ಭಾನುವಾರ, ಮೇ 31, 2020

ನಿಮ್ಮೆಲ್ಲಾ ಚಿಂತೆಗಳ ತೊರೆದುಬಿಡಿ..

ಚಿಂತೆಗಳೆಲ್ಲವನ್ನೂ ತೊರೆದುಬಿಡಿ
ಸಂಪೂರ್ಣ ಪರಿಶುದ್ಧ ಮನಸ್ಸಿನವರಾಗಿ
ಕನ್ನಡಿಯ ಪ್ರತಿಫಲಿಸುವ ಮುಖದಂತೆ
ಅದು ಯಾರ ಚಿತ್ರವನ್ನೂ ಹಿಡಿದಿಟ್ಟಿಲ್ಲ

ಕನ್ನಡಿಯ ಪರಿಶುದ್ಧತೆ ನಿನಗೆ ಬೇಕಾದಲ್ಲಿ
ನಿನ್ನನ್ನು ನೀನೊಮ್ಮೆ ಅವಲೋಕಿಸಿಕೋ
ಅಂತರಾಳದಲ್ಲಿ ಹುದುಗಿಹುದು ನಿರ್ಲಜ್ಜ ಸತ್ಯ
ಕನ್ನಡಿಯಂತೆ ಅದು ಪ್ರತಿಫಲಿಸುತ್ತಲಿದೆ

ಲೋಹವನ್ನುಜ್ಜಿ ಹೊಳಪು ಕೊಟ್ಟರೆ
ಕನ್ನಡಿಯಂತೆ ಹೊಳೆಯಬಹುದು
ಹೃದಯದ ಕನ್ನಡಿಗೆ ಬೇಕಿರುವುದು
ಯಾವ ರೀತಿಯ ಹೊಳಪು..?

ಹೃದಯಕ್ಕೂ, ಕನ್ನಡಿಗೂ ನಡುವೆ
ಇರುವುದೊಂದೇ ವ್ಯತ್ಯಾಸ:
ಹೃದಯ ಗುಟ್ಟುಗಳನ್ನು ಮರೆಮಾಚುತ್ತದೆ
ಆದರೆ, ಕನ್ನಡಿ ಮರೆಮಾಚದಲ್ಲ

~ ರೂಮಿ
(ಭಾವಾನುವಾದ: ವಿಭಾ ವಿಶ್ವನಾಥ್)

(ಮೂಲ ಕವಿತೆ)
Let go of Your Worries
---------------------------------------
Let go of your worries
and be completely clear-hearted,
like the face of a mirror
that contains no images

If you want a clear mirror,
behold yourself
and see the shameless truth,
which the mirror reflects

If metal can be polished
to a mirror-like finish
what polishing might the mirror
of the heart require?

Between the mirror and the heart
is this single difference:
the heart conceals secrets,
while the mirror does not.

~Rumi

ಭಾನುವಾರ, ಮೇ 24, 2020

ಪ್ರತಿನುಡಿಯ ಪ್ರೀತಿ ಪತ್ರ


ಒಲವಿನ ಅರಮನೆಯೊಡತಿಗೆ,

ಯಾಕೋ, ಕೆಲವೊಮ್ಮೆ ಮಾತಿಗಿಂತ ಅಕ್ಷರಗಳೇ ಪ್ರಿಯವಾಗುತ್ತವೆ ಭಾವನೆಗಳನ್ನು ಬಿಚ್ಚಿಡಲು. ಮಾತುಗಳಲ್ಲಿ ಭಾವ ಇರಬಹುದೇನೋ ಆದರೆ ನನಗೆ ಪ್ರಿಯವಾದದ್ದು ಅಕ್ಷರವೇ.. ಇದು ನಿನಗೂ ತಿಳಿದ ವಿಚಾರವೇ. ಹೀಗೇ ಅಲ್ಲವೇ ನನ್ನ ನಿನ್ನ ಪರಿಚಯವಾದದ್ದು, ಪರಿಚಯ ಸ್ನೇಹವಾಗಿ ನಂತರ ಪ್ರೀತಿಯೆಡೆಗೆ ತಿರುಗಿದ್ದು. ಆನಂತರ ವಿವಾಹವೂ ಆಯಿತು ಆದರೆ ಈಗ ನಿನಗೆ ಪ್ರೀತಿ ಕಡಿಮೆಯಾಗಿದೆ ಎಂದೆನಿಸುತ್ತಿದೆ. ಹೌದಲ್ಲವೇ..? ನೀನು ಮಾತಲ್ಲಿ ಎಲ್ಲವನ್ನೂ ಹೇಳಿ ನಿರಾಳವಾಗಿ ಬಿಡುತ್ತೀಯ. ಆದರೆ, ನಾನು..? ಆಡಲೂ ಆಗದೆ, ಸುಮ್ಮನೆ ಇರಲೂ ಆಗದೆ ತಳಮಳಿಸುತ್ತೇನೆ.

ಮೊದಲಿಗೆ ನಿನಗೆ ಪ್ರೀತಿ ಹುಟ್ಟಿದ್ದು ನನ್ನ ಮೇಲಲ್ಲ, ನನ್ನ ಬರಹಗಳ ಮೇಲೆ. ಆ ಭಾವಗಳು, ಅಕ್ಷರಗಳ ಮೇಲೆ. ಪ್ರೇಮ, ಪ್ರೀತಿಗಳು ಕಥೆ, ಕವನಗಳಲ್ಲಿ ಹಿಡಿಯಾಗಿ ಸಿಗುತ್ತವೆ. ಆದರೆ, ಅವುಗಳನ್ನು ಬಂಧಿಸಿ ಬದುಕಲ್ಲಿಯೂ ಹಿಡಿದಿಟ್ಟುಕೊಳ್ಳಲು ನಂಬಿಕೆ ಎಂಬ ತಳಹದಿ ಬಹಳವೇ ಮುಖ್ಯ. 

"ನಾನು ಬಡವಿ, ಆತ ಬಡವ, ಒಲವೇ ನಮ್ಮ ಬದುಕು" ಎಂಬ ಕವಿವಾಣಿ ಕೇಳಿಯೇ ಇರುತ್ತೀಯ. ಬದುಕಿನಲ್ಲಿ ನೆಮ್ಮದಿಯಾಗಿರಲು ಒಲವು, ನಂಬಿಕೆ ಎರಡೂ ಬಹಳವೇ ಪ್ರಮುಖ ಪಾತ್ರ ವಹಿಸುತ್ತವೆ. ಒಬ್ಬ ಲೇಖಕ ಅಥವಾ ಕವಿ ಭಾವಗಳಲ್ಲಿ ಜೀವಿಸುತ್ತಾನೆ. ಆ ಭಾವಗಳು ಅವನವೇ ಆಗಿರಬೇಕೆಂಬ ನಿಯಮವಿಲ್ಲ. ಬರವಣಿಗೆಯಲ್ಲಿ ಒಮ್ಮೆ ಬಿಚ್ಚಿಟ್ಟಲ್ಲಿ ಆಗ ಅವನು ನಿರಾಳ. ಈ ನಿಯಮ ಎಲ್ಲರಿಗೂ ಅನ್ವಯಿಸುತ್ತದೆ ಎಂದಲ್ಲ. ಆದರೆ, ನನಗೆ ಇದು ಹೆಚ್ಚು ಅನ್ವಯವಾಗುತ್ತದೆ.

ಪ್ರೀತಿಸುವವರನ್ನು ನಾವು ಅಂದುಕೊಂಡಂತೆ ಬದುಕಬೇಕು ಎಂದು ಬಯಸಿದಲ್ಲಿ ಅವರು ನಾವು ಇಷ್ಟಪಟ್ಟ ವ್ಯಕ್ತಿಗಳಾಗಿ ಉಳಿಯುವುದೇ ಇಲ್ಲ. ನಮಗೆ ಬೇಕಾದಂತೆ ಅವರನ್ನು ರೂಪಿಸಿಕೊಳ್ಳಬಯಸಿದಲ್ಲಿ ನಾವು ಪ್ರೀತಿಸಿದವರನ್ನೇ ಮದುವೆಯಾಗಬೇಕು ಎಂಬ ನಿಯಮವೇನೂ ಇಲ್ಲವಲ್ಲ. ಅವರು ಇರುವಂತೆಯೇ ಅವರನ್ನು ಒಪ್ಪಿಕೊಂಡು ಬದುಕು ಸಾಗಿಸುವಲ್ಲಿ ಪ್ರೀತಿ ಅಡಗಿದೆ. 

ಪ್ರೀತಿ ಎಂಬುದು "ಐ ಲವ್ ಯು" ಎಂದು ಹೇಳುವುದರಲ್ಲಿ ಮಾತ್ರ ಇಲ್ಲ. ನೀನು ಗಮನಿಸಿರುತ್ತೀಯ.. ನಮ್ಮ ಅಜ್ಜ-ಅಜ್ಜಿಯೋ ಅಥವಾ ಅಪ್ಪ-ಅಮ್ಮನೋ ಪ್ರತಿ ದಿನ "ಐ ಲವ್ ಯು" ಎಂದೋ ಅಥವಾ "ನಾನು ನಿನ್ನನ್ನು ಪ್ರೀತಿಸುತ್ತೇನೆ" ಎಂದು ಹೇಳುವುದರಲ್ಲಿಯೋ ಅವರ ಪ್ರೀತಿ ತುಂಬಿರುವುದಿಲ್ಲ. ಅವರ ಪ್ರೀತಿ ಅವರ ಬದುಕಿನಲ್ಲಿ, ಬದುಕುವ ರೀತಿಯಲ್ಲಿ, ಪರಸ್ಪರರನ್ನು ಅರ್ಥೈಸಿಕೊಂಡು ಬದುಕುವುದರಲ್ಲಿ ತುಂಬಿದೆ.

ಬದುಕಿನ ಸಣ್ಣ-ಪುಟ್ಟ ವಿಚಾರಗಳಿಗೆ ಕೆಲವೊಮ್ಮೆ ಸಮಯ ಕೊಡಲು ಸಾಧ್ಯವಾಗದಿರಬಹುದು. ಅದಕ್ಕೆ ಕಾರಣ ಕೆಲಸದ ಒತ್ತಡ ಅಷ್ಟೇ.. ನೀನು ಅದನ್ನು ಅರ್ಥೈಸಿಕೊಂಡು ಸಹಕರಿಸುವೆ ಎಂದುಕೊಂಡಿದ್ದೆ. ನಮ್ಮ ಸಣ್ಣ ಮುನಿಸು ಅಥವಾ ಸರಿಯಾಗಿ ಅರ್ಥೈಸಿಕೊಳ್ಳದಿರುವಿಕೆ ಮುಂದೊಂದು ದಿನ ದೊಡ್ಡ ಮುನಿಸಿಗೆ ಕಾರಣವಾಗಬಹುದು. ಇಬ್ಬರೂ ಅದಕ್ಕೆ ದಾರಿ ಮಾಡಿಕೊಡದಿರೋಣ.

ನನಗೆ ಮನಬಿಚ್ಚಿ ಮಾತನಾಡಲು ಸಂಕೋಚ ಆದರೆ ಅದಕ್ಕೆ ತೆರೆ ಎಳೆಯಬೇಕು ಎಂದುಕೊಂಡಿದ್ದೇನೆ. ಸಾಧ್ಯವಾದಷ್ಟು ಪ್ರಯತ್ನಿಸುವೆ ಆಗದಿದ್ದರೆ ದಿನವೂ ಒಂದೊಂದು ಪತ್ರ ಬರೆಯುವೆ. 

ಡಿಜಿಟಲ್ ಯುಗದಲ್ಲೂ ಪ್ರೀತಿಯ ಮಡದಿಗೊಂದು ಪ್ರೇಮ ಪತ್ರ. ಜೀವನ ಪ್ರೀತಿಯನ್ನು ಕಾಪಿಟ್ಟುಕೊಳ್ಳೋಣ. ನಮ್ಮ ಹವ್ಯಾಸಗಳನ್ನು ಮುಂದುವರಿಸುತ್ತಾ, ಮುನಿಸುಗಳನ್ನು ಮರೆತು, ಪರಸ್ಪರರನ್ನು ದೂರದೆ ಮುಂದಿನ ಬದುಕನ್ನು ಪ್ರೀತಿಯಿಂದ ಸವಿಯೋಣ. 

ಇಂತಿ 
ದಿನವೂ ಪತ್ರ ಬರೆಯುವ ನಿನ್ನವ



----------   
~ವಿಭಾ ವಿಶ್ವನಾಥ್

ಭಾನುವಾರ, ಮೇ 17, 2020

ಬಡಬಡಿಕೆ

ಕೆಲವೊಮ್ಮೆ ಕುರುಡಾಗಬೇಕು
ಸತ್ಯದ ಪರದೆ ಹೊದ್ದ ಸುಳ್ಳುಗಳಿಗೆ

ಹಲವೊಮ್ಮೆ ಕಿವುಡಾಗಬೇಕು
ಬಣ್ಣ ಬಣ್ಣದ ಮಾತುಗಳಿಗೆ

ಆಗಾಗ ಬರಡಾಗಬೇಕು
ಅತಿ ಭಾವುಕತೆಗೆ ಸ್ಪಂದಿಸದಂತೆ

ಕೆಲವೊಮ್ಮೆ ಮೂಕವಾಗಬೇಕು
ಇಷ್ಟವಾಗದ ಮಾತುಗಳಿಗೆ

ಹಲವೊಮ್ಮೆ ಸುಮ್ಮನಾಗಬೇಕು
ನಮ್ಮ ತಪ್ಪಿಲ್ಲದಿದ್ದರೂ ಒಪ್ಪಿಗೆ ಎಂಬಂತೆ

ಕೊನೆಗೊಮ್ಮೆ ಕಲ್ಲಾಗಬೇಕು 
ರಾಮಾಯಣದ ಅಹಲ್ಯೆಯಂತೆ

ಶಾಶ್ವತವಾಗಿ ಮರೆಯಾಗಿಬಿಡಬೇಕು
ಮತ್ತೆಂದೂ ಮರಳಿ ಬಾರದಂತೆ

~ವಿಭಾ ವಿಶ್ವನಾಥ್

ಭಾನುವಾರ, ಮೇ 10, 2020

ಜೀವನಪ್ರೀತಿ

ಅವನು ನನಗೆ ಅಗಾಧವಾಗಿ ಹೇಳಿಕೊಟ್ಟ ಪಾಠವೇ ಬದುಕನ್ನು ಪ್ರೀತಿಸುವುದನ್ನು, ಪ್ರೀತಿಸುವ ಪಾಠವನ್ನು. ಅವನನ್ನು ಮಾತ್ರ ಪ್ರೀತಿಸಿದ್ದೆ ಎಂದುಕೊಂಡಿದ್ದೆ ಆದರೆ ಬದುಕಿನ ಗತಿ, ತೀರ್ಮಾನ ಮತ್ತು ಜೀವನದ ಬಗೆ ಬೇರೆಯೇ ಇದ್ದಿತು ಎಂಬುದು ನನಗಾಗ ತಿಳಿದಿರಲಿಲ್ಲ. ನನಗಷ್ಟೇ ಅಲ್ಲ. ಬದುಕಿನ ಆ ಕಾಲಘಟ್ಟದಲ್ಲಿ ಮತ್ತಾರಿಗೂ ಅದರ ಕುರಿತು ತಿಳಿದಿರಲಾರದು. ನಮ್ಮದೇ ಪುಟ್ಟ ಪ್ರಪಂಚವನ್ನು ಸೃಷ್ಟಿ ಮಾಡಿಕೊಂಡು ಅದರಲ್ಲೇ ಕಳೆದುಹೋಗಿರುತ್ತೇವೆ. ಅದರಲ್ಲಿ ನಾವು ಮತ್ತು ನಮ್ಮವರಿಗೆ ಅದರಲ್ಲೂ ನಮ್ಮ ಅತ್ಯಾಪ್ತರಿಗಷ್ಟೇ ಜಾಗ. ನಮ್ಮದೇ ಪುಟ್ಟ ಪ್ರಪಂಚದಲ್ಲಿ ಕೆಲವೊಮ್ಮೆ ಬೇರಾರಿಗೂ ಜಾಗವಿಲ್ಲ. ಬರೀ ನಾವಷ್ಟೇ. ಕೆಲವರು ಹಣದ ವ್ಯಾಮೋಹದ ಹಿಂದೆ ಬೀಳುತ್ತಾ ಅದನ್ನೆಲ್ಲಾ ಮರೆತೇ ಬಿಟ್ಟಿರುತ್ತಾರೆ. ಆದರೆ ಅವನು ನನಗೆ ಕಲಿಸಿದ್ದು ಪ್ರೀತಿಸುವುದನ್ನು.. ಎಲ್ಲರನ್ನೂ, ಎಲ್ಲವನ್ನೂ ಅಗಾಧವಾಗಿ ಮತ್ತು ಗಾಢವಾಗಿ ಅನುಭವಿಸುವುದನ್ನು. ದ್ವೇಷ, ಅಸೂಯೆಗಳನ್ನು ಪ್ರೀತಿಯಿಂದ ಅಳಿಸಬಹುದೆಂಬ ದೊಡ್ಡ ಸತ್ಯವನ್ನು ಮತ್ತಾವ ಕಾಲರಾಯನೂ ಅಳಿಸದಂತೆ ಅಚ್ಚಳಿಯದಂತೆ ಉಳಿಸಿ ಹೋದ. ಅವನ ಮೇಲಿನ ಪ್ರೀತಿ, ಗೌರವ ಮತ್ತು ಅವನು ಹೇಳಿಕೊಟ್ಟ ಪಾಠ ಉಸಿರಿನೊಡನೆ ಎಷ್ಟು ಬೆರೆತಿತ್ತೆಂದರೆ ಅವನನ್ನು ಕರೆದೊಯ್ದ ಜವರಾಯನನ್ನು ಸಹಾ ದ್ವೇಷಿಸಲಾಗಲಿಲ್ಲ, ಶಪಿಸಲಾಗಲಿಲ್ಲ. ಅದಲ್ಲದೇ ಅವನು ಪ್ರತಿಕ್ಷಣ ನನ್ನೊಡನೆ ಇರುವನೆಂಬ ಭಾವ ಕಾಡುತ್ತಿದೆ.

ಅವನು ಮತ್ತಾರೂ ಅಲ್ಲ ಹೆತ್ತವರೇ ಆರಿಸಿ, ಅಕ್ಷತೆ ಹಾಕಿ ನನ್ನೊಡನೆ ಗಂಟು ಹಾಕಿದ್ದ ಸಂಗಾತಿ ನಕುಲ್. ಅವನಿಗೂ ನನಗೂ ಸ್ವಭಾವದಲ್ಲಿ ಅಜಗಜಾಂತರ ವ್ಯತ್ಯಾಸ. ಎಲ್ಲವನ್ನೂ ಗಂಭೀರವಾಗಿ ತೆಗೆದುಕೊಳ್ಳುವವಳು ನಾನಾದರೆ, ನನಗೆ ವಿರುದ್ಧ ಅವನು. ಎಲ್ಲಾ ಭಾವನೆಗಳನ್ನು ಅಳೆದು ತೂಗಿ ಕೊಡುವವಳು ನಾನಾದರೆ, ತನಗೆ ದಕ್ಕುವ ಭಾವನೆಗಳನ್ನು ಇಡಿಯಾಗಿ ಹಂಚುವವನು ಅವನು. ಬದುಕಿನ ನಂಟು ಬೆಸೆದುಕೊಳ್ಳುವುದೇ ಹೀಗೆ ಎನ್ನಿಸುತ್ತದೆ. ವಿರುದ್ಧ ಧ್ರುವಗಳು ಒಂದಾಗುವ ಪರಿ ಹೀಗೆಯೇ ಇರಬಹುದೇ.. ಆದರೆ, ವಿರುದ್ಧ ಧ್ರುವಗಳು ಒಂದಾದ ಮೇಲೂ ದೂರವಾಗುವ ಮಾತೇ ಇಲ್ಲದೆ ಬೆಸೆದುಕೊಳ್ಳುವುದು, ವಿರುದ್ಧ ಧ್ರುವಗಳು ಒಂದೇ ಎಂಬಷ್ಟು ಲೀನವಾಗಿ ಇರುವ ಬಂಧಕ್ಕೆ ದಾಂಪತ್ಯ ಎನ್ನಬಹುದೇ..??

ಜೀವನದ ಕುರಿತು, ಪ್ರೀತಿಯ ಕುರಿತು ಅನುಭವಿಸುವುದನ್ನು ನಾನು ಕಲಿತದ್ದೇ ಅವನಿಂದ. 
ಬೆಳಗಿನ ಸೂರ್ಯೋದಯದ ವಾಕ್, ತೊರೆಯಲ್ಲಿ ಕಾಲು ಇಳಿ ಬಿಟ್ಟು ಕೂತಾಗ ಮರಿ ಮೀನುಗಳು ಕಾಲಿಗೆ ಕಚಗುಳಿ ಇಡುವ ಪರಿ, ಮಳೆ ಬಿದ್ದಾಗಿನ ಮಣ್ಣಿನ ಗಮದ ಆಸ್ವಾದನೆ, ಪರಿಸರದ ಮಧ್ಯದ ಮೌನದ ತನ್ಮಯತೆ, ಜಾತ್ರೆಯಲ್ಲಿನ ರಾಟೆ, ಬಲೂನು, ಮಳೆಯ ಇರುಚಲು ಹೀಗೇ ಮುಂತಾದ ಎಲ್ಲವನ್ನೂ ಅನುಭವಿಸಲು ಕಲಿಸಿದ್ದು ಅವನೇ. ಬರೀ ಸಿಟಿಯಲ್ಲಿನ ಮಾಲ್, ಜನಜಂಗುಳಿಯ ಮಧ್ಯೆ ಬೆಳೆದವಳಿಗೆ ಇದೆಲ್ಲವೂ ಹೊಚ್ಚಹೊಸತು ಆದರೆ ಅವೆಲ್ಲದರಿಂದ ದೂರ ಓಡಬೇಕು ಎನ್ನಿಸಲಿಲ್ಲ. ಅದರೊಟ್ಟಿಗೇ ಬೆರೆತೆ. ಅವನ ಸಾಂಗತ್ಯವೇ ಅದೆಲ್ಲದಕ್ಕೂ ಕಾರಣ ಎನ್ನಿಸುತ್ತದೆ. ಅವನಿಲ್ಲದಿದ್ದರೆ, ಬಹುಶಃ ನಾನು ಬದುಕಿನ ಎಲ್ಲವನ್ನೂ ಕಳೆದುಕೊಳ್ಳುತ್ತಿದ್ದೆನೇನೋ..


ಒಂದು ದಿನ ಅವನೊಡನೆ ಪ್ರಶ್ನಿಸಿದೆ. "ಬದುಕಿನಲ್ಲಿ ನಮಗೆ ಬಹಳ ಮುಖ್ಯವಾದುದು ಏನು?". ತಿಳಿ ಹಾಸ್ಯದ ಅವನ ಮಾತು ಆಗ ಗಂಭೀರವಾಗಿತ್ತು. "ಪ್ರೀತಿ ಬದುಕಿನಲ್ಲಿ ಬಹಳ ಮುಖ್ಯ. ಅದು ವ್ಯಕ್ತಿ ವ್ಯಕ್ತಿಯ ನಡುವಿನ ಪ್ರೀತಿಯಲ್ಲ, ಜೀವನಪ್ರೀತಿ. ಬದುಕಿನಲ್ಲಿ ಯಾರಿಲ್ಲದಿದ್ದರೂ ಬದುಕಬಲ್ಲೆವು ಆದರೆ ಒಮ್ಮೆ ಯೋಚಿಸಿ ನೋಡು. ಜೀವನಪ್ರೀತಿ ಇಲ್ಲದಿದ್ದರೆ ಬದುಕಿರಬಲ್ಲೆವಾ? ಹೇಳು. ಮನೆಯವರಿಗೋಸ್ಕರ ದುಡಿಯುತ್ತಿದ್ದೇವೆ ಎಂದು ಹೇಳುವವರೆಲ್ಲರೂ ಒಮ್ಮೆ ಆತ್ಮ ವಿಮರ್ಶೆ ಮಾಡಿಕೊಳ್ಳಲಿ, ಆ ಕೆಲಸವನ್ನು ಅವರು ಪ್ರೀತಿಸದಿದ್ದರೆ ಅವರು ಯಾರಿಗೋಸ್ಕರವೋ ದುಡಿಯಬಲ್ಲರಾ? ಆತ್ಮಹತ್ಯೆಯ ಕಾರಣಗಳಲ್ಲಿ ಒಂದು ಜೀವನಪ್ರೀತಿಯನ್ನು ಕಳೆದುಕೊಳ್ಳುವುದು. ಹಣಕ್ಕಾಗಿ, ಪ್ರತಿಷ್ಠೆಗಾಗಿ ಎಂದು ಹೇಳುವವರದೆಲ್ಲರದ್ದೂ ನಾಲಿಗೆಯ ಮೇಲ್ತುದಿಯ ಮಾತಾಗಿರಬಹುದು ಆದರೆ ಕೆಲಸದ ಬಗ್ಗೆ, ಜೀವನದ ಬಗ್ಗೆ ಕೊಂಚವೂ ಪ್ರೀತಿಯಿಲ್ಲದಿದ್ದರೆ ಅದು ನರಕದಂತೆ ಭಾಸವಾಗುತ್ತದೆ. ಅರೆಕ್ಷಣವೂ ಅಲ್ಲಿರಲಾರರು. ಅನಿವಾರ್ಯ ಎನ್ನಬಹುದು ಆದರೆ ಅವರಿಗೇ ಅರಿವಿಲ್ಲದಂತೆ ಅಲ್ಲೊಂದು ಮಮತೆಯ ಬಂಧ ಬೆಸೆದುಕೊಂಡಿರುತ್ತದೆ. ಎಷ್ಟೇ ಕಲ್ಲು ಮನಸ್ಸಿನವನಾದರೂ ಆಳದಲ್ಲಿ ಎಲ್ಲೋ ಜೀವನಪ್ರೀತಿ ಸೆಳೆಯೊಡೆದಿರುತ್ತದೆ.

ಬದುಕಿನಲ್ಲಿ ತಂದೆ-ತಾಯಿಯಿಲ್ಲದೆ ಮಕ್ಕಳು, ಮಕ್ಕಳಿಲ್ಲದೆ ತಂದೆ-ತಾಯಿಯರು ಬದುಕುತ್ತಿದ್ದಾರೆ. ಗಂಡನಿಲ್ಲದೆ ಹೆಂಡತಿ, ಹೆಂಡತಿ ಇಲ್ಲದೆ ಗಂಡ ಬದುಕುತ್ತಿದ್ದಾರೆ. ಅವರ ಬದುಕಿನಲ್ಲಿ ಅವರನ್ನು ಜೀವಂತವಾಗಿಡುವುದು ಜೀವನಪ್ರೀತಿ. ಬದುಕಿನಲ್ಲಿ ಎಲ್ಲರನ್ನೂ, ಎಲ್ಲವನ್ನೂ ಪ್ರೀತಿಸು, ಮರು ಪ್ರೀತಿಯನ್ನು ನಿರೀಕ್ಷಿಸದೆ.. ನಿನಗಿಷ್ಟವಾಗದಿದ್ದರೆ ಅಲ್ಲಿಂದ, ಅವರಿಂದ ದೂರ ಇದ್ದುಬಿಡು ಆದರೆ ಯಾರನ್ನೂ ಸಹಾ ದ್ವೇಷ ಮಾಡಬೇಡ.. ಆ ವಿಧಿಯನ್ನೂ ಸಹಾ.."

ಅವನು ಅಂದು ಅಷ್ಟು ಭಾವುಕನಾಗಿದ್ದನ್ನು ನೋಡಿದ್ದು, ಕೇಳಿದ್ದು ಅದೇ ಮೊದಲು ಮತ್ತು ಅದೇ ಕೊನೆ. ಯಾಕೆಂದರೆ, ಅಂದು ಊರಿನಿಂದ ಕಾರಿನಲ್ಲಿ ಸಿಟಿಗೆ ಬರುವಾಗ ಆದ ಅಪಘಾತದಲ್ಲಿ ನಾನು ಅವನನ್ನು ಕಳೆದುಕೊಂಡಿದ್ದೆ. ಆದರೆ, ಯಾಕಷ್ಟು ದೊಡ್ಡ ಮಾತುಕತೆ ನಡೆಯಿತು ಎಂಬುದರ ಅರಿವು ಅವನ ಉಪಸ್ಥಿತಿಯಲ್ಲಿ ನನಗಾಯಿತು. ಅವನ ಜೊತೆ ಇದ್ದಾಗ ಸ್ವಲ್ಪ ಬದಲಾಗಿದ್ದ ನಾನು ಅವನ ಅನುಪಸ್ಥಿತಿಯಲ್ಲಿ ಸಂಪೂರ್ಣ ಬದಲಾದೆ. ಜನರ ಬಾಯಲ್ಲಿ ಮೊದಮೊದಲಿಗೆ ಅದು ಆಡಿಕೊಳ್ಳುವ ವಿಷಯವಾಗಿತ್ತು ಆದರೆ ಈಗ ನಾನು ಅವರ ಮುಂದಿನ ಸಕಾರಾತ್ಮಕ ಉದಾಹರಣೆ.

ಯಾರನ್ನೋ ಕಳೆದುಕೊಂಡ ತಕ್ಷಣ ನಂತರದ ಬದುಕೇ ಇಲ್ಲ ಎಂದು ಭಾವಿಸುವುದು ಏತಕೆ? ಅಂದಾಕ್ಷಣಕ್ಕೆ ಬದುಕಿನಲ್ಲಿ ಅವರನ್ನು ಪ್ರೀತಿಸಿಯೇ ಇಲ್ಲ ಎಂದು ಅರ್ಥವಲ್ಲ ಆದರೆ ಎಲ್ಲವನ್ನೂ ಹೊಂದಿಸಿಕೊಂಡು ಮೊದಲಿನಂತೆಯೇ ಬದುಕಲು ಪ್ರೀತಿ ಬೇಕು ಅದುವೇ ಜೀವನಪ್ರೀತಿ. 

~ವಿಭಾ ವಿಶ್ವನಾಥ್

ಭಾನುವಾರ, ಮೇ 3, 2020

ಎರಡು ದಡಗಳು


"ದಡ ದಾಟದೆ, ಇತ್ತ ನಿಂತು
ಸೇರಲಾಗದು ಎಂದೊಡನೆ..
ಮಾತ ನೆಚ್ಚಿ ಸುಮ್ಮನೆ ಕೂತು
ಕಾಲ ಕಳೆವವ ನಾನಲ್ಲ"

ಸಂಕೇತ್ ನ ಮೊಬೈಲ್ ಸಂದೇಶ ನೋಡಿದ ಸರಯೂ ಕೇಳಿದಳು. ಸಂದೇಶಕ್ಕಿಂತ ಹೀಗೇ ಮಾತನಾಡೋಣ ಅದೇ ಒಳಿತು. "ದಡದಲ್ಲಿರುವ ಪ್ರಯಾಣಿಕರು ಸೇರಬಹುದೇನೋ ಆದರೆ ದಡಗಳೆರಡೂ ಒಂದಾಗಲು ಸಾಧ್ಯವಿಲ್ಲ. ದಡಗಳೆರಡೂ ಒಂದಾಗಲು ಪ್ರವಾಹ ಬಂದಾಗ ಮಾತ್ರ ಸಾಧ್ಯ. ಅಲ್ಲವೇ?"

"ಮೂಲ ಒಂದೇ ಆದರೂ, ಹರಿವ ಕಾಲದ ಸೆಳೆತಕ್ಕೆ ಸಿಕ್ಕು ಬೇರೆಯಾಗುತ್ತವೆ. ಆದರೆ, ಅವುಗಳಿಂದಲೇ ಅಲ್ಲವೇ ನದಿಯ ಅಸ್ತಿತ್ವ??" ಎಂದನು ಸಂಕೇತ್.

"ಹೌದು, ನದಿಯ ಅಸ್ತಿತ್ವಕ್ಕೆ ಬೆಲೆ ಇರಬೇಕೆಂದರೆ ಅವು ಬೇರೆಯಾಗಿಯೇ ಬದುಕು ಸಾಗಿಸಬೇಕಲ್ಲವೇ..??"  ಎಂದಳು ಸರಯೂ.

"ನೀರಿನ ಹರಿತ ದಡಗಳೆರಡನ್ನೂ ಹಿಡಿದಿಟ್ಟಿದೆ. ಹಾಗೇ ಪ್ರೀತಿ ಕೂಡಾ ವಿರುದ್ಧ ಮನಸ್ಥಿತಿಯವರನ್ನು ಅಥವಾ ಹಾಗೆಂದುಕೊಂಡಿರುವವರನ್ನು ಒಗ್ಗೂಡಿಸಬಲ್ಲದು. ಅಲ್ಲವೇ..?" ಎಂದನು ಸಾಕೇತ್

ಅದಕ್ಕುತ್ತರವಾಗಿ ಸರಯೂ "ಪ್ರೀತಿ ಎಂಬ ಭಾವವಿದ್ದರೆ ಮಾತ್ರ ಅಲ್ಲಿ ಎರಡು ದಡಗಳು ಒಂದಾಗಬಹುದು. ಆದರೆ, ಅಲ್ಲಿ ಆ ಭಾವಗಳೇ ಇಲ್ಲದಿದ್ದಲ್ಲಿ..??" ಎಂದಳು.

"ಪ್ರೀತಿ ಎಂಬುದು ಮೇಲೆ ಕಾಣುವ ಭಾವವಲ್ಲ. ಅಂತರಂಗದ ಸುಪ್ತ ಭಾವ. ದ್ವೇಷವನ್ನು ಮುಚ್ಚಿಟ್ಟು ಬದುಕಬಹುದು ಆದರೆ ಪ್ರೀತಿಯನ್ನಲ್ಲ. ಮುಚ್ಚಿಟ್ಟಷ್ಟೂ ಪ್ರೀತಿ ಹೆಚ್ಚಾಗುತ್ತದೆ, ಹೆಮ್ಮರವಾಗುತ್ತದೆ. ಅಷ್ಟಕ್ಕೂ ಪ್ರೀತಿ ಒಂದು ದಿನದಲ್ಲಿ ಹುಟ್ಟುವುದೂ ಇಲ್ಲ, ಕ್ಷಣ ಮಾತ್ರದಲ್ಲಿ ಸಾಯುವುದೂ ಇಲ್ಲ. ಪ್ರೀತಿಗೆ ಮರು ಪ್ರೀತಿ ದಕ್ಕದಿದ್ದರೂ, ಯಾವ ನಿರೀಕ್ಷೆಯೂ ಇಲ್ಲದೆ ಪ್ರೀತಿಸುವುದೇ ಪ್ರೀತಿ. ಬಚ್ಚಿಟ್ಟು ನಿನ್ನನ್ನು ನೀನು ಸಮರ್ಥಿಸಿಕೊಳ್ಳುತ್ತಾ ನನ್ನನ್ನು ಮೋಸಗೊಳಿಸಬಹುದು ಎಂದುಕೊಂಡಿದ್ದರೆ ಅದು ನಿನ್ನ ಭ್ರಮೆ" ಎಂದ ಸಂಕೇತ್.

"ಹೌದಲ್ಲವಾ..? ಪ್ರೀತಿ ಒಂದು ದಿನದಲ್ಲಿ ಹುಟ್ಟದು. ಆದರೆ, ಒಬ್ಬರನ್ನು ಪ್ರೀತಿಸಿ ಮತ್ತೊಬ್ಬರನ್ನು ಮದುವೆಯಾಗಿ, ನಂತರ ಹೆಂಡತಿಯನ್ನು ಪ್ರೀತಿಸುವೆ ಎನ್ನುವುದು ಮೊದಲ ಪ್ರೀತಿಗೆ ಮಾಡುವ ಮೋಸವಲ್ಲವೇ..??" ಎಂಬ ಸರಯುವಿನ ಪ್ರಶ್ನೆ ಇವನಿಗೆ ಹರಿತವಾಗಿಯೇ ತಾಗಿತ್ತು.

"ಮೊದಲ ಪ್ರೀತಿ ಬರೀ ಆಕರ್ಷಣೆಯಾಗಿದ್ದರೆ..?? ಅದು ಪ್ರೀತಿ ಎಂಬ ಭಾವ ಹುಟ್ಟಿಸಿ ಮೋಸ ಮಾಡಿದ್ದರೆ ಅದಕ್ಕೆ ಹೊಣೆ ಯಾರು..?" ಎಂದ ಸಂಕೇತ್ ಕ್ಷೀಣ ಧ್ವನಿಯಲ್ಲಿ.

"ಪ್ರೀತಿಯ ಭಾವ ಹುಟ್ಟಿಸಿ ಮೋಸ ಮಾಡಿದ್ದವಳು ಅವಳಾದರೆ, ಪ್ರೀತಿಗೆ ಮರು ಪ್ರೀತಿ ಎಂದು ಹೇಳಿ ನೀವೂ ಪ್ರೀತಿಸಿದ್ಧಿರಿ ಅಲ್ಲವೇ..? ಅವಳು ಮಾಡಿದ್ದು ಮೋಸವೆಂದಾದರೆ, ನೀವು ಮಾಡಿದ್ದು ಸಹಾ ಮೋಸವೇ ಅಲ್ಲವೇ..?" ಎಂಬ ಪ್ರಶ್ನೆ ಕೇಳಿದ್ದಳು ಸರಯೂ.

" ಪ್ರೀತಿ ಮತ್ತು ಯುದ್ಧದಲ್ಲಿ ಎಲ್ಲವೂ ಸಮ್ಮತವಲ್ಲವೇ..? ಹಿಂದೆ ನೀನೇ ಯಾವಾಗಲೋ ಪುಸ್ತಕ ಓದುವಾಗ ಹೇಳಿದ್ದ ನೆನಪು. ಒಮ್ಮೆ ಪ್ರೀತಿಯಾದರೆ ಮತ್ತೊಮ್ಮೆ ಪ್ರೀತಿಯಾಗಬಾರದು ಎಂದೇನೂ ಇಲ್ಲವಲ್ಲಾ.. ಪ್ರೀತಿ ಹಂಚಿದಷ್ಟೂ ಹೆಚ್ಚುತ್ತಾ ಹೋಗುತ್ತದೋ ಹೊರತು ಕಡಿಮೆಯಾಗಲಾರದು" ಎಂದನು ಸಂಕೇತ್.

"ಪ್ರೀತಿಸುವವರಿಗೆ ಮಾತ್ರ ಈ ಸೂತ್ರ ಅನ್ವಯವಾಗುತ್ತದೆ ನಿಮ್ಮ ತರಹದ ಮೋಸಗಾರರಿಗಲ್ಲ. ನಿಮಗೀಗ ಬೇಕಿರುವುದು ಪ್ರೀತಿಯಲ್ಲ, ಹಾಸಿಗೆಯ ಸುಖಕ್ಕೆ ಒಂದು ಹೆಣ್ಣು ಅಷ್ಟೇ.." ಎಂಬ ಮಾತು ಸರಯೂ ಬಾಯಿಯಿಂದ ಬಂದೊಡನೆ ಕಪಾಳಮೋಕ್ಷವಾಗಿತ್ತು.

"ಹೊಡೆದಾಕ್ಷಣ ಸತ್ಯ ಬದಲಾಗದು ಮಿಸ್ಟರ್ ಸಂಕೇತ್" ಎಂದಳು ಸರಯೂ ತಡವರಿಸದೆ.

"ಸತ್ಯವಲ್ಲದ್ದನ್ನು ಸತ್ಯವೆಂದು ಬಿಂಬಿಸಲು ಕಟು ಮಾತುಗಳ ಅವಶ್ಯಕತೆ ಇಲ್ಲ ಸರಯೂ. ಹಾಸಿಗೆಯ ಸುಖಕ್ಕೆ ಹೆಣ್ಣು ಬೇಕಿದ್ದಲ್ಲಿ ನಿನ್ನನ್ನು ಬೇಡುವುದು ಬೇಕಾಗಿರಲಿಲ್ಲ ಅಲ್ಲದೇ ನಿನ್ನನ್ನು ಒಲಿಸಿಕೊಂಡು ಪ್ರೀತಿಯ ಭಿಕ್ಷೆಯನ್ನು ಬೇಡುವುದೂ ಸಹಾ ಬೇಕಿರಲಿಲ್ಲ. ದೈಹಿಕವಾಗಿ ನಿನ್ನನ್ನು ಸೋಲಿಸಲು ಎಷ್ಟೊತ್ತು?? ಸಂಯಮದ ಕಟ್ಟೆ ಮೀರಿದಿದ್ದರೆ ಎಂದಿಗೋ ನಿನ್ನನ್ನು ಆ ರೀತಿ ಬಳಸಿಕೊಂಡಿರುತ್ತಿದ್ದೆ.

ಪ್ರೀತಿಯೇ ಬೇರೆ, ವಾಂಛೆಯೇ ಬೇರೆ. ಎರಡರ ನಡವಳಿಕೆಗೂ ಬಹಳಷ್ಟು ವ್ಯತ್ಯಾಸವಿದೆ. ಇದೆಲ್ಲವೂ ನಿನಗೂ ಗೊತ್ತಿದೆ. ಆದರೂ ಈ ರೀತಿಯ ನಾಟಕದ ಹೊದಿಕೆ ಏತಕೆ?"

"ನಿನಗೆ ನನ್ನ ಪ್ರೀತಿ ಅರ್ಥಾತ್ ಮೋಸದ ಬಗ್ಗೆ ಗೊತ್ತಿದ್ದೂ ಸಹಾ ನನ್ನ ಜೊತೆ ಇರುವುದೇತಕೆ? ಮದುವೆ ಎಂಬ ಬಂಧನಕ್ಕೆ ಬೆಲೆ ಕೊಡುತ್ತೇನೆ ಎಂಬ ಮಾತನ್ನು ಬಿಟ್ಟು ಬಿಡು. 
ನಾನು ನನ್ನ ಪ್ರೀತಿಯ ವಿಚಾರವನ್ನು ನಾನೇನು ನಿನ್ನ ಹತ್ತಿರ ಮುಚ್ಚಿಟ್ಟು ಮದುವೆಯಾಗಿರಲಿಲ್ಲ. ಮೋಸ ಮಾಡಬೇಕೆಂದಿದ್ದರೆ ನಿನ್ನ ಹತ್ತಿರ ನಾನು ಈ ವಿಚಾರವನ್ನು ಹೇಳದೆಯೇ ಇರಬಹುದಿತ್ತು. ಆದರೆ, ಮದುವೆಯಾದ ನಂತರ ನನ್ನ ತಿರಸ್ಕಾರದ ನಡುವಲ್ಲಿಯೂ ಸಹಾ ನೀನು ನಿನ್ನ ಪ್ರೀತಿ ಹಂಚಿದೆ. ನಾನು ಬದಲಾದ ಸಂಧರ್ಭದಲ್ಲಿ ನೀನು ಹೇಗೆ ವರ್ತಿಸುತ್ತಿರುವುದಕ್ಕೆ ಕಾರಣವೇನು?" ಎಂಬ ಸಂಕೇತ್ ನ ಪ್ರಶ್ನೆಗೆ ಸರಯೂ

"ನಾನು ನನ್ನ ಸ್ವಾರ್ಥಕ್ಕೆ ನಿಮ್ಮನ್ನು ಮದುವೆಯಾದೆ. ನಿಮ್ಮ ಮೇಲಿದ್ದದ್ದು ಕಾಳಜಿ ಅಷ್ಟೇ.. ಅದು ಪ್ರೀತಿ ಎಂಬ ತಪ್ಪು ಕಲ್ಪನೆ ನಿಮ್ಮಲ್ಲಿ ಮೂಡಿದ್ದರೆ ಅದಕ್ಕೆ ನಾನು ಭಾದ್ಯಳಲ್ಲ" ಎಂದಳು ಸರಯೂ.

"ಪ್ರೀತಿಗೂ, ಕಾಳಜಿಗೂ ಬಹಳಷ್ಟು ವ್ಯತ್ಯಾಸವಿದೆ. ಪ್ರೀತಿ ಇರುವಲ್ಲಿ ಮಾತ್ರ ಕಾಳಜಿ ಇರುತ್ತದೆ. ಹಾಗೇ, ಒಂದು ವಿಷಯ ನೆನಪಿಟ್ಟುಕೋ ನಿನ್ನ ಈ ಒರಟು ಮಾತುಗಳಿಗೆ ಸೋತು ಹಿಂದೆ ಸರಿಯುವವ ನಾನಲ್ಲ.  ಒರಟು ಮಾತುಗಳ ಹಿಂದೆ ಪ್ರೀತಿಯನ್ನು ಬಚ್ಚಿಡುವ ಹುನ್ನಾರವಿರುತ್ತದೆ. ನಿನ್ನ ಪ್ರೀತಿ,ಕಾಳಜಿ ನನ್ನನ್ನು ನಿನ್ನೆಡೆಗೆ ವಾಲುವಂತೆ ಮಾಡಿರುವುದು ಸತ್ಯ. ಅದನ್ನು ಯಾರೇ ಬಂದರೂ ಬದಲಿಸಲಾಗದು. ನೀನು ನನ್ನನ್ನು ಪ್ರೀತಿಸಲಾರೆ ಎಂದರೆ ನೀನು ಇಲ್ಲಿ ಇರುವ ಅವಶ್ಯಕತೆಯಾದರೂ ಏನು? ನಾಳೆಯೇ ನೀನು ಇಲ್ಲಿಂದ ಹೊರಡಬಹುದು" ಎಂದು ಹೇಳಿ ಹೊರಟ ಸಂಕೇತ್.

ಅವನು ಅತ್ತ ಹೋಗುತ್ತಿದ್ದಂತೆಯೇ ಇತ್ತ ಸರಯೂ ಕಣ್ಣಲ್ಲಿ ಕಣ್ಣೀರಿನ ಕೋಡಿ ಹರಿಯಲಾರಂಭಿಸಿತು. ಸಾಯಿಬಾಬಾ ಮುಂದೆ ಮನದ ದುಗುಡವನ್ನೆಲ್ಲಾ ಹೊರಹಾಕಲಾರಂಭಿಸಿದಳು. "ಈ ಪ್ರೀತಿಯ ನಿವೇದನೆಗಾಗಿ ನಾನು ಕಾಯುತ್ತಿದ್ದೆ. ಆದರೆ, ಆ ಕ್ಷಣ ಬಂದಾಗ ಅದನ್ನು ಮನತುಂಬಿ ಅನುಭವಿಸಲಾಗುತ್ತಿಲ್ಲ. ನಾನು ಈ ಪ್ರೀತಿಯನ್ನು ಒಪ್ಪಿದರೆ ಅಲ್ಲಿ ನನ್ನ ಅಮ್ಮನ ಪ್ರಾಣ ಅವಳಿಂದ ಹೋಗುತ್ತದೆ. ಆಡುವಂತಿಲ್ಲ, ಅನುಭವಿಸುವಂತಿಲ್ಲ.

ಒಂದೆಡೆ ಜನ್ಮ ನೀಡಿದ ಭವಿಷ್ಯಕ್ಕೆ ನನ್ನನ್ನು ಸಜ್ಜು ಮಾಡಿದ ಅಮ್ಮ, ಇತ್ತ ಭವಿಷ್ಯದಲ್ಲಿ ಜೊತೆಯಾಗಬೇಕಾದ ಗಂಡ. ಎರಡು ಕಣ್ಣಲ್ಲಿ ಒಂದನ್ನು ಆಯ್ಕೆ ಮಾಡಿಕೋ ಎಂದರೆ ಯಾವುದೆನ್ನಲಿ?? ನನ್ನ ಪ್ರೀತಿಯೇ ಸುಳ್ಳು ಎನ್ನಲೇ..?? ಕಟು ಮಾತಿನಿಂದ ದೂರ ತಳ್ಳಿದರೂ ಸನಿಹವಾಗುತ್ತಿರುವ ಗಂಡ, ದೂರದಲ್ಲಿದ್ದರೂ ಮನಸ್ಸಿನಲ್ಲಿ ಯಾವಾಗಲೂ ಹತ್ತಿರದಲ್ಲೇ ಇರುವ ನನ್ನ ಏಕೈಕ ಬಂಧು ಅಮ್ಮ.

ದೂರದಲ್ಲಿದ್ದರೂ ಇವರನ್ನು ನೋಡಿ ಖುಷಿ ಪಡುವೆ. ನಾನಿವರನ್ನು ಬಿಟ್ಟು ಹೊರಡದಿದ್ದರೆ ಅವರ ಕೆಲಸ, ಅಮ್ಮನ ಪ್ರಾಣ ಎರಡಕ್ಕೂ ಕುತ್ತು. ಬದಲಿಗೆ ನಾನೇ ಎಲ್ಲರಿಂದ ನಾನೇ ದೂರ ಹೋಗಿಬಿಡುತ್ತೇನೆ. ಪ್ರೀತಿಯ ಮರು ನಿರೀಕ್ಷೆ ಇಲ್ಲದೆಯೇ ಬದುಕುವೆ." ಎಂಬ ಮಾತು ಬಾಬಾ ಕಿವಿಗೆ ತಲುಪಿತೋ ಇಲ್ಲವೋ ಸಂಕೇತ್ ಕಿವಿಗೆ ತಲುಪಿತ್ತು.

ಸರಯೂ ಹಿಮ್ಮೆಟ್ಟುವಿಕೆಯ ಕಾರಣ ತಿಳಿದಿತ್ತು. ಪ್ರೀತಿಯ ನಾಟಕ ಮಾಡಿ ಮೋಸ ಮಾಡಿದ್ದ ಲಾವಣ್ಯ ಕ್ಷಮೆ ಕೇಳಲು ಬಂದಿದ್ದ ಹಿಂದಿನ ಮರ್ಮ ತಿಳಿದಿತ್ತು.

ಬೆಳಿಗ್ಗೆ ಸರಯೂ ಏಳುವಷ್ಟರಲ್ಲಿ ಸರಯೂ ತಾಯಿಯನ್ನು ಮನೆಗೆ ಕರೆ ತಂದಿದ್ದ ಸಂಕೇತ್ "ನಿಮ್ಮ ಜೊತೆಗೇ ಇರುವೆನೆಂದು ನನ್ನ ಜೊತೆ ಜಗಳವಾಡಿ ಮುನಿಸಿಕೊಂಡಿದ್ದಾಳೆ. ನೀವೇ ಸಮಾಧಾನ ಮಾಡಿ" ಎನ್ನುತ್ತಾ ಅತ್ತೆಯನ್ನು ಬಿಟ್ಟಿದ್ದ. ಅಲ್ಲದೇ ಸರಯೂ ಗೆ "ಅಮ್ಮನ ಹತ್ತಿರ ಮಾತನಾಡಿದ ನಂತರ ಎಲ್ಲಾ ಲಗೇಜ್ ಅನ್ನು ಪ್ಯಾಕ್ ಮಾಡು. ನನ್ನ ಕೆಲಸದ ಸ್ಥಳ ಬದಲಾಗಿದೆ. ನಿನ್ನ ಅಮ್ಮ ಕೂಡಾ ನನ್ನ ಅಮ್ಮನಾಗಿ ನನ್ನ ಜೊತೆಯೇ ಇರುವರು. ಇಷ್ಟರ ನಂತರ ನಿನ್ನ ಇಷ್ಟ. ಬಿಟ್ಟು ಹೊರಡುವುದಾದರೆ ಬಾಗಿಲು ತೆರೆದೇ ಇದೆ ಆದರೆ ಅಮ್ಮ ಇಲ್ಲಿರುವ ಹಾಗೂ ಕೆಲಸ ಸಲುವಾಗಿ ಹೋಗುವ ಸ್ಥಳ ಬದಲಾಗದು ಎಂಬುದು ನೆನಪಿರಲಿ. ಹಾಗೆಯೇ ಪ್ರೀತಿ ಕೂಡಾ" ಎಂದವನು ನಡೆದು ಬಿಟ್ಟ.


ಬಿಟ್ಟ ಕಂಗಳಿಂದ ಇದೆಲ್ಲವೂ ಕನಸು ಎಂಬಂತೆ ನೋಡುತ್ತಿದ್ದವಳಿಗೆ ಅವಳ ಅಮ್ಮನೆಂದಿದ್ದರು. "ದೇವರು ಭಕ್ತರ ಪ್ರಾರ್ಥನೆಯನ್ನು ಕೇಳಿಸಿಕೊಂಡರೆ ಸ್ಪಂದಿಸುತ್ತಾನೋ ಇಲ್ಲವೋ ಗೊತ್ತಿಲ್ಲ ಆದರೆ ಮನುಷ್ಯ ಪ್ರೀತಿಗೆ, ಪ್ರಾರ್ಥನೆಗೆ ಸ್ಪಂದಿಸುತ್ತಾನೆ. ಕಾಣದ ದೇವರೆಡೆಗೆ ಮೊರೆಯಿಟ್ಟು ಕಷ್ಟವನ್ನು ನಿವಾರಿಸು ಎನ್ನುವ ಬದಲು ಪ್ರೀತಿಯಿಂದ ಮನುಷ್ಯರೊಡನೆ ಮಾತನಾಡಿದರೆ ಎಲ್ಲಾ ಕಷ್ಟವೂ ನಿವಾರಣೆಯಾಗುತ್ತದೆ" ಎಂದ ಮಾತಿಗೆ ಏನೋ ಹೊಳೆದವಳಂತೆ ಸಂಕೇತ್ ನತ್ತ ಹೊರಟಳು ಸರಯೂ.

"ಹೊರಹೋಗಲಾರೆ ಮನೆಯಿಂದಲೂ,ನಿಮ್ಮ ಮನದ ಮಂದಿರದಿಂದಲೂ" ಎಂದವಳು ತನ್ನಿನಿಯನ ಬಾಹುಗಳಲ್ಲಿ ಬಂಧಿಯಾಗಿದ್ದಳು. ಪ್ರೀತಿಯ, ಅರ್ಥೈಸುವಿಕೆಯ ಹುಚ್ಚು ಪ್ರವಾಹದಲ್ಲಿ ಎರಡೂ ದಡಗಳು ಒಂದಾಗಿದ್ದವು. 

~ವಿಭಾ ವಿಶ್ವನಾಥ್