ಗುರುವಾರ, ಮೇ 31, 2018

ಯಾರಿಗಿಲ್ಲ ಕಷ್ಟ-ನೋವುಗಳು..?

"ನನ್ನಷ್ಟು ಕಷ್ಟ ಯಾರಿಗೂ ಇಲ್ಲ..."," ನನಗಿರುವ ಹಾಗೆ ತೊಂದರೆಗಳು ಬಂದಿದ್ದರೆ...","ನಾನು ಅನುಭವಿಸಿದ ನೋವನ್ನು ನೀವು ಅನುಭವಿಸಿದ್ದರೆ ನೀವು ಹೀಗಿರಲು ಸಾಧ್ಯವೇ ಇರುತ್ತಿರಲಿಲ್ಲ." ಎನ್ನುವವರೆಲ್ಲ ಗಮನಿಸಲೇಬೇಕಾದ ಅಂಶವೆಂದರೆ ನಿಮಗಿಂತ ಕಷ್ಟ ಪಟ್ಟವರು, ನಿಮಗಿಂತ ಕಷ್ಟಪಡುತ್ತಿರುವವರು ಇದ್ದೇ ಇರುತ್ತಾರೆ. ಆದರೆ ಕಷ್ಟಕ್ಕೆದರಿ ಪಲಾಯನ ಮಾಡಿದ್ದರೆ ಅಥವಾ ಕಷ್ಟ ಬಂದಿತೆಂದು ಹಾಗೆಯೇ ಇದ್ದುಬಿಟ್ಟಿದ್ದರೆ ಇಂದಿನ ಮುಕ್ಕಾಲು ಪಾಲು ಸಾಧಕರು ತಮ್ಮ ಗಮ್ಯವನ್ನು ಸಾಧಿಸುತ್ತಲೇ ಇರಲಿಲ್ಲ.

"ಯಾರಿಗಿಲ್ಲ ನೋವು, ಯಾರಿಗಿಲ್ಲ ಸಾವು
ವ್ಯರ್ಥ ವ್ಯಸನದಿಂದ ಸಿಹಿಯು ಕೂಡ ಬೇವು"

ಹೌದು, ಬದುಕಿನಲ್ಲಿ ನೋವು-ಕಷ್ಟಗಳಿಲ್ಲದೇ ಇರುವವರು ಯಾರು? ನಾವು ಮೊದಲು ಭೂಮಿಗೆ ಕಾಲಿಡುವುಡುವಾಗ ಅಮ್ಮ ಅನುಭವಿಸಿದ್ದೂ ನೋವೇ. ನೋವು-ಕಷ್ಟ ಎಂದುಕೊಂಡು ಅಮ್ಮಂದಿರು ಭಾವಿಸಿ ಹೆರಿಗೆ ನೋವನ್ನು ಅನುಭವಿಸದೇ ಇದ್ದಿದ್ದರೆ ಇಂದು ನಮಗೆ ಅಸ್ತಿತ್ವವೇ ಇರುತ್ತಿರಲಿಲ್ಲವೇನೋ?ಆಟ ಆಡುವಾಗ ಬಿದ್ದು ನೋವಾಯಿತು ಎಂಬ ಕಾರಣಕ್ಕೆ ಹೆದರಿ ಮಕ್ಕಳು ಅಳುತ್ತಾ ಕುಳಿತು ಆಟವನ್ನೇ ಆಡದಿದ್ದಿದ್ದರೆ ಮಕ್ಕಳ ಬೆಳವಣಿಗೆ ಆರೋಗ್ಯವಾಗಿರುತ್ತಿತ್ತೇ?ಕಷ್ಟಪಟ್ಟು ಓದುವುದೇತಕೆ?ಎಂದು ಸುಮ್ಮನೆ ಕುಳಿತಿದ್ದರೆ ವಿದ್ಯಾವಂತರೆನಿಸಿಕೊಳ್ಳಲಾಗುತ್ತಿತ್ತೇ?ಸಾಮಾಜಿಕ ಬದಲಾವಣೆಗಳಾಗುತ್ತಿದ್ದವೇ?

ಆದರೆ ಈ ಸಂದರ್ಭಗಳಲೆಲ್ಲ ಅಷ್ಟಾಗಿ ಕಾಡದ ಕಷ್ಟ ಎನ್ನುವ ಪದ ಕಾಡಲು ಶುರುವಾಗುವುದು ಉದ್ಯೋಗ ಅರಸಿಕೊಂಡು ಹೋಗಿ ಉದ್ಯೋಗ ದೊರಕದಿದ್ದಾಗ ಅಥವಾ ಸಣ್ಣ ಸಂಬಳದ ಉದ್ಯೋಗ ದೊರೆತಾಗ. "ನನಗೇ ಈ ಕಷ್ಟ ಏತಕೆ..?" ಎಂಬ ಪ್ರಶ್ನೆ ಕಾಡಲು ಶುರುವಾಗುತ್ತದೆ.

ಎಷ್ಟೋ ಜನರಿಗೆ ಉದ್ಯೋಗವೇ ಇರುವದಿಲ್ಲ ಅಥವಾ ದೇಹದ ಯಾವುದೋ ಭಾಗ ನ್ಯೂನತೆಯಿಂದ ಕೂಡಿರುತ್ತದೆ. ಅವರಿಗೆ ಹೋಲಿಸಿದರೆ ನಮ್ಮ ಪರಿಸ್ಥಿತಿ ಉತ್ತಮವೇ ಆಗಿರುತ್ತದೆ.ಆದರೆ ನಾವು ಅದನ್ನು ಗಮನಿಸುವ ಅಥವಾ ಯೋಚಿಸುವ ಮನಸ್ಥಿತಿಯಲ್ಲಿರುವುದಿಲ್ಲ ಅಷ್ಟೇ. ವ್ಯರ್ಥವಾಗಿ ಚಿಂತಿಸಿ ಸಿಕ್ಕ ಚಿಕ್ಕ ಖುಷಿಯನ್ನೂ ಕಳೆದುಕೊಂಡು ನಮ್ಮ ಬಾಳಲ್ಲಿ ಕಷ್ಟವೇ ತುಂಬಿದೆ ಎಂದು ವ್ಯಥೆಪಡುತ್ತೇವೆ.

ಹಾಗೆಂದು ಎಲ್ಲರ ಕಷ್ಟಗಳು ಚಿಕ್ಕವು ಅಂತಲೋ ಅಥವಾ ಏನೇನೂ ಇಲ್ಲ ಎಂದಲ್ಲ."ಆನೆಯ ಕಷ್ಟ ಆನೆಗಾದರೆ, ಇರುವೆಯ ಕಷ್ಟ ಇರುವೆಗೆ". ಅವರವರ ನೋವು-ಕಷ್ಟಗಳು ಅವರವರಿಗೆ ಹೆಚ್ಚು. ಆದರೆ ಕಷ್ಟ ಎಂದು ಕೊರಗಿದರೆ, ನೋವು ಎಂದು ಮರುಗಿದರೆ ಅವೆಲ್ಲಾ ಬಗೆಹರಿದುಬಿಡುತ್ತವೆಯೇ? ಸುಖ ಈ ಘಳಿಗೆಯೇ ಬರಬೇಕೆಂದುಕೊಂಡರೆ ಮಾತ್ರ ಸಾಧ್ಯವೇ?

"ಯಾವುದೂ ಕೂಡಾ ಸುಲಭವಾಗಿ ಅಥವಾ ಉಚಿತವಾಗಿ ದೊರೆಯುವುದಿಲ್ಲ. ಹಾಗೆ ದೊರೆತರೂ ಅದು ಶಾಶ್ವತವಾಗಿ ಇರುವುದೂ ಇಲ್ಲ" ಎಂಬ ಮಾತುಗಳನ್ನು ಆಗಾಗ ಓದುತ್ತಲೋ ಅಥವಾ ಕೇಳುತ್ತಲೋ ಇರುತ್ತವೆ. ಆದರೂ ಈ ಕ್ಷಣ ನನ್ನ ಕಷ್ಟಗಳೆಲ್ಲಾ ದೂರವಾಗಬೇಕು ಎನ್ನುತ್ತಾ ಅದನ್ನು ಒಪ್ಪಲು ತಯಾರಿರುವುದಿಲ್ಲ. ಒಟ್ಟಾರೆ ಗಿಣಿಪಾಠದಂತೆ ಅದನ್ನು ಜಪಿಸುತ್ತೇವೆ ಅಷ್ಟೇ.

ಕಷ್ಟಗಳನ್ನು ಸಹಿಸುವ ಸಾಮರ್ಥ್ಯ ಉಳ್ಳವರಿಗೆ ಮಾತ್ರ ಕಷ್ಟಗಳು ಬರುತ್ತವೆ. ಜೊತೆಗೆ ಅವು ನಮ್ಮ ಬಾಳಿನಲ್ಲಿ ಹೊಸ ಪಾಠವೊಂದನ್ನು ಕಲಿಸಿ ಹೋಗುತ್ತವೆ. ಕಷ್ಟದಲ್ಲಿ ಜೊತೆಯಲ್ಲಿ ನಿಲ್ಲುವವರಾರು, ನಮ್ಮ ಹಿತಚಿಂತಕರು ಮತ್ತು ಹಿತಶತ್ರುಗಳು ಯಾರು ಎಂಬುದರಿಂದ ಹಿಡಿದು ಕಷ್ಟವನ್ನು ಸಹಿಸಿ ನಿಲ್ಲುವ ಸೈರಣೆಯನ್ನೂ ಅದು ತಿಳಿಸಿಕೊಡುತ್ತೇವೆ. ಯಾವುದೇ ಕಷ್ಟ,ಯಾವುದೇ ನೋವು ಬಂದರೂ ಅದನ್ನು ಮೆಟ್ಟಿ ನಿಲ್ಲುತ್ತೇವೆ ಎಂಬುದು ನಿಜವಾದ ಶಕ್ತಿ.ಆ ಸಮಯದಲ್ಲಿ ಮುಖದಲ್ಲಿ ಮುಗುಳ್ನಗು, ಶಾಂತತೆಯ ಜೊತೆಗೆ ಸರಿಯಾದ ನಿರ್ಧಾರ ನಮ್ಮನ್ನು ಕಷ್ಟದಿಂದ ಬಿಡಿಸಲು ಸಹಾಯಕ. ಅಕಸ್ಮಾತ್ ಈ ಪರಿಸ್ಥಿತಿಯಲ್ಲಿ ನಾವಿಲ್ಲದೇ ಇದ್ದರೂ, ನಮ್ಮ ಹತ್ತಿರದವರು ಅಥವಾ ಪರಿಚಿತರು ಆ ಪರಿಸ್ಥಿತಿಯಲ್ಲಿದ್ದರೆ ಅವರಿಗೆ ಸಾಂತ್ವನ, ಧೈರ್ಯ ತುಂಬುವ ಆತ್ಮವಿಶ್ವಾಸದಾಯಕ ಮಾತುಗಳನ್ನಾಡೋಣ. ಇದು ಸಾಧ್ಯವಾಗದಿದ್ದಲ್ಲಿ ಕುಗ್ಗಿಸುವ ಮಾತುಗಳಂತೂ ಬೇಡ.

ದೇವರೆನಿಸಿಕೊಂಡ ರಾಮನಿಗೇ ವನವಾಸದ ಕಷ್ಟ ತಪ್ಪಲಿಲ್ಲ, ಕೃಷ್ಣನಿಗೆ ಶ್ಯಮಂತಕ ಮಣಿಯನ್ನು ಕದ್ದ ಎಂಬ ಅಪವಾದ ಕಾಡದೇ ಬಿಡಲಿಲ್ಲ. ಆದರೆ ಅವರು ಈ ಸಂಧರ್ಭಗಳಿಗೆ ಅಂಜದೆ, ಅವುಗಳನ್ನು ಅನುಭವಿಸಿ ಮುನ್ನಡೆದರು. ಕಷ್ಟ ಕಳೆದ ಮೇಲೆ ಸುಖ ಬಂದೇ ಬರುವುದು. ಒಳ್ಳೆಯ ಕಾಲಕ್ಕಾಗಿ ಕಾಯೋಣ. ಇಂದಿನ ಕಷ್ಟದ ದಿನಗಳಿಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಪ್ರತಿಫಲ ಸಿಕ್ಕೇ ಸಿಗುವುದು ಎಂಬ ಭರವಸೆಯೊಂದಿಗೆ ಕಾಯೋಣ. ರಾಮ-ಕೃಷ್ಣರಷ್ಟು ಸೈರಣೆ ಇಲ್ಲದಿದ್ದರೂ, ನಮಗೆ ಸಾಧ್ಯವಾಗುವಷ್ಟು ಸಮಾಧಾನ ತಂದುಕೊಂಡು ಧೈರ್ಯವಾಗಿ ಕಷ್ಟದ ದಿನಗಳನ್ನು ಕಳೆಯೋಣ.

"ಬಾಳ ಕದನದಲ್ಲಿ ಭರವಸೆಗಳು ಬೇಕು
ನಾಳೆ ನಮ್ಮದೆನ್ನುವ ನಂಬಿಕೆಗಳು ಬೇಕು"  
ಹೌದು, ಈ ಮಾತಿನಂತೆಯೇ ಭರವಸೆಯನ್ನು ಮೂಡಿಸಿಕೊಳ್ಳುತ್ತಾ ನಂಬಿಕೆಯೊಡನೆ ಹೆಜ್ಜೆ ಹಾಕೋಣ. ನೆಮ್ಮದಿಯ ನಾಳೆಗಳಿಗಾಗಿ..

-ವಿಭಾ ವಿಶ್ವನಾಥ್

ಭಾನುವಾರ, ಮೇ 27, 2018

ಮಾರಿಯೇ..? ಮಹಾಲಕ್ಷ್ಮಿಯೇ..?

ಪರಿಮಳ ಅವಳ ದೊಡ್ಡಮ್ಮನ ಜೊತೆ ಮಾತನಾಡುತ್ತಿರುವಾಗ, ಅಣ್ಣನ ಮದುವೆಯ ವಿಚಾರ ಬಂದಿತು. "ಅತ್ತಿಗೆಯನ್ನು ಮನೆಗೆ ಕರೆದುಕೊಂಡು ಬರುವುದು ಯಾವಾಗ?, ಅಣ್ಣನ ಮದುವೆಗೆ ನಾನು ಆ ಸೀರೆಗೆ ಬ್ಲೌಸ್ ಹೊಲೆಸಿಕೊಳ್ಳಬೇಕು.. ಅವನಿಗೆ ಬೇಗ ಮದುವೆ ಮಾಡಿ" ಎಂದು ಹೇಳುತ್ತಿರುವಾಗ ಅಣ್ಣ ಮಧ್ಯದಲ್ಲಿ ಬಂದು "ಮೊದಲು ನಿನ್ನ ಮದುವೆ,ಆಮೇಲೆ ನನ್ನದು" ಎಂದ. "ಯಾಕೆ? ಎಲ್ಲದಕ್ಕೂ ನಾನೇ ಮೊದಲು ಅಂತಾ ಹೇಳ್ತಾ ಇರುತ್ತೀಯಾ, ಮೊದಲು ನೀನೇ ಮದುವೆ ಆಗು" ಎಂದ ಕನಕಳಿಗೆ ಪ್ರತ್ಯುತ್ತರವಾಗಿ ದೊಡ್ಡಮ್ಮ "ಮಾರಿಯನ್ನು ಕಳುಹಿಸಿ, ಮಹಾಲಕ್ಷ್ಮಿಯನ್ನು ಮನೆಗೆ ಕರೆದುಕೊಂಡು ಬಾ" ಎನ್ನುವ ಗಾದೆಯನ್ನು ಕೇಳಿಲ್ಲವೇ?" ಎಂದರು.

ಅದಕ್ಕೆ ಹುಸಿಕೋಪವನ್ನು ನಟಿಸುತ್ತಾ ಪರಿಮಳ "ಹಾಗಾದರೆ, ನಾವುಗಳು ಅಂದರೆ ಹೆಣ್ಣುಮಕ್ಕಳು ಅಂದರೆ ನಾವುಗಳು ಮಾರಿ ಎಂದು ತಾನೇ ನೀವು ಹೇಳುತ್ತಿರುವುದು" ಎಂದಾಗ ಅದು "ಆ ಅರ್ಥದಲ್ಲಲ್ಲಾ ನಾನು ಹೇಳಿದ್ದು." ಎಂದರು.
"ಈ ಮನೆಗೆ ನಾವು ಮಾರಿಯರಾದರೂ, ಇನ್ನೊಂದು ಮನೆಗೆ ನಾವು ಮಹಾಲಕ್ಷ್ಮಿಯರೇ ತಾನೇ?" ಎಂದು ಹೇಳಿ ಆ ಸಂಧರ್ಭವನ್ನು ತಿಳಿಗೊಳಿಸಿದಳು ಪರಿಮಳ.

"ಮಾರಿ ಎಂದರೆ ಮಾರಾಟ ಎಂದೂ ಅರ್ಥ ಬರುತ್ತದೆ, ಅಂದರೆ ಬರಿಗೈಯಲ್ಲಿ ಕಳುಹಿಸದೇ ನಿಮ್ಮನ್ನು ಕೈತುಂಬಾ ಜೀವನಕ್ಕಾಗುವಂತೆ ವರದಕ್ಷಿಣೆಯನ್ನೂ ಕೊಟ್ಟು ಕಳುಹಿಸುತ್ತೇವಲ್ಲಾ" ಎಂದರು ದೊಡ್ಡಮ್ಮ.
"ಅದನ್ನೆಲ್ಲಾ ನಮಗೆ ಕೊಡಿ ಎಂದವರು ಯಾರು?" ಎಂದದ್ದಕ್ಕೆ ಪ್ರತ್ಯುತ್ತರವಾಗಿ ದೊಡ್ಡಮ್ಮ "ಕೊಡದಿದ್ದರೆ ಸುಮ್ಮನೆ ಬಿಡುತ್ತೀರಾ ನೀವು? ನೀವು ಬಿಟ್ಟರೂ ಉಳಿದವರು ಸುಮ್ಮನಿರುತ್ತಾರಾ?"  ಎಂದರು.

"ನೀವು ಕೇಳಿದಂತೆಯೇ ಅಲ್ಲವೇ? ಅವರೂ ಕೇಳುವುದು..
ನೀವು ಅಪೇಕ್ಷಿಸಿದಂತೆಯೇ ಅಲ್ಲವೇ? ಅವರೂ ಅಪೇಕ್ಷಿಸುವುದು..
ನೀವು ಯೋಚಿಸಿದಂತೆಯೇ ಅಲ್ಲವೇ? ಅವರೂ ಯೋಚಿಸುವುದು..
ಮನೆಗೆ ಬರುವ ಸೊಸೆಯಿಂದ ಏನನ್ನೂ ಅಪೇಕ್ಷಿಸಬೇಡಿ, ಮಗಳಿಗೂ ಏನನ್ನೂ ಕೊಟ್ಟು ಕಳುಹಿಸಬೇಡಿ" ಎಂದಳು ಪರಿಮಳ.
"ಸರಿ ಆಯ್ತಮ್ಮಾ, ಹಾಗೇ ಮಾಡುತ್ತೇವೆ." ಎಂದು ಆ ಸಂಧರ್ಭಕ್ಕೆ ತೆರೆ ಎಳೆದರು ದೊಡ್ಡಮ್ಮ.

ಇದು ಬರೀ ಪರಿಮಳ ಮತ್ತು ದೊಡ್ಡಮ್ಮನ ನಡುವೆ ನಡೆಯುವ ಮಾತು-ಕಥೆಯಲ್ಲ. ಪ್ರತಿ ಮನೆಯಲ್ಲೂ ಇಂತಹದ್ದೊಂದು ಸಂಭಾಷಣೆ ಯಾರ ನಡುವೆಯಾದರೂ ನಡೆದೇ ಇರುತ್ತದೆ.

ವೇದ ಸುಳ್ಳಾದರೂ, ಗಾದೆ ಸುಳ್ಳಾಗದು ಎಂಬ ಒಂದು ಮಾತಿದೆ. ಆದರೆ ಈ ಸಂಧರ್ಭಕ್ಕೆ ಅದನ್ನು ಹೇಗೆ ಬಳಸಿಕೊಳ್ಳಬೇಕೋ ಗೊತ್ತಿಲ್ಲ. ಬಹುಶಃ ಮನೆಯಲ್ಲಿದ್ದ ಹಠಮಾರಿ ಮಗಳು , ಇನ್ನೊಂದು ಮನೆಯಲ್ಲಿ ಸೌಮ್ಯರೂಪಿಯಾದ ದೇವತೆ ಮಹಾಲಕ್ಷ್ಮಿಯಂತೆ ಬಾಳಬಹುದು ಎಂಬ ಅರ್ಥ ಬರಬಹುದೇನೋ?

ಹೆಣ್ಣುಮಕ್ಕಳು ಅಣ್ಣ-ತಮ್ಮಂದಿರ ಕಾಟ ಕೊಟ್ಟಿರಬಹುದೇನೋ, ಆದರೆ ಮಾರಿಯಷ್ಟು ಹಟಮಾರಿ, ಉಗ್ರರೂಪಿ ಖಂಡಿತಾ ಆಗಿರುವುದಿಲ್ಲ. ಮಾರಿಯೇ ಆದರೆ, ಹಾಗೇ ಅನ್ನಿಸಿದರೂ ಅವಳೂ ದೇವತೆಯೇ ಅಲ್ಲವೇ? ಅಕಸ್ಮಾತ್ ಮನೆಮಗಳು ಅಷ್ಟು ಕಾಟ ಕೊಟ್ಟರೂ ಅವಳನ್ನು ಕಳುಹಿಸುವಾಗ ಎಲ್ಲರ ಕಣ್ಣಲ್ಲೂ ನೀರು ತುಂಬಿ ಬೇಸರವಾಗುವುದೇಕೆ?

ಇನ್ನು ಕೊಡು-ಕೊಳ್ಳುವಿಕೆಯ ವಿಷಯದಲ್ಲಿ ವರದಕ್ಷಿಣೆ ಎಂಬ ಪದ ನೇಪಥ್ಯಕ್ಕೆ ಸರಿಯುತ್ತಿದ್ದರೂ ಮಗಳು ಸುಖವಾಗಿರಲೆಂಬ ಕಾರಣಕ್ಕೆ ಹೆತ್ತವರು ಉಡುಗೊರೆ ನೀಡಿ ಕಳುಹಿಸುತ್ತಾರೆ. ಅದನ್ನುತಮ್ಮ ಮಗನ ಜೀವನದಲ್ಲಿಯೂ ಅಪೇಕ್ಷಿಸುತ್ತಾರೆ ಸಹಾ... ಇದು ಬದಲಾಗದೇ?

ಹೆಣ್ಣು ಮಕ್ಕಳಿಗೆ ಇಂದು ವಿದ್ಯೆ ನೀಡಿ ತಮ್ಮ ಕಾಲ ಮೇಲೆ ತಾವು ನಿಲ್ಲುವಂತೆ ಮಾಡಿ ಸ್ವಾತಂತ್ರ್ಯ, ಸ್ವಾಭಿಮಾನದ ಉಡುಗೊರೆಯನ್ನು ಉಡಿ ತುಂಬಿಸಿದ ಮೇಲೆ ಅವರು ಖಂಡಿತಾ ಮತ್ತೇನನ್ನೂ ಅಪೇಕ್ಷಿಸುವುದಿಲ್ಲ, ಹೆತ್ತವರ ಮತ್ತು ಒಡಹುಟ್ಟಿದವರ ಪ್ರೀತಿಯ ಹೊರತು.

ಮಾರಿಯನ್ನು ಕಳುಹಿಸಿ,ಮಹಾಲಕ್ಷ್ಮಿಯನ್ನು ಮನೆತುಂಬಿಸಿಕೊಳ್ಳುತ್ತಿದ್ದೇವೆ ಎನ್ನುವುದಕ್ಕಿಂತ ಮಹಾಲಕ್ಷ್ಮಿಯನ್ನು ಕಳುಹಿಸಿ,ಮಹಾಲಕ್ಷ್ಮಿಯನ್ನೇ ಮನೆತುಂಬಿಸಿಕೊಳ್ಳುತ್ತಿದ್ದೇವೆ ಎನ್ನಬಾರದೇಕೆ?

-ವಿಭಾ ವಿಶ್ವನಾಥ್

ಭಾನುವಾರ, ಮೇ 13, 2018

ಅಮ್ಮ ಎಂಬ ಮಾಯಾವಿ


ಕಿನ್ನರ ಲೋಕದಿಂದ ಇಳಿದು ಬರುವ ಅಪ್ಸರೆ ತನ್ನ ಮಂತ್ರದಂಡದಿಂದ ಮಾಡುವ ಮಾಯೆಗೆ ಆಶ್ಚರ್ಯಪಟ್ಟು ಒಮ್ಮೆ ಅವಳನ್ನು ನೋಡಬೇಕು ಅನ್ನಿಸುವ ನಮಗೆ,ನಮ್ಮ ಕಣ್ಣಮುಂದೆಯೇ ಇರುವ ಮಾಯಾವಿ ಯಾಕೋ ಅದೃಶ್ಯಳಾಗಿಯೇ ಉಳಿದು ಬಿಡುತ್ತಾಳೆ. ಯಾವುದೋ ಮಂತ್ರ ಹೇಳಿ,ಕಣ್ಕಟ್ಟು ವಿದ್ಯೆ ಪ್ರದರ್ಶಿಸಿ ಮಾಯಾ-ಮಂತ್ರ ಮಾಡೋ ಮಾಯಾವಿ ಇವಳಲ್ಲ.ಆದರೆ ನಮ್ಮಂತೆಯೇ ಎರಡೇ ಕೈ, ಎರಡೇ ಕಾಲು ಇದ್ದರೂ ನಮಗಿಂತ ಹೆಚ್ಚು ವೇಗವಾಗಿ ಕೆಲಸ ಮಾಡಿ, ಎಲ್ಲವನ್ನೂ ನಿಭಾಯಿಸೋ ಅದ್ಭುತ ಶಕ್ತಿ.

ಆ ಕಡೆ ಅಡುಗೆ ಮಾಡ್ತಾ, ಈ ಕಡೆ ಮಕ್ಕಳನ್ನೂ ಸಂಭಾಳಿಸುತ್ತಾ, ವಾಶಿಂಗ್ ಮಷೀನ್ ಗೆ ಬಟ್ಟೆ ಹಾಕ್ತಾ, ಒಂದು ಕಿವಿಯನ್ನು ಮೊಬೈಲ್ ಗೆ ಕೊಟ್ಟು, ಮತ್ತೊಂದರಲ್ಲಿ ಮನೆಯ ಎಲ್ಲರ ಬೇಕು-ಬೇಡಗಳಿಗೆ ಓಗೊಡುತ್ತಾ ನಾಳೆಗೂ ಸಿದ್ದತೆ ಮಾಡಿಕೊಳ್ಳುವ ಸರ್ವಾಂತರ್ಯಾಮಿ ಅಮ್ಮ.

ತಲೆನೋವು ಅಂದಾಗ ಒಂದು ಲೋಟ ಸ್ಟ್ರಾಂಗ್ ಕಾಫಿ ಮಾಡಿಕೊಟ್ಟು ತಲೆನೋವು ಮಾಯಮಾಡೋ ಯಕ್ಷಿಣಿ, ಮಕ್ಕಳಿಗೆ ಸ್ವಲ್ಪ ಹುಷಾರಿಲ್ಲದೇ ಇದ್ದರೂ, ಎಷ್ಟೇ ದೂರದಲ್ಲಿದ್ದರೂ ಧ್ವನಿ ಕೇಳಿಯೇ ಗುರುತಿಸಿ ಕಾಳಜಿ ಮಾಡುವ ಮಮತಾಮಯಿ. ಮನಸ್ಸಿನ ಎಲ್ಲಾ ಬೇಜಾರುಗಳನ್ನೂ ತನ್ನ ನಿಷ್ಕಲ್ಮಶ ನಗು ಎನ್ನುವ ಮಾಯಾದಂಡದಿಂದ ಮಾಯ ಮಾಡಿಬಿಡುವ ಕಿನ್ನರಿ.ಯಾವುದಾದರೂ ಕಾರ್ಯಕ್ರಮಗಳಿಗೋ, ಸಮಾರಂಭಗಳಿಗೋ ಹೊರಟಾಗ ಹೇಗೆ ಕಾಣಿಸ್ತಾ ಇದ್ದೀವಿ ಅಂತಾ ಮೊದಲು ಕಾಂಪ್ಲಿಮೆಂಟ್ ಕೊಡೋ ಗೆಳತಿ. ಮಕ್ಕಳನ್ನು ದೂರಕ್ಕೆ ಕಳುಹಿಸುವ ಸಂದರ್ಭದಲ್ಲಿ ಮುಖದ ಮೇಲೆ ಬಲವಂತದ ನಗು ಇಟ್ಟುಕೊಂಡು,ಮನದ ತುಂಬಾ ನೋವು, ಕಣ್ಣ ತುಂಬಾ ನೀರು ತುಂಬಿಕೊಳ್ಳೋ ಅಳುಬುರುಕಿ.

ಅಮ್ಮನ ರೂಪಗಳೂ ಹಲವು. ಅದಕ್ಕೇ ಹೇಳಿದ್ದು ನಾನು ಅಮ್ಮ ಮಾಯಾವಿ ಅಂತಾ.ಸ್ಕೂಲಿಗೆ ಮೊದಲ ದಿನ ಅಳ್ತಾ,ಅಳ್ತಾ ಹೋಗಿ ಹಠ ಮಾಡಿಕೊಂಡು ನಿಂತಾಗ ಕೈ ಹಿಡಿದುಕೊಂಡು ಕರೆದುಕೊಂಡು ಹೋಗುವ ಕೈಯ್ಯ ಹಿಡಿತದಲ್ಲಿ ಅಮ್ಮನ ಧೈರ್ಯ ಇರುತ್ತದೆ. ಅಳು ನಿಲ್ಲಿಸದೇ ಇದ್ದಾಗ ಗದರದೇ ರಮಿಸಿ, ಚಾಕೋಲೇಟ್ ಕೊಟ್ಟು ಶಾಲೆ ಬಗ್ಗೆ ಆಸಕ್ತಿ ಮೂಡಿಸೋ ಶಿಕ್ಷಕಿಯಲ್ಲಿಅಮ್ಮ ಕಾಣ್ತಾಳೆ. ಕ್ಲಾಸ್ ಅಲ್ಲಿ ಪಕ್ಕ ಕುಳಿತುಕೊಂಡು ಧೈರ್ಯ ತುಂಬೋ, ಊಟ ಮಾಡುವಾಗ ಜೊತೆಯಲ್ಲಿ ಹಂಚಿ ತಿನ್ನೋ ಗೆಳತಿಯಲ್ಲಿ ಅಮ್ಮ ಇರ್ತಾಳೆ.

ಎಷ್ಟೇ ಕೀಟಲೆ ಮಾಡಿದರೂ ದೂರದೇ, ಅವಳಿಗೆ ಕೊಟ್ಟಿದ್ದರಲ್ಲೇ ಒಂದು ಪಾಲನ್ನು ಮುಚ್ಚಿಟ್ಟು ಕೊಡುವ ಅಕ್ಕನಲ್ಲಿ ಅಮ್ಮನ ಪ್ರೀತಿ ಇರುತ್ತೆ.ಎಷ್ಟೇ ಜಗಳ ಮಾಡಿದರೂ,ಬೈದು-ಹೊಡೆದಾಡಿದರೂ ಮತ್ತೆ-ಮತ್ತೆ ಹಿಂದೆ-ಹಿಂದೆ ಬಂದು ಮಾತಾಡಿಸೋ ಮುಗ್ಧತೆಯಲ್ಲಿ ಅಮ್ಮ ಇರುತ್ತಾಳೆ.

ಆಟ ಆಡುವಾಗ ಬಿದ್ದು ಅಳ್ತಾ ಇರುವಾಗ,ಓಡಿಬಂದು ಎತ್ತಿ "ಏಟಾಯ್ತಾ" ಅಂತಾ ಕಕ್ಕುಲಾತಿಯಿಂದ ವಿಚಾರಿಸಿ, "ನೋಡಿಕೊಂಡು ಆಟ ಆಡಬಾರದಾ?" ಎಂದು ಅಕ್ಕರೆಯಿಂದ ಬಯ್ಯುವ ಹಿತೈಷಿಯ ಬೈಗುಳದಲ್ಲಿ ಅಮ್ಮ ಧ್ವನಿಸುತ್ತಾಳೆ.

"ಹುಷಾರು","ಮನೆ ತಲುಪಿದ್ಯಾ?","ಮೊದಲು ಊಟ ಮಾಡು, ಆಮೇಲೆ ಕೆಲಸ", "ನೀನು ಮೊದಲು ತಿನ್ನು", "ಖುಷಿ ಆಯ್ತಾ?", "ಜಾಸ್ತಿ ನಿದ್ದೆಗೆಡಬೇಡ", "ಚೆನ್ನಾಗಿ ಓದ್ಕೋ", "ನಿಂಗಿಷ್ಟ ಅಂತಾ ತಂದೆ", "ನಿನಗೆ ಇಷ್ಟ ಆಗುತ್ತೆ ಅಂತಾ ಗೊತ್ತಿತ್ತು, ಅದಕ್ಕೇ ಆರಿಸಿದೆ" ಇನ್ನೂ ಹೀಗೇ ಹಲವಾರು ಇಷ್ಟ-ಕಷ್ಟಗಳನ್ನು ಅರಿತು ಕಾಳಜಿ ಮಾಡೋ ಪ್ರತಿಯೊಬ್ಬರಲ್ಲೂ ಅಮ್ಮನ ಛಾಯೆ ಇರುತ್ತೆ.

ಪ್ರೀತಿಯಲ್ಲಿ ಸೋತು ತಲೆ ಮೇಲೆ ಕೈಯಿಟ್ಟುಕೊಂಡು ಕೂತಿದ್ದಾಗ "ಪ್ರೀತಿ ಅಂದ್ರೆ ಅದಲ್ಲ, ನಿಜವಾದ ಪ್ರೀತಿ ಅಂದ್ರೆ ಅಮ್ಮನ ಪ್ರೀತಿ" ಅಂತಾ ತಿಳಿ ಹೇಳಿ ತಿದ್ದುವ ಗೆಳತಿ ಥೇಟ್ ಅಮ್ಮನಂತೇ ಕಾಣಿಸ್ತಾಳೆ. "ನೀನು ಹೀಗೇ ಇದ್ರೆ ಮುಗೀತು ಕಥೆ, ನಿನಗೆ ಹಠ-ಛಲ ಇದ್ದರೆ ಆಡಿಕೊಳ್ಳೂವವರ ಮುಂದೆ ಗೆದ್ದು ತೋರಿಸು" ಅಂತಾ ಛಾಲೆಂಜ್ ಮಾಡಿ, ಬೈಯ್ಯುತ್ತಾ ಬೈಯ್ಯುತ್ತಲೇ ಆತ್ಮಸ್ಥೈರ್ಯ ತುಂಬುವ ಜೊತೆಗಾತಿಯಲ್ಲಿ ಅಮ್ಮ ಕಾಣಸಿಕ್ತಾಳೆ. ಬೈದು ಬುದ್ದಿ ಹೇಳಿ ಸರಿದಾರಿಯಲ್ಲಿ ನಡೆಸುವ ಗೆಳತಿಯ ನಿಸ್ವಾರ್ಥತೆಯಲ್ಲಿ ಅಮ್ಮನ ಕಾಳಜಿ ತುಂಬಿರುತ್ತೆ.

ಸ್ನೇಹಿತರ ಅಮ್ಮಂದಿರ ಕೈರುಚಿಯಲ್ಲಿ ಅಮ್ಮ ನೆನಪಾಗ್ತಾಳೆ. ಭೇಧ-ಭಾವ ತೋರಿಸದೆ ತನ್ನ ಮಕ್ಕಳಂತೆಯೇ ನೋಡಿಕೊಳ್ಳುವ ಚಿಕ್ಕಮ್ಮ-ದೊಡ್ಡಮ್ಮಂದಿರು ಅಮ್ಮನ ಪ್ರತಿರೂಪವೇ ಸರಿ. ಅಷ್ಟೇ ಯಾಕೆ, ಮುದ್ದು-ಮುದ್ದು ಮಾತಾಡುವ ಪುಟಾಣಿಯ ಪ್ರಶ್ನೆಗಳ ಕೌತುಕದಲ್ಲಿ ಅಮ್ಮ ಕಾಣ್ತಾಳೆ.

ಇಷ್ಟೆಲ್ಲಾ ಕಡೆ ಕಾಣಿಸಿ, ಪ್ರೀತಿ ಹಂಚಿ, ಧೈರ್ಯ ನೀಡಿ, ಸ್ಥೈರ್ಯ ತುಂಬಿ ಬಾಳಿಗೇ ದಾರಿದೀಪ ಆಗುವ ಅಮ್ಮ ಮಾಯಾವಿ ಅಲ್ಲದೇ ಮತ್ತೇನು?

-ವಿಭಾ ವಿಶ್ವನಾಥ್

ಗಜಲ್-01


ಮಗುವಿಗೆ ತನ್ನ ಪ್ರೀತಿಯನೆಲ್ಲಾ ಕೊಡುವವಳು ಅಮ್ಮ
ಮಮತೆಯ ಜೀವಧಾರೆಯ ಉಣಿಸಿ ಬೆಳೆಸುವವಳು ಅಮ್ಮ

ಅಳುವ ಮಗುವಿಗಾಗಿ ಮರುಗಿ ಕೊರಗಿ ತಾನು
ಸಕಲ ಕೆಲಸವನೆಲ್ಲ ಬಿಟ್ಟು ರಮಿಸುವವಳು ಅಮ್ಮ

ತನ್ನ ಕಷ್ಟವನ್ನೂ ಲೆಕ್ಕಿಸದೆ, ಕಂದನ ಏಳಿಗೆಗಾಗಿ
ತನ್ನದೆಲ್ಲವ ತ್ಯಜಿಸಿ ದುಡಿದು ದಣಿಯುವವಳು ಅಮ್ಮ

ತಾನು ಅರೆಹೊಟ್ಟೆಯಲಿ ಇದ್ದರೂ ಅದನು ನೆನೆಯದೆ
ಕಂದನ ತೃಪ್ತಿಗಾಗಿ ತನ್ನ ಪಾಲನು ಉಣಿಸುವಳು ಅಮ್ಮ

ಕಿರಿಯರನ್ನು ಪ್ರೀತಿಸಿ, ಹಿರಿಯರನ್ನು ಗೌರವಿಸು ಎನ್ನುತ
ತಾನೇ ದೇವರಾಗಿ ನಿಂತು ಪಾಲಿಸುವವಳು ಅಮ್ಮ

ಸ್ವಾರ್ಥವಿಲ್ಲದ ಪ್ರೀತಿ ತೋರಿ, ನಿಸ್ವಾರ್ಥತೆಯಿಂದ ಬಾಳಿ
ತನ್ನ ಛಾಪನು ನಮ್ಮಲ್ಲಿ ಮೂಡಿಸಿ ಹೊರಡುವವಳು ಅಮ್ಮ

ವಿಭಾಳ ಬಾಳಿನ ಪ್ರತಿ ಹೆಜ್ಜೆಯಲೂ ಜೊತೆಗೆ ನಿಂತು
ತಪ್ಪು-ಸರಿಯ ವಿಮರ್ಶಿಸುತ ದಾರಿದೀಪವಾಗಿರುವವಳು ಅಮ್ಮ

~ವಿಭಾ ವಿಶ್ವನಾಥ್


ಶುಕ್ರವಾರ, ಮೇ 4, 2018

ನೈತಿಕತೆ-ಅನೈತಿಕತೆ

ನೈತಿಕತೆ-ಅನೈತಿಕತೆಯ ದ್ವಂದ್ವದಲಿ
ಸವೆದಿತ್ತು ಬಾಳು ಸರಿಯಾಗದಂತೆ

ಸಂಬಂಧದ ಬಂಧನದೊಳಗೆ
ಬಂಧಿಯಾದಾಗ ಹೇಳಿದರು
ಇದು ಬಿಡಿಸಲಾರದ ಬಂಧವೆಂದು

ನೈತಿಕತೆಯ ಈ ಸೆರೆಯೊಳಗೆ
ನೆಮ್ಮದಿಯೇ ಹೆಚ್ಚಿರುವುದಂತೆ
ಕರೆಯುವರು ಇದನು ವಿವಾಹವೆಂದು

ಬಿಡಿಸಲಾರದ ಬಂಧವೂ ಸಹಾ
ಅಧಃಪತನದೆಡೆಗೆ ಸಾಗುತಲಿತ್ತು
ಸ್ವಾಭಿಮಾನದ ಹೆಸರಿನ ದುರಹಂಕಾರದಿಂದ

ನಲುಗಿದ ಬಂಧನದ ಬೇಡಿಯದು
ಕಳಚಿ ಬಿದ್ದಿತ್ತು ನೈತಿಕವಾಗಿಯೇ..
ವಿಚ್ಛೇದನವೆಂಬ ಹೆಸರಿನಿಂದ

ಬಂಧನಕ್ಕಿಂತ ಸ್ವಾತಂತ್ರ್ಯ ಚೆಂದ
ಎಂದುಕೊಂಡು ಅದು ಸ್ವೇಚ್ಛೆಯಾಗಿತ್ತು
ನಾನೇ ಮೇಲೆಂಬ ಹಮ್ಮಿನಿಂದಲೇ

ಮತ್ತೊಂದು ಮಗದೊಂದು ಎಂಬಂತೆ
ಮುಗಿದ ಮುರಿದ ಸಂಬಂಧಗಳೊಡನೆ
ದಕ್ಕಿತ್ತು ಪಟ್ಟ ಅನೈತಿಕವೆಂತಲೇ

~ವಿಭಾ ವಿಶ್ವನಾಥ್