ಭಾನುವಾರ, ಜುಲೈ 19, 2020

ನೀ ಬರೆದ ಸಾಲುಗಳು..

 

ಬದುಕು ಬರೆದ ಸಾಲುಗಳ ನೀನು ಒಪ್ಪಬೇಕಿತ್ತು. ನಿನ್ನದೇ ಹೊಸ ವ್ಯಾಖ್ಯಾನ ಬರೆಯಲು ಹೊರಟೆ ನೀನು. ಬದುಕು ಮಾತ್ರವಲ್ಲ, ಸಾವೂ ಸಹಾ ನಿನ್ನನ್ನು ಸ್ವೀಕರಿಸಿಲ್ಲ.

ಆ ಸಾಲುಗಳನ್ನು ನೀನು ಬರೆಯಲೇ ಬಾರದಿತ್ತು. ಬರೆದರೂ ಸಾರ್ವತ್ರಿಕವಾಗಿ ಪ್ರಕಟಿಸಬಾರದಿತ್ತು. ಸತ್ಯವನ್ನು ಬಿಚ್ಚಿಡಲು ಮಾತ್ರವಲ್ಲ ಹುಡುಗಿ ಸತ್ಯವನ್ನು ಒಪ್ಪಿಕೊಳ್ಳಲು ಸಹಾ ಧೈರ್ಯ ಬೇಕಿತ್ತು. ನಿನಗಿದ್ದ ಧೈರ್ಯ ಈ ಸಮಾಜಕ್ಕಿಲ್ಲ. ಅದರ ಅರಿವಿದ್ದರೂ ನೀನು ಆ ಸಾಲುಗಳನ್ನು ಬರೆದೆ.

ಅತ್ಯಾಚಾರವಾದರೆ ಅತ್ಯಾಚಾರಿಗೆ ಶಿಕ್ಷೆ ಕೊಡುವುದರ ಬದಲಾಗಿ ಅವನ ಜೊತೆಗೆ ದಾಂಪತ್ಯ ಮಾಡು ಎಂದು ಸಂತ್ರಸ್ತೆಗೆ ತೀರ್ಪು ಕೊಡುವಾಗ, ಅವಳಿಗೆ ಬೇರೆ ಆಯ್ಕೆಗಳೇ ಇರುವುದಿಲ್ಲ. ಯಾಕೆಂದರೆ, ತಪ್ಪುಗಳನ್ನೂ ಸರಿ ಮಾಡುತ್ತೇವೆ ಎನ್ನುತ್ತಾ ಸಧೃಡ ಸಮಾಜವನ್ನು ಕಟ್ಟುತ್ತೇವೆ ಎಂದು ಹೊರಡುವ ಜನರು ತಪ್ಪುಗಳನ್ನು ತಾವೇ ಬೆಳೆಸುತ್ತಾರೆ. ಅತ್ಯಾಚಾರ ಮಾಡಿದವ ಸಮಾಜದ ದೃಷ್ಟಿಯಲ್ಲಿ ಸದ್ಗೃಹಸ್ಥ. ಹಾಗೇ, ಸಭ್ಯರು ಎನ್ನಿಸಿಕೊಂಡವರನ್ನು ಸಹಾ ಸಮಾಜ ಬೆಳೆಸಿದ್ದು ಹೀಗೆಯೇ.. ಸಭ್ಯರ ಸೋಗಿನಲ್ಲಿ ತಮ್ಮ ಅಕ್ರಮಗಳಿಗೂ ಸಭ್ಯತೆಯ ಹಣೆಪಟ್ಟಿ ಹಚ್ಚಿ ಬಿಡುತ್ತಾರೆ. 

ನೀನು ಧೈರ್ಯವಂತೆ. ಧೈರ್ಯ ಸತ್ಯವನ್ನು ತೆರೆದಿಡಲು ನಿನ್ನ ಧೈರ್ಯ ಮಾತ್ರ ಸಾಲದಾಗಿತ್ತು. ಸುತ್ತಮುತ್ತಲಿನವರ, ನಮ್ಮವರೆನಿಸಿಕೊಂಡವರ ಸಹಕಾರ ದೂರದರ್ಶಿತ್ವ ಕೊಂಚ ಬೇಕಿತ್ತು. ಹೆಣ್ಣು ಎಂಬ ಪದ ಸಾಕು ಸುತ್ತಮುತ್ತಲಿನವರ ಧೈರ್ಯವನ್ನು ದುರ್ಬಲಗೊಳಿಸಲು. ಎಲ್ಲರೂ ವೀರ ವನಿತೆಯರ ಕತೆಯನ್ನು ಹೇಳಲು, ಕೇಳಲು ಮಾತ್ರ ಸಿದ್ಧರಿರುತ್ತಾರೆ, ನಮ್ಮದೇ ಮನೆಯ ಹೆಣ್ಣು ಕೂಸು ಆ ಸ್ಥಾನದಲ್ಲಿರಲು ಕಲ್ಪನೆ ಕೂಡಾ ಮಾಡಿಕೊಳ್ಳಲಾರರು.

ಕೆಲವೊಮ್ಮೆ ಅತಿ ಸ್ವಾತಂತ್ರ್ಯ, ಕೆಲವೊಮ್ಮೆ ಅತಿ ಮಡಿವಂತಿಕೆ ಕೂಡಾ ಸಿಡಿದು ನಿಂತು ವಿರುದ್ಧವಾದ ನಡವಳಿಕೆಯಾಗಿ ನಡೆದುಕೊಳ್ಳಲು ಕಾರಣವಾಗುತ್ತದೆ. ಆದರೆ, ನಿನ್ನ ಬದುಕು ಇವೆರಡಕ್ಕೂ ಸೇರಿಲ್ಲ. ನಿನ್ನ ಬದುಕಲ್ಲಿ ಆದರ್ಶವಿತ್ತು. ಹುಚ್ಚು ಆದರ್ಶಗಳೆಂದು ಹಂಗಿಸುವ ಈ ಕಾಲಘಟ್ಟದಲ್ಲಿ ಆದರ್ಶಗಳನ್ನೇ ಉಸಿರೆನಿಸಿಕೊಂಡಿದ್ದ ನಿನಗೆ ಅದೇ ಮುಳುವಾಯಿತೇ. ಬೆಳೆದದ್ದು ಅನಾಥಾಶ್ರಮದಲ್ಲಿ.. ಅಲ್ಲಿನ ಗುರುಗಳು ಹಾಕಿಕೊಟ್ಟಿದ್ದ ಉತ್ತಮ ಹಾದಿಯಲ್ಲಿ ಬೆಳೆದಿದ್ದೆ. 

ಸತ್ಯದ ಬೆಳಕನ್ನು ಚೆಲ್ಲುವ ಆಶಯದಲ್ಲಿ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಳ್ಳುವ ಆಶಯ ನಿನ್ನದಾಗಿದ್ದರೆ, ವೈದ್ಯಕೀಯ ನನ್ನ ಆಯ್ಕೆಯಾಗಿತ್ತು. ನಮ್ಮಿಬ್ಬರ ಹಾದಿ ಬೇರೆಯೇ ಆಗಿ ಹೋಗಿತ್ತು. ವಿಧಿ ಲಿಖಿತದ ಎದುರು ನಿಲ್ಲುವರಾರು ?

ನಿನ್ನ ಬರವಣಿಗೆಯ ಮೊನಚನ್ನು ತಾಳಿಕೊಳ್ಳುವ ಶಕ್ತಿ ಸಭ್ಯತೆಯ ಸೋಗಿನಲ್ಲಿರುವವರಿಗೆ ಇಲ್ಲ ಕಣೆ ಹುಡುಗಿ.. ರಾಜಕೀಯ ವ್ಯಕ್ತಿಯ ಅಕ್ರಮ ವಿಚಾರಗಳನ್ನು ಬಯಲಿಗೆಳೆಯತೊಡಗಿದ್ದೆಯಲ್ಲಾ, ಅದೂ ರಾಜ್ಯದ ಪ್ರಮುಖ ರಾಜಕೀಯ ಮುತ್ಸದಿ ಎಂದೆನಿಸಿಕೊಂಡಿದ್ದವರು. ಯಾವ ಕೆಚ್ಚೆದೆಯ ಗಂಡೂ ಮಾಡದ ಧೈರ್ಯ ನೀನು ಮಾಡಿದ್ದೆ. ಕಾರಣ, ನಿನ್ನ ಜನ್ಮದ ನಂಟು ಕೂಡಾ ಅವನಿಂದಲೇ ಬೆಸೆದಿತ್ತು. ಅಪ್ಪ-ಮಕ್ಕಳ ಬಂಧದಲ್ಲಿ ಬಂಧಿಯಾಗಬೇಕಿದ್ದವರು ರಾಜಕೀಯ- ಪತ್ರಿಕೋದ್ಯಮದ ರಣಭೂಮಿಯಲ್ಲಿ ಕಾದಾಡುತ್ತಿದ್ದಿರಿ. 

ನಿನ್ನ ಜನ್ಮ ರಹಸ್ಯ ಅವನಿಗೆ ತಿಳಿದದ್ದು ತಡವಾಗಿ.. ಅಷ್ಟರಲ್ಲಾಗಲೇ ನಿನ್ನ ಮೇಲೆ ಅವನ ಕಡೆಯವರಿಂದಲೇ ಅತ್ಯಾಚಾರವಾಗಿತ್ತು. ಇತ್ತ ನೀನು ಸಾವು-ಬದುಕಿನ ನಡುವಿನಲ್ಲಿ ಹೋರಾಡುತ್ತಿರುವಾಗಲೇ ಅವನಿಗೆ ಸತ್ಯ ತಿಳಿದಿತ್ತು. ಕಾಲ ಮಿಂಚಿತ್ತು. ಕಾಲವನ್ನು ತಿರುಗಿಸಲಾಗದು, ನಿಲ್ಲಿಸಲಾಗದು. ನಿನ್ನನ್ನು ಬದುಕಿಸಿಕೊಳ್ಳಬೇಕೆಂಬ ಅವನ ಪ್ರಯತ್ನ ನಿನ್ನನ್ನು ಸಾಯಲೂ ಬಿಡದೆ, ಬದುಕಿಸಲೂ ಆಗದೇ ನಿನ್ನ ಜೀವವನ್ನು ಈ ಸ್ಥಿತಿಗೆ ತಂದು ನಿಲ್ಲಿಸಿದೆ.

ಮಗಳೆಂಬ ಮಮಕಾರ, ತನ್ನ ತಪ್ಪಿನ ಪ್ರಾಯಶ್ಚಿತ್ತ ಎಲ್ಲವೂ ಅವನನ್ನು ಕೊಂದುಹಾಕುತ್ತವೆ. ರಣ ಭೀಕರ ಅತ್ಯಾಚಾರ ಮಾಡಿಸಿದ ಪಾಪ ಅವನನ್ನು ಕಿಂಚಿತ್ತು ಬಿಡದೆ ಕಾಡುತ್ತವೆ. ನೀನು ಬರೆದ ಸಾಲುಗಳು, ಅವನ ಪ್ರತೀಕಾರ ಅವನನ್ನು ಇತ್ತ ಬದುಕಲೂ ಬಿಡದೆ, ಸಾಯಲೂ ಬಿಡದೆ ನರಳಿಸುತ್ತವೆ. ಅದಕ್ಕಿಂತಾ ದೊಡ್ಡ ಶಿಕ್ಷೆ ಅವನಿಗೆ ಬೇರಾವುದು ಸಹಾ ಸಿಗಲಾರದು. ನರಕ ಕೂಡಾ ಇದಕ್ಕಿಂತ ಎಷ್ಟೋ ಮೇಲೆನಿಸಿಬಿಡುತ್ತದೆ ಅವನಿಗೆ. ಪ್ರಾಯಶ್ಚಿತ್ತಕ್ಕೂ ಆಯ್ಕೆ ಸಿಗದು ಅವನಿಗೆ. ಆತ್ಮಸಾಕ್ಷಿ ಎಂಬುದು ಅವನಲ್ಲಿ ಇನ್ನೂ ಜೀವಂತವಾಗಿದ್ದರೆ ಅವನು ಬದುಕಿನ ಪ್ರತಿ ನಿಮಿಷದಲ್ಲಿಯೂ ನರಕ ಕಾಣುತ್ತಾನೆ. ನೀ ಅಂದು ಬರೆದಿದ್ದ ಸಾಲುಗಳು ಹುಸಿಯಾಗಲಿಲ್ಲ.

ನೀನು ಮಾತ್ರ ಜೀವಚ್ಛವವಾಗಿ ನರಳುವುದನ್ನು ನಾನು ನೋಡಲಾರೆ. ಜೊತೆಯಲ್ಲಿ ಆಡಿದ ಇದೇ ಕೈಗಳು ನಿನಗಿಂದು ಮುಕ್ತಿ ನೀಡಲಿವೆ. ಮತ್ತೊಬ್ಬ "ಅರುಣಾ ಶಾನುಭೋಗ" ಆಗಿ ನಿನ್ನನ್ನು ನಾನು ನೋಡಲಾರೆ. ದಯಾಮರಣದ ಆಯ್ಕೆ ನೀಡಲಾರೆ. ಬದುಕಿದರೂ ಮೊದಲಿನ ಸ್ಥಿತಿಯಲ್ಲಿ ನೀನಿರಲಾರೆ ಹುಡುಗಿ. ನನ್ನ ಕಾರ್ಯ ತಪ್ಪಾಗಿರಬಹುದು, ನೀ ಬರೆಯದ ಸಾಲುಗಳನ್ನು ನಾನು ಬರೆಯಲಿರುವೆ.

ಆದರೂ, ವಿಧಿ ಬರೆದ ಸಾಲುಗಳ ಬದಲಿಸಿ ನೀನು ನಿನ್ನ ಸಾಲುಗಳ ಬರೆಯಬಾರದಿತ್ತು. ಕಡೆಗೂ, ನಿನ್ನ ಬರಹವೇ ನಿನ್ನ ಮುಕ್ತಿಯಾಯಿತೇ..
ಆದರೂ, ನೀ ಬರೆದ ಸಾಲುಗಳು ಎಂದೆಂದಿಗೂ ಅಜರಾಮರ. ನಿನಗೆ ಮತ್ತೊಂದು ಜನ್ಮವಿದ್ದರೆ ನನ್ನ ಮಗಳಾಗಿ ಜನಿಸು. ಕೆಚ್ಚೆದೆಯ ಕಿಚ್ಚಿನ ಹೆಮ್ಮೆಯ ಮಗಳಾಗಿ ಹುಟ್ಟಿ ಬಾ.
ನೀ ಬರೆದ ಸಾಲುಗಳ ಮರೆಸಲಾರದಂತೆ ಮಾಡಲು, ನಿನ್ನನ್ನು ಬೆಚ್ಚಗೆ ಕಾಪಿಡಲು ನಾನು ಸಿದ್ಧಳಿದ್ದೇನೆ.

~ವಿಭಾ ವಿಶ್ವನಾಥ್

1 ಕಾಮೆಂಟ್‌: