ಸೋಮವಾರ, ಮಾರ್ಚ್ 25, 2019

ಅಮ್ಮ ಹಚ್ಚಿದೊಂದು ಹಣತೆ


ಅಮ್ಮ ಹಚ್ಚಿದೊಂದು ಹಣತೆ
ಇನ್ನೂ ಬೆಳಗಿದೆ..
ಮನಕೆ ಮಬ್ಬು ಕವಿಯದಂತೆ
ಸದಾ ಕಾದಿದೆ...

ಭಾವಗೀತೆಯನ್ನು ಕೇಳುತ್ತಾ ಇದ್ದರೆ, ಸಮಯ ಕಳೆದು ಹೋಗುತ್ತಿರುವುದೇ ಗೊತ್ತಾಗುವುದಿಲ್ಲ. ಅದರಲ್ಲೂ ನಿನ್ನ ಧ್ವನಿಯಲ್ಲೇ ಮೂಡಿ ಬಂದಿರುವ ಈಹಾಡು ಕೇಳಿದಷ್ಟೂ ಕಿವಿಗೆ ಇಂಪು. ಆಳಕ್ಕಿಳಿದು ಅರ್ಥ ಮಾಡಿಕೊಂಡಷ್ಟೂ ಮನಕ್ಕೆ ತಂಪು ನೀಡುತ್ತಾ ಹೋಗುತ್ತದೆ. ಭಾವಗೀತೆ ಅದರಲ್ಲೂ,ಅಮ್ಮನ ಕುರಿತ ಭಾವಗೀತೆಯೇ ಮನಸ್ಸಿಗೆ ಹಿತ ನೀಡುತ್ತದೆ. ಅದರಲ್ಲೂ ಅಮ್ಮ ಹಾಡಿದ ಭಾವಗೀತೆ ಅಂದರೆ ಕೇಳಬೇಕಾ? ಆದರೂ ನೀನಿದ್ದಾಗ ನಿನ್ನ ಪಕ್ಕ ಕುಳಿತು ನೀನು ಹಾಡೋ ಈ ಭಾವಗೀತೆ ಕೇಳುವಾಗ ಅದರ ಆಳವೇ ಬೇರೆ, ಅರ್ಥವೇ ಬೇರೆ.

ನೀನು ಹಾಡೋ ಹಾಡು ಮನಸ್ಸಿಗೆ ಅಷ್ಟು ಹತ್ತಿರವಾಗೋದಾದ್ರೂ ಯಾಕೆ ಅಂತಾ ಯೋಚನೆ ಮಾಡುತ್ತೇನೆ... ಅಮ್ಮ ಅನ್ನುವುದೇ ಭಾವಗಳು ತುಂಬಿದ ಪದ. ಅದರಲ್ಲೂ ಅಮ್ಮ ಮತ್ತಷ್ಟು ಭಾವನೆ ಬೆರೆಸಿ ಹಾಡೋ ಹಾಡು ಇನ್ನೂ ಚೆಂದ. ಅದಕ್ಕೇ ಅನ್ಸುತ್ತೆ, ಅಮ್ಮನ ಹಾಗೆ ಅವಳ ಹಾಡು ಕೂಡಾ ಆಪ್ತ ಎನ್ನಿಸುವುದು.

ಎಲ್ಲರೂ ಹೇಳ್ತಾ ಇರ್ತಾರೆ ಅಮ್ಮನ ತರಹಾನೇ ಹಾಡ್ತೀಯಾ ಅಂತಾ, ಕೆಲವೊಮ್ಮೆ  ಕೆಲವರಂತೂ ಇನ್ನೂ ಮುಂದೆ ಹೋಗಿ ನಿಮ್ಮ ಅಮ್ಮನಿಗಿಂತಲೂ ಚೆನ್ನಾಗಿ ಹಾಡ್ತೀರ ಅಂತಾ ಹೇಳ್ತಾರೆ. ಆಗೆಲ್ಲಾ ಏನೋ ಉತ್ಸಾಹ, ಸ್ವರ್ಗಕ್ಕೆ ಮೂರೇ ಗೇಣು ಅಂತಾ ಅನ್ನಿಸೋ ಕ್ಷಣಗಳು. ನನಗೆ ಅಮ್ಮನ ಮಗಳು ಅಂತಾ ಅನ್ನಿಸಿಕೊಳ್ಳುವುದಕ್ಕಿಂತಾ, ನೀನು ಇಂತಹವಳ ಅಮ್ಮ ಅಂತಾ ಅನ್ನಿಸಿಕೊಳ್ಳಬೇಕಿತ್ತು ಅಂತಾ ಬಹಳಾ ಆಸೆ ಇತ್ತು. ಆದರೆ,ನೀನು ಅಲ್ಲಿಯವರೆಗೂ ಇರದೆ ಹೊರಟೇ ಬಿಟ್ಟೆಯಲ್ಲಾ..ಯಾಕೆ?ನೀನು ಮೊದಲಿನಿಂದಲೂ ಸ್ವಾಭಿಮಾನಿ ಅಂತಾ ಗೊತ್ತಿತ್ತು.ಆದರೆ ನಿನ್ನ ಸ್ವಾಭಿಮಾನ ಈ ಮಟ್ಟಕ್ಕಿದೆ ಅಂತಾ ಗೊತ್ತಿರಲಿಲ್ಲ.ಆದ್ರೂ ನಿನ್ನ ಹಾಡುಗಳನ್ನು ಕೇಳ್ತಾ ಇದ್ದರೆ, ನೀನು ಅವುಗಳ ಮೂಲಕ ಏನೋ ಹೇಳುವ ಪ್ರಯತ್ನದಲ್ಲಿದ್ದೀಯ ಅನ್ಸುತ್ತೆ. ನಿನ್ನಷ್ಟು ಇಂಪಾಗಿ ಹಾಡುವುದಕ್ಕೆ ಸಾಧ್ಯವೇ ಇಲ್ಲ ಅಂತಾ ಅನ್ನಿಸಿಬಿಡುತ್ತೆ. ಇದು ಸತ್ಯ ಕೂಡಾ..

ಯಾವಾಗ್ಲೂ ನೀನು ಹೇಳ್ತಾ ಇದ್ದೆಯಲ್ಲ,ಬೇರೆಯವರಿಗೋಸ್ಕರ ಹಾಡುವುದಕ್ಕಿಂತ ನಮಗೋಸ್ಕರ, ನಮ್ಮ ಆತ್ಮತೃಪ್ತಿಗೋಸ್ಕರ, ಪ್ರತಿಫಲವೇ ಬಯಸದೇ ನಿಸ್ವಾರ್ಥತೆಯಿಂದ ಹಾಡಿದಾಗ ನಾದದ ಇಂಪು ಜಾಸ್ತಿ ಅಂತಾ. ಅದು ನಿಜ, ತುಂಬಾನೇ ನಿಜ.ಆದರೆ, ಒಂದು ಪತ್ರ ಬಂದಿದ್ದೇ ನೆಪವಾಗಿ ಹೃದಯಾಘಾತದಿಂದ ಕುಸಿದವಳು  ಮತ್ತೆ ಮೇಲೆ ಏಳಲೇ ಇಲ್ಲ, ಯಾಕಮ್ಮಾ? ನಿನಗೆ ನನ್ನ ಮೇಲೆ ನಂಬಿಕೆ ಇರಲಿಲ್ಲವಾ? ಅಥವಾ ನಾನು ನಿನ್ನನ್ನು ಬಿಟ್ಟು ಹೊರಡುವೆನೆಂದುಕೊಂಡೆಯಾ?

ನಿನ್ನ ಎಲ್ಲಾ ಕಾರ್ಯಗಳೂ ಮುಗಿದ ನಂತರ ಆ ಪತ್ರವನ್ನು ತೆರೆದೆ. ಅದರಲಿದ್ದದ್ದು ಹೀಗೇ, "ಗಂಡಿನ ಅಧೀನದಲ್ಲಿ ಬದುಕದ ಹೆಣ್ಣು ಅದೆಷ್ಟೇ ಪ್ರತಿಭಾವಂತೆಯಾದರೂ, ಅವಳ ಪೂರ್ಣತೆ ಗಂಡಿನಿಂದಲೇ.. ಅಂದು ನೀನು ನನ್ನನ್ನು ಧಿಕ್ಕರಿಸಿ ಬಂದು ನೆಲೆ ನಿಂತದ್ದು, ಈ ಹುಡುಗಿಗೇ ಆದರೆ, ಕೇಳು... ಆಕೆಯ ಹಾಡುಗಾರಿಕೆ ಅದೆಷ್ಟೇ ಮಧುರವಾಗಿದ್ದರೂ, ಆಕೆ ನಿನ್ನಂತೆ ಹಾಡಲಾರಳು. ಆಕೆಯ ಬದುಕು ಕೂಡಾ ನಿನ್ನಂತೆಯೇ ಅತಂತ್ರವಾಗಿಬಿಡುತ್ತದೆ. ಯಾಕೆಂದರೆ, ಅಪ್ಪನ ಅಥವಾ ಗಂಡನ ಬಲವಿಲ್ಲದೆ ಬದುಕಲು ಹೊರಟವಳ ನಿನ್ನ ನೆರಳಿನ ಪ್ರಭಾವವಲ್ಲದೇ ಮತ್ತೇನು ದೊರೆತಿರಲು ಸಾಧ್ಯ?"

ಕಪ್ಪು ಕಡಲಿನಲ್ಲಿ ದೋಣಿ
ದಿಕ್ಕು ತಪ್ಪಲು..
ದೂರದಲ್ಲಿ ತೀರವಿದೆ
ಎಂದು ತೋರಲು..

ಆ ಸಾಮಾನುಗಳ ಮಧ್ಯದಲ್ಲಿ ಒಂದು ಡೈರಿ ಸಿಕ್ಕಿತು.ಆ ಡೈರಿಯನ್ನು ಓದುತ್ತಾಹೋದಂತೆ ನಿನ್ನ ವ್ಯಕ್ತಿತ್ವದ ಪರಿಚಯವಾಗುತ್ತಾ ಹೋಯಿತು.

ಸಂಗೀತ, ಸಂಪ್ರದಾಯಗಳನ್ನೇ ಉಸಿರಾಗಿಸಿಕೊಂಡಿದ್ದ ಕುಟುಂಬದಲ್ಲಿ ಬೆಳೆದು ಸಂಗೀತಕಾರ್ತಿಯೇ ಆಗಿದ್ದ ನೀನು ಸೇರಿದ್ದೂ ಅಂತಹಾ ಕುಟುಂಬವನ್ನೇ ಆದರೂ, ನಿನ್ನ ಖ್ಯಾತಿ ನಿನ್ನ ಗಂಡನಿಗೆ ನುಂಗಲಾರದ ತುತ್ತಾಯಿತು.ದಿನೇ-ದಿನೇ ಗಂಡಸಿನ ಅಹಂಕಾರ ಮೊಳೆಯುತ್ತಾ ಹೋಯಿತು, ಈರ್ಷೆ ಚಿಗುರಲಾರಂಭಿಸಿತು.ಅದೇ ಸಮಯದಲ್ಲಿ ನಿನ್ನ ಬಸಿರು ನಿಂತಿತು, ಮಗು ಹೆಣ್ಣು ಎಂಬ ಕಾರಣಕ್ಕೆ ಅದನ್ನು ತೆಗೆಸಲು ನೋಡಿದರು. ಗಟ್ಟಿ ನಿರ್ಧಾರ ಮಾಡಿ ಮಗುವಿನ ಕಾರಣ ಹೇಳಿ, ಈ ಮಗುವನ್ನು ಉಳಿಸಿಕೊಟ್ಟರೆ ನಾನು ಹಾಡುವುದಿಲ್ಲ ಎಂದು ಹೇಳಿ ಹಾಡುವುದರಿಂದ ಹಿಂದೆ ಸರಿದೆ.ಈರ್ಷೆ ಕಡಿಮೆಯಾದರೂ ನಿನ್ನನ್ನು ಪ್ರೀತಿಯಿಂದೇನೂ ಕಾಣಲಿಲ್ಲ ಆತ. ಮಗುವಿನ ಭವಿಷ್ಯಕ್ಕಾಗಿ ದಿಟ್ಟ ನಿರ್ಧಾರ ತೆಗೆದುಕೊಂಡು ಆ ಸಾರ್ವಭೌಮತ್ವದ ಪಾಶದಿಂದ ಹೊರನಡೆದೆ.

ನಿನ್ನ ಜೀವನದ ಎರಡನೇ ಮಜಲಿನ ಆರಂಭ ಇಲ್ಲಿಂದಲೇ ಅಲ್ಲವೇ? ಯಾರೊಡನೆಯೋ ಓಡಿ ಹೋದಳೆಂಬ ಪಟ್ಟ ಕಟ್ಟಿ, ತವರಿನವರನ್ನೂ ದೂರ ಮಾಡಿದ. ಅದಕ್ಕೆಲ್ಲಾ ಎದೆಗುಂದದೆ, ಮಗಳನ್ನು ಗಾಯಕಿಯನ್ನಾಗಿಸಲು ಹೊರಟಾಗ ಎದುರಾದ ಸವಾಲು ನಿನ್ನ ಅಸ್ತಿತ್ವವನ್ನೇ ಅಲುಗಾಡಿಸಿತು ಅಲ್ಲವೇ..?

5 ವರ್ಷದ ಪುಟ್ಟ ಕಂದನಿಗೆ ಜ್ವರರ ಬಂದುದೇ ನೆಪವಾಗಿ ಆಕೆ ನಿನ್ನನ್ನು ಅಗಲಿದಳು. ನಂತರ ನೋವು ಮರೆಯಲು ಅನಾಥಾಶ್ರಮಕ್ಕೆ ಬಂದ ನೀನು ನಿನ್ನ ಸಂಗೀತ ಪಾಠವನ್ನು ಆರಂಭಿಸಿದೆ.ನಂತರ ನಮ್ಮಿಬ್ಬರ ನಡುವೆ ಬೆಳೆದ ಸಲುಗೆಯಿಂದ ನನ್ನನ್ನು ದತ್ತು ತೆಗೆದುಕೊಂಡು ಸಂಗೀತಯಾನದ ಪಯಣ ಆರಂಭಿಸಿದೆ.

ಅಂದು ನಾನು ಅದನ್ನು ಓದಿದ ನಂತರ ನನ್ನ ಜನ್ಮ ರಹಸ್ಯಕ್ಕಿಂತ ಹೆಚ್ಚು ಕಾಡಿದ್ದು ನಿನ್ನ ಬದುಕಿನ ಬವಣೆ. ಆ ಪತ್ರ ಬರೆದವರಿಗೆ ಸರಿಯಾದ ಉತ್ತರ ನೀಡಬೇಕೆಂದು ಅಚಲತೆಯಿಂದ ಸಂಗೀತ ಅಭ್ಯಾಸ ನಡೆಸಿ ನಿನ್ನ ಕನಸನ್ನು ನನಸಾಗಿಸಿದ್ದೇನೆ. ಅಲ್ಲದೇ ಇಂದು ಅದೇ ವ್ಯಕ್ತಿಯ ಕೈಯಿಂದ ನನಗೆ ಸನ್ಮಾನ ಮತ್ತು ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ ಸ್ವೀಕಾರ. ಗಂಡಿನ ನೆರಳಿಲ್ಲದ್ಯೂ ಹೆಣ್ಣು ಬದುಕಬಲ್ಲಳು. ಅತಂತ್ರಳಾಗಿ ಅಲ್ಲ ಸ್ವತಂತ್ರಳಾಗಿ ಎಂದು ಹೇಳಿ ನಿನ್ನ ಬದುಕಿನ ಪುಟವನ್ನು ಇಂದು ಎಲ್ಲರೆದುರು ಅನಾವರಣಗೊಳಿಸುತ್ತೇನೆ. ಒಂದು ಪುಟದ ಹೊರತುಪಡಿಸಿ.. ಏಕೆಂದರೆ ನೀನೇ ನನ್ನ ಅಮ್ಮ. ಜನ್ಮ ನೀಡಿಯೇ ಅಮ್ಮನಾಗಬೇಕಿಲ್ಲ, ಜೀವನ ಕೊಟ್ಟವಳೂ ಅಮ್ಮನೇ. ನಾನೆಂದಿದ್ದರೂ ನಿನ್ನ ಮಗಳೇ..

ಕೃತಕದೀಪ ಕತ್ತಲಲ್ಲಿ
ಕಳೆದು ಹೋಗದಂತೆ..
ಸೂರ್ಯ,ಚಂದ್ರ ತಾರೆಯಾಗಿ
ಹೊಳೆದು ಬಾಳುವಂತೆ..

ಪ್ರತಿಫಲ ಬಯಸದೇ ಇನ್ನು ಮುಂದೆ ನಾನು ಅನಾಥಾಶ್ರಮದ ಮಕ್ಕಳಿಗೆ ಪಾಠ ಹೇಳಿ ಬದುಕುತ್ತೇನೆ ಅಮ್ಮ. ಎಲ್ಲರಿಗೂ ನಿನ್ನಂಥಾ ಅಮ್ಮ ಬೇಕು. ಯಾಕೆಂದರೆ ಅಮ್ಮ ಹಚ್ಚಿದ ಹಣತೆಯೇ ಮಕ್ಕಳ ಬದುಕಿನ ದಾರಿದೀಪ..
ಎಂದು ಅಮ್ಮನ ಭಾವಚಿತ್ರದ ಮುಂದೆ ಮಾತನಾಡಿ, ಆಶೀರ್ವಾದ ಪಡೆದು ಹೊರಟಳು ಗಾಯಕಿ. 

ಅಂತರಂಗದಲ್ಲಿ ನೂರು
ಕಗ್ಗತ್ತಲ ಕೋಣೆ
ನಾದ ಬೆಳಕ ಹೊಮ್ಮಲು
ಮಿಡಿದ ಹಾಗೆ ವೀಣೆ

ಅಮ್ಮ ಹಚ್ಚಿದೊಂದು ಹಣತೆ
ಇನ್ನೂ ಬೆಳಗಿದೆ..

-ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ