ಶುಕ್ರವಾರ, ಸೆಪ್ಟೆಂಬರ್ 28, 2018

ಆತ ಮತ್ತು ಈಕೆ

ಆಗ, ಆತ ಭಾವಗಳಲ್ಲಿ ಶಾಂತತೆಯ ಆಗರ
ಈಕೆ ಕೃತಿಯಲ್ಲಿ ಭೋರ್ಗರೆಯುವ ಕಡಲು
ಈಗ, ಆತ ಉಕ್ಕಿ ಹರಿಯುವ ಹುಚ್ಚು ಹೊಳೆ..
ಈಕೆ ಭರತವಿಳಿದ ಮಂದ್ರ ಸಾಗರದಂತಾ ನಡೆ

ಎಲ್ಲದಕ್ಕೂ ಕುತೂಹಲದ ಪ್ರಶ್ನೆ ಮಾಡುವಾಕೆಗೆ
ಎಲ್ಲದರ ಉತ್ತರ ಕೊಡುವ ಆಸಕ್ತ ಆತ
ಕೇಳುತ್ತಾ, ಈಕೆ ಮೌನಿಯಾಗುತ್ತಲೇ ಹೋದಳು
ಉತ್ತರಿಸುತ್ತಾ ಆತ ವಾಚಾಳಿಯಾಗುತ್ತಲೇ ಇದ್ದ

ಆಗ ಕೆಲವೊಂದರಲಿ ಆತ ಪೂರ್ವ,ಈಕೆ ಪಶ್ಚಿಮ
ಈಗ ಅವೆಲ್ಲದರಲ್ಲೂ ಆತ ಪಶ್ಚಿಮ,ಈಕೆ ಪೂರ್ವ
ಹೊಸದರಲಿ ಎಲ್ಲವೂ ಬೇಕೆನಿಸುವ ಆಸೆ ಆಕೆಗೆ
ಈಗೀಗ ಎಲ್ಲವನ್ನೂ ಆತನಿಗೆ ನೀಡುವುದೇ ಆಸೆ

ಇಬ್ಬರೂ ಒಬ್ಬರನೊಬ್ಬರು ಒಪ್ಪಿ ಅರಿಯುವಲ್ಲಿ
ಬದಲಾದರು ಈಕೆಯಂತೆ ಆತ,ಅವನಂತೆ ಈಕೆ
ಬದಲಾವಣೆಯ ಇಬ್ಬರ ಈ ಪರಿಭ್ರಮಣವೇ
ಆಕೆ ಮತ್ತು ಈತನ ಜೀವನದ ಮರುಸಮ್ಮಿಲನ

~ವಿಭಾ ವಿಶ್ವನಾಥ್

ಶುಕ್ರವಾರ, ಸೆಪ್ಟೆಂಬರ್ 21, 2018

ಕನಸು

ನನ್ನ ಇಡೀ ಜೀವನದುದ್ದಕ್ಕೂ
ಉಳಿಯಬೇಕಿದ್ದ ಕನಸಿನ ಮನೆ
ಒಡೆದು ಚೂರಾಯಿತೇ ಈಗಲೇ..?
ಬಾಳುವ ಮೊದಲೇ ಹಾಳಾಗಿದೆ
ಮತ್ತೆಂದೂ ಆ ಕನಸೇ ಕಾಣದಂತೆ..

ಅಂಗಾಲಿಗೆ ಹೊಕ್ಕಿ ಅಲ್ಲೇ ಉಳಿದು
ರಕ್ತವನೆಲ್ಲಾ ಬಸಿದುಕೊಂಡು
ಮತ್ತೆಂದೂ ನಡೆಯಲಾರದಂತೆ
ಚುಚ್ಚಿ ನೋಯಿಸುತ್ತಿದೆ ಕನಸಿನ ಗಾಜು
ಮತ್ತೆಂದೂ ಇತ್ತ ಕಾಲಿಡಬೇಡವೆನ್ನುತ್ತಾ..

ನೋವಿನಾಳದಲೂ ನೋವುಳಿದು
ಅಲ್ಲೇ ಬಾವಾಗಿ, ಕೀವುಳಿದು
ಕನಸು ಸತ್ತು ಕಾಲವೇ ಆಗಿದೆ
ತಾನಾಗೇ ಸತ್ತ ಕನಸಿಗೆ ಮೋಕ್ಷವಿಲ್ಲ
ಪುನರ್ಜನ್ಮಕ್ಕಾಗಿ ಮತ್ತೆ ಹುಟ್ಟುವುದಿಲ್ಲ

ಕಟ್ಟಿದ್ದ ಕನಸು ಒಡೆದಿತ್ತು
ಜೋಡಿಸಲು ಸಮಯವೇ ಸಿಗದಂತೆ
ಉದುರಿ ಬಿದ್ದು ನಲುಗಿತ್ತು
ಆಯ್ದು ಮತ್ತೆಂದೂ ಜೋಡಿಸಲಾಗದಂತೆ
ಕಾಲನ ಕೈವಶವಾಗಿ ಹೋಗಿತ್ತು

ಕನಸು ಕೂಡ ಪಾಠ ಕಲಿಸಿತ್ತು
ಕೈ ಕೊಟ್ಟು ಹೇಳದೆ ಕೇಳದೆ
ಹೊರಡುವ ಪ್ರೇಮಿಯಂತೆ..
ನಾನು ಕಟ್ಟಿದ ಬುನಾದಿ ಸರಿಯಿಲ್ಲವೇ?
ಅಥವಾ ನಾನೇ ಸರಿಯಿಲ್ಲವೇ?

ನನಸಾಗದ ಕನಸದುವೆ
ಉಳಿದು ಹೋಯಿತು ಹೆದೆಯಲಿ
ಎಂದೂ ಮಾಯದ ಗಾಯದಂತೆ..
ಇನ್ನು ಹಾಗಾಗದೆ ಹೀಗಿರಬೇಕೆನ್ನುತ್ತಾ
ಮತ್ತೊಂದು ಕನಸು ಕಟ್ಟುತ್ತಿರುವೆ

~ವಿಭಾ ವಿಶ್ವನಾಥ್

ಮಂಗಳವಾರ, ಸೆಪ್ಟೆಂಬರ್ 18, 2018

ಕನಸಿನ ಬಿಡುಗಡೆ

ಕೊಟ್ಟದ್ದು ತನಗೆ, ಬಚ್ಚಿಟ್ಟದ್ದು ಪರರಿಗೆ ಎಂಬ ಮಾತು ಸತ್ಯ ಎಂಬುದು ಮತ್ತೆ ಅರಿವಾಗುವ ಹೊತ್ತು. ಏಕೆಂದರೆ, ಬಚ್ಚಿಟ್ಟ ಕನಸುಗಳು ಆ ಜಾಗದಿಂದ ತಪ್ಪಿಸಿಕೊಂಡು ಮತ್ತೆಲ್ಲಿಗೋ ಹೊರಟು ಹೋಗಿವೆ, ಮುಚ್ಚಿಟ್ಟ ಮಾತುಗಳು ಅಲ್ಲೇ ಮರೆಯಾಗಿವೆ.

ಕನಸುಗಳ ನೆನಪು ಮಾಡಿಕೊಳ್ಳುತ್ತಾ ಅವುಗಳನ್ನು ಬಿಚ್ಚಿಟ್ಟು ಇರುವ ಜೀವನವನ್ನು ಕಳೆದುಕೊಳ್ಳುವ ಕಾರ್ಯವನ್ನು ನಾನು ಮಾಡುವುದಿಲ್ಲ. ಆದರೆ, ನನ್ನ ಕನಸೆಲ್ಲವೂ ನಿನಗೆ ಅರ್ಥವಾಗಿ ಅದು ಮತ್ತೊಂದು ಅನರ್ಥಕ್ಕೆ ಕಾರಣವಾಗಬಾರದಲ್ಲ, ಕನಸು ಕನಸಾಗಿಯೇ ಉಳಿದು ಬಿಡಲಿ. ಆ ಕನಸು ನನ್ನ ಕಣ್ಣಿಂದ ಕನಲಿ ಹೋಗಲಿ.ಕನಸಿನ ಬದುಕು ಕನಸಾಗಿಯೇ ಉಳಿದು ಬಿಡಲಿ. ಕಾಲದ ಕಣ್ಣಿನಲ್ಲಿ ಕನಸಾಗಿಯೇ ಕಾಣುವ ಆ ಬದುಕು ಕನಸಾಗಿಯೇ ಉಳಿದು ಬಿಡಲಿ. ಇರಲಿ, ಮತ್ತೊಂದು ವಿಷಯ, ಬಚ್ಚಿಟ್ಟ ಕನಸು ತಪ್ಪಿಸಿಕೊಂಡು ಎಲ್ಲಿಗೋ ಹೋಗಲಿಲ್ಲ. ಬದಲಿಗೆ ನಾನೇ ಆ ಕನಸನ್ನು ಬಿಡುಗಡೆ ಮಾಡಿಬಿಟ್ಟೆ.

ಆ ಕನಸು ಸಹಾ ನನ್ನೊಳಗೆ ಬಹುದಿನಗಳಿಂದ ಬಂಧಿಯಾಗಿಬಿಟ್ಟಿತ್ತು. ಅಜೀವ ಕಾರಾಗೃಹ ಶಿಕ್ಷೆ ಹೊಂದಿದ ಖೈದಿಗಳೇ ಬಿಡುಗಡೆಯಾಗುತ್ತಾರೆ. ಅದೂ ಸನ್ನಡತೆ ಎಂಬ ಕಾರಣದಿಂದ ಮುಂಚಿತವಾಗಿಯೇ ಬಿಡುಗಡೆಯಾಗುತ್ತಾರೆ. ಆದರೆ, ನನ್ನ ಒಳ್ಳೆಯ ಕನಸೇಕೆ ಬಂದಿಯಾಗಿರಬೇಕು? ಕನಸಿನ ಅಳಿದುಳಿದ ಆಯುಷ್ಯವಾದರೂ ಮತ್ತೊಬ್ಬರ ಕಂಗಳಲಿ ಜೀವಿಸಲಿ.

"ಯಾರದೋ ಕನಸು, ಮತ್ತಾರದೋ ಕಂಗಳಲಿ
ಬದುಕಿ ಬಾಳುವ ಕನಸುಗಳಿಗೆಂದಿಗೂ ಸಾವಿಲ್ಲ"

ಭವಿಷ್ಯದ ಅಮೂರ್ತ ರೂಪವೇ ನನ್ನೊಳಗೆ ಜೀವಿಸಿತ್ತು, ನನ್ನೊಳಗೊಂದಾಗಿ ಜೀವಿಸಿತ್ತು. ಬದುಕಿನ ಅವಿನಾಭಾವ ಬಂಧ ಎಂಬಂತೆ ಬದುಕಿದ್ದ ಕನಸು ಇರದೇ ಕೂಡಾ ಬದುಕಬಹುದೆಂಬುದು ಈ ಹೊತ್ತಿನಲ್ಲಿ ಅರಿವಾಗುತ್ತಲಿದೆ. ಕನಸಿನೊಡನೆಯ ನನ್ನ ಬಂಧ ಸಧ್ಯಕ್ಕೆ ನನ್ನೊಡನೆಯೇ ಮುಗಿಯಿತು. ರಕ್ತಸಂಬಂಧವೇ ಕಡಿದು ಹೋಗುವ ಈ ಹೊತ್ತಿನಲ್ಲಿ, ಎಂದೋ, ಯಾವುದೋ ಸಂಧರ್ಭದಲ್ಲಿ ನನ್ನೊಡನೆಯೇ ಜೀವಿಸಿದ್ದ ಕನಸೊಂದು ಲೆಕ್ಕವೇ..?

ನನ್ನ ಕನಸಿನ ಬದುಕಿನಂತೆಯೇ ಎಲ್ಲವೂ ನಡೆದಿದ್ದರೆ, ಎಂಬ ಪ್ರಶ್ನೆಉದ್ಭವಿಸದೇ ಇರುವುದಿಲ್ಲ. ಅಷ್ಟಕ್ಕೂ, ಆ ಕನಸು ನಿನಗೆ ತಿಳಿಯದಿದ್ದರೇನೇ ಒಳಿತು. ಕೆಲವೊಮ್ಮೆ ಬಾನಿನ ಚಂದ್ರ, ನಕ್ಷತ್ರಗಳು ಕೈಗೆ ಸಿಕ್ಕರೆಷ್ಟು ಚೆಂದ ಎನ್ನಿಸುತ್ತದೆ. ಆದರೆ ಅವುಗಳು ಕೈಗೆ ಸಿಗುವುದುಂಟೇ..? ಸಿಕ್ಕರೂ ಆ ಕ್ಷಣಕ್ಕೆ ಮಾತ್ರ ಸಂತೋಷ.. ನಂತರ ಅವುಗಳ ರಕ್ಷಣೆಯ ಕುರಿತು ಆತಂಕ ಹೆಚ್ಚಾಗುತ್ತಲೇ ಇರುತ್ತದೆ. ಚಂದ್ರ,ತಾರೆಗಳು ಬಾನಿನಲ್ಲಿ ಹೊಳೆಯುತ್ತಿದ್ದರೇನೇ ಚೆಂದ. ಕೈಗೆ ಸಿಕ್ಕರೂ ಸಿಗದಂತಹ ಚಂದ್ರನನ್ನು ಬಯಸುತ್ತಾ ಅದೇ ಬಯಕೆಯ ಬದುಕಿಗೆ ಒಗ್ಗಿಬಿಡುತ್ತೇವೆ ಮತ್ತು ಅದರಲ್ಲೇ ಸಂತೋಷವನ್ನು ಕಾಣುತ್ತೇವೆ.

ಮುಳ್ಳು ಚುಚ್ಚಿಸಿಕೊಂಡ ಕಾಲಿನ ಹಾಗೆ, ಕಳೆದು ಹೋದ ಕನಸು ಕೂಡಾ ಕಾಡುತ್ತಲೇ ಇರುತ್ತದೆ. ಮರೆಯಲು ಸಾಧ್ಯವೇ ಇಲ್ಲದ ನನ್ನ ಜೀವಿತದ ಕನಸು ಅದು. ಕನಸನ್ನು ಕಾಣಲಾಗದೆಂಬ ಕಾರಣಕ್ಕೆ ಮನಸ್ಸು ಚಡಪಡಿಸುತ್ತಲೇ ಇರುತ್ತದೆ. ಇದ್ದಾಗ ಕನಸಿನ ಬೆಲೆ ತಿಳಿಯಲಿಲ್ಲ, ಹೊರಟ ನಂತರ ಚಡಪಡಿಸುವಿಕೆ. ಮತ್ತೊಬ್ಬರ ಕಂಗಳಲ್ಲಿ ಆ ಕನಸು ಹೊಳೆದರೆ ಖುಷಿ, ಮಸುಕಾದರೆ ಮತ್ತದೇ ಕಾಡುವಿಕೆ. ಆದರೆ ಆಗ ಅದನ್ನು ಸರಿಪಡಿಸುವ ಸ್ಥಿತಿಯಲ್ಲಿ ನಾನಿರುವುದಿಲ್ಲ ಎಂಬುದೇ ಬೇಸರ.

ಕನಸು ಕೂಡಾ ಒಂದು ರೀತಿ ಹೆಣ್ಣುಮಕ್ಕಳಂತೆಯೇ.. ಮದುವೆ ಮಾಡಿಕೊಡುವವರೆಗೆ ಒಂದು ರೀತಿ ಚಿಂತೆ. ಮದುವೆ ಮಾಡಿಕೊಂಡು ಹೊರಟಾಗ ದುಃಖ. ಮದುವೆಯ ನಂತರದ ಅವಳ ಜೀವನ ಅವಳ ಹಣೆಬರಹಕ್ಕೇ ಬಿಟ್ಟಿದ್ದಲ್ಲವೇ..? ಹಾಗೇ ನನ್ನ ಕನಸಿನ ಹಣೆಪಾಡು ಹೇಗಿದೆಯೋ ಹಾಗೇ ಆಗಲಿ. ಬಯಸುವುದಷ್ಟೇ ಉಳಿದಿದೆ ನನ್ನ ಪಾಲಿಗೆ. ಒಳಿತೇ ಆಗಲಿ ಎಂದೇ ಬಯಸುವೆ. ಮತ್ತೊಬ್ಬರ ಕಣ್ಣಲ್ಲಿ ಆ ಕನಸು ಮಿನುಗಲಿ ಎಂದಷ್ಟೇ ನಾನು ಬಯಸುವೆ.

ಎಲ್ಲರೂ ಪುಸ್ತಕ ಬಿಡುಗಡೆ ಮಾಡಿ ಸಂತೋಷ ಪಡುತ್ತಾರೆ. ಖೈದಿಗಳು ಜೈಲಿನಿಂದ ಹೊರಬಂದರೆ ಬಿಡುಗಡೆಯ ಸಂತಸವನ್ನು ಅನುಭವಿಸುತ್ತಾರೆ. ಆದರೆ ನಾನು ನನ್ನ ಕನಸನ್ನು ಬಿಡುಗಡೆಗೊಳಿಸಿರುವೆ. ಸಂತೋಷವಿದೆಯೋ, ದುಃಖವಿದೆಯೋ, ಖೇದವಿದೆಯೋ ಎಂದು ಅರಿವಾಗದ ಹೊತ್ತಲ್ಲೇ ಕನಸು ಬಿಡುಗಡೆಗೊಂಡಿದೆ. ಬಿಡುಗಡೆಗೊಂಡ ಕನಸಿಗೆ ತಾನು ನನ್ನಿಂದ ಮುಕ್ತಿ ಹೊಂದಿದ ಸುಖ. ಆದರೆ, ನನಗೆ ಏನೊಂದೂ ಹೇಳಲಾಗದ ಅಯೋಮಯ ಸ್ಥಿತಿ. ಆದರೂ.., ನನ್ನ ಕನಸಿನ ಬಿಡುಗಡೆ ಮತ್ತೊಬ್ಬರ ಕಣ್ಣಿನ, ಮತ್ತೊಂದು ಕನಸಿನ ಉದಯಕ್ಕೆ ಕಾರಣವಾಗುತ್ತದೆ ಎಂಬುದೇ ಸದ್ಯಕ್ಕೆ ಸಮಾಧಾನಕರ. ಅಂತೂ ಇಂತೂ , ಇವೆಲ್ಲದರ ನಡುವೆಯೇ ನನ್ನ ಕನಸು ಬಿಡುಗಡೆಗೊಂಡಿದೆ.

~ವಿಭಾ ವಿಶ್ವನಾಥ್

ಬುಧವಾರ, ಸೆಪ್ಟೆಂಬರ್ 5, 2018

ಗುರು ತೋರುವ ಮಾರ್ಗ


ಸರಿ ಮಾರ್ಗ ತೋರುವವನು ಗುರು. ಕೆಲವರು ಹೆಸರಿಗಷ್ಟೇ ಸೀಮಿತವಾಗಿರುತ್ತಾರೆ. ಗುರುಗಳೂ ನಮ್ಮಂತೆಯೇ ಮನುಷ್ಯರೇ.. ಅವರು ಎಲ್ಲವೂ ಆಗುವುದಕ್ಕೆ ಸಾಧ್ಯವಿಲ್ಲ ನಿಜ ಆದರೆ ಆ ರೀತಿಯ ಸಂಕೋಲೆಗಳನ್ನು ಮೀರಿ ಸರಿ ದಾರಿ ತೋರಿ ತಿದ್ದಿ  ನಡೆಸಿ ತಮ್ಮ ಮಕ್ಕಳಂತೆಯೇ ಭಾವಿಸುತ್ತಾ ಶಿಕ್ಷಿಸಿ,ಕ್ಷಮಿಸಿ ಮುನ್ನಡೆಸುವ ಶಿಕ್ಷಕರೂ ಇದ್ಡಾರೆ. ಒಂದಕ್ಷರ ಕಲಿಸಿದವರೂ ಗುರುಗಳೇ.. ಕೆಲವರು ವಿದ್ಯೆಯೇ ಕಲಿಯದೆ ಜೀವನದ ಪಾಠ ಕಲಿಸುತ್ತಾರೆ. ಅಂತಹವರೂ ಗುರುಗಳೇ. ಪರೋಕ್ಷವಾಗಿ, ಅಪರೋಕ್ಷವಾಗಿ ಪಾಠ ಕಲಿಸುವ ಎಲ್ಲರೂ ಗುರುಗಳೇ.

ಅಪ್ಪ-ಅಮ್ಮ ಮೊದಲ ಗುರುಗಳಾದರೆ, ಉಳಿದವರು ಹಂತ-ಹಂತವಾಗಿ ಜೀವನದ ಪಾಠ ಕಲಿಸುವವರು.ಒಂದರ್ಥದಲ್ಲಿ ಜೀವನವೂ ಗುರುವೇ. ಪಾಠದ ಜೊತೆಗೆ ಪೂರಕ ವಿಷಯ, ನೀತಿ ಕಥೆಗಳನ್ನು ಹೇಳುವ ಗುರುಗಳು ಇದ್ದ ಹಾಗೆಯೇ ಪಾಠಕ್ಕಷ್ಟೇ ಸೀಮಿತಗೊಳಿಸುವ ಗುರುಗಳೂ ಇದ್ದಾರೆ. ಮನೆಮಕ್ಕಳಂತೆ ಭಾವಿಸುವ ಗುರುಗಳಿದ್ದಂತೆಯೇ, ದರ್ಪ ತೋರಿ ದೂರ ಇಡುವ ಗುರುಗಳೂ ಇದ್ದಾರೆ. ಯಾವ ದುರುದ್ದೇಶ, ದುರಾಲೋಚನೆಯೇ ಇಲ್ಲದೆ ವರ್ತಿಸುವ ಗುರುಗಳಿದ್ದಂತೆಯೇ, ಪೂರ್ವಾಗ್ರಹ ಪೀಡಿತರಂತೆ ವರ್ತಿಸುವ ಗುರುಗಳೂ ಇದ್ದಾರೆ. ಪ್ರಾಜೆಕ್ಟ್ ಸಮಯದಲ್ಲಿ ತಾವೇ ಎಲ್ಲಾ ಸಹಾಯ ಮಾಡಿದರೂ ಹೆಸರೇಳಲು ಇಚ್ಚಿಸದ ಗುರುಗಳಿದ್ದಂತೆ ನಮ್ಮ ಪ್ರಾಜೆಕ್ಟ್ ಅನ್ನು ನಮಗೇ ಗೊತ್ತಿಲ್ಲದಂತೆ ಅವರ ಹೆಸರಿನಲ್ಲಿ ಪ್ರಕಟಿಸಿಕೊಂಡಿರುವ ಗುರುಗಳೂ ಇದ್ದಾರೆ. ವಿದ್ಯಾರ್ಥಿಗಳ ಜೊತೆ ಭೇದ-ಭಾವವಿಲ್ಲದೆ ಬೆರೆಯುವ ಗುರುಗಳಿದ್ದಂತೆ, ಹಣಕ್ಕೆ ಬೆಲೆ ಕೊಟ್ಟು ವಿದ್ಯಾರ್ಥಿಗಳನ್ನು ನಿರ್ಲಕ್ಷಿಸುವ ಗುರುಗಳೂ ಇದ್ದಾರೆ. ತಾನು ಪ್ರಿನ್ಸಿಪಾಲ್ ಎಂಬ ದರ್ಪವನ್ನು ತೋರಿಸದೇ ನಮ್ಮೊಡನೆ ನೆಲದಲ್ಲಿ ಕುಳಿತು ಹರಟುವ, ನಮ್ಮೊಡನೆಯೇ ಊಟ ಮಾಡುವ, ಶ್ರಮದಾನದಲ್ಲಿ ಭಾಗಿಯಾಗುವ ಗುರುಗಳಿದ್ದಂತೆ ತಾನು ಪ್ರಿನ್ಸಿಪಾಲ್ ತಾನು ಬರುತ್ತಿದ್ದರೆ ದೂರ ನಿಲ್ಲಬೇಕು, ತನಗಾಗಿ ಘಂಟೆಗಟ್ಟಲೆ ಕಾಯಬೇಕು ಎಂಬಂತೆ ವರ್ತಿಸುವ ಶಿಕ್ಷಕರೂ ಇದ್ದಾರೆ.ತನ್ನ ಹೆಸರು ಸ್ಪೂರ್ತಿ ನೀಡಿದ ಪಟ್ಟಿಯಲ್ಲಿರಬೇಕು ಎಂದು ಬಯಸುವ ಗುರುಗಳಿದ್ದಂತೆಯೇ ಪ್ರತಿಫಲ ಬಯಸದ ಗುರುಗಳೂ ಇದ್ದಾರೆ.

ಇವರೆಲ್ಲ ನಾನು ನೋಡಿದ, ನಾನು ಪಾಠ ಹೇಳಿಸಿಕೊಂಡ ಗುರುಗಳೇ. ಇಬ್ಬರೂ ಗುರುಗಳೇ ಒಬ್ಬರಿಂದ ನಾವು ಹೇಗೆ ಬದುಕಬೇಕು ಎಂಬ ಪಾಠ ಕಲಿತರೆ, ಮತ್ತೊಬ್ಬರಿಂದ ನಾವು ಹೇಗೆ ಬದುಕಬಾರದು ಎಂಬ ಪಾಠ ಕಲಿಯುತ್ತೇವೆ. ವಿದ್ಯಾರ್ಥಿಗಳು ಹೇಳಿದ್ದನ್ನು ಕೇಳಿ ಕಲಿಯುವುದಕ್ಕಿಂತ, ನೋಡಿ ಕಲಿಯುವುದೇ ಹೆಚ್ಚು.ಬದಲಾದರೂ, ಬದಲಾಗದಿದ್ದರೂ ಅವರೆಲ್ಲಾ ನನ್ನ ಗುರುಗಳೇ. ಅವರಿಗೆ ಮರು ನುಡಿಯುವುದಿಲ್ಲ. ಏಕೆಂದರೆ, ವಿದ್ಯೆಯಿಂದ ವಿನಯ ಎಂಬ ಸಂಸ್ಕಾರವನ್ನು ನನ್ನ ಹಲವು ಗುರುಗಳು ಕಲಿಸಿದ್ದಾರೆ.

ಇಂದು ಶಿಕ್ಷಕರ ದಿನ. ಈ ಪಟ್ಟಿಯಲ್ಲಿದ್ದ ಹಲವು ಗುರುಗಳಿಗೆ ಇಂದು "ಶಿಕ್ಷಕರ ದಿನಾಚರಣೆ"ಯ ಶುಭಾಶಯ ಕೋರಿದಾಗ ನೀಡಿದ ಪ್ರತಿಕ್ರಿಯೆ ನಿಜಕ್ಕೂ ಖುಷಿ ತಂದಿತು. ಎಲ್ಲರೂ ಖುಷಿಯಿಂದ ಥ್ಯಾಂಕ್ಸ್ ಎಂದರು. ಕೆಲವರು ಅದರ ಜೊತೆಗೆ "ಆಲ್ ದಿ ಬೆಸ್ಟ್","ಹೋಪ್ ಯು ಆರ್ ಡೂಯಿಂಗ್ ವೆಲ್" ಎಂದರು. ಎಲ್ಲದಕ್ಕಿಂತ ವಿಶೇಷ "ಗಾಡ್ ಬ್ಲೆಸ್ ಯು" ಎಂದರು. ದೇವರು ಆಶೀರ್ವಾದ ಮಾಡಿ ಹರಸುತ್ತಾನೆಯೋ ಇಲ್ಲವೋ ಗೊತ್ತಿಲ್ಲ. ಗುರುಗಳಂತೂ ಹರಸಿದರು. ಅಷ್ಟಲ್ಲದೇ ಹೇಳಿದ್ದಾರೆಯೇ "ಹರ ಮುನಿದರೂ ಗುರು ಕಾಯುವನು" ಎಂದು. ಸರಿ ದಾರಿ ತೋರಿದ, ತೋರುತ್ತಿರುವ,ತೋರುವ ಗುರುಗಳ ಕೃಪೆ ಹೀಗೇ ಇರಲಿ.

~ವಿಭಾ ವಿಶ್ವನಾಥ್     

ಗುರು

ಗುರು ತೋರುವರು
ಸರಿ ಮಾರ್ಗವನು..
ತಿದ್ದಿ ನಡೆಸುವರು
ಪ್ರತಿ ಹೆಜ್ಜೆಯನು..

ನಾಗರೀಕರಾಗಿ ಬಾಳಲು
ಗುರು ದಾರಿದೀಪವು..
ನಮಿಸುವ ಅವರಿಗೆ
ತಪ್ಪದೆ ದಿನನಿತ್ಯವೂ..

~ವಿಭಾ ವಿಶ್ವನಾಥ್

ಸೋಮವಾರ, ಸೆಪ್ಟೆಂಬರ್ 3, 2018

ನಮಗೇನಂತೆ..?

ತೊಟ್ಟಿಯ ಪಕ್ಕದಲ್ಲೊಂದು ಹೆಣ್ಣುಹಸುಗೂಸಂತೆ
ಹಸಿವಿನಿಂದ ಅತ್ತು ಸತ್ತೇ ಹೋಯಿತಂತೆ..
ಸುಖಕ್ಕೆ, ಹಾಸಿಗೆಗೆ ಬೇಕಾಗಿತ್ತು ಹೆಣ್ಣು
ಮಗಳಾದಾಗ ಹೊರೆ ಎನ್ನಿಸಿ ಬಿಸಾಡಿದ್ದಂತೆ
ಆಗ ಇಲ್ಲಿಯವರಂದರು, ಅದಕ್ಕೆ ನಮಗೇನಂತೆ..?

ಅವಳ ಮೇಲೆ ಅತ್ಯಾಚಾರವೆಸಗಿದರಂತೆ
ಯಾರೋ ಪಾಪಿಗಳ ಗುಂಪು ಮಾಡಿದ್ದಂತೆ
ಮಾಂಸದ ಮುದ್ದೆಯಂತೆ ನಡುರಸ್ತೆಯಲ್ಲಿ
ನರಳಾಡುತ್ತಾ ಬಿದ್ದಿದ್ದವಳು, ಸತ್ತೇ ಹೋದಳಂತೆ
ಆಗ ಇಲ್ಲಿಯವರಂದರು, ಅದಕ್ಕೆ ನಮಗೇನಂತೆ..?

ಅವಳನ್ನು ಬೆಂಕಿ ಹಚ್ಚಿ ಸುಟ್ಟುಬಿಟ್ಟರಂತೆ
ಕಾರಣ ವರದಕ್ಷಿಣೆ ಕಿರುಕುಳವಂತೆ..
ಹಣ-ಆಸ್ತಿ, ಬಣ್ಣ ನೋಡಿ ಕಟ್ಟಿಕೊಂಡವನಿಗೆ
ಅವಳವಶ್ಯಕತೆ ಮುಗಿದ ಮೇಲೆ ಸಾಯಿಸಿದ್ದಂತೆ
ಆಗ ಇಲ್ಲಿಯವರಂದರು, ಅದಕ್ಕೆ ನಮಗೇನಂತೆ..?

ಬೀದಿಯಲ್ಲೇ ಆ ಮುದುಕಿ ಸತ್ತಳಂತೆ
ಕಡೆಗಾಲದಲ್ಲಿ ಗುಟುಕು ನೀರಿಗೂ ತತ್ವಾರವಂತೆ
ಸಾಕಲು ಆಕೆ ನನಗೆ ಹೊರೆ ಎಂದ ಮಗ
ನಡುಬೀದಿಯಲ್ಲಿ ಬಿಟ್ಟು ಹೋಗಿದ್ದನಂತೆ..
ಆಗ ಇಲ್ಲಿಯವರಂದರು, ಅದಕ್ಕೆ ನಮಗೇನಂತೆ..?

ಹಾಗ ಹಾಗೆಂದವರು, ಈಗ ಹೀಗನ್ನುತ್ತಿದ್ದಾರೆ
ಮನೆಮಗಳ ಮೇಲೆ ಅತ್ಯಾಚಾರವಾಗಿದೆ
ಮನೆಮಗಳು ಸುಟ್ಟು ಕರಕಲಾಗಿದ್ದಾಳೆ
ಆಗಲೇ ಇದಕ್ಕೆ ಅಂತ್ಯ ಹಾಡಿದ್ದಿದ್ದರೆ..!
ನಮಗೇನಂತೆ ಎಂದು ಬಿಟ್ಟದ್ದೇ ತಪ್ಪಾಯಿತು

ಮಗನ ಮದುವೆಗೆ ಹೆಣ್ಣೇ ಸಿಗುತ್ತಿಲ್ಲ
ಹೆಣ್ಣುಮಕ್ಕಳ ಸಂಖ್ಯೆ ಕಡಿಮೆಯಾಗಿದೆಯಂತೆ..
ತವರಿನಲ್ಲಿ ತಾಯಿ ಬೀದಿಗೆ ಬಿದ್ದು ಸತ್ತಳಂತೆ
ನಮಗೇನಂತೆ ಎಂದು ಬಿಟ್ಟದ್ದರ ಕರ್ಮ
ಮತ್ತೆ ನಮಗೇ ಬಂದು ಸುತ್ತಿಕೊಳ್ಳುತ್ತಲಿದೆ..!

ಅಂದಿನ ನಮಗೇನಂತೆ, ನಮಗೇಕಂತೆ
ಭೂತ ಕಾಲದ ತುಣುಕುಗಳಾಗಿ ಕಾಡುತ
ವರ್ತಮಾನದ ನಮ್ಮ ಸ್ಥಿತಿಯ ಕನ್ನಡಿಯಾಗಿ
ಪ್ರತಿಫಲಿಸುವ ಮುನ್ನವೇ ಎಚ್ಚೆತ್ತುಕೊಂಡು
ಬದಲಾವಣೆಯ ಹಾದಿಯತ್ತ ಮುನ್ನಡೆಯೋಣ.

~ವಿಭಾ ವಿಶ್ವನಾಥ್