ಶುಕ್ರವಾರ, ಅಕ್ಟೋಬರ್ 26, 2018

ಪಯಣದಲ್ಲೊಂದು ತಿರುವು..

ಬದುಕೆಂಬುದು ಹಾಗೇ, ನಿರಂತರ ಪಯಣ..ಸಾಗುತ್ತಲೇ ಇರುವಂತಹದ್ದು. ಎಷ್ಟೋ ಜನ ಪಯಣದಲ್ಲಿ ಜೊತೆಯಾಗುತ್ತಾರೆ, ಹಾಗೆಯೇ ಬಿಟ್ಟೂ ಹೋಗುತ್ತಾರೆ. ಮೊದಲಿನಿಂದಲೂ, ಕೊನೆಯವರೆಗೂ ಜೊತೆಗೇ ಬರುವವರುತುಂಬಾನೇ ಅಪರೂಪ, ವಿರಳ ಎಂದೇ ಹೇಳಬಹುದು. ಕೆಲವೊಮ್ಮೆ ನಮಗೇ ಅರಿವಿಲ್ಲದೆ ಕೆಲವರ ಪಯಣದಲ್ಲಿ ಜೊತೆಯಾಗುತ್ತಾ ಅವರ ದಾರಿಯಲ್ಲೇ ಕ್ರಮಿಸಿಬಿಡುತ್ತೇವೆ, ಕೆಲವೊಮ್ಮೆ ಸ್ಥಗಿತಗೊಳಿಸುತ್ತೇವೆ, ಕುಂಠಿತಗೊಳಿಸುತ್ತೇವೆ ಸಹಾ. ಅರಿವಿದ್ದೋ, ಅರಿವಿಲ್ಲದೆಯೋ ಇವೆಲ್ಲವೂ ನಡೆದು ಹೋಗಿರುತ್ತದೆ. 

ನಾವಿಲ್ಲದೇ ಅವರ ಪಯಣ ಸಾಗೋದಿಲ್ವಾ..? ಅಥವಾ ಅವರಿಲ್ಲದೇ ನಮ್ಮ ಪಯಣ ಸಾಗೋದಿಲ್ವಾ..? ಖಂಡಿತಾ ಪಯಣ ಮುಂದುವರಿಯುತ್ತಲೇ ಹೋಗುತ್ತದೆ., ಯಾರಿದ್ದರೂ..! ಯಾರಿಲ್ಲದಿದ್ದರೂ..! ಅವರು ಮುಂದುವರಿಯುವುದಕ್ಕೆ ನಾವೇ ಕಾರಣ ಅಂತಾ ಬೀಗುತ್ತಾ ಹೋಗುತ್ತಾ ಇರುತ್ತೇವೆ ಅಲ್ವಾ..? ಅವಾಗಲೇ ಅಚಾನಕ್ಕಾಗಿ ಎದುರಾಗುವುದು ಒಂದು ದೊಡ್ಡ ತಿರುವು, ಅದು ಎದುರಾಗುವುದು ಬೀಗುವವರನ್ನು ಬಾಗಿಸುವುದಕ್ಕೇ ಅಂತನ್ನಿಸುತ್ತೆ.

ಬೀಳ್ತೀವಾ? ಏಳ್ತೀವಾ? ಬ್ರೇಕ್ ಹಾಕಿ ನಂತರ ಮುಂದೆ ಸಾಗುತ್ತೇವಾ? ಅಥವಾ ದಿಗ್ಭ್ರಮೆಯಿಂದ ಅಲ್ಲೇ ನಿಲ್ತೀವಾ..? ಅದು ನಮ್ಮ ನಮ್ಮ ಮನಃಶಕ್ತಿಗೆ ಬಿಟ್ಟದ್ದು. ಆದರೂ ಆ ತಿರುವಿನಲ್ಲಿ ಉಂಟಾಗುತ್ತಲ್ಲಾ ಒಂದು ದಿಗ್ಭ್ರಮೆ, ಅದಕ್ಕೆ ಸರಿದೂಗಿಸುವಂತೆ ತೆಗೆದುಕೊಳ್ಳೋ ತೀರ್ಮಾನ ಅದು ಇಡೀ ಲೈಫ್ಗೇ ಯೂ ಟರ್ನ್ ಕೊಟ್ಟು ಬಿಡುತ್ತೆ. ಒಂದು ತಿರುವು ದಾಟಿ ಮುಂದೆ ಹೋದರೆ ಅಲ್ಲಿ ಮತ್ತೊಂದು, ಮತ್ತೊಂದು ಮುಂದೆ ಮಗದೊಂದು ಹೀಗೇ.. ಮುಗಿಯುವುದೇ ಇಲ್ಲ ಆ ತಿರುವುಗಳ ಲೆಕ್ಕ. ಸ್ಕಿಡ್ ಆಗಿ ಬಿದ್ದೆವೋ ನಿರಾಸೆಯ ಪ್ರಪಾತದ ಕೂಪಕ್ಕೇ ಹೋಗಿ ಬಿದ್ದು ಬಿಡುತ್ತೇವೆ. ಎದ್ದು ನಿಲ್ಲುವುದು ನಮ್ಮ ಧೀಃಶಕ್ತಿಗೇ ಬಿಟ್ಟದ್ದು..

ಓವರ್ ಸ್ಪೀಡ್ ಅಲ್ಲೂ ಹೋಗಬಾರದು ಅಂತಹಾ ತಿರುವುಗಳಲ್ಲಿ, ಆಮೇಲೆ ಲೈಫೇ ಟರ್ನ್ ಹೊಡೆದುಬಿಟ್ಟಾತು. ಮುಂದೆ ಬರುವವರಿಗೇ ಡಿಕ್ಕಿ ಹೊಡೆದುಬಿಟ್ಟರೆ..! ಅದಕ್ಕೂ ಒಂದು ಪರಿಹಾರವಿದೆ ಕಣ್ರೀ.. ಮಾತಿನ ಹಾರ್ನ್ ಜೊತೆಗೆ ಲಿಮಿಟೆಡ್ ಸ್ಪೀಡ್ ಅಲ್ಲೇ ಹೋಗಬೇಕು.   

ತಿರುವು ದಾಟಿ ದಿಗಂತದ ಕನಸಿಗೆ ಕೈ ಚಾಚುತ್ತಾ ಪಯಣದಲ್ಲಿ ಹೆಜ್ಜೆ ಹಾಕಬೇಕು. " ಹಕ್ಕಿ ಮರದ ಗಟ್ಟಿತನವನ್ನು ನೆಚ್ಚಿ ಕೊಂಬೆ ಮೇಲೆ ಕುಳಿತಿರೋದಿಲ್ವಂತೆ, ಅಕಸ್ಮಾತ್ ಈ ರೆಂಬೆ ಮುರಿದರೂ ಸಹಾ ತಾನು ಹಾರಬಲ್ಲೆ ಎಂಬ ಆತ್ಮವಿಶ್ವಾಸದಿಂದ ತನ್ನ ರೆಕ್ಕೆಗಳನ್ನು ನೆಚ್ಚಿ ಕೂತಿರುತ್ತದೆಯಂತೆ", ಅಷ್ಟು ಚೈತನ್ಯದಿಂದ ಹಕ್ಕಿಯೇ ತನ್ನ ಪಯಣವನ್ನು ಕ್ರಮಿಸುವಾಗ, ನಾವು ಬೇರೆಯವರನ್ನು ನಂಬಿ ಯಾಕೆ ನಮ್ಮ ಪಯಣ ನಡೆಸಬೇಕು..? ನಮ್ಮ ಬಲ, ಛಲದ ಮೇಲೇ ನಂಬಿಕೆ ಇಟ್ಟು ಪಯಣದ ತಿರುವುಗಳನ್ನೆಲ್ಲಾ ಬಳಸೋಣ, ದಾಟೋಣ. ಹಾಗಂತಾ ಜೊತೆಗಾರರು, ಸಹಪಯಣಿಗರನ್ನು ನಿರ್ಲಕ್ಷ್ಯ ಮಾಡೋದಲ್ಲ. ಅವರೂ ನಮ್ಮಂತೆಯೇ ಎಂಬುದನ್ನು ಅರಿತು ಹೆಜ್ಜೆ ಹಾಕೋಣ.

ಇಷ್ಟೆಲ್ಲಾ ಬರೆದು ಮುಗಿಸುವಷ್ಟೊತ್ತಿಗೆ ಕಿವಿಯಲ್ಲಿ ಹಾಡಿನ ಸಾಲೊಂದು ರಿಂಗಣಿಸುತ್ತಿದೆ.

"ನಿನ್ನ ದಾರಿ ನೀನೇ ನಡೆದು ಸೇರಬೇಕು ಗುರಿಯನು"

ಅದನ್ನು ನನಗೆ ನಾನೇ ಹೇಳಿಕೊಳ್ಳೋದಾದ್ರೆ

"ನನ್ನ ದಾರಿ ನಾನೇ ನಡೆದು ಸೇರಬೇಕು ಗುರಿಯನು"

ಅಂತಾ ಹೇಳಿಕೊಳ್ಳಬಹುದಾ?
ಖಂಡಿತಾ .. ಈ ಮಾತನ್ನು ನನಗೆ ನಾನೇ ಹೇಳಿಕೊಳ್ಳುತ್ತೇನೆ. ಬೇರೆಯವರಿಗೆ ಉಪದೇಶ ಮಾಡುವುದಕ್ಕಿಂತ, ನಮಗೆ ನಾವೇ ಉಪದೇಶ ಮಾಡಿಕೊಳ್ಳುವುದೇ ಒಳ್ಳೆಯದು. ಯಾಕೋ ಬಹಳ ಸಲ ಹೀಗೇ ಅನ್ನಿಸುತ್ತಾ ಇರುತ್ತೆ. ನಿಜಾನೇ ಅಲ್ವಾ?

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ