ಅವಳು ಧಾತ್ರಿ. ಧಾತ್ರಿ ಅಂದ ತಕ್ಷಣ ಅವಳ ಹೆಸರು ಕೇಳಿ ಭೂಮಿಗೆಲ್ಲಾ ಹೋಲಿಸೋದಕ್ಕೆ ಹೋಗಬೇಡಿ. ಹಾಗಂದುಕೊಂಡರೂ ಬಹುಶಃ ತಪ್ಪೇನೂ ಆಗಲಾರದು.ಅವಳಿಗೆ ತಾಳ್ಮೆ ಎಷ್ಟಿದೆಯೋ, ಸಿಡಿಮಿಡಿ ಮಾಡಿಕೊಳ್ಳೋ ಗುಣ ಅದಕ್ಕಿಂತ ಕಡಿಮೆ ಇದೆ. ಎರಡನ್ನು ತುಲನೆ ಮಾಡಿದ್ರೆ ತಾಳ್ಮೆಯ ತೂಕವೇ ಹೆಚ್ಚು. ಅಂದುಕೊಂಡದ್ದನ್ನು ತಕ್ಷಣ ಹೇಳುವುದಿಲ್ಲ ಅದರ ಬದಲಿಗೆ ಅದನ್ನು ವಿಮರ್ಶಿಸಿ ಹೇಳುತ್ತಾಳೆ.
ಕೆಲವೊಮ್ಮೆ ಭೂಮಿ ತನಗಿಷ್ಟವಾದರೆ ಮಾತ್ರ ಫಲ ಕೊಡುತ್ತದೆ, ಇಲ್ಲವಾದರೆ ಜಪ್ಪಯ್ಯಾ ಅಂದರೂ, ಅದೆಷ್ಟೇ ಆರೈಕೆ ಮಾಡಿದರೂ ನಳನಳಿಸುವುದೇ ಇಲ್ಲ. ಧಾತ್ರಿಯ ಮೂಡ್ ಕೂಡಾ ಹಾಗೆಯೇ.. ಅವಳಿಗಿಷ್ಟವಾದರೆ ಮಾತ್ರ ಅವಳು ಆ ಕೆಲಸ ಮಾಡುವುದು ಇಲ್ಲ ಅಂದರೆ ಸುಮ್ಮನಿದ್ದು ಬಿಡುತ್ತಾಳೆ. ಬೇರೆಯವರಿಗೆ ಅಡ್ಡಿ ಮಾಡುವುದಿಲ್ಲ, ಬದಲು ಹೇಳುವುದಿಲ್ಲ, ಪ್ರತಿಭಟಿಸುವುದಿಲ್ಲ. ಅವಳಿಗೆ ಇಷ್ಟವಾಗಲಿಲ್ಲ ಅಂದರೆ ಬೇರೆಯವರಿಗೆ ತೊಂದರೆ ನೀಡದೆ ದೂರ ಉಳಿದುಬಿಡುತ್ತಾಳೆ. ವಯಸ್ಸಿಗೆ ಮೀರಿದ ಗಾಂಭೀರ್ಯ ಇದು ಅಂತನ್ನಿಸಿದರೂ ಅವಳಿಗೆ ಅವಳ ಮೂಲ ಗುಣದ ವಿರುದ್ದ, ತನ್ನ ಮನಸ್ಸಾಕ್ಷಿಯ ವಿರುದ್ದ ಹೋಗಲು ಇಷ್ಟವಾಗುವುದಿಲ್ಲ. ಇವಳ ಈ ಗುಣವೇ ಅವಳನ್ನು ಅವಳ ವಯಸ್ಸಿನ ಹುಡುಗಿಯರಿಂದ ಪ್ರತ್ಯೇಕವಾಗಿ ನಿಲ್ಲುವಂತೆ ಮಾಡುತ್ತದೆ. ಈ ಗುಣದಿಂದಲೇ ಅವಳು ಎಲ್ಲರ ಕಣ್ಣಿಗೆ ಸ್ಪೆಸಿಮನ್ ತರಹಾ ಕಾಣಲಿಕ್ಕೆ ಶುರುವಾಗುತ್ತಾಳೆ. ಅವಳ ಬಣ್ಣ, ರೂಪ ಸಾಧಾರಣವೇ.. ನೋಡಲು ತೀರಾ ಅಂದವೇನೂ ಇಲ್ಲ ಆದರೆ ನಿರ್ಲಕ್ಷಿಸುವಷ್ಟು ಕೆಟ್ಟದಾಗೇನೂ ಇಲ್ಲ. ಧಾತ್ರಿ ಬಗ್ಗೆ ಇಷ್ಟೆಲ್ಲಾ ಯಾಕೆ ಹೇಳ್ತಾ ಇದ್ದೀನಿ ಅಂದುಕೊಂಡ್ರಾ? ಅವಳೇ ಈ ನನ್ನ ಕಥೆಯ ಹೀರೋಯಿನ್.
ರೂಪ, ಬಣ್ಣ ಕಳಪೆಯಾಗಿದ್ದರೂ ಅವನ್ನು ಅಂದವನ್ನಾಗಿ ಮಾರ್ಪಡಿಸಿಕೊಳ್ಳುವುದು ಇವತ್ತಿನ ಟ್ರೆಂಡ್. ಆದರೆ ಧಾತ್ರಿಗೆ ಅದರ ಬಗ್ಗೆ ದಿವ್ಯ ನಿರ್ಲಕ್ಷ್ಯ. ಚೆನ್ನಾಗಿ ಕಂಡು ಯಾರಿಗೆ ಏನಾಗಬೇಕಿದೆ? ಅಂದ, ಚೆಂದ ನೋಡಿ ಕಟ್ಟಿಕೊಳ್ಳುವವನು ಸೌಂದರ್ಯ ಮಾಸಿದ ಮೇಲೆ ತನ್ನನ್ನು ನಿರ್ಲಕ್ಷಿಸಲ್ಲ ಅಂತಾ ಏನು ಗ್ಯಾರೆಂಟಿ? ಮನಸ್ಸಿನ ಆಲೋಚನೆಗಳು ಅಂದವಾಗಿರಬೇಕು, ಅದೇ ನಿಜವಾದ ಸೌಂದರ್ಯ ಅನ್ನುವುದು ಅವಳ ವಿಶ್ಲೇಷಣೆ. ತೀರಾ ಸೈಲೆಂಟ್ ಏನೂ ಅಲ್ಲದಿದ್ದರೂ ಅವಳ ಮಾತುಗಳನ್ನು ಕೇಳುವ ಭಾಗ್ಯ ಅವಳ ಆಪ್ತವಲಯಕ್ಕಷ್ಟೇ ಸೀಮಿತ.
ಅವಳ ಅಲಂಕಾರದ ವಿಷಯಕ್ಕೆ ಬಂದರೆ ಕಿವಿಗೊಂದು ಜೊತೆ ಪುಟ್ಟ ರಿಂಗ್. ಕತ್ತಿನಲ್ಲಿ ಹಸಿರು ಡಾಲರ್ ನ ಪುಟಾಣಿ ಸರ. ಕಿವಿಯಲ್ಲಿ ಚಿನ್ನದ ಓಲೆಗಳು ಆಗಾಗ ಬದಲಾದರೂ ಅದೇಕೋ ಅವಳಿಗೆ ಆ ಹಸಿರು ಡಾಲರ್ ನ ಸರದ ಮೇಲೆ ತುಂಬಾ ವ್ಯಾಮೋಹ. ಅವಳ ತಂಗಿ ಹೇಳ್ತಿರ್ತಾಳೆ "ಕಾಲಕ್ಕೆ ತಕ್ಕಂತೆ ಬದಲಾಗಬೇಕು ಕಣೇ.. ಹೀಗೇ ಗೂಬೆ ತರ ಇದ್ದರೆ ಆಗಲ್ಲ". "ತಗೋ ಈ ಸಿಲ್ವರ್ ಕಲರ್ ಜುಮುಕಿ ಟ್ರೈ ಮಾಡು" ಅಂತಾ ಚೆಂದದ ಜುಮುಕಿಯೊಂದನ್ನು ಅವಳಿಗೆ ಕೊಟ್ಟಳು. ಅದನ್ನು ತೆಗೆದುಕೊಂಡ ಧಾತ್ರಿ "ಈ ಡಿಸೈನ್ ಏನೋ ಚೆನ್ನಾಗೇ ಇದೆ ಕಣೆ, ಇದೇ ತರಹದ್ದು ಚಿನ್ನದ್ದು ಮಾಡಿಸಿಕೋಬೇಕು" ಅಂತಂದ್ಲು. ಅದಕ್ಕೆ ಅವಳ ತಂಗಿ " ಮಂಗನ ತರಹಾ ಆಡಬೇಡ, ಇಷ್ಟ ಆಗಿರೋ ಜುಮುಕಿ ಎಲ್ಲವನ್ನೂ ಚಿನ್ನದ್ದು ಮಾಡಿಸಿಕೊಳ್ಳೋಕಾಗುತ್ತಾ? ಸುಮ್ನೆ ಹಾಕೋ" ಅಂತಂದ್ಲು."ಬೇಡಮ್ಮ ನೀನೇ ಹಾಕೋ ನನಗೆ ಸೂಟ್ ಆಗಲ್ಲ, ಅಲ್ಲದೇ ಇವುಗಳು ಇಷ್ಟಾನೂ ಆಗಲ್ಲ" ಅಂತಂದ್ಲು ಧಾತ್ರಿ. "ಹೋಗಿ ಹೋಗಿ ನಿಂಗೆ ಹೇಳ್ತೀನಲ್ಲ ನನಗೆ ಬುದ್ದಿ ಇಲ್ಲ, ಏನಾದ್ರೂ ಮಾಡಿಕೋ ಹೋಗು, ಮಾಡರ್ನ್ ಆಗಿರೆ ಅಂದ್ರೆ ಅಡಗೂಲಜ್ಜಿ ತರಾನೇ ಅಂತೀಯಾ.. ನಾನೇನು ಮಾಡೋಕಾಗುತ್ತೆ? ನಿನ್ನ ಕರ್ಮ ಅನುಭವಿಸು" ಅಂತಂದು ಹೊರಟಳು ಅವಳ ತಂಗಿ ಸುಗುಣ.
ಧಾತ್ರಿ, ಸುಗುಣ ಇಬ್ಬರೂ ಒಂದೇ ತಾಯಿಯ ಮಕ್ಕಳಾದ್ರೂ ಇಬ್ಬರದ್ದೂ ವಿಭಿನ್ನ ಯೋಚನಾ ಶೈಲಿ. ಅವಳು ಉತ್ತರವಾದರೆ, ಇವಳು ದಕ್ಷಿಣ, ಆದರೂ ಅವರ ಭಾಂದವ್ಯ, ಪ್ರೀತಿಯನ್ನು ಇವು ಸೋಂಕಿರಲಿಲ್ಲ. ನೋಡಿದವರಿಗೆಲ್ಲಾ ಹೊಟ್ಟೆಕಿಚ್ಚು ಉಂಟುಮಾಡೋ ಅನ್ಯೋನ್ಯತೆ ಇಬ್ಬರದ್ದೂ. ಇಷ್ಟೆಲ್ಲಾ ಮಾತುಗಳು ಸರ್ವೇಸಾಮಾನ್ಯ ಅವರ ಮನೆಯಲ್ಲಿ. ಆದರೆ ಆವತ್ತು ಈ ವಾಗ್ವಾದ ಸ್ವಲ್ಪ ಜೋರಾಗಿತ್ತು ಅಷ್ಟೇ. ಧಾತ್ರಿಗೆ ಜುಮುಕಿಗಳಂದರೆ ಪಂಚಪ್ರಾಣ. ಆದರೆ ಅವಳು ಚಿನ್ನದ ಒಡವೆಗಳನ್ನು ಬಿಟ್ಟು ಬೇರೆ ಒಡವೆಗಳನ್ನು ಹಾಕಿದ್ದನ್ನು ನಾನು ನೋಡಿದ್ದೇ ಇಲ್ಲ. ಹಾಗೆಂದು ಅವಳಿಗೆ ಚಿನ್ನದ ವ್ಯಾಮೋಹ ಏನಿಲ್ಲ ಅವಳು ಸಿಂಪಲ್ ಹುಡುಗಿಯೇ ಆದರೆ ಕಿವಿಯ ಓಲೆ, ಸರ ಚಿನ್ನದ್ದೇ ಆಗಿರಬೇಕಿತ್ತು.
ಆ ಹಸಿರು ಡಾಲರ್ ನ ಸರ ಅವಳ ಕತ್ತಿನಲ್ಲಿದ್ದುದ್ದಕ್ಕೂ ಹೀಗೇ ಒಂದು ಸಣ್ಣ ಫ್ಲಾಶ್ ಬ್ಯಾಕ್ ಇತ್ತು. ತೀರಾ ಸಣ್ಣ ಫ್ಲಾಶ್ ಬ್ಯಾಕ್ ಆದರೂ ಅದರ ಹಿಂದಿನ ಸೆಂಟಿಮೆಂಟ್ ಸ್ವಲ್ಪ ದೊಡ್ಡದೇ.. ಸರ ಅಂದರೆ ಮೊದಲೆಲ್ಲಾ ಮಾರುದೂರ ಓಡುತ್ತಿದ್ದವಳು ಅಣ್ಣನ ಒಂದೇ ಒಂದು ಮಾತಿಗೆ ಹೂಂ ಅಂದಿದ್ಲು. ಅಣ್ಣನ ಮಾತಂದ್ರೆ ಅವಳಿಗೆ ವೇದವಾಕ್ಯ. ಹೆಣ್ಣುಮಕ್ಕಳು ಹೀಗೇ ಖಾಲಿ ಕತ್ತಲ್ಲಿ ಇರಬಾರದು, ಇನ್ಮುಂದೆ ಸರ ಹಾಕಿಕೋ ಅಂದಾಗ ಯಾಕೆ ಏನು ಅಂತಲೂ ಕೇಳದೆ ಸುಮ್ಮನೆ ಒಪ್ಪಿಕೊಂಡಿದ್ದಳು. ಆದರೆ ಅಮ್ಮನ ಹತ್ತಿರ ವರಾತ ಶುರುವಾಗಿತ್ತು. ನನಗೆ ಚಿನ್ನದ ಸರ ಬೇಡ ಕಳೆದುಹೋದರೆ..? ಬೆಳ್ಳಿಯ ಸರವೇ ಸಾಕು ಅಂತಾ.. ಅವಳಮ್ಮ ಹಾಗೂ, ಹೀಗೂ ಪೂಸಿ ಮಾಡಿ ಸರ ಕಳೆದುಹೋದರೂ ಚಿಂತೆ ಇಲ್ಲ, ಇದೇ ಸರ ಹಾಕಿಕೋ ಅಂತಾ ಸರ ಹಾಕಿದ್ರು. ಆವತ್ತಿಂದ ಆ ಸರಕ್ಕೆ ಅವಳ ಕತ್ತು, ಅವಳ ಕತ್ತಿಗೆ ಆ ಸರ ಹೊಂದಾಣಿಕೆ ಆಗಿಬಿಟ್ಟಿತ್ತು. ಆದರೂ ಅವಳಿಗೆ ಭಯ, ಎಲ್ಲಾದ್ರೂ ಸರ ಕಳೆದುಹೋದ್ರೆ.. ಅಂತಾ. ಆದರೆ ಅವಳಿಗೆ ಆ ಹಸಿರು ಡಾಲರ್ ಅಚ್ಚುಮೆಚ್ಚು. ಅವಳು ಸರ ಹಾಕಿಕೊಳ್ಳಲು ಒಪ್ಪಿದ್ದೇ ಈ ಡಾಲರ್ ನೋಡಿ.. ಸರ ಬಿಚ್ಚಿದರೆ ಡಾಲರ್ ಕೂಡಾ ಕಳೆದುಕೊಳ್ಳಬೇಕಾಗುತ್ತಲ್ಲಾ ಅಂತಾನೇ ಸರಕ್ಕೆ ಇನ್ನೂ ಅವಳ ಕತ್ತಿನಲ್ಲಿ ಉಳಿದುಕೊಳ್ಳುವ ಭಾಗ್ಯ ಸಿಕ್ಕಿತ್ತು. ಫ್ಲಾಶ್ ಬ್ಯಾಕ್ ಇಂದ ಹೊರಗಡೆ ಬರೋಣ ಈಗ..
ಸುಗುಣ ಮತ್ತು ಧಾತ್ರಿಯ ಜಟಾಪಟಿಗೆ ಕಾರಣ ಅವರ ಅತ್ತೆ ಮಗನ ಮದುವೆ ಸಂಭ್ರಮ. ಅತ್ತೆ ಮಗ ಆದರೂ ಅಣ್ಣ ಅಂತಲೇ ಕರೆಯುತ್ತಿದ್ದದ್ದು ಅವನನ್ನು. ಅಣ್ಣನ ಮದುವೆಯ ದಿನ ಬಂದೇಬಿಟ್ಟಿತು. ಧಾತ್ರಿಗಂತೂ ಖುಷಿಯೋ ಖುಷಿ. ಅಣ್ಣನ ಮದುವೆ ಅಲ್ವಾ, ನಾನು ಸೀರೆ ಉಡುತ್ತೇನೆ ಅಂತಾ ಸೀರೆ ಉಟ್ಟುಕೊಂಡಳು. ಅವಳಮ್ಮ ಅಂದರು ಇದಕ್ಕೆ ನೆಕ್ಲೇಸ್ ಮ್ಯಾಚಿಂಗ್ ಆಗುತ್ತೆ ಅದನ್ನೇ ಹಾಕಿಕೋ ಅಂತಾ ಜೊತೆಗೆ ಸುಗುಣ ಕೂಡಾ ಸೇರಿಕೊಂಡಳು. "ಯಾವಾಗಲೂ ಆ ಲಾಂಗ್ ಚೈನ್ ಯಾಕೆ ಹಾಕೋತೀಯಾ? ಒಂಚೂರೂ ಡ್ರೆಸ್ ಸೆನ್ಸ್ ಇಲ್ವಾ ನಿನಗೆ..? ಇವತ್ತೊಂದು ದಿನ ಆದರೂ ನಾನು ಹೇಳಿದ ಹಾಗೆ ಕೇಳು" ಅಂತಾ ಒತ್ತಾಯ ಮಾಡಿದಳು. ಧಾತ್ರಿಗೆ ಈಗ ಪೀಕಲಾಟಕ್ಕಿಟ್ಟುಕೊಂಡಿತು. ಆ ಹಸಿರು ಡಾಲರ್ ತೆಗೆದಿಡಬೇಕಲ್ಲಾ ಅಂತಾ ಒಲ್ಲದ ಮನಸ್ಸಿನಿಂದಲೇ ಆ ಸರ ಬಿಚ್ಚಿಟ್ಟು ನೆಕ್ಲೇಸ್ ಹಾಕಿಕೊಂಡಳು ಅಲ್ಲಲ್ಲ ಹಾಕಿಸಿಕೊಂಡಳು.
ಮದುವೆ ಮುಗಿದ ನಂತರ ಅವಳು ಮಾಡಿದ ಮೊದಲ ಕೆಲಸ ರೂಮಿಗೆ ಬಂದು ಆ ನೆಕ್ಲೇಸ್ ಬಿಚ್ಚಿಟ್ಟು ಹಸಿರು ಡಾಲರ್ ನ ಸರ ಹಾಕಿಕೊಂಡದ್ದು. ಧರ್ಮಸ್ಥಳದಿಂದ ಮತ್ತೆ ಎಲ್ಲರೂ ಊರಿನ ಕಡೆಗೆ ಪ್ರಯಾಣ ಹೊರಟದ್ದಾಯಿತು. ಹೋಗುತ್ತಾ ಇದ್ದ ಹಾಗೆ ಇದ್ದಂತೆಯೇ ಬರುವಾಗಲೂ ಬಸ್ ನಲ್ಲಿ ಮೋಜು, ಮಸ್ತಿ, ಕುಣಿತ ಎಲ್ಲವೂ ಶುರುವಾದವು. ಒಟ್ಟಿನಲ್ಲಿ ಎಲ್ಲರೂ ಎಂಜಾಯ್ ಮಾಡ್ತಾ ಇದ್ರು. ಊರೆಲ್ಲಾ ಒಂದು ದಾರಿ ಆದರೆ ಇವಳದ್ದೇ ಒಂದು ದಾರಿ ಅನ್ನೋ ಹಾಗೆ ಇವಳಿಗೆ ಅದರೆಡೆಗೆ ಆಸಕ್ತಿಯೇ ಇರಲಿಲ್ಲ, ಮನಸ್ಸೆಲ್ಲಾ ಕಿಟಕಿಯಿಂದ ಹೊರಗಡೆಯೇ ಇತ್ತು. ಪಶ್ಚಿಮ ಘಟ್ಟದ ಸೌಂದರ್ಯ ಸವಿಯುತ್ತಾ ಕೂತಿದ್ಲು. ಹಸಿರು, ನೀರು ಕಂಡರೆ ಸುತ್ತಮುತ್ತಲಿನ ಯಾವುದೂ ಬೇಡ ಅವಳಿಗೆ. ಡ್ಯಾನ್ಸ್ ಅಂದರೆ ತೀರಾ ಅಲರ್ಜಿ ಅಂತಾ ಏನೂ ಅಲ್ಲದಿದ್ದರೂ ಅವಳು ಇದೆಲ್ಲದರಿಂದ ದೂರವೇ..ಕಾರಣ ಇಂತಹದ್ದೇ ಎಂಬುದು ಸ್ಪಷ್ಟವಿಲ್ಲ, ಕಾರಣಗಳನ್ನು ಹುಡುಕುತ್ತಾ ಹೊರಟರೆ ಕಾರಣಗಳು ನೂರಾರು ಸಿಗುತ್ತವೆ. ಇಂತಹಾ ಗದ್ದಲ, ಗೌಜಿಗಳ ನಡುವೆಯೂ ಅವಳತನವನ್ನು ಅವಳು ಕಳೆದುಕೊಳ್ಳದಿರುವುದೇ ಅವಳಿಗಿಷ್ಟ. ಡ್ಯಾನ್ಸ್ ಗೆಂದು ಕರೆದದ್ದನ್ನು ನಯವಾಗಿಯೇ ತಿರಸ್ಕರಿಸಿ, ಪಟ್ಟಾಗಿ ಕಿಟಕಿ ಪಕ್ಕ ಕುಳಿತಳು. ಇವಳ ಸ್ವಭಾವದ ಅರಿವಿದ್ದ ಸುಗುಣ ಎದ್ದು ಅವರೊಂದಿಗೇ ಸೇರಿಕೊಂಡಳು. ಮನೆಯವರಿಗೆಲ್ಲಾ ಇವಳ ಈ ಸ್ವಭಾವ ಗೊತ್ತಿದ್ದರಿಂದ ಯಾರೂ ಬದಲಿ ಹೇಳಲಿಲ್ಲ, ಅವರಿಗೆ ಅರಿವಿತ್ತು ಏನಾದರೂ ಹೇಳಿದ್ದರೆ ಕಣ್ಣಿನಿಂದ ಗಂಗಾ-ಕಾವೇರಿ ಧುಮುಕುವುದು ಖಚಿತ ಎಂದು.
ಊರು ಹತ್ತಿರಕ್ಕೆ ಬಂದಾಗ ಕತ್ತಲ್ಲಿ ಏನೋ ಮುಲುಗಾಡಿದ ಹಾಗಾಯ್ತು ಕತ್ತಿಗೆ ಕೈ ಹಾಕಿದ್ರೆ ಸರ ಕೈಗೆ ಬಂದಿತ್ತು. ಆದರೆ ಕೈಗೆ ಸಿಕ್ಕಿದ್ದ ಆ ಸರದಲ್ಲಿ ಹಸಿರು ಡಾಲರ್ ಇರಲಿಲ್ಲ. ಒಂದರೆಕ್ಷಣ ಎದೆ ಹೊಡಕೊಳ್ತು, ಆದ್ರೂ ಅವಳಿಗೆ ಅದೇನೋ ನಂಬಿಕೆ ಡಾಲರ್ ಕಳೆದುಹೋಗಿಲ್ಲ ಸಿಕ್ಕೇ ಸಿಗುತ್ತೆ ಅಂತಾ. ಕೆಳಗಡೆಯೂ ಬಿದ್ದಿರಲಿಕ್ಕಿಲ್ಲ ಡ್ರೆಸ್ ಒಳಗಡೆಯೇ ಬಿದ್ದಿರಬಹುದು ಅನ್ನೋ ಅನಿಸಿಕೆಯೂ ಇತ್ತು. ಅವಳ ಆ ಆಲೋಚನೆಯಲ್ಲೂ ಅವಳ ತಂಗಿ ಹೇಳುತ್ತಿದ್ದ ಮಾತು ನೆನಪಾಗಿತ್ತು. ಸುಗುಣ ಧಾತ್ರಿಗೆ ಅವಳು ದುಪ್ಪಟ್ಟಾ ಹಾಕಿಕೊಳ್ಳುವ ಸ್ಟೈಲ್ ನೋಡಿ ಅವಾಗಾವಾಗ ರೇಗಿಸುವುದಿತ್ತು, "ಒಳ್ಳೆ ಕಂಬಳಿ ಹೊದ್ದುಕೊಳ್ಳೋ ಹಾಗೆ ವೇಲ್ ಹಾಕಿಕೊಳ್ತೀಯಲ್ಲೇ.. ಡ್ರೆಸ್ ಡಿಸೈನ್ ಕಾಣಿಸೋದು ಬೇಡವಾ? ಇನ್ನೂ ಯಾವ ಕಾಲದಲ್ಲಿದ್ದೀಯೇ ನೀನು?" ಅಂತಾ. ಧಾತ್ರಿಗೆ ಸರ ಬಿಚ್ಚಿಕೊಂಡದ್ದನ್ನು ಯಾರಿಗಾದರೂ ಹೇಳಿಕೊಳ್ಳಬೇಕು ಅಂತಾ ಅನ್ನಿಸಿತ್ತು. ಪಕ್ಕದಲ್ಲೇ ಕೂತಿದ್ದ ಅತ್ತೆಗೆ ಡಾಲರ್ ಬಿದ್ದು ಹೋಗಿದೆ ಅಂತಾ ಹೇಳಿದ್ದಕ್ಕೆ ಕೊನೆವರೆಗೂ ಇದ್ದು ನೋಡಿಕೊಂಡು ಬಾ ಅಂದ್ರು. ಅವರು ಸೊಸೆಯನ್ನು ಮನೆ ತುಂಬಿಸಿಕೊಳ್ಳುವ ತರಾತುರಿಯಲ್ಲಿದ್ದರು. ಸರಿ ಅಂತಂದ ಧಾತ್ರಿ ಅವಳಮ್ಮನಿಗೆ ಇದನ್ನು ಹೇಳಿದಳು. ಅವಳಮ್ಮನದ್ದು ಒಂತರಾ ನಿರ್ಲಕ್ಷ್ಯ, ಡಾಲರ್ ಹೋದರೆ ಹೋಯ್ತು ಬಿಡು ಏನಾಗಲ್ಲ. ನಿನಗೆ ಸಮಾಧಾನ ಆಗೋದಿದ್ರೆ ನೋಡಿಕೊಂಡು ಬಾ ಅಂತಾ ಅವರೂ ಅಲ್ಲಿಂದ ಹೊರಟರು.
ಉಳಿದದ್ದು ಧಾತ್ರಿ ಮತ್ತು ಅವಳ ಚಿಕ್ಕಮ್ಮ . ಅವಳ ಚಿಕ್ಕಮ್ಮನಿಗೆ ಹೇಳಿದ್ಲು ಎಲ್ಲಾರೂ ಹೋಗಲಿ ಕೊನೆಯಲ್ಲಿ ಹೋಗೋಣ ಅಂತಾ. ಬಹುಶಃ ಪೀರಿಯೆಡ್ಸ್ ಇರಬಹುದು, ಬಟ್ಟೆಗೆ ಕಲೆ ಆಗಿರಬಹುದೇನೋ ಅಂತಾ ಅವರು ಯೋಚಿಸುತ್ತಾ ಅವರು ಅಲ್ಲೇ ಉಳಿದುಕೊಂಡರು. ಆದರೆ ಸಮಸ್ಯೆ ಅದಲ್ಲ ಇದು ಅಂತಂದ್ಲು. ಆಗ ಅವರು ಸರಿ ಅಂತಾ ಅಂದ್ರು. ಆದರೆ ಸಮಸ್ಯೆ ಇದ್ದದ್ದು ಇಲ್ಲೆಲ್ಲೂ ಅಲ್ಲ, ಅವಳ ಹಿಂದಿನ ಸೀಟ್ ನಲ್ಲಿ. ಅದು ಸಮಸ್ಯೆ ಎಂದು ಭಾಸವಾಗುತ್ತಿದ್ದದ್ದು ಧಾತ್ರಿಗೆ ಮಾತ್ರ. ಕಾರಣ ಅಲ್ಲಿ ಕೂತಿದದ್ದು ಅವಳ ಸೀನಿಯರ್, ಅಣ್ಣನ ಫ್ರೆಂಡ್. ಅವನು ಧಾತ್ರಿಯ ಬ್ರ್ಯಾಂಚ್ ಏನೂ ಅಲ್ಲದಿದ್ದರೂ ಅಣ್ಣನ ಫ್ರೆಂಡ್ ಆಗಿ ಪರಿಚಿತ.
ಪರಿಚಿತತೆ, ಅಪರಿಚಿತತೆಯ ನಡುವಲ್ಲಿನ ವ್ಯಕ್ತಿಯಾದರೂ ಅವಳ ಪಾಲಿಗೆ ಅವನು ಆಗಂತುಕನೇ, ಹಾಗಾಗಿ ಸಂಕೋಚದ ತೆರೆ ಸಹಜವೇ. ಅವರು ಎದ್ದು ಹೋಗಲಿ ಅಂತಾ ಇವಳು, ಇವಳು ಎದ್ದುಹೋಗಲಿ ಅಂತಾ ಅವನೂ ಇಬ್ಬರೂ ಕಾಯುತ್ತಾ ಇದ್ದರು. ಅವನ ಧ್ವನಿ ಕೂಡಾ ಸ್ವಲ್ಪ ಜೋರು, ಮೊದಲಿನಿಂದಲೂ ಮೆತ್ತಗೆ ಬೆಳೆದ ಇವಳಿಗೆ ಅವನು ಮಾಮೂಲಿಯಾಗಿಯೇ ಮಾತನಾಡಿದರೂ ಜೋರು ಮಾಡಿದಂತೆಯೇ ಅನ್ನಿಸುತ್ತಿತ್ತು. ಅಂತಹಾ ಸಂಧರ್ಭದಲ್ಲಿ "ನೀವು ಹೋಗಿ" ಅಂದರೆ "ಇಲ್ಲಾ, ನೀನೇ ಹೋಗು" ಅಂತ ಅಂದದ್ದು ಆರ್ಡರ್ ಮಾಡಿದಂತೆಯೇ ಅನ್ನಿಸಿತ್ತು ಧಾತ್ರಿಗೆ. ಭಯ, ಸಂಕೋಚ, ಅಸಹಾಯಕತೆ ಎಲ್ಲವೂ ಮಿಳಿತವಾಗಿ ಇವಳಿಗೆ ಧ್ವನಿಯೇ ಹೊರಡಲಿಲ್ಲ. ಅಷ್ಟೋತ್ತಿಗೆ ಅವ್ಲ ಚಿಕ್ಕಮ್ಮ ಡಾಲರ್ ಕಳೆದು ಹೋಗಿದ್ದನ್ನು ಅವನಿಗೆ ಹೇಳಿಯಾಗಿತ್ತು. ಅವನೂ ಆಲ್ಲಿ ಹುಡುಕಲು ತೊಡಗಿ ಆಗಿತ್ತು. ಅವರು ಬಸ್ ನಿಂದ ಇಳಿದು ಹೋಗಿದ್ದರೆ ಡ್ರೆಸ್ ಕೊಡವಿ ಆದರೂ ನೋಡಬಹುದಾಗಿತ್ತು ಅನ್ನೋ ಯೋಚನೆ ಇತ್ತಾದರೂ ಅದನ್ನು ಬಾಯಿ ಬಿಟ್ಟು ಹೇಳುವ ಮನಸ್ಸಾದರೂ ಅವರ ನಡೆಯಿಂದ ಇದು ಸಾಧ್ಯವಾಗಿರಲಿಲ್ಲ. ಕೆಲವರಿಗೆ ಸೂಕ್ಷ್ಮಪ್ರಜ್ಞೆ ಕಡಿಮೆ ಅಥವಾ ಅಥವಾ ಹೆಣ್ಣುಮಕ್ಕಳ ಆಲೋಚನೆಯಂತೆ ಗಂಡುಮಕ್ಕಳ ಆಲೋಚನೆಗಳು ಇರುವುದಿಲ್ಲವಲ್ಲ.. ಅಷ್ಟೊತ್ತಿಗೆ "ಇವಳು ಸೀಟ್ ಬಿಟ್ಟು ಎದ್ದೇ ಇರಲಿಲ್ಲ, ಇಲ್ಲೇ ಎಲ್ಲೋ ಇರುತ್ತೆ. ಮಧ್ಯ ಸಕಲೇಶಪುರದಲ್ಲಿ ಇಳಿದಾಗ ಇತ್ತಾ? ನಿನಗೆ ಯಾವಾಗ ಗೊತ್ತಾಯ್ತು? ಸರ ಇದೆಯಾ? ಡಾಲರ್ ಯಾವ ಕಲರ್? ಹೇಗಿತ್ತು?" ಎಲ್ಲಾ ಪ್ರಶ್ನೆಗಳು ಪೋಲೀಸ್ ವಿಚಾರಣೆ ತರಹ ಅನ್ನಿಸುತ್ತಿತ್ತು. ಡಾಲರ್ ಸಿಗದಿದ್ದರೂ ಪರವಾಗಿಲ್ಲಾ ಈ ರೀತಿಯ ವಿಚಾರಣೆ ನಿಂತರೆ ಸಾಕು ಅನ್ನಿಸುತ್ತಿತ್ತು. ಅತೀ ಒಳ್ಳೆಯತನ ಕೂಡಾ ಕೆಲವರಿಗೆ ಹಿಂಸೆಯಾಗುತ್ತಿರುತ್ತದೆ ಅನ್ನೋ ಪರಿವೆಯೇ ಇಲ್ಲದೇ ಶೋಧನೆ ಕಾರ್ಯ ಮುಂದುವರಿದಿತ್ತು. ಅಷ್ಟರಲ್ಲಿ ಸಣ್ಣಗಿದ್ದ ವಿಷಯ ಬಾಯಿಂದ ಬಾಯಿಗೆ ಹಬ್ಬಿ ದೊಡ್ಡದಾಗಿತ್ತು. "ಇಲಿ ಹೋಯ್ತು ಅಂದರೆ ಹುಲಿ ಹೋಯ್ತು" ಅನ್ನೋ ಜನ ಡಾಲರ್ ಕಳೆದು ಹೋಗಿದ್ದನ್ನು ಸರವೇ ಕಳೆದುಹೋಯ್ತಂತೆ ಅಂತಾ ಮಾತಾಡ್ತಿದ್ರು. ಧಾತ್ರಿ ಸಿಟ್ಟು, ಅಳು ಎಲ್ಲವೂ ಬರುತ್ತಿತ್ತು, ಆದರೆ ಈಗ ಅವಳು ಏನೂ ಮಾಡುವ ಪರಿಸ್ಥಿತಿಯಲ್ಲಿರಲ್ಲ. "ಬಟ್ಟೆ ಒಳಗೇ ಡಾಲರ್ ಇರಬಹುದು ಹೋಗಿ ಒಂದ್ಸಲ ಹೋಗಿ ಚೆಕ್ ಮಾಡ್ತೀನಿ" ಅಂತಾ ಅವಳ ಚಿಕ್ಕಮ್ಮನಿಗೆ ಹೇಳಿ ಅಲ್ಲಿಂದ ಹೊರಟಳು. ಮನೆಯೊಳಗೆ ಬಂದು ಬಟ್ಟೆ ಕೊಡವಿದ್ರೆ ಅಲ್ಲೇ ಸಿಕ್ಕಿತ್ತು ಅಮೂಲ್ಯ ನಿಧಿ. ಆ ಹಸಿರು ಡಾಲರ್. ಆಗ ಅವಳಿಗೆ ಆದ ಖುಷಿ ಮಾತಲ್ಲಿ ಹೇಳುವಂತಹದ್ದಲ್ಲ.
ಅದಾದ ನಂತರ ಅವಳೇ ಈ ಘಟನೆ ಹೇಳಿಕೊಳ್ಳುವಾಗ ಹೇಳ್ತಾ ಇದ್ಲು, ಅವತ್ತು ಅವರಿಲ್ಲ ಅಂದಿದ್ದರೆ ಆ ಘಟನೆ ಸಣ್ಣದಾಗಿ ಮುಗಿದು ಹೋಗುತ್ತಿತ್ತು. ಇನ್ನೊಮ್ಮೆ ಅವಳ ಯೋಚನಾಲಹರಿ ಮತ್ತೊಂದು ಬಗೆಯಲ್ಲಿ ಓಡುತ್ತಿತ್ತು. ಅಕಸ್ಮಾತ್ ಅವತ್ತು ಆ ಹಸಿರು ಡಾಲರ್ ಅಲ್ಲೇ ಬಿದ್ದಿದ್ದು ನಮ್ಮ ಕಣ್ಣಿಗೆ ಬೀಳದಿದ್ದಿದ್ದರೆ..., ಮತ್ತೊಬ್ಬರ ಕಷ್ಟಕ್ಕಾಗುವವರು ಈ ಕಾಲದಲ್ಲಿ ಎಷ್ಟು ಜನ ಇರುತ್ತಾರೆ, ಎಲ್ಲರೂ ತಮ್ಮ ತಮ್ಮ ಸ್ವಾರ್ಥವನ್ನೇ ಯೋಚಿಸುತ್ತಿರುವಾಗ ಇಂಥಹವರೂ ಇರುತ್ತಾರಾ? ಬರೀ ಬೊಗಳೆ ಬಿಡುತ್ತಾ ಮಾತನಾಡುತ್ತಾ ಕಾಲ ಕಳೆಯುವವರ ನಡುವೆ ಯಾವ ಫಲಾಪೇಕ್ಷೆಯೂ ಇಲ್ಲದೇ ಸಹಾಯ ಮಾಡುವವರು ಎಷ್ಟು ಜನ? ರಾವಣನಂತೆ ಕಂಡಿದ್ದವ ರಾಮನಂತೆ ಕಾಣಲು ಭಾಸವಾಗಿದ್ದ. ಆದರೂ ಅವಳ ಆಲೋಚನೆ ತಕ್ಕಮಟ್ಟಿಗೆ ತಹಬದಿಗೆ ಬಂದಿತ್ತು. ಎಷ್ಟಾದರೂ ಮನಸ್ಸಿನಂತೆ ಮಹಾದೇವ ಅಲ್ಲವೇ..?
ಈ ಚಿನ್ನದಿಂದಲೇ ಅಲ್ಲವೇ ಇಷ್ಟೆಲ್ಲಾ ಆಗಿದ್ದು ಅಂತಾ ಚಿನ್ನದ ಒಡವೆಗಳನ್ನು ಬಿಚ್ಚಿಟ್ಟು ಬೋಳು ಕತ್ತು, ಖಾಲಿ ಕಿವಿಯಲ್ಲಿದ್ದವಳು ಆ ಹಸಿರು ಡಾಲರ್ ಅನ್ನು ಬಿಟ್ಟಿರಲಾರದೆ ಮತ್ತೆ ತನ್ನ ಕತ್ತಿನಲ್ಲಿ ಜಾಗ ನೀಡಿದ್ದಳು. ಹಾಗೇ ಹಳೆಯ ಆಲೋಚನೆಗಳಿಗೂ ಜಾಗ ನೀಡಿದ್ದಳು. ಬದುಕಲ್ಲಿ ಯಾವುದನ್ನಾದರೂ ಪಡೆದುಕೊಳ್ಳುವುದು ದೊಡ್ಡದಲ್ಲ ಆದರೆ ಅದನ್ನು ಅದನ್ನು ಜತನವಾಗಿ ಕಾಯ್ದುಕೊಳ್ಳುವುದೂ ಮುಖ್ಯ. ಅದು ಒಬ್ಬರ ಮೇಲಿನ ಅಭಿಪ್ರಾಯವೇ ಆಗಿರಬಹುದು ಅಥವಾ ಅವಳ ಜೀವನದ ಭಾಗವೇ ಆದ ಆ ಹಸಿರು ಡಾಲರ್ ಕೂಡಾ ಆಗಿರಬಹುದು. ಕಳೆದುಕೊಂಡದ್ದೆಲ್ಲಾ ಮರಳಿ ಸಿಗುವುದಿಲ್ಲ, ಸಿಕ್ಕ ನಂತರ ಜೋಪಾನವಾಗಿ ಕಾಯ್ದುಕೊಳ್ಳಬೇಕು. ಇಷ್ಟೆಲ್ಲವನ್ನೂ ಸೃಷ್ಟಿಸಿ ಮರೆಯಾಗಿಸಿದ ಹಸಿರು ಡಾಲರ್ ಜೀವನದ ಬಹುಮುಖ್ಯ ಪಾಠವೊಂದನ್ನು ಹೇಳಿಕೊಟ್ಟು ಬದುಕನ್ನು ನೋಡುವ ಬಗೆಯನ್ನೇ ಬದಲಾಯಿಸಿ ತಾನು ಮಾತ್ರ ಧಾತ್ರಿಯ ಕತ್ತಲ್ಲಿ ತಣ್ಣಗೆ ಮಿನುಗುತ್ತಾ ಕುಳಿತಿತ್ತು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ