ಸೋಮವಾರ, ಸೆಪ್ಟೆಂಬರ್ 18, 2017

ಜೀವನಯಾನ

ಒಂದೇ ದೋಣಿಯ ಪಯಣಿಗರು ನಾವು
ದೂರ ತೀರವ ಸೇರಲು ಹೊರಟಿರುವವು
ಹತ್ತಿರವಾದಷ್ಟು ದೂರವೆಂದೆನಿಸುತ್ತಾ,
ದೂರ ಹೋಗಲು ಹತ್ತಿರವಾಗಿರಬೇಕೆಂದೆಣಿಸುತ್ತಾ,
ಸಾಗುತಿಹೆವು ಜೀವನ ಕಡಲಿನಲಿ...
ನಾ ನಿನಗಾದರೆ ನೀ ನನಗೆಂದು,
ನಮ್ಮಲ್ಲೇ ಅಡ್ಡ-ಗೋಡೆಯ ನಿರ್ಮಾಣ ಮಾಡುತ್ತಾ,
ದೂರ ದಿಗಂತದ ಕನಸ  ಕಾಣುತ್ತಾ,
ಯಾವುದೇ ಚಂಡಮಾರುತ ಬರದಿರಲೆಂದು ಪ್ರಾರ್ಥಿಸುತ್ತಾ,
ನೂರಾಸೆಗಳಿದ್ದರೂ ನುಚ್ಚುನೂರಾಗಿಸುತ್ತಾ,
ನಮ್ಮ ಅಸ್ಥಿತ್ವವನ್ನು ಕಳೆದುಕೊಳ್ಳುತ್ತಿರವೆವೇ?
ಆಸೆಗಳು ಭಿತ್ತಿಯಲಿ ಮೂಡಿ ಮರೆಯಾಗಿರಲು,
ಚಿತ್ತ ವಿಕ್ಷಿಪ್ತಿಯ ಭ್ರಾಂತಿಯ ತೊರೆಯುತ್ತಾ,
ತಲುಪಿರುವೆವು ನಮ್ಮಯ ತೀರಕೆ,
ತೀರ ತಲುಪಿದ ಮೇಲೆ  ಹೊಸದಾದ ಬದುಕು.
ಹೊಸ ಬದುಕಿನೊಂದಿಗೆಹೊಸ ಕನಸು.
ಹೊಸ ಕನಸ ಕಾಣುತ್ತಾಹಳೆಯದನ್ನು ನೆನೆಯುತ್ತಾ,
ಸಾಗುತಲಿದೆ ನಮ್ಮಯ ಜೀವನಯಾನ...
                                       -vಭಾ

ಸೋಮವಾರ, ಸೆಪ್ಟೆಂಬರ್ 11, 2017

ಕತ್ತಲು-ಬೆಳಕಿನ ಕಣ್ಣಾಮುಚ್ಚಾಲೆಯಲಿ ಸತ್ಯ-ಮಿಥ್ಯೆ

ಕಡು ಕಪ್ಪು ಕತ್ತಲು ಇಷ್ಟವೆಂದರೆ,
ಬೆಳಕು ಇಷ್ಟವಿಲ್ಲವೆಂದೇನಲ್ಲ.
ಬೆಳಕು ಬರುತ್ತದೆಯೆಂದು ಕಾಯಲೇಬೇಕು
ಹಾಗೆ ಕಾಯುತ್ತಲೇ ಇರುವವರು ಅನಾಥರು
ಬದುಕಿನ ಸತ್ಯ ತಿಳಿಯುವುದಕ್ಕಿಂತ,
ಇರುವ ಬದುಕೇ ಸುಖವಾಗಿರುವುದು.
ಸತ್ಯ ಸ್ವೀಕರಿಸಲೇಬೇಕು, ಇಲ್ಲವೆಂದಲ್ಲ
ಇಷ್ಟು ವರ್ಷ ಸತ್ಯವಿಲ್ಲದೆ ಬದುಕಿರಲೇ ಇಲ್ಲವೇ?
ಸುಖವಾಗಿ, ಎಲ್ಲರೊಳಗೊಂದಾಗಿ ಬದುಕಿದ್ದೆವು
ಬೆಳಕು, ಸತ್ಯದ ಬೆಳಕು ಬಂದಿತು
ಬೇರ್ಪಡಿಸಿತು ಎಲ್ಲರ ಒಗ್ಗಟ್ಟು.
ಬೆಳಕಿನಿಂದ ಒಗ್ಗಟ್ಟು ಒಡೆದು ಹೋಗುವುದಕ್ಕಿಂತ,
ಎಲ್ಲರಿಂದ ದೂರವಾಗುವುದಕ್ಕಿಂತ,
ಕಡುಕತ್ತಲೆಯೇ ಸಾಕಲ್ಲವೇ? ಅದೇ ಇಷ್ಟವಲ್ಲವೇ?
ಕತ್ತಲೆಂದರೆ ಅಜ್ಞಾನವಲ್ಲ, ರಾತ್ರಿಯಲ್ಲ
ಕತ್ತಲು ನಮ್ಮಂತೆ ನಾವು ಬದುಕಲು ಬಿಡುವ ಸೊಬಗು
ಕತ್ತಲು-ಬೆಳಕಿನ ಈ ಕಣ್ಣಾಮುಚ್ಚಾಲೆಯಲ್ಲಿ,
ಸತ್ಯ-ಮಿಥ್ಯೆಯಲ್ಲಿ ಕಾಣುವುದು ನಮ್ಮದೇ ಬದುಕು
                                               -vಭಾ

ಮಂಗಳವಾರ, ಸೆಪ್ಟೆಂಬರ್ 5, 2017

ಗುರುನಮನ

"ಗುರು ಬ್ರಹ್ಮ,ಗುರು ವಿಷ್ಣು, ಗುರು ದೇವೋ ಮಹೇಶ್ವರಃ,
ಗುರು ಸಾಕ್ಷಾತ್ ಪರಬ್ರಹ್ಮ, ತಸ್ಮೈ ಶ್ರೀ ಗುರುವೇ ನಮಃ".
ಬ್ರಹ್ಮ, ವಿಷ್ಣು, ಮಹೇಶ್ವರರೆಂಬ ತ್ರಿಮೂರ್ತಿ ರೂಪವೇ ಆಗಿರುವ ಗುರುವಿಗೆ ವಂದನೆಗಳು. ಹೌದು, ಗುರುಗಳು ಯಾವ ದೇವರಿಗೂ ಕಡಿಮೆ ಇಲ್ಲ. ಏನೂ ಗೊತ್ತಿಲ್ಲದೆ ಇರುವ ಎಳೆಯ ಮುಗ್ಧ ಜೀವವನ್ನು ಸಮಾಜದ ಅತ್ಯುನ್ನತ ನಾಗರೀಕನನ್ನಾಗಿ ರೂಪಿಸಲು ತನ್ನ ಜೀವನವನ್ನೇ ಮುಡುಪಾಗಿಡುವ ಗುರುಗಳು ಅತ್ಯುನ್ನತ ಸ್ಥಾನದಲ್ಲಿಯೇ ಸ್ಥಾಪಿತರಾಗಿರುತ್ತಾರೆ.
         ಗುರು ಅಥವಾ ಶಿಕ್ಷಕರು ಶಿಕ್ಷಣವನ್ನಷ್ಟೇ ಅಲ್ಲದೇ, ಜೀವನಕ್ಕೆ ಬೇಕಾದ ಮೌಲ್ಯಗಳು, ಉತ್ತಮ ನಡತೆಗಳನ್ನೂ ಭೋಧಿಸುತ್ತಾರೆ. ತಾಯಿಯೇ ನಮ್ಮ ಜೀವನದ ಮೊದಲ ಗುರು. ನಂತರ ಆ ಸಾಲಿನಲ್ಲಿ ತಂದೆ,ಸಹೋದರ-ಸಹೋದರಿಯರು, ಶಿಕ್ಷಕರು, ಬಂಧು-ಮಿತ್ರರೂ ಸೇರುತ್ತಾರೆ. ಜೀವನದಲ್ಲಿ ಒಂದಕ್ಷರ ಕಲಿಸಿದವರೂ ಸಹ ಗುರುಗಳೇ. ಪರಿಸರವೂ ಒಂದರ್ಥದಲ್ಲಿ ಮನುಷ್ಯನ ಗುರು.
ಆದರೆ, ಶಾಲೆಯಲ್ಲಿ ಕಲಿಯುವ ಪಾಠ ಇದೆಲ್ಲಕ್ಕೂ ಭಿನ್ನವಾದುದು. ಶಿಕ್ಷಿಸಿ,ಕ್ಷಮಿಸಿ,ಕಲಿಸುವವರು (ಶಿಕ್ಷಕರು) ಇದಕ್ಕೆ ಕಾರಣೀಕರ್ತರು. ಶಿಕ್ಷೆ ಕೂಡಾ ಶಿಕ್ಷಣದ ಒಂದು ಭಾಗವೇ ಆಗಿದೆ. "ಹರ ಮುನಿದರೆ ಗುರು ಕಾಯ್ವನು, ಆದರೆ ಗುರು ಮುನಿದರೆ..?"
ಗುರು ಮುನಿದ ಉದಾಹರಣೆಗಳು ಅತಿ ವಿರಳವೇ ಆಗಿದೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಗುರುಗಳು ಶಿಕ್ಷೆ ನೀಡುತ್ತಾರೆಯೇ ಹೊರತು ಯಾವುದೇ ದ್ವೇಷದಿಂದಲ್ಲ. ಆದರೆ ಇಂದಿನ ಶಿಕ್ಷಣದ ಪರಿಸ್ಥಿತಿ ಇದಕ್ಕೆ ವ್ಯತಿರಿಕ್ತವಾಗುತ್ತಿರುವುದು ಶೋಚನೀಯ.
"ಹಿಂದೆ ಗುರುವಿದ್ದ, ಮುಂದೆ ಗುರಿಯಿತ್ತು
ಸಾಗುತ್ತಿತ್ತು ರಣವೀರರ ದಂಡು"
ಎಂಬುದು ಹಿಂದಿನ ನುಡಿಯಾದರೆ
"ಹಿಂದೆ ಗುರುವೂ ಇಲ್ಲ, ಮುಂದೆ ಗುರಿಯೂ ಇಲ್ಲ
ಸಾಗುತ್ತಿದೆ ರಣ ಹೇಡಿಗಳ ಹಿಂಡು"
ಎಂಬುದು ಇಂದಿನ ನುಡಿಯಾಗುತ್ತಿದೆ.
ವಿದ್ಯಾರ್ಥಿಗಳು ಶಿಕ್ಷಕರನ್ನು ಗೌರವಿಸಿದರೆ, ಶಿಕ್ಷಕರ ಶ್ರಮಕ್ಕೆ ತಕ್ಕ ಪ್ರತಿವಂದನೆಗಳನ್ನು ಸಲ್ಲಿಸಬಹುದು.ಶಿಕ್ಷಕರು ಹೇಳಿಕೊಟ್ಟ ಪಾಠವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಅವರ ಋಣವನ್ನು ಅಲ್ಪಮಟ್ಟಿಗೆ ತೀರಿಸಿದ ತೃಪ್ತಿ ಸಿಗುತ್ತದೆ.
     ಶಿಕ್ಷಕರ ಸ್ಥಾನವನ್ನು ನಿರೂಪಿಸುವ ದೃಷ್ಟಾಂತ ಹೀಗಿದೆ. ಒಮ್ಮೆ ಒಂದು ರಾಜ್ಯದ ರಾಜನಿಗೆ ವಿದ್ಯೆ ಕಲಿಯುವ ಆಸೆಯಾಯಿತು.ಆದ್ದರಿಂದ ರಾಜ ಒಬ್ಬರು ಗುರುಗಳನ್ನು ನೇಮಿಸಿಕೊಂಡ. ಪಾಠ ಕಲಿಯುವಾಗಲೂ ರಾಜ ತನ್ನ ಸಿಂಹಾಸನವನ್ನು ಬಿಡದೆ ಅಲ್ಲಿಯೇ ಕುಳಿತು ಪಾಠ ಹೇಳಿಸಿಕೊಳ್ಳುತ್ತಿದ್ದ. ಎಷ್ಟೇ ಪ್ರಯತ್ನಪಟ್ಟರೂ, ರಾಜನಿಗೆ ವಿದ್ಯೆ ಕಲಿಯಲು ಆಗಲೇ ಇಲ್ಲ. ನಂತರ ವಿಶ್ಲೇಷಿಸಿ ನೋಡಿದಾಗ ರಾಜನಿಗೆ ಅದರ ಕಾರಣ ದೊರೆಯಿತು. ಅದರ ಕಾರಣವೇನೆಂದರೆ , ರಾಜ ಕುಳಿತುಕೊಳ್ಳುವ ಜಾಗ ಆತನ ಗುರು ಕುಳಿತುಕೊಳ್ಳುವ ಜಾಗದಿಂದ ಎತ್ತರದಲ್ಲಿದ್ದಿತು. ಶಿಷ್ಯನ ತನ್ನ ಸ್ಥಾನ ಎಂದೆಂದಿಗೂ ಗುರುವಿಗಿಂತ ಕೆಳಗೆ ಎಂದರಿತು ಅಹಂಕಾರವನ್ನು ತೊರೆದಾಗ ವಿದ್ಯೆ ಒಲಿಯುತ್ತದೆ. ಅದಕ್ಕಾಗಿಯೇ ಹಿರಿಯರು ಹೇಳಿರುವುದು "ಗುರುವಿನ ಗುಲಾಮನಾಗದ ಹೊರತು ದೊರೆಯದಣ್ಣ ಮುಕುತಿ."
ಜೀವನದಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಪಾಠ ಕಲಿಸಿದ ಎಲ್ಲಾ ಗುರುಗಳಿಗೂ ಧನ್ಯವಾದಗಳು.
                                                                                                -vಭಾ

ಶನಿವಾರ, ಸೆಪ್ಟೆಂಬರ್ 2, 2017

ಕನಸುಗಳ ಜೊತೆಗೆ ಒಂದಿಷ್ಟು...

ಒಂದಿಷ್ಟು ಬಣ್ಣ ಬೇಕಾಗಿದೆ,
ಕನಸುಗಳಿಗೆ ಬಳಿಯಲು...

ಒಂದಿಷ್ಟು ಸಮಯ ಬೇಕಾಗಿದೆ,
ಕನಸುಗಳನು ಹಂಚಿಕೊಳ್ಳಲು...

ಒಂದಿಷ್ಟು ಧೈರ್ಯ ಬೇಕಾಗಿದೆ,
ಕನಸುಗಳ ಸಾಕಾರಗೊಳಿಸಲು...

ಒಂದಿಷ್ಟು ಸಹನೆ ಬೇಕಾಗಿದೆ,
ಕನಸುಗಳ ನನಸಿನ ಹಾದಿ ಸವೆಸಲು...

ಒಂದಿಷ್ಟು ತ್ಯಾಗ ಬೇಕಾಗಿದೆ,
ಕನಸಿನ ಬದುಕ ಬದುಕಲು...
                               -vಭಾ

ಋಣ

ತೀರಬಲ್ಲದೇ ಇವರೆಲ್ಲರ ಋಣ?
ತೀರಲಾರದು ಎಷ್ಟೇ ಜನುಮವೆತ್ತಿದರೂ...

ಜನುಮ ನೀಡಿದ ತಾಯ್ತಂದೆಯರ ಋಣ,
ಉಸಿರು ನೀಡಿದ ಗಾಳಿಯ ಋಣ
 ತೀರಬಲ್ಲದೇ ಇವರೆಲ್ಲರ ಋಣ?

ಬೆಳಕು ,ಶಾಖ ನೀಡಿದ ರವಿಯ ಋಣ,
ವಿದ್ಯೆ ಕಲಿಸಿ, ತಿದ್ದಿ ತೀಡಿದ ಗುರುಗಳ ಋಣ
 ತೀರಬಲ್ಲದೇ ಇವರೆಲ್ಲರ ಋಣ?

ಜೊತೆಯಲಿದ್ದು ಆಸರೆಯಾದ ಸ್ನೇಹಿತರ ಋಣ,
ನೋವು-ನಲಿವಿಗೆ ಜೊತೆಯಾಗಿದ್ದ ಬಂಧುಗಳ ಋಣ
 ತೀರಬಲ್ಲದೇ ಇವರೆಲ್ಲರ ಋಣ?

ಗೊತ್ತಿದ್ದೋ, ಗೊತ್ತಿಲ್ಲದೆಯೋ ಪಾಠ ಕಲಿಸಿದವರ ಋಣ
ಮುಗುಳ್ನಗೆಯಂದದಿ ಜಗವನ್ನೇ ಗೆಲ್ಲಲು ಕಲಿಸಿದವರ ಋಣ
 ತೀರಬಲ್ಲದೇ ಇವರೆಲ್ಲರ ಋಣ?

ತೀರಿಸಲು ಹೊರಟಿಲ್ಲ ಈ ಋಣವ
ನಮಗೆ ದಾರಿದೀಪವಾದವರ ನೆನೆಸುತ್ತಾ,
ಮಿನುಗುವ ಹಣತೆಯಾಗುವಾಸೆ...

ತೀರಬಲ್ಲದೇ ಇವರೆಲ್ಲರ ಋಣ?
ತೀರಲಾರದು ಎಷ್ಟೇ ಜನುಮವೆತ್ತಿದರೂ...
                                     -vಭಾ