ಭಾನುವಾರ, ಅಕ್ಟೋಬರ್ 21, 2018

ರತ್ನ

ನಿಜವಾಗಿಯೂ ದೇವರು ಪ್ರತ್ಯಕ್ಷವಾದರೆ ನಾನು ಕೇಳುವ ಮೊದಲ ಪ್ರಶ್ನೆ, "ಅಮ್ಮನಿಂದ ಮಗುವನ್ನು ಅಗಲಿಸಿ, ನೋವು ನೀಡಿ ನೀನು ಸಾಧಿಸುವುದಾದರೂ ಏನು?"

ಅಂದು ನಾನು ರತ್ನಮ್ಮನ ಮನೆಗೆ ಕಾಲಿಟ್ಟ ಕ್ಷಣ ಆಕೆ ಕೇಳಿದ ಮೊದಲ ಪ್ರಶ್ನೆ, "ನಾನು ಯಾವತ್ತಾದರೂ,ಯಾರಿಗಾದರೂ ಅನ್ಯಾಯ ಮಾಡಿದ್ದೇನಾ? ನನ್ನ ಮಗ ನನ್ನಿಂದ ಯಾಕೆ ದೂರ ಆದ? ನಾನು ಯಾವ ಪಾಪ ಮಾಡಿದ್ದೆ? ವಿದ್ಯಾರ್ಥಿಗಳಿಗೆ ಯಾವತ್ತಾದರೂ ದ್ರೋಹ ಮಾಡಿದ್ದೇನಾ? ಭೇದ-ಭಾವ ಮಾಡಿದ್ದೇನಾ? ಹೇಳು"

ಬಾಣದಂತೆ ತೂರಿ ಬಂದ ಆ ಪ್ರಶ್ನೆಗೆ ಉತ್ತರಿಸಲಾದರೂ ಸಾಧ್ಯವಿತ್ತೇ? ನನ್ನ ಕಣ್ಣೀರೇ ಅದಕ್ಕೆ ಉತ್ತರವಾಗಿತ್ತು. ಅದನ್ನು ಬಿಟ್ಟು ಆ ಕ್ಷಣದಲ್ಲಿ ನನಗೇನೂ ಮಾಡಲು ತೋಚಲಿಲ್ಲ.ನನಗೇನಾದರೂ ಅಪರೂಪದ ಶಕ್ತಿ ಬಂದರೆ, ಅಥವಾ ವರ ಸಿಕ್ಕಿದರೆ ನಾನು ಮಾಡುವ ಮೊದಲ ಕೆಲಸ ರತ್ನಮ್ಮನ ಮಗ ಹಿಮವಂತನನ್ನು ಬದುಕಿಸುವುದು.

ಆಕೆ ನನಗೆ ಪ್ರಾಥಮಿಕ ಶಾಲೆಯಲ್ಲಿ ಕಲಿಸಿದ ನನ್ನ ಅಚ್ಚುಮೆಚ್ಚಿನ ಶಿಕ್ಷಕಿ. ನನ್ನ ಬರಹಗಳಿಗೆ ಶಕ್ತಿ ತುಂಬಿದ ದೇವತೆ, ನನ್ನ ಬೆಳವಣಿಗೆಯ ಎಲ್ಲಾ ಹಂತದಲ್ಲಿಯೂ ಸ್ಪೂರ್ತಿ ತುಂಬುತ್ತಿದ್ದವರು .ಎಲ್ಲರನ್ನೂ ತನ್ನ ಮಕ್ಕಳೆಂದುಕೊಂಡು ಕಾಳಜಿ ತೋರಿಸಿ ಕಲಿಸುತ್ತಿದ್ದ, ಸಲಹುತ್ತಿದ್ದ ಶಿಕ್ಷಕಿ. ಬೆತ್ತ ಬಳಸದೆಯೂ ಮಕ್ಕಳನ್ನು ತಿದ್ದಿ ಬುದ್ದಿ ಕಲಿಸುತ್ತಿದ್ದ ಮಿಸ್. ಅದೇಕೋ ರತ್ನಮ್ಮ ಮಿಸ್ ನನಗೆ ಬಹಳ ಇಷ್ಟ. ಅಪ್ಪ-ಅಮ್ಮನಿಂದಲೂ ಆಶೀರ್ವಾದ ಪಡೆಯದೆ ಹೊರಟ ನಾನು ಅಂದು ಪ್ರತಿಭಾ ಕಾರಂಜಿಗೆ ಹೋಗುವ ಮುನ್ನ ಆಕೆಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದೆ. ಅಂದು ಲಘು ಸಂಗೀತದಲ್ಲಿ ಪ್ರಥಮ ಬಹುಮಾನ ಪಡೆದದ್ದು ಆಕೆಯ ಆಶೀರ್ವಾದದ ಫಲದಿಂದಲೇ ಎಂಬುದು ನನ್ನ ಬಲವಾದ ನಂಬಿಕೆ.

"ತಿಳಿಮುಗಿಲ ತೊಟ್ಟಿಲಲ್ಲಿ ಮಲಗಿದ್ದ ಚಂದಿರನ, ಗಾಳಿ ಜೋಗುಳ ಹಾಡಿ ತೂಗುತ್ತಿತ್ತು" ಎಂಬ 7 ನೇ ತರಗತಿಯ ಪದ್ಯವನ್ನು ಆಕೆ ಹಾಡುತ್ತಿದ್ದ ರೀತಿ ಬಹಳವೇ ಇಷ್ಟ. ಈಗಲೂ ಆ ಹಾಡು ಕೇಳಿ ಬಂದರೆ ಆಕೆಯೇ ಕಣ್ಮುಂದೆ ಬಂದಂತಾಗುತ್ತದೆ.ಕನ್ನಡದ ಪಾಠಗಳನ್ನು ಅದರ ಪೂರಕ ವಿಷಯಗಳೊಂದಿಗೆ ಆಕೆ ಭೋದಿಸುತ್ತಿದ್ದ ರೀತಿ ಮತ್ತು ಪದ್ಯಗಳನ್ನು ಹಾಡುತ್ತಿದ್ದ ರೀತಿ ಬಹಳವೇ ಇಷ್ಟ.ಸಮಾಜ-ವಿಜ್ಞಾನವೆಂದರೇ ಅಲರ್ಜಿ ಎನ್ನುತ್ತಿದ್ದ ನನಗೆ,ಸಮಾಜ-ವಿಜ್ಞಾನದ ಕುರಿತು ಆಸಕ್ತಿ ಹುಟ್ಟಿಸಿ,ಅದ್ಭುತ ಪಾಠವೆಂದರೆ ಹೀಗೇ ಇರುತ್ತದೆ ಎಂಬುದರ ಪರಿಕಲ್ಪನೆಯನ್ನು ಬೆಳೆಸಿದವರು. ಪೂರ್ವಾಗ್ರಹಪೀಡಿತರಾಗದೆ ಎಲ್ಲರನ್ನೂ ಒಂದೇ ರೀತಿ ನೋಡಿ, ಆದರ್ಶ ಶಿಕ್ಷಕಿ ಎಂಬ ಪದಕ್ಕೆ ಒಂದು ಮೆರುಗನ್ನು ತಂದು ಕೊಟ್ಟವರು. ನನ್ನ ಮತ್ತೊಬ್ಬಳು ತಾಯಿ ಎಂದರೂ ತಪ್ಪಿಲ್ಲ.

ಇದ್ದೊಬ್ಬ ಮಗ ಹಿಮವಂತನನ್ನು ಉತ್ತಮ ಸಂಸ್ಕಾರ ನೀಡಿ ಬೆಳೆಸಿದ್ದರು. ಆತನನ್ನು ನೋಡಿದವರೆಲ್ಲಾ, ಇದ್ದರೆ ಇಂತಹಾ ಮಗ ಇರಬೇಕು ಎಂಬ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದರು. 9 ನೇ ತರಗತಿಯ ರಜಾ ದಿನಗಳಲ್ಲಿ ಆತ ಅಜ್ಜಿಯ ಮನೆಗೆಂದು ಹೊರಟ,ಎಲ್ಲೂ ಹೋಗಲು ಕೇಳದಿದ್ದವನು ಅಂದು ಮಾವನ ಮಕ್ಕಳ ಜೊತೆಗೆ ಆಡುವ ಆಸೆಯಿಂದ ಕೇಳಿದ. ಇವರೂ ಏನೂ ಹೇಳದೆ ಕಳುಹಿಸಿಕೊಟ್ಟರು. ಇನ್ನೆರಡು ದಿನ ಕಳೆದು ನಾನು ಬರುವೆ, ಈಗ ಹೋಗಿರು ಎಂದು ಹೇಳಿ ಅವರ ಅಣ್ಣನೊಂದಿಗೆ ಕಳುಹಿಸಿಕೊಟ್ಟರು.

ಇದಾದ ಮಾರನೆಯ ದಿನ , ಮನೆಯವರೆಲ್ಲಾ ಹೊಲದ ಪೂಜೆಗೆಂಂದು ತಯಾರಿ ನಡೆಸುತ್ತಿದ್ದರೆ, ಅಕ್ಕ-ಪಕ್ಕದ ಮನೆಯ ಮಕ್ಕಳೊಂದಿಗೆ ಆಡುತ್ತಾಅ, ಮನೆಯಲ್ಲಿ ಯಾರಿಗೂ ಹೇಳದಂತೆ, ಕೆರೆಯ ಹತ್ತಿರಕ್ಕೆ ಬಂದಿದ್ದ.ಅವರೆಲ್ಲಾಅ ಈಜಲು ಹೊರಟರೆ,ಈತನಿಗೆ ಈಜು ಬರದ ಕಾರಣಕ್ಕೆ ದಡದಲ್ಲಿಯೇ ನಿಂತಿದ್ದನ್ನು ಕಂಡು ಉಳಿದವರೆಲ್ಲಾ ಛೇಡಿಸುತ್ತಾ, "ಬಾರೋ, ಈ ನೀರಿಗೆ ಹೆದರಿಕೊಳ್ಳುತ್ತೀಯಾ..?" ಎನ್ನುತ್ತಾ ಅವನನ್ನು ಮೇಲಿನಿಂದ ತಳ್ಳಿದರು. ಅದೇನೂ ತೀರಾ ಆಳದ ನೀರಲ್ಲ,ಆದರೆ ಅಲ್ಲಿ ಸ್ವಲ್ಪ ಕೆಸರಿತ್ತು. ಅಡಿಮೇಲಾಗಿ ಬಿದ್ದಿದ್ದಕ್ಕೋ, ಹೆದರಿ ಉಸಿರು ಕಟ್ಟಿದ್ದಕ್ಕೋ ಗೊತ್ತಿಲ್ಲ, ಆತ ಮುಳುಗಿದವ ಮೇಲೇಳಲೇ ಇಲ್ಲ. ಜೊತೆಗಿದ್ದವರೂ ಹೆದರಿ ಅಲ್ಲಿಂದ ಪರಾರಿಯಾದರು.

ಅಜ್ಜಿಯ ಮನೆಗೆ ರಜೆಗೆಂದು ಹೋದವನು ಮರಳಿದ್ದು ಹೆಣವಾಗಿ. ಎದೆಯೆತ್ತರಕ್ಕೆ ಬೆಳೆದ ಇದ್ದೊಬ್ಬ ಮಗನನ್ನು ಕಳೆದುಕೊಂಡ ರತ್ನಮ್ಮನ ದುಃಖ ಹೇಳತೀರದು. ನನಗೆ ವಿಷಯ ತಿಳಿದದ್ದು ತಡವಾಗಿ, ಅಲ್ಲದೇ ಮಾರನೇ ದಿನ ಪರೀಕ್ಷೆ ಇದ್ದುದ್ದರಿಂದ ಹೋಗಲಾಗಿರಲಿಲ್ಲ. 3 ದಿನ ಕಳೆದ ನಂತರ ಅವರ ಮನೆಗೆ ಹೋದಾಗ ಕೇಳಿದ ಪ್ರಶ್ನೆ ಮನಕಲಕುವಂತಿತ್ತು. ಕಲ್ಲು ಕೂಡಾ ಕರಗುವಂತೆ ಅಳುತ್ತಿದ್ದ ಅವರನ್ನು ಕಂಡು ಅಳದಿರಲು ಸಾಧ್ಯವೇ ಇರಲಿಲ್ಲ. ಸಮಾಧಾನ ಮಾಡಲು ಪದಗಳಿರಲಿಲ್ಲ.

3 ದಿನದಿಂದ ಸರಿಯಾಗಿ ಊಟ,ತಿಂಡಿ,ನಿದ್ರೆಗಳಿಲ್ಲದೆ ಸೊರಗಿದ್ದರು. ನನ್ನ ಮಡಿಲಿನಲ್ಲಿ ಮಲಗಿದ್ದ 2 ನಿಮಿಷ ಅವರ ತಲೆ ನೇವರಿಸುವುದನ್ನು ಬಿಟ್ಟು ಮತ್ತೇನೂ ತೋಚಲಿಲ್ಲ. ಸಮಾಧಾನದ ಮಾತುಗಳೆಲ್ಲಾ ನಿರರ್ಥಕ ಎನ್ನಿಸಿದವು. ನಾನು ದುಃಖವನ್ನು ಅಷ್ಟು ಹತ್ತಿರದಿಂದ ನೋಡಿದ್ದು ಮೊದಲೇನಲ್ಲ, ಆದರೆ ಹೆಸರಿಗೆ ತಕ್ಕಂತೆ 'ರತ್ನ'ದಂತೆಯೇ ಇದ್ದವರ ಬಾಳನ್ನು ಪುತ್ರಶೋಕ ಮಸುಕಾಗಿಸಿದೆ.

"ಪುತ್ರ ಶೋಕಂ ನಿರಂತರಂ" ಎನ್ನುತ್ತಾರೆ. "ಎಲ್ಲವನ್ನೂ ಕಳೆದುಕೊಂಡರೂ ಅವನೊಬ್ಬನಿದ್ದರೆ ಸಾಕು, ಹೇಗಾದರೂ ಬದುಕುತ್ತಿದ್ದೆ" ಎನ್ನುತ್ತಾರೆ. ಅವನನ್ನು ಮರಳಿ ತಂದು ಕೊಡಲು ಸಾಧ್ಯವೇ? ಕೃಷ್ಣ ತನ್ನ ಗುರು ಸಾಂದೀಪನಿಯ ಸತ್ತು ಹೋಗಿದ್ದ ಮಗನನ್ನು ಮರಳಿ ಕರೆತಂದನಂತೆ, ಈಗ ಅಂತಹಾ ಪವಾಡವೇನಾದರೂ ನಡೆಯುವುದೇ?

"ರಾತ್ರಿ ಮಳೆಬಂದು ನನ್ನ ಮಗನನ್ನು ಮಲಗಿಸಿದ್ದ ಜಾಗವೆಲ್ಲಾ ನೆನೆದಿದೆ. ಪಾಪ ನನ್ನ ಕಂದಾ, ಅದೆಷ್ಟು ನಡುಗುತ್ತಿದೆಯೋ? ಒಬ್ಬನೆ ಇರಲು ಅವನು ಭಯ ಪಡುತ್ತಿದ್ದ. ಈಗ ಅದೇಗೆ ಇದ್ದಾನೋ? ಅವನು ಒಬ್ಬನನ್ನೇ ಬಿಟ್ಟ ನಾನು ಇಲ್ಲಿ ಬೆಚ್ಚಗೆ ಕುಳಿತಿದ್ದೇನೆ." ಎಂದು ಮರುಗುತ್ತಾರೆ.

"ಅವನು ನನ್ನ ಹೊಟ್ಟೆಯಲ್ಲಿದ್ದಾಗ, ಪ್ರತಿ ಇರುವನ್ನೂ, ಪ್ರತಿ ಕ್ಷಣವನ್ನೂ ನೆನೆದು ಸಂತೋಷ ಪಟ್ಟಿದ್ದೇನೆ. ಈ ಪಾಪಿಯ ಹೊಟ್ಟಯಲ್ಲಿ ಹುಟ್ಟಿದ್ದಕ್ಕೇ ಸತ್ತೆಯಾ?ನನ್ನ ಜೊತೆ ಇರಲು ಇಷ್ಟವಾಗಲಿಲ್ಲವೇ? ನನ್ನನ್ನು ಒಬ್ಬಳನ್ನೇ ಬಿಟ್ಟು ಹೊರಟೆಯಾ?" ಎಂದು ಕೇಳುತ್ತಾರೆ. ಉತ್ತರಿಸಲು ಅವನಿಲ್ಲ.

"ಎಲ್ಲಾ ವಿದ್ಯಾರ್ಥಿಗಳ ಉದಾಹರಣೆ ನೀಡಿ ಅವನನ್ನು ಬೆಳೆಸುತ್ತಿದ್ದೆ, ಅದರಲ್ಲೂ ನಿನ್ನ ಬಗ್ಗೆ ಹೆಚ್ಚು ಹೇಳುತ್ತಿದ್ದೆ. ಇನ್ನು ಯಾರ ಬಗ್ಗೆ ಹೇಳಿದರೂ ಕೇಳಲು ಅವನಿಲ್ಲ" ಎಂದು ಕೊರಗುತ್ತಾರೆ.

ಕಿಸಾಗೌತಮಿಯ ಕಥೆ ಹೇಳಿದ ಅವರೇ ಆ ಸ್ಥಿತಿಯಲ್ಲಿ ಇರುವುದನ್ನು ಕಂಡು ಸಂಕಟಪಡುತ್ತೇನೆ. ಯಾರನ್ನೂ ದೂಷಿಸದೇ ವಿಧಿಯನ್ನು ಹಳಿಯುವ ಅವರನ್ನು ಕಂಡು ಮರುಗುತ್ತೇನೆ."ಶಾಪಗ್ರಸ್ತ ದೇವತೆಗಳು ಭೂಮಿಯಲ್ಲಿ ಹುಟ್ಟಿ, ಕೆಲವು ದಿನ ಇದ್ದು ಮರೆಯಾಗುತ್ತಾರಂತೆ, ಅವನು ಶಾಪಗ್ರಸ್ತ ದೇವರು" ಎಂದು ಹೇಳಲು ಹೊರಟು ಮಾತು ಬಾರದೆ ಸುಮ್ಮನಾಗುತ್ತೇನೆ. "ವಿದ್ಯಾರ್ಥಿಗಳಲ್ಲೇ ಮತ್ತೆ ಮಕ್ಕಳನ್ನು ಕಾಣಿ" ಎಂದು ಹೇಳಬೇಕೆಂದರೂ ಸಾಧ್ಯವಾಗದೆ ಗಂಟಲುಬ್ಬಿ ಬರುತ್ತದೆ.

ಅದಾದ ಒಂದೆರಡು ಸಲ ಅವರ ಮನೆಗೆ ಹೋಗಿ ಬಂದೆ. ಯಾವ ವಿಷಯ ಮಾತನಾಡಲು ಶುರು ಮಾಡಿದರೂ ಮತ್ತೆ ಅದು ಹಿಮವಂತನ ವಿಷಯಕ್ಕೇ ಹೋಗಿ ನಿಲ್ಲುತ್ತದೆ.ಆದದನ್ನು ನೆನೆದು ಕೊರಗುತ್ತಾರೆ. ಮೊದಲಿನ ಲವಲವಿಕೆ ಇಲ್ಲದಿದ್ದರೂ, ಹೋದಾಗ ಏನಾದರೂ ತಿನ್ನಲು,ಕುಡಿಯಲು ಕೊಡಲು ತವಕಿಸುತ್ತಾರೆ. ಮತ್ತೆ ಅರೆಕ್ಷಣಕ್ಕೆ ಅದೇ ನೋವಿನಿಂದ ನರಳುತ್ತಾರೆ.

ಇದನ್ನು ಕಂಡು ನನಗನ್ನಿಸುವುದು ಹೀಗೆ, "ನಾನು ಕೂಡಾ ಒಬ್ಬಳೇ ಮಗಳು. ನಾನು ಸತ್ತರೆ,ನನ್ನಮ್ಮ ಕೂಡಾ ಹೀಗೇ ಇರುತ್ತಾರೇನೋ" ಎಂದು. ಕರುಳಬಳ್ಳಿಯ ಸಂಕಟ ಅನುಭವಿಸಿದವರಿಗೇ ಗೊತ್ತು. ಎಷ್ಟೋ ಜನರ ಭವಿಷ್ಯವನ್ನು ರೂಪಿಸಿದ ರತ್ನಮ್ಮ ಮಿಸ್ ನ ಭವಿಷ್ಯ ಅತಂತ್ರವಾಗಿದೆ. ಆದರೆ ಇದೆಲ್ಲವನ್ನೂ ಬದಿಗಿಟ್ಟು ಸಾವಿರಾರು ವಿದ್ಯಾರ್ಥಿಗಳ ಅಮ್ಮನಾಗಿ ಬಾಳುವ ಅವರ ಭವಿಷ್ಯವನ್ನು ಕಾಣಲು ನಾನು ಕಾಯುತ್ತೇನೆ. ಕಾಯುತ್ತಲೇ ಇರುತ್ತೇನೆ.

ಅಕ್ಕರೆಯಿಂದ ಕಲಿಸಿ,ತಪ್ಪನ್ನು ತಿದ್ದಿ, ಮಾತು ಕೇಳದಿದ್ದಾಗ ದಂಡಿಸಿ ಬುದ್ದಿ ಕಲಿಸಿ, ತಿದ್ದುವ ಅಮ್ಮನ ಅವಶ್ಯಕತೆಯಿರುವ ಮಕ್ಕಳು ನಿಮ್ಮನ್ನು ಕಾಯುತ್ತಿದ್ದಾರೆ. ಅವರೊಂದಿಗೆ ನಿಮ್ಮ ಮುಖದಲ್ಲಿ ಮಿನುಗುವ ನಗುವಿಗೆ, ನಿಮ್ಮ ಹಾಡಿಗೆ ನಾನೂ ಕಾಯುತ್ತಿರುತ್ತೇನೆ.

ಮಸುಕಾಗಿರುವ ರತ್ನ ಮತ್ತೆ ಹೊಳಪು ತುಂಬಿ ಹೊಳೆಯಲಿ ಎಂಬ ಆಸೆ ನನ್ನದು.

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ