ಸೋಮವಾರ, ಜನವರಿ 21, 2019

ನಮ್ಮ ಶಿಕ್ಷಣದ ಕಥೆ ನಿಮ್ಮ ಜೊತೆ..

ರೂಪಕವನ್ನು ವೀಕ್ಷಿಸಲು ಈ ಲಿಂಕ್ ಗೆ ಭೇಟಿ ನೀಡಿ. ಮಕ್ಕಳ ಅಭಿನಯವನ್ನು ಆನಂದಿಸಿ.

ಪಾತ್ರಗಳು:
1. ಕಿಟ್ಟಿ
2. ಕಿಟ್ಟಿಯ ತಾಯಿ
3. ರಾಜು
4. ರಾಜುವಿನ ತಾಯಿ
5. ರಾಜುವಿನ ತಂದೆ
6. ಹೂ ಮಾರುವ ಅಜ್ಜಿ

ದೃಶ್ಯ-01
-----------
(ಕಿಟ್ಟಿಯ ತಾಯಿ, ಕಿಟ್ಟಿ)

ಕಿಟ್ಟಿಯ ಅಮ್ಮ: ಕಿಟ್ಟಿ, ಏನ್ ಮಾಡ್ತಾ ಇದ್ದೀಯೋ ?

ಕಿಟ್ಟಿ: ಚಿತ್ರ ಬಿಡಿಸ್ತಾ ಇದ್ದೀನಿ ಕಣಮ್ಮಾ..

ಕಿಟ್ಟಿಯ ಅಮ್ಮ: ಯಾವಾಗ ನೋಡಿದ್ರೂ ಈ ಹಾಳಾದ ಚಿತ್ರ ಬಿಡಿಸ್ತಾನೇ ಕೂತಿರ್ತೀಯಾ. ಅದ್ಯಾವಾಗ ಓದಿಕೋತಿಯೋ..? ಗೊತ್ತಿಲ್ಲ..!
ಚಿತ್ರ ಬರಿಯೋದು ಬಿಟ್ರೆ ಕಥೆ ಪುಸ್ತಕ ಇಲ್ಲಾ ಅಂದ್ರೆ ಆಟ. ಇದೇ ಆಗೋಯ್ತು ಮೂರೊತ್ತು..
ಮುಂದಗಡೆ ಮನೆ ರಾಜೂನಾ ನೋಡಿ ಕಲಿತುಕೊಳ್ಳೋ, ಯಾವಾಗ್ಲೂ ಓದ್ತಾ ಇರ್ತಾನೆ. ನೀನೂ ಇದ್ದೀಯಾ ಬರೀ ದಂಡಕ್ಕೆ..

ಕಿಟ್ಟಿ: ಹೋಗಿ ಹೋಗಿ ಆ ಸೋಡಾಬುಡ್ಡಿ ತರಾ ಆಗು ಅಂತಾ ಹೇಳ್ತಾ ಇದ್ದೀಯಲ್ಲಮ್ಮ. ನಿಂಗೇನು ಬುದ್ದಿ ಇಲ್ವಾ..?

ಕಿಟ್ಟಿಯ ಅಮ್ಮ: ಬುದ್ದಿ ಇರೋದಕ್ಕೆ ಕಣೋ, ಹಂಗೆ ಹೇಳ್ತಾ ಇರೋದು. ಅವ್ನು ಯಾವಾಗ್ಲೂ ಫಸ್ಟ್ ರ್ಯಾಂಕ್. ನೀನೂ ಇದ್ದೀಯಾ..

ಕಿಟ್ಟಿ: ನಾನೂ ಫಸ್ಟ್ ಬರ್ತೀನಲ್ಲಮ್ಮಾ. ಅದ್ಯಾಕೆ ನಿನ್ನ ಕಣ್ಣಿಗೆ ಕಾಣಿಸೋಲ್ಲ..?

ಕಿಟ್ಟಿಯ ಅಮ್ಮ: (ವ್ಯಂಗ್ಯವಾಗಿ) ನೀನೂ ಫಸ್ಟ್ ಬರ್ತೀಯಾಪ್ಪಾ, ಆದರೆ ಫಸ್ಟ್ ಇಂದ ಅಲ್ಲ ಲಾಸ್ಟ್ ಇಂದ ಅಲ್ವಾ..?

ಕಿಟ್ಟಿ: ಬರೀ ಓದೋ ವಿಷಯಾನೇ ಹೇಳ್ತೀಯಲ್ಲಮ್ಮಾ.. ನಾನು ಎಲ್ಲಾ ಗೇಮ್ಸ್ ಅಲ್ಲೂ ಫಸ್ಟ್, ಡ್ರಾಯಿಂಗ್ ಅಲ್ಲೂ ಫಸ್ಟ್, ಜನರಲ್ ನಾಲೆಡ್ಜ್ ಅಲ್ಲೂ ಫಸ್ಟ್

ಕಿಟ್ಟಿಯ ಅಮ್ಮ: ಆದ್ರೇನಪ್ಪಾ ಬಂತು ಪ್ರಯೋಜನ? ನಿಂಗೆ ಮಾರ್ಕ್ಸ್ ಏ ಬರಲ್ವಲ್ಲೋ.. ನಮ್ಮ ಕಾಲದಲ್ಲಿ ನಿಮ್ಮಷ್ಟು ಓದ್ಸಿದ್ರೆ ನಾವು ಎಲ್ಲೋ ಇರ್ತಿದ್ವಿ.

ಕಿಟ್ಟಿ: (ವ್ಯಂಗ್ಯವಾಗಿ) ಅದ್ಕೆ ಓದ್ಸಿಲ್ಲ ಬಿಡು
(ಗಂಭೀರವಾಗಿ) ಅಮ್ಮಾ ಯಾವಾಗ್ಲೂ ಯಾಕೆ ಕಂಪೇರ್ ಮಾಡ್ಕೋತೀಯಾ? ಅವರಿಗೆ ಎಷ್ಟು ಸಾಧ್ಯಾನೋ ಅಷ್ಟು ಓದ್ಸಿದ್ದಾರೆ.
ಸರಿ,ಸರಿ ನಂಗೆ ಆಟ ಆಡೋಕೆ ಟೈಮ್ ಆಯ್ತು. ನಾನು ಆಟಕ್ಕೆ ಹೋಗ್ತೀನಿ. ಬಾಯ್
[ಕಿಟ್ಟಿ ಓಡುವನು, ಅಮ್ಮನೂ ಇತ್ತ ಬರುವಳು]

ದೃಶ್ಯ -2 
-------------
[ರಾಜುವಿನ ಅಪ್ಪ, ರಾಜುವಿನ ಅಮ್ಮ, ರಾಜು]
(ರಾಜುವಿನ ಮನೆ)

ರಾಜುವಿನ ಅಮ್ಮ: ರಾಜು,ರಾಜು. ಏನ್ ಮಾಡ್ತಾ ಇದ್ದೀಯೋ?

ರಾಜುವಿನ ಅಪ್ಪ: ಏನೇ ನಿಂದು..? ಅವ್ನು ಓದಿಕೊಳ್ತಾ ಇದ್ದಾನೆ.  ಏನಾಗ್ಬೇಕು ನಿಂಗೆ?

ರಾಜುವಿನ ಅಮ್ಮ: ಅಯ್ಯೋ, ಮಾರ್ಕೆಟ್ ಗೆ ಹೋಗಬೇಕಿತ್ತು ಕಣ್ರೀ. ಅದಕ್ಕೇ ಕೂಗಿದೆ. ಪೂಜೆಗೆ ಹೂವು ಹಣ್ಣು ಎಲ್ಲಾ ತರಬೇಕಿತ್ತು.

ರಾಜುವಿನ ಅಪ್ಪ: ಓದೋ ಹುಡುಗನಿಗ್ಯಾಕೆ ಹೇಳ್ತಿಯಾ ಅದನ್ನೆಲ್ಲಾ. ಅವನು 5 ನೇ ಕ್ಲಾಸು. ಅವ್ನಿಗೆಲ್ಲಿದೆಯೋ ಟೈಮು?
ಬೆಳಿಗ್ಗೆ ಎದ್ದ್ರೆ ಯೋಗಾಸನ, ಆಮೇಲೆ ಮ್ಯಾಥ್ಸ್ ಟ್ಯೂಷನ್, ಆಮೇಲೆ ಸ್ಕೂಲು, ಸಂಜೆ ಸ್ವಿಮ್ಮಿಂಗು ಆಮೇಲೆ ಅಬ್ಯಾಕಸ್  ಕ್ಲಾಸ್ ಕೊನೆಗೆ ಸೈನ್ಸ್ ಟ್ಯೂಷನ್.. ಅವ್ನು ಓದ್ಕೊಳ್ಳಿ ಬಿಡು. ನಾನೇ ತರ್ತೀನಿ ಬ್ಯಾಸ್ಕೆಟ್ ಕೊಡು.

ರಾಜುವಿನ ಅಮ್ಮ: ನೀವು ಹೀಗಂದು ಅಂದು ಅವನನ್ನು ಹಾಳು ಮಾಡಿದ್ದೀರ. ಅವನಿಗೆ ಸಕ್ಕರೆ ಯಾವುದು ಉಪ್ಪು ಯಾವುದು ಅಂತಾ ವ್ಯತ್ಯಾಸಾನೇ ಗೊತ್ತಿಲ್ಲ. ಮೊನ್ನೆ ಏನಾಯ್ತು ಗೊತ್ತಾ?

ರಾಜುವಿನ ಅಪ್ಪ: ಗೊತ್ತಿಲ್ಲ ಕಣೇ. ಹೇಳಿದ್ರೆ ತಾನೇ ಗೊತ್ತಾಗೋದು..

ರಾಜುವಿನ ಅಮ್ಮ: ಹೇಳ್ತೀನಿ ಕೇಳಿ.. ಮೊನ್ನೆ ಏನೋ ಕೆಲಸ ಮಾಡ್ತಾ ಇದ್ದೆ. ಸಾರಿಗೆ ಒಂದು ಸೌಟು ಉಪ್ಪು ಹಾಕು ಅಂದರೆ ಸಕ್ಕರೆ ಹಾಕಿ ಪಾಯಸ ಮಾಡಿ ಇಟ್ಟಿದಾನೆ.

ರಾಜುವಿನ ಅಪ್ಪ: ಹೌದೇನೋ ರಾಜು?

ರಾಜು: (ಮುಗ್ದವಾಗಿ) ಎರಡೂ ವೈಟ್ ಕಲರ್ ಇತ್ತು ಪಪ್ಪಾ, ನಂಗೆ ಗೊತ್ತಾಗಲೇ ಇಲ್ಲ. ಅಮ್ಮ ಆ ಡಬ್ಬಿಗಳ ಮೇಲೆ ಚೀಟೀನೇ ಅಂಟಿಸಿರಲಿಲ್ಲಾ

ರಾಜುವಿನ ಅಮ್ಮ:(ತಲೆ ಚಚ್ಚಿಕೊಳ್ಳುವಳು)

ರಾಜುವಿನ ಅಪ್ಪ: ಹೋಗ್ಲಿ ಬಿಡೆ ಮುಂದೆ ಸರಿಯಾಗ್ತಾನೆ

ರಾಜುವಿನ ಅಮ್ಮ: ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ಅಂತಾರಲ್ಲ ಹಾಗೇ. ಇವಾಗ ಕಲಿಯದೇ ಇರೋನು ಮುಂದೆ ಕಲೀತಾನಾ.. ಎಲ್ಲಾ ಈಗಿನ ಇಂಗ್ಲೀಷ್ ಸ್ಕೂಲ್ ಗಳ ಪ್ರಭಾವ.

ರಾಜುವಿನ ಅಪ್ಪ: ಇವಾಗ ಏನು ಮಾಡ್ಬೇಕು ಅಂತೀಯೇ ?

ರಾಜುವಿನ ಅಮ್ಮ: ಅವನನ್ನು ಟ್ಯೂಷನ್, ಅಬ್ಯಾಕಸ್ ಎಲ್ಲಾ ಬಿಡಿಸಿ, ಎಲ್ಲಾ ಮಕ್ಕಳ ತರ ಅವನೂ ಆಟ ಆಡಿಕೊಂಡು ಇರಲಿ.

ರಾಜುವಿನ ಅಪ್ಪ: ಅವನೂ ದಿನಾ ಆಟ ಆಡ್ತಾನಲ್ಲೇ..!?

ರಾಜುವಿನ ಅಮ್ಮ: ಯಾವಾಗ ಆಡ್ತಾನೆ? ಅವನು ರೂಂ ಬಿಟ್ಟು ಹೊರಗಡೆ ಹೋಗೋದನ್ನೇ ನಾನು ನೋಡಿಲ್ಲ.

ರಾಜು: ದಿನಾ ಕ್ರಿಕೆಟ್, ಫುಟ್ ಬಾಲ್ ಆಡ್ತೀನಲ್ಲಮ್ಮಾ..

ರಾಜುವಿನ ಅಮ್ಮ: (ಆಶ್ಚರ್ಯದಿಂದ) ಯಾವಾಗ್ಲೋ..? ಟ್ಯೂಷನ್ ಗೆ ಹೋದಾಗ ಅಲ್ಲಿ ಮಕ್ಕಳ ಜೊತೆಗೆ ಆಟ ಆಡ್ತೀಯೇನೋ? ಯಾವ,ಯಾವ ಆಟ ಆಡ್ತೀರೋ..?
ನಂಗೆ ಹೇಳ್ಲೇ ಇಲ್ವಲ್ಲೋ ಇದನ್ನ

ರಾಜು: ಅಯ್ಯೋ ಅಮ್ಮ.. ಅಲ್ಲಿ ಎಲ್ಲಿ ಆಟ ಆಡೋಕಾಗುತ್ತೆ? ದೊಡ್ಡ ದೊಡ್ಡ ಬಿಲ್ಡಿಂಗ್ ಮಾತ್ರ ಇರೋದು. ಫೀಲ್ಡ್ ಏ ಇಲ್ಲ, ರೋಡಲ್ಲಿ ಆಡ್ಬೇಕಾಗುತ್ತೆ ಅಷ್ಟೇ.

ರಾಜುವಿನ ಅಪ್ಪ: ನಾವಾದ್ರೇ ರೋಡಲ್ಲೂ ಆಡ್ತಾ ಇದ್ವಿ. ಆ ವೆಹಿಕಲ್ ಗಳ ಮಧ್ಯೆ ರೋಡಲ್ಲಿ ಆಡೋಕೂ ಆಗಲ್ಲ ಈಗ.
ಅದಿಕ್ಕೆ ಕಣೇ ಅವನು ದಿನಾ ಕ್ರಿಕೆಟ್, ಪುಟ್ ಬಾಲ್, ಚೆಸ್ ಎಲ್ಲಾನೂ ನನ್ನ ಮೊಬೈಲ್ ಅಲ್ಲೇ ಆಡ್ತಾನೆ.

ರಾಜುವಿನ ಅಮ್ಮ: ನಿಮ್ಮ ಕಥೆ ಕಟ್ಟಿಕೊಂಡು ಹೋದ್ರೆ ಆಯ್ತು.
ಏ ರಾಜು.. ಹೋಗೋ ಹೋಗಿ ಮಾರ್ಕೆಟ್ ಅಲ್ಲಿ ಹೂ,ಹಣ್ಣು, ಕಾಯಿ ತಗೊಂಡು ಬಾ
(ರಾಜು ಪೆನ್ಸಿಲ್ ನಿಂದ ಪೇಪರ್ ನಲ್ಲಿ ಹೂ,ಹಣ್ಣು, ಕಾಯಿ ಎಂದು ಬರೆದುಕೊಳ್ಳುವನು)

ರಾಜು: ಸರಿ ಅಮ್ಮ

ರಾಜುವಿನ ಅಮ್ಮ: ಹೋದ ಸಾರಿ ದುಡ್ಡು ಮರೆತು ಹೋದ್ಯಲ್ಲ ಹಾಗೆ ಹೋಗ್ಬೇಡ. ಅಲ್ಲೇ, ಅಕ್ಕಿ ಡಬ್ಬದ ಕೆಳಗಡೆ ದುಡ್ಡು ಇಟ್ಟಿದ್ದೀನಿ ತಗೊಂಡು ಹೋಗು.

ರಾಜು: ಆಯ್ತು ಅಮ್ಮ

ದೃಶ್ಯ-3 
-------------
(ಮಾರ್ಕೆಟ್ ನಲ್ಲಿ)
(ಅಜ್ಜಿ, ರಾಜು, ಕಿಟ್ಟಿ, ಕಿಟ್ಟಿಯ ಅಮ್ಮ)

ಅಜ್ಜಿ: ಏನು ಬೇಕಿತ್ತಪ್ಪಾ?

ರಾಜು: (ಜೋರು ಧ್ವನಿಯಲ್ಲಿ) ಹೂ, ಹಣ್ಣು, ಕಾಯಿ ಎಲ್ಲಾ ಬೇಕಿತ್ತಪ್ಪಾ.
(ಸ್ವಲ್ಪ ನಿಧಾನವಾಗಿ) ಆದರೆ ಎಷ್ಟು ಬೇಕಿತ್ತು ಅಂತಾ ಅಮ್ಮ ಹೇಳ್ಲೇ ಇಲ್ಲ. ಎಲ್ಲಾನು ಒಂದು ಒಂದೇ ಅನ್ಸುತ್ತೆ, ಜಾಸ್ತಿ ಬೇಕಿದ್ರೆ ಅಮ್ಮ ಹೇಳ್ತಿದ್ರು.

ಅಜ್ಜಿ: ಎಷ್ಟೆಷ್ಟು ಬೇಕು?

ರಾಜು: ಒಂದು ಹೂ, ಆಮೇಲೆ ಒಂದು ಕಾಯಿ, ಒಂದು ಹಣ್ಣು ಕೊಡಿ.

ಅಜ್ಜಿ: (ಜೋರಾಗಿ ನಗುತ್ತಾ) ಏನು? ಒಂದು ಹೂ, ಒಂದು ಹಣ್ಣಾ..?

ರಾಜು: (ಕೋಪದಿಂದ) ಯಾಕಜ್ಜಿ ನಗ್ತಾ ಇದ್ದೀಯಾ?

ಅಜ್ಜಿ: ಇನ್ನೇನಪ್ಪಾ ಮಾಡ್ಲಿ..? ಯಾರಾದ್ರೂ ಒಂದು ಹೂವು, ಒಂದು ಹಣ್ಣು ತಗೋತಾರಾ? ಒಂದು ಮಾರು ಹೂವು, ಒಂದು ಚಿಪ್ಪು ಹಣ್ಣು ಕೊಡ್ತೀನಿ ತಗೊಂಡು ಹೋಗು.

ರಾಜು: (ತಲೆ ಕೆರೆದುಕೊಳ್ಳುತ್ತಾ) ಸರಿ ಕೊಡಿ. ಮೊದಲು ಹೂ ಕೊಡಿ ಆಮೇಲೆ ಹಣ್ಣು ಆಮೇಲೆ ಕಾಯಿ ಕೊಡಿ

ಅಜ್ಜಿ: ಯಾಕಪ್ಪಾ?

ರಾಜು: ಅಮ್ಮ ತರೋಕೆ ಹೇಳಿರೋದೇ ಹಾಗೆ..

ಅಜ್ಜಿ: ಸರಿ, ಸರಿ. ಸೇವಂತಿಗೆ ಬೇಕೋ? ಕಾಕಡ ಬೇಕೋ? ಮಲ್ಲಿಗೆ ಬೇಕೋ? ಕನಕಾಂಬರ ಬೇಕೋ?

ರಾಜು: (ಆಶ್ಚರ್ಯದಿಂದ) ಅಷ್ಟೊಂದು ತರಹದ ಹೂಗಳು ಇದಿಯಾ? ಯಾವುದೋ ಒಂದು ಕೊಡಿ.

ಅಜ್ಜಿ: ಯಾಕಪ್ಪಾ ನಿಂಗೆ ಇವೆಲ್ಲಾ ಗೊತ್ತಿಲ್ವಾ? ಇನ್ನೂ ತುಂಬಾ ತರಹದ ಹೂಗಳು ಇದ್ದಾವೆ. ಸದ್ಯಕ್ಕೆ ಇಷ್ಟೇ ನನ್ನ ಹತ್ರ ಇರೋದು..
ಸರಿ ಸರಿ, ತೊಂಬತ್ತು ರೂಪಾಯಿ ಆಯ್ತು ಕೊಡಪ್ಪಾ
(ರಾಜು ನೂರು ರೂಪಾಯಿ ಕೊಟ್ಟು ಬುಟ್ಟಿಯಲ್ಲಿ ಮೊದಲು ಹೂ ನಂತರ ಹಣ್ಣು ಆಮೇಲೆ ಕಾಯಿ ಇಟ್ಟುಕೊಂಡು ವಾಪಾಸ್ ಹೊರಡುವನು)

ಅಜ್ಜಿ: ಚಿಲ್ಲರೆ ತಗಳಪ್ಪಾ.. ದಿನಾ ನಿಮ್ಮಂತಹವರು ಸಿಕ್ಕರೆ ನಾವು ಅಂಗಡಿ ಮೇಲೆ ಅಂಗಡಿ ಕಟ್ಟಿಸಬಹುದು. 
(ರಾಜು ಚಿಲ್ಲರೆ ತೆಗೆದುಕೊಂಡು ವಾಪಾಸ್ ಹೊರಡುವಾಗ ಕಿಟ್ಟಿ ಮತ್ತು ಅವರ ಅಮ್ಮ ಎದುರಾಗುತ್ತಾರೆ.)
(ಕಿಟ್ಟಿ ಅವನ ಕೈಯ್ಯಲ್ಲಿದ್ದ ಬ್ಯಾಸ್ಕೆಟ್ ನೋಡಿ ಜೋರಾಗಿ ನಗಲು ಶುರುಮಾಡುತ್ತಾನೆ)

ಕಿಟ್ಟಿಯ ಅಮ್ಮ: (ಗದರಿಸುವ ಧ್ವನಿಯಲ್ಲಿ) ಸುಮ್ನಿರೋ ಕಿಟ್ಟಿ, ಪಾಪ ಅವ್ನಿಗೆ ಗೊತ್ತಾಗಲ್ಲ..
(ರಾಜುವಿಗೆ) ಯಾಕಪ್ಪಾ ರಾಜು? ಬುಟ್ಟಿಯಲ್ಲಿ ಈ ತರಾ ಸಾಮಾನು ಜೋಡಿಸಿಕೊಂಡಿದ್ದೀಯಾ?

ರಾಜು: (ತೊದಲಿಸುತ್ತಾ) ಅದು.. ಅದು.. ಆಂಟಿ.., ಅಮ್ಮ ಹೂವು,ಹಣ್ಣು, ಕಾಯಿ ತಗೊಂಡು ಬಾ ಅಂದ್ರು. ನಾನೂ ಹಾಗೇ ಬರೆದ್ಕೊಂಡಿದ್ದೆ. ಅದಕ್ಕೇ ಈ ತರಾ ಜೋಡಿಸಿಕೊಂಡಿದ್ದೀನಿ.

ಕಿಟ್ಟಿ: ನೋಡಮ್ಮಾ ನಿಮ್ಮ ಫಸ್ಟ್ ರ್ಯಾಂಕ್ ರಾಜು ಕಥೆನಾ..

ಕಿಟ್ಟಿಯ ಅಮ್ಮ: ಸುಮ್ನಿರೋ ಕಿಟ್ಟಿ(ಜೋರಾಗಿ ಗದರುವರು)
(ಕಿಟ್ಟಿಗೆ) ಅವರು ಹೇಳುವಾಗ ಹಾಗೆ  ಹೇಳಿರ್ತಾರೆ ಅಷ್ಟೇ. ನೀನು ಇಟ್ಟಿರೋ ತರಾ ಇಟ್ಕೊಂಡು ಹೋದ್ರೆ ಹೂ, ಹಣ್ಣು ಎಲ್ಲಾ ಹಾಳಾಗತ್ತೆ ಅಷ್ಟೇ..
ಕೆಳಗಡೆ ಕಾಯಿ ಇಟ್ಟು ಆಮೇಲೆ ಹಣ್ಣು ಆಮೇಲೆ ಹೂವು ಇಡಬೇಕು ಆಯ್ತಾ..?

ರಾಜು: ಸರಿ ಆಂಟಿ ಹಾಗೇ ಮಾಡ್ತೀನಿ
(ರಾಜು ಹೊರಡುವನು)

ಕಿಟ್ಟಿ: ನೋಡಮ್ಮಾ ನಿಮ್ಮ ಫಸ್ಟ್ ರ್ಯಾಂಕ್ ರಾಜು ಕಥೆನಾ..ನಾನೂ ರಾಜೂ ತರಹಾನೇ ಆಗ್ಬೇಕಾ? ಯಾವಾಗ್ಲೂ ರಾಜೂನಾ ನೋಡಿ ಕಲಿ ಅಂತಾ ಹೇಳ್ತಾ ಇರ್ತೀಯಲ್ಲಾ.. ನಾನೂ ಹೇಳಬಹುದು ಅಲ್ವಾ, ನೀನೂ ಅವರ ಅಮ್ಮನ ನೋಡಿ ಕಲಿ ಅಂತಾ..

ಕಿಟ್ಟಿಯ ಅಮ್ಮ: ಬಿಡೋ ಹೋಗ್ಲಿ, ಇನ್ಮೇಲೆ ನಿನ್ನನ್ನ ಬೇರೆಯವರಿಗೆ ಕಂಪೇರ್ ಮಾಡಲ್ಲ ಆಯ್ತಾ..?
(ಎಲ್ಲರೂ ನಿರ್ಗಮಿಸುವರು)

ದೃಶ್ಯ-4
-----------
(ರಾಜುವಿನ ಅಮ್ಮ, ಕಿಟ್ಟಿಯ ಅಮ್ಮ)

ಕಿಟ್ಟಿಯ ಅಮ್ಮ: ಆಯ್ತೇನ್ರೀ ಎಲ್ಲಾ ಕೆಲಸ? ನಿಮ್ಮದೇ ಒಂತರಾ ಸುಖ ಬಿಡ್ರೀ.. ಫಸ್ಟ್ ರ್ಯಾಂಕ್ ಬರೋ ಮಗ, ನನ್ಮಗಾನು ಇದ್ದಾನೆ.. ದಂಡಕ್ಕೆ..

ರಾಜುವಿನ ಅಮ್ಮ: ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅಂತಾರೆ, ಏನು ಸುಖಾನೋ ಏನೋ .. ನಿಮ್ಮದೇ ಪುಣ್ಯ ಬಿಡ್ರಿ, ನಿಮ್ಮ ಮಗ ನಿಮಗೆ ಎಲ್ಲಾದ್ರಲ್ಲೂ ಸಹಾಯ ಮಾಡ್ತಾನೆ. ಆಟ ಆಡೋದ್ರಲ್ಲಿ ಚಾಂಪಿಯನ್, ವ್ಯವಹಾರ ಜ್ಞಾನಾನೂ ತುಂಬಾ ಚೆನ್ನಾಗಿದೆ. ತುಂಬಾ ಬುದ್ದಿವಂತ.

ಕಿಟ್ಟಿಯ ಅಮ್ಮ: ಏನು ಬುದ್ದಿವಂತ ಆದ್ರೆ ಏನ್ರೀ..? ಮಾರ್ಕ್ಸ್ ಏ ಬರಲ್ಲ.. ಮುಂದೆ ಹೇಗೋ ಏನೋ ಅಂತಾ ಚಿಂತೆಯಾಗೋಗಿದೆ, ಇವನು ಓದಲಿ ಅಂತಾ ಕೇಬಲ್ ಕನೆಕ್ಷನ್ ತೆಗೆಸಿದ್ವಿ, ನಮ್ಮನೆಯವ್ರ ಆಫೀಸ್ ಗೆ ದೂರ ಆದ್ರೂ ಇಲ್ಲಿ ಮನೆ ಮಾಡಿದ್ವಿ, ಆದ್ರೆ ಇವನು ಹೀಗಾದ.. 
   
ರಾಜುವಿನ ಅಮ್ಮ: ಎಲ್ಲರೂ ವಿಶ್ವೇಶ್ವರಯ್ಯ ಆಗೋಕಾಗಲ್ಲ
ಐದು ಬೆರಳೂ ಒಂದೇ ಸಮ ಇರಲ್ಲ ನೊಡ್ಡಿ.ಓದು, ಮಾರ್ಕ್ಸ್ ಬೇಕು ಆದರೆ ಆರೋಗ್ಯ, ಚಟುವಟಿಕೆ,ವ್ಯವಹಾರ ಜ್ಞಾನ ತುಂಬಾನೇ ಮುಖ್ಯ.
ಮೀನು ಮರ ಹತ್ತೋಕಾಗಲ್ಲಾ, ಹಕ್ಕಿ ಈಜೋಕಾಗಲ್ಲ, ಅವರವರ ರೀತಿ ಅವರವರಿಗೆ ಕಣ್ರೀ.. ಇತ್ತೀಚಿನ ಎಜುಕೇಶನ್ ಸಿಸ್ಟಂ ಹೀಗಾಗೋಗಿದೆ, ಆದ್ರೆ ಇದಕೆಲ್ಲಾ ಅಪವಾದ ಅನ್ನೋ ಹಾಗೇ ಒಂದು ಸ್ಕೂಲ್ ಇದೆ ಕಣ್ರೀ..

ಕಿಟ್ಟಿಯ ಅಮ್ಮ: ಹೌದಾ? ಯಾವುದ್ರೀ ಅದು?

ರಾಜುವಿನ ಅಮ್ಮ: ಮೈತ್ರಿ ಕಾನ್ವೆಂಟ್ ಅಂತಾ ಕಣ್ರೀ, ಅಲ್ಲಿ ಓದೋದರ ಜೊತೆಜೊತೆಗೆ ಆಟಕ್ಕೂ ಪ್ರಾಮುಖ್ಯತೆ ಇದೆ. ಸ್ಮಾರ್ಟ್ ಕ್ಲಾಸ್, ಯೋಗ, ಕರಾಟೆ, ಸಂಗೀತ, ಡ್ರಾಯಿಂಗ್ ಎಲ್ಲಾ ಇದೆ, ಜೊತೆಗೆ ಥಿಯೇಟರ್ ಎಜುಕೇಶನ್ ಅಂದರೆ ರಂಗ ಶಿಕ್ಷಣದ ಅನುಕೂಲ ಸಹಾ ಇದೆ.
ಮಕ್ಕಳಿಗೆ ವ್ಯವಹಾರ ಜ್ಞಾನ ಕಲಿಸೋದಕ್ಕೆ ಕ್ಯಾಂಟೀನ್ ಡೇ ಮಾಡ್ತಾರೆ.ಅಲ್ಲಿ ಮಕ್ಕಳ ಮೊದಲ ಅಭ್ಯಾಸವನ್ನು ಅಕ್ಕಿ ಮೇಲೆ ಅಕ್ಷರ ಬರೆಸೋದ್ರಿಂದ ಅವರ ಅಪ್ಪ-ಅಮ್ಮನೇ ಶುರು ಮಾಡ್ತಾರೆ. ತಂದೆ-ತಾಯಿ ಪಾದ ಪೂಜೆ ಮಾಡಿಸ್ತಾರೆ. ಗ್ರಾಮೀಣ ಕ್ರೀಡೆಗಳು, ಸಂಸ್ಕೃತಿಯ ಮೌಲ್ಯ ಎಲ್ಲವನ್ನೂ ಅಲ್ಲಿ ಕಲಿಸಿಕೊಡುತ್ತಾರೆ.

ಕಿಟ್ಟಿಯ ಅಮ್ಮ: ಹೌದೇನ್ರೀ ಗೊತ್ತೇ ಇರ್ಲಿಲ್ಲ. ಎಲ್ಲಿದೆ ಅದು? ಯಾರು ಅದನ್ನು ನಡೆಸುತ್ತಾ ಇರೋದು?

ರಾಜುವಿನ ಅಮ್ಮ: ಗಂಡಸಿ ಹ್ಯಾಂಡ್ ಪೋಸ್ಟ್ ನಲ್ಲಿ ಮೈತ್ರಿ ಕಾನ್ವೆಂಟ್ ಇರೋದು. ಎಲೆಮರೆ ಕಾಯಿಯ ತರ ಆ ಶಿಕ್ಷಣ ಸಂಸ್ಥೆ ಕಾರ್ಯ ನಿರ್ವಹಿಸುತ್ತಾ ಇದೆ. ಧರ್ಮರಾಜ್ ಕಡಗ ಸರ್ ಆ ಶಿಕ್ಷಣ ಸಂಸ್ಥೆಯನ್ನು ಶುರು ಮಾಡಿದವರು ಹಾಗು ನಡೆಸುತ್ತಾ ಇರುವವರು
ನಾನೂ ಈ ಸಾರಿ ರಾಜೂನಾ ಅಲ್ಲಿಗೇ ಸೇರಿಸ್ತಾ ಇದ್ದೀನಿ.

ಕಿಟ್ಟಿಯ ಅಮ್ಮ: ನನಗೂ ನೀವೇಳಿದ  ಮೇಲೆ ಜ್ಞಾನೋದಯ ಆಯ್ತು. ನಾನೂ ಕಿಟ್ಟೀನಾ ಅಲ್ಲಿಗೇ ಸೇರಿಸ್ತೀನಿ.
[ಇಬ್ಬರೂ ಒಟ್ಟಿಗೆ]
ನಾವಂತೂ ಮೈತ್ರಿ ಕಾನ್ವೆಂಟ್ ಜೊತೆ ಕೈ ಜೋಡಿಸಿದ್ದೇವೆ. ನೀವೂ ನಮ್ಮೊಟ್ಟಿಗೆ ಕೈ ಜೋಡಿಸಿ. ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಸಾಕ್ಷಿಯಾಗಿ.

~ವಿಭಾ ವಿಶ್ವನಾಥ್ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ