ಗುರುವಾರ, ಜನವರಿ 10, 2019

ಪರಿಭ್ರಮಣ

ಸಂಜಯ್ ಕಣ್ಮುಚ್ಚಿ ಎಲ್ಲವನ್ನೂ ಒಮ್ಮೆ ನೆನಪಿಸಿಕೊಳ್ಳುತ್ತಿದ್ದ.

ತಾನು ಕೇಳುವ ಮುಂಚೆಯೇ ಎಲ್ಲವೂ ಕಣ್ಮುಂದೆ ಇರುವಂತೆ ನೋಡಿಕೊಳ್ಳುತ್ತಿದ್ದ ಅಪ್ಪ-ಅಮ್ಮ, ತನ್ನ ಸೇವೆಗೆಂದೇ ಇದ್ದ ಆಳು-ಕಾಳುಗಳು, ಹಸಿವೆಂಬುದರ ಅರ್ಥವೇ ಗೊತ್ತಿಲ್ಲದಂತೆ ಹೊತ್ತೊತ್ತಿಗೆ ಸರಿಯಾಗಿ ಹಾಲು-ಹಣ್ಣು, ಊಟ-ತಿಂಡಿ ತಿನ್ನಿಸುತ್ತಿದ್ದ ಅಮ್ಮ, ಇಂದು ನಾನು ಯಾವ ಬಟ್ಟೆ ಹಾಕಿಕೊಳ್ಳಲಿ ಎಂದು ಯೋಚಿಸುವಷ್ಟಿದ್ದ ಬಟ್ಟೆ-ಬರೆ, ಚಳಿಗೆ ಬೆಚ್ಚನೆಯ ರಗ್ಗು, ಬೇಸಿಗೆಯ ಧಗೆಗೆ ಎ.ಸಿ, ಮಳೆಗೆ ನೆನೆಯದಂತೆ ರೇನ್ ಕೋಟ್. ಓಡಾಡಲು ತರಾವರಿ ಕಾರು,ಬೈಕು, ಬೇಜಾರಾದರೆ ಟಿ.ವಿ ಅಥವಾ ಮೊಬೈಲು ಮುಂದಿನ ಬದುಕಿನ ಬಗ್ಗೆ ಯೋಚನೆಯೇ ಇಲ್ಲದಂತೆ ಯಾವುದರಲ್ಲೂ ಕೊರತೆ ಇಲ್ಲದಂತೆ ಜೀವನ ಸಾಗುತ್ತಿತ್ತು.

ಆದರೆ ಅಂದು ಕೆಲವೇ ಘಂಟೆಗಳ ಅಂತರದಲ್ಲಿ ಏನೆಲ್ಲಾ ಆಗಿ ಹೋಗಿತ್ತು. ಮಳೆಗೆ ನದಿ ನೀರಿನ ಏರುವಿಕೆಯ ಜೊತೆಗೆ ಒಡೆದುಕೊಂಡ ಅಣೆಕಟ್ಟು ನೋಡ ನೋಡುತ್ತಿರುವಂತೆಯೇ ಮನೆಯನ್ನೆಲ್ಲಾ ಕೊಚ್ಚಿ ಕೊಂಡೊಯ್ದುಬಿಟ್ಟಿತ್ತು. ಅಲ್ಲಿ ಒಂದು ಮನೆ ಇತ್ತು ಎಂಬುದಕ್ಕೆ ಕುರುಹೇ ಇಲ್ಲವೇನೋ ಎಂಬಂತೆ..! ಅಪ್ಪ-ಅಮ್ಮ ಮನೆಯೊಳಗೆ ಇದ್ದರೋ ಇಲ್ಲವೋ ಎಂಬುದೂ ತಿಳಿಯಲಿಲ್ಲ. ಒಂದರೆಕ್ಷಣ ಜಗತ್ತಿನಲ್ಲಿ ನಾನೊಬ್ಬನೇ, ನನ್ನವರು-ನನ್ನದು ಎಂಬುದು ಇಲ್ಲವೇನೋ ಎಂಬ ಭಾವ ಆವರಿಸಿತ್ತು. ಒಂದು ಸುತ್ತು ತೋಟದಲ್ಲಿ ತಿರುಗಾಡಿ ಬರುವಷ್ಟರಲ್ಲಿ ಏನೆಲ್ಲಾ ಆಗಿ ಹೋಗಿತ್ತು. ನೀರಿನ ಪ್ರಮಾಣ ಹೆಚ್ಚಾಗುತ್ತಲೇ ಇತ್ತು. ತಿಮ್ಮ ಬಂದು ಎಳೆದೊಯ್ಯದಿದ್ದಿದ್ದರೆ ನಾನೂ ಅದರೊಟ್ಟಿಗೇ ಕೊಚ್ಚಿ ಹೋಗುತ್ತಿದ್ದೆನೇನೋ..

ಎಂದೂ ಮತ್ತೊಬ್ಬರ ಮನೆಯ ಬಾಗಿಲಿಗೆ ಹೋಗದ ನಾನು ನಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದವರ ಮನೆಯ ಬಾಗಿಲಲ್ಲಿ ಆಶ್ರಯ ಪಡೆದಿದ್ದೆ. ಅಲ್ಲಾದರೂ ಎಷ್ಟು ಹೊತ್ತು..? ಕ್ರಮೇಣ ಹೆಚ್ಚಾಗುತ್ತಲೇ ಇದ್ದ ನೀರಿನ ಆವೇಗಕ್ಕೆ ಹೆದರಿ ಅವರೊಡನೆ ಗಂಜೀ ಕೇಂದ್ರಕ್ಕೆ ಪಯಣ. ಆ ಅಮ್ಮಂದಿರು ಆ ಕಷ್ಟದಲ್ಲಿಯೂ ತಮ್ಮ ಮಕ್ಕಳಿಗಿಂತ ಹೆಚ್ಚಾಗಿ ನನ್ನನ್ನು ನೋಡಿಕೊಂಡರು. ನಾನು ಸಿರಿವಂತನಾಗಿದ್ದಾಗ ನೋಡಿಕೊಂಡಷ್ಟೇ ಅಸ್ಥೆಯಿಂದ ಆಗಲೂ ಅವರು ನನ್ನನ್ನು ನೋಡಿಕೊಂಡರು. ಹಣಕ್ಕಿಂತ ಹೃದಯ ಶ್ರೀಮಂತಿಕೆಗೇ ಹೆಚ್ಚಿನ ಬೆಲೆ ಇತ್ತು ಅಲ್ಲಿ. ಆತ್ಮೀಯತೆಯ ಬೆಲೆ ಆಗ ಅರಿವಾಗತೊಡಗಿತ್ತು. ಬೆಚ್ಚನೆಯ ರಗ್ಗುಗಳಿರಲಿಲ್ಲ ಆದರೆ ಬೆಚ್ಚನೆಯ ಬಂಧವಿತ್ತು. ರಕ್ತ ಸಂಬಂಧಕ್ಕಿಂತ ಋಣಾನುಬಂಧದ ಅನುಬಂಧವಿತ್ತು. ಹಳೆ ಬಾಳು ಸತ್ತು ಹೊಸ ಬಾಳಿನ ಉದಯವಾಗುತಲಿತ್ತು. ನೀರಿನ ಹಠಾತ್ ಹರಿವಿನಂತೆಯೇ, ಬಾಳಿನಲ್ಲಿಯೂ ಹಠಾತ್ ತಿರುವು ಸಿಕ್ಕಿತ್ತು.

ನಂತರ ಗಂಜೀ ಕೇಂದ್ರದಲ್ಲಿ ಒಬ್ಬ ಸ್ವಯಂ ಸೇವಕನಾದೆ. ಜೀವನದ ಹೊಸ ಮಗ್ಗುಲಿನ ಪರಿಚಯ ಮಾಡಿಕೊಂಡೆ. ನೆರೆ ಇಳಿದ ನಂತರ ಹೊಸ ಬದುಕು ಕಟ್ಟಿಕೊಳ್ಳುವವರಿಗೆ ನೆರವಾದೆ. ಅಷ್ಟೊತ್ತಿಗೆ ಐಷಾರಾಮದ ಬದುಕು ನಡೆಸುತ್ತಿದ್ದ ನನ್ನೊಳಗಿನ ಸಂಜಯ್ ಸತ್ತಾಗಿತ್ತು. ಅಷ್ಟರಲ್ಲಿ ಅಪ್ಪ-ಅಮ್ಮ ಇನ್ನಿಲ್ಲವೆಂಬ ಸತ್ಯವನ್ನೂ ಅರಗಿಸಿಕೊಂಡಾಗಿತ್ತು. ಬದುಕಿನಲ್ಲಿ ಸ್ಪಷ್ಟ ಗುರಿಯೇ ಇಲ್ಲ ಎಂಬಂತಿದ್ದವನಿಗೆ ಯಾವುದನ್ನೂ ಲಕ್ಷಿಸದೆ, ಜೀವದ ಹಂಗು ತೊರೆದು ಅಲ್ಲಿ ಸೇವೆ ಮಾಡುತ್ತಿದ್ದ ಸೈನಿಕರನ್ನು ನೋಡಿ ನಾನೂ ಸೈನ್ಯಕ್ಕೆ ಸೇರಿ ಸೇವೆ ಸಲ್ಲಿಸುವ ಆಸೆ ಬಂದಿತ್ತು. ಆ ಆಸೆಯನ್ನು ನೆರವೇರಿಸಿಕೊಂಡೆ ಸಹಾ.

ಆದರೆ, ಇಪ್ಪತ್ತು ವರ್ಷದ ನಂತರ ಕಾಲ ಮತ್ತೆ ಅದೇ ಸ್ಥಳ, ಅದೇ ಪರಿಸ್ಥಿತಿಯನ್ನು ನೋಡು ಎಂಬಂತೆ ಮತ್ತೆ ಇಲ್ಲಿಗೇ ಕರೆತಂದು ನಿಲ್ಲಿಸಿದೆ. ಆದರೆ ಅಲ್ಪ ಬದಲಾವಣೆಯೊಂದಿಗೆ.. ಈಗ ನನಗೆ ನನ್ನ ಕರ್ತವ್ಯದ ಅರಿವಿದೆ, ಹೊಣೆ ಇದೆ. ಮತ್ತಷ್ಟು ಸಂಜಯರನ್ನು ಕಾಣುವ, ರೂಪಿಸುವ ಅವಕಾಶ ದೊರೆತಿದೆ.

ಅಷ್ಟರಲ್ಲಿ ಕೇಳಿ ಬಂದ ಹಾರ್ನ್ ಶಬ್ಧ ಅವನ ಯೋಚನಾ ಲಹರಿಯನ್ನು ತುಂಡರಿಸಿತ್ತು. ಸುತ್ತುವ ಕಾಲದೊಂದಿಗೆ ಹಿಂದಕ್ಕೆ ಹೋಗಿಬಂದಿದ್ದ ಸಂಜಯ್ ಈಗ ಹೊಸದಾಗಿ ಶಿಬಿರಕ್ಕೆ ಬಂದ ನಿರಾಶ್ರಿತರಿಗೆ ನೆಲೆ ಕಲ್ಪಿಸಿಕೊಡುವತ್ತ ಹೆಜ್ಜೆ ಹಾಕಿದ.     

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ