ಭಾನುವಾರ, ಜೂನ್ 21, 2020

ಭಾವಯಾನ

ಭಾವಜೀವಿಯಾದ ಮನುಷ್ಯ ಇತ್ತೀಚೆಗೆ ಭಾವನೆಗಳನ್ನು ಮರೆತಂತೆ ಬದುಕುತ್ತಿದ್ದಾನೆ. ಭಾವನೆಗಳು, ಬಂಧಗಳು ಬೆಳೆಸಿಕೊಂಡಂತೆಲ್ಲಾ ಬೆಳೆಯುತ್ತಾ ಹೋಗುತ್ತವೆ. ಆದರೆ, ಭಾವನಾತ್ಮಕ ಸೆಳೆತಗಳು ಹೆಚ್ಚಿದಂತೆಲ್ಲಾ ಮತ್ತೆ ಮತ್ತೆ ದುಃಖವೂ ಹೆಚ್ಚುತ್ತಾ ಹೋಗುತ್ತದೆ. ಭಾವಗಳೇ ಇಲ್ಲದ ಮನುಷ್ಯ ಇದ್ದಾನೆಯೇ..? ಯಾರಾದರೂ ಭಾವನೆಯೇ ಇಲ್ಲದೆ ಬದುಕಬಲ್ಲರೇ..? 


ಭಾವನೆಗಳಿದ್ದರೂ ತೋರ್ಪಡಿಸಿಕೊಳ್ಳದ ಹಲವು ಜನರಿದ್ದಾರೆ, ಆದರೆ ಭಾವನೆಗಳೇ ಇಲ್ಲದೆ ಇರುವ ಜೀವಂತ ವ್ಯಕ್ತಿ ಹುಡುಕಿದರೂ ಸಿಗಲಾರ. ನಾವು ಬೆಳೆದ ಪರಿಸರ, ನಮ್ಮ ದೇಹದಲ್ಲಿನ ಹಾರ್ಮೋನ್ ಗಳ ಪ್ರಭಾವ ಭಾವಾಭಿವ್ಯಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಸೆರಟೋನಿನ್, ಎಂಡೋರ್ಪಿನ್, ಆಕ್ಸಿಟೋಸಿನ್, ಡೋಪಮೈನ್ ಮುಂತಾದ ಹಾರ್ಮೋನ್ ಗಳ ಪ್ರಭಾವ ಭಾವನೆಗಳ ಮೇಲೆ ಪರಿಣಾಮ ಬೀರಿ ಮನುಷ್ಯನ ಬದುಕಿನಲ್ಲಿ ಆಶಾಕಿರಣವಾಗಿವೆ.

ಅಕಸ್ಮಾತ್ ದುಃಖ ಎಂಬುದೇ ಇಲ್ಲವೆಂದಿದ್ದರೆ... ಯಾವುದೇ ಭಾವನೆಗಳು ಇರದಾದರೆ ಅದು ಒಂದು ಲೋಪವೇ ಅಲ್ಲವೇ..?

ಚಿರಂಜೀವಿತ್ವ ಕೂಡಾ ಶಾಪವಾಗಬಲ್ಲದು. ಮರಣ ಕೂಡಾ ವರವಾಗಬಲ್ಲದು. ಆಲೋಚನೆಯ ಮೇಲೆ ಬದುಕಿನ ಬಂಡಿ ನಿಂತಿದೆ. ಸಿಹಿಯನ್ನು ಮಾತ್ರ ತಿನ್ನುವ ಮನುಷ್ಯ ಯಾರೂ ಇರಲಾರ. ಅತಿಯಾದ ಸಿಹಿ ವಾಕರಿಕೆ ತರಿಸುತ್ತದೆ. ಅಂತೆಯೇ ಅತಿಯಾದ ಅಮೃತ ಕೂಡಾ ವಿಷವಾಗಿ ಪರಿಣಮಿಸಬಲ್ಲದು. ಭಾವಗಳ ಲೋಪ ಕೂಡಾ ಬದುಕಿನ ಒಂದು ಕಪ್ಪು ಚುಕ್ಕಿಯೇ.

ವಿಜ್ಞಾನ ಮತ್ತು ಸಾಹಿತ್ಯದ ಮೂಲ ಎರಡರ ಕೇಂದ್ರಬಿಂದುವಾಗಬಲ್ಲವು ಈ ಭಾವನೆಗಳು. ಸಾಹಿತ್ಯ ಸೃಷ್ಟಿಗೆ ಸೃಜನಶೀಲತೆ ಮುಖ್ಯವಾದರೂ ಭಾವಗಳಿಲ್ಲದೆ ಬರಹ ಹುಟ್ಟಲಾರದು. ಭಾವನೆಗಳು ನಮ್ಮವೇ ಆಗಬೇಕೆಂದಿಲ್ಲ. ಯಾವುದಾದರೂ ಕತೆ, ಕಾದಂಬರಿ ಓದಿದಾಗ ಮೂಡುವ ಭಾವಗಳು, ಸಿನಿಮಾ ನೋಡಿದಾಗ ಹುಟ್ಟುವ ಭಾವನೆಗಳು, ಯಾರದ್ದೋ ಜೀವನದ ಘಟನೆಗಳನ್ನು ಕೇಳಿದಾಗ ಹುಟ್ಟುವ ಭಾವಗಳು ಹೀಗೆ ಭಾವಗಳ ಮೂಲ ಅನೇಕ. ಈ ಭಾವನೆಗಳನ್ನು ಭಾವಜೀವಿ ಬಂಧಿಸಿ ಅಕ್ಷರ ರೂಪ ನೀಡುತ್ತಾನೆ ಕೆಲವರು ಅನುಭವಿಸಿ ಸುಮ್ಮನಾಗುತ್ತಾರೆ, ಇನ್ನು ಕೆಲವರು ಅಲ್ಲಿಯೇ ಮರೆಯುತ್ತಾರೆ. 

ಲೇಖಕರ ಭಾವನೆಗಳ ಲೇಖನ ಅಥವಾ ಕತೆಗಳನ್ನು ಓದಿದ ಕೆಲವರು ಅವು ಅವರ ಭಾವನೆಗಳೇ ಏನೋ ಎಂದು ಭಾವಿಸಿಬಿಡುತ್ತಾರೆ. ಪತ್ತೇದಾರಿ ಕತೆ ಬರೆಯಲು ಅವನು ಪತ್ತೆದಾರಿಯೇ ಆಗಿರಬೇಕಿಲ್ಲ, ಪ್ರೀತಿ ಅಥವಾ ಬ್ರೇಕಪ್ ವಿಚಾರಗಳನ್ನು ಬರೆಯಲು ಅವರ ಬದುಕಿನಲ್ಲಿ ಅವು ಸಂಭವಿಸಿರಸಬೇಕೆಂಬ ನಿಯಮವೇನೂ ಇಲ್ಲ. ಹಾಗಾದರೆ, ದೆವ್ವ-ಭೂತಗಳ ಕತೆ ಬರೆಯುವ ಲೇಖಕರಿಗೆ ಅದೆಷ್ಟು ದೆವ್ವ-ಭೂತಗಳ ಅನುಭವವಾಗಿರುತ್ತದೆ? ಅನುಭವ ಮಾತ್ರವಲ್ಲ ಕಲ್ಪನೆ ಕೂಡಾ ಭಾವಗಳ ಹರಿಕಾರ. 

ಭಾವಗಳು ಕೂಡಾ ಬದುಕಿನ ಎಷ್ಟೋ ಬಂಧಗಳನ್ನು ಬೆಸೆಯುತ್ತವೆ. ರಕ್ತ ಸಂಬಂಧಗಳು ಮಾತ್ರ ಬದುಕಿನ ಬಂಧಗಳನ್ನು ಬೆಸೆಯುವುದಿಲ್ಲ ಭಾವಗಳು ಸಹಾ ಬದುಕಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತವೆ. ಸ್ನೇಹಿತರು ಕೆಲವೊಮ್ಮೆ ಒಡ ಹುಟ್ಟಿದವರಿಗಿಂತ ಹೆಚ್ಚಾಗಬಲ್ಲರು. ಅದೇ ಬಂಧಗಳು ಬೇರಾದರೆ ಅವು ಕೊಡುವ ಯಾತನೆ ದೈಹಿಕ ನೋವಿಗಿಂತಲೂ ಹೆಚ್ಚು.

ನೋವು, ನಲಿವು, ಸುಖ, ದುಃಖ, ನಗು, ಅಳು ಹೀಗೇ ಪ್ರತಿಯೊಂದು ಭಾವಗಳೂ ವಿಭಿನ್ನ. ಎಲ್ಲವನ್ನೂ ಅನುಭವಿಸುದಾಗಲಷ್ಟೇ ಬದುಕಿನ ಭಾವಯಾನದ ಅನುಭವವಾಗಲು ಸಾಧ್ಯ. ಎಲ್ಲವೂ ಸುಗಮವಾಗಿ ಸಾಗಲು ಪ್ರಮುಖವಾದ ಭಾವಗಳ ಹತೋಟಿ ನಮ್ಮ ಬಳಿ ಇದ್ದರಷ್ಟೇ ಭಾವಯಾನ ಸುಸೂತ್ರವಾಗಿ ಸಾಗಲು ಸಾಧ್ಯ.

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ