ಮಂಗಳವಾರ, ಮೇ 30, 2017

ಅಗ್ನಿ ಕನ್ಯೆ














ಎಲ್ಲವೂ ಮರೆಯಾಗಿ,ಮರೀಚಿಕೆಯಾಗಿ
ಒಬ್ಬಂಟಿಯಾಗಿ ಬದುಕುವಾಗ...
ತನ್ನ ಕನಸೆಲ್ಲವನ್ನು ಸುಟ್ಟು
ತಾನು ಬೂದಿಯಾಗುವ ಸಂದರ್ಭದಲಿ
ಹುಟ್ಟಿದ ಕನಸಿನೊಂದಿಗೆ ಜೀವಕೂ ಮರುಹುಟ್ಟು
ಬೆಂಕಿಯಲ್ಲಿ ಬೆಂದು
ಪುಟವಿಟ್ಟ ಚಿನ್ನವೆಂದು ಯಾರಿಗೂ ತೋರಬೇಕೆನಿಸಿಲ್ಲ
ಬೆಂದಷ್ಟು ಗಟ್ಟಿಯಾಗುವೆ.
ಕಾಡಿದಷ್ಟು ಕನಲಿ ಕೆಂಡವಾಗುವೆ.
ಬೂದಿ ಮುಚ್ಚಿದ ಕೆಂಡದಂತೆ,
ಕಾಡುವ ಧ್ವನಿಗಳಿಗೆ ಮರುಧ್ವನಿಯಾಗಿ,
ಅಗ್ನಿಜ್ವಾಲೆಯಾಗಿ ಎಲ್ಲವನ್ನಾವರಿಸುವೆ.
ಪ್ರಜ್ವಲಿತ ಜ್ವಾಲೆಯಾಗಿ ಕೆನ್ನಾಲಿಗೆಯ ಚಾಚಿ,
ಕೆಟ್ಟತನವ ತೊಡೆದುಹಾಕುವೆ.
ಸಾತ್ವಿಕ ಪ್ರೇಮದಲಿ ಮಿಂದು ಜ್ಯೋತಿ ಸ್ವರೂಪದಿ
ಒಳ್ಳೆಯತನವ ಹೊತ್ತಿಸುವೆ,ಪ್ರಜ್ವಲಿಸುವೆ.
                                            -vಭಾ

ಚಂದ್ರಮನ ಬಾನಂಗಳದಿ ನಾನು...

ಚಂದ್ರಮನ ಹುಡುಕುತ್ತಾ ಹೊರಟಿರುವೆ
ಗೊತ್ತು ಗುರಿಯಿಲ್ಲದ ದಾರಿಯಲ್ಲಿ
ಬಾನಂಗಳದಿ ಬೆಳಗುವ ನೀನೇಕೆ ಮರೆಯಾದೆ?
ಯಾವ ತಾರೆಯ ಹುಡುಕಿ ಹೊರಟಿರುವೆ?
ಜಾರುವ ದಾರಿಯಲ್ಲಿ ಎಲ್ಲಿ ಜಾರಿ ಹೋಗಿರುವೆ?
ಓಡದೆ ನಿಲ್ಲು ನನ್ನಿಂದ ದೂರಾಗಿ
ಮೋಡದ ಮರೆಯಲ್ಲಿ ಅಡಗಲೇಕೆ?
ಕೇಳಲಾರೆನು ಇನ್ನೇನನ್ನು ನಿನ್ನನ್ನು
ನನ್ನ ಅನ್ವೇಷಣೆಯಲ್ಲೇ ನಾನಿರುವೆನು
ನಿನ್ನ ಜೊತೆಯಾಗುವ ಇಚ್ಚೆ ನನಗಿಲ್ಲವಾಗಿದೆ
ದೂರ ಓಡದೆ ನಿನ್ನ ದಾರಿಯಲ್ಲಿ ನೀ ಸಾಗುತಿರು
ಹೋಗುವ ಮುನ್ನ ಹೇಳಿ ಹೋಗುವಾಸೆ
ನಿನ್ನ ತಂಪಿನ ಮಾತುಗಳ ನೆನಪುಗಳಲ್ಲೇ ನನ್ನ ಪಯಣ
ಚಂದ್ರಮನ ಜೊತೆಯಾಗುವ ಯೋಗ ನನಗಿಲ್ಲ
ನೀ ಹಂಬಲಿಸಿದ ತಾರೆಯೇ ಜೊತೆಯಾಗಲಿ ನಿನಗೆ...
                                                         -vಭಾ

ಚಿತ್ತ ತೋರಿದ ಹಾದಿಯತ್ತ


ನೀರ್ಗಲ್ಲ ಮೇಲಿನ ಪಯಣ ನನ್ನದು
ನೆಲವೋ,ನೀರೋ ಗೊತ್ತಿಲ್ಲ...
ನನ್ನ ಬಿಂಬವೂ ನನಗೆ ಕಾಣುತ್ತಿಲ್ಲ
ಅನಿಶ್ಚಿತತೆಯತ್ತ ಸಾಗುತಿದೆ ಪಯಣ. 

ಅಮೂರ್ತತೆಯತ್ತ ಸಾಗಿದೆ ಬದುಕು
ಸಾವಧಾನದಲೋ,ವೇಗದಲೋ ಗೊತ್ತಿಲ್ಲ...
ದಾರಿ ಹೋದತ್ತ ಸಾಗುವ ಪಯಣದಲಿ,
ಭಾವನೆಗಳಿಗೆ ಬೆಲೆ ಇಲ್ಲ ಇಲ್ಲಿ.

ಎತ್ತಲೋ,ಎಲ್ಲಿಗೋ ಪಯಣ ನಿಶ್ಚಿತ.
ಬೀಳುವೆನೋ,ಏಳುವೆನೋ ಗೊತ್ತಿಲ್ಲ...
ತೇಲಾಟವೋ,ಮುಳುಗಡೆಯೋ ಅದೂ ಗೊತ್ತಿಲ್ಲ...
ಚಿತ್ತ ತೋರಿದ ಹಾದಿಯತ್ತ ಹೆಜ್ಜೆ. 
                                             -vಭಾ

ಅನ್ವೇಷಣೆಯ ಹಾದಿಯಲ್ಲಿ

ಮೌನದಿಂದ ಮಾತೋ?
ಮಾತಿನಿಂದ ಮೌನಕೆ ಬೆಲೆಯೋ?
ಎಲ್ಲವನು ನೋಡಿ ಸುಮ್ಮನಿರಲೋ?
ಎಲ್ಲವನು ಕಿರುಚಿ ಹೇಳಲೋ?
ಮನದ ಬಯಲಲಿ ಏಕಾಂಗಿಯಾಗಿರುವೆ
ಬಯಲುಂಟು, ಆಗಸವುಂಟು
ರೆಕ್ಕೆಯೋ? ಬೇರೋ?
ನಿಶ್ಚಿತವೋ? ಅನಿಶ್ಚಿತವೋ?
ಬಯಲಲ್ಲಿ ಬೇರು ಬಿಟ್ಟು ಹೆಮ್ಮರವಾಗಲೋ?
ಆಗಸದಿ ಮುಕ್ತ ಮನದಿ ತೇಲುವ ಹಕ್ಕಿಯಾಗಲೋ?
ತೀರ್ಮಾನ ಬದುಕಿನ ಅಂತ್ಯವೋ?ಆರಂಭವೋ?
ಆಸೆಯೋ? ನಿರಾಸೆಯೋ?
ನನ್ನಲ್ಲೇ ನಾನು ಅನ್ವೇಷಿಸುತ್ತಿರುವೆ.
ಉತ್ತರದ ಹುಡುಕಾಟದಲಿ ನನ್ನ ನಾನೇ ಕಳೆದುಕೊಂಡಿರುವೆ
ನಾನು ನಾನಾಗುವ ನಿಟ್ಟಿನಲ್ಲಿ,
ಹೊರಟಿರುವೆ ರೆಕ್ಕೆಯಾದರೂ, ಬೇರಾದರೂ
ಬಲಿಷ್ಠವಾಗಲು ನನ್ನ ನಾನೇ ಅರಸಿ...
                                               -vಭಾ

ಅಮ್ಮನ ಅಕ್ಕರೆಯ ಸವಿಯಲ್ಲಿ ಜೀವನ

''ಅಮ್ಮ" ಎಂಬ ಎರಡಕ್ಷರದಲ್ಲಿಯೇ ನಮ್ಮ ಬದುಕಿನ ಎಲ್ಲಾ ಭಾವನೆಗಳು ಅಡಗಿವೆ.ಹೆರಿಗೆ ಎಂಬ ಸಾವಿನ ಬಾಯಿಗೆ ಹೋಗಿ ಬರುವ ಪ್ರಕ್ರಿಯೆಯಿಂದ ನಮ್ಮನ್ನು ಭೂಮಿಗೆ ಕರೆತಂದ ದೇವತೆ ನೀನು.ಎಲ್ಲ ನೋವನ್ನು ನುಂಗಿ ನಗುವಿನಿಂದ ಬರಮಾಡಿಕೊಂಡ ನಂತರ ನೀನು ಲಾಲಿ ಹಾಡಿ ಪೋಷಿಸುವ ಪರಿಯೇ ಸುಂದರ.ಮಗು ಮೊದಲು ಅತ್ತಾಗಲೇ ನಿನ್ನ ಪ್ರೀತಿ ಶುರುವಾಗುತ್ತದೆ. ಎಷ್ಟಾದರೂ ಕರುಳ ಸಂಬಂಧವಲ್ಲವೇ?,ಕಣ್ಣು ಅರಿಯದಿದ್ದರೂ ಕರುಳರಿಯದೆ?,ಯಾರಿಗೂ ಹೇಳಲಾಗದ ಭಾವನೆಗಳನ್ನು ನೀನು ಅರ್ಥೈಸಿಕೊಳ್ಳುವೆ.
              "ಮನೆಯೆ ಮೊದಲ ಪಾಠಶಾಲೆ,ತಾಯಿಯೆ ಮೊದಲ ಗುರು" ಎಂಬ ಮಾತು ಅಕ್ಶರಶಃ ಸತ್ಯ.ಯಾವುದೇ ಕುತೂಹಲವಿದ್ದರೂ ಅದಕ್ಕೆ ಪ್ರೇರಣೆ ನೀಡಿ,ಎಷ್ಟೇ ಬಾರಿ ಕೇಳಿದರೂ ಬೇಸರಿಸದೆ ನೀನು ಉತ್ತರ ನೀಡುವ ಪರಿಯೇ ಚಂದ.ನಿನ್ನ ಮಡಿಲ ಸುಖಕ್ಕೆ ಬೆಲೆಕಟ್ಟಲಾಗದು. ಸ್ನೇಹಿತೆಯಾಗಿ, ಶಿಕ್ಷಕಿಯಾಗಿ,ಹಿತೈಷಿಯಾಗಿ ಯಾವುದೇ ಕೆಲಸಕ್ಕಾದರೂ ಜೊತೆಯಾಗಿ ನಿಂತು ಪ್ರೇರಕ ಶಕ್ತಿಯಾಗಿರುವೆ.ನಿನ್ನ ದಯೆ, ಕ್ಷಮಾಗುಣ,ಮುಗುಳ್ನಗು ಇವುಗಳನ್ನು ನಾನೂ ಅಳವಡಿಸಿಕೊಳ್ಳುತ್ತಿರುವೆ. ಇಷ್ಟೆಲ್ಲಾ ಪ್ರೇರಣೆ ನೀಡುವ ತಾಯಿಯ ಮನಸ್ಸಿನಲ್ಲಿ ಮಗುವಿಗೆ ವಿಶೇಷ ಸ್ಥಾನ.ಮಗ ಅಥವಾ ಮಗಳು ಎಂಬ ಭೇದ ತೋರಿಸದೆ ನೀನು ತೋರಿಸುವ ಪ್ರೀತಿ ಅಸದೃಶ.ಅದಕ್ಕೆ ಹೇಳುವುದು "ಜಗತ್ತಿನಲ್ಲಿ ಕೆಟ್ಟ ತಾಯಿ ಇರಲು ಸಾಧ್ಯವೇ ಇಲ್ಲ".ಆದರೆ ಇಂದು ತಾಯಿಯ ಬೆಲೆಯನ್ನು ಅರಿಯದೆ ಎಷ್ಟೋ ಜನರು ಆಕೆಯನ್ನು ವೃದ್ಧಾಶ್ರಮದ  ಅಥವಾ ಬೀದಿಪಾಲು ಮಾಡಿದ ಉದಾಹರಣೆಗಳು ನಮ್ಮ ಕಣ್ಮುಂದಿದೆ. ಇನ್ನಾದರೂ ಈ ರೀತಿ ಮಾಡದೆ ತಮ್ಮ ತಪ್ಪುಗಳನ್ನು ಸರಿಮಾಡಿಕೊಂಡು ಎಚ್ಚೆತ್ತುಕೊಂಡರೆ ಉತ್ತಮ."ಹರಕಲು ಬಟ್ಟೆ ಉಟ್ಟಿದ್ದಾಳೆಂದು ನಮ್ಮ ತಾಯಿಯನ್ನು ದೂರ ಮಾಡಿ ರೇಷ್ಮೆ ಬಟ್ಟೆ ಉಟ್ಟಿರುವವರನ್ನು ನಮ್ಮ ತಾಯಿ ಎಂದು ಹೇಳಲು ಸಾಧ್ಯವೇ?",ಹೇಗಿದ್ದರೂ ನಮ್ಮ ತಾಯಿ ನಮ್ಮ ತಾಯಿಯೇ ಅಲ್ಲವೇ?
          ಹೆತ್ತ ತಾಯಿಯ ಪ್ರೀತಿಯ ಪರಿ ಹೀಗಾದರೆ,ನಮ್ಮನ್ನು ಪೋಷಿಸುವ ಮಾತೃ ಸಮಾನ ಹೆಣ್ಣು ಮಕ್ಕಳ ಪ್ರೀತಿಯ ಪರಿಯೇ ಇನ್ನೊಂದು ಚಂದ. ದೊಡ್ಡಮ್ಮ, ಚಿಕ್ಕಮ್ಮ, ಅತ್ತೆ, ಸಹೋದರಿ, ಶಿಕ್ಷಕಿ, ಸ್ನೇಹಿತೆ, ಮಗಳು ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇವರ ಕಾಳಜಿ, ಪ್ರೀತಿಯೂ ಅಪಾರ. ತಾಯಿಯ ರೀತಿ ಅಕ್ಕರೆ ತೋರುವ ಇನ್ನೊಬ್ಬರು ಪ್ರತಿಯೊಬ್ಬರ ಜೀವನದಲ್ಲಿಯೂ ಇದ್ದೇ ಇರುತ್ತಾರೆ. ನಮ್ಮ ಆರೋಗ್ಯ, ಜೀವನ, ಆಹಾರದ ಬಗ್ಗೆ ನಮಗಿಂತ ಕಾಳಜಿ ತೋರಿಸುವ ಆ ಮಾತೃ ಮನಸ್ಸಿನ ಎಲ್ಲರಿಗೂ ಒಂದು ಸಲಾಂ.
         ಗೊತ್ತೋ,ಗೊತ್ತಿಲ್ಲದೆಯೋ ಯಾರಿಗಾದರೂ ನೋವಾಗಿದ್ದರೆ ಇಂದು ಕ್ಷಮೆ ಬೇಡೋಣ. ನಮ್ಮಿಂದ ಆಗುವ ಸಹಾಯ ಮಾಡೋಣ. ಅಮ್ಮಂದಿರ ದಿನದ ಆಚರಣೆಯನ್ನು ಒಂದು ದಿನಕ್ಕೆ ಸೀಮಿತಗೊಳಿಸದೆ ಅವರನ್ನು ಪ್ರೀತಿಸೋಣ, ಗೌರವಿಸೋಣ.ಹೆತ್ತ ತಾಯಿಗೆ, ತಾಯಿಯಂತೆಯೇ ಪ್ರೀತಿ ತೋರಿ ಕಾಳಜಿ ಮಾಡಿ ಮನದ ಮಬ್ಬನ್ನು ದೂರ ಮಾಡಿ ಹಣತೆಯ ಬೆಳಕು ನೀಡಿ ದಾರಿದೀಪವಾಗಿರುವ ತಾಯಿ ಮನಸ್ಸಿನ ಎಲ್ಲಾ ಹೆಣ್ಮಕ್ಕಳಿಗೂ ಅಮ್ಮಂದಿರ ದಿನದ ಶುಭಾಶಯಗಳು.
                                                                                                                                    -vಭಾ

ಸೋಮವಾರ, ಮೇ 29, 2017

ಕ್ಷಮಯಾಧರಿತ್ರಿ

ಓ ಭುವಿ,ನಿನಗೇಕಿಷ್ಟು ಸಹನೆಯೇ?
ನಿನ್ನತನವ ನಿನ್ನಿಂದ ಸೂರೆಗೊಂಡರೂ
ಒಡಲುರಿತವ ಪ್ರದರ್ಶಿಸದೆ
ಎಲ್ಲರಿಗೂ ಕ್ಷಮಾಧಾನ ನೀಡಿ,
ಕ್ಷಮಯಾಧರಿತ್ರಿ ಎನ್ನಿಸಿಕೊಳ್ಳುವ ಆಸೆಯೇನೆ?

ಬಂಜರಾದರೂ, ಒಳ್ಳೆಯ ಫಲ ನೀಡಿದರೂ,
ಚೂರು ಏರು-ಪೇರಾದರೂ ದೂಷಣೆ ನಿನಗೇ
ನಿನ್ನ ಸಹನೆಗೂ ಮಿತಿಯಿದೆ ಎಂದು ಗೊತ್ತಿದ್ದರೂ,
ಏಕೀಗೆ ವರ್ತಿಸುತ್ತಿರುವರು?

ಬೇಡಮ್ಮಾ,ಬೇಡ ಇಷ್ಟು ಸಹನೆ
ಈ ಜನರಿಂದ ನೀ ಏನೂ ಅಪೇಕ್ಷಿಸದಿದ್ದರೂ,
ಒಳ್ಳೆಯತನವನ್ನಂತೂ ಅಪೇಕ್ಷಿಸುವೆ
ನೀ(ನಿ) ಸ್ವಾರ್ಥಿಯಲ್ಲವೇನೇ?

ಸಹನಾಮಯಿಯೇ, ಕ್ಷಮಯಾಧರಿತ್ರಿಯ
ಈ ಗುಣಗಳನ್ನು ನನಗೂ ನೀಡುವೆಯಾ
ನಿನ್ನ ಪ್ರತಿರೂಪವಾಗಲ್ಲದಿದ್ದರೂ,
ನನ್ನಂತೆ ನಾ ಬದುಕಲು....
                                 -vಭಾ

ಮಾತೆ

ಮಂದಸ್ಮಿತ ಮುಗುಳ್ನಗೆಯ
ಮಂದಬೆಳಕು ನೀನು...

ಮೃದುಮಾತಿನ ಲಹರಿಯ
ಮನದೊಡತಿಯು ನೀನು...

ಮಂದಹಾಸದಿ ಸ್ಫೂರ್ತಿ ತುಂಬಿದ
ಬಾಳ ಬೆಳಕು ನೀನು...

ಮಾತೆ ನೀನೆ ನನ್ನ ಜೀವ
ನಿನ್ನ ಕಂದ ನಾನು...
                         -vಭಾ