ಭಾನುವಾರ, ಸೆಪ್ಟೆಂಬರ್ 29, 2019

ಸೋಗುಗಾತಿ

ಯಾರೂ ತನ್ನವರಲ್ಲವೆಂಬ ಅರಿವಿದ್ದರೂ
ತನ್ನವರೇ ಎಲ್ಲರೂ ಎಂಬಂತೆ ಬದುಕುವ
ಬದುಕಿನ ಮಹಾ ಸೋಗುಗಾತಿ ಅವಳು

ಭಾವಗಳ ಓಘವೇ ಹರಿಯುತ್ತಿದ್ದರೂ
ಭಾವಗಳೇ ಇಲ್ಲವೆಂಬಂತೆ ತೋರಿಸುವ
ಬದುಕಿನ ಮಹಾ ಸೋಗುಗಾತಿ ಅವಳು

ಎದೆಯಲ್ಲಿ ಕೋಲಾಹಲವೇ ನಡೆಯುತ್ತಿದ್ದರೂ
ಮುಗುಳ್ನಗೆಯ ಮೇಲ್ಪದರ ಹೊದೆಯುವ
ಬದುಕಿನ ಮಹಾ ಸೋಗುಗಾತಿ ಅವಳು

ಪರರ ನೆರವಿಗೆ ತಾ ಬಲವಾಗಿ ನಿಂತು
ತನ್ನ ಬಲಹೀನತೆಯನ್ನು ಮರೆಮಾಚುವ
ಬದುಕಿನ ಮಹಾ ಸೋಗುಗಾತಿ ಅವಳು

ಒಲವಿನಲೆಗಳ ಅರಿವಿದ್ದರೂ ಅರಿವಿಲ್ಲದಂತೆ
ತನ್ನ ಬಾಳಲ್ಲಿಯೇ ತಾ ನಟಿಸುವ
ಬದುಕಿನ ಮಹಾ ಸೋಗುಗಾತಿ ಅವಳು

ಇಂತಹಾ ಸೋಗುಗಾತಿಯರಿಗೆ ಬರವಿಲ್ಲ
ಮತ್ತೆಲ್ಲೋ ಹುಡುಕ ಹೊರಡಬೇಡಿ
ತಾನವಳಲ್ಲವೆನ್ನುವ ಸೋಗು ಹಾಕಿ ಹೊರಡಬಹುದು

ಒಂದೊಮ್ಮೆ ಮನ ಮಂಥನ ಮಾಡಿಕೊಳ್ಳಿ
ನಿಮ್ಮಲ್ಲೇ, ನಿಮ್ಮ ಮನೆಯಲ್ಲೇ, ಎಲ್ಲೆಲ್ಲೂ
ಇಂತಹಾ ಸೋಗುಗಾತಿಯರು ಸಿಗಬಹುದು

ಇನ್ನಾದರೂ ಇವರನ್ನು ಅರ್ಥ ಮಾಡಿಕೊಂಡರೆ
ಪ್ರಾಮಾಣಿಕ ಗೆಳತಿ, ಆತ್ಮಸಂಗಾತಿ ಸಿಗಬಹುದು
ಸೋಗುಗಾತಿಯರ ಬದುಕೂ ಸೊಗಸಾಗಬಹುದು

~ವಿಭಾ ವಿಶ್ವನಾಥ್

ಗುರುವಾರ, ಸೆಪ್ಟೆಂಬರ್ 26, 2019

ನಿನ್ನ ಬದುಕಿನ ಉತ್ತರಕ್ಕೆ ಪ್ರತ್ಯುತ್ತರ, ನನ್ನ ಬದುಕಿನ ಪ್ರಶ್ನೆ...

ಪ್ರೀತಿಯ ಗೆಳತಿಗೆ,

ನೀನು ಹೇಳಿದ್ದು ತುಂಬಾ ನಿಜ ಎಂದೆನ್ನಿಸಲು ಶುರುವಾಗಿದೆ, ಏಕೆಂದರೆ ಭಾವನೆಗಳು ನಾವು ಅರ್ಥಮಾಡಿಕೊಂಡಂತೆ ಎಂದು ನೀನು ಹೇಳಿದ್ದು ನಿಜ ಎನ್ನಿಸುತ್ತಿದೆ. ಸಮಯ ಕಳೆದಂತೆ ಜೀವನದ ಅರ್ಥ ಮತ್ತು ಸಾರ್ಥಕತೆ ತಿಳಿಯುತ್ತಿದೆ.

ನಾನು ನಿನ್ನನ್ನು ಕೇಳಿದ ಸಲಹೆಗೆ ಸ್ಪಂದಿಸಿ ನಿನ್ನ ಅತ್ಯಮೂಲ್ಯ ಸಲಹೆ ನೀಡಿದ ನಿನಗೆ ಧನ್ಯವಾದಗಳು. ಅಂದ ಹಾಗೆ ಮುಂದಿನ ತಿಂಗಳೇ ನನ್ನ ಮದುವೆ.ನೀನು ತಪ್ಪದೆ ಮದುವೆಗೆ ಎರಡು ದಿನ ಮುಂಚಿತವಾಗಿಯೇ ಬಂದು ಶುಭ ಕೋರುವೆ ಎಂಬ ನಿರೀಕ್ಷೆಯಲ್ಲಿ ಕಾಯುತ್ತಿರುವ...

-ನಿನ್ನ ಪ್ರೀತಿಯ ಗೆಳತಿ 

ನಲ್ಮೆಯ ಸ್ನೇಹಿತೆಗೆ,

ನೀನು ಬಹಳ ಸಂತೋಷದಿಂದ್ದಿದ್ದೀಯ ಮತ್ತು ಯಾವುದೇ ಅಪರಾಧಿ ಪ್ರಜ್ಙೆಕಾಡುತ್ತಿಲ್ಲವೆಂಬುದು ನಿನ್ನ ಈ ಪತ್ರದಿಂದಲೇ ತಿಳಿಯುತ್ತದೆ. ನಿನ್ನ ಜೀವನದ ಅತ್ಯಮೂಲ್ಯ ಸಂಗತಿಯನ್ನು ಆಯ್ದುಕೊಳ್ಳಲು ನಿನಗೆ ನೆರವಾಗಿದ್ದಕ್ಕೆ ನನಗೆ ಆತ್ಮ ಸಂತೃಪ್ತಿಯಿದೆ.

ನೀನು ಆ ದಿನ ನನ್ನೊಡನೆ ಮಾತನಾಡಿದಾಗ ನಿನ್ನ ಧ್ವನಿಯಲ್ಲಿದ್ದ ಆ ದುಗುಡ ನನ್ನನ್ನು ಬಹುವಾಗಿ ಕಾಡಿತು. ಯಾಕೆಂದರೆ ಯಾವಾಗಲು ಅರಗಿಣಿಯಂತೆ ನುಡಿಮುತ್ತನ್ನು ಉದುರಿಸುತ್ತಿದ್ದ ನೀನು, ಹಾಗಿರುವುದನ್ನು ನಾನೆಂದಿಗೂ ನೋಡ ಬಯಸುವುದಿಲ್ಲ. ಹಿರಿಯ ಮಗಳಾಗಿದ್ದ ನಿನ್ನ ಮೇಲೆ ಜವಾಬ್ದಾರಿ ಹೆಚ್ಚಿತ್ತು ನಿಜ, ನಿನ್ನ ತಂಗಿಯರ ಭವಿಷ್ಯಕ್ಕಾಗಿ ನಿನ್ನ ಭವಿಷ್ಯವನ್ನು ತ್ಯಾಗ ಮಾಡಿ, ನೀನು ಆ ಹುಡುಗನನ್ನು ಒಪ್ಪಲು ಯಾರೂ ನಿನ್ನನ್ನು ಒತ್ತಾಯಿಸದಿದ್ದರೂ, ನಿನ್ನ ರೂಪಕ್ಕೆ ಆತ ಅನುರೂಪನಲ್ಲವೆಂಬುದನ್ನು ಮನಸ್ಸಿನಲ್ಲಿ ತುಂಬಿಕೊಂಡು ಮಂಕಾಗಿಯೇ, ಅರ್ಧಂಬರ್ಧ ಮನಸ್ಸಿನಲ್ಲಿಯೇ ಆ ಮದುವೆಗೆ ಒಪ್ಪಿಗೆ ನೀಡಿದ್ದೆ. ನಿನ್ನ ಆ ನಿರ್ಧಾರಕ್ಕೆ ಹಿಂದಿನ ಗಂಡುಗಳಿಂದ ತಿರಸ್ಕಾರವೂ ಸೇರಿತ್ತೇನೋ..?ನಾನರಿಯೆ..!

ಹುಡುಗ ಕಪ್ಪು ಎಂಬುದನ್ನು ಬಿಟ್ಟರೆ, ಆತನಲ್ಲಿ ಬೇರಾವ ದುರ್ಗುಣ, ದುಶ್ಚಟಗಳೂ ಇಲ್ಲ ಎಂಬುದು ನಿನಗೆ ಕಾಲಕ್ರಮೇಣ ತಿಳಿದಿರುವುದು ಸಂತಸದ ವಿಷಯ. ಆತನೊಂದಿಗೆ ಮಾತನಾಡಿ,ಕಾಲಕಳೆದ ನಂತರ ನಿನಗೇ ಅರಿವಾಗಿ ಈಗ ನೀನು ಆತನೊಂದಿಗೇ ಸಂತಸದಿಂದಲೇ ಸಪ್ತಪದಿ ತುಳಿಯುತ್ತಿದ್ದೀಯ.

ನೋಡಲು ಯಾವ ಹೀರೋಹಿನ್ ಗೂ ಕಮ್ಮಿ ಇಲ್ಲದ ನೀನು ಸ್ವಲ್ಪ ಕುಳ್ಳಿ ಎಂಬುದನ್ನು ಬಿಟ್ಟರೆ ನಿನ್ನನ್ನು ನಿರಾಕರಿಸಲು ಬೇರೆ ಯಾವ ಕಾರಣಗಳೂ ಇರಲಿಲ್ಲ, ಆದರೆ ಆ ಹುಡುಗನ ಮನೆಯವರೆಲ್ಲರೂ ನಿನ್ನನ್ನು ಒಪ್ಪಿಬಿಟ್ಟಿದ್ದರು. ಕೆಲಸಕ್ಕೆಂದು ಹೊರಹೋದ ನಿನಗೆ ಬೆಂಗಳೂರೆಂಬ ಮಾಯಾಜಾಲದ ಪರಿಚಯವಾಗಿಬಿಟ್ಟಿತ್ತು. ಅಲ್ಲದೆ ಫಿಲ್ಮ್ ಗಳ ಹುಚ್ಚೂ ನಿನಗೆ ಸ್ವಲ್ಪ ಹೆಚ್ಚೇ ಇದ್ದುದ್ದರಿಂದ ನಿನ್ನ ಜೀವನ ಸಂಗಾತಿಯ ಬಗ್ಗೆ ನೀನು ಹುಚ್ಚು ಕನಸುಗಳನ್ನಿಟ್ಟುಕೊಂಡು ಕಾಯುತ್ತಿದ್ದೆ.

ಹುಡುಗ ನೋಡುವುದಕ್ಕೆ ಅಷ್ಟೇನೂ ಚೆನ್ನಾಗಿಲ್ಲ,ಏನ್ಮಾಡ್ಲಿ?ಎಂಬ ನಿನ್ನ ಆ ಪ್ರಶ್ನೆ ನನ್ನಲ್ಲೊಂದು ಪ್ರಶ್ನಾಪ್ರವಾಹವನ್ನೇ ಎಬ್ಬಿಸಿಬಿಟ್ಟಿತ್ತು. ನಿನ್ನ ಆ ಪ್ರಶ್ನೆಗೆ ಉತ್ತರಿಸಲು ನಾನೆಷ್ಟು ಒದ್ದಾಡಿದ್ದೇನೆಂಬುದರ ಕಿಂಚಿತ್ ಅರಿವೂ ನಿನಗಿರಲಿಕ್ಕಿಲ್ಲ. ನನ್ನ ಆಪ್ತ ಸ್ನೇಹಿತೆಯ ಜೀವನದ ಕುರಿತ ಪ್ರಶ್ನೆಗೆ ನಾನು ಸರಿಯಾದ ಉತ್ತರ ನೀಡಲು ನಾನೇ ಉತ್ತರವನ್ನರಸುತ್ತಾ ಹೊರಟೆ.

ನನ್ನ ಎಲ್ಲಾ ಸಂದೇಹಗಳಿಗೂ ಉತ್ತರ ನೀಡುತ್ತಿದ್ದ ಆಪ್ತರೊಬ್ಬರ ಬಳಿ ಹೊರಗಿನ ಸೌಂದರ್ಯ ಮುಖ್ಯವೋ? ಅಥವಾ ವ್ಯಕ್ತಿತ್ವ ಮುಖ್ಯವೋ? ಎಂಬ ಪ್ರಶ್ನೆಯನ್ನಿಟ್ಟಿದ್ದೆ. ಯಾವಾಗಲೂ ನಾನೆಣಿಸಿದಂತೆಯೇ ಉತ್ತರ ನೀಡುತ್ತಿದ್ದ ಆತ, ಅಂದು ನೀಡಿದ ಉತ್ತರ ನನ್ನ ಮನಸ್ಸನ್ನು ಮತ್ತಷ್ಟು ಘಾಸಿಗೊಳಿಸಿತ್ತು. ಕಾರಣ ಇಷ್ಟೇ: ಹೊರಗಿನ ಸೌಂದರ್ಯವೇ ಮುಖ್ಯ ಎಂದೇ ಆತ ಹೇಳಿದ್ದ. ಹೊಸಬರು ನಮ್ಮನ್ನು ಅಳೆಯುವಾಗ ಎಂದಿಗೂ ಅವರಿಗೆ ನಮ್ಮ ವ್ಯಕ್ತಿತ್ವ ಪರಿಚಿತವಿರುವುದಿಲ್ಲ, ಆದ್ದರಿಂದ ಹೊರಗಿನ ಸೌಂದರ್ಯವೇ ಮುಖ್ಯ ಎಂದು ಹೇಳಿದ್ದರು.ಒಬ್ಬರನ್ನಷ್ಟೇ ಅಲ್ಲಾ,ಬಹಳ ಜನರಿಂದ ಬಂದ ಉತ್ತರ ರೂಪವೇ ಮುಖ್ಯ ಎಂದೇ..ಕೊನೆಗೆ ನಾನು ಇವರೆಲ್ಲರ ಹೇಳಿಕೆಗೆ ವಿರುದ್ದವಾಗಿ ಬಣ್ಣಕ್ಕಿಂತ ಗುಣವೇ ಮುಖ್ಯ ಎಂದೇ ಹೇಳಿದೆ.

"ಹತ್ತಿಯ ಹಣ್ಣು ಬಲು ಕೆಂಪು ಇದ್ದರೂ ಒಡೆದು ನೋಡಿದರೆ ಹುಳು ಬಹಳ, ನೇರಳೆ ಹಣ್ಣು ಬಲು ಕಪ್ಪು ಇದ್ದರೂ ತಿಂದು ನೋಡಿದರೆ ರುಚಿ ಬಹಳ" ಎಂಬ ಜನಪದರ ಉದಾಹರಣೆಯನ್ನೂ ನೀಡಿದೆ.

ಆದರೆ ನಿನ್ನ ಪ್ರಶ್ನೆಗೆ ಉತ್ತರ ಹುಡುಕಲು ಹೋಗಿ ನನ್ನ ಮನಸ್ಸೇ ಗೊಂದಲದ ಗೂಡಾಗಿದೆ. ಗಂಡು ಕಪ್ಪಿದ್ದರೂ ಶ್ಯಾಮಲ ವರ್ಣದವನು ಕೃಷ್ಣ,ರಾಮ, ಶಿವನ ಹಾಗಿದ್ದಾನೆ ಎಂದೆಲ್ಲಾ ಹೇಳುತ್ತಾರೆ, ಆದರೆ ಹುಡುಗಿ ಕಪ್ಪಿದ್ದರೆ ಯಾರೂ ಅಷ್ಟು ಸುಲಭದಲ್ಲಿ ಒಪ್ಪುವುದಿಲ್ಲ. ನನ್ನ ಉದಾಹರಣೆಯನ್ನೇ ತೆಗೆದುಕೊಳ್ಳುವುದಾದರೆ ನಾನೇನು ಬೆಳ್ಳಗಿಲ್ಲ, ಸುಂದರವಾಗಿ ಅಲಂಕರಿಸಿಕೊಳ್ಳುವ ಆಸಕ್ತಿಯೂ ನನಗಿಲ್ಲ, ನೋಡಲು ಚೆನ್ನಾಗಿ ಕಾಣಬೇಕೆಂದು ಅಲಂಕರಿಸಿಕೊಳ್ಳುವುದರಲ್ಲಿ ಅಸ್ಥೆಯೂ ಇಲ್ಲ. ಹಾಗಾದರೆ ನನ್ನ ಜೀವನ ಸಂಗಾತಿ ನನ್ನನ್ನು ಯಾವುದರಿಂದ ಆರಿಸಿಕೊಳ್ಳಬಹುದು? ಪ್ರೀತಿ ಇಲ್ಲದ ಮೇಲೆ ನಂಟು ಉಳಿದೀತು ಹೇಗೆ..? ಆತನೂ ನಿನ್ನಂತೆಯೇ ಯೋಚಿಸಿ ಅರೆಮನಸ್ಸಿನಿಂದ ಒಪ್ಪಿಗೆ ಇತ್ತರೆ...?ವರದಕ್ಷಿಣೆಯ ಆಸೆಯಿಂದ ಒಪ್ಪಿಗೆ ಇತ್ತರೆ..? ಇತ್ತರೆ ಏನು,ಆಗುವುದು ಖಂಡಿತಾ ಅದೇ ಎಂಬುದರ ಅರಿವು ನನಗಿದೆ. ಬಂದದ್ದೆಲ್ಲಾ ಬರಲಿ ಗೋವಿಂದನ ದಯವೊಂದಿರಲಿ ಎನ್ನುವುದನ್ನು ಬಿಟ್ಟು ಮತ್ತೇನು ಮಾಡಲು ಸಾಧ್ಯ ನನ್ನಿಂದ..?

ಬಹುಶಃ ನಾನಂದು ನಿನಗೆ ಧೈರ್ಯ ತುಂಬಲು ಹೋಗಿ, ನನ್ನ ಜೀವನದ ಬಹು ದೊಡ್ಡ ಸತ್ಯವನ್ನು ಅರಿತೆ.ನಿನ್ನ ಬದುಕಿನ ಉತ್ತರಕ್ಕೆ ಪ್ರತ್ಯುತ್ತರ ನನ್ನ ಬದುಕಿನ ಪ್ರಶ್ನೆ...ಆದರೆ ನಿನ್ನ ಬಾಳಿಗೆ ತೋರಿದ ಬೆಳಕು ಎಂದು ಆರದಿರಲಿ ಎಂದೇ ಆರೈಸುವೆ.

ಸುಂದರ ಮನಸ್ಸಿನ,ಶ್ಯಾಮಲ ವರ್ಣದ, ಮೃದು ಹೃದಯಿ, ನಿನ್ನನ್ನು ಅರಿತುಕೊಂಡು ಬಾಳುವ ಹುಡುಗ ನಿನಗೆ ಸಿಕ್ಕಿದ್ದಾನೆ. ಬಹುಶಃ ಎಲ್ಲರಿಗಿಂತ ಹೆಚ್ಚು ಖುಷಿ ಪಡುವವಳು ನಾನೇ, ನಿನ್ನ ದಾಂಪತ್ಯ ಜೀವನ ಸುಖವಾಗಿರಲಿ ಎಂದು ಹಾರೈಸುವ

-ನಿನ್ನ ಹಿತೈಷಿ

~ವಿಭಾ ವಿಶ್ವನಾಥ್

ಭಾನುವಾರ, ಸೆಪ್ಟೆಂಬರ್ 22, 2019

ಮಗಳ ಮನೋಲಹರಿ

ಮಗಳು ಹುಟ್ಟಿದರೆ ಜವಾಬ್ದಾರಿ ಹೆಚ್ಚಿತು ಎಂದುಕೊಳ್ಳುವವರೇ ಹೆಚ್ಚು. ಇಂದಿನ ದಿನಗಳಲ್ಲಿ ಇದು ಗಣನೀಯವಾಗಿ ಕಡಿಮೆಯಾಗುತ್ತಿದ್ದರೂ ಸಂಪೂರ್ಣವಾಗಿ ನಿಂತಿಲ್ಲ.

ಪೋಷಕರಲ್ಲಿ ಮಗಳ ಮೇಲಿನ ಕಾಳಜಿ ಸ್ವಲ್ಪ ಹೆಚ್ಚು, ಪ್ರೀತಿ ಕೂಡಾ ಹಾಗೆಯೇ ಆತಂಕ ಸಹಾ ಕೊಂಚ ಹೆಚ್ಚೇ.. ಆದರೆ ಅದೆಲ್ಲದಕ್ಕೂ ಕಾರಣ ಇದೆ ಎಂದು ತಿಳಿಯುವುದಕ್ಕೆ ಸ್ವಲ್ಪ ಜಾಸ್ತಿಯೇ ಸಮಯ ಬೇಕಾಗುತ್ತದೆ.

ಯಾಕಿಷ್ಟು ಬೇಗ ಬೆಳೆದು ದೊಡ್ಡವರಾಗುತ್ತೇವೆ ಅಂತಾ ಗೊತ್ತಿಲ್ಲ. ಕಾಲ ಸ್ವಲ್ಪ ನಿಧಾನವಾಗಿ ಸರಿಯಬಾರದಿತ್ತಾ ಅಂತಾ ಅನ್ನಿಸುತ್ತಾ ಇರುವುದೂ ಸುಳ್ಳಲ್ಲ. ಜವಾಬ್ದಾರಿಯನ್ನು ಹೊರುವುದಕ್ಕೆ ಹೆದರುವುದಿಲ್ಲ, ಹೊರ ಜಗತ್ತಿನಲ್ಲಿ ಧೈರ್ಯವಾಗಿರುವುದಕ್ಕೆ ಕಲಿತಿದ್ದೇವೆ. ನೂರಾರು ಹಸಿದ ಕಣ್ಣುಗಳಿಗೆ ಆಹಾರವಾದರೂ ಅದನ್ನು ನಿರ್ಲಕ್ಷಿಸಿ ಬದುಕುವುದನ್ನು ಕಲಿತಿದ್ದೇವೆ. ಆದರೂ ಎಲ್ಲೋ ಒಂದು ಕಡೆ, ಒಂದರೆಕ್ಷಣ ಭಯವಾಗುವುದು ಸುಳ್ಳಲ್ಲ. ಯಾವುದೋ ಬಾಲಕಿಯ ಮೇಲೆ ಅತ್ಯಾಚಾರವಾದ ಸುದ್ದಿ ಕೇಳಿ, ಮತ್ತಾವುದೋ ಮನೆಮಗಳನ್ನು ವರದಕ್ಷಿಣೆ ಕಿರುಕುಳಕ್ಕಾಗಿ ಚಿತ್ರಹಿಂಸೆ ನೀಡಿ ಅರೆಜೀವ ಮಾಡಿರುವುದನ್ನು ಕೇಳಿ, ಸಾಮೂಹಿಕ ಅತ್ಯಾಚಾರಕ್ಕೆ ಬಲಿಯಾದವಳ ಜೀವನ ಕಂಡು ಭಯವಾಗುತ್ತೆ. ಆವಾಗೆಲ್ಲಾ ಧೈರ್ಯ ತುಂಬುವುದು ಯಾವುದು ಗೊತ್ತಾ..?

ಅಮ್ಮನ ಮಡಿಲಲ್ಲಿ ಮಲಗಿದಾಗ ಸಿಗುವ ನಿಶ್ಚಿಂತೆ, ಅಪ್ಪ ಕೈ ಹಿಡಿದು ನಡೆಸುವಾಗ ಸಿಕ್ಕ ಕೈ ಬಿಸುಪಿನ ಬೆಚ್ಚನೆ ಸ್ಪರ್ಶ, ಅಜ್ಜ-ಅಜ್ಜಿಯ ಪ್ರೀತಿ, ಚಿಕ್ಕಮ್ಮ-ದೊಡ್ಡಮ್ಮಂದಿರ ಕಾಳಜಿ, ಅಣ್ಣನ ಕಣ್ಗಾವಲು ಇವೆಲ್ಲಾ ಎಷ್ಟು ಆಪ್ತ ಎನ್ನಿಸಿಬಿಡುತ್ತದೆ ಗೊತ್ತಾ..? ಚಿಕ್ಕ-ಚಿಕ್ಕ ನಡೆಗಳು, ಸಂಬಂಧಗಳ ಆಪ್ತ ಬಂಧಗಳು ಎಷ್ಟೆಲ್ಲಾ ಧೈರ್ಯ ತುಂಬುತ್ತವೆ ಅಂದರೆ ಜಗತ್ತಿನಲ್ಲಿಯೇ ನಾನು ಅತ್ಯಂತ ಸುರಕ್ಷಿತಳು ಎನ್ನುವ ಭಾವನೆ ಬಂದು ಬಿಡುತ್ತದೆ.

ಎಷ್ಟೆಲ್ಲಾ ಕಾಳಜಿ, ಪ್ರೀತಿಯ ನಡುವೆಯೂ ಮನೆಯವರಿಗೆ ಮಗಳು ಜವಾಬ್ದಾರಿ, ಹೊರೆ ಎನ್ನಿಸುತ್ತಾಳೆ ಅಲ್ವಾ..? ಹೊರೆ ಅಂತಲ್ಲದಿದ್ದರೂ ನಿಮ್ಮ ಜವಾಬ್ದಾರಿಯಿಂದ ಕಳಚಿಕೊಳ್ಳಲು ನೀವೆಲ್ಲಾ ಸಿದ್ದರಾಗುತ್ತಾ ಇರುತ್ತೀರ. ವಿದ್ಯಾಭ್ಯಾಸ ಮುಗಿಯುವುದೇ ತಡ, ಅವಳನ್ನು ಸಾಗ ಹಾಕುವ ಸಿದ್ದತೆ ಮಾಡಿಕೊಳ್ಳುತ್ತಾ ಇರುತ್ತೀರ. ಖಂಡಿತಾ ಇದು ತಪ್ಪಲ್ಲ. ಆದರೆ, ಮಗಳ ಮನಸ್ಸಿನಲ್ಲಿ ಏನಿರುತ್ತದೆ? ಎಂಬುದು ಅಲ್ಲಿ ಮುಖ್ಯವಾಗುವುದೇ ಇಲ್ಲ..

ವಿದ್ಯಾಭ್ಯಾಸ ಮುಗಿದ ಮೇಲೆ ಕೆಲಸ ಸಿಕ್ಕು ಕೆಲ ಕಾಲ ತನ್ನದೇ ಕುಟುಂಬದಲ್ಲಿ, ತನ್ನದೇ ಪ್ರಪಂಚದಲ್ಲಿ ನೆಮ್ಮದಿಯಾಗಿರಬೇಕು ಎನ್ನುವ ಆಸೆ ಇರುತ್ತದೆ. ಯಾಕೆಂದರೆ, ಮುಂದಿನ ದಿನಗಳ ಜವಾಬ್ದಾರಿ, ಒತ್ತಡ, ಸಂಬಂಧಗಳ ಪಾಲನೆ-ಪೋಷಣೆಯ ಅರಿವು ಅವಳಿಗಿರುತ್ತದೆ. ವಿಪರ್ಯಾಸವೆಂದರೆ, ಇದ್ಯಾವುದೂ ಅವಳಿಷ್ಟದಂತೆ ನಡೆಯುವುದೇ ಇಲ್ಲ. ಕಾಲಚಕ್ರದಲ್ಲಿ ವಿವಾಹ ಬಂಧನದಲ್ಲಿ ಸಿಲುಕಿ ಅವಳು ತನ್ನ ಹವ್ಯಾಸ, ಇಷ್ಟಾನಿಷ್ಟಗಳನ್ನು ಕಟ್ಟಿಟ್ಟು ಸಂಪೂರ್ಣ ಬದಲಾಗುತ್ತಾಳೆ. ತನ್ನದಲ್ಲದ ಪ್ರಪಂಚವನ್ನು ತನ್ನದು ಎಂಬಂತೆ ಭಾವಿಸಿ ಬದುಕುತ್ತಾ ತ್ರಿಶಂಕು ಸ್ವರ್ಗವನ್ನು ಸೃಷ್ಟಿ ಮಾಡಿಕೊಳ್ಳುತ್ತಾಳೆ. ತನ್ನ ಮಗಳಲ್ಲಿ ತನ್ನ ಆಸೆ-ಕನಸುಗಳನ್ನು ಬಿತ್ತುತ್ತಾ ತನ್ನನ್ನು ಅವಳಲ್ಲಿ ಕಾಣಬಯಸುತ್ತಾಳೆ. ಮಗಳು ಬೆಳೆಯುತ್ತಾ ಹೋದಂತೆ ಕಾಲಚಕ್ರ ಮತ್ತೆ ಪುನರಾವರ್ತನೆಯಾಗುತ್ತಿರುತ್ತದೆ.

ಇದೆಲ್ಲವನ್ನೂ ನೋಡಿದಾಗ ಮತ್ತೆ ಪುನಃ ಮಗುವಾಗಿ, ಎಲ್ಲರ ನೆಚ್ಚಿನ ಮನೆಮಗಳಾಗಿಯೇ ಇರುವ ಆಸೆ ಹುಟ್ಟುವುದಂತೂ ಸುಳ್ಳಲ್ಲ. ಇವತ್ತು ಮಗಳ ದಿನವಂತೆ.. ಯಾಕೋ ಇವಿಷ್ಟನ್ನೂ ಹೇಳಬೇಕೆನಿಸಿತು. ಮಗಳ ಮನೋಲಹರಿಯಲ್ಲಿ ಬಹಳಷ್ಟು ಲಹರಿಗಳಿದ್ದರೂ ತೆರೆದಿಡಲಾಗುತ್ತಿಲ್ಲ. ಅತಿ ಹೆಚ್ಚು ಭಾವುಕತೆ ಇದ್ದಾಗ ಪದಗಳಲ್ಲಿ ಹಿಡಿದಿಡುವುದು ಕಷ್ಟವಾಗುತ್ತದೆ. ಮಗಳಾಗಿ ನನಗೆ ನನ್ನ ಜವಾಬ್ದಾರಿಯ ಅರಿವಿದೆ ಎಂದು ತಿಳಿಸಬಯಸುತ್ತೇನೆ. ಅಪ್ಪ-ಅಮ್ಮನಿಗೆ, ಮನೆಗೆ ಒಳ್ಳೆಯ ಮಗಳಾಗಿಯೇ ಇರುವ ಆಸೆ, ಇರುತ್ತೇನೆ ಎಂಬ ಭರವಸೆ ಇಷ್ಟೇ ನನ್ನಿಂದ ಹೇಳಲಾಗುವುದು.

~ವಿಭಾ ವಿಶ್ವನಾಥ್

ಶುಕ್ರವಾರ, ಸೆಪ್ಟೆಂಬರ್ 20, 2019

ಯಾವ ಹೆಸರು ಈ ಭಾವಾನುಬಂಧಕೆ

ಇವತ್ತು ಮನೆಗೆ ಬಂದ ತಕ್ಷಣ 8 ವರ್ಷದ ಸರಳ ಓಡಿ ಬಂದು ಅಪ್ಪಿಕೊಂಡು "ಪಪ್ಪಾ, ನಾಳೆ ಭಾನುವಾರ ಅಲ್ವಾ? ಎಲ್ಲಾದ್ರೂ ಹೋಗೋಣ್ವಾ?" ಅಂತ ಕೇಳಿದಳು. ಅದಕ್ಕೆ "ಆಯ್ತು ಪುಟ್ಟಾ, ಅಮ್ಮ, ನಾನು, ನೀನು, ಅಜ್ಜಿ, ತಾತ ಎಲ್ಲಾ ಎಲ್ಲಾದ್ರೂ ಹೊರಗಡೆ ಹೋಗಿ ಸುತ್ತಾಡಿಕೊಂಡು ಬರೋಣ " ಎಂದು ಹೇಳುತ್ತಿರುವಷ್ಟರಲ್ಲೇ ರೂಪ ಬಂದು "ಹಾಂ! ಏನು ಹೇಳ್ತಾ ಇದ್ದೀರಾ? ಆಗ್ಲೇ ಇಷ್ಟು ಬೇಗ ಮರೆತು ಹೋದ್ರಾ?" ಅಂತಾ ಕೇಳಿದ್ಲು, ಅದಕ್ಕೆ "ಎಲ್ಲಿಗೆ ಹೋಗಬೇಕೇ?" ಅಂತಾ ಕೇಳಿದೆ. ಅದಕ್ಕೆ "ರವಿ ಅಂಕಲ್ ನ ನೋಡೋದಕ್ಕೆ ಹೋಗಬೇಕು ಅನ್ನೋದನ್ನ ಇಷ್ಟು ಬೇಗ ಮರೆತುಬಿಟ್ರಾ?" ಅಂದ್ಲು. "ಓ! ನನಗೆ ಇವಾಗ ನೆನಪಾಯ್ತು, ಸಾರಿ ಪುಟ್ಟಾ ಇನ್ನೊಂದು ದಿನ ಪಿಕ್ ನಿಕ್ ಗೆ ಹೋಗೋಣ ಅಂದೆ" ಅದಕ್ಕೆ ಅವಳು ಕೆನ್ನೆ ಊದಿಸಿಕೊಂಡು "ಪಪ್ಪಾ, ಯಾವಾಗ್ಲೂ ನೀನು ಹೀಗೇ, ಆದ್ರೆ ರವಿ ಅಂಕಲ್ ಅಂದ್ರೆ ಯಾರು? ನೀನು,ಅಮ್ಮ ಅವರನ್ನು ನೋಡೋಕೆ ಪ್ರತಿ ತಿಂಗಳು ಯಾಕೆ ಹೋಗಬೇಕು?" ಅಂದ್ಲು. ಅದಕ್ಕೆ ರೂಪ "ಅವರು ನಿನಗೆ ತಾತ ಆಗಬೇಕು ಪುಟ್ಟಾ" ಅಂತಂದ್ಲು.ಆದರೆ ಸರಳ ಅದನ್ನು ಒಪ್ಪದೆ "ನಮ್ಮ ತಾತ ನಮ್ಮನೆಯಲ್ಲೇ ಇದ್ದಾರೆ, ನೀವು ಸುಳ್ಳು ಹೇಳ್ತಾ ಇದ್ದೀರಾ. ನಾನು, ನನ್ನ ಪಿಕ್ ನಿಕ್ ಗಿಂತ ಬೇರೆ ಯಾರೋ ಹೆಚ್ಚಾದ್ರು ಅಲ್ವಾ?" ಎಂದವಳಿಗೆ ಎರಡು ಹೊಡೆದು ನಾನು ನನ್ನ ರೂಂ ಸೇರಿದೆ. ನನ್ನ ಮನಸ್ಸು ಹಿಂದಕ್ಕೋಡಿತು.

ನಾನು ನನ್ನ ಇಂಜಿನಿಯರಿಂಗ್ ಕೊನೆಯ ವರ್ಷದಲ್ಲಿರುವಾಗ 'ಸಹನ' ನನ್ನ ಬಾಳಿನಲ್ಲಿ ಬಂದಿದ್ದಳು. ಬಿ.ಕಾಂ ಕೊನೆ ವರ್ಷದಲ್ಲಿದ್ದ ಸಹನ ಬೇರೆ ಯಾರೂ ಅಲ್ಲ, ಅಪ್ಪನ ಫ್ರೆಂಡ್ ರವಿ ಅಂಕಲ್ ಮಗಳೇ. ನಮ್ಮಿಬ್ಬರ ಕುಟುಂಬಗಳಲ್ಲಿ ತುಂಬಾ ಸಲುಗೆ ಇತ್ತು. ಅದೇ ಧೈರ್ಯದಿಂದ ನಾನು ಅವಳು ಪ್ರೀತಿಸುತ್ತಾ ಇದ್ವಿ. ನಮ್ಮ ಮನೆಗಳಲ್ಲಿ ಈ ವಿಷಯ ಗೊತ್ತಾದಾಗ ಅಮ್ಮ "ಅವಳು ನಿನಗೆ ಸರಿ ಹೊಂದುವುದಿಲ್ಲ ಆದರೆ ನಿನ್ನಿಷ್ಟಾನೇ ನನ್ನಿಷ್ಟ" ಅಂದಿದ್ರು.

ಅಪ್ಪ ಮತ್ತು ರವಿ ಅಂಕಲ್ ಬೇರೆಯವರಿಗೆ ತಿಳಿಯದಂತೆ ನನ್ನ ಮತ್ತು ಸಹನ ಮದುವೆ ನಿಶ್ಚಯ ಮಾಡಿಕೊಂಡಿದ್ದನ್ನು ನಾನು ಕದ್ದು ಕೇಳಿಸಿಕೊಂಡಿದ್ದೆ. ಇದೇ ಸಲುಗೆಯಿಂದ ಪರೀಕ್ಷೆಗಳನ್ನೂ ನಿರ್ಲಕ್ಷ್ಯ ಮಾಡಿ ಅವಳ ಹಿಂದೆ ಹಿಂದೆ ಸುತ್ತುತ್ತಾ ಇದ್ದೆ. ನನ್ನ ಕ್ಲೋಸ್ ಫ್ರೆಂಡ್ "ಅವಳು ಸರಿ ಇಲ್ಲ ಕಣೋ, ನಿನಗೆ ಸರಿ ಹೊಂದಲ್ಲ ಕಣೋ" ಅಂದಾಗಲೂ "ಒಬ್ಬಳು ಹುಡುಗಿ ಚಾರಿತ್ರ್ಯದ ಬಗ್ಗೆ ಮಾತಾಡೋ ನೀನು ಸರಿ ಇದ್ದೀಯಾ?" ಅಂತಾ ಜಗಳ ಮಾಡಿ ಅವನನ್ನೂ ದೂರ ಮಾಡಿಕೊಂಡಿದ್ದೆ.

ಪ್ರೀತಿಯಲ್ಲಿ ಬಿದ್ದಿದ್ದಾಗ ಎಲ್ಲರೂ ಹೇಳುವ ಬುದ್ದಿಮಾತು ಕಿವಿ ಮೇಲೆ ಬೀಳೋದಿಲ್ಲ ಅಂತಾ ಹೇಳುತ್ತಾರಲ್ಲ, ನನ್ನ ವಿಷಯದಲ್ಲೂ ಹಾಗೇ ಆಯ್ತು. ಮೊದಮೊದಲು ನನ್ನ ಜೊತೆ ಪ್ರೀತಿಯಿಂದಲೇ ನಡೆದುಕೊಳ್ಳುತ್ತಾ ಇದ್ದ ಸಹನ ಬರುಬರುತ್ತಾ ಅವಳ ಕಾಲೇಜಿನ 'ಮಯಾಂಕ್'ಗೆ ಜೊತೆಯಾದಳು. ಮೊದಮೊದಲಿಗೆ ನಾನೂ ಸಹಾ ಸಹಪಾಠಿಗಳಲ್ವಾ ಅಂತಾ ಉಪೇಕ್ಷೆ ಮಾಡಿದರೂ ನಂತರದ ದಿನಗಳಲ್ಲಿ ಅವಳನ್ನು ಪ್ರಶ್ನಿಸಲಾರಂಭಿಸಿದೆ. ಅದಕ್ಕೆ ಅವಳು "ಇಷ್ಟೊಂದು ಪೊಸೆಸ್ಸೀವ್ ಆದ್ರೆ ಹೇಗೆ? ಈಗಲೇ ಇಷ್ಟು ಅನುಮಾನ ಪಡುವವನು ಮುಂದೆ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೀಯಾ ಅಂತಾ ಹೇಗೆ ನಂಬಲಿ?" ಅಂತಾ ಕೇಳಿದ್ಲು. ಅವತ್ತು ನನಗೇ ನನ್ನ ಮೇಲೆ ಬೇಜಾರಾಗಿ "ಸಾರಿ ಕಣೇ, ಇನ್ನೊಂದು ಸಲ ಹೀಗಾಗಲ್ಲ" ಅಂತಾ ಅವಳನ್ನು ರಮಿಸಿ ಅವಳಿಷ್ಟದ ರೆಸ್ಟೋರೆಂಟ್ ಗೆ ಕರೆದುಕೊಂಡು ಹೋಗಿ ಜೇಬನ್ನೆಲ್ಲಾ ಖಾಲಿ ಮಾಡಿದೆ.

ಕಾಲೇಜ್ ನಲ್ಲಿ ಕ್ಯಾಂಪಸ್ ಸೆಲೆಕ್ಷನ್ ನಡೆಯುತ್ತಾ ಇಡ್ಡರೂ ಉಡಾಫೆ ಮಾಡಿಕೊಂಡು ನಾನು ಸಹನಾಳೊಟ್ಟಿಗೇ ತಿರುಗಾಡ್ತಾ ಇದ್ದೆ. ಅಲ್ಲದೇ ನನ್ನ ಇಂಜಿನಿಯರಿಂಗ್ ಮುಗಿಯಲು ಇನ್ನು ಕೆಲವೇ ದಿನಗಳು ಇದ್ದಾಗ ಸಹನ ಪದೇಪದೇ ಮುನಿಸಿಕೊಳ್ಳುವುದು, ರಗಳೆ ತೆಗೆಯುವುದು ನಡೆದೇ ಇತ್ತು. ಅಲ್ಲದೇ 'ಮಯಾಂಕ್'ನೊಟ್ಟಿಗೆ ಕಾಣಿಸಿಕೊಳ್ಳುವುದು ಎಂದಿಗಿಂತ ಜಾಸ್ತಿಯೇ ಆಗಿತ್ತು. ಇನ್ನು ತಡ ಮಾಡಬಾರದು ಅಂತಾ ತೀರ್ಮಾನ ಮಾಡಿದ ನಾನು ಅವತ್ತು ಸಂಜೆಯೇ ಅವಳ ಮನೆಗೆ ಹೊರಟೆ.

ಅವತ್ತು ರವಿ ಅಂಕಲ್ ಮನೆಯಲ್ಲಿ ಇರಲಿಲ್ಲ. ಸದಾ ನಗುಮುಖದಿಂದಲೇ ಸ್ವಾಗತಿಸುತ್ತಿದ್ದ ಸಹನಾಳ ಅಮ್ಮ ಕೂಡಾ ಯಾಕೋ ಅವತ್ತು ಬೇಕೋ ಬೇಡ್ವೋ ಅನ್ನೋ ತರಹ ಬಾಗಿಲು ತೆರೆದರು. ಎಲ್ಲಿ ನೋಡಿದರೂ ಸಹನಾಳ ಸುಳಿವೇ ಇರಲಿಲ್ಲ. "ಸಹನಾ ಇನ್ನೂ ಬಂದಿಲ್ವಾ" ಅಂತಾ ನಾನು ಅವರನ್ನು ಕೇಳಿದಾಗ "ಇಲ್ಲ" ಅಂತಾ ಚುಟುಕಾಗಿಯೇ ಉತ್ತರ ಕೊಟ್ರು. "ಕಾಲೇಜು 4 ಗಂಟೆಗೇ ಮುಗಿಯುತ್ತಲ್ವಾ? ಇನ್ನೂ ಅವಳು ಮನೆಗೆ ಬಂದಿಲ್ವಾ?" ಅಂತಾ ಹೇಳಬೇಕೆಂದುಕೊಂಡ ವಿಷಯಕ್ಕೆ ಪೀಠಿಕೆ ಹಾಕುತ್ತಾ ಇರುವಾಗಲೇ ಅವರು "ನನ್ನ ಮಗಳ ಬಗ್ಗೆ ನೀನ್ಯಾಕೆ ಅಷ್ಟು ತಲೆ ಕೆಡಿಸಿಕೊಳ್ಳುತ್ತೀಯಾ? ಅವಳು ಇಷ್ಟೊತ್ತಲ್ಲಿ ಎಲ್ಲಿದ್ದಾಳೆ ಅಂತಾ ನನಗೊತ್ತು. ಅವಳು ಮತ್ತು ಮಯಾಂಕ್ ನನಗೆ ಹೇಳಿಯೇ ಫಿಲ್ಮ್ ಗೆ ಹೋಗಿದ್ದಾರೆ. ಏನೀವಾಗ? ಇನ್ನಾದ್ರು ನಮ್ಮನ್ನು ನಮ್ಮ ಪಾಡಿಗೆ ಬಿಟ್ಟು ಬಿಡು" ಎಂದರು. ಹಾಗಾದರೆ ಇವ್ರಿಗೆ ಮಯಾಂಕ್ ಬಗ್ಗೆ ಗೊತ್ತಿದೆಯಾ ಅಂತಾ ಆಶ್ಚರ್ಯ ಪಡುತ್ತಿರುವಾಗಲೇ "ಮಯಾಂಕ್ ನನ್ನ ಮಗಳನ್ನು ಮದುವೆ ಆಗುತ್ತಿರುವ ಹುಡುಗ, ಅಲ್ಲದೇ ಅವರು ತುಂಬಾ ಶ್ರೀಮಂತರು. ಅವರದ್ದೇ ಫ್ಯಾಕ್ಟರಿ ಇದೆ, ಮನೆ ತುಂಬಾ ಆಳು-ಕಾಳು. ಇರೋ ಒಬ್ಬಳು ಮಗಳನ್ನು ನಾನು ಅಂದ್ಕೊಂಡ ಹಾಗೆಯೇ ಒಳ್ಳೆ ಮನೆಗೇ ಕೊಡ್ತಾ ಇದ್ದೀನಿ. ನಿಮ್ಮ ರವಿ ಅಂಕಲ್ ಹಾಗೆ ಪ್ರಾಮಾಣಿಕತೆ ಅಂತಾ ಕೂತಿದ್ರೆ ಇದೆಲ್ಲಾ ಆಗ್ತಾ ಇರ್ಲಿಲ್ಲ. ಇನ್ಮುಂದೆ ಆದ್ರೂ ನಮ್ಮ ಜೀವನದಲ್ಲಿ ತಲೆ ಹಾಕುವುದನ್ನು ನಿಲ್ಲಿಸು" ಅಂದ್ರು. ಅವತ್ತು ಅಲ್ಲಿಂದ ಎದ್ದು ಬಂದು ಹೇಗೆ ಮನೆ ಸೇರಿದೆನೋ ದೇವರಿಗೇ ಗೊತ್ತು.

ಇದನ್ನೆಲ್ಲಾ ತಿಳಿದ ಅಮ್ಮ ರವಿ ಅಂಕಲ್ ಮತ್ತು ಅವರ ಮನೆಯವರಿಗೆ ಹಿಡಿಶಾಪ ಹಾಕಿದ್ರು. ಅಪ್ಪನದ್ದು ಮತ್ತದೇ ಸಹನೆ ಮತ್ತು ನಿರ್ಲಿಪ್ತತೆ. "ಆಗುವುದೆಲ್ಲಾ ಒಳ್ಳೆಯದಕ್ಕೇ" ಮತ್ತು "ರವಿ ಅಂತಹವನಲ್ಲ, ಎಲ್ಲೋ ಏನೋ ತಪ್ಪು ತಿಳುವಳಿಕೆ ಆಗಿರಬಹುದು, ದುಡುಕಿ ಯಾವುದೇ ನಿರ್ದಾರವನ್ನು ತೆಗೆದುಕೊಳ್ಳುವುದು ಬೇಡ" ಅಂತಂದ್ರು. ಅಷ್ಟರಲ್ಲಿ ನನ್ನ ಎಕ್ಸಾಂಗಳು ಕೂಡಾ ಮುಗಿದಿದ್ದವು. ಯಾವುದರಲ್ಲಿಯೂ ಚೆನ್ನಾಗಿ ಮಾಡಿರದ ನಾನು ಪಾಸಾಗುವುದರಲ್ಲಿ ನನಗೇ ನಂಬಿಕೆ ಇರಲಿಲ್ಲ.

ಇಷ್ಟೆಲ್ಲಾ ಆದ ಒಂದು ವಾರದ ನಂತರ ರವಿ ಅಂಕಲ್ ಒಂದು ದಿನ ಇದ್ದಕ್ಕಿದ್ದಂತೆ ನಮ್ಮ ಮನೆಗೆ ಬಂದು "ಇದೆಲ್ಲಾ ಆದದ್ದು ನನಗೆ ಗೊತ್ತಿರಲಿಲ್ಲ, ನಾನು ಹಳ್ಳಿಗೆ ಹೋಗಿ ಬರುವಷ್ಟರಲ್ಲಿ ಇಷ್ಟೆಲ್ಲಾ ಆಗಿಬಿಟ್ಟಿದೆ. ನಿನ್ನ ಕನಸಿನ ಸೌಧ ಕಟ್ಟಿದ್ದು, ಕುಸಿದದ್ದು ಎಲ್ಲದ್ದಕ್ಕೂ ನಾನೇ ಕಾರಣ. ಹಣದ ಹುಚ್ಚಿಗೆ ಬಲಿಯಾಗಿ ತನ್ನ ಹೆಂಡತಿ, ಮಗಳು ನಿನಗೆ ಅನ್ಯಾಯ ಮಾಡಿದ್ದಾರೆ. ಆ ಅನ್ಯಾಯವನ್ನು ಸರಿ ಮಾಡುವುದು ನನ್ನ ಜವಾಬ್ದಾರಿ. ಅದಕ್ಕಾಗಿ ನಾನು ಅವರ ಹತ್ತಿರ ಜಗಳ ಮಾಡಿಕೊಂಡು ಮನೆ ಬಿಟ್ಟು ಬಂದಿದ್ದೇನೆ." ಅಂತಾ ಹೇಳಿದ್ರು.ಅದಕ್ಕೆ ಪ್ರತ್ಯುತ್ತರವಾಗಿ ಅಮ್ಮ "ನಿಮ್ಮ ನಾಟಕ ನಿಲ್ಲಿಸಿ, ಅಪ್ಪ ಒಂದು ತರಹ, ಮಗಳು ಒಂದು ತರಹ ನಾಟಕ ಮಾಡಿ ಇರುವ ಜೀವನಾನೂ ಹಾಳು ಮಾಡಬೇಡಿ, ಇಲ್ಲಿಂದ ಹೊರಡಿ" ಅಂತಾ ಅಬ್ಬರಿಸಿದ್ರು. ಮಗನನ್ನು ಆ ಸ್ಥಿತಿಯಲ್ಲಿ ನೋಡಿದ್ದ ಕರುಳಿನ ಸಂಕಟ ಅಂತಹದ್ದು. ಅದಕ್ಕೆ ರವಿ ಅಂಕಲ್ "ನನ್ನ ಪ್ರಾಮಾಣಿಕತೆಯಿಂದ ತಪ್ಪಿತಸ್ಥ ಅಲ್ಲದೇ ಇದ್ರೂ ಎಲ್ಲಾ ಕಡೆಯೂ ಮಾತು ಕೇಳ್ತಾ ಬಂದಿದ್ದೇನೆ. ಇದೇನೂ ನನಗೆ ಹೊಸದಲ್ಲ. ಆದರೆ ರಘು ಜೀವನಾ ಸರೀ ಹೋಗದೆ ನಾನು ಇಲ್ಲಿಂದ ಹೋಗೋದಿಲ್ಲ. ಆಮೇಲೆ ನೀವೇ ಕೇಳಿಕೊಂಡ್ರೂ ನಾನು ಇಲ್ಲಿ ಒಂದು ನಿಮಿಷವೂ ಇರೋದಿಲ್ಲ" ಅಂತಾ ಹೇಳಿದ್ರು. ಅದಕ್ಕೆ ಅಪ್ಪ "ನೀನು ಮಾಡದೆ ಇರೋ ತಪ್ಪನ್ನು ನೀನು ಯಾಕೆ ಸರಿ ಮಾಡುತ್ತೀಯಾ? " ಅಂದರೂ ಕೇಳದೆ ಇಲ್ಲೇ ಉಳಿದುಕೊಂಡರು.

ಅಂಕಲ್ ಸಹಾಯದಿಂದ ನಾನು ಹೊಸ ಜೀವನವನ್ನು ಕಟ್ಟಿಕೊಂಡೆ. ಆರು ತಿಂಗಳ ನಂತರ ನಾನು ಪುನಃ ಇಂಜಿನಿಯರಿಂಗ್ ಲಾಸ್ಟ್ ಸೆಮ್ ಎಕ್ಸಾಂ ಮತ್ತೆ ಬರೆದೆ. ಡಿಪ್ರೆಷನ್ ನಿಂದ ಹೊರಗೆ ಬಂದು ನನ್ನದೇ ಆದ ಹೊಸ ಜೀವನದತ್ತ ಹೆಜ್ಜೆ ಹಾಕುತ್ತಿದ್ದೆ. ಇವತ್ತು ನನಗೆ ಎಂ.ಎನ್.ಸಿ ಕಂಪೆನಿಯಲ್ಲಿ ಕೆಲಸ. ಒಳ್ಳೆಯ ಸಂಬಳ ಬರುತ್ತಾ ಇದೆ. ಬಾಳ ಸಂಗಾತಿಯ ವಿಷಯದಲ್ಲಿ ನಾನು ಮತ್ತೊಮ್ಮೆ ರಿಸ್ಕ್ ತೆಗೆದುಕೊಳ್ಳುವುದಕ್ಕೆ ಇಷ್ಟ ಪಡದೆ ಇದ್ದುದರಿಂದ ರವಿ ಅಂಕಲ್ ತಾನೇ ನಿಂತು 'ರೂಪಾ'ಳನ್ನು ಆರಿಸಿದರು. ತಂದೆ-ತಾಯಿ ಇಲ್ಲದ ರೂಪಾಳನ್ನು ತಂದೆಯ ಸ್ಥಾನದಲ್ಲಿ ನಿಂತು ಅವರೇ ಮದುವೆ ಮಾಡಿಕೊಟ್ಟಿದ್ದರು. ನಂತರ ನಾವು ಎಷ್ಟೇ ಕೇಳಿಕೊಂಡರೂ ಇರದೆ, ಅವರಿಗಿದ್ದ ಆಸ್ತಿಯನ್ನು ನನ್ನ ಹೆಸರಿಗೆ ಬರೆದು, ತಮ್ಮ ಮನೆಗೂ ಹೋಗದೆ ತೀರ್ಥಯಾತ್ರೆಗೆ ಹೊರಟು ನಿಂತಿದ್ದರು. ಅಪ್ಪ-ಅಮ್ಮನ ಬೇಡಿಕೆಗೂ ಜಗ್ಗದೆ, ನನ್ನ ಮತ್ತು ರೂಪಾಳ ಕಣ್ಣೀರಿಗೂ ಕರಗದೆ ಅವತ್ತು ನೀಡಿದ ವಚನದಂತೆಯೇ ಹೊರಟು ನಿಂತಿದ್ದರು. ಬಹಳ ಬೇಡಿಕೊಂಡ ಮೇಲೆ ಒಂದು ಶರತ್ತಿನ ಮೇಲೆ ಅವರನ್ನು ಒಪ್ಪಿಸಲು ಸಫಲನಾದೆ.

'ರೂಪಾ'ಳನ್ನು ನಿಮ್ಮ ಮಗಳು ಅಂತಲೇ ಅಂದುಕೊಂಡು ಮದುವೆಯಾಗಿದ್ದೇನೆ. ನೀವು ನಮ್ಮನ್ನು ಬಿಟ್ಟು ಹೊರಟರೆ ನಾನು ಅವಳನ್ನು ಬಿಡುತ್ತೇನೆ ಎಂದಾಗ ಅವರು ಹೌಹಾರಿ ತಮ್ಮ ನಿರ್ಧಾರವನ್ನು ಕೊಂಚ ಸಡಿಲಿಸಿ, "ಸರಿ, ನಾನು ನನ್ನ ಹಳ್ಳಿಮನೆಯಲ್ಲಿ ಶಾಂತತೆಯಲ್ಲಿ ನನ್ನ ಕೊನೆಯ ದಿನಗಳನ್ನು ಕಳೆಯಬೇಕೆಂದಿದ್ದೇನೆ. ಆದುದರಿಂದ, ನಾನು ಅಲ್ಲಿಗೇ ಹೋಗುತ್ತಿದ್ದೇನೆ. ನೀವು ತಿಂಗಳಿಗೊಮ್ಮೆ ಮಾತ್ರ ಅಲ್ಲಿಗೆ ಬಂದು ನನ್ನನ್ನು ನೋಡಬಹುದು." ಎಂದರು.

ಆಗಿನಿಂದ ಈಗಿನವರೆಗೂ ಈ ರೂಡಿಯನ್ನು ತಪ್ಪಿಸಲಾಗಿಲ್ಲ. ಆದರೆ, ನನ್ನ ಅವರ ಸಂಬಂಧಕ್ಕೆ ಹೆಸರೇನು? ತಂದೆ-ಮಗನೇ? ಮಾವ-ಅಳಿಯನೇ ? ಗುರು-ಶಿಷ್ಯನೇ? ಇವೆಲ್ಲಕ್ಕೂ ಮೀರಿದ ಬಂಧ ನಮ್ಮದು.

ಏನೆಂದು ಹೆಸರಿಡಲಿ ನಮ್ಮ ಈ ಬಂಧಕೆ?
ಆತ್ಮೀಯ ಭಾವ ಬೆಸೆದ ನಮ್ಮ ಅನುಬಂಧಕೆ
ಜನುಮ ಜನುಮದ ಭಾವಾನುಬಂಧಕೆ..

ಅಷ್ಟರಲ್ಲಿ "ಸಾರಿ ಪಪ್ಪಾ, ಇನ್ಮೇಲೆ ಹೀಗೆಲ್ಲಾ ಕೇಳಿ ನಿನಗೆ ಸಿಟ್ಟು ಬರುವ ಹಾಗೆ ಮಾಡಲ್ಲ, ರವಿ ತಾತನ್ನ ನೋಡೋಕೆ ನಾನೂ ಬರ್ತೀನಿ" ಅಂದ್ಲು ಮುದ್ದು ಸರಳ.

ಅದೆಲ್ಲಾ ಸರಿ. ಪ್ರಶ್ನೆಯೊಂದು ಮನದಲ್ಲಿ ಉಳಿದೇ ಹೋಗಿತ್ತು. "ಯಾವ ಹೆಸರು ಈ ಭಾವಾನುಬಂಧಕೆ?"

 ~ವಿಭಾ ವಿಶ್ವನಾಥ್

ಗುರುವಾರ, ಸೆಪ್ಟೆಂಬರ್ 19, 2019

ಜ್ಯೋತಿ

ಹುಟ್ಟಿದಾಗ ಹೆಣ್ಣೆಂದು ಜರಿಯದೆ
ಪ್ರೀತಿಯ ಹೊನಲನೇ ಹರಿಸಿದರು
ಮಗಳು ಮನೆಬೆಳಗುವ ಜ್ಯೋತಿಯಾಗಿ
ಪ್ರಕಾಶಮಾನವಾಗಿ ಬೆಳಗುತಿದ್ದಳು ಮನೆಯ

ಈ ಪ್ರೀತಿ, ಅನ್ಯೋನ್ಯತೆಯ ನೋಡಿ
ವಿಧಿಗೂ ಹೊಟ್ಟೆಯುರಿ ಮೂಡಿತ್ತು
ಕಾಲವೂ ಸಂಚಿನಲಿ ಭಾಗಿಯಾಗಿತ್ತು
ಜ್ಯೋತಿಯ ನಂದಿಸಲು ಕಾಯುತ್ತಿತ್ತು

ತೆರೆಮರೆಯಲಿ ಅವಿತಿದ್ದ ರಕ್ಕಸ
ಮೇಲೆರಗಿದ್ದ ವಿಕೃತ ಕಾಮುಕನಾಗಿ
ಅಪಾಯವನೇ ನಿರೀಕ್ಷಿಸಿರಲಿಲ್ಲ ಕೂಸು
ಅವನಾಕ್ರಮಣಕ್ಕೆ ನಲುಗಿ ಹೋಯಿತು

ಹೊಸಕಿದ ಹೂವ ಸರಿಪಡಿಸಲಾರದಾದರೂ
ಮತ್ತಷ್ಟು ಕಾಲ ಬದುಕಿಸಿಕೊಳ್ಳಬಹುದಿತ್ತು
ಅವಳಿಗೆ ಸಾವೂ ಸಿಗಲಿಲ್ಲ, ಇತ್ತ ನ್ಯಾಯವೂ
ಜ್ಯೋತಿ ಅದೇಕೋ ಬೆಂಕಿಯಾಗಲೇ ಇಲ್ಲ 

ಹುಟ್ಟಿದಾಗ ಜರಿಯದಿದ್ದವರೆಲ್ಲರೂ
ಈಗ ಜರಿಯುತ್ತಲೇ ಇದ್ದಾರೆ, ಅವಳದಲ್ಲದ ತಪ್ಪಿಗೆ
ಮಾನಸಿಕವಾಗಿ ಸತ್ತು, ಜೀವಂತ ಶವವಾಗಿ
ನರಳುತಿದೆ ಜೀವಜ್ಯೋತಿ ಅತಂತ್ರವಾಗಿ

~ವಿಭಾ ವಿಶ್ವನಾಥ್

ಭಾನುವಾರ, ಸೆಪ್ಟೆಂಬರ್ 15, 2019

ಇಂಜಿನಿಯರ್ ಗಳ ಹಿಂದಿನ ಕತೆ

ಪಿ.ಯು.ಸಿ ಮುಗಿದ ನಂತರ ಯಾವುದೋ ಕೋರ್ಸ್ ಆಗಬಹುದು ಎಂದೋ, ಅಥವಾ ಮತ್ತಾವ ಆಯ್ಕೆಯೂ ಲಭ್ಯವಿಲ್ಲ ಎಂದೋ ಅಥವಾ ಮತ್ತೊಬ್ಬರ ಮಾತಿಗೆ ಬೆಲೆಕೊಟ್ಟು ಅಥವಾ ಮನೆಯಲ್ಲಿ ಹೇಳಿದರೆಂದೋ, ನಮ್ಮ ಹವ್ಯಾಸಗಳನ್ನೆಲ್ಲಾ ಬಲಿಕೊಟ್ಟೋ ಒಂದು ಪ್ರೊಫೆಶನಲ್ ಕೋರ್ಸ್ ಗೆ ಸೇರುತ್ತೇವೆ. ಇಂಜಿನಿಯರಿಂಗ್ ಮುಗಿಸಿದ 80 ರಿಂದ 90% ಜನರ ಇಂಜಿನಿಯರಿಂಗ್ ಸೇರುವ ಮೊದಲಿನ ಕಥೆ ಇದು.

ಹುಡುಗಿಯರ ಇಂಜಿನಿಯರಿಂಗ್ ಸೇರುವಿಕೆಯ ಹಿಂದೆ ಇನ್ನೊಂದಿಷ್ಟು ಕಾರಣಗಳಿರುತ್ತವೆ. ಹುಡುಗಿ ಕೊಂಚ ಕಪ್ಪು, ಎತ್ತರ ಕೂಡಾ ಕಡಿಮೆಯೇ.. ಬಿ.ಎಸ್.ಸಿ ಸೇರಿದರೆ ಗಂಡು ಹುಡುಕುವುದು ಕಷ್ಟ ಆಗುತ್ತೆ. ಬಿ.ಇ ಅಥವಾ ಬಿ.ಟೆಕ್ ಮಾಡಿದರೆ ಅವಳ ಮದುವೆಗೆ ಸುಲಭವಾಗುತ್ತೆ. ಹೆಣ್ಣುಮಕ್ಕಳ ಮದುವೆಯ ಮಾರ್ಕೆಟ್ ಗೆ ಇದೊಂದು ಅಸ್ತ್ರವಾಗಿರುತ್ತದೆ ಅಷ್ಟೇ..

ಇಂಜಿನಿಯರಿಂಗ್ ಸೇರಿದವರೆಲ್ಲಾ ಇಂಜಿನಿಯರ್ ಗಳೇ ಆಗುತ್ತಾರಾ? ಖಂಡಿತ ಇಲ್ಲ. 4 ವರ್ಷದಲ್ಲಿ ಇಂಜಿನಿಯರಿಂಗ್ ಮುಗಿಸುವವರು ಕೂಡಾ ಇಂಜಿನಿಯರ್ ಗಳಾಗುತ್ತಾರೆ. 8 ವರ್ಷದಲ್ಲಿ ಇಂಜಿನಿಯರಿಂಗ್ ಮುಗಿಸುವವರು ಕೂಡಾ ಇಂಜಿನಿಯರ್ ಎಂಬ ಹಣೆಪಟ್ಟಿ ಹೊತ್ತುಕೊಳ್ಳುತ್ತಾರೆ. 4 ವರ್ಷದಲ್ಲಿ ಇಂಜಿನಿಯರಿಂಗ್ ಮುಗಿಸಿದರೂ ಮೊದಲನೇ ಅಟೆಂಪ್ಟ್ ಅಲ್ಲಿಯೇ ಎಲ್ಲಾ ಸಬ್ಜೆಕ್ಟ್ ಗಳನ್ನು ಪಾಸ್ ಮಾಡುವವರು ಕಡಿಮೆಯೇ.. 8 ಸೆಮಿಸ್ಟರ್ ಮುಗಿಸಿ, 64 ಸಬ್ಜೆಕ್ಟ್ ಗಳನ್ನು ಓದಿದ ಮಾತ್ರಕ್ಕೆ ಇಂಜಿನಿಯರ್ ಗಳಾಗಿ ಬಿಡುತ್ತಾರಾ? ಅಸಲಿಗೆ ಇಂಜಿನಿಯರ್ ಗಳೆಂದರೆ ಯಾರು?

ಸಮಾಜದ ಸಮಸ್ಯೆಗಳಿಗೆ ಎಲ್ಲರಿಗೂ ಸರಿ ಹೊಂದುವಂತೆ ಉತ್ತರ ಸೂಚಿಸುವವನೇ ಇಂಜಿನಿಯರ್. ಕಲ್ಲಿನಿಂದ ಬೆಂಕಿ ಉತ್ಪಾದಿಸುವುದನ್ನು ಕಂಡು ಹಿಡಿದವನು, ಮರದ ಗಾಲಿ ಕಂಡು ಹಿಡಿದವನು, ಮನೆ ಕಟ್ಟುವುದನ್ನು ಶುರು ಮಾಡಿದವನು ಎಲ್ಲರೂ ಒಂದರ್ಥದಲ್ಲಿ ಇಂಜಿನಿಯರ್ ಗಳೇ.. ಇಂದಿನ ಇಂಜಿನಿಯರ್ ಗಳ ಕುರಿತು ಒಂದು ಮಾತಿದೆ. ಬೆಂಗಳೂರಿನಲ್ಲಿ ಒಂದು ಬೀದಿಯಲ್ಲಿ ನಿಂತು ಕಲ್ಲು ಎಸೆದರೆ ಅದು ಒಂದು ನಾಯಿಗೆ ತಾಕುತ್ತದೆ ಅಥವಾ ಒಬ್ಬ ಇಂಜಿನಿಯರ್ ಗೆ ತಾಕುತ್ತದೆ ಎಂದು. ಇಂಜಿನಿಯರ್ ಗಳ ಸಂಖ್ಯೆ ಇಂದು ಕ್ರಮೇಣ ಹೆಚ್ಚಾಗುತ್ತಲೇ ಹೋಗುತ್ತಿದೆ. ಇಂದಿನ ಇಂಜಿನಿಯರಿಂಗ್ ಕಾಲೇಜುಗಳು ಇಂಜಿನಿಯರ್ ಗಳನ್ನು ತಯಾರು ಮಾಡುವ ಕಾರ್ಖಾನೆಗಳಂತೆ ಭಾಸವಾಗುತ್ತಿವೆ. ಗುಣಮಟ್ಟದ ಶಿಕ್ಷಣ ನೀಡುತ್ತಿಲ್ಲ ಬದಲಿಗೆ ಸಂಖ್ಯೆಗಳಲ್ಲಿ ಹೆಚ್ಚಳ ಮಾಡುತ್ತಿವೆ ಅಷ್ಟೇ..

ಇಂದಿನ ಇಂಜಿನಿಯರಿಂಗ್ ಕಾಲೇಜುಗಳ ಪಠ್ಯದಲ್ಲಿರುವುದು 10 ರಿಂದ 15 ವರ್ಷ ಹಿಂದಿನ ಟೆಕ್ನಾಲಜಿಯ ಕುರಿತ ವಿಚಾರಗಳು. ಇಂದಿನ ಪೀಳಿಗೆಗೆ ಅದು ಔಟ್ ಡೇಟೆಡ್. ಅಲ್ಲದೇ ಇಂದಿನ ಇಂಜಿನಿಯರ್ ಗಳಿಗೆ ಬೇಕಾದ ಪ್ರಾಕ್ಟಿಕಲ್ ನಾಲೆಡ್ಜ್ ಕೂಡಾ ಅದರಿಂದ ದೊರೆಯುತ್ತಿಲ್ಲ. ಬರಿ ಪುಸ್ತಕಕ್ಕಷ್ಟೇ, ಅಂಕಕ್ಕಷ್ಟೇ ಓದು ಸೀಮಿತವಾಗಿಬಿಟ್ಟಿದೆ. ಅದಕ್ಕಾಗಿಯೇ ಇಂಜಿನಿಯರಿಂಗ್ ಮುಗಿದ ಮೇಲೂ ಕೆಲಸಕ್ಕೋಸ್ಕರ ಮತ್ತೊಂದು ಕೋರ್ಸ್ ಮಾಡಬೇಕಾಗುತ್ತದೆ. ಅಲ್ಲದೇ, ಇಂಜಿನಿಯರಿಂಗ್ ನ ಕೊನೆಯ ವರ್ಷದ ಪ್ರಾಜೆಕ್ಟ್ ಎಷ್ಟು ಜನರ ಸ್ವಂತ ಆಲೋಚನೆ..? ಬಹುಶಃ 10% ವಿದ್ಯಾರ್ಥಿಗಳು ತಮ್ಮ ಪ್ರಾಜೆಕ್ಟ್ ಗಳನ್ನು ತಾವೇ ಮಾಡಬಹುದೇನೋ ಅಷ್ಟೇ. ಇಂಜಿನಿಯರಿಂಗ್ ಪ್ರಾಜೆಕ್ಟ್ ಮಾಡಿಕೊಡುವ ಕನ್ಸಲ್ಟೆನ್ಸಿ ಗಳು ಇಂದು ನಾಯಿಕೊಡೆಗಳಂತೆ ತಲೆ ಎತ್ತಿವೆ. ಇಂಜಿನಿಯರಿಂಗ್ ವಿದ್ಯಾರ್ಥಿಗಳು ಅಲ್ಲಿಂದ ಪ್ರಾಜೆಕ್ಟ್ ಕೊಂಡು ತರುತ್ತಾರೆ ಆದರೆ ಅದನ್ನು ಸರಿಯಾಗಿ ವಿವರಿಸಲು ಸಹಾ ಅವರಿಂದ ಆಗುತ್ತಿರುವುದಿಲ್ಲ. ಇಂದಿನ ದಿನಗಳಲ್ಲಿ ಅವರ ಪ್ರಾಜೆಕ್ಟ್ ಗಳನ್ನು ಅವರೇ ಮಾಡಿದಾಗಲೂ ಅವರ ಗೈಡ್ ಗಳು ನಂಬಲು ತಯಾರಿರುವುದಿಲ್ಲ. ಗೈಡ್ ಎಂಬ ಪದಕ್ಕೆ ಅರ್ಥವೇ ಇಲ್ಲದಂತಾಗಿದೆ. ಗೈಡೆನ್ಸ್ ನೀಡದವರಿಗೂ ಅಲ್ಲಿ ಗೈಡ್ ಎಂಬ ಹಣೆಪಟ್ಟಿ.

ಇಷ್ಟೆಲ್ಲಾ ಮುಗಿಸಿ ಹೊರಬಂದರೆ ಕೆಲಸ ಎಂಬ ಪ್ರಶ್ನೆ ಎದುರಾಗುತ್ತದೆ. ಕಾಲೇಜ್ ನಲ್ಲಿಯೇ ಪ್ಲೇಸ್ ಮೆಂಟ್ ಆದವರದ್ದೊಂದು ಕತೆಯಾದರೆ, ಆಗದವರದ್ದೊಂದು ಕತೆ. ಕಾಲೇಜ್ ನ ಪ್ಲೇಸ್ ಮೆಂಟ್ ಟ್ರೈನಿಂಗ್ ನ ಮರುದಿನ ಅಲ್ಲಿನ ಸ್ಥಳೀಯ ಪತ್ರಿಕೆಗಳಲ್ಲಿ, ಕಾಲೇಜಿನ ಹೊರಗಡೆ ಕೆಲಸ ಸಿಕ್ಕಿದವರ ಫೋಟೋ ರಾರಾಜಿಸುತ್ತಿರುತ್ತದೆ. ಆದರೆ, ಕೆಲಸಕ್ಕೆ ಸೇರಲು ಹೋದಾಗ ಅಲ್ಲಿನ ನೈಜ ಸ್ಥಿತಿ ಅರಿವಾಗುವುದು.ಇಂತಹದ್ದೇ ಒಂದಷ್ಟು ಕಾಲೇಜುಗಳಿಂದ ಆಯ್ಕೆ ಮಾಡಿದ ವಿದ್ಯಾರ್ಥಿಗಳು ಅಲ್ಲಿರುತ್ತಾರೆ. ಅಲ್ಲಿರುವ 10-20 ಸ್ಥಾನಗಳಿಗೆ ಮತ್ತೆ ಅಲ್ಲಿ ಪೈಪೋಟಿ ನಡೆಯುತ್ತದೆ. ಇತ್ತ ಕೆಲಸವಿಲ್ಲ, ಅತ್ತ ಕಾಲೇಜಿನಿಂದ ಕೆಲಸ ಸಿಕ್ಕಿದೆ ಎಂಬ ಮುದ್ರೆ. ಇಲ್ಲಿಯೂ ಇರದೆ, ಅಲ್ಲಿಯೂ ಹೋಗದೆ ಅಬ್ಬೇಪಾರಿಗಳಂತಾಗಿ ಬಿಡುತ್ತಾರೆ. ಕಾಲೇಜಿನವರು ನಮಗೂ ಇದಕ್ಕೂ ಸಂಬಂಧವಿಲ್ಲ ಎಂದು ಕೈ ತೊಳೆದುಕೊಂಡು ಬಿಡುತ್ತಾರೆ. ನಂತರ ಪ್ಲೇಸ್ ಮೆಂಟ್ ಆಗದವರ ಸಾಲಿಗೇ ಸೇರಿಕೊಂಡು ರೆಸ್ಯೂಮ್ ಹಿಡಿದುಕೊಂಡು ಅಲೆಯುತ್ತಾ ಮತ್ತಾವುದೋ ಕೋರ್ಸ್ ಗೆ ಸೇರಿಕೊಂಡು ಸಿಕ್ಕ ಕೆಲಸ ಮಾಡಿಕೊಂಡು, ಸಿಕ್ಕಷ್ಟೇ ಸಂಬಳವನ್ನು ಒಪ್ಪಿಕೊಂಡು ಸುಮ್ಮನಾಗುವ ಹೊತ್ತಿಗೆ ಇಂತಹದ್ದೇ ಪರಿಸ್ಥಿತಿಯ ಮತ್ತೊಂದು ಬ್ಯಾಚ್ ಇಂಜಿನಿಯರ್ ಗಳು ಎಂಬ ಕಿರೀಟ ಹೊತ್ತುಕೊಂಡು ಹೊರಬಂದಿರುತ್ತಾರೆ.

ಇಂತಹದ್ದೇ ಪರಿಸ್ಥಿತಿ ಮರುಕಳಿಸುತ್ತಲೇ ಇದೆ. ವಿದ್ಯಾರ್ಥಿಗಳ ಕೆಲವು ಕೊರತೆಯಿಂದ ಇಂಜಿನಿಯರಿಂಗ್ ಕಾಲೇಜುಗಳು ಬಾಗಿಲು ಮುಚ್ಚುವ ಪರಿಸ್ಥಿತಿಗೆ ಬರುತ್ತಿದ್ದರೆ ಮತ್ತೆ ಕೆಲವು ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳು ಶುರುವಾಗುತ್ತಿವೆ.

ಇನ್ನು ಮುಂದಾದರೂ ಗುಣಮಟ್ಟದ ಶಿಕ್ಷಣ ಕೊಡುವ ಇಂಜಿನಿಯರಿಂಗ್ ಕಾಲೇಜುಗಳಾಗಿ ಕಾಲೇಜುಗಳು ಮತ್ತು ಅಧ್ಯಾಪಕರು ಬದಲಾಗಲಿ. ಇವತ್ತು ಕೀಳಿರಿಮೆಯಿಂದ "ನಾನೂ ಒಬ್ಬ ಇಂಜಿನಿಯರ್" ಎಂದು ಹೇಳಿಕೊಳ್ಳುವವರು ಗರ್ವದಿಂದ ಸಮಾಜಕ್ಕೆ ನಾನು ನೀಡಿರುವ ಕೊಡುಗೆ ಇದು.. "ನಾನೋರ್ವ ಇಂಜಿನಿಯರ್" ಎಂದು ಹೆಮ್ಮೆಯಿಂದ ಹೇಳುವಂತಾಗಲಿ. ಯಾವುದೂ ಸಿಗದೆ ಇಂಜಿನಿಯರಿಂಗ್ ಸೇರಿಕೊಂಡೆ ಎನ್ನುವುದಕ್ಕಿಂತ "ಇಂಜಿನಿಯರಿಂಗ್" ಅನ್ನೇ ಆಯ್ಕೆ ಮಾಡಿಕೊಳ್ಳಬೇಕು ಎಂದೇ ಇಂಜಿನಿಯರಿಂಗ್ ಅನ್ನು ಆಯ್ಕೆ ಮಾಡಿಕೊಳ್ಳುವಂತಾಗಲಿ ಎಂದು ಆಶಿಸುವೆ.

ಇಂಜಿನಿಯರಿಂಗ್ ಹಿಂದಿನ ಕತೆ ಏನೇ ಇದ್ದರೂ ಇಂಜಿನಿಯರಿಂಗ್ ಮುಗಿಸಿರುವ ಎಲ್ಲಾ ಇಂಜಿನಿಯರ್ ಗಳಿಗೂ, ಭಾವೀ ಇಂಜಿನಿಯರ್ ಗಳಿಗೂ, ಇಂಜಿನಿಯರಿಂಗ್ ಓದಿ ಬೇರೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೂ ಹ್ಯಾಪಿ ಇಂಜಿನಿಯರ್ಸ್ ಡೇ.

~ವಿಭಾ ವಿಶ್ವನಾಥ್

ಗುರುವಾರ, ಸೆಪ್ಟೆಂಬರ್ 12, 2019

ಅನಂತ ಪ್ರೇಮ

ಅವಳು ಮುಗ್ಧ ಮನಸ್ಸಿನ ನಿಷ್ಕಲ್ಮಶೆ
ಅವನೋ ಜಗತ್ತಿನ ದೊಡ್ಡ ಚಿತ್ತಚೋರ

ಬಾಲ್ಯವದು ಬೆಸೆದಿಹುದು ಇಬ್ಬರನೂ
ಅಮ್ಮನಿಗೆ ಬಾಯಲ್ಲಿ ಬ್ರಹ್ಮಾಂಡ ತೋರಿದವ
ಅವಳಿಗೆ ಕೊಳಲ ನಾದದಿ ಪ್ರೀತಿ ತೋರಿದ
ಎರಡು ದೇಹದ ಆತ್ಮಗಳೂ ಒಂದಾದವು

ನಂದಗೋಕುಲದಿ ಎಲ್ಲರ ಕಣ್ಣುಕುಕ್ಕುವಂತೆ
ನಡೆದೇ ಇತ್ತು ಇಬ್ಬರ ಪ್ರೇಮಪಯಣ
ಹಳಿ ತಪ್ಪಿತು ಪ್ರೀತಿ ಕರ್ತವ್ಯದ ಹೊಣೆಯಲಿ
ಹೊರಟೇ ಬಿಟ್ಟನು ಮುರಾರಿ ಲೋಕಕಲ್ಯಾಣಕೆ

ಕಾಳಿಂದಿಯೊಡಲಲಿ ಸೇರಿ ಹೋಯಿತು
ರಾಧೆಯ ಕಣ್ಣೀರೊಡನೆ, ಪ್ರೀತಿ ಪಯಣವೂ
ಸಂಸಾರದ ನೊಗ ಹೊತ್ತರಿಬ್ಬರೂ ಬೇರೆಯಾಗಿ
ತಮ್ಮ ಪ್ರೀತಿಗೆ ಅಂತರ್ಪಟವನೆಳೆದು..

ಸಾವಿಲ್ಲದ ಪ್ರೀತಿ ಸಾಯದೆ ಬದುಕುತಲಿತ್ತು
ಜೀವನಕೆ ಅಮೃತ ಸಮಾನವಾಗಿ ಉಳಿದಿತ್ತು
ಕಡೆಗೂ ದೇಹಗಳು ಒಂದಾಗಲೇ ಇಲ್ಲ
ರಾಧೆಯ ಅನಂತ ಪ್ರೀತಿ ಲೀನವಾಯಿತು ಮುರಾರಿಯಲಿ

~ವಿಭಾ ವಿಶ್ವನಾಥ್

ಭಾನುವಾರ, ಸೆಪ್ಟೆಂಬರ್ 8, 2019

ಹೊರಟದ್ದೇತಕೆ

ಭರವಸೆಯ ಉತ್ತುಂಗಕ್ಕೆ ತಲುಪಿಸಿ
ಮನದಿ ಆಶಾಕಿರಣವ ಮೂಡಿಸಿ
ನೀ ಇರದೆ ಹೊರಟದ್ದೇತಕೆ..?

ನೂರಾರು ಕೆಲಸಗಳ ನಡುವೆಯೂ
ಆತ್ಮವಿಶ್ವಾಸ ಮೂಡಿಸಲು ಬಂದು
ಸುಳಿವೇ ನೀಡದೆ ಹೊರಟದ್ದೇತಕೆ..?

ತನ್ನವರೇ ಎಲ್ಲರೂ ಎಂಬ ಭಾವದಲ್ಲಿದ್ದವ
ಬುದ್ದನಂತೆ ಜ್ಞಾನೋದಯ ಮಾಡಿಕೊಂಡು
ಎಲ್ಲವನೂ ಕೊಡವಿ ಹೊರಟದ್ದೇತಕೆ..?

ಇರುವಿಕೆಯಲಿ ಏನೂ ಅನ್ನಿಸದಂತಿದ್ದು
ಇಲ್ಲದಿರುವಿಕೆಯಲಿ ಶೂನ್ಯ ಭಾವ ಮೂಡಿಸಿ
ನಿಶ್ಚಿಂತೆಯಲಿ ಬಿಟ್ಟು ಹೊರಟದ್ದೇತಕೆ..?

ಕಾರಣಗಳ ನೀ ನೀಡದೆಯೇ
ನಿರ್ಧಾರವನು ಮಾತ್ರ ತಿಳಿಸಿ
ನಿರ್ಲಿಪ್ತತೆಯಲಿ ಹೊರಟದ್ದೇತಕೆ..?

ಆಸೆಯ ಚಿತ್ತಾರವ ಬಿಡಿಸುತ್ತಾ
ನೂರಾರು ಕನಸು ಕಾಣುತ್ತಿದ್ದಾಗಲೇ
ಮತ್ತೆ ಬಾರೆನೆಂದು ಹೊರಟದ್ದೇತಕೆ..?

ನಂದಾದೀಪಗಳ ನಡುವಲ್ಲಿ
ಸೂರ್ಯನಂತೆ ಬೆಳಕು ನೀಡುತ್ತಿದ್ದಾಗಲೇ
ಕತ್ತಲೆಗೆ ದೂಡಿ ಹೊರಟದ್ದೇತಕೆ..?

~ವಿಭಾ ವಿಶ್ವನಾಥ್

ಗುರುವಾರ, ಸೆಪ್ಟೆಂಬರ್ 5, 2019

ಗುರುವಿನಿಂದ ಅರಿವಿನತ್ತ..

"ಅರಿವೇ ಗುರು" ಎನ್ನುತ್ತಾರೆ. ಅರಿವು ಮೂಡಿಸುವ ಹಾದಿಯಲ್ಲಿ ದಾರಿದೀಪವಾಗುವವರೆಲ್ಲರೂ ಗುರುಗಳೇ.. "ವರ್ಣಮಾತ್ರಂ ಕಲಿಸಿದಾತಂ ಗುರು" ಎಂಬ ಸೂಕ್ತಿ ಇದೆ. ಒಂದಕ್ಷರ ಕಲಿಸಿದವನು ಕೂಡಾ ಗುರುವೇ ಎಂಬುದು ಇದರರ್ಥ. ಆದರೆ, ಏಕಲವ್ಯ ಮತ್ತು ದ್ರೋಣರ ಸಂಬಂಧ ಇದಕ್ಕೆ ಅಪವಾದ ಎನ್ನಿಸಿದಂತೆ ಭಾಸವಾದರೂ.. ಸ್ಪೂರ್ತಿ ನೀಡಿ ದಾರಿದೀಪವಾದವರೂ ಗುರುಗಳೇ ಅಲ್ಲವೇ..?

ಮೊದಲಿಗೆ ಹಿಂದಿನ ಗುರು-ಶಿಷ್ಯರ ಕುರಿತು ಹೇಳುವೆ. ಹಿಂದಿನ ಗುರು-ಶಿಷ್ಯ ಜೋಡಿಗಳು ವಿಶಿಷ್ಟವಾಗಿವೆ. ಸಾಂದೀಪನಿ-ಕೃಷ್ಣ, ಶುಕ್ರಾಚಾರ್ಯ-ದಾನವರು, ಬೃಹಸ್ಪತಿ-ದೇವಗಣ, ಬಲರಾಮ-ದುರ್ಯೋಧನ ಹೀಗೇ ಬರೆಯುತ್ತಾ ಹೋದಷ್ಟೂ ಪಟ್ಟಿ ದೊಡ್ಡದಾಗುತ್ತಲೇ ಹೋಗುತ್ತವೆ. ಆದರೆ, ದ್ರೋಣ-ಏಕಲವ್ಯ ಮತ್ತು ಅರ್ಜುನರ ಗುರು-ಶಿಷ್ಯ ಸಂಬಂಧಗಳು ವಿರೋಧಾಭಾಸದ ನೆಲೆಗಟ್ಟಿನಲ್ಲಿ ನಿಂತುಬಿಡುತ್ತವೆ. ದ್ರೋಣರು ಏಕಲವ್ಯನಿಗೆ ಮುಖತಃ ವಿದ್ಯೆ ಭೋಧಿಸಲಿಲ್ಲ ಆದರೆ ಏಕಲವ್ಯನ ಶ್ರದ್ಧೆ, ಗುರು ಭಕ್ತಿ ಅವನ ಅಭ್ಯಾಸವನ್ನು ತಪ್ಪಿಸದಂತೆ ಮುಂದುವರಿಸಲು ಪ್ರೇರೇಪಿಸಿತು. ಅರ್ಜುನನಿಗೆ ಕೊಟ್ಟ ಮಾತಿನಿಂದಾಗಿ, ಅರ್ಜುನನ ಮೇಲಿನ ವ್ಯಾಮೋಹದಿಂದಾಗಿ ಏಕಲವ್ಯ ಎಂಬ ಅಪ್ರತಿಭ ಪ್ರತಿಭಾವಂತನ ಪ್ರತಿಭೆ ನಾಮಾವಶೇಷವಾಯಿತು. ಅಷ್ಟಕ್ಕೂ ದ್ರೋಣರಿಗೆ ಅರ್ಜುನನ ಮೇಲೆ ಕೊಂಚ ಪ್ರೀತಿ ಹೆಚ್ಚು ಎಂದರೆ ಅತಿಶಯೋಕ್ತಿಯಾಗಲಾರದು. ಯಾಕೆ ಹೀಗೆ?
ದ್ರೋಣಾಚಾರ್ಯರು ಜಾತಿಯ ಕಾರಣಕ್ಕಾಗಿ ಏಕಲವ್ಯ ಮತ್ತು ಕರ್ಣರಿಗೆ ವಿದ್ಯೆ ಕಲಿಸಲಿಲ್ಲ. ಆದರೆ, ತಮ್ಮ ಮಗ ಅಶ್ವತ್ಥಾಮನಿದ್ದ. ಬಲಶಾಲಿಯಾದ ಭೀಮನಿದ್ದ, ಮಹತ್ವಾಕಾಂಕ್ಷೆಯ ರಾಜಕುಮಾರ ದುರ್ಯೋಧನನಿದ್ದ, ಸತ್ಯವಂತ ಧರ್ಮರಾಯನಿದ್ದ. ಇವರೆಲ್ಲರನ್ನೂ ಬಿಟ್ಟು ಅರ್ಜುನನ್ನೇ ಮಹಾಬಿಲ್ವಿದ್ಯೆಗಾರನನ್ನಾಗಿ ರೂಪಿಸಿದ್ದೇತಕೆ? ಇಂದಿನ ದಿನಗಳಲ್ಲೂ ನೂರಾರು ವಿದ್ಯಾರ್ಥಿಗಳಿದ್ದರೂ ಶಿಕ್ಷಕರ ಕೃಪಾಕಟಾಕ್ಷಕ್ಕೆ ಕೆಲವೇ ವಿದ್ಯಾರ್ಥಿಗಳು ಪಾತ್ರವಾಗುವುದ್ದೇತಕೆ..?

ಇದೆಲ್ಲದಕ್ಕೂ ದಂತಕತೆಗಳು ನೂರಾರಿದ್ದರೂ, ಕಾರಣ ಮಾತ್ರ ಒಂದೇ. ಅದು 'ಏಕಾಗ್ರತೆ'.
ಒಮ್ಮೆ ಗುರು ದ್ರೋಣರು ಮರದ ಮೇಲೆ ಒಂದು ಹಕ್ಕಿಯನ್ನಿಟ್ಟು ಎಲ್ಲಾ ಶಿಷ್ಯರನ್ನೂ ಕರೆದು ಒಬ್ಬೊಬ್ಬರಾಗಿ ಬಂದು ಹಕ್ಕಿಯ ಕಣ್ಣಿಗೆ ಬಾಣ ಹೊಡೆಯುವಂತೆ ಸೂಚಿಸುತ್ತಾರೆ. ಒಬ್ಬೊಬ್ಬರೇ ಬಂದು ಹಕ್ಕಿಯ ಕಡೆ ಬಾಣವನ್ನು ಗುರಿ ಮಾಡಿದಾಗ ದ್ರೋಣರು ಕೇಳುವುದು ಒಂದೇ ಪ್ರಶ್ನೆ. "ನಿನಗೆ ಈಗ ಕಾಣುತ್ತಿರುವುದೇನು..?" ಅರ್ಜುನನೊಬ್ಬನ ಹೊರತು ಎಲ್ಲರೂ "ನನಗೆ ಆಕಾಶ, ಮರ, ಹಕ್ಕಿ, ರೆಂಬೆ ಎಲ್ಲವೂ ಕಾಣುತ್ತಿದೆ. ಪಕ್ಕದಲ್ಲಿ ನಿಂತಿರುವ ನೀವು, ಮುಂದೆ ನಿಂತಿರುವ ಉಳಿದವರೆಲ್ಲರೂ ಕಾಣುತ್ತಿದ್ದಾರೆ" ಎನ್ನುವ ಅಥವಾ ಇದೇ ರೀತಿ ಅರ್ಥ ಬರುವಂತೆ ಇರುವ ಉತ್ತರಗಳನ್ನು ನೀಡಿದರು. ಅರ್ಜುನ ಮಾತ್ರ "ಆ ಹಕ್ಕಿಯ ಕಣ್ಣು ಬಿಟ್ಟು ನನಗೆ ಬೇರೇನೂ ಕಾಣುತ್ತಿಲ್ಲ" ಎಂದನು. ಆಗ ದ್ರೋಣರು ಅವನನ್ನು ಮೆಚ್ಚಿ ಅಭಿನಂದಿಸಿ ಬಾಣ ಹೂಡಲು ಹೇಳುತ್ತಾರೆ. ಶಿಷ್ಯನ ಏಕಾಗ್ರತೆ ಮಾತ್ರ ಅವನನ್ನು ಕಲಿಕೆಯ ಹಾದಿಯಲ್ಲಿ ಉತ್ತುಂಗಕ್ಕೇರುವಂತೆ ಮಾಡುತ್ತದೆ. ಸತ್ಯ, ಬಲ, ಸ್ವಜಾತಿಯ ಮೋಹ, ಕರುಳಬಳ್ಳಿ, ಹಣ, ಮನ್ನಣೆ ಇವ್ಯಾವ ಅಂಶಗಳೂ ದ್ರೋಣರನ್ನು ಕಾಡಲಿಲ್ಲ. ಅವರು ಪರಿಗಣಿಸಿದ್ದು ಏಕಾಗ್ರತೆಯನ್ನು ಮಾತ್ರ. ಒಬ್ಬ ಶಿಷ್ಯನ ಮೇಲಿನ ವ್ಯಾಮೋಹ ಮತ್ತೊಬ್ಬ ಶಿಷ್ಯನ ಬದುಕನ್ನು ಬಲಿತೆಗೆದುಕೊಂಡದ್ದು ಮಾತ್ರ ವಿಪರ್ಯಾಸ.

ಹಿಂದಿನ ವಿಚಾರ ಬಿಟ್ಟು ಇಂದಿನ ವಿಚಾರವನ್ನು ನೋಡೋಣ. ಶಿಕ್ಷಕರು ಎಲ್ಲಾ ಶಿಷ್ಯರನ್ನೂ ಸಮಾನವಾಗಿ ಭಾವಿಸುತ್ತೇವೆ ಎಂದುಕೊಂಡರೂ ಸಹಾ ಕೆಲವರ ವಿಷಯದಲ್ಲಿ ಪಕ್ಷಪಾತ ಮಾಡುತ್ತಾರೆ ಎಂಬ ಆಪಾದನೆಯಂತೂ ಇದ್ದೇ ಇದೆ. ಆ ಆಪಾದನೆ ಮಾಡುವವರಲ್ಲಿ ನನ್ನದೊಂದು ಪ್ರಶ್ನೆ. "ನೀವು ನಿಮ್ಮ ಎಲ್ಲಾ ಶಿಕ್ಷಕರನ್ನೂ ಸಮಾನವಾಗಿಯೇ ಭಾವಿಸುತ್ತೀರಾ..?" ಖಂಡಿತವಾಗಿಯೂ ಇಲ್ಲ. ಅಲ್ಲವೇ..? ನಿಮ್ಮ "ಫೇವರೇಟ್ ಟೀಚರ್" ಎನ್ನುವ ಪಟ್ಟ ಯಾರೋ ಒಬ್ಬರಿಗೆ ಮೀಸಲಾಗಿದೆ ಅಲ್ಲವೇ? ಶಿಷ್ಯರಿಗೆ ಒಂದು ನ್ಯಾಯ, ಗುರುಗಳಿಗೆ ಮತ್ತೊಂದು ನ್ಯಾಯ ಎಂದರೆ ಎಷ್ಟು ಸರಿ?

ಚಿಕ್ಕಂದಿನಿಂದ ಇಲ್ಲಿಯವರೆಗೂ ಕಲಿಸಿದ ಎಲ್ಲಾ ಶಿಕ್ಷಕರೂ ನೆನಪಿರುವುದು ಅಶಕ್ಯ. ಆದರೆ, ಕೆಲವರು ತಮ್ಮ ವಿಶಿಷ್ಟವಾದ ಗುಣದಿಂದ ಮನದಲ್ಲಿ ಅಚ್ಚಳಿಯದೇ ಉಳಿದುಕೊಂಡುಬಿಟ್ಟಿರುತ್ತಾರೆ. ಗೋವಿನ ಹಾಡನ್ನು ರಾಗವಾಗಿ ಹಾಡ್ತಾ ಇದ್ದ ಕನ್ನಡ ಟೀಚರ್, ಇಂಗ್ಲೀಷ್ ರೈಮ್ಸ್ ಅನ್ನು ಅಭಿನಯದ ಸಮೇತ ಹೇಳಿಕೊಡ್ತಾ ಇದ್ದ ಇಂಗ್ಲೀಷ್ ಟೀಚರ್, ಬೆತ್ತದ ಪ್ರಯೋಗವಿಲ್ಲದೆಯೇ ಆಟದ ಮೂಲಕ ಗಣಿತವನ್ನು ಕಲಿಸುತ್ತಿದ್ದ ಗಣಿತದ ಟೀಚರ್, ಪೀರಿಯಾಡಿಕ್ ಟೇಬಲ್ ಅನ್ನು ನೆನಪಿಟ್ಟುಕೊಳ್ಳಲು ಸುಲಭ ಸೂತ್ರ ಹೇಳಿಕೊಟ್ಟ ವಿಜ್ಞಾನದ ಟೀಚರ್, ಗ್ಲೋಬ್ ನ ಕತೆಯೊಂದಿಗೆ ಭೂಗೋಳ ಪರಿಚಯಿಸಿದ ಸಮಾಜದ ಟೀಚರ್ ಹೀಗೇ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಬೇಕಾದರೆ ಒಮ್ಮೆ ಕಣ್ಮುಚ್ಚಿಕೊಂಡು ನೆನಪು ಮಾಡಿಕೊಳ್ಳಿ. ಬರೀ ಪಾಠವೇ ಅಲ್ಲದೇ, ನೀತಿಕತೆಯನ್ನೂ ಹೇಳಿ ನೈತಿಕತೆಯ ಪಾಠವನ್ನೂ ಕಲಿಸಿದ ಟೀಚರ್ ನೆನಪಾಗಲ್ವಾ.. ನಿಮಗೆ?

ಇವರೆಲ್ಲರೂ ಪುಸ್ತಕದಲ್ಲಿ ಇದ್ದದ್ದನ್ನು, ಇದ್ದಂತೆಯೇ ಓದಿ, ಸಂಬಳಕ್ಕಷ್ಟೇ ನನ್ನ ಕೆಲಸ ಅಂತಾ ಹೋಗಿಬಿಟ್ಟಿರುತ್ತಾ ಇದ್ದಿದ್ದರೆ ಖಂಡಿತಾ ಇವರುಗಳು ನೆನಪಿನಿಂದ ಯಾವತ್ತೋ ಅಳಿಸಿಹೋಗಿಬಿಟ್ಟಿರುತ್ತಾ ಇದ್ದರು. ನಿಮ್ಮ ನೆನಪಲಿಲ್ಲದ ಶಿಕ್ಷಕರು ಬಹುಶಃ ಮಾಡಿರುವುದೇ ಹೀಗೆ. ಅಲ್ವಾ? ಆ ಸಂಧರ್ಭದಲ್ಲಿ ನಮಗೆ ಒಂದು ಸಬ್ಜೆಕ್ಟ್ ಇಷ್ಟ ಆಗಬೇಕು ಎಂದರೆ ಆ ಶಿಕ್ಷಕರಿಂದ ಮಾತ್ರವೇ ಆಗಿತ್ತು. ಅವರ ಭೋಧನೆಯ ಪರಿಣಾಮದಿಂದಾಗಿ ಆ ವಿಷಯದತ್ತಲೂ ಒಲವು ಹೆಚ್ಚಾಗುತ್ತಾ ಇತ್ತು.

ಡಾ|| ಗುರುರಾಜ ಕರ್ಜಗಿ ಅವರು ಸಂದರ್ಶನದಲ್ಲಿ ಒಮ್ಮೆ ಹೇಳುತ್ತಾರೆ. "ಗುರು-ಶಿಷ್ಯರ ಸಂಬಂಧ ಹೇಗಿರಬೇಕು ಎಂದರೆ ಗುರು ತನ್ನ ಶಿಷ್ಯರನ್ನು ತನ್ನ ಮಕ್ಕಳಿಗಿಂತಲೂ ಹೆಚ್ಚು ಪ್ರೀತಿಸಬೇಕು." ಎಂದು. ಇವತ್ತು ಗುರುಕುಲ ಶಿಕ್ಷಣ ಪದ್ಧತಿ ಇಲ್ಲ ನಿಜ. ಆದರೆ, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಭಾಂಧವ್ಯ ಕೂಡಾ ಗುರುಕುಲ ಪದ್ದತಿಯಂತೆಯೇ ಮಾಯವಾಗುತ್ತಿದೆ. ಹೆಚ್ಚಿನವರು ಸಂಬಳಕ್ಕಾಗಿ ಶಿಕ್ಷಕರು ಕೆಲಸ ಮಾಡುತ್ತಿದ್ದಾರೆಯೇ ಹೊರತು ವೃತ್ತಿಪ್ರೀತಿಯಿಂದಲ್ಲ. ಅಲ್ಲದೇ, ಇಂದಿನ ಶಿಕ್ಷಣದ ನಿಯಮಗಳು ಹೇಗಿವೆಯೆಂದರೆ ಶಿಕ್ಷಕರು ವಿದ್ಯಾರ್ಥಿಗಳನ್ನು ಶಿಕ್ಷಿಸಿದರೆ ಅದು ಅಪರಾಧವಾಗುತ್ತದೆ. ಶಿಕ್ಷೆಯೇ ಇಲ್ಲದೇ ಜೀವನದಲ್ಲಿ ಶಿಸ್ತು ಮೂಡಿಸಲು ಸಾಧ್ಯವೇ..?

ಅಲ್ಲದೇ, ಶಿಕ್ಷಕರ ಪಾಠ ಕೇಳಿ ಪ್ರಭಾವಿತರಾಗುವುದಕ್ಕಿಂತಲೂ ಅವರ ನಡವಳಿಕೆ ನೋಡಿ ಮಕ್ಕಳು ಅವರಂತಾಗಲು ಬಯಸಿ ಶಿಕ್ಷಕರನ್ನು ಅನುಕರಿಸುತ್ತಾರೆ. ಉದಾಹರಣೆಗೆ, ಶಾಲೆಯ ಹೊರಾಂಗಣದಲ್ಲಿ ಧೂಮಪಾನ ಮಾಡಿ ಬಂದು ಶಾಲೆಯಲ್ಲಿ "ಧೂಮಪಾನ ಆರೋಗ್ಯಕ್ಕೆ ಹಾನಿಕರ" ಎಂದು ಭೋಧಿಸುತ್ತಾನೆ. ವಿದ್ಯಾರ್ಥಿಗಳಿಗೆ ಇದು ಗಿಣಿಪಾಠದಂತಾಗುತ್ತದೆ ಅಷ್ಟೇ. ನೋಟ್ ಬುಕ್ ನಲ್ಲಿ ಆ ವಾಕ್ಯವನ್ನು ಗೀಚಿಕೊಂಡು ನಂತರ ಅವರೂ ಸಹಾ ಧೂಮಪಾನದ ಚಟಕ್ಕೆ ಒಳಗಾಗುತ್ತಾರೆ. ಧೂಮಪಾನ ಬಹಳ ಹಿಂದಿನ ಉದಾಹರಣೆಯಾಯಿತು ಎನ್ನಿಸಿದರೆ ಪ್ರಸ್ತುತ ಭ್ರಷ್ಟಾಚಾರ, ಲಂಚದ ವಿಚಾರವನ್ನು ಪರಿಗಣಿಸಿಕೊಳ್ಳಿ ಅಷ್ಟೇ.

ಹೀಗಾಗಲೇ ಟೆಕ್ನಾಲಜಿ ಮನುಷ್ಯನ ಬದುಕನ್ನು ಆವರಿಸಿಕೊಳ್ಳುತ್ತಿದೆ. ಮುಂದೆ ಶಿಕ್ಷಕರ ಬದಲಿಗೆ ಟ್ಯಾಬ್, ರೋಬೋಟ್ ಗಳು ಬಂದರೂ ಅಚ್ಚರಿಪಡಬೇಕಾದುದೇನಿಲ್ಲ. ಯಾಕೆಂದರೆ, ಮನುಷ್ಯನ ಕುತೂಹಲವನ್ನೆಲ್ಲಾ ನುಂಗಿ ಹಾಕಿ ಗೂಗಲ್ ಅದರ ಸ್ಥಾನಕ್ಕೆ ಬರುತ್ತಿದೆ. ಏನೇ ಆದರೂ ವಿದ್ಯಾರ್ಥಿಗಳ ಮನೋಭಾವವನ್ನು, ಮನಸ್ಥಿತಿಯನ್ನೂ ಅರ್ಥೈಸಿಕೊಂಡು ಬದುಕಿನ ಗಮ್ಯಕ್ಕೆ ತಲುಪಿಸುವ ದಾರಿದೀಪಗಳಾಗಲು ಶಿಕ್ಷಕರೇ ಸರಿ.

ಅರಿವು ಮೂಡಿಸಿಕೊಂಡು, ಅರಿವಿನತ್ತ ಕರೆದುಕೊಂಡು ಹೋಗುವವನು ಮಾತ್ರವೇ ಗುರು ಎನ್ನಿಸಿಕೊಳ್ಳಬಲ್ಲ. ನನ್ನ ಈ ಲೇಖನಕ್ಕೆ ಮೂಲ ಪ್ರೇರಣೆ ಕೂಡಾ ನನ್ನ ಗುರುಗಳೇ. ಈ ಲೇಖನವನ್ನು ಬರೆಯುವ ಇರಾದೆಯೇ ನನಗಿರಲಿಲ್ಲ. ಕಳೆದ ವಾರ ಅವರು ಹೇಳಿದ ಕೆಲವು ಸಂಗತಿಗಳನ್ನು ಕೇಳಿದ ನಂತರ ಅದನ್ನು ಒರೆ ಹಚ್ಚದೆ, ವಿಶ್ಲೇಷಿಸದೆ, ಬರೆಯದೇ ಸುಮ್ಮನಿರಲಾಗಲಿಲ್ಲ. ಅವರಿಗೆ ನನ್ನ ವಿಶೇಷ ಧನ್ಯವಾದಗಳು. ನಿಮಿತ್ತ ಅವರಾಗಿರಬಹುದು.. ಆದರೆ, ನನಗೆ ಅಕ್ಷರ ಕಲಿಸಿದ, ಬುದ್ಧಿ ಹೇಳಿದ, ವಿದ್ಯೆ ಕಲಿಸಿದ, ತಿದ್ದಿ ನಡೆಸಿದ, ಓದಿನ ಹವ್ಯಾಸ ಬೆಳೆಸಿದ, ಜೀವನದ ಪಾಠ ಕಲಿಸಿದ, ಮಾರ್ಗದರ್ಶನ ಮಾಡಿದ, ಪ್ರೋತ್ಸಾಹಿಸುತ್ತಿರುವ, ಆಲೋಚನಾ ಶಕ್ತಿ ವೃದ್ಧಿಸುವಂತೆ ಮಗದೊಂದು ನಿಟ್ಟಿನಲ್ಲಿ ಯೋಚಿಸುವಂತೆ ಚರ್ಚೆ ಮಾಡುವ ಭೂತ-ವರ್ತಮಾನದ ಎಲ್ಲಾ ಶಿಕ್ಷಕರಿಗೂ ತುಂಬು ಹೃದಯದ ಧನ್ಯವಾದಗಳು. ಎಲ್ಲರಿಗೂ ಶಿಕ್ಷಕರ ದಿನದ ಹಾರ್ದಿಕ ಶುಭಾಶಯಗಳು.

~ವಿಭಾ ವಿಶ್ವನಾಥ್

ಸೋಮವಾರ, ಸೆಪ್ಟೆಂಬರ್ 2, 2019

ಮೊಬೈಲೇ ಮಕ್ಕಳ ಲೋಕವಮ್ಮಾ..

ಇವತ್ತು ಟೆಕ್ನಾಲಜಿ ಬದಲಾಗುತ್ತಿದೆ ಜೊತೆಜೊತೆಗೆ ಮಕ್ಕಳ ಮೆದುಳಿನ ಬೆಳವಣಿಗೆಯ ವೇಗ, ಗ್ರಹಣ ಶಕ್ತಿ, ಅರ್ಥೈಸಿಕೊಳ್ಳುವಿಕೆ ಸಹಾ ಅದೇ ರೀತಿ ತ್ವರಿತಗತಿಗಲ್ಲಿ ಬದಲಾಗುತ್ತಿದೆ. ಮಕ್ಕಳು ತಂತ್ರಜ್ಞಾನವನ್ನು ವೇಗವಾಗಿ ಅರ್ಥೈಸಿಕೊಂಡು ಮುಂದುವರಿಯುತ್ತಾರೆ ಎನ್ನುವುದೇನೋ ಸರಿ ಆದರೆ ಅದರ ವಿಕಿರಣಗಳು ಮಕ್ಕಳ ಮೇಲೆ ಬೀರುವ ಪರಿಣಾಮಗಳು ಮುಂದಿನ ದಿನಗಳಲ್ಲಿ ಅದಕ್ಕಿಂತಾ ಹೆಚ್ಚಿನ ಪರಿಣಾಮ ಬೀರುತ್ತವೆ ಎನ್ನುವುದೂ ಸಹಾ ಅಷ್ಟೇ ಸತ್ಯವಲ್ಲವೇ..?

ಇವತ್ತು ಬಸ್ಸಿನಲ್ಲಿ ಪ್ರಯಾಣಿಸುತ್ತಿರುವಾಗ ಬಸ್ ರಶ್ ಇದ್ದುದರಿಂದ ಸಹಪ್ರಯಾಣಿಕರೊಬ್ಬರ ಮಗುವನ್ನು ನನ್ನ ಪಕ್ಕದಲ್ಲಿದ್ದವರು ಕರೆದು ಕೂರಿಸಿಕೊಂಡರು. ಮಗು ತನ್ನ ಅಪ್ಪನನ್ನು, ಅಮ್ಮನನ್ನು ಗಣನೆಗೇ ತೆಗೆದುಕೊಳ್ಳದೆ ಅವರ ಮೊಬೈಲ್ ಕೇಳಿ ಪಡೆದುಕೊಂಡಿತು. ವಯಸ್ಸು 3 ರಿಂದ 4 ವರ್ಷ ಇರಬಹುದೇನೋ ಅಷ್ಟೇ.. ಮೊಬೈಲ್ ಪಡೆದುಕೊಂಡು ಅದರಲ್ಲಿ ಯೂಟ್ಯೂಬ್ ವೀಡಿಯೋ ನೋಡುವುದರಲ್ಲೇ ಅದು ಮಗ್ನವಾಗಿ ಹೋಯಿತು. ಸುತ್ತಲಿನ ಜನರ, ಜಗತ್ತಿನ, ತನ್ನವರ ಯಾರ ಪರಿವೆಯೂ ಅದಕ್ಕಿಲ್ಲ. ಮೊಬೈಲ್ ಮಾತ್ರ ನನ್ನ ಲೋಕವಯ್ಯಾ ಎಂಬಂತಿತ್ತು ಅದರ ನಡವಳಿಕೆ. ಮೊಬೈಲ್ ಇರುವವರೆಗೂ ಯಾರ ಹತ್ತಿರವೂ ಮಾತಿಲ್ಲ ಕತೆಯಿಲ್ಲ. ಪೂರ್ತಿ ಗಮನ ಮೊಬೈಲ್ ಮೇಲೆಯೇ.. "ಸ್ಕೂಲ್ ಗೆ ಹೋಗ್ತಾ ಇದ್ದೀಯಾ ಪುಟ್ಟಾ?" ಅಂದರೂ ಮಾತಲ್ಲ. "ನಿನ್ನ ಹೆಸರೇನು?" ಅಂದ್ರೂ ಮಾತೇ ಬರದೇ ಇರೋ ಮಗುವಿನ ತರಹ ಕೂತಿತ್ತು. ಕಾಲ್ ಬಂತೂ ಅಂತಾ ಅವರಪ್ಪನಿಗೆ ಮೊಬೈಲ್ ಕೊಟ್ಟು ಮತ್ತೆ ಮೊಬೈಲ್ ಕೊಡು ಅಂತಾ ಪೀಡಿಸುತ್ತಾ ಇತ್ತು. "ಮೊಬೈಲ್ ನ ಮತ್ತೆ ಇಸ್ಕೊಂಡ್ರೆ ನಾನು ಕಿತ್ತ್ಕೊಂಡು ಹೋಗ್ತೀನಿ" ಅಂದೆ ಅಷ್ಟೇ.. "ನಮ್ಮಪ್ಪನ ಮೊಬೈಲ್ ಅದು, ನೀನ್ಯಾಕೆ ಕಿತ್ತುಕೊತೀಯಾ? ನಾನು ಕೊಡಲ್ಲ" ಅಂತಾ ಒಂದರ ಹಿಂದೆ ಒಂದು ಪಟಾಕಿ ಸಿಡಿದಂತೆ ಮಾತು ಹೊರಬರತೊಡಗಿದವು. ಮೊಬೈಲ್ ಅಂತಾ ಬಂದ ತಕ್ಷಣ ಮಕ್ಕಳೇ ಅಷ್ಟು ಹುಷಾರಾಗಿಬಿಡುತ್ತವೇ ಅಂದರೆ ಅವರೆಷ್ಟು ಜಾಗೃತರಾಗಿಬಿಡುತ್ತಾರೆ. ಬಹುಶಃ ಈ ಜಾಗೃತ ಸ್ಥಿತಿಯನ್ನು ಮನೆಯವರ ಅಥವಾ ಅಸುರಕ್ಷತೆಯ ಭಾವದಲ್ಲೂ ಅನುಭವಿಸುವುದು ಅಸಾಧ್ಯವೇನೋ ಅನ್ನಿಸಿತು. ಇದು ಕೇವಲ ಒಂದು ದೃಷ್ಟಾಂತ ಅಷ್ಟೇ..

ಕೆಲ ದಿನಗಳ ಹಿಂದೆ ಸಂಬಂಧಿಕರ ಮಗುವಿನ ನಾಮಕರಣಕ್ಕೆ ಹೋಗಿದ್ದೆವು. ತಂದೆ-ತಾಯಿ ಇಬ್ಬರೂ ಉದ್ಯೋಗಿಗಳೇ. ಇನ್ನೂ ಒಂದು ವರ್ಷದ ಮಗು ಅಳದಂತೆ ಸುಮ್ಮನಿರಲು ಅನುಸರಿಸುತ್ತಿದ್ದ ತಂತ್ರ ಇಷ್ಟೇ. ಮಗುವಿನ ಮುಂದೆ ವಿಡಿಯೋ ಪ್ಲೇ ಆಗುತ್ತಿದ್ದ ಮೊಬೈಲ್. ಆ ಮೊಬೈಲ್ ವೀಡಿಯೋ ಕೊಂಚ ಏರುಪೇರಾದರೂ ಅಳು ತಾರಕಕ್ಕೇರುತ್ತಿತ್ತು. ಮೊಬೈಲ್ ಪ್ರಪಂಚಕ್ಕೆ ಹೀಗೇ ಒಬ್ಬೊಬ್ಬರೇ ಸದಸ್ಯರು ಸೇರ್ಪಡೆಯಾಗುತ್ತಲೇ ಇದೆ.

ಇದೆಲ್ಲದರ ಪರಿಣಾಮ ಹೇಗಿರುತ್ತದೆ ಎಂದರೆ, ವಾಸ್ತವದ ಅರಿವೇ ಅವರುಗಳಿಗೆ ಇರುವುದಿಲ್ಲ. ಎಲ್ಲರೂ ಅನಿಮೇಟೆಡ್ ಲೋಕದ ಸಂಚಾರಿಗಳಾಗಿಬಿಟ್ಟಿರುತ್ತಾರೆ.
ಅತ್ಯಂತ ಟ್ರಾಫಿಕ್ ಇರುವ ರೋಡ್ ನಲ್ಲಿ ಕಾಯುವ ತಾಳ್ಮೆ ಇಲ್ಲದ ಮಗು ಹೇಳುತ್ತದೆ. "ಆ ವೆಹಿಕಲ್ ಮೇಲಿಂದ ಫ್ಲೈ ಮಾಡಿಕೊಂಡು ಹೋಗೋಣ. ಸುಮ್ನೆ ಯಾಕೆ ಕಾಯಬೇಕು..? ಆ ವೀಡಿಯೋ ಗೇಮ್ ಅಲ್ಲಿ ಹಾಗೇ ತಾನೆ ಮಾಡೋದು? ನೆಕ್ಸ್ಟ್ ವೆಹಿಕಲ್ ಗೆ ಗುದ್ದಿದ್ರೆ ಆಗ ಅದು ಅಲ್ಲಿಂದ ಮಾಯ ಆಗುತ್ತೆ. ಆಗ ನಾವು ಬೇಗ ಹೋಗಬಹುದು." ಮಗನ ಆಲೋಚನಾ ರೀತಿಗೆ ಅಪ್ಪ ಸುಸ್ತೋ ಸುಸ್ತು.

ಕೆಲ ದಿನಗಳ ಹಿಂದೆ ಗನ್ನಿಕಡದ ಹೊಳೆಯ ಹತ್ತಿರ ಹೋಗಿದ್ದಾಗ ಮತ್ತೊಂದು ಮಾತುಕತೆ ಕಿವಿಯ ಮೇಲೆ ಬಿತ್ತು. ಹೊಳೆಯ ರಭಸದ ಆ ನೀರನ್ನು ನೋಡಿ ಮಗುವೊಂದು ಅಮ್ಮನನ್ನು ಕೇಳುತ್ತಿತ್ತು.. "ಮಮ್ಮಾ, ಈಸ್ ದಿಸ್ ರಿಯಲ್ ವಾಟರ್..?" ನಿಸರ್ಗದ ಕೌತುಕಗಳೂ ಕೂಡಾ ಅವರಿಗೆ ವಿಸ್ಮಯ. ಹೊಳೆಯಲ್ಲಿ ತೇಲಿ ಹೋಗುತ್ತಿದ್ದ ಕಟ್ಟಿಗೆ ತುಂಡು ಕೂಡಾ ಅಲಿಗೇಟರ್ ಅಂತೆ ಕಂಡಿತ್ತು. ಮೊಬೈಲ್ ಲೋಕದವರ ವಸ್ತುಸ್ಥಿತಿ ಹೀಗೆಯೇ ಅನ್ನಿಸಿಬಿಟ್ಟಿತ್ತು.

ಮುಂದೆ ಮುಂದೆ ಮೊಬೈಲ್ ಗಳಲ್ಲೇ ಸಂಪೂರ್ಣ ಮುಳುಗಿ ಹೋಗಿ ಮೊಬೈಲ್ ನನ್ನ ಪ್ರಪಂಚ ಎಂದರೂ ಆಶ್ಚರ್ಯಪಡಬೇಕಾದುದೇನಿಲ್ಲ.

~ವಿಭಾ ವಿಶ್ವನಾಥ್
(ಫೋಟೋ: ಇಂದು ಬಸ್ ನಲ್ಲಿ ಮೊಬೈಲ್ ನಲ್ಲಿ ವೀಡಿಯೋ ನೋಡುತ್ತಲೇ ಮುಳುಗಿ ಹೋಗಿದ್ದ ಪೋರನದ್ದು)