ಬುಧವಾರ, ಫೆಬ್ರವರಿ 14, 2018

ಇಳೆ-ಮಳೆ

ದಿನವೆಲ್ಲ ತುಂತುರು ಹನಿಗಳು
ಜಿನುಗುತಿವೆ ಧರೆಯ ಸೋಕಲು
ತರು-ಲತೆಗಳು, ಗಿಡ-ಮರಗಳು
ಇದರ ಸೊಬಗ ಸವಿಯುತಿರಲು,
ಮಳೆಗೆ ತೊಯ್ದ ಮಣ್ಣಿನಿಂದ
ಸುಗಂಧ ಮೂಗಿಗೆ ಅಡರುತಿರಲು,
ಬೀಸಿ ಬಂದ ತಂಗಾಳಿಯು
ಮನಕೆ ತಂಪನೆರೆಯುತಿರಲು,
ನನಗೆ ಇದರಲಿ ಒಂದಾಗುವ
ಆಸೆ ಮನದಿ ಮೂಡಿಬಂದಿರಲು,
ಮಲೆನಾಡಿನ ಮಧ್ಯದಾರಿಯಲಿ
ಆಸೆಗಳೆಲ್ಲವ ಮಳೆಗೆ ತೋಯಿಸಿ,
ತನುವು ಗರಿಗೆದರಿ ನರ್ತಿಸುತಿದೆ
ಇಳೆ-ಮಳೆಗಳೊಡನೆ ಮನವು ಬೆರೆತು
ಪ್ರಕೃತಿಯಲಿ ಲೀನವಾಗಿದೆ

~ವಿಭಾ ವಿಶ್ವನಾಥ್

ಅಭಿಸಾರಿಕೆ

ಮೊಗದಲಿ ದುಗುಡ ತುಂಬಿ
ಏನ ಹುಡುಕುತ ಹೊರಟೆ?
ರೆಕ್ಕೆ ಬಿಚ್ಚಿ ಹಾರುವಂತೆ
ಮನ ಬಿಚ್ಚಿ ಮಾತನಾಡಲೊಲ್ಲೆಯೇಕೆ?

ದೂರ ತೀರದ ಪಯಣಕೆ,
ತೇಲುತ ಹೋಗುವ ಹವಣಿಕೆಯೇ?
ದೂರ ಹೊರಟು ಹೋಗುವುದಕಿಂತ
ಹತ್ತಿರವಾಗು ಸುತ್ತ ಇರುವವರ ಮನಕೆ..

ಹೋಗುವುದಾದರೆ ಹೋಗಿಬಿಡು
ನಿನ್ನ ಮನವ ಬಿಟ್ಟು ಯಾರೂ ತಡೆಯಲಾರರು ನಿನ್ನ
ನೀ ಅಭಿಸಾರಿಕೆಯೆಂದರೆ...
ನಿನ್ನ ಮನಸ್ಸೂ ಅಭಿಸಾರಿಕೆಯೇ?

~ವಿಭಾ ವಿಶ್ವನಾಥ್

ಮರವೇ ನಿನಗಿದು ತರವೇ?

ಕಣ್ಣು-ಬಾಯಿ ಬಿಟ್ಟುಕೊಂಡು
ಏನು ಮಾಡುತಿರುವೆ ಮರವೇ?
ಈ ವೇಷ ನಿನಗೆ ತರವೇ?
ಮನುಜನ ಈ ನಡತೆಯಿಂದ ಆಶ್ಚರ್ಯವೇ?
ಅವನಲೀಗ ಧನದಾಹ, ದುರಭಿಮಾನ
ಲೋಭ,ಮೋಸ,ಕ್ರೋಧ,ಕ್ರೌರ್ಯವೇ ತುಂಬಿದೆ
ನಿನ್ನಿಂದ ಪಡೆದ ಮನುಜನೇ,
ನಿನ್ನ ಕಡಿಯಲು ಹೊರಟಿಹನು
ಇದ ಕಂಡು ಆಶ್ಚರ್ಯವಾಯಿತೇನೆ?
ಇದುವೇ ನೋಡು ನಾಡಿನ ಅನೀತಿ
ಪಡೆದವರೆಲ್ಲ ಮರಳಿ ಏನನೂ ನೀಡುವುದಿಲ್ಲ
ನಿನ್ನ ತಿರುಗಿ ಪೋಷಿಸುವುದಿಲ್ಲ
ಸಿದ್ದಳಾಗು ಮರಣಶಾಸನಕೆ
ಇನ್ನಾದರು ಕಣ್ಣು-ಬಾಯಿ ಮುಚ್ಚಿ
ಅನುಭವಿಸು ಬಂದುದನು ನಿರ್ಲಿಪ್ತಳಂತೆ

~ವಿಭಾ ವಿಶ್ವನಾಥ್

ಮಂಗಳವಾರ, ಫೆಬ್ರವರಿ 13, 2018

ಹಳ್ಳಿಯ ಕಟ್ಟೆ

ಹಳೆಯ ತಲೆಗಳ ಹಳಿಯುವಂತೆ
ಹಳೆಯ ಕಟ್ಟೆ ಇದು ಎಂದು
ದೂಷಿಸದೆ ಹಿರಿ-ಕಿರಿಯರೆಲ್ಲ ಸೇರಿ
ಅರಳಿ ಕಟ್ಟೆ ಎಂದು ಪೂಜೆ ಸಲ್ಲಿಸುವ ಕಟ್ಟೆಯಿದು

ಊರಿನ ಎಲ್ಲಾ ವಿಷಯಗಳು
ಚರ್ಚೆಯಾಗುವ ಕಟ್ಟೆಯೂ
ಮನೆ-ಮನೆಯ ರಂಗಿನ ಸುದ್ದಿಗಳೂ
ರೆಕ್ಕೆ-ಪುಕ್ಕ ಪಡೆವ ಹಳ್ಳಿ ಕಟ್ಟೆಯಿದು

ಹಳ್ಳಿಯ ರಾಜಕೀಯ ರಾರಾಜಿಸುತ
ಎಲ್ಲರ ಬಾಯಲ್ಲು ಹಬ್ಬುವ ಜನ್ಮಸ್ಥಳವಿದು
ಗೋಳದೆಲ್ಲ ಸಮಾಚಾರಗಳೂ
ಕಲರವಗೊಳ್ಳುವ ಚಚ್ಚೌಕದ ಹಳ್ಳಿ ಕಟ್ಟೆಯಿದು

ಬುಗುರಿ ಆಡಲು ಕಿರಿಯರು
ಸುದ್ದಿ ಓದುತ ಹಿರಿಯರೂ
ನ್ಯಾಯ ತೀರ್ಮಾನಕೆ ಎಲ್ಲರೂ
ನೆಚ್ಚಿಕೊಂಡಿರುವ ಮೆಚ್ಚಿನ ಕಟ್ಟೆಯಿದು

~ವಿಭಾ ವಿಶ್ವನಾಥ್

ಆಡುವೆವು ಆಟವ

ಗೆಳೆಯರೆಲ್ಲ ಒಂದುಗೂಡಿ
ಬಳಗವನ್ನು ಮಾಡಿಕೊಂಡು
ಮಸ್ತಿಯಲಿ  ಕಲಿಯುವೆವು ಪಾಠವ
ಅದರೊಂದಿಗೆ  ಆಡುವೆವು ಆಟವ

ಇಂದು ಗೋಲಿ, ನಾಳೆ ಗಜ್ಜುಗ
ಇನ್ನೊಮ್ಮೆ ಚಿಣ್ಣಿ-ದಾಂಡು,ಬುಗುರಿ
ಹೀಗೇ ಬೆಳೆಯುತಿವುದು ಆಟದ ಪಟ್ಟಿ
ಜೊತೆಗೆ ಗೆಳೆಯರ ಪಟ್ಟಿಯೂ

ಬಿಸಿಲು-ಮಳೆ ಏನೇ ಬರಲಿ
ಮನದಣಿಯೆ ಆಡುವೆವು ಆಟವ
ಸೋಲು - ಗೆಲುವು ಏನೇ ಇರಲಿ
ಎಲ್ಲರೂ ಇರುವೆವು ಜೊತೆಯಲಿ

ಆಟದಲಿ ಗೆಲ್ಲುವುದೇ ಗೆಲುವಲ್ಲ
ಮತ್ತೊಬ್ಬರ ಮನವ ಗೆಲ್ಲುವುದೇ ಗೆಲುವೆಂದು
ಹೀಗೇ ಒಂದೊಂದು ಆಟಗಳೂ ಕಲಿಸುತಿಹವು
ಮೌಲ್ಯಯುತ  ಜೀವನದ ಪಾಠವ

~ವಿಭಾ ವಿಶ್ವನಾಥ್

ನನ್ನ ಪಾಲಿನ ದೇವತೆ

ಬೀದಿಯಲಿ ಯಾರೋ ಬಿಸುಟಿ ಹೋದ,
ಹಸುಳೆಯ ಉಸಿರಿಗೆ ಉಸಿರು ಕೊಟ್ಟಳು
ಅದಕೊಂದು ಚೆಂದದ ಹೆಸರನಿಟ್ಟಳು
ಲಾಲಿಸಿ ಪಾಲಿಸಿ ಮುದ್ದಿಸಿದಳು

ನನ್ನ ಮಡಿಲಲಿ ಬೆಚ್ಚಗೆ ಜಾಗಕೊಟ್ಟಳು
ತಾನು ಉಣ್ಣದೆ ಮನಗೆ ಉಣಿಸಿದಳು
ಭಯವಾದಾಗ ಧೈರ್ಯ ತುಂಬಿದಳು
ಬದುಕಲು ಆತ್ಮಸ್ಥೈರ್ಯ ತುಂಬಿದಳು

ಪ್ರಾಮಾಣಿಕತೆಯೇ ದೇವರೆಂದು ಹೇಳಿದಳು
ತುಟಿಯಲೆಂದೂ ಮುಗುಳ್ನಗೆಯ ಬಿಡದವಳು
ಕಡುಕತ್ತಲಿನಲ್ಲಿಯೂ ಬೆಳಕು ತೋರಿದವಳು
ದಿಕ್ಕು ತಪ್ಪಿದಾಗ ದಾರಿದೀಪವಾದವಳು

ನನಗಾಗಿ ತನ್ನೆಲ್ಲಾ ಸುಖವ ಬಲಿಕೊಟ್ಟವಳು
ಲೋಕದ ಕಣ್ಣಿಗೆ ದುರಂತ ನಾಯಕಿಯಾದಳು
ಆದರೆ ನನ್ನ ಪಾಲಿನ ದೇವತೆಯವಳು
ಆ ದೇವತೆಯ ಹೆಸರೇ "ಅಮ್ಮ"

~ವಿಭಾ ವಿಶ್ವನಾಥ್

ಮಾಯಾಜಾಲ

ನಿನ್ನ ಮಾಯೆಗೆ ಎಲ್ಲರೂ ಸಿಲುಕುವರೇನು
ಓ ಮರುಳೇ...?
ಅರಿವಾಗಿದೆ ನಿನ್ನ ಬಣ್ಣದಜಾಲ
ಸಿದ್ದವಾಗಿದೆ ಕಾಲವೇ
ನಿನ್ನ ಮುಖವಾಡವನು ಕಳಚಲು
ನೀ ಮಾಡಿದ ಮೋಸವೇ,
ತಿರುಗಿ ನಿಂತಿದೆ ನಿನ್ನ ನುಂಗಲು.
ಕಳಚಿ ಬಿದ್ದಿದೆ ನಿನ್ನ ಭ್ರಮಾ ಸಾಮ್ರಾಜ್ಯ

-ವಿಭಾ ವಿಶ್ವನಾಥ್

ಬಯಕೆ

ಓ ಮರುಳೇ..,
ಸಿಗದಿದ್ದನ್ನು ಬಯಸುವಿಯೇಕೆ?
ಸಿಗದಿದ್ದಕ್ಕೆ ಕೊರಗುವಿಯೇಕೆ?
ಬಯಸಿದ್ದೆಲ್ಲಾ ದೊರೆತರೆ ,
ಬೆಲೆಯು ಉಂಟೇ ಬಯಕೆಗೆ?
ಸಿಗಬೇಕೆಂದಿದ್ದರೆ ಸಿಕ್ಕೇ ಸಿಗುವುದು
ತಾಳ್ಮೆಯು ಇರಲಿ ಜೀವನದಿ

-ವಿಭಾ ವಿಶ್ವನಾಥ್

ಗಣತಂತ್ರ್ಯ-ಪಾರತಂತ್ರ್ಯ-ಸ್ವಾತಂತ್ರ್ಯ

ಗಣಗಳಿಂದ ಗಣಗಳಿಗಾಗಿ
ಮಾಡಿದರು ಗಣತಂತ್ರ್ಯ

ಅದೇ ಗಣಗಳ ಸ್ವಾರ್ಥತೆ,
ಮಾಡುತಿದೆ ಅದನು ಪಾರತಂತ್ರ್ಯ

ಮೂಡಲಿ ಎಚ್ಚರಿಕೆ ಗಣಗಳಲಿ
ಸಾರ್ಥಕವಾಗಲಿ ಸ್ವಾತಂತ್ರ್ಯ

-ವಿಭಾ ವಿಶ್ವನಾಥ್

ವಿಪರ್ಯಾಸ

ಗಣಕೂಟಗಳು ಚೆನ್ನಾಗಿ ಕೂಡಿದರೂ,
ಮನಸುಗಳೇಕೋ ಕೂಡಲಿಲ್ಲ
ಇದುವೇ ಎಂಥ ವಿಪರ್ಯಾಸ!

ಜನಗಳೆಲ್ಲ ಮನದುಂಬಿ ಹರಸಿದರೂ,
ವಿಧಿಯು ಏಕೋ ಹರಸಲಿಲ್ಲ
ಇದುವೇ ಎಂಥ ವಿಪರ್ಯಾಸ!

-ವಿಭಾ ವಿಶ್ವನಾಥ್

ಮೊಗ್ಗಿನ ಯಾತ್ರೆ

ಭೂತಾಯಿಯಿಂದ ಜೀವ ಪಡೆದು
ಸಸ್ಯಕಾಶಿಯಲಿ ಒಲವ ಪಡೆದು

ನೇಸರನ ಹೊಂಗಿರಣಕೆ ಕಾಯತಲಿ
ನಳನಳಿಸುತ ಎಲ್ಲರ ಆರೈಕೆಯಲಿ

ಅರಳುತಿವುದು ಮೊದಲ ಮೊಗ್ಗು
ದಿನವು ಅದಕೆ ಹಿಗ್ಗೋ-ಹಿಗ್ಗು

ದುಂಬಿಗೆ ತನ್ನ ಮಧುವ ನೀಡುತ
ಮುಗಿಸುತಲಿತ್ತು ತನ್ನ ಯಾತ್ರೆಯ ಧನ್ಯವಾಗುತ

-ವಿಭಾ ವಿಶ್ವನಾಥ್

ಜೀವದ ಮೊಗ್ಗು

ಮೂಡಿದೆ ಮನದಲಿ
ನಲ್ಮೆಯ ಹಿಗ್ಗು
ಗರ್ಭದಿ ಪಡಿಮೂಡಿದೆ
ಮೊದಲ ಮೊಗ್ಗು
ಹೆಣ್ಣೆಂಬ ಒಂದೇ ಕಾರಣಕೆ
ಚಿವುಟಿದರು ಅದನು ಮೊಗ್ಗಲೇ
ಕಮರಿತು ಜೀವವು ಚಿಗುರಲೇ
ಅರಳಿ ಹೂವಾಗುವ ಮೊದಲೇ

-ವಿಭಾ ವಿಶ್ವನಾಥ್

ಅಲೆಮಾರಿ ವಿಹಾರ

ಎಷ್ಟೇ ಅಲೆದರೂ ಈ ವಾರ,
ತಂಗಳು ಅನ್ನಕೂ ತತ್ವಾರ
ನಡೆದಿದೆ ಹೊಟ್ಟೆಯ ಮುಷ್ಕರ
ಸಿಗುವುದೇ ಆಹಾರ ?
ಇದುವೇ ಅಲೆಮಾರಿಯ ವಿಹಾರ
ದೊರೆವುದೇ ಇದಕೆ ಪರಿಹಾರ?

-ವಿಭಾ ವಿಶ್ವನಾಥ್

ತಂಗಳು ಮಾತುಗಳು

ಯಾವ ನೈಜತೆಯಿಲ್ಲದಿದ್ದರೂ
ನೀಚ ನಾಲಿಗೆಯು ಆಡಿದ 
ತಂಗಳು ಮಾತುಗಳ,
ತಿಂಗಳಾದರೂ ಮರೆಯರು..
ಅವೇ ಇರಬೇಕು
ಹಸಿದ ನಾಲಿಗೆಗೆ ಹೆಚ್ಚು ರುಚಿ

-ವಿಭಾ ವಿಶ್ವನಾಥ್

ಉರುಳುತಲೇ ಇದೆ...

ಉರುಳುತಿದೆ ಜೀವನಚಕ್ರ,
ಯಾರ ಅಪ್ಪಣೆಗೂ ಕಾಯದೆ.
ಕಾಲದ ಪರಿಮಿತಿ ಇದಕಿಲ್ಲ
ಯಾರ ಅಪ್ಪಣೆಯೂ ಬೇಕಿಲ್ಲ
ಯಾವ ದ್ವಂದ್ವದ ನಿಲುವಿಲ್ಲ
ಹುಟ್ಟು-ಸಾವು , ಸುಖ-ದುಃಖ
ಯಾವುದಕೂ ಅಂಜದೆ, ಅಳುಕದೆ
ಉರುಳುತಲೇ ಇದೆ ಜೀವನಚಕ್ರ...

-ವಿಭಾ ವಿಶ್ವನಾಥ್