ಭಾನುವಾರ, ಮಾರ್ಚ್ 29, 2020

ಮತ್ತೆ ಹುಟ್ಟಿ ಬರುವನೇ ರಾಮ?

ರಾವಣನಂತಹ ನರರಾಕ್ಷಸರ ವಧಿಸಲು

ಮತ್ತೆ ಹುಟ್ಟಿ ಬರುವನೇ ರಾಮ?

ತಂದೆ-ತಾಯಿಯರ ಕಣ್ಮಣಿಯಾಗಿ
ಸತ್ಯಪಾಲಕ, ನರೋತ್ತಮನಾಗಿ
ಎಲ್ಲರಿಗೂ ಮಾದರಿಯಾಗಿ ಬದುಕಲು
ಮತ್ತೆ ಹುಟ್ಟಿ ಬರುವನೇ ರಾಮ?

ಸಿಂಹಾಸನದ ವೈಭೋಗವನೆಲ್ಲ ತೊರೆದು
ಸಾಮಾನ್ಯರಲ್ಲಿ ಸಾಮಾನ್ಯನಾಗಿ ಬದುಕಲು
ಸತ್ಯ-ನಿಷ್ಠನಾಗಿ ಜನರ ಮನವ ಗೆಲ್ಲಲು
ಮತ್ತೆ ಹುಟ್ಟಿ ಬರುವನೇ ರಾಮ?

ಕಲಿಗಾಲದ ಜನರ ನಡುವಲೊಬ್ಬನಾಗಿ
ದುಷ್ಟ ಶಿಕ್ಷಕ, ಶಿಷ್ಟ ರಕ್ಷಕನಾಗಿ ಪೋಷಿಸಿ
ಮನದ ಅಂಧಕಾರಕ್ಕೆ ಮುಕ್ತಿ ನೀಡಲು
ಮತ್ತೆ ಹುಟ್ಟಿ ಬರುವನೇ ರಾಮ?

~ವಿಭಾ ವಿಶ್ವನಾಥ್

ಗುರುವಾರ, ಮಾರ್ಚ್ 26, 2020

ಅಂದಿನಿಂದ ಇಂದಿನವರೆಗೂ ಮಹಿಳಾ ಸಾಹಿತ್ಯ

ಸಾಹಿತ್ಯದ ಹಾದಿಯಲ್ಲಿ ಮಹಿಳಾ ಸಾಹಿತ್ಯ ಅಂದಿನಿಂದ ಇಂದಿನವರೆಗೂ ತನ್ನ ಕಂಪನ್ನು ಚೆಲ್ಲುತ್ತಾ ಹೊಚ್ಚ ಹೊಸ ರೀತಿಯಲ್ಲಿ ನವೀಕರಣಗೊಳ್ಳುತ್ತಾ ತನ್ನದೇ ಛಾಪನ್ನು ಮೂಡಿಸಿ ಓದುಗರನ್ನು ಹಿಡಿದಿಟ್ಟಿದೆ. ಸಾಹಿತ್ಯದಲ್ಲಿ ಮಹಿಳೆಯರು ಹಾಗೂ ಮಹಿಳೆಯರು ಬರೆದ ಸಾಹಿತ್ಯ ಎರಡೂ ಸಹಾ ವಿಭಿನ್ನ ಪಾತ್ರಗಳೆನಿಸಿದರೂ ಸಹಾ ಒಂದೇ ಆತ್ಮದ ಎರಡು ದೇಹಗಳಂತೆ ಭಾಸವಾಗುತ್ತದೆ.

ತ್ರಿವೇಣಿ, ಹೆಚ್.ಜಿ. ರಾಧಾದೇವಿ, ಸಾಯಿಸುತೆ, ಉಷಾನವರತ್ನರಾಮ್, ವಾಣಿ, ಅಶ್ವಿನಿ ಮುಂತಾದ ಘಟಾನುಘಟಿ ಲೇಖಕಿಯರು ಕನ್ನಡ ಸಾಹಿತ್ಯವನ್ನು ಕಥೆ ಹಾಗೂ ಕಾದಂಬರಿ ಲೋಕದಲ್ಲಿ ಎತ್ತಿ ಹಿಡಿದಿದ್ದಾರೆ. ಇವರ ಕಾದಂಬರಿ ಹಾಗೂ ಕಥೆಯ ಪಾತ್ರಗಳು ಹಾಗೂ ಕಥಾನಕ ಇಂದಿನ ದಿನಗಳಲ್ಲೂ ಪ್ರಸ್ತುತವೆನಿಸುತ್ತದೆ. ಹೆಣ್ಣಿನಲ್ಲಿ ಇರಬೇಕಾದ ದಯೆ, ಕರುಣೆಯ ಜೊತೆಜೊತೆಗೇ ಸಂಸ್ಕೃತಿಯ ಪಾಠಗಳನ್ನೂ ಸಾರುತ್ತಾ ಹೆಣ್ಣಿಗೆ ಬೇಕಾದ ಛಲವನ್ನೂ ಪ್ರತಿಬಿಂಬಿಸುತ್ತಾರೆ. ಸಮಸ್ಯೆಗಳ ಮೂಲವನ್ನು ಹಲವು ಮಗ್ಗುಲುಗಳಲ್ಲಿ ವಿಶ್ಲೇಷಿಸುವಂತೆ ಮಾಡುತ್ತಾ ಕಥಾನಾಯಕಿ ತೆಗೆದುಕೊಳ್ಳಬೇಕಾದ ನಿರ್ಧಾರವನ್ನು ಮೊದಲೇ ನಮ್ಮಲ್ಲಿ ಮೂಡುವಂತೆ ಆಲೋಚಿಸುವ ಆಲೋಚನಾ ಶಕ್ತಿಯನ್ನು ತುಂಬುತ್ತಾ ಕುತೂಹಲಕ್ಕೀಡು ಮಾಡುತ್ತಾರೆ. ಕೆಲವು ಘಟನೆಗಳನ್ನು ಆಗಿನ ಕಾಲಘಟ್ಟದಲ್ಲಿ ನಿಂತು ವಿಶ್ಲೇಷಿಸುವುದಾದರೆ ಕೆಲವು ನಿರ್ಧಾರಗಳು ಹಾಗೂ ಘಟನೆಗಳು ಕ್ರಾಂತಿಕಾರಿಯಂತೆಯೇ ಭಾಸವಾಗುತ್ತವೆ. ಹಾಗೂ ಕೆಲವು ಮೂಢನಂಬಿಕೆಗಳನ್ನು ಹೊಡೆದೋಡಿಸಲೂ ಅದು ಸಹಕಾರಿಯೆನಿಸುತ್ತದೆ. ಕೆಲ ಕಾದಂಬರಿಗಳು ಚಲನಚಿತ್ರಗಳಾಗಿಯೂ ಬೆಳ್ಳಿತೆರೆಯ ಮೇಲೆ ತೆರೆ ಕಂಡು ಕಾದಂಬರಿ ಓದದವರನ್ನೂ ಸಾಹಿತ್ಯ ಓದುವಷ್ಟರ ಮಟ್ಟಿಗೆ ಪ್ರೇರೇಪಿಸಿವೆ. ಸರಳವಾದ ಬರವಣಿಗೆಯ ಶೈಲಿ ಓದುಗರ ಮೇಲೆ ಪ್ರಭಾವ ಬೀರಿ ಸಾಹಿತ್ಯದ ಓದಿಗೆ ಎಳೆ ತರುತ್ತದೆ.

ಇಂದಿನ ಮಹಿಳಾ ಸಾಹಿತ್ಯದಲ್ಲಿ ಸಂಧ್ಯಾರಾಣಿ, ಭಾರತಿ ಬಿ.ವಿ, ವಸುಮತಿ ಉಡುಪ, ಪ್ರತಿಭಾ ನಂದಕುಮಾರ್, ಶಾಂತಾಕುಮಾರಿ, ಭುವನೇಶ್ವರಿ ಹೆಗಡೆ ಮುಂತಾದವರು ಕನ್ನಡ ಸಾಹಿತ್ಯ ಲೋಕದಲ್ಲಿ ವಿಭಿನ್ನ ರೀತಿಯ ಪ್ರಯೋಗಶೀಲತೆಗೆ ಮುಖ ಮಾಡುತ್ತಾ ಸಾಹಿತ್ಯದ ವಿಭಿನ್ನ ಪ್ರಕಾರಗಳನ್ನೂ ಪರಿಚಯಿಸುತ್ತಿದ್ದಾರೆ. ಅಂತರಂಗದ ತುಮುಲಗಳು, ತಮ್ಮದೇ ಬದುಕಿನ ಪುಟಗಳು, ಕ್ಯಾನ್ಸರ್ ನಂತಹಾ ಮಹಾಮಾರಿಯಿಂದ ಪಾರಾದ ಬಗೆ, ಜುಗಲ್ಬಂಧಿಯ ಕವಿತೆಗಳು, ಕವಿತೆಯಲ್ಲಿನ ವಿಶಿಷ್ಟ ರೂಪಕಗಳು ಇವೆಲ್ಲವೂ ಈಗಿನ ಸಾಹಿತ್ಯದ ಬೆಳವಣಿಗೆಯ ಅಂಶಗಳು. ಇವು ಸ್ತ್ರೀ ಕೇಂದ್ರಿತವಾಗಿ ಮಾತ್ರ ಇರದೆ ಸಮಾಜದ ವಿವಿಧ ಸಾಮಾಜಿಕ ಚಿತ್ರಣಗಳನ್ನೂ ನಮ್ಮ ಮುಂದಿಡುತ್ತವೆ. ಕೆಲ ದಶಕಗಳ ಹಿಂದೆ ಕೇವಲ ಪ್ರಾಸಂಗಿಕವಾಗಿ ಚುಟುಕಾಗಿ ಉಪಯೋಗವಾಗುತ್ತಿದ್ದ ಮುಟ್ಟು, ಮುಕ್ತ ಲೈಂಗಿಕತೆಗಳು, ಮೆನೋಪಾಸ್ ಮುಂತಾದವುಗಳು ಇಂದು ವಿಶ್ಲೇಷಣೆಯೊಂದಿಗೆ ತೆರೆದುಕೊಳ್ಳುತ್ತವೆ. ಕವಿತೆ, ಕಥೆ, ಕಾದಂಬರಿ, ಲಲಿತ ಪ್ರಬಂಧ ಎಲ್ಲವೂ ಹೊಸ ಹೊಳಹಿನೊಡನೆ ತೆರೆದುಕೊಳ್ಳುತ್ತಾ ಓದುಗರನ್ನು ತಲುಪುತ್ತಿದೆ.

ಸಾಹಿತ್ಯದಲ್ಲಿ ಮಹಿಳೆಯ ಉಲ್ಲೇಖಗಳನ್ನು ಗಮನಿಸಿದರೆ ಸಾರಾ ಅಬೂಬಕ್ಕರ್ ಅವರ ಕಥೆಗಳು ಇಂದಿಗೂ ಮುಸಲ್ಮಾನ ಸಮುದಾಯದ ಮಹಿಳೆಯರ ಸ್ಥಿತಿಗತಿಗಳನ್ನು ತೋರಿಸುತ್ತವೆ. ವಾರಿಸ್ ಡೇರಿಯ ಆತ್ಮಕಥೆ ಮರುಭೂಮಿಯ ಹೂ ಅವರ ಜನಾಂಗದಲ್ಲಿ ಇಂದಿಗೂ ಆಚರಣೆಯಲ್ಲಿರುವ ಯೋನಿ ಛೇದನ ಪ್ರಕ್ರಿಯೆಯ ಕ್ರೂರತೆಯನ್ನು ತೆರೆದಿಡುತ್ತದೆ. ಅತ್ಯಾಚಾರ ವಿರೋಧಿ ಸಾಹಿತ್ಯವೂ ಮಹಿಳೆಯನ್ನು ಸಾಹಿತ್ಯದಲ್ಲಿ ಬಂಧಿಸಿದೆ.

ಇಂದು ಸಾಮಾಜಿಕ ಜಾಲತಾಣಗಳಲ್ಲಿಯೂ ಸಾಹಿತ್ಯ ಪಸರಿಸುತ್ತಿದೆ. ಮಹಿಳೆಯರು ಹೆಚ್ಚಾಗಿ ಇದರ ಉಪಯೋಗ ಪಡೆದುಕೊಂಡು ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುತ್ತಿರುವುದೂ ಸಂತಸದ ವಿಷಯ.

ಅಂದಿನ ಮತ್ತು ಇಂದಿನ ಮಹಿಳಾ ಸಾಹಿತ್ಯವನ್ನು ತಕ್ಕಡಿಯಲ್ಲಿಟ್ಟರೆ ಎರಡೂ ಸಮಾನವಾಗಿಯೇ ತೂಗುತ್ತವೆ. ಮಹಿಳಾ ಸಾಹಿತ್ಯ ಎಂದಿಗೂ ಪುರುಷ ದ್ವೇಷಿಯಾಗಿದ್ದನ್ನು ನಾನು ಗಮನಿಸಿಲ್ಲ. ಅಂದು, ಇಂದು ಹಾಗೂ ಎಂದೆಂದಿಗೂ ಪ್ರಸ್ತುತವೆನಿಸುವ ಮೌಲ್ಯಗಳನ್ನು ಕಟ್ಟಿಕೊಡುವಲ್ಲಿ ಹಿಂದಿನ ಮಹಿಳಾ ಸಾಹಿತ್ಯದ ಪಾತ್ರವೇ ಹೆಚ್ಚು. ವೈಯಕ್ತಿಕವಾಗಿಯೂ ನನಗೆ ಇಂದಿನ ಮಹಿಳಾ ಸಾಹಿತ್ಯಕ್ಕಿಂತ ಅಂದಿನ ಮಹಿಳಾ ಸಾಹಿತ್ಯವೇ ಅಪ್ಯಾಯಮಾನವೆನಿಸುತ್ತದೆ. ಪ್ರಸ್ತುತ ಸ್ಥಿತಿಗಳು ಕೆಲವೊಮ್ಮೆ ಮುಂದೆ ಅಪ್ರಸ್ತುತವೆನಿಸಬಹುದೇನೋ, ಆದರೆ ಮೌಲಿಕವಾದ ನೀತಿಯುತವಾದ ಅಂದಿನ ಮಹಿಳಾ ಸಾಹಿತ್ಯ ಎಂದೆಂದಿಗೂ ಅಜರಾಮರವೇ. ಬೇರು ಗಟ್ಟಿಯಾಗಿರುವಾಗ ಸತ್ವವೂ ಕೂಡಾ ಚೆನ್ನಾಗಿಯೇ ಇರುತ್ತದೆ. ಹಾಗೆಯೇ ಅದರ ಭಾಗವೇ ಆಗಿರುವ ಇಂದಿನ ಮಹಿಳಾ ಸಾಹಿತ್ಯ ಕೂಡಾ.. ಇಂದಿನ ಮಹಿಳಾ ಸಾಹಿತ್ಯದ ಹಾದಿಯೂ ಸುಗಮವಾಗಿ ಸಾಗಲಿ ಎಂದೇ ಆಶಿಸುತ್ತೇನೆ. 

~ವಿಭಾ ವಿಶ್ವನಾಥ್

ಭಾನುವಾರ, ಮಾರ್ಚ್ 22, 2020

ಅವನು ಬರಲೇ ಇಲ್ಲ

ಸೆರೆಯಿಂದ ಮುಕ್ತಿ ನೀಡು ಎಂದು
ಬೇಡಿಕೆಯ ತೀವ್ರತೆಯಲಿ ಬೇಡಿದರೂ
ಭಕ್ತಿಗೆ ಸರಿಯಾದ ಫಲ ದೊರೆಯಲಿಲ್ಲ
ಕಡೆಗೂ ಅವನು ಬರಲೇ ಇಲ್ಲ..

ಕಾಯುತ್ತಾ ಕುಳಿತು ಸೋತುಹೋದೆ
ನೋಡುತ್ತಾ ನಿಂತು ಸೊರಗಿಹೋದೆ
ಯಾವ ಪ್ರಾರ್ಥನೆಗಳೂ ತಲುಪಲಿಲ್ಲ
ಕಡೆಗೂ ಅವನು ಬರಲೇ ಇಲ್ಲ..

ಕನ್ಯಾಸೆರೆ ಬಿಡಿಸಲು ಬಂದವರಲ್ಲಿ
ರಾಜಕುಮಾರನೂ ಇದ್ದ, ರಾಕ್ಷಸನೂ ಇದ್ದ
ನಿರ್ಧಾರ ಮಾಡುವ ಮೊದಲು ಕಾಯುತಲಿದ್ದೆ
ಆಗಲೂ ಅವನು ಬರಲೇ ಇಲ್ಲ..

ರಾಜಕುಮಾರನದ್ದು ಹಂಗಿನ ಅರಮನೆ
ರಾಕ್ಷಸನದ್ದು ಸೊಬಗಿನ ಸೆರೆಮನೆ
ಬಯಲೊಳಗೆ ಬದುಕುವ ಆಸೆ ಸಾಯುವಾಗಲೂ
ಬದುಕಿಸಲು ಅವನು ಬರಲೇ ಇಲ್ಲ..

ಬದುಕಿನ ಭ್ರಮೆಗಳಲ್ಲೇ ತೃಪ್ತಿ ಪಡುತ್ತಾ
ಬದುಕಿನ ಕುಲುಮೆಯೊಳಗೆ ಬೇಯುತ್ತಿರುವಾಗಲೂ
ತಂಪಾದ ಮಡಿಲಿನ ಆಸೆಯಿಟ್ಟುಕೊಂಡಾಗಲೂ
ಅದೇಕೋ ಅವನು ಬರಲೇ ಇಲ್ಲ..

ಜೀವ, ಆತ್ಮಗಳ ಸೆರೆಯಿಂದ ಬಿಡಿಸಿ
ಬಯಲು-ಆಲಯಗಳ ಪರಿಚಯಿಸಿ
ಮುಕ್ತಿ ನೀಡುವನೆಂದು ಕಾಯುತಲಿದ್ದರೂ
ಜವರಾಯನೆಂಬ ಅವನು ಬರಲೇ ಇಲ್ಲ..

~ವಿಭಾ ವಿಶ್ವನಾಥ್

ಗುರುವಾರ, ಮಾರ್ಚ್ 19, 2020

ತೇಜಸ್ವಿ ಎಂದೆಂದಿಗೂ ಅಚ್ಚಳಿಯದ ತೇಜಸ್ಸು

ಪೂಚಂತೇ ಎಂದೇ ಖ್ಯಾತರಾದ ಪೂರ್ಣಚಂದ್ರ ತೇಜಸ್ವಿಯವರು "ಹಾಗೆ ಬದುಕಿ, ಹೀಗೆ ಬದುಕಿ" ಎಂದಿಗೂ ಹೇಳದೆ "ಬದುಕನ್ನು ಬದುಕುವುದು ಹೀಗೆ" ಎಂದು ತೋರಿಸಿಕೊಟ್ಟವರು. ಬರೀ ಬರಹದಿಂದ ಅಷ್ಟೇ ಅಲ್ಲದ ಪರಿಸರ ಕಾಳಜಿ, ವ್ಯಕ್ತಿತ್ವ, ಛಾಯಾಗ್ರಹಣ, ಕಾಡಿನ ಬದುಕು, ಹೋರಾಟ ಇವೆಲ್ಲದರಿಂದಲೂ ಎಲ್ಲರಲ್ಲೂ ಸ್ಫೂರ್ತಿ ಮೂಡಿಸಿದ ಅದ್ಭುತ ಶಕ್ತಿ.

       "ಓದುಗರನ್ನು ಗೆಲ್ಲಬೇಕು,ಪ್ರಶಸ್ತಿಗಳನ್ನಲ್ಲ" ಎಂಬ ಧ್ಯೇಯಕ್ಕೆ ನಿಷ್ಠರಾಗಿ ಬರೆದ ತೇಜಸ್ವಿಯವರು ತಮ್ಮ ಬರಹಗಳಿಂದ ಕೋಟ್ಯಾಂತರ ಓದುಗರನ್ನು ಗೆದ್ದಿದ್ದಾರೆ, ಗೆಲ್ಲುತ್ತಲೂ ಇದ್ದಾರೆ. ಇವರ ಬರಹಗಳಲ್ಲಿ  ಅದ್ಭುತ ಕಲಾಸೃಷ್ಠಿ ಇದೆ, ಜೀವನದೃಷ್ಟಿ ಇದೆ, ತತ್ವ ಚಿಂತನೆಗಳಿವೆ. ತಮ್ಮದೇ ಬದುಕಿನ ಅಪೂರ್ವ ವ್ಯಾಖ್ಯಾನವಿದೆ, ದೂರದೃಷ್ಟಿತ್ವವಿದೆ. ಒಮ್ಮೆ ತೇಜಸ್ವಿಯವರ ಪುಸ್ತಕಗಳನ್ನು ಓದಲು ಶುರು ಮಾಡಿದರೆ, ಓದಿಸಿಕೊಂಡು ಹೋಗುವ ಓದಿನ ಓಘದ ಮಧ್ಯೆ ಓದುಗ ಕಳೆದು ಹೋಗುತ್ತಿದ್ದಾನೆ. "ಮುಖ್ಯ ವಿಚಾರವನ್ನು ಬಿಟ್ಟು ಅಡ್ಡದಾರಿ ಹಿಡಿಯಬೇಡಿ" ಎಂದು ಜನತೆಗೆ ಸಂದೇಶ ನೀಡುತ್ತಾ ರಾಜಕೀಯ ಮತ್ತು ಅಧಿಕಾರಶಾಹಿ ವ್ಯವಸ್ಥೆಯಿಂದ ದೂರವಿದ್ದರೂ ತಮ್ಮ ಬರವಣಿಗೆಯ ಮೂಲಕ ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.

     ನಮ್ಮ ಸುತ್ತ-ಮುತ್ತಲಿನ ಜನರೇ ತಮ್ಮ ಜೀವನವನ್ನು ತೋರಿಸುವಂತೆ ತೇಜಸ್ವಿಯವರ ಕಥಾ ಪಾತ್ರಗಳು ಭಾಸವಾಗುತ್ತವೆ. ಇಂತಹ ಒಂದು ಪಾತ್ರವೇ ತಬರಸೆಟ್ಟಿ. ತಬರನ ಕಥೆಯಲ್ಲಿ ಬರುವ ತಬರ ಇಂದಿನ ಪರಿಸ್ಥಿತಿಗೂ ಹಿಡಿದ ಕೈಗನ್ನಡಿಯಾಗಿದ್ದಾನೆ. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷರ ಆಳ್ವಿಕೆಯಲ್ಲಿಯೂ ಸೇವೆ ಸಲ್ಲಿಸಿದ್ದ ತಬರ  ಸ್ವಾತಂತ್ರ್ಯಾ ನಂತರ ಅನೇಕ ಕಡೆ ವರ್ಗಾವಣೆಯ ಕಷ್ಟಕ್ಕೆ ಸಿಲುಕಿ ಪಡುಗೆರೆಯ ಮುನಿಸಿಪಾಲಿಟಿ ನೌಕರನಾಗುವ ಹೊತ್ತಿಗೆ ನಿವೃತ್ತಿಯ ವಯಸ್ಸಿಗೆ ಬಂದಿದ್ದ. ತಬರನ ಮನಸ್ಸಿನ ಆತಂಕಗಳು ಉನ್ಮಾದ ಅಥವಾ ಅಸಂಬದ್ಧವಾಗಿರದೆ ಪಡುಗೆರೆಯ ಆಡಳಿತ ವೈಖರಿಯಿಂದ ಉದ್ಭವವಾದುದಾಗಿತ್ತು. ಒಂದೊಮ್ಮೆ ತಬರ ಬರೆದ ರಸೀತಿಗೆ ಇನ್ನೂ ವಸೂಲಾಗದೆ ಅವನ ಸಂಬಳಕ್ಕೆ ಕತ್ತರಿ ಬೀಳುವ ಪರಿಸ್ಥಿತಿಯಲ್ಲಿ ಪಡಿಪಾಟಲು ಪಡುತ್ತಿರುವಾಗಲೇ, "ದುರ್ಭಿಕ್ಷದಲ್ಲಿ ಅಧಿಕ ಮಾಸ" ಎಂಬಂತೆ ಅವನ ಹೆಂಡತಿಗೆ ಮಧುಮೇಹ ಆವರಿಸಿತ್ತು. ಈ ಮಧುಮೇಹದ ಚಿಕಿತ್ಸೆಗಾಗಿ ಹಣ ಹೊಂದಿಸಲು ತಬರ ಪಡಿಪಾಟಲು ಪಡುತ್ತಿದ್ದಾಗ, ಯಾರೋ ಹೇಳಿದಂತೆ ಫ್ರಾವಿಡೆಂಟ್ ಫಂಡನ್ನು ಪಡೆಯಲು ಕಛೇರಿಯಿಂದ,ಕಛೇರಿಗೆ ತಿರುಗಿ ಸಂಬಳವನ್ನಷ್ಟೇ ಅಲ್ಲದೆ, ಗ್ಯಾಂಗ್ರೀನ್ ಆದ ಹೆಂಡತಿಯನ್ನೂ ಕಳೆದುಕೊಂಡ. ತನ್ನ ಪೆನ್ಶನ್ ಹಣವನ್ನೂ ಪಡೆಯದ ತಬರ ಸ್ವಾತಂತ್ರ್ಯ ದಿನಾಚರಣೆಯ ಬೆಳ್ಳಿಹಬ್ಬದ ಆಚರಣೆಯಂದೇ ಹುಚ್ಚನೆಂಬ ಪಟ್ಟ ಹೊತ್ತು, ದುರಂತ ನಾಯಕನಾದ.ಎಲ್ಲೋ ಕೆಲವರಿಗೆ ಮಾತ್ರ ಅವನನ್ನು ಕಂಡಾಗ ನಮ್ಮ ಭೀಕರ ವ್ಯವಸ್ಥೆಯ ವಿರಾಡ್ರೂಪ ಮಿಂಚುತ್ತಿತ್ತು. ಯಾವುದೋ ಅರಿಯದ ಭೀತಿಯಲ್ಲಿ ಅವರು ನಡುಗುತ್ತಿದ್ದರು.

     ಅವರಂತೆಯೇ ಇಂದು ನಾವೂ ಸಹ ರಾಜಕೀಯ ಮತ್ತು ಅಧಿಕಾರಶಾಹಿ ವ್ಯವಸ್ಥೆಯಿಂದ ಸ್ವಾತಂತ್ರ್ಯವನ್ನು ಕಳೆದುಕೊಂಡು ಒದ್ದಾಡುತ್ತಿದ್ದೇವೆ. ತೇಜಸ್ವಿಯವರು ಅಂದಿನ ದಿನಗಳಲ್ಲಿಯೇ ಬಿಚ್ಚಿಟ್ಟಿರುವ ಈ ಲಂಚಾವತಾರಿ ಸಮಸ್ಯೆಗೆ ಇಂದಿನ ಜನಾಂಗದಲ್ಲಿಯಾದರೂ ಪರಿಹಾರ ನೀಡಬೇಕಾಗಿದೆ. ಇಂತಹ ದಿನಗಳಲ್ಲಿ ಪ್ರಜಾಕಾರಣ, ಪ್ರಜಾಕೀಯ ಪರಿಹಾರವನ್ನು ನೀಡಲು ಹೊರಟಿರುವ ಸಲಹೆಗೆ ಕೈ ಜೋಡಿಸಿದರೆ ಅಡ್ಡದಾರಿಯನ್ನು ಹಿಡಿಯದೆ, ರಾಜಮಾರ್ಗದಲ್ಲಿಯೇ ಉತ್ತರವನ್ನು ಕಂಡುಕೊಳ್ಳಬಹುದಾಗಿದೆ. ನಮ್ಮ ಆತ್ಮಶಕ್ತಿಯನ್ನು ಹೆಚ್ಚಿಸಿಕೊಂಡು ಈ ನಿಟ್ಟಿನಲ್ಲಿ ದುಡಿದರೆ ತಬರನ ಕಥೆಯ ಅಂತ್ಯವನ್ನು ಬದಲಾಯಿಸಿ ತೇಜಸ್ವಿಯವರ ಅಚ್ಚಳಿಯದ ತೇಜಸ್ಸನ್ನು ಕಂಡುಕೊಳ್ಳಬಹುದಾಗಿದೆ.


-ವಿಭಾ ವಿಶ್ವನಾಥ್

ಭಾನುವಾರ, ಮಾರ್ಚ್ 15, 2020

ಆಷಾಡದ ಅನುಭೂತಿ


ಆಷಾಡ ಮಾಸವೇ ಮುಗಿವ ಹೊತ್ತಲ್ಲಿ ಹೀಗೊಂದು ಅನುಭೂತಿ..

ಆಷಾಡದಲ್ಲಿ ನವವಿವಾಹಿತರ ಚಿರವಿರಹ ಒಂದು ಅನುಭೂತಿಯಾದರೆ, ಸುತ್ತಲೂ ಸುಳಿದಾಡುವ ಸುಳಿಗಾಳಿಯದ್ದೇ ಮತ್ತೊಂದು ವಿಚಿತ್ರ ಅನುಭವ.

ಮಂದಗಾಮಿನಿಯಂತೆ ಸುಳಿಗಾಳಿಯಂತೆ ಬೀಸುತ್ತಿದ್ದ ಗಾಳಿಗೆ ಭೋರೆಂದು ಬೀಸುವ ತವಕ. ಕಿವಿಗಂತೂ ಯಾವುದೋ ರೌದ್ರನರ್ತನದ ಆಲಾಪದಂತೆ ಕೇಳಿಸುತ್ತಾ, ತನ್ನ ವಿರಹವನ್ನು ಅರುಹುತ್ತಿರುವ ಪ್ರೇಮಿಯಂತೆ ಭಾಸವಾಗುತ್ತದೆ. ಎಲ್ಲಿಂದಲೋ ಎಲ್ಲಿಗೋ ಪಯಣಿಸುತ್ತಿರುವ, ಯಾರ ಅಂಕೆಗೂ ನಿಲುಕದ, ಯಾರನ್ನೋ ಹುಡುಕಿ ಸಿಗದಾದಾಗ ಪ್ರಲಾಪಿಸುವ ಆರ್ತನಾದದಂತೆ ಅನ್ನಿಸುತ್ತದೆ.

ಆಷಾಡ ಮಾಸಕ್ಕೆ ಕರೆಯಲು ಬರುವ ಅಣ್ಣನ ನಿರೀಕ್ಷೆಯೂ ಈ ಸುಳಿಗಾಳಿಯ ಜೊತೆಜೊತೆಗೇ ಸುಳಿಯುತ್ತಾ, ಅಣ್ಣ ಇಂದೂ ಬರಲಿಲ್ಲವೆಂಬುದನ್ನು ಮತ್ತೆ-ಮತ್ತೆ ನೆನಪಿಸುತ್ತದೆ.ಅಣ್ಣನಿಗಾದರೂ ಈಗ ತಂಗಿಯ ನೆನಪೆಲ್ಲಿದೆ? ಅತ್ತಿಗೆಯ ವಿರಹ ಕಾಡುತ್ತಿರುವ ಹೊತ್ತಲ್ಲಿ ತಂಗಿ ನೆನಪಾಗುವುದಾದರೂ ಹೇಗೆ ಅಲ್ಲವೇ..?ಜೊತೆಗೆ ಈ ತಣ್ಣನೆ ಗಾಳಿಯ ಸ್ಪರ್ಶ, ಅದರೊಟ್ಟಿಗೆ ಬರುವ ಬರುವ ತುಂತುರು ಹನಿಗಳೂ ಅವನನ್ನು ಮನೆಯಲ್ಲೇ ನಿಲ್ಲುವಂತೆ ಮಾಡಿಬಿಡುತ್ತವೆ. ಅಮ್ಮನ ಕೈರುಚಿಯ ಚಹಾ ಕೂಡಾ ಸಪ್ಪೆಯೆನಿಸುತ್ತಿರುತ್ತದೆ.ನೆನಪುಗಳಿಗೇನು ಬರ ಎಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ  ತೋರಿಕೆಯ ಪ್ರೀತಿ ತೋರುವ ಅಣ್ಣನ ಮನಸ್ಸು ಕೂಡಾ ಶೀತಲ ಗಾಳಿಗೆ ಮಂಜಿನಂತಾಗಿರುತ್ತದೆ. ಅತ್ತಿಗೆಯ ಬರುವಿಕೆ ಮಾತ್ರ ಬೇಸರದ ಮಂಜನ್ನು ಕರಗಿಸಲು ಸಾಧ್ಯ.ಇತ್ತ ಅಣ್ಣನ ಬರುವಿಕೆಗೆ ಕಾದ ತಂಗಿ ಸುಸ್ತಾಗಿ, ಮಹಾಲಕ್ಷ್ಮಿಯಂತೆ ಇಲ್ಲಿಯೇ ಇರುವೆನೋ ಹೊರತು ಮಾರಿಯಾಗಿ ಆ ಮನೆಗೆ ಕಾಡಲಾರೆ ಎಂಬ ಯೋಚನೆ ಮಾಡುತ್ತಾ ಅನ್ಯಮನಸ್ಕಳಾಗುತ್ತಿರುತ್ತಾಳೆ.

ಶುಭಕಾರ್ಯಗಳು ಜರುಗದ ಆಷಾಡ ಮಾಸ ಸದಾ ಗಜಿಬಿಜಿಯಂತಿರುವ ಕಾರ್ಯಕ್ರಮಗಳಿಗೆಲ್ಲಾ ಒಂದು ಸಣ್ಣ ವಿರಾಮ ನೀಡುತ್ತದೆ. ಶುಭ-ಅಶುಭಗಳೆಲ್ಲಾ ಮನಸ್ಸಿನಲ್ಲಿರುತ್ತದೆ, ಮಾಸದಲ್ಲಲ್ಲ ಎಂಬುದಕ್ಕೆ ವೈಜ್ಙಾನಿಕ ಉದಾಹರಣೆ ನೀಡಿ ಗಂಟೆಗಟ್ಟಲೆ ಭಾಷಣ ಮಾಡಿದವರೂ ಸಹಾ ಆಷಾಡ ಮಾಸದಲ್ಲಿ ಮದುವೆ ಕಾರ್ಯಕ್ರಮವನ್ನು ನೆರವೇರಿಸುವುದಿಲ್ಲ.  

ಅದೇಕೋ ಮೋಡಗಳೂ ಸಹಾ ಮುಖ ಊದಿಸಿಕೊಂಡು ನೆಲಕ್ಕಿಳಿಯದೇ ಅಲ್ಲೇ ಕುಳಿತುಬಿಡುತ್ತವೆ. ಮುಖ ಗಂಟು ಹಾಕಿಕೊಂಡು ಕೂತ ಅಣ್ಣನನ್ನು ಪದೇ ಪದೇ ನೆನಪಾಗಿಸಿಬಿಡುತ್ತದೆ.

ಆಷಾಡದ ಅನುಭೂತಿ ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕಾಡಿಬಿಡುತ್ತದೆ. ಕಾಡದೇ ಬಿಡುವ ಮಾಸವಂತೂ ಇದಲ್ಲ. ಮುಖ ಧುಮ್ಮಿಸಿ ಕೂತ ಮೋಡ, ಮರೆಯಾದ ಬಿಸಿಲು, ನೆನಪಲ್ಲಷ್ಟೇ ಉಳಿದುಬಿಡುವ ತಂಗಿ, ವಿರಹವನ್ನು ಅನುಭವಿಸುವ ನವಜೋಡಿ, ಎಷ್ಟೇ ಬಿಸಿಯಿದ್ದರೂ ತಣ್ಣಗೆನಿಸುವ ಚಹಾ, ರಾತ್ರಿಯಲ್ಲಿ ಕಾಣದ ಚುಕ್ಕಿಗಳು, ಬೀರುವಿನಿಂದಲೇ ನನ್ನನ್ನು ಎತ್ತಿಕೋ ಎಂದು ಕರೆಯುವ ಸ್ವೆಟರ್ ಹೀಗೆ.. ಹುಡುಕಿದಷ್ಟೂ ಅನುಭೂತಿಗಳು ಆಷಾಡಕ್ಕೆಂದೇ ಕಾಪಿಟ್ಟಂತೆ ಕಾಣಸಿಗುತ್ತದೆ.

 

~ವಿಭಾ ವಿಶ್ವನಾಥ್


ಗುರುವಾರ, ಮಾರ್ಚ್ 12, 2020

ಮರಳಿ ಬಂದಿತು ಯುಗಾದಿ


ವಸಂತನ ಆಗಮನವ ಸಾರುತ
ಇಳೆಯಲಿ ಹರುಷವ ತುಂಬುತ
ಸಿಹಿ-ಕಹಿಯ ಹಂಚುತಲಿ ...
ಮರಳಿ ಬಂದಿತು ಯುಗಾದಿ

ಕಷ್ಟ-ಸುಖಗಳ ತಕ್ಕಡಿಯನು
ಸಮನಾಗಿ ತೂಗಿ ಎಂದೇಳುತ
ಸಮಚಿತ್ತವನು ಕಲಿಸಲು ನಮಗೆ
ಮರಳಿ ಬಂದಿತು ಯುಗಾದಿ

ಮಾವಿನ ಚಿಗುರಿನ ಛಾಯೆಯಲಿ
ಕೋಗಿಲೆ ಹಾಡಿನ ಮಾಯೆಗಾಗಿ
ಹರುಷದ ಹೊನಲಿನ ಸೊಗಸಿನಲಿ 
ಮರಳಿ ಬಂದಿತು ಯುಗಾದಿ

ಹರುಷವ ಎಲ್ಲೆಡೆ ಹಂಚಿರೆಂದು
ಭಾವೈಕ್ಯತೆಯ ಸಿಹಿಯ ಪಸರಿಸಿ
ಮನದ ಕಹಿಯ ಮರೆಸಲೆಂದು
ಮರಳಿ ಬಂದಿತು ಯುಗಾದಿ

-ವಿಭಾ ವಿಶ್ವನಾಥ್

ಭಾನುವಾರ, ಮಾರ್ಚ್ 8, 2020

ಪ್ರತ್ಯಕ್ಷ ಕಂಡರೂ …

ಅಂದು  9:00 ಘಂಟೆಗೆ ಕಾಲೇಜಿಗೆ ಹೋದಾಗ ನನಗೆ ಆಶ್ಚರ್ಯವಾಯಿತು. ಬಂದ್ ಗಳಿಗೂ ರಜೆ ಕೊಡದ ಪ್ರಾಂಶುಪಾಲರು ಅಂದು ರಜೆ ಘೋಷಿಸಿದ್ದರು.

ನಾವು ಫ್ರೆಂಡ್ಸ್ ಎಲ್ಲರೂ "ಏನು ಇವತ್ತು ಜೋರಾಗಿ ಮಳೆ ಬರುತ್ತೆ ಅನ್ಸುತ್ತೆ" ಅಂತಾ ಮಾತನಾಡಿಕೊಳ್ತಾ ಇದ್ರೆ, ಇನ್ನೊಬ್ಬಳು "ಏ! ಇವತ್ತು ಸೂರ್ಯ ಪಶ್ಚಿಮದಲ್ಲಿ ಹುಟ್ಟಿರಬೇಕೇನೋ" ಅಂತಾ ಹೇಳಿದ್ಲು. ರಜೆಗೆ ಕಾರಣ ಏನು ಎಂದು ಗೊತ್ತಿಲ್ಲದೆ ನಾವು ಇಷ್ಟೆಲ್ಲಾ ಮಾತನಾಡಿಕೊಳ್ತಾ ಇದ್ವಿ. ಅಷ್ಟರಲ್ಲಿ ಬಂದ ಸಂದೀಪ್. ಇವನು ನಮ್ ಕಾಲೇಜ್ಗೆ ಒಂತರಾ ರೇಡಿಯೋ ತರಾ. ಇವನ ಬಾಯಿಗೆ ಒಂದು ವಿಷಯ ಸಿಕ್ಕಿತು ಅಂದ್ರೆ ಮುಗಿದೇ ಹೋಯಿತು.ಇವನನ್ನು ಕೇಳಿದ್ರೆ ಗೊತ್ತಾಗಬಹುದೇನೋ ಅಂದುಕೊಂಡು "ಏನೋ ಸಂದೀಪ್, ಇವತ್ತು ಯಾಕೆ    ರಜೆ ಕೊಟ್ಟಿದ್ದಾರೆ?" ಅಂತಾ ನಾನು ಅವನನ್ನು ಕೇಳಿದೆ.ಅದಕ್ಕೆ "ಏನೋ ಮನು, ನಿನಗೆ ಇನ್ನೂ ವಿಷಯಾನೇ ಗೊತ್ತಿಲ್ವಾ, ನೀನು ಹುಡುಗಿಯರ ಜೊತೆ ಮಾತಾಡ್ತಾ ಇದ್ರೆ ನಿನಗೆ ಲೋಕಾನೇ ಮರೆತು ಹೋಗಿಬಿಡುತ್ತೆ. ಅದ್ಸರಿ, ನೀನು ಇನ್ನೂ ವಾಟ್ಸಾಪ್ ನಲ್ಲಿ ಆ ವೀಡಿಯೋ ನೋಡಿಲ್ವಾ?" ಅಂದ.

"ಸುತ್ತಿ ಬಳಸಿ ಮಾತಾಡ್ಬೇಡ, ಅದೇನು ಅಂತಾ ಬೇಗ ವಿಷಯಕ್ಕೆ ಬಾರೋ" ಅಂದೆ. "ಮೊದಲು ವಾಟ್ಸಾಪ್ ವೀಡಿಯೋ ನೋಡು ನಿನಗೇ ಗೊತ್ತಾಗುತ್ತೆ. ನನಗೆ ಲೇಟಾಗುತ್ತೆ, ನಾನು ಬೇಗ ಹೋಗಬೇಕು." ಅಂತಾ ಹೇಳಿದ.

"ಸರಿ, ಹೋಗು" ಅಂತಾ ಹೇಳಿ, "ಮೊಬೈಲ್ ಅನ್ನು ನಿರ್ಬಂಧಿಸಲಾಗಿದೆ." ಅನ್ನೋ ಬೋರ್ಡ್ ಕೆಳಗೆ ನಿಂತುಕೊಂಡು ಮೊಬೈಲ್ ಆನ್ ಮಾಡಿದೆ. ಒಂದರ ಮೇಲೊಂದು ಮೆಸೇಜ್ ಗಳು ಬರುವುದಕ್ಕೆ ಶುರು ಮಾಡಿದವು. ಎಲ್ಲಾ 'ಜಿಯೋ' ಪ್ರಭಾವ ಅಂತಾ ಹೇಳ್ಕೊಂಡು, ಏನಿರಬಹುದು ಆ ವೀಡಿಯೋದಲ್ಲಿ ಅನ್ನೋ ಕುತೂಹಲದಲ್ಲೇ ಗ್ರೂಪ್ ನಲ್ಲಿ ಹಾಕಿದ್ದ ಆ ವೀಡಿಯೋ ಡೌನ್ ಲೋಡ್ ಮಾಡಿದೆ. ಒಂದು ಟೆಂಪೋ ಮುಂದೆ ರಕ್ತಸಿಕ್ತವಾಗಿ ಬಿದ್ದಿದ್ದ ಹುಡುಗನೊಬ್ಬ ನೋವಿನಿಂದ ನರಳುತ್ತಾ ಇದ್ದಾನೆ. ಹಾಕಿದ್ದ ಜೀನ್ಸ್ ಹರಿದು, ಅವನ ಚರ್ಮ ಕಿತ್ತುಹೋಗಿ ರಕ್ತ ಸುರಿಯುತ್ತಿದೆ. ಬಹುಷಃ ಅವನ ಕಾಲು ಮುರಿದಿರಬಹುದು. ಏಳುವುದಕ್ಕೆ ಪ್ರಯತ್ನ ಪಡುತ್ತಿದ್ದಾನೆ. ಅವನು ಮಾತನಾಡ್ತಾ ಇರುವುದು ಸರಿಯಾಗಿ ಕೇಳಿಸುತ್ತಿಲ್ಲ. ಹೈವೇ ಅನ್ಸುತ್ತೆ, ತುಂಬಾ ವಾಹನಗಳ ಸದ್ದು ಕೇಳಿಸುತ್ತಾ ಇದೆ. ಹಾಗೇ ಸ್ವಲ್ಪ ಮುಂದೆ ಒಬ್ಬಳು ಹುಡುಗಿ ಬಿದ್ದಿದ್ದಾಳೆ. ಅವಳ ಹೈಹೀಲ್ಡ್ ಚಪ್ಪಲಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಬಟ್ಟೆ ಅಸ್ತವ್ಯಸ್ತವಾಗಿದೆ. ಅವಳಲ್ಲಂತೂ ಚಲನೆಯೇ ಇಲ್ಲ. ಅಂಗಾತ ಬಿದ್ದಿದ್ದ ಅವಳ ತಲೆಯಿಂದ ರಕ್ತ ಹರಿದು ಕೋಡಿಯಾಗಿ ರಸ್ತೆಯಲ್ಲಿ ಮಡುಗಟ್ಟಿದೆ. ಆಂಬ್ಯುಲೆನ್ಸ್ ಬರುತ್ತಿದೆ ಅನ್ಸುತ್ತೆ, ಅದರ ಸೌಂಡ್ ಕೇಳಿಸ್ತಾ ಇದೆ.

ಎರಡು ನಿಮಿಷದ ಆ ವೀಡಿಯೋ ಬದುಕಿನ ದುರಂತದ ಚಿತ್ರಣವನ್ನೇ ಕಣ್ಣ ಮುಂದೆ ಇಟ್ಟಿತ್ತು. ಹುಡುಗನ ಮುಖ ನೋಡಿದರೆ ಅವನು ನಮ್ಮ ಕಾಲೇಜಿನವನಲ್ಲ, ಆದರೆ ಹುಡುಗಿ ಅಂಗಾತ ಬಿದ್ದಿದ್ದರಿಂದ ಯಾರೆಂದು ಗುರುತು ಸಿಗಲಿಲ್ಲ. ನಮ್ಮ ಕಾಲೇಜಿನವಳೇನೋ ಎಂಬ ಸಂಶಯ ಉಂಟಾಯಿತು.

ಅಷ್ಟರಲ್ಲಿ ನನಗೆ ನೆನಪಾಗಿದ್ದು ಶಾರ್ವರಿ. ಏನಿವತ್ತು ಇಷ್ಟೊತ್ತಾದ್ರೂ ಕ್ಯಾಂಪಸ್ ನಲ್ಲಿ ಕಾಣಿಸಿಕೊಂಡೇ ಇಲ್ವಲ್ಲಾ ಅಂತಾ ಒಂದು ಸಾರಿ ಕಣ್ಣಾಡಿಸಿದೆ. ಅವಳೇನಾದ್ರೂ ನಾನು ಈ ವೀಡಿಯೋ ನೋಡೋದನ್ನ ನೋಡಿದ್ರೆ ಅವಳ ಸ್ಟೈಲಲ್ಲೇ ಕಿವಿ ಹಿಂಡಿ "ಕತ್ತೆ, ಯಾಕೋ ಇಂತಾ ವೀಡಿಯೋ ಎಲ್ಲಾ ನೋಡ್ತಿಯಾ? ಸುತ್ತಾ ಇರುವವರು ವೀಡಿಯೋ ಮಾಡೋದು ಬಿಟ್ಟು ಅವರನ್ನು ಆಸ್ಪತ್ರೆಗೆ ಸೇರಿಸಿದ್ರೆ ಅವರ ಜೀವ ಆದ್ರೂ ಉಳಿಯುತ್ತೆ. ವೀಡಿಯೋ ಮಾಡುವವರಿಗೆ ಬುದ್ಧಿ ಇಲ್ಲ. ಅದನ್ನು ಕಣ್ಣು ಬಿಟ್ಕೊಂಡು ರೆಪ್ಪೆ ಮಿಟುಕಿಸದೆ  ನೋಡುವವರಿಗೆ ಬುದ್ದಿನೇ ಇಲ್ಲ" ಅಂತಾ ಹೇಳ್ತಾ ಇದ್ಲು.

ಆಗ ನಾನು "ಏ,ಶಾರಿ! ತಪ್ಪಾಯ್ತು ಕಣೇ,ನನ್ನ ಕಿವಿ ಬಿಡೇ, ನೋಯ್ತಾ ಇದೆ." ಅಂತಾ ಅವಳ ಕೈಯಿಂದ ಬಿಡಿಸಿಕೊಳ್ತಾ ಇದ್ದೆ. ಅವಳು ನೋಡೋದಕ್ಕೆ ಬಿಂದಾಸ್ ಹುಡುಗಿ ತರಹ ಕಾಣಿಸಿದ್ರೂ, ಮನಸ್ಸು ಮಾತ್ರ ತುಂಬಾ ಮೃದು ಅಂತಾ ನೆನಪು ಮಾಡಿಕೊಳ್ತಾ ಇರುವಾಗ ಮತ್ತೆ ಸಂದೀಪ್ ಬಂದ." ಏ, ಸಂದೀಪ ನಿಂತ್ಕೊಳ್ಳೋ, ವೀಡಿಯೋ ನೋಡಿದೆ ಕಣೋ, ಆದರೆ ಯಾರು ಅಂತಾ ಗೊತ್ತಾಗ್ಲಿಲ್ಲ, ನಮ್ಮ ಕಾಲೇಜ್ ಹುಡುಗೀನಾ?" ಅಂತಾ ಕೇಳಿದೆ. ಅದಕ್ಕೆ ಅವನು "ಇನ್ನೂ ಗೊತ್ತಾಗ್ಲಿಲ್ವೇನೋ? ಶಾರ್ವರಿ ಕಣೋ ಅವಳು" ಅಂದಾಗ ಒಂದು ಕ್ಷಣ ಏನಾಗ್ತಾ ಇದೆ ಅನ್ನೋದೇ ಗೊತ್ತಾಗ್ಲಿಲ್ಲ. ಆಗ ನನ್ನ ಕಣ್ಮುಂದೆ ಒಂದು ಕ್ಷಣ ಶಾರ್ವರಿ ತೇಲಿ ಹೋದ್ಲು.

ಅದು ಇಂಜಿನಿಯರಿಂಗ್ ನ ಮೊದಲನೇ ದಿನ. ಎಲ್ಲರೂ ಡ್ರೆಸ್ ಕೋಡ್ ಫಾಲೋ ಮಾಡ್ತಾ ಬಂದ್ರೆ, ಇವಳೊಬ್ಬಳು ಬಿಂದಾಸ್ ಆಗಿ ಜೀನ್ಸ್, ಫ್ರೀ ಹೇರ್ ಬಿಟ್ಟುಕೊಂಡು ಬಂದ್ಲು. ಅವಳೆಷ್ಟು ನೋಡೋದಕ್ಕೆ ಚೆನ್ನಾಗಿದ್ಲೋ, ಅವಳು ಓದುವುದರಲ್ಲಿ ಕೂಡಾ ಅಷ್ಟೇ ಮುಂದಿದ್ದಳು. ನೋಡನೋಡುತ್ತಲೇ ಒಂದು ಸೆಮಿಸ್ಟರ್ ಮುಗಿದೇ ಹೋಯಿತು. ಅವಳು 'ಟಾಪರ್' ಕೂಡ ಆದಳು. ಓದಿನಲ್ಲಿ ಅಷ್ಟೇನೂ ಚುರುಕಿಲ್ಲದ ನಾನು ಅವಳನ್ನು ಪ್ರಪೋಸ್ ಮಾಡಬೇಕು, ಅದಕ್ಕಿಂತ ಮೊದಲು ಅವಳನ್ನು ಫ್ರೆಂಡ್ ಮಾಡಿಕೊಂಡು ಆಮೇಲೆ ಪ್ರಪೋಸ್ ಮಾಡಬೇಕು ಅಂತಾ ಅಂದುಕೊಂಡೆ. ಹಾಗೆ ಮಾಡಿದ್ದಕ್ಕೆ ಅವಳು "ಆಕರ್ಷಣೆ ಎಲ್ಲ ಪ್ರೀತಿ ಅಲ್ಲ, ಸ್ನೇಹ ಅನ್ನುವ ಹೆಸರಲ್ಲಿ ಶುರುವಾಗಿ ಪ್ರೀತಿ ಅನ್ನುವ ಮಾಯೆಗೆ ಸಿಲುಕಿರುವುದರಲ್ಲಿ ಅರ್ಥ ಇಲ್ಲಾ, ಸುಮ್ಮನೆ ಇದಕ್ಕೆ ತಲೆ ಕೆಡಿಸಿಕೊಂಡು ನಿನ್ನ ಜೀವನ ಹಾಳು ಮಾಡಿಕೊಳ್ಳಬೇಡ. ಇವತ್ತಿಂದ ಚೆನ್ನಾಗಿ ಓದು,ನಾನು ನಿನಗೆ ಸಹಾಯ ಮಾಡುತ್ತೇನೆ. ನೀನು ಇವತ್ತಿಂದ ನನ್ನ ಬೆಸ್ಟ್ ಫ್ರೆಂಡ್ ಆಯ್ತಾ" ಅಂತ ಹೇಳಿ ನನ್ನ ಮನಸನ್ನು ಓದುವುದರ ಕಡೆಗೆ ಒಲಿಸಿದಳು. ಪ್ರೀತಿನೋ, ಆಕರ್ಷಣೆನೋ ಗೊತ್ತಿಲ್ಲ ಆದ್ರೆ ಅವಳು ನನ್ನ ಬೆಸ್ಟ್ ಫ್ರೆಂಡ್. ಈ ಅಪಘಾತಕ್ಕೆ 2 ದಿನ ಮುಂಚೆ "ನನಗೆ 2000 ರೂಪಾಯಿ ಬೇಕಿತ್ತು. ಮುಂದಿನ ವಾರ ಕೊಡ್ತೀನಿ" ಅಂದಾಗ ಸರಿ ಅಂತ ಕೊಟ್ಟೆ.ಯಾಕೆ ಅಂತಾ ಕೇಳಿದ್ದಕ್ಕೆ ಶಿವಮೊಗ್ಗಕ್ಕೆ ಹೋಗ್ತಾ ಇದ್ದೀನಿ, ಉಳಿದಿದ್ದನ್ನು ಬಂದು ಹೇಳ್ತಿನಿ ಅಂದ್ಲು. ಸರಿ ಅಂತಾ ದುಡ್ಡು ಕೊಟ್ಟು , ದುಡ್ಡಿನ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ. ಹೋಗ್ಬಿಟ್ಟು ಬಾ ಅಂದೆ.

ಹಾಗೆ ಹೋದ "ಶಾರಿ" ಮರಳಿ ಬಂದದ್ದು ಹೀಗೆ. ಆಸ್ಫತ್ರೆಗೆ ಹೋಗಿ ಅವಳನ್ನೊಮ್ಮೆ ಕೊನೆಯ ಬಾರಿ ನೋಡಬೇಕು ಅಂತಾ ಹೋದಾಗ ಅವಳ ತಂದೆ ಆಡಿದ ಮಾತು ನನಗೆ ಇನ್ನೂ ಶಾಕ್ ನೀಡಿತು. "ಇವಳು ನನ್ನ ಮಗಳಲ್ಲ, ಬೇಡ ಬೇಡ ಅಂತಾ ಎಷ್ಟೇ ಹೇಳಿದ್ರೂ ಹಟ ಮಾಡಿಕೊಂಡು ಬಂದು ಕಾಲೇಜಿಗೆ ಸೇರಿದ್ಲು. ಅವನ ಜೊತೆಗೆ 2 ದಿನ ಶಿವಮೊಗ್ಗದಲ್ಲೂ ಇದ್ದು ಬಂದಿದ್ದಾಳೆ. ನನಗೆ ಮಗಳೇ ಇರಲಿಲ್ಲ." ಎಂದು ಅವಳ ಕುರಿತು ಮಾತನಾಡಿ ಹೊರಟು ಹೋದರು. ಅವಳ ತಾಯಿ ಅಳುತ್ತಾ ನಿಂತಿದ್ದರು.

ಅಷ್ಟರಲ್ಲಾಗಲೇ ನಮ್ಮ ಕಾಲೇಜಿನ ಎಲ್ಲರ ಬಾಯಿಯಲ್ಲೂ ಅವಳ ಚಾರಿತ್ರ್ಯದ ಬಗ್ಗೆ ಕಥೆ ಸೃಷ್ಟಿಯಾಗಿ ರೆಕ್ಕೆ-ಪುಕ್ಕ ಬೆಳೆದು ಎಲ್ಲೆಡೆ ಹಬ್ಬಿತ್ತು.

ಅವಳು 'ಟಾಪರ್' ಆದಾಗ ಹೊಗಳಿದ್ದ ಶಿಕ್ಷಕರೂ ಸಹ "ಅವಳು ಡ್ರೆಸ್ ಕೋಡ್ ಫಾಲೋ ಮಾಡದೆ ಇರುವಾಗಲೇ ಅವಳು ಹೀಗೆ ಅಂತಾ ಅಂದುಕೊಂಡಿದ್ದೆ. ಆದರೆ ಇವಾಗ ಗೊತ್ತಾಯ್ತು ನೋಡಿ" ಅಂತಾ ಹೇಳ್ತಾ ಇದ್ರು.

ಇನ್ನು ಕೆಲವರು "ಪಾಪ, ಆ ಹುಡುಗಿ ಚೆನ್ನಾಗಿ ಓದ್ತಾ ಇತ್ತು,ಯಾಕೆ ಹೀಗಾಯ್ತು" ಅಂದ್ರು.

ಅವಳ ಜೊತೆಯಲ್ಲಿದ್ದ ಹುಡುಗ ಎಲ್ಲೋ  ನಾಪತ್ತೆಯಾಗಿದ್ದ.ಯಾರವನು?

ಅವಳು ಶಿವಮೊಗ್ಗಕ್ಕೆ ಹೋಗಿದ್ದು ಯಾಕೆ ಅಂತಾ ನನಗೂ ಗೊತ್ತಿರಲಿಲ್ಲ. ಅವನಿಗೋಸ್ಕರ ನನ್ನ ಪ್ರೀತಿಯನ್ನು ನಿರಾಕರಿಸಿದಳಾ ಅನ್ನೋ ಡೌಟ್ ಕೂಡ ಬಂತು. ನಾನೇನೂ ಮಾತನಾಡದೆ ಸುಮ್ಮನಾದೆ. ಹೀಗೆ 2 ದಿನ ಕಳೆದ ನಂತರ ನಡೆದದ್ದೇ ಬೇರೆ. ಕಾಲೇಜಿಗೆ ಒಂದು ಮೇಲ್ ಬಂತು.ಅದರ ಒಕ್ಕಣೆ ಹೀಗಿತ್ತು. "ಶಿವಮೊಗ್ಗದಲ್ಲಿ ನಡೆದ ಅಂತಾರಾಷ್ಟ್ರೀಯ ಕಾನ್ಫರೆನ್ಸ್ ನಲ್ಲಿ ನಿಮ್ಮ ಕಾಲೇಜಿನ ಶಾರ್ವರಿ ಮಂಡಿಸಿದ್ಧ ಪ್ರಾಜೆಕ್ಟ್ ಐಡಿಯಾ ಮುಂದಿನ ಹಂತಕ್ಕೆ ಆಯ್ಕೆಯಾಗಿದೆ."

ಅಂದು ಅವಳ ಜೊತೆಯಲ್ಲಿದ್ದ ಆ ಹುಡುಗನೂ ಕಾಲೇಜಿಗೆ ಬಂದ. ಆತ ಹೇಳಿದ್ದು ಹೀಗೆ ಆತ...

ಆಕೆಯ ಅತ್ತೆಯ ಮಗ. ಅವಳ ತಂದೆಗೂ, ಇವನ ತಾಯಿಗೂ ಕೆಲ ತಿಂಗಳ ಹಿಂದೆ ಜಗಳವಾಗಿ ಬೇರೆಯಾಗಿದ್ದರು. ಚಿಕ್ಕಂದಿನಿಂದ ಒಟ್ಟಿಗೆ ಬೆಳೆದ ಇಬ್ಬರೂ ನಂತರವೂ ಮನೆಯಲ್ಲಿ ಗೊತ್ತಾಗದಂತೆ ಸಂಪರ್ಕದಲ್ಲಿದ್ದರು. ಶಿವಮೊಗ್ಗದಲ್ಲಿ ನಡೆಯುತ್ತಿದ್ಧ ಅಂತರಾಷ್ಟ್ರೀಯ ಕಾನ್ಪರೆನ್ಸ್ ನ ಬಗ್ಗೆ ಈತನಿಗೆ ತಿಳಿದಾಗ , ಶಾರ್ವರಿಯನ್ನು ಹೋಗಲು ತಿಳಿಸಿದ. ಆದರೆ ಆಕೆ ಶಿವಮೊಗ್ಗದಲ್ಲಿ ನನಗೆ ಯಾರೂ ಪರಿಚಯವಿಲ್ಲ, ಹಣ ಕೂಡ ಇಲ್ಲವೆಂದಾಗ, ನಾನು "ನಿನ್ನನ್ನು ನಾನು ಶಿವಮೊಗ್ಗಕ್ಕೆ ಕರೆದುಕೊಂಡು ಹೋಗುತ್ತೇನೆ. ಆದರೆ ಹಣ ಹೊಂದಿಸಿಕೊ" ಎಂದು ಹೇಳಿದೆ. ಅವಳು ಅವಳ ಮನೆಯಲ್ಲಿ ಹಣ ಕೇಳಿದಾಗ ಅವಳ ತಂದೆ "ಅದೆಲ್ಲ ಏನೂ ಬೇಡ, ಸಂಪ್ರದಾಯಸ್ಥ ಕುಟುಂಬದಿಂದ ಬಂದಿದ್ದರೂ ನಿನ್ನ ಜೀವನದ ರೀತಿಯೇ ಬದಲಾಗಿದೆ. ಓದು ವಿನಯವನ್ನು ಕಲಿಸಬೇಕೋ ಹೊರತು ಸ್ವೇಚ್ಛೆಯನ್ನಲ್ಲ. ನೀನು ಓದುವುದು ನನಗೆ ಇಷ್ಟವಿಲ್ಲದಿದ್ದರೂ ನಿನ್ನನ್ನು ಓದಿಸುತ್ತಿರುವುದೇ ಹೆಚ್ಚು, ನೀನು ಎಲ್ಲಿಗೂ ಹೋಗಕೂಡದು" ಎಂದು ಖಡಾಖಂಡಿತವಾಗಿ ಹೇಳಿಬಿಟ್ಟರು. ನಂತರ ಅವಳು ಅವಳ ಗೆಳೆಯನ ಹತ್ತಿರ ಹಣ ತೆಗೆದುಕೊಂಡು ಬಂದಳು. ನಾನೂ ಸಹ ಮನೆಯಲ್ಲಿ ಸುಳ್ಳು ಹೇಳಿ ಗೆಳೆಯರ ಜೊತೆಗೆ ಟ್ರಿಪ್ ಹೊರಟಿದ್ದೇನೆಂದು ಹೇಳಿ ಬೈಕ್ ತೆಗೆದುಕೊಂಡು ಬಂದೆ. ಶಿವಮೊಗ್ಗದಿಂದ ಬರುವಾಗ ಈ ಅಪಘಾತ ನಡೆಯಿತು. ಮತ್ತಷ್ಟು ರಾದ್ದಾಂತವಾಗುವುದನ್ನು ತಡೆಯಲು ನನ್ನ ತಾಯಿ ನನ್ನನ್ನು ಆಸ್ಫತ್ರೆಯಿಂದ ಅವಳ ಮುಖವನ್ನೂ ನೋಡಲೂ ಬಿಡದೆ ಕರೆದುಕೊಂಡು ಹೋದರು. ಆದರೆ ಇಂದು ಅವಳ ಕುರಿತು ಹಬ್ಬಿರುವ ಕಥೆಯನ್ನು ಕೇಳಲು ಸಾಧ್ಯವಾಗದೆ ನಾನೇ ಬಂದಿದ್ದೇನೆ" ಎಂದು ಹೇಳಿದ.

"ಹುಡುಗಿಯರ ಡ್ರೆಸ್ ಕೋಡ್ ಅವರ ಚಾರಿತ್ರ್ಯದ ಮೇಲೆ ಪರಿಣಾಮ ಬೀರುವುದು ಎನ್ನುವುದಾದರೆ, ಸೀರೆ ಉಟ್ಟವರು ಮಾತ್ರ ವಿನಯವಂತರು. ಜೀನ್ಸ್, ಹೈಹೀಲ್ಡ್, ಫ್ರೀ ಹೇರ್ ಬಿಟ್ಟವರು ಸ್ವೇಚ್ಛಾಚಾರಿಗಳು ಎಂದರ್ಥವೇ?"  

 

"ಕ್ಲಾಸಿಗೆ 'ಟಾಪರ್' ಆದಾಗ ಅವಳ ಡ್ರೆಸ್ ಕೋಡ್ ಶಿಕ್ಷಕರಿಗೆ ಕಾಣಲಿಲ್ಲವೇ?"

 

"ಒಂದು ಹುಡುಗ-ಹುಡುಗಿ ಒಟ್ಟಿಗಿದ್ದರೆ ,ಕಟ್ಟು ಕಥೆಗಳು ಸೃಷ್ಟಿಯಾಗುತ್ತವಲ್ಲಾ, ಆ ಜಾಗದಲ್ಲಿ ನಿಮ್ಮ ಮನೆಯ ಹೆಣ್ಣು ಮಗಳಿದಿದ್ದರೆ ನೀವು ಹಾಗೆಯೇ ಮಾತನಾಡುತ್ತಿದ್ದಿರಾ?"

ಎಂಬ ಅವನ ಪ್ರಶ್ನೆಗೆ ಎಲ್ಲರೂ ಮೌನ.

 

ನಿಧಾನವಾಗಿ ನಾನು ಯೋಚಿಸಿದೆ. ಶಾರ್ವರಿಯ ಗುಣವೆಂತಹದ್ದೆಂದು ಅವಳು ನನ್ನ ಪ್ರೀತಿಯನ್ನು ನಿರಾಕರಿಸಿದಾಗಲೇ ಕಂಡುಕೊಂಡೆ. ಆದರೆ ನಾನೇಕೆ ಸತ್ಯವನ್ನು ಕಂಡುಹಿಡಿಯಲು ಪ್ರಯತ್ನಿಸಲಿಲ್ಲ? ಅವಳ ತಂದೆ ಅವಳ ಕುರಿತು ಆಡಿದ ಮಾತು ನನ್ನನ್ನೂ ಎಲ್ಲರಂತೆ ಭ್ರಮೆಗೊಳಪಡಿಸಿತೇ? ಅಥವಾ ಆ ಹುಡುಗನನ್ನು ನೋಡಿ ನಾನು ಎಲ್ಲರಂತೆ ಅಪಾರ್ಥ ಮಾಡಿಕೊಂಡೆನೇ? ಪ್ರತ್ಯಕ್ಷ ಕಂಡರೂ ಪರಾಮರ್ಶಿಸಿ ನೋಡಲಿಲ್ಲವೇಕೆ?"

 

ಸತ್ತವರ ಕುರಿತು ಏನು ಆಡಿದರೂ ಅವರು ಬಂದು ನಿಜ ಹೇಳುವುದಿಲ್ಲ ಎಂಬ ಧೈರ್ಯ ನಮ್ಮ ಸುತ್ತಮುತ್ತಲಿನ ಗಾಳಿಸುದ್ದಿಯ ಹಬ್ಬುವಿಕೆಗೆ ಕಾರಣವೇ?

ಇಲ್ಲಿ ಎಲ್ಲರೂ ಒಂದರ್ಥದಲ್ಲಿ ತಪ್ಪಿತಸ್ಥರೆ...

ಪ್ರತ್ಯಕ್ಷ ಕಂಡರೂ,ಕಾಣದಿದ್ದರೂ ಯಾರೂ ಪ್ರಮಾಣಿಸುವ ಗೋಜಿಗೇ ಹೋಗಲಿಲ್ಲ. ಇಂದು ಆತ ಬಂದು ಇದ್ಧ ಸತ್ಯವನ್ನು ಹೇಳದಿದ್ದರೆ...? ಆಕೆಯ ಚಾರಿತ್ರ್ಯಕ್ಕಂಟಿದ ಮಸಿ ಹೋಗುತ್ತಲೇ ಇರಲಿಲ್ಲ.

 ಶಾರ್ವರಿ ಎದುರು ಬಂದು ಅಣಕಿಸಿ ಹೇಳಿದಂತಾಗುತ್ತಿದೆ. "ಇನ್ನಾದರೂ,ಪ್ರತ್ಯಕ್ಷ ಕಂಡರೂ ಪರಾಮರ್ಶಿಸಿ,ಪ್ರಮಾಣಿಸಿ ನೋಡು."

-ವಿಭಾ ವಿಶ್ವನಾಥ್

ಗುರುವಾರ, ಮಾರ್ಚ್ 5, 2020