ಭಾನುವಾರ, ಅಕ್ಟೋಬರ್ 11, 2020

ಸಿರಿಗೌರಿಯ ಸದಾಶಿವ- ೭

 

ಅಪರ್ಣಾಳ ಕೈ ಹಿಡಿದು ಕುಳಿತಿದ್ದರು ಮೈನಾವತಿಯವರು. "ಹೌದು ಕಂದಾ, ಕೆಲವೊಮ್ಮೆ ಎಲ್ಲವನ್ನೂ ಮರೆಯಲು ಸಾಧ್ಯವಾಗದು. ಮರೆವೆಂಬುದು ಕೆಲವೊಮ್ಮೆ ವರವೂ ಹೌದು, ಶಾಪವೂ ಹೌದು. ಕೆಲವೊಮ್ಮೆ ಮರೆಯಲು ಸಾಧ್ಯವಾಗದೇ ಇರುವಾಗ ಸಂಪೂರ್ಣ ನಿರ್ಲಕ್ಷಿಸಿ ಬಿಡಬೇಕು. ನಿನ್ನ ಮನಸ್ಸಿನ ತಾಕಲಾಟಗಳನ್ನು ನಾನು ಸಂಪೂರ್ಣ ಅರ್ಥಮಾಡಿಕೊಳ್ಳದಿರಬಹುದು. ಆದರೆ, ಕೊಂಚವಾದರೂ ನಾನು ತಿಳಿದುಕೊಳ್ಳಬಲ್ಲೆ. ನಾನು ನಿನ್ನನ್ನು ಹೆತ್ತು, ಹೊತ್ತು ಸಾಕದಿದ್ದರೂ ಕೈ ತುತ್ತು ನೀಡಿರುವೆ. ಹೆತ್ತಾಗ ಮಾತ್ರವೇ ತಾಯಿ ಎನ್ನಿಸಿದಿದ್ದರೆ ಯಶೋದೆ ಕೃಷ್ಣನಿಗೆ ತಾಯಿಯಾಗುತ್ತಲೇ ಇರಲಿಲ್ಲ. ಕಂದಾ, ಎಷ್ಟೋ ಸಾರಿ ನೀನು ಕಾತ್ಯಾಯಿನಿಯ ಜೊತೆಯಲ್ಲಿ ಮನೆಗೆ ಬಂದು ಹೋದ ಮೇಲೆ ಅವಳಿಗೂ ನನಗೂ ಹುಸಿಮುನಿಸಿನ ಜಗಳವಾಗಿದಿದ್ದೆ. ನಾನು ಅವಳಿಗಿಂತ , ನಿನ್ನ ಮೇಲೆಯೇ ಹೆಚ್ಚು ಮಮತೆ ತೋರುತ್ತೇನೆ ಎಂಬುದು ಅವಳ ವಾದ. ಒಮ್ಮೆ ಕಣ್ಮುಚ್ಚಿ ದೀರ್ಘವಾದ ಉಸಿರು ತೆಗೆದುಕೋ.. ಎಲ್ಲವೂ ಸರಿಯಾಗುತ್ತದೆ ಎಂಬ ಆಶಾಭಾವ ಇರಲಿ. ಸರಿಯಾಗದಿದ್ದರೂ ಸರಿಪಡಿಸುವೆ ಎಂಬ ಛಾತಿ ಇರಲಿ. ನೀನು ನಿನ್ನ ತಾಳ್ಮೆಯ, ಪರಿಪೂರ್ಣ ಪ್ರೀತಿಯಿಂದ ಅಶುತೋಷ್ ನಂತಹಾ ಹಿಮಬಂಡೆಯನ್ನೇ ಅಲುಗಾಡಿಸಿದವಳು. ಅಂತಹಾದ್ದರಲ್ಲಿ ನೀನೇ ಹೀಗೆ ಧೈರ್ಯಗೆಟ್ಟರೆ ಹೇಗೆ ? ಅಳುವುದಾದಲ್ಲಿ ಅತ್ತು ಬಿಡು, ಅಳುವನ್ನು ತಡೆ ಹಿಡಿಯಬೇಡ. ಆದರೆ, ಮತ್ತದೇ ಕಾರಣಕ್ಕೆ ನೀನು ಮತ್ತೆಂದೂ ಅಳಬಾರದು. ಇನ್ನು ಮುಂದೆ ಯಾವಾಗಲೂ ನಾನು ನಿನ್ನ ಜೊತೆಗೇ ಇರುವೆ" ಎಂದವರ ಮಾತು ಕೇಳಿ ಅವರ ಮಡಿಲಲ್ಲಿ ತಲೆ ಇಟ್ಟು ಎದೆಯ ನೋವನ್ನೆಲ್ಲಾ ಬಸಿಯುವಂತೆ ಬಿಕ್ಕಿ ಬಿಕ್ಕಿ ಅತ್ತು ಬಿಟ್ಟಳು.


ಎಷ್ಟೋ ಹೊತ್ತಿನ ನಂತರ ಸಾವರಿಸಿಕೊಂಡು "ಅಮ್ಮಾ, ನೀವೆಲ್ಲಾ ಸತ್ತು ಹೋದಿರಿ ಎಂಬ ಸುದ್ದಿ ಕೇಳಿದೆ. ಆದರೆ, ನೀವಿನ್ನು ಬದುಕಿದ್ದೀರಿ ಎಂಬುದನ್ನು ನೋಡಿ ಅರೆಕ್ಷಣ ಸಂತಸವಾಯಿತು. ಆದರೆ, ನನಗೆ ಎಲ್ಲವೂ ಅಯೋಮಯವಾಗುತ್ತಿದೆ. ಅಮ್ಮ, ಬದುಕಿನಲ್ಲಿ ನನ್ನನ್ನು ಹಿಂದಿನ ಎಲ್ಲಾ ಸಮಸ್ಯೆಗಳಿಂದ ಹೊರತಂದು ಎಷ್ಟರಮಟ್ಟಿಗೆ ರೂಪಿಸಿದ್ದೀರಿ ಎಂದರೆ ನನ್ನ ಪ್ರತಿ ಏಳ್ಗೆಯ, ನನ್ನ ಪ್ರತಿ ಯಶಸ್ಸಿನ ಹಿಂದೆ, ಧೈರ್ಯದ ಹಿಂದೆ ನೀವಿದ್ದಿರಿ. ನಾನು ನನ್ನ ಶಾಲಾದಿನಗಳ ನಂತರ ಮತ್ತೆ ನಿಮ್ಮನ್ನು ನೋಡಿದ್ದು ಕಾತ್ಯಾಯಿನಿಯ ಜೊತೆ ಮನೆಗೆ ಬಂದಾಗ. ಅಷ್ಟೊತ್ತಿಗಾಗಲೇ ನಾನು ನಿಮ್ಮ ಮಾರ್ಗದರ್ಶನದಲ್ಲಿ ಅತ್ಯುತ್ತಮ ವ್ಯಕ್ತಿಯಾಗಿ ರೂಪುಗೊಂಡಿದ್ದೆ. ಆಗ ನಿಮ್ಮ ಕಣ್ಣಲ್ಲಿ ಕಂಡ ಹೊಳಪನ್ನು ಮತ್ತೆ ನಾನು ಅಳಿಸಿಬಿಟ್ಟೆನೇ ಅಮ್ಮಾ..? ಅತ್ಯುತ್ತಮ ಶಿಕ್ಷಕರು ಮಾತ್ರವೇ ವಿದ್ಯಾರ್ಥಿಗಳನ್ನು ಮಕ್ಕಳಂತೆ ಭಾವಿಸುತ್ತಾರೆ. ನೀವು ನನ್ನನ್ನು ಮಗಳಿಗಿಂತಲೂ ಮಿಗಿಲಾಗಿ ನೋಡಿಕೊಂಡಿದ್ದೀರಿ. ನೀವು ನನ್ನ ಮೇಲಿಟ್ಟ ನಂಬಿಕೆಯನ್ನು ಹುಸಿಗೊಳಿಸಿಬಿಟ್ಟೆನೇ ಅಮ್ಮಾ..? ಆದರೆ, ನೀವೆಲ್ಲರೂ ಸತ್ತಿರಿ ಎಂಬ ಸುದ್ದಿ ಕೇಳಿ ನಾನು ದುಃಖ ಪಟ್ಟದ್ದೆಷ್ಟು ಗೊತ್ತೇ..? ಹಾಗಾದರೆ, ಕಾತ್ಯಾಯಿನಿ ಕೂಡಾ ಬದುಕಿರುವಳೇ..? ಅಣ್ಣ, ಅತ್ತಿಗೆ, ಅಪ್ಪ ಎಲ್ಲರೂ ಬದುಕಿರುವರೇ ಹೇಳಿ ಅಮ್ಮ ಇಷ್ಟೆಲ್ಲಾ ಸತ್ಯವನ್ನು ನನ್ನಿಂದ ಮುಚ್ಚಿಟ್ಟದ್ದು ಏಕೆ ? ಇದೆಲ್ಲವನ್ನೂ ತಿಳಿದರೆ ಅಶು ತುಂಬಾ ಖುಷಿ ಪಡುತ್ತಾನೆ. ಅವನು ಕಣ್ಣು ಬಿಟ್ಟ ತಕ್ಷಣ ಕಾತ್ಯಾಯಿನಿಯನ್ನು ಅವನ ಮುಂದೆ ತಂದು ನಿಲ್ಲಿಸಿ, ನಾನು ಅವನಿಂದ ದೂರ ಹೊರಟುಬಿಡುತ್ತೇನೆ, ಈಗ ಹೊರಟಂತೆ. ಅಶು ಖುಷಿಯಾಗಿದ್ದರೆ ನನಗೆ ಅಷ್ಟೇ ಸಾಕು ಅಮ್ಮ" 


ಮಾತನಾಡುತ್ತಲೇ ಇದ್ದವಳ ಮಾತನ್ನು ನಿಲ್ಲಿಸಿ " ಏನೆಂದೆ ನೀನು.. ? ಅಶುವನ್ನು ಬಿಟ್ಟು ಹೊರಟಿದ್ದೆಯಾ..? ಎಲ್ಲಿಗೆ..? ಯಾಕೆ..? ನಿಮ್ಮ ನಡುವೆ ಏನಾದರೂ ಜಗಳವಾಯಿತೇ..? ಯಾಕೆ ಹೀಗೆ ನೀನು ತಾಳ್ಮೆ ತಪ್ಪಿದೆ..? ನಿನಗೆ ಅರಿವಿದೆಯೇ ನೀನು ಎಷ್ಟು ದೊಡ್ಡ ತಪ್ಪು ಮಾಡುತ್ತಿದ್ದೆ ಎಂಬುದಾಗಿ..? " ಮೈನಾವತಿಯವರ ಮಾತು ಕಟುವಾಯಿತು. 

"ಅದು ಅಮ್ಮ, ಆದೆಲ್ಲಾ ಒಂದು ದೊಡ್ಡ ಕತೆ, ಸಮಯ ಸಿಕ್ಕಾಗ ಅದನ್ನೆಲ್ಲಾ ಹೇಳುವೆ ಅಮ್ಮಾ. ನನ್ನ ತಪ್ಪಿನ ಅರಿವು ನನಗಾಗಿದೆ ಅಮ್ಮಾ.. ಬೇಕೆಂದು ತಾಳ್ಮೆ ತಪ್ಪಿ ಮಾಡಿದುದಲ್ಲ ಅಮ್ಮ. ನಿಮ್ಮ ಮಾರ್ಗದರ್ಶನದಿಂದ ರೂಪುಗೊಂಡವಳು ನಾನು. ನಾನು ನನ್ನ ಅಶುವನ್ನು ದುಃಖಕ್ಕೆ ದೂಡಲಾರೆ. ಅವನಿಗೇನಾದರೂ ಆದರೆ ನಾನು ಬದುಕಿರುವೆ ಎಂದುಕೊಂಡಿರುವಿರಾ ನೀವು ? ಅದೆಲ್ಲವನ್ನು ಬಿಡಿ. ಕಾತ್ಯಾಯಿನಿಯ ಬಗ್ಗೆ ಹೇಳಿ ಅಮ್ಮ. ಎಲ್ಲಿದ್ದಾಳೆ ಅವಳು ..?" ಎಂದಳು ಅಪರ್ಣಾ. "ಕಾತ್ಯಾಯಿನಿ ಈಗ ಬರಿಯ ನೆನಪು ಮಾತ್ರ ಅಪ್ಪು, ಅವಳಿದ್ದಳು ಎಂಬ ನೆನಪಷ್ಟೇ ಈಗ ಜೀವಂತ. ನಾನು, ವಿರಾಜ್ ಇಬ್ಬರೇ ಈಗ ಬದುಕಿರುವವರು. ಹೆಚ್ಚಿನದ್ದೇನನ್ನೂ ಈಗ ಕೇಳಬೇಡ, ಸತ್ಯವನ್ನು ಅರಗಿಸಿಕೊಳ್ಳಲು ಧೈರ್ಯ ಬೇಕು. ಕೆಲವೊಂದು ವಿಚಾರಗಳು ಯಾವಾಗ ಅರಿವಾಗಬೇಕೋ ಆಗಲೇ ತಿಳಿಯಬೇಕು. ಕೆಲವೊಂದನ್ನು ಮೊದಲೇ ಅರಿಯಲು ಹೊರಟರೆ ಅನರ್ಥವಾಗುತ್ತದೆ ಕಂದಾ. ನಿನಗೊಂದು ಪುಟ್ಟ ಕತೆ ಹೇಳುತ್ತೇನೆ ಕೇಳು.

ನಿನ್ನಂತಹಾ ಒಬ್ಬಳು ಪುಟ್ಟ ಹುಡುಗಿ ಕುತೂಹಲದಿಂದ ರೇಷ್ಮೆ ಹುಳು ತನ್ನ ಗೂಡಿನಿಂದ ಹೊರಬರವುದನ್ನು ತನ್ನ ಬಟ್ಟಲು ಕಂಗಳಿಂದ ಆಶ್ಚರ್ಯವಾಗಿ, ಕೂಲಂಕುಷವಾಗಿ ಗಮನಿಸುತ್ತಿದ್ದಳು. ದಿನಗಳು ಕಳೆಯುತ್ತಿದ್ದಂತೆ ಅದು ಕೊಂಚ ಕೊಂಚವಾಗಿ ಕಷ್ಟಪಟ್ಟು ಗೂಡನ್ನು ಹೊಡೆದು ಹೊರಬರುವುದನ್ನು ಗಮನಿಸುತ್ತಿದ್ದವಳಿಗೆ ಒಂದು ಆಲೋಚನೆ ಬಂದಿತು. ಅದು ಅಷ್ಟು ಕಷ್ಟ ಪಟ್ಟು ಯಾಕೆ ಗೂಡಿನಿಂದ ಹೊರ ಬರಬೇಕು, ಗೂಡಿನಿಂದ ನಾನೇ ಆಚೆ ತೆಗೆದರೆ ಎಂಬ ಆಲೋಚನೆ ಕೂಡಾ ಬಂದಿತು. ಆಗ ಅವಳು ಒಂದು ಚೂಪಾದ ಬ್ಲೇಡ್ ತೆಗೆದುಕೊಂಡು ಗೂಡಿನಿಂದ ಹೊರ ಬರುವ ದಾರಿ ಮಾಡಿದಳು. ಅದು ಗೂಡಿನಿಂದ ಹೊರಬಂದ ಕೆಲವೇ ಕ್ಷಣದಲ್ಲಿ ಸತ್ತು ಹೋಯಿತು. ಅವಳಿಗೆ ಆಶ್ಚರ್ಯ, ಏಕೆ ಹೀಗೆ ಎಂದು. ಆಗ ಅದನ್ನೆಲ್ಲಾ ಗಮನಿಸುತ್ತಿದ್ದ ಅವಳ ಅಮ್ಮ ಹೇಳಿದರು. "ಕಂದಾ, ಕೆಲವು ಕೆಲಸಗಳನ್ನು ನಾವು ಬಲವಂತವಾಗಿ ಮಾಡಿದಾಗ ಅದರ ಫಲ ದೊರೆಯದೇ ಹೋಗುತ್ತದೆ. ಮೊದಲ ಗೂಡಿನಿಂದ ಬಂದ ಹುಳು ತನ್ನ ಸ್ವಯಂ ಶಕ್ತಿಯಿಂದ ಗೂಡಿನಿಂದ ಹೊರಬಂದಿತು, ನೋವಾದರೂ ಅದು ಹೊರಗಿನ ಪ್ರಪಂಚಕ್ಕೆ ಒಡ್ಡಿಕೊಂಡು ಬದುಕುವ ವಾತಾವರಣಕ್ಕೆ ಸ್ವಲ್ಪ ಸ್ವಲ್ಪವೇ ಒಗ್ಗಿಸಿಕೊಂಡಿತು. ಆದರೆ, ನೀನು ಹೊರತೆಗೆದ ಹುಳು ಹೊರಗಿನ ವಾತಾವರಣಕ್ಕೆ ಒಮ್ಮೆಲೆ ಒಗ್ಗಿಸಿಕೊಳ್ಳಲು ಬಹಳ ಕಷ್ಟಪಟ್ಟಿತು. ಹಾಗಾಗಿಯೇ ಹಠಾತ್ ಪರಿಣಾಮಕ್ಕೆ ಒಗ್ಗಿಕೊಳ್ಳಲು ಸಾಧ್ಯವಾಗದೇ ಸತ್ತು ಹೋಯಿತು." 


"ಅಪರ್ಣಾ, ತಾನಾಗಿಯೇ ಕೆಲ ರಹಸ್ಯಗಳು ಬಿಚ್ಚಿಕೊಳ್ಳುವ ಮೊದಲೇ ನಾವು ಅದನ್ನು ಬಲವಂತವಾಗಿ ಬಿಚ್ಚಿಸಿಕೊಳ್ಳಲು ಹೋಗಬಾರದು ಕಂದಾ. ಇಷ್ಟು ದಿನಗಳೇ ಕಾದಿದ್ದೀಯ, ಇನ್ನು ಕೆಲವೇ ದಿನಗಳಷ್ಟೇ ಎಲ್ಲವೂ ಸರಿಯಾಗುತ್ತದೆ. ಅಶು ಕೂಡಾ ಹುಷಾರಾಗುತ್ತಾನೆ. ನೀನೀಗ ಧೈರ್ಯದಿಂದ ಎಲ್ಲವನ್ನೂ ಎದುರಿಸು. ನಿನ್ನೊಂದಿಗೆ ಇನ್ನು ನಾನು ಎಂದಿಗೂ ಇರುತ್ತೇನೆ. ಕಾತ್ಯಾಯಿನಿಯನ್ನು ನಿನ್ನಲ್ಲೇ ಕಾಣುತ್ತೇನೆ." ಎಂಬ ಮೈನಾವತಿಯ ಮಾತು ಕೇಳಿ ನಿರಾಳಲಾದಳು.

ಅಷ್ಟರಲ್ಲಿ "ಅಪರ್ಣಾ" ಎಂಬ ಮಾತು ಕೇಳಿ ಅತ್ತ ತಿರುಗಿದವಳ ಬಾಯಲ್ಲಿ ಸಣ್ಣ ಉದ್ಗಾರ ಹೊರಟಿತು "ಅಪ್ಪಾ" ಎಂದು. ಮರುಕ್ಷಣವೇ ಕಟುವಾಗಿ "ಯಾರು ನೀವು..?ಇಲ್ಲಿಗೆ ಏಕೆ ಬಂದಿದ್ದೀರಿ..? ಸತ್ತಿದ್ದೇನೋ ಬದುಕಿದ್ದೇನೋ ಎಂದು ನೋಡಲು ಬಂದಿದ್ದೀರಾ..?" ಎಂಬ ಮಾತನ್ನು ಕೇಳಿ ಅವರು ಅಲ್ಲೇ ನಿಂತರು.

ಅಪರ್ಣಾಳ ಗತವೇನು..? ಅವಳ ತಂದೆಯ ಜೊತೆಗೆ ಅವಳು ಕಟುವಾಗಿ ವರ್ತಿಸಲು ಕಾರಣವೇನು ? ಊಹಿಸಬಲ್ಲಿರಾ?

(ಸಶೇಷ)

(ಎಂದಿನಂತೆ ಈ ಬಾರಿಯೂ ನಿಮ್ಮ ಪ್ರತಿಕ್ರಿಯೆಗಳ ನಿರೀಕ್ಷೆಯಲ್ಲಿ ನಾನಿದ್ದೇನೆ. ನಿಮ್ಮ ಪ್ರತಿಕ್ರಿಯೆಗಳೇ ನನ್ನ ಮುಂದಿನ ಬರಹದ ಸ್ಫೂರ್ತಿ. ಓದಿದವರು ತಪ್ಪದೇ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ)

~ವಿಭಾ ವಿಶ್ವನಾಥ್

ಶನಿವಾರ, ಅಕ್ಟೋಬರ್ 3, 2020

ಸಿರಿಗೌರಿಯ ಸದಾಶಿವ - ೬

 

ಅಪಘಾತ, ಆಘಾತಗಳು ನಮ್ಮ ಮನಸ್ಸಿಗೆ, ನಮಗೆ ಹತ್ತಿರದವರಿಗೆ ಆದಾಗ ಮಾತ್ರ ಅಲ್ಲವೇ ಅದರ ಬಿಸಿ ತಟ್ಟುವುದು, ಕೋಟಿ ಇದ್ದರೂ ಜೀವ ಉಳಿಸಲು ವೈದ್ಯರು, ಸಮಯ, ಪುಣ್ಯಫಲ ಎಲ್ಲದರ ಬಲವೂ ಇರಬೇಕು. ನಿರ್ಲಕ್ಷ್ಯವೋ, ಪೂರ್ವ ನಿಯೋಜಿತವೋ ಅಂತೂ ಅಪಘಾತ ಆಗಿ ಹೋಗಿತ್ತು. ವಿಧಿಲಿಖಿತ ಹಾಗೆಯೇ ಇದ್ದರೆ ಬದಲಾಯಿಸಲು ಯಾರಿಗೆ ಸಾಧ್ಯ. 


ಇತ್ತ ಅಪರ್ಣಾಳಿಗೆ ಚಡಪಡಿಕೆ ಶುರುವಾಗಿತ್ತು. ಮನಸ್ಸಿನಲ್ಲಿ ಏನೋ ತಳಮಳ. ಹತ್ತಿರದವರಿಗೆ ಯಾರಿಗಾದರೂ ಏನಾದರೂ ಅಪಾಯವಾಗುವ ಸಂಭವವಿದ್ದರೆ ಮನಸ್ಸಿನಲ್ಲಿ ಉಂಟಾಗುವ ತಳಮಳ ಅದು. ನಂದನ್ ಅದೇ ಸಮಯಕ್ಕೆ ತಂದ ಸುದ್ದಿ ಅವಳ ಜಂಘಾಬಲವನ್ನೇ ಉಡುಗಿಸಿಬಿಟ್ಟಿತು. ಅಶುತೋಷ್ ಅನ್ನು ನೋಡಲು ಬರುವಷ್ಟರಲ್ಲಿ ಅವನನ್ನು ಐ.ಸಿ.ಯು ಒಳಗೆ ಸೇರಿಸಿ ಆಗಿತ್ತು. ಅಲ್ಲೇ ಕುಸಿದು ಕುಳಿತಳು.

"ಅಶು, ನಾನು ನಿನ್ನಿಂದ ದೂರ ಇರಲು ಬಯಸಿದ್ದೇ ಇಷ್ಟೆಲ್ಲಾ ಅನರ್ಥಕ್ಕೆ ಕಾರಣವಾಗಿ ಹೋಯಿತೇ..? ಇಷ್ಟು ದಿನದ ನನ್ನ ಸಹನೆಯ ಕಟ್ಟೆ ಒಡೆದು ಹೋದದ್ದೇಕೆ? ನೀನಿರದೆ ನಾನು ಬದುಕುವುದು ಸಾಧ್ಯವೇ..? ನಮ್ಮನ್ನು ನಾವು ಎಷ್ಟೇ ಅರಿತುಕೊಂಡು ಒಂದಾಗಿದ್ದೇವೆ ಎಂದುಕೊಂಡರೂ ಸಹಾ ನಮ್ಮ ನಡುವೆ ಅಂತರದ ಒಂದು ಎಳೆ ಉಳಿದೇ ಹೋಯಿತಲ್ಲ. 

ಪ್ರೀತಿ ಎಂದರೆ ಒಬ್ಬರಿಲ್ಲದಿದ್ದರೂ ಮತ್ತೊಬ್ಬರು ಬದುಕುವುದು ಎಂದು ನಿನಗೆ ಧೈರ್ಯ ತುಂಬುವಾಗ ನಾನು ಹೇಳಿದ್ದೆ, ಆದರೆ ನೀನಿಲ್ಲದೆ ನಾನು ಬದುಕಲು ಸಾಧ್ಯವೇ..? ನಿನ್ನ ಮೇಲಿನ ತಾತ್ಕಾಲಿಕ ಕೋಪ ಕೂಡಾ ಕೆಲ ದಿನಗಳ ಕಾಲ ನನ್ನನ್ನು ದೂರ ಇರಿಸುವುದು ಸಾಧ್ಯವಿರಲಿಲ್ಲ. ಆ ಯೋಚನೆಯಲ್ಲಿ ನಾನೆಷ್ಟು ಬೆಂದಿದ್ದೇನೆ ಗೊತ್ತೇ..? ಮನಸ್ಸನ್ನು ಗಟ್ಟಿ ಮಾಡಿಕೊಂಡು ನಿನ್ನಿಂದ ದೂರ ಹೋಗುವ ನಿರ್ಧಾರದ ಹಿಂದೆ ನಿನ್ನ ಒಳಿತೇ ಇದ್ದಿತು, ಹೊರ ನೋಟಕ್ಕೆ ನಗು ಮುಖದ ಮುಖವಾಡ ಹಾಕಿರುವ ನಿನ್ನ ಮನಸ್ಸಿನ ಹಿಂದಿನ ದುಃಖ ಅರಿಯದಷ್ಟು ಮೂಢಳು ನಾನಲ್ಲ. ನಿನ್ನೆದೆಯ ಮಿಡಿತದ ಪ್ರತಿ ಸದ್ದನ್ನೂ ಅರಿಯಬಲ್ಲೆ ನಾನು.  ನಿನ್ನ ದುಃಖದ ಮೂಲ ಹುಡುಕಿ ಹುಡುಕಿ ಸೋತು ಹೋದೆ. ಮಾತಿಗೂ ಜಗ್ಗಲಿಲ್ಲ, ಕೋಪಕ್ಕೆ ಬಗ್ಗಲಿಲ್ಲ, ಮೌನಕ್ಕೆ ಮಣಿಯಲಿಲ್ಲ. ಮತ್ತಾವ ದಾರಿಯೂ ಕಾಣದಿದ್ದಾಗ ಅತ್ತೆಯೇ ನನಗೆ ಇದನ್ನು ಸೂಚಿಸಿದ್ದು. 


ಅವರ ಮಾತನ್ನು ಕೇಳಿ ಒಂದರೆಕ್ಷಣ ನನ್ನ ಗುಂಡಿಗೆಯೇ ನಿಂತಂತಾಗಿತ್ತು. ಪ್ರತಿಯೊಂದಕ್ಕೂ ನೀನು ನನ್ನನ್ನೇ ಅವಲಂಬಿಸಿದ್ದೆ ಎನ್ನುವುದರ ಅರಿವು ನನಗಿತ್ತು. ನೀನು ನನ್ನನ್ನು ಹೋಗಲು ಬಿಡಲಾರೆ ಎಂಬ ಹುಂಬ ಧೈರ್ಯವಿತ್ತು. ಅದಕ್ಕೆ ನಾನು ಅತ್ತೆ, ಮಾವ ಇಲ್ಲದ ಸಮಯವನ್ನೇ ಆಯ್ಕೆ ಮಾಡಿಕೊಂಡಿದ್ದೆ. ಈಗ ಅವರು ಬಂದಾಗ ನಾನು ಯಾವ ಉತ್ತರ ಕೊಡಲಿ? ನಿಮ್ಮ ಮಗನ ಈ ಸ್ಥಿತಿಗೆ ನಾನೇ ಕಾರಣ ಎಂಬ ಮಾತನ್ನು ಹೇಗೆ ಹೇಳಲಿ ?" ಹೀಗೇ ಅವಳ ಮಾತಿನ ಪ್ರವಾಹ ಸಾಗುತ್ತಿತ್ತು. ಅದಕ್ಕೆ ತಡೆಯೊಡ್ಡಿದ್ದು ಅಥರ್ವನ ಮಾತು . "ಅಮ್ಮಾ, ಅಳಬೇಡ ಅಮ್ಮ. ನಾನು ಯಾವತ್ತೂ ನಿನ್ನನ್ನು ಐಸ್ಕ್ರೀಮ್ ಬೇಕು ಎಂದು ಕೇಳುವುದಿಲ್ಲ, ಹಠ ಮಾಡುವುದಿಲ್ಲ. ಗುಡ್ ಬಾಯ್ ಆಗಿರುತ್ತೇನೆ. ನೀನು ಅತ್ತರೆ ನನಗೂ ಅಳು ಬರುತ್ತೆ, ಅಳಬೇಡ ಅಮ್ಮ" ಎಂಬ ಪುಟ್ಟ ಮಾತಿಗೆ ಮತ್ತೆ ಅವಳ ಅಳು ಹೆಚ್ಚಾಯಿತು.

ನಂತರ ತನ್ನನ್ನು ತಾನೇ ನಿಯಂತ್ರಿಸಿಕೊಂಡು "ಇಲ್ಲ ಕಂದಾ, ನಾನು ಅಳುವುದಿಲ್ಲ. ಹಸಿವಾಗುತ್ತಿದೆಯಾ..?" ಎಂದು ಕೇಳಿದಳು. "ಹೂಂ ಅಮ್ಮ. ಆದರೆ, ಅಣ್ಣ ಮತ್ತೆ ಅಕ್ಕ ಇಬ್ಬರೂ ಎದ್ದ ಮೇಲೆ ಊಟ ಮಾಡುತ್ತೇನೆ. ಪಾಪ, ಅವರಿಗೂ ಹೊಟ್ಟೆ ಹಸಿದಿರುತ್ತೆ. ಅಲ್ವಾ ಅಮ್ಮಾ ? ಪಾಪ, ಅವರ ಅಮ್ಮ ಇಲ್ಲಿಲ್ಲ. ನಾವೇ ಅವರಿಗೂ ಊಟ ತಗೊಂಡು ಹೋಗೋಣ ಅಲ್ವಾ, ಅಮ್ಮಾ?" ಎಂದು ಹೇಳಿದ. ಮುಗ್ಧ ಮಾತುಗಳಿಗೆ ಏನು ಹೇಳಲೂ ಸಹಾ ತೋಚಲಿಲ್ಲ ಅವಳಿಗೆ. ಕೆಲವೊಮ್ಮೆ ದೊಡ್ಡವರಿಗೆ ಹೊಳೆಯದ ಆಲೋಚನೆಗಳು ಮಕ್ಕಳಿಗೆ ಹೊಳೆಯುವುದು ಸಹಾ ಉಂಟು. ಈಗ ಅಪರ್ಣಾಳಿಗೆ ಕರ್ತವ್ಯದ ನೆನಪಾಯಿತು. ಅಲ್ಲಿಗೆ ಹೋಗುವುದೋ ಅಥವಾ ಇಲ್ಲೇ ಅಶುತೋಷ್ ನನ್ನು ಕಾಯುವುದೋ ಗೊಂದಲದ ನಡುವಲ್ಲಿ ಮಕ್ಕಳ ಕುರಿತು ಆಲೋಚಿಸಿದಳು.

ಆಶುತೋಷ್ ಆಪರೇಷನ್ ಮುಗಿಯಲು ಇನ್ನೂ ಸಮಯ ಬೇಕು. ಅಷ್ಟರಲ್ಲಿ ಮಕ್ಕಳನ್ನು ನೋಡಿ, ಡಾಕ್ಟರ್ ಹತ್ತಿರ ವಿಚಾರಿಸಿಕೊಂಡು ಬರುತ್ತೇನೆ ಎನ್ನುತ್ತಾ ನಂದನ್ ಹತ್ತಿರ ಹೇಳಿ ಹೊರಟಳು. ನಂದನ್ "ಬೇಡ, ನೀವು ಇಲ್ಲೇ ಇರಿ. ನಾನೇ ವಿಚಾರಿಸಿಕೊಂಡು ಅಥರ್ವನಿಗೆ ಊಟ ಮಾಡಿಸಿಕೊಂಡು, ನಿಮಗೂ ಊಟದ ವ್ಯವಸ್ಥೆ ಮಾಡುತ್ತೇನೆ" ಎಂದು ಹೇಳಿ ಅವಳ ಪ್ರತಿಕ್ರಿಯೆಗೂ ಕಾಯದೆ ಅಥರ್ವನನ್ನು ಎತ್ತಿಕೊಂಡು ಹೊರಟ. ಅಪರ್ಣಾ ತಡೆದರೆ ಎಂಬ ಆಲೋಚನೆಯಲ್ಲಿ, ಅವಳನ್ನು ಸದ್ಯಕ್ಕೆ ಆ ಕಡೆ ಹೋಗದಂತೆ ಮಾಡಲು ಅವನಿಗೆ ಇದ್ದ ದಾರಿ ಇದೊಂದೇ.. ಸತ್ಯವನ್ನು ಮುಚ್ಚಿಡಲು ಎಷ್ಟು ಕಾಲ ಸಾಧ್ಯ? ಆದರೆ, ಅಶು ಎಚ್ಚರವಾಗುವವರೆಗೆ, ಅವನೇ ಇವೆಲ್ಲವನ್ನೂ ಸರಿ ಪಡಿಸುವವರೆಗೆ ನಂದನ್ ನಿಗೆ ಏನನ್ನು ಮಾಡಲು  ಸಹಾ ಧೈರ್ಯವಿಲ್ಲ. ಎಲ್ಲವೂ ಸರಿ ಹೋಗಲು ಇನ್ನೇನು ಸಾಧ್ಯವಿತ್ತು ಎನ್ನುವಾಗ ಏನೆಲ್ಲಾ ಆಗಿ ಹೋಯಿತು ? ಎಂದು ನಿಟ್ಟುಸಿರಿಟ್ಟು ಭಾರವಾದ ಹೆಜ್ಜೆಗಳನ್ನಿಡುತ್ತಾ ಹೊರಟನು.

ನಂದನ್ ಹೊರಟಂತೆ ಇತ್ತ ಅಪರ್ಣಾಳಿಗೆ ಒಂಟಿತನ ಭಾಸವಾಯಿತು. ಮತ್ತದೇ ಆಲೋಚನೆಗಳು ಮುತ್ತಿಗೆ ಹಾಕಿದವು. ಒಂಟಿತನ ಬರೀ ಬಾಹ್ಯದಲ್ಲಿ ಮಾತ್ರವಲ್ಲ, ಅಂತರಂಗದಲ್ಲಿ.. ಬಾಹ್ಯದ ಒಂಟಿತನ ಛಲ ಹುಟ್ಟಿಸುತ್ತದೆ. ಆದರೆ, ಅಂತರಂಗದ ಒಂಟಿತನ ಆಲೋಚನೆಗಳಿಂದ ಕುಗ್ಗಿಸಿ ಬಿಡುತ್ತದೆ. ಯಾವಾಗಲೂ ಒಂಟಿತನವನ್ನು ಅರಸುತ್ತಿದ್ದವಳು ನಾನು. ಇದೇನಾಗಿ ಹೋಯಿತು.. ? ಇಷ್ಟು ಬದಲಾವಣೆ ಇಷ್ಟು ಕ್ಲುಪ್ತ ಸಮಯದಲ್ಲಿ.. ಬದುಕಿನ ಗತಿ ಇಷ್ಟು ಬೇಗ ಬದಲಾಗುವುದೇ.. ಕಣ್ಮುಚ್ಚಿ ಕುಳಿತವಳಿಗೆ "ಅನಿಷ್ಟ ಇವಳು, ಇವಳಿಂದಾಗಿಯೇ ಎಲ್ಲವೂ ಆದದ್ದು.. ಅನಿಷ್ಟ, ದುರಾದೃಷ್ಟ" ಈ ಮಾತುಗಳು ಕಿವಿಗೆ ಬಿದ್ದಂತಾಗಿ ಎಚ್ಚೆತ್ತಳು. ಎಷ್ಟೋ ಕಷ್ಟ ಪಟ್ಟಿದ್ದಳು ಅವೆಲ್ಲದರಿಂದ ಹೊರಬರಲು, ಆದರೆ, ಅತೀತ ಮತ್ತೆ ಕಾಡಿದಂತಾಗಿ ಬೆಚ್ಚಿದಳು. ಕಣ್ಮುಚ್ಚಿ "ವಸುಂಧರಾ ಎಸ್ಟೇಟ್" ಅನ್ನು ನೆನಪು ಮಾಡಿಕೊಳ್ಳಲು ಪ್ರಯತ್ನಿಸಿದಳು. ಆದರೆ, ಮತ್ತದೇ ಧ್ವನಿ, ಮರೆಯಲು ಪ್ರಯತ್ನಿಸಿದಷ್ಟೂ ಧ್ವನಿ ಹೆಚ್ಚಾಗಿ ಅವಳನ್ನು ಚುಚ್ಚಿದಂತಾಗುತ್ತಿತ್ತು. "ನೋ...." ಎಂದು ಜೋರಾಗಿ ಕಿರುಚಿದ ಧ್ವನಿಗೆ ಅಲ್ಲಿದ್ದ ಎಲ್ಲರೂ ಒಮ್ಮೆ ಇವಳತ್ತ ತಿರುಗಿದರು. 

"ಅಪರ್ಣಾ, ಮರೆಯಲು ಪ್ರಯತ್ನ ಮಾಡುವುದಕ್ಕಿಂತ ನಿರ್ಲಕ್ಷಿಸಿಬಿಡು" ಎಂದು ಹೇಳಿ ಅವಳ ಕೈಯನ್ನು ತಮ್ಮ ಹಸ್ತಕ್ಕೆ ತೆಗೆದುಕೊಂಡು ಧೈರ್ಯ ತುಂಬಿದವರತ್ತ ಒಮ್ಮೆ ದಿಗ್ಭ್ರಮೆಯಿಂದ ನೋಡಿದಳು.


ಯಾರವರು ಎಂದು ಊಹಿಸಬಲ್ಲಿರಾ ?
(ಸಶೇಷ)

(ಎಂದಿನಂತೆ ಈ ಬಾರಿಯೂ ನಿಮ್ಮ ಪ್ರತಿಕ್ರಿಯೆಗಳ ನಿರೀಕ್ಷೆಯಲ್ಲಿ ನಾನಿದ್ದೇನೆ. ನಿಮ್ಮ ಪ್ರತಿಕ್ರಿಯೆಗಳೇ ನನ್ನ ಮುಂದಿನ ಬರಹಕ್ಕೆ ಸ್ಫೂರ್ತಿ. ಓದಿದವರು ತಪ್ಪದೇ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ)

~ವಿಭಾ ವಿಶ್ವನಾಥ್