ಭಾನುವಾರ, ಮಾರ್ಚ್ 18, 2018

ಜೀವಕಳೆಯ ಪರ್ವ

ಬಳಲಿ ಬೆಂಡಾಗಿ ಜೀವಕಳೆಯನ್ನೇ ಕಳೆದುಕೊಂಡಿದ್ದ ಇಳೆ ಇಂದು ವಸಂತನ ಆಗಮನಕ್ಕೆ ಪುಳಕಿತಳಾಗಿ ಹಸಿರನ್ನೇ ಮೈ ತುಂಬಾ ಹೊದ್ದು, ಕಣ್ಣು ಕುಕ್ಕುವಂತೆ ನಳನಳಿಸುತ್ತಿದ್ದಾಳೆ. ವಸುಂಧರೆಯ ಈ ಖುಷಿಗೆ ಕೋಗಿಲೆ ಮಾಮರದ ಮೇಲೆ ಕುಳಿತು ಕುಹೂ-ಕುಹೂ ಎನ್ನುತ್ತಾ ದನಿಗೂಡಿಸುತ್ತಿದೆ. ತರು-ಲತೆಗಳು ಹೂಗಳನ್ನೇ ಮೈ ತುಂಬಿಕೊಂಡು ಚಿಗುರಿನಂದದಿಂದ ನಳನಳಿಸುತ್ತಾ ಕಣ್ಮನ ಸೆಳೆಯುತ್ತಿದೆ.
ವಸಂತ ಋತುವಿನ ಈ ಸಮಯದಲ್ಲಿ ಮತ್ತೆ ಮತ್ತೆ ಬರುತ್ತಲಿದೆ ಯುಗಾದಿ. ಕಳೆದ ಕ್ಷಣಗಳು ಮತ್ತೆ ಮತ್ತೆ ಬಾರದಿದ್ದರೂ , ಹೊಸ ಹರುಷವನ್ನು ತರುತ್ತಾ ಯುಗಾದಿ ತಪ್ಪದೆ ಮತ್ತೆ ಮತ್ತೆ ಬರುತ್ತಲಿದೆ.ಇಳೆಯ ಎಲ್ಲಾ ಜೀವರಾಶಿಗಳಿಗೂ ಜೀವಕಳೆಯನ್ನು ತರುತ್ತದೆ.
ಯುಗದ ಆದಿಯ ಸವಿನೆನಪನ್ನು ತರುವ ಯುಗಾದಿ ಅಭ್ಯಂಜನದ ಮಹತ್ವವನ್ನು ಸಾರುತ್ತಾ, ಅದರ ಮಧುರ ಅನುಭೂತಿಯನ್ನೂ ಪರಿಚಯಿಸುತ್ತದೆ.ಜೊತೆಗೆ ಬೇವು-ಬೆಲ್ಲವು ಯಾವ ರಾಸಾಯನಿಕವನ್ನೂ ಒಳಗೊಳ್ಳದ ತಿನಿಸಾಗಿ ಆರೋಗ್ಯವನ್ನು ವೃದ್ದಿಸುತ್ತದೆ.  ಬಾಯಿಗೆ ಕಹಿಯಾದರೂ, ಬೆಲ್ಲದೊಂದಿಗೆ ಸವಿಯುವದನ್ನು ತಪ್ಪಿಸುವುದಿಲ್ಲ. ಬೆಲ್ಲದ ಸಿಹಿಗಿಂತ ಬೇವಿನ ಕಹಿಯೇ ಬಾಯಲ್ಲಿ ಹೆಚ್ಚು ಉಳಿಯುತ್ತದೆನಿಸಿದರೂ, ದೇಹದ ಆರೋಗ್ಯಕ್ಕೆ ಬೇವು ಒಳ್ಳೆಯದು.
ಬೇವು-ಬೆಲ್ಲದಂತೆಯೇ ನಮ್ಮ ಬಾಳಿನಲ್ಲಿ ಬರುವ ಸುಖ-ದುಃಖಗಳು.  ಬೇವು-ಬೆಲ್ಲವನ್ನು ಸವಿಯುವಂತೆಯೇ ಕಷ್ಟ-ಸುಖಗಳನ್ನೂ ಒಟ್ಟಾಗಿ ಅನುಭವಿಸಬೇಕು.  ಕಷ್ಟಕ್ಕೆ ಹೆದರಿ ಕುಗ್ಗದೆ ಅದರಿಂದ ಕಲಿತ ಪಾಠಗಳನ್ನು ಸುಖದೊಂದಿಗೆ ಬೆರೆಸುತ್ತಾ ಬಾಳಿನಲ್ಲಿ ಅಳವಡಿಸಿಕೊಂಡರೆ ಬದುಕು ಸೊಗಸಾಗಿರುತ್ತದೆ ಎಂಬ ಪಾಠವನ್ನೂ ಯುಗಾದಿ ಕಲಿಸುತ್ತದೆ. 
ಹಳೆಯದನ್ನೆಲ್ಲಾ ನೆನಪಿಸುತ್ತಾ, ಈ ಕ್ಷಣ ಇಷ್ಟು ಬೇಗ ಕಳೆದೇ ಹೋಯಿತೇ ಎಂದೆನಿಸುವ ಮಧುರ ನೆನಪುಗಳನ್ನು ಮೂಡಿಸುತ್ತಾ, "ನಿದ್ದೆಗೊಮ್ಮೆ ನಿತ್ಯ ಮರಣ,ಎದ್ದ ಕ್ಷಣ ನವೀನ ಜನನ" ನಮಗೆ ಬರುವುದಿಲ್ಲ ಎಂದು ನೆನಪಿಸುತ್ತಾ ಬಂದಷ್ಟೇ ವೇಗದಲ್ಲಿ ಯುಗಾದಿ ಮುಗಿದೇ ಹೋಗಿಬಿಡುತ್ತದೆ.

ಹಿಂದೂಗಳ ಹೊಸ ವರ್ಷವೆಂದೇ ಖ್ಯಾತಿ ಪಡೆದ ಯುಗಾದಿಯನ್ನು ಅಬ್ಬರದಿಂದ ಆಚರಿಸದೆ, ಪರಿಸರ-ಸ್ನೇಹಿ ಹಬ್ಬವಾಗಿ ಆಚರಿಸೋಣ. ಮಾವಿನ ತಳಿರ-ತೋರಣವ ಕಟ್ಟುತ್ತಾ, ಬೇವು-ಬೆಲ್ಲದೊಂದಿಗೆ, ಮರಳಿ ಬರುತ್ತಿರುವ ಜೀವಕಳೆಯ ಹಬ್ಬ ಯುಗಾದಿಯನ್ನು ಮಂದಹಾಸದೊಂದಿಗೆ ಸ್ವಾಗತಿಸೋಣ.

-ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ