ಗುರುವಾರ, ನವೆಂಬರ್ 28, 2019

ಆ ಕರೆ..

ಮೂರು ದಿನಗಳಿಂದ ಬರುತ್ತಲಿತ್ತು ಆ ಸಂದೇಶ. ರಾತ್ರಿ 10 ರ ಸುಮಾರಿಗೆ ಬರುತ್ತಲಿತ್ತು. ಆ ನಂಬರ್ ಗೆ ಇತ್ತ ಕಡೆಯಿಂದ ಕರೆ ಮಾಡಿದರೆ "ನೀವು ಕರೆ ಮಾಡಿದ ಚಂದಾದಾರರು ವ್ಯಾಪ್ತಿ ಪ್ರದೇಶದ ಹೋರಾಗಿದ್ದಾರೆ" ಎಂಬ ಉಲಿತ. ಮೊದಲ ದಿನ ಯಾವುದೋ ಸಂದೇಶ ಮಿಸ್ ಆಗಿ ಬಂದಿರಬೇಕು ಎಂದುಕೊಂಡಿದ್ದೆ. ಆದರೆ ಎರಡನೆಯ ದಿನವೂ ಮತ್ತದೇ ಸಂದೇಶ ಬಂದಾಗ "ಯಾರು ನೀವು" ಎಂದು ಮರು ಸಂದೇಶ ಕಳಿಸಿದ್ದೆ. ಆದರೆ ಅದಕ್ಕೆ ಅತ್ತಲಿಂದ ಯಾವುದೇ ಉತ್ತರ ಇರಲಿಲ್ಲ. ಇಂದು ಬೆಳಿಗ್ಗೆ ಇಂದ ಕರೆ ಮಾಡಿದ್ದರೂ ಆ ನಂಬರ್ ಕನೆಕ್ಟ್ ಆಗಿರಲಿಲ್ಲ. 10 ಗಂಟೆಗೆ ಸಂದೇಶ ಬಂದ ತಕ್ಷಣ ಕರೆ ಮಾಡಿದಾಗಲೂ ಮತ್ತದೇ ಉಲಿತ.

"ರೂಮ್ ನಂಬರ್ 13
ಸಾಗರ ತರಂಗಿಣಿ ಹೋಟೆಲ್
ಸಾಗರಪುರ"
ಸರಿಯಾಗಿ ರಾತ್ರಿ 11 ಗಂಟೆಗೆ ಭೇಟಿಯಾಗೋಣ

~ಇಂತಿ
ನಿಮ್ಮ ನೆನಪಿನಾಳದಲ್ಲಿ ಮುಚ್ಚಿ ಹೋದವಳು

ಸಾಗರ್ ಈ ಸಂದೇಶವನ್ನು ಸ್ವಲ್ಪ ಸೀರಿಯಸ್ ಆಗಿಯೇ ತೆಗೆದುಕೊಂಡಿದ್ದ. ಮೊದಲೆರಡು ದಿನ ಉಪೇಕ್ಷಿಸಿದವನಿಗೆ 3 ನೇ ದಿನದಿಂದ ಈ ತಲೇಬೇನೆ ಶುರುವಾಗಿತ್ತು. ಇದನ್ನು ಪರೀಕ್ಷಿಸಲೆಂದೇ ಬೆಂಗಳೂರಿನಿಂದ ಸಾಗರಪುರಕ್ಕೆ ಹೊರಟ. ಬೆಂಗಳೂರಿನಿಂದ ಸಾಗರಪುರಕ್ಕೆ ಹೆಚ್ಚು ಕಡಿಮೆ 13 ತಾಸುಗಳ ಪ್ರಯಾಣ. ಶನಿವಾರ ಬೆಳಿಗ್ಗೆಯೇ ಹೊರಟವನು ಶನಿವಾರ ರಾತ್ರಿ ಅಲ್ಲಿಗೆ ತಲುಪಿದ. 

"ಸಾಗರ ತರಂಗಿಣಿ"ಯ ಎದುರು ನಿಲ್ಲಿಸಿ ಒಳಹೊಕ್ಕವನಿಗೆ ಆಶ್ಚರ್ಯ ಎಂಬಂತೆ ರೂಮ್ ನಂಬರ್ 13 ರ ಕೀ ಕೊಟ್ಟರು. ಆಶ್ಚರ್ಯದಿಂದ ಒಳ ಹೊಕ್ಕವನಿಗೆ ಕಂಡದ್ದು 13 ವರ್ಷದ ಹಿಂದೆ ತಾನು ತೊರೆದು ಹೋದ ತನ್ನ ಸತಿ ತರಂಗಿಣಿ. ಅಲ್ಲಲ್ಲ ತನ್ನನ್ನು ತೊರೆದು ಹೋದ ತರಂಗಿಣಿ.

ತನ್ನ ತಂದೆಯ ಕಾಲದಿಂದ ನಡೆಸಿಕೊಂಡು ಬಂದಿದ್ದ ಹೋಟೆಲ್ ಒಂದಿತ್ತು. ಸಾಗರ್ ಆ ಹೋಟೆಲ್ ಅನ್ನು ನಡೆಸಿಕೊಂಡು ಹೋಗಬೇಕೆಂಬುದು ತಂದೆಯ ಆಸೆ. ಅದಕ್ಕಾಗಿಯೇ ತನ್ನ ತಂಗಿಯ ಮಗಳು ತರಂಗಿಣಿಯನ್ನೇ ಸಾಗರನಿಗೆ ವಿವಾಹ ಮಾಡಬೇಕೆಂದುಕೊಂಡಿದ್ದರು. ಆದರೆ, ಸಾಗರನಿಗೆ ಆ ವಿವಾಹದಲ್ಲಿ ಆಸಕ್ತಿ ಇರಲಿಲ್ಲ. ಅವನಿಗೆ ಆಸ್ತಿಯಲ್ಲಿ ಪಾಲು ಪಡೆದು ತಾನು ಪ್ರೀತಿಸಿದ ಹುಡುಗಿಯೊಡನೆ ವಿದೇಶದಲ್ಲಿ ನೆಲೆಸುವಾಸೆ. ಆದರೆ, ತಂದೆಯ ಅಚಾನಕ್ ಮರಣ ಮತ್ತು ಅವರು ಮಾಡಿದ್ದ ವಿಲ್ ಅವನ ಆಸೆಗೆ ತಣ್ಣೀರೆರೆಚಿತು. ತರಂಗಿಣಿಯನ್ನು ಮದುವೆಯಾಗಬೇಕು ಮತ್ತು ಅವಳ ಸಹಿಯಿಲ್ಲದೇ ಆಸ್ತಿಯಲ್ಲಿ ಒಂದು ಪೈಸೆಯೂ ಸಹಾ ಸಾಗರನಿಗೆ ಸೇರುವಂತಿರಲಿಲ್ಲ.

ಇದಕ್ಕಾಗಿಯೇ ಸಾಗರ ಮತ್ತು ತರಂಗಿಣಿಯರ ವಿವಾಹ ನೆರವೇರಿತು. 'ಸಾಗರ ತರಂಗಿಣಿ'ಯ ರೂಮ್ ನಂಬರ್ 13 ರಲ್ಲಿ ಅವರ ಮೊದಲ ರಾತ್ರಿಯ ಏರ್ಪಾಡಾಗಿತ್ತು. ಆದರೆ ಅಂದು ನಡೆದದ್ದೇ ಬೇರೆ.. ತರಂಗಿಣಿಯನ್ನು ಸಾಗರ ಸವಿ ಮಾತನಾಡುತ್ತಾ ಆಸ್ತಿ ಪತ್ರಗಳಿಗೆಲ್ಲಾ ಸಹಿ ಹಾಕಿಸಿಕೊಂಡು ತಣ್ಣನೆ ಕ್ರೌರ್ಯದಿಂದ ಕೊಂದಿದ್ದ. ನಂತರ ತಾನು ಅಲ್ಲಿ ಇರಲೇ ಇಲ್ಲ ಎಂದು ಬಿಂಬಿಸಿ ತಪ್ಪಿಸಿಕೊಂಡಿದ್ದ. ಆ ನಂತರ ಆ ರೂಮ್ ಹಾಗೂ ಹೋಟೆಲ್ ಮುಚ್ಚಿ ಹೋಗಿತ್ತು.

ಇದೆಲ್ಲವನ್ನೂ ನೆನೆಸಿಕೊಳ್ಳುವಷ್ಟರೊಳಗೆ ತರಂಗಿಣಿಯ ಆತ್ಮ ಸಾಗರನನ್ನು ಬಲಿ ಪಡೆದಿತ್ತು. ಮಾರನೇ ದಿನ ಪಾಳು ಬಿದ್ದ ಬಂಗಲೆಯ ಹೊರಗಿದ್ದ ಕಾರನ್ನು ಕಂಡ ಮಾದ ಎದ್ದು ಬಿದ್ದು, ಸುದ್ದಿ ತಿಳಿಸಲು ಊರೊಳಗೆ ಓಡಿದ. 13 ನೇ ವರ್ಷ 13 ನೇ ನಂಬರ್ ರೂಮ್ ನಲ್ಲಿ ವರ್ಷ ವರ್ಷದಂತೆ ಮತ್ತೊಂದು ಹೆಣ ಸಿಕ್ಕಿತ್ತು.

ಮತ್ತೆಷ್ಟು ವರ್ಷ ಈ ಗ್ರಹಚಾರ ಎಂದುಕೊಂಡವರಿಗೆ ತರಂಗಿಣಿ ಸಂತೃಪ್ತಿಯಿಂದ "ಇಲ್ಲಿಗೆ ನನ್ನ ಕರೆ ಮುಗಿಯಿತು. ಕಾಲನ ಕರೆಗಾಗಿ ನಾನು ಕಾಯುತ್ತಿದ್ದೇನೆ" ಎಂದು ಹೇಳಿದ್ದು ಕೇಳಲೇ ಇಲ್ಲ.

~ವಿಭಾ ವಿಶ್ವನಾಥ್

ಭಾನುವಾರ, ನವೆಂಬರ್ 24, 2019

ಹಾಸ್ಟೆಲ್ ನ ಭೀತಿ ಕತೆ

ವಾರ್ಡನ್ ಪಕ್ಕದ ರೂಮ್ ಆದುದರಿಂದ ಅಕಸ್ಮಾತ್ ಹೆಚ್ಚಿನ ವಿದ್ಯಾರ್ಥಿಗಳು ಮನೆಗೆ ಹೋದಾಗಲೂ ಭಯ ಎಂದೇನೂ ಅನ್ನಿಸುತ್ತಿರಲಿಲ್ಲ. ಅಷ್ಟಕ್ಕೂ ಭಯ ಪಡಲು ಅಲ್ಲೇನೂ ಇರಲಿಲ್ಲ ಆದರೆ ಭಯ ಹುಟ್ಟಿಸುವಂತಹಾ ಕೆಲ ಕಟ್ಟು ಕತೆಗಳು ಬಾಯಿಂದ ಬಾಯಿಗೆ ಹಬ್ಬುತ್ತಾ ಭಯಂಕರವಾಗಿ ಕಾಣುತ್ತಿದ್ದವು. ಕೆಲವರ ಕಣ್ಣಿಗೆ ಹಾಸ್ಟೆಲ್ ಎಂದರೆ ಪಾಳು ಬಿದ್ದ ದೆವ್ವದ ಕಟ್ಟಡದಂತೆ ಕಾಣುತ್ತಿದ್ದುದರಲ್ಲಿ ಆಶ್ಚರ್ಯ ಎಂದೇನೂ ಅನ್ನಿಸುತ್ತಿರಲಿಲ್ಲ. ಹುಡುಗಿಯರ ಹಾಸ್ಟೆಲ್ ಗಳಲ್ಲಿ ವರ್ಷಕ್ಕೆ ಒಂದೆರಡು ಆತ್ಮಹತ್ಯಾ ಪ್ರಸಂಗಗಳು ಸಾಮಾನ್ಯವೇ.. ಇಲ್ಲವೇ ಕೈ ಕುಯ್ದುಕೊಂಡೋ ಇಲ್ಲವೇ ಮತ್ಯಾವುದೋ ರೀತಿಯಲ್ಲೋ ಆತ್ಮಹತ್ಯೆಗೆ ಪ್ರಯತ್ನಿಸುವುದೋ ನಡೆದೇ ಇರುತ್ತಿತ್ತು. ಮತ್ಯಾವುದೋ ಸಾಹಸವನ್ನು ಪ್ರಯತ್ನಿಸ ಹೊರಟು ಚೀಮಾರಿ ಹಾಕಿಸಿಕೊಳ್ಳುವುದು ಮಾಮೂಲಿಯೇ.. ಇಂತಹಾ ಕೆಲ ಪ್ರಯತ್ನಗಳು ಆಗಾಗ ಆಗಿ ಹಾಸ್ಟೆಲ್ ಗೆ ಸಿ.ಸಿ ಕ್ಯಾಮೆರಾ ಕೂಡಾ ಬಂದು ಆಗಿತ್ತು.

ಹಾಸ್ಟೆಲ್ ಅನ್ನು ಕಾಯುವ ವಿದ್ಯಾರ್ಥಿನಿಯರಿಗೆ ಧೈರ್ಯ ತುಂಬಬೇಕಿದ್ದ ವಾಚ್ ಮ್ಯಾನ್ "ಆ ಮೇಲ್ಗಡೆ ಫ್ಲೋರ್ ಅಲ್ಲಿ ದೆವ್ವದ ಕಾಟ ಅಂತೆ" ಎನ್ನುವಾಗ ಇದ್ದಬದ್ದ ಸಿಟ್ಟೆಲ್ಲಾ ನೆಟ್ಟಿಗೇರಿ ವಾಚಾಮಗೋಚರವಾಗಿ ಬೈಯಬೇಕು ಅಂತಾ ಅನ್ನಿಸಿದರೂ ಬೈಯ್ಯಲು ಸಾಧ್ಯವಾಗದೇ "ಆ ದೆವ್ವ ಇದ್ದಿದ್ದರೂ ನಿನ್ನಷ್ಟು ಕಾಟ ಕೊಡ್ತಾ ಇರಲಿಲ್ಲ, ನೀನೇ ಒಂದು ದೊಡ್ಡ ದೆವ್ವ" ಅಂತಾ ಹೇಳಬೇಕೆಂದರೂ ಹೇಳಲು ಸಾಧ್ಯವಾಗದೇ "ಆಗೇನೂ ಇಲ್ಲ ಅಣ್ಣ, ನನಗೇನೂ ಆಗನ್ನಿಸ್ತಾ ಇಲ್ಲ" ಎಂದಾಗ ಇರೋ 32 ಹಲ್ಲುಗಳನ್ನು ತೋರಿಸ್ತಾ "ನೀನು ಕೆಳಗಡೆ ಪ್ಲೋರಲ್ಲಿ ಅಲ್ವಾ ಇರೋದು, ಅದಕ್ಕೇ ಗೊತ್ತಾಗಿಲ್ಲ ಬಿಡು" ಅಂತಾ ತನ್ನ ಜ್ಞಾನವನ್ನು ತೋರಿಸುತ್ತಾ ನನ್ನ ಹಾಸ್ಟೆಲ್ ಕುರಿತ ಅಜ್ಞಾನವನ್ನು ಎತ್ತಿ ಆಡುವಂತೆ ಮಾತನಾಡುತ್ತಿದ್ದ. ನಮ್ಮ ಊರಿನವನು ಎಂಬ ದಾಕ್ಷಿಣ್ಯ ಕೂಡಾ ಸೇರಿ ಮತ್ತೇನೂ ಮಾತನಾಡಲೂ ತೋಚದೆ ಅಲ್ಲಿಂದ ಹೊರಟು ಬಂದುಬಿಡುತ್ತಿದ್ದೆ. ಆ ದೆವ್ವ ಅವನ ಫ್ರೆಂಡ್ ಏನೋ ಅನ್ನುವಂತೆ ಮಾತನಾಡುತ್ತಿದ್ದ ಅವನ ಆತ್ಮವಿಶ್ವಾಸ ನೋಡಬೇಕು, ದೆವ್ವವೇ ಎದುರು ನಿಂತು ನಾನು ದೆವ್ವ ಅಂತಾ ಹೇಳಿಕೊಳ್ಳುವಾಗಲೂ ಅದಕ್ಕೆ ಅಷ್ಟು ಆತ್ಮವಿಶ್ವಾಸ ಇರಲಿಕ್ಕಿಲ್ಲ. ಆತ ದೆವ್ವವನ್ನು ತನ್ನ ಕಲ್ಪನೆಯಲ್ಲಿ ಮತ್ತೊಬ್ಬರ ಮನಸ್ಸಿನಲ್ಲಿ ಚಿತ್ರಿಸುತ್ತಲೇ ಹೋಗುತ್ತಿದ್ದ.

ಹಾಸ್ಟೆಲ್ ಪಕ್ಕದಲ್ಲಿ ರೈಲ್ವೆ ಟ್ರ್ಯಾಕ್ ಬೇರೆ ಇತ್ತು. ಅವನ ಕಲ್ಪನೆಯೂ ನಮಗೆ ಹಾಸ್ಟೆಲ್ ನಲ್ಲಿ ಹಾಕಿದ್ದ ರೈಲ್ವೆ ಇಲಾಖೆಯ "ರೈಲ್ವೆ ಹಳಿಗಳಿಂದ ದೂರವಿರಿ" ಎಂಬ ಹೊಸ ನೋಟೀಸು ಸೇರಿ ಆ ವಾರವೆಲ್ಲ ರಾತ್ರಿ ಹಾಸ್ಟೆಲ್ ರೂಮ್ ಗಳ ಬಾಗಿಲುಗಳು ಬೇಗ ಬಂದಾಗುವಂತೆ ಮಾಡಿದ್ದವು. ಗಲಗಲ ಎನ್ನುತ್ತಿದ್ದ ಹುಡುಗಿಯರ ಹಾಸ್ಟೆಲ್ ಪೂರ್ತಿ ಶಾಂತವಾಗಿ ಬಿಡುತ್ತಿತ್ತು. ಆದದ್ದು ಇಷ್ಟು.. ಗಂಡು ಮಕ್ಕಳ ಹಾಸ್ಟೆಲ್ ನಲ್ಲಿ ಯಾರೋ ಒಬ್ಬ ಕಾಂಪೌಂಡ್ ಹಾರಲು ಹೋಗಿ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದ. ಸ್ವಲ್ಪ ಹೆಚ್ಚುಕಡಿಮೆಯಾಗಿದ್ದರೂ ರೈಲ್ವೆ ಟ್ರ್ಯಾಕ್ ಮೇಲೆ ಬಿದ್ದಿರುತ್ತಿದ್ದ. ಇದು ವಾಚ್ ಮ್ಯಾನ್ ಬಾಯಿಯಲ್ಲಿ ಬೇರೆಯೇ ಕತೆಯಾಗಿ ಹೊರಹೊಮ್ಮಿತ್ತು. "ಆ ಹುಡುಗ ಹಾಸ್ಟೆಲ್ ಪಕ್ಕದಲ್ಲೇ ಇದ್ದ ರೈಲ್ವೆ ಟ್ರ್ಯಾಕ್ ನಲ್ಲಿ ಬರುತ್ತಿದ್ದ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ." ಆತ್ಮಹತ್ಯೆಗೆ ಕಾರಣ ಬೇಕಿತ್ತಲ್ವಾ, ವಾಚ್ ಮ್ಯಾನ್ ಅದನ್ನೂ ಸೃಷ್ಟಿ ಮಾಡಿದ "ಇನ್ನೇನಿರುತ್ತೆ, ಮಾಮೂಲು ಲವ್ ಪೈಲ್ಯೂರ್" ಅಂದ. ಅಸಲಿಗೆ ಅಲ್ಲಿ ಹಾಗೇನೂ ಆಗಿಯೇ ಇರಲಿಲ್ಲ. ಆದರೆ ಬಿದ್ದ ಕಥೆಗೆ ರೆಕ್ಕೆ-ಪುಕ್ಕ ಸೇರಿ ಬಣ್ಣ ಬಳಿದುಕೊಂಡು ಆತ್ಮಹತ್ಯೆಯ ಹೊಸ ಕತೆ ಸೃಷ್ಟಿ ಆಗಿತ್ತು. ಮೊದಲೇ ರಾತ್ರಿ ರೈಲು ಹೋಗುವಾಗ ಎಚ್ಚರವಾಗುತ್ತಿದ್ದದ್ದು ಆ ಕಥೆ ಕೇಳಿ ಮತ್ತಷ್ಟು ಎಚ್ಚರದಲ್ಲೇ ನಿದ್ದೆ ಮಾಡಲು ಪ್ರಯತ್ನಿಸುತ್ತಿದ್ದೆವು. ಅದರೊಟ್ಟಿಗೆ ಯಾವತ್ತೋ ನೋಡಿದ ಹಾರರ್ ಮೂವಿ, ರೂಮ್ ಮೇಟ್ ಹಾಕಿಕೊಂಡಿರುತ್ತಿದ್ದ ಫೇಸ್ ಪ್ಯಾಕ್, ಸ್ನಾನ ಮಾಡಿ ಒಣಗಲು ಬಿಟ್ಟಿರುತ್ತಿದ್ದ ಉದ್ದ ಕೂದಲು ಇವೆಲ್ಲವೂ ಸೇರಿ ಹಾಸ್ಟೆಲ್ ನಲ್ಲಿ ದೆವ್ವದ ಛಾಯೆಯನ್ನು ಸೃಷ್ಟಿ ಮಾಡಿದ್ದವು.ಆಮೇಲೆ ಇವೆಲ್ಲವೂ ಎಷ್ಟು ಕಾಲ ಭಯ ಹುಟ್ಟಿಸಲು ಸಾಧ್ಯ..? ಆ ಹುಡುಗ ಸತ್ತಿಲ್ಲ, ಇದೆಲ್ಲಾ ಇವನ ಕಟ್ಟುಕತೆ ಎಂದು ತಿಳಿದ ಮೇಲೆ ಎಲ್ಲರೂ ಆ ವಾಚ್ ಮ್ಯಾನ್ ಮೇಲೆ ಕೊಂಚ ಕೋಪಗೊಂಡದ್ದಂತೂ ನಿಜ.

ಸಾರಥಿ ಸಿನಿಮಾದ ಹಾಡನ್ನು ಜೋರಾಗಿ ಹಾಕಿಕೊಂಡು ಕೋಟೆ ಕಾಯುವವನ ರೀತಿ ತಾನೇ ಇಡೀ ಊರನ್ನು ಕಾಯುತ್ತಿದ್ದೇನೆ ಎಂಬ ಭ್ರಮೆಯಲ್ಲಿ ಇದ್ದವನನ್ನು ಹೇಗಾದರೂ ಮಾಡಿ ಹೆದರಿಸಬೇಕು ಅಂತಾ ಹುಡುಗಿಯರೆಲ್ಲಾ ಪ್ಲಾನ್ ಮಾಡಿಕೊಂಡರು. ಹೊರಗಡೆ ಗೇಟ್ ಬೀಗ ಹಾಕಿದ ನಂತರವಂತೂ ಅದನ್ನು ದಾಟಿ ಬರಲು ಸಾಧ್ಯವಿರಲಿಲ್ಲ. ಹಾಗಾಗಿ ಮೊಬೈಲ್ ಅಲ್ಲಿ ಹಾಡು ಹಾಕಿ ವಿಚಿತ್ರ ಸದ್ದು ಮಾಡಿ ಹೆದರಿಸೋಣ ಎಂದುಕೊಂಡು ಮಧ್ಯರಾತ್ರಿಯಲ್ಲಿ ವಿಚಿತ್ರ ಸದ್ದು ಮಾಡುತ್ತಾ, ಹಾಡು ಹಾಕಿದಾಗ ವಾರ್ಡನ್ ಎಚ್ಚರಗೊಂದು ಬೈದರೇ ಹೊರತು ವಾಚ್ ಮ್ಯಾನ್ ಗೆ ಇದು ಯಾವುದರ ಪರಿವೆಯೂ ಇಲ್ಲ. ಬೆಳಿಗ್ಗೆ ಯಾರೋ ಆತನಿಗೆ "ಅಣ್ಣಾ, ರಾತ್ರಿ ನಿಮಗೇನಾದರೂ ಶಬ್ಧ ಕೇಳಿತಾ..?" ಎಂದು ಕೇಳಿದ್ದಕ್ಕೆ " ನಾನು ಹೇಳಿರಲಿಲ್ಲವಾ, ದೆವ್ವ ಇದೆ ಅಂತಾ ಅದರದ್ದೇ ಕೆಲಸ.. " ಅಂತಾ ಮತ್ತೊಂದು ದೆವ್ವದ ಕತೆ ಸೃಷ್ಟಿಸುತ್ತಾ ಕುಳಿತ. "ರಾತ್ರಿ ಅಷ್ಟೆಲ್ಲಾ ಸದ್ದು ಮಾಡಿದರೂ ಎಚ್ಚರವಾಗದೆ ದೆವ್ವದಂತೆ ಬಿದ್ದುಕೊಂಡಿದ್ದ, ಸಿ.ಸಿ ಕ್ಯಾಮೆರಾ ಬಂದ ಮೇಲಂತೂ ಇದ್ದದ್ದೂ ಹೆಚ್ಚು ನಿದ್ದೆ ಮಾಡುತ್ತಾ ದೆವ್ವದ ಕುರಿತು ಹೆಚ್ಚೇ ಕತೆ ಹೇಳುತ್ತಾನೆ" ಎಂದು ಬೈಯ್ಯಲು ಬಾಯಿಗೆ ಬಂದರೂ ಬೈಯ್ಯದೆ ಅವನ ಹೊಸ ದೆವ್ವದ ಕತೆ ಕೇಳುತ್ತಾ ಕುಳಿತೆ. 

ಆ ದೆವ್ವದ ಕತೆಯನ್ನು ನಿಮಗೂ ಮುಂದೊಂದು ದಿನ ನಿಮಗೂ ಹೇಳುವೆ.

~ವಿಭಾ ವಿಶ್ವನಾಥ್

ಗುರುವಾರ, ನವೆಂಬರ್ 21, 2019

ರಾಜಕುಮಾರಿಯ ರಾಜಕುಮಾರಿ

ಇತ್ತೀಚೆಗೆ ಕನಸಲ್ಲೆಲ್ಲಾ ನಿನ್ನದೇ ಕನವರಿಕೆ ಕಣೇ ಮುದ್ದು. ಅದೆಷ್ಟೊಂದು ಆಸೆಗಳಿವೆ ಮನಸ್ಸಲ್ಲಿ ಅಂದರೆ ನೀನು ಊಹೆ ಮಾಡಿಕೊಳ್ಳಲಿಕ್ಕೂ ಅಸಾಧ್ಯ. ಇಂತಹದ್ದೇ ಆಸೆ, ಕನಸುಗಳನ್ನು ನನ್ನಪ್ಪ, ಅಮ್ಮನೂ ಕಂಡಿದ್ದರು ಅನ್ನಿಸುತ್ತದೆ. ಹಾಗೆಯೇ ಬೆಳೆಸಿದ್ದರು ಕೂಡಾ.. ಆದರೆ, ಆ ರಾಜಕುಮಾರಿಯರ ಲೋಕ ಮದುವೆ ಆದ ನಂತರ ಹಾಗೇ ಉಳಿಯುವುದಿಲ್ಲ. ಗೊತ್ತಾ? ಎಷ್ಟೇ ಮಕ್ಕಳಿದ್ದರೂ ಅಪ್ಪನಿಗೆ ಹೆಣ್ಣುಮಕ್ಕಳೇ ರಾಜಕುಮಾರಿಯರು. ಮುಕುಟವಿಲ್ಲದ ರಾಜನ ರಾಜ್ಯದಲ್ಲಿ, ಕಪಟವೇ ಅರಿಯದ ಪ್ರೀತಿಯ ಬೆಚ್ಚಗಿನ ಭಾವದಲ್ಲಿ ಬಂಧಿಗಳು. 

ಒಬ್ಬಳೇ ಮಗಳು ಎನ್ನುತ್ತಾ ಬೆಚ್ಚನೆ ಕಾಪಿಡುತ್ತಾ, ನಡೆದರೆ ಎಲ್ಲಿ ಅಂಗಾಲಿಗೆ ನೋವಾಗುವುದೋ ಎಂದು ಭ್ರಮಿಸುತ್ತಾ ಎತ್ತಿಕೊಂಡೇ ತಿರುಗುವ ಅಪ್ಪ-ಅಮ್ಮನ ಪ್ರೀತಿಯ ಸಾಮ್ರಾಜ್ಯದ ಯುವರಾಣಿ. ಅಜ್ಜಿಯ ಕತೆಗಳಲ್ಲಿ ಬರುವ ಏಳು ಮಲ್ಲಿಗೆ ತೂಕದ ರಾಜಕುಮಾರಿ. ಕೆಲಸಕ್ಕೆಂದು ಬರುತ್ತಿದ್ದವರ ಮಕ್ಕಳ ಕಂಗಳಲ್ಲಿ, ಮುಟ್ಟಲಾರದ ಮಡಿವಂತಿಕೆ ಇಟ್ಟುಕೊಂಡು ಎತ್ತರದಲ್ಲೇ ಇದ್ದ ರಾಜಕುಮಾರಿ. ಕೇಳುವುದನ್ನೆಲ್ಲಾ ಕೇಳುವುದಕ್ಕಿಂತ ಮುಂಚೆಯೇ ತಂದುಕೊಟ್ಟಾಗ ಆಗಸದೆತ್ತರಕ್ಕೇರಿ ಸಂಭ್ರಮಿಸುತ್ತಿದ್ದವಳು. ಪ್ರೀತಿಯ ಮಾತನ್ನು ಕೇಳಿ ಬೆಳೆದವಳಿಗೆ ಆ ಪ್ರೀತಿ ಅಭ್ಯಾಸವಾಗಿಬಿಟ್ಟಿತ್ತು ಆದರೆ ಬದುಕು ವಿಭಿನ್ನ ಅಲ್ಲವೇ..? ಬದುಕು ಅಷ್ಟರವರೆಗೆ ತನ್ನ ಒಂದು ಮುಖವನ್ನು ಮಾತ್ರ ತೋರಿಸಿತ್ತು. ಬದುಕಿನ ಮತ್ತೊಂದು ಛಾಯೆ ಪರಿಚಿತವಾಗುವುದರಲ್ಲಿತ್ತು.

ಮದುವೆಯವರೆಗಿನದ್ದೇ ಒಂದು ಹಂತವಾದರೆ, ಮದುವೆಯ ನಂತರ ಮತ್ತೊಂದು ಹಂತ. ಇದೇ ರೀತಿಯ, ಇದೇ ಪ್ರೀತಿಯ ಬದುಕನ್ನು ಆಮೇಲೆಯೂ ನಿರೀಕ್ಷಿಸಿದರೆ ದಡ್ಡತನವಾಗುತ್ತದೆ ಎಂಬುದು ಆಗ ನನ್ನ ಬುದ್ದಿಗೆ ಹೊಳೆದಿರಲೇ ಇಲ್ಲ. ಕಪಟವಿಲ್ಲದ ಪ್ರೀತಿಯ ಮಾತುಗಳನ್ನು ಮಾತ್ರ ಕೇಳಿ ಬೆಳೆದಿದ್ದವಳಿಗೆ, ಪ್ರೀತಿಯ ಲೇಪನ ಹಚ್ಚಿದ್ದ ನಯವಂಚಕತೆಯ ಬೆಣ್ಣೆಯಂತಹಾ ಮಾತುಗಳ ವ್ಯತ್ಯಾಸ ಅರಿವಾಗಲೇ ಇಲ್ಲ. ಮದುವೆಯ ನಂತರವೇ ಅರಿವಾಗಿದ್ದು ಅಲ್ಲಿ ನಾನು ಪ್ರಮುಖವಾಗಿರಲಿಲ್ಲ, ಪ್ರಮುಖವಾಗಿದ್ದು ನನ್ನ ಹಣ, ಆಸ್ತಿ. ಖುಷಿಯಾಗಿ ಬದುಕಲು ಹಣವಿಲ್ಲದಿದ್ದರೂ ಪ್ರೀತಿ,ಸಹಕಾರವಿದ್ದರೆ ಬದುಕಬಹುದು ಎಂದೆಣಿಸಿದ್ದ ನನ್ನ ಸಿದ್ದಾಂತಗಳೆಲ್ಲವನ್ನೂ ಗಾಳಿಗೆ ತೂರಿ ಬಿಟ್ಟಿದ್ದರು. ಬಾಯಿ ಬಿಟ್ಟರೆ ಹಣ,ಹಣ ಎನ್ನುತ್ತಾ ಜೀವ ತಿನ್ನತೊಡಗಿದರು. "ನಿನ್ನ ಸಂಬಳದ ಹಣದಿಂದ ಜೀವನ ನಡೆಸಬೇಕಾಗಿಲ್ಲ" ಎಂದು ಕೆಲಸಕ್ಕೆ ಹೋಗದಂತೆ ತಡೆದಿದ್ದ ಅಪ್ಪ-ಅಮ್ಮನನ್ನು ಇಲ್ಲಿ ಕಾಣಲಾಗಲಿಲ್ಲ. ಕೆಲಸಕ್ಕೆ ಹೋಗದಿದ್ದರೆ ಇಲ್ಲಿ ಬದುಕು ದುರ್ಲಭ ಎನ್ನುವುದು ಅರಿವಾಗಿತ್ತು. ಅಪ್ಪ-ಅಮ್ಮನ ಆಯ್ಕೆ ತಪ್ಪು ಎಂದು ಹೇಳಲು ನನಗೆ ಧೈರ್ಯ ಇಲ್ಲ. ದೊಡ್ಡ ಮನೆತನಕ್ಕೆ ಮದುವೆ ಮಾಡಿಕೊಟ್ಟರೆ ಮಗಳು ಸುಖವಾಗಿರುತ್ತಾಳೆ ಎಂಬ ಅವರ ಆಲೋಚನೆ ತಪ್ಪು ಎಂದು ನಾನಾದರೂ ಹೇಗೆ ಹೇಳಲಿ..? 

ರಾಣಿಯ ಸುಖವನ್ನು ನಾನು ಬಯಸಿರಲಿಲ್ಲ ಆದರೆ ರಾಜಕುಮಾರಿಯಾಗಿಯೇ ಉಳಿದು ಬಿಡುವೆ ಎಂದರೆ ಸಮಾಜದ ನೂರಾರು ಸಂಕೋಲೆಗಳು, ಕಟ್ಟುಪಾಡುಗಳು ಅದನ್ನು ಸಾಕಾರಗೊಳಿಸಿಕೊಳ್ಳಲು ಅವಕಾಶ ಮಾಡಿಕೊಡಲಿಲ್ಲ. ಆದರೆ, ಇದೆಲ್ಲವನ್ನು ಧಿಕ್ಕರಿಸಿ ಬದುಕುವ ಗಂಡೆದೆ ಕೂಡಾ ನನ್ನಲ್ಲಿರಲಿಲ್ಲ. ಆದರೆ, ಎಲ್ಲವನ್ನೂ ಮೀರಿ ನಿಲ್ಲಲೂ ಸಹಾ ಕಾಲವೆಂಬುದು ಬರಬೇಕು ಎನ್ನಿಸುತ್ತದೆ. ಕಾಲದ ಜೊತೆ ಈಗ ನೀನೂ ಜೊತೆಯಾಗಿದ್ದೀಯ. ಎಲ್ಲವನ್ನೂ ಎದುರಿಸಿ ನಿಲ್ಲಲು ಸ್ಥೈರ್ಯ ಬೇಕು ಜೊತೆಗೆ ನಮ್ಮವರು ಎಂಬುವವರು ಜೊತೆಗೆ ನಿಲ್ಲಬೇಕು. 

ನನ್ನ ಗರ್ಭದಲ್ಲೊಂದು ಕೂಸು ಮೂಡುತ್ತಿದೆ ಎಂದು ತಿಳಿದಾಗ ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ಆದರೆ, ಆ ಸಂತಸ ಹೆಚ್ಚು ದಿನ ಇರಲಿಲ್ಲ. ಕೆಲ ತಿಂಗಳ ನಂತರ ಹೆಣ್ಣು ಎಂಬ ಕಾರಣಕ್ಕೆ ನಿನ್ನನ್ನು ಕೊನೆಗೊಳಿಸುವ ಆಲೋಚನೆಯಲ್ಲಿದ್ದವರಿಗೆ, ನನ್ನ ನಿರ್ಧಾರ ತಿರುಗೇಟು ನೀಡಿತ್ತು. ಅಂದು ಅವರ ರಾಕ್ಷಸ ರೂಪ ಬಯಲಾಗುತ್ತಿರುವ ಸಂಧರ್ಭದಲ್ಲಿ ಅಚಾನಕ್ಕಾಗಿ ಅಪ್ಪ ಬಂದಿದ್ದರು. ನಾನು ನಿನ್ನೊಂದಿಗೆ ಮತ್ತೆ ಅಪ್ಪನ ರಾಜಕುಮಾರಿಯಾಗಿ ಪ್ರೀತಿಯ ಅಭೇದ್ಯ ಕೋಟೆಗೆ ಮರಳಿದ್ದೆ. ನನ್ನ ಮುದ್ದು ರಾಜಕುಮಾರಿಯನ್ನು ಕಾಣುವ ತವಕದಲ್ಲಿದ್ದೇನೆ.

ನನ್ನ ಪುಟ್ಟ ರಾಜಕುಮಾರಿಯ ಲೋಕ ನನ್ನದಕ್ಕಿಂತ ಭಿನ್ನವಾಗಿರಬೇಕು. ಭಿನ್ನವಾಗಿರಲಿದೆ ಸಹಾ.. ಅತ್ಯಾಚಾರಗಳೇ ಹೆಚ್ಚಿರುವ ಸಂಧರ್ಭದಲ್ಲಿ ಹೆಣ್ಣು ಕೂಸು ಅಂದರೆ ಭಯವಾಗುತ್ತದೆ. ಆದರೆ, ಆ ಭಯವನ್ನೆಲ್ಲಾ ಮೆಟ್ಟಿ ನಿಲ್ಲಬೇಕು. ನನ್ನ ಪುಟ್ಟ ರಾಜಕುಮಾರಿಯ ಕಾಲಿಗೆ ಗೆಜ್ಜೆ ತೊಡಿಸುವ ಆಸೆಯಿಲ್ಲ ಬದಲಿಗೆ ಬಲಗೊಳಿಸುವ ಶಕ್ತಿಯ ಗೆಜ್ಜೆ ತೋಡಿಸುತ್ತೇನೆ. ಅಬಲೆಯಾಗಿ ಬೆಳೆಸುವುದಿಲ್ಲ ಬದಲಿಗೆ ಸಬಲತೆಯೊಂದಿಗೆ ಕರುಣೆಯ ಮತ್ತು ಆತ್ಮವಿಶ್ವಾಸದ ಖನಿಯಾಗಿಸುತ್ತೇನೆ. ಬಂಗಾರದ ಪಂಜರದೊಳಗೆ ಕೂಡಿ ಹಾಕದೆ ಆಗಸವನ್ನು ಪರಿಚಯಿಸುತ್ತೇನೆ. ಏಳು ಮಲ್ಲಿಗೆ ತೂಕದ ಮಲ್ಲಿಗೆ ರಾಜಕುಮಾರಿಗೆ ಸ್ವರಕ್ಷಣೆಯ ಕಲೆಯನ್ನೂ ಕಲಿಸುತ್ತೇನೆ. ಮಾತನಾಡದಂತೆ ಅನ್ಯಾಯವನ್ನು ಸಹಿಸುವ ಬದಲಿಗೆ, ಮಾತನಾಡಿ ಅನ್ಯಾಯವನ್ನು ಮೆಟ್ಟಿ ನಿಲ್ಲುವಂತೆ ಮಾಡುತ್ತೇನೆ. ಮತ್ತೊಬ್ಬರ ದೃಷ್ಟಿಯಿಂದ ಅವಳು ನಿಲುಕದ ನಕ್ಷತ್ರದಂತೆ ದೂರ ಉಳಿಯುವಂತೆ ಮಾಡಲಾರೆ, ಬದಲಿಗೆ ಎಲ್ಲರೊಳಗೂ ಬೆರೆತು ಒಂದಾಗುತ್ತಾ ತಾನೇ ಅವರಿಗೆ ಒಂದು ದಾರಿದೀಪವಾಗುವಂತೆ ಮಾಡುವೆ. ನನ್ನ ರಾಜಕುಮಾರಿಯನ್ನು ರಕ್ಷಿಸಲು ಮತ್ತೊಬ್ಬರು ಬೇಕಾಗಿಲ್ಲ, ಬದಲಿಗೆ ಅವಳೇ ಮತ್ತೊಬ್ಬರನ್ನು ರಕ್ಷಿಸುವ ಛಾತಿಯುಳ್ಳವಳಾಗಬೇಕು.

ಪ್ರತಿಯೊಬ್ಬ ಹೆಣ್ಣು ಮಗಳು ಸಹಾ ರಾಜಕುಮಾರಿಯೇ ಆಗಿರುತ್ತಾಳೆ. ಆದರೆ, ದಿನಕಳೆದಂತೆ ಅವಳ ಸ್ಥಾನಮಾನ ಬದಲಾಗುತ್ತದೆ. ಆದರೆ, ಈ ರಾಜಕುಮಾರಿಯ ರಾಜಕುಮಾರಿ ವಿಭಿನ್ನವಾಗಿರಬೇಕು. ನನ್ನ ಕನಸಿನ ಸಾಕಾರ ರೂಪದ ರಾಜಕುಮಾರಿಯ ಬರುವಿಕೆಗಾಗಿ ಬಹಳಷ್ಟು ಕನಸು ಹೊತ್ತು ಕಾಯುತಿರುವೆ. ಇಷ್ಟೆಲ್ಲಾ ಕನಸನ್ನು ನನಸು ಮಾಡುವೆಯಲ್ಲವೇ..ಮುದ್ದು ಕಣ್ಮಣಿ..?

~ವಿಭಾ ವಿಶ್ವನಾಥ್

ಮಂಗಳವಾರ, ನವೆಂಬರ್ 19, 2019

ಅವನ ಸಬಲತೆ-ದುರ್ಬಲತೆಯ ನಡುವಲ್ಲಿ..


ಹೆಚ್ಚಿನಂಶದ ಹೆಣ್ಣುಮಕ್ಕಳು ಒಂದಲ್ಲಾಒಂದು ಬಾರಿ "ನಾನು ಪುರುಷನಾಗಿ ಹುಟ್ಟಬೇಕಿತ್ತು" ಅಂತಾ ಅಂದುಕೊಂಡಿರುತ್ತಾರೆ. ಪುರುಷ ಪ್ರಪಂಚದ ಸ್ವಚ್ಛಂದತೆ ಅನುಭವಿಸಲು ಕನಸು ಕಂಡಿರುತ್ತಾರೆ. ಆದರೆ ಅದೇ ಮನಸ್ಸಲ್ಲಿ "ಪುರುಷ ದ್ವೇಷಿ" ನಿಲುವು ಕೂಡಾ ಬಂದೇ ಇರುತ್ತದೆ. ಯಾವುದೋ ಅತ್ಯಾಚಾರದ ಸುದ್ದಿ ಕೇಳಿದಾಗ ಪುರುಷರ ಮೇಲೆ ಅಸಹ್ಯ ಹುಟ್ಟುವಂತಹಾ ಭಾವನೆ ಕೂಡಾ ಬಂದಿರುತ್ತದೆ. ಹಾಗಾದರೆ ಉಳಿಯುವುದು ಯಾವ ಭಾವನೆ? ನಿಮಗೆ ಇದಕ್ಕೆ ಉತ್ತರ ಕೊನೆಯಲ್ಲಿ ಸಿಗುತ್ತದೆ.

ಮಾರ್ಚ್ 8 ಅಂದಾಕ್ಷಣ "ವುಮೆನ್ಸ್ ಡೇ" ಎಂದು ನೆನಪಾಗುವಷ್ಟು ಸುಲಭಕ್ಕೆ "ಮೆನ್ಸ್ ಡೇ" ನೆನಪಾಗುವುದಿಲ್ಲ. ಹಾಗೆಂದು ಪುರುಷರು ಮೂಲೆಗುಂಪಾಗಿದ್ದಾರೆಂದೇನಲ್ಲ. ಮನೆಯೊಳಗಿದ್ದ ಸ್ತ್ರೀಯರು ಮನೆಯಾಚೆ ಬಂದಾಗ, ಸಾಧನೆ ಮಾಡಿದಾಗ ಆಚರಣೆ ಮಹತ್ವ ಪಡೆಯಿತು. ಅದೇ, ಪುರುಷ ಪ್ರಪಂಚದಲ್ಲಿ ಅಂತಹಾ ಬದಲಾವಣೆಯೇನೂ ಗೋಚರಿಸಲಿಲ್ಲ. ಮೊದಲಿನಿಂದಲೂ ಹೊರಗೇ ಇದ್ದವನು, ಸಾಧನೆ ಮಾಡಿದವನ ಆಚರಣೆಗೆಂದೂ ಅಷ್ಟೇನೂ ಮಹತ್ವ ಬರಲಿಲ್ಲವೇನೋ. ಆದರೆ, ಕೆಲವರಂತೂ ವರಾತ ತೆಗೆಯುತ್ತಾರೆ. ಮಹಿಳಾ ದಿನಾಚರಣೆಗೆ ನಾವು ಶುಭಾಷಯ ಕೋರಿದ್ದೆವಲ್ಲಾ ಎಂದು, ಹಾಗಾಗಿ ಮೊದಲಿಗೇ ಹೇಳಿಬಿಡುತ್ತಿದ್ದೇನೆ "ಪುರುಷರ ದಿನಾಚರಣೆ ಶುಭಾಷಯಗಳು"

"ಒರಟುತನವೆಂಬುದು ದುರ್ಬಲ ವ್ಯಕ್ತಿಯ ಬಲಾಡ್ಯತೆಯ ಸೋಗು" ಎಂದಿರುವನು ಎಮರ್ಸನ್. ಹೊರ ಜಗತ್ತಿಗೆ ಕಾಣುವ ಅವನ ರೂಪಕ್ಕಿಂತ ಮನಸ್ಸು ಬೇರೆಯೇ ಆಗಿರುತ್ತದೆಯಲ್ಲವೇ?
'+' ಎಂದು ಬಯಾಲಜಿಯ ಸಂಕೇತದಲ್ಲಿ ಗುರುತಿಸಿಕೊಳ್ಳುವ ಗಂಡು ನಿಜಕ್ಕೂ ಸಕಾರಾತ್ಮಕನೇ..?
ದೈಹಿಕವಾಗಿ ಗಟ್ಟಿಯಾಗಿರುವ ಗಂಡು ಮಾನಸಿಕವಾಗಿಯೂ ಅಷ್ಟೇ ಬಲಿಷ್ಠನೇ..?
ಖಂಡಿತಾ ಇಲ್ಲ. ಸ್ವಚ್ಛಂದತೆಯ ಮುಖವಾಡದ ಅಡಿಯಲ್ಲಿ ಗಂಡಿನ ಕೆಲವು ಭಾವನೆಗಳ ತೋರ್ಪಡಿಕೆಗಳು ಮುಚ್ಚಿ ಹೋಗಿದೆ.
ಪುರುಷ ದಿನಾಚರಣೆಯ ಈ ವರ್ಷದ ಘೋಷ ವಾಕ್ಯವೇನು ಗೊತ್ತಾ?
"ಧನಾತ್ಮಕ ಪುರುಷ ಮಾದರಿ[Positive male role models]". ಪುರುಷರಲ್ಲಿನ ಆದರ್ಶಗಳನ್ನು ಹೊರಜಗತ್ತಿಗೆ ಪರಿಚಯಿಸಲು, ಪುರುಷರ ಮಾನಸಿಕ ಆರೋಗ್ಯ, ಆತ್ಮಹತ್ಯೆ ತಡೆ, ದೈಹಿಕ ಆರೋಗ್ಯ ಸಮಸ್ಯೆಗಳ ನಿವಾರಣೆಗೆ ಹಾಗೂ ಅದರ ಕುರಿತು ಜಾಗೃತಿ ಮೂಡಿಸುವ ದಿನ ಇದು. 

ಇಂದು ಸುಲಭವಾಗಿ ಡ್ರಗ್ಸ್, ಧೂಮಪಾನ, ಮದ್ಯಪಾನದ ಮೊರೆಹೋಗಿ ಮಾನಸಿಕ ಸಮಸ್ಯೆಗಳನ್ನು ಮರೆಯುತ್ತೇವೆ ಎನ್ನುವ ಕಾರಣ ನೀಡಿ ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿರುವವರು ಪುರುಷರೇ. ಹೆಣ್ಣಿನಂತೆ ಆರಾಮವಾಗಿ ಗಂಡು ತನ್ನ ಭಾವನೆಗಳನ್ನು ಬಿಚ್ಚಿಡಲಾರ. ಅದರಲ್ಲೂ ಅಹಂ ತೋರಿಸುತ್ತಾನೆ. ಹೆಣ್ಣಿನ ಹತ್ತಿರ ಪ್ರೀತಿಯನ್ನು ತೋರಿಸುವಷ್ಟು ಸುಲಭವಾಗಿ ಸಮಸ್ಯೆಗಳನ್ನು ತೆರೆದಿಡಲಾರ. ಕಾರಣ, ಕಾಳಜಿ. ತಮ್ಮ ಪ್ರೀತಿ ಪಾತ್ರರು ನೋಯಬಾರದು ಎಂಬ ಕಾಳಜಿ. ಕುಟುಂಬದ ಕುರಿತು ಕಾಳಜಿ ತೋರುವವ ತನ್ನ ಆರೋಗ್ಯದ ಕುರಿತು ಅಷ್ಟು ಅಸ್ಥೆ ವಹಿಸಲಾರ. ಹಾಗಾಗಿ, ಚಟಕ್ಕೆ ಬಲಿಪಶುವಾಗುತ್ತಾ ನಡೆಯುತ್ತಾನೆ.

ಪ್ರೀತಿ ಕೊಟ್ಟವನು ಮರು ಪ್ರೀತಿಯ ನಿರೀಕ್ಷೆಯಲ್ಲಿರುತ್ತಾನೆ. ಅಕಸ್ಮಾತ್, ಮರು ಪ್ರೀತಿ ಸಿಗದಿದ್ದರೆ ಮೃಗಕ್ಕಿಂತಲೂ ವ್ಯಗ್ರವಾಗಿ, ಕಠೋರವಾಗಿ ವರ್ತಿಸಬಲ್ಲ. (ಕೆಲವರು ಮಾತ್ರ ಇದಕ್ಕೆ ಅಪವಾದ ಎಂಬಂತಿರಬಹುದು) ಆದರೆ ಕಾರಣವನ್ನು ಮಾತ್ರ ಬಾಯಿ ಬಿಟ್ಟು ಹೇಳುವುದಿಲ್ಲ.

ಗಂಡಿಗೆ ಭಾವನೆಗಳು ಸುಲಭವಾಗಿ ಅರ್ಥವಾಗುವುದಿಲ್ಲ ಎನ್ನುತ್ತಾರೆ. ಶುದ್ಧ ಸುಳ್ಳು ಅದು. ಕೆಲವೊಮ್ಮೆ ಅದರ ಕುರಿತು ಅವನು ಗಮನ ನೀಡಿರುವುದಿಲ್ಲ ಇಲ್ಲವೇ ಅರ್ಥವಾದರೂ ಅರ್ಥವಾಗದಂತೆ ನಟಿಸುತ್ತಾನೆ.ಮಗಳು ಮಾಡಿದ ಅಡುಗೆಯಲ್ಲಿ ಅಥವಾ ಕೆಲಸದಲ್ಲಿ ಏನೇ ದೋಷವಿದ್ದರೂ ಒಪ್ಪಿಕೊಳ್ಳುವ ಅಪ್ಪ, ಹೆಂಡತಿಯ ಅದೇ ದೋಷವನ್ನು ಹೇಳುತ್ತಾನೆ. ಆದರೆ, ಅಮ್ಮನಿಗೆ ಅದನ್ನು ಎತ್ತಿ ಆಡುತ್ತಾನೆ. ಗಂಡಸಿನ ಪಾತ್ರ ಇಲ್ಲಿ ಬದಲಾಗುತ್ತಾ ಹೋಗುತ್ತದೆ. ಅವನು ಒಬ್ಬನೇ ಆದರೂ ಭಾವಗಳ ತೋರ್ಪಡಿಸುವುದರಲ್ಲಿ ವಿಭಿನ್ನ ಪಾತ್ರ ವಹಿಸುತ್ತಾನೆ. ವಯಸ್ಸು ಮತ್ತು ಅನುಭವ ಅದೆಷ್ಟೇ ಪರಿಪಕ್ವವಾದರೂ ಈ ನಡವಳಿಕೆ ಸರ್ವೇಸಾಮಾನ್ಯ. [ನಾನು ಗಮನಿಸಿದಂತೆ]

"ಕಮ್ಯೂನಿಕೇಷನ್ ಗ್ಯಾಪ್" ಎನ್ನುವುದು ಅಮ್ಮ-ಮಕ್ಕಳಲ್ಲಿ ಅದರಲ್ಲೂ ಅಮ್ಮ-ಮಗಳಲ್ಲಿ ಬರುವುದೇ ಇಲ್ಲ. ಆದರೆ ಅಪ್ಪ ಮಕ್ಕಳಲ್ಲಿ ಈ ಗ್ಯಾಪ್ ಕೊಂಚ ಹೆಚ್ಚು. ಅಪ್ಪ-ಮಗಳಲ್ಲಿ ಇರುವ ಸಂವಹನ ಅಪ್ಪ-ಮಗನಲ್ಲಿ ಇರುವುದು ತುಂಬಾ ಕಡಿಮೆ. ಇಲ್ಲಿ ಪ್ರೀತಿ ಇರುವುದಿಲ್ಲ ಎಂದಲ್ಲ, ಪ್ರೀತಿಯನ್ನು ತೋರ್ಪಡಿಸುವುದಿಲ್ಲ. ಕಾಳಜಿಯನ್ನು ಮಾತಿಗಿಂತ ಹೆಚ್ಚಾಗಿ ಕೃತಿಯಲ್ಲಿ ತೋರಿಸುತ್ತಾರೆ. ಆದರೆ, ಮಕ್ಕಳಿಗೆ ಇದು ಅರ್ಥವಾಗುವುದು ತುಂಬಾ ತಡವಾಗಿ. ಇದೇ ಕಾರಣದಿಂದಾಗಿ ಎಷ್ಟೋ ಮನಸ್ತಾಪಗಳಾಗಿ ಬಿಟ್ಟಿರುತ್ತವೆ. ಮನಬಿಚ್ಚಿ ಮಾತಾಡಿದಾಕ್ಷಣ ಎಲ್ಲವೂ ಸರಿಯಾಗಿಬಿಡುತ್ತದೆಂದೇನಲ್ಲ. ಆದರೆ, ಭಾಂದವ್ಯ ಗಟ್ಟಿಯಾಗುತ್ತದೆ. ಮಾನಸಿಕ ಕ್ಷೋಭೆಗೆ, ಚಿಂತೆಗೆ ಅಲ್ಲಿ ಜಾಗವೇ ಇರುವುದಿಲ್ಲ.   

ಇನ್ನು ಹದಿಹರೆಯದ ಗಂಡು ಮಕ್ಕಳು ಕೆಲಸ ಸಿಕ್ಕಿಲ್ಲದ್ದಕ್ಕೆ, ಪ್ರೀತಿಯಲ್ಲಿ ಮೋಸ ಹೋಗಿದ್ದಕ್ಕೆ, ಪರೀಕ್ಷೆಯಲ್ಲಿ ಸೋತದಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆತ್ಮಹತ್ಯಾ ಪ್ರಕರಣಗಳಲ್ಲಿ ಪ್ರಸ್ತುತ ಅಂಕಿ-ಅಂಶಗಳ ಪ್ರಕಾರ ಗಂಡು ಮಕ್ಕಳದ್ದೇ ಮೇಲುಗೈ. ಕಾರಣ ಇಷ್ಟೇ, ಆ ಕ್ಷಣದಲ್ಲಿ ಅವರು ಮಾನಸಿಕ ದುರ್ಬಲರು. "ನೀನು ಸೋತಿರಬಹುದಷ್ಟೇ, ಸತ್ತಿಲ್ಲ", "ಸೋಲೆಂಬುದು ಅಲ್ಪವಿರಾಮ" ಎಂದು ಹೇಳಲು ಯಾರೂ ಇರುವುದಿಲ್ಲ.ಅಂದರೆ, ಇವರ ಈ ವಿಚಾರಗಳ ಕುರಿತು ಮನಬಿಚ್ಚಿ ಮಾತನಾಡಿರುವುದಿಲ್ಲ. ಎಲ್ಲರ ಮುಂದೆ ಅತ್ತರೆ ಅಥವಾ ದುಗುಡವನ್ನು ಬಿಚ್ಚಿಟ್ಟರೆ ಹೀಯಾಳಿಸುತ್ತಾರೆ ಎಂಬ ಕಾರಣಕ್ಕೆ ಭಾವನೆಗಳನ್ನೆಲ್ಲಾ ಅದುಮಿ ಬದುಕಿಬಿಟ್ಟಿರುತ್ತಾರೆ.

ಗಂಡು ಎಲ್ಲಾ ಪಾತ್ರವನ್ನೂ ನಿರ್ವಹಿಸಬಲ್ಲ. ಆದರೆ, ಸಮರ್ಥವಾಗಿ ಎಂಬುದು ಮಾತ್ರ ಅನುಮಾನ. ಹಾಗಾಗಿಯೇ ಒಬ್ಬರಿಗೆ ಒಳ್ಳೆಯವನಾಗಿ ಕಂಡವರು ಮತ್ತೊಬ್ಬರ ದೃಷ್ಟಿಯಲ್ಲಿ ಕೆಟ್ಟವರು. ಈ ಕೆಟ್ಟ-ಒಳ್ಳೆಯತನ ಮತ್ತು ಸಬಲತೆ-ದುರ್ಬಲತೆಯನ್ನು ಅರಿತು ಬದಲಾಯಿಸಿಕೊಂಡು ಬದುಕುವುದು ಅವನಿಗೇ ಬಿಟ್ಟಿದ್ದು. ಯಾರೋ ಕೆಲವರು ಮಾಡುವ ತಪ್ಪಿಗೆ ಎಲ್ಲರನ್ನೂ ದ್ವೇಷಿಸುವುದು ಸರಿಯಲ್ಲ ಹಾಗೆಯೇ ಕಣ್ಣಿಗೆ ಕಂಡದೆಲ್ಲ ನಿಜವೂ ಅಲ್ಲ..

ಅಪ್ಪ, ಅಣ್ಣ, ತಮ್ಮ, ಸ್ನೇಹಿತ, ಗಂಡ, ಪ್ರಿಯಕರ, ಮಗ, ಅಜ್ಜ, ಚಿಕ್ಕಪ್ಪ, ದೊಡ್ಡಪ್ಪ, ಮಾವ, ಶಿಕ್ಷಕ ಎಲ್ಲವೂ ಆಗಿರುವ ಪುರುಷರಿಗೆ "ಅಂತಾರಾಷ್ಟ್ರೀಯ ಪುರುಷ ದಿನಾಚರಣೆ"ಯ ಶುಭಾಷಯಗಳು. ದೈಹಿಕವಾಗಿ ಸಬಲರಾಗಿರುವಷ್ಟೇ ಮಾನಸಿಕವಾಗಿಯೂ ಸಬಲರಾಗಿ ಎಂದು ಹಾರೈಸುವೆ.

~ವಿಭಾ ವಿಶ್ವನಾಥ್

ಗುರುವಾರ, ನವೆಂಬರ್ 14, 2019

ಮಾಸದ ದಾಸಸಾಹಿತ್ಯ


ಸುಮಾರು 12 ರಿಂದ 15 ನೆ ಶತಮಾನದಲ್ಲಿ, ನಡುಗನ್ನಡದಲ್ಲಿ ಪ್ರಸಾರವಾದ ಸಾಹಿತ್ಯಗಳು ವಚನ ಸಾಹಿತ್ಯ ಮತ್ತು ದಾಸಸಾಹಿತ್ಯ. ದಾಸಸಾಹಿತ್ಯವು ಭಕ್ತಿಯನ್ನು ಮೂಲವಾಗಿ ಧ್ವನಿಸುತ್ತಾ, ವೇದಗಳ ಮುಂದುವರಿದ ಭಾಗಗಳಂತೆ ಭಾಸವಾಗುತ್ತಾ ಜನಸಾಮಾನ್ಯರಿಗೂ ತಲುಪುತ್ತಿವೆ.

ಹರಿದಾಸರು, ಕನಕದಾಸರು, ಪುರಂದರದಾಸರು, ವಿಜಯದಾಸರು, ಗೋಪಾಲದಾಸರು, ಪ್ರಾಣೇಶರು ಮುಂತಾದವರಿಂದ ದಾಸಸಾಹಿತ್ಯ ರೂಪುಗೊಂಡಿಡ್ಡರೂ ಪುರಂದರದಾಸರು ಮತ್ತು ಕನಕದಾಸರು ಅದರಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ದಾಸ ಸಾಹಿತ್ಯವು  ಸಾಂಗವಾಗಿ ಹಾಡುವಂತೆ ರೂಪಿತವಾಗಿರುವುದರಿಂದ ಜನಸಾಮಾನ್ಯರ ಬಾಯಲ್ಲಿ ಕೀರ್ತನೆಗಳ ರೂಪದಲ್ಲಿ ಇವು ಇಂದಿಗೂ ಪ್ರಸ್ತುತವಾಗಿವೆ. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿಯೂ ಇವುಗಳಿಗೆ ವಿಶಿಷ್ಟ ಸ್ಥಾನವಿದೆ. ಪುರಂದರದಾಸರು ಕರ್ನಾಟಕದ ಮೂಲಪುರುಷರೂ ಹೌದು. ಜೀವನದಿಂದ ತ್ಯಾಗದ ಪಾಠ ಕಲಿತ ಪುರಂದರದಾಸರು, ಅಹಿಂಸೆಯ ಪಾಠ ಕಲಿತ ಕನಕದಾಸರು ಇಬ್ಬರೂ ಜನರಿಗೆ ಮುಕ್ತಿ ಮಾರ್ಗವನ್ನು ಭೋಧಿಸುವ ಉತ್ತಮ ಸಾಹಿತ್ಯ ಮತ್ತು ಸಂಗೀತದ ಸಾಂಗತ್ಯವನ್ನು ನೀಡಿದ್ದಾರೆ.

ಆಧ್ಯಾತ್ಮ, ತತ್ವ, ನೀತಿಗಳನ್ನು ಕ್ಲಿಷ್ಟವಿಲ್ಲದ ಪದಗಳಲ್ಲಿ ಹೇಳುತ್ತಾರೆ. ಅದರಲ್ಲಿ ಕೆಲವು ಪದ್ಯಗಳನ್ನು ಮಾತ್ರ ನಾನು ಇಲ್ಲಿ ಉಲ್ಲೇಖಿಸಿದ್ದೇನೆ.

"ಅಡಿಗೆಯನ್ನು ಮಾಡಬೇಕಣ್ಣ, ನಾನೀಗ ಜ್ಙಾನದ ಅಡುಗೆಯನ್ನು ಮಾಡಬೇಕಣ್ಣ" ಎನ್ನುತ್ತಾ ಹಸಿವು, ಅಡುಗೆಯನ್ನು ಜ್ಙಾನಕ್ಕೆ ಹೋಲಿಸುತ್ತಾರೆ ಕನಕದಾಸರು. "ಹೃದಯ ಹೊಲವನು ಮಾಡಿ, ತನುವ ನೇಗಿಲ ಮಾಡಿ, ನಾಲಗೆಯ ಕೂರಿಗೆ ಮಾಡಿ ಬಿತ್ತಿರಯ್ಯ" ಎನ್ನುತ್ತಾ ಬದುಕನ್ನು ಕೃಷಿಗೆ ಹೋಲಿಸುತ್ತಾ ಸಂಬಂಧಗಳನ್ನುಉ ಒಗ್ಗೂಡಿಸ ಹೊರಡುತ್ತಾರೆ. "ಕುಲ ಕುಲ ಕುಲಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರು ಬಲ್ಲಿರಾ?" ಎಂದು ಪ್ರಶ್ನಿಸುತ್ತಾ ಧರ್ಮ, ಜಾತಿ, ಕುಲಗಳ ಪರಿಕಲ್ಪನೆಯನ್ನು ಅಲ್ಲಗಳೆಯುತ್ತಾ "ಆತ್ಮಕ್ಕೆ ಕುಲವಿಲ್ಲ" ಎಂದೆನ್ನುತ್ತಾರೆ. "ನೀ ಮಾಯೆಯೊಳಗೋ, ನಿನ್ನೊಳು ಮಾಯೆಯೋ?" ಎನ್ನುತ್ತಾ ಆತ್ಮವಿಮರ್ಶೆ ಹಚ್ಚುತ್ತಾರೆ.

"ಏನು ಬೇಡಲೋ ದೇವ ನಿನ್ನ" ಎನ್ನುವ ವ್ಯಾಸರಾಯರು ಕೊಡುವವನೂ ನೀನೇ, ನಿನ್ನ ಹತ್ತಿರ ಬೇಡುವುದೇನಿದೆ ಎಂದು ಪ್ರಶ್ನಿಸುತ್ತಾರೆ. ಇವರ ಪುರಂದರದಾಸರು ಸಮಾಜದ ಓರೆಕೋರೆಗಳನ್ನು ತಿದ್ದುತ್ತಾ, ಎಲ್ಲರೊಳಗೊಂದಾಗಿ ಬದುಕುತ್ತಾ, ಜನಸಾಮಾನ್ಯರ ನಡುವೆಯೇ ಬದುಕಿದವರು. ಸುಳಾದಿ, ಉಗಾಭೋಗ,ಕೀರ್ತನೆಗಳ ಮೂಲಕ ತಮ್ಮ ಭೋಧನೆಯನ್ನು ಪಸರಿಸುತ್ತಾ ಜನಮಾನಸದಲ್ಲಿ ಶಾಶ್ವತವಾಗಿರುವವರು.

"ಈಸಬೇಕು ಇದ್ದು ಜೈಸಬೇಕು ಹೇಸಿಗೆ ಸಂಸಾರದಲ್ಲಿ, ಆಸೆ ಲೇಶ ಇಡದಾಂಗೆ ತಾಮರಸಜಲದಂತೆ" ಎನ್ನುತ್ತಾ ನೀರಿನ ಮೇಲೆ ಪದ್ಮಪತ್ರೆಯಂತೆ ಬದುಕು ಎನ್ನುತ್ತಾರೆ. "ಆಚಾರವಿಲ್ಲದ ನಾಲಿಗೆ, ನಿನ್ನ ನೀಚ ಬುದ್ದಿಯ ಬಿಡು ನಾಲಿಗೆ" ಎನ್ನುತ್ತಾ ಮಾತು ಹೇಗಿರಬೇಕೆಂಬ ಸ್ಥೂಲ ಪರಿಚಯ ಮಾಡಿಕೊಡುತ್ತಾರೆ. "ಎಲ್ಲಾನು ಬಲ್ಲೆನೆಂಬುವಿರಲ್ಲ, ಅವಗುಣ ಬಿಡಲಿಲ್ಲ" ಎಂದೆನ್ನುತ್ತಾ ತಾವೇ ಮೇಧಾವಿಗಳೆಂದು ಮೆರೆಯುತ್ತಿರುವವರಿಗೆ ಚಾಟಿ ಏಟು ನೀಡುತ್ತಾರೆ. "ನಿಂದಕರಿರಬೇಕು.. ಹಂದಿಯಿದ್ದರೆ ಕೇರಿ ಹ್ಯಾಂಗೆ ಶುದ್ದಿಯೋ ಹಂಗೆ" ಎನ್ನುತ್ತಾ ಕೆಟ್ಟತನದಲ್ಲೂ ಒಳ್ಳೆಯತನವನ್ನು ಹುಡುಕಲು ಹೇಳಿಕೊಡುತ್ತಾರೆ. "ಬೇವು ಬೆಲ್ಲದೊಳಿಡಲೇನು ಫಲ, ಹಾವಿಗೆ ಹಾಲೆರೆದೇನು ಫಲ" ಎನ್ನುತ್ತಾ ಮೂಲಗುಣ ಸುಟ್ಟರೂ ಹೋಗದು, ಅಂತಹಾ ಬದಲಾವಣೆಗಳು ನಿರರ್ಥಕ ಎನ್ನುತ್ತಾರೆ. "ನೋಡದಿರು, ಪರಸ್ತ್ರೀಯರ ನೋಡಿದರೆ ಕೇಡಹುದು ತಪ್ಪದಿದಕೋ" ಎನ್ನುತ್ತಾ ಪುರಾಣ್ದ ವಾಲಿ, ರಾವಣ, ಇಂದ್ರರ ಜೀವನವನ್ನು ನೆನಪಿಸುತ್ತಾ ಬುದ್ದಿ ಹೇಳುತ್ತಾರೆ. ಪರ ಧನ ಮತ್ತು ಲೋಭಿಗಳಿಗೆ "ದುಗ್ಗಾಣಿ ಎಂಬುದು ಬಲು ಕೆಟ್ಟದಣ್ಣ" ಎನ್ನುತ್ತಾ ಹಣದ ವರ್ಜನೆಗೆ ಬುದ್ದಿ ಮಾತು ಹೇಳುತ್ತಾರೆ. "ಜಪವ ಮಾಡಿದರೇನು, ತಪವ ಮಾಡಿದರೇನು, ಕಪಟಗುಣ ವಿಪರೀತಕಲುಷವಿದ್ದವರು" ಎನ್ನುತ್ತಾ ಮೇಲಿನ ತೋರಿಕೆಯ ಶುದ್ದತೆಗಿಂತ, ಅಂತರಂಗದ ಶುದ್ದತೆ ಮುಖ್ಯ ಎನ್ನುತ್ತಾರೆ. "ಎಲ್ಲಾರು ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ, ತುತ್ತು ಹಿಟ್ಟಿಗಾಗಿ" ಎಂಬ ಜೀವನದ ಪರಮ ಸತ್ಯವನ್ನು ಬಿಚ್ಚಿಡುತ್ತಾರೆ.

ಈ ತತ್ವದ ನುಡಿಗಳು ಸಾರ್ವಕಾಲಿಕ ನುಡಿಗಳಂತೆ ಧ್ವನಿಸುತ್ತವೆ, ಇವುಗಳ ಮೂಲಕ ಅವರು ಜೀವನ ಮೌಲ್ಯವನ್ನು ತಿಳಿಸುತ್ತಾ, ಎಲ್ಲರಲ್ಲೂ ಸಾಮಾಜಿಕ ಕಳಕಳಿಯನ್ನು ಮೂಡಿಸುತ್ತಾರೆ. ಸಂಸಾರದ ವೈಯಕ್ತಿಕ ಬಂಧನವನ್ನು ತೊರೆದು, ಜಪ-ತಪಗಳಿಂದ ಮುಕ್ತಿ ಎನ್ನುತ್ತಾ ತಮ್ಮ ವೈಯಕ್ತಿಕ ಜೀವನಕ್ಕಷ್ಟೇ ಬದುಕನ್ನು ಮುಡಿಪಾಗಿರಿಸದೆ, ಸಮಾಜದ ಸಮಸ್ಯೆಗಳನ್ನು, ಮೂಡನಂಬಿಕೆಗಳನ್ನು ಹೊಡೆದೋಡಿಸುತ್ತಾ ಜೀವಂತ ಉದಾಹರಣೆಯಾದರು. ಆತ್ಮ ಶುದ್ದಿಗೆ ಮಾರ್ಗ ತೋರುತ್ತಾ ಸಮಾಜವನ್ನು ಸುಧಾರಿಸಿದರು.

ದಾಸಸಾಹಿತ್ಯದ ದಾಸರ ಪದಗಳು ದೇವರನಾಮಗಳೆಂದೂ ಪ್ರತೀತಿಯಾಗಿವೆ. ಈ ದಾಸರ ಪದಗಳನ್ನು ಇಂದಿಗೂ ತಮಿಳು ನಾಡಿನಲ್ಲಿ ಸಂಗೀತ ಕಛೇರಿಯ ಕೊನೆಯಲ್ಲಿ ಹಾಡಿಯೇ ಹಾಡುತ್ತಾರೆ. ಬರೀ ತತ್ವವಷ್ಟೇ ಅಲ್ಲ, ಸವಿನುಡಿಯಂತೆ ಭಾಸವಾಗುವ ಇವು ಕೆಲವೊಮ್ಮೆ ಛಾಟಿ ಏಟುಗಳಂತೆಯೂ ಅನ್ನಿಸುತ್ತವೆ. ಇನ್ನು ಕೆಲವು ಒಗಟಿನಂತೆ ಒಳಾರ್ಥವನ್ನು ಹೊಂದಿವೆ. ಪ್ರಸ್ತುತ ದಿನಗಳ ಸಾಮಾಜಿಕ ಪರಿಸ್ತಿತಿಗೂ ಇವು ಹೊಂದಿಕೆಯಾಗುವಂತಿವೆ. ಈಗಿನ ಪರಿಸ್ಥಿತಿ ಅಂದಿಗಿಂತ ಕೊಂಚ ಭಿನ್ನವಾಗಿರಬಹುದಷ್ಟೇ.. ಆದರೆ ಮೌಡ್ಯ, ಪರ ಸ್ತ್ರೀ ಮತ್ತು ಹೊನ್ನು-ಕಾಸಿಗೆ ಆಶಿಸುವುದು ಇನ್ನೂ ಕಡಿಮೆಯಾಗಿಲ್ಲ. ಕೇಳುವವರು ಇದನ್ನು ಅರಿತು ಆಚರಿಸಿದರೆ ಅವರ ಸಾಮಾಜಿಕ ಕಳಕಳಿಗೆ ಉತ್ತಮ ಪ್ರತಿಫಲ ಸಿಕ್ಕಂತಾಗುತ್ತದೆ. ಮತ್ತು ದಾಸಸಾಹಿತ್ಯ ಮತ್ತು ಅದರ ಹರಿಕಾರರು ಬದುಕಿನಲ್ಲಿ ಮಾಸದೆ ಉಳಿದುದರಲ್ಲಿ ಸಂಶಯವೇ ಇಲ್ಲ.

~ವಿಭಾ ವಿಶ್ವನಾಥ್

ಭಾನುವಾರ, ನವೆಂಬರ್ 10, 2019

ಒಲವಿನ ಜೊತೆ ಮಿಳಿತ


ಅನ್ಯಮನಸ್ಕಳಾಗಿ ಸಿರಿಶಾ ಹೊರಜಗುಲಿಯ ಮೇಲೆ ಕುಳಿತು ತುಳಸಿಕಟ್ಟೆಯ ಮೇಲೆ ಹಚ್ಚಿಟ್ಟ ದೀಪವನ್ನೇ ದೃಷ್ಟಿಸುತ್ತಾ ಕುಳಿತಿದ್ದಳು . ಎಲ್ಲೆಡೆಯೂ ಬೆಳಕಿತ್ತು ಆದರೆ ಸಿರಿಶಾಳ ಮನದಲ್ಲಿ ಮಾತ್ರ ಕಾರ್ಗತ್ತಲು. ಎಲ್ಲವೂ ಸರಿ ಇದ್ದಿದ್ದರೆ ಅವಳು ತನ್ನ ಗಂಡನೊಟ್ಟಿಗೆ ಅವನ ಮನೆಯಲ್ಲಿರುತ್ತಿದ್ದಳು. ಆಡಲೂ ಆಗದೆ, ಅನುಭವಿಸಲೂ ಆಗದೆ ಸಿರಿಶಾ ನಗೆಯ ಮೇಲ್ಮುಸುಕು ಹೊದ್ದು ದೀಪವನ್ನೇ ದೃಷ್ಟಿಸುತ್ತಾ ಕುಳಿತಿದ್ದಾಳೆ. ಮನದಲ್ಲಿ ಅಲ್ಲೋಲಕಲ್ಲೋಲವೇ ನಡೆಯುತ್ತಿದ್ದರೂ ಅದನ್ನು ಮರೆಮಾಚಿ ನಗುವುದು ಹೆಣ್ಣುಮಕ್ಕಳಿಗೆ ಹೊಸದೇನೂ ಅಲ್ಲವಲ್ಲ. ಸಿರಿಶಾಳಾ ಮನದೊಳಗೆ ಆಲೋಚನೆಗಳ ಮಹಾಪೂರವೇ ಭೋರ್ಗರೆಯುತ್ತಿತ್ತು. ಅದಕ್ಕೆ ತಡೆಯೊಡ್ಡಿದ್ದು ವೆಂಕಟರಾಯರ ಧ್ವನಿ. "ಮಗೂ, ಹೊರಗಡೆ ಒಬ್ಬಳೇ ಯಾಕೆ ಕೂತಿದ್ದೀಯ? ಬಾ ಇಲ್ಲಿ" ಎಂದರು. ಸಿರಿಶಾ ದಿಗ್ಗನೆದ್ದು "ಬಂದೆ ಅಪ್ಪಾ, ಸುಮ್ಮನೆ ಕೂತಿದ್ದೆ ಅಷ್ಟೇ.." ಎನ್ನುತ್ತಾ ಒಳನಡೆದಳು. "ಕಾಫಿ ಏನಾದರೂ ಬೇಕಿತ್ತೇನಪ್ಪಾ?" ಎಂದಳು. "ಇಲ್ಲಮ್ಮಾ, ಹಾಗೇನಿಲ್ಲ. ಬಾ ಕೂತ್ಕೋ. ನಿನ್ನ ಸಂಗೀತ ಕೇಳಿ ಬಹಳ ದಿನ ಆಯಿತು. ಯಾಕೋ ಹಾಡು ಕೇಳೋ ಆಸೆಯಾಗಿದೆ. ಹಾಡ್ತೀಯೇನಮ್ಮಾ?" ಎಂದರು. "ಆಯ್ತಪ್ಪ, ಹಾಡ್ತೀನಿ" ಎಂದಳು.
"ಲೋಕದ ಕಣ್ಣಿಗೆ ರಾಧೆಯು ಕೂಡಾ
ಎಲ್ಲರಂತೆ ಒಂದು ಹೆಣ್ಣು"
ಭಾವಗೀತೆಯನ್ನು ಸುಶ್ರಾವ್ಯವಾಗಿ ಹಾಡ್ತಾ ಇದ್ದಳು. ಮೈ ಮರೆತು ಮಗಳು ಹಾಡ್ತಾ ಇದ್ದರೆ, ಲೋಕವನ್ನೇ ಮರೆತು ಅಪ್ಪ ಕೇಳ್ತಾ ಇದ್ದರು.

ಸಿರಿಶಾಳದ್ದು ದೈವದತ್ತವಾಗಿ ಬಂದ ಕಂಠಸಿರಿ. ಸಂಗೀತ ಶಾಲೆಗೆಲ್ಲಾ ಹೋಗಿ ಸಂಗೀತ ಕಲಿತಿರಲಿಲ್ಲ. ರೇಡಿಯೋ ಕೇಳುತ್ತಾ, ಕೇಳುತ್ತಾ ಹಾಗೇ ಧ್ವನಿ ಸೇರಿಸುತ್ತಾ ಇದ್ದಳು. ವೆಂಕಟರಾಯರಿಗೆ ಇವಳನ್ನು ಸಂಗೀತ ಶಾಲೆಗೆ ಸೇರಿಸುವ ಆಸೆ. ಆದರೆ, ಅವರ ಆಸೆ ಈಡೇರಿರಲಿಲ್ಲ ಇದಕ್ಕೆ ಕಾರಣ ಅವರ ಹೆಂಡತಿ ಶಾಂತಲಾ. "ಅವಳಿಗೆ ಅದೆಲ್ಲಾ ಯಾಕೆ? ಅದಕ್ಕೆ ಸುರಿಯೋ ದುಡ್ಡಲ್ಲಿ ಅವಳಿಗೆ ಒಡವೆ ಮಾಡಿಸಿದರೆ ಮುಂದಕ್ಕೆ ಉಪಯೋಗಕ್ಕಾದರೂ ಬರುತ್ತೆ. ಹಾಡು, ಕುಣಿತ ಅಂತಾ ಕಲಿತು ಊರೂರು ತಿರುಗುವುದೇನೂ ಬೇಡ ಅವಳು" ಎಂದರು. ಕೈಯಲ್ಲಿದ್ದದ್ದನ್ನು ತೋರಿಸಿ ಏನೆಲ್ಲಾ ಹೇಳಬೇಕೆಂದುಕೊಂಡು ಬಂದಿದ್ದ ಸಿರಿಶಾಳ ಮಾತು ಅಂದು ಗಂಟಲಲ್ಲೇ ಉಳಿಯಿತು.  ಏನೋ ಸದ್ದಾಯಿತೆಂದು ರಾಯರು ತಿರುಗಿ ನೋಡಿದರೆ, ಸಿರಿಶಾಳ ಕೈಯ್ಯಲ್ಲಿದ್ದ ಪ್ರಶಸ್ತಿ ಫಲಕ ಕೆಳಗೆ ಬಿದ್ದಿತ್ತು. ರಾಯರಿಗೆ ಮತ್ತೇನೂ ಹೇಳಲೂ ತೋಚಲಿಲ್ಲ. ಹೆಂಡತಿಯ ಮಾತಿಗೆ ಅವರು ಪ್ರತಿ ಮಾತನಾಡಿದ್ದೇ ಇಲ್ಲ. ಇತ್ತ ಸಿರಿಶಾಳ ಸಂಗೀತದ ಕನಸು ಸಹಾ ನೆಲಕ್ಕೆ ಬಿದ್ದು ಮಣ್ಣಾಗಿತ್ತು. ಆದರೆ, ಸಿರಿಶಾ ಇಷ್ಟಕ್ಕೆಲ್ಲಾ ಕೈ ಚೆಲ್ಲಿ ಕೂರಲಿಲ್ಲ. ರೇಡಿಯೋದಲ್ಲಿ ಬರುವ ಗಾಯನಗಳನ್ನು ಆಲಿಸುತ್ತಾ ಅಲ್ಲಿ ಹಾಡುವ ಗಾಯಕರನ್ನೇ ಗುರುವೆಂದು ಸ್ವೀಕರಿಸಿ ತನ್ನ ಸಂಗೀತಾಭ್ಯಾಸವನ್ನು ಮುಂದುವರಿಸುತ್ತಿದ್ದಳು.

ಶಾಂತಲಾ ಸಿರಿಶಾಳಿಗೆ ಮಲತಾಯಿಯೇನಲ್ಲ. ಆದರೆ ಶಾಂತಲಾ ಬೆಳೆದು ಬಂದ ವಾತಾವರಣ ಮತ್ತು ಆ ಕಾಲಘಟ್ಟದ ಸಂಕುಚಿತ ಮನೋಭಾವ ಅವಳಲ್ಲಿಯೂ ಬೆಳೆದು ಬಂದಿತ್ತು ಅಷ್ಟೇ. ಹೆಣ್ಣು ಮಕ್ಕಳನ್ನು ಒಳ್ಳೆಯ ಮನೆ ಸೇರಿಸಿದರೆ ಅಲ್ಲಿ ಅವರು ಒಳ್ಳೆಯತನದಿಂದ ನಡೆದುಕೊಂಡರೆ ಮನೆಗೆ ಗೌರವ. ಇದೇ ತನ್ನ ಜೀವನದ ಪರಮಗುರಿ ಎಂಬಂತೆ ಮಗಳಿಗೆ ಸಂಸ್ಕಾರದ ಪಾಠಗಳನ್ನು ಮಾಡುತ್ತಿದ್ದರು. ಸಿರಿಶಾ ಹಾಡು ಹೇಳುವುದಕ್ಕೆ ಅವರ ಅಭ್ಯಂತರವಿಲ್ಲ ಆದರೆ ತರಬೇತಿ, ಕಛೇರಿ ಇವೆಲ್ಲವನ್ನೂ ಅವರು ಒಪ್ಪುತ್ತಿರಲಿಲ್ಲ.

ಸಿರಿಶಾ ವೆಂಕಟರಾಯರು ಮತ್ತು ಶಾಂತಲಾರವರ ಏಕೈಕ ಸಂತಾನ, ಒಬ್ಬಳೇ ಮಗಳಾದರೂ ಹೆಣ್ಣು ಎಂಬ ತಾತ್ಸಾರ ತೋರಿರಲಿಲ್ಲ. ಸಿರಿಶಾ ಕೃಷ್ಣ ಸುಂದರಿ. ಆದರೆ ಗುಣವಂತೆ, ಲಕ್ಷಣವಂತೆ. ಹಾಡು ಹೇಳುವುದು ಮಾತ್ರವಲ್ಲ, ಓದಿನಲ್ಲಿಯೂ ಚುರುಕು. ಕೊಂಚ ಭಾವಜೀವಿ. ಜೊತೆಗಾರರಿಲ್ಲದೇ ಒಬ್ಬಳೇ ಮಗಳಾಗಿ ಬೆಳೆದಿದ್ದಕ್ಕೋ ಅಥವಾ ತನ್ನ ಆಸೆಗಳನ್ನು ಅದುಮಿ ಬದುಕುತ್ತಿರುವುದಕ್ಕೋ ಕೊಂಚ ಅಂತರ್ಮುಖಿ ಎನ್ನಿಸುವಂತಿದ್ದರೂ ಎಲ್ಲರ ಮನಸ್ಸನ್ನು ಅರ್ಥ ಮಾಡಿಕೊಂಡು ಅದರಂತೆಯೇ ನಡೆದುಕೊಳ್ಳುತ್ತಿದ್ದಳು. ರೂಪ ಅಮ್ಮನಂತಿದ್ದರೂ ಗುಣ ತಂದೆಯಂತೆ. ಹೆಚ್ಚು ಎನ್ನಿಸುವಷ್ಟೇ ಮೃದು. ಆದರೆ, ಮತ್ತೊಬ್ಬರು ಕಷ್ಟ ಎಂದಾಗ ತನಗೆ ಎಷ್ಟೇ ಕಷ್ಟವಾದರೂ ಲೆಕ್ಕಿಸದೆ ಸಹಾಯಕ್ಕೆ ನಿಲ್ಲುತ್ತಿದ್ದಳು.

ಕಾಲಚಕ್ರ ಮೆಲ್ಲಮೆಲ್ಲನೆ ಸರಿಯುತ್ತಲಿತ್ತು. ಎಲ್ಲವೂ ಬದಲಾದರೂ ಬದಲಾಗದವಳು ಸಿರಿಶಾ ಮಾತ್ರ. ಸರಳತೆ, ಸಂಸ್ಕೃತಿ, ಪರೋಪಕಾರಿ ಗುಣವನ್ನು ಬಿಟ್ಟಿರಲಿಲ್ಲ. ಅಮ್ಮನ ವಿರೋಧದ ನಡುವೆಯೇ ಡಿಗ್ರಿ ಮುಗಿಸಿದ್ದಳಾದರೂ ಕೆಲಸಕ್ಕೆ ಹೋಗುತ್ತಿರಲಿಲ್ಲ. ಇದಕ್ಕೆ ಕಾರಣ ಶಾಂತಲಾರ ಮತ್ತದೇ ಧೋರಣೆ.. "ಮದುವೆ ಆದ ಮೇಲೆ ನಿನ್ನ ಗಂಡನನ್ನು ಕೇಳಿಕೊಂಡು ಕೆಲಸಕ್ಕೆ ಹೋಗು. ಈಗ ಅದೆಲ್ಲಾ ಏನೂ ಬೇಡ.ನೀನು ಸಂಪಾದಿಸುವ ದುಡ್ಡಿನಿಂದ ಇಲ್ಲಿ ಯಾರೂ ಜೀವನ ಮಾಡಬೇಕಾಗಿಲ್ಲ." ಎಂದು ಖಡಾಖಂಡಿತವಾಗಿ ನಿರಾಕರಿಸಿದ್ದರು. ಹಾಗೆಂದು ಸಿರಿಶಾ ಸುಮ್ಮನೆಯಂತೂ ಕುಳಿತುಕೊಳ್ಳುತ್ತಿರಲಿಲ್ಲ. ಮನೆಗೆಲಸ ಮುಗಿಸಿ, ಹಾಡುತ್ತಾ ಇಲ್ಲವೇ ಪುಸ್ತಕ ಹಿಡಿದು ಕುಳಿತರೆ ಲೋಕವನ್ನೇ ಮರೆತು ಬಿಡುತ್ತಿದ್ದಳು. ಅಪ್ಪ-ಮಗಳದ್ದು ಒಂದೇ ಅಭಿರುಚಿಯಾಗಿದ್ದರಿಂದ ಪುಸ್ತಕದ ಕುರಿತು ಚರ್ಚೆ ನಡೆಯುತ್ತಿತ್ತು. ಹೆಸರಿಗಷ್ಟೇ ಅದು ಚರ್ಚೆ. ಅಲ್ಲಿ ಬರೀ ರಾಯರದ್ದೇ ಮಾತು. ಸಿರಿಶಾಳದ್ದು "ಹೂಂ ಅಥವಾ ಹೂಂಹೂಂ", "ಹೌದು ಅಥವಾ ಇಲ್ಲ". ಸಿರಿಶಾಳ ಭಾವಲೋಕ, ಮಾತಿನ ಲೋಕವೆಲ್ಲಾ ಅನಾವರಣಗೊಳ್ಳುತ್ತಿದ್ದದ್ದು ಅವಳ ಡೈರಿಯಲ್ಲಿ ಯಾರಿಗೂ ತಿಳಿಯದಂತೆ ತನ್ನ ಭಾವನೆಗಳಿಗೆ ಬಣ್ಣ ಹಚ್ಚಿ, ಗರಿಗೆದರಿ ನರ್ತಿಸುವಂತೆ ಮಾಡುತ್ತಿದ್ದದ್ದು ಇಲ್ಲೇ. ಸಾಕಾರಗೊಳ್ಳದ ಕನಸುಗಳ ಲೋಕವೇ ಮಲಗಿತ್ತು.

ಬದುಕು ಸರಾಗವಾಗಿ ಸಾಗುತ್ತಿದ್ದರೆ ದೇವರಿಗೂ ಅಸೂಯೆಯಾಗುತ್ತದೇನೋ.. ಶಾಂತಲಾರ ಆರೋಗ್ಯ ಮೆಲ್ಲನೆ ಕೆಡುತ್ತಾ ಬರುತ್ತಿತ್ತು, ಅವರಂತೂ ಪೂರ್ಣ ಹಾಸಿಗೆ ಹಿಡಿದರು. ವೈದ್ಯರಿಗೂ ಖಾಯಿಲೆಯ ಪತ್ತೆ ಮಾಡಲಾಗಲಿಲ್ಲ. ಎಲ್ಲಾ ಕೆಲಸವೂ ಸಿರಿಶಾಳ ಮೇಲೆಯೇ ಬಿದ್ದಿತ್ತು. ಶಾಂತಲಾರ ವರಾತ ಹೆಚ್ಚಾಗಿತ್ತು. "ನಾನು ಸಾಯುವ ಮುಂಚೆ ಅವಳ ಮದುವೆ ನೋಡಬೇಕು." ಅದೇ ಸಮಯಕ್ಕೆ ಶಾಂತಲಾರನ್ನು ನೋಡಲು ಬಂದ ಅವರ ಅಣ್ಣನಿಗೆ ಸಿರಿಶಾ ಕಣ್ಣಿಗೆ ಬಿದ್ದಳು. ಶಾಂತಲಾರ ಮುಂದೆ ತಮ್ಮ ಮಗ ಸಾಕೇತ್ ನಿಗೆ ಸಿರಿಶಾಳನ್ನು ತಂದುಕೊಳ್ಳುವ ಕುರಿತು ಪ್ರಸ್ತಾಪವಾಯಿತು. ಆಸ್ತಿ ವಿವಾದಗಳಿಂದ ಕೊಂಚ ದೂರವೇ ಇದ್ದ ತವರು ಮನೆಯವರೊಂದಿಗೆ ನಂಟು ಬೆಸೆಯಲು ಬಂದ ಈ ಸಂಬಂಧವನ್ನು ಕಳೆದುಕೊಳ್ಳಲು ಶಾಂತಲಾ ಸಿದ್ದರಿರಲಿಲ್ಲ. ಸಿರಿಶಾಳ ಒಪ್ಪಿಗೆಯನ್ನೂ ಕೇಳದೆ ಈ ಮದುವೆಗೆ ಒಪ್ಪಿಗೆ ಇತ್ತರು. ರಾಯರದ್ದೂ ಏನೂ ಮಾಡಲಾಗದ ಅಸಹಾಯಕ ಸ್ಥಿತಿ.     

ಶಾಂತಲಾ ಅವರ ಅಣ್ಣನ ಕುಟುಂಬ ವಾಸವಾಗಿದ್ದು ಹಳ್ಳಿಯಲ್ಲಿಯೇ ಆದರೂ ಮಗ ಸಾಕೇತ್ ವಾಸವಾಗಿದ್ದು ಬೆಂಗಳೂರಿನಲ್ಲಿ. ಬೆಂಗಳೂರಿನ ಪ್ರತಿಷ್ಟಿತ ಸಾಫ್ಟ್ ವೇರ್ ಕಂಪೆನಿಯೊಂದರ ಉದ್ಯೋಗ ಮೇಲಾಗಿ ಸಂಸ್ಕಾರವಂತ. ಯಾರೇ ಆದರೂ ಒಪ್ಪುವಂತಹಾ ಹುಡುಗ. ಆದರೆ ಏಕೋ ಮದುವೆ ಬೇಡ ಬೇಡ ಎನ್ನುತ್ತಾ ಮುಂದೂಡುತ್ತಲೇ ಬಂದಿದ್ದ. ಯಾವ ಹುಡುಗಿಯನ್ನು ತೋರಿಸಿದರೂ ಯಾವುದಾದರೂ ಒಂದು ಕಾರಣ ಕೊಟ್ಟು ನಿರಾಕರಿಸಿಬಿಡುತ್ತಿದ್ದ. ಶಾಂತಲಾರ ಪರಿಸ್ಥಿತಿ ಮತ್ತು ಎರಡು ಕುಟುಂಬಗಳೂ ಒಂದಾಗಲೂ ಇದ್ದ ಅವಕಾಶ ಇದು ಎಂಬ ಕಾರಣವನ್ನು ಮುಂದಿಟ್ಟು ಸಾಕೇತ್ ನನ್ನು ಅವನ ತಂದೆ ಮದುವೆಗೆ ಒಪ್ಪಿಸಿದ್ದರು.

ತರಾತುರಿಯಲ್ಲಿಯೇ ಮದುವೆ ನಿಶ್ಚಯವಾಗಿತ್ತು. ವಧು-ವರರಿಬ್ಬರೂ ಪರಸ್ಪರ ನೋಡಿದ್ದು ಮದುವೆ ಮಂಟಪದಲ್ಲಿಯೇ.. ಪರಸ್ಪರರ ಇಷ್ಟಾನಿಷ್ಟಗಳ ಅರಿವಿಲ್ಲದ ಅಪರಿಚಿತರಿಬ್ಬರೂ ಶುಭ ಘಳಿಗೆಯೊಂದರಲ್ಲಿ ಸತಿ-ಪತಿಯಾಗಿದ್ದರು. ನಂತರದಲ್ಲಿ ಸಿರಿಶಾ ಸಾಕೇತ್ ನೊಂದಿಗೆ ಬೆಂಗಳೂರಿಗೆ ಕಾಲಿಟ್ಟಳು. ಅಲ್ಲಿಗೆ ಬಂದ ಮೊದಲ ದಿನವೇ ಸಾಕೇತ್ ಹೇಳಿದ್ದ. "ಹಿರಿಯರ ಮಾತಿಗೆ ಬೆಲೆ ಕೊಟ್ಟು ನಿನ್ನನ್ನು ಮದುವೆಯಾಗಿದ್ದೇನೆ ಅಷ್ಟೇ. ಈ ಹಿಂದೆ ನಾನು ಒಬ್ಬಳನ್ನು ಪ್ರೀತಿಸಿದ್ದೆ ಆದರೆ ಈಗ ಅವಳ ಮದುವೆಯಾಗಿದೆ. ಸಮಾಜದ ದೃಷ್ಟಿಯಿಂದ ಈಗ ಈ ಪ್ರೇಮ ಸತ್ತಿರಬಹುದು ಆದರೆ ನನ್ನ ಬದುಕಲ್ಲಿ, ನನ್ನ ಮನಸ್ಸಿನಲ್ಲಿ ಆ ಪ್ರೇಮ ಇನ್ನೂ ಹಚ್ಚಹಸಿರಾಗಿದೆ. ನೀನು ಆ ಸ್ಥಾನವನ್ನು ತುಂಬಲು ಸಾಧ್ಯವಿಲ್ಲ" ಎಂದನು. ಸಿರಿಶಾಳಿಗೆ ಆಘಾತವಾದರೂ ಮತ್ತೇನೂ ಹೇಳಲೂ ತೋಚದೆ "ಕಾಯುತ್ತೇನೆ " ಎಂದಷ್ಟೇ ಹೇಳಿ ಸುಮ್ಮನಾದಳು.

ಸಿರಿಶಾ ಅವನ ದಿನಚರಿಯನ್ನು ಬದಲಾಯಿಸಲೇನೂ ಹೋಗಲಿಲ್ಲ. ತನ್ನ ಪಾಡಿಗೆ ತಾನು ಎಂಬಂತೆ ಅವಳು ಅವನನ್ನು ಅರ್ಥೈಸಿಕೊಂಡು ಅವನಿಗೆ ಅನುಕೂಲವಾದ ರೀತಿಯಲ್ಲಿಯೇ ತನ್ನ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಳು. ಒಂದು ಸಂಜೆ ಎಂದಿನಂತೆ ಎಂದಿನಂತೆ ಸಾಕೇತ್ ಬರುವ ಮುನ್ನ ಹಾಡುತ್ತಿದ್ದಳು. ಆದರೆ ಅವತ್ತು ಎಂದಿಗಿಂತ ಮುಂಚೆ ಬಂದವನು ಅವಳ ಗಾಯನವನ್ನು ಕೇಳಿ ಮೈಮರೆತು ನಿಂತಿದ್ದ. ಅಂದಿನಿಂದ ಹದಿನೈದು ದಿನವೂ ಅವನ ದಿನಚರಿ ಹಾಗೆಯೇ ಮುಂದುವರಿದಿತ್ತು. ಅವಳ ಹಾಡು ಕೇಳಲೆಂದೇ ಮುಂಚೆ ಬಂದು ಅವಳಿಗೆ ತಿಳಿಯದಂತೆ ನಿಂತಿರುತ್ತಿದ್ದ. ಅದಾದ ನಂತರ ಒಂದು ದಿನ ಅವಳಿಗಾಗಿ ಒಂದಷ್ಟು ಹಾಡಿನ ಸಿ.ಡಿ ಗಳನ್ನು ತಂದು ಕೊಟ್ಟು, "ಆಸಕ್ತಿ ಇದ್ದರೆ ಸಂಗೀತ ಶಾಲೆಗೂ ಸೇರು. ನನ್ನ ಅಭ್ಯಂತರವೇನೂ ಇಲ್ಲ" ಎಂದನು. ಆಗ ಸಿರಿಶಾ ಅದಕ್ಕೆ ಏನೂ ಉತ್ತರಿಸದೆ " ನೀವೂ ಸಂಗೀತ ಕಲಿತಿದ್ದೀರಾ..? ನೀವೂ ಕೊಳಲು ನುಡಿಸುತ್ತಾ ಇದ್ದಿರಂತೆ.. ಈಗ್ಯಾಕೆ ಅದನ್ನು ನುಡಿಸುತ್ತಾ ಇಲ್ಲ" ಎಂದು ಪ್ರಶ್ನೆ ಮೇಲೆ ಪ್ರಶ್ನೆ ಮಾಡುತ್ತಿದ್ದವಳನ್ನು ತಡೆದು "ನನ್ನ ಬದುಕಿನ ಕುರಿತ ಅಸ್ಥೆ ನಿನಗೆ ಬೇಡ. ನೀನು ನನ್ನ ಬಾಳಿನಲ್ಲಿ ಏನೇನೂ ಅಲ್ಲ, ಮೊದಲು ಇಲ್ಲಿಂದ ಹೊರಡು ಇಲ್ಲವೆಂದರೆ ನಾನು ನಿನಗೆ ಏನು ಮಾಡುತ್ತೇನೋ ನನಗೇ ಗೊತ್ತಿಲ್ಲ" ಎನ್ನುತ್ತಾ ಇನ್ನಷ್ಟನ್ನು ಮುಂದೆ ಮಾತನಾಡುವವನಿದ್ದ ಆದರೆ ಅಷ್ಟರಲ್ಲಿ ಬಂದ ಫೋನ್ ಕಾಲ್ ಅವನನ್ನು ಏನೂ ಹೇಳದಂತೆ ತಡೆದಿತ್ತು. "ಈಗಲೇ ಹೊರಡು ಬೇಗ, ಊರಿಗೆ ಹೊರಡಬೇಕಾಗಿದೆ" ಎಂದವನು ತರಾತುರಿಯಲ್ಲಿ ಅವಳನ್ನು ಕರೆದುಕೊಂಡು ಹಳ್ಳಿಗೆ ಹೊರಟ. ಸಿರಿಶಾ-ಸಾಕೇತ್ ಅಲ್ಲಿಗೆ ಬರುವಷ್ಟರಲ್ಲಿ ಮನೆಯ ಮುಂದೆಲ್ಲಾ ಜನಸಮೂಹವೇ ನೆರೆದಿತ್ತು. ಶಾಂತಲಾರ ಅನಿರೀಕ್ಷಿತ ಸಾವು ಸಿರಿಶಾಳಿಗೆ ಮತ್ತಷ್ಟು ಘಾಸಿ ಮಾಡಿತ್ತು. ಅಂತ್ಯಕ್ರಿಯೆ ಎಲ್ಲಾ ಮುಗಿದ ನಂತರ ಸಾಕೇತ್ ಸಿರಿಶಾಳನ್ನು ಇಲ್ಲಿಯೇ ಬಿಟ್ಟು ಹೊರಟ. ಮುಂದಿನ ಅವಳ ಭವಿಷ್ಯ ಅವಳ ಮುಂದೆ ಪ್ರಶ್ನಾರ್ಥಕವಾಗಿ ಕಾಡಿತ್ತು. ಸಾಕೇತ್ ತನ್ನನ್ನು ಇಲ್ಲಿಂದ ಕರೆದೊಯ್ಯುವನು ಎಂಬ ಭರವಸೆಯನ್ನೇ ಬಿಟ್ಟು ಬಿಟ್ಟಿದ್ದಳು. ಅಪ್ಪನ ಮುಂದೆ ಅವರ ಸಮಾಧಾನಕ್ಕಾಗಿ ನೆಮ್ಮದಿಯ ನಾಟಕವಾಡುತ್ತಿದ್ದಳು.

"ಲೋಕದ ಕಣ್ಣಿಗೆ..." ಹಾಡಿದ ನಂತರ ಸುಮ್ಮನಾದವಳನ್ನು ಇನ್ನೊಂದು ಹಾಡು ಹಾಡಮ್ಮ ಎಂದರು ರಾಯರು.

"ಈ ರಾಧೆಗೆ... ಗೋಪಾಲನಾ
ಸಂತೋಷವೇ ನಿಜವಾದ ಆನಂದವು
ರಾಧೆಯಾ ಕೃಷ್ಣನಾ ಅನುಬಂಧವಾ..
ಹೇಳಲೂ ಸಾಧ್ಯವೇ..?"
ಎಂದು ಹಾಡತೊಡಗಿದಳು. ಸಾಕೇತ್ ನೆನಪಾಗುತ್ತಿದ್ದ. ನಾನೇ ರಾಧೆಯಾಗಿ ಅವನು ಕೃಷ್ಣನಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಅಲ್ಲವೇ? ಎಂದುಕೊಂಡವಳ ಮುಖದಲ್ಲೊಂದು ವಿಷಾದದ ಮುಗುಳ್ನಗು ಸುಳಿದುಹೋಯಿತು. "ನಾನು ಅವನ ಬಾಳಿನಲ್ಲಿ ಏನೂ ಅಲ್ಲ ಅಂದವನು ಕಾಳಜಿ ತೋರುತ್ತಿದ್ದದ್ದು ಏಕೆ? ಅವನಿಗೆ ನನ್ನ ಮೇಲೆ ಕರುಣೆಯಿತ್ತಾ? ಅಥವಾ ಪ್ರೀತಿಯೇ..? ಎಂದು ಆಲೋಚನೆಗೆ ಬಿದ್ದಿದ್ದಳು.

ಹಾಡು ಮುಗಿದ ನಂತರ ರಾಯರು ಕೇಳಿದರು. "ಏನು ವಿಶೇಷ? ಬರೀ ರಾಧೆಯ ಹಾಡನ್ನೇ ಹಾಡುತ್ತಿದ್ದೀಯಲ್ಲ.. ಇಂದು ಶಿವನ ಭಕ್ತೆಗೆ ರಾಧಾ-ಕೃಷ್ಣರು ಸೆಳೆದಂತಿದೆ." ಎಂದರು. "ಹಾಗೇನಿಲ್ಲಪ್ಪ, ರುಕ್ಮಿಣಿಗಿಂತ ರಾಧೆಯೇ ಪುಣ್ಯವಂತಳು ಅಲ್ಲವೇ? ರಾಧೆಯು ಭೌತಿಕವಾಗಿ ಕೃಷ್ಣನಿಗಿಂತ ದೂರದಲ್ಲಿದ್ದರೂ ಮಾನಸಿಕವಾಗಿ ಎಂದಿಗೂ ಕೃಷ್ಣನ ಮನಸ್ಸಿನಲ್ಲಿ ಶಾಶ್ವತವಾದ ಸ್ಥಾನ ಪಡೆದಿದ್ದಾಳೆ. ಹಾಗಾಗಿ ಇತ್ತೀಚೆಗೆ ಯಾಕೋ ರಾಧೆ ಕಾಡುತ್ತಿದ್ದಾಳೆ" ಎಂದಳು. ಅದಕ್ಕೆ ರಾಯರು "ಎಲ್ಲವೂ, ಕೃಷ್ಣನ ಮನಸ್ಥಿತಿಯ ಮೇಲೆ ಅವಲಂಬಿತ ಅಲ್ಲವೇನಮ್ಮಾ? ಕೃಷ್ಣ ಎಂದಿಗೂ ರುಕ್ಮಿಣಿಯನ್ನು ಕಡೆಗಾಣಿಸಲಿಲ್ಲ. ರಾಧೆಯನ್ನು ರುಕ್ಮಿಣಿಯಲ್ಲಿಯೇ ಕಂಡ. ಅಷ್ಟಕ್ಕೂ ರಾಧೆಗಿಂತ ರುಕ್ಮಿಣಿಯೇ ಪುಣ್ಯವಂತಳು.. ಅವಳಿಗೆ ಸದಾ ಕೃಷ್ಣನ ಸಾನಿಧ್ಯವಿತ್ತು. ಕೃಷ್ಣ ರುಕ್ಮಿಣಿಯನ್ನು ಮನಸ್ಫೂರ್ತಿ ಪ್ರೀತಿಸುತ್ತಿದ್ದನೋ ಇಲ್ಲವೋ ಗೊತ್ತಿಲ್ಲ. ಆದರೆ, ರುಕ್ಮಿಣಿಯ ಪ್ರೀತಿಯೆಲ್ಲವೂ ಸದಾ ಕೃಷ್ಣನಿಗೇ ಸಮರ್ಪಿತವಲ್ಲವೇ..? ಅಲ್ಲದೇ ರಾಧೆ ಎಂದಿಗೂ ರುಕ್ಮಿಣಿಯ ಸವತಿಯಾಗಲಿಲ್ಲ. ರುಕ್ಮಿಣಿಯ ನಿಶ್ಕಲ್ಮಶ ಪ್ರೇಮವೇ ಅವಳನ್ನು ಕೃಷ್ಣನಿಗೆ ಹತ್ತಿರವಾಗುವಂತೆ ಮಾಡಿತು." ಎಂದರು. ಸಿರಿಶಾಳಿಗೆ ಈ ಮಾತುಗಳು ಎಲ್ಲೋ ಒಂದು ಕಡೆ ಆಶಾಕಿರಣದಂತೆ ಗೋಚರವಾದವು.

ಅಷ್ಟರಲ್ಲಿ ಮತ್ತೊಂದು ಧ್ವನಿ ಕೇಳಿಸಿತು. "ನಿಶ್ಕಲ್ಮಶ ಪ್ರೀತಿಗೆ, ಮುಗ್ದ ಮನಸ್ಸಿಗೆ, ಏನೂ ಬಯಸದಂತಹಾ ನಿಸ್ವಾರ್ಥ ಒಲವಿಗೆ ಎಲ್ಲವನ್ನೂ ಗೆಲ್ಲುವ ಶಕ್ತಿ ಇದೆ. ಕೃಷ್ಣನಲ್ಲಿಯೇ ಅಂತಹಾ ಬದಲಾವಣೆ ಗೋಚರಿಸಿದೆ.ಬಹುಶಃ ಅವನಿಗೂ ರುಕ್ಮಿಣಿಯ ಸನ್ನಿಧಿಯಲ್ಲಿ ರಾಧೆಯ ಪ್ರೇಮ ಮರೆತು ಹೋಗುತ್ತಿತ್ತೇನೋ..? ಅಲ್ಲವೇ ಮಾವ?" ಎಂದ ಸಾಕೇತ್. ಸಿರಿಶಾಳಿಗೆ ಇದು ಕನಸೋ? ನನಸೋ? ತಿಳಿಯದ ಭಾವ. "ಓ ಅಳಿಯಂದ್ರೇ ಬನ್ನಿ, ನೀವು ಬರೋ ವಿಷಯವನ್ನು ಇವಳು ನನಗೆ ಹೇಳಿಯೇ ಇರಲಿಲ್ಲ. ಯಾವಾಗ ಬಂದ್ರಿ..? ಅದಕ್ಕೇ ಅನ್ನಿಸುತ್ತೆ ಸಂಜೆ ನಿಮ್ಮ ಹಾದಿಯನ್ನೇ ಕಾಯುತ್ತಾ ಹೊರಗಡೆ ಕುಳಿತಿದ್ದಳು" ಎನ್ನುತ್ತಲೇ ಸಾಕೇತ್ ನನ್ನು ಸ್ವಾಗತಿಸಿದರು. "ಸಿರಿ ಹಾಡು ಶುರು ಮಾಡಿದಾಗಲೇ ಬಂದೆ, ನಿಮ್ಮ ಸಂಗೀತ ಆಸ್ವಾದನೆಗೆ ಭಂಗ ಮಾಡಬಾರದೆಂದು ಅಲ್ಲೇ ನಿಂತೆ ಅಷ್ಟೇ.." ಎನ್ನುತ್ತಾ ಒಳಬಂದು ಕುಳಿತ. ಈ ಮಾತು ಕೇಳಿ ಲಜ್ಜೆಯಿಂದ ಒಳಗೆ ಓಡಿದಳು ಸಿರಿಶಾ. ಟೀ ಮಾಡಿ ತಂದವಳನ್ನು ರೇಗಿಸಲು "ಸಂಜೆಯಿಂದ ಅಪ್ಪನನ್ನು ಮರೆತಿದ್ದಳು ನನ್ನ ಮಗಳು, ಅವಳ ಗಂಡನ ದೆಸೆಯಿಂದ ಈಗ ಈ ಬಡಪಾಯಿ ಅಪ್ಪನಿಗೂ ಒಂದು ಲೋಟ ಟೀ ಸಿಕ್ಕಿತು ಅಷ್ಟೇ.."ಎಂದರು ರಾಯರು. ಸಿರಿಶಾ ಏನೂ ಮಾತನಾಡದೆ ಮುಗುಳ್ನಕ್ಕಳು ಅಷ್ಟೇ. ಸಾಕೇತ್ ಕೂಡಾ ಮುಗುಳ್ನಕ್ಕನು. ಸಾಕೇತ್ ಮಾವನೊಂದಿಗೆ ಮನಸ್ಸು ಬಿಚ್ಚಿ ಹರಟಿದರೂ ಸಿರಿಶಾಳೊಂದಿಗೆ ಕೊಂಚ ಗಂಭೀರವಾಗಿಯೇ ಇದ್ದ.

ಮಾರನೇ ದಿನ ಬೆಳಿಗ್ಗೆ ಅವಳನ್ನು ಕರೆದು, ಸಂಜೆ ಗುಡ್ಡದ ಮೇಲಿನ ವೇಣುಗೋಪಾಲಸ್ವಾಮಿ ದೇವಸ್ಥಾನಕ್ಕೆ ಹೋಗಿ ಬರೋಣ. ಮಾವನೂ ಅದನ್ನೇ ಹೇಳಿದ್ದಾರೆ. ತಯಾರಾಗು ಎಂದನು. ಸಿರಿಶಾಳ ಮನಸ್ಸಿನಲ್ಲಿ ಏನೇನೋ ಆಲೋಚನೆಗಳು ಮೂಡುತ್ತಿದ್ದವು. ಅಯೋಮಯ ಸ್ಥಿತಿಯಲ್ಲಿ ಎಂದಿನಂತೆ ಆಡಂಬರವಿಲ್ಲದೆ ಸರಳವಾಗಿ ತಯಾರಾಗಿ ಬಂದಳು. ಸರಳವಾದರೂ ಅವಳು ಸುಂದರಿಯೇ. ಇಬ್ಬರು ದೇವರ ದರ್ಶನ ಮಾಡಿ ಅಲ್ಲಿಯೇ ಪ್ರಶಾಂತವಾದ ಪ್ರಾಂಗಣದಲ್ಲಿ ಕುಳಿತರು.  

ಎದುರು ಕುಳಿತಿದ್ದ ಅವಳ ಎರಡೂ ಕೈಗಳನ್ನು ತನ್ನ ಕೈಯ್ಯೊಳಗೆ ತೆಗೆದುಕೊಂಡ ಸಾಕೇತ್ "ಜೊತೆಯಲ್ಲಿದ್ದಾಗ ನಿನ್ನ ಕಾಳಜಿ, ಪ್ರೀತಿಯ ಅರಿವಾಗಲಿಲ್ಲ. ಮನಸ್ಸಿನ ಮೂಲೆಯಲ್ಲಿ ನಿನ್ನ ಮೇಲೆ ಪ್ರೀತಿಯ ಊಟೆ ಒಡೆಯುತ್ತಿತ್ತು ಆದರೆ ಅದನ್ನು ಅದುಮಿ ಬದುಕಲು ಪ್ರಯತ್ನಿಸುತ್ತಿದ್ದೆ. ನೀನು ನನ್ನ ಜೊತೆ ವಾದ ಮಾಡಿದಿದ್ದರೆ ನಿನ್ನನ್ನು ಬೈಯ್ದು ದೂರ ಮಾಡಿಕೊಳ್ಳುತ್ತಿದ್ಡೆ. ಮೌನದಿಂದಲೇ ನೀನು ನನ್ನನ್ನು ಗೆಲ್ಲುತ್ತಾ ಹೋದೆ. ನಾವು ಜೊತೆಯಿದ್ದದ್ದು ತಿಂಗಳು ಅಷ್ಟೇ. . ಆಗ ನಿನಗೆ ನನ್ನಿಂದ ಯಾವ ಪ್ರೀತಿಯೂ ದೊರಕದಿದ್ದರೂ ನೀನು ಪ್ರೀತಿ ನೀಡುತ್ತಲೇ ಹೋದೆ. ಎಲ್ಲಿ ನಿನ್ನ ಮೇಲೆ ಮನಸ್ಸಾಗಿ ಮೊದಲ ಪ್ರೀತಿಯನ್ನು ಮರೆಯುತ್ತಾ ನಿನ್ನ ದೃಷ್ಟಿಯಲ್ಲಿಯೂ ಕೀಳಾಗಿ ಬಿಡುತ್ತೇನೋ ಎಂದು ಗೊಂದಲದಲ್ಲಿರುವಾಗಲೇ ನೀನು ಕೊಳಲಿನ ವಿಷಯ ಎತ್ತಿದ್ದೆ.

ನಾನು ನಿನ್ನನ್ನು ಬೈದೆ, ನೀನು ಮರುವಾದ ಮಾಡುವೆ ಆಗಲಾದರೂ ನೀನು ನಿನ್ನ ಮನಸ್ಸಿನಲ್ಲಿ ಏನಿದೆ ಎಂಬುದನ್ನು ಹೇಳುವೆ ಎಂದು ಕಾಯುತ್ತಿದ್ದೆ. ಗಂಡಿಗೆ ಪ್ರೀತಿಯಿದ್ದರೂ ತಾನೇಕೆ ಮೊದಲು ಸೋಲಬೇಕು ಎನ್ನುವ ಅಹಂಭಾವವೂ ಇರುತ್ತದೆ. ಹಾಗಾಗಿ ನೀನೇ ನಿನ್ನ ಪ್ರೀತಿ ಹೇಳುವೆ ಎಂದು ಕಾಯುತಲಿದ್ದೆ. ಅದಾದ ನಂತರ ಏನೇನೋ ಆಯಿತು..

ನಿನ್ನ ತಾಯಿಯ ಮರಣವೊಂದು ನೆಪವಾಗಿತ್ತು ನಿನಗೆ ನನ್ನಿಂದ ದೂರ ಉಳಿಯಲು. ನಿನ್ನ ಪ್ರೀತಿಗಿಂತ ತಿರಸ್ಕಾರ ನನ್ನನ್ನು ಹೆಚ್ಚು ಭಾದಿಸುತ್ತದೆ ಕಣೇ. ನಿನ್ನ ಗೈರು ಹಾಜರಿಯಲ್ಲಿ ಬದುಕಿನಲ್ಲಿ ಅಮೂಲ್ಯವಾದದ್ದು ಏನನ್ನೋ ಕಳೆದುಕೊಂಡಿದ್ದೇನೆ ಎನ್ನಿಸುತ್ತಿದೆ. ನನಗೆ ಕೃಷ್ಣ-ರುಕ್ಮಿಣಿ, ರಾಧೆ-ಕೃಷ್ಣರ ಪ್ರೀತಿಯ ಕುರಿತು ಗೊತ್ತಿಲ್ಲ. ಆದರೆ ಶಿವ ಭಕ್ತೆಯಾದ ನಿನ್ನ ಪ್ರೀತಿ ಮಾತ್ರ ಗೊತ್ತು. ಅವರನ್ನೇ ಆದರ್ಶವಾಗಿರಿಸಿಕೊಂಡು ಬದುಕೋಣ. ನನ್ನ ಬದುಕಿನ ಅರ್ಧಾಂಗಿಯಾಗಿ ನೀನು ಪಾಲಿನ ಬೆಳಕಾಗು." ಎನ್ನುತ್ತಾ ಅವಳ ಡೈರಿಯನ್ನು ಅವಳಿಗೆ ನೀಡಿದನು.

"ಮತ್ತೊಬ್ಬರ ಡೈರಿಯನ್ನು ಓದಬಾರದೆಂದುಕೊಂಡಿದ್ದೆ, ಆದರೆ ಅರ್ಧಾಂಗಿಯ ಡೈರಿಯನ್ನು ಓದುವುದರಲ್ಲಿ ತಪ್ಪಿಲ್ಲವಲ್ಲ" ಎಂದು ಕಣ್ಣು ಹೊಡೆದನು. "ಧೈರಿ ಓದಿ ಬದಲಾಗಿದ್ದೇನೆ, ಕರುಣೆ ತೋರುತ್ತಿದ್ದೇನೆ ಎಂಬ ಭಾವ ಬೇಡ. ಡೈರಿ ಓದಿದ ನಂತರ ನಿನ್ನ ಬದುಕಿನ ಪ್ರತಿ ಹಂತದ ಪರಿಚಯವಾಗಿದೆ ಅಷ್ಟೇ. ಈ ಪ್ರೀತಿ ಪ್ರೀತಿಯೇ.. ನಿಷ್ಕಲ್ಮಶವಾದ ಒಲವೇ.. ಅದರ ಕುರಿತು ಸಂದೇಹ ಬೇಡ" ಎಂದನು.

ಸಿರಿಶಾ ಮೇಲೆದ್ದು ಅವನನ್ನು ಅಪ್ಪಿ ಹಿಡಿದವಳೇ ಕೊಂಚ ಹೊತ್ತು ಸುಮ್ಮನಿದ್ದು ನಂತರ ಅವನನ್ನು ಬಿಟ್ಟು ಸುಮ್ಮನೇ ನಡೆದು ಬಿಟ್ಟಳು. ಸಾಕೇತ್ ನಿಗೆ ಅವಳು ತನ್ನನ್ನು ಒಪ್ಪಿದಳೋ, ನಿರಾಕರಿಸಿದಳೋ ಒಂದೂ ತಿಳಿಯಲಿಲ್ಲ. ನನ್ನಂತಹವನೇ ಪ್ರೀತಿಯಿಂದ ಬದಲಾಗಿರುವಾಗ ಅವಳನ್ನು ಬದಲಾಯಿಸಲಾಗದೇ..? ನನ್ನ ಪ್ರೀತಿಯಿಂದ ಅವಳನ್ನು ಒಲಿಸಿಕೊಳ್ಳುತ್ತೇನೆ ಎಂದು ತೀರ್ಮಾನಿಸಿ ಮನೆಗೆ ಬಂದ. ಅವಳೆಲ್ಲಿಯೂ ಕಾಣಲಿಲ್ಲ. ರೂಮಿನಲ್ಲಿ ಹಾಸಿಗೆಯ ಮೇಲಿರುವ ಪತ್ರ ಕಂಡಿತು. ಅದನ್ನು ಬಿಡಿಸಿದಾಗ ಹೀಗಿತ್ತು.

ಒಲವೇ ಒಲವ ತಿಳಿಸಿದ ಮೇಲೆ
ಒಪ್ಪದಿರುವುದಾದರೂ ಹೇಗೆ..?
ಒಪ್ಪುವವರೆಗೂ ಕಾಯುವೆನೆಂದವಳ
ಜೀವದುಸಿರು ನಿನಗೇ ಮೀಸಲು
ನಿನ್ನ ಒಲವಲ್ಲಿ ಮಿಂದವಳಿಗೆ
ಬದುಕಲ್ಲಿ ನೀನೇ ಉಸಿರು..
ಒಲವಿನ ಮಿಳಿತವೇ ನಮ್ಮ ಬದುಕು

ನಿಮ್ಮ ಒಲವಿನ ಮಾತು ಕೇಳಿದೆ. ಕೊಳಲಿನ ಮಾತು ಕೇಳಬೇಕೆನಿಸುತ್ತಿದೆ. ನನ್ನ ಗಾಯನದೊಂದಿಗೆ ನಿಮ್ಮ ಕೊಳಲ ನಾದ ಬೆರೆತರೆ ಎಷ್ಟು ಚೆಂದ ಅಲ್ಲವೇ..? ನಮ್ಮಿಬ್ಬರ ಬದುಕಲ್ಲಿ ಒಲವ ಜೇನ ಬೆರೆಸಿದಂತೆ.
-ಸಿರಿಶಾ

ಸಾಕೇತ್ ಮನ ಗಾಳಿಯಲ್ಲಿ ತೇಲಾಡುತ್ತಿತ್ತು. ಅಂದು ಸಂಜೆಯಿಂದ ಮನೆಯಂಗಳದಲ್ಲಿ ಸ್ವರ್ಗವೇ ಧರೆಗಿಳಿದಿತ್ತು. ದೀಪಾವಳಿಯಲ್ಲದಿದ್ದರೂ ದೀಪಗಳ ಬೆಳಕು ಮನೆಯಂಗಳದಲ್ಲಿ ಚೆಲ್ಲಾಡಿತ್ತು. ಸಾಕೇತ್-ಸಿರಿಶಾ ಜುಗಲ್ಭಂದಿ ಸಂಜೆಗೇ ರಂಗು ತಂದಿತ್ತು. ರಾಯರಂತೂ ಗಾಯನದಿಂದ ಮೈಮರೆತು ತಲ್ಲೀನರಾಗಿದ್ದರೆ, ಜೋಡಿ ಹಕ್ಕಿಗಳು ಪ್ರೇಮರಾಗದಿಂದ ತಲ್ಲೀನರಾಗಿದ್ದರು. ಆಕಾಶದಿಂದ ಒಂದು ನಕ್ಷತ್ರ ಈ ಸಂತಸವ ಕಂಡು ಸಂಭ್ರಮಿಸುತಲಿತ್ತು. ಒಲವಿನ ಜೊತೆ ಮಿಳಿತವಾದ ಈ ಜೋಡಿ ಹೀಗೇ ಇರಲೆಂದು ಹಾರೈಸುತಲಿತ್ತು.

~ವಿಭಾ ವಿಶ್ವನಾಥ್