ಭಾನುವಾರ, ಸೆಪ್ಟೆಂಬರ್ 20, 2020

ಬಚ್ಚಿಟ್ಟ ಭಾವಗಳ ಬಿಚ್ಚಿಟ್ಟ ಪುಟಗಳು

 


ಮನಸ್ಸಿನ ಭಾವನೆಗಳನ್ನು ನಿರುಮ್ಮಳವಾಗಿ ಬಿಚ್ಚಿಡಲಾಗುವುದು ಇಲ್ಲಿಯೇ ಅಲ್ಲವಾ ? ಒಲವೆಂದರೆ ಒಮ್ಮುಖ ಭಾವವಲ್ಲ, ಬಲವಂತದ ಹೇರಿಕೆಯಿಂದ ಬರುವುದು ಸಹಾ ಅಲ್ಲ. ಅದೇಕೋ ನನಗನ್ನಿಸುತ್ತಿರುವುದು ಇಷ್ಟೇ. ನಾನು ಅವನಿಗೆ ಒಳ್ಳೆಯ ಗೆಳೆತಿಯಾಗಿ ಮಾತ್ರ ಇರಬಲ್ಲೆ. ಒಳ್ಳೆಯ ಪತ್ನಿಯಾಗಲಾರೆನೇನೋ.. ಒಲುಮೆ ಎಂಬುದು ಮನಸ್ಸಿನಿಂದ ಬರಬೇಕು. ಮಾಂಗಲ್ಯ ಬಂಧನದಿಂದ ಜೋಡಿಸುತ್ತಾರೆ. ಆದರೆ, ಮನಸ್ಸುಗಳ ಬೆಸುಗೆಯಾಗಬೇಕು ಅಲ್ಲವೇ.. ? ರಾಶಿ, ನಕ್ಷತ್ರ, ಜಾತಕ, ಗಣಕೂಟ ಎಲ್ಲವೂ ಹೊಂದಾಣಿಕೆಯಾದರೆ ಕೊಡು-ಕೊಳ್ಳುವಿಕೆಯು ಸಹಾ ಹೊಂದಾಣಿಕೆಯಾಗಬೇಕು. ಪರಿಸ್ಥಿತಿಗೆ ರಾಜಿಯಾಗಿ ಮದುವೆ ಸಹಾ ನಡೆದು ಹೋಯಿತು. ನಾವು ಎಂದಿಗೂ ಮನ ಬಿಚ್ಚಿ ಮಾತನಾಡಲಿಲ್ಲ. ಇಷ್ಟಾನಿಷ್ಟಗಳ, ಹೊಂದಿಕೆಯ ಕುರಿತು ಚರ್ಚಿಸಲಿಲ್ಲ. ಹಿರಿಯರ ಮಾತಿಗೆ ಕಟ್ಟು ಬಿದ್ದು, ಪರಿಸ್ಥಿತಿಯ ಕೈ ಗೊಂಬೆಗಳಾಗಿ ವಿವಾಹ ಬಂಧನಕ್ಕೆ ಸಿಲುಕಿದೆವು. ಮುಂದೆ ಇದೇ ರೀತಿಯ ಒತ್ತಾಯಕ್ಕೋ, ಗೃಹಸ್ಥ ಧರ್ಮ ಎನ್ನುತ್ತಲೋ ಜೊತೆಗೇ ಬದುಕು ನಡೆಸುತ್ತೇವೆ. ಹಾಸಿಗೆಯ ಸುಖಕ್ಕೆ ಪ್ರೀತಿ ಬೇಕಿಲ್ಲವಲ್ಲ. ಅವನ ಕಾಮದಾಹಕ್ಕೆ ಒಂದು ಹೆಣ್ಣು ಜೀವವಾಗಿ ನಾನಿರುತ್ತೇನೆ. ಅದನ್ನೂ ಕರ್ತವ್ಯ ಎಂಬಂತೆ ನಿಭಾಯಿಸಬೇಕಾಗುತ್ತದೆ. ಅದು ಎಲ್ಲರ ಒಪ್ಪಿಗೆಯ ಮುದ್ರೆ ಬಿದ್ದ ವ್ಯಭಿಚಾರ, ಅದಕ್ಕೆ ಹೆಸರು ಮಾತ್ರ ವಿವಾಹ ಬಂಧನ. ಈ ಭಾವಗಳು ಈಗಿನ ಕಾಲಕ್ಕೆ ಕೊಂಚ ಔಟ್ ಡೇಟೆಡ್ ಅಲ್ಲವಾ..? ನಾನು ಈ ಕಾಲಕ್ಕೆ ಹೊಂದಿಕೆಯಾಗಬಲ್ಲೆನಾ ಎಂಬ ಪ್ರಶ್ನೆ ಸದಾ ನನ್ನಲ್ಲಿ ಕಾಡುತ್ತಲೇ ಇರುತ್ತದೆ 


ನಾನು ಮಾತ್ರ ಹೀಗೆಯಾ ? ಯಾವಾಗಲೂ ನನಗನ್ನಿಸುತ್ತಿರುತ್ತದೆ, ನನ್ನಲ್ಲಿ ಭಾವಗಳೇ ಉದಿಸುವುದಿಲ್ಲವಾ ? ಅಥವಾ ಅದರಲ್ಲಿ ಪ್ರೀತಿ ಎಂಬುದು ಮಾತ್ರ ಕಾಣೆಯಾಗಿರುತ್ತದೆಯಾ ? ಭಾವಗಳೇ ಇಲ್ಲದ ನಾನು ಲೋಕದ ಕಣ್ಣಿಗೆ ಭಾವಪೂರ್ಣ ಲೇಖಕಿ. ಅಷ್ಟಕ್ಕೂ ಅವನಿಗೆ ಇದರ ಕುರಿತು ಸಣ್ಣ ಅರಿವಾದರೂ ಇರಬಹುದಾ ? ನಾನು ನನ್ನ ಬರಹವನ್ನು ಮುಂದುವರಿಸುತ್ತೇನೆಂದರೆ ಅವನು ಒಪ್ಪಬಹುದಾ ? ಅವನ ಮನೆಯವರದ್ದಾರದ್ದೂ ಆಕ್ಷೇಪ ಇರಲಾರದಾ ? ಅಥವಾ ನನ್ನ ಮನೆಯಂತೆ ಇಲ್ಲಿಯೂ ನಿರ್ಲಕ್ಷ್ಯ ತೋರಬಹುದಾ ? ಮೆಚ್ಚುಗೆಯ ಮಾತುಗಳು ಸಿಗದಿದ್ದರೂ ಚುಚ್ಚು ಮಾತುಗಳಂತೂ ಸಿಗಲಾರವೇನೋ? ನೋವು ನೀಡುವುದು ಮತ್ತೊಬ್ಬರ ಪದಗಳಲ್ಲ, ನಮ್ಮದೇ ಭಾವಗಳು, ನಮ್ಮದೇ ನಿರೀಕ್ಷೆಗಳು. ಬಹುಶಃ ನಾನೇ ಮತ್ತೊಬ್ಬರ ಕಾಳಜಿ, ಪ್ರೀತಿಯನ್ನು ನಿರೀಕ್ಷಿಸುವೆನಾ ? ನಾನು ತೋರುವ ಕಾಳಜಿ ಮತ್ತು ಪ್ರೀತಿಯನ್ನು ಸಹಾ ನಾನು ನಿರೀಕ್ಷಿಸುವುದು ತಪ್ಪಾಗುತ್ತದೆಯಾ ? ಇಷ್ಟು ದಿನದ ಹೊಂದಾಣಿಕೆ ಎಂಬ ಮುಖವಾಡದ ಬದುಕನ್ನು ಇಲ್ಲಿಯೂ ಮುಂದುವರಿಸಬೇಕಾ ? ಕೃಷ್ಣ ಎಲ್ಲವೂ ನಿನಗೇ ಅರ್ಪಿತ. ನನ್ನ ಬದುಕಿನ ಇಬ್ಬರು ಗೆಳೆಯರು ನೀವುಗಳೇ.. ಒಂದು ಡೈರಿ ಮತ್ತೊಬ್ಬ ಆರಾಧ್ಯ ದೈವ ಶ್ರೀ ಕೃಷ್ಣ. ಹೇಳಿದ ಎಲ್ಲಾ ಸತ್ಯವನ್ನು ಮತ್ತೊಬ್ಬರಿಗೆ ತಾನಾಗಿಯೇ ಬಿಚ್ಚಿಡದ ಡೈರಿ. ತಾನು ಹೇಳಿದ್ದಕ್ಕೆಲ್ಲಾ ಮುಗುಳ್ನಗೆಯಿಂದಲೇ ಉತ್ತರಿಸಿಯೂ, ಉತ್ತರಿಸದ ಶ್ರೀ ಕೃಷ್ಣ.
ಕೃಷ್ಣಾರ್ಪಣ ಮಸ್ತು ಎಂದು ಡೈರಿಯನ್ನು ಬರೆದು ಮುಚ್ಚಿಟ್ಟು ಮಲಗಿದಳು ಪರಿಣಿಕಾ

ಮದುವೆಯಂತೂ ಆಯಿತು. ಇಷ್ಟಾಕಷ್ಟಗಳ ಕುರಿತ ಚರ್ಚೆ ನಾವು ಮಾಡಲಿಲ್ಲ. ಅವರುಗಳು ಅವಕಾಶ ನೀಡಿದರು ಆದರೆ ನಾವುಗಳೇ ನಮ್ಮ ಸಂಕೋಚದ ತೆರೆ ಕಳಚಲಿಲ್ಲ. ಕೊಂಚವಾದರೂ ಮುಂದುವರಿದು ನಾನೇ ಅವಳನ್ನು ಮಾತನಾಡಿಸಬೇಕಿತ್ತೋ ಏನೋ.. ಅವಳ ಗಾಂಭೀರ್ಯತೆ ನನ್ನಲ್ಲಿ ಗೌರವ ಮೂಡಿಸುತ್ತದೆ. ಎಲ್ಲರ ಎದುರಿಗೂ ಹೆಚ್ಚು ಮಾತನಾಡುವವನು ನಾನು. ಯಾಕೋ ಅವಳ ಕಣ್ಣ ಕಾಂತಿಗೆ, ಸ್ವಚ್ಛ ನಿಷ್ಕಲ್ಮಶ ನಗುವಿಗೆ ಸೋತು ಬಿಡುತ್ತೇನೆ. ಅವಳ ಕನಸುಗಳಿಗೆ ನಾನು ರೆಕ್ಕೆ ಕಟ್ಟಬೇಕು. ವಿವಾಹ ಬಂಧನವಾಗಬಾರದು ಅವಳ ಸ್ವಾತಂತ್ರ್ಯ ಅವಳಿಗೇ ಬಿಡಬೇಕು. ನಮ್ಮತನವನ್ನು ಕೊಂದುಕೊಂಡು ಹೊಂದಿಕೊಂಡು ಬದುಕಬಾರದು, ಒಬ್ಬರನ್ನೊಬ್ಬರು ಅರಿತು ಒಂದಾಗಿ ಬಾಳಬೇಕು. ಇಷ್ಟು ದಿನ ಅವಳು ಎಲ್ಲರ ಜೊತೆಗೆ ಹೊಂದಿಕೊಂಡೇ ಬದುಕಿರುತ್ತಾಳೆ. ಅವಳ ಮೃದು ಮಾತನ್ನು ಕೇಳಿದರೆ ಹಾಗನ್ನಿಸುತ್ತದೆ. ನಾನು ನನ್ನೆಲ್ಲಾ ಮನಸ್ಸಿನ ಮಾತನ್ನು ಬಿಚ್ಚಿಡಬೇಕು. ಹಾಡು ಹಾಡಲು ಬರುವುದೇ ಅವಳಿಗೆ ? ಅವಳ ಜೇನು ದನಿಯ ಮಾತು ಕೇಳಿದರೆ ಯಾವುದೋ ವೀಣೆಯ ಸ್ವರ ಮೀಟಿದಂತಿರುತ್ತದೆ. ಪತಿ-ಪತ್ನಿಯರಾಗಿ ಬಾಳುವ ಮೊದಲು ಒಳ್ಳೆಯ ಸ್ನೇಹಿತರಾಗಬೇಕು. ಪ್ರೀತಿಯಿಂದ ಒಂದಾಗಬೇಕೇ ಹೊರತು ಕಾಮದಿಂದಲ್ಲ. ಕಾಯುವಿಕೆಗೆ ದಕ್ಕದ, ಒಲಿಯದ ಪ್ರೀತಿ ಜಗತ್ತಿನಲ್ಲಿ ಇಲ್ಲವೇ ಇಲ್ಲ

ಕಾಯುವಿಕೆಯ ಅರ್ಥ ಕಲಿಸಿದವಳು ರಾಧೆಯಾದರೆ, ಪ್ರೀತಿಯ ಸಾರ್ಥಕತೆ ಮೂಡಿಸಿದವನು ಕೃಷ್ಣ. ಕೃಷ್ಣನ ಪರಮ ಭಕ್ತನಿಗೆ ಪ್ರೀತಿಯ ಪಾಠ ಮಾಡಲು ಹೇಳಿಕೊಡಬೇಕೆ? ಅಂತರ್ಮುಖ ಭಾವನೆಗಳನ್ನು ಡೈರಿಯಲ್ಲಿ ಬರೆಯುತ್ತಿದ್ದೆ. ಡೈರಿ ನನ್ನನ್ನು ಹಂಗಿಸಲಾರದು ಎಂಬ ಧೈರ್ಯದಿಂದ. ಇನ್ನು ಮುಂದೆ ನನ್ನವಳೊಡನೆ ನಾನು ಎಲ್ಲವನ್ನು ಹಂಚಿಕೊಳ್ಳಬೇಕು. ಈ ಡೈರಿಯಲ್ಲಿ ಬಿಚ್ಚಿಟ್ಟ ಭಾವಗಳು ಪದಗಳಾಗುವುದು ಕಷ್ಟ. ಈ ಡೈರಿಯನ್ನು ಅವಳಿಗೆ ನೀಡಿ ಬಿಡುತ್ತೇನೆ. ಸಂಗಾತಿಗಳಲ್ಲಿ ಮುಚ್ಚು ಮರೆ ಇರಬಾರದಲ್ಲ.
ಎಲ್ಲಕ್ಕೂ ಮುಖ್ಯವಾಗಿ ನಾನು ಇದನ್ನು ಕಂಡುಕೊಂಡ ಬಗೆಯನ್ನು ಹೇಳುವೆ. ಗಂಡಸಿಗೆ ಹೆಣ್ಣಿನ ಮನಸ್ಸು ಅರ್ಥವಾಗದು. ಭಾವಗಳಿಗೆ ಸ್ಪಂದಿಸುವ ಬಗೆ ಅಷ್ಟು ತಿಳಿಯದು. ನಾನೊಬ್ಬ ಒಳ್ಳೆಯ ಓದುಗ. ನಾನು ಹೆಚ್ಚು ಓದುವ ಬರಹಗಳು "ಸಖಿ"ಯವರದ್ದು.  ನಿಮಗೆ ಅವರ ಬಗ್ಗೆ ತಿಳಿದಿದೆಯೋ ಇಲ್ಲವೋ ಗೊತ್ತಿಲ್ಲ. ನನ್ನಲ್ಲಿ ಈ ರೀತಿಯ ಆಲೋಚನೆ ಬರಲು ಕಾರಣ ಅವರು. ಬದುಕಲ್ಲಿ ಒಮ್ಮೆ ಅವರನ್ನು ಇಬ್ಬರೂ ಸೇರಿ ಭೇಟಿಯಾಗೋಣ. ಅವರ ಭಾವಚಿತ್ರ ಎಲ್ಲಿಯೂ ಇಲ್ಲ, ಹೇಗಿದ್ದಾರೋ ಗೊತ್ತಿಲ್ಲ. ಆದರೆ, ಅವರ ಬರಹಗಳು ಪ್ರಭಾವಿಸಿವೆ. ಹಸಿಬಿಸಿ ಪ್ರೇಮದ ಕುರಿತು ನನಗೆ ನಂಬಿಕೆಯಿಲ್ಲ, ಅವರ ನಿರ್ಮಲ ಪ್ರೇಮದ ಪರಿಕಲ್ಪನೆ ಮಾತ್ರ ನನ್ನನ್ನು ಅಗಾಧವಾಗಿ ಪ್ರಭಾವಿಸಿದೆ. ಇದೆಲ್ಲವನ್ನೂ ಓದಿ ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಬರೆದು ಡೈರಿಯನ್ನು ಪಕ್ಕಕ್ಕೆ ಎತ್ತಿಟ್ಟು ಮಲಗಿದ ಅಭಿನವ್.

ಎರಡೂ ಪುಟದ ಡೈರಿಯ ಭಾವಗಳೂ ಒಂದಾಗಲಿದ್ದವು. 

ಮರುದಿನ ಕಾಫಿ ಜೊತೆಗೆ ಡೈರಿಯನ್ನು ಕೊಟ್ಟ ಅಭಿನವ್, ಕಾಫಿ ಹೇಗಿದೆ ಗೊತ್ತಿಲ್ಲ, ಇಷ್ಟವಾಗದಿದ್ದಲ್ಲಿ ಹೇಳಿ.. ಬಲವಂತದ ಹೊಂದಾಣಿಕೆ ಬೇಡ. ಈ ಡೈರಿಯನ್ನು ಓದಿ ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಡೈರಿಯನ್ನು ಅವಳ ಕೈಯ್ಯಲ್ಲಿಟ್ಟು ನಡೆದ ಅಭಿನವ್. ಪರಿಣಿಕಾಳದ್ದು ಮುಗುಳ್ನಗೆ ಅಷ್ಟೇ ಉತ್ತರ.


ಕಾಫಿ ಜೊತೆಗೆ ಅಭಿನವ್ ನಡವಳಿಕೆ ಅದೇಕೋ ಇಷ್ಟವಾಗಿತ್ತು ಪರಿಣಿಕಾಳಿಗೆ. ಡೈರಿಯ ಪುಟಗಳಲ್ಲಿ ಬಿಚ್ಚಿಟ್ಟಿದ್ದ ಭಾವ ತಾನು ಬಯಸಿದ್ದೇ ಆಗಿದ್ದಿತ್ತು. ತನ್ನೆಲ್ಲಾ ಪ್ರಶ್ನೆಗಳಿಗೂ ಉತ್ತರ ದೊರೆತಿತ್ತು. ತಾನೇ ಮುಂದಾಗಿ ತನ್ನ ಡೈರಿಯನ್ನು ಅವನಿಗೆ ನೀಡಿದಳು. ಮೊದಲ ಪುಟ ತೆರೆದವನಿಗೆ "ಸಖಿ" ಎಂದು ಅವಳು ಬರೆದದ್ದು ಕಾಣಿಸಿತು. ಪ್ರಶ್ನಾರ್ಥಕ ದೃಷ್ಟಿಯಿಂದ ನೋಡಿದರೆ ಅವಳ ಮುಗುಳ್ನಗು ಎಲ್ಲಕ್ಕೂ ಉತ್ತರ ಹೇಳಿತ್ತು. 

ರಾತ್ರಿ ಹುಣ್ಣಿಮೆಯ ಬೆಳದಿಂಗಳಲ್ಲಿ ಪರಿಣಿಕಾ ಹಾಡುತ್ತಿದ್ದಳು. ಕೇಳುತ್ತಾ ಮಂತ್ರಮುಗ್ದರಂತೆ ಕುಳಿತಿದ್ದರು ಅಭಿನವ್ ಮತ್ತು ಅವನ ತಂದೆ-ತಾಯಿ.. ನಂತರ ಅಭಿನವ್ ತೋಳುಗಳಲ್ಲಿ ಸೇರಿ ಹೋಗಿದ್ದಳು ಅವನ "ಸಖಿ"

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ