ಭಾನುವಾರ, ಏಪ್ರಿಲ್ 5, 2020

ಒಲವ ಹೊರೆ ಹೊರಿಸಿದವಳೇ..

ನೀನ್ಯಾಕಿಷ್ಟು ಚೆಂದವೇ ಹುಡುಗಿ? ನನ್ನ ಮನಸೂರೆಗೊಂಡು ಕನಸಲ್ಲೂ ಲಗ್ಗೆ ಇಡುವಷ್ಟು..? ಸುಂದರತೆ ಎಂದರೆ ಬರೀ ಬಾಹ್ಯಾ ಸೌಂದರ್ಯ ಮಾತ್ರ ಎಂದುಕೊಂಡವನ ಮನ ಬದಲಿಸಿದ್ದು ನೀನಲ್ಲದೆ ಮತ್ಯಾರು ಎಂದುಕೊಂಡೆ..? 

ನೀನ್ಯಾಕಿಷ್ಟು ಒಳ್ಳೆಯವಳು ಹೇಳು..? ಒಳ್ಳೆಯತನ ಬೂಟಾಟಿಕೆ ಎಂದುಕೊಂಡಿದ್ದವನ ಮನವನ್ನು ಬದಲಿಸುವಷ್ಟು ಒಳ್ಳೆತನ ನಿನ್ನಲ್ಲಿಲ್ಲದೇ ಹೋಗಿದ್ದರೆ ಅದೆಷ್ಟು ಕೆಟ್ಟವನಾಗಿರುತ್ತಿದ್ದೆ ನಾನು.. ಆದರೂ ಸುಂದರವಾದದ್ದು, ಒಳ್ಳೆಯದ್ದು ದೂರದಲ್ಲೇ ಇರಬೇಕು ಅಲ್ಲವೇ..? ಅದಕ್ಕೆ ಇರಬೇಕು ನಿನ್ನಂತಹವರು ಗಗನ ಕುಸುಮಗಳಂತೆ ಭಾಸವಾಗುವುದು.

ಪಾರಿಜಾತದಂತಹವಳು ನೀನು.. ಅದರ ಬಿಳುಪು, ಬಣ್ಣದ ಬಗ್ಗೆ ಹೇಳುತ್ತಿಲ್ಲ ನಾನು. ಅದು ಪಸರಿಸುವ ಸುಗಂಧದಂತೆ ನಿನ್ನ ಗುಣ. ನೀನು ನನ್ನ ಸುತ್ತ ಇರುವಾಗಲೆಲ್ಲಾ ನಿನ್ನದೇ ಗುಂಗು ಹಿಡಿಸಿಬಿಡುತ್ತೀಯ.. ಆದರೂ, ನಿನ್ನ ಒಳ್ಳೆಯತನದ ಆಜ್ಞೆಗೆ ಗುಲಾಮನಾಗಬೇಕಾದಾಗ ಅದೇಕೋ ಅಸಹಾಯಕನಾಗಿ ಬಿಟ್ಟೆನೇನೋ ಎನ್ನಿಸಿಬಿಡುವುದು ಸುಳ್ಳಲ್ಲ. ನನ್ನಂತ ಬಲಿಷ್ಠನನ್ನು ಸಹಾ ಮೃದುವಾಗಿಸುವುದು ನೀನೋ, ನಿನ್ನ ಗುಣವೋ, ನಿನ್ನ ಒಲವೋ ಅರಿವಿಗೆ ನಿಲುಕದ್ದು..

ಸ್ಪರ್ಶ ಮಣಿ ಎಂಬ ಮಣಿಯೊಂದಿದೆ ಎಂದು ಕೇಳಿದ್ದೆ. ಅದು ಕಬ್ಬಿಣವನ್ನು ತಾಕಿದ ತಕ್ಷಣ ಕಬ್ಬಿಣ ಚಿನ್ನವಾಗಿ ಬದಲಾಗುವುದಂತೆ.. ನೀನೂ ಅಂತಹಾ ಸ್ಪರ್ಶಮಣಿಯೇ.. ಇಲ್ಲದಿದ್ದರೆ ನಿನ್ನಿಂದ ನನ್ನಂತಹಾ ನಿರ್ಭಾವುಕ ಕೂಡಾ ಭಾವನೆಗಳೊಂದಿಗೆ ಬೆರೆಯುವುದ ಕಲಿತ ಎಂದರೆ.. ಅದರ, ಅಂದರೆ ನಿನ್ನ ಮಹತ್ವ ಎಷ್ಟಿರಬೇಕೆಂದು ನೀನೇ ಯೋಚಿಸು..

ಆದರೂ, ನೀನು ಬಂದ ಮೇಲೆ ಬದುಕು ಬದಲಾಯಿತು ಎಂಬುವುದನ್ನು ಒಪ್ಪಲು ಕೊಂಚ ಕಷ್ಟವೇ. ಮನಸ್ಸಿಗಲ್ಲ, ಎಲ್ಲರೆದುರು. ಏಕೋ ಈ ಬದಲಾವಣೆ ನಿನ್ನೊಡನೆ ಮಾತ್ರವೇ.. ಅಷ್ಟು ಬೇಗ ನಾನು ಬದಲಾದರೆ ಅದು ಎಲ್ಲರಿಗೂ ನಾಟಕೀಯ ಎನ್ನಿಸಬಹುದು. ಏಕೆಂದರೆ, ಎಲ್ಲರೂ ಕೆಟ್ಟತನದ ಬದಲಾವಣೆಯನ್ನು ಕ್ಷಣಮಾತ್ರದಲ್ಲಿ ಒಪ್ಪುತ್ತಾರೆ ಆದರೆ ಒಳ್ಳೆಯತನದ ಬದಲಾವಣೆಯನ್ನು ಅಷ್ಟು ಸುಲಭದಲ್ಲಿ ಒಪ್ಪುವುದಿಲ್ಲ. ನೀನು ನನ್ನ ಎಲ್ಲಾ ಬದಲಾವಣೆಯ ಕಾರಣ ಎಂಬುದನ್ನು ಮನಸ್ಸಿನಲ್ಲೇ ಕೂಗಿ ಕೂಗಿ ಹೇಳುತ್ತೇನೆ. ಆದರೆ, ಅದು ಹೊರ ಜಗತ್ತಿಗೆ ಕೇಳುವುದಿಲ್ಲ. ಕೇಳಲೂಬಾರದು. ಅವರಿಗೆ ಇದರ ಗಂಧ ಪಸರಿಸಿದರೆ ಸಂಬಂಧಕ್ಕೆ ಒಂದು ಬಣ್ಣ ಬಳಿದು ಬೇರೆಯ ರೀತಿಯೇ ಪ್ರದರ್ಶನಕ್ಕೆ ಇಟ್ಟುಬಿಡುತ್ತಾರೆ.

ಬದುಕಿನಲ್ಲಿ ನಾನು ದೇವರನ್ನು ಪ್ರಾರ್ಥಿಸಿದವನೇ ಅಲ್ಲ ಆದರೆ ಇತ್ತೀಚೆಗೆ ದೇವರನ್ನು ವಂದಿಸುವುದನ್ನು ಮರೆಯುವುದಿಲ್ಲ. ಪ್ರಾರ್ಥನೆ ನಿಸ್ವಾರ್ಥವಾಗಿದ್ದರೆ ಫಲಿಸುವುದೆಂದು ನೀನೇ ಹೇಳಿದ್ದೆಯಲ್ಲಾ.. ಹಾಲ್ಮನಸ್ಸಿನಂತಹಾ ಗೆಳತಿಯ ಒಲವು ಹೀಗೇ ಉಳಿದುಬಿಡಲಿ ಎಂದು ಕೇಳಿಕೊಳ್ಳುತ್ತೇನೆ. ನಿನ್ನಂತಹಾ ಗೆಳತಿಯನ್ನು ನನಗೆ ನೀಡಿದ್ದಕ್ಕೆ ವಂದಿಸುತ್ತೇನೆ.

ನಿನ್ನ ಒಲವಿನ ಹೊರೆಯ ಭಾರವನ್ನು ಇಳಿಸಿಕೊಳ್ಳುವುದು ಸುಲಭವಲ್ಲ ಎಂಬುದರ ಅರಿವು ನನಗಿದೆ. ಒಲವು ಹಾಗೇ ಅಲ್ಲವೇ..?? ಕೊಟ್ಟಷ್ಟೂ ಮುಗಿಯದು, ತುಂಬಿದಷ್ಟೂ ಪೂರ್ತಿಯಾಗದು. ಆದರೆ ಆ ಒಲವಿಗೆ ಹೆಸರಿಡಲಾರೆ, ಕಾಮದ ಯೋಚನೆಯನ್ನು ಸಹಾ ಸೋಕಿಸಲಾರೆ. ಜೀವನವಿಡೀ ನಿನ್ನ ಒಲವ ಹೊರೆ ಹೊತ್ತುಕೊಂಡೇ ನಿನ್ನ ಆತ್ಮೀಯನಾಗಿ ಬದುಕಿ ಬಿಡುವಾಸೆ.

ಗಗನ ಕುಸುಮವನ್ನು ಮುಟ್ಟಲು ಯೋಗ್ಯತೆ ಬೇಕು. ಆ ಯೋಗ್ಯತೆಯ ಮಾಪನ ಹಣ, ಅಂತಸ್ತಲ್ಲ. ಇಷ್ಟು ದಿನ ನಿನ್ನೊಡನಿದ್ದು ಅದನ್ನು ಅರಿತಿಲ್ಲ ಎಂದರೆ ನನ್ನಂತಹ ಮೂಢ ಬೇರೆ ಯಾರೂ ಇರಲಾರನೇನೋ..

ಒಲವನ್ನು ಬಂಧಿಸಲಾರೆ ಹಾಗೆಯೇ ಭಾವನೆಗಳನ್ನು ಅಧಿಕವಾಗಿಯೂ ಹರಿಬಿಡಲಾರೆ. ಎಲ್ಲದಕ್ಕೂ ಕಾರಣ ನಿನ್ನಂತಹಾ ಉತ್ತಮ ಗೆಳತಿಯನ್ನು ಕಳೆದುಕೊಳ್ಳುವ ಭಯ. ಬದುಕಿನಲ್ಲಿ ಇಂತಹಾ ಒಲವನ್ನು ಹೊರಿಸಿಕೊಳ್ಳುವ ಕೆಲವೇ ಅದೃಷ್ಟವಂತರಲ್ಲಿ ನಾನೂ ಒಬ್ಬ.
ನಿನ್ನಿಂದ ಕಲಿತದ್ದನ್ನು ಮರೆಯಲಾರೆ, ಒಳ್ಳೆಯದನ್ನು ಮತ್ತೊಬ್ಬರಿಗೆ ಹಂಚುವೆ.
ಆದರೆ ಈ ಬರಹವನ್ನು ನಿನಗೆ ತೋರಿಸಲಾರೆ. ನೀನು ಹೊಗಳಿಕೆಗೆ ಉಬ್ಬಲಾರೆ, ತೆಗಳಿಕೆಗೆ ಕುಗ್ಗಲಾರೆ ಎಂದು ಅರಿವಿದ್ದರೂ ಸಹಾ...

ಆದರೂ ಈ ಬರಹ ಒಲವ ಹೊರೆ ಹೊರಿಸಿದವಳಿಗೆ ಅರ್ಪಣೆ
~ಇಂತಿ
ಒಲವ ಸಾಲಗಾರನಾಗಿರುವ ಆತ್ಮೀಯ

------------------------------------------
(~ವಿಭಾ ವಿಶ್ವನಾಥ್)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ