ಶುಕ್ರವಾರ, ಅಕ್ಟೋಬರ್ 26, 2018

ಪಯಣದಲ್ಲೊಂದು ತಿರುವು..

ಬದುಕೆಂಬುದು ಹಾಗೇ, ನಿರಂತರ ಪಯಣ..ಸಾಗುತ್ತಲೇ ಇರುವಂತಹದ್ದು. ಎಷ್ಟೋ ಜನ ಪಯಣದಲ್ಲಿ ಜೊತೆಯಾಗುತ್ತಾರೆ, ಹಾಗೆಯೇ ಬಿಟ್ಟೂ ಹೋಗುತ್ತಾರೆ. ಮೊದಲಿನಿಂದಲೂ, ಕೊನೆಯವರೆಗೂ ಜೊತೆಗೇ ಬರುವವರುತುಂಬಾನೇ ಅಪರೂಪ, ವಿರಳ ಎಂದೇ ಹೇಳಬಹುದು. ಕೆಲವೊಮ್ಮೆ ನಮಗೇ ಅರಿವಿಲ್ಲದೆ ಕೆಲವರ ಪಯಣದಲ್ಲಿ ಜೊತೆಯಾಗುತ್ತಾ ಅವರ ದಾರಿಯಲ್ಲೇ ಕ್ರಮಿಸಿಬಿಡುತ್ತೇವೆ, ಕೆಲವೊಮ್ಮೆ ಸ್ಥಗಿತಗೊಳಿಸುತ್ತೇವೆ, ಕುಂಠಿತಗೊಳಿಸುತ್ತೇವೆ ಸಹಾ. ಅರಿವಿದ್ದೋ, ಅರಿವಿಲ್ಲದೆಯೋ ಇವೆಲ್ಲವೂ ನಡೆದು ಹೋಗಿರುತ್ತದೆ. 

ನಾವಿಲ್ಲದೇ ಅವರ ಪಯಣ ಸಾಗೋದಿಲ್ವಾ..? ಅಥವಾ ಅವರಿಲ್ಲದೇ ನಮ್ಮ ಪಯಣ ಸಾಗೋದಿಲ್ವಾ..? ಖಂಡಿತಾ ಪಯಣ ಮುಂದುವರಿಯುತ್ತಲೇ ಹೋಗುತ್ತದೆ., ಯಾರಿದ್ದರೂ..! ಯಾರಿಲ್ಲದಿದ್ದರೂ..! ಅವರು ಮುಂದುವರಿಯುವುದಕ್ಕೆ ನಾವೇ ಕಾರಣ ಅಂತಾ ಬೀಗುತ್ತಾ ಹೋಗುತ್ತಾ ಇರುತ್ತೇವೆ ಅಲ್ವಾ..? ಅವಾಗಲೇ ಅಚಾನಕ್ಕಾಗಿ ಎದುರಾಗುವುದು ಒಂದು ದೊಡ್ಡ ತಿರುವು, ಅದು ಎದುರಾಗುವುದು ಬೀಗುವವರನ್ನು ಬಾಗಿಸುವುದಕ್ಕೇ ಅಂತನ್ನಿಸುತ್ತೆ.

ಬೀಳ್ತೀವಾ? ಏಳ್ತೀವಾ? ಬ್ರೇಕ್ ಹಾಕಿ ನಂತರ ಮುಂದೆ ಸಾಗುತ್ತೇವಾ? ಅಥವಾ ದಿಗ್ಭ್ರಮೆಯಿಂದ ಅಲ್ಲೇ ನಿಲ್ತೀವಾ..? ಅದು ನಮ್ಮ ನಮ್ಮ ಮನಃಶಕ್ತಿಗೆ ಬಿಟ್ಟದ್ದು. ಆದರೂ ಆ ತಿರುವಿನಲ್ಲಿ ಉಂಟಾಗುತ್ತಲ್ಲಾ ಒಂದು ದಿಗ್ಭ್ರಮೆ, ಅದಕ್ಕೆ ಸರಿದೂಗಿಸುವಂತೆ ತೆಗೆದುಕೊಳ್ಳೋ ತೀರ್ಮಾನ ಅದು ಇಡೀ ಲೈಫ್ಗೇ ಯೂ ಟರ್ನ್ ಕೊಟ್ಟು ಬಿಡುತ್ತೆ. ಒಂದು ತಿರುವು ದಾಟಿ ಮುಂದೆ ಹೋದರೆ ಅಲ್ಲಿ ಮತ್ತೊಂದು, ಮತ್ತೊಂದು ಮುಂದೆ ಮಗದೊಂದು ಹೀಗೇ.. ಮುಗಿಯುವುದೇ ಇಲ್ಲ ಆ ತಿರುವುಗಳ ಲೆಕ್ಕ. ಸ್ಕಿಡ್ ಆಗಿ ಬಿದ್ದೆವೋ ನಿರಾಸೆಯ ಪ್ರಪಾತದ ಕೂಪಕ್ಕೇ ಹೋಗಿ ಬಿದ್ದು ಬಿಡುತ್ತೇವೆ. ಎದ್ದು ನಿಲ್ಲುವುದು ನಮ್ಮ ಧೀಃಶಕ್ತಿಗೇ ಬಿಟ್ಟದ್ದು..

ಓವರ್ ಸ್ಪೀಡ್ ಅಲ್ಲೂ ಹೋಗಬಾರದು ಅಂತಹಾ ತಿರುವುಗಳಲ್ಲಿ, ಆಮೇಲೆ ಲೈಫೇ ಟರ್ನ್ ಹೊಡೆದುಬಿಟ್ಟಾತು. ಮುಂದೆ ಬರುವವರಿಗೇ ಡಿಕ್ಕಿ ಹೊಡೆದುಬಿಟ್ಟರೆ..! ಅದಕ್ಕೂ ಒಂದು ಪರಿಹಾರವಿದೆ ಕಣ್ರೀ.. ಮಾತಿನ ಹಾರ್ನ್ ಜೊತೆಗೆ ಲಿಮಿಟೆಡ್ ಸ್ಪೀಡ್ ಅಲ್ಲೇ ಹೋಗಬೇಕು.   

ತಿರುವು ದಾಟಿ ದಿಗಂತದ ಕನಸಿಗೆ ಕೈ ಚಾಚುತ್ತಾ ಪಯಣದಲ್ಲಿ ಹೆಜ್ಜೆ ಹಾಕಬೇಕು. " ಹಕ್ಕಿ ಮರದ ಗಟ್ಟಿತನವನ್ನು ನೆಚ್ಚಿ ಕೊಂಬೆ ಮೇಲೆ ಕುಳಿತಿರೋದಿಲ್ವಂತೆ, ಅಕಸ್ಮಾತ್ ಈ ರೆಂಬೆ ಮುರಿದರೂ ಸಹಾ ತಾನು ಹಾರಬಲ್ಲೆ ಎಂಬ ಆತ್ಮವಿಶ್ವಾಸದಿಂದ ತನ್ನ ರೆಕ್ಕೆಗಳನ್ನು ನೆಚ್ಚಿ ಕೂತಿರುತ್ತದೆಯಂತೆ", ಅಷ್ಟು ಚೈತನ್ಯದಿಂದ ಹಕ್ಕಿಯೇ ತನ್ನ ಪಯಣವನ್ನು ಕ್ರಮಿಸುವಾಗ, ನಾವು ಬೇರೆಯವರನ್ನು ನಂಬಿ ಯಾಕೆ ನಮ್ಮ ಪಯಣ ನಡೆಸಬೇಕು..? ನಮ್ಮ ಬಲ, ಛಲದ ಮೇಲೇ ನಂಬಿಕೆ ಇಟ್ಟು ಪಯಣದ ತಿರುವುಗಳನ್ನೆಲ್ಲಾ ಬಳಸೋಣ, ದಾಟೋಣ. ಹಾಗಂತಾ ಜೊತೆಗಾರರು, ಸಹಪಯಣಿಗರನ್ನು ನಿರ್ಲಕ್ಷ್ಯ ಮಾಡೋದಲ್ಲ. ಅವರೂ ನಮ್ಮಂತೆಯೇ ಎಂಬುದನ್ನು ಅರಿತು ಹೆಜ್ಜೆ ಹಾಕೋಣ.

ಇಷ್ಟೆಲ್ಲಾ ಬರೆದು ಮುಗಿಸುವಷ್ಟೊತ್ತಿಗೆ ಕಿವಿಯಲ್ಲಿ ಹಾಡಿನ ಸಾಲೊಂದು ರಿಂಗಣಿಸುತ್ತಿದೆ.

"ನಿನ್ನ ದಾರಿ ನೀನೇ ನಡೆದು ಸೇರಬೇಕು ಗುರಿಯನು"

ಅದನ್ನು ನನಗೆ ನಾನೇ ಹೇಳಿಕೊಳ್ಳೋದಾದ್ರೆ

"ನನ್ನ ದಾರಿ ನಾನೇ ನಡೆದು ಸೇರಬೇಕು ಗುರಿಯನು"

ಅಂತಾ ಹೇಳಿಕೊಳ್ಳಬಹುದಾ?
ಖಂಡಿತಾ .. ಈ ಮಾತನ್ನು ನನಗೆ ನಾನೇ ಹೇಳಿಕೊಳ್ಳುತ್ತೇನೆ. ಬೇರೆಯವರಿಗೆ ಉಪದೇಶ ಮಾಡುವುದಕ್ಕಿಂತ, ನಮಗೆ ನಾವೇ ಉಪದೇಶ ಮಾಡಿಕೊಳ್ಳುವುದೇ ಒಳ್ಳೆಯದು. ಯಾಕೋ ಬಹಳ ಸಲ ಹೀಗೇ ಅನ್ನಿಸುತ್ತಾ ಇರುತ್ತೆ. ನಿಜಾನೇ ಅಲ್ವಾ?

~ವಿಭಾ ವಿಶ್ವನಾಥ್

ಭಾನುವಾರ, ಅಕ್ಟೋಬರ್ 21, 2018

ರತ್ನ

ನಿಜವಾಗಿಯೂ ದೇವರು ಪ್ರತ್ಯಕ್ಷವಾದರೆ ನಾನು ಕೇಳುವ ಮೊದಲ ಪ್ರಶ್ನೆ, "ಅಮ್ಮನಿಂದ ಮಗುವನ್ನು ಅಗಲಿಸಿ, ನೋವು ನೀಡಿ ನೀನು ಸಾಧಿಸುವುದಾದರೂ ಏನು?"

ಅಂದು ನಾನು ರತ್ನಮ್ಮನ ಮನೆಗೆ ಕಾಲಿಟ್ಟ ಕ್ಷಣ ಆಕೆ ಕೇಳಿದ ಮೊದಲ ಪ್ರಶ್ನೆ, "ನಾನು ಯಾವತ್ತಾದರೂ,ಯಾರಿಗಾದರೂ ಅನ್ಯಾಯ ಮಾಡಿದ್ದೇನಾ? ನನ್ನ ಮಗ ನನ್ನಿಂದ ಯಾಕೆ ದೂರ ಆದ? ನಾನು ಯಾವ ಪಾಪ ಮಾಡಿದ್ದೆ? ವಿದ್ಯಾರ್ಥಿಗಳಿಗೆ ಯಾವತ್ತಾದರೂ ದ್ರೋಹ ಮಾಡಿದ್ದೇನಾ? ಭೇದ-ಭಾವ ಮಾಡಿದ್ದೇನಾ? ಹೇಳು"

ಬಾಣದಂತೆ ತೂರಿ ಬಂದ ಆ ಪ್ರಶ್ನೆಗೆ ಉತ್ತರಿಸಲಾದರೂ ಸಾಧ್ಯವಿತ್ತೇ? ನನ್ನ ಕಣ್ಣೀರೇ ಅದಕ್ಕೆ ಉತ್ತರವಾಗಿತ್ತು. ಅದನ್ನು ಬಿಟ್ಟು ಆ ಕ್ಷಣದಲ್ಲಿ ನನಗೇನೂ ಮಾಡಲು ತೋಚಲಿಲ್ಲ.ನನಗೇನಾದರೂ ಅಪರೂಪದ ಶಕ್ತಿ ಬಂದರೆ, ಅಥವಾ ವರ ಸಿಕ್ಕಿದರೆ ನಾನು ಮಾಡುವ ಮೊದಲ ಕೆಲಸ ರತ್ನಮ್ಮನ ಮಗ ಹಿಮವಂತನನ್ನು ಬದುಕಿಸುವುದು.

ಆಕೆ ನನಗೆ ಪ್ರಾಥಮಿಕ ಶಾಲೆಯಲ್ಲಿ ಕಲಿಸಿದ ನನ್ನ ಅಚ್ಚುಮೆಚ್ಚಿನ ಶಿಕ್ಷಕಿ. ನನ್ನ ಬರಹಗಳಿಗೆ ಶಕ್ತಿ ತುಂಬಿದ ದೇವತೆ, ನನ್ನ ಬೆಳವಣಿಗೆಯ ಎಲ್ಲಾ ಹಂತದಲ್ಲಿಯೂ ಸ್ಪೂರ್ತಿ ತುಂಬುತ್ತಿದ್ದವರು .ಎಲ್ಲರನ್ನೂ ತನ್ನ ಮಕ್ಕಳೆಂದುಕೊಂಡು ಕಾಳಜಿ ತೋರಿಸಿ ಕಲಿಸುತ್ತಿದ್ದ, ಸಲಹುತ್ತಿದ್ದ ಶಿಕ್ಷಕಿ. ಬೆತ್ತ ಬಳಸದೆಯೂ ಮಕ್ಕಳನ್ನು ತಿದ್ದಿ ಬುದ್ದಿ ಕಲಿಸುತ್ತಿದ್ದ ಮಿಸ್. ಅದೇಕೋ ರತ್ನಮ್ಮ ಮಿಸ್ ನನಗೆ ಬಹಳ ಇಷ್ಟ. ಅಪ್ಪ-ಅಮ್ಮನಿಂದಲೂ ಆಶೀರ್ವಾದ ಪಡೆಯದೆ ಹೊರಟ ನಾನು ಅಂದು ಪ್ರತಿಭಾ ಕಾರಂಜಿಗೆ ಹೋಗುವ ಮುನ್ನ ಆಕೆಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದೆ. ಅಂದು ಲಘು ಸಂಗೀತದಲ್ಲಿ ಪ್ರಥಮ ಬಹುಮಾನ ಪಡೆದದ್ದು ಆಕೆಯ ಆಶೀರ್ವಾದದ ಫಲದಿಂದಲೇ ಎಂಬುದು ನನ್ನ ಬಲವಾದ ನಂಬಿಕೆ.

"ತಿಳಿಮುಗಿಲ ತೊಟ್ಟಿಲಲ್ಲಿ ಮಲಗಿದ್ದ ಚಂದಿರನ, ಗಾಳಿ ಜೋಗುಳ ಹಾಡಿ ತೂಗುತ್ತಿತ್ತು" ಎಂಬ 7 ನೇ ತರಗತಿಯ ಪದ್ಯವನ್ನು ಆಕೆ ಹಾಡುತ್ತಿದ್ದ ರೀತಿ ಬಹಳವೇ ಇಷ್ಟ. ಈಗಲೂ ಆ ಹಾಡು ಕೇಳಿ ಬಂದರೆ ಆಕೆಯೇ ಕಣ್ಮುಂದೆ ಬಂದಂತಾಗುತ್ತದೆ.ಕನ್ನಡದ ಪಾಠಗಳನ್ನು ಅದರ ಪೂರಕ ವಿಷಯಗಳೊಂದಿಗೆ ಆಕೆ ಭೋದಿಸುತ್ತಿದ್ದ ರೀತಿ ಮತ್ತು ಪದ್ಯಗಳನ್ನು ಹಾಡುತ್ತಿದ್ದ ರೀತಿ ಬಹಳವೇ ಇಷ್ಟ.ಸಮಾಜ-ವಿಜ್ಞಾನವೆಂದರೇ ಅಲರ್ಜಿ ಎನ್ನುತ್ತಿದ್ದ ನನಗೆ,ಸಮಾಜ-ವಿಜ್ಞಾನದ ಕುರಿತು ಆಸಕ್ತಿ ಹುಟ್ಟಿಸಿ,ಅದ್ಭುತ ಪಾಠವೆಂದರೆ ಹೀಗೇ ಇರುತ್ತದೆ ಎಂಬುದರ ಪರಿಕಲ್ಪನೆಯನ್ನು ಬೆಳೆಸಿದವರು. ಪೂರ್ವಾಗ್ರಹಪೀಡಿತರಾಗದೆ ಎಲ್ಲರನ್ನೂ ಒಂದೇ ರೀತಿ ನೋಡಿ, ಆದರ್ಶ ಶಿಕ್ಷಕಿ ಎಂಬ ಪದಕ್ಕೆ ಒಂದು ಮೆರುಗನ್ನು ತಂದು ಕೊಟ್ಟವರು. ನನ್ನ ಮತ್ತೊಬ್ಬಳು ತಾಯಿ ಎಂದರೂ ತಪ್ಪಿಲ್ಲ.

ಇದ್ದೊಬ್ಬ ಮಗ ಹಿಮವಂತನನ್ನು ಉತ್ತಮ ಸಂಸ್ಕಾರ ನೀಡಿ ಬೆಳೆಸಿದ್ದರು. ಆತನನ್ನು ನೋಡಿದವರೆಲ್ಲಾ, ಇದ್ದರೆ ಇಂತಹಾ ಮಗ ಇರಬೇಕು ಎಂಬ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದರು. 9 ನೇ ತರಗತಿಯ ರಜಾ ದಿನಗಳಲ್ಲಿ ಆತ ಅಜ್ಜಿಯ ಮನೆಗೆಂದು ಹೊರಟ,ಎಲ್ಲೂ ಹೋಗಲು ಕೇಳದಿದ್ದವನು ಅಂದು ಮಾವನ ಮಕ್ಕಳ ಜೊತೆಗೆ ಆಡುವ ಆಸೆಯಿಂದ ಕೇಳಿದ. ಇವರೂ ಏನೂ ಹೇಳದೆ ಕಳುಹಿಸಿಕೊಟ್ಟರು. ಇನ್ನೆರಡು ದಿನ ಕಳೆದು ನಾನು ಬರುವೆ, ಈಗ ಹೋಗಿರು ಎಂದು ಹೇಳಿ ಅವರ ಅಣ್ಣನೊಂದಿಗೆ ಕಳುಹಿಸಿಕೊಟ್ಟರು.

ಇದಾದ ಮಾರನೆಯ ದಿನ , ಮನೆಯವರೆಲ್ಲಾ ಹೊಲದ ಪೂಜೆಗೆಂಂದು ತಯಾರಿ ನಡೆಸುತ್ತಿದ್ದರೆ, ಅಕ್ಕ-ಪಕ್ಕದ ಮನೆಯ ಮಕ್ಕಳೊಂದಿಗೆ ಆಡುತ್ತಾಅ, ಮನೆಯಲ್ಲಿ ಯಾರಿಗೂ ಹೇಳದಂತೆ, ಕೆರೆಯ ಹತ್ತಿರಕ್ಕೆ ಬಂದಿದ್ದ.ಅವರೆಲ್ಲಾಅ ಈಜಲು ಹೊರಟರೆ,ಈತನಿಗೆ ಈಜು ಬರದ ಕಾರಣಕ್ಕೆ ದಡದಲ್ಲಿಯೇ ನಿಂತಿದ್ದನ್ನು ಕಂಡು ಉಳಿದವರೆಲ್ಲಾ ಛೇಡಿಸುತ್ತಾ, "ಬಾರೋ, ಈ ನೀರಿಗೆ ಹೆದರಿಕೊಳ್ಳುತ್ತೀಯಾ..?" ಎನ್ನುತ್ತಾ ಅವನನ್ನು ಮೇಲಿನಿಂದ ತಳ್ಳಿದರು. ಅದೇನೂ ತೀರಾ ಆಳದ ನೀರಲ್ಲ,ಆದರೆ ಅಲ್ಲಿ ಸ್ವಲ್ಪ ಕೆಸರಿತ್ತು. ಅಡಿಮೇಲಾಗಿ ಬಿದ್ದಿದ್ದಕ್ಕೋ, ಹೆದರಿ ಉಸಿರು ಕಟ್ಟಿದ್ದಕ್ಕೋ ಗೊತ್ತಿಲ್ಲ, ಆತ ಮುಳುಗಿದವ ಮೇಲೇಳಲೇ ಇಲ್ಲ. ಜೊತೆಗಿದ್ದವರೂ ಹೆದರಿ ಅಲ್ಲಿಂದ ಪರಾರಿಯಾದರು.

ಅಜ್ಜಿಯ ಮನೆಗೆ ರಜೆಗೆಂದು ಹೋದವನು ಮರಳಿದ್ದು ಹೆಣವಾಗಿ. ಎದೆಯೆತ್ತರಕ್ಕೆ ಬೆಳೆದ ಇದ್ದೊಬ್ಬ ಮಗನನ್ನು ಕಳೆದುಕೊಂಡ ರತ್ನಮ್ಮನ ದುಃಖ ಹೇಳತೀರದು. ನನಗೆ ವಿಷಯ ತಿಳಿದದ್ದು ತಡವಾಗಿ, ಅಲ್ಲದೇ ಮಾರನೇ ದಿನ ಪರೀಕ್ಷೆ ಇದ್ದುದ್ದರಿಂದ ಹೋಗಲಾಗಿರಲಿಲ್ಲ. 3 ದಿನ ಕಳೆದ ನಂತರ ಅವರ ಮನೆಗೆ ಹೋದಾಗ ಕೇಳಿದ ಪ್ರಶ್ನೆ ಮನಕಲಕುವಂತಿತ್ತು. ಕಲ್ಲು ಕೂಡಾ ಕರಗುವಂತೆ ಅಳುತ್ತಿದ್ದ ಅವರನ್ನು ಕಂಡು ಅಳದಿರಲು ಸಾಧ್ಯವೇ ಇರಲಿಲ್ಲ. ಸಮಾಧಾನ ಮಾಡಲು ಪದಗಳಿರಲಿಲ್ಲ.

3 ದಿನದಿಂದ ಸರಿಯಾಗಿ ಊಟ,ತಿಂಡಿ,ನಿದ್ರೆಗಳಿಲ್ಲದೆ ಸೊರಗಿದ್ದರು. ನನ್ನ ಮಡಿಲಿನಲ್ಲಿ ಮಲಗಿದ್ದ 2 ನಿಮಿಷ ಅವರ ತಲೆ ನೇವರಿಸುವುದನ್ನು ಬಿಟ್ಟು ಮತ್ತೇನೂ ತೋಚಲಿಲ್ಲ. ಸಮಾಧಾನದ ಮಾತುಗಳೆಲ್ಲಾ ನಿರರ್ಥಕ ಎನ್ನಿಸಿದವು. ನಾನು ದುಃಖವನ್ನು ಅಷ್ಟು ಹತ್ತಿರದಿಂದ ನೋಡಿದ್ದು ಮೊದಲೇನಲ್ಲ, ಆದರೆ ಹೆಸರಿಗೆ ತಕ್ಕಂತೆ 'ರತ್ನ'ದಂತೆಯೇ ಇದ್ದವರ ಬಾಳನ್ನು ಪುತ್ರಶೋಕ ಮಸುಕಾಗಿಸಿದೆ.

"ಪುತ್ರ ಶೋಕಂ ನಿರಂತರಂ" ಎನ್ನುತ್ತಾರೆ. "ಎಲ್ಲವನ್ನೂ ಕಳೆದುಕೊಂಡರೂ ಅವನೊಬ್ಬನಿದ್ದರೆ ಸಾಕು, ಹೇಗಾದರೂ ಬದುಕುತ್ತಿದ್ದೆ" ಎನ್ನುತ್ತಾರೆ. ಅವನನ್ನು ಮರಳಿ ತಂದು ಕೊಡಲು ಸಾಧ್ಯವೇ? ಕೃಷ್ಣ ತನ್ನ ಗುರು ಸಾಂದೀಪನಿಯ ಸತ್ತು ಹೋಗಿದ್ದ ಮಗನನ್ನು ಮರಳಿ ಕರೆತಂದನಂತೆ, ಈಗ ಅಂತಹಾ ಪವಾಡವೇನಾದರೂ ನಡೆಯುವುದೇ?

"ರಾತ್ರಿ ಮಳೆಬಂದು ನನ್ನ ಮಗನನ್ನು ಮಲಗಿಸಿದ್ದ ಜಾಗವೆಲ್ಲಾ ನೆನೆದಿದೆ. ಪಾಪ ನನ್ನ ಕಂದಾ, ಅದೆಷ್ಟು ನಡುಗುತ್ತಿದೆಯೋ? ಒಬ್ಬನೆ ಇರಲು ಅವನು ಭಯ ಪಡುತ್ತಿದ್ದ. ಈಗ ಅದೇಗೆ ಇದ್ದಾನೋ? ಅವನು ಒಬ್ಬನನ್ನೇ ಬಿಟ್ಟ ನಾನು ಇಲ್ಲಿ ಬೆಚ್ಚಗೆ ಕುಳಿತಿದ್ದೇನೆ." ಎಂದು ಮರುಗುತ್ತಾರೆ.

"ಅವನು ನನ್ನ ಹೊಟ್ಟೆಯಲ್ಲಿದ್ದಾಗ, ಪ್ರತಿ ಇರುವನ್ನೂ, ಪ್ರತಿ ಕ್ಷಣವನ್ನೂ ನೆನೆದು ಸಂತೋಷ ಪಟ್ಟಿದ್ದೇನೆ. ಈ ಪಾಪಿಯ ಹೊಟ್ಟಯಲ್ಲಿ ಹುಟ್ಟಿದ್ದಕ್ಕೇ ಸತ್ತೆಯಾ?ನನ್ನ ಜೊತೆ ಇರಲು ಇಷ್ಟವಾಗಲಿಲ್ಲವೇ? ನನ್ನನ್ನು ಒಬ್ಬಳನ್ನೇ ಬಿಟ್ಟು ಹೊರಟೆಯಾ?" ಎಂದು ಕೇಳುತ್ತಾರೆ. ಉತ್ತರಿಸಲು ಅವನಿಲ್ಲ.

"ಎಲ್ಲಾ ವಿದ್ಯಾರ್ಥಿಗಳ ಉದಾಹರಣೆ ನೀಡಿ ಅವನನ್ನು ಬೆಳೆಸುತ್ತಿದ್ದೆ, ಅದರಲ್ಲೂ ನಿನ್ನ ಬಗ್ಗೆ ಹೆಚ್ಚು ಹೇಳುತ್ತಿದ್ದೆ. ಇನ್ನು ಯಾರ ಬಗ್ಗೆ ಹೇಳಿದರೂ ಕೇಳಲು ಅವನಿಲ್ಲ" ಎಂದು ಕೊರಗುತ್ತಾರೆ.

ಕಿಸಾಗೌತಮಿಯ ಕಥೆ ಹೇಳಿದ ಅವರೇ ಆ ಸ್ಥಿತಿಯಲ್ಲಿ ಇರುವುದನ್ನು ಕಂಡು ಸಂಕಟಪಡುತ್ತೇನೆ. ಯಾರನ್ನೂ ದೂಷಿಸದೇ ವಿಧಿಯನ್ನು ಹಳಿಯುವ ಅವರನ್ನು ಕಂಡು ಮರುಗುತ್ತೇನೆ."ಶಾಪಗ್ರಸ್ತ ದೇವತೆಗಳು ಭೂಮಿಯಲ್ಲಿ ಹುಟ್ಟಿ, ಕೆಲವು ದಿನ ಇದ್ದು ಮರೆಯಾಗುತ್ತಾರಂತೆ, ಅವನು ಶಾಪಗ್ರಸ್ತ ದೇವರು" ಎಂದು ಹೇಳಲು ಹೊರಟು ಮಾತು ಬಾರದೆ ಸುಮ್ಮನಾಗುತ್ತೇನೆ. "ವಿದ್ಯಾರ್ಥಿಗಳಲ್ಲೇ ಮತ್ತೆ ಮಕ್ಕಳನ್ನು ಕಾಣಿ" ಎಂದು ಹೇಳಬೇಕೆಂದರೂ ಸಾಧ್ಯವಾಗದೆ ಗಂಟಲುಬ್ಬಿ ಬರುತ್ತದೆ.

ಅದಾದ ಒಂದೆರಡು ಸಲ ಅವರ ಮನೆಗೆ ಹೋಗಿ ಬಂದೆ. ಯಾವ ವಿಷಯ ಮಾತನಾಡಲು ಶುರು ಮಾಡಿದರೂ ಮತ್ತೆ ಅದು ಹಿಮವಂತನ ವಿಷಯಕ್ಕೇ ಹೋಗಿ ನಿಲ್ಲುತ್ತದೆ.ಆದದನ್ನು ನೆನೆದು ಕೊರಗುತ್ತಾರೆ. ಮೊದಲಿನ ಲವಲವಿಕೆ ಇಲ್ಲದಿದ್ದರೂ, ಹೋದಾಗ ಏನಾದರೂ ತಿನ್ನಲು,ಕುಡಿಯಲು ಕೊಡಲು ತವಕಿಸುತ್ತಾರೆ. ಮತ್ತೆ ಅರೆಕ್ಷಣಕ್ಕೆ ಅದೇ ನೋವಿನಿಂದ ನರಳುತ್ತಾರೆ.

ಇದನ್ನು ಕಂಡು ನನಗನ್ನಿಸುವುದು ಹೀಗೆ, "ನಾನು ಕೂಡಾ ಒಬ್ಬಳೇ ಮಗಳು. ನಾನು ಸತ್ತರೆ,ನನ್ನಮ್ಮ ಕೂಡಾ ಹೀಗೇ ಇರುತ್ತಾರೇನೋ" ಎಂದು. ಕರುಳಬಳ್ಳಿಯ ಸಂಕಟ ಅನುಭವಿಸಿದವರಿಗೇ ಗೊತ್ತು. ಎಷ್ಟೋ ಜನರ ಭವಿಷ್ಯವನ್ನು ರೂಪಿಸಿದ ರತ್ನಮ್ಮ ಮಿಸ್ ನ ಭವಿಷ್ಯ ಅತಂತ್ರವಾಗಿದೆ. ಆದರೆ ಇದೆಲ್ಲವನ್ನೂ ಬದಿಗಿಟ್ಟು ಸಾವಿರಾರು ವಿದ್ಯಾರ್ಥಿಗಳ ಅಮ್ಮನಾಗಿ ಬಾಳುವ ಅವರ ಭವಿಷ್ಯವನ್ನು ಕಾಣಲು ನಾನು ಕಾಯುತ್ತೇನೆ. ಕಾಯುತ್ತಲೇ ಇರುತ್ತೇನೆ.

ಅಕ್ಕರೆಯಿಂದ ಕಲಿಸಿ,ತಪ್ಪನ್ನು ತಿದ್ದಿ, ಮಾತು ಕೇಳದಿದ್ದಾಗ ದಂಡಿಸಿ ಬುದ್ದಿ ಕಲಿಸಿ, ತಿದ್ದುವ ಅಮ್ಮನ ಅವಶ್ಯಕತೆಯಿರುವ ಮಕ್ಕಳು ನಿಮ್ಮನ್ನು ಕಾಯುತ್ತಿದ್ದಾರೆ. ಅವರೊಂದಿಗೆ ನಿಮ್ಮ ಮುಖದಲ್ಲಿ ಮಿನುಗುವ ನಗುವಿಗೆ, ನಿಮ್ಮ ಹಾಡಿಗೆ ನಾನೂ ಕಾಯುತ್ತಿರುತ್ತೇನೆ.

ಮಸುಕಾಗಿರುವ ರತ್ನ ಮತ್ತೆ ಹೊಳಪು ತುಂಬಿ ಹೊಳೆಯಲಿ ಎಂಬ ಆಸೆ ನನ್ನದು.

~ವಿಭಾ ವಿಶ್ವನಾಥ್

ಗುರುವಾರ, ಅಕ್ಟೋಬರ್ 18, 2018

ನವೋಲ್ಲಾಸದ ನವರಾತ್ರಿ


ನವನವೋತ್ಸಾಹದಲಿ ಆಚರಿಸುವ
ಸಂಭ್ರಮದ ನವರಾತ್ರಿಯನು..

ಗಜರಾಜನ ಮೇಲೇರಿ ಕುಳಿತು
ಚಿನ್ನದ ಅಂಬಾರಿಯಲಿರುವ
ಚಾಮುಂಡಾಂಬೆಯ ಪೂಜಿಸುತ
ಭಕ್ತಿಯಲಿ ಆಚರಿಸುವ ನವರಾತ್ರಿಯ

ನವನಾಮದಿ ನಲಿನಲಿದಾಡುವ
ಶಕ್ತಿಯ ಅಧಿದೇವತೆಯ ಅರ್ಚಿಸಿ
ಗೊಂಬೆಗಳ ಕೂರಿಸಿ ಆಚರಿಸುವ
ನಮ್ಮ ಮನೆಮನೆಯ ಹಬ್ಬ ದಸರಾವನು

ಶಕ್ತಿ ಅಭಿಮಾನಗಳಾ ಸಂಕೇತವಾಗಿ
ಆಯುಧಪೂಜೆ, ವಿಜಯದಶಮಿಗಳು
ನವರಾತ್ರಿಗೆ ಮೆರುಗು ನೀಡುತ
ತಂದಿದೆ ಹರುಷದ ಹೊನಲ ಮನಕೆ

ಬಂಧು-ಭಾಂಧವರೆಲ್ಲ ಒಂದುಗೂಡಿ
ಸಾಂಗೋಪಾಂಗವಾಗಿ ಪೂಜಿಸಿ
ಚಾಮುಂಡಾಂಬೆಯ ಆಶೀರ್ವಾದ ಬೇಡಿ
ಧನ್ಯರಾಗುವ ಆಕೆಯ ಪಾದಪದ್ಮದಲಿ

ಶಕ್ತಿ,ಯುಕ್ತಿ ಭಕ್ತಿಗಳೊಡನೆ ಮಿಳಿತವಾಗಿ
ಹರುಷದ ಹೊಳೆಯಲಿ ಮಿಂದು
ಮನೆಮನದಲಿ ನವೋಲ್ಲಾಸ ತಳೆದು
ನಡೆಸುವ ನಾಡಹಬ್ಬ ನವರಾತ್ರಿಯ

~ವಿಭಾ ವಿಶ್ವನಾಥ್

ಗುರುವಾರ, ಅಕ್ಟೋಬರ್ 11, 2018

ಬಂಧಗಳ ಬದುಕು

ಬಾಡಿಯೇ ಹೋದಂತಿದ್ದ ಸಂಬಂಧಗಳು
ಮತ್ತೆ ಚಿಗುರಲು ಹವಣಿಸುತ್ತಿರುವಾಗ
ಚಿಗುರನ್ನು ಚಿವುಟುವುದೋ..?
ಹೂವನ್ನು ಕಿತ್ತೆಸೆಯುವುದೋ..?
ಕಾಯಾಗುವ ಮುನ್ನ ಹೀಚಲ್ಲೇ ಹಿಸುಕುವುದೋ.?
ಹಣ್ಣಾಗಿ ಫಲ ಕೊಡಲೆಂದು ನಿರೀಕ್ಷಿಸುವುದೋ..?
ಮತ್ತದೇ ವಿಷ ಬೀಜ ಚಿಗುರಿದರೆ..!
ಆ ಮರವೇ ವಿಷವೃಕ್ಷವಾದರೆ..?!
ಮುಂದೊಮ್ಮೆ ಮರುಗಿ ಕೊರಗುವ ಬದಲು
ಚಿಗುರುವಾಗಲೇ ಮುರುಟಿ ಹಾಕಿದರೆ..!
ಕೆಡುಕು ಸಂಭವಿಸದೆ ಒಳಿತೇ ಆಗಲಿ ಎಂಬ
ಆಶಾಭಾವನೆಯಿಂದ ಸಂಬಂಧಗಳ ಸಾಕಿ
ಪ್ರೀತಿ,ವಾತ್ಸಲ್ಯದ ನೀರುಣಿಸಿ ಬೆಳೆಸುವ..
ತ್ಯಾಗವೆಂಬ ಪೋಷಕಾಂಶವ ನೀಡಿ
ಹಸನಾದ ಫಲ ಸಿಗಲೆಂದು ಆಶಿಸುವ..
ಆದರೆ ವಿಷವೃಕ್ಷವಾಗ ಹೊರಟರೆ
ಕೊಡಲಿ ಕಾವಿಗೆ ಕೆಲಸ ಕೊಡುವ..
ಕೈಗೆ ಕೊಡಲಿ ನೀಡುವ ಬದಲು
ನೀರುಣಿಸುವ ಕೆಲಸವೇ ಸಿಗಲಿ..
ತಾವೂ ಉತ್ತಮರಂತೆ ಬದುಕಲೆತ್ನಿಸಲಿ
ನಮ್ಮನ್ನೂ ಬದುಕಲಿ ಬಿಡಲೆಂದೇ ಹಾರೈಸುವ..

~ವಿಭಾ ವಿಶ್ವನಾಥ್

ಸೋಮವಾರ, ಅಕ್ಟೋಬರ್ 1, 2018

ಮತ್ತೇನು ಮಾಡಬಲ್ಲಳವಳು?

ಲೋಕದ ಕಣ್ಣಿಗೆಲ್ಲಾ ಬಹು ಸುಖಿಯವಳು
ಪಂಜರದ ಪಕ್ಷಿಯ ಪಾಡು ಕೇಳುವವರಾರು?
ಸುಖವೋ.. ದುಃಖವೋ.. ಹಾಡಬಲ್ಲಳಷ್ಟೇ
ಹಾಡುವುದ ಬಿಟ್ಟು ಮತ್ತೇನು ಮಾಡಬಲ್ಲಳವಳು?

ಜಗದ ಕಣ್ಣಿಗೆಲ್ಲಾ ಸುಖೀ ಸಂಸಾರದ ಒಡತಿ
ಗಾಣದೆತ್ತಿನ ದುಡಿಮೆ ಅವಳ ಪಾಲಿಗೆ
ಸುಖವೋ.. ದುಃಖವೋ.. ದುಡಿಯಬಲ್ಲಳಷ್ಟೇ
ದುಡಿಯುವುದ ಬಿಟ್ಟು ಮತ್ತೇನು ಮಾಡಬಲ್ಲಳವಳು?

ಜಗಕೆ ಗಳಿಸಿ ಸುಖಪಡುವ ಹೆಣ್ಣಂತೆ ಕಾಣುವಳು
ತೃಪ್ತಿಯಿಲ್ಲದೇ ದುಡಿಯುವುದೇ ಅವಳ ಪಾಡು
ಸುಖವೋ.. ದುಃಖವೋ.. ಗಳಿಸಬಲ್ಲಳಷ್ಟೇ
ಗಳಿಸುವುದ ಬಿಟ್ಟು ಮತ್ತೇನು ಮಾಡಬಲ್ಲಳವಳು?

ಅವಳು ಮತ್ತೇನು ಮಾಡಬಲ್ಲಳು ಎಂದುಕೊಂಡೇ
ಮಾಡಿದ ಅಡಿಗೆಯನೆಲ್ಲಾ ಉಂಡದ್ದಾಯಿತು
ತೋರಿದ ಪ್ರೀತಿಯನೆಲ್ಲಾ ಸವಿದು ತಿರಸ್ಕರಿಸಿದ್ದಾಯಿತು..
ಸಹಿಸುವುದ ಬಿಟ್ಟು ಮತ್ತೇನು ಮಾಡಬಲ್ಲಳವಳು?

ಎಷ್ಟೆಂದು ಸಹಿಸುವಳು ಅವಳು..?
ತುಟಿ ಮೀರಿ ಆಚೆ ಬಂದಿದೆ ಮರುಮಾತು..
ತೋರಬಾರದೆಂದುಕೊಂಡ ಕ್ರೋಧ ಸಹಾ
ಅದ ಬಿಟ್ಟು ಮತ್ತೇನು ಮಾಡಬಲ್ಲಳವಳು?

ಲೋಕದ ಪಾಲಿಗೆ ಅವಳೇನೇ ಆದರೂ..
ಅಂತರಂಗದಲಿ ಮತ್ತದೇ ಆರ್ದ್ರತೆಯ ಹೆಣ್ತನ
ಅಂದದೆಲ್ಲವ ಅಡಿಗಡಿಗೆ ನೆನಪಿಸಿಕೊಂಡು ಬಿಕ್ಕುತ್ತಾ
ಪಶ್ಚಾತ್ತಾಪ ಪಡುವುದ ಬಿಟ್ಟು ಮತ್ತೇನು ಮಾಡಬಲ್ಲಳವಳು?

ಮರೆವೆಂಬ ಹಣೆಪಟ್ಟಿಯ ನಿರ್ಲಕ್ಷ್ಯ ಸಹಿಸಿಕೊಂಡು
ಇಂದಲ್ಲಾ ನಾಳೆ ಎಲ್ಲವೂ ಸರಿಯಾಗುವುದೆಂಬ ಭರವಸೆಯಲಿ
ಲೋಕದ ಕಣ್ಣಿಗೆಲ್ಲಾ ಸುಖಿಯಾಗಿಯೇ ಕಾಣುತ್ತಾ
ಮಮತಾಮಯಿಯಾಗುವುದ ಬಿಟ್ಟು ಮತ್ತೇನು ಮಾಡಬಲ್ಲಳವಳು?

~ವಿಭಾ ವಿಶ್ವನಾಥ್