ಗುರುವಾರ, ಮೇ 31, 2018

ಯಾರಿಗಿಲ್ಲ ಕಷ್ಟ-ನೋವುಗಳು..?

"ನನ್ನಷ್ಟು ಕಷ್ಟ ಯಾರಿಗೂ ಇಲ್ಲ..."," ನನಗಿರುವ ಹಾಗೆ ತೊಂದರೆಗಳು ಬಂದಿದ್ದರೆ...","ನಾನು ಅನುಭವಿಸಿದ ನೋವನ್ನು ನೀವು ಅನುಭವಿಸಿದ್ದರೆ ನೀವು ಹೀಗಿರಲು ಸಾಧ್ಯವೇ ಇರುತ್ತಿರಲಿಲ್ಲ." ಎನ್ನುವವರೆಲ್ಲ ಗಮನಿಸಲೇಬೇಕಾದ ಅಂಶವೆಂದರೆ ನಿಮಗಿಂತ ಕಷ್ಟ ಪಟ್ಟವರು, ನಿಮಗಿಂತ ಕಷ್ಟಪಡುತ್ತಿರುವವರು ಇದ್ದೇ ಇರುತ್ತಾರೆ. ಆದರೆ ಕಷ್ಟಕ್ಕೆದರಿ ಪಲಾಯನ ಮಾಡಿದ್ದರೆ ಅಥವಾ ಕಷ್ಟ ಬಂದಿತೆಂದು ಹಾಗೆಯೇ ಇದ್ದುಬಿಟ್ಟಿದ್ದರೆ ಇಂದಿನ ಮುಕ್ಕಾಲು ಪಾಲು ಸಾಧಕರು ತಮ್ಮ ಗಮ್ಯವನ್ನು ಸಾಧಿಸುತ್ತಲೇ ಇರಲಿಲ್ಲ.

"ಯಾರಿಗಿಲ್ಲ ನೋವು, ಯಾರಿಗಿಲ್ಲ ಸಾವು
ವ್ಯರ್ಥ ವ್ಯಸನದಿಂದ ಸಿಹಿಯು ಕೂಡ ಬೇವು"

ಹೌದು, ಬದುಕಿನಲ್ಲಿ ನೋವು-ಕಷ್ಟಗಳಿಲ್ಲದೇ ಇರುವವರು ಯಾರು? ನಾವು ಮೊದಲು ಭೂಮಿಗೆ ಕಾಲಿಡುವುಡುವಾಗ ಅಮ್ಮ ಅನುಭವಿಸಿದ್ದೂ ನೋವೇ. ನೋವು-ಕಷ್ಟ ಎಂದುಕೊಂಡು ಅಮ್ಮಂದಿರು ಭಾವಿಸಿ ಹೆರಿಗೆ ನೋವನ್ನು ಅನುಭವಿಸದೇ ಇದ್ದಿದ್ದರೆ ಇಂದು ನಮಗೆ ಅಸ್ತಿತ್ವವೇ ಇರುತ್ತಿರಲಿಲ್ಲವೇನೋ?ಆಟ ಆಡುವಾಗ ಬಿದ್ದು ನೋವಾಯಿತು ಎಂಬ ಕಾರಣಕ್ಕೆ ಹೆದರಿ ಮಕ್ಕಳು ಅಳುತ್ತಾ ಕುಳಿತು ಆಟವನ್ನೇ ಆಡದಿದ್ದಿದ್ದರೆ ಮಕ್ಕಳ ಬೆಳವಣಿಗೆ ಆರೋಗ್ಯವಾಗಿರುತ್ತಿತ್ತೇ?ಕಷ್ಟಪಟ್ಟು ಓದುವುದೇತಕೆ?ಎಂದು ಸುಮ್ಮನೆ ಕುಳಿತಿದ್ದರೆ ವಿದ್ಯಾವಂತರೆನಿಸಿಕೊಳ್ಳಲಾಗುತ್ತಿತ್ತೇ?ಸಾಮಾಜಿಕ ಬದಲಾವಣೆಗಳಾಗುತ್ತಿದ್ದವೇ?

ಆದರೆ ಈ ಸಂದರ್ಭಗಳಲೆಲ್ಲ ಅಷ್ಟಾಗಿ ಕಾಡದ ಕಷ್ಟ ಎನ್ನುವ ಪದ ಕಾಡಲು ಶುರುವಾಗುವುದು ಉದ್ಯೋಗ ಅರಸಿಕೊಂಡು ಹೋಗಿ ಉದ್ಯೋಗ ದೊರಕದಿದ್ದಾಗ ಅಥವಾ ಸಣ್ಣ ಸಂಬಳದ ಉದ್ಯೋಗ ದೊರೆತಾಗ. "ನನಗೇ ಈ ಕಷ್ಟ ಏತಕೆ..?" ಎಂಬ ಪ್ರಶ್ನೆ ಕಾಡಲು ಶುರುವಾಗುತ್ತದೆ.

ಎಷ್ಟೋ ಜನರಿಗೆ ಉದ್ಯೋಗವೇ ಇರುವದಿಲ್ಲ ಅಥವಾ ದೇಹದ ಯಾವುದೋ ಭಾಗ ನ್ಯೂನತೆಯಿಂದ ಕೂಡಿರುತ್ತದೆ. ಅವರಿಗೆ ಹೋಲಿಸಿದರೆ ನಮ್ಮ ಪರಿಸ್ಥಿತಿ ಉತ್ತಮವೇ ಆಗಿರುತ್ತದೆ.ಆದರೆ ನಾವು ಅದನ್ನು ಗಮನಿಸುವ ಅಥವಾ ಯೋಚಿಸುವ ಮನಸ್ಥಿತಿಯಲ್ಲಿರುವುದಿಲ್ಲ ಅಷ್ಟೇ. ವ್ಯರ್ಥವಾಗಿ ಚಿಂತಿಸಿ ಸಿಕ್ಕ ಚಿಕ್ಕ ಖುಷಿಯನ್ನೂ ಕಳೆದುಕೊಂಡು ನಮ್ಮ ಬಾಳಲ್ಲಿ ಕಷ್ಟವೇ ತುಂಬಿದೆ ಎಂದು ವ್ಯಥೆಪಡುತ್ತೇವೆ.

ಹಾಗೆಂದು ಎಲ್ಲರ ಕಷ್ಟಗಳು ಚಿಕ್ಕವು ಅಂತಲೋ ಅಥವಾ ಏನೇನೂ ಇಲ್ಲ ಎಂದಲ್ಲ."ಆನೆಯ ಕಷ್ಟ ಆನೆಗಾದರೆ, ಇರುವೆಯ ಕಷ್ಟ ಇರುವೆಗೆ". ಅವರವರ ನೋವು-ಕಷ್ಟಗಳು ಅವರವರಿಗೆ ಹೆಚ್ಚು. ಆದರೆ ಕಷ್ಟ ಎಂದು ಕೊರಗಿದರೆ, ನೋವು ಎಂದು ಮರುಗಿದರೆ ಅವೆಲ್ಲಾ ಬಗೆಹರಿದುಬಿಡುತ್ತವೆಯೇ? ಸುಖ ಈ ಘಳಿಗೆಯೇ ಬರಬೇಕೆಂದುಕೊಂಡರೆ ಮಾತ್ರ ಸಾಧ್ಯವೇ?

"ಯಾವುದೂ ಕೂಡಾ ಸುಲಭವಾಗಿ ಅಥವಾ ಉಚಿತವಾಗಿ ದೊರೆಯುವುದಿಲ್ಲ. ಹಾಗೆ ದೊರೆತರೂ ಅದು ಶಾಶ್ವತವಾಗಿ ಇರುವುದೂ ಇಲ್ಲ" ಎಂಬ ಮಾತುಗಳನ್ನು ಆಗಾಗ ಓದುತ್ತಲೋ ಅಥವಾ ಕೇಳುತ್ತಲೋ ಇರುತ್ತವೆ. ಆದರೂ ಈ ಕ್ಷಣ ನನ್ನ ಕಷ್ಟಗಳೆಲ್ಲಾ ದೂರವಾಗಬೇಕು ಎನ್ನುತ್ತಾ ಅದನ್ನು ಒಪ್ಪಲು ತಯಾರಿರುವುದಿಲ್ಲ. ಒಟ್ಟಾರೆ ಗಿಣಿಪಾಠದಂತೆ ಅದನ್ನು ಜಪಿಸುತ್ತೇವೆ ಅಷ್ಟೇ.

ಕಷ್ಟಗಳನ್ನು ಸಹಿಸುವ ಸಾಮರ್ಥ್ಯ ಉಳ್ಳವರಿಗೆ ಮಾತ್ರ ಕಷ್ಟಗಳು ಬರುತ್ತವೆ. ಜೊತೆಗೆ ಅವು ನಮ್ಮ ಬಾಳಿನಲ್ಲಿ ಹೊಸ ಪಾಠವೊಂದನ್ನು ಕಲಿಸಿ ಹೋಗುತ್ತವೆ. ಕಷ್ಟದಲ್ಲಿ ಜೊತೆಯಲ್ಲಿ ನಿಲ್ಲುವವರಾರು, ನಮ್ಮ ಹಿತಚಿಂತಕರು ಮತ್ತು ಹಿತಶತ್ರುಗಳು ಯಾರು ಎಂಬುದರಿಂದ ಹಿಡಿದು ಕಷ್ಟವನ್ನು ಸಹಿಸಿ ನಿಲ್ಲುವ ಸೈರಣೆಯನ್ನೂ ಅದು ತಿಳಿಸಿಕೊಡುತ್ತೇವೆ. ಯಾವುದೇ ಕಷ್ಟ,ಯಾವುದೇ ನೋವು ಬಂದರೂ ಅದನ್ನು ಮೆಟ್ಟಿ ನಿಲ್ಲುತ್ತೇವೆ ಎಂಬುದು ನಿಜವಾದ ಶಕ್ತಿ.ಆ ಸಮಯದಲ್ಲಿ ಮುಖದಲ್ಲಿ ಮುಗುಳ್ನಗು, ಶಾಂತತೆಯ ಜೊತೆಗೆ ಸರಿಯಾದ ನಿರ್ಧಾರ ನಮ್ಮನ್ನು ಕಷ್ಟದಿಂದ ಬಿಡಿಸಲು ಸಹಾಯಕ. ಅಕಸ್ಮಾತ್ ಈ ಪರಿಸ್ಥಿತಿಯಲ್ಲಿ ನಾವಿಲ್ಲದೇ ಇದ್ದರೂ, ನಮ್ಮ ಹತ್ತಿರದವರು ಅಥವಾ ಪರಿಚಿತರು ಆ ಪರಿಸ್ಥಿತಿಯಲ್ಲಿದ್ದರೆ ಅವರಿಗೆ ಸಾಂತ್ವನ, ಧೈರ್ಯ ತುಂಬುವ ಆತ್ಮವಿಶ್ವಾಸದಾಯಕ ಮಾತುಗಳನ್ನಾಡೋಣ. ಇದು ಸಾಧ್ಯವಾಗದಿದ್ದಲ್ಲಿ ಕುಗ್ಗಿಸುವ ಮಾತುಗಳಂತೂ ಬೇಡ.

ದೇವರೆನಿಸಿಕೊಂಡ ರಾಮನಿಗೇ ವನವಾಸದ ಕಷ್ಟ ತಪ್ಪಲಿಲ್ಲ, ಕೃಷ್ಣನಿಗೆ ಶ್ಯಮಂತಕ ಮಣಿಯನ್ನು ಕದ್ದ ಎಂಬ ಅಪವಾದ ಕಾಡದೇ ಬಿಡಲಿಲ್ಲ. ಆದರೆ ಅವರು ಈ ಸಂಧರ್ಭಗಳಿಗೆ ಅಂಜದೆ, ಅವುಗಳನ್ನು ಅನುಭವಿಸಿ ಮುನ್ನಡೆದರು. ಕಷ್ಟ ಕಳೆದ ಮೇಲೆ ಸುಖ ಬಂದೇ ಬರುವುದು. ಒಳ್ಳೆಯ ಕಾಲಕ್ಕಾಗಿ ಕಾಯೋಣ. ಇಂದಿನ ಕಷ್ಟದ ದಿನಗಳಿಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಪ್ರತಿಫಲ ಸಿಕ್ಕೇ ಸಿಗುವುದು ಎಂಬ ಭರವಸೆಯೊಂದಿಗೆ ಕಾಯೋಣ. ರಾಮ-ಕೃಷ್ಣರಷ್ಟು ಸೈರಣೆ ಇಲ್ಲದಿದ್ದರೂ, ನಮಗೆ ಸಾಧ್ಯವಾಗುವಷ್ಟು ಸಮಾಧಾನ ತಂದುಕೊಂಡು ಧೈರ್ಯವಾಗಿ ಕಷ್ಟದ ದಿನಗಳನ್ನು ಕಳೆಯೋಣ.

"ಬಾಳ ಕದನದಲ್ಲಿ ಭರವಸೆಗಳು ಬೇಕು
ನಾಳೆ ನಮ್ಮದೆನ್ನುವ ನಂಬಿಕೆಗಳು ಬೇಕು"  
ಹೌದು, ಈ ಮಾತಿನಂತೆಯೇ ಭರವಸೆಯನ್ನು ಮೂಡಿಸಿಕೊಳ್ಳುತ್ತಾ ನಂಬಿಕೆಯೊಡನೆ ಹೆಜ್ಜೆ ಹಾಕೋಣ. ನೆಮ್ಮದಿಯ ನಾಳೆಗಳಿಗಾಗಿ..

-ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ