ಭಾನುವಾರ, ಮೇ 27, 2018

ಮಾರಿಯೇ..? ಮಹಾಲಕ್ಷ್ಮಿಯೇ..?

ಪರಿಮಳ ಅವಳ ದೊಡ್ಡಮ್ಮನ ಜೊತೆ ಮಾತನಾಡುತ್ತಿರುವಾಗ, ಅಣ್ಣನ ಮದುವೆಯ ವಿಚಾರ ಬಂದಿತು. "ಅತ್ತಿಗೆಯನ್ನು ಮನೆಗೆ ಕರೆದುಕೊಂಡು ಬರುವುದು ಯಾವಾಗ?, ಅಣ್ಣನ ಮದುವೆಗೆ ನಾನು ಆ ಸೀರೆಗೆ ಬ್ಲೌಸ್ ಹೊಲೆಸಿಕೊಳ್ಳಬೇಕು.. ಅವನಿಗೆ ಬೇಗ ಮದುವೆ ಮಾಡಿ" ಎಂದು ಹೇಳುತ್ತಿರುವಾಗ ಅಣ್ಣ ಮಧ್ಯದಲ್ಲಿ ಬಂದು "ಮೊದಲು ನಿನ್ನ ಮದುವೆ,ಆಮೇಲೆ ನನ್ನದು" ಎಂದ. "ಯಾಕೆ? ಎಲ್ಲದಕ್ಕೂ ನಾನೇ ಮೊದಲು ಅಂತಾ ಹೇಳ್ತಾ ಇರುತ್ತೀಯಾ, ಮೊದಲು ನೀನೇ ಮದುವೆ ಆಗು" ಎಂದ ಕನಕಳಿಗೆ ಪ್ರತ್ಯುತ್ತರವಾಗಿ ದೊಡ್ಡಮ್ಮ "ಮಾರಿಯನ್ನು ಕಳುಹಿಸಿ, ಮಹಾಲಕ್ಷ್ಮಿಯನ್ನು ಮನೆಗೆ ಕರೆದುಕೊಂಡು ಬಾ" ಎನ್ನುವ ಗಾದೆಯನ್ನು ಕೇಳಿಲ್ಲವೇ?" ಎಂದರು.

ಅದಕ್ಕೆ ಹುಸಿಕೋಪವನ್ನು ನಟಿಸುತ್ತಾ ಪರಿಮಳ "ಹಾಗಾದರೆ, ನಾವುಗಳು ಅಂದರೆ ಹೆಣ್ಣುಮಕ್ಕಳು ಅಂದರೆ ನಾವುಗಳು ಮಾರಿ ಎಂದು ತಾನೇ ನೀವು ಹೇಳುತ್ತಿರುವುದು" ಎಂದಾಗ ಅದು "ಆ ಅರ್ಥದಲ್ಲಲ್ಲಾ ನಾನು ಹೇಳಿದ್ದು." ಎಂದರು.
"ಈ ಮನೆಗೆ ನಾವು ಮಾರಿಯರಾದರೂ, ಇನ್ನೊಂದು ಮನೆಗೆ ನಾವು ಮಹಾಲಕ್ಷ್ಮಿಯರೇ ತಾನೇ?" ಎಂದು ಹೇಳಿ ಆ ಸಂಧರ್ಭವನ್ನು ತಿಳಿಗೊಳಿಸಿದಳು ಪರಿಮಳ.

"ಮಾರಿ ಎಂದರೆ ಮಾರಾಟ ಎಂದೂ ಅರ್ಥ ಬರುತ್ತದೆ, ಅಂದರೆ ಬರಿಗೈಯಲ್ಲಿ ಕಳುಹಿಸದೇ ನಿಮ್ಮನ್ನು ಕೈತುಂಬಾ ಜೀವನಕ್ಕಾಗುವಂತೆ ವರದಕ್ಷಿಣೆಯನ್ನೂ ಕೊಟ್ಟು ಕಳುಹಿಸುತ್ತೇವಲ್ಲಾ" ಎಂದರು ದೊಡ್ಡಮ್ಮ.
"ಅದನ್ನೆಲ್ಲಾ ನಮಗೆ ಕೊಡಿ ಎಂದವರು ಯಾರು?" ಎಂದದ್ದಕ್ಕೆ ಪ್ರತ್ಯುತ್ತರವಾಗಿ ದೊಡ್ಡಮ್ಮ "ಕೊಡದಿದ್ದರೆ ಸುಮ್ಮನೆ ಬಿಡುತ್ತೀರಾ ನೀವು? ನೀವು ಬಿಟ್ಟರೂ ಉಳಿದವರು ಸುಮ್ಮನಿರುತ್ತಾರಾ?"  ಎಂದರು.

"ನೀವು ಕೇಳಿದಂತೆಯೇ ಅಲ್ಲವೇ? ಅವರೂ ಕೇಳುವುದು..
ನೀವು ಅಪೇಕ್ಷಿಸಿದಂತೆಯೇ ಅಲ್ಲವೇ? ಅವರೂ ಅಪೇಕ್ಷಿಸುವುದು..
ನೀವು ಯೋಚಿಸಿದಂತೆಯೇ ಅಲ್ಲವೇ? ಅವರೂ ಯೋಚಿಸುವುದು..
ಮನೆಗೆ ಬರುವ ಸೊಸೆಯಿಂದ ಏನನ್ನೂ ಅಪೇಕ್ಷಿಸಬೇಡಿ, ಮಗಳಿಗೂ ಏನನ್ನೂ ಕೊಟ್ಟು ಕಳುಹಿಸಬೇಡಿ" ಎಂದಳು ಪರಿಮಳ.
"ಸರಿ ಆಯ್ತಮ್ಮಾ, ಹಾಗೇ ಮಾಡುತ್ತೇವೆ." ಎಂದು ಆ ಸಂಧರ್ಭಕ್ಕೆ ತೆರೆ ಎಳೆದರು ದೊಡ್ಡಮ್ಮ.

ಇದು ಬರೀ ಪರಿಮಳ ಮತ್ತು ದೊಡ್ಡಮ್ಮನ ನಡುವೆ ನಡೆಯುವ ಮಾತು-ಕಥೆಯಲ್ಲ. ಪ್ರತಿ ಮನೆಯಲ್ಲೂ ಇಂತಹದ್ದೊಂದು ಸಂಭಾಷಣೆ ಯಾರ ನಡುವೆಯಾದರೂ ನಡೆದೇ ಇರುತ್ತದೆ.

ವೇದ ಸುಳ್ಳಾದರೂ, ಗಾದೆ ಸುಳ್ಳಾಗದು ಎಂಬ ಒಂದು ಮಾತಿದೆ. ಆದರೆ ಈ ಸಂಧರ್ಭಕ್ಕೆ ಅದನ್ನು ಹೇಗೆ ಬಳಸಿಕೊಳ್ಳಬೇಕೋ ಗೊತ್ತಿಲ್ಲ. ಬಹುಶಃ ಮನೆಯಲ್ಲಿದ್ದ ಹಠಮಾರಿ ಮಗಳು , ಇನ್ನೊಂದು ಮನೆಯಲ್ಲಿ ಸೌಮ್ಯರೂಪಿಯಾದ ದೇವತೆ ಮಹಾಲಕ್ಷ್ಮಿಯಂತೆ ಬಾಳಬಹುದು ಎಂಬ ಅರ್ಥ ಬರಬಹುದೇನೋ?

ಹೆಣ್ಣುಮಕ್ಕಳು ಅಣ್ಣ-ತಮ್ಮಂದಿರ ಕಾಟ ಕೊಟ್ಟಿರಬಹುದೇನೋ, ಆದರೆ ಮಾರಿಯಷ್ಟು ಹಟಮಾರಿ, ಉಗ್ರರೂಪಿ ಖಂಡಿತಾ ಆಗಿರುವುದಿಲ್ಲ. ಮಾರಿಯೇ ಆದರೆ, ಹಾಗೇ ಅನ್ನಿಸಿದರೂ ಅವಳೂ ದೇವತೆಯೇ ಅಲ್ಲವೇ? ಅಕಸ್ಮಾತ್ ಮನೆಮಗಳು ಅಷ್ಟು ಕಾಟ ಕೊಟ್ಟರೂ ಅವಳನ್ನು ಕಳುಹಿಸುವಾಗ ಎಲ್ಲರ ಕಣ್ಣಲ್ಲೂ ನೀರು ತುಂಬಿ ಬೇಸರವಾಗುವುದೇಕೆ?

ಇನ್ನು ಕೊಡು-ಕೊಳ್ಳುವಿಕೆಯ ವಿಷಯದಲ್ಲಿ ವರದಕ್ಷಿಣೆ ಎಂಬ ಪದ ನೇಪಥ್ಯಕ್ಕೆ ಸರಿಯುತ್ತಿದ್ದರೂ ಮಗಳು ಸುಖವಾಗಿರಲೆಂಬ ಕಾರಣಕ್ಕೆ ಹೆತ್ತವರು ಉಡುಗೊರೆ ನೀಡಿ ಕಳುಹಿಸುತ್ತಾರೆ. ಅದನ್ನುತಮ್ಮ ಮಗನ ಜೀವನದಲ್ಲಿಯೂ ಅಪೇಕ್ಷಿಸುತ್ತಾರೆ ಸಹಾ... ಇದು ಬದಲಾಗದೇ?

ಹೆಣ್ಣು ಮಕ್ಕಳಿಗೆ ಇಂದು ವಿದ್ಯೆ ನೀಡಿ ತಮ್ಮ ಕಾಲ ಮೇಲೆ ತಾವು ನಿಲ್ಲುವಂತೆ ಮಾಡಿ ಸ್ವಾತಂತ್ರ್ಯ, ಸ್ವಾಭಿಮಾನದ ಉಡುಗೊರೆಯನ್ನು ಉಡಿ ತುಂಬಿಸಿದ ಮೇಲೆ ಅವರು ಖಂಡಿತಾ ಮತ್ತೇನನ್ನೂ ಅಪೇಕ್ಷಿಸುವುದಿಲ್ಲ, ಹೆತ್ತವರ ಮತ್ತು ಒಡಹುಟ್ಟಿದವರ ಪ್ರೀತಿಯ ಹೊರತು.

ಮಾರಿಯನ್ನು ಕಳುಹಿಸಿ,ಮಹಾಲಕ್ಷ್ಮಿಯನ್ನು ಮನೆತುಂಬಿಸಿಕೊಳ್ಳುತ್ತಿದ್ದೇವೆ ಎನ್ನುವುದಕ್ಕಿಂತ ಮಹಾಲಕ್ಷ್ಮಿಯನ್ನು ಕಳುಹಿಸಿ,ಮಹಾಲಕ್ಷ್ಮಿಯನ್ನೇ ಮನೆತುಂಬಿಸಿಕೊಳ್ಳುತ್ತಿದ್ದೇವೆ ಎನ್ನಬಾರದೇಕೆ?

-ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ