ಸೋಮವಾರ, ಆಗಸ್ಟ್ 27, 2018

ರಕ್ಷೆಯ ಸುರಕ್ಷಾ ಬಂಧನ

ಸೋದರ-ಸೋದರಿಯರ ಬಂಧದಲ್ಲಿ ಬಂಧಿಯಾಗಲು ಒಡಹುಟ್ಟಲೇ ಬೇಕು ಎಂದೇನಿಲ್ಲ. ಕೆಲವೊಮ್ಮೆ ಯಾವುದೋ ಋಣಾನುಬಂಧ ಕೂಡಾ ಈ ನಂಟನ್ನು ಬೆಸೆಯುತ್ತದೆ. ತಮ್ಮ ಕೂಡಾ ಕೆಲವೊಮ್ಮೆ ಅಣ್ಣನೆಂಬ ಭಾವದಲ್ಲಿ ರಕ್ಷಣೆಯ ಭಾರ ಹೊರುತ್ತಾನೆ. ಕೆಲವೊಮ್ಮೆ ಅಣ್ಣ ಅವನ ದುರ್ಬಲ ಪರಿಸ್ಥಿತಿಯಲ್ಲಿ ತಂಗಿಯ ಆಸರೆ ಬಯಸುತ್ತಾನೆ.

ಅನಿವಾರ್ಯದ ಪರಿಸ್ಥಿತಿಯಲ್ಲಿ ಅಣ್ಣ ಆಸರೆಯಾಗುತ್ತಾನೆ, ಕಷ್ಟದಲ್ಲಿ ಜೊತೆ ನಿಲ್ಲುತ್ತಾನೆ. ಜೊತೆಯಲ್ಲಿ ಅಣ್ಣನಿದ್ದಾನೆ ಎಂಬ ಭಾವವೇ ಸಾಕು ಧೈರ್ಯ ತುಂಬುವುದಕ್ಕೆ. ಅಷ್ಟಲ್ಲದೆ ಜನಪದರು ಹೇಳಿದ್ದಾರೆಯೇ "ಹೆಣ್ಣಿನ ಜನುಮಕ್ಕೆ ಅಣ್ಣ-ತಮ್ಮರು ಬೇಕು, ಬೆನ್ನು ಕಟ್ಟುವರು ಸಭೆಯೊಳಗೆ". ಇಷ್ಟೇ ಅಲ್ಲದೆ ಇನ್ನೂ ಮುಂದುವರಿದು ಹಾಡುತ್ತಾರೆ "ಹೊನ್ನು ಕಟ್ಟುವರು ಉಡಿಯೊಳಗೆ". ಖಂಡಿತಾ ಆ ನಿರೀಕ್ಷೆ ಇರುವುದಿಲ್ಲ. ಉಡುಗೊರೆ ಕೊಟ್ಟರೆ, ಆಸ್ತಿಯಲ್ಲಿ ನೀಡಿದರೆ ಮಾತ್ರ ಅಣ್ಣನ ಪ್ರೀತಿ ಎಂದು ಎಂದಿಗೂ ಅಲ್ಲ. ಕೇವಲ ಅಣ್ಣನ "ನಾನು ನಿನ್ನೊಡನೆ ಇದ್ದೇನೆ" ಎಂಬ ವಚನ ಸಾಕು ಪ್ರೀತಿ ಮತ್ತು ಆಪ್ತತೆಯ ಭಾವ ಮೂಡಿಸಲು.

ಅಣ್ಣನ ಕೈಯೊಳಗೆ ಕೈ ಇಟ್ಟು ಒಂದರೆಕ್ಷಣ ಕೂತರೆ ಸಾಕು ಅದೇನೋ ಸುರಕ್ಷತೆಯ ಭಾವ. ಈ ಘಳಿಗೆ ಹೀಗೇ ಇದ್ದು ಬಿಡಬಾರದೇ ಎಂದೆನಿಸಿಬಿಡುತ್ತದೆ. ಇಷ್ಟೆಲ್ಲದರ ನಡುವೆ ಗೋಳು ಹುಯ್ದುಕೊಳ್ಳುವುದು, ಕೋಳಿ ಜಗಳ ಮಾಡುವುದು ಇದೆಲ್ಲಾ ಇದ್ದೇ ಇದೆ. ಆದರೆ ಅಷ್ಟೆಲ್ಲಾ ಮೂಡಿಸುವ ಅಣ್ಣನೂ ಒಂದೊಮ್ಮೆ ಬದಲಾದರೆ..?

ಬದಲಾದರೂ ಚಿಂತೆಯಿಲ್ಲ.ಏಕೆಂದರೆ ನಾನಂತೂ ಬದಲಾಗುವುದಿಲ್ಲ. ಪ್ರೀತಿ, ಆಪ್ತತೆ ಎಂದಿಗೂ ಕೊಟ್ಟು ತೆಗೆದುಕೊಳ್ಳುವಂತದಲ್ಲವಲ್ಲ. ಹಾಗೊಂದು ವೇಳೆ ಹಾಗೇನಾದರೂ ಕೊಟ್ಟು ಪಡೆದರೆ ಅದು ವ್ಯಾಪಾರ ಎನ್ನಿಸುತ್ತದೆ.

ನೀ ಬದಲಾದರೂ, ಬದಲಾಗದಿದ್ದರೂ ಅದೇ ಭಾವ, ಅದೇ ಆಪ್ತತೆ, ಅದೇ ಪ್ರೀತಿಯಿಂದ ನೀನು ಎಲ್ಲಿದರೂ, ಹೇಗಿದ್ದರೂ ನೀನು ಚೆನ್ನಾಗಿರಲೆಂದು ಸದಾ ಬೇಡುತ್ತಾ ರಕ್ಷೆಯ ಅಗೋಚರ ಸುರಕ್ಷಾ ಬಂಧನದಿಂದ ನಿನ್ನನ್ನು ಬಂಧಿಸುವೆ. ಕಾಲವೂ ಈ ಬಂಧನದ ಬೇಡಿಯನ್ನು ಗಟ್ಟಿಗೊಳಿಸಲಿ.
(ವಿಶೇಷ ಸೂಚನೆ: ಅಣ್ಣ ಎಂಬಲ್ಲಿ ತಮ್ಮ ಎಂದೂ ಸಹಾ ಓದಿಕೊಳ್ಳಬಹುದು)

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ