ಸೋಮವಾರ, ಜೂನ್ 11, 2018

ಮಳೆರಾಯನ ಜೊತೆ...

ಬೆಳಿಗ್ಗೆಯಿಂದ ಒಂದೇ ಸಮ ಸುರಿಯುತ್ತಿರುವ ಮಳೆಯನ್ನು ನೋಡಿದರೆ ಇದು ಮಲೆನಾಡೇನೋ ಎಂಬ ಸಂದೇಹ ಬಂದದ್ದಂತೂ ಸುಳ್ಳಲ್ಲ. ಆದರೆ ವ್ಯಾವಹಾರಿಕ ಪ್ರಪಂಚದಲ್ಲಿಯೇ ಮುಳುಗಿ ಹೋಗಿರುವ ನಮ್ಮಂತಹವರಿಗೆ ಇತ್ತೀಚಿನ ವರ್ಷಗಳಲ್ಲಿ ಮಳೆ ಬಂದರೆ ಕಿರಿಕಿರಿ. ಅನಗತ್ಯವಾಗಿ ಯೋಚಿಸಿಕೊಂಡು "ಛತ್ರಿ ತಗೊಂಡೇ ಹೋಗ್ಬೇಕಾ?", "ರೇನ್ ಕೋಟ್ ಬೇರೆ ಜೊತೆ ಮಾಡಿಕೊಂಡು ಹೋಗ್ಬೇಕಾ?", "ಬೆಂಗಳೂರಿನ ಟ್ರಾಫಿಕ್ ಅಲ್ಲಿ ಈ ಮಳೆ ಬೇರೆ" ಎಂಬಂಥಹಾ ರೇಜಿಗೆ ಹುಟ್ಟಿಸುವ ಮಾತುಗಳ ದಿನಚರಿಯಲ್ಲಿ ಮಳೆಯನ್ನು ಸವಿಯುವ ನೆನಪುಗಳೇ ಮರೆವಾಗಿಬಿಟ್ಟಿವೆ. ರೈತಾಪಿ ವರ್ಗದ ಜನರಿಗೆ ಈ ಮಳೆ ಬೇಕಿತ್ತು ಅನ್ನಿಸಿದರೂ, ಕಾರ್ಪೊರೇಟ್ ವರ್ಗದ ಜನರಿಗೆ ವೀಕೆಂಡ್ ಅಲ್ಲೂ ಎಲ್ಲಿಗೂ ಹೋಗಲಾರದಂತೆ ಮಾಡಿ ಧೋ ಎನ್ನುತ್ತಾ ಸುರಿಯುತ್ತಾ ಇರೋ ಈ ಮಳೆ ಬೇಕಿತ್ತಾ? ಅನ್ನಿಸಿಬಿಟ್ಟಿದೆ.

ಈಗ ಎಲ್ಲಾ ಕಡೆ ಕಾಂಕ್ರೀಟ್, ಟಾರು ರೋಡುಗಳ ಭರಾಟೆ. ಆದರೆ ಆಗ ಸುತ್ತಮುತ್ತಲೂ ಮಣ್ಣಿನದ್ದೇ ಪಾರುಪತ್ಯ. ಅಂತಹಾ ಸಮಯದಲ್ಲಿ ಮಣ್ಣಿಗೆ ಮೊದಲು ಬಿದ್ದ ಹನಿ ತನ್ನ ಸುಮಧುರ ಸುವಾಸನೆಯನ್ನು ಎಲ್ಲಾ ಕಡೆ ಪಸರಿಸುತ್ತಾ , ಈಗಿನ ಪರ್ಫೂಮ್ ಗಳಿಗಿಂತಾ ಚೆಂದದ ಸುಗಂಧ ಬೀರುತ್ತಾ ಮನಸನ್ನೆಲ್ಲಾ ಆವರಿಸುತ್ತಾ ಇತ್ತು. ಅದರ ಜೊತೆಗೆ ಮೆಲ್ಲಗೆ ಬರೋ ತಂಗಾಳಿಯಲ್ಲಿ ಬಡಿದ "ಇರುಚಲು" ಮನೆಯನ್ನಷ್ಟೇ ಅಲ್ಲ, ಮನೆ ಮುಂದೆ ಮಳೆ ನೋಡ್ತಾ ಸುಮ್ಮನೆ ನಿಂತಿರುತ್ತಾ ಇದ್ದ ನಮ್ಮನ್ನೂ ನೆನೆಸಿಬಿಟ್ಟಿರುತ್ತಿತ್ತು. ಜೋರು ಮಳೆ ಬಂದು ಆಲಿಕಲ್ಲು ಬೀಳ್ತಾ ಇದ್ರೆ, ದೊಡ್ಡ ಛತ್ರಿಯನ್ನು ಉಲ್ಟಾ ಮಾಡಿ ಅದರಲ್ಲಿ ಆಲಿಕಲ್ಲನ್ನು ಹಿಡಿದು ತಿಂತಾ ಇದ್ದ ಮಜವೇ ಬೇರೆ.

ತುಂತುರು ಮಳೆ, ಸೋನೆ ಮಳೆ, ಜೋರು ಮಳೆ ಹೀಗೆ ಮಕ್ಕಳು ಮಳೆಯನ್ನು ಅಳತೆ ಮಾಡುತ್ತಾ ಇದ್ದರೆ, ದೊಡ್ಡವರದ್ದು ಮಳೆನಕ್ಷತ್ರಗಳ ಲೆಕ್ಕ, ಸ್ವಾತಿ ಮಳೆ, ಭರಣಿ ಮಳೆ ಅಂತೆಲ್ಲಾ.. ಈಗ ಇದೆಲ್ಲಾ ಇದೆಲ್ಲಾ ಮಾಯವಾಗಿ ಗೂಗಲ್ ಮುಖೇನ ಎಲ್ಲಿ, ಎಷ್ಟು ಸೆಂಟಿಮೀಟರ್ ಮಳೆಯಾಗಿದೆ ಅಂತಾ ತಿಳಿದುಕೊಳ್ಳುವ ಹಾಗಾಗಿದೆ.

ಮಳೆಯಲ್ಲಿ ನೆನೆದು ಅಮ್ಮನಿಂದ ಬೈಸಿಕೊಂಡು ಬಿಸಿನೀರಲ್ಲಿ ಸ್ನಾನ ಮಾಡಿ ಒಲೆ ಮುಂದೆ ಕೂತು ಕಾಲ ಕಳೆಯುತ್ತಾ ಇದ್ದದ್ದೆಲ್ಲಾ ಹೋಗಿ , "ಅಯ್ಯೋ, ಈ ಹಾಳಾದ ಮಳೆ ಈಗಲೇ ಬರಬೇಕಿತ್ತಾ?" ಅಂತಾ ಯಾವುದಾದರೂ ಅಂಗಡಿ ಮುಂಭಾಗದಲ್ಲೋ, ಬಸ್ ಸ್ಟ್ಯಾಂಡ್ ಅಲ್ಲೋ ನಿಂತು ಈ ಮಳೆ ಯಾವಾಗ ಬಿಡುತ್ತೆ ಅಂತಾ ಕಾಯೋ ಕಾಲ.

ಆದರೆ ಮಳೆಗಾಲದ ಬಗ್ಗೆ ಪುಳಕ ಮೂಡಿಸೋ ಸಿನೆಮಾಗಳು ಬಂದ ಮೇಲೆ ಯುವಜನತೆ ಮಳೆಯಲ್ಲಿ ನೆನೆಯೋ ಟ್ರೆಂಡ್ ಶುರು ಮಾಡಿದ್ರು. ಆದರೆ ಅದು ಮಳೆಯ ಪುಳಕವನ್ನು ಅನುಭವಿಸುವುದಕ್ಕಿಂತ ವಾಟ್ಸಾಪ್ ಸ್ಟೇಟಸ್, ಫೇಸ್ ಬುಕ್, ಇನ್ಸ್ಟಾಗ್ರಾಂಗೆ ಅಪ್ ಲೋಡ್ ಮಾಡುವುದಕ್ಕೇ ಅನ್ನೋದು ಸುಳ್ಳಲ್ಲ.

ಆವಾಗೆಲ್ಲಾ ಶಾಲೆ ಬಿಡೋ ಟೈಮ್ ಗೆ ಬರುತ್ತಾ ಇದ್ದ ಮಳೆ, ಈಗ ಆಫೀಸ್ ಬಿಡೋ ಟೈಮ್ ಗೆ ಬರುತ್ತಾ ಇದೆ. ಆಗೆಲ್ಲಾ ಅಮ್ಮ ಮಾಡಿಕೊಡುತ್ತಾ ಇದ್ದ ಬಿಸಿ ಬಿಸಿ ಕಾಫಿ ಜೊತೆ ಬಿಸಿ ಬಿಸಿ ತಿಂಡಿ ಸವಿಯುತ್ತಾ ಇದ್ದ ನಾವು ಇವತ್ತು ಬೇರೆಯವರಿಗಾಗಿ ಕಾಫಿ, ತಿಂಡಿ ಮಾಡ್ತಾ ಇದ್ದೀವಿ ಅಷ್ಟೇ. ಮಳೆರಾಯ ಆವತ್ತೂ ಬದಲಾಗಿಲ್ಲ, ಇವತ್ತೂ  ಬದಲಾಗಿಲ್ಲ.... ಆದರೆ ನಾವು ಯಾಕೆ ಬದಲಾಗ್ತಾ ಇದ್ದೀವಿ...? 

ಇನ್ನಾದರೂ ತೆಗೆದು ಒಮ್ಮೆ ಆ ತಂಗಾಳಿಯ ಜೊತೆ ಮಳೆಯ ಹನಿಯನ್ನೂ ಆಸ್ವಾದಿಸೋಣ. ಮಳೆ ನಿಂತ ಮೇಲೆ ಬೀಳೋ ಆ ಹನಿಯ ಪ್ರತಿ ಶಬ್ಧವನ್ನೂ ಕೇಳೋಣ... ಬಹುಷಃ ಮಾತುಗಳೆಲ್ಲಾ ಮುಗಿದರೂ ಕಾಡುವ ಧ್ವನಿಯ ಹಾಗೆ, ಮಳೆನಿಂತ ಮೇಲೂ ಆ ಹನಿ ಕಾಡಬಹುದು... ತೆರೆದ ಕಿಟಕಿಯಿಂದ ಬೀಸುವ ತಂಗಾಳಿಗೆ ಮುಂಗುರುಳು ಹಾರಿ ಮುತ್ತಿಕ್ಕುವುದನ್ನು ಅನುಭವಿಸೋಣ... ಸಾಧ್ಯವಾದರೆ ಬಿಸಿ ಕಾಫಿಯೊಂದಿಗೆ ಮಳೆರಾಯನೊಡನೆ ಕಾಲ ಕಳೆಯೋಣ..

ಇಷ್ಟೇನಾ ಅನ್ನೋವ್ರು, ಮಳೆಯಲ್ಲಿ ಹೋಗಿ ಒಂದು ಸಾರಿ ನೆನೆದು ಬನ್ನಿ. ಅದರ ಮಜಾ ಇನ್ನೂ ಹೆಚ್ಚು.
ಆಂ! ಶೀತ ಆಗಿ ಜ್ವರ ಬಂದರೆ ಮತ್ತೆ ನನ್ನನ್ನ ಹೊಣೆ ಮಾಡ್ಬೇಡಿ. ಆಯ್ತಾ..?

ಮತ್ತೆ ಸಿಗೋಣ...ಮಳೆರಾಯನ ಜೊತೆ ನನಗೂ ತುಂಬಾ ಮಾತಾಡೋದಕ್ಕಿದೆ. ಮುಗಿಯದ ಮಾತುಗಳ ಮೂಟೆಯಿಂದ ಒಂದಿಷ್ಟನ್ನು ಮೊಗೆದು ಅವನಿಗೂ ಕೊಡಬೇಕಾಗಿದೆ.ಅದೆಲ್ಲಾ ಮುಗಿಸಿ ಬರ್ತೀನಿ.. ಅವನ ಜೊತೆಗೆ ಕಳೆಯೋ ಕ್ಷಣಗಳನ್ನು ಮಿಸ್ ಮಾಡ್ಕೊಳ್ಳೋಕೆ ನನಗೂ ಇಷ್ಟ ಇಲ್ಲ. ನಿಮಗೆ ಮತ್ತೊಮ್ಮೆ ಸಿಕ್ತೀನಿ. ಅಲ್ಲೀವರೆಗೂ ಬಾಯ್..!

-ವಿಭಾ ವಿಶ್ವನಾಥ್   

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ