ಭಾನುವಾರ, ಆಗಸ್ಟ್ 26, 2018

ಗೂಗಲ್ ಗಂಗಾ

ಹೇಳುವುದು ಒಂದು
ಮಾಡುವುದು ಇನ್ನೊಂದು
ನಂಬುವುದು ಹೇಗೋ ಕಾಣೇ
ಸುಮಿತ್ರಾಪತಿ ಶ್ರೀಪತಿ...

ಅಂತಾ ಎಲ್ಲರೂ ಅಂತ್ಯಾಕ್ಷರಿ ಹಾಡ್ತಾ ಶ್ರೀಪತಿ ಅಲಿಯಾಸ್ ಸುಮಿತ್ರಾಪತಿಯನ್ನ ರೇಗಿಸ್ತಾ ಇದ್ವಿ.
"ಯಾವ್ದಾದ್ರೂ ಲಾಂಗ್ ಟ್ರಿಪ್ ಹೋಗೋಣಾ ಕಣ್ರೋ, ನಂಗಂತೂ ಈ ಗಿಜಿ ಗಿಜಿ ಟ್ರಾಫಿಕ್ಕೂ,ನನ್ನ ಪ್ರಾಜೆಕ್ಟ್ ಮ್ಯಾನೇಜರ್ ಆ ಸಿಡುಕು ಮೂತಿ ಸಿದ್ದಮ್ಮ,ಅದೇ ಕಂಪ್ಯೂಟರ್ ಸಿಸ್ಟಮ್ ನ ನೋಡೀ,ನೋಡೀ ತಲೆ ಕೆಟ್ಟು ಹೋಗಿಬಿಟ್ಟಿದೆ. ವೀಕೆಂಡ್ ಯಾವಾಗ ಬರುತ್ತೆ ಅಂತಾ ಕಾಯ್ತಾ ಇದ್ದೀನಿ..ಬೆಳಿಗ್ಗೆ ಆಫೀಸ್ ಗೆ ಹೋಗೋ ಅಷ್ಟೊತ್ತಿಗೇ ಮೂಡ್ ಕೆಟ್ಟು ಕೆರ ಹಿಡಿದಿರುತ್ತೆ ಅಂತಾದ್ರಲ್ಲಿ, ಅವಳು ಬೇರೆ ಅದು ಸರಿ ಇಲ್ಲ, ಕೆಲಸ ಮಾಡೋಕೆ ಇಷ್ಟ ಇಲ್ಲ ಅನ್ನುವವರು ಯಾಕ್ರೀ ಇಲ್ಲಿ ಬರ್ತಿರಾ ನಮ್ಮ ತಲೆ ತಿನ್ನೋಕೆ  ಅಂತಾ  ಕೇಳಿ ನನ್ನಕೆಲಸದ ಬಗ್ಗೆ ನನಗೇ ರೇಜಿಗೆ ಹುಟ್ಟೋ ಹಾಗೆ ಮಾಡ್ತಾಳೆ. ಬೆಳಿಗ್ಗೆ-ಬೆಳಿಗ್ಗೆನೇ ಮೂಡ್ ಆಗಿರುತ್ತೆ.. ಅಂತಾದ್ರಲ್ಲೂ 5 ದಿನ ವರ್ಕ್ ಮಾಡ್ತಿನಿ.. ನಮ್ಮ ಊರಲ್ಲಿ ಆಗಿದ್ರೆ ಟ್ರಕ್ಕಿಂಗ್ ಆದ್ರೂ ಹೋಗಿ ಕಾಲ ಕಳೀಬಹುದು. ಕಡೇಪಕ್ಷ ಪಿಕ್ ನಿಕ್ ಗಾದ್ರೂ ಹೋಗೋಣ ಅಂತಾ ಹೇಳೋ ಈ ಭೂಪನ್ನ ವೀಕೆಂಡ್ ಅಲ್ಲಿ ಎಲ್ಲಿಗಾದ್ರೂ ಕರಿಯೋಣಾ ಅಂದ್ರೆ ಅವನ ಗರ್ಲ್ ಫ್ರೆಂಡ್ ಸುಮಿತ್ರಾ ಅಲಿಯಾಸ್ ಸುಮಿ ಅಲಿಯಾಸ್ ಸಿಡುಕು ಮೂತಿ ಸಿದ್ದಮ್ಮನ ಜೊತೆ ಕಾಫಿ ಡೇ ಕೂತು "ನಾನು ತುಂಬಾ ಇಂಪಾರ್ಟೆಂಟ್ ಕೆಲಸದಲ್ಲಿ ಇದ್ದೀನಿ. ನೀವು ಹೋಗಿ ಬನ್ನಿ" ಅಂತಾ ಸಾಗ ಹಾಕಿಬಿಡುತ್ತಾನೆ.

ಅದಕ್ಕೆ ಎಲ್ಲರೂ ಅವನ ಬೆನ್ನು ಬಿದ್ದು ಪೀಡಿಸಿ ಅವನ ಊರಿಗೆ ಹೊರಟಿದ್ದೀವಿ. ನಮ್ಮ ಕಾಲ ಕಳಿಯೋಕೆ ಅವನ ಕಾಲು ಎಳೆದು ಹೀಗೆ ಕಾಟ ಕೊಡ್ತಾ ಇದ್ದೀವಿ ಅಷ್ಟೇ..

"ಇನ್ನೂ ನನ್ನ ರೇಗಿಸ್ತಾ ಇರ್ತಿರೋ ಅಥ್ವಾ ಮನೆ ಒಳಗೆ ಬರ್ತೀರೋ, ಬೆಳಿಗ್ಗೆ ಬೇಗ ಎದ್ದು ಹೊರಡಬೇಕು. ಟ್ರಕ್ಕಿಂಗ್ ಗೆ ಬರ್ತೀರೋ ಅಥ್ವಾ ಹೀಗೇ ಮಾತಾಡ್ತಾ ಬೆಳಿಗ್ಗೆ ಮಾಡ್ತೀರೋ" ಅಂದಾಗ ಸಮಯ ನೋಡಿದ್ರೆ 12 ಘಂಟೆ.

"ದೆವ್ವಗಳು ಓಡಾಡೋ ಹೊತ್ತಲ್ಲಿ, ಹೀಗೆ ಕೂತಿದಿರಲ್ಲ ಒಳಗಡೆ ಹೋಗಿ" ಅಂದ್ರು ಅಜ್ಜಯ್ಯ.. ನಿಮಗಿಂತಾ ಕಾಟ ಕೊಡೋ ದೆವ್ವ ಇನ್ನೆಲ್ಲಿರೋಕೆ ಸಾಧ್ಯ ಅಂತಾ ಅಂದುಕೊಂಡು ಎಲ್ಲರೂ ಒಲ್ಲದ ಮನಸ್ಸಿಂದ ಒಳಗಡೆ ಹೋದ್ವಿ.
ಬೆಳಿಗ್ಗೆ 5 ಘಂಟೆಗೇ ಹೊರಡಬೇಕಾಗಿದ್ದವರು ಹೊರಟಾಗ 8 ಘಂಟೆ. ಶ್ರೀಪತಿ ಅವರ ಅಮ್ಮ "ಕಾಫಿ ಕುಡ್ದು, ತಿಂಡಿ ತಿಂದುಕೊಂಡು ಹೋಗ್ರೋ.. ಇನ್ನೊಂದು ಅರ್ಧ ಘಂಟೆ" ಅಂದಾಗ, ನಾವೇನು ನೆಂಟರ ಮನೆಗೆ ಹೋಗ್ತಾ ಇಲ್ಲ, ಹೋಗ್ತಾ ಇರೋದು ಟ್ರಕ್ಕಿಂಗ್ ಗೆ ಅಂತಾ ಬಿಲ್ಡಪ್ ತಗೊಂಡು ಮನೆಲಿದ್ದಿದ್ದ ಕುರುಕು ತಿಂಡಿಗಳನ್ನೆಲ್ಲಾ ಬ್ಯಾಗಿಗೆ ತುಂಬಿಕೊಂಡು, ಹಿಮಾಲಯ ಹತ್ತೋಕೆ ಹೋಗುವವರ ತರ ಫೋಸು ಕೊಡ್ತಾ ಹೊರಟ್ವಿ. ಜೀಪ್ ಹತ್ತಿ ಕೂತುಕೊಂಡು ಇನ್ನೇನು ಹೊರಡುವಾಗ ಒಂದು ಬೆಕ್ಕು ಅಡ್ಡ ಬಂತು. ಅದಕ್ಕೆ ಸುಬ್ಬ ಅಲಿಯಾಸ್ ಸುಬ್ರಹ್ಮಣ್ಯ ಶಾಸ್ತ್ರಿ "ಒಳ್ಳೆ ಕೆಲಸಕ್ಕೆ ಹೊರಡುವಾಗ ಈ ಬೆಕ್ಕನ್ನು ದಾಟಿಕೊಂಡು ಹೋಗ್ತಾ ಇದ್ದೀನಿ, ಏನಾಗುತ್ತೋ" ಅಂದಾಗ , ನಾವೆಲ್ಲ "ಬೆಕ್ಕು ನಿನ್ನನ್ನು ದಾಟಿಕೊಂಡು ಹೋಗ್ತಾ ಇದೆ, ಅದಕ್ಕೇನು ಆಗುತ್ತೋ" ಅಂತಾ ಅಂದ್ವಿ.

ಅವನು ಅಂದಿದ್ದಕ್ಕೆ ಸರಿಯಾಗಿ ಆ ಡಕೋಟಾ ಜೀಪ್ ಅರ್ಧ ದಾರೀಲೇ ಕೆಟ್ಟು ನಿಂತುಕೊಳ್ತು. ಹಿಂದಕ್ಕೂ ಹೋಗೋ ಆಗಿಲ್ಲ, ಮುಂದಕ್ಕೂ ಬರೋ ಹಾಗಿಲ್ಲ, ಅಷ್ಟೊತ್ತಿಗೆ ಬಸ್ಯಾ ಅಲಿಯಾಸ್ ಬುಲೆಟ್ ಬಸ್ಯಾ ಇದ್ದವನು "ನಾನು ಹೇಳಿದೆ ಬುಲೆಟ್ ಅಲ್ಲಿ ಹೋಗೋಣಾ ಅಂತಾ,ನೀವೇ ಜೀಪ್ ಅಲ್ಲಿ ಹೋದ್ರೇ ಮಜಾ ಇರುತ್ತೆ ಅಂದಿದ್ದು, ಮಜಾ ಅಲ್ಲ ಇದು ಸಜಾ" ಅಂದ.

"ಹೇ ಸುಮ್ನಿರೋ,ಇವನೊಬ್ಬ .. ಕಟ್ಕೊಂಡ ಹೆಂಡತೀನೂ ಹಿಂಗೇ ನೋಡ್ಕೋತೀಯೋ ಇಲ್ವೋ, ಬುಲೆಟ್ ನ ಮಾತ್ರ ಬಿಡಲ್ಲ.. ಸೀಮೆಗಿಲ್ಲದೆ ಇರೋ ಬುಲೆಟ್ ಇವನದ್ದು" ಅಂತಾ ಸಿಡುಕಿದ್ಲು ಸಿಡುಕು ಮೂತಿ ಸಿದ್ದಮ್ಮ ಅಲಿಯಾಸ್ ಸುಮಿ.

ಕೊನೆಗೆ ಹರಸಾಹಸ ಮಾಡಿ ಇವರಿಬ್ಬರನ್ನು ಸಮಾಧಾನ ಮಾಡಿ ಮೆಕ್ಯಾನಿಕ್ ನ ಕರೆದುಕೊಂಡು ಬರೋ ಹೊತ್ತಿಗೆ ಸೂರ್ಯ ನಡು ನೆತ್ತಿಗೆ ಬಂದಿದ್ದ. ಅವನು ಇದನ್ನ ರೆಡಿ ಮಾಡೋಕೆ 1 ರಿಂದ 2 ಘಂಟೆ ಆಗುತ್ತೆ ಅಂದ. ಟ್ರಕ್ಕಿಂಗ್ ಪ್ಲಾನ್ ಕ್ಯಾನ್ಸಲ್ ಅಂದಾಗ ಆ ಕಡೆಯಿಂದ ಒಂದು ಐಡಿಯಾ ಬಂತು. ಅದನ್ನು ಕೊಟ್ಟಿದ್ದು ಗಂಗಾ ಅಲಿಯಾಸ್ ಗೂಗಲ್ ಗಂಗಾ.
ಇಲ್ಲೇ ಪಕ್ಕದಲ್ಲೇ ಒಂದು ಫಾಲ್ಸ್ ಇದೆ, ನಾನು ಗೂಗಲ್ ಅಲ್ಲಿ ನೋಡಿದೆ. ಬೇಕಾದ್ರೆ ಚೆಕ್ ಮಾಡಿ ,ಬರಿ ಎರಡು ಕಿಲೋಮೀಟರ್ ಅಷ್ಟೇ ಇರೋದು ಅಂತಾ ಹೇಳಿದ್ಲು. ಅಂದ ಹಾಗೆ ಈ ಗೂಗಲ್ ಗಂಗಾ ಏನು ಹೇಳಿದ್ರೂ ಅವಳು ಗೂಗಲ್ ಅಲ್ಲಿ ಅದನ್ನು ಚೆಕ್ ಮಾಡಿನೇ ಹೇಳೋದು.

ಅವಳೇ ನಮ್ಮ ಗ್ಯಾಂಗ್ ನ ಲೀಡರ್ ಆಗಿದ್ದರಿಂದ ಅವಳ ಮಾತನ್ನು ಮೀರದೆ ಗೂಗಲ್ ಗಂಗಾಳ ಮಾತು ಕೇಳಿ "ಗಂಗಾ ಮಾತೆ"ಯನ್ನು ಅರಸಿಕೊಂಡು ಹೊರಟೆವು. ಹೊರಡುವುದಕ್ಕಿಂತ ಮುಂಚೆ ಅಲ್ಲೇ ಪಕ್ಕದಲ್ಲಿದ್ದ ಟೀ ಅಂಗಡಿಯಲ್ಲಿ ಆ ಫಾಲ್ಸ್ ಬಗ್ಗೆ ವಿಚಾರಿಸಿದೆವು. ಅವರು ಹೇಳಿದ ಪ್ರಕಾರ ಅಲ್ಲಿ ಸುತ್ತಮುತ್ತಲಿನ ಎರಡು ಕಿಲೋಮೀಟರ್ ಅಲ್ಲಿ ಫಾಲ್ಸ್ ಯಾವುದೂ ಇಲ್ಲ. ನಿಮಗ್ಯಾರೋ 'ಫಾಲ್ಸ್'(ತಪ್ಪು) ಆಗಿ ಹೇಳಿರಬೇಕು ಅಂತಾ ಹೇಳಿ ಗಹಗಹಿಸಿ ನಕ್ಕರು.

ಅವರ ಆ ಕಂಗ್ಲೀಷು,ಕೆಂಪು ಹಲ್ಲು, ಬಾಯಲ್ಲಿದ್ದ ಎಲೆ-ಅಡಿಕೆ,ತಲೆಗೆ ಮೆತ್ತಿದ್ದ ಎಣ್ಣೆ ಎಲ್ಲವನ್ನೂ ನೋಡಿದ ಗಂಗಾ ಥೇಟ್ ಆಪ್ತಮಿತ್ರದ "ಗಂಗಾ"ಳಂತೆಯೇ ಭುಸುಗುಡುತ್ತಾ "ಬನ್ರೋ, ಆ ಗೂಗಲ್ ಗಿಂತಾ ಗೊತ್ತಾ ಇವ್ನಿಗೆ" ಅಂತಾ ದಂಡಿನ ಸಮೇತ ಹೊರಟೇ ಬಿಟ್ಳು.

ಆ ಕಾಡಿನ ಮದ್ಯೆ ಕಿಲೋಮೀಟರ್ ಗೋ, ಎರಡು ಕಿಲೋ ಮೀಟರ್ ಗೋ ಒಂದು ಮನೆ. ಅದರಲ್ಲಿ ಅಪರೂಪವಾಗಿ ಕಾಣಿಸೋ ಜನಗಳು ಅಂತಾದ್ರಲ್ಲಿ ಸಿಕ್ಕಿದ ಆ ಟೀ ಅಂಗಡಿಯವನನ್ನೂ ಬೈಕೊಂಡು ದಾರಿ ಕೇಳದೆ ಬಂದೆವಲ್ಲಾ, ನಮ್ಮ ಆಪ್ತರಕ್ಷಕ ಯಾರಪ್ಪಾ? ಅಂತಾ ಪೇಚಾಡ್ತಾ ಇರುವಾಗ, ಗಂಗಾ ಗೂಗಲ್ ಗುರುವಿನ ಬ್ರಹ್ಮಾಂಡ ರೂಪದ ಮತ್ತೊಂದು ಸ್ವರೂಪ 'ಗೂಗಲ್ ಮ್ಯಾಪ್' ನ ದರ್ಶನ ಮಾಡಿಸಿದಳು. ಪುಣ್ಯಕ್ಕೆ ಇಂಟರ್ನೆಟ್ ಇತ್ತು. ಸುತ್ತ-ಮುತ್ತಲಿನ ಕಾಡು, ಆ ಮರಗಳನ್ನು ನೋಡಿದ್ರೆ '6-5=2' ನೆನಪಾಗ್ತಾ ಇತ್ತು. ಬಂದಿದ್ದ ಆ ಜೀಪ್ ಕೂಡಾ ಇಂಥಾ ರಾಜರಸ್ತೆಯಲ್ಲಿ ನನಗೆ ಬರೋದಕ್ಕೆ ಯೋಗ ಇಲ್ಲ, ಅಲ್ಲಿ ರಾಜರ ಹಾಗೆ ಒಬ್ಬೊಬ್ಬರೇ ನಡ್ಕೊಂಡು ಹೋಗಿ ಅಂತಾ ಹೇಳಿ ಕಳುಹಿಸಿ ಬಿಟ್ಟಿತ್ತು.

ಟ್ರಕ್ಕಿಂಗ್ ಗೆ ಅಂತಾನೇ ಬಂದದ್ದಲ್ವಾ,ನಡೆಯೋದ್ರಲ್ಲಿ ಏನಿದೆ ಅಂತಾ ನಡ್ಕೊಂಡು ಹೊರಟ್ವಿ.ಹಾಗೆ ನಡೀತಾ,ನಡೀತಾ ಬ್ಯಾಗ್ ನಲ್ಲಿದ್ದ ಚಕ್ಕುಲಿ,ಕೋಡುಬಳೆ,ರವೆ ಉಂಡೆ ಇವುಗಳ ಜೊತೆಗೆ ಕಸಿನ್ಸ್ ಲೇಸ್, ಕುರ್-ಕುರೆ, ಚಿಪ್ಸ್ ಎಲ್ಲಾ ಜೊತೆಯಾದ್ದರಿಂದ ಕೈ-ಕಾಲಿಗಿಂತ ಬಾಯಿ-ಹೊಟ್ಟೆಗೇ ಕೆಲಸ ಹೆಚ್ಚಾಗಿತ್ತು.

ಅಷ್ಟರಲ್ಲೇ ರಮೇಶ ಕಿರುಚಿಕೊಂಡ, "ನೋವು-ನೋವು ನಂಗೆ ನಡೆಯೋದಕ್ಕೆ ಆಗ್ತಾ ಇಲ್ಲ" ಅಂತಾ, ಇಷ್ಟೊತ್ತು ಚೆನ್ನಾಗಿದ್ದ ಇವಾಗ ಏನಾಯ್ತಪ್ಪ ಅಂತಾ ನೋಡಿದ್ರೆ, ಜಿಗಣೆ ಆರಾಮಾಗಿ ಅವನ ಕಾಲಿಂದ ರಕ್ತ ಹೀರುತ್ತಾ ಇತ್ತು. ಇವನು ನೋವು-ನೋವು ಅಂತಾ ನಮ್ಮ ಜೀವ ಹೀರುತ್ತಾ ಇದ್ದ.ಪ್ಯಾಂಟ್ ಹಾಕೋ ಅಂದ್ರೇ ಪ್ಯಾಷನ್ ಅಂತಾ ಚಡ್ಡಿ ಹಾಕ್ಕೊಂಡು ಬಂದ್ಯಲ್ಲಾ ನಿಂಗೆ ಹಿಂಗೇ ಆಗಬೇಕು ಅಂತಾ ಮನಸಲ್ಲೇ ಅಂದ್ಕೊಂಡು  "ಇಷ್ಟಕ್ಕೇ ಹಿಂಗಾಡ್ತಾರೇನೋ, ಬಾರೋ" ಅಂತಾ ಆ ಜಿಗಣೆಯನ್ನ ಅಲ್ಲೆ ಬಿಟ್ಟು ಇವನನ್ನು ಎಳ್ಕೊಂಡು ಹೊರಟ್ವಿ.
"ಲಾಸ್ಟ್ ಟರ್ನ್,ಟೇಕ್ ಲೆಫ್ಟ್" ಅಂತಾ ಇತ್ತು. ಅಲ್ಲಿ ಹೋಗಿ ನೋಡ್ತೀವಿ..
ಅಬ್ಬಬ್ಬಾ! ಎಂತಾ ನೀರು ಅಂತೀರಾ..? ಜೀವಮಾನದಲ್ಲೇ ಇನ್ಯಾವತ್ತೂ ಅಂಥಾ ಫಾಲ್ಸ್ ನೋಡೋಕೆ ಸಾಧ್ಯಾನೇ ಇಲ್ಲ. ಎಲ್ಲಾ ಗೂಗಲ್ ಮಹಾತ್ಮೆ..

ಆ ಫಾಲ್ಸ್ ಹೇಗಿತ್ತು ಅಂದ್ರೆ 5 ಅಡಿ ಆಳದ ಚಿಕ್ಕ ಗುಂಡೀಲಿ 2 ಅಡಿ ನೀರಿತ್ತು, ನಕ್ಕು-ನಕ್ಕು ನಮ್ಮ ಕಣ್ಣಲ್ಲೂ ನೀರಿತ್ತು. ನಾವೇ ಅದಕ್ಕೊಂದು ಹೊಸ ನಾಮಕರಣ ಮಾಡಿದ್ವಿ 'ಗೂಗಲ್ ಗಂಗಾ' ಅಂತಾ. ವಾಪಸ್ ಬರ್ತಾ ಒಂದಷ್ಟು ಸೆಲ್ಫಿ ತೆಕ್ಕೊಂಡು, ತುಂಬಾ ಅದ್ಭುತ ಪ್ರಯಾಣ, ದಾರಿ ಸುಗಮವಾಗಿದೆ ಅಂತಾ ಗೂಗಲ್ ಮ್ಯಾಪ್ ಅಲ್ಲಿ ರಿವ್ಯೂ ಮಾಡಿ,ನಮ್ಮಂತೆ ಇನ್ನೊಂದಷ್ಟು ಜನ 'ಗೂಗಲ್ ಗಂಗಾ'ನ ದರ್ಶನ ಮಾಡಿ ಪಾವನವಾಗಲಿ ಅಂದ್ಕೊಂಡು ಬಂದ ದಾರಿಗೆ ಸುಂಕ ಇಲ್ಲ ಅನ್ನೋ ಹಾಗೆ 'ಗೂಗಲ್ ಗಂಗಾ'ನ ಹಿಂಬಾಲಿಸಿದ್ವಿ..

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ