ಶುಕ್ರವಾರ, ಏಪ್ರಿಲ್ 26, 2019

ಅರೆಬರೆದ ಕವಿತೆಅರೆಬರೆದ ಕವಿತೆ ಕಾಯುತಲಿತ್ತು
ಜೀವ  ತಳೆಯುವುದಕ್ಕೆಂದು
ಜೀವ ತಳೆದು ಬದುಕುವುದಕ್ಕೆಂದು
ಬದುಕಿ ಬಾಳುತ್ತಾ ಮನೆಮಾತಾಗಲೆಂದು

ಅವನ ಜೋಳಿಗೆಯಲಿ ಅವಿತು
ಅವನಿಗರ್ಪಣೆಯಾಗಲೆಂದು
ಅವಳ ಹೊಗಳಿಕೆಯ ಸವಿಯಲೆಂದು
ಅವರಲ್ಲಿ ಭಾಂದವ್ಯವ ಬೆಸೆಯಲೆಂದು

ಪುಸ್ತಕದಿ ತಾನು ಪ್ರಕಟವಾಗುತಲಿ 
ತಾನು ಜನಜನಿತವಾಗಲೆಂದು
ಅವರಿವರ ವಾಚನದಿ ಬೆಳೆಯಲೆಂದು
ಅವರಿವರ ವಿಮರ್ಶೆಗೆ ಪಕ್ಕಾಗಲೆಂದು

ಅರೆಬರೆಸಿಕೊಂಡ ಕವಿತೆಗೆ ಅರಿವಿರಲಿಲ್ಲ
ತನಗೂ ಪ್ರತಿಸ್ಪರ್ಧಿಗಳಿರುವರೆಂದು
ಅವಳಿಂದ ತಾನು ತಿರಸ್ಕೃತವಾಗುವೆನೆಂದು
ಅವರಿವರಿಂದಲೇ ಮೂಲೆಗುಂಪಾಗುವೆನೆಂದು

ಕೊನೆಗೂ ಕವಿತೆಗೆ ಜೀವ ಕೊಡಲಿಲ್ಲ
ಅದು ಕಾಯುತ್ತಲೇ ಇರಲೆಂದು
ತಿರಸ್ಕಾರಕ್ಕಿಂತ ಕಾಯುವಿಕೆಯೇ ಲೇಸೆಂದು
ಸಮಯ ನೀಡಿದಷ್ಟೂ ಪ್ರಬುದ್ಧವಾಗುವುದೆಂದು

~ವಿಭಾ ವಿಶ್ವನಾಥ್

ಸೋಮವಾರ, ಏಪ್ರಿಲ್ 22, 2019

ನನ್ನ ಹಾಡು ನನ್ನದೇ

ಆ ಹಾಡು ನಿನ್ನದಾಗುವ ಪ್ರಮೇಯವಿಲ್ಲ
ನನ್ನ ಹಾಡದು, ನನಗೆ ಮಾತ್ರ ಮೀಸಲು

ನನ್ನ ಜೋಗುಳದ ದನಿಗೆ ನೀ ಕಣ್ಮುಚ್ಚುತ್ತಿದ್ದೆ
ತುಟಿಯಂಚಿನಲಿಷ್ಟು ಮಾಸದ ಮುಗುಳ್ನಗು
ನಿನ್ನ ಮೊಗದ ಆ ಹಾಡು ನಿನ್ನದೆನಿಸಿದರೂ
ನಿನಗೆ ದಕ್ಕದು, ನನ್ನದೇ ಹಾಡದು..

ಕೈ ಬೆರಳು ಹಿಡಿದು ದಾರಿ ತೋರಿದವಳನ್ನು
ಕೈ ಬಿಟ್ಟು ಹೊರಡುವಾಗ ಆಡಿದ ಮರುನುಡಿ
ನಿನ್ನ ದರ್ಪದ, ನನ್ನ ವೇದನೆಯ ಹಾಡು
ನಿನಗೆ ಅರಿವಾಗಲಿಲ್ಲ, ನನ್ನದೇ ಹಾಡದು..

ನೀ ಬಿಕ್ಕಿ ಅಳುವಾಗ ನಾ ಸಂತೈಸಿದರೂ
ನಿನ್ನಿಂದಾಗಿ ನಾ ಅಳುವಾಗಿನ ಬಿಕ್ಕುವಿಕೆ
ನಿನ್ನ ಪಾಲಿಗೆಂದಿಗೂ ಕೇಳದ ರಾಗವದು
ನೀ ಕೊಟ್ಟ ವೇದನೆಯಾದರೂ, ನನ್ನದೇ ಹಾಡದು..

ನಿದಿರೆಯ ಮತ್ತಿನಂತಹಾ ಸಾವಿನಲ್ಲಿಯೂ
ನಿನ್ನದೇ ದಯೆಯಿಂದ ಅಡಿ ಇಡುವಾಗ
ಹಾಡದಿದ್ದರೂ ಅರಿವಾಗುವ ಮೃತ್ಯುಛಾಪದ ರಾಗ
ವರವಲ್ಲದೇ ಶಾಪವಾದರೂ, ನನ್ನದೇ ಹಾಡದು..

~ವಿಭಾ ವಿಶ್ವನಾಥ್

ಭಾನುವಾರ, ಏಪ್ರಿಲ್ 21, 2019

ನೋವಿನಲೆಯ ನಡುವೆ

"ಸಂಭ್ರಮದ ಸವಿಯಲೊಂದು
ಹೊಸ ನೋವು ಗೋಚರಿಸಿತು
ಹಳೆ ಗಾಯದ ಮುಲಾಮು
ಹೊಸ ನೋವಿಗೆ ಸಾಂತ್ವನಿಸಲಿಲ್ಲ"

ಎಂದು ಆಗ ತಾನೇ ಅಪ್ಡೇಟ್ ಮಾಡಿದ ಸ್ಟೇಟಸ್ ಅನ್ನು ನೋಡಿ "ವೈ, ವಾಟ್ ಹ್ಯಾಪನ್ಡ್?", "ಕ್ಯಾನ್ ಐ ಹೆಲ್ಪ್ ಯೂ?", ಎಂಬೆಲ್ಲಾ ರಿಪ್ಲೈಗಳು ಕ್ಷಣಾರ್ಧದಲ್ಲಿ ಅದಿತಿಯ ಮೆಸೆಂಜರ್ ನಲ್ಲಿ ಬಂದು ಬಿದ್ದಿದ್ದವು.       

ತಾನು ಬರೆದವುಗಳನ್ನೆಲ್ಲಾ ಫೇಸ್ಬುಕ್ ಮತ್ತು ವಾಟ್ಸಾಪ್ ಸ್ಟೇಟಸ್ ಗಳಿಗೆ ಹಾಕುವುದು ಒಂದು ರೀತಿಯ ಗೀಳಾಗಿತ್ತು ಅದಿತಿಗೆ. ಒಂದರ್ಥದಲ್ಲಿ ವಿವಿಧ ಅರ್ಥ, ಭಾವನೆಗಳನ್ನು ಧ್ವನಿಸುವ ಸ್ಟೇಟಸ್ ಗಳು ಒಬ್ಬೊಬ್ಬರಿಗೆ ಒಂದೊಂದು ಭಾವದ ಅಲೆಗಳನ್ನು ತಲುಪಿಸುತ್ತಿದ್ದವು. ಆದರೆ, ಅದಿತಿ ಮನಬಿಚ್ಚಿ ಮಾತನಾಡುತ್ತಿದ್ದುದ್ದೇ ಅಪರೂಪ. ತನ್ನ ಮನಸ್ಸಿನ ಭಾವನೆಗಳನ್ನು ಆಕೆ ತೋಡಿಕೊಳ್ಳುತ್ತಿದ್ದದ್ದು ಹೆಚ್ಚಾಗಿ ಪುಸ್ತಕ, ಲೇಖನಿಗಳ ಜೊತೆಗೇ.. ಆಕೆಗೂ ಅರಿವಾಗಿತ್ತು ಮೋಸದ ಮಾಯಾ ಪ್ರಪಂಚದಲ್ಲಿ ತನ್ನದೆಂಬ ಭಾವನೆಗಳಿಗೆ ಸ್ಪಂದಿಸುವವರೆಲ್ಲರೂ ತನ್ನವರಲ್ಲವೆಂದು. ಹಾಗಾಗಿ ನಗುವಿನ ಮುಖವಾಡ ತೊಟ್ಟು ಹೆಚ್ಚು ಮಾತಿಲ್ಲದೆ ಕಾಲ ಕಳೆಯುತ್ತಿದ್ದದ್ದೇ ಹೆಚ್ಚು.ಸಂಗೀತ, ಪುಸ್ತಕ, ಡೈರಿ, ಕಥೆ-ಕವನಗಳು, ಅನಾಥಾಶ್ರಮದ ಮಕ್ಕಳು, ಜೊತೆಗೆ ದ್ವಂದ್ವದ ನಿಲುವಿನ ಸ್ಟೇಟಸ್ ಗಳು, ಅದನ್ನೋದುವ ಮತ್ತು ಪ್ರತಿಕ್ರಿಯಿಸುವ ಜನರ ಮನೋಭಾವ ಇವುಗಳೇ ಒಂದರ್ಥದಲ್ಲಿ ಅವಳ ನೆಚ್ಚಿನ ಸಂಗಾತಿಗಳು.

ಅದಿತಿಯ ಬಾಳ ಸಂವತ್ಸರದಲ್ಲಿ ಈಗ 24 ವಸಂತಗಳು ಕಳೆದಿವೆ. ಎಂ.ಎನ್.ಸಿ ಕಂಪೆನಿಯಲ್ಲಿ ಕೈ ತುಂಬಾ ಸಂಬಳದ ಕೆಲಸ, ಆಗಾಗ ಫಾರಿನ್ ಟ್ರಿಪ್ ಗಳು, ವಾಸಿಸಲು ಒಳ್ಳೆಯ ಫ್ಲಾಟ್, ಮನೆಕೆಲಸಕ್ಕೆ ಕೆಲಸದವರು ಹೀಗೇ ಮಧ್ಯಮ ವರ್ಗದವರಿಗೆ ದುಬಾರಿ ಎನ್ನಿಸುವಂತಹ ಆದರೆ ಎಲ್ಲರೂ ಬದುಕಲಿಚ್ಚಿಸುವಂತಹಾ ಸುಭದ್ರ ಜೀವನ. ಆದರೆ ಅವಳದ್ದು ಸುಖೀ ಕುಟುಂಬವಾ? ಸುಖೀ ಬದುಕಾ? ಎಂಬ ಪ್ರಶ್ನೆಗೆ ಅವಳಲ್ಲೇ ಉತ್ತರವಿರಲಿಲ್ಲ.

ಪ್ರತೀಕ್ ಅದಿತಿಯ ಬದುಕಲ್ಲಿ ಬಂದು ಹೋದ ಬಳಿಕ ಅವಳಿಗೇ ಅರಿವಾಗದಂತೆ ಅವಳು ಪ್ರಬುದ್ದಳಾಗಿದ್ದಳು. ಮುಗ್ದತೆ ಇದ್ಡೆಡೆ ಈಗ ಆತ್ಮಸ್ಥೈರ್ಯವಿದೆ ಆದರೆ ಈಗ ಅವಳ ಬಾಳಲ್ಲಿ ಪ್ರತೀಕ್ ಮಾತ್ರ ಇಲ್ಲ.ಪ್ರತೀಕ್ ಇದ್ದಿದ್ದರೆ ಇಷ್ಟು ಸುಖವಾಗಿರುತ್ತಿದ್ದೆನಾ ಎಂಬ ಪ್ರಶ್ನೆ ಅವಳಲ್ಲಿ ಮೂಡದೆಯಂತೂ ಇಲ್ಲ.

ಇಂಜಿನಿಯರಿಂಗ್ ಮುಗಿದು ಕೆಲಸ ಸಿಕ್ಕಾಗ ಬೋನಸ್ ಎಂಬಂತೆ ಮನೆಯಲ್ಲಿ ನೋಡಿದ ಹುಡುಗ ಪ್ರತೀಕ್ ನೊಂದಿಗೆ ಅದಿತಿಯ ಮದುವೆಯೂ ಆಗಿತ್ತು. ವಿವಾಹದ ಮುಂಚೆಯೂ ಅಷ್ಟೇನು ಸಲಿಗೆಯಿಂದಿಲ್ಲದ ಹುಡುಗನ ವರ್ತನೆ ವಿವಾಹದ ನಂತರ ಸ್ವಲ್ಪ ಬದಲಾಗಿತ್ತು. ಅದು ಬದಲಾದ ವರ್ತನೆಯಲ್ಲ, ಅತಿರೇಕದ ವರ್ತನೆ ಎಂದು ಅವಳಿಗೆ ಅರಿವಾಗಲು ಕೆಲಕಾಲ ಬೇಕಾಯಿತು. ತನ್ನ ವ್ಯಕ್ತಿಸ್ವಾತಂತ್ರ್ಯದ ಪ್ರತಿಯೊಂದು ಹಂತದಲ್ಲೂ ಅಡ್ಡಗಾಲು ಹಾಕುತ್ತಿದ್ದುದ್ದು ಬಹಳ ಹಿಂಸೆಯೆನಿಸುತ್ತಿತ್ತು. ನೋಡುವವರ ಕಣ್ಣಿಗದು ಸುಖದ ಸಂಸಾರ. ಹುಡುಗನಿಗೆ ಕುಡಿತದ ಚಟವಿಲ್ಲ, ಬೀಡಿ-ಸಿಗರೇಟ್ ಗಳ ಚಟವೂ ಇಲ್ಲ. ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜ್ ಒಂದರಲ್ಲಿ ಲೆಕ್ಚರರ್, ಒಳ್ಳೆಯ ಸಂಬಳ, ಐಷಾರಾಮಿ ಜೀವನ, ಅತ್ತೆ-ಮಾವನವರಿಲ್ಲದ, ಅತ್ತಿಗೆ,ನಾದಿನಿ,ಮೈದುನನಂದಿರಿಲ್ಲದ ಮನೆ. ಇನ್ನೇನು ಬೇಕಿತ್ತು ಒಳ್ಳೆಯ ಸಂಸಾರಕ್ಕೆ..?

ಆದರೆ, ಹೇಳಿದರೆ ಅವಳ ಮಾತನ್ನು ಯಾರೂ ನಂಬುವವರಿರಲಿಲ್ಲ. ಅದಿತಿ ಅವನ ವರ್ತನೆಯಿಂದ ಕಂಗೆಟ್ಟು ಹೋಗಿದ್ದಳು. ಪ್ರತೀಕ್ ಅವಳ ಪಾಲಿಗೆ ಬಿಸಿತುಪ್ಪವಾಗಿ ಪರಿಣಮಿಸಿದ್ದ. ಉಗುಳುವಂತೆಯೂ ಇಲ್ಲ, ನುಂಗುವಂತೆಯೂ ಇಲ್ಲ..! ಪ್ರತಿಯೊಂದಕ್ಕೂ ಪ್ರಶ್ನೆ, ಪ್ರತಿದಿನವೂ ಬಂದ ತಕ್ಷಣ ಅವಳ ಮೊಬೈಲ್ ಕರೆಗಳು ಮತ್ತು ಮೆಸೇಜ್ ಚೆಕ್ ಮಾಡುತ್ತಿದ್ದದ್ದು ಇವೆಲ್ಲವೂ ಕಿರಿಕಿರಿ ಉಂಟು ಮಾಡುತ್ತಿದ್ದವು. "ಅಲ್ಯಾಕೆ ಹೋಗಿದ್ದೆ?"," ಇವರ ಜೊತೆ ಮಾತನಾಡಬೇಡ", "ಇವತ್ಯಾಕೆ ಲೇಟು?","ಫೇಸ್ಬುಕ್ ಗೆ ಫೋಟೋ ಅಪ್ಡೇಟ್ ಮಾಡಬೇಡ" ಇಂತಹವೇ ನಿರ್ಬಂಧಗಳು.. ಪ್ರತೀಕ್ ಕಾಲೇಜ್ ನಲ್ಲಿ ಅಷ್ಟೇ ಲೆಕ್ಚರರ್ ಆಗಿರಲಿಲ್ಲ. ಮನೆಯಲ್ಲೂ ಅದೇ ರೀತಿ ಬಿಹೇವ್ ಮಾಡುವುದಕ್ಕೆ ಶುರು ಮಾಡಿದ್ದ. ಸಹಿಸಿಕೊಂಡರೆ ಸರಿ ಎದುರು ವಾದಿಸಿದರೆ ಅತಿಯಾದ ಅತಿರೇಕದ ಪ್ರಶ್ನೆಗಳು, ಅತಿ ಎನ್ನಿಸುವಷ್ಟು ನಿರ್ಬಂಧ, ಜೋರು ಮಾತು, ಅಪ್ಪಣೆ, ತಾನೇ ಸರ್ವಾಧಿಕಾರಿ ಎಂಬಂತಹಾ ಧೋರಣೆ. ಇಷ್ಟೇ ಆಗಿದ್ದರೆ ಪರವಾಗಿರುತ್ತಿರಲಿಲ್ಲವೇನೋ.. ಅದಿತಿಯ ಕವಿತೆಗಳ, ಕಥೆಗಳ ಭಾವನೆಗಳ ಕೆದಕುವಿಕೆಗೂ ಶುರು ಮಾಡಿದ್ದ.

"ಓ, ಇವತ್ತೇನು ಪ್ರೇಮ ಕವಿತೆ ಬರೆದಿದ್ದೀಯಾ.. ಯಾರನ್ನು ನೋಡಿ ಬರೆದಿದ್ದೀಯಾ..?", "ವಿರಹದ ಕಥೆಗಳೂ ಇವೆ. ಹಾಗಾದರೆ ಬ್ರೇಕ್ ಅಪ್ ಸ್ಟೋರಿ ಕೂಡಾ ಇರಲೇ  ಬೇಕು. ಯಾರದು..?" ಎಂಬ ಕುಹಕದ ಮಾತುಗಳು. "ನಿಮ್ಮಂತಹಾ ನೂರಾರು ಇಂಜಿನಿಯರಿಂಗ್ ಸ್ಟೂಡೆಂಟ್ ಗಳಿಗೆ ಪಾಠ ಮಾಡುವವನು ನಾನು, ನಿಮ್ಮ ಕಥೆಗಳೆಲ್ಲಾ ಗೊತ್ತಿಲ್ಲದಂತಹವುಗಳಾ, ಹೇಳು..?" ಇದೇ ರೀತಿಯ ಸಂದೇಹ. ಎದುರುತ್ತರ ನೀಡಿದರೆ, ವಾದಿಸಿದರೆ ಬೈಗುಳಗಳ ಪ್ರವಾಹ. ಯಾವತ್ತೂ ದೈಹಿಕವಾಗಿ ಹಿಂಸಿಸಿದವನೇ ಅಲ್ಲದ ಪ್ರತೀಕ್, ಮಾನಸಿಕವಾಗಿ ಅದಿತಿಯನ್ನು ಬಹಳವೇ ಹಿಂಸಿಸುತ್ತಿದ್ದ.
   
ಆದರೆ ಅವತ್ತು ಬೆಳಿಗ್ಗೆ ಅದಿತಿ ಬರೆಯುತ್ತಿದ್ದ 'ನೋವಿನಲೆಯ ನಡುವೆ' ಕಾದಂಬರಿಯ ಹಸ್ತಪ್ರತಿಯನ್ನು ಕಂಡವನೇ ವಿನಾಕಾರಣ ಜಗಳ ಮಾಡಿದ್ದ.  ಅದಿತಿಗೂ ಸಿಟ್ಟು ಹೆಚ್ಚಾಗಿ ಜಗಳ ತಾರಕ್ಕೇರಿತ್ತು. ಹೀಗೆ ಸಿಟ್ಟಲ್ಲೇ ಮನೆಯಿಂದ ಹೊರಬಿದ್ದವ ಯಾವುದೋ  ಆಕ್ಸಿಡೆಂಟ್ ಮಾಡಿಕೊಂಡು ಶವವಾಗಿದ್ದ. ಮದುವೆಯಾಗಿ ವರ್ಷ ತುಂಬುವ ಮೊದಲೇ ಅದಿತಿಯ ಸೌಭಾಗ್ಯ ಮುಗಿದಿತ್ತು. ಎಲ್ಲರೂ ಅದಿತಿಯ ಕಾಲ್ಗುಣವನ್ನೇ ದೂಷಿಸಿದ್ದರು.

ನಂತರ, ಒಂಟಿ ಹೆಣ್ಣು ಎಂದು ಸಂತಾಪ ಸೂಚಿಸಿ ಸ್ವಂತಕ್ಕೆ ಬಳಸಿಕೊಳ್ಳಲು ನೋಡಿದವರೇ ಹೆಚ್ಚು. ಅದಿತಿಗೆ ಪ್ರತೀಕ್ ಸಾವಿನಿಂದ ದುಃಖವೂ ಆಗಲಿಲ್ಲ, ಸಂತಸವೂ ಆಗಲಿಲ್ಲ, ಅಂದಿನಿಂದ ಒಂದು ರೀತಿಯ ನಿರ್ಲಿಪ್ತತೆ ಆವರಿಸಿತ್ತು.  ಇವೆಲ್ಲಾ ಬವಣೆಗಳಿಂದ ಪಾರಾಗಲು ಕೆಲಸದ,ಬರಹದ ಕಡೆ ಹೆಚ್ಚಿನ ಗಮನ ನೀಡಿದಳು. ಒಂಟಿ ಬದುಕು ಒಂದು ರೀತಿ ಅಪ್ಯಾಯಮಾನವೇ ಆಗಿತ್ತು ಅವಳಿಗೆ. ಇಲ್ಲಿಯವರೆಗೂ...!

ಗೆಳತಿಯ ಮದುವೆಗೆಂದು  ಬಂದವಳಿಗೆ ಹೊಸ ರೀತಿಯ ಭಾವನೆಗಳು, ತನ್ನ ಜೀವನದಲ್ಲಿಲ್ಲದ ಭಾಂದವ್ಯಗಳು ಗೋಚರಿಸತೊಡಗಿದವು. ಅದೇ ಸಮಯಕ್ಕೆ ಮನೆಯಲ್ಲೂ ಮರುಮದುವೆಯ ಪ್ರಸ್ತಾಪ ನಡೆದಿತ್ತು.

ಬಂದವರೆಲ್ಲರಿಗೂ ಅದಿತಿಯ ಆಸ್ತಿ, ಹಣ, ರೂಪದ ಮೇಲೆಯೇ ಕಣ್ಣು. ಅದೇಕೋ ಅದಿತಿಗೆ ಬಂದವರೆಲ್ಲರೂ ಪ್ರತೀಕ್ ನ ಪ್ರತಿರೂಪದಂತೆಯೇ ಭಾಸವಾಗುತ್ತಿದ್ದಾರೆ. ಬರುವ ಮುಂದಿನ ಜೀವನದ ಪ್ರತೀಕ್ಷೆಯಲ್ಲೇ ಕಾಲ ಕಳೆಯಬೇಕೇ ಎಂದುಕೊಂಡವಳಿಗೆ ಪ್ರತೀಕ್ ನ ರೂಪ ಬಿಟ್ಟು ಬೇರೆ ರೂಪ ಗೋಚರಿಸುವುದೇ..?
 
ಇವೆಲ್ಲಾ ಗೋಜಲುಗಳ ನಡುವಲ್ಲೇ ಹಾಕಿದ ಸ್ಟೇಟಸ್ ಗೆ ಪ್ರತ್ಯುತ್ತರವಾಗಿ ಕಂಡದ್ದು ಇನ್ನೊಂದು ಕವನದ ಸ್ಟೇಟಸ್.

"ನೋವಿನಲೆಯ ನಡುವಲ್ಲಿಯೂ ನಿಲ್ಲದೆಯೇ
ತೇಲಿ ಬರುವುದು ಸಂತಸದ ಸಾಂತ್ವನದ ಹಾಯಿದೋಣಿ"

ಯಾಕೋ ಅದಿತಿ ಈ ಸಾಲುಗಳ ಮೂಲ ಹುಡುಕಿಕೊಂಡು ಹೊರಟಾಗ ಸಿಕ್ಕಿದ್ದು ಸಾಧನಾ. ಸಾಧನಾಳ ಕಥೆಯೂ ಬಹುಪಾಲು ಅದಿತಿಯಂತೆಯೇ.. ಆದರೆ ಸಾಧನಾ ಈಗ 'ಸಾಂತ್ವನ' ಎಂಬ ಸಂಸ್ಥೆಯ ಸ್ಥಾಪಕಿ ಮತ್ತು ಸಂಚಾಲಕಿ. ಬದುಕಿನಲ್ಲಿ ನೊಂದವರಿಗೆ ಸಾಂತ್ವನ ತುಂಬುವ ಮಮತಾಮಯಿ, ಅನಾಥ ಮಕ್ಕಳ ಮೆಚ್ಚಿನ ಅಮ್ಮ. ಅದಿತಿಗೆ ಇದೆಲ್ಲವನ್ನೂ ಕಂಡು ಆಶ್ಚರ್ಯದ ಜೊತೆಗೆ ಹೊಸ ಬೆಳಕೂ ಗೋಚರಿಸಿತು. ಈಗ ಅದಿತಿಯೂ 'ಸಾಂತ್ವನ'ದ ಮತ್ತೊಬ್ಬಳು ಸಕ್ರಿಯ ಸಂಚಾಲಕಿ. ಅಲ್ಲದೇ ಇಂದು ಅವಳು ತನ್ನ ಚೊಚ್ಚಲ ಕಾದಂಬರಿ 'ನೋವಿನಲೆಯ ನಡುವೆ' ಯನ್ನು 'ಸಾಂತ್ವನ'ದ ಸದಸ್ಯರ ಜೊತೆಯಲ್ಲೇ ಬಿಡುಗಡೆ ಮಾಡುತ್ತಿದ್ದಾಳೆ.

~ವಿಭಾ ವಿಶ್ವನಾಥ್

ಶನಿವಾರ, ಏಪ್ರಿಲ್ 13, 2019

ಇಲ್ಲಿ ಸೀತೆ, ಅಲ್ಲಿ ರಾಮ..ಸೀತೆಯ ಸ್ವಗತ
............................
ಮುಗಿಯದ ಮೌನ,ಎಣೆಯಿಲ್ಲದ ಧ್ಯಾನ
ಎಡೆಬಿಡದ ಕಾರ್ಯದೊಳಗೂ ಏಕಾಂತ
ಕಾಯುತ್ತಿರುವೆ ನಿನ್ನ ಒಂದೇ ಮಾತಿಗೆ
ಹಂಬಲಿಸುತ್ತಿರುವೆ ನಿನ್ನ ಒಂದು ನುಡಿಗೆ
ನಿನ್ನ ಬದುಕಿನ ಒಂದು ಕ್ಷಣ ನೀಡು ನನಗಾಗಿ
ಮುಕ್ತವಾಗಿ ಮಾತನಾಡೆಯಾ ನೀನು ನನ್ನೊಡನೆ?
ಮುಕ್ತಿ ನೀಡು ನನ್ನೆಲ್ಲಾ ಪ್ರಶ್ನೆಗಳಿಗೆ

ರಾಮ, ನಿನಗಾಗಿ ಕಾದು-ಕಾದು ಬಳಲಿ ನಾನು ಬರೆಯುತ್ತಿರುವ ಕಾಗದ ಎಷ್ಟನೆಯದೋ, ಬರೆದು ಹರಿದುದೆಷ್ಟೋ... ಕಾಗದ ಬರೆಯುತ್ತೇನೆ ಅಷ್ಟೇ, ನಿನಗಾಗಿ ಕೊಡಲು ಅಥವಾ ತೋರಿಸಲೆಂದೇನೂ ಅಲ್ಲ, ನನ್ನೊಳಗಿನ ನೋವನ್ನು ಹಗುರ ಮಾಡಿಕೊಳ್ಳಲು ಇದೊಂದು ವಿಧಾನ ಅಷ್ಟೇ..

ಶಬರಿಯೂ ನಿನಗಾಗಿ ಕಾದಳು.ನೀ ಸಿಕ್ಕಿದ ನಂತರ ಮುಕ್ತಿ ಹೊಂದಿದಳು, ವನವಾಸದಲ್ಲಿ ರಾವಣನ ಬಂಧನದಿಂದ ಬಿಡಿಸಿಕೊಂಡು ಹೋಗಲು ಬರುವೆಯೆಂದು ನಾನೂ ಕಾದೆ. ಕೌಸಲ್ಯೆ, ಸುಮಿತ್ರೆ, ಕೈಕೇಯಿ, ಭರತ-ಶತ್ರುಘ್ನರು ಅಷ್ಟೇ ಏಕೆ? ಇಡೀ ನಗರವಾಸಿಗಳೇ ನಿನಗಾಗಿ ಕಾದರು. ಈ ಕಾಯುವಿಕೆಯಲ್ಲೂ ಒಂದು ತೆರನಾದ ಸುಖವಿದೆ. ಆದರೆ ಆ ಕಾಯುವಿಕೆಯಲ್ಲಿ ವರ್ಷಗಳ ನಿರೀಕ್ಷೆಯಿತ್ತು, ನೀನು ಬಂದೇ ಬರುವೆಯೆಂಬ ನಂಬಿಕೆಯಿತ್ತು. ಆದರೆ ಈಗ..?

ಯಾರೋ ಆಡಿದ ಮಾತಿನ ಸತ್ಯಾಸತ್ಯತೆಯನ್ನೂ ಪರೀಕ್ಷೆ ಮಾಡದಷ್ಟು ನಿರ್ದಯಿ ನೀನೇಕಾದೆ? ಕಾಡಿಗಟ್ಟುವ ನಿರ್ಧಾರವನ್ನು ನೀನೇ ತಿಳಿಸದಷ್ಟು ಪಲಾಯನವಾದಿ ನೀನೇಕಾದೆ?

ಶೀಲವೇ ದೊಡ್ಡದೆಂಬ ಪಾಠ ಚಿಕ್ಕಂದಿನಿಂದಲೂ ಹೇಳಿಕೊಂಡು ಬಂದರು. ಹಾಗೇ ನಡೆದುಕೊಂಡ ನನಗೆ ಬೆಲೆಯೇ ಇಲ್ಲವೇ? ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಎಂದು ನೀನೂ ನಿರ್ಧಾರ ಮಾಡಿದೆಯಾ..?ಅದಕ್ಕೆ ನನ್ನನ್ನು ಮಿಥಿಲೆಗೆ ಕಳುಹಿಸಲಿಲ್ಲವೇ? ನನಗೆ ಅತ್ತ ತಂದೆಯ ಮನೆಯೂ ಇಲ್ಲ, ಇತ್ತ ಗಂಡನ ಮನೆಯೂ ಇಲ್ಲದಂತೆ ಮಾಡಿ ನಡುನೀರಿನಲ್ಲೇ ಕೈ ಬಿಟ್ಟೆಯಾ..? ಜೀವನ ಮಾಡಲು ಬೇಕಾದಷ್ಟು ಸಂಪಾದಿಸಲು ಅರಿವಿರಬೇಕಿದ್ದ ವಿದ್ಯೆಯೂ ಇಲ್ಲ, ಮನೆಗೆಲಸ ಮಾಡುವೆನೆಂದರೂ ಕೆಲಸ ಕೊಡುವವರು ಯಾರು? ಕೆಲಸ ಸಿಕ್ಕಿದರೂ ಮಾಡುವುದಾದರೂ ಹೇಗೆ, ತುಂಬಿದ ಆ ಗರ್ಭವನ್ನೊತ್ತು..!

ಅರಮನೆಯಲ್ಲಿ ಕಣ್ಗಾವಲಿನಲ್ಲಿಯೇ ಇದ್ದ ನನಗೆ ಸ್ವಾತಂತ್ರ್ಯ ಬೇಕಾಗಿತ್ತು, ಅದನ್ನು ನಿನ್ನೊಡನೆ ಹೇಳುತ್ತಲೂ ಇದ್ದೆ. ಅದಕ್ಕೆಂದೇ ಇಷ್ಟು ಸ್ವತಂತ್ರ್ಯ ನೀಡಿದೆಯಾ..?

ಕಾಡಿಗೆ ಬಂದ ಕೆಲವು ದಿನಗಳಲ್ಲೇ ನನ್ನ ಕಣ್ಣೀರು ಬತ್ತಿ ಹೋಗಿದೆ. ಅಳಲು ಹೊರಟರೆ ಕಣ್ಣೀರು ಬರುವುದಿಲ್ಲ, ನಗಲು ಕಾರಣಗಳಿಲ್ಲ. ನಿರ್ಲಿಪ್ತ ಸೀತೆಯಿಂದ ನಿನಗಾವ ಆಶೋತ್ತರಗಳೂ ಸಿಗುವುದಿಲ್ಲ. ನಾಡಿನೊಡೆಯನಿಗೆ ಕಾಡ ಮಲ್ಲಿಗೆಯೇಕೆ ಅಲ್ಲವೇ? ನಾಡಿನ ದೇವರಿಗೆ ಪೂಜೆಗೆ ಅರ್ಪಿತವಾಗದಿದ್ದರೂ, ಕಾಡ ಮಲ್ಲಿಗೆ ಅರಳುವದನ್ನು ಬಿಡುವುದಿಲ್ಲ, ಹಾಗೆಯೇ ನಾನೂ ನೀ ಬರದಿದ್ದರೂ ಜೀವ ಕಳೆದುಕೊಳ್ಳಲಾರೆ..

ನೀನು ಬಂದರೂ ನಿನ್ನೊಡನೆ ಸಂತಸದಿಂದ ಅರಮನೆಗೆ ಮರಳಲಾರೆ. ಏಕೆಂದರೆ ಇಷ್ಟು ವರ್ಷಗಳೇ ಕಾಡಿನಲ್ಲಿದ್ದವಳಿಗೆ ಅರಮನೆಯ ಆಸೆಯೆಂದೋ ಬತ್ತಿ ಹೋಗಿದೆ. ಭೂಮಿಯಲ್ಲಿ ಹುಟ್ಟಿ, ಬೆಳೆದವಳಿಗೆ ಕಡೆ ಘಳಿಗೆಯಲ್ಲಿ ಭೂಮಿಯ ಮಡಿಲು ದೊರೆಯದೇ?ಆದರೂ ನೀನೊಮ್ಮೆ ಇಲ್ಲಿಗೆ ಬರುವೆಯಾ? ಶಬರಿಯಷ್ಟು ಪುಣ್ಯವಂತೆ ನಾನಾಗಿದ್ದರೆ ನೀನು ಬರುವವರೆಗೂ ಜೀವ ಹಿಡಿದು ಕಾದಿರುವೆ. ನಿನ್ನೊಡನೆ ಬದುಕುವುದಕ್ಕೇನೂ ಅಲ್ಲ, ನನ್ನೆಲ್ಲಾ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು...

ನೀನು ಎಲ್ಲರಿಂದಲೂ ಪುರಸ್ಕೃತನಾದರೂ, ಈ ಸೀತೆಯಿಂದ ಪರಿತ್ಯಕ್ತ.

-ಇಂತಿ
ನಿರ್ಲಿಪ್ತಳಾಗುತ್ತಿರುವ ಸೀತೆ

ರಾಮನ ಸ್ವಗತ
.............................
ಬಯಕೆಯನು ಚಿಗುರಲೇ ಚಿವುಟಿ
ಮನಸು ಅರಳುವ ಮುನ್ನವೇ,
ಅದನು ನರಳುವಂತೆ ಮಾಡಿ
ನನ್ನ ಬಾಳಿನ ನೀಲಾಂಜನೆಯನೇ
ದೂರ ಮಾಡಿಕೊಂಡು ನರಳುತಲಿರುವೆ
ನೀ ಒಮ್ಮೆಯಾದರೂ ಕ್ಷಮಿಸುವೆಯಾ?
ನೀ ನನ್ನನು ಕ್ಷಮಿಸಿದರೂ...
ನಾನೇ ನನ್ನನು ಕ್ಷಮಿಸಿಕೊಳ್ಳಲಾರೆ

ನೀನು ನನ್ನನ್ನು ಕ್ಷಮಿಸುವೆಯೆಂಬ ಭರವಸೆ ನನ್ನಲ್ಲಿ ಎಳ್ಳಷ್ಟೂ ಉಳಿದಿಲ್ಲ. ಲೋಕ ನನ್ನನ್ನು ನಿರ್ದಯಿಯೆಂದು ಜರಿದರೂ ನಾನು ಅಳುಕಲಾರೆ, ಆದರೆ ನೀನು ನನ್ನನ್ನು ನಿರ್ದಯಿಯೆಂದು ಜರಿದರೆ ಅದನ್ನು ತಾಳುವ ಚೈತನ್ಯ ನನ್ನಲ್ಲಿ ಉಳಿದಿಲ್ಲ. ನಾಡಿನ ರಾಣಿಯಾಗಿ ಮೆರೆಯಬೇಕಾಗಿದ್ದವಳನ್ನು, ಕಾಡಿಗೆ ಅಟ್ಟಿ ನಾನಿಲ್ಲಿ ಮೆರೆಯುತ್ತಿಲ್ಲ. ಯಾವ ತಪ್ಪನ್ನೂ ಮಾಡದೆ ಶಿಕ್ಷೆಗೆ ಒಳಪಟ್ಟಾಗ ಅನುಭವಿಸುವ ನೋವಿನ ಅರಿವು ನನಗಿದೆ. ಕೈಕೇಯಿ ಚಿಕ್ಕಮ್ಮನಿಂದ ನನಗಾಗಿದ್ದೂ ಅದೇ, ಆದರೆ ನನಗಾಗ ಪ್ರತಿಭಟಿಸುವ ಅವಕಾಶವಿತ್ತು ಆದರೆ ನಿನಗೆ ಆ ಅವಕಾಶವನ್ನೂ ನೀಡದಂತಾ ನಿರ್ದಯಿ ನಾನೇಕಾದೆನೆಂದು ನನಗೇ ಗೊತ್ತಿಲ್ಲ.ಸಮಯ ಎಲ್ಲವನ್ನೂ ಮರೆಸುತ್ತದೆಂದರೂ ಮನದಲ್ಲಿನ ಕಹಿ ನೆನಪುಗಳನ್ನು ಮರೆಸುವುದಿಲ್ಲ, ನಾನು ಬರೀ ನಿನಗೆ ಶಿಕ್ಷೆ ನೀಡಲಿಲ್ಲ,
ನನಗೆ ನಾನೇ ಶಿಕ್ಷೆ ವಿಧಿಸಿಕೊಂಡಿದ್ದೇನೆ. ಕಾಣದ ಪ್ರಜೆಯ ಒಂದು ಮಾತಿಗೆ ಹೆದರಿ ನಾನು ನಿನ್ನನ್ನು ಕಾಡಿಗೆ ಅಟ್ಟಿದ ಮೇಲೆ ನನಗನ್ನಿಸುತ್ತಿರುವುದು ಹೀಗೆ:

ರಾಮರಾಜ್ಯದ ಪ್ರಜೆಗಳಿಗೆ ರಾಮನ ಸ್ವಂತ ಜೀವನದ ಕುರಿತ ಅಕ್ಕರೆಯಿಲ್ಲ, ನಿನ್ನನ್ನು ಮತ್ತೆ ನನ್ನಲ್ಲಿಗೆ ಕರೆಸಿಕೋ ಎಂದು ಯಾರೂ ಹೇಳಲಿಲ್ಲ. ಬಹುಶಃ ಅವರಿಗೂ ಭಯವೇನೋ...? ಸೀತೆಯನ್ನೇ ಕಾಡಿಗೆ ಕಳುಹಿಸಿದವನು ನಾಳೆ ನಮ್ಮನ್ನೂ ಕಾಡಿಗಟ್ಟುವನೆಂದು..

ಸೀತೆಯಿಲ್ಲದ ರಾಮ ಎಂದಿಗೂ ಅಪೂರ್ಣನೇ, ನಿನ್ನನ್ನು ಕಾಡಿಗೆ ಕಳುಹಿಸಿದ ಮೇಲೆ ನೀ ಮರಳಿ ಬರುವುದಿಲ್ಲವೇ ಎಂದು.., ಮರಳಿ ಬಂದರೆ ಮುಂದೇನು ಮಾಡುವುದೋ ಎಂದು ಯೋಚಿಸಿದ್ದೇನೆ.ಆದರೆ ನಿನ್ನ ದಾರಿ ಕಾಯ್ದು ನಾನು ಹಣ್ಣಾದೆನೇ ಹೊರತು, ನೀನೆಂದು ಮರಳಿ ಬರಲೇ ಇಲ್ಲ.

ಹೆಣ್ಣಿಗೆ ಹಟವಿರಬಾರದು, ಗಂಡಿಗೆ ಚಟವಿರಬಾರದು ಎನ್ನುತ್ತಾರೆ. ನನ್ನಲ್ಲಿ ಚಟವಿಲ್ಲ ಆದರೆ ನಿನ್ನಲ್ಲಿ ಹಟವಿದೆ, ನಮ್ಮ ಸಂಸಾರ ಒಂದುಗೂಡಲು ನೀನೂ ಪ್ರಯತ್ನಿಸಬಹುದಾಗಿತ್ತು.ನೀನು ಸ್ವಲ್ಪ ನಿನ್ನ ಹಟ ಬಿಟ್ಟು ನನ್ನನ್ನು ಕೇಳಿದ್ದರೆ,ಇಬ್ಬರ ಗೋಳು ಕೊನೆಯಾಗುತ್ತಿತ್ತೇನೋ?ಆದರೆ, ನನಗೀಗ ಅನ್ನಿಸುತ್ತಿದೆ, ಸೀತೆ ರಾಮನಿಂದ ಪರಿತ್ಯಕ್ತಳಲ್ಲವೆಂದು, ರಾಮನೇ ಸೀತೆಯನ್ನು ಹೊಂದದ ದುರದುಷ್ಟವಂತನೆಂದು. ನೀನು ಬರದಿದ್ದರೂ, ನಾನೇ ಬರಬಹುದಿತ್ತಲ್ಲವೇ?ನಾನು ಬರೆದ ಪತ್ರವನ್ನೇ ನಿನಗೆ ಕಳುಹಿಸಿದರೆ ತಿರಸ್ಕರಿಸುತ್ತೀಯೆಂದು ಅವುಗಳನ್ನೇ ಕಳುಹಿಸದ ನಾನು, ಬಂದು ನಿನ್ನಿಂದ ತಿರಸ್ಕೃತನಾಗಿದ್ದರೆ....

ಬದುಕಿಯೂ ಸತ್ತಂತೆಯೇ ಅಲ್ಲವೇ..?

ಇಂತಿ
-ಸೀತೆಯ ಜೊತೆಯಿರಲಾಗದ ದುರದೃಷ್ಟ ರಾಮ

~ವಿಭಾ ವಿಶ್ವನಾಥ್

ಶನಿವಾರ, ಏಪ್ರಿಲ್ 6, 2019

ಯುಗಾದಿ ಹಬ್ಬ ಬಂದಾಗ...

[ವಸಂತ ಕಾಲ ಬಂದಾಗ ಹಾಡಿನ ಧಾಟಿ]

ಯುಗಾದಿ ಹಬ್ಬ ಬಂದಾಗ
ಬೇವು-ಬೆಲ್ಲ ಸವಿಯಲೇ ಬೇಕು
ಅಭ್ಯಂಜನ ಮಾಡಲೆ ಬೇಕು
ಬಾಳಲಿ ಕಹಿಯು ಬಂದಾಗ
ನಸುನಗುತ ಇರಬೇಕು
ಸುಖದೊಂದಿಗೆ ಅದನು ಸವಿಯಲೇ ಬೇಕು

ಯುಗದ ಆದಿಯ ಬಾಗಿಲಲಿ
ಹರುಷದಲಿ ನಿಂತಾಗ
ನಿನ್ನ ನಗುವ ನಾ ಕಾಣಬೇಕು ||ಯುಗಾದಿ||

ಹೊಸ ಬಟ್ಟೆ ತೊಟ್ಟು
ಹಣೆಗೆ ಕುಂಕುಮವಿಟ್ಟು
ಹೊಸತನದಿ ನೀ ಹರುಷದಿಂದಿರುವಾಗ||2||
ಕಾಣುವುದೇ ಚಂದ ನಿನ್ನನು

ಪೂಜೆ ಮಾಡುವಾಗ
ಆರತಿಯ ಬೆಳಗುವಾಗ
ಮುಗ್ದೆಯ ಹಾಗೆ, ಭಕ್ತೆಯ ಹಾಗೆ
ದೇವರ ನೀ ಪೂಜಿಸುವ ರೀತಿಯ..
ಮತ್ತೆ-ಮತ್ತೆ ಸವಿಯುವಾಸೆ
ನನ್ನ ಮುದ್ದಿನ ಕಣ್ಮಣಿ||ಯುಗಾದಿ||

ಕಹಿಯು ಮುಗಿದ ಮೇಲೆ
ಸಿಹಿ ಸವಿಯೊ ರೀತಿ ಬೇರೆ
ಹರುಷವು ಹಾಲಿ, ಕಷ್ಟವು ಖಾಲಿ||2||
ಮಾಗಿದೆ ಮನವು ಇದರಲಿ

ಇಂದು ಸುಖವು ಬಂತೆಂದು
ನಿನ್ನೆಯ ಕಹಿಯ ಮರೆತರೆ
ಕಣ್ಮಣಿ, ನಿನಗೆ ಅದರ ನೆನಪನು
ಮತ್ತೇಗೆ ಮಾಡಿ ಕೊಡಲಿ

ಓ... ಬಂದ ಕಹಿಯ ನುಂಗದೆ
ಸಿಹಿಯೇ ಬೇಕೆಂದು ಬಂದರೆ ನಾ ಎಲ್ಲಿ ಓಡಲಿ

-ವಿಭಾ ವಿಶ್ವನಾಥ್

ಮಂಗಳವಾರ, ಏಪ್ರಿಲ್ 2, 2019

ಕನಸುಗಳು ಮಾರಾಟಕ್ಕಿವೆ

ಕನಸುಗಳು ಮಾರಾಟಕ್ಕಿವೆ
ಕೊಳ್ಳಿರೆಲ್ಲಾ ಬಂದು ನೋಡಿ..

ಬಣ್ಣಬಣ್ಣದ ಕನಸುಗಳಲ್ಲ
ಶ್ರಮ-ಪರಿಶ್ರಮದ ಎಳೆಗೆ
ಸಂಯಮವ ಪೋಣಿಸಿ
ಮಣಿಮಾಲೆಯಂತಿರುವ ಕನಸುಗಳು

ಹರಿದು ಮಾಸಿದವುಗಳಿಗೆ
ತೇಪೆ ಹಾಕಿ ಹೊಲಿದಾಗಿದೆ
ಕಿತ್ತು ಹೋಗದ ನೇಯ್ಗೆಯಿಂದ
ಬೆಸೆದು ಬಂಧಿಯಾಗಿವೆ..

ಖಾಲಿ ಮಾಡಿರಿ ಈ ಕನಸುಗಳ..
ಮತ್ತೊಂದಿಷ್ಟು ಹೊಚ್ಚ ಹೊಸ  
ಕನಸುಗಳ ಮಾರಬೇಕೆಂದರೆ
ಹಳೆಯ ಕನಸುಗಳು ಬಿಕರಿಯಾಗಬೇಕು

ಬೇಕೆಂದಾಗ ಸಿಗದಿರಬಹುದು
ಸಿಕ್ಕಾಗ ಬಾಚಿ ಕೊಡೊಯ್ಯಿರಿ
ಅಗ್ಗದ ಕನಸುಗಳಿಗೆ ಕೈ ಹಾಕದಿರಿ
ಏಳ್ಗೆಯ ಕನಸುಗಳೆಂದಿಗೂ ದುಬಾರಿ

ಯಾರದ್ದೋ ಕನಸುಗಳು
ಮತ್ತಾರದ್ದೋ ನನಸುಗಳು
ಒಂದಾಗುವ ದಿವ್ಯ ಘಳಿಗೆಗಾಗಿ
ಇಂದೇ ಕನಸುಗಳ ಕೊಂಡೊಯ್ಯಿರಿ

ನಿದ್ದೆಯ ಖಜಾನೆಯ ಬರಿದಾಗಿಸಿ..
ಕೈ ತುಂಬಾ ಹಿಡಿದು, ಕಣ್ತುಂಬಾ ನೋಡಿ
ಕನಸುಗಳ ಕೊಂಡೊಯ್ಯಲು
ಆಶಾ ಭಾವನೆಯ ಹೊತ್ತು ಬನ್ನಿ

ಬಣ್ಣಗೆಟ್ಟಂತಿರುವ ಕನಸುಗಳಿಗೆ
ಹೊಸರೂಪ ಕೊಟ್ಟು ಸಲಹಿರಿ
ನಿಮ್ಮದೇ ಕನಸುಗಳು ಎಂಬಂತೆ
ಬಿಂಬಿಸಲು ಕೊಂಡೊಯ್ಯಿರಿ

ಹೊಸ ಕನಸು ಕಾಣಲು ಅವಕಾಶ ನೀಡಿ
ನನ್ನವರು ನೇಯ್ದ ಕನಸನ್ನೆಲ್ಲಾ 
ಕೊಂಡೊಯ್ದು ಉದ್ದಾರವಾಗಿ
ಕನಸುಗಳನೂ ಉದ್ದಾರಗೊಳಿಸಿ

ನನ್ನದೇ ಕನಸು ರೂಪಿಸಿಕೊಳ್ಳಲು 
ಅವಕಾಶ ಮಾಡಿಕೊಟ್ಟು
ಮಾರಾಟಕ್ಕಿರುವ ಕನಸುಗಳೆಲ್ಲವನೂ
ತೆಕ್ಕೆ ತುಂಬಾ ಸೆಳೆದೊಯ್ಯಿರಿ

~ವಿಭಾ ವಿಶ್ವನಾಥ್