ಗುರುವಾರ, ಜನವರಿ 30, 2020

ದೃಷ್ಟಿ

ಪುಟ್ಟ ಇಂದು ತರಗತಿಯಲ್ಲಿ ದೃಷ್ಟಿಯನ್ನು ಬಾಯಿಗೆ ಬಂದಂತೆ ಬೈಯ್ಯುತ್ತಿದ್ದಾಗ ತರಗತಿಯ ಶಿಕ್ಷಕರು ಒಳಗೆ ಬಂದು ಪುಟ್ಟನಿಗೆ ಏಕೆಂದು ಕೇಳಿದರು. ಅದಕ್ಕೆ ಅವನು "ಅವಳಿಗೆ ಕಣ್ಣು ಕಾಣಿಸದಿದ್ದರೆ, ಸುಮ್ಮನೆ ಮನೆಯಲ್ಲಿರಬೇಕು. ಅದನ್ನು ಬಿಟ್ಟು ಶಾಲೆಗೆ ಬಂದು ನಮಗೆ ತೊಂದರೆ ಕೊಡುವುದೇತಕೆ?" ಎಂದ.

ಅದಕ್ಕೆ ಶಿಕ್ಷಕರು "ಕಣ್ಣು ಕಾಣಿಸದಿದ್ದವರು ಶಾಲೆಗೆ ಬರಬಾರದೆಂದು ನಿನ್ನ ಅಭಿಪ್ರಾಯವೇ? ನಿಮ್ಮೆಲ್ಲರಿಗಿಂತಲೂ ಆಕೆಯೇ ಬುದ್ಧಿವಂತೆ, ಒಮ್ಮೆ ಹೇಳಿದರೆ ಗ್ರಹಿಸುತ್ತಾಳೆ.
ಅದೆಲ್ಲಾ ಸರಿ, ನೀನೇಕೆ ಅವಳನ್ನು ಬೈಯ್ಯುತ್ತಿದ್ದೀಯೇ? ನಿನಗೇನು ತೊಂದರೆಯಾಯಿತು? " ಎಂದರು.

"ಇವತ್ತು ನನ್ನ ಹುಟ್ಟಿದ ಹಬ್ಬ ಎಂದು ಹಾಕಿಕೊಂಡು ಬಂದಿದ್ದ ಹೊಸಾ ಬಿಳಿ ಶರ್ಟನ್ನು ತನ್ನ ಬೆವರು ತುಂಬಿದ ಕೈಗಳಿಂದ ಮುಟ್ಟಿ ಹಾಳು ಮಾಡಿದ್ದಾಳೆ. ಕೋಪ ಬರುವುದಿಲ್ಲವೇ?"ಎಂದ.

ಅದಕ್ಕೆ ದೃಷ್ಟಿ "ಸರ್ ನನಗೆ ಗೊತ್ತಾಗಲಿಲ್ಲ. ಅವನ ಹುಟ್ಟುಹಬ್ಬದ ದಿನ ಅವನು ಹೇಗೆ ಕಾಣುತ್ತಿದ್ದಾನೆ ಎಂದು ನೋಡಲು ಆಸೆಯಾಯಿತು, ಅದಕ್ಕೆ ಹಾಗೆ ಮಾಡಿದೆ" ಎನ್ನುತ್ತಾ ಅಳತೊಡಗಿದಳು.

ಅಷ್ಟರಲ್ಲಿ ಪುಟ್ಟ ಮತ್ತೆ "ಮಾಡುವುದನ್ನೆಲ್ಲಾ ಮಾಡಿ, ಅಳುವುದು ಬೇರೆ" ಎಂದು ಬೈದು ಅಲ್ಲಿಂದ ಹೊರಟ.

ಶಿಕ್ಷಕರಿಗೆ ಮಕ್ಕಳಿಗೆ ಬೈದು ಹೇಳಿ ಅವರ ತಪ್ಪನ್ನು ತಿದ್ದುವುದಕ್ಕಿಂತ ಅವರಿಗೆ ಅದರ ಅರಿವು ಮೂಡಿಸಬೇಕು ಎಂದುಕೊಂಡು, ಎಲ್ಲರನ್ನೂ ಕರೆದು "ಇಂದು ನಾವು ಒಂದು ಆಟ ಆಡೋಣ" ಎಂದರು. ಆಟ ಎಂದದ್ದಕ್ಕೆ ಎಲ್ಲರಿಗೂ ಹಿಗ್ಗು. ಎಲ್ಲರಿಗೂ ಹಿಗ್ಗು ಜೊತೆಗೆ ಯಾವ ಆಟ ಎಂಬ ಕುತೂಹಲ. "ಇಂದು ಪುಟ್ಟನ ಹುಟ್ಟುಹಬ್ಬವಾದುದರಿಂದ ಅವನೇ ಇಂದಿನ ಹೀರೋ, ಅವನಿಂದಲೇ ಶುರು ಮಾಡೋಣ" ಎನ್ನುತ್ತಾ ಆಟದ ನಿಯಮಗಳನ್ನು ವಿವರಿಸಿದರು."ಈಗ ಅವನ ಕಣ್ಣಿಗೆ ಬಟ್ಟೆ ಕಟ್ಟುತ್ತೇನೆ, ಅವನು ಎಲ್ಲರನ್ನೂ ಅವತರ್ ಧ್ವನಿ ಮತ್ತು ಸ್ಪರ್ಶದಿಂದಲೇ ಕಂಡುಹಿಡಿಯಬೇಕು" ಎಂದರು.

ಸರಿ, ಇದ್ಯಾವ ಮಹಾ ಆಟ ಎಂದು ಉಢಾಫೆಯಿಂದಲೇ ಶುರು ಮಾಡಿದ ಅವನಿಗೆ 2 ನಿಮಿಷದಲ್ಲೇ ಅದರ ಕಷ್ಟ ಅರಿವಾಯಿತು. ನಂತರ ದೃಷ್ಟಿಗೆ ಕ್ಷಮೆ ಕೇಳಿ, ಶಿಕ್ಷಕರಿಗೆ, "ಅಂಧರಿಗೆ ಮತ್ತೆ ನೋಡುವಂತೆ ಮಾಡುವುದು ಹೇಗೆ?" ಎಂದು ಕೇಳಿದ.

"ನಾವು ಸತ್ತ ನಂತರ ನಮ್ಮ ಕಣ್ಣುಗಳನ್ನು ದಾನ ಮಾಡಿದರೆ, ಅವರನ್ನು ಮತ್ತೆ ನೋಡುವಂತೆ ಮಾಡಬಹುದು" ಎಂದರು. ಅದಕ್ಕೆ ಪುಟ್ಟ "ನಾನೂ ಸಹ ಹಾಗೇ ಮಾಡುತ್ತೇನೆ. ಅಲ್ಲದೇ ಮನೆಯಲ್ಲಿಯೂ ಹೇಳುತ್ತೇನೆ. ಜೊತೆಗೆ ಇನ್ನು ದೃಷ್ಟಿಯ ದೃಷ್ಟಿಯಾಗಿ ನಾನಿರುತ್ತೇನೆ." ಎಂದ ಪುಟ್ಟ. ಈ ಪರಿವರ್ತನೆ ಮತ್ತು ದೃಷ್ಟಿಕೋನ ಎಲ್ಲರಲ್ಲೂ ಸಂತಸ ತಂದಿತು.

~ವಿಭಾ ವಿಶ್ವನಾಥ್

ಭಾನುವಾರ, ಜನವರಿ 26, 2020

ಶುಭ ಮುಂಜಾನೆ


ಅರಶಿನ-ಕುಂಕುಮಗಳು ಮಿಳಿತವಾಗಿ
ಮನದಲ್ಲಿಯೂ ಆಗಸದಂತೆಯೇ
ನವಿರಾದ ರಂಗಿನೋಕುಳಿ ಎದ್ದು
ಸಲ್ಲುತಿಹುದು ಭಾವಪೂರ್ಣ ನಮನ

ಕೋಟೆಯ ಪ್ರತಿ ಅಂಗುಲದಲ್ಲಿಯೂ
ಪ್ರತಿಫಲಿಸಿದ ಹೊಂಗಿರಣದಿಂದ
ಹೊಳೆಯುತಿರುವ ಶಿಲೆಗಳೆಲ್ಲವೂ
ಮಾರ್ದನಿಸುತಿದೆ ಸುಪ್ರಭಾತವನು

ಆಗಸದಂಚಿನಲಿ ಬೆಳ್ಳಂಬೆಳಿಗ್ಗೆಯೇ
ಉದಯಿಸುವ ನೇಸರನಾಗಮನಕೆ
ಕಾಯುತಿರುವ ಬಾನಾಡಿಗಳೆಲ್ಲವೂ
ಉಲಿಯುತಿವೆ ಶುಭೋದಯವೆಂದು

ದಿವಿನಾದ ರಂಗಿನಾಟದಿ ಮಿಂದು
ಮಂಜಿನಿಂದಾವೃತವಾದ ಕಂದರವು
ಹಸಿರ ಮೈವೆದ್ದು ತಯಾರಾಗಿದೆ
ಬೆಳ್ಳಂಬೆಳಗಿನ ಸುಸ್ವಾಗತಕೆ

ಭೂಮಿ ಭಾನುಗಳೆರಡರ ಮಿಲನದ
ದಿಗಂತದಂಚಿನಲಿ ನಿಂತ ಸೂರ್ಯ
ಮುಗುಳ್ನಗುತ ಮಾರ್ನುಡಿಯುತಿಹನು
ಶುಭದಿನದ ಶುಭಾಷಯಗಳು

~ವಿಭಾ ವಿಶ್ವನಾಥ್

ಗುರುವಾರ, ಜನವರಿ 23, 2020

ನಯನ ಮನೋಹರಿ


ಶಿಲ್ಪ ಸೊಬಗಿನ ಬೀಡಿನೊಳಗೂ
ತನ್ನ ಸೊಬಗನು ಚೆಲ್ಲುತಿರುವ
ನೀ ಧರೆಗಿಳಿದ ಅಪ್ಸರೆಯೋ?
ಜೀವ ತಳೆದು ನಿಂತ ಶಿಲ್ಪವೋ?

ದೀಪವನಿಡಿದ ದೀಪಧಾರಿಣಿ
ಚೆಲ್ಲುತಿರುವ ಬೆಳಕು ಇಮ್ಮಡಿಸಿ
ಪಸರಿಸುತಿದೆ ಅವಳಂದವನು
ಕತ್ತಲೂ ನಾಚಿ  ಓಡುವಂತೆ..

ಕಲ್ಯಾಣಿಯಲಿ ಪ್ರತಿಫಲಿಸಿರುವ
ಸೊಗಸುಗಾತಿಯ ಬಿಂಬ ಕಂಡು
ಅರಳಿರುವ ನೈದಿಲೆಯೂ ನಾಚಿ
ಸ್ವಾಗತಿಸುತಿದೆ ನನ್ನ ಸ್ಪರ್ಶಿಸೆಂದು

ಕಲ್ಲುಕಂಬಕೆ ಆತು ನಿಂತಿರುವ
ಪ್ರತಿ ಶಿಲ್ಪಕೂ ಕಣ್ಣುಕುಕ್ಕುತಲಿದೆ
ನೀ ಧರಿಸಿದ ಸ್ವರ್ಣಾಭರಣ
ಜೊತೆಗೆ ಪತ್ತಲದ ಚಿತ್ತಾರವೂ

ಶಿಲಾಬಾಲಿಕೆಯರೆಲ್ಲರ ಚೆಲುವಿಂದ
ಎರಕ ಹೊಯ್ದು ತಯಾರಾದಂತೆ
ಜೀವ ತಳೆದು ಕಣ್ಮನ ಸೆಳೆವ ನೀನು
ನಿಜಕ್ಕೂ ನಯನ ಮನೋಹರಿಯೇ..!

~ವಿಭಾ ವಿಶ್ವನಾಥ್

ಭಾನುವಾರ, ಜನವರಿ 19, 2020

ಜೋಡೆತ್ತಿನ ಸವಾರಿಜೋಡೆತ್ತುಗಳು ಜೊತೆಯಾಗಿ
ಸವೆಸುತಿವೆ ಮುಂದಿನ ಮಾರ್ಗವ
ಗೊತ್ತು-ಗುರಿಯಿಲ್ಲದ ಪಯಣಕೆ
ಮಾರ್ಗದರ್ಶಿ ಮೇಲಿರುವಾತ

ಹಚ್ಚ-ಹಸುರಿನ ಪ್ರಕೃತಿ
ಸುತ್ತ-ಮುತ್ತಲ ಸೊಬಗ ಸವಿಯದೆ
ತನ್ನ ಪಾಡಿಗೆ ತಾವು ಎಂಬಂತೆ
ನಿರ್ಲಿಪ್ತರಂತೆ ಹೆಜ್ಜೆ ಹಾಕುತಿವೆ

ಚಾವಟಿಯೇಟಿಗೆ ಬೇಸರಿಸದೆ
ಮಣಭಾರವಿದ್ದರೂ ಕುಗ್ಗದೆ
ನಿನಗೆ-ನಾನು, ನನಗೆ-ನೀನೆಂದು
ಸಮಭಾವದಿ ಜೊತೆಗೇ ಸಾಗುತಿವೆ

ಜನರ ನೋಟದ ಅರಿವಿಲ್ಲದೇ
ನೀರೆಯರ ಹೊತ್ತ ಬಿಂಕವಿಲ್ಲದೆ
ಸಕಲವೂ ನಮ್ಮಿಂದಲೇ ಎನ್ನದೆ
ಬೀಗದೇ-ಬಾಗದೇ ಚಲಿಸುತಿವೆ

ಮಣ್ಣಿನ ಹಾದಿ-ಬೀದಿಯಲಿ
ಸವಾರನ ಕೊರಳ ನಾದಕೆ
ಕೊರಳ ಘಂಟೆಯ ಕಿಂಕಿಣಿಸುತ
ಹೆಜ್ಜೆ-ಗೆಜ್ಜೆಗಳ ಸವಾರಿ ಸಾಗುತಿದೆ

~ವಿಭಾ ವಿಶ್ವನಾಥ್

ಗುರುವಾರ, ಜನವರಿ 16, 2020

ಶಾಲಿನಿಯ ಆಹಾರ

ಶಾಲಿನಿ ತಟ್ಟೆಯಲ್ಲಿದ್ದ ತಿಂಡಿಯಲ್ಲಿ ಸ್ವಲ್ಪ ಭಾಗವನ್ನೂ ತಿನ್ನದೆ ಹಾಗೇ ಬಿಟ್ಟು ಶಾಲೆಗೆ ಹೊರಡುತ್ತಿರುವಾಗ ಅಪ್ಪ ಕೇಳಿದರು "ಶಾಲಿನಿ ತಿಂಡಿ ಯಾಕೆ ತಿಂದಿಲ್ಲ ನೀನು?", ಆಗ ಶಾಲಿನಿ "ಪಪ್ಪಾ ನನಗೆ ಆ ಪಲ್ಯ ಇಷ್ಟ ಇಲ್ಲ, ಜೊತೆಗೆ ಅಮ್ಮ ರಾಗಿ ರೊಟ್ಟಿ ಮಾಡಿದ್ದಾರೆ. ನನಗೆ ರಾಗಿ ರೊಟ್ಟಿನೂ ಇಷ್ಟ ಇಲ್ಲ, ಅದಕ್ಕೆ ನಾನು ತಿಂಡಿ ತಿಂದಿಲ್ಲ" ಎಂದು ಹೇಳಿದಳು. ಅಷ್ಟರಲ್ಲಿ ಅಜ್ಜಿ ಬಂದು "ಹೋಗ್ಲಿ ಬಿಡೋ, ಬೇರೆ ತಿಂಡಿ ಮಾಡಿಕೊಟ್ಟರೆ ಆಯ್ತು." ಅಂದು ಶಾಲಿನಿಯನ್ನು ಅಪ್ಪನ ಕೈಯಿಂದ ಬಚಾವ್ ಮಾಡಿದರು. 

"ಯಾವ ತಿಂಡಿ ಬೇಕು ನಿನಗೆ?" ಅಂತಾ ಅಜ್ಜಿ ಕೇಳಿದ್ದಕ್ಕೆ "ನನಗೆ ಮ್ಯಾಗಿ ಬೇಕು. ಮ್ಯಾಗಿ ಆದರೆ ಚೆನ್ನಾಗಿರುತ್ತೆ. ಕೈಯಲ್ಲಿ ತಿನ್ನೋ ಆಗಿಲ್ಲ ಜೊತೆಗೆ ಗಟ್ಟಿಯಾಗಿಯೂ ಇರಲ್ಲ" ಅಂತಾ ಹೇಳಿದಳು ಶಾಲಿನಿ. ಆಗಿನ ಅವಳ ಸಮಾಧಾನಕ್ಕೆ ಮ್ಯಾಗಿ ಮಾಡಿ ತಿನ್ನಿಸಿ ಕಳುಹಿಸಿದರು.

ಸಂಜೆ ಮನೆಗೆ ಬಂದ ಶಾಲಿನಿಯನ್ನು ಅಜ್ಜಿ ಕೇಳಿದರು. "ಈ ಭಾನುವಾರ ಊರಲ್ಲಿರೋ ಮಾವನ ಮನೆಗೆ ಹೋಗಿ ಬರೋಣ. ಬರ್ತೀಯಾ?" ಅಂತಾ ಕೇಳಿದರು. "ಆಯ್ತು ಅಜ್ಜಿ ಬರುತ್ತೇನೆ" ಎಂದು ಒಪ್ಪಿಕೊಂಡಳು ಶಾಲಿನಿ. 

ಅವತ್ತು ರಾತ್ರಿ ಊಟಕ್ಕೆ ಕೂತಾಗ ಶಾಲಿನಿಯದ್ದು ಮತ್ತೆ ರಗಳೆ. "ನಂಗೆ ಮುದ್ದೆ ಬೇಡ, ಬರೀ ಅನ್ನ ಸಾಕು" ಅಂತಾ. ಹಾಕಿಕೊಟ್ಟ ಅನ್ನದಲ್ಲೂ ಅರ್ಧ ಅನ್ನವನ್ನು ಹಾಗೇ ಬಿಟ್ಟು 'ರೂಬಿ'ಗೆ ಹಾಕಮ್ಮ, ನನಗೆ ಸಾಕು ಅಂತಾ ಹೇಳಿ ಊಟವನ್ನು ಅರ್ಧಕ್ಕೇ ಬಿಟ್ಟು ಎದ್ದು ಹೋದಳು. ಶಾಲಿನಿಯದ್ದು ದಿನವೂ ಇದೇ ಕಥೆ. ಊಟ, ತಿಂಡಿಯನ್ನು ಸರಿಯಾಗಿ ತಿನ್ನದೇ ಇರುವುದು. ರಾಗಿ ರೊಟ್ಟಿ, ರಾಗಿ ಮುದ್ದೆ ತಿನ್ನದೆ ಬರೀ ಜಂಕ್ ಫುಡ್ ಅನ್ನೇ ತಿನ್ನುವುದು. ಯಾರು ಎಷ್ಟೇ ಬುದ್ದಿಮಾತು ಹೇಳಿದರೂ ಅವಳು ಕೇಳುತ್ತಲೇ ಇರಲಿಲ್ಲ. ಚಿಕ್ಕ ಮಗು ಹಟ ಮಾಡಿತು ಅಂತಾ ಅವಳು ಕೇಳಿದ್ದನ್ನೆಲ್ಲಾ ಕೊಡಿಸುತ್ತಾ ಬಂದಿದ್ದಕ್ಕೆ ಇವತ್ತೂ ಸಹಾ ಅವಳು ಅದೇ ಅಭ್ಯಾಸವನ್ನು ಮುಂದುವರಿಸಿದ್ದಳು. ಅಪ್ಪ, ಅಮ್ಮ, ಅಜ್ಜಿ ಸೇರಿ ಇದನ್ನು ಹೇಗಾದರೂ ಸರಿ ಮಾಡಲೇಬೇಕು ಅಂತಾ ಉಪಾಯ ಮಾಡಿ ಶಾಲಿನಿಯನ್ನು ಊರಿಗೆ ಹೊರಡಿಸಿದ್ದರು.

ಭಾನುವಾರ ಅಜ್ಜಿ, ಮೊಮ್ಮಗಳು ಇಬ್ಬರೂ ಊರಿಗೆ ಹೊರಟರು. ಅವತ್ತು ಬೆಳಿಗ್ಗೆ ಬೇಗನೆ ಹೊರಟಿದ್ದರಿಂದ ಶಾಲಿನಿ ಬೆಳಿಗ್ಗೆ ಹಾಲನ್ನೂ ಸಹಾ ಕುಡಿದಿರಲಿಲ್ಲ. ಬೆಳಿಗ್ಗೆ ಬೇಗ ಎದ್ದಿದ್ದರಿಂದ ಅವಳಿಗೆ ಹೊಟ್ಟೆ ಬೇರೆ ಹಸಿಯುತ್ತಿತ್ತು. ಹಳ್ಳಿಯಲ್ಲಿನ ಅವಳ ಮಾವನ ಮನೆಗೆ ಬಂದಾಗ ತಿಂಡಿಯ ಸಮಯವಾಗಿತ್ತು. ಅತ್ತೆ ಬಿಸಿ ಬಿಸಿ ರಾಗಿರೊಟ್ಟಿ ಹಾಕುತ್ತಾ ಕೂತಿದ್ದರು. ಜೊತೆಗೆ ತರಕಾರಿ ಪಲ್ಯ. ಶಾಲಿನಿ ಎಂದಿನಂತೆ ಅಂದೂ ಕೂಡಾ ತಿಂಡಿ ಬೇಡವೆಂದು ಹಟ ಮಾಡುತ್ತಾ ಕುಳಿತಿದ್ದಳು . ಅದರೆ ಅವಳ ಹಟಕ್ಕೆ ಮಣಿದು ಜಂಕ್ ಫುಡ್ ಅಥವಾ ಫಾಸ್ಟ್ ಫುಡ್ ಕೊಡಲು ಅಲ್ಲಿ ಯಾರೂ ಇರಲಿಲ್ಲ. ಕೊನೆಗೆ ಹೊಟ್ಟೆ ಹಸಿವು ತಾಳಲು ಆಗದೆ ಅದನ್ನೇ ತಿಂದಳು. ಆಮೇಲೆ ಅಜ್ಜಿಯ ಜೊತೆಗೆ ಹೇಳಿದಳು "ನನಗೆ ಅವು ಇಷ್ಟಾನೇ ಆಗುತ್ತಿರಲಿಲ್ಲ, ಆದರೆ ಅವು ತುಂಬಾ ಚೆನ್ನಾಗಿವೆ. ಹೊಟ್ಟೆ ತುಂಬಾ ತಿಂದೆ" ಎಂದು ಹೇಳಿದಳು. ಅದಕ್ಕೆ ಅಜ್ಜಿ "ರಾಗಿಯಲ್ಲಿ ತುಂಬಾ ಶಕ್ತಿ ಇರುತ್ತದೆ, ರಾಗಿ ತಿಂದವನಿಗೆ ರೋಗ ಬರುವುದಿಲ್ಲ. ಅದನ್ನು ತಿಂದರೆ ನೀನು ಗಟ್ಟಿಯಾಗುತ್ತೀಯ. ಅಲ್ಲದೇ ತರಕಾರಿಗಳಲ್ಲಿ ವಿಟಮಿನ್, ಪ್ರೋಟೀನ್ ಎಲ್ಲವೂ ಇರುತ್ತದೆ. ಹಾಲಿನಲ್ಲಿ ಕ್ಯಾಲ್ಸಿಯಂ ಇರುತ್ತದೆ. ಹಣ್ಣುಗಳು, ಸೊಪ್ಪುಗಳು ಎಲ್ಲವೂ ಆರೋಗ್ಯಕ್ಕೆ ಒಳ್ಳೆಯದು. ಇನ್ನು ಮುಂದೆ ಇದನ್ನೆಲ್ಲಾ ತಿನ್ನಬೇಕು. ಜಂಕ್ ಫುಡ್ ಅನ್ನು ತಿನ್ನಬಾರದು. ಹೆಚ್ಚು ಚಾಕಲೇಟ್ ತಿಂದರೆ ಹಲ್ಲೆಲ್ಲಾ ಹುಳುಕಾಗುತ್ತದೆ. ಮ್ಯಾಗಿ, ಚಿಪ್ಸ್, ಕರಿದ ತಿಂಡಿಗಳಲ್ಲಿ ನಿನ್ನ ದೇಹಕ್ಕೆ ಬೇಕಾದ ಪೋಷಕಾಂಶಗಳು ಸಿಗುವುದಿಲ್ಲ" ಎಂದು ಹೇಳಿದರು. "ಸರಿ ಅಜ್ಜಿ, ನಾನು ಆಟ ಆಡಲು ಹೋಗಬೇಕು" ಅಂತಾ ಹೇಳಿ ಅಲ್ಲಿಂದ ಓಡಿದಳು.

ಸುತ್ತಮುತ್ತ ಇದ್ದ ನಿಂಗಿ, ಈರ, ಸುಮತಿ, ರಾಹುಲ್ ಎಲ್ಲರನ್ನೂ ಸೇರಿಸಿಕೊಂಡು ಆಟ ಆಡುತ್ತಾ ಇರುವಾಗ ಈರ ಇದ್ದಕ್ಕಿದ್ದಂತೆ ತಲೆ ಸುತ್ತಿ ಬಿದ್ದು ಬಿಟ್ಟ. ಶಾಲಿನಿಗೆ ಭಯವಾಗಿ ಮಾವನನ್ನು ಕರೆದಳು. ಈರನನ್ನು ಡಾಕ್ಟರ್ ಹತ್ತಿರ ಕರೆದುಕೊಂಡು ಹೋದಾಗ ಡಾಕ್ಟರ್ ಹೇಳಿದರು. "ಸರಿಯಾಗಿ ಊಟ, ತಿಂಡಿ ತಿನ್ನದೆ ಹೀಗಾಗಿದ್ದಾನೆ, ದೇಹಕ್ಕೆ ಸರಿಯಾದ ಪೋಷಕಾಂಶಗಳು ಸಿಗುತ್ತಿಲ್ಲ" ಎಂದು ಹೇಳಿ ಇಂಜೆಕ್ಷನ್ ಕೊಟ್ಟು, ಗ್ಲೂಕೋಸ್ ಹಾಕಿ, ಮಾತ್ರೆ,ಟಾನಿಕ್ ಎಲ್ಲವನ್ನೂ ಕೊಟ್ಟು ಕಳುಹಿಸಿದರು. ಶಾಲಿನಿ ಅಜ್ಜಿಯ ಹತ್ತಿರ ಎಲ್ಲವನ್ನೂ ಹೇಳಿ ಅಜ್ಜಿಗೆ "ನಾನೂ ಇನ್ನು ಊಟ, ತಿಂಡಿಯನ್ನು ಚೆನ್ನಾಗಿ ತಿನ್ನುತ್ತೇನೆ." ಎಂದು ಭಾಷೆ ನೀಡಿದಳು.

ಅವತ್ತಿನಿಂದ ಶಾಲಿನಿ ಯಾರ ಕೈಯಲ್ಲೂ ಹೇಳಿಸಿಕೊಳ್ಳದೆ ತಟ್ಟೆಯಲ್ಲಿ ಹಾಕಿಕೊಟ್ಟ ಊಟವನ್ನು ಚೂರೂ ಉಳಿಸದೆ ಖಾಲಿ ಮಾಡುತ್ತಾಳೆ. ಹಾಲು ಕುಡಿದು, ಹಣ್ಣು ತಿನ್ನುತ್ತಾಳೆ. ಜಂಕ್ ಫುಡ್ ತಿನ್ನುವುದಿಲ್ಲ. ಶಾಲಿನಿ ಬದಲಾದಳು. ನೀವೂ ಬದಲಾಗ್ತೀರಾ ಅಲ್ವಾ?

~ವಿಭಾ ವಿಶ್ವನಾಥ್

ಭಾನುವಾರ, ಜನವರಿ 12, 2020

ಪ್ರೀತಿಯೆಂದರೆ ಇದೇನೇ..

ಯಶೋಧೆಯ ಬಳಿ ಕುಳಿತ ರಾಧೆ ಯಶೋದೆಯ ಕಾಲನ್ನೊತ್ತುತ್ತಾ ಕೇಳುತ್ತಾಳೆ. "ಅಮ್ಮ, ನೀವು ನಿಜವಾಗಿಯೂ ಸುಖವಾಗಿರುವಿರಾ? ನಿಮ್ಮಲ್ಲಿ ಖುಷಿ ಇದೆಯಾ?". ಆಗ ಯಶೋದೆ ಹೇಳುತ್ತಾಳೆ "ನನ್ನ ಸುಖ ಸಂತೋಷಗಳೆಲ್ಲಾ ಇದ್ದದ್ದು ಕೃಷ್ಣನಲ್ಲಿ. ಕೃಷ್ಣನೇ ನನ್ನಿಂದ ದೂರಾದ ಮೇಲೆ ನನ್ನ ನೆಮ್ಮದಿ, ಶಾಂತಿ, ಸುಖ ಇವುಗಳೆಲ್ಲಾ ಎಲ್ಲಿವೆ? ನಿಜಕ್ಕೂ ನನ್ನ ಬದುಕು ಪ್ರೀತಿ ಇಲ್ಲದೆ ಬರಡಾಗಿದೆ." ಎಂದು ಹೇಳುತ್ತಾ ಯಶೋದೆ ರಾಧೆಗೆ ಮರು ಪ್ರಶ್ನಿಸುತ್ತಾಳೆ "ನೀನು ಕೃಷ್ಣನಿಲ್ಲದೆ, ಸುಖವಾಗಿ ಇರುವೆಯಾ?" ಇದಕ್ಕೆ ರಾಧೆ ಉತ್ತರಿಸುತ್ತಾಳೆ "ಕೃಷ್ಣ ಎಲ್ಲಿಗೆ ಹೋಗಿರುವನಮ್ಮಾ? ಇಲ್ಲೇ ಇದ್ದಾನಲ್ಲ. ನನ್ನ ಮಾಧವ ನನ್ನೊಳಗೇ ಇರುವನು. ಅವನು ಭೌತಿಕವಾಗಿ ಇಲ್ಲಿ ಪ್ರಸ್ತುತನಿಲ್ಲ ಅಷ್ಟೇ. ಅವನು ಎಂದೆಂದಿಗೂ ನನ್ನೊಳಗೆ ಸದಾ ಜೀವಂತವಾಗಿದ್ದಾನೆ."

ಯಶೋದೆಗೆ ಬೆರಗು. ರಾಧೆ ಮುಂದುವರಿಸುತ್ತಾಳೆ "ಪ್ರೀತಿ ಎಂದರೆ ಏನಮ್ಮ? ಪ್ರೀತಿಸುವವರಿಲ್ಲದೆ ಬದುಕಲೇ ಆಗುವುದಿಲ್ಲವೇ? ಈಗ ಕೆಲ ಹೊತ್ತಿಗೆ ಮುಂಚೆ ನೀವೇ ಹೇಳಿದಿರಿ.. ಕೃಷ್ಣನೇ ನನ್ನ ಪ್ರೀತಿ, ನೆಮ್ಮದಿ ಎಂದೆಲ್ಲಾ. ಕೃಷ್ಣನನ್ನು ನೀವು ಪ್ರೀತಿಸುತ್ತಾ ಇದ್ದಿರಿ. ಕೃಷ್ಣ ನಿಮ್ಮನ್ನು ಪ್ರೀತಿಸಿದರೂ, ಪ್ರೀತಿಸದಿದ್ದರೂ ನೀವು ಅವನನ್ನು ಇಷ್ಟ ಪಡುತ್ತಲೇ ಇದ್ದೀರಿ. ಇಷ್ಟ ಪಡುತ್ತಲೇ ಇರುತ್ತೀರಿ. ಪ್ರೀತಿ ಏನನ್ನೂ ಬಯಸುವುದಿಲ್ಲ. ನಿಸ್ವಾರ್ಥ ಪ್ರೀತಿಗೆ ಯಾರ ಅನುಕಂಪ, ಮರುಪ್ರೀತಿ ಯಾವುದೂ ಬೇಕಾಗಿಯೇ ಇಲ್ಲ. ಕೆಲವೊಮ್ಮೆ ನಾವು ಪ್ರೀತಿಸುವ ಭರದಲ್ಲಿ, ಯಾವುದೋ ಜಿದ್ದಿಗೆ ಬಿದ್ದಂತೆ ಒಬ್ಬರನ್ನು ಪ್ರೀತಿಸುತ್ತಲೇ ಹೋಗುತ್ತೇವೆ. ಆ ಭರದಲ್ಲಿ ನಮ್ಮ ಸುತ್ತಮುತ್ತಲಿನವರು ತೋರುತ್ತಿರುವ ಪ್ರೀತಿ ನಮಗೆ ಕಾಣಿಸುವುದೇ ಇಲ್ಲ. ನಿಮ್ಮ ಪತಿ ನಿಮ್ಮನ್ನು ಅಗಾಧವಾಗಿ ಪ್ರೀತಿಸುತ್ತಾರೆ. ನಂದಗೋಕುಲದ ನಿವಾಸಿಗಳೂ ನಿಮ್ಮನ್ನು ಇನ್ನಿಲ್ಲದಂತೆ ಪ್ರೀತಿಸುತ್ತಾರೆ. ಅಂತಹಾ ನಿರ್ಮಲವಾದ ಪ್ರೀತಿಯೇ ನಿಮ್ಮನ್ನು ಬದುಕಿಸಿಕೊಂಡಿರುವುದು. ಒಲವಿನಿಂದಲೇ ಅಲ್ಲವೇ ಈ ಪ್ರಕೃತಿ ಇರುವುದು. ಪ್ರೀತಿ ಎಂಬುದು ಎಂದಿಗೂ ಹೂವು-ದುಂಬಿಯಂತೆ ಇದ್ದರೇ ಚೆಂದವೆನಿಸುತ್ತದೆ. ಜನನ, ಕಾಯುವಿಕೆ, ಸಾರ್ಥಕತೆ ನಂತರ ಮರಣ. ರಾಗ-ದ್ವೇಷಗಳಿಲ್ಲದ ಪ್ರೀತಿಯ ಭಾವವೇ ಪುಳಕ ತರುವುದಲ್ಲವೇ? ಈಗ ಹೇಳಿ ಅಮ್ಮ, ನಿಮ್ಮ ಪ್ರೀತಿ ಬರೀ ಕೃಷ್ಣನಿಗೇ ಮೀಸಲಾಗಿರುವುದೇಕೆ?"

ಯಶೋದೆ ಹೇಳುತ್ತಾಳೆ "ವಯಸ್ಸಿನಲ್ಲಿ ನೀನು ನನಗಿಂತ ಕಿರಿಯಳಾಗಿರುವೆ ಹುಡುಗಿ ಆದರೆ ನಿನ್ನ ಅನುಭವ, ತರ್ಕದ ಎದುರು ನಾನೆಷ್ಟರವಳು ಹೇಳು? ನನ್ನ ಪ್ರೀತಿ ಕೃಷ್ಣನಿಗೆ ಮಾತ್ರ ಮೀಸಲಾಗಿಲ್ಲ. ಪ್ರೀತಿಯ ಬಹು ದೊಡ್ಡ ಪಾಲು ಅವನಿಗೆ ಅಷ್ಟೆ, ಪ್ರೀತಿ ಹಂಚಿದಷ್ಟೂ ಅನಂತ ಕಣೇ, ಕಡಿಮೆಯಾದರೆ ಅದು ಪ್ರೀತಿಯೇ ಅಲ್ಲ. ಪ್ರೀತಿಯ ಈ ವ್ಯಾಖ್ಯಾನವನ್ನು ಇಷ್ಟು ಚೆಂದವಾಗಿ ಹೇಳುತ್ತೀಯಲ್ಲ. ನಿನಗೆ ಅದು ಹೊಳೆದದ್ದಾದರೂ ಹೇಗೆ? ನಿನಗದನ್ನು ಹೇಳಿದವರಾದರೂ ಯಾರು?". ರಾಧೆ ಉತ್ತರಿಸುತ್ತಾಳೆ. "ಪ್ರೀತಿಯ ಪಾಠವನ್ನು ಹೇಳಿಕೊಟ್ಟೇ ಕಲಿಯಬೇಕೇನು? ಅನುಭವಕ್ಕಿಂತ ದೊಡ್ಡ ಗುರುವಾದರೂ ಎಲ್ಲಿ ದಕ್ಕಬೇಕು? ಹೇಳಿ. ಆದರೆ, ಅನುಭವದ ಅನುಭೂತಿಗೆ ನನ್ನನ್ನು ತಳ್ಳಿದವನು ಕೃಷ್ಣ ಎಂಬುದೂ ಸುಳ್ಳಲ್ಲ."

ಯಶೋದೆ ಕೇಳುತ್ತಾಳೆ. "ನಿನಗಿಂತ ಹಿರಿಯಳು ನಾನು, ನಿನಗಿಂತ ಕೃಷ್ಣನೊಡನೆ ಹೆಚ್ಚು ಸಮಯ ಕಳೆದಿರುವವಳು ನಾನು. ನನಗೆ ದೊರೆಯದ ಅನುಭೂತಿ ನಿನಗೆ ದೊರೆತದ್ದಾದರೂ ಹೇಗೆ?" ರಾಧೆ ಹೇಳುತ್ತಾಳೆ "ಪ್ರೀತಿ ದಕ್ಕಿದವರಿಗೆ ದಕ್ಕಿಸಿಕೊಂಡಷ್ಟೂ ದೊರೆಯುತ್ತದೆ. ನೀವು ಪ್ರೀತಿಯನ್ನು ನೀಡುವುದರಲ್ಲೇ ತಲ್ಲೀನರಾಗಿದ್ದಿರಿ. ನಾನು ಪ್ರೀತಿಯನ್ನು ಪಡೆದುಕೊಳ್ಳುವುದರಲ್ಲೇ ತಲ್ಲೀನಳಾಗಿದ್ದೆ. ನೀವು ಕೃಷ್ಣನಿಗೆ ಕಲಿಸುವ ಗುರುವಾಗಿದ್ದಿರಿ. ನಾನು ಅವನಿಂದ ಕಲಿಯುವ ಶಿಷ್ಯೆಯಾಗಿದ್ದೆ. ಗುರುವಿಗೆ ಕಲಿಸುವ ಶಿಷ್ಯ ಇರುವುದುಂಟೇ? ಕೃಷ್ಣನಿಂದ ಪ್ರೀತಿಯ ಅನುಭೂತಿ ದಕ್ಕಿರುವುದು ನನಗಾದರೂ.. ಕೃಷ್ಣನಿಗೆ ಪ್ರೀತಿಸುವುದನ್ನು ಕಲಿಸಿದ ಗುರು ನೀವೇ ಅಲ್ಲವೇ? ನಿರ್ಮಲ ಪ್ರೀತಿಯ ಸವಿಯುಣಿಸಲು ಪ್ರಥಮ ಪಾಠ ಮಾಡಿದವರು ನೀವೇ ಅಲ್ಲವೇ? ಹೆತ್ತ ಮಗನಲ್ಲದಿದ್ದರೂ, ಹೆತ್ತ ಮಗನಿಗಿಂತಲೂ ಹೆಚ್ಚು ಪ್ರೀತಿಸಿದಿರಿ. ನಿಷ್ಟೂರವಾದ ಸತ್ಯ ಕೂಡಾ ನಿಮ್ಮೆದುರು ತಲೆಬಾಗಿ ನಿಂತು ಸುಳ್ಳಿನ ಮುಖವಾಡ ಧರಿಸುವಂತೆ ಮಾಡಿದ್ದೀರಿ. ಯಾರು ತಾನೇ ಹೇಳಬಲ್ಲರು ನೀವು ಕೃಷ್ಣನ ಸಾಕುತಾಯಿ ಎಂದು..? ಪ್ರೀತಿಯ ಭಾವವಿರುವುದು ಭಾವಿಸುವ ಮನಸ್ಸಿನಲ್ಲಿ, ತೋರಿಸುವ ಮಮತೆಯಲ್ಲಿ, ನಿಷ್ಕಲ್ಮಶ ಅಂತಃಕರಣದಲ್ಲಿ. ನೀವು ತೋರ್ಪಡಿಸಿದ್ದು ಪ್ರೀತಿಯನ್ನು, ಬರೀ ಪ್ರೀತಿಯನ್ನು. ಆದರೆ ನೀವು ಅನುಭವಿಸುತ್ತಿರುವುದು ದುಃಖವನ್ನು, ವಿರಹವನ್ನು. ಪ್ರೀತಿ ಕೊಟ್ಟವರಿಗೆಲ್ಲಾ ಕೃಷ್ಣ ಯಾವ ರೂಪದಲ್ಲಾದರೂ ಒಳಿತು ಮಾಡುತ್ತಾನೆ ಎಂಬ ಮಾತಿಗೆ ನೀವೇ ಕಪ್ಪು ಚುಕ್ಕಿಯಾಗಲು ಹೊರಟಿರುವಿರಲ್ಲ ಅಮ್ಮ. ಇದು ಸರಿಯೇ?"

ಯಶೋದೆಯ ಆಲೋಚನಾ ಲಹರಿ ಮಗನ ಅಭ್ಯುದಯದತ್ತ ಹೊರಳಿತ್ತು. "ಪ್ರೀತಿ ಹಂಚಿದವರಿಗೆ, ಪ್ರೀತಿಯೇ ಪ್ರತ್ಯುತ್ತರವಾಗಿತ್ತು. ಅಂತಹಾ ಕೃಷ್ಣ ತನ್ನ ತಾಯಿಗೆ ಪ್ರೀತಿ ಹಂಚಲಿಲ್ಲವೆಂದು ಹೇಳುವವರಾದರೂ ಯಾರು? ಹಾಗೆ ಹೇಳುವವರು ಮೂಢರು ಅಷ್ಟೇ. ಭಯವಿದ್ದೆಡೆ ಗೌರವವೂ ಇರುವಂತೆ, ಪ್ರೀತಿ ಇದ್ದೆಡೆ ವಿರಹವೂ ಸಾಮಾನ್ಯ. ಆದರೆ ಅದರಲ್ಲಿ ಪ್ರೀತಿಯ ಪಾಲೇ ಹೆಚ್ಚು. ಕೃಷ್ಣ ಎಂದಿಗೂ ನನ್ನಿಂದ ದೂರಾಗುವುದಿಲ್ಲ. ಹಿಡಿಸಲಾರದಷ್ಟು ಸಂತಸ ಕೊಟ್ಟ ಕೃಷ್ಣನ ನೆನಪುಗಳು ಪ್ರೀತಿಯ ಪ್ರತಿರೂಪವಾಗಿ ನನ್ನ ಬಳಿಯೇ ಇವೆ. ನನ್ನ ಕನಸು ಮನಸ್ಸಿನಲ್ಲಿರುವ ಕೃಷ್ಣ ಇನ್ನು ಇಲ್ಲಿರುವ ಅಣು-ಅಣುವಿನಲ್ಲಿಯೂ ಪಸರಿಸುತ್ತಾನೆ. ಪ್ರೀತಿ ನೀಡುತ್ತಾನೆ." ಎಂದು ಹೇಳುತ್ತಾ ಲಗುಬಗೆಯಿಂದ ಎಲ್ಲರ ಯೋಗಕ್ಷೇಮದ ಕಡೆ ಗಮನ ಹರಿಸಲು ಎದ್ದು ಹೊರಟಳು ಯಶೋದೆ.

ಇತ್ತ ವಾದ-ವಿವಾದ ಮಾಡಿ ಅಮ್ಮನನ್ನು ಸಂತುಷ್ಟಗೊಳಿಸಿ, ಚಿಂತಾಮುಕ್ತಳನ್ನಾಗಿ ಮಾಡಿದ ಖುಷಿಯಲ್ಲಿ ರಾಧೆಯಲ್ಲಡಗಿದ್ದ ಕೃಷ್ಣ ತನ್ನಲ್ಲೇ ಅಂದುಕೊಂಡ "ಪ್ರೀತಿಯೆಂದರೆ ಇದೇನೇ.."

~ವಿಭಾ ವಿಶ್ವನಾಥ್

ಗುರುವಾರ, ಜನವರಿ 9, 2020

ಅಮ್ಮನ ಒಡನಾಟ

ಎಲ್ಲರಿಗಿಂತ ಮನಸ್ಸಿಗೆ ಹತ್ತಿರ ಆಗುವುದು, ನನಗೆ ಅನ್ನಿಸಿದ್ದನ್ನೆಲ್ಲಾ ಹೇಳೋಕೆ ಅಂತಾ ಇರೋ ಒಬ್ಬಳು ಬೆಸ್ಟ್ ಫ್ರೆಂಡ್ ಅಮ್ಮ. ಅಮ್ಮ ನಿಂಗೊತ್ತಾ, ನಾನು ಮನಸ್ಸು ಬಿಚ್ಚಿ ನಗುವುದು, ಎಲ್ಲಾ ವಿಷಯ ಅಂದರೆ ನಾನು ತೆಗೆದುಕೊಳ್ಳೊ ಪುಟ್ಟ ಕ್ಲಿಪ್ ನಿಂದ ಹಿಡಿದು ನನಗೆ ಬರೋ ಮಾರ್ಕ್ಸ್, ಜೊತೆಗೆ ನನ್ನ ಕನಸನ್ನೆಲ್ಲಾ ಹಂಚಿಕೊಳ್ಳುವುದು ನಿನ್ನ ಹತ್ತಿರಾನೇ.ಮಾತಾಡ್ತಾ ಹೋದರೆ ಫಿಲ್ಟರ್ ಇಲ್ಲದಂತೆ ಎಲ್ಲವನ್ನೂ ಹಂಚಿಕೊಂಡು ನಿರಾಳ ಆಗಿಬಿಡ್ತೀನಿ. ಅಪ್ಪನ ಹತ್ತಿರ ಮುಖ್ಯ ಅನ್ನಿಸಿದ ವಿಷಯಗಳನ್ನು ಮಾತ್ರ ಮಾತಾಡಿದ್ರೆ, ನಿನ್ನ ಹತ್ತಿರ ಬೀದಿ ಬದಿಯಲ್ಲಿ,ಬಸ್ಸಿನಲ್ಲಿ ನೋಡಿದ ಜನರಿಂದ ಹಿಡಿದು ರಾಜ್ಯದ ರಾಜ್ಯಕಾರಣದವರೆಗೂ ಮಾತಾಡ್ತೀನಿ. ಹೀಗೇ ನಾನು ಮಾತಾಡ್ತಾ ಹೋದ್ರೆ ನಿನ್ನ ಮುಖದಲ್ಲಿ ನಿಲ್ಲಿಸು ಅನ್ನೋ ಭಾವನೇನೇ ಸುಳಿಯುವುದಿಲ್ಲ. ಬದಲಿಗೆ ಅಲ್ಲಿ ಕಂಡೂ ಕಾಣದಂತಾ ಮುಗುಳ್ನಗು ಇರುತ್ತೆ. ನಿಂಗೊತ್ತಾ, ನಿನ್ನ ಆ ಮುಗುಳ್ನಗುವೇ ನನಗೆ ಸ್ಫೂರ್ತಿ ಅಂತಾ? ಎಷ್ಟೇ ಕಷ್ಟ ಇದ್ರೂ, ಏನೇ ನೋವಿದ್ದರೂ ನಿನ್ನ ಮುಖದ ಮುಗುಳ್ನಗು ಹಾಗೇ ಇರುತ್ತೆ. ಹಾಗೇ ಇರಲಿ ಅಮ್ಮ. ನಾನಂತೂ ಕಣ್ಣು ಹಾಕಲ್ಲ.

ಮನೆಗೆ ಎಷ್ಟೇ ಜನ ಬಂದ್ರೂ, ಅವರ ಸ್ಟೇಟಸ್ ನ ನೀನು ಗಮನಿಸುವುದೇ ಇಲ್ಲ. ಅದೇ ಪರಿಚಯದ ಮುಗುಳ್ನಗು ಜೊತೆಗೆ ಕಾಫಿ,ಟೀ,ಊಟ,ತಿಂಡಿ ಎಲ್ಲವನ್ನೂ ವಿಚಾರಿಸಿಕೊಂಡು ಉಪಚಾರ ಮಾಡ್ತೀಯ. ಆ ವಿಷಯದಲ್ಲಿ ನೀನು ಸ್ವಲ್ಪ ಕೂಡಾ ಗೊನಗುವುದಿಲ್ಲ. ಅದನ್ನು ನಾನು ಕೂಡಾ ಕಲೀತಾ ಇದ್ದೀನಿ, ಇನ್ನೂ ಪೂರ್ತಿ ಕಲಿತಿಲ್ಲ. ಯಾಕಂದ್ರೆ, ನಿನ್ನಿಂದ ಕಲಿಯುವುದಕ್ಕೆ ತುಂಬಾ ಇದೆ.

ಅವತ್ತು ನೀನು ಆ ಹುಡುಗೀನಾ ನೋಡಿ ಹೇಳ್ತಾ ಇದ್ಯಲ್ಲಾ, "ಆ ಹುಡುಗಿ ಬಾಬ್ ಕಟ್ ಮಾಡಿಸಿಕೊಂಡು ಎಷ್ಟು ಚೆನ್ನಾಗಿ ಕಾಣಿಸ್ತಾ ಇದ್ದಾಳೆ" ಅಂತಾ, ಅದರ ಜೊತೆಗೆ ಮಾಡ್ರನ್ ಆಗಿ ಟ್ರೆಂಡಿ ಆಗಿರೋದೂ ನಿನಗೆ ಇಷ್ಟ ಅಲ್ವಾ?
ಅವತ್ತು ನೀನು ಮನೆಯಲ್ಲಿ ಇರಲಿಲ್ಲ. ನನ್ನಕೂದಲು ಉದುರಿ ಸಣ್ಣ ಆಗ್ತಾ ಇತ್ತು, ಸ್ವಲ್ಪ ಕಟ್ ಮಾಡಿಸಿಕೊಳ್ಳೋಣ ಅಂದುಕೊಂಡವಳು, ಹೇಗೂ ನಿನಗೆ ಗಿಡ್ಡ ಕೂದಲು ಇಷ್ಟ ಆಗುತ್ತೆ ಅಲ್ವಾ ಅಂದುಕೊಂಡು ನಿನಗೆ ಸರ್ಪ್ರೈಜ್ ಕೊಡಬೇಕು ಅಂದುಕೊಂಡು ಸ್ವಲ್ಪ ಜಾಸ್ತಿನೇ ಕಟ್ ಮಾಡಿಸಿಕೊಂಡು ಬಂದಿದ್ದೆ. ಆದ್ರೆ ಅವತ್ತು ನೀನು ಬಂದು ನೋಡಿ ಬೇಜಾರು ಮಾಡಿಕೊಂಡು, ಅಷ್ಟು ಉದ್ದ ಇದ್ದಿದ್ದ ಕೂದಲನ್ನು ಇಷ್ಟು ಕಟ್ ಮಾಡಿಸಿಕೊಂಡು ಬಂದಿದ್ದೀಯಲ್ಲ ಅಂದೆ. ನಿಜ ಹೇಳ್ಲಾ, ನನಗೂ ಅಷ್ಟು ಉದ್ದದ ಕೂದಲು ಕಟ್ ಮಾಡಿಸಿಕೊಂಡದ್ದಕ್ಕೆ ಬೇಜಾರಿತ್ತು,ಆದ್ರೆ ಅವತ್ತು ಬೇಜಾರಾಗಿದ್ದು, ನೀನು ಬೇಜಾರಾಗಿದ್ದನ್ನು ನೋಡಿ.

ಎಲ್ಲಾದ್ರೂ ಹೊರಟರೆ,ಅಥವಾ ಯಾವುದಾದರೂ ಹೊಸಾ ಬಟ್ಟೆ ಹಾಕಿಕೊಂಡ್ರೆ ಮೊದಲ ಕಾಂಪ್ಲಿಮೆಂಟ್ ಅಂತೂ ನಿನ್ನದೇ, ಚೆನ್ನಾಗಿ ಕಾಣಿಸ್ತಾ ಇದ್ದೀಯಾ ಅಂತಾ(ಚೆನ್ನಾಗಿ ಕಾಣಿಸದೇ ಇದ್ದರೂ ಕೂಡಾ), ಎಷ್ಟಾದರೂ ಹೆತ್ತವರಿಗೆ ಹೆಗ್ಗಣ ಮುದ್ದು ಅಲ್ವಾ? ಆದರೆ ನಿನಗೆ ನಾನು ಬೇರೆ ಹೇರ್ ಸ್ಟೈಲ್ ಮಾಡಿಕೊಂಡರೆ ಇಷ್ಟಾನೇ ಆಗಲ್ಲ. ಅಲ್ವಾ? ನೀನು ಮಾಮೂಲಾಗೇ ಇರು,ಆ ತರ ಜಡೆ ಹಾಕ್ಕೊಂಡಿದ್ರೇನೇ ನೀನು ಚೆನ್ನಾಗಿ ಕಾಣ್ತೀಯಾ ಅಂತಾ ಹೇಳ್ತೀಯಾ. ಅದಕ್ಕೇ ಯಾರು ಎಷ್ಟೇ ಒತ್ತಾಯ ಮಾಡಿದರೂ, ಎಷ್ಟೇ ದೊಡ್ಡ ಫಂಕ್ಷನ್ ಆದ್ರೂ, ಆ ಹೇರ್ ಸ್ಟೈಲ್ ನನಗೆ ಇಷ್ಟ ಇಲ್ಲ. ಸಾಕು ಅಂತಾ ಹೇಳ್ಬಿಡ್ತೀನಿ.
ಆದ್ರೆ,ನೀನು ಹೇಗೇ ಇದ್ರೂ ಎಷ್ಟು ಚೆಂದ. ಆ ಮುಗುಳ್ನಗುವೇ ನಿನ್ನ ಮುಖಕ್ಕೆ ಹೆಚ್ಚು ಮೆರುಗು. ನೀನು ನಿನ್ನ ಬಾಬ್ ಕಟ್ ಹೇರ್ ಸ್ಟೈಲ್ ಜೊತೆಗೆ ಯಾವ ಸೀರೆ ಹಾಕಿಕೊಂಡರೂನೂ ನನ್ನ ಕಣ್ಣಿಗಂತೂ ಸಂದರೀನೇ.ಅದಕ್ಕೆ ನಾನೂ ಅವಾಗವಾಗ "ಮಾಡರ್ನ್ ಅಮ್ಮ, ಟ್ರೆಡಿಷನಲ್ ಮಗಳು" ಅಂತಾ ರೇಗಿಸೋದು. ನೆನಪಿಡೆ ಅಲ್ವಾ? ನಿನ್ನ ಯೊಚನೆಗಳು ಯಾವಾಗ್ಲೂ ಮಾಡರ್ನ್.

ಅಡುಗೆ ಅಂದ್ರೆ ಹೀಗೇ ಇರಬೇಕು ಅನ್ನೋ ಹಳೇ ಮಾರ್ಗಗಳನ್ನು ಬಿಟ್ಟು, ಅದರಲ್ಲೇ ಹೊಸರುಚಿ ಟ್ರೈ ಮಾಡೋದಕ್ಕೆ ಹೇಳಿ ಕೊಟ್ಟದ್ದು ನೀನೇ,ಆದರೆ ಅದ್ಯಾಕೋ ನಿನ್ನಷ್ಟು ರುಚಿಯಾಗಿ ಅಡುಗೆ ಮಾಡೋದಕ್ಕೆ ಬರುವುದೇ ಇಲ್ಲ. ಬಹುಶಃ ಅದಕ್ಕೆ ಅನ್ಸುತ್ತೆ ಹೇಳೋದು "ಕೈ ರುಚಿ ಅಂದ್ರೆ, ಅಮ್ಮನ ಕೈ ರುಚಿನೇ" ಅಂತಾ.

ನನಗೆ ನೀನು ತಲೆಗೆ ಎಣ್ಣೆ ಹಚ್ಚುವ ಕ್ಷಣಗಳಿಗಿಂತಾ, ನಾನು ನಿನಗೆ ಮೆಹಂದಿ ಹಚ್ಚಿಕೊಡೋ ಕ್ಷಣಗಳೇ ಅಚ್ಚುಮೆಚ್ಚು. ಅಮ್ಮ, ಆ ಸೀರೆ ಉಟ್ಕೋ, ಈ ತರಾ ಡ್ರೆಸ್ ಮಾಡ್ಕೋ ಅಂತಾ ಹೇಳೋಕೇ ಹೆಚ್ಚು ಖುಷಿ. ಎಲ್ಲರೂ ಅಮ್ಮನ ಮಡಿಲಲ್ಲಿ ಅಕ್ಕರೆಯ ಸವಿಯನ್ನು ಸವಿಯಬೇಕು ಅಂತಾ ಅಂದ್ರೆ, ನಾನು ಅಮ್ಮನಿಗೇ ನನ್ನ ಪ್ರೀತಿಯನ್ನೆಲ್ಲಾ ಕೊಡಬೇಕು ಅಂತಾ ಅಂದುಕೊಳ್ಳುತ್ತೇನೆ.

ಆದ್ರೆ ಕೆಲವೊಮ್ಮೆ ನೀನು ಹೆಚ್ಚು ಪೊಸೆಸ್ಸೀವ್ ಆಗಿಬಿಡ್ತೀಯಾ ಅನ್ಸುತ್ತೆ. ಯಾರಾದ್ರೂ ನನ್ನನ್ನು ಮಗಳು ಅಂತಾ ಕರೆದಾಗ, ಅಥವಾ ನಿನ್ನ ಮುಂದೆ ನಾನು ಯಾರ ಬಗ್ಗೆ ಆದ್ರೂ ಹೆಚ್ಚು ಮಾತಾಡುವಾಗ, ಮೆಚ್ಚುಗೆ ಇದ್ದರೂ, ಅದರ ಜೊತೆಗೆ ಸ್ವಲ್ಪ ಅಸಮಾಧಾನ ಕೂಡಾ ಇರುತ್ತೆ. ಆದರೆ, ಎಲ್ಲರಿಗಿಂತ ನೀನೇ ನನಗೆ ಮುಖ್ಯ. ಆದ್ರೆ, ನಿನಗೆ ಕಾಡಿಸಬೇಕು ಅಂತಾನೇ, ನಾನು ಅದರ ಬಗ್ಗೆ ಹೆಚ್ಚು ಮಾತಾಡ್ತೀನಿ. ಬೇಜಾರಿಲ್ಲ. ಅಲ್ವಾ?
ಬರೀ ಪ್ರೀತಿ ಅಷ್ಟೇ ಅಲ್ಲ,ನಮ್ಮ ಮಧ್ಯೆ ನಡೆಯೋ ಜಗಳಗಳಿಗೂ ಲೆಕ್ಕ ಇಲ್ಲ ಅಲ್ವಾ? ಆದರೆ, ಅದೆಲ್ಲಾ ಎಷ್ಟು ಹೊತ್ತು? ಒಂದೋ ನಾನು ಅಮ್ಮಾ ಅಂದ್ರೆ ಕರಗೊಗ್ತೀಯಾ, ಇಲ್ಲಾ ನೀನೇ 'ಪಾಪು' ಅಂತಾ ಮಾತಾಡಿಸ್ತೀಯಾ.. ಆದರೆ ಅವಾಗೆಲ್ಲಾ ನಿನ್ನ ಬಾಯಿಮಾತುಗಳೇ ಜೋರು. ಅದಕ್ಕೆ ನಾನು ಹೇಳ್ತಾ ಇರೋದು "ಪುಣ್ಯ, ನಿನಗೆ ಮಗ ಇಲ್ಲ. ಅಕಸ್ಮಾತ್ ಏನಾದ್ರೂ ಇದ್ದು ಸೊಸೆ ಬಂದಿದ್ರೆ, ಅವಳು ನಿನ್ನ ಈ ಅವತಾರ ನೋಡಿದ್ರೆ, ಒಂದೋ ಅವಳು ಮನೆ ಬಿಟ್ಟು ಹೋಗ್ತಾ ಇದ್ಲು, ಇಲ್ಲಾ ನಿನ್ನ ಓಡಿಸ್ತಾ ಇದ್ಲು" ಅಂತಾ. ಅವಾಗೆಲ್ಲಾ ನಿನ್ನ ನಗುವೇ ಉತ್ತರ.

ಆದ್ರೆ,ನಿನಗೆ ಅಡುಗೆ ಮಾಡಿ ಒಪ್ಪಿಸುವುದೋ, ಅಥವಾ ಬೇರೆ ಯಾವುದನ್ನಾದ್ರೂ ಒಪ್ಪಿಸುವುದೇ ಬಹಳ ಕಷ್ಟ. ಯಾಕಂದ್ರೆ ಎಲ್ಲದರಲ್ಲೂ ಪರ್ಫೆಕ್ಷ್ನ್ ಬಯಸ್ತೀಯಲ್ಲಾ ನೀನು.. ನಾನು ಬರೆಯೋ ಬರಹಗಳ ಮೊದಲ ವಿಮರ್ಷಕಿ ನೀನೇ. ನೀನು ಮೆಚ್ಚಿಕೊಂಡರೆ ಅದು ಚೆನ್ನಾಗಿದೆ ಅನ್ನೋ ಭಾವನೆ ನನಗೆ. ಆದ್ರೆ ನಿನಗೆ ಇಷ್ಟ ಆಗ್ಲಿಲ್ಲಾ ಅಂದ್ರೂ ಅದನ್ನು ಮುಚ್ಚುಮರೆ ಮಾಡಲ್ಲ. ನಿನ್ನ ನೇರನುಡಿ ನನಗೆ ಬಹಳ ಇಷ್ಟ.

"ನಂಗೆ ವಾಟ್ಸಾಪ್ ಎಲ್ಲಾ ಯಾಕೆ? ,ಬೇಡ ಅದೆಲ್ಲ" ಅಂತಾ ಅಂದರೂ ವಾಟ್ಸಾಪ್ ಬಂದ ಮೇಲೆ ಫೋಟೋ ಕಳಿಸುವುದು ಹೇಗೆ? ನೋಡುವುದು ಹೇಗೆ ಅಂತೆಲ್ಲಾ ಕೇಳಿಕೊಂಡು, ಒಳ್ಳೆಯ ಕುತೂಹಲ ತುಂಬಿದ ವಿದ್ಯಾರ್ಥಿನಿ ತರಹ ಕಲಿಯೋದು ಚೆಂದ. ಆ ಕ್ಷಣ ನಾನು ನಿನಗೆ ಮಿಸ್ ಆಗಿ, ನೀನು ಸ್ಟೂಡೆಂಟ್ ಆಗಿಬಿಡ್ತೀಯಾ.. ಎಷ್ಟು ಚೆಂದ ಅಲ್ವಾ ಆ ಘಳಿಗೆ.
ಬರೆಯುತ್ತಾ ಹೋದ್ರೆ ಬಹಳಷ್ಟಿದೆ. ಇನ್ನೊಮ್ಮೆ, ಅಲ್ಲಲ್ಲಾ ಇನ್ನೊಂದಿಷ್ಟು ಸಲ ಬರೀತೀನಿ. ಆಯ್ತಾ?ಅಮ್ಮ, ನಾನು ನಿನ್ನ ಒಡನಾಟದಲ್ಲಿ ಎಲ್ಲವನ್ನೂ ಮರೆಯುತ್ತೇನೆ. ನೀನು ಒಬ್ಬಳು ಬೆಸ್ಟ್ ಫ್ರೆಂಡ್, ನನ್ನ ಗೈಡ್, ನನ್ನ ಬರಹಗಳ ವಿಮರ್ಶಕಿ, ಸ್ವಲ್ಪ ಪೊಸೆಸ್ಸೀವ್ ಆಗೋ ಭಾವುಕ ಅಮ್ಮ, ಕೋಳಿಜಗಳಗಳ ಜೊತೆಗಾತಿ,ಒಳ್ಳೆ ಶಿಕ್ಷಕಿ ಹಾಗೇ ವಿದ್ಯಾರ್ಥಿನಿ ಕೂಡಾ, ಎಲ್ಲದಕ್ಕೂ ಒಳ್ಲೆ ಕಾಂಪ್ಲಿಮೆಂಟ್ ಕೊಡೋ ಅಮ್ಮ, ಮುಗುಳ್ನಗು ತುಂಬಿರೋ ಸ್ಪೂರ್ತಿದಾತೆ. ನಿನ್ನ ಒಡನಾಟ ಎಂದೆಂದೂ ಹೀಗೇ ಇರಲಿ ಅಮ್ಮ.

~ವಿಭಾ ವಿಶ್ವನಾಥ್

ಭಾನುವಾರ, ಜನವರಿ 5, 2020

ಬೀರ ಮತ್ತು ಆ ರಾತ್ರಿ...

ಆ ದಿನ ಮಡಿಕೇರಿಯಲ್ಲಿ ಅಜ್ಜಿ ಮನೆಯಲ್ಲಿ ಬಹಳ ದಿನಗಳ ನಂತರ ನಮ್ಮ ಸಂಬಂಧಿಕರ ಮಕ್ಕಳೆಲ್ಲ ಒಟ್ಟಾಗಿ ಸೇರಿಕೊಂಡಿದ್ದೆವು. ನಮ್ಮಜ್ಜಿ ಕಥೆ ಹೇಳುವುದರಲ್ಲಿ ಎತ್ತಿದ ಕೈ. ಅಲ್ಲದೆ ಕರೆಂಟ್ ಕೂಡ ಕೈಕೊಟ್ಟಿದ್ದರಿಂದ ಅಜ್ಜಿಯನ್ನು ಕಥೆ ಹೇಳಲು ಪೀಡಿಸುತ್ತಾ ಇದ್ದೆವು.
ಆಗ ಅಜ್ಜಿ "ಇಷ್ಟು ದಿನ ಆದ ಮೇಲೆ ಬಂದಿದ್ದೀರ, ಅಲ್ಲದೆ ಇಷ್ಟೊಂದು ಕೇಳಿಕೊಳ್ಳುತ್ತಾ ಇದ್ದೀರ ಅಂದ ಮೇಲೆ ಹೇಳದೆ ಇರುವುದಕ್ಕೆ ಆಗುತ್ತಾ? ಯಾವ ಕಥೆ ಬೇಕು?" ಅಂತಾ ಕೇಳಿದ್ರು. ಎಲ್ಲರೂ ಒಟ್ಟಿಗೆ ದೆವ್ವದಕಥೆ ಬೇಕು ಅಂತಾ ಕಿರುಚಿಕೊಂಡ್ವಿ. ಅದಕ್ಕೆ ಅಜ್ಜಿ, ಕಥೆ ಅಲ್ಲ ಆದರೆ ನಿಜವಾಗಿ ನಡೆದ ಒಂದು ಘಟನೆಯನ್ನೇ ಹೇಳ್ತಿನಿ ಕೇಳಿ ಅಂತಾ ಶುರು ಮಾಡಿದ್ರು.
ಅವತ್ತು ಈಗಿನ ಹಾಗೇ ಒಂದು ಮಳೆಗಾಲ. ಆಗ ನಿಮ್ಮ ತಾತ ಮತ್ತು ಅವರ ಅಣ್ಣ ರಾತ್ರಿ ಮೀನು ಹಿಡಿಯುವುದಕ್ಕೆ ಹೋಗೋಣ ಅಂತಾ ಮಾತಾಡಿಕೊಳ್ತಾ ಇದ್ರು. ಅಷ್ಟರಲ್ಲೇ ನಾವೆಲ್ಲಾ ಇವತ್ತು ಅಮವಾಸ್ಯೆ, ಇವತ್ತು ಬೇಡ, ಇವಾಗ ಬೀರನ ಕಾಟ ಬೇರೆ ಜಾಸ್ತಿ ಆಗ್ತಾ ಇದೆ ಅಂತಾ ಹೇಳಿದ್ವಿ. 'ಗಂಡಸರು ಯಾವಾಗಾದ್ರೂ ನಮ್ಮ ಮಾತು ಕೇಳಿದಾರಾ?' ಬೇಡ ಅಂತಾ ಎಷ್ಟು ಹೇಳಿದ್ರೂ ಕೇಳದೆ ಹೊರಡೋ ತೀರ್ಮಾನಮಾಡಿಯೇ ಬಿಟ್ರು.
ಅಷ್ಟರಲ್ಲಿ ನಾನು "ಬೀರ ಅಂದ್ರೆ ಯಾರು ಅಜ್ಜಿ ?" ಅಂತಾ ಕೇಳಿದೆ.
ಅದಕ್ಕೆ ಅಜ್ಜಿ "ಅದು ಒಂದು ಬೇಕಾದ ಹಾಗೆ ವೇಷ ಧರಿಸುವ ದೆವ್ವ. ಮತ್ತು ಕಚಗುಳಿ ಇಟ್ಟು ಮನುಷ್ಯರನ್ನು ಸಾಯಿಸುತ್ತದೆ, ಅದಕ್ಕೆ ದೇವರು ಮತ್ತು ಕುಂಕುಮ ಅಂದ್ರೆ ಆಗುವುದಿಲ್ಲ." ಅಂತಾ ಹೇಳಿದ್ರು.
ಮುಂದೆ ಏನು ಅಂತಾ ಕೇಳಿದ್ವಿ ಅದಕ್ಕೆ ಅಜ್ಜಿ "ಮುಂದೆ ಊಟ" ಅಂದ್ರು. ನಾವೆಲ್ಲರೂ ಅಚ್ಚರಿಯಿಂದ "ಊಟಾನಾ...?" ಅಂತಾ ರಾಗ ಎಳೆದಿದ್ದಕ್ಕೆ ಅಜ್ಜಿ ನಗುತ್ತಾ ನಗುತ್ತಾ "ಊಟ ಮಾಡಿಕೊಂಡು ಬನ್ರೋಆಮೇಲೆ ಮುಂದಿನ ಕತೆ ಹೇಳ್ತಿನಿ ಅಂತಾ ಹೇಳಿದ್ರು. ಇಲ್ಲಾ ನೀನು ಕತೆ ತಪ್ಪಿಸುತ್ತೀಯ ಈಗಲೇ ಹೇಳು ಅಂತಾ ಗೋಗರೆದಿದ್ದಕ್ಕೆ ಕಥೆಯನ್ನು ಮುಂದುವರಿಸಿದರು.
ಅಂತೂ, ಇಂತೂ ಅವತ್ತು ಸಂಜೆ ಆಯ್ತು. ನಿಮ್ಮ ತಾತ ಮೀನು ಹಿಡಿಯುವುದಕ್ಕೆ ಬುಟ್ಟಿ, ಗಾಳ ಮತ್ತು ಕುಡುಗೋಲು ಹಿಡಿದುಕೊಂಡು ದೇವರ ಪೂಜೆ ಮಾಡಿ ಅವರ ಅಣ್ಣನಿಗೆ ಕಾಯ್ತಾ ಹೊರಟುತುದಿಗಾಲಲ್ಲಿ ನಿಂತಿದ್ರು. ಅಷ್ಟರಲ್ಲಿ ಅವರ ಅಣ್ಣನೂ ಬಂದ್ರು. ಇಬ್ಬರೂ ಹೊರಟ್ರು.ಆಮೇಲೆ ಏನಾಯ್ತು ಅಂತಾ ನಿಮ್ಮ ತಾತ ಹೇಳ್ತಾರೆ ಕೇಳಿ ಅಂದ್ರು.
ಆಮೇಲೆ ತಾತ ಆ ಘಟನೆಯನ್ನು ಹೇಳುವುದಕ್ಕೆ ಶುರು ಮಾಡಿದರು. "ಅವತ್ತು ನಮ್ಮಣ್ಣ ಬಂದು ಬಾಗಿಲಲ್ಲಿ ನಿಂತ. ಆಮೇಲೆ ಇಬ್ಬರೂ ಅಲ್ಲಿಂದ ಹೊರಟೆವು. ನಾನು ಎಷ್ಟೇ ಮಾತಾಡಿದ್ರೂ ಅವನುಮಾತಾನಾಡುತ್ತಲೇ ಇರಲಿಲ್ಲ. ಬರಿ ಹೂಂ, ಹೂಂ ಅಂತಾ ಹೂಂಗುಟ್ತಾ ಇದ್ದ. ನಂಗೆ ಅನುಮಾನ ಬಂದ್ರೂ ಮನೆಯಲ್ಲೇನೋ ಜಗಳ ಮಾಡಿಕೊಂಡು ಬಂದಿರಬೇಕೇನೋ ಅಂತಾ ಸುಮ್ಮನಾದೆ. ಅಷ್ಟರಲ್ಲಿಹೊಳೆ ಸಿಕ್ಕಿತು. ಮೀನು ಹಿಡಿಯೋದಕ್ಕೆ ಅಂತಾ ಎಲ್ಲಾ ತಯಾರಿ ಮಾಡಿಕೊಳ್ಳಬೇಕಾದರೆ ಅವನು ನನ್ನ ಮೇಲೆ ನೀರನ್ನು ಎರಚಲು ಶುರು ಮಾಡಿದ. ನಂಗೇಕೋ ಅನುಮಾನ ಬಂದು ಕುಡುಗೋಲನ್ನು ಅವನಕಡೆ ಎಸೆದು ತಿರುಗಿ ಸಹ ನೋಡದೆ ಓಡಲು ಶುರು ಮಾಡಿದೆ. ಅರ್ಧ ದಾರಿಯಲ್ಲಿ ನನ್ನನ್ನೇ ಹುಡುಕಿಕೊಂಡು ಬರುತ್ತಿದ್ದ, ಅಣ್ಣ ಮತ್ತು ನಿಮ್ಮಜ್ಜಿ ಸಿಕ್ಕಿ ನನ್ನನ್ನು ಬೀರನಿಂದ ಬಚಾವಾಗಿ ಬಂದಿರುವುದು ನಿನ್ನಪುಣ್ಯ ಬಾ ಅಂತಾ ಕರೆದುಕೊಂಡು ಬಂದರು" ಎಂದು ಹೇಳಿದರು.
ನನಗೊಂದು ಅನುಮಾನ ಬಂತು, "ಬೀರ ನಿನ್ನ ಮೇಲೆ ನೀರು ಯಾಕೆ ಎರಚಿತು? ಮತ್ತೆ ದಾರಿಯಲ್ಲೇ ನಿನಗೆ ಕಚಗುಳಿ ಯಾಕೆ ಇಡ್ಲಿಲ್ಲ? ಅಂತಾ ಕೇಳಿಯೇ ಬಿಟ್ಟೆ. ಅದಕ್ಕೆ ತಾತ "ಸಂಜೆ ನಾನು ಇಲ್ಲಿಂದಹೊರಡುವ ಮುಂಚೆ ಪೂಜೆ ಮಾಡಿ ಕುಂಕುಮ ಇಟ್ಟುಕೊಂಡಿದ್ದೆನಲ್ಲ ಅದಕ್ಕೆ ಅದು ನನ್ನಿಂದ ದೂರದಲ್ಲಿತ್ತು ಮತ್ತು ಅದು ನನ್ನನ್ನು ಏನೂ ಮಾಡಲಿಲ್ಲ. ಹೊಳೆಯ ಹತ್ತಿರ ನೀರನ್ನು ಎರಚಿ ನನ್ನ ಕುಂಕುಮವನ್ನು ಅಳಿಸಲು ಪ್ರಯತ್ನ ಮಾಡಿತು. ದೇವರ ದಯೆಯಿಂದ ನಾನು ಬದುಕಿ ಉಳಿದಿದ್ದೇನೆ" ಎಂದರು.
ಅದಾದ ನಂತರ ನನ್ನ ಮನಸ್ಸಿನಲ್ಲಿ ಹಲವಾರು ಪ್ರಶ್ನೆಗಳು ಮೂಡಿದವು. "ದೆವ್ವಗಳು ನಿಜವಾಗಿಯೂ ಇವೆಯಾ? ಹಾಗಾದರೆ ನನಗೆ ಇನ್ನೂ ಏಕೆ ಕಾಣಿಸಿಲ್ಲ? ದೆವ್ವಗಳು ನಮ್ಮ ಭ್ರಮೆ, ಕಲ್ಪನೆಯಲ್ಲಿ ಮಾತ್ರಇರುವುದೇ? ಅಂತಾ ಯೋಚನೆ ಮಾಡುತ್ತಾ ಅವತ್ತು ನಿದ್ದೆ ಮಾಡಿಬಿಟ್ಟೆ. ನನಗೆ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗುವ ಸಮಯ ದೂರ ಇರಲಿಲ್ಲ.

ಇದಾದ ಸುಮಾರು ಒಂದು ತಿಂಗಳಿಗೆ ನನ್ನ ಗೆಳೆಯನ ಮದುವೆ ಅಂತಾ ಶಿವಮೊಗ್ಗ ಹತ್ತಿರದ ಒಂದು ಹಳ್ಳಿಗೆ ಹೊರಟಿದ್ದೆ. ಆಗ ಅಮ್ಮ ಬೇಗ ಹೊರಡೋ ಕತ್ತಲಾಗೋ ಹೊತ್ತಿಗೆ ಅಲ್ಲಿಗೆ ಹೋಗು ಅಂತಾ ಹೇಳ್ತಾಇದ್ದರೂ, "ಸುಮ್ನಿರಮ್ಮ ಏನೂ ಆಗಲ್ಲ ನೀನೋ, ನಿನ್ನ ಕಲ್ಪನೆನೋ" ಅಂತ ಹೇಳಿ ಹೊರಟ್ಟಿದ್ದು ಮಧ್ಯಾಹ್ನವೇ. ಬಸ್ಸು ಸಿಕ್ಕಿ ಎಲ್ಲೋ ಮೂಲೆಯಲ್ಲಿರೋ ಆ ಊರಿನ ಹತ್ತಿರಕ್ಕೆ ತಲುಪಿದಾಗ ರಾತ್ರಿ 11.45. ಅಲ್ಲಿಂದ ಇನ್ನೂ 7-8 ಕಿ.ಮೀ ದೂರದಲ್ಲಿರೋ ಹಳ್ಳಿಗೆ ಹೋಗಬೇಕಿತ್ತು. ನನ್ನ ಇನ್ನೊಬ್ಬ ಗೆಳೆಯ ಬೇರೆ ಯಾವುದೂ ಗಾಡಿ ಸಿಗದೆ ಲಗೇಜ್ ಆಟೋ ತೆಗೆದುಕೊಂಡು ಬಂದಿದ್ದ. ಹಾಗೆ ಅಜ್ಜಿ ಹೇಳಿದ ಬೀರನ ಕಥೆಯನ್ನು ಅವನಿಗೆ ಹೇಳಿದ್ದಕ್ಕೆ ನಕ್ಕು ದೆವ್ವ, ಭೂತ ಅಂತಾ ಈ ಕಾಲದಲ್ಲೂ ನಂಬುತ್ತೀಯಾ? ಅಂತ ಗೇಲಿ ಮಾಡಿದ. ಹಾಗೆ ಕೆರೆ ಏರಿ ಮೇಲೆ ಹೋಗ್ತಾ ಇರುವಾಗ ಆಟೋ ಯಾಕೋ ಜಗ್ಗಿದ ಹಾಗೆ ಆಯ್ತು. ತಿರುಗಿ ನೋಡಿದರೆ ಬಿಳಿ ಸೀರೆ ಉಟ್ಟು ಕೂದಲು ಬಿಟ್ಟಿರೋ ಆಕೃತಿ ಉಲ್ಟಾ ತಿರುಗಿ ಕೂತಿದೆ. ನನ್ನ ಗೆಳೆಯನಿಗೆ ಆಗ ಭಯ ಶುರು ಆಯ್ತು. ಇಬ್ಬರಿಗೂ ಏನು ಮಾಡಬೇಕೋ ತೋಚಲಿಲ್ಲ. ಆಗಿದ್ದು ಆಗಲಿ ಅಂತಾ ಅವನು ಆಟೋನಾ ಜೋರಾಗಿ ಓಡಿಸಿದ. ಅಷ್ಟರಲ್ಲಿ ಒಂದು ದಿಬ್ಬ ಸಿಕ್ಕಿತು ಅಂತಾ ಸಡನ್ ಆಗಿ ಬ್ರೇಕ್ ಹಾಕಿದ. ಆಮೇಲೆ ತಿರುಗಿ ನೋಡಿದ್ರೇ ಆ ದೆವ್ವ ಕಾಣಿಸಲೇ ಇಲ್ಲ. ಇಬ್ಬರೂ ಮರುಮಾತನಾಡದೆ "ಬದುಕಿದೆಯಾ ಬಡ ಜೀವವೇ" ಅಂದುಕೊಂಡು ಮನೆ ಸೇರಿದೆವು.

ಮಾರನೇ ದಿನ ನಾವು ಅದರ ಬಗ್ಗೆ ವಿಚಾರಿಸಿದ್ದಕ್ಕೆ ಆ ದೆವ್ವ ಅಲ್ಲಿ ಸುಮಾರು ಜನಕ್ಕೆ ಕಾಣಿಸಿಕೊಂಡಿದೆ, ಆದರೆ ಯಾರಿಗೂ ಏನೂ ತೊಂದರೆ ನೀಡಿಲ್ಲ ಎಂದು ತಿಳಿಯಿತು. ನನ್ನ ಗೆಳೆಯನಂತೂ ಜ್ವರ ಬಂದುಒಂದು ವಾರ ಮೇಲೇಳಲಿಲ್ಲ. ನಾನಂತೂ ದೆವ್ವಗಳು ಕಥೆ,ಕಲ್ಪನೆಗೆ ಮಾತ್ರ ಸೀಮಿತ ಎಂದುಕೊಂಡಿದ್ದವ, ಈ ಘಟನೆಯ ನಂತರ ದೇವರ ಅಸ್ಥಿತ್ವದಂತೆ, ದೆವ್ವದ ಅಸ್ಥಿತ್ವವನ್ನೂ ಸಹ ನಂಬಿದ್ದೇನೆ. ಕೆಲವು ಪೂರ್ವಾಗ್ರಹಪೀಡಿತ ದೆವ್ವಗಳ ಹೊರತು ಒಳ್ಳೆಯ ದೆವ್ವಗಳೂ ಇವೆಯೆಂದು ಭಾವಿಸೋಣ.

ಗುರುವಾರ, ಜನವರಿ 2, 2020

ಋಣಾನುಬಂಧ


ಅಂದು ಶೇಖರನ ತಿಥಿ. ಎಲ್ಲರೂ ತಿಂಡಿ ತಿನ್ನಲು ಕೂರಬೇಕೆಂದುಕೊಳ್ಳುವಷ್ಟರಲ್ಲಿ ಅವನ ಹೆಂಡತಿಯಿಂದ ಜೋರಾದ ಮಾತು ಕೇಳಿಸಿತು. "ಬನ್ನಿ,ಬನ್ನಿ, ತಿಂಡಿ ತಿನ್ನಿ. ಅವರಿದ್ದಿದ್ದರೆ ತಿಂಡಿ ತಿನ್ನಿಸದೆ ಕಳುಹಿಸುತ್ತಾ ಇದ್ರಾ?", "ಇವರು ನಿಂಬೆಹಣ್ಣು ಮಾರ್ತಾರೆ, ಶೇಖರ್ ಗೆ ಇವರಂದ್ರೆ ಅದೇನೋ ಮಮತೆ, ಮಮ್ಮಿ ತರಹಾನೇ ಇದ್ದಾರೆ ಅಂತಾ ಬಂದಾಗಲೆಲ್ಲಾ ಕೂರಿಸಿ, ಮಾತಾಡಿಸಿ ಕಳುಹಿಸುತ್ತಾ ಇದ್ರು."ಅಂತಾ ಎಲ್ಲರಿಗೂ ಕೇಳಿಸುವ ಹಾಗೆ ದೊಡ್ಡ ದ್ವನಿಯಲ್ಲಿ ಮಾತನಾಡಿಸಿ, ಯಾರಿಗೋ ಕೈ ಸನ್ನೆಯಲ್ಲೇ ಕರೆದು ತಿಂಡಿ ಕೊಡು ಅಂತಾ ಹೇಳಿ, ಆ ದೊಡ್ಡ ಬಂಗಲೆಯೊಳಗೆ ಹೋಗಿಬಿಟ್ಟಳು.

ಕಣ್ಣಲ್ಲಿ ನೀರು ತುಂಬಿಕೊಂಡ ವಯಸ್ಸಾದ ಅಜ್ಜಿಯೊಬ್ಬರು ಬಂದು ತಿಂಡಿ ತಿಂದು ಹೊರಡುವುದಕ್ಕೆ ಎದ್ದು ನಿಂತಾಗ, ಹೈ ಸೊಸೈಟಿ ಜನ ಎನ್ನಿಸಿಕೊಂಡವರು ಯಾರೂ, ಅವರನ್ನು ಮಾತಾಡಿಸುವುದಕ್ಕೂ ಮುಂದೆ ಬರದೆ ಅಲ್ಲೇ ನಿಂತು ಅನುಕಂಪದ ದೃಷ್ಟಿಯಿಂದ ನೋಡುವಾಗ, ನನಗೆ ತಡೆಯಲಾಗದೆ , "ಬನ್ನಿ ಅಮ್ಮ, ಒಳಗಡೆ ಬಂದು ಅವರಿಗೆ ಪೂಜೆ ಮಾಡಿ ಹೋಗಿ" ಅಂದಾಗ, ಇಲ್ಲ ತಾಯಿ ಹೊರಡುತ್ತೇನೆ ಎಂದು ಗೇಟಿನ ಹೊರಗೆ ಬಂದು ಅವರ ನಿಂಬೆ ಹಣ್ಣಿನ ಬುಟ್ಟಿಯನ್ನು ಯಾರಾದರೂ ಹೊರಿಸುತ್ತಾರೇನೋ ಅಂತಾ ನೋಡುತ್ತಾ ನಿಂತಿದ್ದಾಗ ಹೋಗಿ ಕೇಳಿದೆ. "ಶೇಖರಾ, ಅಷ್ಟೊಂದು ಪ್ರೀತಿಯಿಂದ ಕರೆದು ತಿಂಡಿ ಕೊಡುತ್ತಾ ಇದ್ದನಂತೆ, ನೀವ್ಯಾಕೆ ಅವನಿಗೆ ಪೂಜೆ ಕೂಡಾ ಮಾಡದೆ ಹೊರಟು ನಿಂತಿದ್ದೀರಾ? ಅದೂ ಒಳಗಡೆಗೂ ಬರದೆ..?" ಅಂದೆ.

ಅದಕ್ಕೆ ಆ ಅಜ್ಜಿ "ನೀವು ಕೂಡಾ ಅವಳ ಮಾತಿಗೆ ಬೆರಗಾಗಿ ಬಿಟ್ರಾ?" ಅಂದ್ರು. ನನಗೆ ಆಶ್ಚರ್ಯ ಆಯ್ತು, ಎಲ್ಲರೂ ಶೇಖರನ ಹೆಂಡತಿಯ ನಾಟಕೀಯ ವರ್ತನೆ ಮತ್ತು ಮಾತುಗಳ ಬಗ್ಗೆ ಹೇಳಿದ್ದರೂ ನನಗೇಕೋ ನಂಬಿಕೆ ಬಂದಿರಲಿಲ್ಲ. ಅದೇಕೋ ಈ ಮುಗ್ದ ಅಜ್ಜಿಯ ಮಾತನ್ನು ಕೇಳುತ್ತಾ ಹೋದಂತೆ ಶೇಖರನ ಮತ್ತು ಅವನ ಹೆಂಡತಿಯ ಮತ್ತೊಂದು ಮುಖ ಪರಿಚಯವಾಗುತ್ತಾ ಹೋಯಿತು.

ನನಗೆ ಅದನ್ನು ಅಜ್ಜಿ ಹೇಳಿದ್ದು ಹೀಗೆ.

"ಆ ಯಪ್ಪಾ ತುಂಬಾ ಒಳ್ಳೆಯವರು, ಆದರೆ ಯಾಕೆ ಇವರನ್ನು ಮದುವೆ ಮಾಡಿಕೊಂಡನೋ ಗೊತ್ತಿಲ್ಲ. ಮನೆ-ಅಳಿಯನ ರೀತಿ ಬದುಕುತ್ತಾ ಇದ್ದ ಇವರಿಗೆ, ಅಮ್ಮನ ಬಗ್ಗೆ ಪ್ರೀತಿ-ಕಾಳಜಿ ಇದ್ದರೂ ಅಮ್ಮನನ್ನು ಕರೆದುಕೊಂಡು ಬಂದು ಇಟ್ಟುಕೊಳ್ಳೋ ಸ್ವಾತಂತ್ರ್ಯ ಕೂಡಾ ಇರಲಿಲ್ಲ. ದುಡಿಯುತ್ತಾ ಇದ್ದದ್ದು ಇವರೇ ಆಗಿದ್ರೂ, ನಿರ್ಧಾರ ಅವಳದ್ದೇ.

ನಾನು ಬಂದಾಗಲೆಲ್ಲಾ 20 ರೂಪಾಯಿಗಳ ನಿಂಬೆಹಣ್ಣು ತೆಗೆದುಕೊಂಡು 50 ರೂಪಾಯಿ ಕೊಡ್ತಾ ಇದ್ರು. ಚಿಲ್ಲರೆ ಇಲ್ಲ ಅಂದ್ರೆ, ಚಿಲ್ಲರೆ ಬೇಡ ಇಟ್ಕೊಳ್ಳಿ ಅಂತಾ ಹೇಳ್ತಾ ಇದ್ರು. ಅವರ ಹೆಂಡತಿಗೆ ಬೀದಿಯಲ್ಲಿ ನನ್ನ ಜೊತೆಯಲ್ಲಿ ವ್ಯಾಪಾರ ಮಾಡುತ್ತಾ ಇದ್ದದ್ದು ಅವರ ದೊಡ್ಡಸ್ತಿಕೆಗೆ ಕುಂದು ಅಂತಾ ಅಂದುಕೊಳ್ತಾ ಇದ್ರು. ಅಷ್ಟೆಲ್ಲಾ ಇದ್ರೂ ನನಗೆ ಹೆಚ್ಚಿಗೆ ದುಡ್ಡು ಕೊಡುತ್ತಾ ಇದ್ದುದ್ದಕ್ಕಾಗಿ ಹಂಗಿಸುತ್ತಾ ಇದ್ರು, ಇವರು ಕೂಡಾ ಆಮೇಲಾಮೇಲೆ ಅದನ್ನು ನೋಡಲೂ ಆಗದೆ, ಆಯಮ್ಮನಿಗೆ ಜೋರು ಮಾಡಲೂ ಆಗದೆ ನಿಂಬೆಹಣ್ಣು ಕೊಂಡು ಅದನ್ನು ಅವರ ಕೈಯಲ್ಲಿ ಒಳಗಿಡುವುದಕ್ಕೆ ಕೊಟ್ಟು ಕಳಿಸಿ,ಆಮೇಲೆ ದುಡ್ಡು ಕೊಡ್ತಾ ಇದ್ರು.

ಕೆಲವೊಮ್ಮೆ ರಗಳೆ ತೆಗೆದು "ಮನೆಯಲ್ಲಿ ನಿಂಬೆಹಣ್ಣು ಇದ್ದಾವೆ, ಸುಮ್ಮನೆ ಯಾಕೆ ತೆಗೆದುಕೊಳ್ಳೂತ್ತೀರಾ?" ಅಂತಾ ತೆಗೆದುಕೊಳ್ಳುವುದಕ್ಕೆ ಬಿಡದೆ ಇರುವಾಗ, "ಅದನ್ನೆಲ್ಲಾ ಜೂಸ್ ಮಾಡಿ ಕೊಡು , ಇವತ್ತೇ ಕುಡಿದು ಖಾಲಿ ಮಾಡುತ್ತೇನೆ, ಈಗ ಸುಮ್ನಿರು" ಅಂದು ನಿಂಬೆಹಣ್ಣು ಕೊಂಡುಕೊಳ್ತಾ ಇದ್ರು.

ಕೆಲವೊಮ್ಮೆ ಇವರ ಮನೆ ಕಡೆ ಬರೋದೇ ಬೇಡ ಅಂದುಕೊಳ್ಳುತ್ತಾ ಇದ್ದರೂ,ಆ ಯಪ್ಪ ಹೇಳಿದ ಮಾತು ಆ ಯೋಚನೆಯನ್ನು ಬಿಡುವ ಹಾಗೆ ಮಾಡಿತು."ಅಮ್ಮನ್ನಂತೂ ಚೆನ್ನಾಗಿ ನೋಡಿಕೊಂಡು,ಅವರ ಜೊತೆ ಮಾತಾಡೋ ಯೋಗ ಇಲ್ಲದ ಹಾಗೆ ಆಯ್ತು. ನೀವು ನಮ್ಮಮ್ಮನ ತರಹಾನೇ ಇದ್ದೀರಾ.. ನೀವೂ ಬರದೇ ಇರಬೇಡಿ" ಅಂತಿದ್ರು.

ಬಂದಾಗಲೆಲ್ಲಾ ತಿಂಡಿ ಕೊಡು ಅಂದ್ರೆ ಮನೆಯಲ್ಲಿ ಮಿಕ್ಕಿದ್ದನ್ನೆಲ್ಲಾ ತಂದು ಕೊಡ್ತಾ ಇದ್ಲು ಆ ಮಹಾತಾಯಿ.ಕೆಲವೊಮ್ಮೆ ಹಳಸಿದ ಪದಾರ್ಥ ಕೂಡಾ ಇರ್ತಾ ಇತ್ತು. ಜೊತೆಗೆ "ಇಷ್ಟು ದೊಡ್ಡ ಮನೆಯ ಅನ್ನ ತಿನ್ನೋಕೂ ಪುಣ್ಯ ಮಾಡಿರಬೇಕು" ಅಂತಾ ಹಂಗಿಸುತ್ತಿದ್ದಳು. ಆ ಮನುಷ್ಯನ ಮನಸ್ಸಿಗೆ ಬೇಜಾರಾಗದೇ ಇರಲಿ ಅಂತಾ ಅದನ್ನು ತೆಗೆದುಕೊಂಡು, "ಈಗಷ್ಟೇ ತಿಂಡಿ ತಿಂದು ಬಂದಿದ್ದೀನಿ,ಆಮೇಲೆ ತಿಂತೀನಿ" ಅಂತಾ ಹೇಳಿ ಹೊರಟು ಬಿಡ್ತಾ ಇದ್ದೆ.

"ಹೊರಗಡೆ ಮಾತಾಡಿದ್ರೇ ಸಹಿಸದವಳು, ಮನೆ ಒಳಗಡೆ ಬಂದ್ರೇ ಸಹಿಸುತ್ತಾಳಾ? ನನ್ನನ್ನು ಕರೆದು ಅಷ್ಟು ಜೋರಾಗಿ ಮಾತನಾಡಿ ತಿಂಡಿ ತಿನ್ನಿ ಅಂದಿದ್ದು ಪ್ರತಿಷ್ಟೆಗೇ ಹೊರತು ಮತ್ತೇನಿಲ್ಲ."

"ಹೆತ್ತ ಮಕ್ಕಳು ನನ್ನನ್ನು ಸಾಕುವುದಕ್ಕೆ ದುಡ್ಡು ಕೇಳ್ತಾರೆ, ಅದನ್ನು ಕೊಟ್ಟರೂ ಪ್ರೀತಿಯಿಂದ ಒಂದು ದಿನವೂ ಮಾತನಾಡಿಸುವುದಿಲ್ಲ.ಅಂತಾದ್ರಲ್ಲಿ ನನ್ನಲ್ಲಿ ಅವರ ಅಮ್ಮನ ರೂಪ ಕಂಡು ಮಾತಾಡಿಸ್ತಾ ಇದ್ದ ಈತ ನಿಜವಾಗಲೂ ಒಳ್ಳೆಯ ಮನುಷ್ಯ" ಅಂತಾ ಹೇಳಿ ಬುಟ್ಟಿ ಹೊರಿಸಿಕೊಂಡು ಹೊರಟೇ ಬಿಟ್ಟರು.

"ಶೇಖರಾ ಯಾರಿಗೂ ಬಿಡಿಗಾಸು ಬಿಚ್ಚೋದಿಲ್ಲ, ಅಮ್ಮ ಸತ್ತಾಗಲೂ 2 ದಿನ ಉಳಿಯದೆ ದೊಡ್ಡಸ್ತಿಕೆ ತೋರಿಸಿ ಹೊರಟ" ಎಂಬ ಸುತ್ತಮುತ್ತಲಿನವರ ಅಪವಾದಗಳಿಗೆ ಕಾರಣ ಸಿಕ್ಕಿತು.

ಮಕ್ಕಳ ದುರಾಸೆಯಿಂದ ಬೀದಿ-ಬೀದಿಯಲ್ಲಿಅಲೆಯುತ್ತಿರುವ ಅಮ್ಮನಿಗೆ ಮಗನಾದ.ಹೆತ್ತ ತಾಯಿಯನ್ನು ನೋಡಿಕೊಳ್ಳಲಾಗದ ಅಸಹಾಯಕತೆಯಲ್ಲಿ ಕೊರಗಿ ತನ್ನದೇ ಮಾರ್ಗದಿಂದ ಒಬ್ಬಳು ಮಮತಾಮಯಿ ತಾಯಿಯನ್ನು ಪಡೆದುಕೊಂಡ. ಮಕ್ಕಳ ಪ್ರೀತಿಗೆ ಹಂಬಲಿಸುತಿದ್ದ ಅಮ್ಮನಿಗೆ ಮಗನ ಪ್ರೀತಿ ಸಿಕ್ಕಿತು. ತಾಯಿಯ ಪ್ರೀತಿಗೆ ಹಂಬಲಿಸುತ್ತಿದ್ದವನಿಗೆ ದೊಡ್ಡಸ್ತಿಕೆಯ ಅಹಂ ಅನ್ನು ತೊರೆದು ಶರಣಾದಾಗ ತಾಯಿಯ ವಾತ್ಸಲ್ಯ ಸಿಕ್ಕಿತು.

ಜನ್ಮ ಮಾತ್ರ ತಾಯಿ-ಮಕ್ಕಳ ಬಂಧವನ್ನು ಬೆಸೆಯುವುದಿಲ್ಲ, ಜೀವನ ಕೂಡಾ ತಾಯಿ-ಮಕ್ಕಳನ್ನು ಹತ್ತಿರ ತಂದು ಯಾವುದೋ ಎಳೆಯಿಂದ ಸೇರಿಸುತ್ತದೆ ಎಂಬ ಸತ್ಯ ದರ್ಶನವನ್ನು ಶೇಖರ ಮಾಡಿಸಿದ್ದ. ಋಣಾನುಬಂಧ ಕೇವಲ ಪಶು, ಪತ್ನಿ, ಮಕ್ಕಳು, ಮನೆಗೆ ಮಾತ್ರವಲ್ಲ. ಮಮತೆಯಿಂದ ಕೂಡಿದ ಇಂತಹಾ ತಾಯಿ ಮಕ್ಕಳ ಸಂಬಂಧವೂ ಋಣಾನುಬಂಧವೇ...

~ವಿಭಾ ವಿಶ್ವನಾಥ್