ಭಾನುವಾರ, ಮಾರ್ಚ್ 18, 2018

ಜೀವಕಳೆಯ ಪರ್ವ

ಬಳಲಿ ಬೆಂಡಾಗಿ ಜೀವಕಳೆಯನ್ನೇ ಕಳೆದುಕೊಂಡಿದ್ದ ಇಳೆ ಇಂದು ವಸಂತನ ಆಗಮನಕ್ಕೆ ಪುಳಕಿತಳಾಗಿ ಹಸಿರನ್ನೇ ಮೈ ತುಂಬಾ ಹೊದ್ದು, ಕಣ್ಣು ಕುಕ್ಕುವಂತೆ ನಳನಳಿಸುತ್ತಿದ್ದಾಳೆ. ವಸುಂಧರೆಯ ಈ ಖುಷಿಗೆ ಕೋಗಿಲೆ ಮಾಮರದ ಮೇಲೆ ಕುಳಿತು ಕುಹೂ-ಕುಹೂ ಎನ್ನುತ್ತಾ ದನಿಗೂಡಿಸುತ್ತಿದೆ. ತರು-ಲತೆಗಳು ಹೂಗಳನ್ನೇ ಮೈ ತುಂಬಿಕೊಂಡು ಚಿಗುರಿನಂದದಿಂದ ನಳನಳಿಸುತ್ತಾ ಕಣ್ಮನ ಸೆಳೆಯುತ್ತಿದೆ.
ವಸಂತ ಋತುವಿನ ಈ ಸಮಯದಲ್ಲಿ ಮತ್ತೆ ಮತ್ತೆ ಬರುತ್ತಲಿದೆ ಯುಗಾದಿ. ಕಳೆದ ಕ್ಷಣಗಳು ಮತ್ತೆ ಮತ್ತೆ ಬಾರದಿದ್ದರೂ , ಹೊಸ ಹರುಷವನ್ನು ತರುತ್ತಾ ಯುಗಾದಿ ತಪ್ಪದೆ ಮತ್ತೆ ಮತ್ತೆ ಬರುತ್ತಲಿದೆ.ಇಳೆಯ ಎಲ್ಲಾ ಜೀವರಾಶಿಗಳಿಗೂ ಜೀವಕಳೆಯನ್ನು ತರುತ್ತದೆ.
ಯುಗದ ಆದಿಯ ಸವಿನೆನಪನ್ನು ತರುವ ಯುಗಾದಿ ಅಭ್ಯಂಜನದ ಮಹತ್ವವನ್ನು ಸಾರುತ್ತಾ, ಅದರ ಮಧುರ ಅನುಭೂತಿಯನ್ನೂ ಪರಿಚಯಿಸುತ್ತದೆ.ಜೊತೆಗೆ ಬೇವು-ಬೆಲ್ಲವು ಯಾವ ರಾಸಾಯನಿಕವನ್ನೂ ಒಳಗೊಳ್ಳದ ತಿನಿಸಾಗಿ ಆರೋಗ್ಯವನ್ನು ವೃದ್ದಿಸುತ್ತದೆ.  ಬಾಯಿಗೆ ಕಹಿಯಾದರೂ, ಬೆಲ್ಲದೊಂದಿಗೆ ಸವಿಯುವದನ್ನು ತಪ್ಪಿಸುವುದಿಲ್ಲ. ಬೆಲ್ಲದ ಸಿಹಿಗಿಂತ ಬೇವಿನ ಕಹಿಯೇ ಬಾಯಲ್ಲಿ ಹೆಚ್ಚು ಉಳಿಯುತ್ತದೆನಿಸಿದರೂ, ದೇಹದ ಆರೋಗ್ಯಕ್ಕೆ ಬೇವು ಒಳ್ಳೆಯದು.
ಬೇವು-ಬೆಲ್ಲದಂತೆಯೇ ನಮ್ಮ ಬಾಳಿನಲ್ಲಿ ಬರುವ ಸುಖ-ದುಃಖಗಳು.  ಬೇವು-ಬೆಲ್ಲವನ್ನು ಸವಿಯುವಂತೆಯೇ ಕಷ್ಟ-ಸುಖಗಳನ್ನೂ ಒಟ್ಟಾಗಿ ಅನುಭವಿಸಬೇಕು.  ಕಷ್ಟಕ್ಕೆ ಹೆದರಿ ಕುಗ್ಗದೆ ಅದರಿಂದ ಕಲಿತ ಪಾಠಗಳನ್ನು ಸುಖದೊಂದಿಗೆ ಬೆರೆಸುತ್ತಾ ಬಾಳಿನಲ್ಲಿ ಅಳವಡಿಸಿಕೊಂಡರೆ ಬದುಕು ಸೊಗಸಾಗಿರುತ್ತದೆ ಎಂಬ ಪಾಠವನ್ನೂ ಯುಗಾದಿ ಕಲಿಸುತ್ತದೆ. 
ಹಳೆಯದನ್ನೆಲ್ಲಾ ನೆನಪಿಸುತ್ತಾ, ಈ ಕ್ಷಣ ಇಷ್ಟು ಬೇಗ ಕಳೆದೇ ಹೋಯಿತೇ ಎಂದೆನಿಸುವ ಮಧುರ ನೆನಪುಗಳನ್ನು ಮೂಡಿಸುತ್ತಾ, "ನಿದ್ದೆಗೊಮ್ಮೆ ನಿತ್ಯ ಮರಣ,ಎದ್ದ ಕ್ಷಣ ನವೀನ ಜನನ" ನಮಗೆ ಬರುವುದಿಲ್ಲ ಎಂದು ನೆನಪಿಸುತ್ತಾ ಬಂದಷ್ಟೇ ವೇಗದಲ್ಲಿ ಯುಗಾದಿ ಮುಗಿದೇ ಹೋಗಿಬಿಡುತ್ತದೆ.

ಹಿಂದೂಗಳ ಹೊಸ ವರ್ಷವೆಂದೇ ಖ್ಯಾತಿ ಪಡೆದ ಯುಗಾದಿಯನ್ನು ಅಬ್ಬರದಿಂದ ಆಚರಿಸದೆ, ಪರಿಸರ-ಸ್ನೇಹಿ ಹಬ್ಬವಾಗಿ ಆಚರಿಸೋಣ. ಮಾವಿನ ತಳಿರ-ತೋರಣವ ಕಟ್ಟುತ್ತಾ, ಬೇವು-ಬೆಲ್ಲದೊಂದಿಗೆ, ಮರಳಿ ಬರುತ್ತಿರುವ ಜೀವಕಳೆಯ ಹಬ್ಬ ಯುಗಾದಿಯನ್ನು ಮಂದಹಾಸದೊಂದಿಗೆ ಸ್ವಾಗತಿಸೋಣ.

-ವಿಭಾ ವಿಶ್ವನಾಥ್

ಗುರುವಾರ, ಮಾರ್ಚ್ 8, 2018

ಅವಳಂತರಂಗ


ನಮಗೆ ಬದುಕಿನಲ್ಲಿ ಸ್ಫೂರ್ತಿ ನೀಡಿದ ಮಹಿಳೆಯರ ಪಟ್ಟಿ ಮಾಡ ಹೊರಟಲ್ಲಿ ಅಮ್ಮ, ಚಿಕ್ಕಮ್ಮ, ದೊಡ್ಡಮ್ಮ, ಅಜ್ಜಿ, ಅಕ್ಕ-ತಂಗಿ, ಅತ್ತೆ, ಶಿಕ್ಷಕಿ, ಗೆಳತಿ,ಹೆಂಡತಿ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.ಮಹಿಳೆಯರ ದಿನ ಮಾತ್ರ ನಾವು ಸಾಧನೆ ಮಾಡಿದ, ಸ್ಫೂರ್ತಿ ನೀಡಿದ  ಮಹಿಳೆಯರನ್ನು ನೆನೆಯುವ ನಾವು ಎಂದಾದರೂ ಅವಳಂತರಂಗದ ಆಲೋಚನೆಗಳು ಹೇಗಿರಬಹುದೆಂಬುದನ್ನು ಯೋಚನೆ ಮಾಡಿದ್ದೇವೆಯೇ?

"ಮಹಿಳೆ ಇಂದು ಪುರುಷ ಪ್ರಧಾನ ಸಮಾಜದಲ್ಲಿ, ತಾನೂ ಸರಿಸಮವಾಗಿ ನಿಂತು ಪ್ರಗತಿ ಸಾಧಿಸುತ್ತಿದ್ದಾಳೆ" ಎಂದು ದಿನಪತ್ರಿಕೆಗಳಲ್ಲಿ, ದೂರದರ್ಶನಗಳಲ್ಲಿ ನೋಡಿದಾಗ ಒಂದು ಕಿರು ನಗೆ ನಕ್ಕು ಸುಮ್ಮನಾಗಿಬಿಡುತ್ತೇವೆ.ಆ ನಗು ಮಹಿಳೆಯರದಾದರೆ ಒಂದು ಹೆಮ್ಮೆಯ ನಗು, ಪುರುಷರದಾದರೆ ತಿರಸ್ಕಾರದ ಒಣ ನಗು(ಬಹುಷಃ ಎಲ್ಲರಿಗೂ ಅನ್ವಯಿಸದಿದ್ದರೂ, ಬಹುಮಂದಿಗೆ ಅನ್ವಯಿಸುತ್ತದೆ.)

ಪ್ರತಿ ಮಹಿಳೆಯ ಸಾಧನೆಯ ಹಿಂದೆ ಒತ್ತಾಸೆಯಾಗಿ ನಿಂತವರು, ಸ್ಥೈರ್ಯ ತುಂಬಿದವರು ಪ್ರತಿಯೊಬ್ಬರೂ ಇರುತ್ತಾರೆ. ಹಾಗೆಯೇ ಅವರುಗಳ ನಡುವಲ್ಲೇ ಕುಹಕವಾಡಿ ನಕ್ಕವರೂ ಇರುತ್ತಾರೆ. ಇದನೆಲ್ಲಾ ಮೆಟ್ಟಿ ನಿಲ್ಲಲು ಬಹಳಷ್ಟು ಅಂತಃಶಕ್ತಿ ಬೇಕು. ಅದರ ಮಧ್ಯೆ, ತಾನೆಲ್ಲೋ ಇದರ ನಡುವಲ್ಲಿ ಕಳೆದುಹೋಗುತ್ತಿದ್ದೇನೇನೋ ಎಂಬ ಭಾವನೆಯಿಂದ ಹೊರಬಂದು ಸ್ಥೈರ್ಯ ತಳೆದು ಬದುಕು ಕಟ್ಟಿಕೊಳ್ಳಬೇಕು. ಈ ಪ್ರಸಂಗಗಳು ಉದ್ಯೋಗಸ್ಥ,ವಿವಾಹಿತ ಮಹಿಳೆಯರ ಬದುಕಿನಲ್ಲಿ ಸ್ವಲ್ಪ ಹೆಚ್ಚೇ ಇರುತ್ತವೆ. ಹೊರ ಜಗತ್ತಿಗೆ ಅವಳ ಸಾಧನೆ ಕಾಣುತ್ತದೆ ಅಷ್ಟೇ, ಅದಕ್ಕಾಗಿ ಅವಳು ಅನುಭವಿಸಿದ ಮಾನಸಿಕ ತುಮುಲಗಳು ಕಾಣದೆ ಮುಚ್ಚಿ ಹೋಗಿ ಬಿಡುತ್ತವೆ.

ಅವಳ ಅಂತರಂಗದ ತೊಳಲಾಟ ಯಾರಲ್ಲೂ ಹೇಳಲೂ ಸಾಧ್ಯವಿಲ್ಲದೆ, ಅನುಭವಿಸಲೂ ಆಗದೆ ಇರುವ ಮನಸ್ಥಿತಿ ದೇವರಿಗೇ ಪ್ರೀತಿ. ಅದರಲ್ಲೂ ತಿಂಗಳ 'ಆ ದಿನ'ಗಳಲ್ಲಿ ಇನ್ನಷ್ಟು ಅಸ್ತವ್ಯಸ್ತವಾಗಿ ಬಿಡುತ್ತದೆ. ಬದಲಾಗುತ್ತಿರುವ ಭಾವನೆಗಳ ಆಂದೋಲನ(ಮೂಡ್ ಸ್ವಿಂಗ್ಸ್), ಜೊತೆಯಲ್ಲಿ ಶುರುವಾಗುವ ಕಿರಿ-ಕಿರಿ, ಜೊತೆಗೊಂದಿಷ್ಟು ಹೊಟ್ಟೆನೋವು, ಎಲ್ಲವೂ ಸೇರಿ  ಅವಳನ್ನು ಹಣ್ಣಾಗಿಸುತ್ತವೆ. ಇದೆಲ್ಲದರ ಜೊತೆಗೆ ಆಫೀಸ್ ನ ಅನಿವಾರ್ಯ ಕೆಲಸಗಳು, ಮಕ್ಕಳ ಪ್ರಾಜೆಕ್ಟ್ ವರ್ಕ್, ಅದೇ ಸಮಯದಲ್ಲಿ ಸುಳಿವೇ ನೀಡದೆ ಬರುವ ನೆಂಟರು, ಇವೆಲ್ಲ ಅವಳಿಗಾಗಿಯೇ ಕಾಯ್ದು ಕುಳಿತಿವೆಯೇನೋ ಎಂಬಂತೆ ಒಟ್ಟಿಗೆ ಮುಗಿಬಿದ್ದು ಅವಳನ್ನು ಹಣ್ಣುಗಾಯಿ-ನೀರುಗಾಯಿ ಮಾಡಿಬಿಡುತ್ತವೆ.

ಇನ್ನು 45-50 ರ ಆಸುಪಾಸಿನ ಮಹಿಳೆಯರದ್ದು ಇನ್ನೊಂದು ಬಗೆ. ಋತುಚಕ್ರ ನಿಲ್ಲುವ ಸಂಧರ್ಭದಲ್ಲಿ ಉಂಟಾಗುವ ಬೇಡದ ಸಂದರ್ಭಗಳು, ಅದರೊಂದಿಗೆ ನಿಶ್ಶಕ್ತಿ, ಎಲ್ಲರೂ ನನ್ನಿಂದೇನೋ ಮುಚ್ಚಿಡುತ್ತಿದ್ದಾರೇನೋ ಅಥವಾ ಎಲ್ಲರೂ ನನ್ನಿಂದ ದೂರವಾಗುತ್ತಿದ್ದಾರೇನೋ ಎನ್ನುವುದೊಂದು ಭಾವನೆ ಸಣ್ಣದಾಗಿ ಮೊಳೆಯಲು ಪ್ರಾರಂಭವಾಗಿಬಿಟ್ಟಿರುತ್ತದೆ. ಮನೆಯಲ್ಲಿನ ಕೆಲಸಗಳ ಒತ್ತಡಗಳು, ಮಕ್ಕಳ ಜವಾಬ್ದಾರಿ ಇವುಗಳೂ ಸೇರಿ  ಅವರನ್ನು ಜರ್ಜರಿತರನ್ನಾಗಿಸುತ್ತಿರುತ್ತದೆ.

ಆದರೂ ಮಹಿಳೆಯರ ಅಂತರಂಗದ ಶಕ್ತಿಯೆಂತದೆಂದರೆ, ಆಕೆ ಇವೆಲ್ಲವನ್ನೂ ದಾಟಿ ಮುಂದುವರಿಯುತ್ತಾಳೆ. ತನ್ನ ಪುಟ್ಟ ಪ್ರಪಂಚದಲ್ಲಿ ಯಾರಿಗೂ, ಯಾವ ಕೊರತೆಯೂ ಆಗದಂತೆ, ಕಾಪಾಡಿ ಬಿಡುತ್ತಾಳೆ. ತನಗೆ ಸಾವಿರಾರು ಕೈಗಳಿವೆಯೇನೋ ಎಂಬಂತೆ ದುಡಿಯುತ್ತಾಳೆ. ತನ್ನ ಮುಟ್ಟಿನ ನೋವನ್ನೂ ಬಚ್ಚಿಟ್ಟುಕೊಂಡು ಮಗುವಿನ ಸಣ್ಣ ತಲೆನೋವಿಗೆ ಸಂಕಟಪಡುತ್ತಾಳೆ. ಗಂಡನಷ್ಟೇ ಸಂಪಾದಿಸಿದರೂ, ಅವನಿಗಿಂತ ಮೇಲೆಂದು ಅಹಂಕಾರ ತೋರದೆ, ದರ್ಪ ತೋರದೆ, ಸಂಸಾರದ ರಥ ಸಾಗಿಸುತ್ತಾಳೆ. ಗಂಡಿನಷ್ಟು ಸ್ವಾತಂತ್ರ್ಯ ದೊರೆಯದಿದ್ದರೂ, ತನಗೆ ಸಿಕ್ಕಿದ ಮಿತಿಯಾದ ಸ್ವಾತಂತ್ರ್ಯದಲ್ಲೇ, ತನ್ನವರಾರಿಗೂ ತೊಂದರೆಯಾಗದಂತೆ, ತನ್ನ ಗುರಿ ಸಾದಿಸಿಯೇ ಬಿಡುತ್ತಾಳೆ. ಆದರೆ ತನ್ನ ಅಂತರಂಗವನ್ನು ಸುತ್ತಲಿನವರು ಅರ್ಥ ಮಾಡಿಕೊಂಡರೆ... ಎಷ್ಟು ಚೆಂದವಲ್ಲವೇ ಎಂಬ ಸ್ವಗತದೊಂದಿಗೆ ಮುಖದ ಮೇಲೆ ಮುಗುಳ್ನಗೆಯೊಂದನ್ನು ಮೂಡಿಸಿಕೊಂಡು ಬಿಡುತ್ತಾಳೆ.

ಅಂತಹಾ ಎಲ್ಲಾ ಮಹಿಳೆಯರಿಗೂ ನನ್ನದೊಂದು ಪುಟ್ಟ ಸಲಾಂ.

ಸಾಧ್ಯವಾದರೆ, ಇನ್ನು ಮುಂದಾದರೂ ಅವಳಿಗೆ ಸ್ವಲ್ಪ ಸಹಾಯ ಮಾಡಿ. ಸಹಾಯ ಮಾಡಲು ಸಾಧ್ಯವಾಗದಿದ್ದರೆ, ಅಣಕವನ್ನಂತೂ ಮಾಡಬೇಡಿ. ಅವಳ ಜೊತೆಯೇ ನಿಂತು ಸಹಾಯ ಮಾಡಬೇಕೆಂದೇನೂ ಇಲ್ಲ. ನಾನಿದ್ದೇನೆಂಬ ಭರವಸೆಯ ಮುಗುಳ್ನಗೆಯೊಂದೇ ಸಾಕು ಅವಳಲ್ಲಿ ಆತ್ಮವಿಶ್ವಾಸ ಮೂಡಿಸಲು. ಆ ಒಂದು ಮುಗುಳ್ನಗು ಅವಳ ಜೀವನದಲ್ಲಿ ಖುಷಿ ತರುವುದರಲ್ಲಿ ಸಂದೇಹವೇ ಇಲ್ಲ.

-ವಿಭಾ ವಿಶ್ವನಾಥ್