ಭಾನುವಾರ, ಏಪ್ರಿಲ್ 26, 2020

ಅವಳೊಳಗಿನ ಕತೆಗಳು

"ಕೊಟ್ಟದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ" ಎಂಬ ಗಾದೆ ಮಾತು ಕೇಳಿ ಮನಸ್ಸಲ್ಲೇ ಮಂಥನ ಮಾಡಿಕೊಂಡಳು. ಕೊಟ್ಟ ಪ್ರೀತಿ ಮರಳಿ ಸಿಗಲಿಲ್ಲ, ಬಚ್ಚಿಟ್ಟ ನೋವು ಅವಳಲ್ಲೇ ಉಳಿದು ಹೋಯಿತು.
*********************************

ನಿರಾಭರಣ ಸುಂದರಿಯಾದ ಅವಳ ಸೌಂದರ್ಯದ ರಹಸ್ಯ ಅವಳ ಮುಗ್ದ ಮುಗುಳ್ನಗು
**********************************

ಎಲ್ಲರನ್ನೂ ತಿರಸ್ಕಾರದಿಂದ ಧಿಕ್ಕರಿಸುತ್ತಾ ಬದುಕುತ್ತಿರುವವಳ ಕುರಿತು ಆಡುವವರಿಗೇನು ಗೊತ್ತು ಪ್ರೀತಿಯನ್ನು ಮೊಗೆದು ಕೊಟ್ಟು ಮೋಸ ಹೋದ ದೇವತೆ ಅವಳೆಂದು..
**********************************

ಅವಳು ಸತ್ತಳೆಂದು ಎಲ್ಲರೂ ದುಃಖಿಸುತ್ತಿರುವ ಹೊತ್ತಲ್ಲಿ ಅವಳ ಆತ್ಮ ಹೇಳುತ್ತಿತ್ತು. ಅವಳ ಆಸೆಗಳನ್ನು ಕೊಂದುಕೊಂಡು ಎಲ್ಲರ ಆಸೆಯಂತೆ ಬದುಕುವ ತೀರ್ಮಾನ ಮಾಡಿದಾಗಲೇ ಅವಳು ಸತ್ತಿದ್ದಳು, ಬದುಕಿದ್ದು ಅವಳ ದೇಹ ಮಾತ್ರ.
**********************************

ಅವಳ ಹಾಜರಿಯಲ್ಲಿ ಅವಳನ್ನು ತಮ್ಮ ಬದುಕಿನ ಪುಟವೊಂದರಂತೆ ಭಾವಿಸುತ್ತಿದ್ದವರಿಗೆ ಅವಳ ಗೈರು ಹಾಜರಿಯಲ್ಲಿ ಅರಿವಾದದ್ದು ಅವಳೊಂದು ಬೃಹತ್ ಗ್ರಂಥವೆಂದು.
**********************************

ಅವಳ ಚುಚ್ಚು ಮಾತು, ಪ್ರತಿಯೊಂದಕ್ಕೂ ತಡೆಯೊಡ್ಡುವ ಹಿಂದಿನ ಪ್ರೀತಿ ಅದೇಕೋ ಅವಳ ಸುತ್ತಮುತ್ತಲಿನವರಿಗೆ ಕಾಣಲೇ ಇಲ್ಲ.
************************************

ಕತೆಗೊಂದು ಜೀವಂತಿಕೆ ಸೃಷ್ಟಿಸಿ ಮಾಯವಾದಳು, ಕತೆ ಮುಗಿದ ನಂತರವೇ ಅರಿವಾದದ್ದು ಕತೆ ಮತ್ತು ಕತೆಯ ಜೀವಾಳವೇ ಅವಳೆಂದು
************************************

ಆಟ,ಪಾಠ,ಕಲೆ ಎಲ್ಲದರಲ್ಲೂ ಗೆಲುವು ಅವಳದ್ದೇ ಆದರೆ ಪ್ರೀತಿ ಪಡೆದುಕೊಳ್ಳುವುದರಲ್ಲಿ ಏಕೋ ಸೋತಿದ್ದಳು.
*************************************

ಅವಳನ್ನು ಸೋಲಿಸಿದೆ ಎಂಬ ಅಹಂಭಾವದಲ್ಲಿ ಮೆರೆಯುತ್ತಿದ್ದವನಿಗೆ ಗೊತ್ತಿರಲಿಲ್ಲ.. ತನ್ನ ಗೆಲುವು, ಅವಳ ಸೋಲು ಎರಡೂ ಅವಳು ಬಯಸಿದ್ದು ಮತ್ತು ಅದೇ ಅವಳ ಗೆಲುವೆಂದು.
*************************************

ಬೇಜಾರೇನಿಲ್ಲ ಅವಳಿಗೆ ಬೇರಾರ ಮೇಲೂ, ಅವಳ ಹೊರತು. ಪ್ರೀತಿ, ಕಾಳಜಿ ತೋರಿ ಮರುನಿರೀಕ್ಷಿಸುವ ತನ್ನ ಕುರಿತೇ ಅವಳಿಗೆ ಬೇಜಾರು ಅಷ್ಟೇ.
**************************************

ಹಣದಿಂದ ಪ್ರತಿಯೊಂದನ್ನೂ ಕೊಂಡುಕೊಳ್ಳಬಹುದೆಂಬ ಅಹಂನಲ್ಲಿದ್ದವನಿಗೆ ಅವಳು ಹೇಳಿದ್ದಳು. ಹಣದಿಂದ ನೀನು ಕೊಂಡುಕೊಳ್ಳಬಹುದಾದದ್ದು ನನ್ನ ದೇಹವನ್ನಷ್ಟೇ.. ಮನಸ್ಸನ್ನಲ್ಲ ಎಂದು.
***************************************

ಮಿಥ್ಯವೆಂದು ತಿಳಿದಿದ್ದರೂ ಅದನ್ನು ಮುಚ್ಚಿಟ್ಟು ಸತ್ಯವನ್ನಾಗಿಸಲು ಪಣತೊಟ್ಟು ಅವನನ್ನು ಕೆಟ್ಟತನದಿಂದ ಒಳ್ಳೆಯತನಕ್ಕೆ ಪರಿವರ್ತಿಸಿದವಳ ಹೆಸರು "ಮುಗ್ಧ ಕಿನ್ನರಿ" ಎಂದಿರಬಹುದೇ..?***************************************

ಎಲ್ಲವೂ ಬದಲಾಗಬಹುದು ಆದರೆ ಅವಳೊಳಗಿನ ತಾಯ್ತನದ ಮಿಡಿಯುವ ಮನಸ್ಸೊಂದನ್ನು ಬಿಟ್ಟು
***************************************

ಮಡಿಲಲ್ಲಿಟ್ಟು ಜಗದ ಪ್ರೀತಿಯನ್ನು ಪರಿಚಯಿಸಿದವಳಿಗೆ, ಅವಳು ಅವನ ಆಸರೆ ಬಯಸಿದ ಸಂಧರ್ಭದಲ್ಲಿ ಜಗದ ಕ್ರೌರ್ಯವನ್ನು ಪರಿಚಯಿಸಿದ.
****************************************

ಬಂಧ ಬೆಸೆದುಕೊಂಡಿತೆಂದು ಖುಷಿ ಪಟ್ಟವಳಿಗೆ ಅದು ಬಂಧನವೆಂಬ ಪರಿಚಯ ಮಾಡಿಕೊಟ್ಟ. ಬಂಧನವ ಧಿಕ್ಕರಿಸಿ ನಡೆದವಳು ಅವನ ಅಹಂ ಅನ್ನೂ ತುಳಿದು ನಡೆದಿದ್ದಳು. ಮತ್ತೆ ಸಾವರಿಸಿಕೊಳ್ಳದಂತೆ..
****************************************

ದೊಡ್ಡ ದನಿಯಲ್ಲಿ ಅವನನ್ನು ಗದರಿಸಿ, ಒಳಕೋಣೆ ಸೇರಿದವಳ ಬಿಕ್ಕು ಯಾರಿಗೂ ಕೇಳಲೇ ಇಲ್ಲ.
*****************************************

ಬದುಕಿಗೊಂದು ಗುರಿ ಇರಬೇಕು ಎಂದು ಭಾಷಣ ಮಾಡುತ್ತಿದ್ದವನ ಮಾತು ಕೇಳಿ ಹೇಳಿದಳು. ಗುರಿ ಸಾಧನೆಯಾದರೆ ಸಾಲದು ಅದನ್ನು ಸಂಭ್ರಮಿಸುವವರನ್ನೂ ಸಂಪಾದಿಸಿರಬೇಕು.
*****************************************

ಅವಳ ಮನದ ಭಾವಗಳ ಅರ್ಥೈಸುವಿಕೆ ಅದೆಷ್ಟೇ ಪುಸ್ತಕ ಓದಿದರೂ ಅರ್ಥವಾಗದ್ದು
*****************************************

ಎಲ್ಲಾ ಭರವಸೆಗಳ ತಂತು ಕಡಿದ ಮೇಲೆ ಕೊನೆಗುಳಿಯುವುದು, ಆಸರೆಯಾಗುವುದು ತಾನೇ ಧಿಕ್ಕರಿಸಿ ನಡೆದಿದ್ದ ಅವಳು, ಅವಳ ಭರವಸೆ, ಅವಳ ಮಡಿಲು, ಅವಳ ಒಲವು.


~ವಿಭಾ ವಿಶ್ವನಾಥ್

ಭಾನುವಾರ, ಏಪ್ರಿಲ್ 19, 2020

ನನ್ನ ಭಾವ ನನ್ನದಷ್ಟೇ

ಆಲೋಚನೆಯ ಒಳಸುಳಿಗೆ
ಕೈ ಹಾಕಿ ಕದಡದಿರಿ
ಭಾವನೆಗಳ ಚೌಕಟ್ಟಿನೊಳಗೆ
ಅಂಕೆ ಮೀರಿ ಬರದಿರಿ

ನನ್ನ ಭಾವ ನನ್ನದು, ನನ್ನದಷ್ಟೇ
ಅದಕ್ಕೆ ನಿಮ್ಮ ನೆರಳ ಸೋಕಿಸದಿರಿ
ಆ ಕ್ಷಣದ ಸವಿಯ ಸಿಹಿಯನೆಂದೂ
ಕಹಿ ಮಾಡುವ ಯತ್ನ ಮಾಡದಿರಿ

ಲಂಗು ಲಗಾಮಿಲ್ಲದ ನಾಲಿಗೆಯ
ಬಳಸಿ ಹರಿಹಾಯದಿರಿ
ಮೇರೆ ಮೀರಿದ ಮಾತನ್ನಾಡಿ
ನಿಮ್ಮ ಗೌರವ ಕಳೆದುಕೊಳ್ಳದಿರಿ

ಬರೆದ ಭಾವ, ಭಾಷ್ಯ ನನ್ನದು
ನೀವದರ ಗೇಲಿ ಮಾಡದಿರಿ
ಮೆಚ್ಚುಗೆಯ ಮಾತನಾಡದಿದ್ದರೂ
ಚುಚ್ಚು ಮಾತನ್ನಂತೂ ಆಡದಿರಿ

ಇಷ್ಟು ದಿನ ಆದದ್ದು ಆಗಿ ಹೋಯಿತು
ಇನ್ನಾದರೂ ಎಚ್ಚೆತ್ತುಕೊಳ್ಳಿರಿ
ಒಳ್ಳೆಯತನಕ್ಕೂ ಮಿತಿ ಇದೆ
ನಿಮ್ಮ ವರ್ತನೆಯಿಂದ ಕೆಟ್ಟವಳನ್ನಾಗಿಸದಿರಿ

~ವಿಭಾ ವಿಶ್ವನಾಥ್

ಭಾನುವಾರ, ಏಪ್ರಿಲ್ 12, 2020

ನನ್ನಪ್ಪ ನನ್ನ ವಿಶ್ವ

ನನ್ನಪ್ಪ ವಿಶ್ವಪ್ರಸಿದ್ದನಲ್ಲ
ಆದರೆ,ಅವನೇ ನನ್ನ ವಿಶ್ವ

ನನ್ನಪ್ಪ ದೂರ್ವಾಸನಲ್ಲ
ಆದರೆ, ಅವನ ಕೋಪಕೇಕೋ ಹೆದರಿಕೆ
ನನ್ನಪ್ಪ ಸಾಮ್ರಾಟನಲ್ಲ
ಆದರೂ ನಾನೇ ಅವನ ರಾಜಕುಮಾರಿ

ನನ್ನಪ್ಪ ಹಠಮಾರಿಯಲ್ಲ
ಆದರೆ, ಆತನ ನಿರ್ಧಾರಗಳು ಅಚಲ
ನನ್ನಪ್ಪ ಭಾಷಣಕಾರನಲ್ಲ
ಆದರೆ,ಆತನ ಮಾತುಗಳೇ ನನ್ನ ಸ್ಫೂರ್ತಿ

ನನ್ನಪ್ಪ ನ್ಯಾಯಾಧೀಶನಲ್ಲ
ಆದರೆ,ಆತನ ಮಾತ ಮೀರಿ ನಡೆಯುವುದಿಲ್ಲ
ನನ್ನಪ್ಪ ಅತಿ ಭಾವುಕನಲ್ಲ
ಆದರೆ, ಭಾವನೆಗಳಿಗೆ ಸ್ಪಂದಿಸುವವ

ನನ್ನಪ್ಪ ಶಿಲ್ಪಿಯಲ್ಲ
ಆದರೆ,ನನ್ನ ವ್ಯಕ್ತಿತ್ವವನ್ನು ರೂಪಿಸುವವ
ನನ್ನಪ್ಪನನ್ನು ನಾನು ಪೂಜಿಸುವುದಿಲ್ಲ
ಏಕೆಂದರೆ, ನಾನು ಅವನನ್ನು ಪ್ರೀತಿಸುವೆ

~ವಿಭಾ ವಿಶ್ವನಾಥ್

ಭಾನುವಾರ, ಏಪ್ರಿಲ್ 5, 2020

ಒಲವ ಹೊರೆ ಹೊರಿಸಿದವಳೇ..

ನೀನ್ಯಾಕಿಷ್ಟು ಚೆಂದವೇ ಹುಡುಗಿ? ನನ್ನ ಮನಸೂರೆಗೊಂಡು ಕನಸಲ್ಲೂ ಲಗ್ಗೆ ಇಡುವಷ್ಟು..? ಸುಂದರತೆ ಎಂದರೆ ಬರೀ ಬಾಹ್ಯಾ ಸೌಂದರ್ಯ ಮಾತ್ರ ಎಂದುಕೊಂಡವನ ಮನ ಬದಲಿಸಿದ್ದು ನೀನಲ್ಲದೆ ಮತ್ಯಾರು ಎಂದುಕೊಂಡೆ..? 

ನೀನ್ಯಾಕಿಷ್ಟು ಒಳ್ಳೆಯವಳು ಹೇಳು..? ಒಳ್ಳೆಯತನ ಬೂಟಾಟಿಕೆ ಎಂದುಕೊಂಡಿದ್ದವನ ಮನವನ್ನು ಬದಲಿಸುವಷ್ಟು ಒಳ್ಳೆತನ ನಿನ್ನಲ್ಲಿಲ್ಲದೇ ಹೋಗಿದ್ದರೆ ಅದೆಷ್ಟು ಕೆಟ್ಟವನಾಗಿರುತ್ತಿದ್ದೆ ನಾನು.. ಆದರೂ ಸುಂದರವಾದದ್ದು, ಒಳ್ಳೆಯದ್ದು ದೂರದಲ್ಲೇ ಇರಬೇಕು ಅಲ್ಲವೇ..? ಅದಕ್ಕೆ ಇರಬೇಕು ನಿನ್ನಂತಹವರು ಗಗನ ಕುಸುಮಗಳಂತೆ ಭಾಸವಾಗುವುದು.

ಪಾರಿಜಾತದಂತಹವಳು ನೀನು.. ಅದರ ಬಿಳುಪು, ಬಣ್ಣದ ಬಗ್ಗೆ ಹೇಳುತ್ತಿಲ್ಲ ನಾನು. ಅದು ಪಸರಿಸುವ ಸುಗಂಧದಂತೆ ನಿನ್ನ ಗುಣ. ನೀನು ನನ್ನ ಸುತ್ತ ಇರುವಾಗಲೆಲ್ಲಾ ನಿನ್ನದೇ ಗುಂಗು ಹಿಡಿಸಿಬಿಡುತ್ತೀಯ.. ಆದರೂ, ನಿನ್ನ ಒಳ್ಳೆಯತನದ ಆಜ್ಞೆಗೆ ಗುಲಾಮನಾಗಬೇಕಾದಾಗ ಅದೇಕೋ ಅಸಹಾಯಕನಾಗಿ ಬಿಟ್ಟೆನೇನೋ ಎನ್ನಿಸಿಬಿಡುವುದು ಸುಳ್ಳಲ್ಲ. ನನ್ನಂತ ಬಲಿಷ್ಠನನ್ನು ಸಹಾ ಮೃದುವಾಗಿಸುವುದು ನೀನೋ, ನಿನ್ನ ಗುಣವೋ, ನಿನ್ನ ಒಲವೋ ಅರಿವಿಗೆ ನಿಲುಕದ್ದು..

ಸ್ಪರ್ಶ ಮಣಿ ಎಂಬ ಮಣಿಯೊಂದಿದೆ ಎಂದು ಕೇಳಿದ್ದೆ. ಅದು ಕಬ್ಬಿಣವನ್ನು ತಾಕಿದ ತಕ್ಷಣ ಕಬ್ಬಿಣ ಚಿನ್ನವಾಗಿ ಬದಲಾಗುವುದಂತೆ.. ನೀನೂ ಅಂತಹಾ ಸ್ಪರ್ಶಮಣಿಯೇ.. ಇಲ್ಲದಿದ್ದರೆ ನಿನ್ನಿಂದ ನನ್ನಂತಹಾ ನಿರ್ಭಾವುಕ ಕೂಡಾ ಭಾವನೆಗಳೊಂದಿಗೆ ಬೆರೆಯುವುದ ಕಲಿತ ಎಂದರೆ.. ಅದರ, ಅಂದರೆ ನಿನ್ನ ಮಹತ್ವ ಎಷ್ಟಿರಬೇಕೆಂದು ನೀನೇ ಯೋಚಿಸು..

ಆದರೂ, ನೀನು ಬಂದ ಮೇಲೆ ಬದುಕು ಬದಲಾಯಿತು ಎಂಬುವುದನ್ನು ಒಪ್ಪಲು ಕೊಂಚ ಕಷ್ಟವೇ. ಮನಸ್ಸಿಗಲ್ಲ, ಎಲ್ಲರೆದುರು. ಏಕೋ ಈ ಬದಲಾವಣೆ ನಿನ್ನೊಡನೆ ಮಾತ್ರವೇ.. ಅಷ್ಟು ಬೇಗ ನಾನು ಬದಲಾದರೆ ಅದು ಎಲ್ಲರಿಗೂ ನಾಟಕೀಯ ಎನ್ನಿಸಬಹುದು. ಏಕೆಂದರೆ, ಎಲ್ಲರೂ ಕೆಟ್ಟತನದ ಬದಲಾವಣೆಯನ್ನು ಕ್ಷಣಮಾತ್ರದಲ್ಲಿ ಒಪ್ಪುತ್ತಾರೆ ಆದರೆ ಒಳ್ಳೆಯತನದ ಬದಲಾವಣೆಯನ್ನು ಅಷ್ಟು ಸುಲಭದಲ್ಲಿ ಒಪ್ಪುವುದಿಲ್ಲ. ನೀನು ನನ್ನ ಎಲ್ಲಾ ಬದಲಾವಣೆಯ ಕಾರಣ ಎಂಬುದನ್ನು ಮನಸ್ಸಿನಲ್ಲೇ ಕೂಗಿ ಕೂಗಿ ಹೇಳುತ್ತೇನೆ. ಆದರೆ, ಅದು ಹೊರ ಜಗತ್ತಿಗೆ ಕೇಳುವುದಿಲ್ಲ. ಕೇಳಲೂಬಾರದು. ಅವರಿಗೆ ಇದರ ಗಂಧ ಪಸರಿಸಿದರೆ ಸಂಬಂಧಕ್ಕೆ ಒಂದು ಬಣ್ಣ ಬಳಿದು ಬೇರೆಯ ರೀತಿಯೇ ಪ್ರದರ್ಶನಕ್ಕೆ ಇಟ್ಟುಬಿಡುತ್ತಾರೆ.

ಬದುಕಿನಲ್ಲಿ ನಾನು ದೇವರನ್ನು ಪ್ರಾರ್ಥಿಸಿದವನೇ ಅಲ್ಲ ಆದರೆ ಇತ್ತೀಚೆಗೆ ದೇವರನ್ನು ವಂದಿಸುವುದನ್ನು ಮರೆಯುವುದಿಲ್ಲ. ಪ್ರಾರ್ಥನೆ ನಿಸ್ವಾರ್ಥವಾಗಿದ್ದರೆ ಫಲಿಸುವುದೆಂದು ನೀನೇ ಹೇಳಿದ್ದೆಯಲ್ಲಾ.. ಹಾಲ್ಮನಸ್ಸಿನಂತಹಾ ಗೆಳತಿಯ ಒಲವು ಹೀಗೇ ಉಳಿದುಬಿಡಲಿ ಎಂದು ಕೇಳಿಕೊಳ್ಳುತ್ತೇನೆ. ನಿನ್ನಂತಹಾ ಗೆಳತಿಯನ್ನು ನನಗೆ ನೀಡಿದ್ದಕ್ಕೆ ವಂದಿಸುತ್ತೇನೆ.

ನಿನ್ನ ಒಲವಿನ ಹೊರೆಯ ಭಾರವನ್ನು ಇಳಿಸಿಕೊಳ್ಳುವುದು ಸುಲಭವಲ್ಲ ಎಂಬುದರ ಅರಿವು ನನಗಿದೆ. ಒಲವು ಹಾಗೇ ಅಲ್ಲವೇ..?? ಕೊಟ್ಟಷ್ಟೂ ಮುಗಿಯದು, ತುಂಬಿದಷ್ಟೂ ಪೂರ್ತಿಯಾಗದು. ಆದರೆ ಆ ಒಲವಿಗೆ ಹೆಸರಿಡಲಾರೆ, ಕಾಮದ ಯೋಚನೆಯನ್ನು ಸಹಾ ಸೋಕಿಸಲಾರೆ. ಜೀವನವಿಡೀ ನಿನ್ನ ಒಲವ ಹೊರೆ ಹೊತ್ತುಕೊಂಡೇ ನಿನ್ನ ಆತ್ಮೀಯನಾಗಿ ಬದುಕಿ ಬಿಡುವಾಸೆ.

ಗಗನ ಕುಸುಮವನ್ನು ಮುಟ್ಟಲು ಯೋಗ್ಯತೆ ಬೇಕು. ಆ ಯೋಗ್ಯತೆಯ ಮಾಪನ ಹಣ, ಅಂತಸ್ತಲ್ಲ. ಇಷ್ಟು ದಿನ ನಿನ್ನೊಡನಿದ್ದು ಅದನ್ನು ಅರಿತಿಲ್ಲ ಎಂದರೆ ನನ್ನಂತಹ ಮೂಢ ಬೇರೆ ಯಾರೂ ಇರಲಾರನೇನೋ..

ಒಲವನ್ನು ಬಂಧಿಸಲಾರೆ ಹಾಗೆಯೇ ಭಾವನೆಗಳನ್ನು ಅಧಿಕವಾಗಿಯೂ ಹರಿಬಿಡಲಾರೆ. ಎಲ್ಲದಕ್ಕೂ ಕಾರಣ ನಿನ್ನಂತಹಾ ಉತ್ತಮ ಗೆಳತಿಯನ್ನು ಕಳೆದುಕೊಳ್ಳುವ ಭಯ. ಬದುಕಿನಲ್ಲಿ ಇಂತಹಾ ಒಲವನ್ನು ಹೊರಿಸಿಕೊಳ್ಳುವ ಕೆಲವೇ ಅದೃಷ್ಟವಂತರಲ್ಲಿ ನಾನೂ ಒಬ್ಬ.
ನಿನ್ನಿಂದ ಕಲಿತದ್ದನ್ನು ಮರೆಯಲಾರೆ, ಒಳ್ಳೆಯದನ್ನು ಮತ್ತೊಬ್ಬರಿಗೆ ಹಂಚುವೆ.
ಆದರೆ ಈ ಬರಹವನ್ನು ನಿನಗೆ ತೋರಿಸಲಾರೆ. ನೀನು ಹೊಗಳಿಕೆಗೆ ಉಬ್ಬಲಾರೆ, ತೆಗಳಿಕೆಗೆ ಕುಗ್ಗಲಾರೆ ಎಂದು ಅರಿವಿದ್ದರೂ ಸಹಾ...

ಆದರೂ ಈ ಬರಹ ಒಲವ ಹೊರೆ ಹೊರಿಸಿದವಳಿಗೆ ಅರ್ಪಣೆ
~ಇಂತಿ
ಒಲವ ಸಾಲಗಾರನಾಗಿರುವ ಆತ್ಮೀಯ

------------------------------------------
(~ವಿಭಾ ವಿಶ್ವನಾಥ್)