ಮಂಗಳವಾರ, ಜನವರಿ 1, 2019

ಹಳತ ನೋಡಿ ತಾ ಕಿಲಕಿಲ ನಗುತಲಿ..

ಘಳಿಗೆ, ಘಳಿಗೆಗೂ ಹೊಸಹೊಸ ರೀತಿಗೆ
ಈ ಜಗ ಓಡುತಿದೆ
ಹಳತ ನೋಡಿ ತಾ ಕಿಲಕಿಲ ನಗುತಲಿ
ಈ ಜಗ ಓಡುತಿದೆ

ಇದು ಪು.ತಿ.ನ ಭಾವಗೀತೆಯೊಂದರ ಪಲ್ಲವಿ. ಹೊಸ ವರ್ಷದಲ್ಲಿ ಪಾಲ್ಗೊಳ್ಳುವ ಖುಷಿಯ ನಡುವಲ್ಲಿ ಇದು ಏಕೋ ನೆನಪಾಯಿತು ಅಷ್ಟೇ.

ಭಾವಗೀತೆಗಳು ನೆನಪನ್ನು ಹೊತ್ತು ತರುವುದರ ಜೊತೆಜೊತೆಗೆ ಕಾಡುತ್ತವೆ. ಒಂದೊಂದು ಸಾಲಿನಲ್ಲೂ ನೂರಾರು ಅರ್ಥಗಳು, ಬಣ್ಣಿಸಲಾಗದಷ್ಟು ಭಾವಗಳು. 2018 ನ್ನು ದಾಟಿ 2019ಕ್ಕೆ ಕಾಲಿಡುವ ನಾವು ಕೂಡಾ ಹಳತನ್ನು ನೋಡಿ ಹೀಗೇ ಭಾವಿಸಬಹುದೇ..? ಕೆಲವೊಂದು ವಿಷಯಗಳಿಗೆ ಹೌದು, ಕೆಲವೊಂದು ವಿಚಾರಗಳಿಗೆ ಇಲ್ಲ.. ಇದು ಬರೀ ಹಳೆ ಹೊಸ ವರ್ಷಗಳ ವಿಚಾರ ಮಾತ್ರವಲ್ಲ, ನಮ್ಮ ದಿನನಿತ್ಯದ ಬದುಕಿನಲ್ಲಿಯೂ ಹೀಗೇ ಅಲ್ಲವೇ..?

ಕಾಲ ಓಡುತ್ತಲೇ ಇರುತ್ತದೆ, ಕಾಲಾಯ ತಸ್ಮೈ ನಮಃ ಎನ್ನುತ್ತಾ ಓಡುವ ಕಾಲದ ಜೊತೆಗೆ ನಾವು ಓಡುತ್ತಲೇ ಇರುತ್ತೇವೆ ಕೆಲವೊಮ್ಮೆ ನಮ್ಮ ನಿರ್ಧಾರದ ಅನುಗುಣವಾಗಿ ಆದರೆ ಕೆಲವೊಮ್ಮೆ ಇತರರಿಗಾಗಿ. ಬಂದ ಬದಲಾವಣೆಗೆಲ್ಲಾ ನಾವು ಹೊಂದಿಕೊಳ್ಳುವ ಕಾರಣ ಕೊಡಲು ಒಪಯೋಗಿಸುವುದು ಕಾಲಾಯ ತಸ್ಮೈ ನಮಃ ಎಂದು ಮಾತ್ರ. ಹೊಸತನಕ್ಕೆ ಹೊಂದಿಕೊಳ್ಳುವ ಭರದಲ್ಲಿ ಏಕೋ ಹಳೆಯದೆಲ್ಲವನ್ನು ಮೂಲೆಗುಂಪು ಮಾಡುತ್ತಿದ್ದೇವೆ.

ಹೊಸ ನೀರು ಬಂದ ಮೇಲೆ ಹಳೆಯ ನೀರಿನ ಅವಶ್ಯಕತೆ ಮುಗಿದಂತೆ ಎಂದೇ ಭಾವಿಸುತ್ತೇವೆ ಆದರೆ ಇಷ್ಟು ಬದುಕಲು ಅವಶ್ಯಕತೆಯಾಗಿ ಜೀವದಾಯಿನಿಯಾಗಿದ್ದುದು ಆ ಹಳೆಯ ನೀರೇ ಎಂಬುದನ್ನು ಮಾತ್ರ ಮರೆತುಬಿಡುತ್ತೇವೆ. ತಾತ್ಸಾರದಲ್ಲಿ ಹಳೆಯದ್ದು ಮೂಲೆಗುಂಪಾಗಿಬಿಡುತ್ತದೆ. ಎಲ್ಲೋ ಯಾವಾಗಲೋ ಓದಿದ ಕಥೆಯೊಂದು ನೆನಪಾಗುತ್ತಿದೆ ಅದು ಹೀಗಿದೆ.

ಒಬ್ಬ ಶ್ರೀಮಂತ ತನ್ನ ಮನೆಯ ಹಿಂದಿರುವ ಒಂದು ಮರವನ್ನು ಕಡಿಸಲು ಆಲೋಚಿಸಿ ಒಬ್ಬ ಮರಕಡಿಯುವವನನ್ನು ಅರಸುವಾಗ ಅಲ್ಲಿಗೆ ಒಬ್ಬ ಮರಕಡಿಯುವವನು ಬರುತ್ತಾನೆ.  ಮರಕಡಿಯುವವನು ಆ ಮರಕ್ಕೆ  ನೂರು ಕೊಡಲಿ ಪೆಟ್ಟು ಕೊಟ್ಟರೂ ಆ ಮರ ತುಂಡಾಗುವುದಿಲ್ಲ ಆಗದು ಎಂದು ಕೈ ಚೆಲ್ಲಿ ಕುಳಿತಿದಿದ್ದಾಗ ಮತ್ತೊಬ್ಬ ಬಂದು ನಾನು ಈ ಮರವನ್ನು ಕಡಿಯುತ್ತೇನೆ ಎಂದು ಹೇಳಿ ಮರ ಕಡಿಯಲು ಶುರು ಮಾಡುತ್ತಾನೆ. ಅವನ ಹತ್ತನೇ ಕೊಡಲಿ ಪೆಟ್ಟಿಗೆ ಮರ ತುಂಡಾಗಿ ಬೀಳುತ್ತದೆ. ಆಗ ಅವನು ಗರ್ವದಿಂದ "ನೋಡಿ ನನ್ನ ತಾಕತ್ತು, ನನ್ನ ಹತ್ತೇ ಹತ್ತು ಪೆಟ್ಟಿಗೆ ಹೇಗೆ ಮರ ಉರುಳಿ ಬಿತ್ತು" ಎನ್ನುವಾಗ ಧನಿಕ ಹೇಳುತ್ತಾನೆ ಆ ಮರ ಉರುಳಿ ಬಿದ್ದದ್ದು ಬರೀ ಹತ್ತು ಪೆಟ್ಟಿಗಲ್ಲ, ಅದರ ಹಿಂದೆ ನೂರು ಕೊಡಲಿ ಪೆಟ್ಟುಗಳ ಶ್ರಮವಿದೆ ಎಂದು.

ನನ್ನಿಂದಲೇ ಆದದ್ದು, ನಾನಿಲ್ಲದೆ ಏನೂ ಇಲ್ಲ ಎಂದು ಹೇಳುವವರಿಗೂ ಮತ್ತು ಹಳತನ್ನು ಮರೆತು ಹೊಸತನಕ್ಕೆ ಬೆಲೆಕೊಡುವ ಎಲ್ಲರಿಗೂ ಇದು ಒಳ್ಳೆಯ ನೀತಿಯನ್ನೇ ಸಾರುತ್ತದೆ.

ಹಣ್ಣೆಲೆಯನ್ನು ನೋಡಿ ನಕ್ಕ ಚಿಗುರೆಲೆಗೆ ಹಣ್ಣೆಲೆ ಹೇಳಿತಂತೆ "ನನ್ನಂತೆ ನಾಳೆ ನೀನೂ ಉದುರುವುದೇ ಅಲ್ಲವೇ?" ಎಂದು. ಇಂದು ಹೊಸದಾಗಿರುವುದು ನಾಳೆ ಹಳತಾಗಲೇ ಬೇಕಲ್ಲವೇ..? ಇಂದಿನ ಹಳೆವರ್ಷ ಹಿಂದಿನ ಹೊಸವರ್ಷವೇ ಆಗಿತ್ತಲ್ಲವೇ? ನಾವು ಸಂಭ್ರಮಿಸುವುದು ಹೊಸತನವನ್ನು ಸ್ವಾಗತಿಸಲೋ ಅಥವಾ ಹಳೆಯದೆಲ್ಲಾ ಮುಗಿಯಿತಲ್ಲಾ ಎಂಬ ಸಂತಸಕ್ಕೋ ಗೊತ್ತಿಲ್ಲ ಆದರೆ ನಮ್ಮ ಸಡಗರ, ಸಂಭ್ರಮ ಹಳೆಯದನ್ನು ನೋಡಿ ಮಾಡುವ ವ್ಯಂಗ್ಯವಾಗಬಾರದು ಮತ್ತು ಮತ್ತೊಬ್ಬರ ನೋವಿಗೂ ಕಾರಣವಾಗಬಾರದು. ಅದು ಹೊಸ ವರ್ಷಕ್ಕೂ ಅನ್ವಯ, ಕಾಲದೊಂದಿಗೆ ಓಡುವ ಹೊಸ ಬದುಕಿಗೂ ಅನ್ವಯ. ಸಂಭ್ರಮಿಸುವುದಕ್ಕೆ ಅಡ್ಡಿಯಿಲ್ಲ. ಸಣ್ಣ ಸಣ್ಣ ಖುಷಿಗಳ ಮೂಲ ಸಂಭ್ರಮವೇ ಅಲ್ಲವೇ? ಆದರೆ ಅರ್ಥಪೂರ್ಣವಾದ ಆಚರಣೆ ಈ ಸಂಭ್ರಮಗಳ ಸಾರ್ಥಕತೆಗೆ ಕಾರಣವಾಗುತ್ತದಲ್ಲವೇ? ನನ್ನ ಉತ್ತರವಂತೂ ಹೌದು ಎಂಬುದಾಗಿಯೇ.. ನಿಮ್ಮದು..?

~ವಿಭಾ ವಿಶ್ವನಾಥ್   

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ