ಬುಧವಾರ, ಜೂನ್ 26, 2019

ಸ್ವಪ್ನಪ್ರಿಯ

ಯಮುನೆಯ ತೀರದಲ್ಲಿ ರಾಧೆ ಮಲಗಿ ಬಡಬಡಿಸುತ್ತಿದ್ದಾಳೆ.. "ಅಷ್ಟಕ್ಕೂ, ನಿನ್ನ ಒಲವಿಗೆ ನಾನು ಮನಸೋತದ್ದು ಏಕೆ? ಎಂಬ ಪ್ರಶ್ನೆಗೆ ಇವತ್ತಿಗೂ ನನ್ನ ಬಳಿ ಉತ್ತರ ದೊರಕದು. ಮನೆಯ, ಮನಸಿಜನ ಬಂಧನವನ್ನೆಲ್ಲಾ ತೊರೆದು ಧಿಕ್ಕರಿಸಿ ನಿನ್ನ ಮಾಯೆಯ ಪರಿಧಿಗೆ ಬರುತ್ತಿದ್ದದ್ದಾದರೂ ಯಾಕೆ? ಇವತ್ತಿಗೂ ಇವೆಲ್ಲದರ ಕುರಿತು ನನಗೇ ಉತ್ತರ ದೊರಕದ ಪ್ರಶ್ನೆಗಳಿವು.."

"ಹೌದು, ನಿನ್ನನ್ನು ದ್ವೇಷಿಸಲಾಗದಷ್ಟು, ತಿರಸ್ಕರಿಸಲಾಗದಷ್ಟು ನೀನು ಎಂದಾದರೂ ಬಿಟ್ಟು ಹೊರಡಬಹುದೆಂಬ ಕಲ್ಪನೆಯೇ ಮಾಡಿಕೊಳ್ಳಲಾಗದಷ್ಟು ನಿನ್ನ ಪ್ರೀತಿಯ ಮಾಯೆಯೊಳಗೆ ಸಿಲುಕಿಬಿಟ್ಟಿದ್ದೆ. ಆದರೆ ಇದೆಲ್ಲದಕ್ಕೂ ಮೊದಲು ನಿನ್ನೆಡೆಗೆ ಅಗಾಧ ತಿರಸ್ಕಾರವಿದ್ದದ್ದು ಸುಳ್ಳಲ್ಲ. ನಿನ್ನ ಮಾಯೆಗಳೆಲ್ಲವನ್ನೂ ಕಂಡು ನಕ್ಕು ಸುಮ್ಮನಾಗಿಬಿಡುತಿದ್ದೆ, ನೀನು ಮಾಡಿದ್ದು ಅಂತಹಾ ಮಹಾನ್ ಕೆಲಸವೇನೂ ಅಲ್ಲ ಎಂಬುದಾಗಿತ್ತು ನನ್ನ ಭಾವನೆ. ಆದರೆ ತಿರಸ್ಕಾರ, ದ್ವೇಷದ ಮೂಲೆಯಲ್ಲೆಲ್ಲೋ ಮಧುರ ಕಂಪನ ಮೂಡುತ್ತಿದ್ದದ್ದು ನನ್ನರವಿಗೆ ಬಂದರೂ ಅದನ್ನು ನಾನೇ ಬಚ್ಚಿಟ್ಟುಬಿಡುತ್ತಿದ್ದೆ. ಈ ಪರಿಯ ದ್ವೇಷ ಹೊಂದಿದ್ದ ಈ ರಾಧೆ ಮುರಳಿಯ ಮಾಯೆಗೆ ಸಿಕ್ಕಿದ್ದು ಆ ಒಂದು ಸಂಧರ್ಭದಲ್ಲಿಯೇ.."

"ಇದ್ದದ್ದು, ಬೆಳೆದದ್ದು ಒಂದೇ ಪರಿಸರದಲ್ಲಿಯಾದರೂ ನೀನು ಕಂಡರೂ ಕಾಣದಂತೆ ತಲೆತಗ್ಗಿಸಿ ಹೊರಟುಬಿಡುತ್ತಿದ್ದೆ. ಆಗಂತುಕನ ಕುರಿತಾಗಿ ಮತ್ತಾವ ಭಾವನೆಗಳೂ ಬೆಳೆಯಲು ಬಿಟ್ಟಿರಲಿಲ್ಲ. ಅಷ್ಟರಲ್ಲಾಗಲೇ ಪೂತನಿ, ಅಘಾಸುರ, ಶಕಟಾಸುರ ಮುಂತಾದ ಭೀಕರ ರಾಕ್ಷಸರ ಹತ್ಯೆಯನ್ನು ಮಾಡಿಬಿಟ್ಟು ನೀನು ಅದಾವುದನ್ನೂ ಮಾಡಿಯೇ ಇಲ್ಲವೇನೋ ಎಂಬಂತೆ ನಿರುಮ್ಮಳವಾಗಿದ್ದೆ.
ನಿನ್ನ ಬೆಣ್ಣೆ, ಹಾಲು, ಮೊಸರಿನ ಪ್ರೀತಿಯ ಕಥೆಗಳನ್ನು ಕೇಳಿದ್ದೆ. ಸುತ್ತಮುತ್ತಲಿನ ಮನೆಗಳಿಗೆ ನೀನು ನಿನ್ನ ಗೆಳೆಯರ ಪಟಾಲಂನೊಂದಿಗೆ ದಾಳಿ ಮಾಡಿದ್ದರೂ ನನ್ನ ಮನೆಗೆ ಬರುವ ಕೃಪೆ ತೋರಿರಲಿಲ್ಲ. ನೀಲವರ್ಣದ ನಿನ್ನ ರೂಪು ನೋಡಿದಷ್ಟೂ ನೋಡುವಂತೆ ಮಾಡುತ್ತಿತ್ತಂತೆ.. ಹಾಗೆಂದು ಉಳಿದವರು ಹೇಳಿದ್ದನ್ನು ಕೇಳಿದ್ದೆನಷ್ಟೇ, ಯಾಕೆಂದರೆ ಅದುವರೆಗೂ ನಾನು ನಿನ್ನನ್ನು ಕಣ್ಣೆತ್ತಿಯೂ ನೋಡಿರಲಿಲ್ಲ. ಅಕಸ್ಮಾತ್, ಮೊದಲೇ ನೋಡಿದ್ದರೆ ನನ್ನ ರಾಗದ್ವೇಷಗಳೆಲ್ಲಾ ಕರಗಿ ನೀರಾಗುತ್ತಿದ್ದವೋ ಏನೋ.. ಆದರೆ, ಎಲ್ಲದಕ್ಕೂ ಸಮಯ ಸಹಕಾರಿಯಾಗಿರಬೇಕಂತಲ್ಲಾ.. ಆ ಸಮಯ ನನ್ನ ಪಾಲಿಗೆ ಇನ್ನೂ ಯಾಕೋ ಕೃಪೆ ತೋರಿರಲಿಲ್ಲ.

ಆವತ್ತು, ನನ್ನ ಬಾಳಿನಲ್ಲಿ ನೆನಪಿಡಬೇಕಾದ ಒಂದು ದಿನ. ಮೊಗ್ಗು ಬಿರಿದು ಹೂವಾಗುವ ಸುಸಮಯವಂತೆ ಅದು ಆದರೆ ನನಗೆ ಹಾಗನ್ನಿಸಲೇ ಇಲ್ಲ. ಏಕೆಂದರೆ, ಬಿಟ್ಟೂ ಬಿಡದ್ದ್ ಕಾಡುವ ಹೊಟ್ಟೆನೋವು ನಾನು ಪುಷ್ಪವತಿಯಾದ ಸಂದರ್ಭದಲ್ಲಿ ಕಾಡುತ್ತಿತ್ತು. ಅದೇನೇನೋ ಶಾಸ್ತ್ರಗಳು ನಡೆಯುತ್ತಿದ್ದರೂ ಆ ಪರಿವೆಯೇ ನನಗಿರಲಿಲ್ಲ. ಆ ಸಂದರ್ಭದಲ್ಲಿ ನಿನ್ನಮ್ಮ ಯಶೋದೆ ಕೂಡಾ ಆ ಆರತಿಶಾಸ್ತ್ರಕ್ಕೆ ಬಂದಿದ್ದರು.ಪುರುಷರಿಗೆ ಆ ಸಂದರ್ಭದಲ್ಲಿ ನಿರ್ಬಂಧ ಎಂದಿದ್ದರೂ ನಿನಗೇಕೋ ಆ ನಿಯಮ ಅನ್ವಯಿಸಿರಲಿಲ್ಲ. ನಿನ್ನಮ್ಮನನ್ನು ಕಂಡು ಆ ರತ್ನಮಾಲೆಯನ್ನು ಕೊಡಲೆಂದು ಬಂದವನು ನನ್ನ ಕಣ್ಣಿಗೆ ಬಿದ್ದಿದ್ದೆ. ನಿನ್ನ ನೋಡಿದ ಆ ಘಳಿಗೆಯಲ್ಲಿ ಕಾಲ ಹೀಗೇ ನಿಲ್ಲಬಾರದೇ ಎಂದೆನಿಸುತ್ತಿತ್ತು, ಅಷ್ಟೊಂದು ಪೀಡಿಸುತ್ತಿದ್ದ ಹೊಟ್ಟೆನೋವು ಕೂಡಾ ಹೊರಟುಹೋಗಿತ್ತು. ಅದು ಕನಸೋ, ನನಸೋ ತಿಳಿಯಲಿಲ್ಲ. ದಿನಾ ರಾತ್ರಿ ಕನಸಲ್ಲಿ ಬಂದು ಕಾಡುವ ರೂಪ ಅಂದು ಕಣ್ಮುಂದೆ ಬಂದಿತ್ತು. ಪಕ್ಕದಲ್ಲಿದ್ದ ಗೆಳತಿಯನ್ನು ಕೇಳಿದೆ ಯಾರವನು? ಎಂದು.."ಅವನೇ ಮುರಳಿ" ಎಂದಳವಳು. ಮನದಲ್ಲಿ ದ್ವಂದ್ವ ಭಾವನೆಗಳ ತರಂಗ. ನಾನು ದ್ವೇಷಿಸುತ್ತಿದ್ದ ಮುರಳಿಗೂ, ನಾನು ಕಂಡಿದ್ದ ನನ್ನ ಸ್ವಪ್ನದ ಮುರಳಿಗೂ ತಾಳೆ ಹಾಕುತ್ತಾ ಕೂತಿದ್ದೆ. ವಿಧಿ ಹೀಗೂ ಇರಬಹುದೇ? ಅಂತೂ ಶಾಸ್ತ್ರಗಳೆಲ್ಲವೂ ಮುಗಿದಿದ್ದವು. ಮುಗಿದದ್ದು ಗೊತ್ತೇ ಆಗಿರಲಿಲ್ಲ. ಆ ನಂತರ ಗೆಳತಿಯೆಂದಳು "ಈ ಸಮಯದಲ್ಲಿ ಕಂಡ ಮೊದಲ ಹುಡುಗನೊಟ್ಟಿಗೇ ನಿನ್ನ ವಿವಾಹವಾಗುತ್ತದಂತೆ". ಈ ಮಾತು ಕೇಳಿಯೇ ಮನದಲ್ಲಿ ಪುಳಕವೆದ್ದಿತ್ತು. ಇಂತಹವುಗಳನ್ನೆಲ್ಲಾ ಕೇಳಿ ಧಿಕ್ಕರಿಸುತ್ತಿದ್ದ ನಾನು ಇದು ಈಡೇರಲೆಂದು ಹರಕೆ ಹೊತ್ತದ್ದೆಷ್ಟೋ? ಆದರೆ ಹರಕೆ ಫಲಿಸದಂತೆ ವಿಧಿ ಆಯನನ ಹೆಸರನ್ನು ನನ್ನ ಮಾಂಗಲ್ಯಕ್ಕೆ ಪೋಣಿಸಿದ್ದರೆ, ಯಾವ ಜಗನ್ನಿಯಾಮಕನಿಗೆ ತಿದ್ದಿ ಬರೆಯುವ ಭಾಗ್ಯವಿದೆ..?

ಇದಾದ ಕೆಲವು ದಿನ ನಾನು ಮನೆಯಿಂದ ಹೊರಗೆ ಕಾಲೇ ಇಡಲಿಲ್ಲ. ಆದರೆ, ಆವತ್ತು ಬಿಟ್ಟೂ ಬಿಡದಂತೆ ಮಳೆ ಸುರಿಯುತ್ತಿತ್ತು. ನೀನು ಹಟ ಮಾಡಿ ದೇವರಾಜ ಇಂದ್ರನಿಗೆ ಪೂಜೆ ಮಾಡದಂತೆ ತಡೆದಿದ್ದರ ಫಲ ವರುಣನ ಮೂಲಕ ಇಲ್ಲಿ ಎಲ್ಲರ ಮೇಲೂ ಪ್ರತಿಫಲನವಾಗುತ್ತಿತ್ತು. ಆಗಲೇ ಅಲ್ಲವೇ ನಿನ್ನ ವಿಶ್ವರೂಪದರ್ಶನ ಆದದ್ದು. ಗೋವರ್ಧನಗಿರಿಯನ್ನೆತ್ತಿ ಎಲ್ಲರಿಗೂ ಆಶ್ರಯವನ್ನಿತ್ತಿದ್ದೆ. ಅದೇ ಸಮಯದಲ್ಲಿ ಎಲ್ಲರ ಹತ್ತಿರಕ್ಕೂ ಬಂದು ಕ್ಷೇಮ ಸಮಾಚಾರವನ್ನೂ ವಿಚಾರಿಸುತ್ತಿದ್ದೆ. ಅದು ಹೇಗೆಂಬುದು ಅರ್ಥವಾಗಲೇ ಇಲ್ಲ. ಆದರೆ ನಿನ್ನ ವಿನಯ, ಹಿರಿಯರೆಡೆಗಿನ ಗೌರವ,ಕಾಳಜಿ ಎಲ್ಲವನ್ನೂ ನಾನು ಹತ್ತಿರದಿಂದ ಕಂಡಿದ್ದೆ. ಗೋಪಿಕೆಯರೊಡನೆ ವಿಶೇಷ ಸಲುಗೆಯೇನೂ ಇರಲಿಲ್ಲ. ಸ್ತ್ರೀಲೋಲ ಎಂಬ ಪದ ನಿನಗೆ ಇನಿತೂ ತಾಳೆಯಾಗುತ್ತಲೇ ಇರಲಿಲ್ಲ. ಆ 7 ದಿನಗಳಲ್ಲಿ ನಾನು ದ್ವೇಷಿಸುತ್ತಿದ್ದ ಮುರುಳಿಯ ರೂಪ ಮರೆಯಾಗಿ ನನಗೆ ಪ್ರೇಮಮಯವಾದ ಸ್ವಪ್ನಸುಂದರ ಮುರುಳಿ ನೆಲೆನಿಂತಿದ್ದ. ಎಲ್ಲೆಲ್ಲಿ ನೋಡಿದರೂ ಅಲ್ಲೆಲ್ಲಾ ನಿನ್ನ ರೂಪವೇ ಕಾಣುತ್ತಿತ್ತು. ಅದಕ್ಕೆ ಅಲ್ಲವೇ ಆಯನನೊಂದಿಗೆ ನಾನು ವಿವಾಹಕ್ಕೆ ಒಪ್ಪಿಗೆ ಸೂಚಿಸಿದ್ದು. ದಿಬ್ಬಣದಲ್ಲಿ ಬಂದದ್ದು, ವಿವಾಹವಾಗುತ್ತಿದ್ದದ್ದೂ ಎಲ್ಲವೂ ನೀನೇ ಎಂದೇ ಭಾವಿಸಿದ್ದೆ. ಪತಿಯ ಹೆಸರೇಳಲು ಇಟ್ಟ ಒಡಪಿನ ಶಾಸ್ತ್ರದಲ್ಲಿಯೂ ನಿನ್ನ ಕುರಿತೇ ವರ್ಣಿಸಿದ್ದೆ. ಎಲ್ಲರೂ ಆಯನನನ್ನು ಅದೃಷ್ಟವಂತ ಎಂದು ಹೊಗಳಿ ನನ್ನೊಡನೆ ಕೂರಿಸಿ ಆರತಿ ಮಾಡುವಾಗ ಕೈ ಹಿಡಿದ ಆಯನನ ಸ್ಪರ್ಶ ಅಪರಿಚಿತವೆನಿಸಿತ್ತು. ಸುಂದರ ಸ್ವಪ್ನ ದುಃಸ್ವಪ್ನವಾಗಿತ್ತು, ಸುಮಧುರ ನಾದದಲ್ಲೊಂದು ಅಪಶೃತಿ ಕೇಳಿಸಿತ್ತು. ಮುರುಳಿಯನ್ನು ಹುಡುಕಿದಷ್ಟೂ ಆತ ದೂರದಲ್ಲೇ ಕಾಣಿಸಹತ್ತಿದ್ದ. 

ಸ್ವಪ್ನ ಕಳೆದು ವಾಸ್ತವ ಮರಳಿತ್ತು. ವಾಸ್ತವದಲ್ಲಿ ಬದುಕ ಹೊರಟಷ್ಟೂ ಮುರಳಿಯ ಕೊಳಲ ನಾದ ಕೆಣಕುತ್ತಿತ್ತು. ಇದೆಲ್ಲದಕ್ಕೂ ಅಂತ್ಯ ಹಾಡಬೇಕೆಂದು ನಿಶ್ಚಯಿಸಿ ಅಲ್ಲಿಂದ ಹೊರಟು ದಿನವೂ ಅಲೆಯುತ್ತಿದ್ದೆ. ಕೊಳಲ ನಾದವನ್ನೇ ಅರಸಿ ಮುರಳಿಯ ಜಾಡು ಹಿಡಿಯಲು ಎಲ್ಲೆಲ್ಲೂ ಅಲೆಯುತ್ತಿದ್ದೆ. ಇಲ್ಲೇ ಕಂಡ ಎಂದರೆ ಅದಾಗಲೇ ಮರುಭೂಮಿಯ ಮರೀಚಿಕೆಯಂತೆ ದೂರದಲ್ಲೆಲ್ಲೋ ಕಾಣುತ್ತಿದ್ದ. ಸಿಕ್ಕಿಯೇ ಬಿಟ್ಟ ಎನ್ನುವಷ್ಟರಲ್ಲೇ ಮರೆಯಾಗುತ್ತಿದ್ದ.

ಎಲ್ಲರೂ ನನ್ನನ್ನು ವಿಚಿತ್ರ ಎಂಬ ರೀತಿಯಲ್ಲೇ ನೋಡುತ್ತಿದ್ದರು. ತವರು ಮನೆಯಲ್ಲೂ, ಗಂಡನ ಮನೆಯಲ್ಲೂ ನಾನು ತಿರಸ್ಕೃತಳಾದಷ್ಟೂ ನನಗೆ ಕೊಳಲ ನಾದ ನಿಲ್ಲಿಸು ಎಂದು ಮುರಳಿಗೆ ಹೇಳುವ ಹಪಾಹಪಿ ಹೆಚ್ಚಾಗುತ್ತಿತ್ತು. "ಮುರಳಿಯ ಕಂಡಿರೇನೇ?" ಎಂದು ಗೋಪಿಕೆಯರನ್ನು ಕೇಳಿದರೆ "ಒಂದು ಕ್ಷಣವೂ ನಿನಗೆ ಅವನನ್ನು ಬಿಟ್ಟಿರಲಾಗದೇ?" ಎಂದು ಛೇಡಿಸುತ್ತಾ "ಸದಾ ನಿನ್ನೊಂದಿಗೇ ಇರುವವನು ಎಲ್ಲಿರುತ್ತಾನೆ ಎಂದು ನಮಗೇನು ಗೊತ್ತು?" ಎಂದು ಈರ್ಷ್ಯೆಯಿಂದ ಹೇಳುತ್ತಿದ್ದರು. ಆದರೆ, ನನಗೆಂದೂ ನನ್ನ ಮುರುಳಿ ಸಿಗಲೇ ಇಲ್ಲ, ಅವನ ನಾದ ನಿಲ್ಲಲೇ ಇಲ್ಲ.

ಆದರೆ, ಅವನ ನಾದ ನಿಲ್ಲುವ ಸಮಯ ಬಂದಿತ್ತೇನೋ.. ಅಕ್ರೂರ ಬಂದಿರುವನಂತೆ ಮಧುರೆಯಿಂದ. ಅದೂ ಮುರುಳಿಯನ್ನು.  ಕಾಣಲು ಎಂಬ ಮಾತು ಕಿವಿಗೆ ಬಿತ್ತು. ಇವತ್ತಾದರೂ ಮುರುಳಿ ಅವನ ಮನೆಯ ಮುಂಭಾಗದಲ್ಲಿ ಸಿಗಬಹುದೇನೋ ಎಂಬ ಆಸೆಯಿಂದ ಓಡೋಡಿ ಬಂದೆ. ಆದರೆ, ಎಲ್ಲರೂ ಸಾಲಾಗಿ ಅವನನ್ನು ಬೀಳ್ಕೊಡಲು ನಿಂತಿದ್ದರು. ಎಲ್ಲಿಗೆ ಹೊರಟ? ಯಾಕೆ ಹೊರಟ? ಎಂದು ನನಗೆ ತಿಳಿದಿರಲಿಲ್ಲ. ಅದರ ಪೂರ್ವಾಪರವೇ  ನನಗೆ ಗೊತ್ತಿರಲಿಲ್ಲ. ಮುರಳಿ ಅಲ್ಲಿ ನೆರೆದಿದ್ದವರ ಎಲ್ಲರ ಬಳಿಗೂ ಬಂದು ಏನನ್ನೋ ಕೇಳುತ್ತಿದ್ದ. ಒಬ್ಬರಿಗೆ ಕೇಳಿದ್ದು, ಹೇಳಿದ್ದು ಮತ್ತೊಬ್ಬರಿಗೆ ಗೊತ್ತೇ ಆಗುತ್ತಿರಲಿಲ್ಲ. ಹಾಗೆಯೇ, ನನ್ನ ಹತ್ತಿರಕ್ಕೂ ಬಂದ, "ಏನಾಗಬೇಕು?" ಎಂದ. "ನಿನ್ನ ನಾದವನ್ನು ನಿಲ್ಲಿಸಿ ನನ್ನಿಂದ ದೂರಾಗಬೇಕು"  ಎಂದೆ. ಆತ ಮರುಮಾತನಾಡದೆ ತನ್ನ ಕೊಳಲನ್ನು ನನ್ನ ಕೈಗಿತ್ತ. ಎಲ್ಲರಿಗೂ ದಿಗ್ಬ್ರಮೆಯಾಗಿತ್ತು. ರಾಧೆ ಮುರಳಿಯ ಮುಂದಿಟ್ಟ ಕೋರಿಕೆ ಎಲ್ಲರಿಗೂ ಕೇಳಿತ್ತು. ನಿಶ್ಶಬ್ಧದಲ್ಲಿ "ಹೋಗುತ್ತೇನೆ ರಾಧೆ" ಎಂದವನ ಧ್ವನಿ ಕೇಳಿ ನನ್ನೆದೆ ಒಡೆದು ಛಿದ್ರ-ಛಿದ್ರವಾಗಿತ್ತು. ಹಿಂದೆ ತಿರುಗಿಯೂ ನೋಡದಂತೆ ಮುನ್ನಡೆದಿದ್ದ, ಮುಂದೆಂದೂ ಅವನು ಬರಲೇ ಇಲ್ಲ. 

ಎಲ್ಲರ ಕಣ್ಣಲ್ಲೂ ನಾನು ಅಪರಾಧಿನಿಯಂತೆ ಭಾಸವಾದೆ. ಅಂತರಂಗದಲ್ಲಿ ಕೋಲಾಹಲವೇಳುತ್ತಿದ್ದರೂ ಬಾಹ್ಯದಲ್ಲಿ ನಿರ್ಲಿಪ್ತೆ ನಾನು. ನನ್ನ ಕೋರಿಕೆಯನ್ನು ಅವನು ಈಡೇರಿಸಿದ್ದ ಅದೂ ಯಾವುಧೇ ಮರುಮಾತಿಲ್ಲದೇ.. ಹಾಗಾದರೆ ಅವನಿಗೆ ನಾನು ಯಾರು? ಅವನಿಗೆ ನನ್ನ ಮೇಲಿರುವ ಭಾವನೆಗಳೇನು? ನಿಜಕ್ಕೂ ಅವನು ನನ್ನನ್ನು ಪ್ರೀತಿಸುತ್ತಿದ್ದನೇ? ಆ ಮಾತನ್ನು ಅವನು ಒಮ್ಮೆ ಹೇಳಿದ್ದರೆ ಸಾಕಾಗಿತ್ತು ಆ ಭಾವನೆಯಲ್ಲೇ ಇಡೀ ಬದುಕನ್ನು ಸವೆಸಿಬಿಡುತ್ತಿದ್ದೆ ಆದರೆ ಆತ ಏನೂ ಹೇಳದೆ ಮಾತು ಕೊಟ್ಟು ಹೊರಟ. ಇದಕ್ಕೇನರ್ಥ? ಅವನೇನೋ ಹೊರಟುಹೋದ. ಆದರೆ, ಅವತ್ತಿನಿಂದ ಇವತ್ತಿನವರೆಗೂ ನಾನು ಕೊಳಲ ನಾದಕ್ಕೆ ಹಾತೊರೆಯುತ್ತಿದ್ದೇನೆ. ಮುಕ್ತಿಯಿಲ್ಲದೆ ಆತ್ಮದಂತೆ ಅಂಡಲೆಯುತ್ತಿದ್ದರೂ ನಾನು ಸರ್ವವ್ಯಾಪಿಯ ಕೃಪಾದೃಷ್ಟಿಗೆ ಪಾತ್ರವಾಗಲೇ ಇಲ್ಲ. ಅಲೆದೆ, ಅಲೆದೆ ಹುಚ್ಚಿಯಂತೆ ಅಲೆದೆ. ಆಗ ರಾಧಾ-ಕೃಷ್ಣರ ಜೋಡಿ ನೋಡುತ್ತಿದ್ದವರು ಈಗ ಒಬ್ಬಂಟಿ ಹುಚ್ಚಿಯನ್ನು ಕನಿಕರದಿಂದ ನೋಡುತ್ತಿದ್ದರು. ಆಯನನ ಪ್ರೀತಿ  ಕಂಡರೂ ಕಾಣದವಳಂತೆ ಇದ್ದುಬಿಟ್ಟಿದ್ದೆ. ಇನ್ನೊಬ್ಬಳನ್ನು ಮದುವೆಯಾಗಿ ಆದರೂ ಅವನು ಸುಖವಾಗಿರಲೆಂಬ ನನ್ನಾಸೆ ನೆರವೇರಲೇ ಇಲ್ಲ. ನನ್ನನ್ನು ಸರಿಪಡಿಸಲೆತ್ನಿಸಿ ಯತ್ನಿಸಿ ಆಯನ ಸೋತು ಹೋಗಿದ್ದ, ನನ್ನಷ್ಟಕ್ಕೆ ನನ್ನನ್ನು ಬಿಟ್ಟುಬಿಟ್ಟಿದ್ದ.

ಇವತ್ತು,ಯಾಕೋ ಮುರಳಿಯ ಕೊಳಲನ್ನು ನುಡಿಸುವ ಆಸೆಯಾಯಿತು.ಅಂದು ಆತ ಕೊಟ್ಟಿದ್ದ ಕೊಳಲು ನನ್ನ ಮನೆಯ ದೇವರಮನೆಯಲ್ಲಿದ್ದ ಏಕೈಕ ವಸ್ತುವಾಗಿತ್ತು. ಅದನ್ನೆತ್ತಿಕೊಂಡು ನಡೆದು ಯಮುನೆಯ ತೀರಕ್ಕೆ ಬಂದೆ. ಮರಳಿನಲ್ಲಿ ನಿನ್ನ ಹೆಸರು ಬರೆದೆ. ಬಂದ ಗಾಳಿ ಆ ಹೆಸರನ್ನು ಅಳಿಸಿ, ನಿನ್ನ ರೂಪವನ್ನು ಮೂಡಿಸಿತು. ಈಗ ನೋಡಿದರೆ ನಾನು ನಿನ್ನ ತೊಡೆಯ ಮೇಲೆ ಮಲಗಿದ್ದೇನೆ. ಮುರಳಿ, ನನಗೊಮ್ಮೆ ಮುಕ್ತಿ ನೀಡಿಬಿಡು. ಕಾಮವಿಲ್ಲದ ಪ್ರೇಮವನ್ನು ತೋರಿದ ಆಯನನಿಗೊಂದು ನೆಲೆ ಮಾಡಿ, ನನಗೆ ಮುಕ್ತಿ ನೀಡು. ಈ ಕೊಳಲು ನುಡಿಸು..
ಎಷ್ಟೋ ಹೊತ್ತು ಹೀಗೇ ಮಾತನಾಡಿದ ರಾಧೆ ಆಯನನ ತೊಡೆಯ ಮೇಲೆ ಮಲಗಿದ್ದಳು. ಬೂದಿ ಬಳಿದುಕೊಂಡು ರೂಪಾಂತರ ಮಾಡಿಕೊಂಡಿದ್ದ ಆಯನ,ಎಂದೂ ಕೊಳಲನ್ನೇ ನುಡಿಸದಿದ್ದ ಆಯನ ಕೊಳಲು ಹಿಡಿದಿದ್ದ, ಜೊತೆಗೆ ಮನಮೋಹಕ ರಾಗವನ್ನು ನುಡಿಸಿದ್ದ ಕೂಡಾ. ತೃಪ್ತಿಯ ಉತ್ತುಂಗದಲ್ಲಿದ್ದ ರಾಧೆಯ ಮುಖದಲ್ಲಿ ಶಾಂತತೆ ನೆಲೆಸಿತ್ತು. ಮುಗುಳ್ನಗೆ ಸ್ಥಿರವಾಗಿತ್ತು ಮತ್ತೆಂದೂ ಮಾಸದಂತೆ.. ಆಯನನಿಂದ ಹೊರಬಂದ ಮುರುಳಿ ವಿಶ್ವರೂಪಿಯಾದ ರಾಧೆ-ಆಯನರ ಆತ್ಮ ಮುರುಳಿಯಲ್ಲಿ ಲೀನವಾಗಿತ್ತು. ಅವರ ದೇಹದ ಮೇಲೆ ಪಾರಿಜಾತದ ವೃಷ್ಟಿಯಾಯಿತು.

~ವಿಭಾ ವಿಶ್ವನಾಥ್

ಮಂಗಳವಾರ, ಜೂನ್ 18, 2019

ವಿದಾಯದ ಹಾದಿಯಲ್ಲಿ

ವಿದಾಯದ ಹಾದಿಯಲ್ಲಿ
ದುಗುಡಗಳು ಸಹಜವೇ..

ಮನಸ್ಸಿನ ತೂಗುಯ್ಯಾಲೆಯಲಿ
ನಿರ್ಧಾರವು ಜೀಕಾಡಿದರೂ
ಕಡೆಗೆ ವಿದಾಯದ ಹಾದಿ
ನಿಶ್ಚಿತವೇ ಅಲ್ಲವೇ..?

ವಿದಾಯ ಹೇಳಿದವರಿಗೂ
ವಿದಾಯ ಹೇಳಿಸಿಕೊಂಡವರಿಗೂ
ವಿರಹದ ಒಂದಿಷ್ಟು ಅಮಲು
ಎದೆಯಾಳಕ್ಕಿಳಿಯಬಹುದಲ್ಲವೇ?

ಒಂದೆರಡು ಹನಿ ಕಣ್ಣೀರು
ಒಂದೆರಡು ದಿನ ಬೇಜಾರು
ಒಂದಿಷ್ಟು ಹಳೆ ನೆನಪುಗಳು
ಉಳಿಯುವುದಿಷ್ಟೇ ಅಲ್ಲವೆ..?

ವಿದಾಯದ ಘಳಿಗೆಯ ಮಾತು
ವಿದಾಯದ ನಂತರದ ಮೌನ
ಪರಿಚಿತತೆಯ ಅಪರಿಚಿತತೆ
ಹೀಗಲಾದರೂ ಕಾಡಬಹುದಲ್ಲವೇ?

~ವಿಭಾ ವಿಶ್ವನಾಥ್

ಭಾನುವಾರ, ಜೂನ್ 16, 2019

'ಅಪ್ಪ'ನ ಆಯಾಮಗಳು

ಅವತಾರ
------------
ಮಗಳು ಹುಟ್ಟಿದಾಗಲೇ ಅವನ ಅವತಾರವೂ ಆಗಿತ್ತು. ದೇವರ ಆ ಅವತಾರದ ಹೆಸರೇ 'ಅಪ್ಪ'.

ಕಾಣದ ಪ್ರೀತಿ
------------------
ಕಾಣದಿದ್ದರೂ ಕಾಡುವ ಪ್ರೀತಿಯೆಂದರೆ ಅದು 'ಅಪ್ಪ'ನದ್ದೇ..

ಋಣ
--------
ಋಣಾನುಬಂಧ ಪಶು,ಪತ್ನಿ,ಮಗ ಮತ್ತು ಮನೆಗೇ ಏತಕ್ಕೆ? 'ಅಪ್ಪ'ನೂ ಋಣಾನುಬಂಧದಿಂದಲೇ ದಕ್ಕಿದವನೇ ಅಲ್ಲವೇ?

ಯಯಾತಿ
------------
ಮಗ ಪುರುವಿನ ಯೌವ್ವನವನ್ನು ಅನುಭವಿಸಿದ ಯಯಾತಿ ಇಂದಿಗೂ ಪಶ್ಚಾತ್ತಾಪದಲ್ಲಿ ಬೇಯುತ್ತಲೇ ಇದ್ದಾನೆ. ರಾಜನಾಗಿ ಬದುಕಿದ್ದಕ್ಕೆ.. 'ಅಪ್ಪ'ನಾಗಿ ಯೋಚಿಸದಿದ್ದಕ್ಕೆ..!

ಮಹಾಜ್ಞಾನಿ
----------------
ನನ್ನ ಅಸಂಬದ್ಧ ಪ್ರಶ್ನೆಗಳಿಗೂ ಸಮಾಧಾನದಿಂದಲೇ ಉತ್ತರ ನೀಡಿ, ಎಲ್ಲಾ ಜ್ಞಾನದಾಹವನ್ನು ತಣಿಸುವ ಜಗತ್ತಿನ ಮಹಾಜ್ಞಾನಿ 'ಅಪ್ಪ'.

ಶಿಲ್ಪಿ
-------
ಜವಾಬ್ದಾರಿಯ ನಿರ್ವಹಿಸುತ್ತಲೇ, ಬರೀ ಮಾತಲ್ಲೇ ಹೇಳದೆ ಕೃತಿಯಲ್ಲೂ ತೋರಿಸಿ ಜವಾಬ್ದಾರಿಯುತ ನಾಗರೀಕನನ್ನಾಗಿ ರೂಪಿಸುವ ಶಿಲ್ಪಿ 'ಅಪ್ಪ'

ಆಂತರ್ಯ
--------------
ಮುಪ್ಪಿನ ಮುದುರಿನಲ್ಲೂ ಅದೇ ಶಿಸ್ತು, ಗತ್ತು, ಗೈರತ್ತುಗಳೊಂದಿಗೆ ಬದುಕುತ್ತಾ ಆಂತರ್ಯದಲ್ಲಿ ಅಮ್ಮನ ಅಂತಃಕರಣವನ್ನು ಹೊಂದಿರುವವನೇ 'ಅಪ್ಪ'

ಬದಲಾಗುವ ಪಾತ್ರ
--------------------------
ಕಾಲಕ್ಕೆ ತಕ್ಕಂತೆ, ಪರಿಸ್ಥಿತಿಗಳಿಗೆ ಹೊಂದಿಕೆಯಾಗುತ್ತಾ ಕಿಂಚಿತ್ತೂ ಬದಲಾಗದಂತೆ ಕಂಡರೂ ಬದಲಾಗುವ ಪಾತ್ರವೇ 'ಅಪ್ಪ'

ಅಪ್ಪ ಅಂದರೆ ಅಕಾಶವಲ್ಲ
----------------------------------
ಅಪ್ಪ ಅಂದರೆ ಆಕಾಶ ಅನ್ನೋ ಮಾತನ್ನ ನಾನೊಪ್ಪಲ್ಲ. ಆಕಾಶ ನಿಲುಕದ್ದು, ಹರವಾದ್ರೂ ದೂರದ್ದು,ಆದರೆ 'ಅಪ್ಪ' ಆಗಲ್ವಲ್ಲಾ

ದಾನವತ್ವ-ದೈವತ್ವ
-----------------------
ಕೆಲಸದಲ್ಲಿ ದಾನವತ್ವವನ್ನೂ, ನಡೆಯಲ್ಲಿ ದೈವತ್ವವನ್ನು ಮೈಗೂಡಿಸಿ ಕೊಂಡಿಸಿಕೊಂಡವನೇ 'ಅಪ್ಪ'

ಶ್ರೀಮಂತಿಕೆಯ ಬಡವ
-----------------------------
ಹರಿದ ಬಟ್ಟೆಯ ಹಿಂದಿನ ಹೃದಯ ಶ್ರೀಮಂತಿಕೆಯ ಬಡವನೇ 'ಅಪ್ಪ'.

ಮಹಾಮೌನಿ
-----------------
ಬಡಬಡ ಮಾತನಾಡುವ ಅಮ್ಮನೆದುರಲ್ಲಿ ಮೌನದಿಂದಲೇ ಸಂವಹಿಸಿ ಪ್ರತಿಕ್ರಿಯಿಸುವ ಮಹಾಮೌನಿ 'ಅಪ್ಪ'.

ಗುರಾಣಿ
------------
ಅಮ್ಮನ ಕೋಪಕ್ಕೆ ಅಡ್ಡ ನಿಂತು ತನ್ನನ್ನೇ ಗುರಾಣಿಯಾಗಿಸಿಕೊಂಡು ರಕ್ಷಿಸುವುದು 'ಅಪ್ಪ' ಮಾತ್ರವೇ..

ಶಕ್ತ-ದುರ್ಬಲ
-------------------
ನನ್ನ ಬದುಕಿನ ಶಕ್ತಿ ಮತ್ತು ದುರ್ಬಲತೆ ಎರಡೂ ಅಪ್ಪನಂತಹಾ 'ಅಪ್ಪ' ಮಾತ್ರವೇ..

ಶಾಪಗ್ರಸ್ತ
-------------
ಶಾಪಗ್ರಸ್ತ ಗಂಧರ್ವನಿಗೆ ಅವತರಿಸಲು ಒಂದು ದೇಹದ ಅವಶ್ಯಕತೆ ಇತ್ತು. ಆತ ಸೃಷ್ಟಿಸಿಕೊಂಡ ಆ ದೇಹದ ನಾಮವೇ 'ಅಪ್ಪ'.

~ವಿಭಾ ವಿಶ್ವನಾಥ್