ಶನಿವಾರ, ಜುಲೈ 29, 2017

ಮಾತೃ ಹೃದಯ

ಬರಿದಾದ ಬರಡು ನೆಲವು ಇದಲ್ಲ,
ತುಂಬಿದೆ ಪ್ರೀತಿ ಎದೆಯೊಳಗೆ.
ಬಿತ್ತಿದಂತೆ ಬೆಳೆಯಾದರೆ, ತೋರಿದಂತೆ ಒಲುಮೆಯೇ?
ಪ್ರೀತಿಯ ಹೊಳೆಯಲ್ಲಿ ಕೊಚ್ಚಿ ಹೋಗುವುದಿಲ್ಲ,
ಬಡತನದ ಬದುಕನ್ನು ಮರೆತಿಲ್ಲ,
ಸಿರಿತನ ತುಂಬಿದ ತಾಯ ಹೃದಯವಿದು.
ಮಮತೆಯ ಮಡಿಲಿನಲಿಹುದು ಸುಪ್ತ ಪ್ರೀತಿ
ಅನೂಹ್ಯ ಚಿಂತನೆಗಳ ಅಗಾಧತೆಯ ಕಡಲಿದು.
ಅನನ್ಯ ಬಯಕೆಗಳು ಒಡಲೊಳಗಿವುದು.
ಜೀವನದ ಕುಲುಮೆಯೊಳಗೆ ಬೆಂದಿದ್ದರೂ,
ಪ್ರೀತಿಯ ಬಿಸಿ ಅಪ್ಪುಗೆ ಇಲ್ಲಿವುದು.
ಮಾತೃ ಹೃದಯದಲಿ ವೇದನೆಯು ಅಡಗಿವುದು
ಒಮ್ಮೆ ನೀ ಬಂದು ನೋಡೆನ್ನನು.
ತೋರಿದ ಕೋಪ-ತಾಪಗಳು ನಿನ್ನೊಳಿತಿಗೇ
ತೊರೆದು ಹೋಗದೆ ನೀ ಸೇರು ನನ್ನನ್ನು
ಕಣ್ಮುಚ್ಚುವೆ ನಿನ್ನ ಆಸರೆಯಲೇ,
ಕೊನೆಯುಸಿರೆಳೆಯುವೆನು ನೆಮ್ಮದಿಯಲೇ.     
                                   -vಭಾ

ಶುಕ್ರವಾರ, ಜುಲೈ 21, 2017

ಮನದಾಳದಾ ಮೌನಗಾಯನ...

ಹಂಬಲದ ಹೊಸ  ಭಾವಗಳೆಲ್ಲವೂ
ಹಾಡಾಗಿ ಹೊರ ಹೊಮ್ಮುತಲಿವೆ
ಮೌನ ಮಾತಾಗಿ,ಮಾತು ಹಾಡಾಗಲಿಲ್ಲ
ನಡೆಯುವುದಿಲ್ಲಿ ಮೌನದಾ ಸಂವಹನ
ಅದುವೇ ಮನದಾಳದಾ ಮೌನಗಾಯನ

ಸ್ಫುರಿಸುವಾ ಆಸೆಗಳು ಸಾಯುವುದಿಲ್ಲ
ಸತ್ತಂತಿರುವ ಕನಸುಗಳಿಗೂ ಪದಗಳಾ ರೂಪ
ಭಾವದ ಅಣೆಕಟ್ಟಿನಿಂದ ಚೆಲ್ಲುತಿದೆ ಮೌನ
ಕೇಳುತಿದೆ ಮೌನ ಋಷಿಯಾ ಗೀತಗಾಯನ
ಅದುವೇ ಮನದಾಳದಾ ಮೌನಗಾಯನ

ಚೆಲುವಿಕೆಯ ಅಹಂಭಾವ ಮಿಡಿದಿಲ್ಲ
ಕಾಳ ರಾತ್ರಿಯ ಬಾಹುಬಂಧನದಲ್ಲಿ
ಸರಿಯುತಿದೆ ಮೌನದಿ ಗಡಿಯಾರದಾ ಮುಳ್ಳು
ಅದಕೆ ಚಂದಿರನ ಮುಗುಳ್ನಗೆಯ ನುಡಿನಮನ
ಅದುವೇ ಮನದಾಳದಾ ಮೌನಗಾಯನ
                                            -vಭಾ

ಮಂಗಳವಾರ, ಜುಲೈ 18, 2017

ಸ್ವಾತಂತ್ರ್ಯ-ಪರಿಕಲ್ಪನೆ-ವಾಸ್ತವ

ಗೂಡು ಬಿಟ್ಟು ಈಚೆ ಬರದ ಹಕ್ಕಿಗೆ,
ಸ್ವಾತಂತ್ರ್ಯತೆಯ ಪರಿಕಲ್ಪನೆಯು
ಮನದಿ ಈಗ ಮೂಡಿದೆ

ರೆಕ್ಕೆ ಬಲಿತ ಹಕ್ಕಿಗೆ ಆಗಸವು ತೆರೆದಿದೆ
ಮನದ ಮೂಲೆಯಲ್ಲಿ ಈಗ,
ಬೆಳ್ಳಿಯ ಆಶಾಕಿರಣ ಮೂಡಿದೆ

ಮುಕ್ತ ಬಯಲು,ಸ್ವಚ್ಚಂದ ಆಕಾಶ
ಅಪಾಯ ತಿಳಿಯದ ಹಕ್ಕಿ ರೆಕ್ಕೆ ಬಿಚ್ಚಿ ಹಾರಿದೆ
ನೀಲ ನಭದಲಿ, ಮುಕ್ತ ಮನದಿ ನಕ್ಕಿದೆ

ದೂರದಲ್ಲಿ ಹೊಂಚು ಹಾಕಿದೆ ಅಪಾಯವು
ಯಾವ ಜೀವಕೆ, ಎಲ್ಲಿ ಕುತ್ತು?
ಯಾವ ಪಾಶ, ಯಾರಿಗೇನು ಗೊತ್ತು?

ಸ್ವಾತಂತ್ರ್ಯ ಸಿಕ್ಕ ಖುಷಿಯಲಿ,
ಸಂಚು ಮಾಡಿ ಹೊಂಚು ಹಾಕೊ ಜನರ ನಡುವಲಿ
ಜಗವ ಮರೆತು ಹಾಡಿದೆ.

ಬಂಗಾರದ ಪಂಜರದಿ ಸಿಲುಕಿದೆ
ಬಹಳ ನಲುಗಿ, ಸೊರಗಿ ಸೋತಿದೆ
ಎಲ್ಲವನ್ನು ನಂಬುವ ತನ್ನ ಬುದ್ದಿಯ ಹಳಿದಿದೆ

ಒಳ್ಳೆಯತನಕೆ ಮೋಸವಿಲ್ಲ,
ಯಾರಿಂದಲೋ ಬಿಡುಗಡೆಯು ದೊರೆತಿದೆ.
ವಾಸ್ತವಿಕತೆಯ ಅರಿತಿದೆ.
ತನ್ನ ಹುಷಾರಲ್ಲಿ ತಾನು ನೀಲ ನಭದಿ ಬೆರೆತಿದೆ.
                                                  -vಭಾ

ಆ ಕಂಗಳ ಸೆಳೆತ...

ನಿನ್ನ ಕಣ್ಣುಗಳಲ್ಲಿ ಅದೇನೋ ಸೆಳೆತ
ಭಾವಿಸುವವರಿಗೆ ಎಲ್ಲವೂ ಉಂಟು ಅಲ್ಲಿ.
ಅಗಾಧ ಖುಷಿಯಿದೆ ಆ ಕಂಗಳಲಿ
ನೋವಿನ ಅರಿವಿಲ್ಲವೆಂದೇನಲ್ಲ...
ಅದರ ಮೇರೆ ಮೀರಿವೆ ಆ ನಯನಗಳು,
ನನ್ನ ಕನಸುಗಳನ್ನು ಕಾಣುತ್ತಿವೆ ಅವು
ದೂರ ಪಯಣದ ದಿಕ್ಸೂಚಿಗಳವು...
ಮುನ್ನಡೆಯ ಹಾದಿಯ ಕ್ರಾಂತಿ ಕಿಡಿಗಳವು
ಕಾಣುವ ಕನಸು ಯಾವುದಾದರೇನು?
ಆ ಕನಸುಗಳೇ ಕಣ್ಣುಗಳ ಚೆಲುವು
ಚೆಲುವು ಮಾಸುವ ಮುನ್ನವೇ,
ಸೇರಿಬಿಡು ಕನಸೊಳಗೊಂದಾಗಿ,
ಕನಸೇ ತಾನಾಗಿ, ತನ್ನ ಗುರಿಗಾಗಿ,
ರೂಪಿಸಿಕೋ ಕನಸೇ ಬದುಕಾಗಿ.
                                -vಭಾ

ಶನಿವಾರ, ಜುಲೈ 8, 2017

ಕಾರಣವ ಹುಡುಕುತ್ತಾ

ಕಾರಣ ಹೇಳುವ ಮನಸ್ಸಿಲ್ಲ ನನಗೆ
ಕಾರಣ ತಿಳಿಯುವ ಹುಚ್ಚು ಬಯಕೆ ನಿನಗೆ
ಹೇಳ ಬಯಸಿದರೆ ನೂರುಂಟು ಕಾರಣ
ಕಾರಣ ಬದುಕ ಸರಿ ಮಾಡದು

ತೀರಿ ಹೋದವುಗಳ ಸರಿ ಮಾಡವು ಅವು
ಹೇಳುತಾ ಹೋದರೆ ಕೇಳುತಾ ಹೋಗುವೆ
ಕಾರಣಗಳ ಕಾರಣೀಕರ್ತ ನಾನಾಗಲಾರೆ
ಹೇಳಿ ಹೋದರೆ ನೂರು ಕಾರಣ
ಹೇಳದೆ ಹೊರಟರೆ ಒಂದೇ ಕಾರಣ

ಬದುಕು ಕಾರಣಗಳ ಸಂತೆ
ಆ ಸಂತೆಯ ಸರಕುಗಳೇ ಚಿಂತೆ
ಹೊರಟಿರುವೆ ಹೊಸ ಬದುಕಿಗೆ ನಾನು
ತಿಳಿಯಬೇಡ, ತಡೆಯಬೇಡ ಕಾರಣ ಕೇಳಿ
ಉಳಿಯುವುದಿಲ್ಲ ನಾನು ಕಾರಣವ ಹೇಳಿ
                               -vಭಾ

ಗುರುವಾರ, ಜುಲೈ 6, 2017

ಬದುಕಿನ ಆಸರೆ

ಜೀವನಧರ್ಮದ ಪಥದಲ್ಲಿ
ಬಳ್ಳಿಗಾಸರೆ ಮರವೇ
ಎಲ್ಲಿಂದಲೋ ತೇಲಿ ಬಂದ ಬೀಜ,
ಬೆಳೆದು ಮರವಾಯಿತು
ಬಳ್ಳಿಗೂ, ಜೀವರಾಶಿಗೂ ಆಸರೆಯಾಯಿತು
ಯಾರಿಗೂ ಬಗ್ಗದೆ ಹೆಮ್ಮರವಾಯಿತು
ಭಾವನೆಗೂ ಸ್ಪಂದಿಸದೆ ಕೊರಡಾಯಿತು
ಲತೆಗೋ ಮರವೇ ಜೀವ,ದೈವ
ಒಲವು ಹೀಗೇ ಅಲ್ಲವೇ?
ಬಯಸಿದವರಿಗೆ ಬಯಸಿದ್ದು ಸಿಗದು
ಸಿಕ್ಕವರಿಗೋ ಅಹಂಕಾರ
ಬಳ್ಳಿ ಬಾಡಿದರೂ, ಬಳಲಿದರೂ
ಮರಕ್ಕಾವ ಭಾರವೂ ಇಲ್ಲ,ಬಂಧವೂ ಇಲ್ಲ
ಮರಕ್ಕೆ ಇನಿತು ನೋವಾದರೂ
ಬಳ್ಳಿಯ ಬದುಕಿಗೇ ಕೊಡಲಿ ಪೆಟ್ಟು
ಆಸರೆಯ ಧರ್ಮವೇ ಈಗಲ್ಲವೇ?
                                      -vಭಾ

ಬುಧವಾರ, ಜುಲೈ 5, 2017

ಪ್ರಾಮಾಣಿಕತೆ

ಪ್ರಾಮಾಣಿಕತೆಯ ಕೈಗನ್ನಡಿಯಲಿ
ಜಗವನು ನೋಡಲು ಹೊರಟಾಗ
ಜನರನು ಶೋಧಿಸಿ ನಾ ಹೊರಟಾಗ
ನಿನ್ನನು ನೋಡಿದೆ ನಿಲುವುಗನ್ನಡಿಯಲಿ

ಹಿಂಸೆ,ಅಹಿಂಸೆಯ ನಡುವಿನ ಬದುಕು
ನೋವು-ನರಳಾಟದ ತೊಳಲಾಟ
ಚಿತ್ತ-ಭಿತ್ತಿಯಲ್ಲಿ ಹಿಂಡಿ ಹಿಂಸಿಸುತ್ತಿದೆ
ನನ್ನಯ ಮನಸ್ಸಾಕ್ಷಿಯ ಕಡಿವಾಣ

ಪ್ರಾಮಾಣಿಕತೆಯ ಹುಡುಕಿ ಹೊರಟವರಿಗೆ
ಇದುವೇ ಸಿಗುವ ಬಹುಮಾನ
ಜಗದಂತೆಯೆ ನೀ ನಡೆ ನಡೆ ಎಂದಾಗ
ಮರೆಯಾಗುತಿದೆ ನನ್ನ ಪ್ರತಿಬಿಂಬ,
ಅದುವೇ ಪ್ರಾಮಾಣಿಕತೆಯ ಸ್ವಬಿಂಬ
                                        -vಭಾ

ನಾಗರೀಕ ಸಮಾಜದಲ್ಲಿ ವಿಕಲಚೇತನರು ಯಾರು?

ಇಂದು ನಾವು ವಿಜ್ಞಾನ ಯುಗದಲ್ಲಿ ತಂತ್ರಜ್ಞಾನದಲ್ಲಿ ಬಹಳ ಮುಂದುವರಿದಿದ್ದೇವೆ.ಆದರೆ ನಾಗರೀಕರಾಗುತ್ತಿದ್ದೇವೆಯೇ? ಮಾನವೀಯತೆಯನ್ನೇ ಮರೆಯುತ್ತಿದ್ದೇವೆಯೇ?
           ಅದೊಂದು ವಿಕಲಚೇತನ ಮಕ್ಕಳ ಕ್ರೀಡಾಕೂಟ ಸ್ಪರ್ಧೆ. ಎಂಟು ಜನ ಸ್ಪರ್ಧಿಗಳು ತಯಾರಾಗಿ ಒಂದು ಸಂಜ್ಞೆಗಾಗಿ ಕಾಯುತ್ತಾ ನಿಂತಿದ್ದಾರೆ. ಅವರಷ್ಟೇ ಕಾತುರತೆ ಅವರ ಪೋಷಕರಿಗೂ ಇದೆ.ಕೊನೆಗೂ ಆ ಕ್ಷಣ ಬಂದೇ ಬಿಟ್ಟಿತು.ಸ್ಪರ್ಧೆ ಶುರುವಾಯಿತು. ಎಂಟು ಜನರೂ ತಮಗೆ ಸಾಧ್ಯವಾದಂತೆ ಓಡುತ್ತಿದ್ದಾರೆ.ಅಷ್ಟರಲ್ಲಿ ಕೊನೆಯಲ್ಲಿ ಓಡುತ್ತಿದ್ದ ಮಗು ಬಿದ್ದೇ ಬಿಟ್ಟಿತು. ಎಲ್ಲರು ಮುಂದೇನು ಎಂಬಂತೆ ನೋಡುತ್ತಲೇ ಇದ್ದಾರೆ.ಆಗ ಓಡುತ್ತಿದ್ದ ಎಲ್ಲಾ ಮಕ್ಕಳೂ ನಿಂತರು.ತಿರುಗಿ ನೋಡಿದರು ಹಿಂತಿರುಗಿ ಬಂದರು. ಆ ಅಳುತ್ತಿದ್ದ ಮಗುವಿದ್ದ ಜಾಗಕ್ಕೆ ಬಂದರು. ಆ ಅಳುತ್ತಿದ್ದ ಮಗುವನ್ನು ಸಮಾಧಾನ ಮಾಡಿ ನಂತರ ಒಬ್ಬರ ಕೈಯನ್ನೊಬ್ಬರು ಹಿಡಿದುಕೊಂಡು ಒಟ್ಟಾಗಿ ಗುರಿ ಮುಟ್ಟಿದರು.
             ಇನ್ನೊಂದು ಪ್ರಸಂಗ, ಅದೇ ತರಹದ ಶಾಲಾ ಮಕ್ಕಳ ಸ್ಪರ್ಧೆ, ಆದರೆ ಆ ಮಕ್ಕಳು ವಿಕಲಚೇತನರಲ್ಲ. ಆದರೆ ಆ ಕ್ರೀಡಾಕೂಟದಲ್ಲಿ ಬಿದ್ಧ ಮಗುವಿನ ಮೇಲೆ ಯಾರಿಗೂ ಗಮನವಿಲ್ಲ. ಧಾವಂತದ ಓಟದಲ್ಲಿ ಅದನ್ನು ಗಮನಿಸಿಯೂ ಗಮನಿಸದಂತೆ ಓಡುತ್ತಿದ್ದಾರೆ. ಅಲ್ಲದೇ ತಮಗಿಂತ ಮುಂದಿರುವವರನ್ನು ಬೀಳಿಸಿ ಓಡುವ ರೀತಿಯೂ ಅಲ್ಲಿದೆ. ಇಲ್ಲಿ ತಪ್ಪು ಮಕ್ಕಳದಲ್ಲ, ಅವರು ಬೆಳೆಯುತ್ತಿರುವ ವಾತಾವರಣವೇ ಹಾಗಿರುವಾಗ ಅವರದ್ದೇನಿದೆ? ಬಿತ್ತಿದಂತೆ ಬೆಳೆಯಲ್ಲವೇ?
             ಇದಿಷ್ಟೂ ಮಕ್ಕಳ ಮನೋಭಾವವಾದರೆ ಮೊನ್ನೆ ನಾನು ಬಸ್ಸಿನಲ್ಲಿ ಗಮನಿಸಿದ ಮತ್ತೊಂದು ಸಂಗತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಬಸ್ಸಿನಲ್ಲಿ ದೊಡ್ಡ ಗಂಟನ್ನು ಇಟ್ಟುಕೊಂಡು ಒಬ್ಬ ವ್ಯಕ್ತಿ ಕುಳಿತಿದ್ದರು. ಕಂಡಕ್ಟರ್ ಬಂದು ಲಗೇಜಿಗೆ ಪ್ರತ್ಯೇಕ ಟಿಕೆಟ್ ತೆಗೆದುಕೊಳ್ಳಲೇಬೇಕು ಎಂದು ವಾದ ಮಾಡುತ್ತಿದ್ದರು.ಆದರೆ ಆ ವ್ಯಕ್ತಿ ಇದರಲ್ಲಿ ಇರುವುದು ಸ್ಪಂಜು ಮಾತ್ರ ಇರುವುದು,ಅದಲ್ಲದೆ ಇದನ್ನು ನಾನು ನನ್ನ ಬಳಿಯೇ ಇಟ್ಟುಕೊಂಡಿದ್ದೇನೆ. ಆದಕಾರಣ ನಾನು ಲಗೇಜಿಗೆಂದು ಪ್ರತ್ಯೇಕ ಚಾರ್ಜ್  ಕೊಡುವುದಿಲ್ಲ ಅಂದರು. ಕೊನೆಗೆ ಅವರು ಕಂಡಕ್ಟರ್ ಮಾಡುತ್ತಿದ್ದ ವಾದದಿಂದ ಬೇಸತ್ತು ಇಪ್ಪತ್ತು ರೂಪಾಯಿಯನ್ನು ಹೆಚ್ಚುವರಿ ಹಣ ಕೊಟ್ಟು ಸುಮ್ಮನಾದರು. ಎಲ್ಲಾ ಕಡೆಯೂ ಲಂಚದ ಹಾವಳಿ ಹೀಗೇ ಅಲ್ಲವೇ? ಅಷ್ಟರಲ್ಲಿ ಆಗಲೇ ತುಂಬಿದ ಬಸ್ಸಿಗೆ ಮತ್ತಷ್ಟು ಜನ ಹತ್ತಿದರು. ಅದರಲ್ಲಿ ಒಬ್ಬ ಅಂಗವಿಕಲ ವ್ಯಕ್ತಿಯೂ ಇದ್ದರು. ಆದರೆ ಅವರು ಯಾರ ಬಳಿಯೂ ನನಗೆ ಕುಳಿತುಕೊಳ್ಳಲು ಜಾಗ ಕೊಡಿ ಎಂದು ಕೇಳಿಕೊಳ್ಳಲಿಲ್ಲ. ಕಾಲು ಊನವಾಗಿದ್ದರೂ ನಿಂತುಕೊಂಡೇ ಪ್ರಯಾಣ ಮಾಡುತ್ತಿದ್ದರು. ಕಂಡಕ್ಟರ್ ಕೂಡ "ಓ, ಅಂಗವಿಕಲರ ಪಾಸ್" ಎಂದು ಅಸಡ್ಡೆ ತೋರಿ ತನ್ನ ಸೀಟಿನಲ್ಲಿ ಕುಳಿತುಕೊಂಡನು. ಅಂಗವಿಕಲರಿಗೆಂದೇ ಮೀಸಲಾದ ಆಸನವನ್ನು ಬಿಡುವ ಸೌಜನ್ಯವನ್ನು ಯಾರೂ ತೋರಲಿಲ್ಲ. ಕೊನೆಗೆ ಒಬ್ಬರು ಅವರಿಗೆ ಜಾಗ ಬಿಟ್ಟು ತಾವು ನಿಂತುಕೊಂಡರು. ಮಾನವೀಯತೆಯು ಇನ್ನೂ ಸಂಪೂರ್ಣ ಸತ್ತಿಲ್ಲ ಎಂಬುದು ಸಮಾಧಾನಕರ ವಿಷಯ.
               ಕೈ-ಕಾಲು ಗಟ್ಟಿಯಿದ್ದು ದುಡಿಯದೆ ಅಡ್ಡದಾರಿಯಿಂದ ಸಂಪಾದನೆ ಮಾಡುವವರು ಅಂಗವಿಕಲರೋ? ಅಥವಾ ಅಂಗವಿಕಲತೆಯಿದ್ದರೂ  ಬೇರೆಯವರಿಗೆ ತೊಂದರೆ ಮಾಡದೆ, ಇತರರನ್ನು ಬೇಡದೆ ಸ್ವಾಭಿಮಾನಿಯಾಗಿ ಬದುಕಿರುವವರೋ? ನಿಸ್ವಾರ್ಥಿಯಾಗಿ ಬೇರೆಯವರ ನೋವಿಗೆ ಮಿಡಿಯುವ ಮಕ್ಕಳು ವಿಕಲಚೇತನರು ಹೇಗಾದಾರು? ಅಂಗವೈಕಲ್ಯ ಇರುವವರು ಸಮಾಜದ ಶಾಪವಲ್ಲ. ಮಾನಸಿಕ ಅಸ್ವಸ್ಥರು ವಿಕಲಚೇತನರಲ್ಲ ಅವರು "ವಿಶಿಷ್ಟಚೇತನರು".
                ಎಲ್ಲಾ ಸೌಕರ್ಯಗಳಿದ್ದೂ ಬೇರೆಯವರಿಗೆ ಸ್ಪಂದಿಸದೆ, ಮಾನವೀಯತೆ ಮರೆಯುತ್ತಿರುವ ನಾವು ನಿಜಕ್ಕೂ ನಾಗರೀಕ ಸಮಾಜದ ವಿಕಲಚೇತನರಾಗಿದ್ದೇವೆ. ಬರವಣಿಗೆಯಿಂದ ಯಾವುದೂ ಬದಲಾಗದು ಅಲ್ಲದೆ ಒಂದೇ ದಿನದಲ್ಲಿ ಯಾವುದೂ ಬದಲಾಗದು ಆದರೆ ನಮ್ಮಲ್ಲಿ ಮೂಡುವ ಒಂದು ಯೋಚನೆ ನಮ್ಮ ಬದುಕಿನ ದಿಕ್ಕನ್ನೇ ಬದಲಾಯಿಸಬಲ್ಲದು. ಸಮಾಜವನ್ನೇ ಬದಲಿಸಬಹುದು. ಇನ್ನಾದರೂ  ಬದಲಾಗೋಣ, ನಾಗರೀಕರಾಗೋಣ.
                                                                                                                      -vಭಾ