ಹೌದು, ಅಲ್ಲಿನ ಪರಿಸ್ಥಿತಿಯೇ ಹಾಗಿತ್ತು. ಅಲ್ಲಿ ಸುಖ ಮತ್ತು ಆರೋಗ್ಯಕರ ಜೀವನಕ್ಕೆ ಬೇಕಾದ ಎಲ್ಲಾ ಪರಿಸ್ಥಿತಿಯೂ ಇತ್ತು. ಆದರೂ ಏನೋ ಒಂದು ರೀತಿಯ ಕೊರತೆ, ಆ ಕೊರತೆಯೇ ಪ್ರೀತಿ.
ಅದೊಂದು ವೃದ್ದಾಶ್ರಮ, ಗಲಾಟೆ-ಗದ್ಧಲಗಳಿಲ್ಲದ ಸ್ಥಳದಲ್ಲಿದೆ. ಸುತ್ತ-ಮುತ್ತಲೆಲ್ಲಾ ವಿಶಾಲವಾದ ಹಸಿರು ಪ್ರದೇಶ, ಗೋಶಾಲೆ ಕೂಡಾ ಇದೆ ಜೊತೆಗೆ ದೇವಾಲಯವೂ ಇದೆ. ಆದರೆ ಅದರ ಸುತ್ತ ಎತ್ತರದ ಕಾಂಪೌಂಡ್ ಕೂಡಾ ಇದೆ. ಗೇಟಿಗೆ ಸದಾ ಬೀಗ ಜೊತೆಗೊಬ್ಬ ಕಾವಲುಗಾರ. ಅಲ್ಲಿಂದ ಹೊರ ಹೋಗಲು ಮತ್ತು ಒಳಬರಲು ಅಲ್ಲಿನವರ ಅನುಮತಿ ಪಡೆದು ಅದನ್ನು ಪುಸ್ತಕದಲ್ಲಿ ನಮೂದಿಸಿಯೇ ಹೋಗಬೇಕು.ಅದೊಂದು ಚಿನ್ನದ ಪಂಜರದ ತರಹ..
ಒಳ ಹೊಕ್ಕರೆ ಆ ಚಿನ್ನದ ಪಂಜರದಲ್ಲಿ ಮತ್ತೆರಡು ವಿಭಾಗ. ಬಡ ಮತ್ತು ಮಧ್ಯಮ ವರ್ಗದವರಿಗೆ ಒಂದು ರೀತಿಯ ವಸತಿ ಸೌಲಭ್ಯವಾದರೆ, ಶ್ರೀಮಂತ ವರ್ಗದವರಿಗೇ ಮತ್ತೊಂದು ರೀತಿಯ ವಸತಿ ಸೌಲಭ್ಯ. ಆದರೆ ಊಟ-ತಿಂಡಿಯ ವ್ಯವಸ್ಥೆ ಎಲ್ಲರಿಗೂ ಒಂದೇ. ಆದರೆ ವಸತಿ ವ್ಯವಸ್ಥೆಯಿಂದ ಅಗೋಚರ ಹೆರೆ ಎಳೆದಂತೆ ಭಾಸವಾಗುವ ವೃದ್ಧಾಶ್ರಮ. ಅವರು ಇವರ ಜೊತೆ ಬೆರೆಯರು, ಇವರು ಅವರ ಜೊತೆ ಬೆರೆಯರು..
ತಮ್ಮಷ್ಟಕ್ಕೆ ಸುಮ್ಮನೆ ಕುಳಿತವರು ಕೆಲವರಾದರೆ, ಮತ್ತೆ ಕೆಲವರು ದೇವಾಲಯದಲ್ಲಿ, ಮತ್ತಷ್ಟು ಮಂದಿ ಆಕಾಶ ನೋಡುತ್ತಾ, ಇನ್ನು ಕೆಲವರು ಕಸೂತಿ ಹಾಕುತ್ತಾ, ಮತ್ತಷ್ಟು ಜನ ಟಿ.ವಿ ಯ ಮುಂದೆ, ಮತ್ತೆ ಕೆಲವರು ಮಾತನಾಡುತ್ತಾ ಕೂತಿದ್ದರೆ, ಮತ್ತೆ ಕೆಲವರು ಬಟ್ಟೆ ಒಗೆಯುತ್ತಾ, ಮತ್ತೆ ಕೆಲವರದು ನಿದ್ರೆ. ಹೀಗೇ ಅವರವರ ಲೋಕಕ್ಕೆ ಅವರವರು ಹೊಂದಿಕೊಂಡು ಬಿಟ್ಟಿದ್ದರು. ಕೆಲವರಿಗೆ ಮಾತನಾಡುವ ಅಸ್ಥೆಯಿದ್ದರೆ ಮತ್ತೆ ಕೆಲವರಿಗೆ ಸಂಕೋಚ.
ಕೆಲವರು ವೃದ್ಧಾಶ್ರಮ ಶುರುವಾದಾಗಿನಿಂದ ಅಲ್ಲಿಯೇ ಇದ್ದರೆ ಮತ್ತೆ ಹಲವರು ಇತ್ತೀಚೆಗೆ ಬಂದವರು. ಹೀಗೇ ಒಬ್ಬರು ಅಜ್ಜಿಯನ್ನು ಮಾತನಾಡಿಸಿದಾಗ "ಇಲ್ಲಿಗೆ ಹೊಂದಾಣಿಕೆ ಆಗಿದ್ದೀರಾ..?" ಎಂದೆ. ಅದಕ್ಕೆ ಅವರು ಕಣ್ಣು ತುಂಬಾ ನೀರು ತುಂಬಿಕೊಂಡು "ವಿಧಿ ಇಲ್ಲವಲ್ಲಾ, ಮತ್ತೇನು ಮಾಡುವುದು ? ಮಗ ತಂದು ಸೇರಿಸಿ ಹೋಗಿದ್ದಾನೆ" ಎಂದರು. ಕೆಲವರು ಇಷ್ಟಪಟ್ಟು ಅಲ್ಲಿದ್ದರೆ ಕೆಲವರದು ಅನಿವಾರ್ಯತೆ.
ಅಲ್ಲಿನ ಆಡಳಿತ ವರ್ಗದವರು ಎಲ್ಲಾ ಸೌಕರ್ಯಗಳನ್ನೂ ಕಲ್ಪಿಸಿಕೊಟ್ಟಿದ್ದಾರೆ. ಅಲ್ಲಿ ಮೇಲ್ನೋಟಕ್ಕೆ ಎಲ್ಲವೂ ಇದೆ ಎಂದೆನಿಸಿದರೂ, ಪ್ರೀತಿಯ ಕೊರತೆ ಇದೆ ಎಂದು ನನಗನ್ನಿಸಿತು. ಇನ್ನೊಂದು ಆಶ್ಚರ್ಯಕರ ಸಂಗತಿಯೆಂದರೆ ಅಲ್ಲಿ ಅನಾಥ ಮಕ್ಕಳು ಸಹಾ ಕೆಲವರಿದ್ದಾರೆ. ಆದರೆ ಈ ವೃದ್ಧರು ಯಾರೂ ಅಲ್ಲಿಗೆ ಸುಳಿಯುವುದಿಲ್ಲ. ಅದು ಅಲ್ಲಿನ ರೀತಿ-ನೀತಿಯೋ ಅಥವಾ ತಮ್ಮ ಪ್ರೀತಿಯನ್ನು ಹಂಚಲು ಅವರಿಗೆ ಇಷ್ಟವಿಲ್ಲವೋ ಗೊತ್ತಿಲ್ಲ.
ಗೇಟಿಗೆ ಹಾಕಿದ ಬೀಗದ ಕುರಿತು ಕೇಳಿದಾಗ ತಿಳಿದು ಬಂದದ್ದಿಷ್ಟು. ಇಲ್ಲಿನ ಕೆಲವರು ತಪ್ಪಿಸಿಕೊಂಡು ಹೋಗುತ್ತಾರೆ, ಹಾಗಾಗಿ ಈ ಬೀಗ ಎಂದರು. ಸ್ವಚ್ಛಂದ ಪರಿಸರದಲ್ಲಿ ಬೆಳೆದಿದ್ದವರನ್ನು ತಂದು ಬಂಧಿಸಿದ ಪರಿಸ್ಥಿತಿಯಲ್ಲಿ ಅವರಾದರೂ ಏನು ಮಾಡಲು ಸಾಧ್ಯ? ಮತ್ತೆ ಕೆಲವರು ಮನೆಯಲ್ಲಿ ಜಗಳವಾಡಿಕೊಂಡು ಇಲ್ಲಿಗೆ ಬಂದು ಬಿಡುತ್ತಾರೆ. ಹಾಗಾಗಿ ಇಲ್ಲಿಗೆ ಸೇರಲು ಮಕ್ಕಳ ಅಥವಾ ಸಂಬಂಧಿಕರ ಒಪ್ಪಿಗೆಯೂ ಬೇಕು. ಮನೆಯಲ್ಲಿ ಬೈಗುಳ ಕೇಳಿಕೊಂಡು, ಸರಿಯಾಗಿ ಊಟ-ತಿಂಡಿ ಇಲ್ಲದೆ ಬದುಕುವುದಕ್ಕಿಂತ ಇದು ಲೇಸು ಎನ್ನುವವರೂ ಇದ್ದರು.
ಹುಷಾರಿಲ್ಲದಿರುವಾಗ ಅಥವಾ ವೃದ್ಧರು ತೀರಿಕೊಂಡಾಗ ಹೇಳಿದರೂ ಬಾರದ ಮಕ್ಕಳು ಹಣ, ಒಡವೆಗಳಿಗಾಗಿ ಆನಂತರ ಬಂದದ್ದೂ ಇದೆ ಎಂದಾಗ ನಿಜಕ್ಕೂ ಆಶ್ಚರ್ಯವಾಯಿತು. ಯಾವುದೋ ಸಿನಿಮಾದಲ್ಲಿ ನೋಡಿದ್ದ ಸ್ಥಳ ಭೇಟಿ ನೀಡಿದಾಗ ಬೇರೆಯದೇ ಅನುಭವ ನೀಡಿತು. ಎಲ್ಲಾ ವೃದ್ಧಾಶ್ರಮಗಳೂ 'ರಾಜಕುಮಾರ'ದ 'ಕಸ್ತೂರಿ ನಿವಾಸ'ಗಳಾಗಲು ಸಾಧ್ಯವಿಲ್ಲವಲ್ಲಾ.
ವೃದ್ಧಾಶ್ರಮಗಳು ಅನಿವಾರ್ಯವಲ್ಲ, ಬದುಕಿನ ಅವಶ್ಯಕತೆಗೆ ಪ್ರೀತಿ, ಅನುಬಂಧಗಳು ಮುಖ್ಯ.ಮಕ್ಕಳು ತಮ್ಮ ತಂದೆ-ತಾಯಂದಿರನ್ನು ವೃದ್ಧಾಶ್ರಮಗಳಿಗೆ ಸೇರಿಸದಿದ್ದರೇ ಒಳಿತು. ಕಾಲಚಕ್ರ ತಿರುಗುತ್ತಲೇ ಇರುತ್ತದೆ. ಇಂದಿನ ಚಿಗುರೆಲೆಗಳೇ ನಾಳಿನ ಹಣ್ಣೆಲೆಗಳು. ಅಲ್ಲವೇ? ಮಕ್ಕಳ ಹಟ, ಕೋಪ, ತುಂಟಾಟಗಳನ್ನೆಲ್ಲಾ ಸಹಿಸಿಕೊಂಡು ತಿದ್ದಿ-ತೀಡಿ ಬುದ್ದಿ ಹೇಳಿ ಕಾಡುಕಲ್ಲನ್ನು ಮೂರ್ತಿಗಳನ್ನಾಗಿಸಿದ ಶಿಲ್ಪಿಗಳನ್ನು ಸ್ವಲ್ಪ ಸಹಿಸಿಕೊಳ್ಳಬಹುದಲ್ಲವೇ? ಕಳೆದು ಹೋದ ಕಾಲವಂತೂ ಮತ್ತೆ ಬಾರದು. ಇನ್ನಾದರೂ ಎಲ್ಲರೂ ಎಚ್ಚೆತ್ತು ವೃದ್ಧಾಶ್ರಮಗಳ ಸಂಖ್ಯೆಯನ್ನು ಇಳಿಮುಖಗೊಳಿಸಿದರೆ ಒಳಿತು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ