ಶುಕ್ರವಾರ, ಮಾರ್ಚ್ 8, 2019

'ಅವಳ' ಕಥೆಗಳು

1. ಬಿದ್ದು ಎದ್ದವಳು
-------------------------
ಅವಳು ಎಡವಿ ಬಿದ್ದಿದ್ದಳು ರಸ್ತೆಯಲ್ಲಿ ಮಾತ್ರವಲ್ಲ, ಬದುಕಿನಲ್ಲಿಯೂ. ಅಷ್ಟೇ ವೇಗವಾಗಿ ಮೇಲೂ ಎದ್ದಿದ್ದಳು ಅಷ್ಟೇ ಸಶಕ್ತಳಾಗಿ.ಎಷ್ಟೆಂದರೆ ಮತ್ತೊಬ್ಬರನ್ನು ಕೈ ಹಿಡಿದು ಎತ್ತುವಷ್ಟು. ರಸ್ತೆಯಲ್ಲಿ ಬಿದ್ದಿದ್ದವರನ್ನು ಮಾತ್ರವಲ್ಲ, ಬದುಕಿನಲ್ಲಿ ಬಿದ್ದಿದ್ದವರನ್ನೂ ಸಹಾ.

2. ಬಾಡಿದ ಬದುಕು
--------------------------
ಹೂ ಬಾಡುತ್ತದೆ ಎಂದು ನೀರು ಚಿಮುಕಿಸುತ್ತಿದ್ದ ಬಾಲೆಯ ಬದುಕು ಶಿಕ್ಷಣವಿಲ್ಲದೆ ಮುದುಡಿ ಹೋಗುತ್ತಿತ್ತು.

3.ಕಳಂಕಿನಿ
---------------
ಬದುಕಿನ ಅನಿವಾರ್ಯತೆಗಾಗಿ ನಿತ್ಯವೂ ಹಗಲು ಇರುಳು ಎನ್ನದೆ ಪುರುಷರ ಸಂಗದಲ್ಲಿ ಸತ್ತು ಹುಟ್ಟುತ್ತಿದ್ದಳು. ಮನದ ಅಪವಿತ್ರತೆಯನ್ನು ತೊರೆದು, ಹೊಸ ಬದುಕನ್ನು ಕಟ್ಟಿಕೊಂಡ ನಂತರವೂ ಆಕೆ ಜನರ ಮನಃಪಟಲದಲ್ಲಿ ಕಳಂಕಿನಿಯಾಗಿಯೇ ಉಳಿದಳು.

4. ಮುಖವಾಡ
---------------------
ತನ್ನ ನೋವನ್ನೆಲ್ಲಾ ಮರೆತು ಮುಖದ ಮೇಲೆ ನಗು ತಂದುಕೊಂಡು ಸವಿ ಮಾತನಾಡುತ್ತಿದ್ದವಳಿಗೆ ಸಿಕ್ಕ ಬಿರುದು "ಮುಖವಾಡ ತೊಟ್ಟವಳು".

5. ಅನ್ನಪೂರ್ಣೇಶ್ವರಿ
---------------------------
'ಅನ್ನಪೂರ್ಣೇಶ್ವರಿ'ಯಾಗಿ ಎಲ್ಲರಿಗೂ ನಿತ್ಯವೂ ಅನ್ನದಾನ ಮಾಡುತ್ತಿದ್ದವಳಿಗೆ ಮಾತ್ರ ಗೊತ್ತಿತ್ತು ತನ್ನ ಬಾಲ್ಯದಲ್ಲಿ ಆನ್ನವಿಲ್ಲದೆ ಪರದಾಡುತ್ತಾ ಬರೀ ಗಂಜಿಯಲ್ಲೇ ಅರೆಹೊಟ್ಟೆಯಲ್ಲೇ ಜೀವನ ಸಾಗಿಸಿದ್ದರ ಕಷ್ಟ.

6. ಪ್ರೀತಿಯನ್ನಪ್ಪಿ
-----------------------
ಹದಿಹರೆಯದ ಕಾಮನೆಗಳಿಗೆ ಮನಸೋತು ಪ್ರೀತಿಯನ್ನಪ್ಪಿ ಹೊರಟವಳಿಗೆ ತಂದೆ-ತಾಯಿಯರ ಪ್ರೀತಿಯಪ್ಪುಗೆಯ ವಿದಾಯ ಸಲ್ಲಲೇ ಇಲ್ಲ.

7. ಭಿಕ್ಷುಕಿ
-------------
ಹೊಸದಾದ ಹವಾನಿಯಂತ್ರಿತ ಕಾರಿನಲ್ಲಿ ಕುಳಿತಿದ್ದವಳಿಗೆ ಮಗುವಿಗೆಂದು ಭಿಕ್ಷೆ ಬೇಡುತ್ತಿದ್ದ ಭಿಕ್ಷುಕಿ ಕಾಣಿಸಿದ್ದಳು. ಆ ಕ್ಷಣದಲ್ಲೇ ಅವಳಿಗೊಂದು ಪ್ರಶ್ನೆ ಕಾಡುತ್ತಿತ್ತು. ಪ್ರೀತಿಯ ಮಗುವಿಗಾಗಿ ಹಣವಿಲ್ಲದೆ ಭಿಕ್ಷೆ ಬೇಡುತ್ತಿರುವ ಅವಳು ಭಿಕ್ಷುಕಿಯೋ ಇಲ್ಲ ಹಣವಿದ್ದರೂ ಹಿಡಿ ಪ್ರೀತಿಗೆ, ಮಗುವಿಗೆ ಗಂಡನನ್ನು ಬೇಡುವ ತಾನು ಭಿಕ್ಷುಕಿಯೋ?

8. ಸ್ವಾತಂತ್ರ್ಯ
-----------------
ಮಹಿಳಾ ಸ್ವಾತಂತ್ರ್ಯದ ಕುರಿತು ಕವನ ವಾಚನ ಮಾಡುತ್ತಿದ್ದವಳಿಗೆ ಹಠಾತ್ತನೆ ಗಂಡನ ಮಾತು ನೆನಪಾಗಿತ್ತು. ಎಲ್ಲಾ ಕೆಲಸ ಮುಗಿಸಿ ಹೊರಡು ಆದರೆ ಸಂಜೆ 6 ಘಂಟೆಯ ಮೊದಲು ಮನೆಯಲ್ಲಿರಬೇಕು.

9.ಬಿರುದು
--------------
ಒಂದೂ ಮಕ್ಕಳಿಲ್ಲವೆಂಬ ಕಾರಣಕ್ಕೆ ಬಂಜೆಯೆಂಬ ಬಿರುದು ಇದ್ದವಳಿಗೆ ಅನಾಥಾಶ್ರಮದ ನೂರಾರು ಮಕ್ಕಳು "ಅಮ್ಮ" ಎಂಬ ಬಿರುದು ನೀಡಿದ್ದಾರೆ.

10. ಅರಿವು
-----------------
ರೂಪವಿದೆ ಎಂದು ಮೆರೆಯುತ್ತಾ, ಬೇರೆಯವರನ್ನು ಜರಿಯುತ್ತಿದ್ದವಳಿಗೆ ರೂಪ ನಶ್ವರ ಎಂಬುದು ಅರಿವಾಗಲು ಹೆಚ್ಚು ಸಮಯವೇನೂ ಬೇಕಿರಲಿಲ್ಲ, ಕಾಲವೇ ಅವಳಿಗೆ ಅರಿವು ಮೂಡಿಸಿತ್ತು.

11. ವಾಸ್ತವ
------------------
ಬರಹದಲ್ಲಿ ಪ್ರೀತಿಯ ಪರಿಯನ್ನು, ಪ್ರೇಮಿಗಳನ್ನು, ಸಂಬಂಧಗಳನ್ನು ಚೆನ್ನಾಗಿ ಕಟ್ಟಿಕೊಡುತ್ತಿದ್ದವಳ ಬದುಕಲ್ಲಿ ವಾಸ್ತವದಲ್ಲಿ ಪ್ರೀತಿಸಲು ಯಾರೂ ಇರಲಿಲ್ಲ. ಆಕೆ ಅನಾಥೆ ಎಂಬ ಸತ್ಯ ಓದುಗರಿಗೆ ತಿಳಿಯಲೇ ಇಲ್ಲ.

12. ಅನಕ್ಷರಸ್ಥೆ
--------------------
ಡಿಗ್ರಿಯಲ್ಲಿ ಓದಿನಲ್ಲಿ ಚಿನ್ನದ ಪದಕ ಗಳಿಸಿದ್ದ ಆಕೆ ಆಗ ತಾನೇ ಶುರು ಮಾಡಿದ್ದ ನೂತನ ಸಂಸಾರದಲ್ಲಿ ಬಂಧಗಳ ಸೆಳಕೂ ಗೊತ್ತಿಲ್ಲದ ಅನಕ್ಷರಸ್ಥೆ.

13. ನಪಾಸು
-----------------
ಎಲ್ಲಾ ಪರೀಕ್ಷೆಯಲ್ಲೂ ಉತ್ತಮ ಶ್ರೇಣಿಯಲ್ಲಿಯೇ ಉತ್ತೀರ್ಣಳಾಗುತ್ತಿದ್ದ ಅವಳು ವಧುಪರೀಕ್ಷೆಯಲ್ಲಿ ಪ್ರತಿಬಾರಿಯೂ ನಪಾಸು. ಕಾರಣ ಇಷ್ಟೇ, ತಳುಕು ಬಳುಕಿಗೆ ಒಗ್ಗದ ಆಕೆಯ ತತ್ವ, ಪ್ರಾಮಾಣಿಕತೆ ಮತ್ತು ಅದರ ದೆಸೆಯಿಂದ ಬಂದೊದಗದ ಆಕೆಯ ಆಸ್ತಿ.

14. ಕೃಷ್ಣ ಸುಂದರಿ
------------------------
ಸೃಷ್ಟಿಯಲ್ಲಿ ಕಪ್ಪು ಶ್ರೇಷ್ಠ ಎಂದೆಲ್ಲಾ ಭಾಷಣ ಮಾಡುತ್ತಿದ್ದ, ಕಪ್ಪು ಬಣ್ಣ ಇಷ್ಟವೆಂದು ಬೊಗಳೆ ಬಿಡುತ್ತಿದ್ದ ಮಹಾಶಯ ಮಗಳನ್ನು ದ್ವೇಷಿಸಲು ಕಾರಣ ಇಷ್ಟೇ.. ಮಗಳು ಕೃಷ್ಣ ಸುಂದರಿ.

15. ಪಾಠ
--------------
ಪ್ರೀತಿಯ ಮಾಯೆಯಲ್ಲಿ ಬೀಳಬೇಡ ಎಂದು ಮಗಳಿಗೆ ಕಿವಿಮಾತು ಹೇಳುತ್ತಿದ್ದ ಅಮ್ಮನಿಗೆ ಆಕೆಯ ವಿಫಲ ಪ್ರೇಮ ಚೆನ್ನಾಗಿಯೇ ಪಾಠ ಕಲಿಸಿತ್ತು.

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ