಾರ್ಥ ಜೊತೆಗೆ ಸತ್ಯಭಾಮಳ ಮುಂದಾಲೋಚನೆಯನ್ನು ತೋರುತ್ತಾರೆ. 

ತನ್ನ ತಂದೆ ಮತ್ತೊಂದು ವಿವಾಹವಾದರೆ ಮುಂದಿನ ಬದುಕು ಹೇಗಿರಬಹುದು ಎಂದು ಯೋಚಿಸುತ್ತಾಳಾದರೂ ನೇರವಾಗಿ ತಂದೆಗೆ ಬೇಡ ಎಂದು ಹೇಳುವುದಿಲ್ಲ. ಆದರೆ, ತಮ್ಮನೊಡನೆ ತನ್ನ ಸ್ನೇಹಿತೆಯ ತಂದೆಯೊಬ್ಬರು ಮರು ವಿವಾಹವಾದ ಪ್ರಸಂಗವನ್ನು ಹೇಳುವಾಗ ತನ್ನ ಭವಿಷ್ಯದ ಊಹೆಯನ್ನೇ ಹೇಳುವ ಅವಳ ಮಾತನ್ನು ಅಪ್ರಯತ್ನಪೂರ್ವಕವಾಗಿ ಕೇಳಿಸಿಕೊಳ್ಳುವ ಚಿದಾನಂದ ತನ್ನ ಮರುವಿವಾಹದ ಕುರಿತ ನಿರಾಕರಣೆಯನ್ನು ಮತ್ತಷ್ಟು ಸ್ಪಷ್ಟವಾಗಿಸುತ್ತಾರೆ. 

ಮಕ್ಕಳಿಗಾಗಿ ತಂದೆ ತನ್ನ ಸ್ವಾರ್ಥವನ್ನು ಬದಿಗಿಟ್ಟು ಮಕ್ಕಳ ಕುರಿತು ಕಾಳಜಿ ಮಾಡುತ್ತಾ.. ಅವರ ಭವಿಷ್ಯಕ್ಕೆ ತನ್ನ ಬದುಕು ಎಂದು ಭದ್ರಮಾಡುವ ಚಿತ್ರಣವಿದೆ. 

ಅಕ್ಕ-ತಮ್ಮನ ಪ್ರೀತಿ ತಾಯಿ ತೀರಿಕೊಂಡ ನಂತರ ತುಂಟಾಟಗಳೆಲ್ಲವೂ ಬದಲಾವಣೆಯಾಗಿ ಪ್ರೌಢವಾದರೂ.. ತುಂಟಾಟಗಳಿವೆ. ಈ ಭಾಂದವ್ಯ ಅಮ್ಮ ಮಗನನ್ನು ಪೋಷಿಸುವಂತಿದೆ.


#ಪ್ರೇಮದಲ್ಲಿನ_ಭಾವುಕತೆ: ಪ್ರೀತಿ, ವಿರಹ ಮತ್ತು ನಿರೀಕ್ಷೆ 


ಸಹಪಾಠಿಯಾಗಿದ್ದ ವೆಂಕಟೇಶ ಭಾಮಳ ಕುರಿತು ಒಮ್ಮೆ ತೋರಿದ ಕಾಳಜಿಯ ನಂತರ ಆತನ ಕುರಿತು ಕುತೂಹಲ ತೋರಿ ಆತನ ನೋವಿನ ದಿನಗಳಲ್ಲಿ ಜೊತೆ ನಿಂತು ತಲ್ಲಣ, ಆತಂಕಗಳನ್ನು ನೀಡಲು ಸಹಕಾರಿಯಾದ ಚಿತ್ರಣಗಳು ಮುಂದೆ ಪ್ರೀತಿಯಾಗಿ ಬದಲಾಗುವ ಪರಿ ಇಲ್ಲಿದೆ. 

ಚಿದಾನಂದ ಮಗಳ ಪ್ರೀತಿಗೆ ನಕಾರ ಸೂಚಿಸಿದಾಗ, ತಡೆಯಲು ನೋಡಿದಾಗ ವಿರಹವನ್ನು ತಡೆಯಲಾಗದ ಪರಿ, ವೆಂಕಟೇಶನ ಹಾಗೂ ತನ್ನ ಓದು ಮುಗಿದು ಒಳ್ಳೆಯ ಕೆಲಸಕ್ಕೆ ಸೇರಿ ವಿವಾಹವಾಗುವ ಆಲೋಚನೆ ಇದ್ದರೂ.. ಪರಿಸ್ಥಿತಿಯ ಪ್ರಭಾವ ನಿರೀಕ್ಷೆಗಳೆಲ್ಲವನ್ನು ಮೀರಿ ಪರಿಸ್ಥಿತಿಯನ್ನು ತಲೆಕೆಳಗು ಮಾಡಿದ್ದು ಮುಂದಿನ ಭಾವುಕ ನಿರ್ಧಾರಕ್ಕೆ ಕಾರಣವಾಗುತ್ತದೆ.

ಚಿದಾನಂದನೂ ಭಾವುಕನಾದರೂ ಮಗಳ ಕುರಿತು ಅಸಡ್ಡೆ ತೋರಿದ, ಮಗನನ್ನು ತಡೆದ ಪ್ರಸಂಗವಿದೆ. 


#ಕರುಣೆಯ_ಭಾವುಕತೆ: ದುಃಖ, ಅಸಹಾಯಕತೆ, ಬಡತನ ಮತ್ತು ಮಾನವೀಯ ಸಂಕಟ

ವೆಂಕಟೇಶ ಭಾಮಳಿಗೆ ಹತ್ತಿರವಾಗಿದ್ದು ತನ್ನ ಅಕ್ಕನ ಸಾವಿನ ಸಂದರ್ಭದಲ್ಲಿ. ಮೂರು ತಿಂಗಳ ಬಾಣಂತನ ಮುಗಿಸಿಕೊಂಡು ಗಂಡನ ಮನೆಗೆ ಹೋಗಿದ್ದ ಅವಳಿಗೆ ಗಂಡನ ಅನುಮಾನವೇ ಮುಳುವಾಗಿ ತಾಯಿ-ಮಕ್ಕಳಿಬ್ಬರೂ ಕೊಲೆಯಾಗಿದ್ದರು. ಬಾವ ಮಾಡಿದ ಕೊಲೆಯಿಂದ ಅಕ್ಕ ಮತ್ತು ಮಗುವನ್ನು ರಕ್ಷಿಸಲಾಗದ ಅಸಹಾಯಕತೆ, ದುಃಖ ಜೊತೆಗೆ ಅಕ್ಕ ತನ್ನ ಕಷ್ಟ ಹೇಳಿಕೊಂಡಿದ್ದರೂ ಅದಕ್ಕೆ ಸ್ಪಂದಿಸಿದ ಪರಿ ಅಸಹಾಯಕತೆಯನ್ನು ಮಾತ್ರವಲ್ಲದೆ, ಮಾನವೀಯತೆಯನ್ನು ಮರೆತು ವರ್ತಿಸಿದ ಕ್ಷಣಗಳಂತೆ ವೆಂಕಟೇಶನಿಗೆ ಭಾಸವಾದ ಚಿತ್ರಣವಿದೆ.

ವೆಂಕಟೇಶನದು ಭಾಮಳಷ್ಟು ಸೆಟಲ್ ಆಗಿರುವ ಕುಟುಂಬವಾಗಿರಲಿಲ್ಲ. ಅಲ್ಲದೆ ಜಾತಿಯೂ ಬೇರೆ. ವೆಂಕಟೇಶನ ಮನೆಯಲ್ಲಿ ಮದುವೆಗೆ ಒಪ್ಪಿಗೆ ಸಿಕ್ಕರೂ ಜೋಪಡಿಯಂತಹ ಪುಟ್ಟ ಬೇರೆಯ ಮನೆಯಲ್ಲಿ ವಾಸ. ಕೈಯಲ್ಲಿ ಸರಿಯಾದ ಕೆಲಸವಿಲ್ಲದೆ, ಹಣವಿಲ್ಲದೆ ಹಳ್ಳಿಯ ಬದುಕಿಗೆ ಹೊಂದಿಕೊಳ್ಳುವ ಅನಿವಾರ್ಯತೆ. ಮೊದಲಿಗೆ ಹಸು ಸಾಕಲು ಹೋಗಿ ಆದ ಎಡವಟ್ಟಿನಿಂದ ಇದ್ದುದನ್ನೂ ಕಳೆದುಕೊಂಡು ಸಾಯಲು ನಿರ್ಧರಿಸಿ ಮತ್ತೆ ಬದುಕುವ ಸ್ಥೈರ್ಯ ತೋರಿದ ಭಾಮ ದಂಪತಿಗಳನ್ನು ಕಾಣಬಹುದು.


#ಪ್ರಕೃತಿಯೊಡನೆ_ಭಾವುಕತೆ: ಪ್ರಕೃತಿಯ ಸೌಂದರ್ಯ ಮತ್ತು ಒಡನಾಡುವ ಭಾವನಾತ್ಮಕ ಕ್ಷಣಗಳು

ಚಿದಾನಂದ ಭಾಮಾಳ ಮನೆಗೆ ಬಂದ ಸಂದರ್ಭದಲ್ಲಿ ಬದಲಾದ ಪರಿಸರ, ಹಾಲು ಕರೆಯುವಾಗ ಹೊಲಕ್ಕೆ ಹೋಗುವಾಗ ತಂದೆಯನ್ನು ಒಬ್ಬರನ್ನೇ ಬಿಡದೆ ಜೊತೆಗೆ ಕರೆದುಕೊಂಡು ಹೋಗುವ ಕ್ಷಣಗಳು ಚಿದಾನಂದ ನಿಗೆ ಹಳ್ಳಿಯ ಹೊಸ ಜಗತ್ತಿನಂತೆ ಕಂಡು ವಿಚಿತ್ರದ್ದೂ, ವಿಶೇಷದ್ದೂ ಆಗಿ ಕಾಣಿಸಬಹುದಾದ ಕ್ಷಣಗಳಿವೆ.


#ಸಾಮಾಜಿಕ_ಮತ್ತು_ಅಸ್ತಿತ್ವದ ಭಾವುಕತೆ: ಅಸಮಾನತೆ ಮತ್ತು ಸಾಮಾಜಿಕ ನೋವು, ಬದುಕಿನ ಅರ್ಥದ ಹುಡುಕಾಟ, ನೆನಪು ಮತ್ತು ಅರಿವು

ಚಿದಾನಂದನಿಗೆ ಮಗಳು ತನಗೆ ಮೋಸ ಮಾಡಿದ ನೋವು, ತಂದೆಯ ಕುರಿತು ಅನುಮಾನವಿದ್ದರೂ ಅದನ್ನು ಹೀಗೆಯೇ ಎಂದು ಹೇಳಲಾಗದ ಭಾಮ ಇಬ್ಬರು ಮುಂದೆ ಬದಲಾಗುತ್ತಾರೆ.

ಶೀಲಾಳಿಗೆ ಭಾರ್ಗವ ತರುವ ಸಂಬಳ ತಮ್ಮ ಮುಂದಿನ ಭವಿಷ್ಯಕ್ಕೆ ಸಾಲದು ಎಂಬ ಅರಿವಿದ್ದಾಗ ಜಾಣತನದಿಂದಲೇ ಮಾವನನ್ನು ಒಪ್ಪಿಸಿ ಹಣಕಾಸಿನ ವಹಿವಾಟು, ತನಗೆ ಹಾಗೂ ತನ್ನ ಗಂಡನಿಗೆ ಅನುಕೂಲವಾಗಿ ಮಾಡಿಕೊಂಡ ಸಂದರ್ಭಗಳಿವೆ. ಹಾಗೆಂದು ಮಾವನ ಜೊತೆಗಿನ ಅವಳ ನಡೆ, ತೋರಿದ ಪ್ರೀತಿ ಭಾವುಕತೆ ಯಾವುದೂ ಮೋಸವೆನ್ನಿಸದು. ಸಾಮಾಜಿಕವಾಗಿ ಮುಂದೆ ತಾನು ಯಾರಿಗೂ ಕಮ್ಮಿ ಇರಬಾರದು ಎನಿಸುವ ಅವಳ ಭಾವುಕ ಆಲೋಚನೆ ಇಲ್ಲಿದೆ. 

ನಿವೃತ್ತ ಬದುಕಿನ ನಂತರದ ಬದುಕು ಲವಲವಿಕೆ ಮೊಮ್ಮಗನಲ್ಲಿ ಕಂಡುಕೊಂಡ ಚಿದಾನಂದ, ಸರೋಜನ ಅನುಪಸ್ಥಿತಿಯಲ್ಲಿ ಬದಲಾದ ಅವನ ಲವಲವಿಕೆ, ಮುಂದೆ ನೆನಪುಗಳನ್ನು ಕಳೆದುಕೊಂಡಾಗ ಅರಿವೇ ಇಲ್ಲದಂತೆ ವರ್ತಿಸುತ್ತಿದ್ದ ಅವನನ್ನು ಸಂಭಾಳಿಸಲು ಹೆಣಗುತ್ತಿದ್ದ ಮಗ-ಸೊಸೆ. ಶೀಲಾಳಿಗೆ ಪೀಕಲಾಟಕ್ಕೆ ಇಟ್ಟುಕೊಳ್ಳುವ ಸಂದರ್ಭಗಳು, ಸರೀಕರೆದುರಲ್ಲಿ ಯಾವುದಕ್ಕೂ ಕಡಿಮೆ ಇಲ್ಲ ಬಂದಂತೆ ಬಾಳಲು ಹೊರಟಾಗಲೆಲ್ಲಾ ಅಡ್ಡಿಯಾಗುತ್ತಿದ್ದ ಮಾವನ ವರ್ತನೆಗಳು, ಮತ್ತೊಬ್ಬರು ದೂರಿದಾಗ ಅಥವಾ ಸಲಹೆ ನೀಡಿದಾಗ ಹಿಡಿಯಷ್ಟಾಗುತ್ತಿದ್ದ ಅವಳ ಮನಸ್ಸು ಸೂಕ್ಷ್ಮವಾಗಿ ಚಿತ್ರಿತವಾಗಿವೆ. 


ಅಳಿಯನನ್ನು, ಮಗಳನ್ನು ಮನೆಯಲ್ಲೇ ಇಟ್ಟುಕೊಂಡು ನೋಡಿಕೊಳ್ಳುವ ನಿರೀಕ್ಷೆ, ಪ್ರೀತಿಗಳನ್ನು ಹೊತ್ತಿದ್ದ ಚಿದಾನಂದನ ಮನಸ್ಸನ್ನು ಛಿದ್ರಗೊಳಿಸಿದ್ದ ಭಾಮ ಭಾವುಕಳಾಗಿ ವೆಂಕಟೇಶನೊಡನೆ ಹೋಗಲು ನಿರ್ಧರಿಸಿದಳೇ..?

ಇನ್ನಷ್ಟು ತಾಳ್ಮೆ ತೆಗೆದುಕೊಂಡಿದ್ದರೆ ಪರಿಸ್ಥಿತಿ ಬದಲಾಗುತ್ತಿತ್ತಾ..?


"ನಾಲ್ಕು ದಿನ ಕಳೆದ್ರೆ ಎಲ್ಲಾ ಹಳಸೋಕೆ ಶುರುವಾಗುತ್ತೆ" ಅಂದಿದ್ದ ಅಪ್ಪನ ಮಾತು ತಾನು ತೆಗೆದುಕೊಂಡ ನಿರ್ಧಾರ ತಪ್ಪು ಎನ್ನಿಸದಂತೆ ಪಶ್ಚಾತ್ತಾಪ ಆಗುವುದಕ್ಕೆ ಬಿಡದ ಭಾಮಳ ಭಾವುಕತೆಯ ಮೇಲಿನ ಹಿಡಿತ ಅವಳನ್ನು ಗಟ್ಟಿಯಾಗಿಸಿತಾ..?


ಮಗಳನ್ನು ಮರೆಸುವಷ್ಟು ಪ್ರೀತಿ ತೋರಿದ ಸೊಸೆ ಬೇರೆ ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದಳಾದರೂ ಚಿದಾನಂದನ ಮರೆವಿನ ಸ್ಥಿತಿ ತಂದಿಟ್ಟ ಪೇಚಾಟಕ್ಕೆ ಭಾವಕತೆಯನ್ನು ಮೀರಿ ವಾಸ್ತವದ ನೆಲೆಗಟ್ಟಿನಲ್ಲಿ ಯೋಚಿಸಿ ಭಾಮಾಳನ್ನು ಕರೆಸಿದಳಾ..? 


ಭಾಮಾಳ ವಿಚಾರ ತಿಳಿದಾಗ ಭಾವುಕತೆಯಿಂದಲೇ ಸ್ಪಂದಿಸಿದ್ದ ಭಾರ್ಗವ ವಾಸ್ತವಕ್ಕೆ ಹೊಂದಿಕೊಂಡನಾ..?


ಒಂದೊಮ್ಮೆ ಅಪ್ಪನ ಸ್ಥಿತಿಯನ್ನು ಅನುಮಾನಿಸಿದ ಮಗಳು ಇಷ್ಟಿಷ್ಟೇ ದೂರವಾಗುತ್ತಿದ್ದ ಭಾಮ ಪುನಃ ತಂದೆಯನ್ನು ಕರೆತಂದು ಆದರಿಸುವಾಗ..

"ಮಗಳು ದೊಡ್ಡವಳಾದ್ಲು ಅಂತ ಈಗ ಇನ್ನೊಂದು ಮಗುನ ಮಡಿಲಿಗೆ ಹಾಕಿದ್ದಾನೆ ಭಗವಂತನ ನಂಗೆ ಈಗ ಇಬ್ಬರು ಮಕ್ಕಳು ಕಣೋ.." ಎಂದು ಕುಶಾಲಿನಿಂದ ಗಂಡನೊಡನೆ ಹೇಳಿದರೂ ಮತ್ತೆ ಅಪ್ಪಿ ಒಪ್ಪುವ ಭಾವುಕತೆ ಏನು ಕಡಿಮೆಯದ್ದಾ..?!


"ನಿನಗೆ ಇಬ್ಬರಾದ್ರೆ ನನಗೂ ಇಬ್ಬರೇ.." ಎಂದ ವೆಂಕಟೇಶ ಕೇವಲ ಮಾತಿನಲ್ಲಲ್ಲದೆ ಕೃತಿಯಲ್ಲೂ ಮಾವನನ್ನು ಮಗುವಿನಂತೆ ಪೋಷಿಸಿದ ಭಾವುಕತೆ ಕಡಿಮೆಯದ್ದಲ್ಲ. ಅವರ ಹಣ, ಆಸ್ತಿ ಎಂದಿಗೂ ಬೇಡವೆಂದು ಮುಂಚೆಯೇ ಪತ್ನಿಗೆ ಹೇಳಿದ ಅವನ ಆಲೋಚನೆಯಂತೂ ಚಿಕ್ಕದ್ದಲ್ಲವೇ ಅಲ್ಲ, ಹಾಗೆಂದು ಯಾವುದೋ ಭಾವುಕ ಕ್ಷಣದಲ್ಲಿ ತೆಗೆದುಕೊಂಡ ತೀರ್ಮಾನವೂ ಅಲ್ಲ.

"ನಮ್ಮ ಮಗಳು ನಮ್ಮನ್ನು ನೋಡಿಕೊಳ್ಳಲು ನಾವು ಅವರಿಗೆ ಮೇಲ್ಪಂಕ್ತಿಯಾಗಬೇಕೇ ಹೊರತು ತಪ್ಪು ಮಾದರಿಯಾಗಬಾರದು." ಎನ್ನುವ ವೆಂಕಟೇಶನ ಉದಾತ್ತ ಮಾತುಗಳು ಭಾವುಕತೆಯ ಜೊತೆಗೆ ಹೃದಯ ವೈಶಾಲ್ಯವನ್ನೂ, ಔನತ್ಯವನ್ನೂ ತೋರುತ್ತವೆ. 


ರಸಾನುಭವ, ವಾಸ್ತವತೆ ಜೊತೆಗೆ ಭಾವನಾತ್ಮಕತೆ, ಭಾವುಕತೆಯನ್ನು ಹದವಾಗಿ ಹೆಣೆದಿರುವ ಪರಿ ಸಾಹಿತ್ಯದಲ್ಲಿ ಭಾವುಕತೆಯ ಪಾತ್ರ ಹದವಾಗಿದ್ದಾಗ ಅದು ಬಹಳ ಕಾಲ ಮನಸ್ಸಿನಲ್ಲಿ ಉಳಿಯುವ ಪರಿಯನ್ನು ನಾವಿಲ್ಲಿ ಸ್ಪಷ್ಟವಾಗಿ ಕಾಣಬಹುದು. ವಸುಮತಿ ಉಡುಪರವರ ಸಾಕಷ್ಟು ಕಥೆ-ಕಾದಂಬರಿಗಳಂತೆಯೇ ಗಾಢವಾಗಿ ತಾಕಿದ ಕಾದಂಬರಿ ಇದು. 


~ವಿಭಾ ವಿಶ್ವನಾಥ್

ಭಾನುವಾರ, ಅಕ್ಟೋಬರ್ 11, 2026

ಹೆಚ್ಚು ವ್ಯತ್ಯಾಸವೇನಿಲ್ಲ

 


ಬೆನ್ನ ಹಿಂದಿನ ಮಸಲತ್ತು, ಪಿತೂರಿ

ಕಾಲ ಕೆಳಗಿನ ಕತ್ತಲು ಎರಡೂ ಒಂದೇ

ಹೆಚ್ಚು ವ್ಯತ್ಯಾಸವೇನಿಲ್ಲ..


ಬೈದದ್ದು ಪ್ರೀತಿಯಿಂದ ಎಂದೇ ನಂಬಿಸುವ

ಮಾಡುವುದೆಲ್ಲವೂ ಮಮತೆಯಿಂದಲೇ

ಎಂದು ಸತ್ಯದ ತಲೆ ಮೇಲೆ ಹೊಡೆದಂತೆ 

ಬಿಂಬಿಸುತ್ತಾ ಮಾಡುವ ಮೋಸಕ್ಕೂ, ದಗಕ್ಕೂ

ಹೆಚ್ಚು ವ್ಯತ್ಯಾಸವೇನಿಲ್ಲ


ಕೈ ಕಟ್ಟಿ ಕುಳಿತ ಅಸಹಾಯಕತೆಯ ನಡೆಗೂ

ಆಡಬೇಕೆನಿಸಿದರೂ ಆಡಲಾಗದ ನುಡಿಗೂ

ಮೋಸದ ಪರದೆ ಸರಿಸಿ ನೋಡಿದರೂ ನೋಡದಂತೆ

ಕಣ್ಮುಚ್ಚಿ ಕೂತ ಕುರುಡಿಗೂ, ಸತ್ತು ಸತ್ತು ಹುಟ್ಟುವುದಕ್ಕೂ

ಹೆಚ್ಚು ವ್ಯತ್ಯಾಸವೇನಿಲ್ಲ


ಅವರಿಗೆ ಕತ್ತಲಲ್ಲಿ ಗುರಿ ಹೊಡೆದದ್ದು ಸಾಕಿತ್ತು

ಇವರಿಗೆ ಬಿದ್ದರೂ ಮೀಸೆ ಮಣ್ಣಾಗದಂತಿರಬೇಕಿತ್ತು

ಅವರ ಹಾಗೂ ಇವರ ಮುಸುಕಿನಾಟಕ್ಕೆ ಬಲಿಯಾದವಳ

ಆತ್ಮ ಸತ್ತದಕ್ಕೂ, ಮನಸ್ಸಾಕ್ಷಿ ಮುಕ್ಕಾದದ್ದಕ್ಕೂ

ಹೆಚ್ಚು ವ್ಯತ್ಯಾಸವೇನಿಲ್ಲ


~ವಿಭಾ ವಿಶ್ವನಾಥ್

ಅವಳ ಕೂದಲು..??

 


"ನನಗೆ ಕ್ಯಾನ್ಸರ್ ಬಂದಿರಬೇಕೇನೋ ಕಣೇ.. ನನಗೇಕೋ ಅನುಮಾನ" ಎಂದ ಗೆಳತಿಯ ಮಾತಿಗೆ ಅಚ್ಚರಿಯಿಂದ ನೋಡಿದಳು ರಾಶಿ.

"ಯಾಕೆ ಹೀಗೆಲ್ಲಾ ಮಾತನಾಡುತ್ತಾ ಇದ್ದೀಯ.. ತಲೆ ಗಿಲೆ ಕೆಟ್ಟಿಲ್ಲ ತಾನೇ.. " ಎಂದಾಗ ಮುಖ ಉಬ್ಬಿಸಿ ಗೆಳತಿ ರಕ್ಷಾ "ಯಾಕೆ ಹೀಗೆಲ್ಲಾ ಕೇಳ್ತೀಯಾ ?

ನೋಡಿಲ್ಲಿ ಎಷ್ಟು ರಾಶಿ ರಾಶಿ ಕೂದಲಿನ ಜೊಂಪೆ ಬಿದ್ದಿದೆ ಇಲ್ಲಿ " ಎಂದಾಗ ನಕ್ಕ ರಾಶಿ "ನಾನೇನೋ ಅಂದುಕೊಂಡೆ. ಇಷ್ಟಕ್ಕೇ ಹೀಗಾಡ್ತಿಯಲ್ಲೇ.. ಪಿ.ಜಿ ನೀರು ಅಡ್ಜೆಸ್ಟ್ ಆಗಿಲ್ಲ ಅನ್ಸುತ್ತೆ " ಎಂದಾಗ "ಪಿ.ಜಿ ನೀರು ಮಾತ್ರ ಅಲ್ಲ. ಪಿ.ಜಿ ಊಟ, ಇಲ್ಲಿನ ವಾತಾವರಣ ಒಟ್ಟಾರೆ ಪಿ.ಜಿ ನೇ ಇಷ್ಟವಾಗಿಲ್ಲ ಕಣೇ.. ಮದುವೆಯಾಗುವವರೆಗಾದರೂ ನನ್ನ ಕೂದಲು ಇದ್ದರೆ ಸಾಕು. ನನ್ನ ಕೂದಲು ಉದುರುತ್ತಾ ಇರುವುದನ್ನು ನೋಡಿದ್ರೆ ನನ್ನ ಮದುವೆಗೆ ವಿಗ್ ಹಾಕಿಕೊಳ್ಳಬೇಕಾಗುತ್ತೆ. ಕೂದಲು ಬೆಳೆಯದೇ ಇದ್ದರೂ ಪರವಾಗಿಲ್ಲ. ಆದರೆ, ಇರೋ ನಾಲ್ಕು ಕೂದಲು ಸಹಾ ಉದುರಿ ಹೋಗದೇ ಇದ್ದರೆ ಸಾಕು " ಎಂದಳು.


"ಅದ್ಯಾಕೆ ಹಾಗೆಲ್ಲಾ ಮಾತನಾಡುತ್ತೀಯ.. ಈಗಲೇ ಕೂದಲು ಉದುರಿ ಮುದುಕಿಯಾಗಿ ಬಿಟ್ಟಳು ಅನ್ನೋ ತರಹಾ. ಕೂದಲಿಗೆ ಸರಿಯಾಗಿ ಆರೈಕೆ ಮಾಡಿದ್ರೆ ಏನೂ ಆಗಲ್ಲ. ನೋಡು.. ನನ್ನ ಕೂದಲು ಸಹಾ ಮೊದಲು ಸಣ್ಣ ಇತ್ತು. ಈಗ ಚೆನ್ನಾಗಿ ಆಗಿದೆ. ಅಲ್ಲದೇ, ನಾನಂತೂ ಯಾವತ್ತೂ ಕೂದಲು ಕಟ್ ಮಾಡಿಸೋಕೆಲ್ಲಾ ಹೋಗಲ್ಲಪ್ಪ. " ಎನ್ನುತ್ತಾ ತನ್ನ ಉದ್ದ ಕೂದಲನ್ನೊಮ್ಮೆ ನೋಡಿಕೊಂಡಳು.


ರಾಶಿ ಹೇಳಿದ್ದರಲ್ಲಿ ಅತಿಶಯೋಕ್ತಿ ಏನಿರಲಿಲ್ಲ. ರಾಶಿಯ ಕೂದಲು ಕಂಡು ಎಲ್ಲರಿಗೂ ಹೊಟ್ಟೆ ಉರಿಯಾಗುತ್ತಿತ್ತು. ಅಷ್ಟು ನುಣುಪಾದ ಹಾಗೂ ದಪ್ಪದಾದ ಜಡೆ.


"ಬಿಸಿ ನೀರಲ್ಲಿ ತಲೆ ಸ್ನಾನ ಮಾಡಬೇಡ. ಶಾಂಪೂ ಬಳಕೆ ಕಡಿಮೆ ಮಾಡು. ನಿಯಮಿತವಾಗಿ ಬುಡಕ್ಕೆ ಕೊಂಚ ಬಿಸಿ ಮಾಡಿದ ಎಣ್ಣೆಯನ್ನು ಹಚ್ಚು. ಚೆನ್ನಾಗಿ ತರಕಾರಿ - ಹಣ್ಣು ತಿನ್ನು. ಚೆನ್ನಾಗಿ ನೀರು ಕುಡಿ. ಚಿಂತೆ ಮಾಡುವುದನ್ನು ಕಡಿಮೆ ಮಾಡು. ಆಗ ಎಲ್ಲವೂ ಸರಿಯಾಗುತ್ತೆ " ಎಂದಿದ್ದಳು ರಾಶಿ. ರಕ್ಷಾ ರಾಶಿಯ ಮಾತಿನಂತೆಯೇ ನಡೆದುಕೊಳ್ಳತೊಡಗಿದ್ದಳು. ಕೂದಲ ಆರೋಗ್ಯ ಸುಧಾರಿಸಿತ್ತು. ರಾಶಿಯಷ್ಟು ದಪ್ಪವಾಗಿ ಅಲ್ಲದಿದ್ದರೂ ರಕ್ಷಾಳ ಕೂದಲು ತಕ್ಕ ಮಟ್ಟಿಗೆ ಚೆನ್ನಾಗಿಯೇ ಇತ್ತು.


ಕಾಲಚಕ್ರ ಉರುಳಿತ್ತು.


'ಅದು ರಾಶಿ ಅಲ್ಲವಾ..

ಛೇ, ಛೇ ಇರಲಿಕ್ಕಿಲ್ಲ. ಅವಳಿಗೆ ಅಷ್ಟು ಉದ್ದದ ಕೂದಲಿತ್ತು. ಜಡೆ ನೋಡಿಯೇ ರಾಶಿ ಅಂತಾ ಕಂಡು ಹಿಡಿಯಬಹುದಾಗಿತ್ತು. ಈ ಹೆಂಗಸು ಬಾಯ್ ಕಟ್ ಮಾಡಿಸಿಕೊಂಡಿದೆ' ಎಂದು ಮನಸ್ಸಿನಲ್ಲಿಯೇ ಲೆಕ್ಕ ಹಾಕುತ್ತಾ 'ರಾಶಿಯೇ ಆಗಿದ್ರೆ ಮಾತನಾಡಿಸೋಣ. ಇಲ್ಲಾ ಅಂದರೆ ವಾಪಾಸು ಬಂದು ಬಿಡೋಣ' ಎಂದುಕೊಂಡು ಮಾಲ್ ನಲ್ಲಿ ರಕ್ಷಾ ಆ ಹೆಣ್ಣಿನ ಕಡೆ ಹೆಜ್ಜೆ ಹಾಕಿದ್ದಳು.


"ರಾಶಿ" ಅಚ್ಚರಿಯಿಂದ ಉದ್ಗರಿಸಿದಳು ರಕ್ಷಾ.

"ಅರೆ ! ರಕ್ಷಾ ವಾಟ್ ಅ ಪ್ಲಸೇಂಟ್ ಸರ್ಪ್ರೈಸ್ " ಎನ್ನುತ್ತಾ ಫುಡ್ ಕೋರ್ಟ್ ಕಡೆ ಹೆಜ್ಜೆ ಹಾಕಿದರು.


"ಏನೇ ನಿನ್ನ ಕೂದಲು.. ? " ಎಂದೇ ಮೊದಲು ಕೇಳಿದಳು ರಕ್ಷಾ.

"ಹೇಳ್ತೀನಿ ಇರು. ತಿನ್ನೋಕೆ ಆರ್ಡರ್ ಮಾಡಿ ಬರುತ್ತೇನೆ " ಎಂದು ಸುಮ್ಮನೆ ಎದ್ದು ಹೋದಳು. ಹೋದವಳೆಡೆಗೆ ನೋಡಿದರೆ ಇವಳು ಅದೇ ರಾಶಿ ಹೌದಾ ಎಂಬಷ್ಟು ಸಣ್ಣವಾಗಿದ್ದಳು. ಯಾಕೋ ನಡಿಗೆಯಲ್ಲಿ ಮೊದಲಿನ ಲಾಸ್ಯವಿರಲಿಲ್ಲ. ಯಾಕೋ ಅವಳನ್ನು ಮತ್ತೆ ದಿಟ್ಟಿಸಿ ನೋಡುವ ಮನಸ್ಸಾಗದೇ..


ರಕ್ಷಾ ಮೊಬೈಲ್ ತೆಗೆದು ಫೇಸ್ಬುಕ್ ಸ್ಕ್ರೋಲ್ ಮಾಡತೊಡಗಿದಾಗ ರಾಶಿ ಶೇರ್ ಮಾಡಿದ್ದ ಒಂದು ವಿಡಿಯೋ ಕಣ್ಣಿಗೆ ಬಿತ್ತು. ಉದ್ದ ಕೂದಲಿನ ಹುಡುಗಿಯೊಬ್ಬಳು ಹೇರ್ ಕಟ್ ಮಾಡಿಸಲು ಬರುತ್ತಾಳೆ. ಇನ್ನಷ್ಟು ಚಿಕ್ಕದಾಗಿ.. ಇನ್ನೂ ಚಿಕ್ಕದಾಗಿ .. ಎನ್ನುತ್ತಾ  ಬಾಯ್ ಕಟ್ ಮಾಡಿಸಿಕೊಂಡು "ಇನ್ನೂ ಚಿಕ್ಕದಾಗಿ ಕಟ್ ಮಾಡಿ.. ಅವನ ಕೈಗೆ ಸಿಗದಷ್ಟು.." ಎಂದು ದುಃಖದಿಂದ ನುಡಿಯುತ್ತಾಳೆ. ಯಾಕೋ ರಕ್ಷಾ ಮನಸ್ಸಿನ ಮೇಲೆ ವಿಡಿಯೋ ಪರಿಣಾಮ ಬೀರಿತ್ತು.


ಯಾಕೋ ಸುಮ್ಮನೆ ಕುಳಿತಿದ್ದಳು. ಮನಸ್ಸು ಭಾರವಾಗಿತ್ತು. ಯಾಕೋ ಲವಲವಿಕೆ ಇಲ್ಲದೆ ಸುಮ್ಮನೆ ನಡೆದು ಬರುತ್ತಿದ್ದ ರಾಶಿಗೆ ಮತ್ತೆ ಪ್ರಶ್ನೆ ಕೇಳಬೇಕೆಂದು ಅನ್ನಿಸಲಿಲ್ಲ.


~ವಿಭಾ ವಿಶ್ವನಾಥ್

ಗೂಗಲ್ ಗೆ ತನ್ನ ಹುಟ್ಟುಹಬ್ಬದ ಕುರಿತು ಗೊಂದಲವಾ ??


2026 ರ ಸೆಪ್ಟೆಂಬರ್ 27 ರಂದು ಗೂಗಲ್ ತನ್ನ 28 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿತು. ಇದಕ್ಕಾಗಿ ಸೂಕ್ತ ಡೂಡಲ್ ಅನ್ನು ಕೂಡಾ ಪ್ರದರ್ಶಿಸಿತ್ತು. ಡೂಡಲ್ ಅಂದರೆ  ತನ್ನ ಲೋಗೋ ಮೂಲಕ ಹಾಸ್ಯದ ರೀತಿಯಲ್ಲೋ, ಗೌರವದ ರೀತಿಯಲ್ಲೋ ಅಥವಾ ಆಶ್ಚರ್ಯದ ರೀತಿಯಲ್ಲಿಯೋ ಯಾರದ್ದಾದರೂ ಹುಟ್ಟು ಹಬ್ಬ, ಸಾಧನೆ , ಸಾವಿಗಾಗಿ ಗೌರವ ಸೂಚಿಸುತ್ತಾ ಗೊತ್ತಿಲ್ಲದ ಮಾಹಿತಿಗಳನ್ನು ತಲುಪಿಸುವ ಚಿತ್ರ. ಈ ಗೂಗಲ್ ಡೂಡಲ್ ಪ್ರತಿದಿನವೂ ಬದಲಾಗುತ್ತಿರುತ್ತದೆ.


ಗೂಗಲ್ ನ ಡೂಡಲ್ ಏನೋ ಪ್ರತಿದಿನವೂ ಬದಲಾಗುತ್ತದೆ. ಹಾಗೆಂದು, ಗೂಗಲ್ ನ ಹುಟ್ಟುಹಬ್ಬವೂ ಬದಲಾಗಬೇಕೇ ? ಕೆಲವು ಜನ ತಮ್ಮ ಹುಟ್ಟು ಹಬ್ಬವನ್ನು ದಿನಾಂಕದ ಆಧಾರದಲ್ಲಿ ಅಲ್ಲದೇ ಜನ್ಮ ನಕ್ಷತ್ರಗಳ ಆಧಾರದಲ್ಲಿ ಆಚರಿಸಿಕೊಳ್ಳುತ್ತಾರೆ. ಈ ಗೂಗಲ್ ಕೂಡಾ ಹಾಗೆಯಾ..?? ಈ ಗೂಗಲ್ ಮನುಷ್ಯನಲ್ಲವಲ್ಲ ಹಾಗೆ ಮಾಡಲು..!


27 ಸೆಪ್ಟೆಂಬರ್ 2002 ರಲ್ಲಿ ಗೂಗಲ್ ತನ್ನ ನಾಲ್ಕನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರೆ, 2003 ರಲ್ಲಿ ಸೆಪ್ಟೆಂಬರ್ 8 ರಂದು ತನ್ನ ಐದನೆಯ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿತ್ತು. ಆದರೆ, ಗೂಗಲ್ ತನ್ನ ಏಳನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು 2004 ಸೆಪ್ಟೆಂಬರ್ 7 ರಂದು. ಆದರೆ, ಆ ವರ್ಷ ಗೂಗಲ್ ಡೂಡಲ್ ಪ್ರದರ್ಶನವಾದದ್ದು  ಸೆಪ್ಟೆಂಬರ್ 26 ರಂದೇ.. ಆದರೆ, ಅದರಲ್ಲಿ ನಮೂದಿಸಲಾಗಿದ್ದು ಗೂಗಲ್ ನ ಹುಟ್ಟುಹಬ್ಬ ಸೆಪ್ಟೆಂಬರ್ 7 ಎಂದೇ.. ಇದಾದ ನಂತರ ಗೂಗಲ್ ಸೆಪ್ಟೆಂಬರ್ 27 ನ್ನು ತನ್ನ ಹುಟ್ಟುಹಬ್ಬ ಎಂದು ಆಚರಿಸುತ್ತಿದೆ. ಈಗ ಸದ್ಯಕ್ಕೆ ಇದೇ ಇದರ ಆಫಿಶಿಯಲ್ ಹುಟ್ಟು ಹಬ್ಬವಾಗಿದೆ.


ಹಾಗೆ ನೋಡಿದರೆ.. ಗೂಗಲ್.ಕಾಮ್ ತನ್ನ ವೆಬ್ಸೈಟ್ ಹೆಸರನ್ನು ರಿಜಿಸ್ಟರ್ ಮಾಡಿದ್ದು 1997 ರ ಸೆಪ್ಟೆಂಬರ್ 15 ರಲ್ಲಿ. ಇದಕ್ಕೂ ಮೊದಲೇ ಅಂದರೆ 1996 ರ ಜನವರಿಯಲ್ಲಿ ಸ್ಟಾನ್ ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಪಿ.ಎಚ್.ಡಿ ಮಾಡುತ್ತಿದ್ದ ಲ್ಯಾರಿ ಪೇಜ್ ಹಾಗೂ ಸೆರ್ಜಿ ಬ್ರಿನ್ ಜೊತೆ ಸ್ಕಾಟ್ ಹಸನ್ ಸೇರಿ ಗೂಗಲ್ ಸರ್ಚ್ ಇಂಜಿನ್ ಅನ್ನು ಅವರ ಪ್ರಾಜೆಕ್ಟ್ ಆಗಿ ರೂಪಿಸಿದರು. ಸ್ಕಾಟ್ ಹಸನ್ ತನಗೆ ಬೇರೆ ವಿಷಯದಲ್ಲಿ ಆಸಕ್ತಿ ಇದೆ ಎಂದು.. ಇಲ್ಲಿ ಬಿಟ್ಟು ಹೊರಟ.ಹಾಗಾಗಿ ಉಳಿದ ಇಬ್ಬರನ್ನು ಮಾತ್ರವೇ ಗೂಗಲ್ ನ ಸಂಸ್ಥಾಪಕರು ಎನ್ನಲಾಗುತ್ತದೆ. ಆದರೆ, ಎಲ್ಲಿಯೂ ಯಾವತ್ತೂ ಗೂಗಲ್ ಜನವರಿಯಲ್ಲಿ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿಲ್ಲ. ಆದರೆ, ಗೂಗಲ್ ಕಂಪನಿಯಾಗಿ ಶುರುವಾಗಿದ್ದು 1998 ರ ಸೆಪ್ಟೆಂಬರ್ 4 ರಂದು. ಒಂದರ್ಥದಲ್ಲಿ ಇದು ಅದರ ನಿಜವಾದ ಹುಟ್ಟುಹಬ್ಬದ ದಿನಾಂಕ. ಆದರೆ, ಗೂಗಲ್ ಸೆಪ್ಟೆಂಬರ್ 27 ನ್ನು ಏಕೆ ಆಯ್ಕೆ ಮಾಡಿಕೊಂಡಿತು ಗೊತ್ತೇ ??


ಗೂಗಲ್ ಮೊದಲಿಗೆ ಖ್ಯಾತವಾದ ಸರ್ಚ್ ಇಂಜಿನ್ ಏನೂ ಆಗಿರಲಿಲ್ಲ. ಯಾಹೂ.ಕಾಮ್ ಇದಕ್ಕಿಂತಲೂ ಹೆಚ್ಚಿನ ಖ್ಯಾತಿ ಪಡೆದಿತ್ತು. ಅಸಲಿಗೆ ಆಗ ಇನ್ನೂ ಗೂಗಲ್ ಇರಲೇ ಇಲ್ಲ. ಆನಂತರದಲ್ಲಿ ಗೂಗಲ್ ನಿಧಾನವಾಗಿ ತನ್ನ ಛಾಪು ಮೂಡಿಸಲು ಆರಂಭಿಸಿತ್ತು.


ಇವತ್ತು ಯಾರು ಏನೇ ಕೇಳಿದರೂ ಗೂಗಲ್ ನೋಡಲು ಹೇಳುತ್ತೇವೆ. ಇಲ್ಲವೇ, ಗೂಗಲ್ ಮೊರೆಹೋಗುತ್ತೇವೆ. "ಜಸ್ಟ್ ಗೂಗಲ್ ಇಟ್" ಎಂದು ಬಿಡುತ್ತೇವೆ. ಅಷ್ಟಕ್ಕೂ ಗೂಗಲ್ ಪದದ ಅರ್ಥವೇನು ಗೊತ್ತೇ ? ಈ ಪದ ಹುಟ್ಟಿದ್ದು ಗೂಗಾಲ್(Googole) ಎಂಬ ಪದದಿಂದ. ಹೀಗೆಂದರೆ 1 ರ ಮುಂದೆ 100 ಸೊನ್ನೆಗಳನ್ನು ಸೇರಿಸಿದಾಗ ಬರುವ ಸಂಖ್ಯೆ. ಬಹುಶಃ, ಶುರು ಮಾಡಿದಾಗ ಅವರು ಅಷ್ಟು ಸಂಖ್ಯೆಯ ಮಾಹಿತಿ ದೊರೆಯಲಿ ಎಂದು ಇಟ್ಟಿದ್ದಿರಬಹುದು. ಆದರೆ , ಅಷ್ಟು ಸಂಖ್ಯೆಯ ಜನರು ಬಳಸುವಷ್ಟು ದೊಡ್ಡ ಕಂಪೆನಿಯಾಗುತ್ತದೆ ಎಂದು ಅಂದುಕೊಂಡಿರಲಿಕ್ಕಿಲ್ಲ.


1920ರಲ್ಲಿ ಅಮೆರಿಕದ ಗಣಿತಜ್ಞ ಎಡ್ವರ್ಡ್ ಕಸ್ನರ್ ಒಂದು ವಿಭಿನ್ನ ಅಸಾಮಾನ್ಯ ಸಂಖ್ಯೆಯ ಬಗ್ಗೆ ಯೋಚಿಸುತ್ತಿದ್ದ. ಆಗ ಅದಕ್ಕೆ ಏನು ಹೆಸರಿಟ್ಟರೆ ಚೆಂದ ಎಂದು ತನ್ನ 9 ವರ್ಷದ ಕಸಿನ್ ನ ಮಗ ಮಿಲ್ಟನ್ ಸಿರೋಟಾಗೆ ಕೇಳಿದನಂತೆ. ಆ ಹುಡುಗ ಬಾಲಭಾಷೆಯಲ್ಲಿ ಹೇಳಿದ ಹೆಸರು `ಗೂಗಾಲ್'. ಅದನ್ನೇ ತಾನು ಬರೆದ 'ಮ್ಯಾಥಮ್ಯಾಟಿಕ್ಸ್ ಅಂಡ್ ದಿ ಇಮ್ಯಾಜಿನೇಷನ್' ಎಂಬ ಪುಸ್ತಕದಲ್ಲಿ ಉಲ್ಲೇಖಿಸಿದ್ದಾನೆ ಕಸ್ನರ್.


ಗೂಗಲ್ ಬ್ರೌಸಿಂಗ್ ನಲ್ಲಿ ಮೇಲ್ಭಾಗದಲ್ಲಿ ಕಾಣಿಸಿಕೊಳ್ಳಬೇಕೆಂದರೆ ಅದರ ಪುಟಗಳು ಇಂಡೆಕ್ಸಿಂಗ್ ಮೂಲಕವೇ ಕಾಣಿಸಿಕೊಳ್ಳಬೇಕಿತ್ತು.ಎಲ್ಲಾ ವೆಬ್ಸೈಟ್ ಗಳೂ ಹೀಗೆಯೇ.. ಗೂಗಲ್ ನ ಹೆಚ್ಚಿನ ಪುಟಗಳು ಇಂಡೆಕ್ಸಿಂಗ್ ಆಗಿದ್ದು ಗೂಗಲ್ ನ ಸಾಧನೆಯ ಮೈಲುಗಲ್ಲು. ಹೀಗೆ ಆದದ್ದು ಸೆಪ್ಟೆಂಬರ್ 27 ರಂದು. ಹಾಗಾಗಿಯೇ.. ಗೂಗಲ್ ಇದರ ಸವಿನೆನಪಿಗೆ ತನ್ನ ಹುಟ್ಟುಹಬ್ಬದ ದಿನಾಂಕವನ್ನು ಸೆಪ್ಟೆಂಬರ್ 27 ಎಂದು ಆಚರಿಸುತ್ತದೆ.


~ವಿಭಾ ವಿಶ್ವನಾಥ್

ಭಾವನೆಗಳಿಗೆ ಭೇಧವಿಲ್ಲ (ಬೆಳಕಿಂಡಿಯ ಕತೆಗಳು - 91)

 


"ಹೆಣ್ಣಪ್ಪಿಯಂತೆ ರೋಡಲ್ಲಿ ಅಳಬೇಡ ಬಾಯ್ಮಿಚ್ಚಿಕೊಂಡು ಬಾ" ಎಂದು ತಮ್ಮನಿಗೆ ಗದರುತ್ತಿದ್ದ ಅಕ್ಕನನ್ನು ನೋಡಿ ಒಂದು ಕ್ಷಣ ದಿಗ್ಭ್ರಮೆ ಅನ್ನಿಸಿತ್ತು. "ಇವತ್ತು ಫುಟ್ಬಾಲ್ ಮ್ಯಾಚ್ ಅಲ್ಲಿ ಸೋತೆ" ಎನ್ನುತ್ತಲೇ ಆಳುತ್ತಿದ್ದ ಹುಡುಗನನ್ನು ಸಮಾಧಾನಿಸುವ ಮನಸ್ಸಾದರೂ ಸಮಾಧಾನಿಸಲು ಹೋಗಲಿಲ್ಲ. ಬದಲಾಗಿ ಅವನಿಗೆ, ಅಳು.. ಮನಸ್ಫೂರ್ತಿ ಅಳು. ಹೆಣ್ಣು ಮಕ್ಕಳು ಮಾತ್ರ ಅಳಬೇಕು ಅಂತೇನಿಲ್ಲ. ಗಂಡು ಮಕ್ಕಳು ಅಳಬಾರದು ಅಂತಾ ಯಾರೂ ನಿಯಮ ಮಾಡಿಟ್ಟಿಲ್ಲ. ಆದರೆ, ಒಬ್ಬ ಆಟಗಾರನಾಗಿ ಅಳಬೇಡ. ಸೋಲನ್ನು ಸೋಲಿಸು. ಆಗ ಮನಸ್ಫೂರ್ತಿ ನಗು. ಪುಟ್ಟಿ, ನೀನು ಕೂಡಾ.. ಹೆಣ್ಣು ಮಕ್ಕಳು ಮನಸ್ಫೂರ್ತಿ ಸಂತೋಷ ಪಡಬಾರದು ಅಂತಾ ಎಲ್ಲಿಯೂ ಹೇಳಿಲ್ಲ. ಅಂದ ಹಾಗೆ ಭಾವನೆಗಳನ್ನು ವ್ಯಕ್ತ ಪಡಿಸುವುದಕ್ಕೆ ಹಿಂಜರಿಯಬೇಡಿ. ಅದಕ್ಕೆ ಯಾವ ಬೇಧವೂ ಇಲ್ಲ ಎಂದೆ. ಯಾಕೋ ಅವರು ನಡೆಯುತ್ತಿದ್ದ ಹಾದಿ ಅವರ ಪರಿವರ್ತನೆಯ ಹಾದಿಯಂತೆ ಭಾಸವಾಯಿತು.


~ವಿಭಾ ವಿಶ್ವನಾಥ್