ಶುಕ್ರವಾರ, ಮೇ 17, 2019

ದೇವರಿಗಿಂತ ದೊಡ್ಡವರು

ಇವತ್ತು ಯಾರೋ ಕೇಳಿದ ಮಾತು ನನ್ನನ್ನು ಈ ಯೋಚನೆಗೆ ಹಚ್ಚಿತ್ತು." ಎಲ್ಲರೂ ಆಹ್ವಾನ ಪತ್ರಿಕೆಗಳಲ್ಲಿ ದೇವರ ಹೆಸರನ್ನು ಮೊದಲು ಹಾಕಿಸಬೇಕು ಆದರೆ ಕೆಲವರು ಮಕ್ಕಳ ಹೆಸರನ್ನು ಮೊದಲು ಹಾಕಿಸಿ ಆನಂತರ ದೇವರ ಹೆಸರನ್ನು ಹಾಕಿಸುತ್ತಾರೆ.ಹಾಗಾದರೆ ಮಕ್ಕಳು ದೇವರಿಗಿಂತಾ ದೊಡ್ಡವರಾ?" ಪ್ರಶ್ನೆ ಬಂದದ್ದು ಯಾವುದೋ ವಿಷಯದಿಂದ ಆದರೂ ಉದಾಹರಣೆ ಕೊಟ್ಟದ್ದು ಇದನ್ನು, ಪ್ರಶ್ನೆ ಕೇಳಿದವರ ಸ್ಥಾನಮಾನಗಳೇ ಬೇರೆ.. ಅವರ ಎತ್ತರಕ್ಕೆ ಏರಿ ಉತ್ತರ ನೀಡಲಾಗುವುದಿಲ್ಲ, ಅವರಷ್ಠು ಕೀಳು ಮಟ್ಟಕ್ಕಿಳಿದು ವಾದ ಮಾಡಲೂ ಆಗುವುದಿಲ್ಲ. ಆದರೆ, ಆ ಪ್ರಶ್ನೆಗೆ ನನ್ನ ಉತ್ತರ ಬೇರೆಯೇ ಇದೆ. ಆ ಉತ್ತರ ತಿಳಿಯಲು ಮುಂದೆ ಓದಿ.

ದೈವತ್ವಕ್ಕೇರಿದ ದೇವರು ಕೂಡಾ ಬೆಳೆದಿರುವುದು ಬಾಲ್ಯದಿಂದಲೇ, ಅಲ್ಲವೇ? ಬಾಲ್ಯದ ಮುಗ್ದತನ, ಬೆಳೆದು ನಿಂತ ದೇವರಿಗಿಲ್ಲ. ದೇವಾನುದೇವತೆಗಳಲ್ಲಿ ಬರುವ ಅಸೂಯೆ  ಮುದ್ದು ಮಕ್ಕಳಲ್ಲಿ ಇರುವುದೇ ಇಲ್ಲ. ಅಲ್ಲದೇ ಪುರಾಣದ ಪ್ರಕಾರ 14 ವರ್ಷದವರೆಗೂ ಮಕ್ಕಳು ಮಾಡುವ ತಪ್ಪಿಗೆ ಲೆಕ್ಕ ಇಡುವುದಿಲ್ಲವಂತೆ, ಪಾಪ-ಪುಣ್ಯದ ಲೆಕ್ಕಗಳೇನಿದ್ದರೂ ಮಕ್ಕಳು ಪ್ರಬುದ್ದರೆನಿಸಿಕೊಂಡ ಮೇಲೆಯೇ. ಆದರೆ ದೇವರ ವಿಚಾರಗಳು ಹಾಗಲ್ಲ, ಪ್ರತಿಯೊಂದು ನಡೆಗೂ,ಪ್ರತಿಯೊಂದು ಕ್ರಿಯೆಗೂ ಪಾಪ-ಪುಣ್ಯದ ಲೆಕ್ಕದ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಇದೆಲ್ಲವನ್ನೂ ಬಿಟ್ಟು ಇಷ್ಟದ ವಿಚಾರಕ್ಕೆ ಬಂದರೆ ನಮ್ಮ ಪ್ರೀತಿಯಲ್ಲಿ, ಇಷ್ಟದಲ್ಲಿ ಮಕ್ಕಳದ್ದೇ ಮೊದಲ ಪಾಲು. ದೇವರುಗಳು ಕೋಟ್ಯಾನುಕೋಟಿ ಇರಬಹುದು ಆದರೆ ಮಕ್ಕಳು ಒಬ್ಬರು ಅಥವಾ ಇಬ್ಬರೇ ಅಲ್ಲವೇ? ಅಷ್ಟಕ್ಕೂ, ದೇವರ ಮೊರೆ ಹೋಗುವುದು ಸಂಕಟ ಬಂದಾಗಲೇ ಇಲ್ಲವೇ ಏನಾದರೂ ಆಗಬಹುದು ಎಂಬ ಭಯಕ್ಕೇ ಅಲ್ಲವೇ? ಪ್ರೀತಿಯಿಂದ ದೇವರ ಮೊರೆ ಹೋಗುವವರು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಪ್ರೀತಿಯಿಂದ ದೇವರನ್ನು ಆರಾಧಿಸಿದರೆ ಸರಿ, ಆದರೆ ಭಯದಿಂದ ಎಂದಾದರೆ ಅಲ್ಲಿ ಪ್ರೀತಿ ಹುಟ್ಟುವುದು ಅಸಾಧ್ಯ. ಭಯದಿಂದ ದೊರೆತ ಗೌರವ ಎಷ್ಟು ಕಾಲ ಉಳಿಯಲು ಸಾಧ್ಯ? ಪ್ರೀತಿ, ಭಯ ಎಂಬ ಎರಡು ಆಯ್ಕೆ ಬಂದರೆ ಮೊದಲನೆಯದು ಪ್ರೀತಿಯೇ ಅಲ್ಲವೇ? ಪ್ರೀತಿಯೆಲ್ಲವೂ ಎರಕ ಹೊಯ್ದಂತಿರುವುದು ಮಕ್ಕಳಲ್ಲಿಯೇ, ಅಲ್ಲವೇ?

ಇದಲ್ಲದೇ ಇನ್ನೊಂದು ಪ್ರಸಂಗ ಇಲ್ಲಿ ನೆನಪಿಗೆ ಬರುತ್ತದೆ. ಸರ್ವೇಸಾಮಾನ್ಯವಾಗಿ ಈ ಘಟನೆ ಎಲ್ಲರ ಮನೆಯಲ್ಲೂ ನಡೆಯುವಂತಹದ್ದೇ ದೇವರ ಪೂಜೆಗೆ, ನೈವೇದ್ಯಕ್ಕೆ ಎಂದೂ ಎಂಜಲು ಮಾಡದಂತೆ ಎತ್ತಿಟ್ಟದ್ದನ್ನು ಮಕ್ಕಳು ತಿಂದರೆ ಯಾರೂ ಏನೂ ಅನ್ನುವುದಿಲ್ಲ. "ಮಕ್ಕಳಿಗಿಲ್ಲದ್ದು ದೇವರಿಗ್ಯಾಕೆ?"ಎಂಬ ಪ್ರಶ್ನೆಯಂತೂ ಮೂಡಿಯೇ ಮೂಡುತ್ತದೆ. "ಮಕ್ಕಳು ದೇವರ ರೂಪವೇ ಅಲ್ಲವಾ?" ಎನ್ನುವುದನ್ನು ಕೇಳಿರುತ್ತೇವೆ ಇಲ್ಲಾ ಹೇಳಿರುತ್ತೇವೆ. ಮಕ್ಕಳು ದೇವರಿಗಿಂತಾ ಹೆಚ್ಚೇ ಅಲ್ಲವಾ?

ಆಸ್ತಿಕತೆ-ನಾಸ್ತಿಕತೆಯ ನಡುವೆ ಬಹುದೊಡ್ಡ ವಿರೋಧಾಭಾಸಗಳಿವೆ.ಆದರೆ, ಮಕ್ಕಳು ದೇವರು ಎಂದರೆ ಯಾರೂ ವಿರೋಧಿಸಲಾರರು. ದೇವರ ಹೆಸರು ಮೊದಲು ಹಾಕಿಸಿದ ಮಾತ್ರಕ್ಕೆ ಆ ಶುಭ ಕಾರ್ಯ ಸುಗಮವಾಗಿ ನಡೆಯುತ್ತದೆಯಾ? ಎಲ್ಲವೂ ನಂಬಿಕೆ ಮತ್ತು ಕಾಲದ ಮೇಲೆ ನಿರ್ಣಯವಾಗಬೇಕಷ್ಟೇ..

ದೇವರಿಗಿಂತಾ ದೊಡ್ಡವರು ಯಾರು? ಎಂಬ ಪ್ರಶ್ನೆಗೆ ಉತ್ತರ ನೀಡುವಂತೆ ಇಲ್ಲೊಂದು ದೃಷ್ಟಾಂತದ ಕಥೆ ಇದೆ. ಅದೂ ಅಕ್ಬರ್-ಬೀರಬಲ್ ಕಥೆ.

ಅಕ್ವರ್ ಒಮ್ಮೆ ಬೀರಬಲ್ ನನ್ನು ಕೇಳುತ್ತಾನೆ. "ರಾಜ ದೊಡ್ಡವನೋ? ಅಥವಾ ದೇವರು ದೊಡ್ಡವನೋ?" ಎಂದು. ಬೀರಬಲ್ ಗೆ ಸಂದಿಗ್ಧ ಕಾಡುತ್ತದೆ. "ರಾಜ ದೊಡ್ಡವನು ಎನ್ನದಿದ್ದರೆ ರಾಜನಿಗೆ ಕೋಪ ಬರುತ್ತದೆ. ದೇವರು ದೊಡ್ಡವನು ಎನ್ನದಿದ್ದರೆ ಇಲ್ಲಿರುವವರೆಲ್ಲಾ ವಿರೋಧಿಸುತ್ತಾರೆ." ಎಂದು ಯೋಚಿಸುತ್ತಿರುತ್ತಾನೆ.

ಬೀರಬಲ್ ನ ವಿರೋದಿಗಳಿಗೆಲ್ಲಾ ಖುಷಿಯೋ ಖುಷಿ, ಇವತ್ತು ಬೀರಬಲ್ ಕಥೆ ಮುಗಿಯಿತು ಅಂತಾ. ಆದರೆ ಅವರೆಲ್ಲಾ ಮನಸ್ಸಿನಲ್ಲೇ ಮಂಡಿಗೆ ಮೆಲ್ಲುತ್ತಾ ಇರುವಾಗ ಬೀರಬಲ್ ಹೇಳಿಯೇ ಬಿಟ್ಟ "ರಾಜನೇ ದೊಡ್ಡವನು" ಅಂತಾ. ಆಗ ಅಕ್ಬರ್ ಕೇಳ್ತಾನೆ "ಅದು ಹೇಗೆ? ಎಲ್ಲರಿಗಿಂತಾ ದೇವರು ದೊಡ್ಡವನಲ್ಲವೇ?" ಎಂದು.

ಅಷ್ಟೊತ್ತಿಗೆ ಬೀರಬಲ್ ನ ಜಾಣತನದ ಉತ್ತರ ಸಿದ್ದವಾಗಿರುತ್ತದೆ." ದೇವರು ಮಾಡಲಾಗದ್ದನ್ನು ರಾಜ ಮಾಡಿದರೆ ರಾಜನೇ ದೊಡ್ಡವನಲ್ಲವಾ? ಎಂದು ಮರುಪ್ರಶ್ನೆ ಹಾಕುತ್ತಾನೆ. ಎಲ್ಲರೂ ಒಕ್ಕೊರಲಿನಿಂದ "ಹೌದು" ಎನ್ನುತ್ತಾರೆ. ಆಗ ಬೀರಬಲ್ ಹೇಳುತ್ತಾನೆ "ಯಾರಾದರೂ ತಪ್ಪು ಮಾಡಿದರೆ ಗಡಿಪಾರು ಮಾಡುವ ಅಧಿಕಾರ ದೇವರಿಗಿಲ್ಲ ಆದರೆ ರಾಜನಿಗೆ ಆ ಅಧಿಕಾರ ಇದೆ. ಆದ್ದರಿಂದ "ರಾಜನೇ ದೊಡ್ಡವನು" ಎಂದು ಹೇಳುತ್ತಾನೆ. ಬೀರಬಲ್ ನ ಜಾಣತನ ಮತ್ತೊಮ್ಮೆ ಸಾಬೀತಾಗುತ್ತದೆ. ಸಭೆಯ ತುಂಬೆಲ್ಲಾ ಗಡಚಿಕ್ಕುವ ಚಪ್ಪಾಳೆಗಳು ಪ್ರತಿಧ್ವನಿಸುತ್ತವೆ.

ಆದರೆ, ಅಕ್ಬರ್ ಗೆ ಆವತ್ತಿನಿಂದ ಸ್ವಲ್ಪ ಜಂಭ ಬಂದುಬಿಡುತ್ತದೆ. ನಾನು ದೇವರಿಗಿಂತಾ ದೊಡ್ಡವನಲ್ಲವೇ? ಎಂದು. ಜಾಣ ಬೀರಬಲ್ ಗೆ ಇದರ ಸುಳಿವು ಗೊತ್ತಾಗುತ್ತದೆ. ಹೀಗೇ ಮಾತಾಡ್ತಾ ಮಾತಾಡ್ತಾ ಇರುವಾಗ ಅಕ್ಬರ್ ಮಾತಲ್ಲಿ ಅಹಂಕಾರ ಇಣುಕುವುದು ಗೊತ್ತಾಗುತ್ತದೆ. ಉಪಾಯವಾಗಿ ಇದನ್ನು ಇಳಿಸುವ ಯೋಚನೆ ಮಾಡುತ್ತಿರುವಾಗಲೇ ಅಕ್ಬರ್ ಕೇಳುತ್ತಾನೆ "ದೇವರಿಗಿಂತ ನಾನೇ ಶ್ರೇಷ್ಟ ಎಂದು ನೀನು ಒಪ್ಪುತ್ತೀಯಲ್ಲ, ನನ್ನನ್ನು ಮೀರಿಸುವವರು ಯಾರಾದಾರೂ ಇದ್ದಾರಾ?" ಎಂದು. ಆಗ ಬೀರಬಲ್ ಹೇಳುತ್ತಾನೆ "ಮಕ್ಕಳು ಜಗತ್ತಿನಲ್ಲಿ ಎಲ್ಲರಿಗಿಂತಾ ಸರ್ವಶ್ರೇಷ್ಟ, ಅವರನ್ನು ಮೀರಿಸುವವರು ಯಾರೂ ಇಲ್ಲ" ಎಂಬುದಾಗಿ. ಅಕ್ಬರ್ ಗೆ ಸಿಟ್ಟು ಬರುತ್ತದೆ. ಸರಿ, ಹಾಗಾದರೆ ಅದನ್ನು ನಿರೂಪಿಸಿ ತೋರಿಸು ಎಂದು ಹೇಳುತ್ತಾನೆ. ಸರಿ ಎಂದ ಬೀರಬಲ್ ಆಗ ಅಲ್ಲಿಂದ ಹೊರಡುತ್ತಾನೆ.

 ಮಾರನೇ ದಿನ ಸಭೆಗೆ ಎಷ್ಟೊತ್ತಾದರೂ ಬೀರಬಲ್ ಬರುವುದೇ ಇಲ್ಲ. ದೂತ ಒಬ್ಬನನ್ನು ಅವನ ಮನೆಗೆ ಕಳುಹಿಸುತ್ತಾನೆ ಅಕ್ಬರ್. ಆಗ ಬೀರಬಲ್ ಹೇಳ್ತಾನೆ "ನನ್ನ ಮಗು ಒಂದೇ ಸಮ ಹಠ ಮಾಡ್ತಾ ಇದೆ. ಅದನ್ನು ಸಮಾಧಾನ ಮಾಡಿ ಬರುತ್ತೇನೆ" ಎಂದು. ದೂತ ರಾಜಸಭೆಗೆ ಬಂದು ಹಾಗೇ ಹೇಳ್ತಾನೆ. ಮಧ್ಯಾಹ್ನವಾದರೂ ಬೀರಬಲ್ ಬರದಿದ್ದಾಗ ಅಕ್ಬರ್ ತಾನೇ ಅವನ ಮನೆಗೆ ಹೊರಡುತ್ತಾನೆ. "ಒಂದು ಮಗುವನ್ನು ಸಮಾಧಾನ ಮಾಡಲಾಗಲಿಲ್ಲವೇ ನಿನಗೆ..? ಆ ಮಗುವನ್ನು ನಾನು ಸಮಾಧಾನ ಮಾಡುತ್ತೇನೆ." ಅಂತಂದು ಮಗುವನ್ನು ಕೇಳುತ್ತಾನೆ "ಕಂದಾ, ಏನು ಬೇಕಪ್ಪಾ ನಿನಗೆ?". ಆಗ ಮಗು "ಈ ಕಬ್ಬನ್ನು ನಾಲ್ಕು ತುಂಡು ಮಾಡಿಕೊಡು " ಎನ್ನುತ್ತೆ. ಅಷ್ಟೇನಾ ಎನ್ನುತ್ತಾ ಮೀಸೆಯಂಚಿನಲ್ಲೇ ನಗುತ್ತಾ ಅಕ್ಬರ್ ಆ ಕಬ್ಬನ್ನು ತುಂಡು ಮಾಡಿಕೊಡುತ್ತಾನೆ.

ಒಂದೆರಡು ನಿಮಿಷ ಸುಮ್ಮನಾದ ಮಗು ಮತ್ತೆ ಅದನ್ನೆಲ್ಲಾ ತೆಗೆದು ಎಸೆದು ಜೋರಾಗಿ ರಂಪಾಟ ಮಾಡಲು ಶುರು ಮಾಡುತ್ತೆ. ನೆಲದಲ್ಲಿ ಬಿದ್ದು ಒದ್ದಾಡುತ್ತಾ, ಅಕ್ಬರ್ ನನ್ನು ಹೊಡೆಯುತ್ತಾ "ನಂಗಿದು ಬೇಡ, ಇದು ಚಿಕ್ಕದಾಯ್ತು, ಮತ್ತೆ ಇದನ್ನು ಮೊದಲಿನ ಹಾಗೇ ಮಾಡು. ನನಗೆ ದೊಡ್ಡ ಕಬ್ಬೇ ಬೇಕು" ಎನ್ನುತ್ತದೆ.

ಅಕ್ಬರ್ ನಿಗೆ ಈಗ ಪೀಕಲಾಟಕ್ಕಿಟ್ಟುಕೊಂಡರೆ ಬೀರಬಲ್ ಗೆ ಮೀಸೆಯ ಮರೆಯಲ್ಲೇ ನಗು. ನಂತರ, ಅಕ್ಬರ್ ನ ಈ ಒದ್ದಾಟವನ್ನು ನೋಡಲಾಗದೆ ಬೀರಬಲ್ ಮಗುವನ್ನು ಒಳಗೆ ಕಳುಹಿಸುತ್ತಾನೆ.

ಆನಂತರ ಅಕ್ಬರ್ ಗೆ ಹೇಳುತ್ತಾನೆ. "ರಾಜನನ್ನೇ ತನ್ನ ಬಳಿಗೆ ಕರೆಸಿಕೊಂಡ, ರಾಜನ ಅಸಹಾಯಕತೆಯನ್ನೇ ಎತ್ತಿ ತೋರಿಸಿದ ಮತ್ತು ರಾಜನನ್ನು ಹೊಡೆದರೂ ರಾಜ ಶಿಕ್ಷೆ ನೀಡದ ಮಗು ರಾಜನಿಗಿಂತಲೂ ಮಿಗಿಲಲ್ಲವೇ?". ಆಗ ಅಕ್ಬರ್ ಗೆ ಜ್ಙಾನೋದಯವಾಗುತ್ತದೆ. ಅಕ್ಬರ್ ಹೇಳುತ್ತಾನೆ "ಮಕ್ಕಳೇ ಎಲ್ಲರಿಗಿಂತಲೂ ದೊಡ್ಡವರು ಎಂದು".

ಅಕ್ಬರ್ ಅಂತಹಾ ರಾಜನೇ ಒಪ್ಪಿಕೊಂಡ ಮೇಲೆ ಮತ್ತೆ ನಮ್ಮದು, ನಿಮ್ಮದು ಕೊಸರಾಟ ಏನ್ರೀ? ಒಪ್ಪಿಕೊಂಡು ಬಿಡಿ "ಮಕ್ಕಳು ದೇವರಿಗಿಂತಲೂ ದೊಡ್ಡವರು" ಎಂದು.

~ವಿಭಾ ವಿಶ್ವನಾಥ್ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ