ಭಾನುವಾರ, ಡಿಸೆಂಬರ್ 29, 2019

ಸೋಷಿಯಲ್ ಸಂಬಂಧ


ಪೃಥ್ವಿಯ ವಾಟ್ಸಾಪ್ ಸ್ಟೇಟಸ್, ಇನ್ ಸ್ಟಾಗ್ರಾಂ,ಫೇಸ್ ಬುಕ್ ಎಲ್ಲವೂ ತಾನು ಅಮ್ಮನಿಗೆ ಅವರ ಹುಟ್ಟುಹಬ್ಬದ ದಿನ ಕೊಡಿಸಿರುವ ಸ್ಮಾರ್ಟ್ ಫೋನ್ ಹಾಗೂ ಅವರಿಗೆ ಅದನ್ನು ಬಳಸಲು ಹೇಳಿಕೊಡುತ್ತಿರುವ ಕುರಿತೇ ಆಗಿದ್ದು, ಹುಟ್ಟುಹಬ್ಬದ ಶುಭಾಶಯಗಳು ಅಮ್ಮ ಎಂಬ ಟ್ಯಾಗ್ ಲೈನ್ ನೊಂದಿಗೆ. ಹೀಗೆ ಹೇಳಿದವನ ಬದುಕಿನ ದೊಡ್ಡ ವಿಪರ್ಯಾಸ ಏನು ಗೊತ್ತಾ? ಅವನು ಅವನ ಅಮ್ಮನಿಗೆ ಹುಟ್ಟುಹಬ್ಬದ ಶುಭಾಷಯ ಹೇಳಿಯೇ ಇರಲಿಲ್ಲ. ಇನ್ನೊಂದು ಸಂಗತಿ ಏನಪ್ಪಾ ಅಂದ್ರೆ ಅಮ್ಮನ ಹುಟ್ಟುಹಬ್ಬ ಅಂದು ಎಂದು ತಿಳಿದದ್ದು ಕೂಡಾ ಜಿ-ಮೇಲ್ ಅಕೌಂಟ್ ಕ್ರಿಯೇಟ್ ಮಾಡಲು ಹೋದಾಗ, ಅಮ್ಮ ಅವರ ಜನ್ಮ ದಿನಾಂಕವನ್ನು ತಿಳಿಸಿದ ಮೇಲೆಯೇ. ತಕ್ಷಣಕ್ಕೆ ಅವನಿಗೆ ನೆನಪಾಗಿದ್ದು ಸಾಮಾಜಿಕ ಜಾಲತಾಣಗಳು ಅರ್ಥಾತ್ ಸೋಶಿಯಲ್ ಮೀಡಿಯಾಗಳು. ತಕ್ಷಣವೇ ಫೋಟೋ ಕ್ಲಿಕ್ ಮಾಡಿ ಅಪ್ಲೋಡ್ ಮಾಡಿ "ಫೀಲಿಂಗ್ ಹ್ಯಾಪಿ ವಿಥ್ ಅಮ್ಮ" ಎಂಬ ಸಾಲನ್ನೂ ಟೈಪಿಸಿ ಹರಿಬಿಟ್ಟದ್ದ. ನಿಮಿಷಗಳಲ್ಲೇ ನೂರಾರು ಲೈಕ್, ಕಾಮೆಂಟ್ ಗಳೂ ಬಂದು ಬಿದ್ದದ್ದೂ ಆಯ್ತು.

ಆದರೆ ಅಮ್ಮನಿಗೆ ಅವತ್ತು ಮೊಬೈಲ್ ತಂದು ಕೊಡಲೂ ಒಂದು ಕಾರಣವಿತ್ತು. ಅವನ ಹೆಂಡತಿಯೂ ಇನ್ನು ಮುಂದೆ ಕೆಲಸಕ್ಕೆ ಹೋಗಲು ತೀರ್ಮಾನ ಮಾಡಿದ್ದರಿಂದ ಮಗುವನ್ನು ಮೈಸೂರಿನಲ್ಲಿದ್ದ ಅಮ್ಮನ ಸುಪರ್ದಿಗೆ ಸೇರಿಸಲು ಬಂದಾಗ, ತನ್ನ ಮಗುವಿನ ಆಟ-ಪಾಠಗಳನ್ನೆಲ್ಲಾ ಫೋಟೋ ತೆಗೆದು, ವೀಡಿಯೋ ಮಾಡಿ ಕಳುಹಿಸಲು ಹೇಳುವ ಕಾರಣಕ್ಕೆ ಅಮ್ಮನಿಗೆ ಸ್ಮಾರ್ಟ್ ಫೋನ್ ತಂದು ಕೊಟ್ಟಿದ್ದ.

ಮಗನ ಉತ್ಸಾಹಕ್ಕೆ ತಣ್ಣೀರೆರಚಲು ಇಷ್ಟಪಡದ ಅಮ್ಮ, ಸ್ಮಾರ್ಟ್ ಫೋನ್ ಬಳಸಲು ಪಟ್ಟು ಹಿಡಿದು ಕುಳಿತೂ ಆಯ್ತು. ಸಂಜೆ ಆಗ್ತಾ ಇರುವಾಗ ಆಮ್ಮ ಬಂದು "ಏ ನೋಡೋ, ವಾಟ್ಸಾಪ್ ಇಂದ ಈ ಫೋಟೋ ಸೆಂಡ್ ಆಗ್ತಾನೇ ಇಲ್ಲ" ಅಂದ್ರು. ಆಗ ಪೃಥ್ವಿ "ಅಯ್ಯೋ ಅಮ್ಮ, ಇಂಟರ್ ನೆಟ್ ಡೇಟಾ ಆನ್ ಮಾಡಿಯೇ ಇಲ್ಲವಲ್ಲ" ಅಂದು ಡೇಟಾ ಆನ್ ಮಾಡಿಕೊಟ್ಟ. ಇನ್ನೊಂದು ಸ್ವಲ್ಪ ಹೊತ್ತು ಬಿಟ್ಟು ಮತ್ತೆ ಬಂದ ಅಮ್ಮ "ನೀನು ಆವಾಗ ಏನೋ ಸರಿ ಮಾಡಿ ಕೊಟ್ಟಿದ್ಯಲ್ಲಾ, ಮತ್ತೆ ಮಾಡಿಕೊಡು. ಯಾಕೋ ಮತ್ತೆ ಅದೇತರಾ ಆಗ್ತಾ ಇದೆ" ಅಂದ್ರು.ಸ್ವಲ್ಪ ಸಿಟ್ಟು ಮಾಡಿಕೊಂಡ ಪೃಥ್ವಿ "ಏನಮ್ಮಾ ನಿಂದು, ಒಂದು ಸರಿ ಹೇಳಿದ್ರೆ ಗೊತ್ತಾಗಲ್ವಾ?" ಅಂತಾ ಹೇಳಿ ಸರಿ ಮಾಡಿಕೊಟ್ಟ. ಇನ್ನೊಂದು ಅರ್ಧ ಘಂಟೆ ಬಿಟ್ಟು ಅಮ್ಮ ಮತ್ತೆ ಬಂದು "ಏ ಪೃಥ್ವಿ, ಮರೆತೇ ಹೋಯ್ತು ನೀನು ಆವಾಗ ಹೇಳಿಕೊಟ್ಟಿದ್ದು. ಮತ್ತೆ ಹೇಳಿಕೊಡೋ" ಅಂದ್ರು. ಸಿಡಿಸಿಡಿ ಅಂತಾ ಸಿಟ್ಟು ಮಾಡಿಕೊಂಡ ಪೃಥ್ವಿ "ಎಷ್ಟು ಸಲ ಅಂತಾ ಹೇಳಿಕೊಡಬೇಕು? ಈ ಸಣ್ಣ-ಪುಟ್ಟ ವಿಷಯಗಳನ್ನೂ ನೆನಪಿಟ್ಟುಕೊಂಡು ಕಲಿಯೋಕೆ ಆಗಲ್ವಾ? ಅಷ್ಟೂ ತಿಳುವಳಿಕೆ ಬೇಡ್ವಾ..? " ಅಂತಾ ಹಿಗಾಮುಗ್ಗಾ ಬೈದು ಅಲ್ಲಿಂದ ಧಡಾರಂತಾ ಎದ್ದು ಹೊರಟ. ಇತ್ತ ಅಮ್ಮನ ಕಣ್ಣಲ್ಲಿ ನೀರು ತುಂಬಿತ್ತು. ಅಮ್ಮ ರೂಮಿಗೆ ಹೋಗಿ ಪತ್ರ ಬರೆಯುವುದಕ್ಕೆ ಶುರು ಮಾಡಿದ್ರು.

ಪೃಥ್ವಿ,

ಆಗ ನೀನಿನ್ನೂ ಚಿಕ್ಕ ಹುಡುಗ, ಬಹುಶಃ ನಿನಗೆ ಈ ಘಟನೆ ನೆನಪಿರಲಿಕ್ಕಿಲ್ಲ ಅನ್ಸುತ್ತೆ. ಅವತ್ತು ನಿನಗೆ ಅಕ್ಷರಗಳನ್ನು ತಿದ್ದಿಸುತ್ತಾ, ಅಡುಗೆ ಕೆಲಸಾನೂ ಮಾಡ್ತಾ ಇದ್ದೆ. ಸ್ಲೇಟ್ ಅಲ್ಲಿ 'ಅ' ಮತ್ತು 'ಆ' ಬರೆದು ಒಂದೆರಡು ಬಾರಿ ತಿದ್ದಿಸಿ, ಅಡುಗೆ ಮಾಡಲು ಸಿದ್ದತೆ ಮಾಡಿಕೊಳ್ಳುತ್ತಾ ಇದ್ದೆ. ಆವಾಗ ನೀನು ತಿದ್ದಲು ಹಾಕಿಕೊಟ್ಟದ್ದನ್ನು ಅಳಿಸಿ, ಹೊಸದಾಗಿ ಹೊಸದಾಗಿ ಬರೆಯಲು ಪ್ರಯತ್ನ ಮಾಡುತ್ತಾ, 'ಅ' ಬರೆಯಲು ಶುರುಮಾಡಲು ಗೊತ್ತಾಗದೆ ಬಂದಿದ್ದೆ. ಅವತ್ತು ಹೀಗೀ ಒಂದಲ್ಲಾ, ಎರಡಲ್ಲಾ, ಹತ್ತು ಸಾರಿ ನಡೆಯಿತು. ನನಗೆ ಅವತ್ತು ಕೋಪ ಬರಲಿಲ್ಲ, ಕಿರಿಕಿರಿ ಅನ್ನಿಸಲಿಲ್ಲ. ಬದಲಾಗಿ ನೀನು ಮಾಡುತ್ತಿದ್ದ ಹೊಸ ಪ್ರಯತ್ನ ಕಂಡು ಖುಷಿ ಆಯ್ತು. ನೀನು ಇವತ್ತು ಸಿಡುಕಿದ ಹಾಗೆ ನಾನೂ ನಿನ್ನ ಮೇಲೆ ಸಿಟ್ಟು ಮಾಡಿಕೊಂಡಿದ್ದರೆ ಬಹುಶಃ ನೀನಿವತ್ತು ಕೆಲಸಕ್ಕೆ ಹೋಗುವುದು ಸಾಧ್ಯವೇ ಇರ್ತಾ ಇರಲಿಲ್ಲ. ಇರಲಿ ಬಿಡು, ಹಳೆಯದನ್ನೆಲ್ಲಾ ಇವಾಗ ನೆನಪು ಮಾಡಿಕೊಂಡು ಪ್ರಯೋಜನ ಆದ್ರೂ ಏನು?

ಇನ್ನೊಂದು ಮಾತು, ಇಂಟರ್ನೆಟ್ ನಿಂದ ಇವತ್ತು ಪ್ರಪಂಚ ತುಂಬಿಹೋಗಿದೆ. ಅಪರಿಚಿತರೂ ಪರಿಚಿತವಾಗುವ ಹೊತ್ತು, ಆದರೆ.. ಪರಿಚಿತರ ಸಂಬಂಧದ ಸಂಕೋಲೆಯ ಕೊಂಡಿ ಸವೆಯುತ್ತಾ ಬರ್ತಾ ಇದೆ.

ನಿನ್ನ ವಾಟ್ಸಾಪ್, ಫೇಸ್ ಬುಕ್ ಗಳಿಗೋಸ್ಕರ ನೀನು ನನ್ನ ಜೊತೆ ತೆಗೆದುಕೊಂಡ ಸೆಲ್ಫಿ ಮತ್ತು ಫೋಟೋಗಳು ನನ್ನನ್ನು ಖುಷಿಪಡಿಸಲಿಲ್ಲ. ಬದಲಿಗೆ ಬೇಜಾರು ಮಾಡಿದವು. ಯಾಕೆ ಗೊತ್ತಾ? ನನ್ನ ಹುಟ್ಟುಹಬ್ಬಕ್ಕೆ ನೀನು ವಿಷ್ ಮಾಡಲಿಲ್ಲ ಅಂತಾ ಅಲ್ಲ. ತೋರಿಕೆಯ ಪ್ರಪಂಚಕ್ಕೋಸ್ಕರ ಕೃತಕ ನಗುವನ್ನು ಮುಖದ ಮೇಲೆ ತಂದುಕೊಂಡು ನಿನ್ನ ಅಮ್ಮನ ಜೊತೆಗೇ ನಟಿಸಿದ್ದಕ್ಕೋಸ್ಕರ. ಹುಟ್ಟುಹಬ್ಬ ಬರುತ್ತೆ, ಹೋಗುತ್ತೆ.. ಅದರಲ್ಲೇನಿದೆ ವಿಶೇಷ..? ಆದರೆ ಎಷ್ಟು ಜನರ ಹುಟ್ಟುಹಬ್ಬ ನಿನಗೆ ನೆನಪಿರುತ್ತೆ..? ಫೇಸ್ ಬುಕ್ ನೋಟಿಫಿಕೇಶನ್ ಇಂದ ಅಥವಾ ವಾಟ್ಸಾಪ್ ಗ್ರೂಪ್ ಅಲ್ಲಿ ಬೇರೆ ಯಾರೋ ಹಾಕಿರೋ ಮೆಸೇಜ್ ಇಂದ ಅವರ ಹುಟ್ಟುಹಬ್ಬ ಅಂತಾ ನೆನಪಾಗುತ್ತೆ(ಅಲ್ಲಲ್ಲಾ, ಗೊತ್ತಾಗುತ್ತೆ..!). ಆಮೇಲೆ ಕುರಿಮಂದೆಯ ತರಹಾ ನಾ ಮುಂದೆ, ತಾ ಮುಂದೆ ಅಂತಾ ವಿಷ್ ಮಾಡೋದಕ್ಕೆ ಶುರು ಮಾಡ್ತೀರಾ.

ಇಷ್ಟು ದಿನ ನಾನು ಸ್ಮಾರ್ಟ್ ಫೋನ್ ಕೊಂಡುಕೊಳ್ಳದೇ ಇದ್ದದ್ದು ಹಣ ಇಲ್ಲ ಅಥವಾ ಇಂಟರ್ನೆಟ್ ಬಳಸೋಕೆ ಬರಲ್ಲಾ ಅಂತಾ ಅಲ್ಲ. ಜೀವನದ ಪಾಠವನ್ನೇ ಕಲಿತು ಅರಗಿಸಿಕೊಂಡವರಿಗೆ ಇಂಟರ್ ನೆಟ್ ನ ಪಾಠ ಒಂದು ಲೆಕ್ಕವೇ? ನಾನು ಅದರ ಅವಶ್ಯಕತೆ ಇಲ್ಲದೆಯೂ ಸುಖವಾಗಿ ಬದುಕಿರಬಲ್ಲೆ ಎಂಬ ಕಾರಣಕ್ಕೆ ಅದನ್ನು ಉಪಯೋಗಿಸುತ್ತಾ ಇರಲಿಲ್ಲ ಅಷ್ಟೇ.. ಅಲ್ಲದೇ, ನಾನೇ ನೋಡಿದ ಎಷ್ಟೋ ಮಂದಿ ಹೀಗೇ ಸೋಶಿಯಲ್ ಮೀಡಿಯಾ ಚಟಕ್ಕೆ ಬಿದ್ದು, ಯಾರೋ.., ಎಲ್ಲೋ ಹಾಕಿದ ತೋರಿಕೆಯ ಪ್ರಪಂಚದ ಪೋಸ್ಟ್ ಗಳಿಗೆ ಲೈಕ್ ಒತ್ತಿ, ತಮ್ಮ ಜೀವನದಲ್ಲಿ ಇವೆಲ್ಲಾ ಇಲ್ಲವಲ್ಲಾ ಅಂತಾ ಕೊರಗುತ್ತಾ ತಮ್ಮ ಲೈಫ್ ನ ಖಿನ್ನತೆಯ ಬಟನ್ ಅನ್ನು ಕೂಡಾ ಒತ್ತಿಕೊಂಡಿದ್ದಾರೆ. ಅಷ್ಟೇ ಅಲ್ಲ, ಮೊದಲಿಗಿಂತ ಒಂದು ಲೈಕ್ ಕಡಿಮೆ ಆದರೂ, ಯಾಕಿರಬಹುದು ಅಂತಾ ಚಿಂತಿಸುತ್ತಾ ಕೊರಗುತ್ತಾ ಸೊರಗುತ್ತಿದ್ದಾರೆ.


ನಿನ್ನ ಮಗುವಿನ ಆಟ-ಪಾಠಗಳನ್ನು ವಾಟ್ಸಾಪ್ ಫೋಟೋ ಮತ್ತು ವೀಡಿಯೋಗಳಿಂದ ಕಣ್ತುಂಬಿಸಿಕೊಳ್ಳಬೇಡ. ನಿನ್ನ ಮಗುವಿನ ಆಟ-ಪಾಠಗಳನ್ನು ಕಣ್ತುಂಬಿಸಿಕೊಳ್ಳಲು ದಿನಾ ಅದರ ಜೊತೆಸ್ವಲ್ಪ ಸಮಯ ಕಳಿ. ಇಲ್ಲವಾದರೆ ನಿನ್ನ ಮಗುವನ್ನೂ ಅಂತರ್ಜಾಲದಲ್ಲೇ ಜಾಲಾಡುವ ಪರಿಸ್ಥಿತಿ ಬರಬಹುದು.ಯಾಕಂದ್ರೇ ಅವರು ನಿನ್ನ ಮುಂದಿನ ಪೀಳಿಗೆ ಅಲ್ವಾ? ನಿನಗಿಂತ ಮುಂದಿರುತ್ತಾರೆ. ಅಂದ ಹಾಗೆ ಕೊನೆ ಮಾತು.. ಅಂತರ್ಜಾಲದ ಕುರಿತು ನನಗೇನೂ ಬೇಸರ ಇಲ್ಲ. ಉಪಯೋಗ ಇದೆ, ಆದರೆ ಅದನ್ನು ಅರ್ಥ ಮಾಡಿಕೊಂಡು ಬಳಸಬೇಕು ಅಷ್ಟೇ. ಆಮೇಲೆ ಈ ಸ್ಮಾರ್ಟ್ಫೋನ್ ಕೂಡಾ ಬೇಡ. ಯಾಕಂದ್ರೆ ಈಗಾಗಲೇ ಇನ್ನೂ ಚೆನ್ನಾರುವ ಫೀಚರ್ ಇರುವ ಸ್ಮಾರ್ಟ್ ಫೋನ್ ತೆಗೆದುಕೊಳ್ಳುವೆ, ಇನ್ನು ಮುಂದೆ ಪತ್ರ ಬರೆಯುವ ಅವಶ್ಯಕತೆ ಇರಲ್ಲ ಅನ್ಸುತ್ತೆ. ಯಾಕಂದ್ರೆ.. ಹೇಗೂ ಇಂಟರ್ ನೆಟ್ ಇದ್ದೇ ಇರುತ್ತೆ. ಅಲ್ವಾ? ವಾಟ್ಸಾಪ್ ಮಾಡ್ತೀನಿ.

ಇಂತಿ
ನಿನ್ನ ಅಮ್ಮ

ಅಮ್ಮನ ಪತ್ರ ಮತ್ತು ಮೊಬೈಲ್ ಎರಡೂ ಬೆಳಿಗ್ಗೆ ಟೀಪಾಯ್ ಮೇಲಿತ್ತು. ಅದನ್ನು ಓದಿ ಅಮ್ಮನನ್ನು ಕ್ಷಮೆ ಕೇಳಲು ಹೊರಟ ಪೃಥ್ವಿಗೆ ಅಮ್ಮ ಕಾಣಿಸಲಿಲ್ಲ. ಮನೆಯಲ್ಲಿ ಇದ್ದರಲ್ಲವೇ? ಅಮ್ಮ ಕಾಣಿಸುವುದು...

ಗಾಬರಿಯಿಂದ ಪೃಥ್ವಿ ಹುಡುಕಲು ಶುರು ಮಾಡುವ ಹೊತ್ತಿಗೆ ಅಮ್ಮ ವಾಟ್ಸಾಪ್ ಗೆ ವೀಡಿಯೋ ಕಾಲ್ ಮಾಡಿದ್ರು .. ಅದನ್ನು ರಿಸೀವ್ ಮಾಡುವ ಹೊತ್ತಿಗೆ, ಅವನ ಮಗು ಅವನ ಕಿರುಬೆರಳಿಡಿದು ಜಗ್ಗುತ್ತಾ ಟಿ.ವಿ ಯಲ್ಲಿ ಬರುತ್ತಾ ಇರುವ ಸ್ಮಾರ್ಟ್ ಫೋನ್ ನ ಜಾಹೀರಾತಿನ ಕಡೆ ನೋಡುತ್ತಾ ಇತ್ತು.

-ವಿಭಾ ವಿಶ್ವನಾಥ್

ಗುರುವಾರ, ಡಿಸೆಂಬರ್ 26, 2019

ಪ್ರೀತಿ ಹೀಗೇನಾ?

ಶುಭ ಮಾಧವನಿಗೆ ತನ್ನ ಪ್ರೀತಿಯನ್ನು ತಿಳಿಸಿದರೂ ಮಾಧವ ನಿರಾಕರಿಸುತ್ತಾನೆ. ಮಾಧವನಿಗೆ ಶುಭ ಇಷ್ಟವಿಲ್ಲ ಎಂದೇನೂ ಅಲ್ಲ ನಂತರ ಮಾಧವ ಮತ್ತು ಶುಭಾಳ ನಡುವಿನ ಸಂಭಾಷಣೆ ಹೀಗೆ ಸಾಗುತ್ತದೆ.

"ಯಾಕೆ ನಿನಗೆ ನಾನು ಇಷ್ಟ ಇಲ್ಲ?" ಎಂದು ಶುಭ ಪ್ರಶ್ನಿಸಿದಾಗ ಮಾಧವ ಹೇಳುತ್ತಾನೆ. "ನೀನು ಇಷ್ಟ ಇಲ್ಲ ಎಂದೇನೂ ಅಲ್ಲ, ನಿನ್ನ ಮೇಲೆ ಪ್ರೀತಿ ಇಲ್ಲ ಎಂತಲೂ ಅಲ್ಲ. ನನಗೆ ನನ್ನದೇ ಆದ ನೂರಾರು ಸಮಸ್ಯೆಗಳಿವೆ. ಅದರೊಡನೆ ನಿನ್ನ ಜವಾಬ್ದಾರಿಯೂ ಸೇರಿದರೆ ನಿಭಾಯಿಸಲು ಕಷ್ಟವಾಗುತ್ತದೆ."

"ಪ್ರೀತಿ ಜವಾಬ್ದಾರಿಯಲ್ಲ, ಪ್ರೀತಿ ಬಂಧನವೂ ಅಲ್ಲ, ಅದೊಂದು ಸಹಜ ಸಂಬಂಧ ಅಷ್ಟೇ, ಜವಾಬ್ದಾರಿಯೆಂದ ಒಡನೆ ಹೆದರಿ ಓಡುವ ಹೇಡಿಯನ್ನು ನಾನು ಪ್ರೀತಿಸಿದ್ದೆನೇ ಎಂಬುದೇ ನನಗೆ ಅಚ್ಚರಿಯಾಗುತ್ತಿದೆ. ಆದರೆ ಜ್ಞಾನೋದಯವಾಗಲು ಹೆಚ್ಚು ಸಮಯ ಹಿಡಿದಿಲ್ಲ ಎನ್ನುವುದೇ ನನಗೆ ಸಂತೋಷದ ವಿಷಯ. ಇದು ನನ್ನ ಬದುಕಿನಲ್ಲಿ ಒಂದು ಮುಗಿದ ಅಧ್ಯಾಯವೇ ಸರಿ ಇನ್ನೆಂದೂ ನಾನು ನಿನಗೆ ತೊಂದರೆ ನೀಡುವುದಿಲ್ಲ. ನಮ್ಮ ಬದುಕಿನ ಹಾದಿಗಳು ಇಲ್ಲಿ ಕವಲೊಡೆದಿವೆ, ಸದ್ಯಕ್ಕೆ ಅಲ್ಲಲ್ಲ ಇನ್ನು ಮುಂದೆ ಬೇರೆ ಬೇರೆಯಾಗಿ ಬದುಕುವುದೇ ವಿಧಿಬರಹ ಎನ್ನಿಸುತ್ತದೆ. ಆದರೆ ನೆನಪಿನಲ್ಲಿಟ್ಟುಕೋ ನನ್ನ ಪ್ರೀತಿ ಸುಳ್ಳಲ್ಲ, ನೀನು ನನ್ನನ್ನು ಪ್ರೀತಿಸಿದ್ದೂ ಸುಳ್ಳಲ್ಲ ಇದು ನಿಜವೇ ಆಗಿದ್ದರೆ ಸೇರೋಣ. ಗುಡ್ ಬೈ" ಎಂದು ಹೇಳಿದ ಶುಭ ಹಿಂದಿರುಗಿ ನೋಡದಂತೆ ಹೊರಟುಬಿಡುತ್ತಾಳೆ.

ಆಕೆ ಹಿಂತಿರುಗಿ ನೋಡಲೇ ಇಲ್ಲ, ಆದರೆ ಮಾಧವ ತನ್ನ ಬದುಕನ್ನೊಮ್ಮೆ ಸಿಂಹಾವಲೋಕನ ಕ್ರಮದಲ್ಲಿ ನೆನಪಿಸಿಕೊಂಡ.

ರಾಘವ ಅಯ್ಯರ್, ಮಾಧವ ಅಯ್ಯರ್ ಇಬ್ಬರೂ ಯಮುನಾ ಮತ್ತು ಶಂಕರ್ ಅಯ್ಯರ್ ಅವರ ಇಬ್ಬರು ಗಂಡು ಮಕ್ಕಳು, ಇವರೆಲ್ಲರ ಮುದ್ದಿನ ಕಣ್ಮಣಿ ಮನೆಮಗಳು ಭೂಮಿ. ರಾಘವ ಮತ್ತು ಮಾಧವರ ಮುದ್ದಿನ ತಂಗಿ ಭೂಮಿ. ಹೆಚ್ಚು ಮಾತಾಡುವ ಮಾಧವನಿಗೂ, ಏಕಾಂತವನ್ನೇ ಇಷ್ಟಪಡುವ ರಾಘವನಿಗೂ ಭೂಮಿ ಅಚ್ಚುಮೆಚ್ಚು. ಎಲ್ಲರ ಗುಟ್ಟೂ ಗೊತ್ತಿರುವ ಭೂಮಿ ಸಹನಾಶೀಲೆ ಅಲ್ಲದೆ ಬುದ್ದಿವಂತೆ ಸಹಾ.

ಹೆಚ್ಚಿನ ಗೆಳೆಯರಿದ್ದರೂ ಮಾಧವ ತನ್ನ ಮನದ ಮಾತುಗಳನ್ನೆಲ್ಲಾ ಹಂಚಿಕೊಳ್ಳುವದು ಭೂಮಿಯಲ್ಲಿಯೇ. ಮಾಧವ ಮತ್ತು ರಾಘವರ ವಯಸ್ಸಿನ ಅಂತರ ಕಡಿಮೆ ಇದ್ದರೂ ಅಣ್ಣನೊಂದಿಗೆ ಮಾಧವನ ಒಡನಾಟ ಕಡಿಮೆಯೇ, ಹೆಚ್ಚು ಕಡಿಮೆ ಇಲ್ಲವೆಂದರೂ ತಪ್ಪಿಲ್ಲ. ತನ್ನ ಗೆಳೆಯ-ಗೆಳತಿಯರು, ಆಟ, ಶಾಲೆ, ಪ್ರವಾಸ ಹೋದ ಕ್ಷಣಗಳನ್ನು ಹಂಚಿಕೊಳ್ಳುವಷ್ಟು ನಿರ್ಭೀತಿಯಿಂದಲೇ ತನ್ನ ಪ್ರೀತಿ, ಪ್ರೀತಿಸುವ ಹುಡುಗಿಯ ಕುರಿತು ಹೇಳುತ್ತಿದ್ದ ಭೂಮಿಗೆ.

ರಾಘವ ಬಹಳ ಬುದ್ದಿವಂತ, ಸಹಜವಾಗಿಯೇ ಮಾಧವನ ಓದಿನ ಮೇಲೆಯೂ ಸಹಾ ಅಷ್ಟೇ ನಿರೀಕ್ಷೆಗಳಿದ್ದವು ಆದರೆ ಮಾಧವನಿಗೆ ಆಟ, ಗೆಳೆಯರು, ಪರೋಪಕಾರದಲ್ಲಿಯೇ ಒಲವು ಹೆಚ್ಚು. ಇಬ್ಬರ ವಯಸ್ಸಿನ ಅಂತರ 3 ವರ್ಷಗಳೇ ಆದರೂ ಅವರಿಬ್ಬರ ಒಡನಾಟದ ಮೇಲೆ ಯಾವ
ಪ್ರಭಾವವನ್ನೂ ಬೀರಿರಲಿಲ್ಲ, ಆದರೆ ತನ್ನಣ್ಣನಿಂದಾಗಿ ತನ್ನ ಮೇಲೆ ಪ್ರಭಾವವಿರುವುದು ಅವನನ್ನು ಪ್ರತಿಯೊಂದರಲ್ಲೂ ಯೋಚಿಸಿ ಹೆಜ್ಜೆ ಇಡುವಂತೆ ಮಾಡಿತ್ತು. ಹೀಗಿರುವಾಗ ಅಣ್ಣ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಅನ್ನು ಆಯ್ಕೆ ಮಾಡಿದ್ದರಿಂದ ಮನೆಯವರ ಆಯ್ಕೆಯ ಮೇರೆಗೆ ತಾನೂ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಗೆ ಸೇರುತ್ತಾನೆ.

ಮೊದಲನೇ ವರ್ಷ ಎಲ್ಲರಿಗೂ ಕಾಮನ್ ಸಬ್ಜೆಕ್ಟ್, ಆದುದರಿಂದ ಮೊದಲ ವರ್ಷದಲ್ಲಿ ಎಲ್ಲರೂ ಇರುತ್ತಾರೆ. ಎರಡನೇ ವರ್ಷದ ಬ್ರಾಂಚ್ ಎಂಟ್ರಿಯಲ್ಲಿ ಬರೀ ಸಿ.ಎಸ್ ವಿದ್ಯಾರ್ಥಿಗಳು ಒಂದಾಗುತ್ತಾರೆ, ಮೂರನೇ ಸೆಮ್ ಬಳಿಕವಂತೂ ಎಲ್ಲರಿಗೂ ಎಲ್ಲರೂ ಪರಿಚಿತರಾಗುತ್ತಾರೆ. ಅವರ ತರಗತಿಯಲ್ಲಿ ಲಕ್ಷ್ಮಿ ಪಾಟೀಲ್ ಹೆಚ್ಚು ಅಂಕ ಗಳಿಸುವ ಹುಡುಗಿ. ಲಕ್ಷ್ಮಿಯ ನಂತರದ ರಿಜಿಸ್ಟರ್ ನಂಬರ್ ಮಾಧವನದ್ದು. ಪರೀಕ್ಷೆಗಳಲ್ಲೆಲ್ಲಾ ಲಕ್ಷ್ಮಿಯ ಹಿಂದೆಯೇ ಮಾಧವನ ಸ್ಥಾನ. ಆದರೆ ರ್ಯಾಂಕ್ ನಲ್ಲಿ ಲಕ್ಷ್ಮಿಯದ್ದು ಮೊದಲಾದರೆ, ಮಾಧವನದ್ದು ಕೊನೆಯಿಂದ ಮೊದಲು.

ಮಾಧವನಿಗೆ ಗೆಳೆಯರ ಬಳಗ ಹೆಚ್ಚು. ಕಲ್ಲನ್ನು ಬೇಕಾದರೂ ಮಾತನಾಡಿಸುವ ಛಾತಿ ಮಾಧವನಿಗೆ ಇತ್ತು. ಕಾಲೇಜಿನ ವಾಚ್ ಮ್ಯಾನ್ ನಿಂದ ಹಿಡಿದು ಹೆಚ್.ಓ.ಡಿ ವರೆಗೂ ಎಲ್ಲರಿಗೂ ಆತ ಚಿರಪರಿಚಿತ. ಲಕ್ಷ್ಮಿಯದ್ದು ತಾನಾಯಿತು, ತನ್ನ ಓದಾಯಿತು ಎನ್ನುವ ಸ್ವಭಾವ, ತಾನಾಗಿಯೇ ಹೆಚ್ಚು ಯಾರನ್ನೂ ಮಾತನಾಡಿಸದ ಆಕೆಗೆ ಹೆಚ್ಚು ಗೆಳೆಯರಿರಲಿಲ್ಲ. ಅಲ್ಲದೇ ತಾನು ಚೆನ್ನಾಗಿಲ್ಲವೆಂಬ ಕೀಳಿರಿಮೆಯೂ ಅವಳಿಗಿತ್ತು. ಆಕೆ ಸ್ವಲ್ಪ ಹೆಚ್ಚೆನ್ನಿಸುವಷ್ಟೇ ದಪ್ಪವಿದ್ದ ಕಾರಣ ಆಕೆಗೆ ಗುಂಪಿನಲ್ಲಿ ಬೆರೆಯಲು ಹಿಂಜರಿಕೆ. ಮಾಧವ ಎಲ್ಲವನ್ನೂ ಗಮನಿಸುತ್ತಿದ್ದ. ಅವನಿಗೆ ಸುಮ್ಮನಿರಲು ಆಗದೆ ಆಕೆಯನ್ನು ಮಾತನಾಡಿಸಲು ಯತ್ನಿಸಿ ಸಫಲನಾಗಿದ್ದ. ನೋಡಲು ಚೆನ್ನಾಗಿದ್ದರೂ ಕೊಂಚ ದಪ್ಪವಾಗಿದ್ದ ಅವಳನ್ನು ಸ್ನೇಹ ಮಾಡಲು ಮಾಧವನಿಗೆ ಯಾವ ಹಿಂಜರಿಕೆಯೂ ಇರಲಿಲ್ಲ. ಅಲ್ಲದೇ ಸ್ನೇಹ ನೋಟ, ಜಾತಿಗಳ ಆಧಾರದ ಮೇಲೆ ನಿರ್ಧಾರವಾಗುವುದೂ ಇಲ್ಲವಲ್ಲ. ನಂಬರ್, ನೋಟ್ಸ್ ಗಳ ಬದಲಾವಣೆಯಿಂದ ಆರಂಭವಾದ ಸ್ನೇಹವು ಲಕ್ಷ್ಮಿಯ ಮನದಲ್ಲಿ ಅನುರಾಗದ ಅಲೆಯನ್ನು ಬೀಸಿತ್ತು. ಇದರಿಂದ ಅವಳೂ ಕಾಲಕ್ರಮೇಣ
ಬದಲಾಗುತ್ತಲಿದ್ದಳು. ಮಾಧವನ ಸ್ನೇಹದಿಂದ ಅವಳೂ ಆತ್ಮಸ್ಥೈರ್ಯ ತುಂಬಿಕೊಂಡು ಬದಲಾದಳು. ಆದರೂ ಓದಿನಲ್ಲಿ ಮೊದಲ ಸ್ಥಾನವನ್ನು ಬಿಟ್ಟುಕೊಡಲಿಲ್ಲ. ನಾಲ್ಕನೇ ಸೆಮ್ ನ ಅಂತ್ಯದಿಂದ ಆರಂಭವಾದ ಪ್ರೀತಿಯು ಹೆಮ್ಮರವಾಗಿ ಬೆಳೆದಿತ್ತು. ಆದರೆ ಮಾಧವನಿಗೆ ಪ್ರೀತಿಯಿದ್ದರೂ ಆತ ಅದನ್ನು ತೋರ್ಪಡಿಸಿಕೊಳ್ಳಲಿಲ್ಲ, ಕೊನೆಯ ವರ್ಷದಲ್ಲಿ ಆಕೆಯೇ ಮಾಧವನಿಗೆ ತನ್ನ ಪ್ರೀತಿಯನ್ನು ನಿವೇದಿಸಿದಳು. ಆದರೆ ಮಾಧವ ನಯವಾಗಿಯೇ ಆಕೆಯ ಮನವಿಯನ್ನು ತಿರಸ್ಕರಿದ್ದ.

ಪ್ರೀತಿ ಒಂದುಗೂಡಲು ಎಲ್ಲವೂ ಸಹಕಾರಿಯಾಗಿಬೇಕು ಆದರೆ ಇಲ್ಲಿ ವ್ಯತಿರಿಕ್ತವಾಗಿತ್ತು. ಮಾಧವ ತನ್ನ ಪ್ರೀತಿಯನ್ನು ಮುಚ್ಚಿಟ್ಟು ಅವಳ ಪ್ರೀತಿಯನ್ನೂ ತಿರಸ್ಕರಿಸಲು ಕಾರಣ ಅವಳ ದಪ್ಪವೂ ಆಗಿರಲಿಲ್ಲ, ಇಬ್ಬರ ಜಾತಿ ಬೇರೆಯಾದರೂ ಜಾತಿಯೂ ಅದಕ್ಕೆ ಕಾರಣವಾಗಿರಲಿಲ್ಲ. ತಿರಸ್ಕರಿಸಲು ಮಾಧವನಿಗೆ ಅವನದ್ದೇ ಆದ ಕಾರಣವೊಂದಿತ್ತು, ಯಾರಿಗೂ ತಿಳಿಸಲಾರದ ನೋವೊಂದಿತ್ತು, ಆದರೂ ಅವನ ನಿರ್ಧಾರವೂ ಅಷ್ಟೇ ಧೃಡವಾಗಿತ್ತು. "ನಿನ್ನ ಜೀವನದುದ್ದಕ್ಕೂ ನಾನೊಬ್ಬ ಒಳ್ಳೆಯ ಗೆಳೆಯನಾಗಿರಬಲ್ಲೆ" ಎಂದಷ್ಟೇ ಹೇಳಿ ಅಲ್ಲಿಂದ ಹೊರಟಿದ್ದ.

ಅಂದು ಭೂಮಿಯ ಬಳಿ ಅದೆಲ್ಲವನ್ನೂ ಹೇಳಿ ಬೇಸರಿಸಿಕೊಂಡಿದ್ದ. ಅಲ್ಲದೇ ಅವಳಿಗೂ ಆ ಕಾರಣದ ಅರಿವು ಇದ್ದುದರಿಂದ ಅವಳೂ ಇಲ್ಲಿ ನಿಸ್ಸಹಾಯಕಳು. ಕಾಲ ಎಲ್ಲವನ್ನೂ ಬದಲಾಯಿಸುತ್ತದೆ. ಹಾಗೆಯೇ ಮಾಧವ ಮತ್ತು ಲಕ್ಷ್ಮಿಯ ಜೀವನ ಪಥಗಳೂ ಬದಲಾದವು.

ಮಾಧವ ಅಣ್ಣನ ಸ್ಟಾರ್ಟಪ್ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದರೆ, ಲಕ್ಷ್ಮಿಗೆ ಕೆಲದಿನಗಳ ನಂತರ ಎಂ.ಎನ್.ಸಿ ಯಲ್ಲಿ ಒಳ್ಳೆಯ ಸಂಬಳದ ಕೆಲಸವೇ ಸಿಕ್ಕಿತ್ತು. ನಿರಾಕರಣೆಯಾದ ಪ್ರೇಮದ ಫಲವೋ, ಬೆಂಗಳೂರಿನ ಜೀವನ ಶೈಲಿಯೋ ಲಕ್ಷ್ಮಿ ಸಂಪೂರ್ಣವಾಗಿ ಬದಲಾಗಿದ್ದಳು. ಕನಿಷ್ಟ ತನ್ನ ಗೆಳೆಯ-ಗೆಳತಿಯರೊಂದಿಗೆ ಮಾತನಾಡಲೂ ಸಮಯ ನೀಡಲಿಲ್ಲ. ಎಲ್ಲವನ್ನೂ,ಎಲ್ಲರನ್ನೂ ನಿರ್ಲಕ್ಷಿಸಿದ್ದಳು. ಮಾಧವ ಕೂಡಾ ಇದರಿಂದ ಸಂಪೂರ್ಣವಾಗಿ ನೊಂದಿದ್ದ. ಇದರಿಂದ ಹೊರಬರಲು ಕೆಲದಿನ ರಜೆ ಹಾಕಿ ಆತ ತನ್ನ ಆತ್ಮೀಯ ಗೆಳೆಯ ಶಶಾಂಕ್ ಊರಿಗೆ ಹೊರಟ.

ಶಶಾಂಕ್ ಮಾಧವನ ಇಂಜಿನಿಯರಿಂಗ್ ನ ಗೆಳೆಯ. ಮೂಡಿಗೆರೆಯಲ್ಲಿದ್ದ ಶಶಾಂಕ್ ಮನೆಗೆ ಮಾಧವ ಹೋಗಿದ್ದ. ಸ್ನೇಹ , ಪ್ರೀತಿಯ ಮೋಡಿಯಿಂದ ಹೊರಬರಬೇಕೆಂದುಕೊಂಡಿದ್ದವನು ಪ್ರೀತಿಯ ಬಲೆಗೆ ಸಿಲುಕಿದ್ದ. ಶಶಾಂಕ್ ತನ್ನ ತಂಗಿ ಶುಭಾಳಿಗೆ ಮಾಧವನ ಕುರಿತು ಎಲ್ಲವನ್ನೂ ಹೇಳಿರುತ್ತಾನೆ. ಶುಭಾಳಿಗೆ ಅವನನ್ನು ನೋಡದೆಯೇ ಅವನ ಕುರಿತು ಒಲವು ಮೂಡಿರುತ್ತದೆ. ಇತ್ತ ಶುಭಾಳ ನಡತೆ ಮತ್ತು ಉಪಚಾರಕ್ಕೆ ಮನಸೋತಿದ್ದ ಮಾಧವ. ಶಶಾಂಕ್ ಗೆ ಇದೆಲ್ಲದರ ಅರಿವಿದ್ದರೂ ಅವನು ಇದಕ್ಕೆ ಅಡ್ಡಿಪಡಿಸುವುದಿಲ್ಲ. ಒಂದು ತಿಂಗಳಿದ್ದರೂ ಇಬ್ಬರೂ ಇದರ ಕುರಿತು ಮಾತನಾಡಿರುವುದಿಲ್ಲ. ಇವನು ಊರಿಗೆ ಹೊರಟ ಕೊನೆಯ ದಿನ ಶುಭಾಳೇ ತನ್ನ ಪ್ರೀತಿಯನ್ನು ತಿಳಿಸಿದರೂ ಈತ ನಿರಾಕರಿಸುತ್ತಾನೆ.

ಶುಭಾ ಇದನ್ನು ಶಶಾಂಕ್ ಗೆ ತಿಳಿಸಿದಾಗ ಅವನು ಗೆಳೆಯನ ಕುರಿತೂ ಏನೂ ಹೇಳಲಾಗದೆ, ತನ್ನ ತಂಗಿಗೆ ಸಮಾಧಾನ ಮಾಡಲು "ಎಲ್ಲದಕ್ಕೂ ಸಮಯ ಕೂಡಿಬರಬೇಕು" ಎಂದು ಸುಮ್ಮನಾಗಿದ್ದ.

ಇತ್ತ ಇದೆಲ್ಲವನ್ನೂ ನೆನಪಿಸಿಕೊಂಡು ಊರಿಗೆ ಬಂದ ಮಾಧವ ಬಹಳ ಬೇಸರದಲ್ಲಿದ್ದ. ಭೂಮಿಯ ಬಳಿ ಬಂದ ಮಾಧವ ಇದೆಲ್ಲವನ್ನೂ ತಿಳಿಸಿ ಬಹಳವೇ ಬೇಸರಪಟ್ಟುಕೊಂಡಿದ್ದ."ನನಗೆ ನನ್ನ ಪ್ರೀತಿ ದಕ್ಕಲು ಸಾಧ್ಯವಿಲ್ಲ, ನಾನೊಬ್ಬ ದುರಾದೃಷ್ಟವಂತ" ಎಂದು ಪೇಚಾಡಿಕೊಳ್ಳುತ್ತಿರುವಾಗ ರಾಘವ ಇದನ್ನೆಲ್ಲಾ ಕೇಳಿಸಿಕೊಂಡು ಆಶ್ಚರ್ಯ ಪಟ್ಟಿದ್ದ, ಬೇಕುಬೇಕೆಂದು ಇದನ್ನೆಲ್ಲಾ ಕೇಳಿಸಿಕೊಳ್ಳದಿದ್ದರೂ ಅಚಾನಕ್ ಆಗಿ ರಾಘವ ಇದನ್ನು ಕೇಳಿಸಿಕೊಂಡಿದ್ದ.

ಅಂದೇ ಸಂಜೆ ರಾಘವ ಭೂಮಿಯೊಂದಿಗೆ ಈ ವಿಚಾರವಾಗಿ ಚರ್ಚಿಸಿದ್ದ. ಭೂಮಿಗೆ ಮಾಧವನ ಕುರಿತು ರಾಘವ ಕಾಳಜಿ ತೋರುತ್ತಿರುವುದು ಆಶ್ಚರ್ಯ ತಂದಿತ್ತು. ಆದರೂ ಅವಳು ಅದನ್ನು ತೋರ್ಪಡಿಸದೆ ಮಾಧವನ ಪ್ರೇಮದ ಎಲ್ಲಾ ವಿಚಾರವನ್ನೆಲ್ಲಾ ರಾಘವನೆದುರಿಗೆ
ತೆರೆದಿಟ್ಟಿದ್ದಳು, ಆದರೆ ಆ ಒಂದು ವಿಚಾರವನ್ನು ಬಿಟ್ಟು. ಮಾಧವ ತನ್ನ ಪ್ರೀತಿಯನ್ನು ಮುಚ್ಚಿಟ್ಟು ತಾನಾಗಿಯೇ ತನ್ನ ಪ್ರೀತಿಯನ್ನು ನಿರಾಕರಿಸುವುದು ಯಾಕೆಂದು ಮಾತ್ರ ತಿಳಿಸಲಿಲ್ಲ. ಅವಳಾದರೂ ಅದನ್ನು ಹೇಗೆ ಹೇಳಿಯಾಳು?

ಮಾಧವ ತನ್ನ ಪ್ರೀತಿಯನ್ನು ನಿರಾಕರಿಸುವುದರ ಹಿಂದಿರುವ ಕಾರಣವೇ ರಾಘವ. ಹೌದು, ರಾಘವನ ಪ್ರೇಮ ಪ್ರಕರಣವೇ ಇದೆಲ್ಲದರ ಹಿಂದಿನ ಕಾರಣ. ಅದೂ ಒಂದೆರಡು ವರ್ಷದ್ದಲ್ಲ, 15 ವರ್ಷಗಳಿಂದ ನಡೆಯುತ್ತಾ ಬಂದಿರುವ ನಿಲ್ಲದ ತೆರೆಮರೆಯ ಪ್ರೀತಿ. ಆದರೆ ಇದು ಸಫಲವಾಗಲು
ತೊಡಕೊಂದಿತ್ತು.

ಯಮುನಾ ಮತ್ತು ಶಂಕರ್ ಅಯ್ಯರ್ ದಂಪತಿಗಳದ್ದು ಸಂಪ್ರದಾಯಬದ್ದವಾದ ಜೀವನ. ಪ್ರೀತಿಯಷ್ಟೇ ದ್ವೇಷವನ್ನೂ ತೀವ್ರವಾಗಿ ಬದುಕುತ್ತಿದ್ದವರು ಅಯ್ಯರ್. ತನ್ನ ತಮ್ಮ ಕೇಶವ ಅಯ್ಯರ್ ಪ್ರೀತಿಸಿ ಬೇರೆ ಜಾತಿಯ ಹುಡುಗಿಯನ್ನು ಮದುವೆಯಾದನೆಂಬ ಒಂದೇ ಕಾರಣಕ್ಕೆ ಅವನನ್ನು 30 ವರ್ಷಗಳಿಂದ ದೂರವೇ ಇಟ್ಟಿದ್ದರು ಕಡೇಪಕ್ಷ ನೋಡಲೂ ಇಚ್ಚಿಸಿರಲಿಲ್ಲ. ಮತ್ತೆ ರಾಘವನದ್ದೂ ಅದೇ ಕತೆಯಾಗಿತ್ತು. ಪ್ರೀತಿ ಎಂದರೆ ಸಿಡಿದು ಬೀಳುವ ತಂದೆ ರಾಘವನ ಪ್ರೇಮ ವಿವಾಹವನ್ನು ಒಪ್ಪಲು ಸಾಧ್ಯವೇ ಇರಲಿಲ್ಲ, ರಾಘವ ನೋಡಲು ಸೌಮ್ಯವಾಗಿದ್ದರೂ ಅವನೂ ಹಠವಾದಿಯೇ, ಅವನೂ ತನ್ನ 15 ವರ್ಷದ ಪ್ರೀತಿಯನ್ನು ಬಿಡಲು ಸಿದ್ದವಿರುವುದಿಲ್ಲ. ಅಲ್ಲದೇ ಮೊದಲ ಮಗನ ಪ್ರೇಮ ಪ್ರಕರಣದಿಂದಲೇ ಘಾಸಿಯಾಗಿರುತ್ತದೆ. ಅಲ್ಲದೇ ತಾನೂ ಅದೇ ದಾರಿ ತುಳಿದರೆ ತಪ್ಪಾಗುತ್ತದೆ ಎಂಬ ದೂರಾಲೋಚನೆಯಿಂದ ಮಾಧವ ಪ್ರೀತಿಗಿಂತ ಮಗನ ಕರ್ತವ್ಯವೇ ಹೆಚ್ಚು ಎಂದು ಅದನ್ನು ಪಾಲಿಸಲು ತ್ಯಾಗಮಯಿಯಾಗಿ ತನ್ನ ಪ್ರೀತಿಯನ್ನು ತ್ಯಾಗ ಮಾಡುತ್ತಲೇ ಬಂದಿದ್ದ. ಉಳಿದವರ ಕಣ್ಣಿಗೆ ಅವನೊಬ್ಬ ಮೋಸಗಾರನಂತೆ ಕಂಡುಬಂದರೂ ಭೂಮಿಗೆ ಮಾತ್ರ ಅವನದ್ದು ನಿರ್ಮಲವಾದ ಪ್ರೀತಿ. ಇತ್ತ ರಾಘವನಿಗೂ ಹೇಳಲಾಗದೆ, ಮಾಧವನಿಗೂ ಸಹಾಯ ಮಾಡಲಾಗದೆ ಆಕೆ ತೊಳಲಾಡುತ್ತಿದ್ದಳು. ಆದರೆ ಸಮಯವೇ ಅವಳ
ತೊಳಲಾಟಕ್ಕೊಂದು ವಿರಾಮ ಹಾಡುವುದರಲ್ಲಿತ್ತು.

ಭೂಮಿಯ ಹತ್ತಿರ ರಾಘವ ಮಾತನಾಡಿ ಹೊರಟ ನಂತರ ಅರ್ಧಘಂಟೆಯ ನಂತರ ಮಾಧವ ಬಂದ. ಆಗ ಭೂಮಿ ನಿನ್ನ ಪ್ರೀತಿಯ ವಿಚಾರವೆಲ್ಲಾ ತಿಳಿಯಿತು ಎಂದಳು. "ನಾನು ತಿರಸ್ಕರಿಸುವುದಕ್ಕೆ ಕಾರಣ ಅವನ ಪ್ರೀತಿ ಎಂಬುದನ್ನು ಹೇಳಿಬಿಟ್ಟೆಯಾ?" ಎಂದನು."ಇಲ್ಲ" ಎಂದಳು ಅಷ್ಟರಲ್ಲಿ ರೂಂ
ಬಳಿ ಏನೋ ಸದ್ದಾಯಿತು. ಆ ವಿಚಾರವನ್ನೂ ಅಲ್ಲೇ ಬಿಟ್ಟು ಇಬ್ಬರೂ ಬಾಗಿಲ ಬಳಿ ಹೋದರು ಆಗ ಅಲ್ಲಿ ಯಾರೂ ಇರಲಿಲ್ಲ. ನಮ್ಮ ಭ್ರಮೆ ಇರಬೇಕು ಎಂದುಕೊಂಡ ಇಬ್ಬರೂ ಸುಮ್ಮನಾದರು.

ಇದಾದ ಒಂದು ವಾರದ ನಂತರ, ಯಾವತ್ತೂ ತಮ್ಮನೊಡನೆ ಮನಬಿಚ್ಚಿ ಮಾತನಾಡಿರದ ರಾಘವ ಮೊದಲ ಬಾರಿಗೆ ತನ್ನ ತಮ್ಮನೊಡನೆ ಮಾತನಾಡಿದ್ದ. ಅವನ ಅಂತರಂಗದ ನೋವುಗಳನ್ನು ಹಂಚಿಕೊಂಡಿದ್ದ. "ನಿನ್ನ ನೋವು ನನಗೆ ಅರ್ಥವಾಗುತ್ತದೆ ಆದರೆ ನಿನ್ನ ಭಾವನೆಗಳು, ತಳಮಳಗಳು ನನಗೆ ಅರ್ಥವಾಗುತ್ತದೆ, ಆದರೆ ಇಷ್ಟು ದಿನ ಸ್ವಾರ್ಥಿಯಾಗಿಬಿಟ್ಟಿದ್ದೆ, ನಿನ್ನ ಭಾವನೆಗಳು ನನಗೆ ಕಾಣಿಸಲೇ ಇಲ್ಲ. ಎಲ್ಲವನ್ನೂ ನನ್ನಿಂದ ಮುಚ್ಚಿಟ್ಟು ನೋವು ಪಡುವುದಾದರೂ ಏಕೆ?
ಪ್ರೀತಿಸಿದವರು ಬಿಟ್ಟು ಹೋದ ನೋವು ನನಗೆ ತಿಳಿದಿದೆ. 15 ವರ್ಷಗಳ ಪ್ರೀತಿಯನ್ನು ಕಳೆದುಕೊಂಡು ನಾನೂ ನೋವು ಪಡುತ್ತಿದ್ದೇನೆ. ನೀನಾದರೂ ಚೆನ್ನಾಗಿರು" ಎನ್ನುತ್ತಾ "ನೀನು ನಿನ್ನ ಪ್ರೀತಿಯನ್ನು ನಿರಾಕರಿಸಲು ಕಾರಣ ತಿಳಿಸು, ನಾನು ಅದನ್ನು
ಸರಿಪಡಿಸುತ್ತೇನೆ." ಎಂದನು ರಾಘವ. ಅಣ್ಣನ ವರ್ತನೆ, ಮಾತುಗಳು ಮಾಧವನಿಗೆ ಅಚ್ಚರಿಯುಂಟು ಮಾಡಿದ್ದವು. ಅಲ್ಲದೇ ಅವನ ಪ್ರೀತಿ ತಪ್ಪಿಹೋಗಲು ಕಾರಣ ತಿಳಿಯಲು
ಬಯಸಿದ್ದ. ಅದನ್ನು ಅರಿತವನಂತೆ ರಾಘವನೇ ಮುಂದುವರಿಸಿದ, "ಎಲ್ಲಾ ಹಂತದಲ್ಲಿಯೂ ಸರಿಯಾಗಿದ್ದ ನನ್ನ ಪ್ರೀತಿ ಮದುವೆಯ ನಂತರದ ನನ್ನ ಕನಸುಗಳಿಗೆ ಅಡ್ಡವಾಗಿತ್ತು. ಅಪ್ಪ, ಅಮ್ಮ, ನಿಮ್ಮಿಂದ ದೂರವಾಗಿ ಹೋಗಬೇಕೆಂಬುದು ಅವಳ ಆಸೆಯಾಗಿತ್ತು. ಪ್ರೀತಿ ಎಲ್ಲರನ್ನೂ ಒಂದುಗೂಡಿಸಬೇಕೇ ವಿನಃ ಯಾರನ್ನೂ ದೂರಗೊಳಿಸಬಾರದು. ಆದ್ದರಿಂದ ನಾನೇ ನಮ್ಮಿಬ್ಬರ ಪ್ರೀತಿಗೆ ಅಂತ್ಯ ಹಾಡಿದೆ. ಮನೆಯಲ್ಲಿ ಈಗಾಗಲೇ ಹಲವಾರು ಸಂಬಂಧಗಳನ್ನು ನೋಡುತ್ತಿದ್ದಾರೆ. ಎಲ್ಲರಿಗೂ ಇಷ್ಟವಾದವಳನ್ನೇ ನಾನು ಮದುವೆಯಾಗುವೆ. ಮದುವೆಯ ನಂತರವೂ ಪ್ರೀತಿ ಮೂಡಬಹುದು. ಆದರೆ ನಿನ್ನ ಬದುಕು ಹಾಗಾಗದಿರಲಿ. ಆ ಹುಡುಗಿಯ ಜೊತೆಗೇ ನಿನ್ನ ಮದುವೆ ಮಾಡಿಸುವೆ" ಎಂದು ಎಲ್ಲವನ್ನೂ ತಾನೇ ಮಾತನಾಡಿದ ರಾಘವ.

ಇದೆಲ್ಲವನ್ನೂ ಕೇಳಿಸಿಕೊಳ್ಳುತ್ತಿದ್ದ ಭೂಮಿಗೆ ಯಾರ ತ್ಯಾಗ ದೊಡ್ಡದು, ಯಾರ ಪ್ರೀತಿ ಹೆಚ್ಚಿನದ್ದು ಎಂದು ತೀರ್ಮಾನಿಸಲೇ ಕಷ್ಟವಾಗುತ್ತಿತ್ತು. ಅನುರಾಗ ಗಂಡು-ಹೆಣ್ಣಿನ ಮಧ್ಯೆ ಅರಳಿದರೆ, ಪ್ರೀತಿ ಪ್ರತಿ ಮನುಷ್ಯರ ಮನವನ್ನೂ ಬೆಸೆಯುತ್ತದೆ.

ರಾಘವ ಎಲ್ಲರೂ ಒಪ್ಪಿದ ಹುಡುಗಿಯನ್ನೇ ಮದುವೆಯಾಗಿ ಪ್ರೀತಿಸತೊಡಗಿದ, ಆನಂತರ ಮಾಧವನ ಜೀವನಕ್ಕೆ ರಾಘವ ಶುಭಾಳನ್ನೇ ಜೋಡಿಯಾಗಿಸಿದ. ಆತ ಪ್ರೀತಿಸಿದ್ದ ಹುಡುಗಿ ಶುಭಾ ಎಂಬ ಸುಳಿವನ್ನೆ ಬಿಟ್ಟುಕೊಡದೆ ಅವರಿಬ್ಬರ ನಿಶ್ಚಿತಾರ್ಥವನ್ನು ಮಾಡಿ ಮುಗಿಸಿದ್ದ.

ಇವೆಲ್ಲದರ ನಡುವೆ ಯಾರಿಗೂ ಅರಿವಿಗೇ ಬಾರದ ಸಂಗತಿಯೊಂದಿತ್ತು. ರಾಘವ ಪ್ರೀತಿಸಿದ್ದ ಹುಡುಗಿ ಪ್ರತಿಮಾ ಬೇಕಂತಲೇ ಆತನಿಂದ ದೂರಾಗಿದ್ದಳು. ರಾಘವನ ಮನೆಯವರಿಗೆ ತಾನು ಅವನ ಗೆಳತಿಯಾಗಿ ಮಾತ್ರ ಗೊತ್ತು ಅವನ ಹೆಂಡತಿಯಾಗಿ ತನ್ನನ್ನು ಒಪ್ಪಿಕೊಳ್ಳುವರೋ ಇಲ್ಲವೋ ಎಂಬ ದ್ವಂದ್ವದಲ್ಲಿದ್ದಾಗ ರಾಘವನನ್ನು ಭೇಟಿ ಮಾಡಲು ಆತನ ಮನೆಗೆ ಬಂದಿದ್ದಳು. ಆ ಸಮಯದಲ್ಲಿಯೇ ಅವಳು ಭೂಮಿ ಮತ್ತು ಮಾಧವ ಮಾತನಾಡುತ್ತಿರುವುದನ್ನು ಕೇಳಿಸಿಕೊಂಡಿದ್ದಳು.ತಮ್ಮ ಪ್ರೀತಿಯೇ ಅಡ್ಡಿಯಾಗಿರುವುದನ್ನು ಕೇಳಿಸಿಕೊಂಡ ಆಕೆ ಅಂದೇ ಒಂದು ನಿರ್ಧಾರಕ್ಕೆ ಬಂದಿದ್ದಳು. ಪ್ರೀತಿ ಎಂದಿಗೂ ವಿವಾಹದಲ್ಲೇ ಪರ್ಯಾವಸಾನವಾಗಬೇಕಿಲ್ಲ. ಅಲ್ಲದೇ ಒಳ್ಳೆಯ ರೀತಿಯಿಂದ ದೂರಾದರೆ ರಾಘವ ನನ್ನ ನೆನಪಿನಲ್ಲೇ ಕೊರಗುತ್ತಾನೆ. ದೂರಾಗದಿದ್ದರೆ ಮತ್ತೊಂದು ಪ್ರೀತಿ ದೂರಾಗುತ್ತದೆ.ಮತ್ತೊಬ್ಬರ ಪ್ರೀತಿಯ ಸಮಾಧಿಯ ಮೇಲೆ ತನ್ನ ಪ್ರೀತಿಯ ಸೌಧ ಕಟ್ಟುವುದಾದರೂ ಹೇಗೆ? ಎಂದು ಆಲೋಚಿಸಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಳು.

ಪ್ರೀತಿಗೆ ಕೊನೆಯಾದರೂ ಎಲ್ಲಿ? ಎಲ್ಲೋ ಹುಟ್ಟಿದ ಪ್ರೀತಿ, ಯಾರಿಗೋ ಅರ್ಪಿತವಾಗಿ ಮತ್ತಾರಲ್ಲೋ ಪರ್ಯಾವಸಾನವಾಗುತ್ತದೆ. ಅರಿವಿಗೇ ಬಾರದೆ ಬೆಸೆದುಕೊಳ್ಳುವ ನಂಟೇ ಪ್ರೀತಿಯಾ? ತ್ಯಾಗವಿಲ್ಲದ ಪ್ರೀತಿ ಇದೆಯಾ? ನನಗಂತೂ ಯಾವಾಗಲೂ ಕಾಡುವ ಪ್ರಶ್ನೆ "ಪ್ರೀತಿ ಹೀಗೇನಾ?"

-ವಿಭಾ ವಿಶ್ವನಾಥ್

ಭಾನುವಾರ, ಡಿಸೆಂಬರ್ 22, 2019

ದಾರಿದೀಪ

ಮೈಸೂರಿನಿಂದ ಶಿವಮೊಗ್ಗಕ್ಕೆ ಹೊರಟಿದ್ದ ಬಸ್ಸನ್ನು ತಲುಪುವುದು ಕಷ್ಟವೇನೋ ಅನ್ನಿಸುತ್ತಿತ್ತು ಆದರೂ ಆ ಬಸ್ಸನ್ನು ಅದು ಹೊರಡುವುದಕ್ಕಿಂತ ಮುನ್ನವೇ ತಲುಪಬೇಕೆಂಬ ಹಟದಲ್ಲಿ ಕೊಂಚ ಬಿರುಸಾಗಿಯೇ ಹೆಜ್ಜೆ ಹಾಕಿ ಆ ಬಸ್ಸನ್ನು ಹತ್ತಿ ಕುಳಿತೆ ಆದರೂ ನನಗೇಕೋ ಇಂದು ಆಯಾಸ ಎನ್ನಿಸಲಿಲ್ಲ, ನನಗಾಗಿಯೇ ಈ ಬಸ್ಸು ಕಾಯುತ್ತಿತ್ತೇನೋ ಎಂಬಂತೆ ನಾನು ಬಂದ ತಕ್ಷಣವೇ ಬಸ್ಸು ಹೊರಟುಬಿಟ್ಟಿತು. ಎರಡು ಸೀಟುಗಳಿರುವ ಕಡೆ ಕಿಟಕಿಯ ಪಕ್ಕದಲ್ಲೇ ಸೀಟು ಸಿಕ್ಕಿತ್ತು. ಪಕ್ಕದಲ್ಲಿ ಯಾರೂ ಕುಳಿತಿರಲಿಲ್ಲ, ಒಂದರ್ಥದಲ್ಲಿ ಇದು ಒಳ್ಳೆಯದೇ ಆಯಿತು ಎಂದುಕೊಂಡು ನೆಮ್ಮದಿಯಾಗಿಯೇ ಕುಳಿತೆ. ಅಷ್ಟರಲ್ಲಿ ನೆಮ್ಮದಿಯನ್ನು ಭಂಗಗೊಳಿಸುವನಂತೆ ಬಂದ ಕಂಡಕ್ಟರ್ "ಟಿಕೆಟ್, ಟಿಕೆಟ್ ಎಲ್ಲಿಗಪ್ಪಾ..?" ಎನ್ನುತ್ತಾ ಟಿಕೆಟ್ ನೀಡಲು ಬಂದ. ಹೌದು ನಾನು ಎಲ್ಲಿಗೆ ಹೊರಟಿದ್ದೆ ಎಂದು ನೆನಪಿಸಿಕೊಂಡೆ ನೆನಪಾಗಲಿಲ್ಲ.

ಮರೆತಿದ್ದರಲ್ಲವೇ ನೆನೆಪಿಕೊಳ್ಳಲು..? ಗೊತ್ತುಗುರಿ ಇಲ್ಲದ ಪಯಣಕ್ಕೆ ಅಣಿಯಾಗಿ ಹೊರಟಿದ್ದೆ ಆದರೆ ಮನಸ್ಸಿನ ಮೂಲೆಯಲ್ಲೆಲ್ಲೋ ಶಿವಮೊಗ್ಗ ಎಂಬ ಹೆಸರು ಸುಳಿದು ಮರೆಯಾಗಿತ್ತು. ಅಷ್ಟರಲ್ಲಿ ಕಣ್ಣಿಗೆ ಕಂಡ ಶಿವಮೊಗ್ಗದ ಬಸ್ಸನ್ನು ಹತ್ತಿದ್ದೆ. ಗೊತ್ತು ಗುರಿಯಿಲ್ಲದೆ ತಿರುಗುವ ಈ ಮುದುಕನ ಬಗ್ಗೆ ಕಾಳಜಿಯಾದರೂ ಯಾರಿಗಿದೆ? ಮತ್ತೊಮ್ಮೆ ಕಂಡಕ್ಟರ್ ಕೇಳಿದ "ಅಯ್ಯಾ, ಎಲ್ಲಿಗೆ ಹೋಗಬೇಕು..?" 

"ಶಿವಮೊಗ್ಗಕ್ಕೆ ಒಂದು ಟಿಕೆಟ್ ಕೊಡಿ" ಎಂದು ಹಣ ಕೊಟ್ಟೆ ಬರಬೇಕಾದ ಬಾಕಿ ಚಿಲ್ಲರೆಯನ್ನು ಟಿಕೆಟ್ ಹಿಂದೆಯೇ ಬರೆದು ಟಿಕೆಟ್ ಅನ್ನು ವಾಪಸ್ ಕೊಟ್ಟ ಕಂಡಕ್ಟರ್. ಈ ಕಂಡಕ್ಟರ್ ಗಳೇ ಹೀಗಲ್ಲವೇ..? ಮುದುಕ ಮರೆತು ಹೋದರೆ ನನಗೇ ಲಾಭ ಎಂದುಕೊಂಡು ಟಿಕೆಟ್ ನ ಹಿಂದೆ ಚಿಲ್ಲರೆಯನ್ನು ಬರೆದು ಕೊಟ್ಟ ಆದರೆ ಅವನಿಗೇನು ಗೊತ್ತು ನನ್ನ ನೆನಪಿನ ಶಕ್ತಿಯ ಬಗ್ಗೆ..? ಎಂದು ಒಂದು ಮುಗುಳ್ನಗು ಮುಖದ ಮೇಲೆ ಹಾದು ಹೋಗುವಷ್ಟರಲ್ಲಿ ಆಗಲೇ ಮೈಸೂರಿನ ಹೊರವಲಯವನ್ನು ದಾಟಿಯಾಗಿತ್ತು. ಆದರೆ ಅದಕ್ಕಿಂತ ವೇಗವಾದ ನನ್ನ ಮನೋವೇಗದಲ್ಲಿ ನಾನು ಆಗಲೇ ಶಿವಮೊಗ್ಗ ತಲುಪಿ ಆಗಿತ್ತು.

ಶಿವಮೊಗ್ಗದಿಂದ 3 ಕಿಲೋಮೀಟರ್ ದೂರದ ಸಂಪಿಗೆಪುರ ನನ್ನ ಊರು. ಅಂದಿನ ಬಾಲ್ಯದ ದಿನಗಳು ಎಷ್ಟು ಚೆಂದವಲ್ಲವೇ? ಸ್ಕೂಲಿಗೆ ಚಕ್ಕರ್ ಹಾಕಿ ಕೆರೆಯಲ್ಲಿ ಮನದಣಿಯುವವರೆಗೂ ಈಜುತ್ತಿದ್ದುದು, ಸೀಬೆ, ಮಾವಿನ ತೋಪುಗಳಿಗೆ ಲಗ್ಗೆ ಹಾಕಿ ಅಲ್ಲಿನ ಹಣ್ಣುಗಳನ್ನು ತಿನ್ನುತ್ತಿದ್ದದ್ದು.. ಸಂತೆ, ಜಾತ್ರೆಯ ದಿನಗಳನ್ನು ಮರೆಯುವಂತೆಯೇ ಇರಲಿಲ್ಲ. ಆದರೆ ಕಾಲ ಎಷ್ಟು ನಿರ್ದಯಿ ಎಂದರೆ ಯಾರನ್ನೂ ಲೆಕ್ಕಿಸದೆ ಓಡುತ್ತಲೇ ಇರುತ್ತದೆ. ಹಾಗೇ ಓಡುವ ಕಾಲದ ಜೊತೆಗೆ ಓಡಿದ ನಾನು ಸರ್ಕಾರಿ ಕೆಲಸಕ್ಕೆ ಸೇರಿ ಹುಟ್ಟಿದೂರನ್ನು ಮರೆತು ಇದ್ದಬದ್ದ ಊರುಗಳನ್ನೆಲ್ಲಾ ಅಲೆದು ಕೊನೆಗೆ ಮೈಸೂರಿನಲ್ಲಿ ನೆಲೆಯಾದೆ. ಕೈಯಲ್ಲಿ ಇಂದು ಹಣ ಇರುವುದಕ್ಕೆ ಪರವಾಗಿಲ್ಲ ನನಗಿಷ್ಟ ಬಂದಂತೆ ಬದುಕುತ್ತಿದ್ದೇನೆ. ಅಪ್ಪ,ಅಮ್ಮ,ಹೆಂಡತಿ ಎಲ್ಲರೂ ತಮ್ಮ ಕಾಲ ಮುಗಿಸಿ ಹೊರಟರು. ಈಗ ಮಗನ ಯಜಮಾನಿಕೆಯಲ್ಲಿ ಸೊಸೆಯ ದರ್ಬಾರು ನಡೆಯುತ್ತಿದೆ. ಆ ಸ್ವೀಟ್ ತಿನ್ನಬೇಡಿ, ಆ ತಿಂಡಿ ತಿನ್ನಬೇಡಿ ಅದು ಎಣ್ಣೆ ತಿಂಡಿ, ಸಿಗರೇಟ್ ಸೇದಬೇಡಿ, ಒಬ್ಬರೇ ಎಲ್ಲೂ ಹೋಗಬೇಡಿ.. ಹೀಗೆ ನನ್ನ ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂತಹಾ ವಿಚಾರಗಳೇ.. ಒಂದೆರಡು ಸಲ ಇದೆಲ್ಲಾ ಅತಿ ಎನ್ನಿಸಿ ಮನೆಬಿಟ್ಟು ಹೊರಟಾಗ ಹುಡುಕಿದ್ದರು ಆಮೇಲಾಮೇಲೆ ಅವರೇ ಸುಮ್ಮನಾದರು. ಈಗಲೂ ಹಾಗೇ ಆಗುತ್ತದೆ ಎಂದು ಒಂದು ನಗೆ ನಗುವಷ್ಟರಲ್ಲಿ ಮಂಡ್ಯ ಬಂದಿತ್ತು.

ಮಂಡ್ಯದಲ್ಲಿ ಹತ್ತಿದ ಒಬ್ಬ ಹುಡುಗ ಸೀದಾ ಬಂದು ನನ್ನ ಪಕ್ಕ ಕುಳಿತ. ನನ್ನ ಮಗನಿಗಿಂತ ಚಿಕ್ಕ ವಯಸ್ಸು. ಹಾಗೆ ಕುಳಿತವನನ್ನು ಏಕೋ ಮಾತಾಡಿಸಬೇಕು ಎನ್ನಿಸಿತು ಹಾಗೆ ಮಾತನಾಡಿಸಲು ಶುರು ಮಾಡಿದೆ. ಏನಪ್ಪಾ ನಿನ್ನ ಹೆಸರು ಅಂದೆ ಅದಕ್ಕೆ ಅವನು "ಶಂಕರ್ ಅಂತಾ.. ನಿಮ್ಮ ಹೆಸರೇನು ಅಂಕಲ್? ಎಲ್ಲಿಗೆ ಹೊರಟಿದ್ದೀರಾ..?" ಎಂದು ಕೇಳಿದ. "ನನ್ನ ಹೆಸರು ಮಾಧವರಾವ್ ಅಂತಾ ಶಿವಮೊಗ್ಗಕ್ಕೆ ಹೊರಟಿದ್ದೇನೆ" ಎಂದೆ. "ಏನಂಕಲ್ ಒಬ್ಬರೇ ಹೋಗ್ತಾ ಇದ್ದೀರಿ? ಆಂಟಿ ಬಂದಿಲ್ವಾ?" ಎಂದ. ಅದಕ್ಕೆ ನಾನು "ಆಂಟಿ ನನ್ನ ಬಿಟ್ಟು ಮೊದಲೇ ಹೋಗಿದ್ದಾಳೆ ಕಣಪ್ಪಾ ಆದರೆ ಶಿವಮೊಗ್ಗಕ್ಕಲ್ಲ.. ದೇವರ ಹತ್ತಿರ" ಎಂದೆ. "ಹೋ ಸ್ಸಾರಿ ಅಂಕಲ್, ಮತ್ಯಾಕೆ ಹೋಗ್ತಾ ಇದ್ದೀರಾ ಅಲ್ಲಿಗೆ? ನಿಮ್ಮ ಮಕ್ಕಳನ್ನು ನೋಡೋಕಾ?" ಎಂದೆ. "ಇಲ್ಲಪ್ಪಾ ಆಲ್ಲಿ ಯಾರೂ ಇಲ್ಲ, ಮಕ್ಕಳನ್ನು ನೋಡೋಕಲ್ಲ.. ಮಕ್ಕಳನ್ನು ನೋಡದೇ ಇರೋದಕ್ಕೆ ಐ ಮೀನ್ ಮನೆ ಬಿಟ್ಟು ಹೊರಟಿದ್ದೇನೆ" ಅಂದೆ. ಅದಕ್ಕೆ ಅವನು " ನಿಮಗೆ ಒಂದು ಕಥೆ ಹೇಳ್ಲಾ ಅಂಕಲ್? " ಎಂದ. "ಸರೀನಪ್ಪಾ ಹೇಳು" ಎಂದೆ . 

ಅವನು ಹೇಳಿದ್ದನ್ನು ಸ್ವಲ್ಪ ಚಿಕ್ಕದಾಗಿ ನಾನೇ ಹೇಳುತ್ತೇನೆ ಕೇಳಿ. ಮಂಜಣ್ಣನವರಿಗೆ ವಯಸ್ಸಾಗಿತ್ತು ಆದರೆ ತಿನ್ನುವ ಬಾಯಿಚಪಲ ಜಾಸ್ತಿ ಆಗಿತ್ತು. ಕೊಲೆಸ್ಟ್ರಾಲ್, ಬೀ.ಪಿ, ಶುಗರ್, ಎಲ್ಲವೂ ಇತ್ತು ಆದರೂ ಸಿಹಿತಿಂಡಿ, ಎಣ್ಣೆತಿಂಡಿಗಳ ಚಪಲ ಬೇಡ ಎಂದರೂ ಬಿಡುವ ಸ್ಥಿತಿಯಲ್ಲಿರಲಿಲ್ಲ. ಜೊತೆಗೆ ಹೊರಗಡೆ ಹೋದಾಗ ಒಂದೆರಡು ಸಾರಿ ಬಿದ್ದು ಗಾಯವನ್ನೂ ಮಾಡಿಕೊಂಡಿದ್ದರು. ಹಾಗಾಗಿ ಒಬ್ಬರನ್ನೇ ಹೊರಗೆ ಹೋಗಬೇಡಿ ಎಂದದಕ್ಕೆ ಸಿಟ್ಟು ಮಾಡಿಕೊಂಡು ಮನೆಬಿಟ್ಟು ಹೋಗಿದ್ದರು. ಅವರನ್ನು ಹುಡುಕಲು ಪೋಲೀಸ್ ಕಂಪ್ಲೈಂಟ್ ಕೂಡಾ ಕೊಟ್ಟಿದ್ದೆವು ಆದರೆ ಎರಡು ದಿನ ಬಿಟ್ಟು ಅವರೇ ವಾಪಸ್ ಬಂದಿದ್ದರು, ಇದು ಮತ್ತೆರಡು ಸರಿ ಮರುಕಳಿಸಿದಾಗ ಪೋಲೀಸರು ಬೈದರು ಹಾಗಾಗಿ ಹೇಗೂ ಬರುತ್ತಾರಲ್ಲ ಎಂದು ಸುಮ್ಮನಾದಾಗ ಅವರು ಬಂದದ್ದು ಶವವಾಗಿ.. 

ಅದಾದ ನಂತರ ಅವನೇ ಮುಂದುವರಿಸಿದ "ಈ ಕಥೆಯಲ್ಲಿ ಬರುವ ಮಂಜಣ್ಣ ಬೇರಾರೋ ಅಲ್ಲ ಆತ ನನ್ನ ತಂದೆ" ಎಂದ. ನಾನಿನ್ನೂ ಅದೇ ಆಘಾತದಲ್ಲಿರುವಾಗ ಹೇಳಿದ " ಇನ್ನಾದರೂ ಆ ಕಥೆ ಮರುಕಳಿಸದಿರಲಿ, ಚಿಕ್ಕವನೆಂದು ನನ್ನ ಮಾತನ್ನು ನಿರ್ಲಕ್ಷ್ಯ ಮಾಡದಿರಿ. ಯೋಚಿಸಿ" ಎಂದ. ಅದೇ ಗುಂಗಿನಲ್ಲಿ ಯೋಚನೆ ಮಾಡುತ್ತಾ ನನ್ನ್ ಭವಿಷ್ಯವನ್ನು ನೆನಪಿಸಿಕೊಳ್ಳುತ್ತಾ ನಿದ್ದೆ ಮಾಡಿ ಎದ್ದಾಗ ಮನ ತಿಳಿಯಾಗಿತ್ತು, ಬಸ್ಸು ಗಂಡಸಿ ದಾಟಿತ್ತು.
ಆದರೆ ನನ್ನ ಪಕ್ಕದಲ್ಲಿದ್ದ ಆ ಹುಡುಗನ ಪತ್ತೆಯೇ ಇರಲಿಲ್ಲ..

ಮೂರು ಸೀಟಿನಲ್ಲಿ ಕೂತಿದ್ದವರನ್ನು ಹೇಗೂ ಮೈಸೂರಿನಿಂದ ಇದ್ದರಲ್ಲಾ ಎಂದು "ನನ್ನ ಪಕ್ಕ ಕುಳಿತಿದ್ದ ಹುಡುಗ ಎಲ್ಲಿ ಇಳಿದ?" ಎಂದು ಕೇಳಿದಾಗ ಅವರು " ಯಾವ ಹುಡುಗ? ಏನು ಕನಸು ಕಾಣ್ತಾ ಇದ್ದೀರಾ, ಹೇಗೆ? ಮೈಸೂರಿನಿಂದ ನೀವು ಒಬ್ಬರೇ ಇರೋದು.." ಎಂದರು.

ಅಯೋಮಯ ಸ್ಥಿತಿಯಲ್ಲೇ ನಾನು ಅರಸೀಕೆರೆಯಲ್ಲಿ ಇಳಿದು ವಾಪಾಸ್ ಮೈಸೂರಿಗೆ ಹೊರಟೆ.

~ವಿಭಾ ವಿಶ್ವನಾಥ್

ಗುರುವಾರ, ಡಿಸೆಂಬರ್ 19, 2019

ಹೋಳಿಯ ದಿನದ ಕಾಮದಹನ

ಅವತ್ತು ರಂಗುರಂಗಿನ ಓಕುಳಿಯ ಹೋಳಿ ಹಬ್ಬ. ಹೋಳಿಯ ದಿನದಂದು ಕಾಮದಹನದ ಕಥೆ ಕೇಳಿದ್ದೆ. ಆದರೆ ಅಂದೇ ಒಬ್ಬ ಕಾಮುಕನ ಕೊನೆಯಾದುದನ್ನೂ ತಿಳಿಯುವಂತಾಯಿತು. ಆತನ ಹೆಸರು ಪ್ರಣವ್. ಚಿಕ್ಕಂದಿನಲ್ಲಿ ಒಂದೇ ವಠಾರದಲ್ಲಿ ಇದ್ದವರು, ಆತ ನಮ್ಮ ಶಾಲೆಗೇ ಬರುತ್ತಿದ್ದದ್ದು..
ಚಿಕ್ಕಂದಿನ ಪರಿಚಯಗಳ ನೆನಪಿನ ಕೊಂಡಿ ಮಸುಕಾಗಿರಬಹುದು ಆದರೆ ಮರೆತಂತೂ ಹೋಗಿರುವುದಿಲ್ಲ. ನಮ್ಮ ಗೆಳೆಯರ ಗುಂಪಿನ ವಾಟ್ಸಾಪ್ ಬಳಗದಲ್ಲಿ ಬೆಳ್ಳಂಬೆಳಗ್ಗೆ ಅವನ ಫೋಟೋ ಹಾಕಿ ರೆಸ್ಟ್ ಇನ್ ಪೀಸ್ ಪ್ರಣವ್ ಎಂದು ಹಾಕಿದ್ದರು. ಕೆಲಸದ ಒತ್ತಡದಿಂದ ಅವನ ಸಾವಿನ ಕಾರಣವನ್ನು ಸ್ಪಷ್ಟವಾಗಿ ತಿಳಿಯಲು ಸಾಧ್ಯವಾಗಿರಲಿಲ್ಲ. ವೀಕೆಂಡ್ ನಲ್ಲಿ ನಮ್ಮ ಗೆಳೆಯರ ಗುಂಪು ಕೂಡಿದಾಗ ನಾವು ಚರ್ಚಿಸದ ವಿಷಯವೇ ಇರುತ್ತಿರಲಿಲ್ಲ. ಹಾಗೆಯೇ ಪ್ರಣವ್ ನ ವಿಚಾರ ಕೂಡಾ ಚರ್ಚೆಯ ಒಂದು ಭಾಗವಾಯಿತು. ಚರ್ಚೆಯಾದ ವಿಷಯದ ಸಂಕ್ಷೇಪಿಸದ ಭಾಗ ನಿಮ್ಮ ಮುಂದಿದೆ.
ಚಿಕ್ಕಂದಿನಲ್ಲಿ ಕನ್ನಡ ಶಾಲೆಯಲ್ಲೇ ಓದಿದ್ದ ಆತ ತೀರಾ ಬುದ್ದಿವಂತನೇನೂ ಅಲ್ಲದಿದ್ದರೂ ಅವನ ವರ್ತನೆ ಸರಿಯಾಗಿಯೇ ಇತ್ತು. ಆತನ ಅಕ್ಕ ಕೂಡಾ ಅದೇ ಶಾಲೆಯಲ್ಲೇ ಓದುತ್ತಿದ್ದಳು. ಆದರೆ ಆಕೆ ತುಂಬಾ ಚುರುಕು ಆದ್ದರಿಂದ ಸಹಜವಾಗಿಯೇ ಮನೆಯಿಂದ ಈತನ ಓದಿನ ಕುರಿತು ನಿರೀಕ್ಷೆ ಇತ್ತು. ಅತಿ ನಿರೀಕ್ಷೆ ಮತ್ತು ಒತ್ತಡದಿಂದ ಅಸಹಾಯಕತೆಗೋ ಏನೋ ಈತನಿಗೆ ಸುಳ್ಳಿನ ಚಟವೂ ಅಂಟಿಕೊಂಡಿತ್ತು. ಮನೆಯಿಂದ ಆಗಾಗ ಅವನ ತಂದೆ ಬಂದು ಅವನ ಶೈಕ್ಷಣಿಕ ಮಾಹಿತಿಯನ್ನೆಲ್ಲಾ ಒದಗಿಸಿ ಮತ್ತು ಪಡೆದುಕೊಂಡು ಶಿಸ್ತಿನಿಂದಲೇ ಬೆಳೆಸುತ್ತಿದ್ದರು. ಪ್ರಾಥಮಿಕ ಶಿಕ್ಷಣ ಮುಗಿದ ನಂತರ ಫ್ರೌಡಶಾಲಾ ಶಿಕ್ಷಣ ಬೋರ್ಡಿಂಗ್ ನಲ್ಲಿ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ಮುಂದುವರಿಯಿತು. ಅಲ್ಲಿ ಇಲ್ಲಿಯ ರೀತಿ ಹೋಗಿ ಮೇಲ್ವಿಚಾರಣೆ ಮಾಡದಿದ್ದದ್ದಕ್ಕೋ ಅಥವಾ ಸಹವಾಸ ದೋಷವೋ ಗೊತ್ತಿಲ್ಲ ಒಟ್ಟಿನಲ್ಲಿ ಎಸ್.ಎಸ್.ಎಲ್.ಸಿ ಯಲ್ಲಿ ಕಡಿಮೆ ಅಂಕ ತೆಗೆದುಕೊಂಡ. ಪಾಸಾಗಿದ್ದ ಎನ್ನುವುದೇ ದೊಡ್ಡ ವಿಚಾರ ಅಷ್ಟೇ..

ಮನೆಯಲ್ಲಿ ಅಷ್ಟು ಹೊತ್ತಿಗೆ ಇವನ ಹಣೆಬರಹವೇ ಇಷ್ಟು ಎಂದು ನಿರ್ಲಿಪ್ತವಾಗಿ ಅವನ ಅಂಕಗಳ, ಬುದ್ದಿವಂತಿಕೆಯ ಕುರಿತು ಆಕ್ಷೇಪವಿರದಿದ್ದರೂ ಸಿಕ್ಕಸಿಕ್ಕಂತೆ ಹಣ ಖರ್ಚು ಮಾಡುವುದಕ್ಕೆ ಕಡಿವಾಣ ಹಾಕಬೇಕಿತ್ತು. ಹಾಗೆಂದು ಅವನ ಖರ್ಚಿಗೆ ಕಡಿಮೆ ಮಾಡದಿದ್ದರೂ ಅವನಿಗೆ ಕಟುವಾದ ಎಚ್ಚರಿಕೆ ನೀಡಿ ಡಿಪ್ಲೊಮಾಗೆ ಸೇರಿಸಿದರು. 3 ವರ್ಷದ ಡಿಪ್ಲೊಮಾವನ್ನು ಹಾಗೋ ಹೀಗೋ ಮಾಡಿ ಅಂತೂ 3 ವರ್ಷದಲ್ಲಿಯೇ ಮುಗಿಸಿದ. ನಂತರ ಕೆಲಸಕ್ಕೆ ಸೇರಬೇಕಲ್ಲವೇ? ಅಂತೂ, ಅವನ ಉದ್ಯೋಗಪರ್ವ ಆರಂಭವಾಯಿತು.

ಉದ್ಯೋಗ ಸಿಗಬೇಕೆಂದರೆ ಬುದ್ದಿವಂತಿಕೆಯ ಜೊತೆಗೆ ವಶೀಲಿಯ ಅವಶ್ಯಕತೆಯೂ ಇರುತ್ತದೆ. ಮೊದಲನೇ ಉದ್ಯೋಗ ಸಿಕ್ಕಿತು. ಅಷ್ಟೊತ್ತಿಗೆ ಕೋರ್ಸುಗಳನ್ನು ಮಾಡಿಕೊಂಡು ಕೆಲಸಕ್ಕೆ ಬೇಕಾದ ಕೌಶಲ್ಯಗಳನ್ನು ಬೆಳೆಸಿಕೊಂಡ. ಆ ಉದ್ಯೋಗ ತನ್ನ ಯೋಗ್ಯತೆಗೆ ಸರಿ ಇಲ್ಲ ಎಂದು ಅದನ್ನೂ ಬಿಟ್ಟ. ಹೀಗೇ ಮೂರ್ನಾಲ್ಕು ಉದ್ಯೋಗಗಳ ಕಥೆಯೂ ಮುಗಿಯಿತು. ಕಡೆಗೆ ತನ್ನದೇ ಒಂದು ಸೈಬರ್ ಕೆಫೆ ತೆಗೆಯುತ್ತೇನೆಂದು ಹೇಳಿ ಅದನ್ನು ಶುರುಮಾಡಿದ. ಮನೆಯಲ್ಲಿ ದುಡ್ಡಿಗೆ ಕೊರತೆ ಇರಲಿಲ್ಲ, ಮಗ ಹೇಗೋ ನೆಲೆ ನಿಂತರೆ ಸಾಕೆಂದು ಅವನ ತಂದೆಯೂ ಇದಕ್ಕೆ ಒಪ್ಪಿಕೊಂಡರು.
ಉದ್ಯೋಗ ಶುರುವಾದಂತೆಯೇ ಅವನ ಚಪಲ ಚೆನ್ನಿಗರಾಯನ ಬುದ್ದಿಯೂ ಬೆಳೆಯ ಹತ್ತಿತ್ತು. ಕಂಡಕಂಡ ಹುಡುಗಿಯರಿಗೆಲ್ಲಾ "ಐ ಲವ್ ಯೂ" ಎಂದೇಳುವುದು ಮಾಮೂಲಾಗಿತ್ತು. ಇದ್ದನ್ನೇ ನಂಬಿ ಪ್ರೀತಿಯ ಬಲೆಯಲ್ಲಿ ಬಿದ್ದ ಮುಗ್ಧ ಹುಡುಗಿಯರೊಡನೆ ಸುತ್ತಾಟ, ಹಣ ಕಳಿಸುವುದು, ಅಶ್ಲೀಲ ಚಾಟ್ ಗಳು ಹೀಗೇ ನವರಂಗಿ ಆಟಗಳು ನಡೆದಿದ್ದವು. ಆತನ ಕೆಲ ಗೆಳೆಯರಿಗಷ್ಟೇ ಇವನ ಈ ಬುದ್ಧಿ ಗೊತ್ತಿದ್ದದ್ದು. ಹೀಗೆಲ್ಲಾ ಮಾಡಬೇಡ ಎಂದು ಬುದ್ಧಿ ಹೇಳಿದವರ ಜೊತೆಗೆಲ್ಲಾ ಜಗಳ ಮಾಡಿಕೊಂಡು ಎಲ್ಲರಿಂದಲೂ ದೂರವಾಗಿದ್ದ.

ಹೀಗಿರುವಾಗಲೇ ಅದೇಕೋ ಮತ್ತೆ ವರಾತ ತೆಗೆದು ಬೆಂಗಳೂರಿಗೆ ಹೋಗಿ ಕೆಲಸಕ್ಕೆ ಸೇರುತ್ತೇನೆ ಎಂದು ಹೊರಟ. ಆದಾದ ಒಂದೆರಡು ತಿಂಗಳಿನ ನಂತರ ಅಂದರೆ ಹೋಳಿಯ ಹಿಂದಿನ ದಿನ ಮನೆಗೆ ಬಂದಿದ್ದ. ಹೋಳಿಯ ದಿನ ಆತನ ಸಾವು ಸಂಭವಿಸಿತ್ತು.

"ಪ್ರಣವ್ ವಿಷ ಕುಡಿದು ಸತ್ತಿದ್ದಾನೆ" ಎಂದು ಅವತ್ತು ಬೆಳಿಗ್ಗೆ 8.00 ಘಂಟೆಗೇ ವಾಟ್ಸಾಪ್ ಗ್ರೂಪ್ ನಲ್ಲಿ ಸುದ್ದಿ ಬಂದಿತ್ತು. ಸರಿಯಾದ ಕಾರಣ ಯಾರಿಗೂ ತಿಳಿದಿರಲಿಲ್ಲ. ಆಶ್ಚರ್ಯ ಎಂದರೆ ಯಾವುದೇ ಡೆತ್ ನೋಟ್ ಸಹಾ ಇರಲಿಲ್ಲ. ಉಳಿದವರ ಬಾಯಲೆಲ್ಲಾ "ಪಾಪ, ಚಿನ್ನದಂತಹಾ ಹುಡುಗ ಸತ್ತ", "ಅವನ ಆತ್ಮಕ್ಕೆ ಶಾಂತಿ ಸಿಗಲಿ", "ಪಾಪ, ಮನೆಯಲ್ಲಿ ದುಡ್ಡು ಕೊಡಲಿಲ್ಲ ಅಂತಾ ಸತ್ತನಂತೆ" ಎಂಬೆಲ್ಲಾ ಪುಕಾರುಗಳು ಹೊರಟಿದ್ದವು. ಯಾರೇನೇ ಅಂದರೂ, ಯಾರು ಏನೇ ತಿಳಿದುಕೊಂಡರೂ ಸತ್ತವನು ಎದ್ದು ಬಂದು ಸಾವಿನ ಕಾರಣ ತಿಳಿಸುವುದಿಲ್ಲವಲ್ಲ. ಮೋಸ ಹೋದ, ಕಿರುಕುಳ ಅನುಭವಿಸಿದ್ದ, ಎಮೋಷನಲ್ ಬ್ಲಾಕ್ ಮೇಲ್ ಗೆ ಒಳಗಾಗಿದ್ದ ಹುಡುಗಿಯರು ಅಂದದ್ದು ಹೀಗೆ, "ಸತ್ತದ್ದು ಒಳ್ಳೆಯದೇ ಆಯಿತು", "ಪೀಡೆ ತೊಲಗಿತು", "ಬೀದಿ ಕಾಮಣ್ಣನ ಅಂತ್ಯ ಇನ್ನೂ ಕೆಟ್ಟದಾಗಿಯೇ ಆಗಬೇಕಿತ್ತು", "ಕಡೆಗೂ, ಹೋಳಿಯಂದೇ ಕಾಮದಹನವಾಯಿತು".

ಅವನ ಸಾವಿನ ರಹಸ್ಯ ಕೆದಕುತ್ತಾ ಹೋದಾಗ ತಿಳಿದದ್ದು "ಅವನು ಹಣ ಸಾಲದೆ ಅವನ ಲ್ಯಾಪ್ ಟಾಪ್, ವಾಚ್, ಟ್ಯಾಬ್ ಎಲ್ಲವನ್ನೂ ಮಾರಿದ್ದ". ಅಲ್ಲದೇ ಅವನ ಮೊಬೈಲ್ ನಿಂದ ಕೊನೆಯ ಕಾಲ್ ಹೋಗಿದ್ದು ಆ ಹುಡುಗಿಯ ನಂಬರ್ ಗೆ. ಅಲ್ಲದೇ ಅವನ ಪ್ಯಾಂಟ್ ಜೇಬಿನಲ್ಲಿ ಅವಳ ಊರಿಗೆ ಹೋಗಿಬಂದ ಟಿಕೆಟ್ ಕೂಡಾ ಇತ್ತು. ಆ ಹುಡುಗಿಯ ನಂಬರ್ ಗೆ ಕರೆ ಮಾಡಿ ವಿಚಾರಿಸಿದಾಗ ಅವಳಂದದ್ದು ಹೀಗೆ "ನಾನು ಅವನನ್ನು ಪ್ರೀತಿಸುತ್ತಿಲ್ಲ ಎಂದು ಮೊದಲೇ ಹೇಳಿದ್ದರೂ ಸುಮ್ಮನೆ ನನ್ನ ಹಿಂದೆ ಬಿದ್ದಿದ್ದ, ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ" ಎಂದು..
ಮಧ್ಯೆ ಏನಾಗಿತ್ತೋ, ಎಂತಾಗಿತ್ತೋ ಆದರೆ ಎದೆಯುದ್ದಕ್ಕೂ ಬೆಳೆದಿದ್ದ ಮಗನ ಸಾವು ಆತನ ತಂದೆ-ತಾಯಿಯರನ್ನು ಜರ್ಜರಿತಗೊಳಿಸಿತ್ತು. ರಹಸ್ಯ ಹಾಗೆಯೇ ಉಳಿದಿತ್ತು. ಮರ್ಯಾದೆ ಎಂಬ ಕವಚ ಹೊತ್ತು ಅದು ಸುದ್ದಿಯೇ ಆಗದೆ ತಣ್ಣಗಾಗಿತ್ತು. ಅಥವಾ ಅವನ ಈ ಎಲ್ಲಾ ಕುಕೃತ್ಯದ ಸುಳಿವಿದ್ದ ಆತನ ತಂದೆಯೇ ರೋಸಿ ಹೋಗಿ ಇದಕ್ಕೊಂದು ಅಂತ್ಯ ಹಾಡಿದ್ದಾ? ಇದಕ್ಕೆಲ್ಲಾ ಉತ್ತರವಿಲ್ಲ. ಎಲ್ಲವೂ ಊಹೆಯಾಗಬಹುದು ಅಷ್ಟೇ..

ಒಂದಷ್ಟು ಕೆಟ್ಟ ಹಟ, ಒಂದಿಷ್ಟು ನಿರ್ಲಕ್ಷ್ಯ, ಹದಿಹರೆಯದ ಕಾಮನೆ ಎಲ್ಲವೂ ತಿಳಿಯದ ರಹಸ್ಯವನ್ನು ಸೃಷ್ಟಿಸಿ ಕಾಮದಹನದೊಂದಿಗೆ ಅವನ ಸಾವಿನ ದಹನವನ್ನೂ ಮುಗಿಸಿದ್ದವು.
ಹಾಗೇ ಮಾತನಾಡಿಷ್ಟೂ ಮುಗಿಯದ ಸುದ್ದಿ, ಗೊಂದಲಗಳಿದ್ದರೂ ಸಹಾ ಎಷ್ಟು ಮಾತನಾಡಿದರೂ ಸತ್ತವರು ಎದ್ದು ಬರಲಾರರು ಎಂಬ ನಿಲುವಿಗೆ ಬಂದು ಚರ್ಚೆಗೆ ಅಂತ್ಯ ಹಾಡಿದ್ದೆವು
~ವಿಭಾ ವಿಶ್ವನಾಥ್

ಭಾನುವಾರ, ಡಿಸೆಂಬರ್ 15, 2019

ಮಾತು ಗಟ್ಟಿ ಅಷ್ಟೇ, ಮನಸಲ್ಲ

ಅವತ್ತು ಮಧ್ಯಾಹ್ನದ ಬ್ರೇಕ್ ವೇಳೆಯಷ್ಟರಲ್ಲಿ ಹಾಸ್ಟೆಲ್ ನಲ್ಲೆಲ್ಲಾ ಕೋಲಾಹಲವೋ ಕೋಲಾಹಲ.ಅದು ಲೇಡೀಸ್ ಹಾಸ್ಟೆಲ್, ವಾಚ್ ಮನ್ ಬಿಟ್ಟು ಉಳಿದವರಿಗಾರಿಗೂ ಪ್ರವೇಶವೇ ಇಲ್ಲದ ಆ ಹಾಸ್ಟೆಲ್ ಗೆ ಅಂದು ಅಡ್ಮಿನಿಸ್ಟ್ರೇಷನ್ ನ ಮೇಲಿನ ಹಂತದ ಅಧಿಕಾರಿಗಳಿಂದ ಹಿಡಿದು ಕೆಳಗಿನ ಹಂತದ ಅಧಿಕಾರಿಗಳೆಲ್ಲರೂ ಬಂದಿದ್ದರು. ಹಾಸ್ಟೆಲ್ ಮುಂಭಾಗದಲ್ಲೂ ತಕ್ಕ ಮಟ್ಟಿಗೆ ಜನ ನೆರೆದಿದ್ದರು.ಅಲ್ಲಿದ್ದವರೆಲ್ಲರನ್ನೂ ಕಂಡು ಯಾರಿಗೆ ಏನಾಗಿರಬಹುದು ಎಂಬ ಪ್ರಶ್ನೆ ಮೂಡಿದ್ದಂತೂ ಸುಳ್ಳಲ್ಲ.
ಟಾಪ್ ಪ್ಲೋರ್ ನಲ್ಲಿ ನಡೆದಿದ್ದ ಆ ಘಟನೆಗೆ ಸಾಕ್ಷಿಯಾಗಲೋ, ಕುತೂಹಲದಿಂದಲೋ ಬಂದ ಜನರಿಂದ ತುಂಬಿ ತುಳುಕುತ್ತಿದ್ದ ಹಾಸ್ಟೆಲ್ ನಲ್ಲಿ ಮೇಲಿನ ಪ್ಲೋರ್ ಗೆ ಹೋಗಲೂ ಸ್ಥಳಾವಕಾಶ ಇರಲಿಲ್ಲ. ಆದದ್ದಿಷ್ಟು ಡಿಪ್ಲೊಮಾ ಓದುತ್ತಿದ್ದ ಆ ಹುಡುಗಿ ಉರುಳು ಹಾಕಿಕೊಂಡಿದ್ದಳು. ಆದರೆ ಆ ಹುಡುಗಿ ಯಾರು? ಕಾರಣ ಏನು ಎಂಬುದು ತಿಳಿಯಲಿಲ್ಲ. ಆದರೆ ತಿಳಿದಾಗ ಬಹಳವೇ ಆಶ್ಚರ್ಯವಾಯಿತು.
ಗಲಗಲ ಮಾತನಾಡಿಕೊಂಡು ಎಲ್ಲರನ್ನೂ ಮಾತನಾಡಿಸುತ್ತಾ, ನಗೆ ಚಟಾಕಿ ಹಾರಿಸುತ್ತಾ, ರೇಗಿಸಿದವರಿಗೆ ಪ್ರತ್ಯುತ್ತರ ಕೊಡುತ್ತಾ ಜೀವನಪ್ರೀತಿಯಿಂದ ಬದುಕುತ್ತಿದ್ದ ಹುಡುಗಿ ಅವಳು. ಅವಳೇ ಸುಫಲಾ. ಕೊನೆಯ ವರ್ಷದ ಪರೀಕ್ಷೆ ಬರೆದು, ಉನ್ನತ ವಿದ್ಯಾಭ್ಯಾಸಕ್ಕಾಗಿ ಕನಸು ಕಟ್ಟಿಕೊಂಡು ಬದುಕುತ್ತಿದ್ದ ಅವಳು ಹಾಗೆ ಮಾಡಿಕೊಂಡದ್ದು ಬಹಳ ಅಚ್ಚರಿಯೇ. ಪರೀಕ್ಷೆಯ ಅನುತ್ತೀರ್ಣದ ಭಯಕ್ಕೆ ಆತ್ಮಹತ್ಯೆ ಮಾಡಿಕೊಂಡದ್ದೇನಲ್ಲ ಅವಳು. ಏಕೆಂದರೆ, ಅವಳಿನ್ನೂ ಪರೀಕ್ಷೆಯನ್ನೇ ಬರೆದಿರಲಿಲ್ಲ, ಅಲ್ಲದೇ ಹಿಂದಿನ ಪರೀಕ್ಷೆಗಳಲ್ಲಿ ಯಾವ ಪರೀಕ್ಷೆಯಲ್ಲಿಯೂ, ಯಾವ ವಿಷಯದಲ್ಲಿಯೂ ಅನುತ್ತೀರ್ಣಳಾಗಿರಲಿಲ್ಲ.
ಅವತ್ತು ಬೆಳಿಗ್ಗೆ ತಿಂಡಿ ತಿಂದು ಹೊರಗೆ ಹೋಗಿ ಬರಲು ಅವಳು ರಿಜಿಸ್ಟರ್ ಬುಕ್ ನಲ್ಲಿ ಬರೆದಿದ್ದ ಚೆಕ್ ಔಟ್ ಮತ್ತು ಚೆಕ್ ಇನ್ ಸಮಯದಲ್ಲಿ ಇದ್ದ ಅಂತರ ಬರೀ 15 ನಿಮಿಷಗಳಷ್ಟೇ. ಆ ಹದಿನೈದು ನಿಮಿಷಗಳಲ್ಲಿ ಏನಾದರೂ ಆಗಿರಬಹುದಾ?
ಅಥವಾ, ಹಿಂದಿನ ದಿನ ವಾರ್ಡನ್ ಕೈಯಲ್ಲಿ ವಾಚಾಮಗೋಚರವಾಗಿ ಬೈಯ್ಯಿಸಿಕೊಂಡಿದ್ದಳು. ಅದೇನಾದರೂ ಇದಕ್ಕೆ ಕಾರಣವಾಗಿರಬಹುದಾ? ಇಲ್ಲ, ಹಾಗಿರಲಾರದು. ನಿನ್ನೆಯದ್ದನ್ನು ನಿನ್ನೆಗೇ ಬಿಟ್ಟು ಬಿಡುವ ಹುಡುಗಿ ಅವಳು. ಬೆಳಿಗ್ಗೆ ಸಹಾ ಅವರೊಂದಿಗೆ ಬೈಯ್ಯಿಸಿಕೊಂಡಿದ್ದರ ಕುರುಹೇ ಇಲ್ಲದಂತೆ ನಡೆದುಕೊಂಡಿದ್ದಳು ಆಕೆ.
ವಾರ್ಡನ್ ಕರೆದು ಬೈದ್ದದ್ದಕ್ಕೆ ಕಾರಣ ಆಕೆಯೂ, ಆಕೆಯ ಗೆಳತಿಯೂ ತೆಕ್ಕೆ ಬಿದ್ದು ಹೊಡೆದಾಡಿಕೊಂಡು ಇಡೀ ಹಾಸ್ಟೆಲ್ ಅನ್ನೇ ತಿರುಗಿ ನೋಡುವಂತೆ ಮಾಡಿದ್ದಕ್ಕೆ. ಆ ಜಗಳದ ನಂತರ ಅವರಿಬ್ಬರಿಗೂ ಮತ್ತೇನಾದರೂ ಜಗಳವಾಯಿತಾ?
ಅಷ್ಟಕ್ಕೂ ಜಗಳವಾಗುವುದಕ್ಕೆ ಆಕೆಯ ಗೆಳತಿ ಆ ರೂಂನಲ್ಲಿ ಇರಲೇ ಇಲ್ಲ. ಅನುಮಾನದಿಂದ ಎಲ್ಲರ ಕಡೆ ಬೊಟ್ಟು ಮಾಡಿ ತೋರಿಸಲು ಕಾರಣ ಅವೆಲ್ಲಾ ಘಟನೆಗಳಿಗೆ ಕಾರಣ ಅವೆಲ್ಲಾ ಘಟನೆಗಳಿಗೂ ಸಾಕ್ಷಿಯಾಗಿದ್ದದ್ದು ಸಿ.ಸಿ.ಕ್ಯಾಮೆರಾ.
ಆದರೆ ಸಿ.ಸಿ.ಕ್ಯಾಮೆರಾ ಕಣ್ಣಿಗೆ ಬೀಳದಂತೆಯೂ ಕೆಲ ಘಟನಾವಳಿಗಳು ನಡೆಯಬಹುದು ಅಲ್ಲವೇ? ಸಿ.ಸಿ ಕ್ಯಾಮೆರಾ ಕಣ್ಣಿಗೆ ಬೀಳದ್ದು ಆ ತನಿಖೆಯ ಮುಖ್ಯಾಧಿಕಾರಿಯ ಕಣ್ಣಿಗೆ ಬಿದ್ದಿತ್ತು.
ಸಾಕ್ಷಿಯಾದ ಪ್ರಮುಖ ಸಾಕ್ಷಿ ಆಕೆಯ ಮೊಬೈಲ್. ಡೆತ್ ನೋಟ್ ಅಂತಹದ್ದೇನೂ ಸಿಗದಿದ್ದರಿಂದ ಆಕೆ ಮಾಡಿದ ಕೊನೆಯ ಮೆಸೇಜ್ ಮತ್ತು ಕಾಲ್ ಗಳೇ ಪ್ರಮುಖ ಸಾಕ್ಷಿಯ ಪಾತ್ರ ವಹಿಸಿಕೊಂಡಿದ್ದವು.ಆ ನಂಬರ್ ಗಳೆಲ್ಲವೂ ಬೊಟ್ಟು ಮಾಡಿ ತೋರಿಸುತ್ತಿದ್ದದ್ದು ರವಿಯ ನಂಬರ್ ಗೆ. ರವಿ ಈಕೆಗಿಂತ 2 ವರ್ಷ ದೊಡ್ಡವನು ಅಷ್ಟೇ. ಈಕೆ ಕಾಲೇಜಿಗೆ ಸೇರಿದಾಗ ಆತ ಫೈನಲ್ ಇಯರ್ ಜೊತೆಗೆ ಆತನದ್ದೂ ಈಕೆಯ ಊರೇ. ಪರಿಚಯ, ಸ್ನೇಹಕ್ಕೆ ತಿರುಗಿ ಅಲ್ಲಿಂದ ಪ್ರೇಮಕ್ಕೆ ತಿರುಗಿತ್ತು. ಆದರೆ, ಅದು ನೈಜ ಪ್ರೇಮವೇನೂ ಆಗಿರಲಿಲ್ಲ ಎಂದು ಸುಫಲಾಳಿಗೆ ತಿಳಿಯಲು ಒಂದು ವರ್ಷವೇ ಬೇಕಾಗಿತ್ತು. ಏಕೆಂದರೆ, ಈಕೆಯ ರೂಂ ಮೇಟ್ ಆಗಿ ಬಂದ ಸೃಜನಾಳ ಜೊತೆಗೆ ರವಿಯ ಸಲುಗೆ ಹೆಚ್ಚಾಯಿತು.ಆದರೆ, ಮುಸುಕಿನ ಗುದ್ದಾಟದಂತೆಯೇ ತ್ರಿಕೋನ ಪ್ರೇಮ ಕತೆ ನಡೆದಿತ್ತು. ಸುಫಲಾ ಸಾಯುವ ಹಿಂದಿನ ದಿನ ಸೃಜನಾಳೊಂದಿಗೆ ಆಗಿದ್ದ ಜಗಳಕ್ಕೆ ಮೂಲ ಕಾರಣ ಕೂಡಾ ಇಡೇ ಆಗಿತ್ತು. ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಈ ಜಗಳ ಅಶ್ಲೀಲ್ಲ ಮಾತುಗಳೊಂದಿಗೆ ಬೆಳೆದ ಜಗಳ ಇಬ್ಬರೂ ಶರಂಪರ ಕಿತ್ತಾಡಿ, ಕೂದಲು ಹಿಡಿದು ಜಗ್ಗಾಡಿ, ತೆಕ್ಕೆ ಬಿದ್ದು ಹೊಡೆದಾಡುವಷ್ಟಾಗಿತ್ತು. ಇತರರಿಗೆ ಮತ್ತು ವಾರ್ಡನ್ ಗೆ ನೈಜ ವಿಷಯದ ಅರಿವಿರಲಿಲ್ಲ, ಆದರೆ ಇಬ್ಬರ ಈ ಮಟ್ಟದ ಹೊಡೆದಾಟವನ್ನು ಇಡೀ ಹಾಸ್ಟೆಲ್ ನಿಂತು ನೋಡುತ್ತಿತ್ತು. ಎಲ್ಲರಿಗೂ ಬಿಟ್ಟಿ ಮನೋರಂಜನೆ ಸಿಗುವಾಗ ಯಾರಾದರೂ ಹೋಗಿ ಬಿಡಿಸುತ್ತಾರೇಕೆ? ಕಾಲವೇ ಹೀಗಲ್ಲವೇ..? ಕೆಲಹೊತ್ತಿನ ನಂತರ ಬಂದ ವಾರ್ಡನ್ ಇಬ್ಬರಿಗೂ ಛೀಮಾರಿ ಹಾಕಿ ಹೊರಟರು.
ಅದಾದ ನಂತರ ಸೃಜನಾ ಆ ರೂಂಗೆ ಕಾಲಿಡಲಿಲ್ಲ. ಮಾರನೇ ದಿನ ಬೆಳಿಗ್ಗೆ ರವಿ ವೀಡಿಯೋ ಕಾಲ್ ಮಾಡಿ ಸುಫಲಾಳಿಗೆ ಬುದ್ದಿ ಹೇಳಿ, ತಾನು ಮತ್ತು ಸೃಜನಾ ಇಬ್ಬರೂ ಪ್ರೀತಿಸುತ್ತಿದ್ದೇವೆ ಅಲ್ಲದೆ ಮದುವೆಯೂ ಆಗುತ್ತೇವೆ ಆದ್ದರಿಂದ ತಮ್ಮನ್ನು ಬಿಟ್ಟು ನಿನ್ನ ಜೀವನವನ್ನು ನೋಡಿಕೋ ಎಂದು ಹೇಳಿದ್ದ.
ಇದೆಲ್ಲದರಿಂದ ಒತ್ತಡಕ್ಕೊಳಗಾದ ಸುಫಲಾ, ಸೃಜನಾಳನ್ನು ಹುಡುಕಿಕೊಂಡು ಹೋಗಿದ್ದಳು.ಆದರೆ, ಸೃಜನಾ ಸ್ಟಡೀ ಹಾಲಿಡೇಸ್ ಆದ್ದರಿಂದ ಅಂದು ಬೆಳಿಗ್ಗೆಯೇ ಊರಿಗೆ ಹೋಗಿದ್ದಳು. ಇದು ಗೊತ್ತಿಲ್ಲದ ಸುಫಲಾ ಅವಳನ್ನು ಕ್ಯಾಂಪಸ್ ನಲ್ಲೆಲ್ಲಾ ಹುಡುಕಿ ಸುಸ್ತಾಗಿ ಬಂದಳು. ಅದಕ್ಕಾಗಿಯೇ ಅವಳ 15 ನಿಮಿಷ ವ್ಯಯವಾಗಿದ್ದು.
ಬಂದವಳು ಬಾಗಿಲನ್ನು ಬೋಲ್ಟ್ ಮಾಡದೆ ಫ್ಯಾನ್ ಗೆ ನೇಣು ಹಾಕಿಕೊಂಡಿದ್ದಳು. ಆಕೆಯನ್ನು ಮೊದಲು ನೋಡಿದ್ದ ಕೆಲಸದವಳು ತಾನೂ ಗೊಂದಲಗೊಂಡು ಎಲ್ಲರನ್ನೂ ಕೊಲೆಯೋ? ಆತ್ಮಹತ್ಯೆಯೋ ? ಎಂಬ ಅನುಮಾನ ಮೂಡುವಂತೆ ಮಾಡಿದ್ದಳು.ಅಂದು ಸೃಜನ ಸಿಕ್ಕಿದ್ದರೆ ಅವಳೊಡನೆ ಮಾತನಾಡಿಯಾದರೂ ಇವಳ ನೋವು ಹಗುರಾಗುತ್ತಿತ್ತೇನೋ..? ಗಟ್ಟಿ ಮಾತಿನ ಹುಡುಗಿ ಗಟ್ಟಿ ನಿರ್ಧಾರ ತಳೆಯಬಹುದಾಗಿತ್ತು. ಆತ್ಮವಿಶ್ವಾಸವಿದ್ದರೂ, ಒಂದು ಕ್ಷಣದ ದುರ್ಬಲ ಮನಸ್ಸಿನ ಮೆದು ನಿರ್ಧಾರ ಅವಳಿಗೇ ಉರುಳಾಗಿತ್ತು. ಬದಲಾಯಿಸಬಹುದಾಗಿದ್ದ ಭವಿಷ್ಯ, ಬದಲಾಯಿಸಲಾಗದ ಭೂತವಾಗಿತ್ತು ಅಷ್ಟೇ.
~ವಿಭಾ ವಿಶ್ವನಾಥ್

ಬುಧವಾರ, ಡಿಸೆಂಬರ್ 11, 2019

ಬದುಕಿನ ಹಣತೆ ಗಾಳಿಯಲ್ಲೂ ಉರಿದಿದೆ..!

ಪ್ರಮೀಳಾಳ ತಂದೆ ಸಣ್ಣ ಪುಟ್ಟ ಕಾಂಟ್ರ್ಯಾಕ್ಟ್ ಮಾಡಿಸುತ್ತಾ ಮಧ್ಯಮ ವರ್ಗದ ಬದುಕು ನಡೆಸುತ್ತಿದ್ದರು. ಅವರಿಗೆ ಇಬ್ಬರು ಮಕ್ಕಳು. ಅವರೇ ಪ್ರಮೀಳಾ ಮತ್ತು ಪ್ರಜ್ವಲ್. ಪ್ರಮೀಳಾ ಮೊದಲನೆಯವಳು ಜೊತೆಗೆ ಅವಳಿಗೆ ಅದೃಷ್ಟ ಲಕ್ಷ್ಮಿ ಎನ್ನುತ್ತಾ ಹೆಚ್ಚಿನ ಅಕ್ಕರೆ. ನಗರದ ಪ್ರತಿಷ್ಟಿತ ಕಾಲೇಜ್ ಒಂದರಲ್ಲಿ ಬಿ.ಬಿ.ಎಂ ವ್ಯಾಸಂಗ ಮಾಡುತ್ತಿದ್ದಳು. ಅಕಸ್ಮಾತ್, ಮನೆಯಲ್ಲಿ ಏನೇ ತೊಂದರೆ ಇದ್ದರೂ ಅವಳಿಗೆ ಅದರ ಬಿಸಿ ತಟ್ಟದಂತೆಯೇ ಬೆಳೆಸುತ್ತಿದ್ದರು. ಅಪ್ಪ ಅಮ್ಮಂದಿರೇ ಹಾಗೆ ಅಲ್ಲವಾ? ಕೇಳಿದಾಗಲೆಲ್ಲಾ ಕೇಳಿದಷ್ಟು ಹಣ ಖರ್ಚಿಗೆಂದು ಪಾಕೆಟ್ ಮನಿ ರೂಪದಲ್ಲಿ ದೊರೆಯುತ್ತಿತ್ತು. ಮಾರ್ಕೆಟ್ ಗೆ ಬಂದ ಹೊಸ ಡಿಸೈನ್ ಬಟ್ಟೆಗಳು ಇವಳ ವಾರ್ಡ್ ರೋಬ್ ಅನ್ನು ಅಲಂಕರಿಸುತ್ತಿದ್ದವು. ಹೀಗೇ ರಾಜಕುಮಾರಿಯಂತೆ ಬೆಳೆಯುತ್ತಿದ್ದ ಅವಳಿಗೆ ಪ್ರೀತಿ ಶುರುವಾಗಿತ್ತು. ಅದೂ ಅವಳ ಕಾಲೇಜಿನ ಹತ್ತಿರವಿದ್ದ ಸೈಬರ್ ನಲ್ಲಿ ಕೆಲಸ ಮಾಡುತ್ತಿದ್ದ ಓಂಕಾರ್ ಒಟ್ಟಿಗೆ. ಮನೆಯಲ್ಲಿ ಇವರಿಬ್ಬರ ಪ್ರೀತಿಯ ಸುದ್ದಿ ತಿಳಿದಾಗ ದೊಡ್ಡ ರಾದ್ದಾಂತವೇ ನಡೆಯಿತು. "ಮಗಳನ್ನು ನೀನು ಸರಿಯಾಗಿ ಬೆಳೆಸಲಿಲ್ಲ, ನೀನು ಸರಿಯಾಗಿ ಗಮನಿಸಲಿಲ್ಲ" ಎಂಬ ರಣರಂಪಗಳ ನಡುವೆಯೇ ಸಿಲುಕಿದ್ದ ಅವಳ ಪೋಷಕರಿಗೆ ಮಗಳು ಮನೆಯಲ್ಲಿಲ್ಲ ಎಂಬ ಸುದ್ದಿ ತಿಳಿದಿದ್ದು ಮಾರನೆಯ ದಿನವೇ.
ಪೋಲೀಸರಿಗೆ ಸುದ್ದಿ ಕೊಟ್ಟು ಅವರಿಬ್ಬರೂ ಎಲ್ಲಿದ್ದರೂ ಎಳೆದುಕೊಂಡು ಬರುತ್ತೇನೆ ಎಂದು ಹೊರಟ ಅಪ್ಪನಿಗೆ ಮಗಳು ಬಾಗಿಲಲ್ಲಿಯೇ ಎದುರು ಸಿಕ್ಕಿದ್ದಳು. ಅದೂ ಪ್ರೀತಿಸಿದವನೊಂದಿಗೇ ಮದುವೆಯಾಗಿ..
18 ವರ್ಷ ತುಂಬಿದ ಅವಳು ಮೇಜರ್. ಅವಳ ಮದುವೆ ಕಾನೂನಿನ ದೃಷ್ಟಿಯಲ್ಲಿ ಸಿಂಧು. ಕಂಪ್ಲೇಂಟ್ ನಿಂದ ಏನೂ ಮಾಡುವಂತೆಯೇ ಇರಲಿಲ್ಲ. ಆದರೆ ದಬ್ಬಾಳಿಕೆಯೊಂದು ಇದ್ದೇ ಇರುತ್ತದಲ್ಲ. ಹಾಗಾಗಿ ಅವತ್ತೇ ಅವನನ್ನು ಅಲ್ಲಿಂದ ಓಡಿಸಿ ಅವಳನ್ನು ಮನೆಗೆ ಕರೆತಂದು ಕಣ್ಗಾವಲಿನಲ್ಲಿಟ್ಟು ಕಾಯುತ್ತಿದ್ದರು.
ಅದ್ಯಾಗೋ ಮೊಬೈಲ್ ದೊರಕಿಸಿಕೊಂಡ ಇಬ್ಬರು ಪ್ರೇಮಿಗಳು ಅಲ್ಲಲ್ಲ ದಂಪತಿಗಳು ಮನೆಯಿಂದ ಓಡಿಹೋಗುವ ವಿಚಾರವನ್ನು ಚರ್ಚಿಸಿಯಾಗಿತ್ತು. ಇದರ ಬುನಾದಿ ಶುರುವಾಗಿದ್ದು ಹೀಗೆ, "ಹೇಗೂ ಫೈನಲ್ ಈಯರ್ ಬಿ.ಬಿ.ಎಂ ಜೊತೆಗೆ ಫೈನಲ್ ಸೆಮ್ ಬೇರೆ.. ಇವಾಗ ಪರೀಕ್ಷೆ ಬರೀದೇ ಇದ್ರೆ ಮತ್ತೆ ಒಂದು ವರ್ಷ ಕಾಯಬೇಕಾಗುತ್ತೆ ಹಾಗಾಗಿ ನಾನು ಪರೀಕ್ಷೆ ಬರೆಯಲೇಬೇಕು" ಅಂತಾ ಹಟ ಹಿಡಿದು ಕೂತಿದ್ದಳು ಪ್ರಮೀಳಾ. ಅಲ್ಲದೇ ನಾನು ಮಾಡಿದ್ದು ತಪ್ಪಾಯಿತು ಅಂತಾ ಮೊಸಳೆ ಕಣ್ಣೀರು ಸುರಿಸುತ್ತಾ ಮನೆಯವರನೆಲ್ಲಾ ಒಪ್ಪಿಸಿದ್ದಳು.
ಪರೀಕ್ಷೆ ಬರೆಯಲು ಹೊರಟ ಮೊದಮೊದಲು ಅಪ್ಪ ಅಥವಾ ಅಮ್ಮ ಯಾರಾದರೊಬ್ಬರು ಕಾವಲಿದ್ದು ಕರೆದುಕೊಂಡು ಬರುತ್ತಿದ್ದರು. ಕ್ರಮೇಣ ಅವರಿಗೆ ನಂಬಿಕೆ ಬಂದಂತೆ ಅವಳೊಬ್ಬಳನ್ನೇ ಹೋಗಲು ಬಿಟ್ಟರು. ನಂತರದ ವಿಷಯಗಳ ಪರೀಕ್ಷೆಗಳನ್ನು ಮುಗಿಸಿ ಬಂದಳು. ಮಗಳು ಸರಿದಾರಿಗೆ ಬಂದಳು ಎನ್ನುವಷ್ಟರಲ್ಲೇ ಈ ಘಟನೆ ಘಟಿಸಿತ್ತು.
"ಹೇಗೂ ಕೊನೆ ದಿನದ ಪರೀಕ್ಷೆ ಮತ್ತು ನಾಳೆ ಹೊಸವರ್ಷ ಅಲ್ವಾ ಅದಕ್ಕೆ ಫ್ರೆಂಡ್ಸ್ ಎಲ್ಲಾ ಸೇರಿ ಪಾರ್ಟಿ ಮಾಡುತ್ತೇವೆ ಹಾಗಾಗಿ ನಾನು ಇವತ್ತು ನನ್ನ ಫ್ರೆಂಡ್ ಮನೆಯಲ್ಲೇ ಉಳಿದುಕೊಳ್ಳುತ್ತೇನೆ" ಎಂದಿದ್ದಳು ಪ್ರಮೀಳಾ. ಮನೆಯಲ್ಲಿಯೂ ಅರೆಮನಸ್ಸಿನಿಂದಲೇ ಇದಕ್ಕೆ ಒಪ್ಪಿಗೆ ನೀಡಿದ್ದರು. ಅವಳು ಅಂದದ್ದೇ ಒಂದು ಆದರೆ ಮಾಡಿದ್ದೇ ಇನ್ನೊಂದು
ಅವರಿಬ್ಬರಿಗಾದರೂ ಎಲ್ಲಿ ಗೊತ್ತಿತ್ತು ಹೀಗೆಲ್ಲಾ ಆಗಬಹುದೆಂದು? ಇತ್ತ ಓಂಕಾರ್ ಅವಳನ್ನು ಕರೆದುಕೊಂಡು ಮಡಿಕೇರಿಗೆ ಹೊರಟ. ಬೊಸ್ಸ್ ವರ್ಷದ ಪಾರ್ಟಿ ಮುಗಿಸಿ ನಂತರ ಎಲ್ಲಿರುವುದು ಎಂದು ಯೋಚಿಸೋಣ ಎಂದು ತೀರ್ಮಾನಿಸಿ ಹೊರಟ ಇಬ್ಬರಿಗೂ ದಾರಿಯಲ್ಲೊಂದು ತೊಂದರೆ ಎದುರಾಗಿತ್ತು. ಆಗ ಸಂಜೆ ಸುಮಾರು 7 ಘಂಟೆಯ ಸಮಯ, ಕಗ್ಗತ್ತಲು. ಆಗಲೇ ಬೈಕ್ ಕೆಟ್ಟು ನಡುರಸ್ತೆಯಲ್ಲಿ ನಿಂತಿತ್ತು. ಹೋಗಲಿ ಯಾರನ್ನಾದರೂ ಡ್ರಾಪ್ ಕೇಳೋಣ ಎಂದುಕೊಂಡು ಅಲ್ಲೇ ನಿಂತವರಿಗೆ ಒಂದು ಜೀಪ್ ಎದುರಾಗಿತ್ತು. 4 ಜನ ಇದ್ದ ಜೀಪ್ ಗೆ ಇವರೂ ಹತ್ತಿದರು.
ಜೀಪ್ ಹೊರಟ ಕೆಲ ನಿಮಿಷಗಳಲ್ಲೇ ದಾರಿ ಬದಲಾಗಿತ್ತು. ಜೋಡಿಹಕ್ಕಿಗಳಿಗೆ ಅದರ ಪರಿವೆಯೇ ಇರಲಿಲ್ಲ. ಜೀಪ್ ನಿಂತಾಗಲೇ ಅದರ ಅರಿವಾಗಿದ್ದು. ಅವರ ದಾಳಿಗೆ ಸಿಲುಕಿ ಓಂಕಾರ್ ನ ಜೀವ ಹೋಗಿತ್ತು. ಪ್ರಮೀಳಾಳ ಮೇಲೆ ಸತತವಾಗಿ ಸಾಮೂಹಿಕ ಅತ್ಯಾಚಾರವಾಗಿತ್ತು. ಆದರೂ ಅದೃಷ್ಟವೋ, ದುರಾದೃಷ್ಟವೋ ಗೊತ್ತಿಲ್ಲ ಅವಳು ಬದುಕಿದ್ದಳು.
ಮರುದಿನ ಆಸ್ಫತ್ರೆ ಸೇರಿದ್ದಳು. ತಂದೆ-ತಾಯಿಯರಿಗೆ ಮೋಸ ಮಾಡಿ ಬಂದವಳಿಗೆ ಮುಂದೆ ಏನು ಮಾಡಬೇಕೆನ್ನುವುದೂ ತೋಚಿರಲಿಲ್ಲ. ಕೊನೆಗೆ ಪೋಲೀಸರಿಂದ ವಿಷಯ ತಿಳಿದ ಪೋಷಕರು ಆಕೆಯನ್ನು ಮನೆಗೆ ಕರೆದುಕೊಂಡು ಬಂದರು. ಎಷ್ಟಾದರೂ ಹೆತ್ತವರಲ್ಲವೇ? ಕೆಟ್ಟ ಮಕ್ಕಳಿದ್ದರೂ ಕೆಟ್ಟ ತಂದೆ ತಾಯಿ ಇರಲಾರರು. ಅವಳಲ್ಲಿ ಆತ್ಮಸ್ಥೈರ್ಯ ತುಂಬಿ ಅವಳನ್ನು ಮೊದಲಿನಂತೆಯೇ ಮಾಡಿದರು.
ಆಕೆಯೂ ಮೊದಲಿನಂತೆಯೇ ಆದಳು. ಓದನ್ನು ಮುಂದುವರಿಸಲು ಎಂ.ಬಿ.ಎ ಗೆ ಸೇರಿಕೊಂಡಳು. ಇಷ್ಟೆಲ್ಲಾ ಆದ ನಂತರ ಅವಳನ್ನು ಎಲ್ಲರೂ ನೋಡುವ ರೀತಿಯೇ ಬದಲಾಗಿತ್ತು. ಆದರೆ, ವಿಭಿನ್ನವಾಗಿ ವರ್ತಿಸುವ ಸಂಕೇತ್ ಅವಳನ್ನು ಸೆಳೆದಿದ್ದ. ಸಂಕೇತ್ ನದ್ದು ಬಣ್ಣ ಬದಲಾಯಿಸುವ ಊಸರವಳ್ಳಿಯಂತಹಾ ಗುಣ. ಹುಡುಗಿಯರನ್ನು ಬಟ್ಟೆ ಬದಲಿಸುವಷ್ಟು ಸುಲಭವಾಗಿ ಬದಲಿಸುತ್ತಿದ್ದ. ಇಷ್ಟೆಲ್ಲಾ ಗೊತ್ತಿದ್ದೂ ಪ್ರಮೀಳಾ ಅವನೊಂದಿಗೆ ಸ್ವಚ್ಛಂದ ಹಾರಾಟ ನಡೆಸಿದ್ದಳು. kಕಾರಣ ಅವಳಿಗೆ ಮಾತ್ರ ಅರಿವಿತ್ತು.
ಇದಾದ ಒಂದು ತಿಂಗಳಿಗೆಲ್ಲಾ ಅವನ ಸಾವು ಸಂಭವಿಸಿತ್ತು, ಕಾರಣದ ಅರಿವಿರದಿದ್ದರೂ ಎಲ್ಲರೂ ತಲೆಗೊಂದರಂತೆ ಮಾತನಾಡಿದರು. ಅವಳ ಡೈರಿ ಮಾತ್ರ ನಿಜವನ್ನು ತಿಳಿದಿತ್ತು."ಇಂದಿಗೆ ಕೀಚಕನ ಕತೆ ಮುಗಿಯಿತು, ಇನ್ನೂ ಇಂತಹವರ ಕತೆ ಮುಗಿಸಲಿಕ್ಕಿದೆ" ಎಂಬ ವಾಕ್ಯ ಮತ್ತಾರ ಕಣ್ಣಿಗೂ ಬೀಳಲಿಲ್ಲ. ಆರದೆ ಉರಿಯುತ್ತಿರುವ ದೀಪಕ್ಕೆ ಸಾರ್ಥಕತೆ ಅಥವಾ ಮುಕ್ತಿ ಎಂಬುದರ ತೀರ್ಮಾನಕ್ಕೆ ಅವಳು ಬಂದಿದ್ದಳು.

ಇತಿಹಾಸ ಮರುಕಳಿಸಬಾರದೆಂದೇನೂ ಇಲ್ಲವಲ್ಲ.. ಹಾಗಾಗದಿರಲಿ ಎಂದೇ ಬಯಸೋಣ. ಹಿಂದಿನ ತಪ್ಪಿನಿಂದಲೂ ಪಾಠ ಕಲಿಯದಿದ್ದರೆ ಅದು ಅವರ ಮೂರ್ಖತನಕ್ಕೆ ಹಿಡಿದ ಕನ್ನಡಿ ಅಷ್ಟೇ.. ಗಾಳಿಯಲ್ಲಿ ಉರಿಯುತ್ತಿರುವ ದೀಪ ಆರದಿರಲಿ ಎಂದೇ ಪ್ರಾರ್ಥಿಸೋಣ.
~ವಿಭಾ ವಿಶ್ವನಾಥ್

ಭಾನುವಾರ, ಡಿಸೆಂಬರ್ 8, 2019

ಪ್ರಶ್ನಾತೀತ


"ಉತ್ತರದ ಕಾಯುವಿಕೆಗಿಂತ
ಪ್ರಶ್ನೆಗಳ ಕಾಡುವಿಕೆಯೇ ಹಿತವಾಗಿದೆ"

ಎಂಬ ಸ್ಟೇಟಸ್ ಹಾಕಿ ಸುನೀತಿ ನಿರಾಳವಾಗಿಬಿಟ್ಟಿದ್ದಳು ಅಥವಾ ಅವಳು ಹಾಗೆ ಭಾವಿಸಿದ್ದಳು. ಹೆಚ್ಚಿನವರಂತೆ ಅವಳ ಸ್ಟೇಟಸ್ ಕೂಡಾ ಮತ್ತೊಬ್ಬರನ್ನು ಗುರಿ ಮಾಡಿಯೇ ಇತ್ತು. ನಿರಾಳವಾಗಿದ್ದೇನೆ ಎಂಬ ಭಾವ ಮೂಡುವಷ್ಟರಲ್ಲೇ ನಿಜಕ್ಕೂ ನಾನು ನಿರಾಳವಾದೆನಾ? ಎಂಬ ಪ್ರಶ್ನೆ ಕಾಡುತ್ತಿತ್ತು ಅವಳಿಗೆ. ಕಾಡುವ ಪ್ರಶ್ನೆಗಳ ಪ್ರವಾಹಕ್ಕೆ ಕಾಲವೇ ಕಡಿವಾಣ ಹಾಕಬೇಕೆಂದುಕೊಂಡವಳಿಗೆ ಪ್ರಶ್ನೆಗಳ ಪರಿಯೇ ಅರ್ಥವಾದಂತಿರಲಿಲ್ಲ.

ಸುನೀತಿಯದು ಒಂದು ರೀತಿಯ ಮೌನಿಯಂತಹಾ ವ್ಯಕ್ತಿತ್ವ, ಆದರೆ ಹೆಚ್ಚಿನವರು ಅದಕ್ಕೆ ಅಂತರ್ಮುಖತೆ ಎಂಬ ಹಣೆಪಟ್ಟಿ ನೀಡಿಬಿಟ್ಟಿದ್ದರು. ಆದರೆ, ಅವಳ ಎಲ್ಲಾ ಪ್ರಶ್ನೆಗಳೂ ಹರಡಿಕೊಳ್ಳುತ್ತಿದ್ದದ್ದು ಅವಳಮ್ಮನ ಮುಂದೆ. ತೀರಾ ಹುಚ್ಚು ಪ್ರಶ್ನೆಗಳು, ಹುಚ್ಚು ಆಲೋಚನೆಗಳನ್ನೆಲ್ಲಾ ಹಂಚಿಕೊಳ್ಳುವ ಗೆಳತಿಯಂತಹಾ ಅಮ್ಮನ ಮುಂದೆ. ಆದರೆ ಹಾಕಿದ ಪ್ರಶ್ನೆಗಳಿಗೆಲ್ಲಾ ಉತ್ತರ ದೊರೆಯಬೇಕಲ್ಲವಾ? ಸುನೀತಿಯ ಬೌದ್ದಿಕ ನೆಲೆಗಟ್ಟು ವಿಸ್ತಾರವಾದಂತೆಲ್ಲಾ ಪ್ರಶ್ನೆಗಳೇ.. ಬರೀ ಹುಚ್ಚು ಹುಚ್ಚು ಪ್ರಶ್ನೆಗಳ ಕುತೂಹಲಗಳೇ.. ಹುಚ್ಚು ಎನ್ನಿಸುತ್ತಿದ್ದದ್ದು ನಮ್ಮಂತಹಾ ಮುಖವಾಡ ತೊಟ್ಟವರ ಪ್ರಪಂಚದಲ್ಲಿ ಮಾತ್ರ. ಮಗುವಿನಂತಹಾ ಅವಳ ಮನಸ್ಸಿನಲ್ಲಿ ಪ್ರಶ್ನೆಗಳು ಹಲವಾರು.ಹಾಗೆಂದು ಅವಳು ಪ್ರಶ್ನೆ ಕೇಳುತ್ತಿದ್ದದ್ದು ಅಮ್ಮನಲ್ಲಿ ಮಾತ್ರವಲ್ಲಾ, ಎಲ್ಲರಲ್ಲಿಯೂ. ಆದರೆ ಹೆಚ್ಚಿನವರಿಂದ ಉಡಾಫೆಯ ಪ್ರತ್ಯುತ್ತರ, ಅಣಕದ ನಗು, ಮೋಸದ ಮುಖವಾಡದ ಮಂದಿಯಿಂದ ಅವರಂತಹದ್ದೇ ಪ್ರತ್ಯುತ್ತರ, ಇಲ್ಲವೇ ಮೊಂಡು ವಾದ. ಇವೆಲ್ಲವೂ ಅವಳಿಗೆ ಇಷ್ಟವಾಗದೇ ತನ್ನ ಉತ್ತರವನ್ನು ತಾನೇ ಕಂಡುಕೊಳ್ಳುತ್ತಿದ್ದಳು.

ವಾಟ್ಸಾಪ್, ಫೇಸ್ ಬುಕ್ ನಂತಹಾ ಮೋಹಕದ ಜಗದಲ್ಲಿಯೂ ಅವಳ ಮೌನ ಮತ್ತು ಪುಸ್ತಕಪ್ರೀತಿ ಮನೆಯವರಿಗೆ ಕೆಲವೊಮ್ಮೆ ಖುಷಿ ತರಿಸಿದರೆ ಹಲವು ಬಾರಿ ರೇಜಿಗೆ ಹುಟ್ಟಿಸುತ್ತಿತ್ತು. ಹೀಗೇ ಇರುವ ಸಂದರ್ಭದಲ್ಲಿಯೇ ಅವಳಿಗೆ ಪರಿಚಿತನಾದವನು ಸುಶಾಂತ್. ಆಕೆಗಿಂತ ದೊಡ್ಡವನು ಮತ್ತು ತಿಳುವಳಿಕೆ ಉಳ್ಳವನು, ಬೌದ್ದಿಕ ಸಾಂಗತ್ಯಕ್ಕೆ ಜೊತೆಯಾಗಬಲ್ಲವನು. ಹಾಗೆಂದಾಕ್ಷಣ ಇದು ಪ್ರೀತಿ ಅಲ್ಲ. ಪ್ರೀತಿ ಎಂಬ ಮಹಾಸಾಗರಕ್ಕೆ ಅಂಟಿಯೂ ಅಂಟದಂತೆ ಜೀವನ ನಡೆಸುವ ಛಾತಿ ಇಬ್ಬರಲ್ಲಿಯೂ ಇತ್ತು. ಮೇಲ್ನೋಟಕ್ಕೆ ಮಹಾನ್ ಕೋಪಿಯಂತೆ ಕಂಡರೂ ಅಂತರಂಗದಲ್ಲಿ ಅಷ್ಟೇ ತಾಳ್ಮೆ ಉಳ್ಳವನು, ಸ್ವಚ್ಛ ಮನಸ್ಸಿನ ಶಾಂತ ಸ್ವಭಾವದ ಹುಡುಗ. ಜೀವನ ಏಕೆ ಇಬ್ಬರನ್ನು ಒಂದೇ ಹಾದಿಯ ಮೇಲೆ ನಡೆಯುವಂತೆ ಮಾಡುತ್ತಿತ್ತೋ ಗೊತ್ತಿಲ್ಲ. ನಮ್ಮ ಜೀವನದಲ್ಲಿ ಬರುವವರು ಕೆಲವೊಮ್ಮೆ ಪಾಠ ಕಲಿಸಲೆಂದೇ ಬರುತ್ತಾರೇನೋ..?

ಇಬ್ಬರದ್ದೂ ಜಗಳದ ಸ್ವಭಾವವೂ ಅಲ್ಲ. ಆಕೆಗೆ ಬೌದ್ಧಿಕ ಸಹಚರ್ಯದ ಅಗತ್ಯತೆ ಇತ್ತು. ಈತ ಸ್ನೇಹಜೀವಿ, ಇಬ್ಬರೂ ಜೊತೆಯಾದದ್ದರಲ್ಲಿ ಯಾವ ಅತಿಶಯೋಕ್ತಿಯೂ ಇರಲಿಲ್ಲ. ಎಂತಹಾ ಪರಿಸ್ಥಿತಿಯಲ್ಲೂ ಈಕೆ ತನ್ನ ನಿರ್ಧಾರಕ್ಕೆ ಬದ್ಧಳಾಗಿ ನಡೆಯುವಂತಹವಳು ಆದರೆ ಆತನದ್ದು ಸಡಿಲ ನಿರ್ಧಾರದ ಮನೋಸ್ಥಿತಿ. ಇದೇ ಮನಸ್ಥಿತಿಗಳು ಅವರಲ್ಲಿ ಬಿರುಕು ಮೂಡಿಸಬಹುದಾ? ಅಥವಾ ಅವೆಲ್ಲವನ್ನೂ ಮೀರಿ ಮುಂದೆ ನಡೆಸಬಹುದಾ?

ಸುನೀತಿ ತನಗೆ ಕಾಡುತ್ತಿದ್ದ ಹಲವು ಪ್ರಶ್ನೆಗಳ ಉತ್ತರ ಕಂಡುಕೊಂಡಿದ್ದು ಆತನ ಬಳಿಯೇ. ಆಕೆಯ ಸ್ವಭಾವದಂತೆ ಎಲ್ಲರ ಬಳಿಯೂ ಕಡಿಮೆ ಮಾತಾದರೆ, ಆತನ ಬಳಿ ಆಕೆ ವಾಚಾಳಿ, ತಿಳಿ ಹಾಸ್ಯದ ಸಹ ಜೊತೆಗಾತಿ. ಆಕೆಯೇ ಎಷ್ಟೋ ಬಾರಿ ಹೇಳಿದ್ದೂ ಇದೆ.. "ಯಾಕೆ ನಾನು ನಿಮ್ಮೊಡನೆ ಇಷ್ಟು ಪ್ರಶ್ನೆಗಳನ್ನು ಕೇಳುತ್ತೇನೆಯೋ ಗೊತ್ತಿಲ್ಲ, ಆದರೆ ಉತ್ತರಗಳನ್ನು ಕೇಳಿದ ನಂತರ ಸಮಾಧಾನ ದೊರೆಯುತ್ತದೆ. ಹಾಗೆಂದು, ಎಲ್ಲಾ ಉತ್ತರಗಳನ್ನು ಒಪ್ಪಿಕೊಳ್ಳುತ್ತೇನೆ ಎಂದೂ ಅಲ್ಲ, ಆದರೂ ಏನೋ ಸಮಾಧಾನ". ಸ್ವಭಾವತಃ ಆಕೆ ಭಾವಜೀವಿಯಾದರೂ ಸಹಾ ಮಾತಾಡುತ್ತಿದ್ದದ್ದು ಪ್ರಾಮಾಣಿಕತೆ ಲೇಪಿತ ಗಾಂಭೀರ್ಯದಿಂದಲೇ.

ಆತನಿಗೆ ಇದರ ಕುರಿತು ಬೇಸರವಿಲ್ಲ. ಆದರೆ, ಬೇರೆಯವರು ಏನೆಂದುಕೊಳ್ಳುವರೋ ಎಂಬ ಭಾವ ಅವನನ್ನು ಕಾಡುತ್ತಿತ್ತು. ಜೊತೆಗೆ ಉನ್ನತ ಹುದ್ದೆಯಲ್ಲಿದ್ದ ಆತ ಆತನ ಕೆಲಸಕಾರ್ಯಗಳಲ್ಲಿಯೇ ಮಗ್ನ, ಕೆಲಸದ ಒತ್ತಡವೂ ಅವನ ಅದಕ್ಕೆ ಕಾರಣವಾಗಿತ್ತೋ ಏನೋ ಈಗೀಗ ಅವಳ ಪ್ರಶ್ನೆಗಳಿಗೆಲ್ಲಾ ಅವನು ಮೌನಿ. ಅವಳಿಗೆ ಈ ಸೂಕ್ಷ್ಮತೆಯ ಅರಿವಾಗಿತ್ತು ಹಾಗಾಗಿ ಅವಳೂ ಮೌನವಾಗಿಬಿಟ್ಟಿದ್ದಳು. ಬಾಯಿ ಬಿಟ್ಟು ಹೇಳದೆ ಆತನಿಗೆ ಅರ್ಥಮಾಡಿಸಲಾಗದು ಎಂದುಕೊಂಡಿದ್ದಳು ಆಕೆ ಆದರೆ ಅವಳ ಬದಲಾದ ಮನಸ್ಥಿತಿಯ ಅರಿವಾಗಿತ್ತು ಅವನಿಗೆ.

"ಎರಡೂ ದಡದಲ್ಲಿಯೂ ಅದೇ ಮೌನ
ಬದಲಾಗದಂತಹಾ ಅದೇ ತೀರ್ಮಾನ
ಹೇಳದೇ ಉಳಿದ ಎಷ್ಟೋ ಮಾತುಗಳು
ಇಕ್ಕೆಲಗಳಲೂ ಪ್ರತಿಧ್ವನಿಸುತ್ತಿವೆ..
ಎಂದಾದರೂ ಎರಡು ದಡಗಳು 
ಒಂದಾಗಲು ಸಾಧ್ಯವೇ?"

ಇಬ್ಬರೂ ಒಬ್ಬರನೊಬ್ಬರು ದೂಷಿಸಲಿಲ್ಲ. ಸುನೀತಿಯಾದರೂ ಇಂದಲ್ಲಾ ನಾಳೆ ಮದುವೆಯಾಗುವವಳು, ಸುಶಾಂತ್ ಕೂಡಾ ಹಾಗೆಯೇ.. ಇಬ್ಬರ ಸಂಗಾತಿಗಳೂ ಬಹುಶಃ ಈ ರೀತಿಯ ಸಾಂಗತ್ಯವನ್ನು ಒಪ್ಪುವುದು ಸಾಧ್ಯವಿಲ್ಲ. ಇಬ್ಬರದ್ದೂ ಒಂದೇ ತೀರ್ಮಾನವಾದರೂ ಬಾಯಿ ಬಿಟ್ಟು ಹೇಳಿಕೊಳ್ಳುತ್ತಿಲ್ಲ. ಬಹುಶಃ ಸ್ವಾಭಿಮಾನ ಅಡ್ಡ ಬರುತ್ತಿರಬಹುದು ಅಥವಾ ಆತನ ಭಾವನಾ ಪ್ರಪಂಚದಲ್ಲಿ ಈ ರೀತಿಯ ಯೋಚನೆಗಳು ಬಂದಿರುವುದೇ ಅನುಮಾನ. ಈಕೆಯು ಕೈಗೆಟುಕದ ದ್ರಾಕ್ಷಿ ಹುಳಿ ಎಂಬಂತೆ ಸಿಗದ ಉತ್ತರ, ನಿಲುಕದ ವ್ಯಕ್ತಿ ಕೂಡಾ ಸಲ್ಲದು ಎಂಬ ತೀರ್ಮಾನದಲ್ಲಿದ್ದಾಳೆ.

ಕೇಳಿದರೆ, ಎಲ್ಲದಕ್ಕೂ ಉತ್ತರ ಹುಡುಕಿಕೊಂಡು ಹೋಗಬಾರದು. ನದಿಮೂಲ, ಋಷಿಮೂಲ, ಸ್ತ್ರೀಮೂಲ ಹುಡುಕಬಾರದಂತೆ ಹಾಗೆಯೇ ಆಲೋಚನೆ ಮತ್ತು ಬೇಜಾರಿನ ಮೂಲವನ್ನೂ ಅರಸಿ ಹೊರಡಬಾರದು ಎಂಬ ಜಾಣ ಉತ್ತರ ನೀಡಿ ಜಾರಿಕೊಳ್ಳುತ್ತಾಳೆ.

ಅಂಕೆಗೆ ಸಿಗದ ರಾಧಾ-ಮಾಧವರ ಸಹಚರ್ಯ ಇವರದ್ದು ಎಂದು ಭಾಸವಾಗುವ ಹೊತ್ತಲ್ಲೇ, ರಾಧಾ-ಮಾಧವರು ಒಟ್ಟಾಗಿ ಬದುಕಿದ್ದು ಕಡಿಮೆಯೇ ಎಂಬ ಆಲೋಚನೆಯೂ ಬರುತ್ತದೆ. ಇವರ ಜೀವನವೂ ಹಾಗೇ ಆಗಬಹುದೇ? ಅಲ್ಲಿ ಪ್ರೀತಿ ಇಬ್ಬರನ್ನೂ ಬಂಧಿಸಿತ್ತು. ಆದರೆ ಇಲ್ಲಿ ಪ್ರೀತಿಯೇ ಇಲ್ಲವಲ್ಲ... ಬಹುಶಃ ಹಾಗೆನ್ನುವುದೂ ತಪ್ಪಾಗುವುದೋ ಏನೋ..!?

ಪ್ರೀತಿ ಇಲ್ಲದ ಮೇಲೆ ಮಾತಿಗೆ ಪ್ರತಿಮಾತು, ಪ್ರಶ್ನೆಗೆ ಉತ್ತರ ಹುಟ್ಟಿತು ಹೇಗೆ? ಪ್ರೀತಿ ಎಂದರೆ ಹರೆಯದ ಹುಚ್ಚು ಹೊಳೆಯಲ್ಲ, ಅದರಲ್ಲಿ ಕೊಚ್ಚಿ ಹೋಗುವ ಜೊಳ್ಳುಗಳೂ ಇವರಲ್ಲ. ಅದಮ್ಯ ಜೀವನಪ್ರೀತಿ, ಪರಸ್ಪರ ಹೊಂದಾಣಿಕೆ, ಅರ್ಥೈಸುವಿಕೆ, ಒಬ್ಬರನೊಬ್ಬರು ನೋಯಿಸದ ಗುಣಗಳು ಜೊತೆಯಾಗಬಹುದೇ?

"ಬದುಕೊಂದು ಸುಂದರ ಪ್ರಶ್ನೆ
ಉತ್ತರ ಹುಡುಕಲು ಹಾತೊರೆಯಬಾರದು
ಸಿಕ್ಕ ಉತ್ತರವ ಪ್ರಶ್ನಿಸದೆ ಒಪ್ಪಲೂಬಾರದು
ಇದೇ ಉತ್ತರ ಎನ್ನಲೂಬಾರದು
ಉತ್ತರ ಸುಂದರವೇ ಆಗಬೇಕಿಲ್ಲ
ಕುರೂಪಿ ಉತ್ತರವೂ ಜೊತೆಯಾಗಬಹುದು
ಯಾವಾಗಲೂ ಉತ್ತರ ಪ್ರಶ್ನೆಯದ್ದೇ ಆಯ್ಕೆ
ಅದನ್ನು ಪ್ರಶ್ನಿಸಲೂಬಾರದು
ಏಕೆಂದರೆ ಬದುಕು ಪ್ರಶ್ನಾತೀತ"

ಸುನೀತಿಯ ಈ ಸ್ಟೇಟಸ್ ಅನ್ನಾದರೂ ಸುಶಾಂತ್ ನೋಡುತ್ತಾನಾ? ಮುಂದೇನಾಗಬಹುದು..?

ಈ ಕುತೂಹಲಕ್ಕೆ ಉತ್ತರ ನನ್ನ ಬಳಿ ಇಲ್ಲ. ಏಕೆಂದರೆ  ಅದು  ಅವರವರ ಸ್ವಂತ ಬದುಕು, ನಿರ್ಧಾರಗಳು ಅವರವರ ಸ್ವಂತ. ಏಕೆಂದರೆ, ಬದುಕು ಪ್ರಶ್ನಾತೀತ ಅಲ್ಲವೇ? ಬೇಕಾದರೆ ನಮ್ಮ ನಮ್ಮ ಯೋಚನೆಗಳಂತೆ ಅವರ ಜೀವನವನ್ನು ರೂಪಿಸಿ ಖುಷಿಪಡಬಹುದು. ಏಕೆಂದರೆ, ಇದು ನಮ್ಮ ಆಲೋಚನೆ. ಇದೂ ನಮ್ಮ ಸ್ವಂತ, ಇದೂ ಕೂಡಾ ಪ್ರಶ್ನಾತೀತ.

~ವಿಭಾ ವಿಶ್ವನಾಥ್

ಗುರುವಾರ, ಡಿಸೆಂಬರ್ 5, 2019

ಅಪರಿಚಿತಳಾಗಿಯೇ ಉಳಿದಿದ್ದರೆ...

ಅಪರಿಚಿತಳಾಗಿಯೇ ಉಳಿದಿದ್ದರೆ 
ಎಷ್ಟೋ ಚೆನ್ನಾಗಿರುತ್ತಿತ್ತಾದರೂ..
ಪರಿಚಿತತೆಯ ನೆನಪುಗಳ ಸವಿ
ಸಿಗುತ್ತಲೇ ಇರಲಿಲ್ಲವೋ ಏನೋ..

ಪರಿಚಿತತೆಯ ಆಳಕ್ಕಿಳಿದಷ್ಟೂ
ಸಂಬಂಧಕ್ಕೊಂದು ಹೆಸರು ಹುಡುಕಬೇಕು
ಅದರೊಳಗಿನ ಬಂಧದೊಳಗೇ
ಬಂಧಿಯಾಗಿ ಬದುಕು ಸವೆಸಬೇಕು

ಅವರ ನೋವಿಗೆ ಮುಲಾಮಾಗಬೇಕು
ಕೆರಲಿದಾಗಳೆಲ್ಲಾ ಸಂತೈಸುತ್ತಿರಬೇಕು
ಅಸಹಾಯಕರೆನಿಸಿದಾಗ ಸಹಾಯಕ್ಕೊದಗಬೇಕು
ಸಿಟ್ಟಿಗೆ ಬಲಿಪಶುವೂ ಆಗಬೇಕು

ಮೊದಲಿಗೆ ಪರಿಚಿತಳಾಗಿದ್ದಾದರೂ ಏಕೆ..?
ಅದರ ನಂತರದ ಅಪರಿಚಿತತೆಯ ಕಹಿ
ಪರಿಚಿತತೆಯ ಸಿಹಿಯ ಮರೆಸಬಹುದೇನೋ..
ಸಿಹಿಯ ನಂತರದ ಕಹಿ ಹೆಚ್ಚೇ ಅಲ್ಲವೇ..?

ಬದುಕಿನ ಮತ್ತೊಂದು ಮಗ್ಗುಲಿಗೆ
ಅರಿವಾಗದಂತೆ ದಾಟುತ್ತಿರಬೇಕು
ಅಂಟಿಯೂ ಅಂಟದಂತೆ ನಡೆಯುತ್ತಾ
ಇದ್ದೂ ಇಲ್ಲದಂತೆ ಸಾಗುತ್ತಿರಬೇಕು

ಪರಿಚಿತಳಾಗದಿದ್ದರೇ ಚೆನ್ನಾಗಿರುತ್ತಿತ್ತು
ಎಂದೆನ್ನುವ ಎಳೆ ಇಡಿದೇ ಮಾತಾಡುತ್ತಾ
ಈಗ ಪರಿಚಿತತೆಯ ಮಗ್ಗುಲಿಗೆ ಹೊರಳುತ್ತಿದ್ದೇವೆ
ಅಪರಿಚಿತತೆಯ ದೂರವ ಹತ್ತಿರಾಗಿಸುತ್ತಾ..

~ವಿಭಾ ವಿಶ್ವನಾಥ್

ಭಾನುವಾರ, ಡಿಸೆಂಬರ್ 1, 2019

ತನ್ಮಯತೆಯ ತಂತಿ ಮೀಟಿ

ಪ್ರೇಮವೆಂದರೆ ರಾಧಾ-ಕೃಷ್ಣನಂತಿರಬೇಕು. ಆದರೆ ನನ್ನ ಬದುಕಲ್ಲಿ ಹಾಗೆ ಒಲವ ಧಾರೆಯೆರೆಯುವವನು ಸಿಗಬಹುದೇ..? ಸಿಕ್ಕರೂ ನಾನು ರಾಧೆಯಾಗಬಲ್ಲೆನೇ..? ಖಂಡಿತಾ ಅದನ್ನು ಕನಸ್ಸಿನಲ್ಲಿಯೂ ನೆನೆಸಿಕೊಳ್ಳಲಾರೆ. ಬದುಕಿನ ಮರುಭೂಮಿಯಲ್ಲಿ ಒಲವ ಧಾರೆಯೆರೆದು, ಜೀವಾಮೃತವ ಸಿಂಪಡಿಸಿ ನನ್ನನ್ನು ದಕ್ಕಿಸಿಕೊಳ್ಳುವ ಸಾಹಸವನ್ನು ಮಾಡಲು ಯಾರೂ ಬರಲಾರರು. ಸುತ್ತಲೂ ಬೇಕಾದಷ್ಟು ಸೌಲಭ್ಯವಿದೆ, ಹಣವಿದೆ ಜೊತೆಗೆ ಬಂಧನವೂ ಇದೆ. ಇಲ್ಲಿನ ಬದುಕನ್ನು ಬಂಗಾರದ ಪಂಜರವೆಂದರೂ ತಪ್ಪಾಗಲಾರದು. ಇಲ್ಲಿ ಎಲ್ಲವೂ ಇದೆ ಆದರೂ ನನ್ನ ಪಾಲಿಗೆ ಮಾತ್ರ ಯಾವುದೂ ಇಲ್ಲ. ಹೆಸರು ಸುಮಂಗಲಾ ಎಂದಾದರೂ ನಾನು ಎಲ್ಲಾ ಸುಮಂಗಲೆಯರ ಪಾಲಿಗೆ ಅಪಶಕುನ. ಒಂದು ಕಾಲದಲ್ಲಿ ನನ್ನ ಮುಖ ನೋಡದೇ ಹೊರ ಹೊರಡದವರ ಪಾಲಿಗೆ ಇಂದು ನಾನು ಕಂಡರೆ ಅಪಶಕುನ. ನನ್ನ ಮುಖ ನೋಡಿದರೆ ಹೊರ ಹೊರಡಲಾರರು. ಇದರಲ್ಲಿ ನನ್ನ ತಪ್ಪಾದರೂ ಏನಿದೆ..? ಸಂಪ್ರದಾಯದ ಬೇಲಿಯ ಬಂಧನದಲ್ಲಿ ನಲುಗಿ ಹೋಗುತ್ತಿರುವವಳ ಇಡೀ ಬದುಕು ಹೀಗೆಯೇ ಸವೆದು ಹೋಗಿಬಿಟ್ಟರೆ..! ಎಂದು ಆಲೋಚಿಸಿದರೇ ಭಯವಾಗುತ್ತಲಿದೆ. ತನ್ಮಯತೆಯಿಂದ ಹಾಡುತ್ತಾ ಕುಳಿತವಳ ಹಾಡು ಕೇಳಲು ಕಿಕ್ಕಿರಿದು ಸೇರುತ್ತಿದ್ದ ಜನ, ಅದಕ್ಕೆ ಪ್ರೋತ್ಸಾಹ ನೀಡುತ್ತಿದ್ದವರು ನನ್ನ ಮನೆಯವರು ಆದರೆ ಇಂದು ಅದೇ ಅವರ ಪಾಲಿಗೆ ಕರ್ಕಶವಾಗಿದೆ. ನನ್ನ ಪಾಲಿಗೆ ಅದು ನಿಷಿದ್ಧವಾಗಿದೆ. ರುಕ್ಮಿಣಿಯಾಗಲಿಲ್ಲ, ರಾಧೆಯೂ ಆಗಲಿಲ್ಲ ಕಡೆಗೆ ಮೀರಾ ಕೂಡಾ ಆಗಲಾಗುತ್ತಿಲ್ಲ. ಬಯಸಿದ ಕೃಷ್ಣ ಸಿಗಲಿಲ್ಲ, ನನ್ನ ಪಾಲಿಗೆಂದು ಮೀಸಲಾದವನು ದಕ್ಕಲಿಲ್ಲ. ಒಲವ ತಂತಿಯ ಮೀಟಿ ಹೊರಟ.. ಈಗ ನನ್ನೊಳಗೆ ಉಂಟಾಗಿರುವ ಪ್ರೀತಿಯ ಅಲೆಯನ್ನು ನನ್ನೊಳಗೇ ಬಚ್ಚಿಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ. ಒಲವಿನ ಅಲೆಯನ್ನು ಒಡಲೊಳಗೆ ಬಚ್ಚಿಟ್ಟುಕೊಳ್ಳುವುದು ಎಷ್ಟೊಂದು ಕಷ್ಟ ಅಲ್ಲವೇ..? ಅದರಲ್ಲೂ ತಂಪಾದ ಒಲವು ಹಿಮದಂತೆ ಕಾಲ ಕಳೆದಂತೆ ಬಿಸಿಯ ಅನುಭವ ಮೂಡಿಸಿ ಒಳಗೊಳಗೇ ಕೊಂದುಬಿಡುತ್ತದೆ. ತಂಪೋ-ತಾಪವೋ ತಿಳಿಯುವಷ್ಟರಲ್ಲಿ ಅಲ್ಲಿ ಘಾಸಿಯಾಗಿರುವುದಂತೂ ಸತ್ಯ. 
*************

ಗೋಪಿಕಾಪುರದ ಗೋವಿಂದ ಗೌಡರ ಕುಟುಂಬ ಸುತ್ತಮುತ್ತಲಿನ ಹತ್ತು ಹಳ್ಳಿಗೇ ದೊಡ್ಡ ಕುಟುಂಬ. ವೈಭವ, ಸಂಪ್ರದಾಯ, ಆಸ್ತಿ, ನ್ಯಾಯ ಎಲ್ಲದರಲ್ಲಿಯೂ ಈ ಕುಟುಂಬದ ಸಮನಾಗಿ ಯಾರೂ ನಿಲ್ಲುವರಿಲ್ಲ. ಸಾತ್ವಿಕತೆಯಿಂದ ಮತ್ತು ಸಹಕಾರದಿಂದ ಸಹಬಾಳ್ವೆ ನಡೆಸುತ್ತಿದ್ದರು ಆ ಮನೆಯ ಮಂದಿ. ಆಳುಗಳನ್ನು ಕೀಳಾಗಿ ನೋಡುತ್ತಿರಲಿಲ್ಲ. ಶ್ರೀಮಂತ-ಬಡವ ಎನ್ನದೆ ಎಲ್ಲರಿಗೂ ಒಂದೇ ರೀತಿಯ  ಆತಿಥ್ಯ ಸಿಗುತ್ತಿತ್ತು ಅಲ್ಲಿ. ಗೋವಿಂದಗೌಡರಿಗೆ ಒಬ್ಬ ಮಗ ಮತ್ತು ಒಬ್ಬಳು ಮಗಳು. ಮಗಳು ಮಾಧವಿ ಮತ್ತು ಮಗ ವಿದ್ಯಾಧರ.  ವಿದ್ಯೆಯ ಜೊತೆ ವಿನಯ ಮತ್ತು ಶಿಸ್ತಿನ ಪಾಠವನ್ನು ಸಹಾ ಹೇಳಿಕೊಟ್ಟು ಮಕ್ಕಳನ್ನು ಬೆಳೆಸುತ್ತಿದ್ದರು. ಸಂಪ್ರದಾಯಗಳ ಗೊಡ್ಡು ಬೇಲಿ ಇಲ್ಲಿಲ್ಲ ಆದರೆ ವೈಜ್ಞಾನಿಕ ಮನೋಭಾವದಿಂದ ಬೆಳೆಸಿಕೊಂಡ ಆಚರಣೆಗಳನ್ನು ತಪ್ಪಿಸಲಾರರು. ವಿದ್ಯಾಧರ ಇಂತಹ ವಾತಾವರಣದಲ್ಲಿ ಬೆಳೆದವ. ಪಟ್ಟಣದಲ್ಲಿ ಓದಿದ್ದರೂ ಹಳ್ಳಿಯ ಮತ್ತು ಮಣ್ಣಿನ ಸೇವೆಗೆಂದೇ ಮತ್ತೆ ಮರಳಿ ಹಳ್ಳಿಗೆ ಬಂದು ನೆಲೆ ನಿಂತಿದ್ದವನು. ಆಧುನಿಕತೆಯ ಕಾಲದಲ್ಲೂ ಮಣ್ಣಿನ ಸೊಗಡಿಗೆ ಮರುಳಾದವ. ಎಂ.ಎಸ್ಸಿ ಅಗ್ರಿಕಲ್ಚರ್ ನ ಗೋಲ್ಡ್ ಮೆಡಲಿಸ್ಟ್. ಆದರೆ, ಹಳ್ಳಿಯ ಹೊಲ-ಗದ್ದೆಗಳಲ್ಲಿ ಭೂ ತಾಯಿಯ ಸೇವೆಗೆ ಟೊಂಕ ಕಟ್ಟಿ ನಿಲ್ಲುವ  ಆದರ್ಶ ಯುವಕ. ಗೋಪಿಕಾಪುರದ ಯುವತಿಯರಿಗೆ ವಿದ್ಯಾಧರನನ್ನು ನೋಡುವುದೇ ಕಣ್ಣಿಗೆ ಹಬ್ಬ. ಗೋಪಿಕಾಪುರದ ಹೆಂಗಳೆಯರಿಗೆ ಅಚ್ಚುಮೆಚ್ಚಿನ ಮಗ ವಿದ್ಯಾಧರ. ತಾಯಿಲ್ಲದ ಮಗನಿಗೆ ಊರ ತುಂಬೆಲ್ಲಾ ತಾಯಂದಿರು. ಯೌವ್ವನದ ಹೊಸ್ತಿಲಲ್ಲಿದ್ದರೂ ಇಲ್ಲಿಯವರೆಗೂ ವಿದ್ಯಾಧರನ ಮನದ ಕದ ಯಾರಿಗೂ ತೆರೆದಿರಲಿಲ್ಲ.. ಅವಳೊಬ್ಬಳ ಹೊರತಾಗಿ ಅವನ ಮನದಲ್ಲಿ ಬೇರಾರಿಗೂ ಜಾಗವಿರಲಿಲ್ಲ. ಅವಳಿಗಾಗಿ ಹುಡುಕದ ಜಾಗವಿಲ್ಲ, ಬೇಡದ ದಿನವಿಲ್ಲ, ಪೂಜಿಸದ ದೇವರಿಲ್ಲ ಆದರೆ ಅವಳು ಇವನ ಜೀವನದ ಕೆಲ ದಿನಗಳ ಭಾಗವಾಗಿ ಮಾತ್ರ ಬಂದು ಹೋಗಿದ್ದಳು. 

"ಸುಮ ನಿಲ್ಲು, ಓಡಬೇಡ.. ನನ್ನನ್ನು ಬಿಟ್ಟು ದೂರ ಹೋಗಬೇಡ. ಒಮ್ಮೆ ನನ್ನ ಮಾತು ಕೇಳು. ಬಹುದೂರ ಸಾಗುವುದಿದೆ ಮಧ್ಯದಲ್ಲಿ ನನ್ನನ್ನು ಒಬ್ಬಂಟಿ ಮಾಡಬೇಡ." ಬಡಬಡಿಸುತ್ತಿದ್ದಾಗಲೇ ವಿದ್ಯಾಧರನಿಗೆ ಎಚ್ಚರವಾಯಿತು. ಅವಳ ನೆನಪಿನಿಂದ, ಆ ದಿನಗಳ ಗುಂಗಿನಿಂದ ಹೊರಬರಲು ಅವನಿಗೆ ಸಾಧ್ಯವೇ ಆಗಿರಲಿಲ್ಲ. ಅವಳ ನೆನಪಿನಿಂದ ಎಚ್ಚರಾದವನು ಎದ್ದು ಕೊಳಲು ತೆಗೆದುಕೊಂಡು ಹೊಳೆ ದಂಡೆಗೆ ಹೊರಟ. ಪೌರ್ಣಮಿಯ ಹಾಲು ಬೆಳದಿಂಗಳು ಇಡೀ ಗೋಪಿಕಾಪುರವನ್ನಾವರಿಸಿತ್ತು. ಮೌನದಲ್ಲೂ ನಾದದ ಅಲೆಯನ್ನು ಹೊಮ್ಮಿಸಲು ವಿದ್ಯಾಧರ ಕೊಳಲನ್ನು ಹೊರತೆಗೆದ. ಆ ಕೊಳಲನ್ನು ದಿಟ್ಟಿಸಿ ನೋಡುತ್ತಾ ಒಮ್ಮೆ ನಿಟ್ಟುಸಿರು ಬಿಟ್ಟ. ಆ ಕೊಳಲು ಆತನ ಗೆಳೆಯನನ್ನೊಮ್ಮೆ ನೆನಪಿಸಿತು. 

ಮಾಧವಕಾಂತ ವಿದ್ಯಾಧರನ ಅಚ್ಚುಮೆಚ್ಚಿನ ಗೆಳೆಯ. ಒಂದೇ ತಾಯಿಯ ಒಡಲಿನಿಂದ ಜೀವತಳೆಯಲಿಲ್ಲ ಆದರೆ ಒಂದೇ ಆತ್ಮದ ಎರಡು ಜೀವಗಳು ಅವರು.. ಸಹೋದರತೆ, ಆತ್ಮೀಯತೆ ಒಟ್ಟಾಗಿ ಮೇಳೈಸಿತ್ತು ಅವರಿಬ್ಬರ ಬದುಕಲ್ಲಿ. ಹಣ್ಣು, ಆಟಿಕೆ, ಪುಸ್ತಕ ಎಲ್ಲವೂ ಸಮನಾಗಿ ಹಂಚಿಕೆಯಾಗುತ್ತಿತ್ತು ಇಬ್ಬರಲ್ಲೂ. ಮಾಧವನಿಗೆ ಈಜಲು ಕಲಿಸಿ ಕೊಟ್ಟಿದ್ದ ವಿದ್ಯಾಧರ. ವಿದ್ಯಾಧರನಿಗೆ ಕೊಳಲು ನುಡಿಸಲು ಕಳಿಸಿದ್ದ ಮಾಧವ. ಈಜಲು ಕಲಿತ ನಂತರ ಗುರುವಿಗೇ ಪೈಪೋಟಿ ನೀಡುವಂತೆ ಸಜ್ಜಾಗಿದ್ದ. ಆದರೆ, ಅಷ್ಟು ಒಳ್ಳೆಯ ಈಜುಪಟು ನೀರಲ್ಲಿ ಮುಳುಗಿ ಸತ್ತದ್ದು ವಿದ್ಯಾಧರನಿಗೆ ಸೋಜಿಗ. ಆ ಮಳೆಗಾಲದಲ್ಲಿ ತುಂಬಿ ಹರಿಯುವ ಹೊಳೆಯಲ್ಲಿ ಅವನಿಗೆ ಈಜುವ ಹುಚ್ಚು ಬಂದದ್ದಾದರೂ ಏಕೆ? ಅಪರಾತ್ರಿಯಲ್ಲಿ ಮನೆಯಿಂದ ಹೊರ ಹೊರಟನಂತೆ.. ಅಂತಹಾ  ಯಾವ ಕಷ್ಟದಲ್ಲಿ ಅವನಿದ್ದ..? ನಾನಿದ್ದಿದ್ದರೆ ನನ್ನ ಪ್ರಾಣವನ್ನೇ ಒತ್ತೆ ಇಟ್ಟು ಅವನನ್ನು ಉಳಿಸಿಕೊಳ್ಳುತ್ತಿದ್ದೆ. ಪ್ರೀತಿಯನ್ನು ಕಳೆದುಕೊಂಡಿದ್ದೆ ಆದರೆ ನಾನು ವಿವೇಕವನ್ನೂ ಕಳೆದುಕೊಂಡಿದ್ದೆನೇ..? ಪ್ರಾಣ ಸ್ನೇಹಿತನ ಮದುವೆಗೂ ಬಾರದಷ್ಟು ಕಟುಕನಾಗಿದ್ದೆನೇ..? ಸಣ್ಣ ಪುಟ್ಟ ವಿಚಾರಗಳಿಗೆ ನಾನು ತಲೆಕೆಡಿಸಿಕೊಂಡು ಕೂತಿದ್ದಾಗ ನನ್ನಲ್ಲಿ ಸ್ಥೈರ್ಯ ತುಂಬುತ್ತಿದ್ದವನ ಬದುಕು ಏಕೆ ಹಾಗಾಯಿತು..? ನಾನು ಓದಲು ಪಟ್ಟಣಕ್ಕೆ ಹೋಗಲೇಬಾರದಿತ್ತು. ನಾನು ಹೋಗುವುದಿಲ್ಲ ಎಂದಾಗ ಅವನೇ ನನ್ನನ್ನು ಬಲವಂತವಾಗಿ ಓದಲು ಕಳುಹಿಸಿದ. "ನನಗಂತೂ ಓದು ತಲೆಗೆ ಹತ್ತಲಿಲ್ಲ. ನೀನು ಹೆಸರಿಗೆ ತಕ್ಕಂತೆ ಸರಸ್ವತಿ ಪುತ್ರ. ನೀನು ಓದಿ ನಮ್ಮೆಲ್ಲರ, ಹಳ್ಳಿಯ ಕೀರ್ತಿಯನ್ನು ಎತ್ತಿ ಹಿಡಿಯಬೇಕು. ನೀನು ಬರುವವರೆಗೂ ನೀನು ನಿರ್ವಹಿಸಬೇಕಾದ ಜವಾಬ್ದಾರಿಯನ್ನು ನಾನು ನಿರ್ವಹಿಸುತ್ತೇನೆ. ನಿನ್ನ ತಂದೆಗೆ ಮತ್ತೊಬ್ಬ ಮಗನಾಗಿ ಕರ್ತವ್ಯದಲ್ಲಿ ಹೆಗಲು ಕೊಡುತ್ತೇನೆ. ಮಾಧವಿಯ ಅಣ್ಣನಾಗಿ ರಕ್ಷಣೆ ಮಾಡುತ್ತೇನೆ" ಎಂದಿದ್ದ. ಅವನ ಈ ಭರವಸೆಯ ಮಾತುಗಳೇ ಅಲ್ಲವೇ ನನ್ನನ್ನು ಓದಲು ಪ್ರೇರೇಪಿಸಿದ್ದು. ಬದುಕಿನ ಲಹರಿ ಬದಲಾಗಲು ಎಷ್ಟು ಕಾಲ ಹಿಡಿಯುತ್ತದೆ ಅಲ್ಲವೇ..? ಅವನ ಉಸಿರು ಈ ಕೊಳಲೊಳಗೇ ಉಳಿದು ಹೋದಂತೆ ಭಾಸವಾಗುತ್ತದೆ.. ಅವಳು ನನ್ನೊಳಗೇ ಉಳಿದಂತೆ. ಕಾಣದ ಭಾವ ದಕ್ಕುವುದಕ್ಕೆ ಪ್ರೀತಿ ಎನ್ನಬಹುದೇ..? ಕೊರಳ ಕಂಪಿನಿಂದ ತನ್ಮಯತೆಯ ತಂತಿ ಮೀಟಿದವಳು ಅವಳಾದರೆ, ಆತ್ಮೀಯತೆಯಿಂದ ಮನದ ಭಾವ ಮೀಟಿದವನು ಇವನು.. ಮೀಟಿದ ಭಾವಗಳನ್ನು ಅಲೆಯಾಗಿ ತೇಲಿ ಬಿಡದಿದ್ದರೆ ಅದು ಭಾರವಾಗುತ್ತದೆ. ಒಲವ ಸುಧೆಯಾದರೂ, ದ್ವೇಷದ ತರಂಗವಾದರೂ ಹರಿದುಹೋಗಿಬಿಡಬೇಕು ಇಲ್ಲವಾದಲ್ಲಿ ಹೆಪ್ಪುಗಟ್ಟಿ ಮನದಲ್ಲಿ ನೆಲೆ ನಿಂತುಬಿಡುತ್ತದೆ. ನಿಶ್ಚಲವಾಗಿ ನಿಂತದ್ದು ಕೊಳಕಾಗಬಹುದು. ಗೋಪಿಕಾಪುರದ ಹೊಳೆಯಂತೆ ಎಲ್ಲವನ್ನೂ ಹರಿಯಬಿಡಬೇಕು. ಹರಿಯ ಬಿಟ್ಟಾಗ ಕಾಲದೊಂದಿಗೆ ಮಾಯವಾಗಬಹುದು. ಕಾಲದೊಂದಿಗೆ ಮಾಯವಾಗಬಹುದೆಂಬುದು ನಮ್ಮ ಭ್ರಮೆ ಅಷ್ಟೇ.. ನೆನಪುಗಳು ಎಂದಿಗೂ ಸ್ಥಿರ. ಕಾಲ ಓಡಬಹುದು, ವ್ಯಕ್ತಿಗಳು ಮತ್ತು ನಡವಳಿಕೆಗಳು ಬದಲಾಗಬಹುದು ಆದರೆ ನೆನಪುಗಳು ಮಾತ್ರ ಬದಲಾಗವು.

ಮಾಧವನ ನೆನಪು ನನ್ನಲ್ಲಿ ಸದಾ ಜೀವಂತವಾಗಿ ಉಳಿಯಬೇಕೆಂದೇ ನಾನು ಅವನ ಅಂತ್ಯಕ್ರಿಯೆಗೂ ಬರಲಿಲ್ಲ. ಬೆಂಕಿಯಲ್ಲಿ ಧಗಧಗಿಸುವ ಅವನನ್ನು ನೋಡಲು ನನ್ನಿಂದಾಗದು ಆದುದರಿಂದ ನಾನು ಬರಲಿಲ್ಲ. ಏನೇನೋ ದಂತಕತೆಗಳು ಹರಿದಾಡಿದವು ಹಾಗೂ ಇನ್ನೂ ಆ ಕಥೆಗಳು ನಿಂತಿಲ್ಲ. ಅಮ್ಮನಿಗೆ ಹೇಗೆ ಮುಖ ತೋರಿಸಲಿ ಮಾಧವ..? ನನ್ನ ಗೆಳೆಯನನ್ನು ಉಳಿಸಿಕೊಳ್ಳಲಾಗದ ಕಡು ಪಾಪಿ ಎಂದು ನಾನು ಹೇಗೆ ಹೇಳಲಿ..? ಈಗ ತಾನೇ ಮದುವೆಯಾಗಿ ಬಂದಿರುವ ಆ ಹುಡುಗಿಯ ಪರಿಸ್ಥಿತಿ ಹೇಗಿರಬಹುದು..? ಉತ್ತರಿಸುವವ ಈಗ ಜೊತೆಗಿಲ್ಲ. ಕೆಲ ಪ್ರಶ್ನೆಗಳು ಉಳಿದು ಹೋಗಿವೆ ಉತ್ತರವೇ ಸಿಗದಂತೆ.. ಉತ್ತರಿಸಬೇಕಾದವರು ಜೊತೆಗಿಲ್ಲವಾದರೂ ಪ್ರಶ್ನೆಗಳ ಜೊತೆಗೇ ಗುದ್ದಾಡುತ್ತಾ ಬದುಕಿಬಿಡುತ್ತೇವೆ, ಉತ್ತರ ಸಿಗದೆಂದು ಗೊತ್ತಿದ್ದರೂ.. ಆಲೋಚನೆಯ ಜೊತೆ ಈಗ ಕೊಳಲು ಜೊತೆಯಾಯಿತು. ನಿದ್ರಿಸುವವರಿಗೆ ಜೋಗುಳ ಹಾಡಿದಂತೆ ನಿನಾದ ಹೊಮ್ಮುತ್ತಿತ್ತು ಶೋಕಭರಿತವಾಗಿ.. ಗೋಪಿಕಾಪುರದ ಹೊಳೆದಂಡೆಯ ಪಕ್ಕದ ಬಂಡೆಯ ಮೇಲೆ ಕಾಲು ಇಳಿ ಬಿಟ್ಟು ಕೂತವನು ಮೈಮರೆತು ಕೊಳಲು ನುಡಿಸುತ್ತಿದ್ದ. ಕಣ್ಣಿಂದ ಹರಿದ ನೀರು ಹೊಳೆಯ ಜೊತೆಗೆ ಮಿಳಿತವಾಗುತ್ತಿತ್ತು. ಶೋಕಪೂರ್ಣ ರಾಗವನ್ನು ಕೇಳಿ ಚಂದಿರನೂ ಮೋಡದ ಚಾದರ ಹೊದ್ದು ಮುಗುಮ್ಮನೆ ಕುಳಿತಿದ್ದ. ಆದರೆ, ನಿದ್ದೆ ಬಾರದ ಒಬ್ಬರ ಮನದಲ್ಲಿನ ತಳಮಳ ಈ ರಾಗವನ್ನು ಕೇಳಿದೊಡನೆ ಕಣ್ಣೀರಾಗಿ ಹರಿದು ಹೋಗುತ್ತಿತ್ತು. ಮನಸೋತಿದ್ದ ರಾಗವನ್ನು ಎಂದಾದರೂ ಮರೆಯಲಾದೀತೇ..? ಕೊಳಲು ನುಡಿಸಿ ಮನದ ದುಗುಡವನ್ನು ಕಳೆದುಕೊಂಡು ಹಗುರಾದವನಂತೆ ವಿದ್ಯಾಧರ ಮನೆಯ ಕಡೆ ಹೊರಟರೆ, ಕಣ್ಣಿಗೆ ಹತ್ತಲಿದ್ದ ನಿದ್ದೆಯನ್ನು ಕಳೆದುಕೊಂಡು ಮತ್ತಷ್ಟು ಗೊಂದಲಕ್ಕೆ ಬಿದ್ದು, ಮನಸ್ಸನ್ನೆಲ್ಲಾ ರಾಡಿ ಮಾಡಿಕೊಂಡು ಹಠಕ್ಕೆ ಬಿದ್ದವಳಂತೆ ಅಳುತ್ತಿದ್ದಳು ಸುಮಂಗಲಾ..
*************

ಕೃಷ್ಣಾಪುರದ ಗೋಪಾಲಗೌಡರ ಮುದ್ದಿನ ಮಗಳು ಸುಮಂಗಲಾ. ಮೂರು ಜನ ಅಣ್ಣರ ಮುದ್ದು ಗೊಂಬೆ. ಮಂಗಳಮ್ಮನವರ ಪಾಲಿಗೆ ಮಗಳು ಎಷ್ಟೇ ಬೆಳೆದರೂ ಕೈಗೂಸು. ಮನೆಯವರ ಪಾಲಿನ ಅದೃಷ್ಟ ದೇವತೆ ಸುಮಂಗಲಾ. ಮಂಗಳಕರಳಾದವಳು ಸಹಾ ಹೌದು.. ಸುಮದಂತೆ ಮೃದುವೂ ಹೌದು. ಅಪ್ಪ ಅವಳ ಮುಖ ನೋಡದೆ ಹೊರಗೇ ಕಾಲಿಡರು. ನಡೆದರೆ ನೋಯುತ್ತದೆ, ಅತ್ತರೆ ಸೊರಗುತ್ತದೆ ಮಗು ಎಂದು ಅಂಗೈಯ್ಯಲ್ಲಿಟ್ಟುಕೊಂಡೇ ಸಾಕುತ್ತಿದ್ದರು ಅವಳನ್ನು. ಕೊಂಚ ಶೀತವಾದರೂ ಮನೆಯಲ್ಲಿ ವೈದ್ಯರು ಪ್ರತ್ಯಕ್ಷ. ಅವಳು ಕೇಳುವುದಕ್ಕಿಂತ ಮುನ್ನವೇ ಎಲ್ಲವೂ ಅವಳೆದುರಲ್ಲಿ ಪ್ರತ್ಯಕ್ಷ. ಇಷ್ಟಪಟ್ಟು ಒಂದು ಗೊಂಬೆಯನ್ನು ಬಯಸಿದರೆ ಗೊಂಬೆಗಳ ರಾಶಿಯೇ ಅವಳ ಮುಂದಿರುತ್ತಿತ್ತು. ರೇಡಿಯೋದಲ್ಲಿ ಬರುತ್ತಿದ್ದ ಹಾಡಿಗೆ ಧ್ವನಿಯಾಗಿ ಹಾಡಿದನ್ನು ಕಂಡು ಅವಳ ತಂದೆಗೆ ಆದ ಸಂತಸ ಅಷ್ಟಿಷ್ಟಲ್ಲ. ಅಂದಿನಿಂದ ಅವಳಿಗೆ ಮನೆಯಲ್ಲಿಯೇ ಸಂಗೀತ ಪಾಠ ಆರಂಭವಾಯಿತು. ಅವಳೂ ಸಂಗೀತವನ್ನು ತನ್ನ ಪ್ರಾಣವೆನ್ನುವಂತೆ ಪ್ರೀತಿಸಿದಳು. ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಎಲ್ಲಾ ರಾಗಗಳನ್ನೂ ಕರತಲಾಮಲಕ ಮಾಡಿಕೊಂಡಳು. ಜೊತೆಗೆ ವೀಣೆ ನುಡಿಸುವುದನ್ನು ಸಹಾ ಕಲಿತುಕೊಂಡಳು. ವೀಣೆ ಮೀಟಿ ಶೃತಿ ಮಾಡಿಕೊಂಡು ಹಾಡಲು ಕುಳಿತರೆ ಆಕೆ ಸಾಕ್ಷಾತ್ ಸರಸ್ವತಿಯ ಅಪರಾವತಾರವೇ. ಪ್ರತಿ ಶುಕ್ರವಾರ ದೇವಿ ದೇವಸ್ಥಾನದಲ್ಲಿ ಸಂಜೆ ಇವಳ ಕಛೇರಿ. ಜೇನು ಸುರಿದಂತಹಾ ಕಂಠಸಿರಿಯಿಂದ ಲಲಿತಾ ಸಹಸ್ರನಾಮ ಪಾರಾಯಣ. ದೇವಿಯ ಗುಡಿಯಲ್ಲಿ ಎಷ್ಟೇ ಜನರಿದ್ದರೂ ಸುಮಂಗಲಾಳಿಗೇ ಮೊದಲು ದೇವಿ ದರ್ಶನವಾಗುತ್ತಿತ್ತು. ಇಷ್ಟೆಲ್ಲಾ ಇದ್ದರೂ ಸಹಾ ಅವಳಿಗೆ ಕೊಂಚವೂ ಅಹಂಕಾರವಿರಲಿಲ್ಲ. ತುಂಬಿದ ಕೊಡ ತುಳುಕುವುದಿಲ್ಲ ಎಂಬ ಮಾತಿಗೆ ಪ್ರತ್ಯಕ್ಷ ಸಾಕ್ಷಿಯಂತಿದ್ದಳು ಅವಳು. ಮನೆಯಲ್ಲಿ ನೀಡಿದ್ದ ಸಂಸ್ಕಾರ, ವಿನಯ ಅಂತಹದಿತ್ತು ಆದರೆ ಸುಮಂಗಲಾ ಕೊಂಚ ದುಃಖಿಯೇ. 

ಶಾಲೆಯಲ್ಲಿಯೂ ಸುಮಂಗಲಾಳಿಗೆ ಗೆಳತಿಯರು ಕಡಿಮೆ. ಸಂಜೆ ಆಡುವ ಹೊತ್ತಿನಲ್ಲಿ ಸಂಗೀತಾಭ್ಯಾಸ ಸಾಗುತ್ತಿತ್ತು. ಮುಂಜಾನೆಯೂ ಸಂಗೀತಾಭ್ಯಾಸ.. ಅವಳು ಹೊರ ಹೋಗುತ್ತಿದ್ದದ್ದೇ ಕಡಿಮೆ ಎಂಬಂತ್ತಿತ್ತು. ಹೊರಗೆ ಆಡಲು ಹೊರಟರೂ ಜೊತೆಯಲ್ಲಿ ಯಾರಾದರೂ ಇದ್ದೇ ಇರುತ್ತಿದ್ದರು ಅವಳ ಬೆಂಗಾವಲಾಗಿ. ಮನೆಯವರ ಅತಿ ಕಾಳಜಿ ಅವಳ ಪಾಲಿಗೆ ಹಿಂಸೆಯಂತೆ ಭಾಸವಾಗುತ್ತಿತ್ತು. ಬಂಗಾರದ ಪಂಜರವಾದರೂ ಅದು ಪಂಜರವೇ ಅಲ್ಲವೇ..? ಹಕ್ಕಿಗೆ ಬಂಗಾರ ಬೇಡ ಸ್ವಾತಂತ್ರ್ಯ ಬೇಕು ಆದರೆ ಸಾಕುವವರಿಗೆ ಬಂಗಾರದ ಪಂಜರ ಪ್ರತಿಷ್ಠೆಯೇ ಅಲ್ಲವೇ..? ಶಾಲೆಯಲ್ಲಿ ಓದಿನಲ್ಲಿಯೂ ಇವಳಿಗೆ ಮೊದಲ ಸ್ಥಾನ ಕಟ್ಟಿಟ್ಟ ಬುತ್ತಿ. ಎಲ್ಲರ ಕಣ್ಣಿಗೂ ಅವಳ ಬದುಕು ಸುಂದರವಾಗಿ ಕಾಣಿಸುತ್ತಿತ್ತು ಅವಳೊಬ್ಬಳ ಹೊರತಾಗಿ. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅಲ್ಲವೇ..? ನೋಡುಗರಿಗೆ ಎಂದಿಗೂ ಹೊರನೋಟವಷ್ಟೇ ದಕ್ಕುತ್ತದೆ ಆದರೆ ಅನುಭವಿಸುವವರಿಗೆ ಅಷ್ಟೇ ತಿಳಿದಿರುವುದು ಅವರವರ ಹಣೆಪಾಡು. ಆದರೂ, ಸುಮಂಗಲಾ ಯಾರನ್ನೂ ನೋಯಿಸಲು ಇಚ್ಛಿಸುತ್ತಿರಲಿಲ್ಲ. ಮತ್ತೊಬ್ಬರ ಇಚ್ಛೆಗೆ ವಿರುದ್ಧವಾಗಿ ನಡೆದದ್ದಿಲ್ಲ. ಅಪ್ಪನ ಮಾತು ಅವಳಿಗೆ ವೇದವಾಕ್ಯವಿದ್ದಂತೆ, ಅದನ್ನು ಮೀರಿ ನಡೆಯುವ ಧೈರ್ಯ ಅವಳಿಗಿಲ್ಲ, ಅದನ್ನು ಮೀರಿ ನಡೆಯಲಾರಳು ಸಹಾ. ತನ್ನ ಪಾಲಿಗೆ ಬಂದದ್ದನ್ನು ಸ್ವೀಕರಿಸುತ್ತಾ ಅಂತರ್ಮುಖಿಯಾಗುತ್ತಾ ಹೋದಳು. ಅವಳ ಸಂಗಾತಿ ಸಂಗೀತವೇ ಆಯಿತು. ಸುಖ-ದುಃಖ ಎರಡೂ ಸಹಾ ವ್ಯಕ್ತವಾಗುತ್ತಿದ್ದದ್ದು ಸಂಗೀತದ ಮೂಲಕವೇ.. ಇವಳ ಸಂಗೀತ ಪ್ರೇಮವನ್ನು ಮೆಚ್ಚುವ ಮತ್ತು ಪ್ರೋತ್ಸಾಹಿಸುವ ಹುಡುಗನನ್ನೇ ಹುಡುಕಬೇಕು ಎಂದು ತನ್ನ ತಾಯಿ ತಂದೆಯೊಡನೆ ಮಾತನಾಡುತ್ತಿರುವುದು ಸುಮಂಗಲಾ ಕಿವಿಗೆ ಬಿದ್ದಿತು. ತಾರುಣ್ಯದ ಕಾಲವಾದರೂ ಪ್ರೀತಿ-ಪ್ರೇಮದ ಭಾವನೆಗಳು ಅವಳಲ್ಲಿ ಮೂಡಿರಲಿಲ್ಲ. ಅವಳ ಪ್ರೇಮವೇನಿದ್ದರೂ ಕೃಷ್ಣನಿಗೇ ಮೀಸಲು. ಮತ್ತೊಬ್ಬಳು ಮೀರಾಳಾಗುವ ಹಂತದಲ್ಲಿದ್ದಳು. ಆದರೆ, ಅವಳ ವಿಧಿ ಬರಹ ಮತ್ತೇನನ್ನೋ ಸೂಚಿಸುತ್ತಲಿತ್ತು. ಅದಾವುದರ ಅರಿವೂ ಇಲ್ಲದೆ ಮೀರಾಳಂತೆ ಭಕ್ತಿ-ಪ್ರೇಮದ ಪರಾಕಾಷ್ಠೆಯಲ್ಲಿ ತೊಡಗಿದ್ದಳು ಸುಮಂಗಲಾ.

ಸುಮಂಗಲಾಳ ಪಿ.ಯು.ಸಿ ಮುಗಿದಿತ್ತು. ಮುಂದೆ ಓದಲು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಕಾಲೇಜು ಇರಲಿಲ್ಲ. ಓದಿನಲ್ಲಿ ಮುಂದಿದ್ದ ವಿದ್ಯಾರ್ಥಿಗಳನ್ನು ಶಿಕ್ಷಕರು ಪ್ರೋತ್ಸಾಹಿಸುತ್ತಿದ್ದರು ಜೊತೆಗೆ ಮನೆಯವರಲ್ಲಿಯೂ ತಿಳುವಳಿಕೆ ತುಂಬಿ ಮುಂದಿನ ಶೈಕ್ಷಣಿಕ ಪ್ರಗತಿಗೆ ಅನುವು ಮಾಡಿಕೊಡುತ್ತಿದ್ದರು. ಸುಮಂಗಲಾಳಿಗೂ ಅಂತಹಾ ಶಿಕ್ಷಕರು ಸಿಕ್ಕಿದ್ದು ಅವಳ ಅದೃಷ್ಟ ಎಂದೇ ಹೇಳಬೇಕು. ಮನೆಯಲ್ಲಿ ಮುಂದೆ ಓದಲು ಕಳುಹಿಸುವರೋ ಇಲ್ಲವೋ ಎಂಬ ಗೊಂದಲದಲ್ಲಿ ಇರುವಾಗಲೇ ಅವಳ ಶಿಕ್ಷಕರು ಅವಳ ತಂದೆಯ ಜೊತೆ ಮಾತನಾಡಿ ಅವರನ್ನು ಒಪ್ಪಿಸಿದ್ದರು. ಅವಳ ಮುಂದಿನ ಹಾದಿಯನ್ನು ಸುಗಮಗೊಳಿಸಿದ್ದರು. ಸುಗಮ ಎಂಬ ಹಾದಿ ಎಲ್ಲಿಯೂ ಇರಲಾರದು, ನಮ್ಮ ನಡೆಗಳಷ್ಟೇ ಹಾದಿಯನ್ನು ಸುಗಮಗೊಳಿಸಬಲ್ಲವು. ಹಾದಿಯ ತುಂಬೆಲ್ಲಾ ಹೂವೇ ತುಂಬಿದಂತೆ ಕಾಣಬಹುದು ಆದರೆ ಹೂವಿನ ಅಡಿಯ ಕಲ್ಲು ಮುಳ್ಳುಗಳು ನಡೆದಾಗಲಷ್ಟೇ ಅರಿವಿಗೆ ಬರಲು ಸಾಧ್ಯ. ಎಲ್ಲರ ಹಾದಿಯೂ ಸುಗಮವಾಗಿಯೇ ಇದ್ದಿದ್ದರೆ ಗಮ್ಯಕ್ಕೆ ಬೆಲೆಯಾದರೂ ಎಲ್ಲಿರುತ್ತಿತ್ತು ಅಲ್ಲವೇ..? ಸುಮಂಗಲಾ ಮನೆಯಲ್ಲಿ ಸಾಕಷ್ಟು ವಾದ-ವಿವಾದ ಚರ್ಚೆಗಳು ನಡೆದವು. ಕಡೆಗೂ ಮನೆಮಗಳ ಭವಿಷ್ಯವನ್ನು ಆಲೋಚಿಸಿ ಅವಳನ್ನು ಮುಂದಿನ ಓದಿಗೆ ಎಂದು ಸಿರಿನಗರಿಗೆ ಕಳುಹಿಸಲಾಯಿತು. ಕಾಲೇಜಿನ ಹಾಸ್ಟೆಲ್ ನಲ್ಲಿ ಅವಳು ಉಳಿದುಕೊಂಡು ವ್ಯಾಸಂಗ ಮುಂದುವರಿಸುತ್ತಿದ್ದಳು. ಅವಳ ಸಂಗೀತಕ್ಕೆ ಮತ್ತಷ್ಟು ಬೆಲೆ ಬರಲಿತ್ತು. ಅವಳು ಅಲ್ಲಿ ಸುಗಮ ಸಂಗೀತದ ಪಾಠಕ್ಕೆ ಸೇರಿಕೊಂಡಳು.

ಕೆಲವರ ಬದುಕಿನ ಹಾದಿಗಳು ಮೊದಲೇ ಬೆಸೆದುಕೊಂಡಿರುತ್ತವೆ. ಆದರೆ, ನಮಗೆ ಅದರ ಅರಿವಿರುವುದಿಲ್ಲ ಅಷ್ಟೇ.. ಸುಮಂಗಲಾ  ಸಿರಿನಗರಕ್ಕೆ ಬರುವಷ್ಟರಲ್ಲಿ ವಿದ್ಯಾಧರ ಅಲ್ಲಿಗೆ ಬಂದಾಗಿತ್ತು. ವಿದ್ಯಾಧರ ಕೊಳಲಿನ ಧ್ವನಿಯ ನಾದಕ್ಕೆ ಮತ್ತಷ್ಟು ತನ್ಮಯತೆಯನ್ನು ಜೋಡಿಸಲು ಅವನು ಸಹಾ ಸಂಗೀತ ಶಾಲೆಗೆ ಸೇರಿಯಾಗಿತ್ತು. ಇಬ್ಬರು ಕೆಲವೊಮ್ಮೆ ಅಲ್ಲಿ ಮುಖಾಮುಖಿಯಾದರೂ ಸಹಾ ಮುಗುಳ್ನಗೆಯ ವಿನಿಮಯವಾಗುತ್ತಿತ್ತು ಅಷ್ಟೇ. ಸುಮಂಗಲಾಳ 3 ವರ್ಷದ ಡಿಗ್ರಿ ಮುಗಿಯುತ್ತಾ ಬಂದಿತ್ತು. ಕಡೆಯ 6 ತಿಂಗಳು ಮಾತ್ರ ಉಳಿದಿತ್ತು. ಇತ್ತ ಸುಗಮ ಸಂಗೀತದಲ್ಲೂ ಸೀನಿಯರ್ ಪರೀಕ್ಷೆ ಮುಗಿದಿತ್ತು. ಎಲ್ಲರೂ ತಮ್ಮ ತಮ್ಮ ಪ್ರತಿಭೆಯನ್ನು ತೋರುವ ದಿನ ಹತ್ತಿರದಲ್ಲಿತ್ತು. ಎಲ್ಲರೂ ವೇದಿಕೆ ಕಾರ್ಯಕ್ರಮ ನೀಡಲು ತಮ್ಮ ಸರತಿಗಾಗಿ ಕಾಯುತ್ತಿದ್ದರು. "ಸವಿಗಾನ"ನ ಗಾನ ಮಾಧುರ್ಯವನ್ನು ಸವಿಯಲು ಎಲ್ಲರೂ ಕಾತುರರಾಗಿದ್ದರು.

ಸುಮಂಗಲಾ ಹಸಿರು ರೇಶಿಮೆ ಸೀರೆಯಲ್ಲಿ ಸುಂದರವಾಗಿ ಕಾಣುತ್ತಿದ್ದಳು. ಸೀರೆಯುಟ್ಟು ಬಂದ ಅವಳನ್ನು ಬೆರಗಿನಿಂದ ನೋಡಿ ಮೈ ಮರೆತ ವಿದ್ಯಾಧರ. ಕೈಗೆ ಬಳೆ, ಮುಡಿಯಲ್ಲಿ ಮಲ್ಲಿಗೆ ಅಪ್ಪಟ ಭಾರತೀಯ ನಾರಿಯಂತೆ ಕಂಗೊಳಿಸುತ್ತಿದ್ದ ಅವಳನ್ನು ಕಂಡಾಗ ಅವಳ ಸೌಭಾಗ್ಯ ಹೀಗೇ ಇರಲೆಂದು ಹಾರೈಸಿತು ಅವನ ಮನ. ಹಾರೈಸಿದಾಕ್ಷಣ ಎಲ್ಲವೂ ಒಳ್ಳೆಯದೇ ಆಗುವುದೋ ಇಲ್ಲವೋ ಗೊತ್ತಿಲ್ಲ ಆದರೆ ಹಾರೈಸುವ ಮನಸ್ಸು ಒಳ್ಳೆಯದೇ ಆಗಿರುತ್ತದೆ ಎಂಬುದು ಮಾತ್ರ ಸತ್ಯ. ನಿಷ್ಕಲ್ಮಶ ಮನಸ್ಸಿನ ಹಾರೈಕೆ ಇದ್ದರೆ ವಿಧಾತನೂ ಸೋಲಬಹುದು. ವೀಣೆ ಹಿಡಿದು ಕೂತ ಅವಳನ್ನು ಕಂಡು  ಸಾಕ್ಷಾತ್ ಶಾರದೆಯ ಅಪರಾವತಾರವೆಂದರು ಎಲ್ಲರೂ. ಎಲ್ಲರ ಬಾಯಲ್ಲೂ ಅವಳ ಗಾನ ಮಾಧುರ್ಯದ್ದೇ ಗುಣಗಾನ. ಅಂದು ಅವಳ ತಂದೆ-ತಾಯಿಯರಿಗಂತೂ ಎಲ್ಲಿಲ್ಲದ ಹೆಮ್ಮೆ. ಮಂಗಳಮ್ಮನವರಿಗೆ ಅವಳ ದೃಷ್ಟಿ ತೆಗೆದ ಮೇಲೆಯೇ ಸಮಾಧಾನವಾದದ್ದು. ಅಂದು ಅವಳ ಅಪ್ಪ-ಅಮ್ಮನಿಗೆ ಮಗಳ ಭವಿಷ್ಯದ ಕುರಿತ ಆಲೋಚನೆ ತಲೆಗೆ ಬಂದಿತು. ಅವಳ ಭವಿಷ್ಯದ ಕುರಿತು ಎಂದರೆ ವಿವಾಹದ ಕುರಿತು.. ಎಲ್ಲಾ ಹೆಣ್ಣು ಹೆತ್ತವರೂ ಸಹಾ ಇದಕ್ಕಿಂತ ವಿಭಿನ್ನವೇನಲ್ಲ. ಹೆಣ್ಣುಮಕ್ಕಳ ವಿವಾಹ ಮಾಡಿದಾಗ ಅವರಿಗೆ ಸಾರ್ಥಕತೆಯ ಭಾವ, ಎಲ್ಲಿಲ್ಲದ ತೃಪ್ತಿ. ಅಂದೇ ಅವಳಿಗೆ ಅನುರೂಪವಾದ ವರನನ್ನು ಹುಡುಕುವ ಕೆಲಸ ಹೆಗಲಿಗೇರಿತು.

ಅಂದು ಕಾರ್ಯಕ್ರಮದಲ್ಲಿ ಮನಸೆಳೆದು ಎಲ್ಲರನ್ನೂ ಮುದಗೊಳಿಸಿದ್ದಳು ಸುಮಂಗಲಾ. ಆದರೆ, ಎಲ್ಲರ ಕಣ್ಣಲ್ಲಿಯೂ ನೀರು ತರಿಸಿದ್ದ ವಿದ್ಯಾಧರ. ಅಂದು ಆತ ಕೊಳಲಿನಲ್ಲಿ ನುಡಿಸಿದ ರಾಗ ಎಂತಹಾ ಕಲ್ಲೆದೆಯವರನ್ನೂ ಕರಗಿಸುವಂತೆ ಇತ್ತು. ಶೋಕಾಲಾಪದ ರಾಗವನ್ನು ನುಡಿಸಿ ಅದನ್ನು ತನ್ನ ಅಮ್ಮನಿಗೆಂದು ಅರ್ಪಿಸಿದ್ದ. ಚಿಕ್ಕ ವಯಸ್ಸಿನಲ್ಲಿ ಅಮ್ಮನನ್ನು ಕಳೆದುಕೊಂಡಿದ್ದ ಅವನ ಮಡುಗಟ್ಟಿದ್ದ ದುಃಖವೆಲ್ಲಾ ಅಂದು ತುಂಬಿ ಹರಿದಿತ್ತು. ಅಮ್ಮನ ಪ್ರೀತಿಯೇ ದೊರಕದಿದ್ದರೆ ಸಿಕ್ಕಿದ್ದನ್ನೇ ಅಮ್ಮನ ಪ್ರೀತಿ ಎಂದುಕೊಂಡು ಬಿಡುತ್ತಿದ್ದೆ ಆದರೆ ಸ್ವರ್ಗದ ಮಡಿಲಲ್ಲಿದ್ದವನನ್ನು ಒಮ್ಮೆಲೆ ಅಲ್ಲಿಂದ ಎತ್ತಿ ಎಸೆದಂತಾಗಿತ್ತು. ಒಬ್ಬ ಅಮ್ಮನನ್ನು ಕಳೆದುಕೊಂಡು ಆದರೆ ಊರೇ ಅಮ್ಮನ ಪ್ರೀತಿ ಕೊಟ್ಟು ಸಲಹಿತು. ಆದರೆ, ಎಲ್ಲರಲ್ಲೂ ಕಳೆದುಕೊಂಡ ಅಮ್ಮನನ್ನು ಹುಡುಕಿದೆ ಆದರೆ ವಿಭಿನ್ನವಾದ ಅಮ್ಮ ಸಿಕ್ಕಳು. ಒಬ್ಬರಲ್ಲಿ ಮತ್ತೊಬ್ಬರು ಸಿಗಲು ಹೇಗೆ ಸಾಧ್ಯ ಎಂಬುದನ್ನು ಅರಿಯದ ದಡ್ಡನಾಗಿದ್ದೆ ಆದರೆ ಕೊಳಲು ನುಡಿಸಿದಾಗಲೆಲ್ಲಾ ಅಮ್ಮ ನನ್ನನ್ನು ಆವರಿಸಿದಂತಾಗುತ್ತದೆ. ಅವಳ ಅಪ್ಪುಗೆಯಲ್ಲೇ ಮೈಮರೆತಂತಾಗುತ್ತದೆ, ಪ್ರತಿ ರಾಗವೂ ಅವಳ ಧ್ವನಿ ಎನ್ನಿಸುತ್ತದೆ.. ಹೊಸ ರಾಗವನ್ನು ನುಡಿಸಿದಾಗೆಲ್ಲಾ ಮತ್ತೆ ಅಮ್ಮನೇ ಹುಟ್ಟಿ ಬಂದಳು ಎನ್ನಿಸುತ್ತದೆ. ಕೊಳಲು ಅವಳ ಕೊರಳಾಗಿ ಅವಳ ಮಾತನ್ನೆಲ್ಲಾ ಉಲಿಯುವಾಗ ಅದರ ಮುಂದೆ ನಾನೆಷ್ಟರವನು? ಎಂದೆನಿಸುತ್ತದೆ. ಎಲ್ಲವೂ ಅವಳಿಂದ ಅವಳಿಗಾಗಿ ಎಂದು ಹೇಳಿ ಅಲ್ಲಿಂದ ಭಾರವಾದ ಹೆಜ್ಜೆಗಳನ್ನು ಎತ್ತಿಡುತ್ತಾ ನಡೆದಾಗ ಸುಮಂಗಲಾಳಿಗೆ ಅವನನ್ನು ತನ್ನ ಮಡಿಲಲ್ಲಿ ಮಲಗಿಸಿಕೊಂಡು ಸಾಂತ್ವನಿಸುವ ಆಸೆಯಾಗಿತ್ತು. ಅವನ ತಲೆಗೂದಲಲ್ಲಿ ಕೈಯ್ಯಾಡಿಸಿ ಇಂದಿನಿಂದ ನಾನು ನಿನಗೆ ಅಮ್ಮನಂತಹಾ ಗೆಳತಿ ಕಣೋ.. ಅಮ್ಮನ ಜೊತೆ ಹಂಚಿಕೊಳ್ಳುವುದನ್ನೆಲ್ಲಾ ನೀನು ನನ್ನೊಡನೆ ಹಂಚಿಕೊಳ್ಳಬಹುದು ಎಂದು ಹೇಳಬೇಕೆನಿಸಿತ್ತು. ಆದರೆ, ಅದಕ್ಕೆಲ್ಲಾ ಅದು ಸೂಕ್ತ ಸಮಯವಾಗಿರಲಿಲ್ಲ. ಆದರೆ, ಅದಕ್ಕೂ ಸಮಯ ಸನ್ನದ್ಧವಾಗಿತ್ತು.

ಕಲಿಕೆ ಎಂಬುದು ನಿರಂತರ ಪ್ರಕ್ರಿಯೆ. ಕಲಿಯುವಿಕೆ ನಿಂತ ನೀರಲ್ಲ ಅದರಲ್ಲೂ ಸಾಧಿಸಬೇಕು ಎಂದುಕೊಂಡು ಹೊರಡುವವರಿಗಂತೂ ಅದರ ಅರಿವಿದ್ದಾಗ ಅಹಂಕಾರ ಎಂಬುದು ಹತ್ತಿರಕ್ಕೂ ಸುಳಿಯದು. ಇಂದು ಸಣ್ಣ ಸಾಧನೆ ಮಾಡಿದಾಗ ತಾನೇನೋ ಮಹತ್ತರವಾದುದನ್ನು ಸಾಧಿಸಿದ್ದೇನೆಂದು ಬೀಗುತ್ತಾರೆ, ಹತ್ತಿದ ಏಣಿಯನ್ನು ಒದ್ದು ಮುಂದಕ್ಕೆ ಸಾಗುತ್ತಾರೆ. ಆದರೆ, ಸುಮಂಗಲಾ ಮತ್ತು ವಿದ್ಯಾಧರ ಇಬ್ಬರೂ ಆ ಪೈಕಿಯವರಲ್ಲ. ತಮ್ಮ ಸಾಧನೆಯ ಹಾದಿಯ ಪಯಣವನ್ನು ಮುಂದುವರಿಸುವ ಸಲುವಾಗಿ ಮತ್ತೆ ಸಂಗೀತ ಶಾಲೆಗೆ ಬಂದರು. ಮೊದಲು ವಿದ್ಯಾಧರ ಮಾತಿಗೆ ಮುನ್ನುಡಿ ಬರೆದ. ನೆನ್ನೆ ನಿಮ್ಮ ವೀಣಾವಾದನ ಮತ್ತು ಗಾಯನ ಅದ್ಭುತವಾಗಿತ್ತು. ಅದರಲ್ಲೂ ಸೀರೆಯಲ್ಲಿ ನೀವು ತುಂಬಾ ಸೊಗಸಾಗಿ ಕಾಣುತ್ತಿದ್ದಿರಿ ಎಂದನು. ಅವಳ ಮುಖದಲ್ಲಿ ನಾಚಿಕೆಯ ಭಾವ ಹಾದು ಹೋಯಿತು ಲಜ್ಜೆಯಿಂದಲೇ ಥ್ಯಾಂಕ್ಯೂ ಎಂದು ಹೇಳಿ ಅವಳು ಮಾತಿಗೆ ಮೊದಲಾದಳು. ನನ್ನ ಬದುಕಲ್ಲಿ ಗೆಳೆಯರು ತುಂಬಾ ಕಡಿಮೆ.. ನಾನೇ ಹೊಂದಿಕೆಯಾಗುವುದಿಲ್ಲವೋ ಅಥವಾ ಅವರೇ ನನಗೆ ಹೊಂದಿಕೆಯಾಗುವುದಿಲ್ಲವೋ ನನಗೆ ಅದರ ಅರಿವಿಲ್ಲ ಆದರೆ ನಾನೇ ನಿಮ್ಮನ್ನು ಕೇಳುತ್ತಿರುವೆ. ನನ್ನನ್ನು ಗೆಳತಿಯಾಗಿ ಸ್ವೀಕರಿಸುವಿರಾ..? ಅಮ್ಮನಂತಹಾ ಗೆಳತಿಯಾಗಲು ಪ್ರಯತ್ನಿಸುವೆ. ವಿದ್ಯಾಧರನಿಗೆ ಕಣ್ತುಂಬಿ ಬಂದಿತು. ನಿನ್ನಂತಹಾ ಗೆಳತಿಯನ್ನು ನನ್ನ ಬದುಕಲ್ಲಿ ಸ್ವೀಕರಿಸದಿದ್ದರೆ ನಾನು ಬದುಕಲ್ಲಿ ಏನನ್ನೋ ಕಳೆದುಕೊಂಡೆ ಎನ್ನಿಸಬಹುದು.. ನಾನು ಆ ತಪ್ಪು ಮಾಡಲಾರೆ. ಬದುಕಿನಲ್ಲಿ ಪ್ರತಿ ಹೆಜ್ಜೆಯಲ್ಲಿಯೂ ನಿನ್ನ ಜೊತೆಯಲ್ಲಿ ಗೆಳೆಯನಾಗಿ ಜೊತೆಯಾಗಿರುವೆ ಎಂದನು.

ಗೆಳೆತನದ ಸವಿ ಪಯಣದ ಬಂಡಿ ಸಾಗಲು ಮುಂದಾಯಿತು. ಬದುಕಲ್ಲಿ ಎಲ್ಲದ್ದಕ್ಕೂ ಜೊತೆಗಾರರಿರಬೇಕು, ಒಬ್ಬಂಟಿ ಪಯಣ ಬಹಳ ಕಷ್ಟ. ನಲಿವಿನಲ್ಲಿ ಮಾತ್ರವಲ್ಲ ನೋವಲ್ಲಿಯೂ ಜೊತೆಯಾದರೆ ಮಾತ್ರವೇ ಅದು ನಿಸ್ವಾರ್ಥ ಬಂಧ ಎನ್ನಿಸಿಕೊಳ್ಳುತ್ತದೆ. ಇಲ್ಲವಾದಲ್ಲಿ ಅದರ ಅರ್ಥವೇ ಬೇರೆ. ಆದರೆ, ನೋವನ್ನು ಮರೆಸಲೆಂದು, ನೋವಿಗೆ ಜೊತೆಯಾಗಲೆಂದು ಸ್ನೇಹ ಹಸ್ತ ಚಾಚುವವರು ಎಷ್ಟು ಮಂದಿ? ಸ್ನೇಹ ಜೀವಿಗಳ ಪಯಣ ಶುರುವಾಯಿತು. ವಿದ್ಯಾಧರ ಗೋಪಿಕಾಪುರ, ಹೊಳೆ, ಮಾಧವ, ಮಾಧವಿ, ತನ್ನ ತಂದೆ ಎಲ್ಲದರ ಕುರಿತೂ ಹೇಳಿಕೊಂಡ. ಯಾರಲ್ಲಿಯೂ ಮನಬಿಚ್ಚಿ ಮಾತನಾಡದೆ ಅಂತರ್ಮುಖಿಯಾಗಿದ್ದ ಸುಮಂಗಲಾ ಮೊಟ್ಟಮೊದಲ ಬಾರಿಗೆ ಕಿವಿಯಾಗುವ ಬದಲು ದನಿಯಾಗಿದ್ದಳು. ಮೌನದ ಮೂರ್ತಿ ಮೌನದ ಚಿಪ್ಪೊಡೆದು ಮಾತಿಗೆ ಮುನ್ನಡಿಯಾದಳು. ಅವಳನ್ನು ಅವಳ ಮನೆಯವರು ಯಾರಾದರೂ ಹೀಗೆ ನೋಡಿದ್ದರೆ ಅವರಿಗೆ ಆಶ್ಚರ್ಯವಾಗುತ್ತಿದ್ದುದಂತೂ ಖಚಿತ. ನಮ್ಮ ಹುಡುಗಿ ಹಿಗಿರಬಲ್ಲಳಾ? ಎಂಬ ಪ್ರಶ್ನೆ ಮೂಡಿ ಮರೆಯಾಗುತ್ತಿದ್ದುದಂತೂ ಸುಳ್ಳಲ್ಲ.. ತನ್ನ ಕುಟುಂಬ, ಅಪ್ಪ-ಅಮ್ಮ, ಸಹೋದರರು, ಲಲಿತಾ ದೇವಿ ಗುಡಿ, ಸಂಗೀತ ಪ್ರೇಮ, ತನ್ನ ಕಾಲೇಜು, ಶಿಕ್ಷಣ, ಸಂಗೀತ, ಹೀಗೇ ತನ್ನ ಮಾತಿನಿಂದಲೇ ಕೃಷ್ಣಾಪುರದ ದರ್ಶನ ಮಾಡಿಸಿಬಿಟ್ಟಿದ್ದಳು. ಅಂದಿನಿಂದ ಅವಳು ವಿದ್ಯಾಧರನಿಗೆ ಇಷ್ಟ ಆಗುವಂತೆ ಬದಲಾಗುತ್ತಾ ಹೋದಳು. ಪ್ರತಿದಿನ ಸೀರೆ ಉಟ್ಟುಕೊಳ್ಳುವುದನ್ನು ರೂಢಿ ಮಾಡಿಕೊಂಡಳು. ಸಂಗೀತ ಪ್ರಪಂಚದ ಮಹಾನ್ ಸಾಧಕರು ಹಾಗೂ ಅವರ ಆದರ್ಶಗಳು ರಾಗ, ತಾಳ ಹೀಗೆ ಎಲ್ಲದರ ಕುರಿತ ಚರ್ಚೆಯಾಗುತ್ತಿತ್ತು. ಸಂಗೀತ ಮಾತ್ರವಲ್ಲ ಸಾಹಿತ್ಯ ಲೋಕ, ಸಿನಿಮಾ, ಕ್ರೀಡೆ, ರಾಜಕೀಯ ಹೀಗೇ ಎಲ್ಲದರ ಕುರಿತಂತೆ ಚರ್ಚೆ ನಡೆಸುತ್ತಿದ್ದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಇವರು ಚರ್ಚಿಸದ ವಿಷಯವಿಲ್ಲ ಎಂದರೆ ಅದು ತಪ್ಪಾಗಲಾರದು. 

ಎಲ್ಲದಕ್ಕೂ ಒಂದು ಅಂತ್ಯವಿರುತ್ತದೆ. ಅಂತ್ಯ ಎಂದು ಹೇಳಲಾಗದಿದ್ದರೂ ವಿರಾಮ ಇರುತ್ತದೆ. ಅದು ಅಲ್ಪವೋ, ದೀರ್ಘವೋ ಎಂಬುದನ್ನು ಕಾಲವೇ ನಿರ್ಧರಿಸುತ್ತದೆ. ಗೆಳೆತನ ಎಂದರೂ ಅಲ್ಲಿ ಅದಕ್ಕಿಂತ ಹೆಚ್ಚಿನ ಭಾವವೊಂದಿತ್ತು. ಪ್ರತಿಯೊಬ್ಬರ ಬದುಕಲ್ಲಿಯೂ ಇಂತಹಾ ಒಂದು ಬಂಧ ಇರುತ್ತದೆ. ಗೆಳೆತನಕ್ಕೂ ಮಿಗಿಲು, ಪ್ರೇಮವೇ ಅದು ಎಂದರೆ ವ್ಯಾಖ್ಯಾನಕ್ಕೆ ದಕ್ಕಲಾರದು. ಪ್ರೀತಿ ಎಂಬ ಎರಡಕ್ಷರದ ಪದಕ್ಕೆ ನಿಲುಕದ ಸಂಬಂಧವದು. ಆದರೆ, ಬದುಕಿನ ಅತಿ ಸಂತಸದ ಸವಿ ನೆನಪುಗಳನ್ನು ಕೊಡುವ ಹಾಗೂ ಕಳಚಿಕೊಳ್ಳುವಾಗ ಅತಿ ದುಃಖ ನೀಡುವ ಬಂಧವದು. ರಾಧೆ-ಕೃಷ್ಣರ ಬಂಧದಂತಹಾ ಅಲೌಕಿಕ ಎಳೆ ಅದು. ವ್ಯಾಖ್ಯಾನಕ್ಕೆ ಸಿಗದು, ಅನುಭೂತಿಗೆ ಮಾತ್ರ ನಿಲುಕುವಂತಹದು. ಜೊತೆಗಿರುವವರೆಗೂ ಅದರ ಬೆಲೆ ಅರಿವಾಗದು.. ಆದರೆ, ಒಮ್ಮೆ ಅದರಿಂದ ದೂರವಾದ ಮೇಲೆ ಅದರ ಬೆಲೆ ತಿಳಿಯುವುದು. ಇಲ್ಲಿ ಇಬ್ಬರಿಗೂ ಅಗಲಿಕೆಯ ನೋವು ಗಹನವಾಗಿಯೇ ಭಾದಿಸಿತ್ತು. ತಮ್ಮ ಸಂಗಾತಿಗಳು ಹೇಗಿರಬೇಕೆಂದು ಅಂದುಕೊಂಡಿದ್ದರೋ ಅದೇ ರೀತಿ ಅನುರೂಪವಾದ ವ್ಯಕ್ತಿಗಳು ಅವರು. ಸಂಗಾತಿಗಳ ಪರಿಕಲ್ಪನೆಯಲ್ಲಿ ಮತ್ತಾರನ್ನೂ ಕಲ್ಪಿಸಿಕೊಳ್ಳದಷ್ಟು ತಮ್ಮ ತಮ್ಮ ಲೋಕದ, ತಮ್ಮ ಮನದ ಬಾಗಿಲಿನ ಒಳಗೆ ಇಬ್ಬರ ಪರಸ್ಪರರ ಮೂರ್ತಿಯನ್ನು ಪ್ರತಿಷ್ಠಾಪಿಸಿಕೊಂಡು ಬಿಟ್ಟಿದ್ದರು. 

ಅಂದು ಭಾವುಕನಾಗಿ ವಿದ್ಯಾಧರ ಕೇಳಿದ್ದ "ಸುಮ, ಅಮ್ಮ ನನ್ನನ್ನು ಬಿಟ್ಟು ಹೊರಟ ಹಾಗೆ ಅಮ್ಮನಂತಹಾ ಗೆಳತಿಯಾದ ನೀನೂ ಸಹಾ ನನ್ನನ್ನು ಬಿಟ್ಟು ಹೊರಡುವುದಿಲ್ಲ ಅಲ್ಲವೇ..?" ಅಮ್ಮನ ಮಡಿಲು ಕಳೆದುಕೊಂಡೆ ಆಗ ಅವಳನ್ನು ತಡೆಯುವ ಶಕ್ತಿ ಮತ್ತು ಸ್ಥೈರ್ಯ ನನ್ನಲ್ಲಿರಲಿಲ್ಲ, ಪರಿಸ್ಥಿತಿ ಮನುಷ್ಯರ ಕೈಯಲ್ಲಿ ಇರುವುದಿಲ್ಲ ಅಲ್ಲವೇ..? ಅವಳನ್ನಂತೂ ಉಳಿಸಿಕೊಳ್ಳಲಾಗಲಿಲ್ಲ ನಿನ್ನನ್ನು ಬಿಟ್ಟು ಕೊಡಲಾರೆ, ನನ್ನ ಮನದ ಬಾಗಿಲಿಗೆ ಪ್ರವೇಶಿಸಿದಂತೆ ಮನೆಯ ಮನೆಯ ಮಹಾಲಕ್ಷಿಯಾಗಿ ಜೊತೆಗೇ ಬರುವೆಯಾ..? ಎಂದು ಕೇಳಿದ್ದ ವಿದ್ಯಾಧರ. ಅವನ ಭಾವುಕತೆ ಅವಳ ಮನ ತಟ್ಟಿತ್ತು, ಗಂಟಲುಬ್ಬಿ ಬಂದು ಏನೂ ಹೇಳಲಾಗದೆ ಮುಖ ತಿರುಗಿಸಿ ನಿಂತುಬಿಟ್ಟಿದ್ದಳು. ಅವಳ ಮನದಲ್ಲಿ ಚಂಡಮಾರುತವೇ ಏಳುತ್ತಿತ್ತು. ಎಷ್ಟೋ ವರ್ಷದ ನಂತರ ಅವಳು ಬಯಸಿದ ಬದುಕನ್ನು ಅವಳು ಬದುಕುತ್ತಿದ್ದಳು ಹಾಗೆಂದು ಮನೆಯವರನ್ನು ಧಿಕ್ಕರಿಸುವ ಸ್ಥಿತಿಯಲ್ಲಿ ಅವಳಿರಲಿಲ್ಲ. ಪಂಜರದ ಪಕ್ಷಿಯೊಂದು ಕೆಲಕಾಲ ಹಾರಾಡಿ ಮತ್ತೆ ಚಿನ್ನದ ಪಂಜರಕ್ಕೆ ಮರಳುವ ಸ್ಥಿತಿ ಅವಳದ್ದು. ಆವನಿಗಿಂತ ಅವಳ ಪರಿಸ್ಥಿತಿ ಭಿನ್ನವಾಗಿರಲಿಲ್ಲ ಆದರೆ ಅವನಂತೆ ಭಾವುಕಳಾಗಲಾರಳು. ಮೊದಲಿನಿಂದಲೂ ಭಾವನೆಗಳನ್ನು ಬಚ್ಚಿಟ್ಟೂ ಬಚ್ಚಿಟ್ಟೂ ಬದುಕಿದ್ದ ಅವಳಿಗೆ ಅದು ಕಷ್ಟವೂ ಆಗಲಾರದು. ರಾಧೆ ಕೃಷ್ಣನನ್ನು ಸೇರಲು ಸಾಧ್ಯವಿಲ್ಲ. ಎಲ್ಲರ ಬದುಕನ್ನು ಬದಲಿಸುವ ಶಕ್ತಿಯಿದ್ದ ಕೃಷ್ಣನಿಗೆ ರಾಧೆಯನ್ನು ತನ್ನವಳನ್ನಾಗಿ ಮಾಡಿಕೊಳ್ಳುವ ಶಕ್ತಿ ಇರಲಿಲ್ಲವೇ..? ಆಲೋಚಿಸಿದಳು. ರಾಧೆಯನ್ನು ತೊರೆದ ಮೇಲೂ ಕೃಷ್ಣ ಬದುಕಿದ.. ರಾಧೆಯೇ ಬೇಕಿಲ್ಲ ಕೃಷ್ಣನ ಬದುಕ ತುಂಬಲು.. ರುಕ್ಮಿಣಿ ಕೂಡಾ ಕೃಷ್ಣನನ್ನು ರೂಪಿಸಬಲ್ಲಳು. ನಾನು ರುಕ್ಮಿಣಿಯಾಗ ಹೊರಟರೆ ಅಷ್ಟು ಪ್ರೀತಿಯಿಂದ ಸಾಕಿದವರೆಲ್ಲರಿಗೂ ಮೋಸ ಮಾಡಿದಂತಾಗುತ್ತದೆ ಎಂದು ಆಲೋಚಿಸಿ ಅವನು ಹಿಡಿದಿದ್ದ ಕೈ ಕೊಡವಿಕೊಂಡು ಅಲ್ಲಿಂದ ಹೊರಟು ಬಿಟ್ಟಳು. "ಸುಮ, ನಿಲ್ಲು" ಎಂದು ಹಿಂದೆ ಬಂದವನನ್ನು ಬಿಟ್ಟು ಹಿಂತಿರುಗಿ ನೋಡದಂತೆ ಕಣ್ಮರೆಯಾದಳು. ಅಂದೇನಾದರೂ ಅವಳು ಹಿಂತಿರುಗಿ ನೋಡಿದಿದ್ದರೆ ಭವಿಷ್ಯ ಬದಲಾಗುತ್ತಿತ್ತು.. ಎಲ್ಲಕ್ಕೂ ಕಾಲ ಕೂಡಿ ಬರಬೇಕಲ್ಲವೇ..?

ಮಾಧವ ವಿದ್ಯಾಧರನನ್ನು ಹುಡುಕಿಕೊಂಡು ಸಿರಿನಗರಕ್ಕೆ ಬಂದಿದ್ದ. ಅಲ್ಲಿ ಅವನಿದ್ದ ಪರಿಸ್ಥಿತಿಯನ್ನು ಕಂಡು ಮಾಧವನಿಗೆ ಜಂಘಾಬಲವೇ ಉಡುಗಿ ಹೋದಂತಾಯಿತು. ಸುಮ ಸುಮ ಎಂದು ಹಲುಬುತ್ತಿದ್ದ ಅವನನ್ನು ಸಾಂತ್ವನಗೊಳಿಸಿ ರೂಮಿಗೆ ಕರೆತಂದ. ಮಾಧವ ಓದಲಿಲ್ಲ, ವಿದ್ಯೆ ಅಂದರೆ ಪುಸ್ತಕದ ಓದು ಅವನ ತಲೆಗೆ ಹತ್ತಲಿಲ್ಲ ಆದರೆ ತಿಳುವಳಿಕೆಯಲ್ಲಿ ಅವನದ್ದು ಮೇಲುಗೈ. ಅಂಕಗಳ ಆಧಾರದ ವಿದ್ಯೆಯನ್ನು ಮಾತ್ರ ಬುದ್ಧಿಮತ್ತೆಯನ್ನು ಅಳೆಯಲು ಬಳಸುತ್ತಾರೆ, ಆದರೆ ಬದುಕಿಗೆ ಬರೀ ಅಂಕಗಳ ಬುದ್ಧಿಮತ್ತೆ ಸಾಲುವುದಿಲ್ಲ ಎಂಬುದನ್ನು ತಿಳಿಯದ ದಡ್ಡರಾಗಿರುತ್ತಾರೆ. ತಾಯಿ ತನ್ನ ಮಗುವನ್ನು ಕುಳ್ಳಿರಿಸಿ ಬುದ್ದಿ ಹೇಳುವಂತೆ ಅಂದು ಮಾಧವ ವಿದ್ಯಾಧರನನ್ನು ಕೂರಿಸಿ ಬುದ್ದಿ ಹೇಳಿದ. ಅವನ ತಂದೆ, ತಂಗಿ, ಮನೆತನ, ಅವನಿಗಿರುವ ಜವಾಬ್ದಾರಿ ಎಲ್ಲವನ್ನೂ ತಿಳಿ ಹೇಳಿದ. ಪ್ರೀತಿಯೇ ಬದುಕಲ್ಲ, ಪ್ರೀತಿ ನಿಜವೇ ಆಗಿದ್ದಲ್ಲಿ ನಿನಗೆ ನಿನ್ನ ಪ್ರೀತಿ ದಕ್ಕಿಯೇ ದಕ್ಕುತ್ತದೆ ಎಂದು ಹೇಳಿ ಅವನಲ್ಲಿ ಕಳೆದು ಹೋಗಿದ್ದ ಆತ್ಮಸ್ಥೈರ್ಯವನ್ನು ತುಂಬಿದ. ಮತ್ತೆ ಕರ್ತವ್ಯವನ್ನು ನೆನಪಿಸಿದ. ಆದರೆ, ತಾನು ಬಂದಿದ್ದ ವಿಷಯವನ್ನು ಮುಚ್ಚಿಟ್ಟುಕೊಂಡು ಮನೆಗೆ ವಾಪಾಸಾದ. ಅಂದು ಮಾಧವ ಆ ವಿಚಾರವನ್ನು ಹೇಳಿದ್ದರೆ ಇಬ್ಬರ ಬದುಕಿನ ಗತಿಯೂ ಬದಲಾಗುತ್ತಿತ್ತೇನೋ..?

ಇತ್ತ ಸುಮಂಗಲಾ ಬಂದವಳೆ ಆತುರಾತುರವಾಗಿ ಊರಿಗೆ ಹೊರಟು ನಿಂತಿದ್ದಳು. ಯಾರಿಗೂ ವಿದಾಯ ಹೇಳದಂತೆ ಹೊರಟು ಬಿಟ್ಟಳು. ಅವಳ ಅಂತರ್ಮುಖತೆಯ ಅರಿವಿದ್ದ ಯಾರೂ ಏನೂ ಹೇಳಿಲಿಲ್ಲ, ಅನ್ಯಥಾ ಭಾವಿಸಲಿಲ್ಲ. ಸುಮಂಗಲಾ ಊರಿಗೆ ಬಂದರೆ ಅಲ್ಲಿ ಸಡಗರದ ವಾತಾವರಣ. ಮಗಳು ಮನೆಗೆ ಬಂದ ಖುಷಿಯಲ್ಲಿ ಅಂದು ಮನೆಯಲ್ಲಿ ಹಬ್ಬದಡುಗೆ. ಆದರೆ, ಅವಳಿಗೆ ಈ ಸಂತೋಷಕ್ಕೆ ಮತ್ತೇನೋ ಕಾರಣ ಇರಬೇಕು ಎನ್ನಿಸಿತ್ತು ಆದರೆ ಕೇಳುವ ಧೈರ್ಯವಾಗಲಿಲ್ಲ. ಮೊದಲಿನಿಂದಲೂ ಹಾಗೆಯೇ ಹೇಳಬೇಕೆನಿಸುವ ಎಷ್ಟೋ ಮಾತುಗಳನ್ನು ಎದೆಯಲ್ಲಿಯೇ ಉಳಿಸಿಕೊಂಡು ಭಾದೆ ಪಡುತ್ತಾ ಕೇಳಬೇಕೆಂದುಕೊಂಡ ಎಷ್ಟೋ ಪ್ರಶ್ನೆಗಳನ್ನು ಕೇಳಲಾಗದೆ ತಳಮಳದ ಭಾವದಲ್ಲಿ ಸುಮ್ಮನಾಗುತ್ತಿದ್ದಳು. ಅಧೈರ್ಯದ ಅವಳ ಆ ಭಾವಕ್ಕೆ ಮನೆಯಲ್ಲಿ ವಿನಯತೆ ಎಂಬ ಹೆಸರು. ಕೆಲವೊಮ್ಮೆ ಭಾವಗಳೇ ಹಾಗೇ.  ತೋರ್ಪಡಿಸಿಕೊಂಡುದ್ದಕ್ಕಿಂತ, ಕಾಣುವುದಕ್ಕಿಂತ ಬೇರೆಯೇ ರೀತಿಯಲ್ಲಿ ಭಾಸವಾಗುತ್ತದೆ. ಆದರೆ ಅವರವರಿಗೆ ಮಾತ್ರ ಅವರವರ ಭಾವ ದಕ್ಕುವುದು. ಈಗ ಕೂಡಾ ಹಾಗೆಯೇ ಆಯಿತು, ತುದಿನಾಲಿಗೆಯವರೆಗೆ ಬಂದ ಮಾತನ್ನು ನುಂಗಿಕೊಂಡು ಹೇಳಬೇಕಾದ ವಿಷಯವಾದರೆ ಅವರೇ ಹೇಳುತ್ತಾರೆ ಎಂಬ ನಿರ್ಲಿಪ್ತ ಭಾವವನ್ನು ಮೂಡಿಸಿಕೊಂಡು ಸುಮ್ಮನೆ ತನ್ನ ಪಾಡಿಗೆ ತನ್ನ ವೀಣೆ ಹಿಡಿದು ಕುಳಿತುಬಿಟ್ಟಳು. ಅಂದು ವಿದ್ಯಾಧರ ಕೊಳಲಲ್ಲಿ ನುಡಿಸಿದ ರಾಗ ಇಂದು ವೀಣೆಯಲ್ಲಿ ಧ್ವನಿಸಿತ್ತು. ಅವನ ಮಡುಗಟ್ಟಿದ್ದ ನೋವು ಇಲ್ಲಿ ಅಲೆಯಾಗಿ ಹೊಮ್ಮಿ ಎಲ್ಲರ ಎದೆಯನ್ನೂ ಕಲಕಿತ್ತು.

ಸುಮಂಗಲಾಳ ತಂದೆ ರಾಗವನ್ನು ಮೆಚ್ಚಿಕೊಂಡರಾದರೂ ಏಕೋ ಆ ರಾಗವನ್ನು ನುಡಿಸಲು ಪ್ರೋತ್ಸಾಹ ನೀಡಲಿಲ್ಲ. ನಾಳೆ ನಮ್ಮ ಮನೆಗೆ ಅತಿಥಿಗಳು ಬರುತ್ತಾರೆ ಆಗ ನೀನು ಅವರೆದುರು ಈ ರಾಗವನ್ನು ನುಡಿಸಬೇಡ. ಶೋಕಭರಿತವಾದ ಗೀತೆಯನ್ನು ಸಂತಸದ ಸಮಾರಂಭದಲ್ಲಿ ನುಡಿಸಬಾರದು ಎಂಬ ಕಿವಿಮಾತನ್ನೇಳಿ ಅಲ್ಲಿಂದ ಹೊರಟರು. ನಾಳಿನ ಸಂಧರ್ಭದಲ್ಲಿ ಹಾಡುವ ಹಾಡಿಗೆ ತಯಾರಾಗುತ್ತಾ ಆಲೋಚನೆಯ ಒಳಸುಳಿಗೆ ಸಿಲುಕುತ್ತಾ ಅಂದು ನಿದ್ರಿಸಿದಳು. ಮರುದಿನ ಬೆಳಿಗ್ಗೆ ಮಂಗಳಮ್ಮನವರು ಬಂದು ಸೀರೆ ಉಟ್ಟುಕೋ ಎಂದು ಹೇಳುವ ಮೊದಲೇ ಅವಳು ಸೀರೆ ಉಟ್ಟು ವೀಣೆಯನ್ನು ಶೃತಿ ಮಾಡಿಕೊಳ್ಳುತ್ತಿದ್ದಳು. ಮಗಳಲ್ಲಿ ಬಂದಾಗಿನಿಂದ ಆದ ಬದಲಾವಣೆಯನ್ನು ಅವರು ಗಮನಿಸಿದ್ದರು. ಅವಳ ನಡವಳಿಕೆಗೆ ಪ್ರಬುದ್ಧತೆ ಎಂಬ ಹೆಸರು ನೀಡಿದ್ದರು. ಅಂದು ಅವಳಿಗೇ ಅರಿವಿಲ್ಲದಂತೆ ಅವಳ ಮದುವೆಯ ಮುನ್ನುಡಿಯಾಗಿ ಹೆಣ್ಣು ನೋಡುವ ಶಾಸ್ತ್ರ. ಮಾಧವಕಾಂತ ತನ್ನ ಮನೆಯವರೆಲ್ಲರ ಜೊತೆ ಆ ಶಾಸ್ತ್ರಕ್ಕೆ ಹಾಜರಾಗಿದ್ದ. ಸಂಗೀತವನ್ನು ಪ್ರೇರೇಪಿಸುವ ಕುಟುಂಬ ಜೊತೆಗೆ ತಮ್ಮ ಅಂತಸ್ತಿಗೆ ಸರಿಯಾದ ವರ ಎಂದು ಮಾಧವಕಾಂತನನ್ನು ಸುಮಂಗಲಾಳಿಗೆ ಜೋಡಿ ಮಾಡಲು ಹೊರಟಿದ್ದರು. ಸುಮಂಗಲಾ ಇದಾವುದರ ಅರಿವಿಲ್ಲದಂತೆ ಎಲ್ಲಾ ಅತಿಥಿಗಳನ್ನೂ ಉಪಚರಿಸುವಂತೆ ಅವರನ್ನು ಸಹಾ ಉಪಚರಿಸಿದ್ದಳು. ಮಾಧವನಿಗೆ ತನ್ನ ಮದುವೆಯ ಪ್ರತಿ ಶಾಸ್ತ್ರದಲ್ಲೂ ವಿದ್ಯಾಧರ ಜೊತೆ ಇರಬೇಕು ಎಂಬ ಆಸೆ ಆದರೆ ಅವನ ಪರಿಸ್ಥಿತಿಯನ್ನು ಕಂಡ ಮೇಲೆ ಅವನನ್ನು ಮತ್ತೆ ಇಲ್ಲಿಗೆ ಕರೆಯುವುದು ಅವನ ಮನಸ್ಥಿತಿಗೆ ಅಪಾಯ ಎಂದು ಅವನ ಹಿತವನ್ನು ಬಯಸಿ ಮೊದಲೇ ಇದಾವುದನ್ನೂ ತಿಳಿಸಿರಲಿಲ್ಲ. ಮಾಧವನಿಗೆ ಮತ್ತು ಮನೆಯವರೆಲ್ಲರಿಗೂ ಸುಮಂಗಲಾ ಇಷ್ಟವಾಗಿದ್ದಳು. ಅವರೆಲ್ಲರೂ ಒಪ್ಪಿಗೆ ಸೂಚಿಸಿ ಆದಷ್ಟು ಬೇಗ ಈ ಮದುವೆಯನ್ನು ಮಾಡಿಕೊಡಿ ಎಂಬ ಬೇಡಿಕೆಯನ್ನಿಟ್ಟಿದ್ದರು.

ಮಾಧವನ ತಾಯಿಗೆ ಹುಷಾರಿಲ್ಲವಾಗಿ ತಿಂಗಳುಗಳೇ ಕಳೆದಿದ್ದವು. ಮಗನ ಮದುವೆಯನ್ನು ನೋಡುವ ಆಸೆ ಅವಳಿಗೆ.. ಇದೆಲ್ಲದರ ಜೊತೆಗೆ ಅಂದು ಬಂದ ಬುಡುಬುಡಿಕೆಯವನು "ಹಾಲಕ್ಕಿ ನುಡಿತೈತೆ ತಾಯಿ, ಹಾಲಕ್ಕಿ ನುಡಿತೈತೆ.. ಸುಖದ ಹಿಂದೆಯೇ ಒಂದು ದುಃಖವಿರುತೈತೆ. ಈ ಮನೆಯಲ್ಲಿ ಸಾವಿನ ಕಳೆ ಕಾಣುತೈತೆ" ಎಂಬ ಒಗಟಿನ ಮಾತನಾಡಿ ಭಿಕ್ಷೆಯನ್ನೂ ಹಾಕಿಸಿಕೊಳ್ಳದೆ ಹೊರಟುಬಿಟ್ಟಿದ್ದ. ಮಾಧವನ ಮನೆಯಲ್ಲಿ ಮೂಢನಂಬಿಕೆ ಕೊಂಚ ಹೆಚ್ಚು. ಈ ಮಾತನ್ನು ಗಂಭೀರವಾಗಿ ಪರಿಗಣಿಸಿ ಅವರು ಮಾಧವನ ಮದುವೆಯನ್ನು ಆದಷ್ಟು ಬೇಗ ಮುಗಿಸಬೇಕು ಎಂಬ ತೀರ್ಮಾನಕ್ಕೆ ಬಂದಿದ್ದರು. ಅದಕ್ಕೆ ಕಾಲ ಕೂಡಿ ಬಂದಂತೆ ಈ ಪ್ರಸ್ತಾಪ ಕೂಡಾ ಬಂದಿತು. ವಾರದ ಅಂತರದಲ್ಲಿಯೇ ಮಾಧವಕಾಂತ ಮತ್ತು ಸುಮಂಗಲಾ ವಿವಾಹ ನಡೆಯಿತು. ವಿವಾಹದ ಕೊನೆಯ ಕ್ಷಣದವರೆಗೂ ಯಾವುದಾದರೂ ಪವಾಡ ಜರುಗಬಹುದು ಎಂಬ ನಿರೀಕ್ಷೆಯಲ್ಲಿದ್ದಳು. ಮದುವೆಯ ಎಲ್ಲಾ ಶಾಸ್ತ್ರ ನಡೆಯುವಾಗಲೂ ಮಾಧವ "ವಿದ್ಯಾ ಇದ್ದಿದ್ದರೆ.." ಎಂಬುದನ್ನು ಎಷ್ಟು ಬಾರಿ ನುಡಿದಿದ್ದನೋ ಗೊತ್ತಿಲ್ಲ. ವಿದ್ಯಾಧರನಿಗೆ ಕರೆ ಮಾಡಿ ಮದುವೆಗೆ ಕರೆದಿದ್ದ. ಅಷ್ಟು ಕೆಲಸಗಳ ನಡುವೆ ಅವನಿಗೆ ಸಿರಿಪುರಕ್ಕೆ ಹೋಗಲಾಗಿರಲಿಲ್ಲ. ಹುಡುಗಿಯ ಹೆಸರು "ಮಂಗಳ" ಎಂದು.. ಕೃಷ್ಣಾಪುರದವಳು ಎಂದಾಗ.. ನಿರ್ಲಿಪ್ತನಾಗಿ "ಸರಿ ಕಣೋ, ನಾನು ಈ ಸ್ಥಿತಿಯಲ್ಲಿ ಊರಿಗೆ ಬಂದರೆ ಸರಿಯಾಗುವುದಿಲ್ಲ. ನನ್ನ ಶುಭ ಹಾರೈಕೆಗಳು ಯಾವಾಗಲೂ ನಿನ್ನ ಜೊತೆ ಇರುತ್ತದೆ. ಮುಂದಿನ ವಾರದಲ್ಲಿ ಊರಿಗೆ ಬರುತ್ತಿದ್ದೇನೆ. ಓದು ಕೂಡಾ ಮುಗಿದಿದೆ ಯಾಕೋ ಅಲ್ಲಿಯ ಮಣ್ಣಿನ ಋಣ ಸೆಳೆಯುತ್ತಿದೆ. ಆದಷ್ಟು ಬೇಗ ಬಂದು ನನ್ನ ಕರ್ತವ್ಯವನ್ನು ನಿರ್ವಹಿಸುತ್ತೇನೆ. ಮದುವೆಗೆ ನಾನಿಲ್ಲ ಅಂತಾ ನೀನು ನನ್ನ ಮದುವೆಗೆ ಬರದೇ ಹೋಗಬೇಡವೋ.." ಎಂದು ರೇಗಿಸುತ್ತಾ ಕಾಲೆಳೆದಾಗ ಮಾಧವನಿಗೆ ಕೊಂಚ ಸಮಾಧಾನವಾಯಿತು.

ಮಳೆಗಾಲವಾದುದರಿಂದ ಮದುವೆಯ ಸಮಾರಂಭ ಸಂಜೆಯ ಮುನ್ನವೇ ಮುಗಿದು ಎಲ್ಲರೂ ತಮ್ಮ ತಮ್ಮ ಮನೆಗೆ ಹೊರಟರು. ಮಾಧವನಿಗೆ ತನ್ನ ಮಡದಿಯ ಅನ್ಯಮನಸ್ಕತೆಯನ್ನು ಕಂಡು ಆಶ್ಚರ್ಯವಾಯಿತು. ಮೊದಮೊದಲಿಗೆ ತನ್ನ ಮನೆಯವರನ್ನು ಬಿಟ್ಟು ಬಂದ ಬೇಸರವಿರಬಹುದು ಎಂದು ಭಾವಿಸಿದ್ದ ಆದರೆ ಅವನಿಗೆ ಯಾಕೋ ಅದಷ್ಟೇ ಅವಳ ಅನ್ಯಮನಸ್ಕತೆಯ ಕಾರಣವಲ್ಲ ಎಂದು ಅನ್ನಿಸಿ ಅವಳ ಜೊತೆ ಮನಬಿಚ್ಚಿ ಮಾತನಾಡಬೇಕೆಂಬ ಇಚ್ಛೆಯಿಂದ ಹೊಳೆದಂಡೆಗೆ ಅವಳನ್ನು ಕರೆದುಕೊಂಡು ಹೊರಟ. ಸುಮಂಗಲಾ ಕೂಡಾ ಎಲ್ಲವನ್ನು ಮಾಧವನಿಗೆ ಹೇಳಿ, ತನ್ನ ಹೊಸ ಜೀವನಕ್ಕೆ ಕೊಂಚ ಕಾಲಾವಕಾಶ ನೀಡಿ ಎಲ್ಲದಕ್ಕೂ ಹೊಂದಿಕೊಂಡು ಹೋಗುತ್ತೇನೆ ಎಂದು ಹೇಳಬೇಕೆಂಬ ತೀರ್ಮಾನ ಮಾಡಿಕೊಂಡೇ ಹೊರಟಳು. ಅಂದು, ಅವರಿಬ್ಬರ ಮಾತುಕತೆಗೆ ಹೊಳೆದಂಡೆ ಸಾಕ್ಷಿಯಾಗಿತ್ತು. ಮಾಧವ ಸ್ನೇಹಭಾವದಿಂದ ಅವಳನ್ನು ಮಾತನಾಡಿಸಿ ಅವಳ ವಿಮನಸ್ಕತೆಯ ಕಾರಣ ತಿಳಿದುಕೊಂಡ. ಅದನ್ನು ಅವನು ತಪ್ಪಾಗಿ ಅರ್ಥೈಸಿಕೊಳ್ಳದೇ ಆ ವಯಸ್ಸಿನಲ್ಲಿ ಅದು ಸಾಮಾನ್ಯ. ನಿನ್ನ ಗತ ಬದುಕಿನ ಕುರುಹುಗಳನ್ನು ನಾನು ನೆನಪಿಸಲಾರೆ, ನಿನಗೆಷ್ಟು ಬೇಕೋ ಅಷ್ಟು ಕಾಲಾವಕಾಶವನ್ನು ತೆಗೆದುಕೊಂಡು ನನ್ನೊಂದಿಗೆ ಮುಂದಿನ ಬದುಕನ್ನು ಹೊಸದಾಗಿ ಶುರು ಮಾಡು ಎಂದು ಹೇಳಿದ. ಅವನ ಒಳ್ಳೆಯತನವನ್ನು ಮೆಚ್ಚಿಕೊಂಡು ಅವನ ಕೈಯ್ಯ ಮೇಲೆ ಕೈಯಿಟ್ಟು ಪ್ರಮಾಣ ಮಾಡಿದಳು. ಅಂದು ಮಳೆ ಶುರುವಾಯಿತು. ವಿದ್ಯಾಧರನ ಮನೆಗೆ ಬರುವಷ್ಟರಲ್ಲಿ ಮಳೆ ಜೋರಾಯಿತು. ಅಲ್ಲೇ ಇದ್ದ ಗೋಪಾಲಗೌಡರು ಈ ಮಳೆಯಲ್ಲಿ ನೆನೆದುಕೊಂಡು ಹೋಗಬೇಡಿ ಎನ್ನುತ್ತಾ ಒಳಗೆ ಕರೆದರು. ಇಬ್ಬರೂ ಅಲ್ಲಿಯೇ ಕುಳಿತಿದ್ದಾಗ "ಇದು ವಿದ್ಯಾ ಮನೆ" ಎಂದು ಪರಿಚಯಿಸಿದನು. ವಿದ್ಯಾ ಎಂದರೆ ಯಾರು ಎಂದು ಕೇಳಿದಾಗ ಅಲ್ಲೇ ಇದ್ದ ಅವನ ಫೋಟೋ ತೋರಿಸಿದ ಮಾಧವ. ವಿದ್ಯಾಧರನ ಮನೆಗೆ ಬಂದಿದ್ದಳು ಸುಮಂಗಲಾ. ಅವಳು ತನ್ನ ಬದುಕಲ್ಲಿ ಯಾರನ್ನು ನೋಡಬಾರದು ಎಂದುಕೊಂಡಿದ್ದಳೋ.. ಎಲ್ಲಿಗೆ ಬರಬಾರದು ಎಂದುಕೊಂಡಿದ್ದಳೋ  ವಿಧಿ ಅವಳನ್ನು ಮತ್ತೆ ಅಲ್ಲಿಗೇ ತಂದು ನಿಲ್ಲಿಸಿತ್ತು. ಅವಳು ಈ ಆಘಾತಕ್ಕೆ ಮೂರ್ಛೆ ಹೋದಳು. ಮಾಧವನಿಗೆ ಈಗ ಎಲ್ಲವೂ ಒಂದೊಂದಾಗಿ ಅರ್ಥವಾದಂತಿತ್ತು. ಎಲ್ಲಿಯದ್ದೋ, ಯಾರದ್ದೋ ಬದುಕಿನದ್ದು ಎಂದುಕೊಂಡಿದ್ದ ಎಳೆ ಈಗ ಅವನ ಬದುಕಿಗೇ ಸುತ್ತಿಕೊಂಡಿತ್ತು. ವಿದ್ಯಾಧರನ ಬದುಕಲ್ಲಿ ತಾನು ಮಾಡಿದ ಒಂದು ಸಣ್ಣ ನಿರ್ಲಕ್ಷ್ಯದ ಪಾಪಪ್ರಜ್ಞೆ ಈಗ ಅವನನ್ನು ಬಹುವಾಗಿ ಕಾಡತೊಡಗಿತ್ತು. ಅಂದು ಅವಳ ಪಕ್ಕದಲ್ಲಿಯೇ ಕುಳಿತು ಅವಳಿಗೆ ಎಚ್ಚರವಾಗುವುದನ್ನೇ ಕಾಯುತ್ತಿದ್ದ. ಆದರೆ, ಏಕೋ ಒಂದು ಹೊತ್ತಿನಲ್ಲಿ ಎದ್ದು ಹೊರಟ. ಅವನು ಹೊರಟದ್ದು ಇವಳ ಅರಿವಿಗೆ ಬಂದಿತು. ಕೂಗಬೇಕು ಎಂದುಕೊಳ್ಳುವಷ್ಟರಲ್ಲಿ ಮತ್ತೆ ಬವಳಿ ಬಂದಂತಾಗಿ ಕಣ್ಮುಚ್ಚಿದಳು. ಬೆಳಿಗ್ಗೆ ಏಳುವಷ್ಟರಲ್ಲಿ ಮಾಧವ ಶವವಾಗಿ ಮಲಗಿದ್ದ. ಬದುಕಿನಲ್ಲಿ ಆಶಾಕಿರಣವಾಗಿ ಬಂದಿದ್ದವನು ಅಷ್ಟೇ ಬೇಗ ಬದುಕಿನಿಂದ ಮರೆಯಾಗಿದ್ದ. ಅದೇಕೋ ಅವಳಿಗೆ ರುಕ್ಮಿಣಿಯಾಗುವ ಅವಕಾಶವಾಗಲೇ ಇಲ್ಲ.

ಸುಮಂಗಲಾ ಈಗ ಇಲ್ಲಿ ಒಬ್ಬಂಟಿ. ವಿಧವೆಯ ಮುಖ ನೋಡುವುದು ಅಪಶಕುನ, ಯಾರಾದರೂ ಎಲ್ಲಾದರೂ ಹೊರಟಾಗ ಹೊರಗೆ ಬರಬೇಡ ಎಂದಾಗ ತನ್ನ ಮುಖ ನೋಡದೆ ಹೊರಗೆ ಹೋಗದ ಅಪ್ಪ ನೆನಪಾಗುತ್ತಾರೆ. ಹಾಡಲೂ ಸ್ವಾತಂತ್ರ್ಯವಿಲ್ಲ.. ಸಂಪ್ರದಾಯದ ಸಂಕೋಲೆಗಳಲ್ಲಿ ಈಗ ಅವಳು ಬಂಧಿ. ತನ್ನನ್ನು ತಾನೇ ಒಂದು ಕೋಣೆಯೊಳಗೆ ಕೂಡಿ ಹಾಕಿಕೊಂಡು ಅವಳಿಗೆ ಅವಳೇ ಹಿಂಸಿಸಿಕೊಂಡು ಭಾದೆ ಪಡುತ್ತಾಳೆ. ಹಳೆಯ ನೆನಪುಗಳಲ್ಲೇ
ಈಗವಳು ತನ್ಮಯಳು.
*************

ರಾತ್ರಿ  ಯಾವಾಗ ನಿದ್ರಿಸಿದಳೋ ಅವಳಿಗೇ ತಿಳಿದಿರಲಿಲ್ಲ.. ಬೆಳಿಗ್ಗೆ ಎಚ್ಚರವಾದಾಗ ಪರಿಚಿತ ಧ್ವನಿ ಕೇಳಿಸಿತು. ವಿದ್ಯಾಧರ ಬಂದಿದ್ದ ಅಂದು ಅವನು ಹೋಗುವವರೆಗೂ ಅವಳು ಕೋಣೆಯಿಂದಾಚೆ ಕಾಲಿಟ್ಟಿರಲಿಲ್ಲ. ಮಾಧವನ ತಾಯಿಯ ಯೋಗಕ್ಷೇಮದ ಹೊಣೆಯನ್ನು ಈಗ ವಿದ್ಯಾಧರ ಹೊತ್ತುಕೊಂಡಿದ್ದ. ಮಾಧವ ತಾನಿಲ್ಲದಾಗ ತನ್ನ ಕುಟುಂಬಕ್ಕೆ ಮಾಡಿದ ಸೇವೆಗೆ ಈಗ ವಿದ್ಯಾಧರ ಮಗನಾಗಿ ತನ್ನ ಕರ್ತವ್ಯ ನಿರ್ವಹಿಸುತ್ತಿದ್ದಾನೆ. ಪ್ರತಿದಿನದ ಅವನ ಸೇವೆಗೆ ಪ್ರತಿಫಲವಾಗಿ ಮಾಧವನ ತಾಯಿಯ ಆರೋಗ್ಯ ಸುಧಾರಿಸುತ್ತಿದೆ. ಪ್ರತಿದಿನ ತನ್ನ ಆರಾಧ್ಯದೈವವನ್ನು ನೋಡಿದರೂ ಮಾತನಾಡಿಸಲಾಗದೆ ವೇದನೆ ಅನುಭವಿಸುತ್ತಿದ್ದಾಳೆ ಸುಮಂಗಲಾ. ಈಗ ವಿದ್ಯಾಧರ ಮನೆ ಮಗನಿಗಿಂತ ಹೆಚ್ಚು. ಒಂದು ತಿಂಗಳಲ್ಲಿ ಮನೆ ಮತ್ತು ಮನೆಯ ಜನರ ಮನಸ್ಸನ್ನು ಬದಲಾಯಿಸಿದ್ದಾನೆ. ಮೂಢನಂಬಿಕೆಗೆ ಬಲಿಯಾಗಬೇಡಿ ಎಂದು ಮಾಧವ ಬದುಕಿದ್ದಾಗ ಹೇಳುತ್ತಿದ್ದ ಅವನ ಮಾತುಗಳನ್ನು ಹೇಳುತ್ತಾನೆ. ಸತ್ತ ಮಾಧವನೇ ವಿದ್ಯಾಧರನ ರೂಪದಲ್ಲಿರುವಂತೆ ಅನ್ನಿಸುತ್ತಿದೆ ಎಲ್ಲರಿಗೂ.


ಇಂದು ಮಾಧವನ ತಾಯಿ ಬಂದು ಹೇಳಿದ ಮಾತಿಗೆ ಹೇಗೆ ಪ್ರತಿಕ್ರಿಯೆ ನೀಡಬೇಕೆಂದೇ ತಿಳಿಯದಾಗಿದೆ. ಕನಸೋ.. ನನಸೋ ಒಂದೂ ತಿಳಿಯದ ಅಯೋಮಯ ಸ್ಥಿತಿಯಾಗಿದೆ. "ಮಗಳೇ, ಇಷ್ಟು ದಿನ ನಾವೂ ನೋವಲ್ಲಿದ್ದೆವು. ನಿನ್ನನ್ನು ಗಮನಿಸಿಕೊಳ್ಳಲಾಗಲಿಲ್ಲ. ನಮ್ಮ ನೋವಿನಷ್ಟೇ ನಿನಗೂ ನೋವಿದೆ ಎಂಬುದು ಒಬ್ಬ ತಾಯಿಯಾಗಿ ಅರ್ಥ ಮಾಡಿಕೊಳ್ಳಲು ತಡವಾಯಿತು. ನಿನಗೆ ಉತ್ತಮ ಭವಿಷ್ಯವಿದೆ. ಅದು ಈ ಕತ್ತಲ ಕೂಪದಲ್ಲಿ ಸೆರೆಯಾಗುವುದು ಬೇಡ. ಇಷ್ಟು ದಿನ ನಿನ್ನನ್ನು ನೀನು ಹಿಂಸಿಸಿಕೊಂಡಿರುವುದು ಸಾಕು. ಇನ್ನು ಮುಂದೆ ನೀನು ಈ ಮನೆಯ ಸೊಸೆಯಲ್ಲ ಈ ಮನೆಮಗಳು. ನಿನ್ನ ಸಂಗೀತವನ್ನು ಮುಂದುವರಿಸು. ಓದುವ ಇಚ್ಛೆಯಿದ್ದರೆ ಮುಂದಕ್ಕೆ ಓದು ಆದರೆ ಇಲ್ಲಿಯೇ ಕುಳಿತು ಭವಿಷ್ಯವನ್ನು ಸೆರೆಯಾಗಿಸಿಕೊಳ್ಳಬೇಡ". ಬಹುಶಃ ನನ್ನ ಮನಸ್ಸು ಸಹಾ ಇದೇ ಮಾತಿಗೆ ಕಾಯುತ್ತಿತ್ತು ಎನ್ನಿಸುತ್ತದೆ. ಮೂಲೆಯಲ್ಲಿಟ್ಟಿದ್ದ ವೀಣೆ ಇಂದು ಕೈಗೆ ಬಂದಿತ್ತು. ವೀಣೆಯನ್ನು ನುಡಿಸುವಾಗಿನ ತನ್ಮಯತೆಯ ತಂತಿಯನ್ನು ಮೀಟಲು ಈಗ ಯಾರಿಂದಲೂ ಸಾಧ್ಯವಾಗದು.

ವಿದ್ಯಾಧರನಿಗೆ ಮಾಧವ ಬರೆದಿಟ್ಟಿದ್ದ ಪತ್ರ ದೊರಕಿತಂತೆ. ನನ್ನನ್ನು ವಿವಾಹವಾಗಲು ವಿದ್ಯಾಧರ ಸಿದ್ದನಿರುವ. ಮಾಧವನ ತಾಯಿ, ನನ್ನ ತಂದೆ ತಾಯಿ ಎಲ್ಲರೂ ಒತ್ತಾಯಿಸಿದರು. ಆದರೆ, ಏಕೋ ಮನಸ್ಸು ಒಪ್ಪುತ್ತಿಲ್ಲ. ಮಾಧವನ ಮೂರ್ತಿ ಮನದಿಂದ ಮರೆಯಾಗುತ್ತಿಲ್ಲ. ವಿದ್ಯಾಧರನಿಗೆ ಅಮ್ಮನಂತಹಾ ಗೆಳತಿಯಾಗಿಯೇ ಕಡೆಯವರೆಗೂ ಉಳಿಯುವಾಸೆ. ವಿದ್ಯಾಧರನಿಗೆ ನಾನೇ ನಿಂತು ಮದುವೆ ಮಾಡಿಸಿದೆ. ಅವನ ಮಗ ಪುಟ್ಟ ಮಾಧವನಿಗೆ ಈಗ ನಾನೇ ಯಶೋದೆ. ಕೃಷ್ಣ ಇಡಿಯಾಗಿ ದಕ್ಕಿದ್ದು, ವಿಶ್ವರೂಪ ತೋರಿಸಿದ್ದು ಯಶೋದೆಗೆ ಮಾತ್ರವಲ್ಲವೇ..? ಮೀರಾ ಆಗಲಾಗಲಿಲ್ಲ. ರಾಧೆಯಾಗಿಯೂ ಉಳಿದಿಲ್ಲ, ರುಕ್ಮಿಣಿಯಾಗುವ ಭಾಗ್ಯ ಇರಲಿಲ್ಲ, ದೇವಕಿಯಾಗುವ ಭಾಗ್ಯವಂತೂ ಇಲ್ಲವೇ ಇಲ್ಲ ಆದರೆ ಯಶೋದೆಯಾಗಿದ್ದೇನೆ. ತನ್ಮಯತೆಯ ತಂತಿಯನ್ನು ಮೀಟುವ ಧೈರ್ಯ ಇರುವುದು ಈಗ ಪುಟ್ಟ ಮಾಧವನಿಗೆ ಮಾತ್ರ.

ತನ್ಮಯತೆಯ ತಂತಿ ಮೀಟಿದ
ಮಾಧವನಿಗೆ ಜೋ ಜೋ ಲಾಲಿ

ಜೋಗುಳ ಹಾಡಿಸಿಕೊಂಡು ಮಲಗಿದ ಪುಟ್ಟ ಮಾಧವನ ಮುಂಗುರುಳ ನೇವರಿಸಿದಾಗ ಅದೇಕೋ ಮಮತೆಯ ತಂತು ಅರಿವಿಲ್ಲದಂತೆ ಮಿಡಿದು ತಾಯ್ತನದ ಬಂಧದಲ್ಲಿ ತನ್ಮಯಳಾಗುತ್ತೇನೆ. ನನ್ನ ಪ್ರಾಣವೆನಿಸಿದ ವೀಣೆಯೂ ಮರೆತು ಹೋಗುತ್ತದೆ. ಎಲ್ಲವನ್ನೂ ಮರೆಸಿ ನನ್ನನ್ನು ಮಾತ್ರ ನೆನಪಿಟ್ಟುಕೋ ಎಂದು ಪುಟ್ಟ ಮಾಧವ ಉಸುರಿದಂತಾಗುತ್ತದೆ.

~ವಿಭಾ ವಿಶ್ವನಾಥ್