ಗುರುವಾರ, ಫೆಬ್ರವರಿ 27, 2020

ದಾಸ್ಯ-ಸ್ವಾತಂತ್ರ್ಯ-ಸ್ವೇಚ್ಛೆ


ಮಳೆಯ ಪ್ರಮಾಣ ಹೆಚ್ಚು-ಕಡಿಮೆಯಾದರೆ ಅತಿವೃಷ್ಟಿ-ಅನಾವೃಷ್ಟಿಗಳು ಉಂಟಾಗುತ್ತವೆ. ಹಾಗೆಯೇ ಸ್ವತಂತ್ರ್ಯತೆಯ ಏರಿಳಿತವೂ ದಾಸ್ಯ ಮತ್ತು ಸ್ವೇಚ್ಛೆಯನ್ನು ಸೃಷ್ಟಿ ಮಾಡುತ್ತದೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ ನಿಜ, ಆದರೆ ದೇಶದ ಪ್ರತಿಯೊಬ್ಬ ನಾಗರೀಕನಿಗೂ ಸ್ವಾತಂತ್ರ್ಯ ಸಿಕ್ಕಿದೆಯೇ? ನಿಜವಾಗಿಯೂ ದೇಶದ ಪ್ರತಿಯೊಬ್ಬ ಪ್ರಜೆಯೂ ಸ್ವತಂತ್ರನಾಗಿ ಬಾಳ್ವೆ ನಡೆಸುತ್ತಿದ್ದಾನೆ ಎಂದಾದಲ್ಲಿ ಜೀತ ಪದ್ಧತಿ, ಬಾಲಕಾರ್ಮಿಕ ಪದ್ಧತಿ ಇನ್ನೂ ಜೀವಂತವಾಗಿರುವುದೇಕೆ?

ಮಹಾತ್ಮ ಗಾಂಧೀಜಿಯವರ ಹೇಳಿಕೆಯಂತೆ ನಡುರಾತ್ರಿ ಮಹಿಳೆಯೊಬ್ಬಳು ನಿರ್ಭೀತಿಯಿಂದ ನಡೆದಾಡುವಂತಾದರೆ ಅದೇ ಸ್ವಾತಂತ್ರ್ಯ. ಹಾಡುಹಗಲೇ ಪುಟ್ಟ ಬಾಲಕಿಯಿಂದ ಹಿಡಿದು ವೃದ್ಧೆಯವರೆಗೂ ಅತ್ಯಾಚಾರ ನಡೆಯುತ್ತಿರುವಾಗ ನಡುರಾತ್ರಿಯ ಮಾತೆಲ್ಲಿ? ಇದಕ್ಕೆ ಅಪವಾದ ಎಂಬಂತೆ ಸ್ವೇಚ್ಛೆಯಿಂದ ಬಾಳ್ವೆ ನಡೆಸುವವರೂ ಇದ್ದಾರೆ.

ತ್ಯಾಗ,ಶಾಂತಿ ಮತ್ತು ಸಮೃದ್ಧಿಯ ಕುರುಹಾಗಿ ಇರುವ ಕೇಸರಿ,ಬಿಳಿ,ಹಸಿರಿನ ಬಾವುಟ ಇಂದು ಹಿಂದು,ಕ್ರೈಸ್ತ ಮತ್ತು ಮುಸಲ್ಮಾನರ ಧರ್ಮಗಳ ಪ್ರತ್ಯೇಕ ಸಂಕೇತವೆಂಬಂತೆ ಆಯಾ ಧರ್ಮಗಳ ಮುಖಂಡರಿಂದ ಬಿಂಬಿತವಾಗುತ್ತಿದೆ.ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಎಲ್ಲೆ ಮೀರುತ್ತಿರುವಂತೆ ಭಾಸವಾಗುವುದಿಲ್ಲವೇ..?

ಸ್ವಾತಂತ್ರ್ಯ ಸಿಕ್ಕಿದೆ ಎಂಬುದಕ್ಕೆ ಆಡಂಭರದ ಅವಶ್ಯಕತೆ ಇಲ್ಲ. ಅದು ಸರಳವಾಗಿ, ಸಾಂಕೇತಿಕವಾಗಿ ದೇಶಭಕ್ತಿಯ ಪ್ರತೀಕವಾಗಿ ಬಿಂಬಿತವಾದರಷ್ಟೇ ಚೆನ್ನ. ಸ್ವಾತಂತ್ರ್ಯದ ಹಿಂದೆ ಹಲವಾರು ದೇಶಭಕ್ತರ ನೆತ್ತರ ತರ್ಪಣವಿದೆ. ಹೆಸರೇ ಹೇಳಲಿಚ್ಚಿಸದ ಅನಾಮಿಕ ಹೋರಾಟಗಾರರ ಮತ್ತು ಅವರ ಕುಟುಂಬದವರ ಅದ್ವಿತೀಯ ಛಲವಿದೆ, ಬಲವಿದೆ. ಶಾಂತಿ, ಅಹಿಂಸೆ, ಪ್ರತಿಭಟನೆ, ತ್ಯಾಗ, ಬಲಿದಾನ ಇವೆಲ್ಲದರ ಮಿಳಿತವಿದೆ. ಸ್ವಾತಂತ್ರ್ಯದ ಸದುಪಯೋಗಪಡಿಸಿಕೊಂಡು ಸ್ವತಂತ್ರವಾಗಿಯೇ ಬದುಕೋಣ. ದಾಸ್ಯದ ಸಂಕೋಲೆಯಲ್ಲಿ ಬಂಧಿಯಾಗಿಯೂ ಅಲ್ಲ, ಸ್ವೇಚ್ಛಾಚಾರಿಗಳಾಗಿಯೂ ಅಲ್ಲ.

~ವಿಭಾ ವಿಶ್ವನಾಥ್

ಭಾನುವಾರ, ಫೆಬ್ರವರಿ 23, 2020

ಸೌಹಾರ್ದ ಭಾರತ

ಸೌಹಾರ್ದತೆಯಲಿ ಬದುಕಿ ಬಾಳಲು
ಅವಕಾಶ ನೀಡಿದೆ ತಾಯ್ನೆಲ ಭಾರತ

ಗಿರಿ-ಸಿರಿ, ತೊರೆಗಳ ಭವ್ಯ ನಾಡಲಿ
ಜಾತೀಯತೆಯನು ಮೆಟ್ಟಿ ನಿಲ್ಲುತ
ಒಂದಾಗಿ ಬಾಳಲು ಅವಕಾಶವಾಗಿದೆ
ಸ್ವತಂತ್ರ ಭಾರತದ ಭವ್ಯತೆಯಿಂದ

ಹಲವರ ತ್ಯಾಗ-ಬಲಿದಾನಗಳ ಕುರುಹಾಗಿ
ಶಾಂತಿಯತೆ-ಶೌರ್ಯಗಳ ಮಿಲನದಿಂದ
ಅಡಿಯಾಳಾಗಿ ಬಾಳುವುದರ ಬದಲಿಗೆ
ಸಿಕ್ಕಿದೆ ಬಹುತ್ವ ಭಾರತಕೆ ಸ್ವಾತಂತ್ರ್ಯ

ತ್ಯಾಗ-ಶಾಂತಿ-ಸಮೃದ್ಧತೆಯ ಕುರುಹಾಗಿ
ಹಾರುತಿಹ ಬಾವುಟ ಸಾರುತಲಿದೆ
ಬದುಕಿನ ಮಹತ್ವದ ಪಾಠವೊಂದನು
ಅದುವೇ ಮನುಜನ ಬಾಳಿನ ಸಮಾನತೆಯನು

ವಿವಿಧತೆಯಲ್ಲಿ ಏಕತೆಯ ಸಾರುತ
ಜನ-ಮನದಲ್ಲಿ ಸ್ಥಿರವಾಗಿ ನೆಲೆ ನಿಂತಿರುವ
ದೇಶದ ಕೀರ್ತಿಪತಾಕೆಯ ಎತ್ತಿ ಹಿಡಿಯಲು
ಸ್ವಾತಂತ್ರ್ಯ-ಸೌಹಾರ್ದತೆಯಲಿ ಬಾಳ್ವೆ ಮಾಡುವ

~ವಿಭಾ ವಿಶ್ವನಾಥ್

ಗುರುವಾರ, ಫೆಬ್ರವರಿ 20, 2020

ನೇತ್ರದಾನ

ಇಂದೇ ನಿಮ್ಮ ಒಳಗಣ್ಣ ತೆರೆದು ನಿರ್ಧರಿಸಿ
ನೇತ್ರದಾನವ ಮಾಡಲೇ ಬೇಕೆಂದು

ಸ್ವಾರ್ಥವ ತೋರದೆ ನಿಸ್ವಾರ್ಥಿಯಾಗಿ
ಲೋಕವ ಕಾಣದ ಅಂಧರಿಗೆ
ಬಾಳನು ತೋರಲು ನಿರ್ಧರಿಸಿ
ಸತ್ತ ನಂತರ ನೇತ್ರದಾನವ ಮಾಡಿ


ಬದುಕಿರುವಾಗ ನಾವು ಮಾಡುವ
ಹಣದ ದಾನ-ಧರ್ಮಗಳಿಗಿಂತ
ಶನ್ತ ಮೇಲೆಯೂ ಉಪಕಾರಿಯಾಗುವ
ನೇತ್ರದಾನದ ಕುರಿತು ಯೋಚಿಸಿ

ಭವಿಷ್ಯದ ಜೀವಗಳ ನೆನೆದು
ಅಂಧಕಾರವ ನೀಗಿಸುವ ಪಣತೊಟ್ಟು
ಅವರ ಬಾಳಲಿ ಬೆಳಕಾಗುವ
ಅವಕಾಶವ ಉಪಯೋಗಿಸಿಕೊಳ್ಳಿ

ಮಣ್ಣ ಸೇರುವ ದೇಹದಭಿಮಾನಕೆ
ಮರುಳಾಗಿ ಬಾಳದೆ, ಎಲ್ಲರೂ
ನೇತ್ರದಾನ ಮಹಾದಾನವೆಂದರಿತು
ಎಚ್ಚೆತ್ತು ಎಲ್ಲರಲೂ ಅರಿವು ಮೂಡಿಸೋಣ

~ವಿಭಾ ವಿಶ್ವನಾಥ್

ಭಾನುವಾರ, ಫೆಬ್ರವರಿ 16, 2020

ಗಿರಗಿರ ಗಿರಗಿಟ್ಲೆ

ಗಿರಗಿರನೆಂದು ತಿರುಗುವ ಭರದಿ
ಮನವೂ ಕೂಡಾ ಗಿರಗಿಟ್ಲೆಯಾಗಿದೆ

ಅಮ್ಮನು ಕೊಟ್ಟ ಹುಂಡಿಯ ಕಾಸಲಿ 
ಜಾತ್ರೆಯ ಸುತ್ತಿದರೂ, ಆಸೆಯು ತಣಿಯದೆ
ಕೊನೆಗೇರಿದೆವು ಗಿರಿಗಿಟ್ಲೆಯನೇ...

ಮನದಾಳದ ಸುಪ್ತ ಭೀತಿಗಳನೂ
ಗಿರಗಿರ ಎಂದು ಗಿರಕಿ ಹೊಡೆಸುತ
ಆಚೆಗೆಸೆಯುತಲಿದೆ ಗಿರಗಿಟ್ಲೆ...

ಎಷ್ಟು ಸುತ್ತಿದರೂ ತಣಿಯದ
ನನ್ನೊಳಗೆಲ್ಲಾ ಮುಗಿಯದ  ಬಯಕೆ
ಮನವು ಸಹಾ ಗಿರಗಿಟ್ಲೆಯಂತೇ ಸುತ್ತುತಿದೆ

ನನ್ನೊಡನೆ ನನ್ನ ದೋಸ್ತಿಯು ಇರಲು
ನಮಗಾರು ಸರಿಸಾಟಿಯೆಂದು ಎಂಬ
ಅಮಲಿನಲ್ಲಿಯೇ ತೇಲುತಿಹೆ ಗಿರಗಿಟ್ಲೆಯಂತೆಯೇ..

-ವಿಭಾ ವಿಶ್ವನಾಥ್

ಗುರುವಾರ, ಫೆಬ್ರವರಿ 13, 2020

ಬಣ್ಣದ ಓಕುಳಿಯೊಳಗೆ..

ಬಣ್ಣ-ಬಣ್ಣದಿ ಮಿಂದು
ಬಿಳಿಯ ಬಣ್ಣವನೆಲ್ಲಾ ಕಳೆದು
ಏತಕೀಗೆ ಮೌನದಿ ಕುಳಿತಿರುವೆ?

 ಎದ್ದು ನಿಂತು ಬೊಗಳದೆ
ಬಣ್ಣದಲ್ಲೆಲ್ಲಾ ಹೊರಳಾಡಿ
ಚುಕ್ಕಿಗಳಾ ಮೂಡಿಸಿಕೊಂಡಿರುವೆಯೇನು?

 ಚಿತ್ತಾರದ ಮುದ್ದು ಗೊಂಬೆಯಾಗಿ
ನನ್ನ ಮನವ ಗೆಲ್ಲಲೆಂದು
ವರ್ಣದಲಿ ಮಿಂದು ಬಂದೆಯಾ?

 ನಿನ್ನ ಬಿಳಿಯ ತುಪ್ಪಳಕ್ಕಿಂತ
ಇದುವೆ ನಿನಗೆ ಚಂದ ಕಂಡಿದೆ
ನೀನು ದಿನವೂ ಹೀಗೇ ಇರುವೆಯಾ?

 ಸೊಗಸುಗಾರ ನಿನ್ನ ಮುಗ್ಧತೆಗೆ
ಮನಸೋತು ನಾ ಕೂಡಾ ನಿನ್ನಂತೆ
ಬಣ್ಣವ ಬಳಿದುಕೊಳ್ಳುವೆ ಒಪ್ಪುವೆಯಾ?

 ಹೋಳಿಯ ಓಕುಳಿಯಂತೆ ಚಂದ
ನಿನ್ನ ಮೈಯ್ಯ ಬಣ್ಣದ ಚಿತ್ತಾರ
ನೀ ನನ್ನೊಡನೆಯೂ ಬಣ್ಣದೋಕುಳಿ ಆಡುವೆಯಾ?

-ವಿಭಾ ವಿಶ್ವನಾಥ್

ಭಾನುವಾರ, ಫೆಬ್ರವರಿ 9, 2020

ಒಂದಿಷ್ಟು ಸಮಯ ಬೇಕಿದೆ


ಒಂದಿಷ್ಟು ಸಮಯ ಬೇಕಿದೆ
ನನ್ನದೇ ಆದ ಬದುಕ ಬದುಕಲು

ಮರಳಿ ಬಾರದ ಗತದ ನೆನಪಲ್ಲಿ
ಮುಚ್ಚಿ ಹೋದ ಹವ್ಯಾಸಗಳ ರೂಢಿಸಿಕೊಳ್ಳಲು
ಒತ್ತಡಗಳಿಂದ ಕೊಂಚ ನಿರಾಳವಾಗಲು
ಒಂದಿಷ್ಟು ಸಮಯ ಬೇಕಿದೆ..

ಒಡೆದು ಬಿದ್ದ ಕನಸುಗಳ ಕಟ್ಟಲು
ಪುನಃ ಒಡೆಯದಂತೆ ಎಚ್ಚರಿಕೆ ವಹಿಸಲು
ಆತ್ಮಶಕ್ತಿಯ ಗಟ್ಟಿಗೊಳಿಸಿಕೊಳ್ಳಲು
ಒಂದಿಷ್ಟು ಸಮಯ ಬೇಕಿದೆ..

ಮತ್ತೊಬ್ಬರ ಸಂಚಿಗೆ ಬಲಿಯಾಗದಂತೆ
ಅವರಿವರ ಚುಚ್ಚುಮಾತಿಗೆ ತಲೆಕೆಡಿಸಿಕೊಳ್ಳದಂತೆ
ನನ್ನದೇ ನಿರ್ಧಾರಗಳಂತೆ ನಡೆದುಕೊಳ್ಳಲು
ಒಂದಿಷ್ಟು ಸಮಯ ಬೇಕಿದೆ..

ಆಗದಿರುವುದಕ್ಕೆ ಕೊರಗುತ್ತಾ ಕೂರದೆ
ಮುಂದಾಗುವುದಕ್ಕೆ ಮಾತ್ರ ಗಮನ ನೀಡುತ್ತಾ
ಆಗುವುದೆಲ್ಲಾ ಒಳ್ಳೆಯದಕ್ಕೆ ಎಂದುಕೊಳ್ಳಲು
ಒಂದಿಷ್ಟು ಸಮಯ ಬೇಕಿದೆ..

ಅವರಿವರೊಂದಿಗೆ ಹೋಲಿಸಿಕೊಳ್ಳದೆಯೇ
ನಮ್ಮತನವನ್ನು ತೊರೆಯದೆ ಬದುಕಲು
ಬದುಕ ಬಯಲಿನ ಅಲೆಮಾರಿಯಂತಾಗಲು
ಒಂದಿಷ್ಟು ಸಮಯ ಬೇಕಿದೆ..

ಬಯಸಿದ್ದೆಲ್ಲಾ ಆ ಕ್ಷಣಕ್ಕೇ ನೆರವೇರಲು
ನಮ್ಮ ಬಳಿ ಮಂತ್ರದಂಡವೂ ಇಲ್ಲ
ಬದುಕು ಮಾಯಾಜಾಲವೂ ಅಲ್ಲ
ಎಲ್ಲದಕ್ಕೂ ಒಂದಿಷ್ಟು ಸಮಯ ಬೇಕಿದೆ
~ವಿಭಾ ವಿಶ್ವನಾಥ್


ಗುರುವಾರ, ಫೆಬ್ರವರಿ 6, 2020

ಮುನ್ಸೂಚನೆ

ಬೆಳಿಗ್ಗೆ ಎದ್ದಾಗ ಏಕೋ ಮನಸ್ಸಿಗೆ ನೆಮ್ಮದಿ ಇಲ್ಲ. ಇದು ಒಂದೆರಡು ದಿನದ ಕಥೆಯಲ್ಲ. ಕಳೆದ ನಾಲ್ಕು ದಿನದಿಂದ ಹೀಗಾಗುತ್ತಿದೆ. ಏನೇನೋ ವಿಚಿತ್ರ ಕನಸುಗಳು. ಭಯದಿಂದ ಅರೆನಿದ್ದೆಯಲ್ಲೇ ಎಚ್ಚರ. ಮತ್ತೆ ನೀರು ಕುಡಿದು ಮಲಗಿದಾಗಲೂ ಮತ್ತೆ ಅದೇ ರೀತಿ ಆಗುತ್ತಲಿದೆ. ಯಾವ ಕೆಡುಕಿಗೆ ಮುನ್ಸೂಚನೆಯೋ ಇದು..? ಅರಿವಿಗೆ ಬರುತ್ತಿಲ್ಲ. ನಾಳೆ ಬೆಳಿಗ್ಗೆ ಎದ್ದು ಮೊದಲು ಯಾವುದಾದರೂ ದೇವಸ್ಥಾನಕ್ಕೆ ಹೋಗಿ ಬರಬೇಕು. ಹೇಗೂ ನಾಳೆ ಭಾನುವಾರ, ತಪ್ಪದೆ ಸಾಯಿಬಾಬಾ ದೇವಸ್ಥಾನಕ್ಕೆ ಹೋಗಿ ಬರಬೇಕು ಎಂದುಕೊಂಡು ಮಲಗಿದಳು ಸಂಯುಕ್ತ.

ಕಳೆದ ತಿಂಗಳು ಕೂಡಾ ಹೀಗೇ ಆಗುತ್ತಿತ್ತಲ್ಲವೇ.. ಆಗಲೇ ಅಲ್ಲವೇ ಅವನು ಬಂದದ್ದು..? ಎಂಬ ಆಲೋಚನೆ ಮೂಡುತ್ತಿದ್ದರೂ ಅವನು ಮತ್ತೆ ಬರುವುದಿಲ್ಲ, ಬಂದರೂ ಅಷ್ಟು ದೊಡ್ಡ ಕಚೇರಿಯಲ್ಲಿ ನಾನು ಎಲ್ಲೋ ಒಂದು ಮೂಲೆಯಲ್ಲಿರುತ್ತೇನೆ. ನಾನ್ಯಾಕೆ ಭಯ ಪಡಬೇಕು? ಎಂದು ಸ್ವತಃ ಸಮಾಧಾನ ಮಾಡಿಕೊಂಡು ಮತ್ತೆ ನಿದ್ರಾ ದೇವಿಯ ಮಡಿಲಿಗೆ ಜಾರಿದಳು. 

"ನನ್ನ ಬಿಟ್ಟು ಬೇರೆ ಎಲ್ಲೂ ಹೋಗಲ್ಲ ಅಲ್ವಾ..?" ಎಂದವಳ ತಲೆ ಸವರಿ "ಇಲ್ಲಮ್ಮಾ, ನಿನ್ನ ಬಿಟ್ಟು ನಾನೆಲ್ಲಿ ಹೋಗಲಿ..? ನೀನು ಈಗ ಮಲಗು" ಎಂದವನ ಕೈಗೆ ಕೈ ಬೆಸೆದು ಮಲಗಿದ್ದವಳು ಬೆಳಿಗ್ಗೆ ಎದ್ದಾಗ ಸಾಕೇತ್ ನನ್ನು ಹುಡುಕುತ್ತಿದ್ದಳು. ಆದರೆ ಸಾಕೇತ್ ಅಲ್ಲಿರಲಿಲ್ಲ. ಅಲ್ಲಿರಲು ಸಾಧ್ಯವೂ ಇರಲಿಲ್ಲ. ಯಾಕೆಂದರೆ ಸಾಕೇತ್ ಗೆ ಅವಳು ಆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾಳೆ ಎಂಬುದು ಗೊತ್ತಿತ್ತೋ ಇಲ್ಲವೋ ಅದೂ ಇವಳಿಗೆ ಗೊತ್ತಿರಲಿಲ್ಲ. ಆದರೆ, ಸಾಕೇತ್ ಎಂದರೆ ಸಂಯುಕ್ತಾಗೆ ಅಚ್ಚುಮೆಚ್ಚು. ಅವನೇ ಇವಳ ಪಾಲಿನ ದೈವ, ಅವನ ಮಾತೇ ವೇದವಾಕ್ಯ. ಅವನ ನಡತೆಯನ್ನು ಮೆಚ್ಚಿ ಅವನನ್ನು ಆರಾಧಿಸುವವರಲ್ಲಿ ಇವಳೂ ಒಬ್ಬಳು. ಅವನೆಂದರೆ ಧೈರ್ಯ, ಸ್ಥೈರ್ಯ. ಅವನ ಹೆಸರೇ ಇವಳಲ್ಲಿ ಒಂದು ಬಗೆಯ ಶಕ್ತಿ ತುಂಬುತ್ತಿತ್ತು ಎಂದರೂ ತಪ್ಪಾಗಲಾರದು.

ಸಂಯುಕ್ತ ಚಿಕ್ಕಂದಿನಿಂದಲೂ ಅನಾಥಾಶ್ರಮದಲ್ಲಿ ಬೆಳೆದ ಹುಡುಗಿ. ಅವಳ ಹುಟ್ಟಿನ ಕುರಿತು ಹೊರಗಿನವರ ಕೊಂಕು ಮಾತುಗಳು ಕೆಲವೊಮ್ಮೆ ಅವಳನ್ನು ಘಾಸಿಗೊಳಿಸುತ್ತಿತ್ತು. ಆಗ, ಅದನ್ನೆಲ್ಲಾ ಮರೆಯುವುದಕ್ಕೆ ಅವಳು ಮೊರೆ ಹೋಗುತ್ತಿದ್ದದ್ದು ಪುಸ್ತಕವನ್ನು. ಹೀಗೆ ಓದಿನಲ್ಲಿ ತೊಡಗಿಸಿಕೊಂಡ ಅವಳು ಎಂ.ಕಾಂ ಮುಗಿಸಿ "ಶ್ರೀ ಸಾಯಿ ಪ್ರೈವೇಟ್ ಲಿಮಿಟೆಡ್" ನಲ್ಲಿ ಕೆಲಸಕ್ಕೆ ಸೇರಿಕೊಂಡಳು. ಮೊದಲ ದಿನದ ಟ್ರೈನಿಂಗ್ ಅಲ್ಲಿಯೇ ಅವಳು ಸಾಕೇತ್ ನನ್ನು ನೋಡಿದ್ದು. ಸುಮಾರು 60 ರಿಂದ 70 ಜನ ಇವಳಂತೆಯೇ ಟ್ರೈನಿಂಗ್ ಎಂದು ಬಂದಿದ್ದರು. ಇವಳು ಹಿಂದೆಯೂ ಹೋಗದೆ, ಮುಂದೆಯೂ ಬಾರದೇ ಮಧ್ಯದಲ್ಲಿ ಕುಳಿತಿದ್ದಳು. ಟ್ರೈನಿಂಗ್ ನೀಡಲೆಂದು ಬಂದವನು ಸಾಕೇತ್. ಅವನನ್ನು ನೋಡಿದಾಗ "ಇವನು ಎಂಥಾ ಟ್ರೈನಿಂಗ್ ಕೊಡುತ್ತಾನೆ" ಎಂಬ ಉಪೇಕ್ಷೆಯಲ್ಲಿ ಕುಳಿತಿದ್ದವಳು ಆ ದಿನ ಮಧ್ಯಾಹ್ನದ ಟ್ರೈನಿಂಗ್ ಮುಗಿಯುವಷ್ಟರಲ್ಲಿ ಅವನ ಅಭಿಮಾನಿಯಾಗಿಬಿಟ್ಟಿದ್ದಳು.

ಸಂಯುಕ್ತಾಳ ಅಪ್ಪಟ ವಿರುದ್ಧ ಸಾಕೇತ್. ಸಂಯುಕ್ತಳದ್ದು ಉನ್ಮಾದಕಾರಿ ಸೌಂದರ್ಯವಲ್ಲ, ಅಪ್ಪಟ ಸ್ಥಿಗ್ಧ ಸೌಂದರ್ಯ. ಮತ್ತೆ ಮತ್ತೆ ತಿರುಗಿ ನೋಡುವಂತಲ್ಲದಿದ್ದರೂ ಒಮ್ಮೆ ಸರಿಯಾಗಿ ಗಮನಿಸಿದರೆ ಅವಳ ಲಕ್ಷಣತೆ ಮನಸ್ಸಿನಲ್ಲಿ ನೆಲೆ ನಿಲ್ಲುತ್ತಿತ್ತು. ಮಾತು ಎಷ್ಟು ಬೇಕೋ ಅಷ್ಟೇ, ಸರಳವಾದ ವೇಷಭೂಷಣ. ಆದರೆ, ಸಾಕೇತ್ ನದ್ದು ಎಲ್ಲರನ್ನೂ ಸೆಳೆಯುವ ಸೌಂದರ್ಯ. ಒಮ್ಮೆ ಬಾಯಿ ತೆಗೆದರೆ ಎಲ್ಲರನ್ನೂ ಮಂತ್ರಮುಗ್ಧಗೊಳಿಸಿದಂತೆ ತನ್ನ ಕಡೆಗೆ ಸೆಳೆಯುವಂತಹಾ ಮಾತು. ಸರಳವಾಗಿ ಅನ್ನಿಸಿದರೂ ದುಬಾರಿ ಬೆಲೆಯ ಬಟ್ಟೆ, ವಾಚು ಹೀಗೇ.. ಆದರೆ, ಅಪ್ಪಟ ಸ್ವಾಭಿಮಾನಿ ಮತ್ತು ದೇಶಪ್ರೇಮಿ. 

ಮೂರು ದಿನ ಟ್ರೈನಿಂಗ್ ಕಳೆಯುವುದರಲ್ಲಿ ಸಂಯುಕ್ತ ಸಾಕೇತ್ ನ ಅಪ್ಪಟ ಆರಾಧಕಳಾಗಿದ್ದಳು. ಆತನ ಮಾತಿನಿಂದ ಪ್ರಭಾವಿತಳಾಗಿ ಆತ್ಮವಿಶ್ವಾಸದ ಚಿಲುಮೆಯಾದಳು. ಆದರೆ, ನಾಲ್ಕನೇ ದಿನದ ಟ್ರೈನಿಂಗ್ ಗೆ ಆತನ ಬದಲಿಗೆ ಮತ್ತಾರೋ ಬಂದರು, ಅವಳಿಗೆ ನಿರಾಶೆ. ಅಂದು ಸಂಜೆ ತಿಳಿದದ್ದು ಸಾಕೇತ್ ಇನ್ನು ಮುಂದೆ ಇಲ್ಲಿಗೆ ಬರುವುದಿಲ್ಲ ಎಂದು. ಕಚೇರಿಯಲ್ಲಿ ನಡೆಯುತ್ತಿದ್ದ ಮಹಿಳಾ ಕಿರುಕುಳದ ಕುರಿತು ದನಿಯೆತ್ತಿದವನಿಗೆ "ಕಚೇರಿಯ ಹಣ ದುರ್ಬಳಕೆ ಮಾಡಿಕೊಂಡಿದ್ದಾನೆ" ಎಂಬ ಸುಳ್ಳು ಆರೋಪ ಹೊರಿಸಿ ಅಲ್ಲಿಂದ ಹೊರ ಹಾಕಿದ್ದರು. 

ಆವತ್ತಿನ ಹಿಂದಿನ ದಿನವೇ ಯಾಕೋ ಸಂಯುಕ್ತಾಳಿಗೆ ಆ ರೀತಿ ಕೆಟ್ಟ ಕನಸು ಬಿದ್ದದ್ದು. ಮರುದಿನ ಟ್ರೈನಿಂಗ್ ನಲ್ಲಿ ಬಂದುದ್ದು ಅವನು "ಅನೂಪ್". ಟ್ರೈನಿಂಗ್ ಮತ್ತು ಪರಿಚಯದ ನೆಪದಲ್ಲಿ ಎಲ್ಲರ ಪರಿಚಯ ಮಾಡಿಕೊಂಡು ಸ್ನೇಹಮಯಿ ಎಂದು ವರ್ತಿಸುವವನ ಗೋಮುಖ ವ್ಯಾಘ್ರತನ ಅಂದೇ ಅವಳಿಗೆ ಪರಿಚಿತವಾಗಿತ್ತು. ಸಲುಗೆಯಿಂದ ಮಾತನಾಡಿಸುವ ನೆಪದಲ್ಲಿ ಮೈ ಕೈ ಮುಟ್ಟಿ ಮಾತನಾಡಿಸುವ ರೀತಿ ಅವಳಿಗೆ ಹಿಂಸೆಯಾಗಿತ್ತು. ಮರುದಿನವೇ ಅವನ ದುರ್ವರ್ತನೆ ಕುರಿತು ಸಾಕ್ಷಿ ಸಮೇತ ಮೇಲಾಧಿಕಾರಿಗಳಿಗೆ ವರದಿ ನೀಡಿದ್ದಳು. ಜೊತೆಗೆ ಸಾಕೇತ್ ಇದನ್ನು ಈಗಾಗಲೇ ಖಂಡಿಸಿದ್ದರು ಎಂಬ ಅಂಶವನ್ನು ಮನದಟ್ಟು ಮಾಡಿದ್ದಳು. ಇದೆಲ್ಲದರ ವಿಚಾರಣೆಗೆ ಎಂದು ಸಾಕೇತ್ ನನ್ನು ಮತ್ತೆ ಆ ಕಂಪೆನಿಗೆ ಕರೆದಿದ್ದರು. ಆಗಲೇ ಸಾಕೇತ್ ನ ಕಣ್ಣಿಗೆ ಅವಳು ಬಿದ್ದಿದ್ದು. ಅವಳ ದಿಟ್ಟತನವನ್ನು ಶ್ಲಾಘಿಸಿದರೆ ಅವಳು "ಇದೆಲ್ಲವೂ ನಿಮ್ಮ ಪ್ರಭಾವ" ಎಂದಿದ್ದಳು. ಸಾಕೇತ್ ತನ್ನ ಮೇಲಿನ ಆರೋಪವನ್ನೆಲ್ಲಾ ಸುಳ್ಳು ಎಂದು ಸಾಬೀತು ಮಾಡಿ ತಾನೇ ಕೆಲಸವನ್ನು ತೊರೆದಿದ್ದ. "ನೀವು ಇಲ್ಲೇ ಉಳಿಯಬಹುದಲ್ಲಾ..?" ಎಂದದ್ದಕ್ಕೆ "ನನ್ನ ಆತ್ಮಾಭಿಮಾನಕ್ಕೆ ಧಕ್ಕೆ ಮಾಡಿಕೊಂಡು ನಾನು ಇಲ್ಲಿ ಉಳಿಯಲಾರೆ" ಎಂದಿದ್ದ. "ನನ್ನ ಮೇಲಿದ್ದ ಆರೋಪವನ್ನು ಸುಳ್ಳು ಎಂದು ಸಾಬೀತು ಮಾಡುವಲ್ಲಿ ನಿಮ್ಮ ಪಾತ್ರ ಬಹು ಮುಖ್ಯ. ನಿಮ್ಮ ಸಹಾಯಕ್ಕೆ ಧನ್ಯವಾದಗಳು. ನಿಮಗೆ ಯಾವುದೇ ಸಮಯದಲ್ಲಿ, ಯಾವುದೇ ಸಹಾಯ ಬೇಕಾದಲ್ಲಿ ಸಂಪರ್ಕಿಸಿ" ಎಂದು ತನ್ನ ಮೊಬೈಲ್ ನಂಬರ್ ಅನ್ನು ನೀಡಿ ಹೊರಟಿದ್ದ. 

ಸಂಯುಕ್ತಳ ಮೊಬೈಲ್ ನಂಬರ್ ಸಾಕೇತ್ ಬಳಿ ಇರಲಿಲ್ಲ, ಇವಳೂ ಅವನನ್ನು ಸಂಪರ್ಕಿಸುವ ಧೈರ್ಯ ಮಾಡಿರಲಿಲ್ಲ. ಸಾಕೇತ್ ಗೆ ಬಹುಶಃ ಸಂಯುಕ್ತಳ ನೆನಪು ಸಹಾ ಇರಲಿಕ್ಕಿಲ್ಲ. ಆದರೆ, ಸಂಯುಕ್ತ ಪಾಲಿಗೆ ಸಾಕೇತ್ ಪ್ರತ್ಯಕ್ಷ ದೈವ. ಅವಳ ಕಲ್ಪನೆಯ ಲೋಕದಲ್ಲಿ ಅವನೇ ಎಲ್ಲಾ.. ಆದರೂ, ಸಾಕೇತ್ ಕುರಿತಂತೆ ಕಚೇರಿಯಲ್ಲಿ ಅನೇಕರು ಹಲವು ತರಹದ ಅಭಿಪ್ರಾಯಗಳನ್ನು ಹೊಂದಿದ್ದರು. ಹಲವರಿಗೆ ಒಳ್ಳೆಯವನು, ಕೆಲವರಿಗೆ ಅವನ ಕೋಪದ ಮೂಲಕ ಕೆಟ್ಟವನು. ಇವಳು ಸಾಕೇತ್ ನನ್ನು ಹೊಗಳಿದಾಗಲೆಲ್ಲಾ ಅವಳ ಸೀನಿಯರ್ ಸಹೋದ್ಯೋಗಿ ಅಂಕಿತಾ "ಅವನಿಗೆ ಈಗಾಗಲೇ ಇರುವ ಅಭಿಮಾನಿ ಹುಡುಗಿಯರ ಪಟ್ಟಿ ದೊಡ್ಡದಾಗೇ ಇದೆ. ಹುಷಾರು, ಲವ್ ಅಲ್ಲಿ ಬೀಳಬೇಡ" ಎಂದಿದ್ದಳು. ಜೊತೆಗೆ "ಅವನಿಗೆ ಕುಡಿಯುವ ಖಯಾಲಿ ಕೂಡಾ ಇದೆ" ಎಂದೂ ಹೇಳಿದ್ದಳು. ಸಂಯುಕ್ತಾಳಿಗೆ ಅವಳ ಅಭಿಮಾನದ ಮುಂದೆ ಇದೆಲ್ಲವೂ ನಗಣ್ಯ. "ಅವರ ವೈಯಕ್ತಿಕ ಬದುಕಿನ ಕುರಿತು ತಿಳಿಯುವ ಅಸ್ಥೆ ನನಗಿಲ್ಲ, ಅವರ ಮಾತು, ನಡೆ-ನುಡಿ ಮಾತ್ರ ಸಾಕು. ಹೆಣ್ಣು ಮಕ್ಕಳ ಕುರಿತ ಆಸ್ಥೆ, ಕಾಳಜಿ, ಸ್ವಾಭಿಮಾನ ಇದಕ್ಕೆ ಅಭಿಮಾನಿ ನಾನು" ಎಂದು ಉತ್ತರಿಸಿದ್ದಳು. ಹೀಗೇ ಸಂಯುಕ್ತಾಳ ಕನಸಲ್ಲಿ, ಕಲ್ಪನೆಯಲ್ಲಿ ಅವಳಿಗೆ ಧೈರ್ಯ-ಸ್ಥೈರ್ಯ ತುಂಬಲು ಸಾಕೇತ್ ಸದಾ ಜೀವಂತ.

ಇದೆಲ್ಲವನ್ನೂ ನೆನೆಸಿಕೊಂಡು ಮಲಗಿದ್ದವಳು ಎದ್ದು ಅಂದುಕೊಂಡಂತೆ ದೇವಸ್ಥಾನಕ್ಕೂ ಹೋಗಿಬಂದಳು. ದೇವರಲ್ಲಿ ಅವಳ ಪ್ರಾರ್ಥನೆ ಯಾವಾಗಲೂ ಹೀಗೆಯೇ ಇರುತ್ತಿತ್ತು. "ಒಳ್ಳೆಯವರಿಗೆ ಒಳ್ಳೆಯದನ್ನು ಮಾಡು, ಕೆಟ್ಟವರಿಗೂ ಒಳ್ಳೆಯ ಬುದ್ಧಿ ನೀಡಿ ಒಳ್ಳೆಯದನ್ನೇ ಮಾಡು."
"ಬದುಕನ್ನು ಸುಲಭಗೊಳಿಸಬೇಡ ಬದಲಿಗೆ ಕಷ್ಟಗಳನ್ನು ಎದುರಿಸುವ ಶಕ್ತಿ ನೀಡು. ನಿನ್ನ ಕುರಿತು ಸದಾ ನನ್ನ ಶ್ರದ್ಧೆ, ನಂಬಿಕೆಗಳು ಹೀಗೇ ಉಳಿಯಲಿ. ಬದುಕು ನಾನಂದುಕೊಂಡಂತೆ ಸಾಗುತ್ತಿಲ್ಲ ಎಂದು ನನಗೆ ಅರಿವಿದೆ. ಸದಾ ನಿನ್ನ ಕೃಪೆ ಇರಲಿ. ನಿನ್ನ ಪ್ಲಾನ್ ನಂತೆಯೇ ಬದುಕು ಸಾಗಲಿ. ಯಾಕೆಂದರೆ, ನಿನ್ನ ದೃಷ್ಟಿಕೋನ ಯಾವಾಗಲೂ ವಿಶಾಲವಾದುದು. ಜೊತೆಗೆ ನನಗೆ ನನಗಿಂತ ನಿನ್ನ ಮೇಲೆಯೇ ಹೆಚ್ಚು ನಂಬಿಕೆ."
ಎಂದಿನಂತೆಯೇ ಬಾಬಾಗೆ ತನ್ನ ಪ್ರಾರ್ಥನೆ ಸಲ್ಲಿಸಿ ಹೊರಬಂದವಳಿಗೆ ಯಾವಾಗಿನ ನೆಮ್ಮದಿ ಇರಲಿಲ್ಲ.ಅವಳ ಆತಂಕ, ತಳಮಳಕ್ಕೆ ಉತ್ತರ ಸಿಗುವ ದಿನ ದೂರದಲ್ಲೇನೂ ಇರಲಿಲ್ಲ. ಆದರೆ, ಈ ಮುನ್ಸೂಚನೆಯ ಅರ್ಥ ಸದ್ಯಕ್ಕೆ ಅರ್ಥವಾಗಿರಲಿಲ್ಲ ಅಷ್ಟೇ..

ಸೋಮವಾರ ಕಚೇರಿಗೆ ಬಂದವಳಿಗೆ ಒಂದು ತಿಂಗಳ ಸಸ್ಪೆಂಡ್ ಅವಧಿ ಮುಗಿಸಿ ಬಂದಿದ್ದ ಅನೂಪ್ ಕಾಣಿಸಿದ್ದ. ಅವಳ ದುರಾದೃಷ್ಟವೋ ಎಂಬಂತೆ ಅವಳು ಅವನ ಟೀಮ್ ಅಲ್ಲಿಯೇ ಕೆಲಸ ಮಾಡಬೇಕಿತ್ತು. ಮೊದಲ ಒಂದೆರಡು ದಿನ ಎಲ್ಲವೂ ಸರಿಯಾಗಿತ್ತು. ಅವನು ಬದಲಾಗಿದ್ದಾನೆ ಎಂದುಕೊಳ್ಳುವಷ್ಟರಲ್ಲಿ ಸಾಕೇತ್ ಕುರಿತಂತೆ ನೆಗೆಟಿವ್ ಆಗಿ ಮಾತನಾಡುತ್ತಾ ತನ್ನನ್ನು ಒಳ್ಳೆಯವನಂತೆ ಬಿಂಬಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದ. ಇದೆಲ್ಲವೂ ಸಂಯುಕ್ತಾಳಿಗೆ ಕಿರಿಕಿರಿ ಉಂಟು ಮಾಡುತ್ತಿತ್ತು. 

ಅದೇಕೋ ಬುಧವಾರ ರಾತ್ರಿ ಸರಿಯಾದ ನಿದ್ದೆ ಇಲ್ಲ, ಏನೋ ಕೆಡುಕು ಸಂಭವಿಸಬಹುದು ಎಂಬ ಮುನ್ಸೂಚನೆ ಕಾಡುತ್ತಿತ್ತು. ರಾತ್ರಿ ಎಲ್ಲಾ ಸರಿಯಾದ ನಿದ್ದೆ ಇಲ್ಲ. ಏನನ್ನಿಸಿತೋ ಏನೋ ಗುರುವಾರ ಬೆಳಿಗ್ಗೆ ಎದ್ದವಳೇ ಸಾಕೇತ್ ಗೆ ಕಾಲ್ ಮಾಡಿದ್ದಳು. ತನ್ನ ಗುರುತು ಹಿಡಿಯವನೋ ಇಲ್ಲವೋ ಎಂಬ ಅನುಮಾನದಲ್ಲಿದ್ದವಳಿಗೆ ಅರೆಕ್ಷಣದಲ್ಲಿಯೇ ತನ್ನ ಅನುಮಾನ ಸುಳ್ಳು ಎಂದು ಸಾಬೀತಾಯಿತು. "ಇಂದು ಸಂಜೆ ಆ ಕಂಪೆನಿಯ ಪಕ್ಕದಲ್ಲೇ ಇರುವ ಕಾಫಿ ಶಾಪ್ ನಲ್ಲಿ ಸಿಗುವಿರಾ? ಸ್ವಲ್ಪ ಮಾತನಾಡಬೇಕಿದೆ. ನಿಮ್ಮಿಂದ ನನಗೊಂದು ಸಲಹೆ ಬೇಕಿದೆ" ಎಂದಳು. ಖಂಡಿತಾ ಎಂಬ ಉತ್ತರ ಸಿಕ್ಕಿತ್ತು. ಆದರೆ, ಅವರಬ್ಬರ ಭೇಟಿ ಹೇಗಿರಬೇಕಿತ್ತು ಎಂಬುದನ್ನು ಕಾಲವೇ ನಿರ್ಧರಿಸಿದಂತಿತ್ತು.

ಅವಳ ದುರಾದೃಷ್ಟವೋ ಎಂಬಂತೆ ಅಂದು ಸಂಜೆ ಅನೂಪ್ ಹೆಚ್ಚಿನ ಕೆಲಸ ನೀಡಿದ್ದ. ಇದನ್ನು ಮುಗಿಸಿಯೇ ಹೋಗಬೇಕು ಎಂದು ಕಟ್ಟುನಿಟ್ಟಾಗಿ ಹೇಳಿಬಿಟ್ಟಿದ್ದ. ಎಲ್ಲರಂತೆ ಅವನಿಗೆ ಸಹಕರಿಸದೆ ಇದ್ದುದ್ದಕ್ಕೆ ಸಂಯುಕ್ತಾಳ ಪಾಲಿಗೆ ಈ ಶಿಕ್ಷೆ. ಎಲ್ಲರೂ ಹೊರಟರೂ ಅವಳ ಕೆಲಸ ಮುಗಿದಿರಲಿಲ್ಲ. ಮೊಬೈಲ್ ಬಳಸುವುದನ್ನು ಕೂಡಾ ಅನೂಪ್ ನಿಷೇಧಿಸಿದ್ದ. ಇತ್ತ ಸಂಯುಕ್ತಾಳಿಗೆ ಧರ್ಮಸಂಕಟ. ಸಾಕೇತ್ ಬಂದಿರುವನೇನೋ ಎಂಬ ಚಿಂತೆ. ಅವನ ಕೋಪದ ಕುರಿತು ಕೇಳಿದ್ದವಳಿಗೆ, ಅವನ ಸಮಯ ಪರಿಪಾಲನೆ ಕುರಿತು ತಿಳಿದಿದ್ದವಳಿಗೆ ಆತಂಕ. ಮೊದಲ ಬಾರಿಗೆ ತನ್ನ ಪ್ರತ್ಯಕ್ಷ ದೈವದೊಂದಿಗೆ ಮಾತನಾಡಬೇಕೆಂದುಕೊಂಡಿದ್ದವಳಿಗೆ ಕಡಿವಾಣ ಹಾಕಿದಂತಿತ್ತು.

ಅದೇ ಯೋಚನೆಯಲ್ಲಿದ್ದವಳಿಗೆ ಅನೂಪ್ ಎಂಬ ಘೋಮುಖ ವ್ಯಾಘ್ರನ ದುಷ್ಟ ಯೋಚನೆಯ ಅರಿವಿರಲಿಲ್ಲ. ಸಮಯ 7.30 ಆದರೂ ಸಂಯುಕ್ತಾಳ ಪತ್ತೆ ಇರಲಿಲ್ಲ. ಸಾಕೇತ್ ಕಾದು ಕಾದು ಸಾಕಾಗಿ ಹೊರಡಬೇಕು ಎಂದುಕೊಂಡ, ಮೊಬೈಲ್ ಗೆ ಕಾಲ್ ಮಾಡಿದರೂ ತೆಗೆಯುತ್ತಿಲ್ಲ ಅಲ್ಲದೇ ಅವಳಾಗಿಯೇ ಕರೆ ಮಾಡಿ ಬರಲು ಹೇಳಿದ್ದಳು. ಅವಳು ಎಲ್ಲರಂತಲ್ಲ, ಬಹಳ ವಿಭಿನ್ನ. ಅವಳಿಗೆ ಏನಾದರೂ ತೊಂದರೆ ಆಗಿರಬಹುದೇ..? ಎಂಬ ಆಲೋಚನೆ ಒಮ್ಮೆ ಅವನ ತಲೆಗೆ ಬಂದಿತು. ಮತ್ತೆ ತಡಮಾಡದೆ ಪಕ್ಕದಲ್ಲೇ ಇದ್ದ ಕಂಪೆನಿಯತ್ತ ಹೊರಟ. ಅಲ್ಲಿಯೇ ಇದ್ದ ವಾಚ್ ಮ್ಯಾನ್ ಸಂಯುಕ್ತಾಳ ಕುರಿತು ಕೇಳಿದ್ದಕ್ಕೆ "ಗೊತ್ತಿಲ್ಲ ಸರ್, ಹೋಗಿರಬಹುದೇನೋ.." ಎಂದ. ಹಳೆಯ ಪರಿಚಯ ಆದುದರಿಂದ ಮತ್ತು ಸಾಕೇತ್ ನ ಕಾರ್ಯದಕ್ಷತೆಯ ಅರಿವಿದ್ದುದರಿಂದ "ಒಂದು ಸಾರಿ ಬೇಕಾದರೆ ಒಳಗಡೆ ಹೋಗಿ ನೋಡಿ ಬನ್ನಿ, ಸರ್" ಎಂದ. ಸಾಕೇತ್ ಒಂದು ಕ್ಷಣ ಆಲೋಚನೆ ಮಾಡಿ ನಂತರ ಒಲ್ಲದ ಮನಸ್ಸಿನಿಂದಲೇ ಒಳಗೆ ಕಾಲಿಟ್ಟ.

ಮೊದಲನೇ ಫ್ಲೋರ್ ಹತ್ತುವಷ್ಟರಲ್ಲೇ ಯಾರೋ ಕಿರುಚಿದ ಸದ್ದಾಯಿತು. ಬೇಗನೆ ಎರಡನೇ ಫ್ಲೋರ್ ತಲುಪಿದ. ಅಲ್ಲಿನ ದೃಶ್ಯ ಕಂಡು ಸಾಕೇತ್ ನ ರಕ್ತ ಕುದಿಯುತ್ತಿತ್ತು. ಅನೂಪ್ ಸಂಯುಕ್ತಾಳನ್ನು ಬಲಾತ್ಕಾರ ಮಾಡಲು ಪ್ರಯತ್ನಿಸುತ್ತಿದ್ದ. ಒಂದು ಬಾರಿ "ಅನೂಪ್" ಎಂದು ಅಬ್ಬರಿಸಿದ ಸಾಕೇತ್. ಸಂಯುಕ್ತಾಳಿಗೆ ಹೋದ ಜೀವ ಬಂದಂತಾಯಿತು. ಸಂಯುಕ್ತಾಳ ಓಡಿ ಬಂದವಳೇ ಸಾಕೇತ್ ಅನ್ನು ಅಪ್ಪಿ ಹಿಡಿದಳು. ಸಾಕೇತ್ ನಿಗೆ ಇದು ಅನಿರೀಕ್ಷಿತ. ಅವಳನ್ನು ಸಾಂತ್ವಾನಗೊಳಿಸಿ ಅನೂಪ್ ಅನ್ನು ಹಿಗ್ಗಾಮುಗ್ಗಾ ಥಳಿಸಿದ. ಅಷ್ಟಾದರೂ ಅನೂಪ್ ದುರ್ಬುದ್ಧಿ ಹೋಗಿರಲಿಲ್ಲ. "ನನ್ನ ಜೊತೆ ನಾಜೂಕಮ್ಮನಂತೆ ನಾಟಕವಾಗುವವಳು ಅವನ ಜೊತೆ ಚಕ್ಕಂದವಾಡುತ್ತಿದ್ದೀಯ" ಎಂದು ಕೆಟ್ಟದಾಗಿ ಮಾತನಾಡಿದ. ಮತ್ತೆ ಅವನನ್ನು ಹೊಡೆಯಲು ಹೊರಟವನನ್ನು ತಡೆದ ಸಂಯುಕ್ತ ಅಲ್ಲಿಂದ ಕರೆದುಕೊಂಡು ಹೊರಟಳು.

ಮರುದಿನ ತನ್ನ ತಪ್ಪನ್ನು ಮುಚ್ಚಲು ಅನೂಪ್ ಬೇರೆಯದ್ದೇ ಕಥೆ ಹೆಣೆದಿದ್ದ. ಅವನ ಮೋಸದ ಜಾಲವನ್ನು ಸಾಕ್ಷಿ ಬಯಲು ಮಾಡಿದ ಸಂಯುಕ್ತ ಒಂದರೆಕ್ಷಣವೂ ಅಲ್ಲಿ ನಿಲ್ಲಲಿಲ್ಲ. ಅಂದು ಮರೆಯಾದ ಸಂಯುಕ್ತ ಮತ್ತೆಲ್ಲೂ ಕಾಣಿಸಿಕೊಂಡಿರಲಿಲ್ಲ.

3 ವರ್ಷಗಳ ನಂತರ ಸಂಯುಕ್ತ ಕಾಣ ಸಿಕ್ಕಳು. ಈಗ ಅವಳು ಮೊದಲಿನ ಸಂಯುಕ್ತ ಅಲ್ಲ. 
"ಮುನ್ಸೂಚನೆ" ಸಂಸ್ಥೆ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಕಿರುಕುಳವನ್ನು ತಡೆಯುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಪ್ರತಿ ಶಾಲೆ, ಕಾಲೇಜು, ಮತ್ತು ಕಚೇರಿಯಲ್ಲಿ ಉಚಿತವಾಗಿ ಇವುಗಳನ್ನು ತಡೆಯುವ ಕೆಲಸ ಮಾಡುತ್ತಿದೆ. ಇವೆಲ್ಲದರ ಜೊತೆ ಸಂಯುಕ್ತಳ ಬದುಕಿನ "ಮುನ್ಸೂಚನೆ"ಯ ಆ ಕ್ಷಣಗಳು ಸಹಾ ಬಿಚ್ಚಿಟ್ಟುಕೊಳ್ಳುತ್ತವೆ. ಇವೆಲ್ಲದರ ಅರಿವು ಮೂಡಿಸುತ್ತಿರುವುದು ಸಾಕೇತ್-ಸಂಯುಕ್ತ ದಂಪತಿಗಳು.

ಈಗ ಸಂಯುಕ್ತಾಳಿಗೆ ಕೆಟ್ಟ ಕನಸುಗಳು ಬೀಳುತ್ತಿಲ್ಲ, ತಳಮಳಗಳಿಲ್ಲ. ಸಾಯಿಬಾಬಾ ದಯೆಯಿಂದ ಅವಳ ಜೀವನದ ಪ್ರತ್ಯಕ್ಷ ದೈವ ಅವಳ ಜೊತೆಯಿದ್ದಾನೆ. ನಾನಿದ್ದೇನೆ ಎಂಬ ಭರವಸೆ ತುಂಬುತ್ತಾನೆ. ಬದುಕಿನ ಕೊಂಡಿಗಳು ಬೆಸುಗೆಯಾಗಿವೆ. ಅವಳ ಕನಸು-ಮನಸು-ಬದುಕಿನ ತುಂಬೆಲ್ಲಾ ಅವನು ಮತ್ತು ಅವನು ನೀಡಿದ ಸ್ಥೈರ್ಯವೇ ತುಂಬಿದೆ. "ಮುನ್ಸೂಚನೆ"ಯಿಂದಾಗಿ ಬದುಕು ಮತ್ತೊಂದು ಹೊಸ ಆಶಾಕಿರಣದೊಂದಿಗೆ ಹುರುಪಿನಿಂದ ಸಾಗುತ್ತಲಿದೆ.

~ವಿಭಾ ವಿಶ್ವನಾಥ್

ಭಾನುವಾರ, ಫೆಬ್ರವರಿ 2, 2020

ಕಳಂಕಿನಿ

ಪ್ರತಿ ರಾತ್ರಿ ಹುಟ್ಟಿ, ಮರು ಹಗಲು ಸಾಯುವ 
ಚಂದ್ರನಿಗೆ ಕಲೆಗಳಿದ್ದರೂ, ಕಳಂಕವಿಲ್ಲ..
ಪ್ರತಿ ರಾತ್ರಿ ಸತ್ತು,ಸತ್ತು ಮರು ಬೆಳಿಗ್ಗೆ ಹುಟ್ಟುವ
ಕಲೆಗಳಿಲ್ಲದ ನಿತ್ಯಮುತ್ತೈದೆ ಕಳಂಕಿನಿ

ಹೀಗೊಂದು ಬರಹ ಪುಸ್ತಕದ ಬೆನ್ನುಡಿಯಾಗಿ ಅಚ್ಚಾಗಿ ಮನಸೆಳೆದಿತ್ತು. ಆ ಪುಸ್ತಕಕ್ಕೆ ಯಾವುದೇ ಮುನ್ನುಡಿ, ಬೆನ್ನುಡಿಗಳು ಇರಲಿಲ್ಲ. ಗ್ರಂಥಾಲಯದಲ್ಲಿ ಈ ವಾರ ಪುಸ್ತಕವನ್ನು ಹುಡುಕುವಾಗ ಸಿಕ್ಕ ಪುಸ್ತಕ ಅದು. ಪುಸ್ತಕದ ಹೆಸರು "ಕಳಂಕಿನಿ".. ಅಡಿ ಬರಹ "ಕೆಂಪು ದೀಪದ ಕೆಳಗಿನ ಗತದ ಕತ್ತಲು". ಯಾಕೋ ಕಳಂಕಿನಿ ಎಂಬ ಹೆಸರು ಮನಸೆಳೆದಿತ್ತು. ಪ್ರಸಿದ್ಧ ಲೇಖಕರ ಹೆಸರು ಅಥವಾ ಯಾರದ್ದೋ ಶಿಫಾರಸ್ಸು ಹೊಂದಿದ್ದ ಪುಸ್ತಕಗಳನ್ನೇ ಓದಲೆಂದು ಆರಿಸಿಕೊಳ್ಳುತ್ತಿದ್ದ ನನಗೆ ಯಾಕೋ ಈ ಪುಸ್ತಕ ಮನಸೆಳೆದಿತ್ತು. ನಾನು ಪುಸ್ತಕ ಓದುವ ಗೀಳು ಹಚ್ಚಿಸಿಕೊಂಡು 5 ರಿಂದ 6 ತಿಂಗಳಾಗಿರಬಹುದೇನೋ ಅಷ್ಟೇ.. ಪುಸ್ತಕ ಓದುವ ಹುಚ್ಚು ಹತ್ತಿಸಿದ ದೀಪಾ ಏಕೋ ನೆನಪಾದಳು. ಅವಳನ್ನು ಕಂಡು ಒಂದು ವಾರದ ಮೇಲಾಗಿತ್ತು. ನಾನು ಪ್ರಪೋಸ್ ಮಾಡಿದ ದಿನದಿಂದ ನನ್ನ ಕಣ್ಣಿಗೆ ಅವಳು ಕಂಡಿರಲೇ ಇಲ್ಲ.

ಪ್ರತಿ ಭಾನುವಾರ ತಪ್ಪದೇ ಅವಳು ಬರುತ್ತಿದ್ದ ಜಾಗ ಇದು. ದೇವರ ಮೇಲೆ ಹೂ ತಪ್ಪಿದರೂ ಅವಳು ಈ ಗ್ರಂಥಾಲಯಕ್ಕೆ ಬರುವುದು ತಪ್ಪುತ್ತಿರಲಿಲ್ಲ. ಅವಳನ್ನು ಒಂದು ವರ್ಷದಿಂದ ಅವಳನ್ನು ನೋಡುತ್ತಿದ್ದರೂ ಅವಳ ಪರಿಚಯ ಬಹಳ ಇತ್ತೀಚಿನದ್ದು. ಆದರೆ ಅವಳ ವ್ಯಕ್ತಿತ್ವ ಸೆಳೆಯುವ ಸೂಜಿಗಲ್ಲಿನಂತದ್ದು. ಅಮ್ಮನಂತಹ ಅಂತಃಕರಣ, ಅಕ್ಕನಂತಹಾ ಅಕ್ಕರೆ, ಗೆಳತಿಯ ಕಾಳಜಿ ಇವೆಲ್ಲವೂ ಇತ್ತು. ಹಾಗಾಗಿಯೇ ಇವಳೇ ನನ್ನ ಜೀವನ ಸಂಗಾತಿ ಎಂಬ ತೀರ್ಮಾನಕ್ಕೆ ಬಂದು ನನ್ನ ನಿರ್ಧಾರವನ್ನು ತಿಳಿಸಿ ಅವಳ ಒಪ್ಪಿಗೆಗಾಗಿ ಕಾದಿದ್ದೆ. ಸ್ಪಷ್ಟ ಗುರಿಯಿಲ್ಲದ, ಕನಸಿಲ್ಲದ ನನ್ನನ್ನು ನಿರ್ದಿಷ್ಟ ಬಾಳ ಪಥದತ್ತ ತಿರುಗಿಸಿದವಳು ಅವಳು. ಅವಳಿಗೆ ಏನೂ ಅಲ್ಲದ ನನ್ನನ್ನೇ ಇಷ್ಟು ಕಾಳಜಿ ಮಾಡುತ್ತಿದ್ದವಳು ನನ್ನ ಬದುಕಲ್ಲಿ ಬಂದರೆ ನನ್ನ ಬದುಕು ಎಷ್ಟು ಸುಂದರವಾಗಬಹುದು ಅಲ್ಲವೇ..? ಇದೇ ಯೋಚನೆಯೇ ನನ್ನನ್ನು ಅವಳ ಹತ್ತಿರ ಆ ವಿಚಾರವನ್ನು ಪ್ರಸ್ತಾಪಿಸಿದ್ದು..

ಇಂಜಿನಿಯರಿಂಗ್ ಮಾಡಿ ಕೆಲಸಕ್ಕೆ ಹೋಗದೆ ಅಲೆಯುತ್ತಿದ್ದ ಜೊತೆಗೆ ಕೈಕೊಟ್ಟ ಪ್ರೀತಿಸಿದವಳ ಹಿಂದಿನ ನೆನಪುಗಳು ರೀತಿ ಸುಮುಖ್ ನ ಬದುಕಲ್ಲಿ ಅವನನ್ನು ಭಾದಿಸುತ್ತಿದ್ದವು. ಲೈಬ್ರರಿಯ ರೋಡಿನಲ್ಲಿ ಇದ್ದ ಟೀ ಅಂಗಡಿ ಅಲ್ಲೇ ಇದ್ದ ಕಟ್ಟೆ ಅವನ ಬೆಳಗಿನ ತಾಣವಾದರೆ, ರಾತ್ರಿ ಅಲ್ಲೇ ಪಕ್ಕದ ರಸ್ತೆಯ ಬಾರು. ಅವನ ಅಪ್ಪ-ಅಮ್ಮ ಇವನನ್ನು ತಿದ್ದಲಾಗದೆ ಏನಾದರೂ ಮಾಡಿಕೋ ಎಂದು ಬಿಟ್ಟು ಸುಮ್ಮನಾಗಿದ್ದರು. ಸುಮುಖ್ ನ ನೆನಪಿನ ಶಕ್ತಿ ಬಹಳ ಚೆನ್ನಾಗಿತ್ತು. ಬುದ್ದಿವಂತ ವಿದ್ಯಾರ್ಥಿಯೇ.. ಆದರೆ, ಪ್ರೇಮ ವೈಫಲ್ಯ ಅವನನ್ನು ಆ ಸ್ಥಿತಿಗೆ ದೂಡಿತ್ತು. ಎಂದಿನಂತೆ ವಾರ ವಾರವೂ ಲೈಬ್ರರಿಗೆ ಬರುತ್ತಿದ್ದ ದೀಪಾಳನ್ನು ನೋಡುತ್ತಿದ್ದ. ಅವತ್ತು ಕೆಲ ಹುಡುಗರು ಅವಳನ್ನು ಚುಡಾಯಿಸುತ್ತಿದ್ದರು. ಅದನ್ನು ಕಂಡವನು ಅವಳನ್ನು ಅವರಿಂದ ರಕ್ಷಿಸಿದ್ದ. ಅದಾದ ನಂತರ ಅವರ ಪರಿಚಯ ಸ್ನೇಹಕ್ಕೆ ತಿರುಗಿತು. ಅವಳ ಪುಸ್ತಕ ಪ್ರೇಮ ಇವನನ್ನೂ ಓದುವಂತೆ ಸೆಳೆಯಿತು. ಪುಸ್ತಕದ ಶಕ್ತಿಯೇ ಅಂತಹದ್ದು. ಕುತೂಹಲಕ್ಕೆಂದು ಪುಸ್ತಕ ತೆಗೆದವನು ಅದು ಮುಗಿಯುವವರೆಗೂ ಬಿಡದೇ ಓದಿದ. ಸ್ಫೂರ್ತಿ ಕತೆಗಳನ್ನು ಓದಿದ, ಆತ್ಮಕತೆ, ಸಾಮಾಜಿಕ ಕಾದಂಬರಿ ಎಲ್ಲವನ್ನೂ ಓದಿದ..ಅವಳೊಡನೆ ಚರ್ಚಿಸಿದ, ಓದಿನ ಜೊತೆಗೆ ಅವನ ವಿಚಾರಧಾರೆ, ವಿಶ್ಲೇಷಣಾ ಶಕ್ತಿ ಎಲ್ಲವೂ ಬಲಾಗುತ್ತಿತ್ತು. ಅದರ ಪ್ರಭಾವದಿಂದಾಗಿ, 3 ತಿಂಗಳಷ್ಟರೊಳಗೆ ಅವನ ಬದುಕಿನ ಗತಿಯೇ ಬದಲಾಯಿತು. ಕೆಲಸಕ್ಕೆ ಹೋಗಲು ಶುರು ಮಾಡಿದ, ಮನೆಯ ಜವಾಬ್ದಾರಿ ತೆಗೆದುಕೊಂಡ. ಅವನ ಅಪ್ಪ-ಅಮ್ಮನಿಗೆ ಇವನ ಈ ಹೊಸ ಪರಿ ಆಶ್ಚರ್ಯ ತಂದಿತು ಜೊತೆಗೆ ಸಂತೋಷವನ್ನೂ.. ಇದಕ್ಕೆ ಕಾರಣವಾದ ದೀಪಾಳನ್ನು ನೋಡಲು ಅವರಿಗೂ ಆಸೆ. ಅವಳನ್ನು ಕರೆತರುವಂತೆ ಹೇಳಿದ್ದರು. ಸುಮುಖ್ ಗೆ ಅವಳ ಕುಟುಂಬ ಅಥವಾ ಅವಳ ಕುರಿತು ಯಾವುದೇ ಮಾಹಿತಿ ಇರಲಿಲ್ಲ. ಅಲ್ಲದೇ, ಇವನು ಮನೆಗೆ ಆಹ್ವಾನಿಸಿದಾಗ ಅವಳು ನಯವಾಗಿಯೇ ಮುಂದೆ ತಳ್ಳುತ್ತಾ ಬರುತ್ತಿದ್ದಳು. ಅವಳೊಡನೆ ಅನಾಥಾಶ್ರಮ, ವೃದ್ದಾಶ್ರಮಕ್ಕೆ ಹೋಗಿದ್ದನೇ ಹೊರತು ಅವಳ ಮನೆಗೆ ಹೋಗಿರಲಿಲ್ಲ. ಅವಳ ಮನೆ ಎಲ್ಲಿದೆ ಎಂಬುದೂ ಅವನಿಗೆ ತಿಳಿದಿರಲಿಲ್ಲ, ಅವಳ ಕುಟುಂಬದ ಕುರಿತು ಇವನೂ ಕೇಳಿರಲಿಲ್ಲ, ಅವಳೂ ಹೇಳಿರಲಿಲ್ಲ. ಹೀಗೆಯೇ ಇಬ್ಬರ ಸ್ನೇಹ ಮುಂದುವರಿಯುತ್ತಿರುವಾಗಲೇ ಅವಳಿಗೆ ಅವನು ಪ್ರೀತಿಯನ್ನು ನಿವೇದಿಸಿದ್ದು.

"ಕಳಂಕಿನಿ"ಯ ಮೊದಲ ಪುಟ ತೆರೆದವನು ಅದರಲ್ಲಿಯೇ ಮುಳುಗಿ ಹೋದ. 

ಬದುಕಿನಲ್ಲಿ ಎಲ್ಲವೂ ಅಂದುಕೊಂಡಂತೆ ನಡೆದರೆ ಅಲ್ಲಿ ಬದುಕಿನ ಅರ್ಥವೇ ಬದಲಾಗುತ್ತದೆ. ಬದುಕನ್ನು ಬಂದಂತೆ ಸ್ವೀಕರಿಸಿ ಬದುಕಿಬಿಡಬೇಕು. ಗಂಡು ಮಗುವಿನ ನಿರೀಕ್ಷೆಯಲ್ಲಿದ್ದ ಅಪ್ಪನಿಗೆ ಹುಟ್ಟಿದ್ದು ಹೆಣ್ಣು ಎಂದು ಅರಿವಾದಾಗಲೇ ತಿರಸ್ಕಾರ ಹುಟ್ಟಿತ್ತು, ಜೊತೆಗೆ ಆ ಹೆರಿಗೆಯಲ್ಲಿ ಅಮ್ಮನೂ ತೀರಿ ಹೋದದ್ದು ಜೊತೆಯಾಯಿತು. ಅಮ್ಮನನ್ನು ತಿಂದುಕೊಂಡವಳು ಎಂಬ ಪಟ್ಟ ದೊರೆಯಿತು. ಅಪ್ಪನಿಗೆ ಹೊಸ ಹೆಂಡತಿ ಬಂದಳು. ಅಪ್ಪನಿಗೇ ಬೇಡವಾದ ಮಗು ಮಲತಾಯಿಗೆ ಬೇಕಾದ್ದು ಹೇಗಾದೀತು..? ತಿರಸ್ಕಾರ, ಅವಮಾನಗಳಲ್ಲೇ ಬದುಕು ಕಳೆಯಿತು. ಶಾಲೆಯ ಮುಖವನ್ನೇ ಕಾಣಲಿಲ್ಲ, ಮನೆಯ ಚಾಕರಿಯಲ್ಲೇ ಸಮಯ ಕಳೆದು ಬಿಡುತ್ತಿತ್ತು. ಯೌವ್ವನ ಎಂಬುದು ಬದುಕನ್ನು ಮತ್ತಷ್ಟು ದುಸ್ತರಗೊಳಿಸಿತ್ತು. ಮದುವೆ ಎಂಬ ಕನಸಲ್ಲಿದ್ದವಳಿಗೆ, ಮದುವೆಯ ವಾಸ್ತವದ ಬಿಸಿ ಮುಟ್ಟಿತ್ತು. 40 ವರ್ಷದ ಒಬ್ಬನಿಗೆ 18 ವರ್ಷದ ನನ್ನನ್ನು ಕಟ್ಟಿದ್ದರು.. ಅದೂ ಧಿಡೀರ್ ಮದುವೆ, ಅವನ ಪೂರ್ಣ ಮತ್ತು ಪೂರ್ವದ ಪರಿಚಯವಿಲ್ಲ. ಕುಟುಂಬ ಬಂದಿರಲಿಲ್ಲ. ಧಿಕ್ಕರಿಸಿ ನಿಲ್ಲುವ ಅಧಿಕಾರ ನನಗಿರಲಿಲ್ಲ.

ಮದುವೆಯಾದ ದಿನವೇ ಪಯಣ ಬೆಂಗಳೂರಿನತ್ತ ಸಾಗಿತು. ಇತ್ತ ತವರಿನ ಕೊಂಡಿ ಕಳಚಿತ್ತು.. ಅಷ್ಟಕ್ಕೂ ಕಳಚಿಕೊಳ್ಳಲಾದರೂ ಏನಿತ್ತು..? ಸಂಸಾರ ಸಾಗುತ್ತಿತ್ತು.. ಅಂದುಕೊಂಡಂತೆ ಅಲ್ಲದಿದ್ದರೂ ತವರಿಗಿಂತಾ ಸೊಗಸಾಗಿ. ಈಗಲೂ ಆತನ ವಿವರಗಳೇನೂ ನನಗೆ ತಿಳಿದಿರಲಿಲ್ಲ. ಆದರೆ, ದಿನಕಳೆದಂತೆ ಆ ಬೀದಿಯ ಪರಿಚಯವಾಯಿತು. ಹಗಲೆಲ್ಲಾ ನಿದ್ರೆಯಲ್ಲಿದ್ದು, ರಾತ್ರಿಯೆಲ್ಲಾ ಎಚ್ಚರವಿರುವ ಸ್ಥಳ ಅದು ಎಂದು ತಿಳಿಯುವಷ್ಟರಲ್ಲಿಯೇ ನನ್ನನ್ನೂ ಆತ ಅಲ್ಲಿಗೇ ಮಾರಿಯಾಗಿತ್ತು. ತಪ್ಪಿಸಿಕೊಳ್ಳಲು ಸಾಧ್ಯವಾಗದ ಬಿಗಿ ಪಹರೆ. ದಿಕ್ಕರಿಸಿ, ದಿಕ್ಕರಿಸಿ ಸುಸ್ತಾಗಿ ಮಲಗಿದ್ದಾಗಲೇ ಆಕ್ರಮಣ ನಡೆದಿತ್ತು. ಕಾಲಕ್ರಮೇಣ ಅದು ರೂಢಿಯಾಯಿತು. ಆ ಬದುಕಿಗೆ ಒಗ್ಗಿಕೊಂಡಾಗಿತ್ತು.

ಮಗು ಹುಟ್ಟುವ ಮುನ್ಸೂಚನೆ ಸಿಕ್ಕಿತ್ತು. ಯಾರ ರಕ್ತದ ಕೂಸೋ ಅರಿವಿರಲಿಲ್ಲ ಆದರೆ ನನ್ನ ಕರುಳ ಬಳ್ಳಿ ಎಂಬ ಮಮಕಾರವಿತ್ತು. ಯಾರೂ ತೋರದ ಧೈರ್ಯ ತೋರಿದೆ. ಮಗಳು ಹುಟ್ಟಿದಳು. ಅಲ್ಲಿಂದ ಹೊರನಡೆದು ಹೊಸ ಬದುಕು ಕಟ್ಟಿಕೊಳ್ಳಲು ಹೊರಟರೆ ಎಲ್ಲರೂ ಗತವನ್ನು ಕೆಣಕುವವರೇ.. ಕಡೆಗೆ ಕೆಂಪು ದೀಪದ ಬೆಳಕು ಆಸರೆಯಾಯಿತು. ಆ ಕೆಂಪು ದೀಪದ ನೆರಳು ಸಹಾ ಅವಳನ್ನು ಸೋಕದಂತೆ ಮುಚ್ಚಟ್ಟೆಯಾಗಿ ಬೆಳೆಸಿದೆ. ಅಕ್ಷರ ಕಲಿಸುವ ಅಮ್ಮನಾದಳು ಅವಳು. ಏಕಾಂಗಿತನ ತೊಡೆಯುವ ಗೆಳತಿಯಾದಳು. ಆದರೆ, ಒಂದು ದಿನ ಅವಳು ಕಲಿಸಿದ ವಿದ್ಯೆಯೇ ಅವಳ ನನ್ನ ಸಂಬಂಧವನ್ನು ಬಲಿ ಪಡೆಯಿತು. ಅವಳಿಲ್ಲದಾಗ ನನ್ನ ಏಕಾಂಗಿತನ ತೊಡೆಯಲು ಬರೆದ ನನ್ನ ಗತದ ಬದುಕು ನಾನು ತಿಳಿಸದ ನನ್ನ ಬದುಕಿನ ಸತ್ಯವನ್ನೆಲ್ಲಾ ಅವಳೆದುರು ತೆರೆದಿಟ್ಟಿತ್ತು. ಅಂದಿನಿಂದ ಅವಳ ಪಾಲಿಗೆ ನಾನು "ಕಳಂಕಿನಿ". ಅವಳಿಗಾಗಿ ಪ್ರತಿ ರಾತ್ರಿ ಸತ್ತು, ಸತ್ತು ಹುಟ್ಟುತ್ತಿದ್ದೆ ಆದರೆ ಅವಳ ಪಾಲಿಗೆ ನಾನು ಈಗ ಸಂಪೂರ್ಣ ಸತ್ತಿದ್ದೇನೆ. ಸಮಾಜಕ್ಕೆ ನನ್ನದೊಂದು ಕಡೆಯ ಪ್ರಶ್ನೆ. ಸಾಧ್ಯವಾದರೆ ಉತ್ತರಿಸಿ.

ಪ್ರತಿ ರಾತ್ರಿ ಹುಟ್ಟಿ, ಮರು ಹಗಲು ಸಾಯುವ 
ಚಂದ್ರನಿಗೆ ಕಲೆಗಳಿದ್ದರೂ, ಕಳಂಕವಿಲ್ಲ..
ಪ್ರತಿ ರಾತ್ರಿ ಸತ್ತು,ಸತ್ತು ಮರು ಬೆಳಿಗ್ಗೆ ಹುಟ್ಟುವ
ಕಲೆಗಳಿಲ್ಲದ ನಿತ್ಯಮುತ್ತೈದೆ ಕಳಂಕಿನಿ

ಏಕೆ???

ಪುಸ್ತಕ ಮುಗಿದಾಗ ಸುಮುಖ್ ಕಣ್ಣ ತುಂಬಾ ಕಂಬನಿ. ಅವನ ಬಳಿ ಅದಕ್ಕೆ ಉತ್ತರವಿಲ್ಲ. ಅವನ ಬಳಿ ಅಷ್ಟೇ ಅಲ್ಲ ಮತ್ತಾರ ಬಳಿಯೂ ಉತ್ತರವಿಲ್ಲ.

ಅಷ್ಟರಲ್ಲಿ ದೀಪಾ ಬಂದಳು. ಎದ್ದು ಹೊರನಡೆದ, ಅವಳು ಮಾತನಾಡುವ ಮುನ್ನವೇ ಅವಳೊಡನೆ ಈ ಪ್ರಶ್ನೆ ಕೇಳಿದ.. ಮೊದಲಿಗೆ ಇದಕ್ಕೆ ಉತ್ತರಿಸು. ನಂತರ ಈ "ಕಳಂಕಿನಿ"ಯರ ಕಳಂಕ ತೊಡೆಯುವ ನನ್ನ ಕಾರ್ಯಕ್ಕೆ ಜೊತೆಯಾಗುವೆಯಾ ಹೇಳು..? ಎಂದ. ಅವಳಿಗೆ ಮತ್ತೇನೂ ಹೇಳಲು ತೋಚಲಿಲ್ಲ.

ಸುಮುಖ್ ನಿಗೆ ತನ್ನ ಬದುಕಿನ ಕುರಿತು ಹೇಳಲೆಂದು ಬಂದಿದ್ದವಳ ಕಣ್ಣು ಅವನು ಹಿಡಿದಿದ್ದ ಪುಸ್ತಕದ ಮೇಲೆ ಹೋಯಿತು. ಅವಳಿಗೆ ಅವನ ಪ್ರಶ್ನೆಯ ಮೂಲ ಅರಿವಾಯಿತು. "ಆ ಪುಸ್ತಕ ಬರೆದವಳು ನನ್ನಮ್ಮ. ನನ್ನ ಬದುಕಿನ ಕುರಿತು ಹೇಳ ಹೊರಟಾಗಲೆಲ್ಲಾ ಯಾವದೋ ಅವ್ಯಕ್ತ ಭಾವ ತಡೆದು ನಿಲ್ಲಿಸುತ್ತಿತ್ತು. ಅಮ್ಮ ಅಂದು ಇದಿಷ್ಟನ್ನೂ ಬರೆದಿಟ್ಟು ಮತ್ತೆ ಬಾರದ ಲೋಕಕ್ಕೆ ಹೋಗಿಬಿಟ್ಟಿದ್ದಳು. ದುಡುಕಿ ನಾನಾಡಿದ್ದ ಮಾತು ಮತ್ತೆ ಬರುವಂತಿರಲಿಲ್ಲವಲ್ಲಾ.. ಅವಳ ಬದುಕನ್ನು ಎಲ್ಲರಿಗೂ ತಿಳಿಸಬೇಕಿನಿಸಿತು. ಅವಳ ಪ್ರಶ್ನೆಗೆ ಉತ್ತರ ಹುಡುಕಬೇಕೆನಿಸಿತು. ಹಾಗಾಗಿಯೇ ಈ ಪುಸ್ತಕ ಅಚ್ಚಾಯಿತು. ಅಮ್ಮ ಹೋದ ನಂತರ ನಾನು ಹಚ್ಚಿಕೊಂಡದ್ದು ಪುಸ್ತಕಗಳನ್ನು ಬಿಟ್ಟರೆ ನಿನ್ನನ್ನು.. ನನ್ನ ಹಿಂದಿನ ಕತೆ ತಿಳಿದರೆ ನಿನ್ನನ್ನೂ ಕಳೆದುಕೊಳ್ಳಬೇಕಾಗಬರಬಹುದು ಎಂದು ಏನೂ ತಿಳಿಸಲಿಲ್ಲ. ಈಗಲೂ ನಿನಗೆ ನನ್ನ ಜೊತೆಯಾಗುವ ಆಸೆ ಇದೆಯೇ..?" ಎಂದು ಕೇಳಿದಳು ದೀಪಾ.

ದೀಪದ ಬೆಳಕಿನಲ್ಲಿ ಹೊಳಪುಗೊಂಡೆ
ಕೆಂಪು ದೀಪದ ಅಡಿಯ ಕತ್ತಲ ಮರೆಯಾಗಿಸಲು
ಮತ್ತೆ ಈ ದೀಪದಾರಿಯಾಗಿ ಹೊರಡುವೆ
ಕತ್ತಲು-ಬೆಳಕಿನ ಸಮರದಲ್ಲಿರುವ
ಕಳಂಕಿನಿಯರ ಕಳಂಕವ ತೊಡೆಯಲು

ಎಂದು ಉತ್ತರಿಸಿದ. ಇಬ್ಬರ ಜೊತೆಯಾದ ಹೆಜ್ಜೆಯ ಕಾಣಲು ಏಕೋ ಚಂದ್ರ ಮೋಡವಿದ್ದರೂ ದಾಟಿ ಮೆಲ್ಲನೆ ಹೊರಬರುತ್ತಿದ್ದ. ಕೆಂಪು ದೀಪ ಮಂಕಾಗುತ್ತಿತ್ತು.

~ವಿಭಾ ವಿಶ್ವನಾಥ್