ಗುರುವಾರ, ಅಕ್ಟೋಬರ್ 31, 2019

ಜೊತೆಗೂಡದ ಹೆಜ್ಜೆಗಳು

ಅದೆಷ್ಟೇ ಪ್ರಯತ್ನಿಸಿದರೂ ನಿನ್ನ ನಡಿಗೆಯ ವೇಗಕ್ಕೆ ನನಗೆ ಸರಿಸಾಟಿಯಾಗಲು ಸಾಧ್ಯವೇ ಆಗಲಿಲ್ಲ. ಬರಿ ಹೆಜ್ಜೆ ಮಾತ್ರವಲ್ಲ, ನಿನ್ನ ಬದುಕು ಮತ್ತು ಕನಸಿನ ಜೊತೆಗೂಡಲು ನನ್ನಿಂದ ಸಾಧ್ಯವಾಗುವುದಿಲ್ಲ. ಸಾಧ್ಯವಾದರೂ ನಾ ನಿನ್ನೊಡನೆ ಹೆಜ್ಜೆ ಹಾಕುವುದಿಲ್ಲ. ನಾ ನಿನ್ನೊಡನೆ ಹೆಜ್ಜೆ ಹಾಕಲು ಯಾರು, ಯಾರು ನೀ ನನಗೆ..?

ಸಾವಿತ್ರಿ ಯಮನೊಡನೆ ಪತಿಯ ಪ್ರಾಣ ಭಿಕ್ಷೆಗಾಗಿ ಹೆಜ್ಜೆ ಹಾಕಿದಳು. ಇನ್ನು ಸಪ್ತಪದಿಯಲ್ಲಿ ಸಹಚರರಿಗಾಗಿ ಪ್ರಮಾಣ ಮಾಡಲು ಹೆಜ್ಜೆ ಹಾಕುತ್ತಾರೆ. ನಾನೇಕೆ ನಿನ್ನೊಡನೆ ಹೆಜ್ಜೆ ಹಾಕಲಿ..?

ಬೇಡಿ ಸಣ್ಣವಳಾಗಲಾರೆ, ಕೊಟ್ಟು ದೊಡ್ಡವಳಾಗಲಾರೆ. ಸಹಮತಕ್ಕೆ ನಮ್ಮಲ್ಲಿ ಸಮಾನಾಭಿರುಚಿಯೂ ಇಲ್ಲ. ಬಹುಶಃ ಹೆಜ್ಜೆ ಹಾದಿ ತಪ್ಪಬಹುದು, ಹೃದಯದ ಬಡಿತ ತಪ್ಪಬಹುದು. ಆದರೂ, ಹೆಜ್ಜೆಗಳು ಜೊತೆಗೂಡಲಾರವು.ಅಲ್ಲವೇ..?

ನಿನ್ನ ಹಿಂದೆ ನಾ ಹೆಜ್ಜೆ ಹಾಕಲು ನೀನು ಮುಖಂಡನಲ್ಲ, ನಾನು ಹಿಂಬಾಲಕಿಯಲ್ಲ. ಇಲ್ಲವೆಂದರೆ, ನಾ ಮುಂದೆ ಹೆಜ್ಜೆ ಹಾಕಲು ನಾನು ಮುಂದಾಳುವಲ್ಲ, ನೀನು ನನ್ನ ಹಿಂಬಾಲಕನಲ್ಲ. ಜೊತೆ-ಜೊತೆಗೆ ಹೆಜ್ಜೆ ಹಾಕಲು ನಾವು ಸ್ನೇಹಿತರೂ ಅಲ್ಲ. ಬಹುಶಃ ಕಾಲದೊಡನೆ ಕೆಲಕಾಲ ಸಮಾನಾಂತರದಲ್ಲಿ ಹೆಜ್ಜೆ ಹಾಕುತ್ತಿರುವೆವೋ, ಏನೋ..? ಎಲ್ಲರ ಕಾಲೆಳೆದು ಮೋಜು ನೋಡುವ ಕಾಲ ಕೆಲಕಾಲದ ನಂತರ ನಮ್ಮ ಹೆಜ್ಜೆ ಗುರುತುಗಳನ್ನೆಲ್ಲಾ ಅಳಿಸಲೂಬಹುದು ಅಥವಾ ಅದರ ಮೇಲೆ ಮತ್ತೊಬ್ಬರ ಹೆಜ್ಜೆ ಗುರುತನ್ನು ಮೂಡಿಸಬಹುದು. ಕಾಲಾಂತರದ ಹಾದಿಯಲ್ಲಿ ನಾ ಯಾರೋ..? ನೀ ಯಾರೋ..? ಅವರ್ಯಾರೋ..?

ಸಮುದ್ರವೇ ನಮ್ಮ ಹೆಜ್ಜೆಗಳನ್ನು ಒಟ್ಟಿಗಿರಲು ಬಿಡುವುದಿಲ್ಲವೆಂದರೆ, ಕಾಲ ಸುಮ್ಮನಿರುವುದೇ..? ಎಂದೋ, ಯಾವುದೋ ಕಾರಣಕ್ಕೆ ಆಸರೆಯಾದ ಹೆಜ್ಜೆಗಳು ಸದಾ ಹಾಗೆಯೇ ಆಸರೆಯಾಗಿರಲು ಸಾಧ್ಯವೇ..? ಅಚಾನಕ್ಕಾಗಿ ಕಾಲು ಮುರಿದಾಗ ತಾನಿಲ್ಲದೆ ಆಸರೆಯೇ ಇಲ್ಲ, ಜೀವನವೇ ಇಲ್ಲ ಎಂಬಂತಿದ್ದ ಊರುಗೋಲು  ತಾನು ಎದ್ದು ನಡೆದಾಡುವಂತಾದ ಮೇಲೆ ಮೂಲೆಪಾಲು.ಅಕಸ್ಮಾತ್, ಆ ಊರುಗೋಲನ್ನು ನಾವು ಬಿಡುವುದಿಲ್ಲವೆಂದು ಸುತ್ತಲಿನವರು ಸುಮ್ಮನಿರುವರೇ..? ಊರುಗೋಲಿಗೆ ಮಾತ್ರವಲ್ಲ, ಮನುಷ್ಯರಿಗೂ ಅದೇ ಪಾಡೇ. ಎಂದೋ ಮಾಡಿದ ಸಹಕಾರ ಆ ಕಾಲಕ್ಕೆ ದೊಡ್ಡದಾದರೂ, ಮುಂದಿನ ದಿನಗಳಲ್ಲಿ ಕಡಿಮೆಯೇ.. ಆದರೂ ಯಾರಿಗಾದರೂ ಸಹಕಾರ ನೀಡಿದರೆ ಪ್ರತಿಫಲದ ಅಪೇಕ್ಷೆ ಇರಬಾರದು. ಪ್ರತಿಫಲದ ನಿರೀಕ್ಷೆಯಿಂದ ನೀಡುವ ಸಹಕಾರ, ಮಾಡುವ ಸಹಾಯ ವ್ಯಾಪಾರವಲ್ಲದೇ ಮತ್ತೇನು..? "ನೀ ನನಗಾದರೆ, ನಾ ನಿನಗೆ.." ಎಂಬುದೇ ಸಾರ್ವತ್ರಿಕವಾಗಿದ್ದರೂ ನನ್ನ ದೃಷ್ಠಿಯಲ್ಲಿ "ನೀ ನನಗಾಗದಿದ್ದರೂ, ನಾ ನಿನಗೆ" ಎಂದು ಬದಲಾಗಿದೆ. 

ಹೆಜ್ಜೆಯಿಂದ ಪ್ರತಿಫಲದ ಕಡೆಗೆ ಯೋಚನೆಯ ಹೆಜ್ಜೆ ಸಾಗಿತು. ಎಷ್ಟಾದರೂ ಮನಸ್ಸು ಮರ್ಕಟವಲ್ಲವೇ..? ಏನನ್ನೋ ಹೇಳ ಹೊರಟು ಮತ್ತೇನನ್ನೋ ಹೇಳಿದ ಹಾಗೆ, ಹೆಜ್ಜೆಗಳೂ ಸಹಾ ಏನನ್ನೋ ಹಿಂಬಾಲಿಸ ಹೊರಟು ಮತ್ತೇನನ್ನೋ ಹಿಂಬಾಲಿಸುತ್ತವೆ, ಮತ್ತೆಲ್ಲಿಗೋ ಹೊರಟು ಬಿಡುತ್ತವೆ. ಕೆಲವೊಮ್ಮೆ ತಮಗೆ ಜೊತೆಯಾಗಬಯಸುವವರನ್ನು ತೊರೆದು, ತಾವು ಬೇರಾರಿಗೋ ಜೊತೆಗಾರರಾಗಲು ಹೊರಡುತ್ತವೆ. ಅದು ತಮ್ಮಭಿಪ್ರಾಯದ ಮೇರೆಗೋ ಅಥವಾ ಪ್ರತಿಷ್ಠೆಗೋ ಅಥವಾ ಬೇರೆಯವರ ಮೇಲಿನ ಗೌರವಕ್ಕೋ ಅಥವಾ ತಮ್ಮ ಕನಸಿನಂತೆ ಬದುಕುವುದಕ್ಕಾಗಿಯೋ ಎಂಬುದು ಮತ್ತೊಂದು ಹೆಜ್ಜೆಗೆ ಮುಖ್ಯವಾಗುವುದಿಲ್ಲ, ಬಹುಶಃ ಆ ಸಮಯಕ್ಕೆ ಸಹ ಹೆಜ್ಜೆಗೆ ಅದು ಅಪ್ರಸ್ತುತ ಕೂಡಾ.

ಉಸುಕಿನ ಮೇಲೆ ಮೂಡಿಸಿದ ಹೆಜ್ಜೆ ಗಾಳಿಗೆ ಮುಚ್ಚಿ ಹೋಗಲೇ ಬೇಕಲ್ಲವೇ? ನೀರಿನ ಮೇಲೆ ಎಂದಾದರೂ ಹೆಜ್ಜೆ ಮೂಡಿಸಲು ಸಾಧ್ಯವೇ? ಬದುಕಿನ ಹಾದಿಯೂ ಹಾಗೆಯೇ..ಹೆಜ್ಜೆಗಳನ್ನು ಒಡಮೂಡಿಸುತ್ತದೆ, ಕ್ರಮೇಣ ಅದರ ಮೇಲೆ ಪ್ರಭಾವ ಬೀರುತ್ತಾ ಆ ಜೊತೆಗೂಡಿದ ಹೆಜ್ಜೆಗಳನ್ನು ಜೊತೆಗೂಡದಂತಾಗಿಸುತ್ತದೆ. ಆದರೆ, ನಂಬಿಕೆ ಜೊತೆಗಿದ್ದರೆ, ಜೊತೆಗಿರುವ ಹೆಜ್ಜೆಗಳು ಎಂದಿಗೂ ಬೇರಾಗವು. ಆದರೂ, ಹೆಜ್ಜೆಗಳು ಜೊತೆಗಿರದಿದ್ದರೂ ಮನಸ್ಸು ಜೊತೆಗಿರಬೇಕಲ್ಲವೇ..? ರಾಧೆಯ ಹೆಜ್ಜೆಗೆ ಕೃಷ್ಣ ಕೊಳಲಾದಂತೆ. ಕೃಷ್ಣನ ರಾಗಕ್ಕೆ ರಾಧೆಯ ಹೆಜ್ಜೆ-ಗೆಜ್ಜೆ-ಲಜ್ಜೆಗಳು ಒಂದಾದಂತೆ.. ನಮ್ಮ ಪಯಣದ ಹೆಜ್ಜೆಗಳು ಜೊತೆಯಾಗಿಯೇ ಸಾಗಲು ಸಾಧ್ಯವೇ..? ಕಡೇ ಪಕ್ಷ ಕನಸಿನಲ್ಲಾದರೂ..

ಬಹುಶಃ ಇಂದು ಜೊತೆಗೂಡದ ಹೆಜ್ಜೆಗಳು, ಬಾಳಯಾನದಲ್ಲಿ ನಾಳೆ ಒಂದಾಗಿ ಜೊತೆಗೂಡಿ ಪಯಣಿಸಬಹುದೇ..? ಬಹುಶಃ ಅದು ಸಾಧ್ಯವಾಗದಿದ್ದರೇ ಒಳಿತು. ಏಕೆಂದರೆ, ಕೈಗೆ ಸಿಕ್ಕ ಚಂದಿರನನ್ನು ನಿರ್ಲಕ್ಷಿಸಿ, ನಿಲುಕದ ನಕ್ಷತ್ರಕ್ಕೇ ಅಲ್ಲವೇ ಮನ ಹಾತೊರೆಯುವುದು..ಅಷ್ಟೇ ಅಲ್ಲದೆ, ಜೊತೆಗೂಡಿ ದೂರವಾಗುವುದಕ್ಕಿಂತ ದೂರವಿದ್ದರೇ ಒಳಿತಲ್ಲವೇ..?

-ವಿಭಾ ವಿಶ್ವನಾಥ್         

ಭಾನುವಾರ, ಅಕ್ಟೋಬರ್ 27, 2019

ಮಾತು ಗಟ್ಟಿಯಾಗಿತ್ತಷ್ಟೇ, ಮನಸಲ್ಲ

ಅವತ್ತು ಮಧ್ಯಾಹ್ನದ ಬ್ರೇಕ್ ವೇಳೆಯಷ್ಟರಲ್ಲಿ ಹಾಸ್ಟೆಲ್ ನಲ್ಲೆಲ್ಲಾ ಕೋಲಾಹಲವೋ ಕೋಲಾಹಲ.ಅದು ಲೇಡೀಸ್ ಹಾಸ್ಟೆಲ್, ವಾಚ್ ಮನ್ ಬಿಟ್ಟು ಉಳಿದವರಿಗಾರಿಗೂ ಪ್ರವೇಶವೇ ಇಲ್ಲದ ಆ ಹಾಸ್ಟೆಲ್ ಗೆ ಅಂದು ಅಡ್ಮಿನಿಸ್ಟ್ರೇಷನ್ ನ ಮೇಲಿನ ಹಂತದ ಅಧಿಕಾರಿಗಳಿಂದ ಹಿಡಿದು ಕೆಳಗಿನ ಹಂತದ ಅಧಿಕಾರಿಗಳೆಲ್ಲರೂ ಬಂದಿದ್ದರು. ಹಾಸ್ಟೆಲ್ ಮುಂಭಾಗದಲ್ಲೂ ತಕ್ಕ ಮಟ್ಟಿಗೆ ಜನ ನೆರೆದಿದ್ದರು.ಅಲ್ಲಿದ್ದವರೆಲ್ಲರನ್ನೂ ಕಂಡು ಯಾರಿಗೆ ಏನಾಗಿರಬಹುದು ಎಂಬ ಪ್ರಶ್ನೆ ಮೂಡಿದ್ದಂತೂ ಸುಳ್ಳಲ್ಲ.

ಟಾಪ್ ಪ್ಲೋರ್ ನಲ್ಲಿ ನಡೆದಿದ್ದ ಆ ಘಟನೆಗೆ ಸಾಕ್ಷಿಯಾಗಲೋ, ಕುತೂಹಲದಿಂದಲೋ ಬಂದ ಜನರಿಂದ ತುಂಬಿ ತುಳುಕುತ್ತಿದ್ದ ಹಾಸ್ಟೆಲ್ ನಲ್ಲಿ ಮೇಲಿನ ಪ್ಲೋರ್ ಗೆ ಹೋಗಲೂ ಸ್ಥಳಾವಕಾಶ ಇರಲಿಲ್ಲ. ಆದದ್ದಿಷ್ಟು ಡಿಪ್ಲೊಮಾ ಓದುತ್ತಿದ್ದ ಆ ಹುಡುಗಿ ಉರುಳು ಹಾಕಿಕೊಂಡಿದ್ದಳು. ಆದರೆ ಆ ಹುಡುಗಿ ಯಾರು? ಕಾರಣ ಏನು ಎಂಬುದು ತಿಳಿಯಲಿಲ್ಲ. ಆದರೆ ತಿಳಿದಾಗ ಬಹಳವೇ ಆಶ್ಚರ್ಯವಾಯಿತು.

ಗಲಗಲ  ಮಾತನಾಡಿಕೊಂಡು ಎಲ್ಲರನ್ನೂ ಮಾತನಾಡಿಸುತ್ತಾ, ನಗೆ ಚಟಾಕಿ ಹಾರಿಸುತ್ತಾ, ರೇಗಿಸಿದವರಿಗೆ ಪ್ರತ್ಯುತ್ತರ ಕೊಡುತ್ತಾ ಜೀವನಪ್ರೀತಿಯಿಂದ ಬದುಕುತ್ತಿದ್ದ ಹುಡುಗಿ ಅವಳು. ಅವಳೇ ಸುಫಲಾ. ಕೊನೆಯ ವರ್ಷದ ಪರೀಕ್ಷೆ ಬರೆದು, ಉನ್ನತ ವಿದ್ಯಾಭ್ಯಾಸಕ್ಕಾಗಿ ಕನಸು ಕಟ್ಟಿಕೊಂಡು ಬದುಕುತ್ತಿದ್ದ ಅವಳು ಹಾಗೆ ಮಾಡಿಕೊಂಡದ್ದು ಬಹಳ ಅಚ್ಚರಿಯೇ. ಪರೀಕ್ಷೆಯ ಅನುತ್ತೀರ್ಣದ ಭಯಕ್ಕೆ ಆತ್ಮಹತ್ಯೆ ಮಾಡಿಕೊಂಡದ್ದೇನಲ್ಲ ಅವಳು. ಏಕೆಂದರೆ, ಅವಳಿನ್ನೂ ಪರೀಕ್ಷೆಯನ್ನೇ ಬರೆದಿರಲಿಲ್ಲ, ಅಲ್ಲದೇ ಹಿಂದಿನ ಪರೀಕ್ಷೆಗಳಲ್ಲಿ ಯಾವ ಪರೀಕ್ಷೆಯಲ್ಲಿಯೂ, ಯಾವ ವಿಷಯದಲ್ಲಿಯೂ ಅನುತ್ತೀರ್ಣಳಾಗಿರಲಿಲ್ಲ.

ಅವತ್ತು ಬೆಳಿಗ್ಗೆ ತಿಂಡಿ ತಿಂದು ಹೊರಗೆ ಹೋಗಿ ಬರಲು ಅವಳು ರಿಜಿಸ್ಟರ್ ಬುಕ್ ನಲ್ಲಿ ಬರೆದಿದ್ದ ಚೆಕ್ ಔಟ್ ಮತ್ತು ಚೆಕ್ ಇನ್ ಸಮಯದಲ್ಲಿ ಇದ್ದ ಅಂತರ ಬರೀ 15 ನಿಮಿಷಗಳಷ್ಟೇ. ಆ ಹದಿನೈದು ನಿಮಿಷಗಳಲ್ಲಿ ಏನಾದರೂ ಆಗಿರಬಹುದಾ?

ಅಥವಾ, ಹಿಂದಿನ ದಿನ ವಾರ್ಡನ್ ಕೈಯಲ್ಲಿ ವಾಚಾಮಗೋಚರವಾಗಿ ಬೈಯ್ಯಿಸಿಕೊಂಡಿದ್ದಳು. ಅದೇನಾದರೂ ಇದಕ್ಕೆ ಕಾರಣವಾಗಿರಬಹುದಾ? ಇಲ್ಲ, ಹಾಗಿರಲಾರದು. ನಿನ್ನೆಯದ್ದನ್ನು ನಿನ್ನೆಗೇ ಬಿಟ್ಟು ಬಿಡುವ ಹುಡುಗಿ ಅವಳು. ಬೆಳಿಗ್ಗೆ ಸಹಾ ಅವರೊಂದಿಗೆ ಬೈಯ್ಯಿಸಿಕೊಂಡಿದ್ದರ ಕುರುಹೇ ಇಲ್ಲದಂತೆ ನಡೆದುಕೊಂಡಿದ್ದಳು ಆಕೆ.

ವಾರ್ಡನ್ ಕರೆದು ಬೈದ್ದದ್ದಕ್ಕೆ ಕಾರಣ ಆಕೆಯೂ, ಆಕೆಯ ಗೆಳತಿಯೂ ತೆಕ್ಕೆ ಬಿದ್ದು ಹೊಡೆದಾಡಿಕೊಂಡು ಇಡೀ ಹಾಸ್ಟೆಲ್ ಅನ್ನೇ ತಿರುಗಿ ನೋಡುವಂತೆ ಮಾಡಿದ್ದಕ್ಕೆ. ಆ ಜಗಳದ ನಂತರ ಅವರಿಬ್ಬರಿಗೂ ಮತ್ತೇನಾದರೂ ಜಗಳವಾಯಿತಾ?
ಅಷ್ಟಕ್ಕೂ ಜಗಳವಾಗುವುದಕ್ಕೆ ಆಕೆಯ ಗೆಳತಿ ಆ ರೂಂನಲ್ಲಿ ಇರಲೇ ಇಲ್ಲ. ಅನುಮಾನದಿಂದ ಎಲ್ಲರ ಕಡೆ ಬೊಟ್ಟು ಮಾಡಿ ತೋರಿಸಲು ಕಾರಣ  ಅವೆಲ್ಲಾ ಘಟನೆಗಳಿಗೆ ಕಾರಣ ಅವೆಲ್ಲಾ ಘಟನೆಗಳಿಗೂ ಸಾಕ್ಷಿಯಾಗಿದ್ದದ್ದು ಸಿ.ಸಿ.ಕ್ಯಾಮೆರಾ.

ಆದರೆ ಸಿ.ಸಿ.ಕ್ಯಾಮೆರಾ ಕಣ್ಣಿಗೆ ಬೀಳದಂತೆಯೂ ಕೆಲ ಘಟನಾವಳಿಗಳು ನಡೆಯಬಹುದು ಅಲ್ಲವೇ? ಸಿ.ಸಿ ಕ್ಯಾಮೆರಾ ಕಣ್ಣಿಗೆ ಬೀಳದ್ದು ಆ ತನಿಖೆಯ ಮುಖ್ಯಾಧಿಕಾರಿಯ ಕಣ್ಣಿಗೆ ಬಿದ್ದಿತ್ತು.

ಸಾಕ್ಷಿಯಾದ ಪ್ರಮುಖ ಸಾಕ್ಷಿ ಆಕೆಯ ಮೊಬೈಲ್. ಡೆತ್ ನೋಟ್ ಅಂತಹದ್ದೇನೂ ಸಿಗದಿದ್ದರಿಂದ ಆಕೆ ಮಾಡಿದ ಕೊನೆಯ ಮೆಸೇಜ್ ಮತ್ತು ಕಾಲ್ ಗಳೇ ಪ್ರಮುಖ ಸಾಕ್ಷಿಯ ಪಾತ್ರ ವಹಿಸಿಕೊಂಡಿದ್ದವು.ಆ ನಂಬರ್ ಗಳೆಲ್ಲವೂ ಬೊಟ್ಟು ಮಾಡಿ ತೋರಿಸುತ್ತಿದ್ದದ್ದು ರವಿಯ ನಂಬರ್ ಗೆ. ರವಿ ಈಕೆಗಿಂತ 2 ವರ್ಷ ದೊಡ್ಡವನು ಅಷ್ಟೇ. ಈಕೆ ಕಾಲೇಜಿಗೆ ಸೇರಿದಾಗ ಆತ ಫೈನಲ್ ಇಯರ್ ಜೊತೆಗೆ ಆತನದ್ದೂ ಈಕೆಯ ಊರೇ. ಪರಿಚಯ, ಸ್ನೇಹಕ್ಕೆ ತಿರುಗಿ ಅಲ್ಲಿಂದ ಪ್ರೇಮಕ್ಕೆ ತಿರುಗಿತ್ತು. ಆದರೆ, ಅದು ನೈಜ ಪ್ರೇಮವೇನೂ ಆಗಿರಲಿಲ್ಲ ಎಂದು ಸುಫಲಾಳಿಗೆ ತಿಳಿಯಲು ಒಂದು ವರ್ಷವೇ ಬೇಕಾಗಿತ್ತು. ಏಕೆಂದರೆ, ಈಕೆಯ ರೂಂ ಮೇಟ್ ಆಗಿ ಬಂದ ಸೃಜನಾಳ ಜೊತೆಗೆ ರವಿಯ ಸಲುಗೆ ಹೆಚ್ಚಾಯಿತು.ಆದರೆ, ಮುಸುಕಿನ ಗುದ್ದಾಟದಂತೆಯೇ ತ್ರಿಕೋನ ಪ್ರೇಮ ಕತೆ ನಡೆದಿತ್ತು. ಸುಫಲಾ ಸಾಯುವ ಹಿಂದಿನ ದಿನ ಸೃಜನಾಳೊಂದಿಗೆ ಆಗಿದ್ದ ಜಗಳಕ್ಕೆ ಮೂಲ ಕಾರಣ ಕೂಡಾ ಇಡೇ ಆಗಿತ್ತು. ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಈ ಜಗಳ ಅಶ್ಲೀಲ್ಲ ಮಾತುಗಳೊಂದಿಗೆ ಬೆಳೆದ ಜಗಳ ಇಬ್ಬರೂ ಶರಂಪರ ಕಿತ್ತಾಡಿ, ಕೂದಲು ಹಿಡಿದು ಜಗ್ಗಾಡಿ, ತೆಕ್ಕೆ ಬಿದ್ದು ಹೊಡೆದಾಡುವಷ್ಟಾಗಿತ್ತು. ಇತರರಿಗೆ ಮತ್ತು ವಾರ್ಡನ್ ಗೆ ನೈಜ ವಿಷಯದ ಅರಿವಿರಲಿಲ್ಲ, ಆದರೆ ಇಬ್ಬರ ಈ ಮಟ್ಟದ ಹೊಡೆದಾಟವನ್ನು ಇಡೀ ಹಾಸ್ಟೆಲ್ ನಿಂತು ನೋಡುತ್ತಿತ್ತು. ಎಲ್ಲರಿಗೂ ಬಿಟ್ಟಿ ಮನೋರಂಜನೆ ಸಿಗುವಾಗ ಯಾರಾದರೂ ಹೋಗಿ ಬಿಡಿಸುತ್ತಾರೇಕೆ? ಕಾಲವೇ ಹೀಗಲ್ಲವೇ..? ಕೆಲಹೊತ್ತಿನ ನಂತರ ಬಂದ ವಾರ್ಡನ್ ಇಬ್ಬರಿಗೂ ಛೀಮಾರಿ ಹಾಕಿ ಹೊರಟರು.

ಅದಾದ ನಂತರ ಸೃಜನಾ ಆ ರೂಂಗೆ ಕಾಲಿಡಲಿಲ್ಲ. ಮಾರನೇ ದಿನ ಬೆಳಿಗ್ಗೆ ರವಿ ವೀಡಿಯೋ ಕಾಲ್ ಮಾಡಿ ಸುಫಲಾಳಿಗೆ ಬುದ್ದಿ ಹೇಳಿ, ತಾನು ಮತ್ತು ಸೃಜನಾ ಇಬ್ಬರೂ ಪ್ರೀತಿಸುತ್ತಿದ್ದೇವೆ ಅಲ್ಲದೆ ಮದುವೆಯೂ ಆಗುತ್ತೇವೆ ಆದ್ದರಿಂದ ತಮ್ಮನ್ನು ಬಿಟ್ಟು ನಿನ್ನ ಜೀವನವನ್ನು ನೋಡಿಕೋ ಎಂದು ಹೇಳಿದ್ದ.

ಇದೆಲ್ಲದರಿಂದ ಒತ್ತಡಕ್ಕೊಳಗಾದ ಸುಫಲಾ, ಸೃಜನಾಳನ್ನು ಹುಡುಕಿಕೊಂಡು ಹೋಗಿದ್ದಳು.ಆದರೆ, ಸೃಜನಾ ಸ್ಟಡೀ ಹಾಲಿಡೇಸ್ ಆದ್ದರಿಂದ ಅಂದು ಬೆಳಿಗ್ಗೆಯೇ ಊರಿಗೆ ಹೋಗಿದ್ದಳು. ಇದು ಗೊತ್ತಿಲ್ಲದ ಸುಫಲಾ ಅವಳನ್ನು ಕ್ಯಾಂಪಸ್ ನಲ್ಲೆಲ್ಲಾ ಹುಡುಕಿ ಸುಸ್ತಾಗಿ ಬಂದಳು. ಅದಕ್ಕಾಗಿಯೇ ಅವಳ 15 ನಿಮಿಷ ವ್ಯಯವಾಗಿದ್ದು.

ಬಂದವಳು ಬಾಗಿಲನ್ನು ಬೋಲ್ಟ್ ಮಾಡದೆ ಫ್ಯಾನ್ ಗೆ ನೇಣು ಹಾಕಿಕೊಂಡಿದ್ದಳು. ಆಕೆಯನ್ನು ಮೊದಲು ನೋಡಿದ್ದ ಕೆಲಸದವಳು ತಾನೂ ಗೊಂದಲಗೊಂಡು ಎಲ್ಲರನ್ನೂ ಕೊಲೆಯೋ? ಆತ್ಮಹತ್ಯೆಯೋ ? ಎಂಬ ಅನುಮಾನ ಮೂಡುವಂತೆ ಮಾಡಿದ್ದಳು.ಅಂದು ಸೃಜನ ಸಿಕ್ಕಿದ್ದರೆ ಅವಳೊಡನೆ ಮಾತನಾಡಿಯಾದರೂ ಇವಳ ನೋವು ಹಗುರಾಗುತ್ತಿತ್ತೇನೋ..? ಗಟ್ಟಿ ಮಾತಿನ ಹುಡುಗಿ ಗಟ್ಟಿ ನಿರ್ಧಾರ ತಳೆಯಬಹುದಾಗಿತ್ತು. ಆತ್ಮವಿಶ್ವಾಸವಿದ್ದರೂ, ಒಂದು ಕ್ಷಣದ ದುರ್ಬಲ ಮನಸ್ಸಿನ ಮೆದು ನಿರ್ಧಾರ ಅವಳಿಗೇ ಉರುಳಾಗಿತ್ತು. ಬದಲಾಯಿಸಬಹುದಾಗಿದ್ದ ಭವಿಷ್ಯ, ಬದಲಾಯಿಸಲಾಗದ ಭೂತವಾಗಿತ್ತು ಅಷ್ಟೇ.

~ವಿಭಾ ವಿಶ್ವನಾಥ್ 

ಗುರುವಾರ, ಅಕ್ಟೋಬರ್ 24, 2019

ಜನನಾಯಕರಿಗೆ ಜನಸಾಮಾನ್ಯರಿಂದ..

ಜನನಾಯಕರಿಗೆ,

ಈ ಪ್ರಜಾತಂತ್ರ ಆಡಳಿತದಲ್ಲಿ, ಪ್ರಜೆಗಳಿಂದಲೇ ಆರಿಸಿಕೊಂಡು ಅವರನ್ನೇ ಮರೆತು ಅವರ ಹಣದ ಭಿಕ್ಷೆಯಿಂದ ಜೀವನ ನಡೆಸುತ್ತಿರುವ ಧೀಮಂತನಾಯಕರಿಗೆ...

ಒಬ್ಬ ಸಾಮಾನ್ಯ ಪ್ರಜೆಯ ಅಳಲು ಕೇಳುವ ಆಸಕ್ತಿಯಿದ್ದರೆ ಮುಂದುವರಿಯಿರಿ.
ಐದು ವರ್ಷದ ಅಧಿಕಾರದ ಅವಧಿಯಲ್ಲಿ ನೀವು ಎಷ್ಟೆಲ್ಲಾ ಅವ್ಯವಹಾರ ನಡೆಸಿಬಿಡುತ್ತೀರಾ ಅಲ್ಲವೇ? ಅಧಿಕಾರದ ಅಮಲು ನಿಮಗೆ ಅಷ್ಟೊಂದು ಆವರಿಸಿಕೊಂಡು ಬಿಡುತ್ತದೆಯೇ?ಅಧಿಕಾರ ಬರುವ ಮುನ್ನ ನಮ್ಮ ಹಾಗೆಯೇ ಬಸ್ಸಿನಲ್ಲಿ,ಬೈಕಿನಲ್ಲಿ ಅಥವಾ ನಡೆದುಕೊಂಡೇ ಓಡಾಡುತ್ತಿದ್ದವರು ,ಈಗ ಕಾರು ಬಿಟ್ಟು ಕಾಲು ಬಿಟ್ಟು ಕಾಲು ಬಳಸುವುದೇ ಅಪರೂಪ. ನೀವು ನಿಮ್ಮ ಕಾಲು ಬಳಸಿದರೆ ಬಹುಶಃ ಅದು ನಿಮ್ಮ ಪಕ್ಷದ ಯಾವುದೋ ಪ್ರಚಾರಕ್ಕೆ ಇಲ್ಲವೆಂದರೆ ತೂಕ ಇಳಿಸುವ ಯಾವುದೋ ಚಿಕಿತ್ಸೆಗಾಗಿರುತ್ತದೆ.

ತಂಗಳು ಮುದ್ದೆ,ಅನ್ನ, ಮಧ್ಯಾಹ್ನದ ಸಾರಲ್ಲಿ ಊಟ ಮಾಡುತ್ತಿದ್ದವರಿಗೆ ಈಗ ಫೈವ್ ಸ್ಟಾರ್ ಹೋಟೆಲ್ ಗಳ ಊಟ ಬಿಟ್ಟು ಬೇರೆ ಊಟ ರುಚಿಸುವುಡೇ ಇಲ್ಲ. ನೀವು ಬಿಸಾಡುವ ಊಟ ಎಷ್ಟೋ ಜನ ಬಡವರ ದಿನನಿತ್ಯದ ಆಹಾರಕ್ಕಿಂತ ಹೆಚ್ಚಿರುತ್ತದೆ ಎಂಬುದು ನಿಮಗೆ ಗೊತ್ತೇ ಆಗುವುದಿಲ್ಲ..!ಯಾರದೋ ದುಡ್ಡು, ಯಲ್ಲಮ್ಮನ ಜಾತ್ರೆ ಎಂದಾದಾಗ ಮಾತ್ರವೇ ಹೀಗಾಗುತ್ತದೆ. ಕಷ್ಟಪಟ್ಟು ದುಡಿದಿದ್ದರೆ ಬಹುಶಃ ನಿಮಗೆ ಆ ಹಣದ ಬೆಲೆಯ ಅರಿವಾಗುತ್ತಿತ್ತೇನೋ?

ನೀವು ಹುಟ್ಟಿದ ಹಳ್ಳಿಯ ಹೆಸರನ್ನು ನಿಮ್ಮ ಹೆಸರಿನ ಮುಂದೆ ಸೇರಿಸಿಕೊಂಡು ಮೆರೆಯುವ ನೀವು ಆ ಊರಿನ ಕಡೆ ತಲೆ ಹಾಕಿಯೂ ಮಲಗುವುದಿಲ್ಲ. ಅಲ್ಲವೇ?ಆ ಊರಿನ ರಸ್ತೆ ಡಾಂಬರು ಕಂಡು ಎಷ್ಟೋ ವರ್ಷಗಳೇ ಆಗಿಹೋಗಿದೆ, ನಿಮ್ಮೂರಿನ ಸರ್ಕಾರಿ ಶಾಲೆಗೆ ಹಾಕಿದ ಬೀಗ ತೆಗೆಯಲಾಗದಂತೆ ಕಿಲುಬು ಹಿಡಿದಿದೆ. ಆದರೂ ಸರ್ಕಾರದಿಂದ ಬಿಡುಗಡೆಯಾಗುವ ಹಣದ ಅನುದಾನಕ್ಕೆ ಆ ಶಾಲೆಯದ್ದೇ ಮುಖ್ಯ ಹೆಸರು. ಡಾಂಬರು ಹಾಕಿಸುವ ನೆಪದಲ್ಲಿ ಕಾಂಟ್ರಾಕ್ಟ್ ಮಾಡಲು ಗೊತ್ತೇ ಇರದ ಆ ಕಾಂಟ್ರಾಕ್ಟುದಾರನಿಗೆ ಹಣದ ಸುರಿಮಳೆ. ಇದನ್ನೆಲ್ಲಾ ತಡೆಯಲು ಬರುವ ಸರ್ಕಾರಿ ಅಧಿಕಾರಿಗಳಿಗೆ ಯಮನೂರಿಗೆ ಪರವಾನಗಿ ಕೊಟ್ಟು ಕಳುಹಿಸಿಯೇ ಬಿಡುತ್ತೀರ,  ಅದಕ್ಕೆ ಅಡ್ಡಿಪಡಿಸಿದರೆ ಅಲ್ಲಿಂದ ಎತ್ತಂಗಡಿಯ ಭಾಗ್ಯ. ಇದೇ ಅಲ್ಲವೇ ನಿಮ್ಮಿಂದ ಆಗುವುದು?

ಓ, ಒಂದು ರೂಪಾಯಿಗೆ ಅಕ್ಕಿ ನೀಡುತ್ತೇನೆನ್ನುವಿರಾ,ನಿಮ್ಮ ಆ ಅಕ್ಕಿ ಪಡೆಯಲು ಹೆಬ್ಬೆಟ್ಟಿನ ಗುರುತು ನೀಡಲು ಬರುವ ವೃದ್ದರ ಪಾಡು ನೀವು ಗಮನಿಸಲೇ ಇಲ್ಲವೇ? ರೇಷನ್ ಒದಗಿಸುವ ವ್ಯಕ್ತಿಯ ಅಧಿಕಾರದ ಚುಕ್ಕಾಣಿ ಬೇರೊಬ್ಬರ ಹಿಡಿತದಲ್ಲಿದ್ದರೂ,ಯಾರೂ ಅದನ್ನು ಚಕಾರವೆತ್ತದಂತೆ ಅವರು ಕೊಟ್ಟಷ್ಟು ತೆಗೆದುಕೊಂಡು, ಅವರು ಅಂದಂತೆ ಅನ್ನಿಸಿಕೊಂಡು ನಮ್ಮ ಹಣೆಬರಹವೇ ಇಷ್ಟೆಂದು ಹಳಿದುಕೊಂಡು ಸುಮ್ಮನಿರಬೇಕೆಂದು ಕಟ್ಟಳೆ ಮಾಡಿಲ್ಲವೇ? ದುಡಿಯುವ ವ್ಯಕ್ತಿಗಳಿಗೂ ಅಕ್ಕಿಯ ಆಸೆ ತೋರಿಸಿ ಸೋಮಾರಿಗಳನಾಗಿಸಿದ್ದು ಸಾಲಲಿಲ್ಲವೇ?

ಸ್ವಾಮಿ, ಒಂದು ದಿನ ಪೊರಕೆ ಹಿಡಿದು ಬೀದಿ ಶುಭ್ರ ಮಾಡಿದರೆ ಸಾಲದು, ಮೊದಲು ಮನಸ್ಸನ್ನು ಶುಭ್ರಗೊಳಿಸಿಕೊಳ್ಳಬೇಕು. ಲಂಚ ಕೊಡಲಾಗದೆ ಬದುಕನ್ನೇ ಛಿದ್ರ ಮಾಡಿಕೊಂಡವರ ಬದುಕನ್ನು ಮರಳಿಸಲು ನಿಮ್ಮಿಂದಾಗುವುದೇ? ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಹಗಲು-ರಾತ್ರಿ ಓದಿ ಪ್ರಥಮ ಸ್ಥಾನ ಪಡೆದವನನ್ನೂ, ಲಂಚ ಕೊಡಲಿಲ್ಲವೆಂದೂ ರಿಸರ್ವೇಷನ್ ಇಲ್ಲವೆಂದು ತಿರಸ್ಕರಿಸಿದಾಗ, ಅವನ ಕಣ್ಣಿನಲ್ಲಿನ ಅಸಹಾಯಕತೆಯ ನೋವು ನಿಮಗೆ ಕಾಣಲೇ ಇಲ್ಲವೇ?

ಸರಕಾರಿ ಶಾಲೆಗಳನ್ನು ಉಳಿಸಿ ಎಂದು ಘೋಷಣೆ ಕೂಗುತ್ತಾ, ದೂರದರ್ಶನದಲ್ಲಿ ಅಷ್ಟುದ್ದದ ಸಂದರ್ಶನ ನೀಡುತ್ತಿರುವಾಗ, ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿಯೇ ಓದಿಸಬೇಕೆಂಬುದು ನೆನಪಾಗಲಿಲ್ಲವೇ?
ಬಹುಶಃ ಪೂರ್ತಿ ಪತ್ರ ಓದಿದ್ದರೆ, ಮಾನವೀಯತೆಯ ಲವಲೇಷವಾದರೂ ನಿಮ್ಮಲ್ಲಿ ಇನ್ನೂ ಜೀವಂತವಾಗಿದ್ದರೆ ಮೊದಲು ನೀವು ಬದಲಾಗಿ, ನಂತರ ನಿಮ್ಮವರನ್ನೂ ಬದಲಾಯಿಸಿ

-ಇಂತಿ
ಬದಲಾವಣೆ ಬಯಸುವ ಸಾಮಾನ್ಯ ಪ್ರಜೆ

(ಬರಹ : ವಿಭಾ ವಿಶ್ವನಾಥ್)

ಭಾನುವಾರ, ಅಕ್ಟೋಬರ್ 20, 2019

ಬಿಟ್ಟು ಹೊರಡುವ ಮುನ್ನ..

ನಿನಗೆ,
ಏನೆಂದು ಸಂಭೋಧಿಸಲೆಂದೇ ಗೊತ್ತಾಗದೆ ಆತ್ಮೀಯನಾಗಿದ್ದ ನಿನಗೇ,

ಬಿಟ್ಟು ಹೊರಡುವ ಘಳಿಗೆ ಹತ್ತಿರ ಬರುತ್ತಿದ್ದಂತೆ ಮನದಲ್ಲೇನೋ ತಲ್ಲಣ, ಮಾತನಾಡಲು ನೂರಾರು ಪದಗಳಿವೆ, ಹಂಚಿಕೊಳ್ಳಲು ನೂರಾರು ಕನಸುಗಳಿವೆ. ಎದೆಯಾಳದಲ್ಲಿ ಸಾವಿರಾರು ಭಾವನೆಗಳಿವೆ.ಆದರೆ ಹೇಳಿಕೊಳ್ಳಲು ನೀನೇ ಸಿಗುತ್ತಿಲ್ಲ. ಮೌನಿಯಂತಿದ್ದ ನನ್ನಲ್ಲಿ ಮಾತನಾಡಲು ಚೈತನ್ಯ ತುಂಬಿದ ನಿನಗೆ ಧನ್ಯವಾದಗಳನ್ನೇಳಬೇಕು ಎಂದಿದ್ದೇನೆ. ಆದರೆ ಹೇಳುವುದಿಲ್ಲ. ಮನದಲ್ಲಿರುವುದು ಮಾತಾಗಲು ಹೆಚ್ಚು ಹೊತ್ತು ಬೇಕಿಲ್ಲ. ಆದರೆ ಅದನ್ನು ಹೇಳುವ ಮನಸಿಲ್ಲ.

ಏಕೋ, ನೀನು ಮೊದಲಿನಂತಿಲ್ಲ.ನನಗೇ ಹಾಗನ್ನಿಸುತ್ತಿದೆಯೋ, ಇಲ್ಲ ನೀನೇ ಬದಲಾಗುತ್ತಿರುವೆಯೋ ಗೊತ್ತಿಲ್ಲ. ಆದರೆ ಮೌನದ ಚಿಪ್ಪಿನೊಳಗೆ ಅಡಗಿ ಕುಳಿತಿದ್ದವಳನ್ನು ವಾಚಾಳಿಯನ್ನಾಗಿ ಮಾಡಿದೆ. ಆದರೆ ನನ್ನ ಮಾತುಗಳನ್ನು ನೀನು ಕೇಳಲೇ ಇಲ್ಲ. ನಿನ್ನ ಮುಂದಿದ್ದಾಗ ಮಾತೇ ಹೊರಡದೇ ತಬ್ಬಿಬ್ಬಾದರೂ ಭಾವನೆಗಳನ್ನು ಅರ್ಥೈಸಿಕೊಂಡು ಸಾಂತ್ವನ ಹೇಳಿದ್ದೀಯ. ನಿನಗೆ ನನ್ನ ಅವಶ್ಯಕತೆ ಮುಗಿಯುವ ಮುನ್ನವೇ ಈ ಸಂಬಂಧದ ಕೊಂಡಿಯನ್ನು ಕಳಚಲೇಬೇಕಲ್ಲವೇ?

ಭಾವನೆಗಳ ಸೂಕ್ಷ್ಮತೆಗಳು ನಿನಗೆ ತಿಳಿಯುವುದಿಲ್ಲವೆಂದು ನಾನು ಹೇಳಿದ್ದು ಎಷ್ಟು ಸಲವೋ? ಆದರೆ ಎಷ್ಟೋ ಸಲ ಅನ್ನಿಸಿದ್ದಿದೆ. ನಾನು ನಿನ್ನಷ್ಟು ಭಾವುಕಳಲ್ಲವೆಂದು. ಹೆಂಗರುಳು ನಿನ್ನದು. ಎಲ್ಲರ ಕಷ್ಟಕ್ಕೂ ಮರುಗುವ, ಸ್ಪಂದಿಸುವ ನೀನು ಇತ್ತೀಚೆಗೆ ಹೃದಯವೇ ಇಲ್ಲವೇನೋ ಎಂಬಂತೆ ವರ್ತಿಸುತ್ತಿರುವುದೇಕೆ? ಕಂಡರೂ ಕಾಣದಂತೆ ಹೋಗಿ ಬಿಡುತ್ತೀಯೆ. ಏಕೆಂಬುದು ಮಾತ್ರ ಗೊತ್ತಿಲ್ಲ, ನನ್ನ ತಪ್ಪಿದ್ದರೆ ಬೈದು ಬುದ್ದಿ ಹೇಳಬಹುದಲ್ಲವೇ? ಕೇಳಿದರೆ ಕೆಲಸದ ಬ್ಯುಸಿ ಎನ್ನುತ್ತೀಯ, ಕೆಲಸದ ಬ್ಯುಸಿ ಎಂದಾದರೆ ನನ್ನದೊಂದು ಪ್ರಶ್ನೆ. ಕೆಲಸಕ್ಕೋಸ್ಕರವಾಗಿ ಬದುಕುತ್ತಿದ್ದೀಯೋ? ಅಥವಾ ಬದುಕುವುದಕ್ಕೋಸ್ಕರವಾಗಿ ಕೆಲಸವೋ? ಇದಕ್ಕಾದರೂ ಎಂದಾದರೂ ಉತ್ತರ ಹುಡುಕಿಕೋ.

ಮನಸ್ಸಿಗೆ ಬೇಜಾರಾದಾಗ ಯೋಚಿಸಲು ಪುರುಸೊತ್ತಿಲ್ಲದಂತೆ ಕೆಲಸ ಮಾಡು ಎಂದು ನೀನೇ ಎಂದೋ ಹೇಳಿದ್ದೆ. ಅದಕ್ಕೋಸ್ಕರವೇ ನೀನು ಹೀಗೆ ನಿನ್ನನ್ನು ನೀನು ಕೆಲಸದದಲ್ಲಿ ತೊಡಗಿಸಿಕೊಂಡಿದ್ದೀಯಾ? ಉತ್ತರ ಹೇಳಲು , ನಿನಗೆ ನಾನು ಯಾರು ಅಲ್ಲವೇ?

ಉತ್ತರಗಳೇ ಸಿಗದ, ದ್ವಂದ್ವ ನಿಲುವಿನ ಎಷ್ಟೋ ಪ್ರಶ್ನೆಗಳಿಗೆ ನೀನೇ ಉತ್ತರಿಸಿದ್ದೀಯ. ಆಗ ವಾದಗಳು, ಚರ್ಚೆಗಳು ನಡೆದರೂ ಕೊನೆಗೆ ಇಬ್ಬರೂ ಮತ್ತೆ ಬರುತ್ತಿದ್ದುದು ದ್ವಂದ್ವತೆಯ ನಿಲುವಿಗೇ. ಕಾರಣ, ನೀನು ಹೇಳಿದ್ದು ಸರಿ ಎಂದು ನನಗನ್ನಿಸಿದರೆ, ನಾನು ಹೇಳಿದ್ದು ಸರಿ ಎಂದು ನಿನಗನ್ನಿಸುತ್ತಿತ್ತು. ಕೊನೆಗೆ ಒಂದು ನಿಲುವಿಗೆ ಬರಲಾಗದೆ, ಒಬ್ಬರಿಗೊಬ್ಬರು ಸೋಲದೆ,ಇಬ್ಬರೂ ಗೆಲ್ಲದೆ ದೂಡಿದ ಕ್ಷಣಗಳೆಷ್ಟೋ?

ಕೆಲವೊಂದು ವಿಷಯಗಳಲ್ಲಿ ಭಿನಾಭಿಪ್ರಾಯಗಳಿದ್ದರೂ, ಒಮ್ಮತದ ನಿಲುವಿಗೆ ಬರಬೇಕೆಂದಾದಾಗ ನೀನೊಮ್ಮೆ ಸೋತರೆ, ನಾನೊಮ್ಮೆ ಸೋಲುವೆ. ಗೆಲುವಿನ ಅಹಂಭಾವ ಅಲ್ಲಿಲ್ಲ, ಸೋಲುವಿಕೆಯ ಸೊಗಡೂ ಅಲ್ಲಿ ಸುಳಿಯಲಿಲ್ಲ. ಅಭಿಪ್ರಾಯಗಳಲ್ಲಿ ನೀನು ಉತ್ತರ ಧ್ರುವವಾದರೆ, ನಾನು ದಕ್ಷಿಣ ಧ್ರುವ. ಬಹುಶಃ ವಿಜ್ಞಾನದ ಕಾಂತೀಯ ನಿಯಮದಂತೆ "ವಿರುದ್ದ ಧ್ರುವಗಳು  ಆಕರ್ಷಿಸಲ್ಪಡುತ್ತವೆ" ಎಂಬ ನಿಯಮದಂತೆಯೇ ಇರಬೇಕು ನಾವು ಸೆಳೆಯಲ್ಪಟ್ಟಿದ್ದು.ಸೆಳೆಯಲ್ಪಡಲು ಕಾರಣವಾದ ಆ ಶಕ್ತಿ ಯಾವುದೋ? ಈಗ ಬೇರೆಯಾಗುವ ನಿರ್ಧಾರವನ್ನು ಬೆಂಬಲಿಸುತ್ತಿರುವ ಶಕ್ತಿ ಯಾವುದೋ?
ಎಲ್ಲದಕ್ಕೂ ಒಂದು ಕಾರಣ ಇದೆ ಎಂದು ಹೇಳುತ್ತಿದ್ದೆಯಲ್ಲಾ, ಆ ಕಾರಣ ಯಾವುದು ಎಂದು ಕೇಳಿದರೆ.. ಗೊತ್ತಿಲ್ಲ, ಆದರೆ ಯಾವುದೋ ಒಂದು ಕಾರಣ ಇರುವುದಂತೂ ಸತ್ಯ ಎನ್ನುತ್ತೀಯಲ್ಲ. ನಿನ್ನ ನಂಬಿಕೆಯಂತೆ ಇದಕ್ಕೂ ಯಾವುದೋ ಒಂದು ಬಲವಾದ ಕಾರಣ ಇರಬಹುದು. ಆಗುವುದೆಲ್ಲಾ ಒಳ್ಳೆಯದಕ್ಕೇ ಅಲ್ಲವೇ? ಒಳ್ಳೆಯದೇ ಆಗಲಿ.

-ಇಂತಿ
ಬಿಡಲಾಗದಿದ್ದರೂ ಬಿಟ್ಟು ಹೊರಟಿರುವ ನಿನ್ನ ಹಿತೈಷಿ

(ಬರಹ : ವಿಭಾ ವಿಶ್ವನಾಥ್)

ಗುರುವಾರ, ಅಕ್ಟೋಬರ್ 17, 2019

ಲಿಂಗರೂಪಿ

ಲಿಂಗರೂಪಿ ಶಿವನಿಗಿಂದು
ಗಂಗೆಯ ಅಭಿಷೇಕವು

ತೋರಿಕೆಗೆ ಜಲದಿ ಮಿಂದು
ಕೋಪವನು ತೊಡೆಯುವನೇ ಪರಮೇಶ್ವರ?
ಬರಿಯ ಅಭಿಷೇಕ, ನೈವೇದ್ಯದಿಂದ
ಶಾಂತಿಗೊಳಿಸಲಾಗುವುದೇ ಆ ಶಿವನಾ?

ಭಕ್ತಿಯ ಪಂಚಾಕ್ಷರಿ ಜಪದಿ ಭಕ್ತರು
ಸುಪ್ರೀತಗೊಳಿಸುವರು ನಾಗಭೂಷಣನ
ಅರ್ಧನಾರೀಶ್ವರನಿಗೆ ಎಂದಿಗೂ
ತಪ್ಪದು ನಂದಿಯ ಉಪಚಾರವು

ಗಂಗೆ-ಗೌರಿಯರ ಪ್ರೀತಿಯ ಜಲವು
ಪುನೀತಗೊಳಿಸುವುದು ಮುಕ್ಕಣ್ಣನ
ಜೊತೆಗೆ ಬಿಲ್ವಪತ್ರೆಯೂ ಸೇರಿ
ಶಮನಗೊಳಿಸುವುದು ಮನದ ತಾಪವ

ಭಸ್ಮದಾರಿಯಾದರೂ ಹರನು
ಕಂಗೊಳಿಸುವನು ಬಹಳ ಅಂದದಿ
ಪ್ರಕೃತಿ-ಪುರುಷನಾಗಿ ಮುಕ್ಕಣ್ಣನು
ಪೂಜಿಸಿಕೊಳ್ಳುವನು ಲಿಂಗರೂಪದಿ

~ವಿಭಾ ವಿಶ್ವನಾಥ್

ಭಾನುವಾರ, ಅಕ್ಟೋಬರ್ 13, 2019

ಯಶೋಗಾಥೆ

"ಈ ಕಾಲದಲ್ಲಿ, ಅದೂ ಈ ಪಾಪ್,ರ್ಯಾಪ್ ಸಾಂಗ್ ಗಳನ್ನು ಕೇಳುವುದನ್ನು ಬಿಟ್ಟು ನಿನ್ನ ಈ ಲಾವಣಿ, ತತ್ವಪದಗಳನ್ನೆಲ್ಲಾ ಯಾರಾದ್ರೂ ಕೇಳ್ತಾ ಕೂತಿರ್ತಾರಾ? ಅದರಲ್ಲೂ ನಾನು ಹೋಗ್ತಾ ಇರೋದು ಅಂತರರಾಷ್ಟ್ರೀಯ ಸಾಂಸ್ಕೃತಿಕ ಸ್ಪರ್ಧೆಗೆ.. ಅಲ್ಲಿರುವವರು ಇದನ್ನು ಕೇಳಿ ಅಣಕಿಸಿಕೊಂಡು ನಕ್ತಾರೆ ಅಷ್ಟೇ..ನಾನು ಎಲ್ಲರಿಗೂ ಇಷ್ಟ ಆಗೋ ತರಾ ರ್ಯಾಪ್ ಸಾಂಗ್ ಹಾಡುವುದಕ್ಕೆ ತಯಾರಿ ಮಾಡಿಕೊಂಡಿದ್ದರೆ, ಅದನ್ನಲ್ಲಾ ಬಿಟ್ಟು ಹಳೇ ಕಾಲದ ಲಾವಣಿನೆಲ್ಲಾ ಯಾರು ಹಾಡ್ತಾರೆ,ಹೋಗಿ ಕೆಲಸ ನೋಡು ಹೋಗು. ನನ್ನ ತಂಡದವರನ್ನೆಲ್ಲಾ ತಯಾರಿ ಮಾಡಿಕೊಳ್ಳೋದಕ್ಕೆ ಅಂತಾ ನಿನ್ನ ಸಹಾಯ ಕೇಳಿದ್ರೆ, ನೀನು ನಿನ್ನ ಕಾಲದ ಅದ್ರಲ್ಲೂ ಆ ಹಳ್ಳಿ ಜನಗಳ ಲಾವಣಿ, ತತ್ವಪದಗಳ ಬಗ್ಗೆನೇ ಕೊರೀತೀಯಲ್ಲಾ..." ಅಂತಾ ರೇಗಿದ ಯಶಸ್.

ಯಶಸ್ ನ ಹೆಸರಿಗೆ ತಕ್ಕಂತೆ ಅವನಿಗೆ ಎಲ್ಲಿ ಹೋದರೂ ಯಶಸ್ಸು ಕಟ್ಟಿಟ್ಟ ಬುತ್ತಿ, ಆದರೆ ಯಾಕೋ ಈ ವಿಷಯದಲ್ಲಿ ಸ್ವಲ್ಪ ತಡವಾಗುತ್ತಾ ಇತ್ತು ಅಷ್ಟೇ..
ಎಲ್ಲಾ ವಿಷಯಕ್ಕೂ ಅವನ ಅಕ್ಕ ಯಶಸ್ವಿನಿಯ ಮಾರ್ಗದರ್ಶನವಿಲ್ಲದೆ ಆತ ಮುಂದುವರಿಯುತ್ತಲೇ ಇರಲಿಲ್ಲ. ಎಷ್ಟೇ ಬೈದರೂ, ಜಗಳವಾದರೂ ಇಬ್ಬರೂ ಮನಸ್ಸಿಗೆ ತೆಗೆದುಕೊಳ್ಳದೆ ಒಬ್ಬರಿಗೊಬ್ಬರು ಅರಿತು ನಡೆಯುತ್ತಿದ್ದರು.

ಸಂಸ್ಕೃತಿ,ಕಲೆಯ ವಿಷಯಗಳಲ್ಲಿ "ಹೆಣ್ಣುಮಕ್ಕಳು ಬೇರಿನಂತೆ ಆಳಕ್ಕಿಳಿದು ಅಧೋಮುಖರಾಗುತ್ತಾ ಹೋದರೆ, ಗಂಡುಮಕ್ಕಳು ತುದಿಯಂತೆ ಊರ್ಧ್ವಮುಖ"ರಾಗುತ್ತಾ ಹೋಗುತ್ತಾರೆ. ಆದರೆ ಇಬ್ಬರ ಬೆಳವಣಿಗೆಯೂ ಒಳಿತಿಗಾಗಿಯೇ ಅಲ್ಲವೇ?

ಅದೇಕೋ ಯಶಸ್ವಿನಿ ಹಳ್ಳಿಯ ಜನಪದರ ಸೊಗಡಿನ ಲಾವಣಿ,ತತ್ವಪದ,ಗೀಗೀ ಪದ, ನೈಸರ್ಗಿಕ ಚಿತ್ರಕಥನ ಮುಂತಾದವುಗಳ ಕುರಿತು ಆಸಕ್ತಿ ಬೆಳೆಸಿಕೊಂಡು ಅವುಗಳನ್ನೇ ತನ್ನ ಸಂಶೋಧನೆಯ ವಿಷಯವಾಗಿ ಆರಿಸಿಕೊಂಡಿದ್ದರೆ, ಯಶಸ್ ಗೆ ಚಲನಚಿತ್ರಗಳ ಪ್ರಭಾವದಿಂದ ಅವೆಲ್ಲವೂ ಹಳೆಯ ಗೊಡ್ಡಿನಂತೆ ಕಾಣುತ್ತಿದ್ದವು.

ಅವನ ಅಕ್ಕ ಈ ಕುರಿತು ಮಾತನಾಡಲು ಹೊರಟರೆ "ನಿಮ್ಮ ಕಾಲದನ್ನೆಲ್ಲಾ, ಈಗಿನ ಕಾಲದಲ್ಲಿ ಹೇಳ್ಬೇಡ. ಅದೆಲ್ಲಾ ಆಗಲೇ ಮುಗಿದೋಯ್ತು." ಅಂತಾ ಅಣಕಿಸಿ ಹೊರಟುಬಿಡುತ್ತಿದ್ದ. ಆದರೆ ಯಶಸ್ವಿನಿ ಇದನ್ನೆಲ್ಲಾ ಮನಸ್ಸಿಗೆ ತೆಗೆದುಕೊಳ್ಳದೆ, "ನಾನು ಇರುವುದು ಇನ್ಯಾವ ಕಾಲದಲ್ಲೋ..? ಅಬ್ಬಬ್ಬಾ ಅಂದ್ರೆ 4 ವರ್ಷಗಳ ವ್ಯತ್ಯಾಸ ಅಷ್ಟೇ..", "ಓಲ್ಡ್ ಈಸ್ ಗೋಲ್ಡ್" ಅಂತಾ ನಿನ್ನ ಬಾಯಲ್ಲೇ ಬರೋವರೆಗೂ ನಾನು ಕಾಯ್ತೀನಿ" ಅಂತಾ ಹೇಳಿ ನಸುನಗುತ್ತಾ ಸುಮ್ಮನಾಗ್ತಾ ಇದ್ದಳು.ಆ ಕಾಲವೂ ದೂರದಲ್ಲೇನೂ ಇರಲಿಲ್ಲ.

ಪಾಪ್ ಸಾಂಗ್,ರ್ಯಾಪ್ ಸಾಂಗ್ ಅಂತಾ ತಯಾರಾಗಿದ್ದ ಯಶಸ್ ಗೆ ಕಾರ್ಯಕ್ರಮದ ಆಯೋಜಕರು ಹೇಳಿದ್ದು ಇಷ್ಟೇ,"ಎಲ್ಲರೂ ಇದನ್ನೇ ಪ್ರದರ್ಶಿಸಿದ್ದರೆ, ಹೊಸತನ ಎಲ್ಲಿಂದ ಬರುತ್ತೆ..?, ಏನಾದ್ರೂ ಹೊಸದಾಗಿ ಪ್ರಯತ್ನ ಮಾಡಿದ್ರೆ ಮಾತ್ರ ನಿನ್ನ ತಂಡಕ್ಕೆ ಅವಕಾಶ" ಅಂತಾ ಹೇಳಿದ್ರು. ಅದರ ವಿಷಯವಾಗಿ ಮಾತನಾಡುತ್ತಿರುವಾಗಲೇ ಈ ರೇಗಾಟ ನಡೆದದ್ದು. ಇವನ ಈ ರೇಗಾಟಕ್ಕೆ ಸೊಪ್ಪು ಹಾಕದ ಇವನ ಅಕ್ಕ ಅವನ ತಂಡದವರನ್ನೆಲ್ಲಾ ಕರೆದು ಕೂರಿಸಿ ತನ್ನ ಯೋಜನೆಗಳನ್ನು ವಿವರಿಸಿದಳು.

ತತ್ವಪದ,ಲಾವಣಿಗಳು ಬರೀ ಪದಗಳಲ್ಲ. ಆಡು ಮಾತುಗಳಲ್ಲ. ಅದರಲ್ಲಿ ಜೀವನದ ಸತ್ವ,ತತ್ವಗಳೇ ಅಡಗಿ ಕೂತಿವೆ. ಸ್ವಾತಂತ್ರ್ಯ ಹೋರಾಟಗಾರರಿಗೆ ಕೆಚ್ಚು ತುಂಬುತ್ತಿದ್ದ ಪದಗಳವು. ಜನಪದರ ಜೀವನಾಡಿಗಳು ಅವು. ಅವುಗಳಲ್ಲಿ ಆರ್ತನಾದವಿದೆ, ಬಿಸಿಯುಸಿರಿದೆ. ಆದರೆ ತಲುಪಿಸುವ ಕಂಠಗಳು ಮುದಿಯಾಗುತ್ತಲಿವೆ, ಅವುಗಳಿಗೆ ಈಗ ಜೀವಕಳೆ ತುಂಬಬೇಕಿದೆ. ಸಾಂಸ್ಕೃತಿಕ ಸ್ಪರ್ಧೆಯಲ್ಲಿ ನಿಮ್ಮ ರ್ಯಾಪ್ ಸಾಂಗ್ ಗಳಲ್ಲಿ ಈ ಲಾವಣಿ, ತತ್ವಪದಗಳಿಗೆ ಹೊಸ ಚೈತನ್ಯ ಬರಲಿ. ಗಿಟಾರ್ ಜೊತೆಗೆ ಕಂಸಾಳೆಯ ತಾಳ, ದಮ್ಮಡಿಗಳೂ ಸೇರಲಿ. ಇದರ ಜೊತೆಗೆ ಅದಕ್ಕೆ ಸಾಂದರ್ಭಿಕವಾಕ ಹಿನ್ನೆಲೆಯನ್ನು ನೈಸರ್ಗಿಕ ಚಿತ್ರ-ಕಥನದ ಶೈಲಿಯಾದ ನೆರಳು-ಬೆಳಕಿನಾಟದ ಮೂಲಕ ನೀಡಿ. ಸಂಜ್ಞೆಗಳು, ಭಾವನೆಗಳಿಗೆ ದೇಶ-ಭಾಷೆಯ ಹಂಗಿಲ್ಲ. ಹೀಗೆ ಯಾರ ಹಂಗೂ ಇಲ್ಲದೆ ಬೆಳೆಯುವ ಕಲೆಗಳು ಮಾತ್ರ ಉಳಿಯುತ್ತವೆ. ಯಶಸ್ಸು ಸ್ಪರ್ಧೆಯ ಬಹುಮಾನದಲ್ಲಾಗಲೀ, ಹಣದಲ್ಲಾಗಲೀ ದೊರೆಯುವುದಿಲ್ಲ.ಅಪ್ಪಟ ಕಲಾಭಿಮಾನಿಗಳ ಮನದಲ್ಲಿ ಮೂಡಿನಿಲ್ಲುವುದೇ ಯಶಸ್ಸು.

ನನ್ನ ಈ ಮಾತನ್ನು ಪಾಲಿಸಲೇಬೇಕು ಅಂತಾ ಇಲ್ಲ,ಗೆದ್ದರೆ ಜನಪದರ ಕಲೆಗೆ ನೆಲೆ ಸಿಗುತ್ತದೆ, ಸೋತರೂ ತೊಂದರೆ ಇಲ್ಲ, ಇತರರಿಗೆ ಅದರ ಪರಿಚಯವಾಗುತ್ತದೆ. ನೀವು ಗೆದ್ದರೆ ಸಂತೋಷ, ಆದರೆ ಸೋತರೆ ತಿದ್ದಿಕೊಳ್ಳಲು ಒಂದು ಪಾಠ ಸಿಗುತ್ತದೆ. ಪ್ರತಿಭೆಯ ಅನಾವರಣವಾಗುವುದಂತೂ ಖಂಡಿತ.ಇತರರನ್ನು ತುಳಿದು ಬೆಳೆಯದೆ, ಬೆಳೆಸುತ್ತಾ ಬೆಳೆದರೆ ಅದು ನಿಜವಾದ ಗೆಲುವು ಅಲ್ವಾ? ನಿರ್ಧಾರ ನಿಮಗೆ ಬಿಟ್ಟದ್ದು.. ಎಂದು ಹೇಳಿ ಅಲ್ಲಿಂದ ಹೊರಟಳು ಯಶಸ್ವಿನಿ.

ಅದರ ನಂತರ ನಡೆದದ್ದು ನಿಜಕ್ಕೂ ಯಶಸ್ವಿ ಕಥೆಯೇ, ಅವಳ ಮಾತಿಗೆ ಎಲ್ಲರೂ ಮನಸ್ಸು ಬದಲಿಸಿ ಶ್ರದ್ದೆಯಿಂದ, ಜನಪದ ಕಲಾವಿದರ ಸಹಾಯದಿಂದ ನಶಿಸಿ ಹೋಗುತ್ತಿದ್ದ ಕಲೆಯನ್ನು ಉಳಿಸಿಕೊಳ್ಳಲು ಯಶಸ್ವಿಯಾದರು, ಅದಕ್ಕೆ ಪ್ರತಿಫಲವಾಗಿ ಬಹುಮಾನವೂ ಸಂದಿತು.ಇಂದು ಅದೇ ಹಣದ ನೆರವಿನಿಂದ "ಯಶೋಗಾಥೆ" ಎಂಬ ಸಂಸ್ಕೃತಿ ಕೇಂದ್ರ ಸ್ಥಾಪನೆಯಾಗಿ ಯಶೋಮಾರ್ಗದತ್ತ ಸಾಗುತ್ತಾ ಕಲಾರಾಧಕರು ಮತ್ತು ಕಲೆಗೆ ಬೆಳಕು ನೀಡುವ ಕೈಂಕರ್ಯದಲ್ಲಿ ತೊಡಗಿದೆ.

-ವಿಭಾ  ವಿಶ್ವನಾಥ್

ಗುರುವಾರ, ಅಕ್ಟೋಬರ್ 10, 2019

ಕಾಲಾಂತರದ ಹೆಜ್ಜೆಗಳು

ಬಿರುಬಿಸಿಲಲಿ ಬೆಂದು-ಬೆಂದು
ಬಸವಳಿದು ಬೇಗೆ ಅನುಭವಿಸುತ್ತಿವೆ
ಕಲ್ಲುಗಳಾದರೂ,ಪಾದಗಳಾದರೂ
ಭಿತ್ತಿಯಲಿ ಮೂಡುವ ಭಾವವೊಂದೇ
ಇವೆಷ್ಟು ಕಾಲದಿಂದ ಬಳಲಿವೆಯೋ?

ತಾವು ಜೊತೆಯಿದ್ದರೂ ಇಲ್ಲದಂತೆ
ಜೊತೆಗಿರುವ ಭಾವ ಮೂಡಿಸುವಂತೆ
ಜೊತೆಗಿಲ್ಲದಾಗಿರುವ ಸ್ವಾತಂತ್ರ್ಯದಂತೆ
ತಂದೆ-ತಾಯಿ-ಮಗುವಿನಂತಿದ್ದರೂ..
ಅಂಟಿಯೂ ಅಂಟದಂತೆ ಬಿಗಿಯಾಗಿವೆ

ಹೂ ಪಕಳೆಗಳಂತೆ ಅರಳಿ ನಿಂತು
ಬಿರಿದಿದ್ದರೂ ಬಾಡದವಾಗಿವೆ
ನಿಚ್ಚಳವಾಗಿ ಇಲ್ಲೇ ಬೀಡು ಬಿಟ್ಟು
ನಾವೆಲ್ಲಿಗೂ ಹೋಗೆವೆನುತ..
ಮ್ಲಾನವಾಗಿ ಇಲ್ಲೇ ಉಳಿದು ಬಿಟ್ಟಿವೆ

ಬಿಸಿಲಿಗೆ ಬೆನ್ನೊಡ್ಡಿ ಹಿಗ್ಗದೆ
ಮಳೆ-ಗಾಳಿಗೆ ಮೈಯೊಡ್ಡಿ ಕುಗ್ಗದೆ
ಮೋಕ್ಷಕ್ಕಾಗಿಯೇ ಕಾದಿರುವಂತೆ
ವರ್ಷಾನುಗಟ್ಟಲೆಯಿಂದ ಬದುಕಿವೆ
ಕಾಲಾಂತರದ ಹೆಜ್ಜೆಗಳಾಗಿ ಉಳಿದಿವೆ..

-ವಿಭಾ ವಿಶ್ವನಾಥ್

ಭಾನುವಾರ, ಅಕ್ಟೋಬರ್ 6, 2019

ಯಾರು.. ಯಾರು ನೀ ನನಗೆ..?

ಏನೆಂದು ಕರೆಯಲಿ ನಿನ್ನನು ನಾ? ನೀ ಯಾರು ಎಂಬ ಪ್ರಶ್ನೆಗೆ ಯಾವ ಉತ್ತರ ಕೊಡಲಿ ನಾ? ಗೆಳೆಯ ಎಂದರೆ ಅದಕೂ ಹತ್ತಿರ.. ಇನಿಯಾ ಎಂದರೆ ಅದಕೂ ಎತ್ತರ.. ಎಂದು ಹಾಡಿಬಿಡಲೇ..? ಯಾರೆಂದು ಅರಿವಾಗುವ ಮುನ್ನವೇ ಹೊರಟುಬಿಡಲೇ..? ಅಷ್ಟಕ್ಕೂ ನೀ ನನ್ನ ಬಾಳಿಗೆ ಬಂದದ್ದಾದರೂ ಹೇಗೆ? ಯಾಕೆ? ಕಾರಣ ಹೇಳಿ ಅಥವಾ ಕೇಳಿ ಹೊರಡಲು ನಾ ಸಿದ್ದಳಿಲ್ಲ, ಹಾಗೆಂದು ನೆಪವೊಡ್ಡಿ ಇಲ್ಲೇ ಉಳಿಯಬೇಕೆಂಬ ಆಸೆಯೂ ಇಲ್ಲ.ಯಾಕೆಂದು ಗೊತ್ತಾ? ಅಷ್ಟಕ್ಕೂ ಯಾರು.. ಯಾರು ನೀ ನನಗೆ?

ನನ್ನ ನಿನ್ನ ಪರಿಚಯಕ್ಕೆ ಇನ್ನೂ ಕೆಲವು ವರ್ಷಗಳೂ ತುಂಬಿಲ್ಲ, ಆದರೆ ನೀ ನನ್ನ ಬಾಳಿನಲ್ಲಿ ಹಾಸು-ಹೊಕ್ಕಾಗಿದ್ದು ಹೇಗೆ? ಫೋನಿನ ಕಾಲ್ ಲಿಸ್ಟ್ನಲ್ಲಿ ಹೆಚ್ಚು ಹೊತ್ತು ಮಾತನಾಡಿದ ನಂಬರ್ ಗಳಲ್ಲಿ ನಿನ್ನದೇ ಮುಂಚೂಣಿಯಲ್ಲಿದೆ. ದಿನಕ್ಕೊಂದು ಬಾರಿಯಾದರೂ ನಿನ್ನ ಹೆಸರು ನನ್ನ ಬಾಯಲ್ಲಿ ಬಾರದ ದಿನವೇ ಇಲ್ಲವೇನೋ? ಅಪ್ಪ-ಅಮ್ಮನಷ್ಟೇ ನಿನಗೂ ಪ್ರಾಶಸ್ತ್ಯ ಕೊಡುತ್ತಿದ್ದೇನೆಯೇ..? ಗೊತ್ತಿಲ್ಲ..! ನನಗೆ ಅರಿವಿಲ್ಲದೆಯೇ ನಿನ್ನ ಹೆಸರು ನನ್ನ ಬಾಯಲ್ಲಿ ಬಂದುಬಿಡುತ್ತದೆ. ಅಂದು ಅಮ್ಮ "ಅಷ್ಟೊಂದು ಮಾತನಾಡ್ತೀಯಲ್ಲ ಅವನ ಬಗ್ಗೆ ಅದು ಅಷ್ಟೊಂದು ಚೆನ್ನಾಗಿ ಕಾಣಿಸುವುದಿಲ್ಲ" ಎಂದಾಗಲೇ ನನಗೆ ಅರಿವಾಗಿದ್ದು ನೀನು ನನ್ನ ದಿನಚರಿಯ ಅಂಗವೇ ಆಗಿಹೋಗಿದ್ದೀಯಾ ಎಂದು.. ಯಾಕೆ ಹೀಗ್..? ಅಷ್ಟಕ್ಕೂ ಯಾರು.. ಯಾರು ನೀ ನನಗೆ..?

ಯಾರಾದರೂ ನಮ್ಮ ಜೀವನದಲ್ಲಿ ಬಂದರೆ ಅದಕ್ಕೊಂದು ಕಾರಣವಿರುತ್ತದಂತೆ, ಅವರು ಒಂದಲ್ಲಾ ಒಂದು ರೀತಿಯ ಖುಷಿಗೋ, ದುಃಖಕ್ಕೋ ಅಥವಾ ಜೀವನದ ಪಾಠಕ್ಕೋ ಕಾರಣವಾಗುತ್ತಾರಂತೆ..ಹೌದಾ..? ನೀ ನನ್ನ ಜೀವನದಲ್ಲಿ ಬಂದೆಯೋ..? ಅಥವಾ ನಾನೇ ನಿನ್ನ ಜೀವನದಲ್ಲಿ ಬಂದೆನೋ..? ತಿಳಿಯುತ್ತಿಲ್ಲ..! ಕಷ್ಟವೆಂದಾಗ ಅಮ್ಮನಂತೆ ಮಮತೆಯ ಮಾತನಾಡಿದವ, ಅಪ್ಪನಂತೆ ಹಿತ ನುಡಿಯನ್ನಾಡಿದವ,ಅಣ್ಣನ ತಾಳ್ಮೆಯನ್ನು ನೆನಪಿಸಿದವ ಹಾಗೆಯೇ ಎಲ್ಲಾ ಸಂದೇಹಗಳಿಗೆ ಉತ್ತರ ನೀಡಿದವ, ಶಿಕ್ಷಣದಲ್ಲಿ ಮುಂದೇನು ಎಂಬುದರಿಂದ ಹಿಡಿದು ನನ್ನೆಲ್ಲಾ ಹುಚ್ಚು ಪ್ರಶ್ನೆಗಳಿಗೆ ಬೇಸರಿಸಿಕೊಳ್ಳದೆ ಉತ್ತರಿಸಿ ನನ್ನಲ್ಲಿ ಸ್ಥೈರ್ಯ ತುಂಬಿದವ, ಕೆಲಸದಲ್ಲಿನ ನನ್ನೆಲ್ಲಾ ತಪ್ಪುಗಳನ್ನು ತಾಳೆಯಿಂದ ಸಹಿಸಿಕೊಂಡು ತಿದ್ದಿದವ, ಇಷ್ಟೆಲ್ಲಾ ಮಾಡಿದರೂ ಅದರ ಅರಿವಿರದಂತೆಯೇ ಇರುವವ.. ಆದರೆ ಏನೆಂದು ಕರೆಯಲಿ ನಿನ್ನನು ನಾ? ಅಷ್ಟಕ್ಕೂ ಯಾರು.. ಯಾರು ನೀ ನನಗೆ..?

ನೀನು ನನ್ನ ಜೀವನದಲ್ಲಿ ಬರದೇ ಇದ್ದಿದ್ದರೆ ಚೆನ್ನಾಗಿತ್ತೇನೋ..? ಕೆಲವು ಬಂಧಗಳೇ ಹಾಗೇ, ತಿಳಿಯುವ ಮುನ್ನವೇ ಹತ್ತಿರವಾಗಿ ದೂರಾಗುವ ಹೊತ್ತಿಗೆ ಅದರ ನೋವಿನ ಅರಿವು ಮೂಡಿಸುತ್ತವೆ. ಹೆಣ್ಣುಮಕ್ಕಳಿಗೇ ಆ ನೋವಿನ ಬಿಸಿ ಹೆಚ್ಚು ಅನ್ನಿಸುತ್ತದೆ..! ಹೆಣ್ಣಿಗೇ ಅಲ್ಲವೇ ಭಾವದ ನಂಟು ಹೆಚ್ಚು. ಮೀರಾ ಕೃಷ್ಣನನ್ನು ಹಚ್ಚಿಕೊಂಡಳು ಆದರೆ ಕೃಷ್ಣ..? ಮೀರಾ-ಗಿರಿಧರರ ಸಂಬಂಧದಂತೆಯೇ ಇದು..? ಮೀರಾಳಿಗೆ ಕೃಷ್ಣ ಗೆಳೆಯನೇ..? ಪ್ರೇಮಿಯೇ..? ಬಳಗವೇ..? ನಂಟನೇ..? ಅರಿವಿಲ್ಲ.. ಆದರೆ ಆತ್ಮಸಖನಂತೂ ಹೌದು.. ಆತ್ಮಸಖನೆಂಬುವವನು ಪ್ರೇಮಿ,ಗೆಳೆಯ,ಇನಿಯ ಎಲ್ಲಾ ಸಂಬಂಧಗಳನ್ನೂ ಮೀರಿದವನು. ನೀ ನನ್ನಾಅತ್ಮಸಖನೇ..? ಗೊತ್ತಿಲ್ಲ..! ಅರಿವಾಗಲು ಇದು ಮೀರಾ-ಮಾಧವರ ಕಾಲವಲ್ಲವಲ್ಲಾ.. ಹಾಗಾದರೆ ಯಾರು.. ಯಾರು ನೀ ನನಗೆ..?

ನೀನು ಮನೆಯಲ್ಲಿರುವಾಗ ನಿನ್ನ ಕುಟುಂಬದವರ ಜೊತೆ ಹೆಚ್ಚು ಕಾಲ ಕಳೆಯಬೇಕೆಂದುಕೊಳ್ಳುತ್ತೀಯ, ಆದರೆ ಸಮಯ ಕೊಡಲು ಸಾಧ್ಯವಾಗುತ್ತಿಲ್ಲ ಎಂಬ ಬೇಸರವನ್ನೂ ವ್ಯಕ್ತಪಡಿಸುತ್ತೀಯ. ದಿನಾ ನಾವು ಮಾತನಾಡುವ ಆ ಕ್ಷಣಗಳನ್ನೂ ಅವರಿಗೇ ನೀಡಿಬಿಡು. 5 ರಿಂದ 50 ನಿಮಿಷಗಳವರೆಗೂ ನನ್ನ-ನಿನ್ನ ಮಾತು-ಕಥೆ ಸಾಗಿದ್ದಿದೆ. ಅವೆಲ್ಲವೂ ತಳ್ಳಿಹಾಕುವಾ ಅಥವಾ ಪ್ರಯೋಜನಕ್ಕೆ ಬಾರದ ಮಾತುಗಳೇನೂ ಅಲ್ಲ. ಆದರೆ ಮಾತನಾಡದಿದ್ದರೆ ಆಗುವ ನಷ್ಟವೂ ಏನೂ ಇಲ್ಲ. ಅಷ್ಟಕ್ಕೂ ನನ್ನೆಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡಬೇಕೆಂಬ ನಿಯಮವೇನೂ ಇಲ್ಲವಲ್ಲಾ. ತನಗೆ ತೊಂದರೆಯಾದರೂ ಹೇಳಿಕೊಳ್ಳಲಾಗದ ಮಗುವಿನಂತಾ ಮನಸ್ಸಿನವನು ನೀನು. ಅಷ್ಟಕ್ಕೂ ನಾನು ನಿನ್ನಲ್ಲಿ ಹೆಚ್ಚು ಮಾತನಾಡುವುದು ಫೋನಿನಲ್ಲಿಯೇ. ಯಾಕೆ ಗೊತ್ತಾ? ನಿನ್ನ ಭಾವನೆಗಳನ್ನು ನೇರವಾಗಿ ಕಾಣುವ ಧೈರ್ಯ ನನಗಿಲ್ಲ. ಏಕೆಂದರೆ, ನಿನ್ನ ಕಣ್ಣಿನಲ್ಲಿ ಕಾಣುವ ಒಂದು ಸಣ್ಣ ಅಸಹನೆಗೆ ನನ್ನ ಕುತೂಹಲವೇ ಇಂಗಿಹೋಗಬಹುದೇನೋ..!ಪುಣ್ಯಕ್ಕೆ, ಇದುವರೆಗೂ ಅಂತಹದ್ದೇನೂ ಘಟಿಸಿಲ್ಲ, ಮುಂದೆಂದೂ ಹಾಗಾಗಬಾರದಲ್ಲ.. ಅದೇಕೋ ನೀ ಹೇಳುವ ಪ್ರತಿಯೊಂದು ಮಾತುಗಳೂ, ಚಿಂತನೆಗಳು ಮನದಾಳಕ್ಕೆ ಇಳಿದುಬಿಡುತ್ತವೆ. ಕೆಲವೊಮ್ಮೆ ಒಪ್ಪಿಕೊಳ್ಳಲು ಕಷ್ಟ ಎನಿಸಿದರೂ ಸತ್ಯವೇ ಅಲ್ಲವೇ? ಆದರೂ ನಿನ್ನ ಮಾತುಗಳಿಗೆ ನಾನು ಅಷ್ಟು ಬೆಲೆಕೊಡುವುದಾದರೂ ಏಕೆ..? ನೀ ಯಾರೋ ಆದರೆ ನಾನಂತೂ ನಿನ್ನ ಹಿತೈಷಿ ಅಷ್ಟೇ. ಅಷ್ಟಕ್ಕೂ ನಾನು ಹಿತ ಬಯಸಲು ಯಾರು.. ಯಾರು ನೀ ನನಗೆ..? 

ದೇವರನ್ನು ಯಾರು ಕಂಡಿದ್ದಾರೋ, ಬಿಟ್ಟಿದ್ದಾರೋ ಗೊತ್ತಿಲ್ಲ. ಆದರೆ ನಾನಂತೂ ಕಂಡಿಲ್ಲ. ಬಹುಷಃ ಅವನೂ ನಿನ್ನಂತೆಯೇ ಇರಬಹುದೋ ಏನೋ ಗೊತ್ತಿಲ್ಲ. ಯಾಕೆ ಹೀಗನ್ನುತ್ತಿದ್ದೇನೆ ಗೊತ್ತಾ? ನಾ ನಿನ್ನಿಂದ ದೂರ ಹೋಗುವ ಪ್ರಯತ್ನದಲ್ಲಿ ನಾನು ಬದಲಾಗುತ್ತಿದ್ದೇನೆ. ಆದರೂ ನೀನು ಅದನ್ನು ಮನಸ್ಸಿನಲ್ಲಿಟ್ಟುಕೊಳ್ಳದೆ ಮೊದಲಿನ ರೀತಿಯೇ ನಡೆದುಕೊಳ್ಳುತ್ತಿದ್ದೀಯ. ಬೈದು ಹೊರಹೋಗು ಎಂದು ಹೇಳುವ ಸಂಧರ್ಭ ಸೃಷ್ಟಿಸಿ ಹೊರಹೋಗೋಣ ಎಂದುಕೊಂಡರೂ ನಿನ್ನ ಕ್ಷಮಾಗುಣ ಎಲ್ಲದಕ್ಕೂ ಅಡ್ಡಿಪಡಿಸುತ್ತಿದೆ. ಕ್ಷಮಿಸಿ ದೇವರಾಗಿ ಬಿಡುತ್ತೀಯ ಅಲ್ಲವೇ..? ದೇವರನ್ನೇ ನಂಬದ ನಾನು ದೇವರನ್ನು ನಂಬುವ ನಿನ್ನನ್ನು ನಂಬಬಹುದು ಎಂದುಕೊಳ್ಳುತ್ತೇನೆ. ಯಾಕೆ ಗೊತ್ತಾ?ಕಾಣದ ದೇವರಿಗಿಂತ ಕಾಣುವ ದೇವರಂಥಹವರೇ ಮಿಗಿಲಲ್ಲವೇ..? ಆದರೂ ಆ  ನಂಬಿಕೆ ಹುಟ್ಟುವಂತೆ ಮಾಡಿದ ನೀನು, ಯಾರು.. ಯಾರು ನೀ ನನಗೆ..?

ಈ ಪ್ರಶ್ನೆಗೆ ಉತ್ತರ ಹುಡುಕುವ ಹೊತ್ತಿನಲ್ಲೇ ಮತ್ತೊಂದು ಸಂದೇಹ ಕಾಡುತಿದೆ.
ತನ್ಮಯಳಾದೆನು ತಿಳಿಯುವ ಮುನ್ನವೇ...
ಕಣ್ಮರೆಯಾಗಲೇ ಹೇಳು ಮರೆಯುವ ಮುನ್ನವೇ..?
ಇದಲ್ಲದಕೂ ಉತ್ತರ ಸಿಗುವುದೇ..? ಆದಷ್ಟು ಬೇಗ ಉತ್ತರ ಹೇಳುವೆಯಾ..?
ಆದರೆ ಉತ್ತರ ಹೇಳುವ ಮುನ್ನ ನನ್ನದೊಂದು ಪ್ರಶ್ನೆ. ನಾ ನಿನಗೆ ಪ್ರಶ್ನೆ ಕೇಳಲು, ನೀ ನನಗೆ ಉತ್ತರಿಸಲು, ಯಾರು.. ಯಾರು ನೀ ನನಗೆ..?

-ವಿಭಾ ವಿಶ್ವನಾಥ್ 

ಗುರುವಾರ, ಅಕ್ಟೋಬರ್ 3, 2019

ಭಾವಶರಧಿಯಲ್ಲೊಂದು ಸುತ್ತು

ಬದುಕು ಭಾವನೆಗಳ ಹಂದರವಾದರೂ, ಬಹಳ ವಿಚಿತ್ರ. ಕೆಲವೊಮ್ಮೆ ನಂಟುಗಳು ಬೆಸೆದುಕೊಳ್ಳುವ ಪರಿ ಅರ್ಥವೇ ಆಗುವುದಿಲ್ಲ. ಬದುಕಲ್ಲಿ ಅಚಾನಕ್ಕಾಗಿ ಕೆಲವು ವ್ಯಕ್ತಿಗಳು ಪ್ರವೇಶಿಸುತ್ತಾರೆ ಅಥವಾ ನಾವೇ ಅವರ ಜೀವನದಲ್ಲಿ ಅತಿಕ್ರಮಣ ಮಾಡುತ್ತೇವೆ. ಒಬ್ಬರ ಬದುಕಲ್ಲಿ, ಮತ್ತೊಬ್ಬರು ಹಾಗೆ ಸಿಗುವುದು ವಿಧಿಲಿಖಿತವೇ ಆಗಿರಬಹುದು. ಆದರೆ, ಪರಿಣಾಮಗಳಂತೂ ಇದ್ದೇ ಇದೆ. ಒಳ್ಳೆಯದ್ದಾದರೂ, ಕೆಟ್ಟದ್ದೇ ಆದರೂ ಅದು ಪರಿಣಾಮವೇ ಅಲ್ಲವೇ..?

ಇಂತಹಾ ಎಷ್ಟೋ ಬಂಧಗಳಿಗೆ ಹೆಸರಿಡುವುದು ಅಸಾಧ್ಯವೇ ಸರಿ. ಎಲ್ಲದಕ್ಕೂ ಹೆಸರಿಡುವೆನೆಂದು ಹೊರಡುವುದಾದರೆ ಮೀರಾ-ಮಾಧವರ ಬಂಧಕ್ಕಿರುವ ಹೆಸರೇನು..? ಬಂಧಗಳು ಧೀರ್ಘಕಾಲ ಉಳಿಯುವುದೋ ಇಲ್ಲವೋ ಎಂಬುದು ಆಯಾ ವ್ಯಕ್ತಿಗಳಿಗೆ ಸಂಬಂಧಿಸಿದ ವಿಚಾರ. ಬದುಕಲ್ಲಿ ಮುಂದೆ ಈಗ ಸಿಕ್ಕಿರುವವರಿಗಿಂತ ಮೌಲ್ಯವುಳ್ಳ ವ್ಯಕ್ತಿಗಳು ಸಿಗಬಹುದು.. ಅಪರಿಚಿತತೆಯಿಂದ ಪರಿಚಿತತೆಯೆಡೆಗೆ ಹೋಗುವ ಚಲನೆ ಸಂತಸ ನೀಡುವುದು ಹೌದಾದರೂ, ಪರಿಚಿತತೆಯಿಂದ ಅಪರಿಚಿತತೆಗೆ ಚಲಿಸುವ ಹಿಮ್ಮುಖ ಕಾಲಚಕ್ರ ನಿಜಕ್ಕೂ ಯಾತನಾದಾಯಕ.

ಬದುಕಿನ ದೋಣಿಯಲ್ಲಿ ಕೆಲವೊಮ್ಮೆ ಸಹಪ್ರಯಾಣಿಕರಾಗುತ್ತೇವೆ. ಆದರೆ, ಅವರೊಂದಿಗೇ ಜೀವನಪೂರ್ತಿ ಇರುತ್ತೇವೆ ಎಂದು ಭಾವಿಸುವುದು ತಪ್ಪಾಗುತ್ತದೆ. ಅವರಿಲ್ಲದೇ ಬದುಕು ಸಾಗುವುದಿಲ್ಲವೇ..? ಕಂಡಿತಾ, ಯಾರಿಲ್ಲದೆಯೂ ಬದುಕು ಸಾಗುತ್ತದೆ. ಇಷ್ಟು ದಿನ ನಮ್ಮ ಬದುಕಲ್ಲಿ ಅವರೇ ಇದ್ದರೇ..? ಜೊತೆಯಲ್ಲಿ ಪ್ರಯಾಣಿಸಿದ ನಂತರ ಮತ್ತೆ ಒಬ್ಬರೇ ಪ್ರಯಾಣಿಸುವುದು ಕೊಂಚ ಕಷ್ಟವಾಗಬಹುದು ಆದರೆ ಅಸಾಧ್ಯವಂತೂ ಅಲ್ಲ. ಅಲ್ಲವೇ..? ಆದರೆ ಹಾಗೆ ಬಂದು ಹೋದ ಕೆಲವರಿಂದ ನಮ್ಮ ಬದುಕಿನಲ್ಲಿ ಮಹತ್ತರ ಬದಲಾವಣೆಗಳಂತೂ ಆಗುತ್ತವೆ.  ಆ ಬದಲಾವಣೆ ತಂದವರ ಬದುಕಲ್ಲಿ ಮತ್ತಾವುದೋ ಕಹಿಸತ್ಯ ಅಡಗಿರಬಹುದು, ಅವರು ಕಲಿತ ಮಹತ್ತರ ಅನುಭವದ ಪಾಠ ಅದಾಗಿರಬಹುದು. ಆ ಕಾಳಜಿಯ ಹಿಂದೆ ನನಸಾಗದ ಅವರ ಕನಸನ್ನು ನಿಮ್ಮ ಮೂಲಕ ನನಸು ಮಾಡಿಕೊಳ್ಳುವ ಆಸೆ ಇರಬಹುದು. ಪ್ರತಿ ಮಮತೆ, ಕಾಳಜಿಗೂ ಪ್ರತಿಫಲ ಬಯಸದ ನಿಸ್ವಾರ್ಥತೆಯ ಹಿಂದೆ ನಿರ್ಮಲ ಅಂತಃಕರಣ ಅಡಗಿರುತ್ತದೆ, ಮೃದು ಮನಸ್ಸಿರುತ್ತದೆ. ಅದು ಮತ್ತೊಂದು ಭಾವವನ್ನು ಸೃಷ್ಟಿಸ ಹೊರಟಲ್ಲಿ ಕೀಳಾಗಬಹುದು. ಪ್ರತಿ ಕಾಳಜಿ, ಮಮಕಾರಕ್ಕೂ ಪ್ರತಿಫಲ ಬಯಸಿದರೆ ಅದು ವ್ಯವಹಾರ ಎಂದೆನಿಸಿಕೊಳ್ಳುವುದಿಲ್ಲವೇ..? ವ್ಯಾವಹಾರಿಕ ಸಂಬಂಧಗಳ ಆಯಸ್ಸು ಕೆಲಕಾಲ ಮಾತ್ರವೇ.. ಆದರೆ, ನಿಸ್ವಾರ್ಥತೆಯಿಂದ ಮಾಡುವ ಸಹಕಾರ ನೀಡುವ ತೃಪ್ತಿ ಸಾಕು ನೆಮ್ಮದಿಯಿಂದ ಜೀವಿಸಲು.

ಸಹಾಯ ಮಾಡಲು, ಸಹಕಾರ ನೀಡಲು ಇಲ್ಲಿ ನಿರ್ದಿಷ್ಟ ಕಾರಣಗಳೇ ಬೇಕಿಲ್ಲ. ಅಂತಸ್ತು, ಅಂದ-ಚೆಂದ ಎಲ್ಲವೂ ನಗಣ್ಯ. ಮನಸ್ಸಿನ ಸೌಂದರ್ಯ, ಒಳ್ಳೆಯತನ, ಆದರ್ಶ, ಒರಟುತನದ ಹಿಂದೆ ಅಡಗಿರುವ ಕಾಳಜಿ ಇವಿಷ್ಟೇ ಸಾಕಲ್ಲವೇ ಅವರಿಗೆ ಸಹಕಾರ ನೀಡಲು..

ಅವರ ಕಣ್ಣಲ್ಲಿ ಕಾಣುವ ನಂಬಿಕೆ, ಭರವಸೆ ಮತ್ತೊಬ್ಬರ ಬದುಕಿನಲ್ಲಿ ನೀಡುವ ಉತ್ತೇಜನದ ಅರಿವು ಅವರಿಗಿದೆಯೋ ಇಲ್ಲವೋ ಗೊತ್ತಿಲ್ಲ.. ಆದರೆ ಆ ಕ್ಷಣದಲ್ಲಿ ಅದು ನೀಡುವ ಆತ್ಮವಿಶ್ವಾಸ ಪದಗಳಲ್ಲಿ ಹಿಡಿದಿಡಲು ಅಸಾಧ್ಯ. ಎಲ್ಲರೂ ಕೈಬಿಟ್ಟು, ಎಲ್ಲವೂ ಮುಗಿಯಿತು ಎನ್ನುವಾಗ ಸಿಗುವ ಆ ಸಾಂತ್ವಾನದ ಮಾತು ಬದುಕನ್ನೇ ಬದಲಿಸಬಲ್ಲದು. ಜೊತೆ ನಿಲ್ಲದಿದ್ದರೂ ಪರವಾಗಿಲ್ಲ ಆ ಒಂದು ಮಾತು ಸಾಕು ಬದುಕಿನ ದಿಕ್ಕನ್ನೇ ಬದಲಾಯಿಸಲು.

"ಕರ್ಮಣ್ಯೇ ವಾಧಿಕಾರಸ್ತೇ ಮಾ ಫಲೇಶು ಕದಾಚನಾ" ಎಂದಿದ್ದಾನೆ ಕೃಷ್ಣ ಭಗವದ್ಗೀತೆಯಲ್ಲಿ. ನಿನ್ನ ಕೆಲಸವನ್ನು ನೀನು ಮಾಡು ಅದರ ಫಲಾಫಲವನ್ನು ನಿರೀಕ್ಷಿಸಬೇಡ ಎಂಬುದು ಅದರ ಅರ್ಥ. ಬದುಕಿನ ಕರ್ಮಫಲವೂ ಹೀಗೇ ಅಲ್ಲವೇ..? ಒಬ್ಬರಿಗೆ ಒಳಿತು ಮಾಡಿದರೆ ಅದು ನಮಗೆ ಮತ್ತಾವುದೋ ರೀತಿಯಲ್ಲಿ ತಿರುಗಿ ಬರುತ್ತದೆ.

ಫಲಾಫಲಗಳನ್ನು ನಿರೀಕ್ಷಿಸುತ್ತಾ ಕುಳಿತಾಗ ಮತ್ತೊಬ್ಬರು ನಮ್ಮ ನಿರೀಕ್ಷೆಗೆ ತಕ್ಕಂತೆ ಪ್ರತಿಕ್ರಿಯಿಸದಿದ್ದಾಗ ಅಘಾತವಾಗುವುದು ಸಹಜವೇ.. ಅದಕ್ಕಿಂತ ನಿರೀಕ್ಷೆಯೇ ಇಲ್ಲದಿದ್ದರೆ ಒಳಿತಲ್ಲವೇ..? ನಿರೀಕ್ಷೆ ಇಲ್ಲದೆ, ಪ್ರೀತಿ, ಕಾಳಜಿ ತೋರದೆ ಸುಮ್ಮನಿರಲು ನಾವೆಲ್ಲಾ ಬುದ್ದರಲ್ಲ ಎಂಬುವುದನ್ನು ನಾನು ಒಪ್ಪಿಕೊಳ್ಳುವೆ. ಆದರೆ, ಕೆಲವೊಮ್ಮೆ ಅಂಕೆಯಲ್ಲಿರದ ಭಾವನೆಗಳಿಂದ ನೋವು ಅನುಭವಿಸುವುದೇ ಹೆಚ್ಚು. ಎರಡು ದಡಗಳು ಸಮಾನಾಂತರವಾಗಿ ಬಾಳಬಹುದು ಅಷ್ಟೇ.. ಒಂದಾಗಲು ಸಾಧ್ಯವಿಲ್ಲ.

ಭಾವ ಶರಧಿಯಲ್ಲಿ ಹಾಗೆ ಸುಮ್ಮನೆ ಒಂದು ಸುತ್ತು ಅಷ್ಟೇ.. ನಿಮ್ಮ ಅಭಿಪ್ರಾಯಗಳು ನಿಮ್ಮ ನಿಮ್ಮ ಸ್ವಂತ. ಇದು ನನ್ನ ಅಭಿಪ್ರಾಯವಷ್ಟೇ.. ಒಬ್ಬರ ಆಲೋಚನೆ ಮತ್ತೊಬ್ಬರದಕ್ಕಿಂತ ಭಿನ್ನ. ಅಲ್ಲವೇ..? ನನ್ನ ಹುಚ್ಚು ಆಲೋಚನೆಯಲ್ಲಿ ಇದೂ ಒಂದು ಅಷ್ಟೇ..

~ವಿಭಾ ವಿಶ್ವನಾಥ್