ಭಾನುವಾರ, ಸೆಪ್ಟೆಂಬರ್ 27, 2020

ಸಿರಿಗೌರಿಯ ಸದಾಶಿವ- ೫

 


"ಕಾರುಣ್ಯ"ದಲ್ಲಿ ಚಿಕಿತ್ಸೆಗೆ ಬೇಕಿದ್ದ ಎಲ್ಲವೂ ಸಿದ್ಧವಾಗಿತ್ತು. ನಂದನ್ ನ ಪ್ರಭಾವ ಕೂಡಾ ಅಷ್ಟರಮಟ್ಟಿಗೆ ಇದ್ದಿತು. ಅಲ್ಲಿದ್ದ ವೈದ್ಯರು, ಕೆಲಸಗಾರರು ಸಹಾ ಅಷ್ಟೇ ನಿಷ್ಠೆ ಉಳ್ಳವರು. ಪ್ರತಿಯೊಬ್ಬ ಕೆಲಸಗಾರರನ್ನು ಸಹಾ ಆಯ್ಕೆ ಮಾಡಿಕೊಳ್ಳುವ ಪ್ರಕ್ರಿಯೆ ಕೂಡಾ ಹಾಗೆಯೇ ಇತ್ತು. ಹಣ, ವಶೀಲಿ ಎರಡೂ ಸಹಾ ಇಲ್ಲಿ ನಡೆಯುತ್ತಿರಲಿಲ್ಲ. ಸೇವಾ ಮನೋಭಾವಕ್ಕಷ್ಟೇ ಅಲ್ಲಿ ಪ್ರಾಮುಖ್ಯತೆ.  ambulance ಬಂದದ್ದೇ ತಡ ಚಿಕಿತ್ಸೆಗೆ ಕರೆದೊಯ್ಯಲಾಯಿತು. ಅಥರ್ವನಿಗೆ ಸಣ್ಣ-ಪುಟ್ಟ ತರಚು ಗಾಯಗಳಾಗಿದ್ದವು ಅಷ್ಟೇ. ಅಪರ್ಣಾ ಕೂಡಾ ಹುಷಾರಾಗಿದ್ದಳು. ಮೈನಾವತಿಯವರಿಗೆ ಶಾಕ್ ನಿಂದಾಗಿ ಪ್ರಜ್ಞೆ ತಪ್ಪಿತ್ತು. ಸುಕ್ಷಿತಳಿಗೆ ಬಲವಾದ ಪೆಟ್ಟು ಬಿದ್ದಿತ್ತು. ಸ್ಕಂದನಿಗೂ ಬಲವಾದ ಪೆಟ್ಟು ಬಿದ್ದು ತಲೆಯಿಂದ ರಕ್ತ ಸುರಿಯುತ್ತಿತ್ತು. ಇಬ್ಬರನ್ನೂ ಐ.ಸಿ.ಯು ಗೆ ಕರೆದೊಯ್ಯಲಾಯಿತು.


ಇತ್ತ ಅಶುತೋಷ್ ನಿಗೆ ಬಂದ ಕಾಲ್ ವಿರಾಜ್ ನದ್ದು. ಅಶುತೋಷ್ ಕೋಪವಿದ್ದರೂ ಬಂದ ಕಾಲ್ ಅನ್ನು ನಿರಾಕರಿಸಲಾರ. ಅವನಿಗೆ ಸಿಟ್ಟು ತೀರಿಸಿಕೊಳ್ಳಲು ಮಾರ್ಗವೊಂದು ಬೇಕಿತ್ತು. ಸಿಟ್ಟು ಎಂಬುದು ಹಾಗೆಯೇ.. ಹೊರ ಹಾಕಿದರೆ ಕಡಿಮೆಯಾಗುತ್ತದೆ. ಒಳ ತುಂಬಿಸಿಕೊಂಡಷ್ಟೂ ಮನುಷ್ಯನನ್ನು ಕೆರಳಿಸುತ್ತದೆ. ಬೆಳೆದು ಹೆಮ್ಮರವಾಗಿ ದ್ವೇಷಕ್ಕೆ ಎಡೆ ಮಾಡಿಕೊಡುತ್ತದೆ. ಬಂದ ಕರೆಯನ್ನು ರಿಸೀವ್ ಮಾಡಿದ ನಂತರ ವಿರಾಜ್ ನನ್ನು ಮಾತನಾಡಲು ಸಹಾ ಬಿಡದೆ "ಕಾತ್ಯಾಯಿನಿಯನ್ನು ನನ್ನಿಂದ ಬೇರೆ ಮಾಡಿದ್ದು ಸಾಲಲಿಲ್ಲವೇ..? ಈಗ ಸ್ಕಂದನನ್ನು ಸಹಾ ನನ್ನಿಂದ ದೂರ ಮಾಡುತ್ತಿರುವೆ. ನನ್ನ ಮೇಲೆ ನಿನಗೆ ದ್ವೇಷವಿದ್ದರೆ ನೇರಾನೇರ ಬಂದು ಮಾತನಾಡು, ಇಲ್ಲವೇ ನೇರವಾಗಿಯೇ ಕೊಂದುಬಿಡು. ಅದನ್ನು ಬಿಟ್ಟು ನನ್ನ ಮಗನನ್ನು ಬಲಿ ಪಡೆಯಬೇಡ" ಎಂದು ಹೇಳಿದ. ಅದಕ್ಕೆ ವಿರಾಜ್ "ಅಶು, ಸ್ವಲ್ಪ ನನ್ನ ಮಾತು ಕೇಳು, ತಪ್ಪು ಮಾಡಿದ್ದೆ ನಿಜ. ಅದೇ ತಪ್ಪನ್ನು ಮತ್ತೆ ಮತ್ತೆ ಮಾಡುವಷ್ಟು ಮೂರ್ಖ ನಾನಲ್ಲ. ಸ್ಕಂದನನ್ನು ನಾನೇಕೆ ಕೊಲ್ಲಲಿ ? ಅವನ ಹೆತ್ತ ತಂದೆ ನೀನೇ ಆದರೂ ಸ್ವಂತ ಮಗನಿಗಿಂತ ಹೆಚ್ಚಾಗಿ ನಾನು ಅವನನ್ನು ಸಾಕಿದ್ದೇನೆ. ನನ್ನ ತಪ್ಪಿನ ಪ್ರಾಯಶ್ಚಿತ್ತ ಎಂದಲ್ಲ. ಕರುಳ ಬಳ್ಳಿಯ ಸಂಬಂಧ ನನ್ನನ್ನು ಹಾಗೆ ಮಾಡುವಂತೆ ಪ್ರೇರೇಪಿಸುತ್ತದೆ. ಸ್ಕಂದ ಮಾತ್ರವಲ್ಲ, ನನ್ನ ಮಗಳು ಸುಕ್ಷಿತ ಕೂಡಾ ಈಗ ಪ್ರಾಣಾಪಾಯದಲ್ಲಿದ್ದಾಳೆ. ಅವರನ್ನು ಉಳಿಸು ಎಂದು ಕೇಳಿಕೊಳ್ಳಲು ನಾನು ನಿನಗೆ ಕರೆ ಮಾಡಿದೆ. ನಾನೇ ನನ್ನ ಮಕ್ಕಳನ್ನು ಉಳಿಸಿಕೊಳ್ಳುವೆ, ನನ್ನ ಪ್ರಾಣ ಹೋದರೂ ಸರಿ.." ಎನ್ನುತ್ತಾ ಕರೆಯನ್ನು ಕೊನೆಗೊಳಿಸಿದನು. 

ಅಶುತೋಷ್ ತಕ್ಷಣವೇ ಆಸ್ಪತ್ರೆಗೆ ಹೊರಟನು. ಮನಸ್ಸಿನ ಆಲೋಚನಾ ಲಹರಿ ವಿವಿಧ ದಿಕ್ಕಿನಲ್ಲಿ ಸಾಗುತ್ತಿತ್ತು. ಕೆಲವೊಮ್ಮೆ ಅತ್ಯಂತ ತಾಳ್ಮೆಯ ಕಾರಣ ಬದುಕಲ್ಲಿ ಹಲವರನ್ನು ಕಳೆದುಕೊಳ್ಳುತ್ತೇವೆ. ಆದರೆ, ಹಲವು ಬಾರಿ ಕೋಪದಿಂದ. ನಾನು ಇಷ್ಟು ದಿನ ವಿರಾಜ್ ನನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದೆನೇ? ಅವನನ್ನು ಮಾತ್ರವಲ್ಲ, ಬದುಕಲ್ಲಿ ನಾನು ಯಾರನ್ನೂ ಸರಿಯಾಗಿ ಅರ್ಥೈಸಿಕೊಳ್ಳಲಿಲ್ಲ.

ಅಪರ್ಣಾ ಯಾವಾಗಲೂ ಹೇಳುತ್ತಿದ್ದಳು "ಅಶು, ಯಾವಾಗಲೂ ಸತ್ಯ ನಾವು ನೋಡುವುದಕ್ಕಿಂತ ವಿಭಿನ್ನವಾಗಿರುತ್ತದೆ. ಅದನ್ನು ಅರ್ಥೈಸಿಕೊಂಡು ಅದಕ್ಕೆ ತಕ್ಕಂತೆ ನಾವು ಬದುಕನ್ನು ಬದುಕಬೇಕಾಗುತ್ತದೆ. ತಪ್ಪು ಎಂಬುದು ಕೂಡಾ ಮನಸ್ಸಿನ ಆಲೋಚನಾ ಲಹರಿಗೆ ಸಂಬಂಧಿಸಿದಂತೆ. ಕೆಲವೊಮ್ಮೆ 6 ಎಂಬುದು ಎದುರು ದಿಕ್ಕಿನಿಂದ ನೋಡಿದರೆ 9 ಎಂಬಂತೆ ಭಾಸವಾಗುತ್ತದೆ. ಇದು ತಪ್ಪು-ಒಪ್ಪುಗಳ ಸಮರ್ಥನೆಯಲ್ಲ. ಆದರೆ, ಬದುಕಿನ ಸರಿ-ತಪ್ಪುಗಳ ವಿಮರ್ಶೆ. ಕೆಲವೊಂದು ಅಮೃತದ ಹಿಂದೆ ಹಾಲಾಹಲವಿರುತ್ತದೆ. ಅಮೃತ ಬೇಕೆಂದರೆ ಹಾಲಾಹಲವನ್ನು ಸಹಾ ಕುಡಿದು ದಕ್ಕಿಸಿಕೊಳ್ಳುವ ಛಾತಿ ಇರಬೇಕು. ಪಳಗಿಸಲು ಬಂದರೆ ವಿಷ ಸರ್ಪವನ್ನು ಸಹಾ ಪಳಗಿಸಬಹುದು, ಇದೆಲ್ಲದಕ್ಕೂ ಸಾಕ್ಷಿ ಮಹಾದೇವ ಸದಾಶಿವ. ನಿನಗೆ ಕಷ್ಟ ಬಂದಾಗ ಅವನನ್ನು ಸ್ಮರಿಸಿದರೆ ಯಾವುದೋ ಬಲ ಬಂದಂತಾಗುತ್ತದೆ". ಅಶುತೋಷ್ ಅವಳ ಮಾತನ್ನು ನೆನಪಿಸಿಕೊಂಡು ಒಮ್ಮೆ ಮನಸ್ಸಿನಲ್ಲಿ ಶಿವನ ಧ್ಯಾನ ಮಾಡಿದ. ಒಮ್ಮೆಯೂ ದೇವರನ್ನು ನಂಬದವನು ಅಪರ್ಣಾ ಬಂದ ಮೇಲೆ ನಂಬತೊಡಗಿದ್ದು ಅವಳ ಆರಾಧ್ಯ ದೈವ ಸದಾಶಿವನನ್ನು. ಅಷ್ಟಕ್ಕೂ ಇಷ್ಟದೈವ ಅಥವಾ ಇಷ್ಟಪಟ್ಟದ್ದು ಯಾವುದೇ ಆದರೂ ಅದರ ಹಿಂದೆ ನಾವು ಇಷ್ಟಪಟ್ಟವರ ಪ್ರಭಾವ ಇರುತ್ತದೆ. ಅಯ್ಯೋ, ಸ್ಕಂದನ ಆಲೋಚನೆಯಲ್ಲಿ ನಾನು ಅಪರ್ಣಾ, ಮೈನಾ ಅಮ್ಮ ಮತ್ತು ಅಥರ್ವನ ಪರಿಸ್ಥಿತಿಯನ್ನು ಕೇಳುವುದನ್ನೇ ಮರೆತು ಹೋದೆ. ಕರುಳ ಸಂಬಂಧವೆಂದರೆ ಹೀಗೆಯೇ..? ಮನುಷ್ಯನನ್ನು ಬೇರೆಲ್ಲಾ ಆಲೋಚನೆಯಿಂದ ದೂರವಿಡಲು, ಕ್ಷಣ ಕಾಲ ದುರ್ಬಲವನ್ನಾಗಿ ಮಾಡಲು  ಬಹುಶಃ ಮಕ್ಕಳಿಗೆ ಮಾತ್ರ ಸಾಧ್ಯವೇನೋ..? ಅಥರ್ವನ ಜೊತೆಗೆ ಕಳೆದ ಕ್ಷಣಗಳು ಸಹಾ ಸವಿ ಕ್ಷಣಗಳು. ಅಥವಾ ನಾನು ಸ್ಕಂದನನ್ನು ಅವನಲ್ಲಿ ಕಾಣುತ್ತಿದ್ದೇನೆ.. ? ಏನೇ ಇದ್ದರೂ ಮಕ್ಕಳೆಂಬ ಮಮತೆ, ಅವರ ಮುಗ್ಧತೆ ಅವರತ್ತ ನಮ್ಮನ್ನು ಸ್ವಾಭಾವಿಕವಾಗಿ ಸೆಳೆದು ಬಿಡುತ್ತವೆ. ಸ್ಕಂದನನ್ನು ನಾನು ನನ್ನ ಮನೆಗೆ ಕರೆದೊಯ್ಯಬೇಕು. ಆನಂತರ ಸ್ಕಂದ ಮತ್ತು ಅಥರ್ವ ಇಬ್ಬರೂ ಸಹಾ ನನ್ನ ಜೊತೆಯೇ ಉಳಿಯುತ್ತಾರೆ.. ಹೀಗೆಯೇ ಆಲೋಚನಾ ಲಹರಿ ಮುಂದುವರಿಯುತ್ತಿತ್ತು. 

ಮುಂದಿನಿಂದ ಅಡ್ಡಾದಿಡ್ಡಿ ಬಂದ ಲಾರಿಯೊಂದು ಅಶುತೋಷ್ ಕಾರಿಗೆ ಗುದ್ದಿತು. ಭವಿಷ್ಯದ ಬಣ್ಣ ಬಣ್ಣದ ಕನಸುಗಳಲ್ಲಿ ಮುಳುಗಿದ್ದ ಅಶುತೋಷ್ ನ ಬದುಕು ಇನ್ನೇನು ಮುಗಿಯುವುದರಲ್ಲಿತ್ತು. 

ಬದುಕು ಎಂಬುದು ಕೆಲವೊಂದು ಸಂಧರ್ಭಗಳನ್ನು ಮತ್ತೊಬ್ಬರ ಬದುಕಲ್ಲಿ ಗೊತ್ತಿದ್ದೋ, ಗೊತ್ತಿಲ್ಲದೆಯೋ ಗಂಟು ಹಾಕಿರುತ್ತಾನೆ. ಕಾಕತಾಳೀಯವೋ ಅಥವಾ ವಿಧಿ ನಿಯಾಮಕವೋ ವಿರಾಜ್ ಕೂಡಾ ಅದೇ ದಾರಿಯಲ್ಲಿ ಹಾದು ಹೋಗುತ್ತಿದ್ದ. ತನ್ನ ಮಗಳು ಸುಕ್ಷಿತ ಮಾತ್ರ ಮನಸ್ಸಿನಲ್ಲಿ ತುಂಬಿದ್ದಳು. ಆದರೆ, ಯಾವುದೋ ಅಪಘಾತ ಎಂದು ನಿರ್ಲಕ್ಷಿಸಿ ಸಾಗಲಿದ್ದವನ ಮನಸ್ಸಿನಲ್ಲಿ ಕಾತ್ಯಾಯಿನಿ ಹೇಳುತ್ತಿದ್ದ ಮಾತು ನೆನಪಾಯಿತು. "ಮತ್ತೊಬ್ಬರು ನಮ್ಮನ್ನು ಯಾವ ರೀತಿಯಲ್ಲಿ ನಡೆಸಿಕೊಳ್ಳುತ್ತಾರೆ ಎಂಬುದು ಅವರ ವ್ಯಕ್ತಿತ್ವವನ್ನು ತೋರಿಸಿದರೆ ನಾವು ಅವರನ್ನು ಯಾವ ರೀತಿ ನಡೆಸಿಕೊಳ್ಳುತ್ತೇವೆ ಎಂಬುದು ನಮ್ಮ ವ್ಯಕ್ತಿತ್ವವನ್ನು ಎತ್ತಿ ಹಿಡಿಯುತ್ತದೆ." ಇವತ್ತು ಸುಕ್ಷಿತ ಮತ್ತು ಸ್ಕಂದನಿಗೆ ಅಪಘಾತವಾದಾಗ ಬೇರೆಯವರು ಸಹಾ ಹೀಗೆಯೇ ನಿರ್ಲಕ್ಷಿಸಿ ನಡೆದಿದ್ದರೆ ಏನಾಗುತ್ತಿತ್ತು ಎಂಬ ಪ್ರಶ್ನೆಯೊಂದು ಮನಸ್ಸಿನಲ್ಲಿ ಎದ್ದಿತು. ವಿರಾಜ್ ನಂತಹಾ ಒಳ್ಳೆಯ ಮನಸ್ಸು ಕುಡಿತದ ಕಾರಣದಿಂದ ಸಮಾಜಕ್ಕೆ ಕಂಡಿರಲಿಲ್ಲ. ವಿರಾಜ್ ನ ಆತ್ಮಸಾಕ್ಷಿ ಯಾಕೋ ಈ ಅಪಘಾತವನ್ನು ನಿರ್ಲಕ್ಷಿಸಿ ಮುಂದೆ ಹೋಗಲು ಬಿಡಲಿಲ್ಲ. ಕಾರನ್ನು ಯೂ ಟರ್ನ್ ಮಾಡಿ ಬಂದವನಿಗೆ ಆಘಾತ ಕಾದಿತ್ತು. ತಕ್ಷಣವೇ ambulance ಗೆ ಕರೆ ಮಾಡಿದ ಮತ್ತು ಪೊಲೀಸರಿಗೆ ಸಹಾ. ಯಾಕೋ ಮನಸ್ಸು ಶಂಕಿಸುತ್ತಿತ್ತು, ಆದರೆ ಆಧಾರವಿರಲಿಲ್ಲ..

ಲಾರಿಯಲ್ಲಿ ಬಂದು ಅಪಘಾತ ಮಾಡಿದ ವ್ಯಕ್ತಿ ಯಾರಿಗೋ ಫೋನ್ ನಲ್ಲಿ "ಬಾಸ್, ಇವತ್ತಿಗೆ ಅವನ ಕತೆ ಮುಗಿಯಿತು" ಎಂದು ಹೇಳಿದ.


ಕತೆ ಬರೆಯುವವರಾರೋ, ಮುಂದುವರಿಸುವರಾರೋ.. ಅಂತ್ಯ ಮಾಡಿದೆವು ಎಂದು ಬೀಗುತ್ತಾರೆ. ಆದಿ, ಅಂತ್ಯ ಎಲ್ಲವೂ ನೀನೇ ಅಲ್ಲವೇ ಮಹಾದೇವ. ಎಲ್ಲವೂ ನಿನ್ನಿಚ್ಚೆ ಎಂದು ಶಿವನನ್ನು ಮನದಲ್ಲೇ ಸ್ಮರಿಸಿದರು ಆಗಷ್ಟೇ ಎಚ್ಚರವಾದ ಮೈನಾವತಿಯವರು

(ಎಂದಿನಂತೆ ಈ ಬಾರಿಯೂ ನಿಮ್ಮ ಪ್ರತಿಕ್ರಿಯೆಗಳ ನಿರೀಕ್ಷೆಯಲ್ಲಿ ನಾನಿದ್ದೇನೆ. ನಿಮ್ಮ ಪ್ರತಿಕ್ರಿಯೆಗಳೇ ನನ್ನ ಮುಂದಿನ ಬರಹಕ್ಕೆ ಸ್ಫೂರ್ತಿ. ಓದಿದವರು ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ)

~ವಿಭಾ ವಿಶ್ವನಾಥ್

ಭಾನುವಾರ, ಸೆಪ್ಟೆಂಬರ್ 20, 2020

ಬಚ್ಚಿಟ್ಟ ಭಾವಗಳ ಬಿಚ್ಚಿಟ್ಟ ಪುಟಗಳು

 


ಮನಸ್ಸಿನ ಭಾವನೆಗಳನ್ನು ನಿರುಮ್ಮಳವಾಗಿ ಬಿಚ್ಚಿಡಲಾಗುವುದು ಇಲ್ಲಿಯೇ ಅಲ್ಲವಾ ? ಒಲವೆಂದರೆ ಒಮ್ಮುಖ ಭಾವವಲ್ಲ, ಬಲವಂತದ ಹೇರಿಕೆಯಿಂದ ಬರುವುದು ಸಹಾ ಅಲ್ಲ. ಅದೇಕೋ ನನಗನ್ನಿಸುತ್ತಿರುವುದು ಇಷ್ಟೇ. ನಾನು ಅವನಿಗೆ ಒಳ್ಳೆಯ ಗೆಳೆತಿಯಾಗಿ ಮಾತ್ರ ಇರಬಲ್ಲೆ. ಒಳ್ಳೆಯ ಪತ್ನಿಯಾಗಲಾರೆನೇನೋ.. ಒಲುಮೆ ಎಂಬುದು ಮನಸ್ಸಿನಿಂದ ಬರಬೇಕು. ಮಾಂಗಲ್ಯ ಬಂಧನದಿಂದ ಜೋಡಿಸುತ್ತಾರೆ. ಆದರೆ, ಮನಸ್ಸುಗಳ ಬೆಸುಗೆಯಾಗಬೇಕು ಅಲ್ಲವೇ.. ? ರಾಶಿ, ನಕ್ಷತ್ರ, ಜಾತಕ, ಗಣಕೂಟ ಎಲ್ಲವೂ ಹೊಂದಾಣಿಕೆಯಾದರೆ ಕೊಡು-ಕೊಳ್ಳುವಿಕೆಯು ಸಹಾ ಹೊಂದಾಣಿಕೆಯಾಗಬೇಕು. ಪರಿಸ್ಥಿತಿಗೆ ರಾಜಿಯಾಗಿ ಮದುವೆ ಸಹಾ ನಡೆದು ಹೋಯಿತು. ನಾವು ಎಂದಿಗೂ ಮನ ಬಿಚ್ಚಿ ಮಾತನಾಡಲಿಲ್ಲ. ಇಷ್ಟಾನಿಷ್ಟಗಳ, ಹೊಂದಿಕೆಯ ಕುರಿತು ಚರ್ಚಿಸಲಿಲ್ಲ. ಹಿರಿಯರ ಮಾತಿಗೆ ಕಟ್ಟು ಬಿದ್ದು, ಪರಿಸ್ಥಿತಿಯ ಕೈ ಗೊಂಬೆಗಳಾಗಿ ವಿವಾಹ ಬಂಧನಕ್ಕೆ ಸಿಲುಕಿದೆವು. ಮುಂದೆ ಇದೇ ರೀತಿಯ ಒತ್ತಾಯಕ್ಕೋ, ಗೃಹಸ್ಥ ಧರ್ಮ ಎನ್ನುತ್ತಲೋ ಜೊತೆಗೇ ಬದುಕು ನಡೆಸುತ್ತೇವೆ. ಹಾಸಿಗೆಯ ಸುಖಕ್ಕೆ ಪ್ರೀತಿ ಬೇಕಿಲ್ಲವಲ್ಲ. ಅವನ ಕಾಮದಾಹಕ್ಕೆ ಒಂದು ಹೆಣ್ಣು ಜೀವವಾಗಿ ನಾನಿರುತ್ತೇನೆ. ಅದನ್ನೂ ಕರ್ತವ್ಯ ಎಂಬಂತೆ ನಿಭಾಯಿಸಬೇಕಾಗುತ್ತದೆ. ಅದು ಎಲ್ಲರ ಒಪ್ಪಿಗೆಯ ಮುದ್ರೆ ಬಿದ್ದ ವ್ಯಭಿಚಾರ, ಅದಕ್ಕೆ ಹೆಸರು ಮಾತ್ರ ವಿವಾಹ ಬಂಧನ. ಈ ಭಾವಗಳು ಈಗಿನ ಕಾಲಕ್ಕೆ ಕೊಂಚ ಔಟ್ ಡೇಟೆಡ್ ಅಲ್ಲವಾ..? ನಾನು ಈ ಕಾಲಕ್ಕೆ ಹೊಂದಿಕೆಯಾಗಬಲ್ಲೆನಾ ಎಂಬ ಪ್ರಶ್ನೆ ಸದಾ ನನ್ನಲ್ಲಿ ಕಾಡುತ್ತಲೇ ಇರುತ್ತದೆ 


ನಾನು ಮಾತ್ರ ಹೀಗೆಯಾ ? ಯಾವಾಗಲೂ ನನಗನ್ನಿಸುತ್ತಿರುತ್ತದೆ, ನನ್ನಲ್ಲಿ ಭಾವಗಳೇ ಉದಿಸುವುದಿಲ್ಲವಾ ? ಅಥವಾ ಅದರಲ್ಲಿ ಪ್ರೀತಿ ಎಂಬುದು ಮಾತ್ರ ಕಾಣೆಯಾಗಿರುತ್ತದೆಯಾ ? ಭಾವಗಳೇ ಇಲ್ಲದ ನಾನು ಲೋಕದ ಕಣ್ಣಿಗೆ ಭಾವಪೂರ್ಣ ಲೇಖಕಿ. ಅಷ್ಟಕ್ಕೂ ಅವನಿಗೆ ಇದರ ಕುರಿತು ಸಣ್ಣ ಅರಿವಾದರೂ ಇರಬಹುದಾ ? ನಾನು ನನ್ನ ಬರಹವನ್ನು ಮುಂದುವರಿಸುತ್ತೇನೆಂದರೆ ಅವನು ಒಪ್ಪಬಹುದಾ ? ಅವನ ಮನೆಯವರದ್ದಾರದ್ದೂ ಆಕ್ಷೇಪ ಇರಲಾರದಾ ? ಅಥವಾ ನನ್ನ ಮನೆಯಂತೆ ಇಲ್ಲಿಯೂ ನಿರ್ಲಕ್ಷ್ಯ ತೋರಬಹುದಾ ? ಮೆಚ್ಚುಗೆಯ ಮಾತುಗಳು ಸಿಗದಿದ್ದರೂ ಚುಚ್ಚು ಮಾತುಗಳಂತೂ ಸಿಗಲಾರವೇನೋ? ನೋವು ನೀಡುವುದು ಮತ್ತೊಬ್ಬರ ಪದಗಳಲ್ಲ, ನಮ್ಮದೇ ಭಾವಗಳು, ನಮ್ಮದೇ ನಿರೀಕ್ಷೆಗಳು. ಬಹುಶಃ ನಾನೇ ಮತ್ತೊಬ್ಬರ ಕಾಳಜಿ, ಪ್ರೀತಿಯನ್ನು ನಿರೀಕ್ಷಿಸುವೆನಾ ? ನಾನು ತೋರುವ ಕಾಳಜಿ ಮತ್ತು ಪ್ರೀತಿಯನ್ನು ಸಹಾ ನಾನು ನಿರೀಕ್ಷಿಸುವುದು ತಪ್ಪಾಗುತ್ತದೆಯಾ ? ಇಷ್ಟು ದಿನದ ಹೊಂದಾಣಿಕೆ ಎಂಬ ಮುಖವಾಡದ ಬದುಕನ್ನು ಇಲ್ಲಿಯೂ ಮುಂದುವರಿಸಬೇಕಾ ? ಕೃಷ್ಣ ಎಲ್ಲವೂ ನಿನಗೇ ಅರ್ಪಿತ. ನನ್ನ ಬದುಕಿನ ಇಬ್ಬರು ಗೆಳೆಯರು ನೀವುಗಳೇ.. ಒಂದು ಡೈರಿ ಮತ್ತೊಬ್ಬ ಆರಾಧ್ಯ ದೈವ ಶ್ರೀ ಕೃಷ್ಣ. ಹೇಳಿದ ಎಲ್ಲಾ ಸತ್ಯವನ್ನು ಮತ್ತೊಬ್ಬರಿಗೆ ತಾನಾಗಿಯೇ ಬಿಚ್ಚಿಡದ ಡೈರಿ. ತಾನು ಹೇಳಿದ್ದಕ್ಕೆಲ್ಲಾ ಮುಗುಳ್ನಗೆಯಿಂದಲೇ ಉತ್ತರಿಸಿಯೂ, ಉತ್ತರಿಸದ ಶ್ರೀ ಕೃಷ್ಣ.
ಕೃಷ್ಣಾರ್ಪಣ ಮಸ್ತು ಎಂದು ಡೈರಿಯನ್ನು ಬರೆದು ಮುಚ್ಚಿಟ್ಟು ಮಲಗಿದಳು ಪರಿಣಿಕಾ

ಮದುವೆಯಂತೂ ಆಯಿತು. ಇಷ್ಟಾಕಷ್ಟಗಳ ಕುರಿತ ಚರ್ಚೆ ನಾವು ಮಾಡಲಿಲ್ಲ. ಅವರುಗಳು ಅವಕಾಶ ನೀಡಿದರು ಆದರೆ ನಾವುಗಳೇ ನಮ್ಮ ಸಂಕೋಚದ ತೆರೆ ಕಳಚಲಿಲ್ಲ. ಕೊಂಚವಾದರೂ ಮುಂದುವರಿದು ನಾನೇ ಅವಳನ್ನು ಮಾತನಾಡಿಸಬೇಕಿತ್ತೋ ಏನೋ.. ಅವಳ ಗಾಂಭೀರ್ಯತೆ ನನ್ನಲ್ಲಿ ಗೌರವ ಮೂಡಿಸುತ್ತದೆ. ಎಲ್ಲರ ಎದುರಿಗೂ ಹೆಚ್ಚು ಮಾತನಾಡುವವನು ನಾನು. ಯಾಕೋ ಅವಳ ಕಣ್ಣ ಕಾಂತಿಗೆ, ಸ್ವಚ್ಛ ನಿಷ್ಕಲ್ಮಶ ನಗುವಿಗೆ ಸೋತು ಬಿಡುತ್ತೇನೆ. ಅವಳ ಕನಸುಗಳಿಗೆ ನಾನು ರೆಕ್ಕೆ ಕಟ್ಟಬೇಕು. ವಿವಾಹ ಬಂಧನವಾಗಬಾರದು ಅವಳ ಸ್ವಾತಂತ್ರ್ಯ ಅವಳಿಗೇ ಬಿಡಬೇಕು. ನಮ್ಮತನವನ್ನು ಕೊಂದುಕೊಂಡು ಹೊಂದಿಕೊಂಡು ಬದುಕಬಾರದು, ಒಬ್ಬರನ್ನೊಬ್ಬರು ಅರಿತು ಒಂದಾಗಿ ಬಾಳಬೇಕು. ಇಷ್ಟು ದಿನ ಅವಳು ಎಲ್ಲರ ಜೊತೆಗೆ ಹೊಂದಿಕೊಂಡೇ ಬದುಕಿರುತ್ತಾಳೆ. ಅವಳ ಮೃದು ಮಾತನ್ನು ಕೇಳಿದರೆ ಹಾಗನ್ನಿಸುತ್ತದೆ. ನಾನು ನನ್ನೆಲ್ಲಾ ಮನಸ್ಸಿನ ಮಾತನ್ನು ಬಿಚ್ಚಿಡಬೇಕು. ಹಾಡು ಹಾಡಲು ಬರುವುದೇ ಅವಳಿಗೆ ? ಅವಳ ಜೇನು ದನಿಯ ಮಾತು ಕೇಳಿದರೆ ಯಾವುದೋ ವೀಣೆಯ ಸ್ವರ ಮೀಟಿದಂತಿರುತ್ತದೆ. ಪತಿ-ಪತ್ನಿಯರಾಗಿ ಬಾಳುವ ಮೊದಲು ಒಳ್ಳೆಯ ಸ್ನೇಹಿತರಾಗಬೇಕು. ಪ್ರೀತಿಯಿಂದ ಒಂದಾಗಬೇಕೇ ಹೊರತು ಕಾಮದಿಂದಲ್ಲ. ಕಾಯುವಿಕೆಗೆ ದಕ್ಕದ, ಒಲಿಯದ ಪ್ರೀತಿ ಜಗತ್ತಿನಲ್ಲಿ ಇಲ್ಲವೇ ಇಲ್ಲ

ಕಾಯುವಿಕೆಯ ಅರ್ಥ ಕಲಿಸಿದವಳು ರಾಧೆಯಾದರೆ, ಪ್ರೀತಿಯ ಸಾರ್ಥಕತೆ ಮೂಡಿಸಿದವನು ಕೃಷ್ಣ. ಕೃಷ್ಣನ ಪರಮ ಭಕ್ತನಿಗೆ ಪ್ರೀತಿಯ ಪಾಠ ಮಾಡಲು ಹೇಳಿಕೊಡಬೇಕೆ? ಅಂತರ್ಮುಖ ಭಾವನೆಗಳನ್ನು ಡೈರಿಯಲ್ಲಿ ಬರೆಯುತ್ತಿದ್ದೆ. ಡೈರಿ ನನ್ನನ್ನು ಹಂಗಿಸಲಾರದು ಎಂಬ ಧೈರ್ಯದಿಂದ. ಇನ್ನು ಮುಂದೆ ನನ್ನವಳೊಡನೆ ನಾನು ಎಲ್ಲವನ್ನು ಹಂಚಿಕೊಳ್ಳಬೇಕು. ಈ ಡೈರಿಯಲ್ಲಿ ಬಿಚ್ಚಿಟ್ಟ ಭಾವಗಳು ಪದಗಳಾಗುವುದು ಕಷ್ಟ. ಈ ಡೈರಿಯನ್ನು ಅವಳಿಗೆ ನೀಡಿ ಬಿಡುತ್ತೇನೆ. ಸಂಗಾತಿಗಳಲ್ಲಿ ಮುಚ್ಚು ಮರೆ ಇರಬಾರದಲ್ಲ.
ಎಲ್ಲಕ್ಕೂ ಮುಖ್ಯವಾಗಿ ನಾನು ಇದನ್ನು ಕಂಡುಕೊಂಡ ಬಗೆಯನ್ನು ಹೇಳುವೆ. ಗಂಡಸಿಗೆ ಹೆಣ್ಣಿನ ಮನಸ್ಸು ಅರ್ಥವಾಗದು. ಭಾವಗಳಿಗೆ ಸ್ಪಂದಿಸುವ ಬಗೆ ಅಷ್ಟು ತಿಳಿಯದು. ನಾನೊಬ್ಬ ಒಳ್ಳೆಯ ಓದುಗ. ನಾನು ಹೆಚ್ಚು ಓದುವ ಬರಹಗಳು "ಸಖಿ"ಯವರದ್ದು.  ನಿಮಗೆ ಅವರ ಬಗ್ಗೆ ತಿಳಿದಿದೆಯೋ ಇಲ್ಲವೋ ಗೊತ್ತಿಲ್ಲ. ನನ್ನಲ್ಲಿ ಈ ರೀತಿಯ ಆಲೋಚನೆ ಬರಲು ಕಾರಣ ಅವರು. ಬದುಕಲ್ಲಿ ಒಮ್ಮೆ ಅವರನ್ನು ಇಬ್ಬರೂ ಸೇರಿ ಭೇಟಿಯಾಗೋಣ. ಅವರ ಭಾವಚಿತ್ರ ಎಲ್ಲಿಯೂ ಇಲ್ಲ, ಹೇಗಿದ್ದಾರೋ ಗೊತ್ತಿಲ್ಲ. ಆದರೆ, ಅವರ ಬರಹಗಳು ಪ್ರಭಾವಿಸಿವೆ. ಹಸಿಬಿಸಿ ಪ್ರೇಮದ ಕುರಿತು ನನಗೆ ನಂಬಿಕೆಯಿಲ್ಲ, ಅವರ ನಿರ್ಮಲ ಪ್ರೇಮದ ಪರಿಕಲ್ಪನೆ ಮಾತ್ರ ನನ್ನನ್ನು ಅಗಾಧವಾಗಿ ಪ್ರಭಾವಿಸಿದೆ. ಇದೆಲ್ಲವನ್ನೂ ಓದಿ ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಬರೆದು ಡೈರಿಯನ್ನು ಪಕ್ಕಕ್ಕೆ ಎತ್ತಿಟ್ಟು ಮಲಗಿದ ಅಭಿನವ್.

ಎರಡೂ ಪುಟದ ಡೈರಿಯ ಭಾವಗಳೂ ಒಂದಾಗಲಿದ್ದವು. 

ಮರುದಿನ ಕಾಫಿ ಜೊತೆಗೆ ಡೈರಿಯನ್ನು ಕೊಟ್ಟ ಅಭಿನವ್, ಕಾಫಿ ಹೇಗಿದೆ ಗೊತ್ತಿಲ್ಲ, ಇಷ್ಟವಾಗದಿದ್ದಲ್ಲಿ ಹೇಳಿ.. ಬಲವಂತದ ಹೊಂದಾಣಿಕೆ ಬೇಡ. ಈ ಡೈರಿಯನ್ನು ಓದಿ ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಡೈರಿಯನ್ನು ಅವಳ ಕೈಯ್ಯಲ್ಲಿಟ್ಟು ನಡೆದ ಅಭಿನವ್. ಪರಿಣಿಕಾಳದ್ದು ಮುಗುಳ್ನಗೆ ಅಷ್ಟೇ ಉತ್ತರ.


ಕಾಫಿ ಜೊತೆಗೆ ಅಭಿನವ್ ನಡವಳಿಕೆ ಅದೇಕೋ ಇಷ್ಟವಾಗಿತ್ತು ಪರಿಣಿಕಾಳಿಗೆ. ಡೈರಿಯ ಪುಟಗಳಲ್ಲಿ ಬಿಚ್ಚಿಟ್ಟಿದ್ದ ಭಾವ ತಾನು ಬಯಸಿದ್ದೇ ಆಗಿದ್ದಿತ್ತು. ತನ್ನೆಲ್ಲಾ ಪ್ರಶ್ನೆಗಳಿಗೂ ಉತ್ತರ ದೊರೆತಿತ್ತು. ತಾನೇ ಮುಂದಾಗಿ ತನ್ನ ಡೈರಿಯನ್ನು ಅವನಿಗೆ ನೀಡಿದಳು. ಮೊದಲ ಪುಟ ತೆರೆದವನಿಗೆ "ಸಖಿ" ಎಂದು ಅವಳು ಬರೆದದ್ದು ಕಾಣಿಸಿತು. ಪ್ರಶ್ನಾರ್ಥಕ ದೃಷ್ಟಿಯಿಂದ ನೋಡಿದರೆ ಅವಳ ಮುಗುಳ್ನಗು ಎಲ್ಲಕ್ಕೂ ಉತ್ತರ ಹೇಳಿತ್ತು. 

ರಾತ್ರಿ ಹುಣ್ಣಿಮೆಯ ಬೆಳದಿಂಗಳಲ್ಲಿ ಪರಿಣಿಕಾ ಹಾಡುತ್ತಿದ್ದಳು. ಕೇಳುತ್ತಾ ಮಂತ್ರಮುಗ್ದರಂತೆ ಕುಳಿತಿದ್ದರು ಅಭಿನವ್ ಮತ್ತು ಅವನ ತಂದೆ-ತಾಯಿ.. ನಂತರ ಅಭಿನವ್ ತೋಳುಗಳಲ್ಲಿ ಸೇರಿ ಹೋಗಿದ್ದಳು ಅವನ "ಸಖಿ"

~ವಿಭಾ ವಿಶ್ವನಾಥ್

ಭಾನುವಾರ, ಸೆಪ್ಟೆಂಬರ್ 13, 2020

ನೋಡಿ ಸ್ವಾಮಿ ನಮ್ ಇಂಜಿನಿಯರ್ಸ್ ಕತೆ


ಇಂಜಿನಿಯರಿಂಗ್ ಅನ್ನೋ ಕೋರ್ಸ್ ಗೆ ಮೊದಲಿದ್ದ ಬೆಲೆ ಈಗಿಲ್ಲ. ಪಿ.ಯು.ಸಿ ಸೈನ್ಸ್ ತೆಗೆದುಕೊಂಡ ನಂತರ ಅವರ ಮುಂದೆ ಇರುವುದು ಎರಡೇ ಚಾಯ್ಸ್ ಅನ್ನೋ ತರಹಾ ಬಿಂಬಿಸಿ ಬಿಟ್ಟಿರುತ್ತಾರೆ. ಒಂದೋ ಮೆಡಿಕಲ್, ಇಲ್ಲವೇ ಇಂಜಿನಿಯರಿಂಗ್. ಒಂದು ಕಾಲದಲ್ಲಿ ಇಂಜಿನಿಯರಿಂಗ್ ಓದುತ್ತಿದ್ದಾರೆ ಅಂದರೆ ಬೆಲೆ ಇತ್ತು ಆದರೆ ಈಗ ಮನೆಯಲ್ಲಿ ಇಬ್ಬರು-ಮೂವರು ಇಂಜಿನಿಯರ್ ಗಳು. ಯಾಕೆ ಗೊತ್ತಾ ? 


"ಹುಡುಗಿ ಕುಳ್ಳಿ, ನೋಡೋಕೂ ಸುಮಾರು. ಇಂಜಿನಿಯರಿಂಗ್ ಮಾಡಿದ್ದಾಳೆ ಅಂದ್ರೆ ಮದುವೆ ಮಾಡೋಕು ಸುಲಭ ಆಗುತ್ತೆ" ಇದು ಹೆಚ್ಚಿನ ಹೆಣ್ಣು ಮಕ್ಕಳ ಮನೆಯಲ್ಲಿ ನಡೆಯುವ ಮಾತುಕತೆ. "ಕೆಲಸಕ್ಕೇನೂ ಕಳಿಸುವುದಿಲ್ಲ, ಆದ್ರೂ ಬಿ.ಇ ಮಾಡಲಿ" ಅನ್ನೋ ವಿಚಿತ್ರ ಮನೋಭಾವದವರು. "ಮೆಡಿಕಲ್ ಸೀಟ್ ಅಂತೂ ಸಿಗಲಿಲ್ಲ, ಕೊನೆಪಕ್ಷ ಇಂಜಿನಿಯರಿಂಗ್ ಗೆ ಆದ್ರೂ ಸೇರಿಕೊಂಡು ಮರ್ಯಾದೆ ಉಳಿಸು ಮಾರಾಯ" ಹೀಗೇ ಹೇಳುತ್ತಾ ಹೋದ್ರೆ ಪಟ್ಟಿ ಮುಗಿಯುವುದೇ ಇಲ್ಲ. 

ಬೇಕಾದ್ರೆ ಯಾವುದೇ ಇಂಜಿನಿಯರಿಂಗ್ ಕಾಲೇಜಿನ ಯಾವುದೇ ಬ್ರಾಂಚ್ ಗೆ ಹೋಗಿ ಕೇಳಿದರೆ ಅಲ್ಲಿ 75% ಜನ ಮತ್ತೊಬ್ಬರ ಒತ್ತಾಯಕ್ಕೋ, ಮತ್ತಾರ ಮಾತು ಕೇಳಿಯೋ ಅಥವಾ ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿಯೋ ಬಂದಿರುವುದು. ಮನೆಯಲ್ಲಿ ಮೊದಲನೇ ಮಗು ಇಂಜಿನಿಯರಿಂಗ್ ಮಾಡಿದ್ದರೆ ಎರಡನೇ ಮಗುವಿಗೂ ಇಂಜಿನಿಯರಿಂಗ್ ಫಿಕ್ಸ್. ಇವತ್ತು ಇಂಜಿನಿಯರಿಂಗ್ ಬರೀ ಡಿಗ್ರಿಯ ಹೆಸರಾಗಿ ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ಹಾಕಿಸಿಕೊಳ್ಳಲು ಮಾತ್ರ ಮೀಸಲಾದಂತಿದೆ. ಇಲ್ಲವೇ, ಗ್ರಾಜುಯೇಷನ್ ಡೇ ಅಲ್ಲಿಯ ಒಂದು ಫೋಟೋಗೆ ಮೀಸಲು.

ಇಂಜಿನಿಯರಿಂಗ್ ಓದಿದರೂ ಕೆಲಸ ಇಲ್ಲ, ಹತ್ತು ಸಾವಿರ ಸಂಬಳಕ್ಕೆ ಯಾವುದೋ Call Center ಗಳಲ್ಲಿ ಕೆಲಸ. ಮೇಲಿಂದ ಮೇಲೆ ಒತ್ತಡಕ್ಕೆ ಸಿಕ್ಕ ಸಿಕ್ಕ ಯಾವುದೋ ಕೆಲಸಕ್ಕೆ ಸೇರಿ ಅದನ್ನು ಬಿಡಲೂ ಆಗದೆ, ಉತ್ತಮ ಕೆಲಸಕ್ಕೆ ಸ್ಕಿಲ್ ಇಲ್ಲದೆ ಒದ್ದಾಡುವ ಪರಿ ನೋಡಿದರೆ ಅರ್ಥವಾಗುತ್ತದೆ. ಅಷ್ಟಕ್ಕೂ, ಈ ಕೆಲಸದ ಹಿಂದೆ ಇಂಜಿನಿಯರಿಂಗ್ ಕಾಲೇಜುಗಳ placement ವಿಭಾಗದವರ ಕೈವಾಡವಿದೆ. ಸತ್ಯ ಕತೆ ಏನು ಗೊತ್ತಾ.. ?

Placement ಆಗಿದೆ ಎಂದು ತೋರಿಸುವ ಬ್ಯಾನರ್ ನಲ್ಲಿ 200 ರಿಂದ 300 ಜನರ ಫೋಟೋ ಇರುತ್ತದೆ.100% placement ಎಂಬ ಒಕ್ಕಣೆ ಬೇರೆ.. ಆದರೆ, ಅಸಲಿಯತ್ತು ಏನೆಂದರೆ ಹೀಗೆ ಆ ಕಂಪನಿ 10 ರಿಂದ 15 ಕಾಲೇಜುಗಳಲ್ಲಿ ಆಷ್ಟಷ್ಟು ಜನರನ್ನು ಆಯ್ಕೆ ಮಾಡಿರುತ್ತದೆ. ಕಾಲೇಜು ಮುಗಿದು, ರಿಸಲ್ಟ್ ಪಡೆದ ನಂತರ ಅಲ್ಲಿಗೆ ಹೋದರೆ ಮತ್ತಷ್ಟು ರೌಂಡ್ ಗಳ ಇಂಟರ್ ವ್ಯೂ ಅವರಿಗಾಗಿ ಕಾದು ಕೂತಿರುತ್ತದೆ. ಇಂಟರ್ ವ್ಯೂ ಅಲ್ಲಿ ಪಾಸಾದರೂ ಯಾರದ್ದಾದರೂ ರೆಫರೆನ್ಸ್ ಅತೀ ಅಗತ್ಯ. ಈ ಕುರಿತು ಕಾಲೇಜಿನಲ್ಲಿ ವಿಚಾರಿಸಿದರೆ, ನಮ್ಮ ಕಾಲೇಜ್ ಕಡೆಯಿಂದ placement ಆಗಿದೆ. ಉಳಿದದ್ದು ನಿಮಗೆ ಬಿಟ್ಟದ್ದು, ಇದಕ್ಕೆ ನಾವು ಜವಾಬ್ದಾರಿಯಲ್ಲ ಎಂಬ ನಿರ್ಲಕ್ಷ್ಯದ ಉತ್ತರ. ಅಷ್ಟಕ್ಕೂ ಈ ಎಲ್ಲಾ ಘಟನೆಗಳು ನಡೆದಿರುವುದು ಸಾಫ್ಟ್ವೇರ್ ಅಥವಾ ಅವರ ಬ್ರಾಂಚ್ ಗೆ ಸಂಬಂಧಪಟ್ಟ ಕೆಲಸಕ್ಕಲ್ಲ, call center ನ, ಇಂಜಿನಿಯರಿಂಗ್ ಸಬ್ಜೆಕ್ಟ್ ಅವಶ್ಯಕತೆಯೇ ಇಲ್ಲದ ಕೆಲಸಕ್ಕೆ.

ಅಷ್ಟಕ್ಕೂ ಈ ಕೆಲಸಕ್ಕೆ ಇಷ್ಟು ಪೈಪೋಟಿ ಯಾಕೆ ಅಂತಾ ಕೇಳ್ತೀರಾ ?

ಯಾಕೆಂದರೆ, ಇಂದಿನ ಇಂಜಿನಿಯರಿಂಗ್ ಶಿಕ್ಷಣದಲ್ಲಿ ಸ್ಕಿಲ್ ಗಳು ಇರುವ ಸಿಲೆಬಸ್ ಅನ್ನು ಕಲಿಸಲಾಗುತ್ತಿಲ್ಲ. Cloud computing, Artificial intelligence, machine learning ಎಲ್ಲವೂ ಮುಂಚೂಣಿಯಲ್ಲಿದ್ದರೂ ಭೋಧಿಸಲಾಗುತ್ತಿರುವುದು ಹಳೆ ಕಾಲದ ಔಟ್ ಡೇಟೆಡ್ ಸಿಲೆಬಸ್. ಹೋಗಲಿ, ಅದನ್ನಾದರೂ ಹೇಗೆ ಕಲಿಸುತ್ತಾರೆ ಗೊತ್ತಾ..? "ನಮಗೂ ಇದರ ಬಗ್ಗೆ ಗೊತ್ತಿಲ್ಲ, ನಿಮಗೂ ಗೊತ್ತಿಲ್ಲ, ನೋಟ್ಸ್ ಕೊಡ್ತೀವಿ ಓದಿಕೊಳ್ಳಿ ಎನ್ನುತ್ತಾ ಇಂಟರ್ನಲ್ಸ್ ಪ್ರಶ್ನೆಗಳನ್ನು ಕೊಟ್ಟು ಬಿಡುತ್ತಾರೆ." ಅರ್ಧ ಕ್ಲಾಸ್ ಆಗಲೇ ಬಂಕ್ ಮಾಡಿ ಸುತ್ತುತ್ತಿರುತ್ತಾರೆ. ಇನ್ನರ್ಧ ಕ್ಲಾಸ್ ಹೀಗೆ ಹಾಳಾಗುತ್ತಿರುತ್ತದೆ. ಇಂತಹವರ ಮಧ್ಯೆ ಅಪರೂಪಕ್ಕೆ ಕೆಲವು ಲೆಕ್ಚರರ್ ಗಳು ನಿಷ್ಠೆಯಿಂದ ಕಾನ್ಸೆಪ್ಟ್ ಅರ್ಥ ಮಾಡಿಸುತ್ತಾ ಇರುತ್ತಾರೆ. ವಿಪರ್ಯಾಸ ಏನು ಅಂದರೆ ಇಂತಹಾ ಲೆಕ್ಚರರ್ ಗಳ ಸಬ್ಜೆಕ್ಟ್ ಗಳಲ್ಲಿ ರಿಸಲ್ಟ್ ಕಡಿಮೆ, ಆದರೆ ಓತ್ಲಾ ಹೊಡೆಯುತ್ತಾ ಇಂಟರ್ನಲ್ಸ್ ಮಾರ್ಕ್ಸ್ ಕೊಟ್ಟ, ಪಾಠವೇ ಮಾಡದೆ ಪ್ರಶ್ನೆ ಕೊಟ್ಟು ಬರೆಯುವಂತೆ ಮಾಡುವ ಲೆಕ್ಚರರ್ ಸಬ್ಜೆಕ್ಟ್ ಅಲ್ಲಿ 100 % ರಿಸಲ್ಟ್.


Skillful Engineer ಗಳ ಕೊಲೆಯಾಗುವುದು ಎಲ್ಲಿ ಗೊತ್ತಾ ? ಭಾಗಶಃ ಅವರ ಲೆಕ್ಚರರ್ ಗಳಿಂದಲೇ.. ಕಂಪ್ಯೂಟರ್ ಪ್ರೋಗ್ರಾಮ್ ಗಳನ್ನು ಬರೆಯಬೇಕಾದಲ್ಲಿ ಅವರು ಕೊಟ್ಟ Xerox ನ Xerox ಕಾಪಿಯಂತೆಯೇ ಅಚ್ಚಾಗಿರಬೇಕು. ಯಾಕೆಂದರೆ, ತಪ್ಪಾದರೆ ಅದನ್ನು ಸರಿ ಮಾಡುವ ವಿಧಾನ ಇಬ್ಬರಿಗೂ ಗೊತ್ತಿರುವುದಿಲ್ಲ

ಯಾವುದಾದರೂ ಇಂಜಿನಿಯರಿಂಗ್ ಮಾಡಿರುವವರನ್ನು ಕೇಳಿ ನೋಡಿ.
C program ಅಲ್ಲಿ
#include<stdio.h>
#include<conio.h>

ಈ ಎರಡು ಸಾಲುಗಳನ್ನು ಬಿಟ್ಟು ಮತ್ತೇನೂ ಗೊತ್ತಿರುವುದಿಲ್ಲ. ಕೇಳಿದರೆ ಲೆಕ್ಚರರ್ ಹೇಳಿ ಕೊಡಲಿಲ್ಲ. ಇಂಜಿನಿಯರಿಂಗ್ ಗೆ ಬಂದ ನಂತರವೂ ಲೆಕ್ಚರರ್ ಅನ್ನು ನೆಚ್ಚಿಕೊಂಡು, ಅವರ ಜೆರಾಕ್ಸ್ ನೋಟ್ಸ್ ಅನ್ನೇ ನೆಚ್ಚಿಕೊಂಡು ಇರುವುದು ಎಷ್ಟು ಸರಿ? ನಮ್ಮಷ್ಟಕ್ಕೆ ನಾವು ಗೂಗಲ್ ಮಾಡದೇ, ಟೆಕ್ಟ್ ಬುಕ್ ಓದದೇ ಇನ್ನೂ ಅವರ ಪಾಠವನ್ನೇ ನೆಚ್ಚಿಕೊಂಡು ಕೂರುವುದು ಎಷ್ಟು ಸರಿ ?

ಇನ್ನು ಇಂಜಿನಿಯರಿಂಗ್ ಪ್ರಾಜೆಕ್ಟ್ ವಿಚಾರಕ್ಕೆ ಬಂದರೆ, ಅಲ್ಲಿ ಪ್ರಾಜೆಕ್ಟ್ ಗಿಂತ, ಅಲ್ಲಿ ರಿಪೋರ್ಟ್ ಗೆ ಹೆಚ್ಚು ಬೆಲೆ. ಪ್ರಾಜೆಕ್ಟ್ ನಲ್ಲಿ ಏನು ಕಲಿತೆ ಎಂಬುದು ಅಲ್ಲಿ ಮುಖ್ಯವೇ ಆಗಿರುವುದಿಲ್ಲ. ರಿಪೋರ್ಟ್ ನ format ಸರಿ ಇದ್ದರೆ ಆಯಿತು. ಪೇಜ್ ತುಂಬಿಸು, ಆ ಇಮೇಜ್ ಹಾಕು, ಈ ಟೆಸ್ಟ್ ಇರಲಿ. ಪ್ರಾಕ್ಟಿಕಲ್ ಅಲ್ಲಿ ಏನೂ ಇರದಿದ್ದರೂ ರಿಪೋರ್ಟ್ ನಲ್ಲಿ ಥಿಯರಿ ತುಂಬಿಸಿಟ್ಟಿರಬೇಕು. ಇನ್ನು ಆ ಪ್ರಾಜೆಕ್ಟ್ ಅವರು ಮಾಡಿದ್ದಾ, ಯಾವುದೋ consultancy ಇಂದ ತಂದಿದ್ದಾ..? ಯಾವುದೂ ಮುಖ್ಯವಾಗುವುದಿಲ್ಲ. ಎಷ್ಟೋ ಲೆಕ್ಚರರ್ ಗಳೇ ಹೇಳುವುದೂ ಉಂಟು.. xxxx Consultancy ಗೆ ಹೋಗಿ ಎಂಬುದಾಗಿ. ಸ್ವಂತ ಕೌಶಲ್ಯದಿಂದ ಮಾಡಿದ ಪ್ರಾಜೆಕ್ಟ್ ಎಂದು ಹೇಳಿದರೆ ಅವರುಗಳು ನಂಬಲು ಸಿದ್ದವೇ ಆಗಿರುವುದಿಲ್ಲ. ಯಾಕೆಂದರೆ, ಅವರಿಗಿಲ್ಲದ ಜ್ಞಾನ ಅವರ ವಿದ್ಯಾರ್ಥಿಗಳಿಗಿದೆ ಎಂಬುದನ್ನು ಅವರು ಒಪ್ಪಲು ಸಿದ್ದವೇ ಇರುವುದಿಲ್ಲ.

ಕೆಲಸಕ್ಕೆ ಬೇಕಾದ ಪ್ರೋಗ್ರಾಮಿಂಗ್ ಕಲಿಯಲು ಯಾವುದಾದರೂ ಕೋರ್ಸ್ ಇಂದು ಅತ್ಯಗತ್ಯ. ಅದಕ್ಕೆ ಇಂಜಿನಿಯರಿಂಗ್ ಅನ್ನೇ ಮುಗಿಸಿರಬೇಕು ಎಂಬ ಅಗತ್ಯವಾದರೂ ಏನು ? ಆ ಕೋರ್ಸ್ ಮುಗಿಸಿ ಕೆಲಸಕ್ಕೆ ಬೇಕಾದ ಸ್ಕಿಲ್ ಪಡೆದುಕೊಂಡರೆ ಸಾಕಲ್ಲವಾ ??

ಎಂಜಿನಿಯರಿಂಗ್ ನ ಪಾಸಿಂಗ್ ಮಾರ್ಕ್ಸ್ 35. ಮೆಡಿಕಲ್ ನಲ್ಲಿ ಕೂಡಾ ಹೀಗೆಯಾ.. ? ಪಾಸಿಂಗ್ ಮಾರ್ಕ್ಸ್ ಮಾತ್ರ ಪಡೆದರೆ ಅಲ್ಲಿ ರೋಗಿಗಳು ಫೇಲ್ ಆಗಬೇಕಾಗುತ್ತದೆ.ಆದರೆ, ಇಂಜಿನಿಯರಿಂಗ್ ನ ವಿಶೇಷ ಅಂದರೆ 8 ವರ್ಷ ಸಮಯ ಇರುತ್ತದೆ, ಅಷ್ಟರೊಳಗೆ ಇಂಜಿನಿಯರಿಂಗ್ ಮುಗಿಸಿದಲ್ಲಿ ಆಯಿತು. ಅದೂ ಪಾಸಿಂಗ್ ಮಾರ್ಕ್ಸ್ ತೆಗೆದರೆ ಸಾಕು, ಬ್ಯಾಕ್ ಆಗಿರುವುದನ್ನು 2 ವರ್ಷದೊಳಗೆ ಪಾಸ್ ಮಾಡಿಕೊಳ್ಳುತ್ತಾ ಪಾಸ್ ಆದರೂ ಸಾಕು. ಯಾರೂ ಇಂಜಿನಿಯರಿಂಗ್ ಅನ್ನು ಎಷ್ಟು ವರ್ಷದೊಳಗೆ ಮುಗಿಸಿದೆ ಎಂದು ಕೇಳುವುದಿಲ್ಲ, ಎಷ್ಟು ಬಾರಿ ಒಂದು ಸಬ್ಜೆಕ್ಟ್ ಅನ್ನು ಬರೆದು ಪಾಸ್ ಮಾಡಿದೆ ಎಂದು ಕೇಳಲಾರರು, ಇಂಜಿನಿಯರಿಂಗ್ ಮುಗಿಸಿದರೆ ಆಯಿತು.

ಇಂಜಿನಿಯರಿಂಗ್ ಗೆ ಮೊದಲಿದ್ದ ಬೆಲೆ ಇಲ್ಲ, ಬೆಲೆ ಕಡಿಮೆ ಮಾಡಿರುವವರು ನಾವುಗಳೇ ಎಂಬುದೂ ಸುಳ್ಳಲ್ಲ. ಈಗ ಅದು ಕೂಡಾ ಹತ್ತರಲ್ಲೊಂದು ಡಿಗ್ರಿ ಎಂಬಂತಾಗಿದೆ. ವಿಶ್ವೇಶ್ವರಯ್ಯನವರಂತಹಾ ಇಂಜಿನಿಯರ್ ಗಳು ಈಗಿಲ್ಲ, ಅವರಿಗಿದ್ದಂತಹಾ ಗುರುಗಳು ಈಗ ಹುಡುಕಿದರೂ ಸಿಗಲಾರರು. ಎಲ್ಲೋ 5% ಅಂತಹವರು ಸಿಗಬಹುದಷ್ಟೇ.

ಇಂಜಿನಿಯರಿಂಗ್ ಹಿಂದಿರುವ ಕತೆಗಳನ್ನು ಯಾರೂ ಬಿಚ್ಚಿಡಲಾರರು. ಎಷ್ಟೋ ಡ್ಯಾನ್ಸರ್ಗಳನ್ನು, ಹಾಡುಗಾರರನ್ನು, ಚಿತ್ರಕಾರರನ್ನು, ಕತೆಗಾರರನ್ನು ಇಂಜಿನಿಯರಿಂಗ್ ತನ್ನೊಳಗೆ ಹುದುಗಿಸಿಕೊಂಡು ಕಾಲಚಕ್ರದೊಡನೆ ಸಾಗುತ್ತಿದೆ. ಹಣ ಇರಬಹುದು ಸಂತಸ..?
ಇದಕ್ಕೆ ಅವರವರೇ ಉತ್ತರಿಸಬೇಕು. ಇಂದು ನಾನು ಒಬ್ಬ ಇಂಜಿನಿಯರ್ ಎಂದು ಹೆಮ್ಮೆಯಿಂದ ಹೇಳುವವರು ಬಹಳ ಕಡಿಮೆ.
Happy Engineers ಗಿಂತಲೂ Frustrated Engineers ಹೆಚ್ಚಾಗುತ್ತಿದ್ದಾರೆ. 

"ನಾನು ಇಂಜಿನಿಯರ್" ಎಂದು ಹೆಮ್ಮೆಯಿಂದ ಹೇಳುವವರು ಹೆಚ್ಚಾಗಲಿ. ಇಂಜಿನಿಯರಿಂಗ್ ನಲ್ಲಿ ಕಲಿತಷ್ಟೂ ಕಲಿಯುವುದು ಇದ್ದೇ ಇದೆ. ಕಲಿಯುವ ಮನಸ್ಸು, ಉತ್ಸಾಹ ಬೇಕಷ್ಟೇ.. ಹೇಗೋ ಇಂಜಿನಿಯರಿಂಗ್ ಅನ್ನು ಸೇರಿ ಆಗಿದೆ, ಹೇಗೋ ಮುಗಿಸುವೆ ಎಂಬ ಇರಾದೆ ಬೇಡ. ಕಲಿತದ್ದನ್ನು ಬಳಸಿಕೊಂಡು ಒಳ್ಳೆಯ ಇಂಜಿನಿಯರ್ ಗಳಾಗಿ.

ಕೃಷಿ ಕ್ಷೇತ್ರಕ್ಕೆ ಅತ್ಯುತ್ತಮ ಆಟೊಮ್ಯಾಟಿಕ್ ಯಂತ್ರ ಅಳವಡಿಸಿರುವ ಇಂಜಿನಿಯರ್ ತಂದೆ ಇಂದು ಇನ್ನು ಎತ್ತನ್ನು ಉಪಯೋಗಿಸಿಕೊಂಡೇ ಉಳುಮೆ ಮಾಡುತ್ತಿರುವುದು ವಿಪರ್ಯಾಸ. 

ಯಾರು ಸಮಾಜದ ಸಮಸ್ಯೆಗಳಿಗೆ ಪರಿಹಾರ ನೀಡುವರೋ ಅವರೇ ನಿಜವಾದ ಇಂಜಿನಿಯರ್ ಗಳು. ಇಂಜಿನಿಯರಿಂಗ್ ಮುಗಿಸಿದರಷ್ಟೇ ಸಾಲದು, ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು.

Anyway, ಹ್ಯಾಪಿ ಇಂಜಿನಿಯರ್ ಗಳಿಗೂ, Frustrated ಇಂಜಿನಿಯರ್ ಗಳಿಗೂ Happy Engineers Day


~ವಿಭಾ ವಿಶ್ವನಾಥ್

ಭಾನುವಾರ, ಸೆಪ್ಟೆಂಬರ್ 6, 2020

'ಅ'ಲ್ಲಿಂದ Eಲ್ಲಿಯವರೆಗೂ ('ಅ' ಯಿಂದ E-learning ವರೆಗೂ)

 

ಇಂದು ಶಿಕ್ಷಣ ವ್ಯವಸ್ಥೆ ಬದಲಾಗಿದೆ. ಹಾಗೆಯೇ ಶಿಕ್ಷಕರೂ ಸಹಾ ಬದಲಾಗಿದ್ದಾರೆ. ಆದರೆ, ಗುರುಗಳು ಎಂದರೆ ಇಂದಿಗೂ ನೆನಪಾಗುವಂತೆ ಹೆಜ್ಜೆ ಮೂಡಿಸಿದ ಹಲವಾರು ಮಹಾನ್ ವ್ಯಕ್ತಿಗಳಿದ್ದಾರೆ.


ತಮ್ಮ ಹುಟ್ಟುಹಬ್ಬವನ್ನು ಶಿಕ್ಷಕರ ದಿನವೆಂದು ಆಚರಿಸುವಂತೆ ಹೇಳಿದ ರಾಧಾಕೃಷ್ಣನ್ ರವರನ್ನು ನೆನೆಯುವುದು ಅಗತ್ಯ. 

ತಮ್ಮ ಹುಟ್ಟುಹಬ್ಬವನ್ನು ವಿದ್ಯಾರ್ಥಿಗಳಿಗಾಗಿ ಮುಡಿಪಿಟ್ಟ ಅಬ್ದುಲ್ ಕಲಾಂ ಸರ್ ಮತ್ತೊಬ್ಬರು. ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ ವಿದ್ಯಾರ್ಥಿಗಳೊಡನೆ ಸಂವಾದ ನಡೆಸುತ್ತಾ ಅವರ ಕುತೂಹಲಗಳತ್ತ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ ಗುರುಗಳು ಅವರು.

ಎಷ್ಟೋ ವಿರೋಧಗಳ ನಡುವೆಯೂ ಮಹಿಳಾ ಶಿಕ್ಷಕಿಯಾಗಿ ವಿದ್ಯೆಯ ಹಣತೆ ಹಚ್ಚಿದ ಸಾವಿತ್ರಿಬಾಯಿ ಫುಲೆ ಮತ್ತೋರ್ವ ಮಹಾನ್ ಗುರು

ಗುರು ಎಂದರೆ, ನೀತಿ ಎಂದರೆ ಇತಿಹಾಸದಲ್ಲಿ ನೆನಪಾಗುವುದು ಚಾಣಕ್ಯ. ಆತನ ತಂತ್ರಗಾರಿಕೆ, ಶಿಷ್ಯನ ಸಾಮ್ರಾಜ್ಯ ನಿರ್ಮಾಣದಲ್ಲಿ ಮಾಡಿದ ಉಪದೇಶ ಇಂದಿಗೂ ಆತನನ್ನು ಎತ್ತರದ ಸ್ಥಾನದಲ್ಲಿಟ್ಟಿವೆ.

ಎಲ್ಲಾ ಯುವಕರಿಗೂ ಗುರುವಾದ ವಿವೇಕಾನಂದರು, ಮತ್ತವರ ಗುರುಗಳಾದ ರಾಮಕೃಷ್ಣ ಪರಮಹಂಸರು ಇಬ್ಬರೂ ಇಂದಿಗೂ ಲೋಕಮಾನ್ಯರು. ಪರಮಹಂಸರಂತಹಾ ಮಾರ್ಗದರ್ಶನದಲ್ಲಿ ಉತ್ತಮ ವ್ಯಕ್ತಿತ್ವವಾಗಿ ರೂಪುಗೊಂಡದ್ದು ವಿವೇಕಾನಂದರು.

ಮಹಾಭಾರತದ ದ್ರೋಣರು ಮತ್ತೊಬ್ಬ ಮಹಾನ್ ಗುರು. ಮಗ ಮತ್ತು ಶಿಷ್ಯರ ನಡುವೆ ಭೇಧ ಮಾಡದೆ ಶಿಷ್ಯರನ್ನೂ ಮಕ್ಕಳಂತೆ ಕಂಡವರು. ದ್ರೋಣರಂತಹಾ ಗುರುಗಳಿಂದ ರೂಪುಗೊಂಡ ಅರ್ಜುನ. ದ್ರೋಣರ ಪ್ರತಿಮೆಯಿಂದಲೇ ಸ್ಫೂರ್ತಿಗೊಂಡ ಏಕಲವ್ಯ.

ಸಾಂದೀಪನಿಯಂತಹಾ ಗುರುಗಳಿಂದ ಕಲಿತ ಶ್ರೀ ಕೃಷ್ಣ.

ಶಿಕ್ಷಕರು ವಿದ್ಯೆ ಕಲಿಸಿದಂತೆ, ಶಪಿಸಿದವರು ಸಹಾ ಇದ್ದಾರೆ.
ಹರ ಮುನಿದರೆ ಗುರು ಕಾಯ್ವನು
ಗುರು ಮುನಿದರೆ..??
ಪರಶುರಾಮ ಮತ್ತು ಕರ್ಣರ ಗುರು-ಶಿಷ್ಯರ ಸಂಬಂಧ ಇದಕ್ಕೆ ಸಾಕ್ಷಿ.

ಶಿಕ್ಷಣ ಬದಲಾಗಿದೆ. ಶಿಕ್ಷಕರು ಸಹಾ ಬದಲಾಗಿದ್ದಾರೆ. ಮೌಲ್ಯಗಳು ಸಹಾ ಬದಲಾಗುತ್ತಿವೆ. ವಿದ್ಯಾರ್ಥಿಗಳು ಬದಲಾಗಿದ್ದಾರೆ.
ಶಿಕ್ಷಣ ವ್ಯವಸ್ಥೆ ತಪ್ಪಿದ್ದೆಲ್ಲಿ ?
ಯಾವಾಗಲೂ ನನ್ನ ಪ್ರಿನ್ಸಿಪಾಲ್ ಸರ್ ಹೇಳುತ್ತಿದ್ದ ಮಾತು ನೆನಪಾಗುತ್ತಿದೆ

If Money is Lost , Nothing is Lost
If Health is Lost, Something is Lost
If Character is Lost, Everything is Lost

ಈಗ ಬದಲಾದ ದಿನಮಾನದಲ್ಲಿ ಈ ಮಾತು ಬದಲಾಗಿದೆ.

If Character is Lost , Nothing is Lost
If Health is Lost, Something is Lost
If Money is Lost, Everything is Lost

ಇದೇ ಬದಲಾವಣೆ ಯುವಜನತೆಯ ಹಾದಿ ತಪ್ಪಿಸಿ, ಮಾದಕ ವ್ಯಸನಕ್ಕೆ, ಸುಲಭ ರೀತಿಯಲ್ಲಿ ಹಣ ಸಂಪಾದಿಸಲು ಪ್ರಚೋದಿಸುತ್ತಿರುವುದು.

ಆಗ ಶಿಕ್ಷೆ ಇತ್ತು, ತಪ್ಪಿದಲ್ಲಿ ತಿದ್ದಿ ನಡೆಸುವ ಗುರುಗಳಿದ್ದರು. ಆದರೆ, ಈಗ ತಪ್ಪಿಗೆ ಶಿಕ್ಷೆ ನೀಡಲು
ವಿದ್ಯೆ ವ್ಯಕ್ತಿತ್ವವನ್ನು ರೂಪಿಸುತ್ತದೆ ಎನ್ನುವರು. ಆದರೆ, ಇವತ್ತು ವಿದ್ಯೆ ಕೆಲಸಕ್ಕಾಗಿ ಮಾತ್ರವೇ. ಓದಿಗೂ, ಮಾಡುವ ಕೆಲಸಕ್ಕೂ ಸಂಬಂಧವೇ ಇರದು. ಕೆಲಸಗಳು ಹಣಕ್ಕಾಗಿ ಮಾರಾಟವಾಗುತ್ತಿವೆ. ವಿದ್ಯೆಯೂ ಮಾರಾಟವಾಗುತ್ತಿದೆ.

ಶಾಲೆಯಲ್ಲಿ ಕಲಿಸದೆ ಟ್ಯೂಷನ್ ಗೆ ಬನ್ನಿ ಇಂದು ಹೇಳುವ ನೀತಿಗೆಟ್ಟ ಶಿಕ್ಷಕರಿದ್ದಾರೆ. ಪ್ರಾಜೆಕ್ಟ್ ಫೈನಲ್ ಗೆ, Thesis submission ಗೆ, ಪ್ರತಿಯೊಂದು ಸಹಿಗೂ ಹಣ ಕೇಳುವ ಶಿಕ್ಷಕರಿದ್ದಾರೆ. ಎಂಜಲು ಕಾಸಿಗೆ ಕೈಯೊಡ್ಡುವ ಶಿಕ್ಷಕರಿಂದ ಸ್ವಾಭಿಮಾನದ ಪಾಠವನ್ನು ವಿದ್ಯಾರ್ಥಿಗಳು ಕಲಿಯುವುದಾದರೂ ಹೇಗೆ ?

ವಿದ್ಯೆ ಕಲಿಸದಾ ತಂದೆ
ಬುದ್ದಿ ಹೇಳದಾ ಗುರುವು
ಬಿದ್ದಿರಲು ಬಂದು ನೋಡದಾ ತಾಯಿ
ಶುದ್ಧ ವೈರಿಗಳು ಸರ್ವಜ್ಞ

ಎಂಬ ಸರ್ವಜ್ಞನ ವಚನವೇ ಇದೆ.

ಇನ್ನೊಂದು ಬಗೆಯ ಶಿಕ್ಷಕ ವರ್ಗವಿದೆ. ತಮ್ಮ ಕೆಲಸದ ಶುರುವಿನಲ್ಲಿ ಪ್ರಾಮಾಣಿಕರಾಗಿಯೇ ಇರುತ್ತಾರೆ. ನಂತರದ ದಿನಗಳಲ್ಲಿ ತಮ್ಮ ಸಹೋದ್ಯೋಗಿಗಳನ್ನು ನೋಡಿಯೋ ಅಥವಾ ಮೇಲಿನ ಒತ್ತಡಕ್ಕೆ ಮಣಿದು ತಮ್ಮತನವನ್ನು ಬದಲಾಯಿಸಿಕೊಂಡವರಿದ್ದಾರೆ.

ಇವೆಲ್ಲದರ ನಡುವೆ ತಮ್ಮತನವನ್ನು ಉಳಿಸಿಕೊಂಡು, ಪ್ರಾಮಾಣಿಕತೆಯ ಪಾಠ ಮಾಡುತ್ತಿರುವ ಶಿಕ್ಷಕರು ಸಹಾ ಇದ್ದಾರೆ. ಅಂತಹವರಿಗೆ ಮಾತ್ರ "ಶಿಕ್ಷಕರ ದಿನದ ಶುಭಾಶಯಗಳು".

ವಿದ್ಯೆ ಕಲಿಸಿಯೂ ಶಿಕ್ಷಕರಾಗದವರು ಹಲವರಿದ್ದಾರೆ, ಅಕ್ಷರವೇ ಗೊತ್ತಿರದ ಜೀವನದ ಪಾಠ ಕಲಿಸಿದ ಹಲವಾರು ಶಿಕ್ಷಕರ ಸ್ಥಾನದಲ್ಲಿದ್ದಾರೆ. ತಾಯಿ, ತಂದೆ, ಕಿರಿಯರಿಂದ ಹಿರಿಯರವರೆಗೂ ಗುರುಗಳಾಗುತ್ತಾರೆ. ಆದರೆ, ಈಗ ಇದೆಲ್ಲದರ ಸ್ಥಾನವನ್ನು ಗೂಗಲ್ ತುಂಬುತ್ತಿದೆ. ಗೂಗಲ್ ಜ್ಞಾನವೇ ಶ್ರೇಷ್ಠ ಎಂಬ ಅಜ್ಞಾನಿಗಳೂ ಇದ್ದಾರೆ.  

ಈಗ ಮನೆ ಮನೆಗೂ ಮೊಬೈಲ್ ಮೂಲಕ "E-Learning" ಕಾಲಿಟ್ಟಿದೆ. ಶಿಕ್ಷಣ ನೇರವಾಗಿ ದೊರೆಯುತ್ತಿದೆ. ಲೈಂಗಿಕ ಕಿರುಕುಳವಿಲ್ಲ, ಪ್ರತಿಯೊಂದು ಚರ್ಯೆ, ಮಾತಿಗೂ ದಾಖಲೆ ಇದ್ದೇ ಇದೆ. ಆದರೆ, ವಿದ್ಯಾರ್ಥಿಗಳ ನಿಷ್ಠೆ ಕಾಣೆಯಾಗಿದೆ. ಆನ್ಲೈನ್ ಕ್ಲಾಸ್ ಆನ್ ಮಾಡಿ ಮತ್ತೇನೋ ಮಾಡುವುದು, ಆನ್ಲೈನ್ ಟೆಸ್ಟ್ ಗಳನ್ನು ಕಾನ್ಫರೆನ್ಸ್ ಕಾಲ್ ಮಾಡಿಕೊಂಡು ಉತ್ತರಿಸುವುದು. ಹೀಗೆ..
ತಿಳುವಳಿಕೆ ಹೆಚ್ಚಿದಂತೆಲ್ಲಾ, ಧೂರ್ತ ನಡವಳಿಕೆಗಳು ಹೆಚ್ಚುತ್ತಲೇ ಇವೆ

ಇಂತಹವರು ನೋಡಿ ಕಲಿಯಬೇಕಾದದ್ದು. ಸುಧಾಮೂರ್ತಿ ಮೇಡಂ ಅವರನ್ನು. ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ ಗುರುಗಳಿಗೆ ಗೌರವ ಸಲ್ಲಿಸುವ ಗುಣ ತೊರೆದಿಲ್ಲ. ಶಿಕ್ಷಕರಾಗಿ ಮಕ್ಕಳಿಗೆ ತಿಳುವಳಿಕೆ ಹೇಳುವುದನ್ನು ಸಹಾ ಬಿಟ್ಟಿಲ್ಲ. 

ಕಲಿಯಬೇಕೆಂದರೆ ಎಲ್ಲೆಲ್ಲೂ ಒಳ್ಳೆಯ ವಿಚಾರಗಳಿವೆ. ಅರಿವಿಗಿಂತ ದೊಡ್ಡ ಗುರುವಿಲ್ಲ. ಕಲಿಯುವ ಮನಸ್ಸು ನಮ್ಮಲ್ಲಿರಬೇಕು. ಗುರುವನ್ನು ಆಯ್ದುಕೊಳ್ಳುವ ನಮ್ಮ ಆಯ್ಕೆ ಸರಿಯಿದ್ದಲ್ಲಿ ಎಲ್ಲವೂ ಸುಸೂತ್ರ.

"ಅರಿವೆಂಬ ಗುರುವಿಗೆ ನಮಿಸುತ್ತಾ" ಜೀವನದ, ಅಕ್ಷರದ ತಿಳುವಳಿಕೆಯ ಎಲ್ಲಾ ಪಾಠ ಕಲಿಸಿದ ಗುರುಗಳಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು. 'ಅ'ಲ್ಲಿಂದ 'E'ಲ್ಲಿಯವರೆಗೂ ಬದುಕಿನ ಹಾದಿಯ ಜೊತೆಗಿರುವ ಎಲ್ಲ ಶಿಕ್ಷಕರ ಆಶೀರ್ವಾದಗಳು ಸದಾ ಹೀಗೆಯೇ ಇರಲಿ.

ಸಾವಿರಾರು ಮುಖದ ಚೆಲುವ
ಹಿಡಿದು ತೋರಿಯೂ
ಒಂದಾದರೂ ಉಳಿಯಿತೇ
ಕನ್ನಡಿಯ ಪಾಲಿಗೇ..?

ಎಂಬ ಸಾಲುಗಳು ಶಿಕ್ಷಕರ ಬದುಕಿನಲ್ಲಿ ಹೆಚ್ಚಿನಂಶ ಅನ್ವಯವಾಗುತ್ತದೆ. ಇದು ಬೆಳಿಗ್ಗೆ 9 ರಿಂದ ಸಂಜೆ 5 ರ ವರೆಗಿನ ಕೆಲಸ ಮಾತ್ರವಲ್ಲ. ಸದಾ ಕಲಿಯುತ್ತಲೇ ಇರಬೇಕು, ಕಲಿಸುತ್ತಲೇ ಇರಬೇಕು. ಸ್ಫೂರ್ತಿ ತುಂಬುತ್ತಿರುವ, ಕಲಿಕೆಯ ಮನಸ್ಸಿನ ಎಲ್ಲರಿಗೂ ಶಿಕ್ಷಕರ ದಿನದ ಶುಭಾಶಯಗಳು


~ವಿಭಾ ವಿಶ್ವನಾಥ್