ಬುಧವಾರ, ನವೆಂಬರ್ 29, 2017

ಅರಳುವ ಹೂವೊಂದು...

ನಿತ್ಯಾಳ ತಾಯಿ ಶಾಂತಿ ಅವಳನ್ನು ನನ್ನ ಕ್ಲಿನಿಕ್ ಗೆ ಕರೆತಂದಾಗ ಅದಾಗಲೇ ಸಮಯ 6.00 ನ್ನು ದಾಟಿತ್ತು. ಹಾಲುಗಲ್ಲದ ಹುಡುಗಿಯ ಮುಖದಲ್ಲಿ ಅದೇನೋ ಭೀತಿ. ಕರೆಗಟ್ಟಿದ ಕಣ್ಣೀರಿನ ಗುರುತು ಇನ್ನೂ ಕೆನ್ನೆಯಿಂದ ಮಾಸಿರಲಿಲ್ಲ.
ಸಕಲೇಶಪುರದ ಹತ್ತಿರದ ಪುಟ್ಟ ಹಳ್ಳಿಯಲ್ಲೇ ನನ್ನ ಪುಟ್ಟ ಕ್ಲಿನಿಕ್ ಇದ್ದದ್ದು. ಜನಸೇವೆ ಮಾಡಲೆಂದು ಆದರ್ಶವನ್ನು ಪಾಲಿಸಿಕೊಂಡು ನಾನು ನನ್ನ ಪುಟ್ಟ ಕ್ಲಿನಿಕ್ ನ್ನು ಅಲ್ಲಿ ತೆರೆದಿದ್ದಲ್ಲ. ನನ್ನ ತಂದೆ-ತಾಯಿಯ ಕೊನೆಯ ಆಸೆಯನ್ನು ಈಡೇರಿಸಲು ನಾನಲ್ಲಿ ಬಂದು ನೆಲೆಸಿದ್ದೆ. ಜನ ಮೊದಲಿಗೆ ನನ್ನನ್ನು ಲೇಡಿ ಡಾಕ್ಟರ್ ಎಂದು  ಉಪೇಕ್ಷೆ ಮಾಡಿದರೂ ನಂತರ ನನ್ನನ್ನು ಒಪ್ಪಿಕೊಂಡು ಡಾಕ್ಟ್ರಮ್ಮ ಎಂದು ಪ್ರೀತಿಯಿಂದ ಕರೆಯುತ್ತಿದ್ದಾರೆ. ಆದರೆ ನಾನು ಬಂದ ಮೊದಲಿನಿಂದಲೂ ಅದೇ ಪ್ರೀತಿ-ವಿಶ್ವಾಸದಿಂದ ನೋಡಿಕೊಂಡ ಕುಟುಂಬ ನಿತ್ಯಾಳದ್ದು. ಹೆರಿಗೆ ಕಷ್ಟವಾಗಿ ಬದುಕಲು ಅಸಾಧ್ಯ ಎಂದೇ ಭಾವಿಸಿದ್ದ ಆ ಮಗುವನ್ನು ಉಳಿಸಿದ ಸಂತೃಪ್ತಿ ನನ್ನಲಿದೆ. ಚಿಕ್ಕಂದಿನಿಂದಲೂ ನಾನು ನೋಡಿದ ಮಗುವಿಗೆ ಈಗ 15 ವರ್ಷ.
ಆದರೂ ನಿತ್ಯಾಳನ್ನು ಈ ಸ್ಥಿತಿಯಲ್ಲಿ ನಾನು ನೋಡಿದ್ದು ಇದೇ ಮೊದಲು. ನಿತ್ಯಾ ಚಿಕ್ಕಂದಿನಿಂದಲೂ ಅಮ್ಮನಿಗಿಂತಲೂ ಅಪ್ಪನನ್ನೇ ಹೆಚ್ಚು ಹಚ್ಚಿಕೊಂಡಿದ್ದಳು. ಹೆಣ್ಣು ಮಕ್ಕಳೇ ಹಾಗಲ್ಲವೇ? ಅಪ್ಪನೆಂದರೆ ಅದೇನೋ ಮಮತೆ. ಅಪ್ಪನೆಂದರೆ ಅಷ್ಟು ಅಚ್ಚುಮೆಚ್ಚು. ನಿತ್ಯಾಳ ಅಪ್ಪ ಶ್ಯಾಮನೂ ಒಬ್ಬ ಆದರ್ಶ ತಂದೆ. ಆದರ್ಶ ತಂದೆಯಷ್ಟೇ ಅಲ್ಲ,ಆದರ್ಶ ನಾಗರೀಕನೂ ಹೌದು.
ಬೇರೆಯವರ ವಸ್ತುವಿಗೆ ಆಸೆ ಪಡದೇ,ಬೇರೆಯವರನ್ನು ಅವಲಂಬಿಸದೇ ತನ್ನ ಕೃಷಿ ಭೂಮಿಯಲ್ಲಿ ಬೆಳೆ ಬೆಳೆಯುತ್ತಾ ನಿತ್ಯಾ ಮತ್ತು ಶಾಂತಿಯಂದಿಗೆ ಸಂತೋಷದಿಂದ ಇರುವಾಗಲೇ ಊರಿನಲ್ಲಿ ನಕ್ಸಲರ ಛಾಯೆ ತೆಳುವಾಗಿ ಹರಡಿತ್ತು. ತೆಳುವಾಗಿ ಹರಡುತ್ತಿದ್ದ ಗುಂಪು ದಟ್ಟೈಸಿ, ಅವರು ಊರನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳತೊಡಗಿದರು. ಅವರನ್ನುಡುಕಿಕೊಂಡು ಪೋಲೀಸರೂ ಬಂದರು. ಆದರ್ಶವೇ ಮೈದುಂಬಿಕೊಂಡಿದ್ದ ಶ್ಯಾಮ ಪೋಲೀಸರಿಗೆ ನಕ್ಸಲರ ಸುಳಿವು ನೀಡಿದ.
ಆಗಲೇ ನಿತ್ಯಾಳ ಕುಟುಂಬದಲ್ಲಿ ಶುರುವಾಯಿತು ಶನಿ ಕಾಟ. ಪೋಲೀಸರಿಗೆ ನಕ್ಸಲರು ಸಿಗಲಿಲ್ಲ. ಆದರೆ ನಕ್ಸಲರ ಕಣ್ಣು ಶ್ಯಾಮನ ಮೇಲೆ ಬಿದ್ದಿತು. ಅಂದು ರಾತ್ರಿ ಶ್ಯಾಮನ ಮನೆಗೆ ನುಗ್ಗಿದ ನಕ್ಸಲರ ಗುಂಡಿಗೆ ಆತ ಬಲಿಯಾದ. ಇದೆಲ್ಲಾ ನಡೆದಾಗ ನಿತ್ಯಾಳಿಗೆ 12 ವರ್ಷ. ಎಳೆ ಮನಸ್ಸಿನ ಮೇಲೆ ಅದೆಂಥಾ ಪರಿಣಾಮ ಬೀರಿತೆಂದು ನೀವೇ ಊಹಿಸಿಕೊಳ್ಳಿ!!. ನಮ್ಮ ಕಣ್ಮುಂದೆಯೇ ನಾವು ಅತ್ಯಂತ ಪ್ರೀತಿಸುವ ವ್ಯಕ್ತಿ ಹತ್ಯೆಯಾದಾಗ ಹೇಗಾಗಿರಬೇಡ?
12 ವರ್ಷದ ನಿತ್ಯಾಳ ಮನಸಿನಲ್ಲಿ ಅದೇ ನೆನಪುಳಿದು ಅವಳು ದಿನೇ-ದಿನೇ ಕೊರಗುತ್ತಾ ಮನೋರೋಗಿಯಾಗುತ್ತಾ ಬಂದಳು. ಆಗ ಬಂದಾಗಲೂ ನಿತ್ಯಾ ಹೀಗಿರಲಿಲ್ಲ. ಹಂತ-ಹಂತವಾಗಿ ನಿತ್ಯಾ ಪರಿಸ್ಥಿತಿಗೆ ಒಗ್ಗಿಕೊಳ್ಳತೊಡಗಿದಳು. ಅಮ್ಮನ ಪ್ರೀತಿ, ತಾಳ್ಮೆಯು ಆಕೆಯನ್ನು ಸರಿಮಾಡುತ್ತಿತ್ತು. ಆದರೆ ನಕ್ಸಲರ ಮೇಲೆ ಮನಸ್ಸಿನ ಒಂದು ಮೂಲೆಯಲ್ಲಿ ದ್ವೇಷ ಹೊಗೆಯಾಡುತ್ತಿತ್ತು. ಶಾಲೆಗೆ ಹೋಗುತ್ತಾ ನಿತ್ಯಾ ಸರಿಯಾಗುತ್ತಿದ್ದಳು.ನಕ್ಸಲರ ದ್ವೇಷಿಗಳನ್ನು ಅವಳು ಹುಡುಕುತ್ತಿದ್ದಳು, ಆಗಲೇ ಅವಳ ಶಾಲೆಗೆ ಒಬ್ಬ ಹೊಸ ಮಾಸ್ತರರ ಆಗಮನವಾಯಿತು.
ಗೋಮುಖ ವ್ಯಾಘ್ರನಂತಿದ್ದ ಮಾಸ್ತರನ ಕಣ್ಣು ಅದಾಗಲೇ ಸಹಜಸುಂದರಿ ನಿತ್ಯಾಳ ಮೇಲೆ ಬಿದ್ದಿತ್ತು. ಪರಿಸ್ಥಿತಿಯ ಲಾಭ ಪಡೆದ ಆತ ನಕ್ಸಲರ ದ್ವೇಷಿಯೆಂದು ಬಿಂಬಿಸಿಕೊಳ್ಳುತ್ತಾ ಆಕೆಗೆ ಹತ್ತಿರವಾಗುತ್ತಾ ಹೋದ. ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಹತ್ತಿರವಿದ್ದ ದಿನಗಳಲ್ಲಿ ಆತ ಸ್ಪೆಷಲ್ ಕ್ಲಾಸ್ ನೆಪ ಹೇಳಿ ಹತ್ತನೇ ತರಗತಿಯ ಮಕ್ಕಳನ್ನು ಹೆಚ್ಚು ಹೊತ್ತು ಉಳಿಸಿಕೊಳ್ಳುತ್ತಿದ್ದ. ಆದರೆ ದಿನ ನಡೆದದ್ದೇ ಬೇರೆ.
ಎಲ್ಲಾ ಮಕ್ಕಳನ್ನು ಕಳುಹಿಸಿ ನಿತ್ಯಾಳನ್ನು ಇರಲು ಹೇಳಿದ ಮಾಸ್ತರನ ಮೇಲೆ ಆಕೆಗೇನು ಅನುಮಾನ ಮೂಡಲಿಲ್ಲ. ಆದರೆ ಅಂದು ಆಕೆಯ ನಂಬಿಕೆ ಬುಡಮೇಲಾಯಿತು. ಅರಳುವ ಹೂವು ದುಷ್ಟನ ಆಕ್ರಮಣಕ್ಕೆ ನಲುಗಿ ಹೋಗಿತ್ತು. ಅಳುತ್ತಲೇ ಮನೆಗೆ ಬಂದ ನಿತ್ಯಾಳನ್ನು ನೋಡಿ ಶಾಂತಿಯ ಮನ ಅಶಾಂತಿಯ ಕಡಲಾಯಿತು. ಮನಸ್ಸು ಕೇಡನ್ನೇ ಶಂಕಿಸುತ್ತಿದ್ದರೂ ಅವಳು ಅದನ್ನು ಬಾಯ್ಬಿಟ್ಟಿರಲಿಲ್ಲ.ಅತ್ತು-ಅತ್ತು ನಿತ್ಯಾಳ ಕಣ್ಣೀರು ಬತ್ತಿ ಹೋಗಿತ್ತು. ಆಗಲೇ ಅವರು ಅವಳನ್ನು ಕರೆತಂದದ್ದು ನನ್ನ ಕ್ಲಿನಿಕ್ ಗೆ.
ಇನ್ನೇನು ಕ್ಲಿನಿಕ್ ನ್ನು ಮುಚ್ಚಿ ಮನೆಗೆ ಹೋಗುವ ಸನ್ನಾಹದಲ್ಲಿದ್ದ ನಾನು ಅವಳನ್ನು ಪರೀಕ್ಷಿಸಿದಾಗ ನಿಜಸಂಗತಿ ತಿಳಿಯಿತು. ಅದಾದ ನಂತರ ನಡೆದದ್ದು ಮತ್ತಷ್ಟು ಭಯಂಕರ. ಪೋಲೀಸರಿಗೆ ದೂರು ನೀಡಲು ಹೋದ ಶಾಂತಿ ಮತ್ತು ನಿತ್ಯಾಳ ಮೇಲೆಯೇ ಪೋಲೀಸರು ದೌರ್ಜನ್ಯ ತೋರಿದರು. ಇದರಿಂದ ಮನನೊಂದ ಶಾಂತಿ ನೇಣು ಹಾಕಿಕೊಂಡಳು. ನಕ್ಸಲರ ದ್ವೇಷಿಯಾಗಿದ್ದ ನಿತ್ಯಾ 15ನೇ ವರ್ಷಕ್ಕೇ ನಕ್ಸಲಳಾಗಿ ಬದಲಾದಳು.
ಕಾಮುಕರನ್ನು, ಗೋಮುಖ ವ್ಯಾಘ್ರರನ್ನೂ ಎಲ್ಲೆಂದರಲ್ಲಿ ಬೇಟೆಯಾಡುವಷ್ಟು ಉಗ್ರಳಾದ ನಿತ್ಯಾ ಇಂದು ಪೋಲೀಸರ ಗುಂಡಿಗೆ ಬಲಿಯಾದಳು. ಹೆರಿಗೆ ಮಾಡಿಸಿದ ಕೈಯಿಂದಲೇ ಇಂದು ನಾನವಳ ದೇಹದ ಮರಣೋತ್ತರ ಪರೀಕ್ಷೆ ನಡೆಸುತ್ತಿದ್ದೇನೆ.
“17 ನೇ ವರ್ಷಕ್ಕೆ ತನ್ನ ಬದುಕನ್ನು ಮುಗಿಸಿಕೊಂಡ ನಿತ್ಯಾಳ ಮನಸ್ಸು ಹೇಗಿರಬೇಕೆಂದು ನೀವೇ ಯೋಚಿಸಿ. ಆಕೆ ತನ್ನ ಮುಗ್ಧತೆಯನ್ನು 15ನೇ ವಯಸ್ಸಿನಲ್ಲಿಯೇ ಕಳೆದುಕೊಂಡಳೆಂದರೆ ಅದರಲ್ಲಿ ಸಮಾಜದ ಪಾಲೆಷ್ಟು?”

“ಶಿಕ್ಷಣವನ್ನು ನೀಡಬೇಕಾದ ಶಿಕ್ಷಕನೇ ಭಕ್ಷಕನಾದರೆ ಮಕ್ಕಳ ಮನಸ್ಸು ಅರಳುವುದು ಹೇಗೆ? ಅಪ್ಪ-ಅಮ್ಮನ ನಂತರ ನಾವು ಪರಿಪೂರ್ಣವಾಗಿ ನಂಬುವ ವ್ಯಕ್ತಿ ಶಿಕ್ಷಕರು. ಎಲ್ಲರೂ ಹಾಗಿಲ್ಲದಿದ್ದರೂ ಕೆಲವರಿಂದ ನಂಬಿಕೆಗೆ ಕಪ್ಪುಚುಕ್ಕಿ. ಮಕ್ಕಳ ಮುಗ್ಧ ಮನಸ್ಸು ಒಮ್ಮೆ ಇಂತವರಿಂದ ಘಾಸಿಗೊಳಗಾದರೆ ಚೀತರಿಸಿಕೊಳ್ಳುವುದಾದರೂ ಹೇಗೇ?”

“ರಕ್ಷಣೆ ನೀಡಬೇಕಾದ ಆರಕ್ಷಕನೇ ಅರಕ್ಷಕನಾದಾಗ ಸಮಾಜದ ರಕ್ಷಣೆ ಹೇಗೆ?”

“ಉತ್ತಮ ತಾಯ್ತಂದೆಯರ ಪೋಷಣೆಯಿದ್ದೂ, ವಿಧಿಯಾಟಕ್ಕೆ ಬಲಿಯಾಗುವ ಮಕ್ಕಳೆಷ್ಟೋ?ಅವರ ರಕ್ಷಣೆಯ ಹೊಣೆ ಯಾರದು?”

“ನಿತ್ಯಾಳ ತಾಯಿ ಶಾಂತಿ ದುರ್ಬಲ ಮನಸ್ಸಿನಿಂದ ಆತ್ಮಹತ್ಯೆ ಮಾಡಿಕೊಳ್ಳದಿದ್ದರೆ ಬಹುಶಃ ಪರಿಸ್ಥಿತಿ ಬೇರೆಯಾಗುತ್ತಿತ್ತೇನೋ?”

ಇದಕ್ಕೇ ಇರಬಹುದು ಕುವೆಂಪುರವರು ಹೇಳಿರುವುದು "ಮಕ್ಕಳು ಹುಟ್ಟುತ್ತಲೇ ವಿಶ್ವಮಾನವರ ಆದರೆ ಬೆಳೆಯುತ್ತಾ ಅಲ್ಪಮಾನವರಾಗುತ್ತಾರೆ."

“ನಿತ್ಯಾಳ  ಸಾವಿಗೆ ಕಾರಣ ಏನೇ ಇದ್ದರೂ, ಸತ್ತ ಮಗು ಮರಳಿ ಬರುವುದಿಲ್ಲ. ನಿತ್ಯಾಳಂತಾ ಎಷ್ಟೋ ಮಕ್ಕಳು ಲೈಂಗಿಕ ದೌರ್ಜನ್ಯದಿಂದ ನಲುಗಿ ಹೋಗುತ್ತಿವೆ. ಆತ್ಮಹತ್ಯೆ ಮಾಡಿಕೊಂಡವರೆಷ್ಟೋ? ಬದುಕುಳಿದು ಜೀವಚ್ಚವಗಳಾಗಿರುವವರೆಷ್ಟೋ? ನಕ್ಸಲರಾಗಿ ಪೋಲೀಸರ ಗುಂಡೇಟಿಗೆ ಬಲಿಯಾದವರೆಷ್ಟೋ?”

ಅರಳುವ ಹೂವೊಂದು ಜಗತ್ತನ್ನು ಸವಿಯುವ ಮೊದಲೇ ನಲುಗಿ ಹೋಗಿದೆ. ದೌರ್ಜನ್ಯಕ್ಕೆ ಬಲಿಯಾಗಿದೆ. ಕ್ರೌರ್ಯಕ್ಕೆ ಸಿಲುಕಿ ಶಾಶ್ವತವಾಗಿ ಲೋಕವನ್ನೇ ತ್ಯಜಿಸಿದೆ. ಆದರೆ ಅರಳುವ ಹೂವೊಂದು ಬದುಕಿ ತನ್ನ ಸುತ್ತಲ ಸೌಂದರ್ಯವನ್ನು ಸವಿದು ಪರಿಪೂರ್ಣವಾದರೆ ಎಷ್ಟು ಚಂದ!!!”

" ಅರಳುವ ಹೂವೊಂದು..."  ಏನಾಗಬೇಕೆಂಬುದು ಸಮಾಜಕ್ಕೆ ಬಿಟ್ಟದ್ದು

                                                                                                                                             -Vಭಾ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ